Beginning
ಎಲೀಷ ಮತ್ತು ಕೊಡಲಿ
6 ಪ್ರವಾದಿಗಳ ಗುಂಪು ಎಲೀಷನಿಗೆ, “ನಾವು ಈ ಸ್ಥಳದಲ್ಲಿಯೇ ವಾಸಮಾಡುತ್ತಿದ್ದೇವೆ. ಆದರೆ ಇದು ನಮಗೆ ತುಂಬಾ ಚಿಕ್ಕದಾಗಿದೆ. 2 ನಾವೆಲ್ಲಾ ಜೋರ್ಡನ್ ನದಿಗೆ ಹೋಗಿ ಸ್ವಲ್ಪ ಮರವನ್ನು ಕಡಿದುಕೊಂಡು ಬರೋಣ. ಪ್ರತಿಯೊಬ್ಬರೂ ಒಂದೊಂದು ದಿಮ್ಮಿಯನ್ನು ತಂದು ನಾವು ವಾಸಿಸಲು ಒಂದು ಮನೆಯನ್ನು ಕಟ್ಟೋಣ” ಎಂದು ಹೇಳಿದರು.
ಎಲೀಷನು, “ಸರಿ, ಹಾಗೆಯೇ ಮಾಡಿ” ಎಂದು ಉತ್ತರಿಸಿದನು.
3 ಒಬ್ಬ ವ್ಯಕ್ತಿಯು, “ದಯವಿಟ್ಟು ನಮ್ಮ ಜೊತೆಯಲ್ಲಿ ನೀನೂ ಬಾ” ಎಂದನು.
ಎಲೀಷನು, “ಸರಿ, ನಾನೂ ನಿಮ್ಮ ಜೊತೆಯಲ್ಲಿ ಬರುತ್ತೇನೆ” ಎಂದು ಹೇಳಿದನು.
4 ಎಲೀಷನು ಪ್ರವಾದಿಗಳ ಗುಂಪಿನೊಂದಿಗೆ ಹೋದನು. ಅವರು ಜೋರ್ಡನ್ ನದಿಯ ಬಳಿಗೆ ಬಂದು ಕೆಲವು ಮರಗಳನ್ನು ಕಡಿಯಲಾರಂಭಿಸಿದರು. 5 ಆದರೆ ಒಬ್ಬನು ಮರವೊಂದನ್ನು ಕಡಿದುರುಳಿಸಿದಾಗ, ಕಬ್ಬಿಣದ ಕೊಡಲಿಯು ಕಾವಿನಿಂದ ಕಳಚಿಕೊಂಡು ನೀರಿನೊಳಕ್ಕೆ ಬಿದ್ದುಬಿಟ್ಟಿತು. ಆ ಮನುಷ್ಯನು, “ಅಯ್ಯೋ, ಒಡೆಯನೇ! ನಾನು ಆ ಕೊಡಲಿಯನ್ನು ಎರವಲಾಗಿ ತಂದಿದ್ದೇನಲ್ಲಾ” ಎಂದು ಕೂಗಿಕೊಂಡನು.
6 ದೇವಮನುಷ್ಯನು, “ಅದು ಎಲ್ಲಿ ಬಿದ್ದಿತು?” ಎಂದು ಕೇಳಿದನು.
ಆ ಮನುಷ್ಯನು ಕೊಡಲಿಯು ಬಿದ್ದ ಸ್ಥಳವನ್ನು ಎಲೀಷನಿಗೆ ತೋರಿಸಿದನು. ಆಗ ಎಲೀಷನು ಒಂದು ಕಡ್ಡಿಯನ್ನು ಮುರಿದು ಅದನ್ನು ನೀರಿನೊಳಕ್ಕೆ ಎಸೆದನು. ಆ ಕಡ್ಡಿಯು ಕಬ್ಬಿಣದ ಕೊಡಲಿಯನ್ನು ತೇಲುವಂತೆ ಮಾಡಿತು. 7 ಎಲೀಷನು, “ಕೊಡಲಿಯನ್ನು ಎತ್ತಿಕೊ” ಎಂದು ಹೇಳಿದನು. ಆ ಮನುಷ್ಯನು ಅಲ್ಲಿಗೆ ಹೋಗಿ, ಕೊಡಲಿಯನ್ನು ತೆಗೆದುಕೊಂಡನು.
ಅರಾಮ್ಯರ ರಾಜನು ಇಸ್ರೇಲಿನ ರಾಜನನ್ನು ಸಿಕ್ಕಿಹಾಕಿಸಲು ಪ್ರಯತ್ನಿಸಿದನು
8 ಅರಾಮ್ಯರ ರಾಜನು ಇಸ್ರೇಲಿನ ವಿರುದ್ಧ ಯುದ್ಧಮಾಡಲು ಬಂದನು. ಅವನು ತನ್ನ ಸೇನಾಧಿಕಾರಿಗಳ ಸಭೆಸೇರಿಸಿ, “ನೀವು ಈ ಜಾಗದಲ್ಲಿ ಅಡಗಿಕೊಂಡಿದ್ದು, ಇಸ್ರೇಲರು ಇಲ್ಲಿಗೆ ಬಂದಾಗ ಅವರ ಮೇಲೆ ಆಕ್ರಮಣ ಮಾಡಿ” ಎಂದು ಹೇಳಿದನು.
9 ಆದರೆ ದೇವಮನುಷ್ಯನು (ಎಲೀಷನು) ಇಸ್ರೇಲಿನ ರಾಜನಿಗೆ ಒಂದು ಸಂದೇಶವನ್ನು ಕಳುಹಿಸಿ, “ನೀವು ಜಾಗರೂಕರಾಗಿರಿ! ನೀವು ಆ ಜಾಗದಲ್ಲಿ ತಿರುಗಾಡದಿರಿ! ಅರಾಮ್ಯರ ಸೈನಿಕರು ಅಲ್ಲಿ ಅಡಗಿದ್ದಾರೆ!” ಎಂದು ಹೇಳಿದನು.
10 ಇಸ್ರೇಲಿನ ರಾಜನು ತನ್ನ ಜನರಿಗೆ ಸಂದೇಶವೊಂದನ್ನು ಕಳುಹಿಸಿ, ದೇವಮನುಷ್ಯನು ಎಚ್ಚರವಾಗಿರಲು ತಿಳಿಸಿದ ಸ್ಥಳದಲ್ಲಿ ತಿರುಗಾಡದಿರುವಂತೆ ಸೂಚಿಸಿ ಕೆಲವು ಜನರನ್ನು[a] ರಕ್ಷಿಸಿದನು.
11 ಅರಾಮ್ಯರ ರಾಜನು ಇದರಿಂದ ಬಹಳ ತಳಮಳಗೊಂಡನು. ಅರಾಮ್ಯರ ರಾಜನು ತನ್ನ ಸೇನಾಧಿಕಾರಿಗಳನ್ನು ಕರೆದು ಅವರಿಗೆ, “ಇಸ್ರೇಲಿನ ರಾಜನಿಗಾಗಿ ಗೂಢಚರ್ಯ ನಡೆಸುತ್ತಿರುವವರು ಯಾರೆಂಬುದನ್ನು ಹೇಳಿ?” ಎಂದು ಕೇಳಿದನು.
12 ಅರಾಮ್ಯರ ರಾಜನ ಅಧಿಕಾರಿಗಳಲ್ಲೊಬ್ಬನು, “ನನ್ನ ಒಡೆಯನೇ, ರಾಜನೇ, ನಮ್ಮಲ್ಲಿ ಯಾರೊಬ್ಬರೂ ಗೂಢಚಾರರಲ್ಲ. ಇಸ್ರೇಲಿನ ಪ್ರವಾದಿಯಾದ ಎಲೀಷನು ಅನೇಕ ರಹಸ್ಯ ಸಂಗತಿಗಳನ್ನು ಅಂದರೆ ನೀವು ನಿಮ್ಮ ಮಲಗುವ ಕೊಠಡಿಯಲ್ಲಿ ಮಾತನಾಡುವುದನ್ನೂ ಸಹ ಇಸ್ರೇಲಿನ ರಾಜನಿಗೆ ತಿಳಿಸಬಲ್ಲವನಾಗಿದ್ದಾನೆ!” ಎಂದು ಹೇಳಿದನು.
13 ಅರಾಮ್ಯರ ರಾಜನು, “ಎಲೀಷನನ್ನು ಕಂಡುಹಿಡಿಯಿರಿ. ಅವನನ್ನು ಸೆರೆಹಿಡಿಯಲು ನಾನು ಸೈನಿಕರನ್ನು ಕಳುಹಿಸುತ್ತೇನೆ” ಎಂದನು.
ಸೇವಕರು ಅರಾಮ್ಯರ ರಾಜನಿಗೆ, “ಎಲೀಷನು ದೋತಾನಿನಲ್ಲಿದ್ದಾನೆ” ಎಂದು ಹೇಳಿದರು.
14 ಆಗ ಅರಾಮ್ಯರ ರಾಜನು ಕುದುರೆಗಳನ್ನು, ರಥಗಳನ್ನು ಮತ್ತು ದೊಡ್ಡ ಸೇನೆಯನ್ನು ದೋತಾನಿಗೆ ಕಳುಹಿಸಿದನು. ಅವರು ರಾತ್ರಿಯಲ್ಲಿ ಬಂದು ನಗರವನ್ನು ಸುತ್ತುವರಿದರು. 15 ಎಲೀಷನ ಸೇವಕನು ಹೊತ್ತಾರೆ ನಸುಕಿನಲ್ಲಿಯೇ ಮೇಲಕ್ಕೆದ್ದನು. ಸೇವಕನು ಹೊರಕ್ಕೆ ಹೋದಾಗ ರಥಗಳಿಂದ ಮತ್ತು ಕುದುರೆಗಳಿಂದ ಕೂಡಿದ ಸೈನ್ಯವು ನಗರವನ್ನು ಸುತ್ತುವರಿದಿರುವುದನ್ನು ನೋಡಿದನು!
ಆ ಸೇವಕನು ಎಲೀಷನಿಗೆ, “ಅಯ್ಯೋ, ನನ್ನ ಒಡೆಯನೇ, ನಾವು ಈಗ ಏನು ಮಾಡೋಣ?” ಎಂದು ಕೇಳಿದನು.
16 ಎಲೀಷನು, “ನೀನು ಹೆದರದಿರು! ನಮಗಾಗಿ ಯುದ್ಧಮಾಡುವ ಸೇನೆಯು ಅರಾಮ್ಯರಿಗಾಗಿ ಯುದ್ಧಮಾಡುವ ಸೇನೆಗಿಂತ ಬಹಳ ಹೆಚ್ಚಿನದಾಗಿದೆ!” ಎಂದು ಹೇಳಿದನು.
17 ನಂತರ ಎಲೀಷನು ಪ್ರಾರ್ಥಿಸುತ್ತಾ, “ಯೆಹೋವನೇ, ನನ್ನ ಸೇವಕನ ಕಣ್ಣುಗಳನ್ನು ತೆರೆದು ಅವನು ನೋಡುವಂತೆ ಮಾಡೆಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು.
ಯೆಹೋವನು ಸೇವಕನ ಕಣ್ಣುಗಳನ್ನು ತೆರೆದನು. ಆ ಸೇವಕನು ಪರ್ವತವನ್ನು ತುಂಬಿರುವ ಬೆಂಕಿಯಂತಿರುವ ಕುದುರೆಗಳನ್ನು ಮತ್ತು ರಥಗಳನ್ನು ನೋಡಿದನು. ಅವರೆಲ್ಲ ಎಲೀಷನ ಸುತ್ತಲೂ ಇದ್ದರು!
18 ಆ ಬೆಂಕಿಯಂತಿರುವ ಕುದುರೆಗಳು ಮತ್ತು ರಥಗಳು ಎಲೀಷನ ಬಳಿಗೆ ಇಳಿದುಬಂದವು. ಎಲೀಷನು ಯೆಹೋವನನ್ನು ಪ್ರಾರ್ಥಿಸಿ, “ಈ ಜನರನ್ನು ಕುರುಡರನ್ನಾಗಿ ಮಾಡಬೇಕೆಂದು ನಾನು ನಿನ್ನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದನು.
ಆಗ ಯೆಹೋವನು ಎಲೀಷನ ಪ್ರಾರ್ಥನೆಯಂತೆ ಅರಾಮ್ಯರ ಸೇನೆಯು ಕುರುಡರಾಗುವಂತೆ ಮಾಡಿದನು. 19 ಎಲೀಷನು ಅರಾಮ್ಯರ ಸೇನೆಗೆ, “ಇದು ಸರಿಯಾದ ಮಾರ್ಗವಲ್ಲ, ಇದು ಸರಿಯಾದ ನಗರವೂ ಅಲ್ಲ. ನನ್ನನ್ನು ಹಿಂಬಾಲಿಸಿ. ನೀವು ಹುಡುಕುತ್ತಿರುವ ಮನುಷ್ಯನ ಬಳಿಗೆ ನಾನು ನಿಮ್ಮನ್ನು ಕರೆದೊಯ್ಯುತ್ತೇನೆ” ಎಂದು ಹೇಳಿದನು. ನಂತರ ಎಲೀಷನು ಅರಾಮ್ಯರ ಸೇನೆಯನ್ನು ಸಮಾರ್ಯಕ್ಕೆ ನಡೆಸಿಕೊಂಡು ಬಂದನು.
20 ಅವರು ಸಮಾರ್ಯಕ್ಕೆ ಬಂದು ಸೇರಿದಾಗ ಎಲೀಷನು, “ಯೆಹೋವನೇ, ಈ ಜನರ ಕಣ್ಣುಗಳನ್ನು ತೆರೆದುಬಿಡು, ಅವರು ನೋಡಲಿ” ಎಂದು ಹೇಳಿದನು.
ಆಗ ಯೆಹೋವನು ಅವರ ಕಣ್ಣುಗಳನ್ನು ತೆರೆದನು. ಅರಾಮ್ಯರ ಸೇನೆಗೆ ತಾವು ಸಮಾರ್ಯ ನಗರದಲ್ಲಿರುವುದು ತಿಳಿದುಬಂತು! 21 ಅರಾಮ್ಯರ ಸೇನೆಯನ್ನು ಇಸ್ರೇಲಿನ ರಾಜನು ನೋಡಿ ಎಲೀಷನಿಗೆ, “ನನ್ನ ತಂದೆಯೇ, ನಾನು ಅವರನ್ನು ಕೊಲ್ಲಲೇ? ಅವರನ್ನು ಕೊಂದುಹಾಕಿಬಿಡಲೇ?” ಎಂದು ಕೇಳಿದನು.
22 ಎಲೀಷನು, “ಬೇಡ, ಅವರನ್ನು ಕೊಲ್ಲಬೇಡ. ನೀನು ಯುದ್ಧದಲ್ಲಿ, ನಿನ್ನ ಖಡ್ಗದಿಂದ, ನಿನ್ನ ಬಿಲ್ಲುಬಾಣಗಳಿಂದ ಸೆರೆಹಿಡಿದ ಜನರನ್ನು ಕೊಲ್ಲಬಾರದು, ಅರಾಮ್ಯರ ಸೇನೆಗೆ ಸ್ವಲ್ಪ ನೀರನ್ನು ಮತ್ತು ರೊಟ್ಟಿಗಳನ್ನು ಕೊಡು. ಅವರು ತಿಂದು, ನೀರು ಕುಡಿಯಲಿ. ನಂತರ ಅವರು ತಮ್ಮ ಮನೆಗೆ, ಅವರ ಒಡೆಯನ ಬಳಿಗೆ ಹೋಗಲಿ” ಎಂದು ಉತ್ತರಿಸಿದನು.
23 ಇಸ್ರೇಲಿನ ರಾಜನು ಅರಾಮ್ಯರ ಸೇನೆಗೆ ಆಹಾರವನ್ನು ಹೇರಳವಾಗಿ ಸಿದ್ಧಪಡಿಸಿದನು. ಅರಾಮ್ಯರ ಸೇನೆಯು ಊಟಮಾಡಿ, ನೀರನ್ನು ಕುಡಿದರು. ನಂತರ ಇಸ್ರೇಲಿನ ರಾಜನು ಅರಾಮ್ಯರ ಸೇನೆಗೆ ತಮ್ಮ ಒಡೆಯನ ಬಳಿಗೆ ಹೋಗಲು ಆಜ್ಞಾಪಿಸಿದನು. ಅಂದಿನಿಂದ ಇಸ್ರೇಲ್ ದೇಶದ ಮೇಲೆ ಧಾಳಿಮಾಡಲು ಯಾವ ಸೈನಿಕರನ್ನೂ ಅರಾಮ್ಯರು ಕಳುಹಿಸಲಿಲ್ಲ.
ಸಮಾರ್ಯದಲ್ಲಿ ಭೀಕರ ಬರಗಾಲ
24 ಇದಾದನಂತರ, ಅರಾಮ್ಯರ ರಾಜನಾದ ಬೆನ್ಹದದನು ತನ್ನ ಸೇನೆಯನ್ನೆಲ್ಲ ಒಟ್ಟಾಗಿ ಸೇರಿಸಿಕೊಂಡು, ಸಮಾರ್ಯವನ್ನು ಸುತ್ತುವರಿದು ಆಕ್ರಮಣಮಾಡಲು ಹೋದನು. 25 ಜನರು ನಗರದೊಳಕ್ಕೆ ಆಹಾರವನ್ನು ತರಲು ಸೈನಿಕರು ಅವಕಾಶ ಕೊಡಲಿಲ್ಲ. ಆದ್ದರಿಂದ ಸಮಾರ್ಯದಲ್ಲಿ ಭೀಕರ ಬರಗಾಲವು ಆ ಕಾಲದಲ್ಲಾಯಿತು. ಸಮಾರ್ಯದಲ್ಲಿ ಒಂದು ಹೇಸರಕತ್ತೆಯ ತಲೆಯು ಎಂಭತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಾಟವಾಗುವಷ್ಟು ಕೆಟ್ಟ ಪರಿಸ್ಥಿತಿಯಿತ್ತು. ಅರ್ಧಸೇರು ಪಾರಿವಾಳದ ಮಲದ ಲದ್ದಿಯು ಐದು ಬೆಳ್ಳಿನಾಣ್ಯಗಳಿಗೆ ಮಾರಾಟವಾಗುತ್ತಿತ್ತು.
26 ಇಸ್ರೇಲಿನ ರಾಜನು ನಗರದ ಸುತ್ತಲಿನ ಗೋಡೆಯ ಮೇಲೆ ನಡೆಯುತ್ತಿರಲು ಸ್ತ್ರೀಯೊಬ್ಬಳು ಅವನನ್ನು, “ನನ್ನ ಪ್ರಭುವೇ, ರಾಜನೇ, ದಯವಿಟ್ಟು ನನಗೆ ಸಹಾಯಮಾಡು” ಎಂದು ಕೂಗಿಕೊಂಡಳು.
27 ಇಸ್ರೇಲಿನ ರಾಜನು, “ಯೆಹೋವನು ನಿನಗೆ ಸಹಾಯ ಮಾಡದಿದ್ದರೆ, ನಾನು ನಿನಗೆ ಹೇಗೆ ಸಹಾಯ ಮಾಡಲಿ? ನಿನಗೆ ಕೊಡಲು ನನ್ನ ಬಳಿ ಏನೂ ಇಲ್ಲ; ಕಣದಲ್ಲಿ ಕಾಳುಗಳಿಲ್ಲ, ದ್ರಾಕ್ಷಿಯ ಆಲೆಯಲ್ಲಿ ದ್ರಾಕ್ಷಾರಸವಿಲ್ಲ” ಎಂದನು. 28 ನಂತರ ಇಸ್ರೇಲಿನ ರಾಜನು ಆ ಸ್ತ್ರೀಗೆ, “ನಿನ್ನ ತೊಂದರೆಯೇನು?” ಎಂದು ಕೇಳಿದನು.
ಆ ಸ್ತ್ರೀಯು, “ಇವಳು ನನಗೆ, ‘ನಿನ್ನ ಮಗನನ್ನು ನನಗೆ ಕೊಡು. ನಾವು ಅವನನ್ನು ಕೊಂದು, ಈ ಹೊತ್ತು ತಿನ್ನೋಣ. ನಾಳೆ ನನ್ನ ಮಗನನ್ನು ತಿನ್ನೋಣ’ ಎಂದಳು. 29 ನಾವು ನನ್ನ ಮಗನನ್ನು ಬೇಯಿಸಿ, ನಾವು ತಿಂದು ಬಿಟ್ಟೆವು. ಮಾರನೆಯ ದಿನ ನಾನು ಈ ಸ್ತ್ರೀಗೆ, ‘ನಿನ್ನ ಮಗನನ್ನು ನಾವು ಕೊಂದು ತಿನ್ನೋಣ’ ಎಂದು ಹೇಳಿದೆನು. ಆದರೆ ಅವಳು ತನ್ನ ಮಗನನ್ನು ಅಡಗಿಸಿಟ್ಟಿದ್ದಾಳೆ!” ಎಂದು ಹೇಳಿದಳು.
30 ಆ ಸ್ತ್ರೀಯ ಮಾತುಗಳನ್ನು ರಾಜನು ಕೇಳಿದಾಗ, ದುಃಖದಿಂದ ತನ್ನ ಬಟ್ಟೆಗಳನ್ನೆಲ್ಲಾ ಹರಿದುಕೊಂಡನು. ಅವನ ಮೈಮೇಲೆ ಗೋಣಿತಟ್ಟಿರುವುದು ಜನರಿಗೆಲ್ಲಾ ಕಾಣಿಸಿತು.
31 ಇದಲ್ಲದೆ ರಾಜನು, “ಈ ದಿನದ ಅಂತ್ಯದೊಳಗೆ ನಾನು ಶಾಫಾಟನ ಮಗನಾದ ಎಲೀಷನ ತಲೆಯನ್ನು ಅವನ ದೇಹದ ಮೇಲೆ ಉಳಿಯುವಂತೆ ಮಾಡಿದರೆ ದೇವರು ನನ್ನನ್ನು ದಂಡಿಸಲಿ!” ಎಂದು ಹೇಳಿದನು.
32 ರಾಜನು ಎಲೀಷನ ಬಳಿಗೆ ಒಬ್ಬ ಸಂದೇಶಕನನ್ನು ಕಳುಹಿಸಿದನು. ಎಲೀಷನು ತನ್ನ ಮನೆಯಲ್ಲಿ ಕುಳಿತಿದ್ದನು; ಹಿರಿಯರು ಅವನೊಂದಿಗೆ ಕುಳಿತಿದ್ದರು. ಸಂದೇಶಕನು ಬರುವುದಕ್ಕೆ ಮುಂಚೆಯೇ ಎಲೀಷನು ಹಿರಿಯರಿಗೆ, “ನೋಡಿ, ನನ್ನ ತಲೆಯನ್ನು ಕತ್ತರಿಸಿಹಾಕಲು ಕೊಲೆಗಾರನ (ಇಸ್ರೇಲಿನ ರಾಜ) ಮಗ ಜನರನ್ನು ಕಳುಹಿಸಿದ್ದಾನೆ! ಆ ಸಂದೇಶಕನು ಬಂದಾಗ ಬಾಗಿಲನ್ನು ಮುಚ್ಚಿಬಿಡಿ! ಅವನು ಒಳಗೆ ಪ್ರವೇಶಿಸದಂತೆ ಬಾಗಿಲನ್ನು ಹಿಡಿದುಕೊಳ್ಳಿ! ಅವನ ಹಿಂದೆ ಬರುತ್ತಿರುವ ಅವನ ಒಡೆಯನ ಕಾಲ ಸಪ್ಪಳವು ನನಗೆ ಕೇಳಿಸುತ್ತಿದೆ!” ಎಂದು ಹೇಳಿದನು.
33 ಎಲೀಷನು ಹಿರಿಯರೊಂದಿಗೆ ಇನ್ನೂ ಮಾತನಾಡುತ್ತಿರುವಾಗ ಸಂದೇಶಕನು ಅವನ ಬಳಿಗೆ ಬಂದನು. ಅವನ ಸಂದೇಶವು ಹೀಗಿತ್ತು: “ಈ ಆಪತ್ತು ಯೆಹೋವನಿಂದಲೇ ಬಂದಿದೆ! ನಾನೇಕೆ ಆತನನ್ನು ನಿರೀಕ್ಷಿಸಿಕೊಂಡಿರಬೇಕು?”
7 ಎಲೀಷನು ಅವನಿಗೆ, “ಯೆಹೋವನ ಸಂದೇಶವನ್ನು ಕೇಳು: ‘ನಾಳೆ ಇದೇ ಸಮಯಕ್ಕೆ, ಅಧಿಕವಾದ ಆಹಾರವು ಬಹಳ ಕಡಿಮೆ ಬೆಲೆಗೆ ಸಿಗುತ್ತದೆ. ಒಂದು ರೂಪಾಯಿಗೆ ಒಂದು ಬುಟ್ಟಿ ಹಿಟ್ಟನ್ನೂ ಎರಡು ಬುಟ್ಟಿ ಜವೆಗೋಧಿಯನ್ನೂ ಸಮಾರ್ಯನಗರದ ಊರ ಬಾಗಿಲಿನಲ್ಲಿರುವ ಮಾರುಕಟ್ಟೆಯಲ್ಲಿ ಮಾರಲಾಗುವುದು’” ಎಂದನು.
2 ಆಗ ರಾಜನಿಗೆ ಆಪ್ತನಾಗಿದ್ದ ಅಧಿಕಾರಿಯು ದೇವಮನುಷ್ಯನಿಗೆ, “ಯೆಹೋವನು ಪರಲೋಕಕ್ಕೆ ಕಿಟಕಿಗಳನ್ನು ಮಾಡಿಸಿದರೂ ಇದು ಸಂಭವಿಸುವುದಿಲ್ಲ!” ಎಂದು ಉತ್ತರಿಸಿದನು.
ಎಲೀಷನು, “ನೀನು ನಿನ್ನ ಸ್ವಂತ ಕಣ್ಣುಗಳಿಂದಲೇ ಇದನ್ನು ನೋಡುವೆ. ಆದರೆ ಆ ಆಹಾರದಲ್ಲಿ ಯಾವುದನ್ನೂ ನೀನು ತಿನ್ನುವುದಿಲ್ಲ” ಎಂದನು.
ಅರಾಮ್ಯರ ಪಾಳೆಯವು ಬರಿದಾಗಿರುವುದನ್ನು ಕುಷ್ಠರೋಗಿಗಳು ಕಂಡುಹಿಡಿದರು
3 ನಗರದ ಬಾಗಿಲಿನ ಹತ್ತಿರ ನಾಲ್ಕು ಮಂದಿ ಕುಷ್ಠರೋಗಿಗಳಿದ್ದರು. ಅವರು, “ನಾವು ಸಾಯುವುದನ್ನೇ ಕಾಯುತ್ತಾ ಕುಳಿತಿರುವುದೇಕೆ? 4 ಸಮಾರ್ಯದಲ್ಲಿ ಆಹಾರವು ಇಲ್ಲವೇ ಇಲ್ಲ. ನಾವು ನಗರದ ಒಳಗೆ ಹೋದರೆ, ನಾವು ಅಲ್ಲೇ ಸಾಯುತ್ತೇವೆ. ನಾವು ಇಲ್ಲೇ ಕುಳಿತಿದ್ದರೂ, ಸಾಯುವುದು ನಿಶ್ಚಿತ. ಆದ್ದರಿಂದ ನಾವು ಅರಾಮ್ಯರ ಪಾಳೆಯಕ್ಕೆ ಹೋಗೋಣ. ಅವರು ನಮ್ಮನ್ನು ಬದುಕಿಸಿದರೆ ನಾವು ಬದುಕೋಣ. ಅವರು ನಮ್ಮನ್ನು ಕೊಂದರೆ ಸಾಯೋಣ” ಎಂದು ಮಾತನಾಡಿಕೊಂಡರು.
5 ಅಂದು ಸಂಜೆ ಆ ನಾಲ್ವರು ಕುಷ್ಠರೋಗಿಗಳು ಅರಾಮ್ಯರ ಪಾಳೆಯಕ್ಕೆ ಹೋದರು. ಅವರು ಪಾಳೆಯದ ಹೊರ ಅಂಚಿಗೆ ಬಂದರು. ಅಲ್ಲಿ ಜನರೇ ಇರಲಿಲ್ಲ! 6 ಅರಾಮ್ಯರ ಸೇನೆಯು ರಥಗಳ, ಕುದುರೆಗಳ ಮತ್ತು ಮಹಾಸೇನೆಯ ರಣಘೋಷವನ್ನು ಕೇಳುವಂತೆ ಯೆಹೋವನು ಮಾಡಿದ್ದನು. ಅರಾಮ್ಯ ಸೈನಿಕರು, “ಇಸ್ರೇಲಿನ ರಾಜನು, ಹಿತ್ತೀಯರಿಗೆ ಮತ್ತು ಈಜಿಪ್ಟಿನವರಿಗೆ ಹಣಕೊಟ್ಟು ನಮ್ಮ ವಿರುದ್ಧ ಹೋರಾಟಕ್ಕೆ ಬರುವಂತೆ ಮಾಡಿದ್ದಾನೆ” ಎಂದು ಮಾತನಾಡಿಕೊಂಡು,
7 ಸಂಜೆಗೆ ಮುಂಚೆಯೇ ಓಡಿಹೋಗಿದ್ದರು. ಅವರು ಎಲ್ಲವನ್ನೂ ಅಲ್ಲಿಯೇ ಬಿಟ್ಟುಹೋಗಿದ್ದರು. ಅವರು ತಮ್ಮ ಗುಡಾರಗಳನ್ನು, ಕುದುರೆಗಳನ್ನು, ಹೇಸರಕತ್ತೆಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಜೀವರಕ್ಷಣೆಗಾಗಿ ಓಡಿಹೋಗಿದ್ದರು.
ಅರಾಮ್ಯರ ಪಾಳೆಯದಲ್ಲಿ ಕುಷ್ಠರೋಗಿಗಳು
8 ಈ ಕುಷ್ಠರೋಗಿಗಳು ಪಾಳೆಯವು ಆರಂಭವಾಗಿದ್ದಲ್ಲಿಗೆ ಬಂದು, ಒಂದು ಗುಡಾರದೊಳಕ್ಕೆ ಹೋದರು. ಅವರು ಅಲ್ಲಿ ತಿಂದರು ಮತ್ತು ಕುಡಿದರು. ನಂತರ ಈ ನಾಲ್ವರು ಬೆಳ್ಳಿಬಂಗಾರಗಳನ್ನು ಮತ್ತು ಬಟ್ಟೆಗಳನ್ನು ಪಾಳೆಯದಿಂದ ಹೊರಗೆ ತೆಗೆದುಕೊಂಡು ಹೋದರು. ಅವರು ಬೆಳ್ಳಿಬಂಗಾರಗಳನ್ನು ಮತ್ತು ಬಟ್ಟೆಗಳನ್ನು ಅಡಗಿಸಿಟ್ಟರು. ನಂತರ ಅವರು ಹಿಂದಿರುಗಿ ಬಂದು, ಮತ್ತೊಂದು ಗುಡಾರವನ್ನು ಪ್ರವೇಶಿಸಿದರು. ಆ ಗುಡಾರದಿಂದಲೂ ಅವರು ವಸ್ತುಗಳನ್ನು ಕೊಂಡೊಯ್ದರು. ಅವರು ಹೊರಗೆ ಹೋಗಿ ಅವುಗಳನ್ನು ಅಡಗಿಸಿಟ್ಟರು. 9 ಆಗ ಆ ಕುಷ್ಠರೋಗಿಗಳು, “ನಾವು ತಪ್ಪು ಮಾಡುತ್ತಿದ್ದೇವೆ! ಈ ದಿನ ನಮಗೆ ಶುಭವಾರ್ತೆ ಸಿಕ್ಕಿದೆ. ಆದರೆ ನಾವು ನಿಶಬ್ಧದಿಂದ ಇದ್ದೇವೆ. ಸೂರ್ಯನು ಮೇಲಕ್ಕೇರಿ ಬರುವವರೆಗೆ ನಾವು ಸುಮ್ಮನಿದ್ದರೆ ನಮ್ಮನ್ನು ದಂಡಿಸಲಾಗುವುದು. ಈಗ ನಾವು ರಾಜನ ಮನೆಗೆ ಹೋಗಿ ಅಲ್ಲಿ ವಾಸಿಸುವ ಜನರಿಗೆ ಇದನ್ನು ತಿಳಿಸೋಣ” ಎಂದು ಮಾತನಾಡಿಕೊಂಡರು.
ಕುಷ್ಠರೋಗಿಗಳು ತಿಳಿಸಿದ ಶುಭವಾರ್ತೆ
10 ಈ ಕುಷ್ಠರೋಗಿಗಳು ನಗರದ ಬಾಗಿಲಿಗೆ ಬಂದು ದ್ವಾರಪಾಲಕರನ್ನು ಕರೆದು, “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿದ್ದೆವು. ಆದರೆ ನಾವು ಜನರ ಧ್ವನಿಯನ್ನು ಕೇಳಲೇ ಇಲ್ಲ. ಅಲ್ಲಿ ಜನರ ಸುಳಿವಿಲ್ಲ. ಕುದುರೆಗಳು ಮತ್ತು ಹೇಸರಕತ್ತೆಗಳು ಕಟ್ಟಿಹಾಕಿದಂತೆಯೇ ಇವೆ. ಗುಡಾರಗಳಿನ್ನೂ ಯಥಾಸ್ಥಿತಿಯಲ್ಲಿವೆ. ಆದರೆ ಸೈನಿಕರೆಲ್ಲರೂ ಹೊರಟುಹೋಗಿದ್ದಾರೆ” ಎಂದು ಹೇಳಿದರು.
11 ಆಗ ನಗರದ ದ್ವಾರಪಾಲಕರು ಕೂಗುತ್ತಾ ರಾಜನ ಮನೆಯಲ್ಲಿದ್ದ ಜನರಿಗೆ ಈ ಸಂಗತಿಗಳನ್ನು ತಿಳಿಸಿದರು. 12 ಆಗ ರಾತ್ರಿಯಾಗಿದ್ದರೂ ರಾಜನು ತನ್ನ ಹಾಸಿಗೆಯಿಂದ ಮೇಲಕ್ಕೆದ್ದನು. ರಾಜನು ತನ್ನ ಅಧಿಕಾರಿಗಳಿಗೆ, “ಅರಾಮ್ಯರ ಸೈನಿಕರು ಮಾಡಬೇಕೆಂದಿರುವುದನ್ನು ನಾನು ನಿಮಗೆ ಹೇಳುತ್ತೇನೆ. ನಾವು ಬಹಳ ಹಸಿದಿದ್ದೇವೆಂಬುದು ಅವರಿಗೆ ತಿಳಿದಿದೆ. ಅವರು ಹೊಲಗಳಲ್ಲಿ ಅಡಗಿಕೊಳ್ಳಲು ಪಾಳೆಯನ್ನು ಬಿಟ್ಟುಹೋಗಿದ್ದಾರೆ. ‘ಇಸ್ರೇಲರು ನಗರದಿಂದ ಹೊರಗೆ ಬಂದಾಗ, ನಾವು ಅವರನ್ನು ಜೀವಂತವಾಗಿ ಸೆರೆಹಿಡಿದು ಅವರ ನಗರವನ್ನು ಪ್ರವೇಶಿಸಬಹುದು’ ಎಂದು ಅರಾಮ್ಯರು ಆಲೋಚಿಸಿದ್ದಾರೆ” ಎಂದು ಹೇಳಿದನು.
13 ರಾಜನ ಅಧಿಕಾರಿಗಳಲ್ಲಿ ಒಬ್ಬನು, “ನಮ್ಮಲ್ಲಿ ಕೆಲವರು ನಗರದಲ್ಲಿ ಉಳಿದಿರುವ ಐದು ಕುದುರೆಗಳನ್ನು ತೆಗೆದುಕೊಳ್ಳೋಣ. ನಗರದಲ್ಲಿ ಉಳಿದಿರುವ ಇಸ್ರೇಲಿನ ಜನರಂತೆ ಹೇಗಾದರೂ ಈ ಕುದುರೆಗಳೂ ಬಹುಬೇಗ ಸತ್ತುಹೋಗುತ್ತವೆ. ಈ ಜನರನ್ನು ಕಳುಹಿಸಿ ಅಲ್ಲಿ ಏನು ನಡೆದಿದೆಯೆಂಬುದನ್ನು ನಾವು ತಿಳಿದುಕೊಳ್ಳೋಣ” ಎಂದು ಹೇಳಿದನು.
14 ಕೂಡಲೇ ರಾಜನು ಎರಡು ರಥಗಳನ್ನು ತರಿಸಿ ಅರಾಮ್ಯರ ಸೇನೆಯು ಎಲ್ಲಿದೆ ಎಂಬುದನ್ನು ನೋಡಿಕೊಂಡು ಬರುವುದಕ್ಕಾಗಿ ಅವರನ್ನು ಕಳುಹಿಸಿದನು.
15 ಅವರು ಅರಾಮ್ಯರ ಸೇನೆಗಾಗಿ ಹುಡುಕಿಕೊಂಡು ಜೋರ್ಡನ್ ನದಿಯವರೆಗೂ ಹೋದರು. ರಸ್ತೆಯ ದಾರಿಯಲ್ಲೆಲ್ಲಾ ಬಟ್ಟೆಗಳು ಮತ್ತು ಆಯುಧಗಳು ಬಿದ್ದಿದ್ದವು. ಅರಾಮ್ಯರು ಆತುರಾತುರವಾಗಿ ಹೋಗುವಾಗ ಅವುಗಳನ್ನೆಲ್ಲಾ ಬಿಸಾಡಿ ಹೋಗಿದ್ದರು. ಸಂದೇಶಕರು ಸಮಾರ್ಯಕ್ಕೆ ಹಿಂದಿರುಗಿ ಬಂದು ರಾಜನಿಗೆ ವಿಷಯವನ್ನು ಹೇಳಿದರು.
16 ಆಗ ಜನರು ಅರಾಮ್ಯರ ಪಾಳೆಯಕ್ಕೆ ಓಡುತ್ತಾ ಹೋಗಿ, ಅಲ್ಲಿನ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡರು. ಪ್ರತಿಯೊಬ್ಬರಿಗೂ ಹೇರಳವಾಗಿ ದೊರೆಯಿತು. ಯೆಹೋವನು ಹೇಳಿದಂತೆಯೇ ಇದಾಯಿತು. ಒಬ್ಬನು ಉತ್ತಮವಾದ ಒಂದು ಬುಟ್ಟಿ ಹಿಟ್ಟನ್ನು ಮತ್ತು ಎರಡು ಬುಟ್ಟಿ ಜವೆಗೋಧಿಯನ್ನು ಕೇವಲ ಒಂದು ರೂಪಾಯಿಗೆ ಕೊಳ್ಳಬಹುದಾಗಿತ್ತು!
17 ರಾಜನು ತನಗೆ ಆಪ್ತನಾಗಿದ್ದ ಅಧಿಕಾರಿಯನ್ನು ಪಟ್ಟಣದ ಬಾಗಿಲನ್ನು ಕಾಯಲು ಆರಿಸಿಕೊಂಡನು. ಆದರೆ ಜನರು ಶತ್ರುಗಳ ಪಾಳೆಯದಲ್ಲಿದ್ದ ಆಹಾರವನ್ನು ಪಡೆಯಲು ಓಡಿಹೋಗುವಾಗ ಅವನು ಜನರ ತುಳಿತಕ್ಕೆ ಸಿಕ್ಕಿಕೊಂಡು ಸತ್ತುಹೋದನು. ರಾಜನು ಎಲೀಷನ ಮನೆಗೆ ಬಂದಿದ್ದಾಗ, ದೇವಮನುಷ್ಯನು ಹೇಳಿದಂತೆಯೇ ಈ ಸಂಗತಿಗಳೆಲ್ಲಾ ಸಂಭವಿಸಿದವು. 18 ಎಲೀಷನು, “ಒಂದು ರೂಪಾಯಿಗೆ ಒಂದು ಬುಟ್ಟಿ ಹಿಟ್ಟನ್ನೂ ಎರಡು ಬುಟ್ಟಿ ಜವೆಗೋಧಿಯನ್ನೂ ಸಮಾರ್ಯನಗರದ ಊರು ಬಾಗಿಲಿನಲ್ಲಿರುವ ಮಾರುಕಟ್ಟೆಯ ಸ್ಥಳದಲ್ಲಿ ಮಾರಲ್ಪಡುವುದು” ಎಂದು ಮೊದಲೇ ಹೇಳಿದ್ದನು. 19 ಆದರೆ ಆ ಅಧಿಕಾರಿಯು ದೇವಮನುಷ್ಯನಿಗೆ, “ಯೆಹೋವನು ಪರಲೋಕಕ್ಕೆ ಕಿಟಿಕಿಗಳನ್ನು ಮಾಡಿಸಿದರೂ ಇದು ಸಂಭವಿಸುವುದಿಲ್ಲ!” ಎಂದು ಉತ್ತರಿಸಿದನು. ಎಲೀಷನು ಆ ಅಧಿಕಾರಿಗೆ, “ನೀನು ನಿನ್ನ ಸ್ವಂತ ಕಣ್ಣುಗಳಿಂದಲೇ ಇದನ್ನು ನೋಡುವೆ. ಆದರೆ ಆ ಆಹಾರದಲ್ಲಿ ಯಾವುದನ್ನೂ ನೀನು ತಿನ್ನುವುದಿಲ್ಲ” ಎಂದು ಹೇಳಿದ್ದನು. 20 ಆ ಅಧಿಕಾರಿಗೆ ಅಂದು ಹೇಳಿದಂತೆಯೇ ಆಯಿತು. ಅವನು ಊರ ಬಾಗಿಲಿನಲ್ಲಿ ಜನರ ತುಳಿತಕ್ಕೆ ಸಿಕ್ಕಿಕೊಂಡು ಸತ್ತುಹೋದನು.
ಶೂನೇಮಿನ ಸ್ತ್ರೀಯ ವಿದೇಶ ಪ್ರಯಾಣ
8 ಎಲೀಷನು ತಾನು ಮರಳಿ ಜೀವಿಸುವಂತೆ ಮಾಡಿದ ಬಾಲಕನ ತಾಯಿಯೊಂದಿಗೆ ಮಾತನಾಡಿದನು. ಎಲೀಷನು, “ನೀನು ಮತ್ತು ನಿನ್ನ ಕುಟುಂಬವು ಬೇರೆ ದೇಶಕ್ಕೆ ಹೋಗಬೇಕು. ಏಕೆಂದರೆ ಈ ದೇಶದಲ್ಲಿ ಬರಗಾಲವು ಏಳು ವರ್ಷಗಳವರೆಗೆ ಇರಬೇಕೆಂದು ಯೆಹೋವನು ತೀರ್ಮಾನಿಸಿದ್ದಾನೆ” ಎಂದು ಹೇಳಿದನು.
2 ದೇವಮನುಷ್ಯನು ಹೇಳಿದಂತೆಯೇ ಆ ಸ್ತ್ರೀಯು ಫಿಲಿಷ್ಟಿಯರ ದೇಶದಲ್ಲಿ ಏಳು ವರ್ಷಗಳ ಕಾಲ ನೆಲೆಸಲು ತನ್ನ ಕುಟುಂಬದೊಂದಿಗೆ ಹೋದಳು. 3 ಏಳು ವರ್ಷಗಳು ಮುಗಿದ ನಂತರ ಆ ಸ್ತ್ರೀಯು ಫಿಲಿಷ್ಟಿಯರ ದೇಶದಿಂದ ಹಿಂದಿರುಗಿ ಬಂದಳು.
ಆ ಸ್ತ್ರೀಯು ತನ್ನ ಮನೆಯನ್ನು ಮತ್ತು ಭೂಮಿಯನ್ನು ತನಗೆ ಮತ್ತೆ ಕೊಡಿಸುವಂತೆ ಕೇಳಲು ರಾಜನ ಬಳಿಗೆ ಹೋದಳು.
4 ಆ ಸಮಯದಲ್ಲಿ ರಾಜನು ದೇವಮನುಷ್ಯನ ಸೇವಕನಾದ ಗೇಹಜಿಯ ಸಂಗಡ ಮಾತನಾಡುತ್ತಿದ್ದನು. ರಾಜನು ಗೇಹಜಿಗೆ, “ಎಲೀಷನು ಮಾಡಿರುವ ಮಹತ್ಕಾರ್ಯಗಳೆಲ್ಲವುಗಳನ್ನು ನನಗೆ ದಯವಿಟ್ಟು ತಿಳಿಸು” ಎಂದು ಕೇಳಿದನು.
5 ಎಲೀಷನು ಸತ್ತಬಾಲಕನಿಗೆ ಮತ್ತೆ ಜೀವವನ್ನು ಬರುವಂತೆ ಮಾಡಿದ್ದರ ಬಗ್ಗೆ ಗೇಹಜಿಯು ರಾಜನಿಗೆ ಹೇಳುತ್ತಿದ್ದನು. ಎಲೀಷನು ಮರಳಿ ಜೀವಬರಿಸಿದ ಬಾಲಕನ ತಾಯಿಯು ಆ ಸಮಯದಲ್ಲಿ ರಾಜನ ಬಳಿಗೆ ಹೋದಳು. ತನ್ನ ಮನೆಯನ್ನು ಮತ್ತು ಭೂಮಿಯನ್ನು ತನಗೆ ಕೊಡಿಸಬೇಕೆಂದು ಕೇಳಿಕೊಳ್ಳಲು ಆಕೆ ಬಂದಿದ್ದಳು. ಗೇಹಜಿಯು, “ನನ್ನ ಒಡೆಯನೇ, ರಾಜನೇ, ಇವಳೇ ಆ ಸ್ತ್ರೀಯು! ಎಲೀಷನು ಮರಳಿ ಜೀವಬರಿಸಿದ ಬಾಲಕನು ಇವನೇ!” ಎಂದು ಹೇಳಿದನು.
6 ರಾಜನು ಆ ಸ್ತ್ರೀಯನ್ನು ಕೇಳಿದಾಗ, ಅವಳು ತನಗೆ ಸಂಭವಿಸಿದ್ದನ್ನು ಮತ್ತು ತನಗಿದ್ದ ಇಚ್ಛೆಯನ್ನು ತಿಳಿಸಿದಳು.
ಆಗ ರಾಜನು ಅವಳಿಗೆ ಸಹಾಯಮಾಡಲು ಒಬ್ಬ ಅಧಿಕಾರಿಯನ್ನು ಕರೆದು, “ಅವಳಿಗೆ ಸೇರಬೇಕಾದ ಆಸ್ತಿಯೆಲ್ಲವನ್ನೂ ಆಕೆಗೆ ಕೊಡಿಸು. ಅವಳು ದೇಶವನ್ನು ಬಿಟ್ಟಂದಿನಿಂದ ಈವರೆಗಿನ ಆಕೆಯ ಭೂಮಿಯ ಉತ್ಪಾದನೆಯನ್ನೂ ಅವಳಿಗೆ ಕೊಡಿಸು” ಎಂದು ಹೇಳಿದನು.
ಬೆನ್ಹದದನು ಹಜಾಯೇಲನನ್ನು ಎಲೀಷನ ಬಳಿಗೆ ಕಳುಹಿಸುವನು
7 ಎಲೀಷನು ದಮಸ್ಕಕ್ಕೆ ಹೋದನು. ಅರಾಮ್ಯರ ರಾಜನಾದ ಬೆನ್ಹದದನಿಗೆ ಕಾಯಿಲೆಯಾಗಿತ್ತು. ಬೆನ್ಹದದನಿಗೆ ಒಬ್ಬನು, “ದೇವಮನುಷ್ಯನು ಇಲ್ಲಿಗೆ ಬಂದಿದ್ದಾನೆ” ಎಂದು ಹೇಳಿದನು.
8 ಆಗ ರಾಜನಾದ ಬೆನ್ಹದದನು ಹಜಾಯೇಲನಿಗೆ, “ದೇವಮನುಷ್ಯನನ್ನು ಕಾಣಲು ಒಂದು ಕಾಣಿಕೆಯನ್ನು ತೆಗೆದುಕೊಂಡು ಹೋಗು. ನಾನು ನನ್ನ ಕಾಯಿಲೆಯಿಂದ ಗುಣವಾಗುತ್ತೇನೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಅವನು ಯೆಹೋವನಲ್ಲಿ ಪ್ರಾರ್ಥಿಸಲಿ” ಎಂದು ಹೇಳಿದನು.
9 ಹಜಾಯೇಲನು ತನ್ನೊಡನೆ ಕಾಣಿಕೆಯನ್ನು ತೆಗೆದುಕೊಂಡು ಎಲೀಷನನ್ನು ಭೇಟಿಮಾಡಲು ಹೋದನು. ಅವನು ದಮಸ್ಕದಿಂದ ಎಲ್ಲಾ ವಿಧವಾದ ಉತ್ತಮ ವಸ್ತುಗಳನ್ನು ನಲವತ್ತು ಒಂಟೆಗಳ ಮೇಲೆ ಹೇರಿಸಿಕೊಂಡು ಹೋದನು. ಹಜಾಯೇಲನು ಎಲೀಷನ ಬಳಿಗೆ ಹೋಗಿ, “ನಿನ್ನ ಹಿಂಬಾಲಕನೂ ಅರಾಮ್ಯರ ರಾಜನೂ ಆದ ಬೆನ್ಹದದನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದನು. ತನ್ನ ಕಾಯಿಲೆಯು ವಾಸಿಯಾಗುತ್ತದೆಯೇ ಇಲ್ಲವೇ ಎಂಬುದನ್ನು ಅವನು ನಿನ್ನಿಂದ ತಿಳಿದುಕೊಳ್ಳಬೇಕೆಂದಿದ್ದಾನೆ” ಎಂದು ಹೇಳಿದನು.
10 ಆಗ ಎಲೀಷನು ಹಜಾಯೇಲನಿಗೆ, “‘ವಾಸಿಯಾಗುವುದು’ ಎಂದು ಬೆನ್ಹದದನಿಗೆ ಹೇಳು. ಆದರೆ, ‘ಅವನು ಸಾಯುವುದು ಖಂಡಿತ’ ಎಂದು ಯೆಹೋವನು ನನಗೆ ತಿಳಿಸಿದ್ದಾನೆ” ಎಂದು ಹೇಳಿದನು.
ಹಜಾಯೇಲನ ಬಗ್ಗೆ ಎಲೀಷನ ಪ್ರವಾದನೆ
11 ಹಜಾಯೇಲನು ನಾಚಿಕೊಳ್ಳುವ ತನಕ ಎಲೀಷನು ಅವನನ್ನು ಒಂದೇ ಸಮನೆ ನೋಡಿದನು. ನಂತರ ದೇವಮನುಷ್ಯನು ಅಳತೊಡಗಿದನು. 12 ಹಜಾಯೇಲನು, “ಸ್ವಾಮೀ, ನೀವು ಅಳುವುದೇಕೇ?” ಎಂದು ಕೇಳಿದನು.
ಎಲೀಷನು, “ನಾನು ಅಳುತ್ತಿರುವುದೇಕೆಂದರೆ ನೀನು ಇಸ್ರೇಲರಿಗೆ ಮಾಡುವ ಕೆಟ್ಟಕಾರ್ಯಗಳು ನನಗೆ ತಿಳಿದಿವೆ. ನೀನು ಅವರ ನಗರಗಳ ಕೋಟೆಗಳನ್ನು ಸುಟ್ಟುಹಾಕುವೆ. ನೀನು ಅವರ ತರುಣರನ್ನು ಖಡ್ಗಗಳಿಂದ ಇರಿದುಕೊಲ್ಲುವೆ. ನೀನು ಅವರ ಮಕ್ಕಳನ್ನು ಕೊಂದುಹಾಕುವೆ. ನೀನು ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಹಾಕುವೆ” ಎಂದು ಹೇಳಿದನು.
13 ಹಜಾಯೇಲನು, “ನಾನು ಬಲಾಢ್ಯನಾದ ಮನುಷ್ಯನಲ್ಲ! ನಾನು ಈ ಮಹತ್ಕಾರ್ಯಗಳನ್ನು ಮಾಡಲಾಗುವುದಿಲ್ಲ!” ಎಂದು ಹೇಳಿದನು.
ಎಲೀಷನು, “ನೀನು ಅರಾಮ್ಯರ ರಾಜನಾಗುವೆಯೆಂದು ಯೆಹೋವನು ನನಗೆ ತಿಳಿಸಿದ್ದಾನೆ” ಎಂದು ಹೇಳಿದನು.
14 ಹಜಾಯೇಲನು ಎಲೀಷನ ಬಳಿಯಿಂದ ಹೊರಟು ತನ್ನ ರಾಜನ ಬಳಿಗೆ ಹೋದನು. ಬೆನ್ಹದದನು ಹಜಾಯೇಲನಿಗೆ, “ಎಲೀಷನು ನಿನಗೆ ಏನು ಹೇಳಿದನು?” ಎಂದು ಕೇಳಿದನು. ಹಜಾಯೇಲನು, “ನಿನ್ನ ಕಾಯಿಲೆಯು ವಾಸಿಯಾಗುತ್ತದೆಯೆಂದು ಎಲೀಷನು ನನಗೆ ಹೇಳಿದನು” ಎಂದನು.
ಬೆನ್ಹದದನನ್ನು ಹಜಾಯೇಲನು ಕೊಂದುಹಾಕುವನು
15 ಆದರೆ ಮಾರನೆಯ ದಿನ ಹಜಾಯೇಲನು ಒಂದು ಹೊದಿಕೆಯನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿದನು. ನಂತರ ಅವನು ಆ ಹೊದಿಕೆಯನ್ನು ಬೆನ್ಹದದನ ಮುಖದ ಮೇಲೆ ಹಾಕಿ, ಅವನನ್ನು ಉಸಿರುಕಟ್ಟಿಸಿ ಸಾಯಿಸಿದನು. ಹಜಾಯೇಲನು ನೂತನ ರಾಜನಾದನು.
ಯೆಹೋರಾಮನು ತನ್ನ ಆಳ್ವಿಕೆಯನ್ನು ಆರಂಭಿಸುವನು
16 ಯೆಹೋಷಾಫಾಟನ ಮಗನಾದ ಯೆಹೋರಾಮನು ಯೆಹೂದದ ರಾಜನಾಗಿದ್ದನು. ಅಹಾಬನ ಮಗನಾದ ಯೋರಾಮನು ಇಸ್ರೇಲಿನ ರಾಜನಾಗಿದ್ದ ಐದನೆಯ ವರ್ಷದಲ್ಲಿ ಯೆಹೋರಾಮನು ಆಳಲಾರಂಭಿಸಿದನು. 17 ಯೆಹೋರಾಮನು ಆಳುವುದಕ್ಕೆ ಆರಂಭಿಸಿದಾಗ ಅವನಿಗೆ ಮೂವತ್ತೆರಡು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಎಂಟು ವರ್ಷ ಆಳಿದನು. 18 ಆದರೆ ಯೆಹೋರಾಮನು ಇಸ್ರೇಲಿನ ರಾಜರುಗಳಂತೆ ಜೀವಿಸಿದನು ಮತ್ತು ಯೆಹೋವನು ಕೆಟ್ಟಕಾರ್ಯಗಳೆಂದು ಹೇಳಿದ್ದನ್ನೇ ಮಾಡಿದನು. ಯೆಹೋರಾಮನು ಅಹಾಬನ ಕುಟುಂಬದ ಜನರಂತೆ ಜೀವಿಸಿದನು. ಅವನ ಪತ್ನಿಯು ಅಹಾಬನ ಮಗಳಾದ್ದರಿಂದ ಯೆಹೋರಾಮನು ಹೀಗೆ ಜೀವಿಸಿದನು. 19 ಆದರೆ ಯೆಹೋವನು ತನ್ನ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದುದರಿಂದ ಯೆಹೂದವನ್ನು ನಾಶಗೊಳಿಸಲಿಲ್ಲ. ಯಾವಾಗಲೂ ದಾವೀದನ ಕುಟುಂಬದ ಒಬ್ಬನು ರಾಜನಾಗಿರುತ್ತಾನೆಂದು ಯೆಹೋವನು ವಾಗ್ದಾನ ಮಾಡಿದ್ದನು.
20 ಯೆಹೋರಾಮನ ಕಾಲದಲ್ಲಿ ಎದೋಮ್ಯರು ಯೆಹೂದದ ಆಳ್ವಿಕೆಗೆ ವಿರುದ್ಧವಾಗಿ ದಂಗೆ ಎದ್ದರು. ಎದೋಮ್ಯರು ತಮ್ಮಲ್ಲೇ ಒಬ್ಬ ರಾಜನನ್ನು ಆರಿಸಿಕೊಂಡಿದ್ದರು.
21 ಆಗ ಯೆಹೋರಾಮನು ಮತ್ತು ಅವನ ರಥಗಳೆಲ್ಲ ಚಾಯೀರಿಗೆ ಹೋದವು. ಎದೋಮಿನ ಸೇನೆಯು ಅವರನ್ನು ಸುತ್ತುವರಿಯಿತು. ಯೆಹೋರಾಮನು ತನ್ನ ಅಧಿಕಾರಿಗಳೊಂದಿಗೆ ಅವರನ್ನು ರಾತ್ರಿಯಲ್ಲಿ ಮುತ್ತಿಗೆ ಹಾಕಿ ತಪ್ಪಿಸಿಕೊಂಡರು. ಆದರೆ ಅವನ ಸೈನಿಕರು ತಮ್ಮ ಗುಡಾರಗಳಿಗೆ ಓಡಿಹೋದರು. 22 ಹೀಗೆ ಎದೋಮ್ಯರು ಯೆಹೂದದ ಆಳ್ವಿಕೆಯಿಂದ ಬೇರ್ಪಟ್ಟರು. ಅವರು ಇಂದಿನ ತನಕ ಯೆಹೂದದ ಆಳ್ವಿಕೆಯಿಂದ ಬೇರ್ಪಟ್ಟು ಸ್ವತಂತ್ರರಾಗಿದ್ದಾರೆ. ಅದೇ ಸಮಯದಲ್ಲಿ ಲಿಬ್ನದವರು ಯೆಹೂದದ ಆಳ್ವಿಕೆಯಿಂದ ಬೇರೆಯಾದರು.
23 ಯೆಹೂದದ ರಾಜರುಗಳು ಎಂಬ ಇತಿಹಾಸ ಪುಸ್ತಕದಲ್ಲಿ ಯೆಹೋರಾಮನು ಮಾಡಿದ ಇತರ ಎಲ್ಲಾ ಕಾರ್ಯಗಳನ್ನು ಬರೆಯಲಾಗಿದೆ.
24 ಯೆಹೋರಾಮನು ಸತ್ತುಹೋದನು. ಅವನನ್ನು ದಾವೀದನಗರದಲ್ಲಿ ಅವನ ಪೂರ್ವಿಕರ ಬಳಿ ಸಮಾಧಿ ಮಾಡಿದರು. ಯೆಹೋರಾಮನ ಮಗನಾದ ಅಹಜ್ಯನು ನೂತನ ರಾಜನಾದನು.
ಅಹಜ್ಯನು ತನ್ನ ಆಳ್ವಿಕೆಯನ್ನು ಆರಂಭಿಸಿದನು
25 ಅಹಾಬನ ಮಗನಾದ ಯೋರಾಮನು ಇಸ್ರೇಲಿನ ರಾಜನಾಗಿದ್ದ ಹನ್ನೆರಡನೆಯ ವರ್ಷದಲ್ಲಿ ಯೆಹೋರಾಮನ ಮಗನಾದ ಅಹಜ್ಯನು ಯೆಹೂದದ ರಾಜನಾದನು. 26 ಅಹಜ್ಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೆರಡು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು. ಅವನ ತಾಯಿಯ ಹೆಸರು ಅತಲ್ಯ. ಅವಳು ಇಸ್ರೇಲಿನ ರಾಜನಾದ ಒಮ್ರಿಯ ಮಗಳು. 27 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಅಹಜ್ಯನು ಮಾಡಿದನು. ಅಹಜ್ಯನು ಅಹಾಬನ ಕುಟುಂಬದ ಜನರಂತೆ ಜೀವಿಸಿದ್ದನು. ಅಹಜ್ಯನು ಅಹಾಬನ ಅಳಿಯನಾದ್ದರಿಂದ ಅವನು ಹೀಗೆ ಜೀವಿಸಿದನು.
ಹಜಾಯೇಲನ ವಿರುದ್ಧದ ಯುದ್ಧದಲ್ಲಿ ಯೋರಾಮನು ಗಾಯಗೊಂಡನು
28 ಅಹಜ್ಯನು ಅಹಾಬನ ಮಗನಾದ ಯೋರಾಮನ ಜೊತೆಯಲ್ಲಿ ಅರಾಮ್ಯರ ರಾಜನಾದ ಹಜಾಯೇಲನ ವಿರುದ್ಧ ಯುದ್ಧಮಾಡಲು ರಾಮೋತ್‌ಗಿಲ್ಯಾದಿಗೆ ಹೋದನು. ಅರಾಮ್ಯರು ಯೋರಾಮನನ್ನು ಗಾಯಗೊಳಿಸಿದರು. 29 ರಾಜ ಯೋರಾಮನು ಹಜಾಯೇಲನ ವಿರುದ್ಧವಾಗಿ ಹೋರಾಡಿದಾಗ ರಾಮಾದಲ್ಲಿ ಅರಾಮ್ಯದಿಂದ ತನಗಾದ ಗಾಯಗಳನ್ನು ಗುಣಪಡಿಸಿಕೊಳ್ಳಲು ಇಸ್ರೇಲಿನ ರಾಜನು ಇಜ್ರೇಲ್ ಎಂಬ ಪಟ್ಟಣಕ್ಕೆ ಹಿಂತಿರುಗಿದನು. ಯೆಹೂದದ ರಾಜನೂ ಯೆಹೋರಾಮನ ಮಗನೂ ಆದ ಅಹಜ್ಯನು, ಅಹಾಬನ ಮಗನಾದ ಯೋರಾಮನನ್ನು ನೋಡಲು ಇಜ್ರೇಲಿಗೆ ಹೋದನು. ಯಾಕೆಂದರೆ ಅವನಿಗೆ ಕಾಯಿಲೆಯಾಗಿತ್ತು.
Kannada Holy Bible: Easy-to-Read Version. All rights reserved. © 1997 Bible League International