Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
1 ರಾಜರುಗಳು 15-17

ಯೆಹೂದದ ರಾಜನಾದ ಅಬೀಯಾಮ

15 ನೆಬಾಟನ ಮಗನಾದ ಯಾರೊಬ್ಬಾಮನು ಇಸ್ರೇಲನ್ನು ಆಳುತ್ತಿದ್ದನು. ಯಾರೊಬ್ಬಾಮನು ರಾಜನಾಗಿದ್ದ ಹದಿನೆಂಟನೆಯ ವರ್ಷದಲ್ಲಿ ಅಬೀಯಾಮನು ಯೆಹೂದದ ಹೊಸ ರಾಜನಾದನು. ಅಬೀಯಾಮನು ಮೂರು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಮಾಕಾ. ಅವಳು ಅಬೀಷಾಲೋಮನ ಮಗಳು.

ಅವನಿಗಿಂತಲೂ ಮುಂಚೆ ಅವನ ತಂದೆಯು ಮಾಡಿದ ಪಾಪಗಳನ್ನೇ ಅವನೂ ಮಾಡಿದನು. ಅವನ ಪಿತೃವಾದ ದಾವೀದನು ತನ್ನ ದೇವರಾದ ಯೆಹೋವನಿಗೆ ನಂಬಿಗಸ್ತನಾಗಿದ್ದಂತೆ ಅಬೀಯಾಮನು ನಂಬಿಗಸ್ತನಾಗಿರಲಿಲ್ಲ. ಯೆಹೋವನು ದಾವೀದನನ್ನು ಪ್ರೀತಿಸಿದ್ದರಿಂದ ಅವನಿಗೋಸ್ಕರ ಅಬೀಯಾಮನಿಗೆ ಜೆರುಸಲೇಮಿನಲ್ಲಿ ರಾಜ್ಯವನ್ನು ದಯಪಾಲಿಸಿದನು; ಅವನಿಗೆ ಮಗನನ್ನು ಅನುಗ್ರಹಿಸಿದನು; ಜೆರುಸಲೇಮ್ ಸುರಕ್ಷಿತವಾಗಿರುವಂತೆ ಮಾಡಿದನು. ಯೆಹೋವನು ಇಚ್ಛಿಸಿದ ಕಾರ್ಯಗಳನ್ನು ದಾವೀದನು ಯಾವಾಗಲೂ ಮಾಡುತ್ತಿದ್ದನು. ಯೆಹೋವನ ಆಜ್ಞೆಗಳಿಗೆ ಅವನು ಯಾವಾಗಲೂ ವಿಧೇಯತೆಯಿಂದಿದ್ದನು. ದಾವೀದನು ಹಿತ್ತಿಯನಾದ ಊರೀಯನ ವಿಷಯದಲ್ಲಿ ಮಾತ್ರ ಯೆಹೋವನಿಗೆ ಅವಿಧೇಯನಾದನು.

ರೆಹಬ್ಬಾಮನ ಮತ್ತು ಯಾರೊಬ್ಬಾಮನ ನಡುವೆ ಯುದ್ಧವು ನಡೆಯುತ್ತಲೇ ಇರುತ್ತಿತ್ತು. ಅಬೀಯಾಮನು ಮಾಡಿದ ಇತರ ಎಲ್ಲಾ ಕಾರ್ಯಗಳ ಬಗ್ಗೆ “ಯೆಹೂದದ ರಾಜರುಗಳ ಚರಿತ್ರೆಯಲ್ಲಿ” ಬರೆದಿದೆ.

ಅಬೀಯಾಮನು ರಾಜನಾಗಿದ್ದ ಎಲ್ಲಾ ಕಾಲದಲ್ಲೂ, ಯಾರೊಬ್ಬಾಮನ ಮತ್ತು ಅಬೀಯಾಮನ ನಡುವೆ ಯುದ್ಧ ನಡೆಯುತ್ತಲೇ ಇತ್ತು. ಅಬೀಯಾಮನು ಸತ್ತಾಗ, ಅವನನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು. ಅಬೀಯಾಮನ ನಂತರ ಅವನ ಮಗನಾದ ಆಸನು ಹೊಸ ರಾಜನಾದನು.

ಆಸನು ಯೆಹೂದದ ರಾಜ

ಯಾರೊಬ್ಬಾಮನು ಇಸ್ರೇಲಿನ ರಾಜನಾಗಿದ್ದ ಇಪ್ಪತ್ತನೆಯ ವರ್ಷದಲ್ಲಿ ಆಸನು ಯೆಹೂದದ ರಾಜನಾದನು. 10 ಆಸನು ಜೆರುಸಲೇಮಿನಲ್ಲಿ ನಲವತ್ತೊಂದು ವರ್ಷ ಆಳಿದನು. ಅವನ ಅಜ್ಜಿಯ ಹೆಸರು ಮಾಕಾ. ಈಕೆಯು ಅಬೀಷಾಲೋಮನ ಮಗಳು.

11 ಆಸನು ತನ್ನ ಪೂರ್ವಿಕನಾದ ದಾವೀದನು ಮಾಡಿದಂತೆ, ಯೆಹೋವನು ಇಚ್ಛಿಸಿದ ಕಾರ್ಯಗಳನ್ನೇ ಮಾಡಿದನು. 12 ಆ ಕಾಲದಲ್ಲಿ, ಇತರ ದೇವರುಗಳ ಸೇವೆಗೋಸ್ಕರ ತಮ್ಮ ದೇಹಗಳನ್ನು ಲೈಂಗಿಕವಾಗಿ ಮಾರಾಟ ಮಾಡುತ್ತಿದ್ದ ಜನರು ಅಲ್ಲಿದ್ದರು. ಆ ಜನರು ದೇಶವನ್ನು ಬಿಟ್ಟುಹೋಗುವಂತೆ ಅವನು ಬಲವಂತ ಮಾಡಿದನು. ಆಸನು ತನ್ನ ಪೂರ್ವಿಕರು ನಿರ್ಮಿಸಿದ ವಿಗ್ರಹಗಳನ್ನು ನಿರ್ಮೂಲಮಾಡಿದನು. 13 ಆಸನು ತನ್ನ ಅಜ್ಜಿ ಮಾಕಳನ್ನು ರಾಣಿಯ ಪಟ್ಟದಿಂದ ಕೆಳಗಿಳಿಸಿದನು. ಮಾಕಳು ಅಶೇರ ದೇವತೆಯ ಒಂದು ಭೀಕರ ಮೂರ್ತಿಯನ್ನು ಮಾಡಿಸಿದ್ದಳು. ಅವನು ಅದನ್ನು ಕಿದ್ರೋನ್ ಕಣಿವೆಯಲ್ಲಿ ಸುಟ್ಟುಹಾಕಿದನು. 14 ಆಸನು ಎತ್ತರವಾದ ಸ್ಥಳಗಳನ್ನು ನಾಶಪಡಿಸಲಿಲ್ಲ. ಆದರೆ ಅವನು ತನ್ನ ಜೀವಮಾನವೆಲ್ಲಾ ಯೆಹೋವನಿಗೆ ನಂಬಿಗಸ್ಥನಾಗಿದ್ದನು. 15 ಇದಲ್ಲದೆ ತಾನು ಮತ್ತು ತನ್ನ ತಂದೆಯು ಮೀಸಲಾಗಿಟ್ಟಿದ್ದ ಬೆಳ್ಳಿಬಂಗಾರವನ್ನೂ ಪಾತ್ರೆಗಳನ್ನೂ ದೇವಾಲಯದಲ್ಲಿಟ್ಟನು.

16 ರಾಜನಾದ ಆಸನು ಯೆಹೂದದ ಅರಸನಾಗಿದ್ದ ಕಾಲದಲ್ಲಿ ಅವನಿಗೆ ಮತ್ತು ಇಸ್ರೇಲಿನ ರಾಜನಾದ ಬಾಷನಿಗೆ ಯಾವಾಗಲೂ ಯುದ್ಧ ನಡೆಯುತ್ತಿತ್ತು. 17 ಯೆಹೂದದ ವಿರುದ್ಧವಾಗಿ ಬಾಷನು ಹೋರಾಡಿದನು. ಆಸನ ದೇಶವಾದ ಯೆಹೂದದಿಂದ ಜನರು ಬರುವುದನ್ನೂ ಹೋಗುವುದನ್ನೂ ನಿಲ್ಲಿಸಲು ಬಾಷನು ಇಚ್ಛಿಸಿದನು. ಆದ್ದರಿಂದ ಅವನು ರಾಮ ನಗರವನ್ನು ಬಲಪಡಿಸಿದನು. 18 ಆದ್ದರಿಂದ ಆಸನು ಯೆಹೋವನ ಆಲಯದ ಮತ್ತು ರಾಜನ ಅರಮನೆಯ ಭಂಡಾರದಲ್ಲಿ ಉಳಿದಿದ್ದ ಎಲ್ಲಾ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡನು. ಅವನು ತನ್ನ ಸೇವಕರಿಗೆ ಬೆಳ್ಳಿಬಂಗಾರಗಳನ್ನು ಕೊಟ್ಟು, ಅವರನ್ನು ಅರಾಮ್ಯರ ರಾಜನಾದ ಬೆನ್ಹದದನ ಬಳಿಗೆ ಕಳುಹಿಸಿದನು. (ಬೆನ್ಹದದನು ಟಬ್ರಿಮ್ಮೋನನ ಮಗ. ಟಬ್ರಿಮ್ಮೋನನು ಹಜ್ಯೋನನ ಮಗ.) ದಮಸ್ಕ ನಗರವು ಅವನ ರಾಜಧಾನಿಯಾಗಿತ್ತು. 19 ಆಸನು ಈ ಸಂದೇಶವನ್ನು ಕಳುಹಿಸಿದನು: “ನನ್ನ ತಂದೆಯೂ ನಿನ್ನ ತಂದೆಯೂ ಶಾಂತಿಒಪ್ಪಂದವನ್ನು ಮಾಡಿಕೊಂಡಿದ್ದರು. ಈಗ ನಾನು ನಿನ್ನೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಅಪೇಕ್ಷಿಸಿದ್ದೇನೆ. ನಾನು ನಿನಗೆ ಬೆಳ್ಳಿಬಂಗಾರಗಳನ್ನು ಕಾಣಿಕೆಯಾಗಿ ಕಳುಹಿಸುತ್ತಿದ್ದೇನೆ. ಇಸ್ರೇಲಿನ ರಾಜನಾದ ಬಾಷನೊಂದಿಗೆ ನಿನಗಿರುವ ಒಪ್ಪಂದವನ್ನು ಮುರಿದುಬಿಡು. ಆಗ ಬಾಷನು ನನ್ನ ದೇಶವನ್ನು ಬಿಟ್ಟುಹೋಗುತ್ತಾನೆ.”

20 ರಾಜನಾದ ಬೆನ್ಹದದನು ರಾಜನಾದ ಆಸನ ಜೊತೆ ಒಪ್ಪಂದ ಮಾಡಿಕೊಂಡನು. ಆದ್ದರಿಂದ ಅವನು ತನ್ನ ಸೈನ್ಯವನ್ನು ಇಸ್ರೇಲಿನ ಪಟ್ಟಣಗಳ ವಿರುದ್ದ ಹೋರಾಡಲು ಕಳುಹಿಸಿದನು. ಬೆನ್ಹದದನು ಇಯ್ಯೋನ್, ದಾನ್, ಅಬೇಲ್ಬೇತ್ಮಾಕಾ ಪಟ್ಟಣಗಳನ್ನು ಮತ್ತು ಗಲಿಲಾಯ ಸರೋವರದ ಸುತ್ತಲಿನ ಎಲ್ಲಾ ಪಟ್ಟಣಗಳನ್ನು ಸೋಲಿಸಿದನು. ಅವನು ನಫ್ತಾಲಿ ಪ್ರದೇಶವನ್ನೆಲ್ಲ ಸೋಲಿಸಿದನು. 21 ಈ ಆಕ್ರಮಣದ ಸುದ್ದಿಯು ಬಾಷನಿಗೆ ತಿಳಿಯಿತು. ಆದ್ದರಿಂದ ಅವನು ರಾಮ ನಗರವನ್ನು ಬಲಪಡಿಸಲು ತಾನು ಕೈಗೊಂಡಿದ್ದ ಕೆಲಸವನ್ನು ನಿಲ್ಲಿಸಿದನು. ಅವನು ಆ ಪಟ್ಟಣದಿಂದ ತಿರ್ಚಕ್ಕೆ ಹಿಂದಿರುಗಿದನು. 22 ಆಗ ರಾಜನಾದ ಆಸನು ಯೆಹೂದದ ಜನರಿಗೆಲ್ಲ ಒಂದು ಆಜ್ಞೆಯನ್ನು ಮಾಡಿದನು. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸಹಾಯಮಾಡಬೇಕಾಯಿತು. ಬಾಷನು ರಾಮ ನಗರವನ್ನು ಬಲಪಡಿಸಲೆಂದು ಉಪಯೋಗಿಸುತ್ತಿದ್ದ ಎಲ್ಲಾ ಕಲ್ಲುಗಳನ್ನು ಮತ್ತು ಮರಗಳನ್ನು ಅವರು ರಾಮಕ್ಕೆ ಹೋಗಿ ತೆಗೆದುಕೊಂಡು ಬಂದರು. ಅವರು ಆ ವಸ್ತುಗಳನ್ನು ಬೆನ್ಯಾಮೀನ್ ದೇಶದ ಗೆಬಕ್ಕೆ ಮತ್ತು ಮಿಚ್ಛೆಗಳಿಗೆ ತೆಗೆದುಕೊಂಡು ಹೋದರು. ನಂತರ ರಾಜನಾದ ಆಸನು ಆ ಪಟ್ಟಣಗಳನ್ನು ಮತ್ತಷ್ಟು ಬಲಪಡಿಸಿದನು.

23 ಆಸನು ಮಾಡಿದ ಮಹಾಕಾರ್ಯಗಳನ್ನೂ ಅವನು ಕಟ್ಟಿಸಿದ ನಗರಗಳನ್ನೂ ಮತ್ತು ಅವನನ್ನು ಕುರಿತ ಇತರ ಸಂಗತಿಗಳನ್ನೂ “ಯೆಹೂದದ ರಾಜರುಗಳ ಚರಿತ್ರೆ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಆಸನಿಗೆ ವಯಸ್ಸಾದಾಗ, ಅವನ ಕಾಲುಗಳಿಗೆ ರೋಗವಾಗಿತ್ತು. 24 ಆಸನು ಸತ್ತುಹೋದನು. ಅವನನ್ನು ಅವನ ಪೂರ್ವಿಕನಾದ ದಾವೀದ ನಗರದಲ್ಲಿ ಸಮಾಧಿಮಾಡಿದರು. ಆಸನ ಮಗನಾದ ಯೆಹೋಷಾಫಾಟನು ಅವನ ನಂತರ ಹೊಸ ರಾಜನಾದನು.

ನಾದಾಬ ಇಸ್ರೇಲಿನ ರಾಜ

25 ಆಸನು ಯೆಹೂದದ ರಾಜನಾಗಿದ್ದ ಎರಡನೆಯ ವರ್ಷದಲ್ಲಿ, ಯಾರೊಬ್ಬಾಮನ ಮಗನಾದ ನಾದಾಬನು ಇಸ್ರೇಲಿನ ರಾಜನಾದನು. ನಾದಾಬನು ಇಸ್ರೇಲನ್ನು ಎರಡು ವರ್ಷ ಆಳಿದನು. 26 ನಾದಾಬನು ಯೆಹೋವನ ವಿರುದ್ಧ ಕೆಟ್ಟಕಾರ್ಯಗಳನ್ನು ಮಾಡಿದನು. ತನ್ನ ತಂದೆಯಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನೂ ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.

27 ಬಾಷನು ಅಹೀಯನ ಮಗ. ಅವನು ಇಸ್ಸಾಕಾರನ ಕುಲದವನಾಗಿದ್ದನು. ರಾಜನಾದ ನಾದಾಬನನ್ನು ಕೊಲ್ಲಲು ಬಾಷನು ಸಂಚು ಮಾಡಿದನು. ನಾದಾಬನು ಇಸ್ರೇಲರೊಡನೆ ಗಿಬ್ಬೆತೋನ್ ಪಟ್ಟಣದ ವಿರುದ್ಧ ಹೋರಾಟ ಮಾಡುತ್ತಿದ್ದ ಸಂದರ್ಭವಿದು. ಇದು ಫಿಲಿಷ್ಟಿಯ ಪಟ್ಟಣ. ಆ ಸ್ಥಳದಲ್ಲಿ ಬಾಷನು ನಾದಾಬನನ್ನು ಕೊಂದುಹಾಕಿದನು. 28 ಆಸನು ಯೆಹೂದದ ರಾಜನಾಗಿದ್ದ ಮೂರನೆಯ ವರ್ಷದಲ್ಲಿ ಇದು ಸಂಭವಿಸಿತು. ಅನಂತರ ಬಾಷನು ಇಸ್ರೇಲಿಗೆ ರಾಜನಾದನು.

ಇಸ್ರೇಲಿನ ರಾಜನಾದ ಬಾಷನು

29 ಬಾಷನು ಹೊಸರಾಜನಾದ ಸಮಯದಲ್ಲಿ ಅವನು ಯಾರೊಬ್ಬಾಮನ ವಂಶದಲ್ಲಿ ಎಲ್ಲರನ್ನೂ ಕೊಂದುಹಾಕಿದನು. ಯಾರೊಬ್ಬಾಮನ ವಂಶದಲ್ಲಿ ಯಾರೂ ಜೀವಸಹಿತ ಉಳಿಯಲು ಬಾಷನು ಬಿಡಲಿಲ್ಲ. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು. ಯೆಹೋವನು ತನ್ನ ಸೇವಕನಾದ ಶೀಲೋವಿನ ಅಹೀಯನ ಮೂಲಕ ಇದನ್ನು ಹೇಳಿದ್ದನು. 30 ರಾಜನಾದ ಯಾರೊಬ್ಬಾಮನು ಅನೇಕ ಪಾಪಗಳನ್ನು ಮಾಡಿದ್ದರಿಂದ ಇದು ಸಂಭವಿಸಿತು. ಇಸ್ರೇಲಿನ ಜನರು ಅನೇಕ ಪಾಪಗಳನ್ನು ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಇಸ್ರೇಲಿನ ದೇವರಾದ ಯೆಹೋವನು ಹೆಚ್ಚು ಕೋಪಗೊಳ್ಳುವಂತೆ ಯಾರೊಬ್ಬಾಮನು ಮಾಡಿದ್ದನು.

31 ನಾದಾಬನು ಮಾಡಿದ ಇತರ ಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 32 ಬಾಷನು ಇಸ್ರೇಲನ್ನು ಆಳುತ್ತಿದ್ದ ಕಾಲದಲ್ಲೆಲ್ಲಾ, ಯೆಹೂದದ ರಾಜನಾದ ಆಸನ ವಿರುದ್ಧವಾಗಿ ಯುದ್ಧ ಮಾಡುತ್ತಲೇ ಇದ್ದನು.

33 ಆಸನು ಯೆಹೂದದ ರಾಜನಾದ ಮೂರನೆಯ ವರ್ಷದಲ್ಲಿ, ಅಹೀಯನ ಮಗನಾದ ಬಾಷನು ಇಡೀ ಇಸ್ರೇಲಿಗೆ ರಾಜನಾದನು. ಅವನ ರಾಜಧಾನಿಯಾದ ತಿರ್ಚದಲ್ಲಿ, ಅವನು ಇಪ್ಪತ್ತನಾಲ್ಕು ವರ್ಷ ಆಳಿದನು. 34 ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಬಾಷನು ಮಾಡಿದನು. ತನಗಿಂತ ಮುಂಚೆ ಆಳಿದ ಇಸ್ರೇಲಿನ ರಾಜನಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನು ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.

16 ಆಗ ಯೆಹೋವನು ಹನಾನೀಯ ಮಗನಾದ ಯೇಹುವಿನೊಂದಿಗೆ ಮಾತನಾಡಿ ರಾಜನಾದ ಬಾಷನ ವಿರುದ್ಧವಾಗಿ ಹೀಗೆ ಹೇಳಿದನು: “ನಾನು ನಿನ್ನನ್ನು ಪ್ರಾಮುಖ್ಯ ವ್ಯಕ್ತಿಯನ್ನಾಗಿ ಮಾಡಿದೆ. ಇಸ್ರೇಲಿನ ಜನರಿಗೆ ನಿನ್ನನ್ನು ರಾಜನನ್ನಾಗಿ ನಾನು ಮಾಡಿದೆ. ಆದರೆ ನೀನು ಯಾರೊಬ್ಬಾಮನ ಮಾರ್ಗವನ್ನೇ ಅನುಸರಿಸಿದೆ. ಇಸ್ರೇಲಿನ ನನ್ನ ಜನರು ಪಾಪಮಾಡುವಂತೆ ನೀನು ಪ್ರೇರೇಪಿಸಿದೆ. ಅವರು ತಮ್ಮ ಪಾಪಗಳಿಂದ ನನ್ನನ್ನು ಕೋಪಗೊಳಿಸಿದರು. ಆದ್ದರಿಂದ ಬಾಷನೇ, ನಿನ್ನನ್ನೂ ನಿನ್ನ ಕುಟುಂಬವನ್ನೂ ನಾನು ನಾಶಪಡಿಸುತ್ತೇನೆ. ನೆಬಾಟನ ಮಗನಾದ ಯಾರೊಬ್ಬಾಮನ ಕುಟುಂಬಕ್ಕೆ ನಾನು ಮಾಡಿದಂತೆ ನಿನಗೂ ಮಾಡುತ್ತೇನೆ. ನಿನ್ನ ಕುಟುಂಬದ ಜನರು ನಗರದ ಬೀದಿಗಳಲ್ಲಿ ಸಾಯುತ್ತಾರೆ; ಅವರ ದೇಹಗಳನ್ನು ನಾಯಿಗಳು ತಿನ್ನುತ್ತವೆ. ನಿನ್ನ ಕುಟುಂಬದ ಕೆಲವು ಜನರು ಹೊಲಗಳಲ್ಲಿ ಸಾಯುತ್ತಾರೆ. ಅವರ ದೇಹಗಳನ್ನು ಪಕ್ಷಿಗಳು ತಿನ್ನುತ್ತವೆ.”

ಬಾಷನು ಮಾಡಿದ ಎಲ್ಲ ಕಾರ್ಯಗಳ ಬಗ್ಗೆ ಮತ್ತು ಅವನ ಮಹಾಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಬಾಷನು ಸತ್ತುಹೋದನು. ಅವನನ್ನು ತಿರ್ಚದಲ್ಲಿ ಸಮಾಧಿಮಾಡಿದರು. ಅವನ ಮಗನಾದ ಏಲನು ಅವನ ನಂತರ ಹೊಸ ರಾಜನಾದನು.

ಯೆಹೋವನು ಪ್ರವಾದಿಯಾದ ಯೇಹುವಿಗೆ ಒಂದು ಸಂದೇಶವನ್ನು ನೀಡಿದನು. ಈ ಸಂದೇಶವು ಬಾಷನ ಮತ್ತು ಅವನ ಕುಟುಂಬದ ವಿರುದ್ಧವಾಗಿತ್ತು. ಬಾಷನು ಯೆಹೋವನ ವಿರುದ್ಧವಾಗಿ ದುರಾಚಾರವನ್ನೆಸಗಿದನು. ಇದು ಯೆಹೋವನಿಗೆ ಹೆಚ್ಚು ಕೋಪವನ್ನು ಉಂಟುಮಾಡಿತು. ಯಾರೊಬ್ಬಾಮನ ಕುಟುಂಬವು ಅವನಿಗಿಂತ ಮುಂಚೆ ಮಾಡಿದ ಕಾರ್ಯಗಳನ್ನೇ ಬಾಷನೂ ಮಾಡಿದನು. ಬಾಷನು ಯಾರೊಬ್ಬಾಮನ ಕುಟುಂಬದವರನ್ನೆಲ್ಲಾ ಕೊಂದುಹಾಕಿದ್ದಕ್ಕಾಗಿಯೂ ಯೆಹೋವನು ಕೋಪಗೊಂಡನು.

ಇಸ್ರೇಲಿನ ರಾಜನಾದ ಏಲ

ಆಸನು ಯೆಹೂದದ ರಾಜನಾದ ಇಪ್ಪತ್ತಾರನೆಯ ವರ್ಷದಲ್ಲಿ ಏಲನು ಇಸ್ರೇಲಿನ ರಾಜನಾದನು. ಏಲನು ಬಾಷನ ಮಗ. ಅವನು ತಿರ್ಚದಲ್ಲಿ ಎರಡು ವರ್ಷ ಆಳಿದನು.

ಜಿಮ್ರಿಯು ಏಲನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದನು. ಏಲನ ರಥಬಲದ ಅರ್ಧಭಾಗಕ್ಕೆ ಜಿಮ್ರಿಯು ಅಧಿಪತಿ. ಆದರೆ ಏಲನ ವಿರುದ್ಧ ಜಿಮ್ರಿಯು ಸಂಚುಮಾಡಿದನು. ರಾಜನಾದ ಏಲನು ತಿರ್ಚದಲ್ಲಿದ್ದನು. ಅವನು ಅರ್ಚನ ಮನೆಯಲ್ಲಿ ಕುಡಿದು ಮತ್ತನಾದನು. ಅರ್ಚನು ತಿರ್ಚದಲ್ಲಿದ್ದ ಅರಮನೆಯ ಮೇಲ್ವಿಚಾರಕ. 10 ಜಿಮ್ರಿಯು ಆ ಮನೆಯೊಳಕ್ಕೆ ಹೋಗಿ ರಾಜನಾದ ಏಲನನ್ನು ಕೊಂದುಹಾಕಿದನು. ಆಸನು ಯೆಹೂದದ ರಾಜನಾಗಿದ್ದ ಇಪ್ಪತ್ತೇಳನೆಯ ವರ್ಷದಲ್ಲಿ ಇದು ನಡೆಯಿತು. ಏಲನ ನಂತರ ಜಿಮ್ರಿಯು ಇಸ್ರೇಲಿನ ಹೊಸ ರಾಜನಾದನು.

ಇಸ್ರೇಲಿನ ರಾಜನಾದ ಜಿಮ್ರಿ

11 ಜಿಮ್ರಿಯು ಹೊಸ ರಾಜನಾದ ಮೇಲೆ ಬಾಷನ ಕುಟುಂಬದವರನ್ನೆಲ್ಲಾ ಕೊಂದುಹಾಕಿದನು. ಅವನು ಬಾಷನ ಕುಟುಂಬದಲ್ಲಿ ಯಾವ ಗಂಡಸನ್ನೂ ಬಿಡಲಿಲ್ಲ. ಬಾಷನ ಸ್ನೇಹಿತರನ್ನೂ ಜಿಮ್ರಿಯು ಕೊಂದುಹಾಕಿದನು. 12 ಹೀಗೆ ಜಿಮ್ರಿಯು ಬಾಷನ ಕುಟುಂಬವನ್ನು ನಾಶಗೊಳಿಸಿದನು. ಬಾಷನ ವಿರುದ್ಧವಾಗಿ ಯೆಹೋವನು ಪ್ರವಾದಿಯಾದ ಯೇಹುವಿನ ಮೂಲಕ ತಿಳಿಸಿದಂತೆ ಇದು ಸಂಭವಿಸಿತು. 13 ಬಾಷನ ಮತ್ತು ಅವನ ಮಗನಾದ ಏಲನ ಪಾಪಗಳೇ ಅದಕ್ಕೆ ಕಾರಣ. ಅವರು ಪಾಪಗಳನ್ನು ಮಾಡಿದರು ಮತ್ತು ಪಾಪಗಳನ್ನು ಮಾಡುವಂತೆ ಇಸ್ರೇಲಿನ ಜನರನ್ನು ಪ್ರೇರೇಪಿಸಿದರು. ಅವರಲ್ಲಿ ಅನೇಕ ವಿಗ್ರಹಗಳಿದ್ದುದರಿಂದ ಯೆಹೋವನು ಕೋಪಗೊಂಡನು.

14 ಏಲನು ಮಾಡಿದ ಇತರ ಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

15 ಆಸನು ಯೆಹೂದದ ರಾಜನಾದ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿಯು ಇಸ್ರೇಲಿನ ರಾಜನಾದನು. ಜಿಮ್ರಿಯು ತಿರ್ಚದಲ್ಲಿ ಏಳು ದಿನ ಆಳಿದನು. ಆಗ ಸಂಭವಿಸಿದ್ದೇನೆಂದರೆ: ಇಸ್ರೇಲಿನ ಸೈನ್ಯವು ಫಿಲಿಷ್ಟಿಯರಿಗೆ ಸೇರಿದ್ದ ಗಿಬ್ಬೆತೋನಿನ ವಿರುದ್ಧ ಮುತ್ತಿಗೆ ಹಾಕಿದ್ದರು. ಅವರು ಯುದ್ಧಕ್ಕೆ ಸಿದ್ಧರಾಗಿದ್ದರು. 16 ರಾಜನ ವಿರುದ್ಧ ಜಿಮ್ರಿಯು ರಹಸ್ಯಯೋಜನೆಗಳನ್ನು ಮಾಡಿದ್ದಾನೆಂಬುದು ಪಾಳೆಯದಲ್ಲಿದ್ದ ಜನರಿಗೆ ತಿಳಿಯಿತು. ಅವನು ರಾಜನನ್ನು ಕೊಂದುಹಾಕಿದನೆಂಬುದು ಅವರಿಗೆ ತಿಳಿಯಿತು. ಆದ್ದರಿಂದ ಇಸ್ರೇಲರೆಲ್ಲರೂ ಆ ದಿನವೇ ಪಾಳೆಯದಲ್ಲಿ ಒಮ್ರಿಯನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದರು. ಒಮ್ರಿಯು ಸೈನ್ಯದ ಅಧಿಪತಿಯಾಗಿದ್ದನು. 17 ಒಮ್ರಿಯು ಇಸ್ರೇಲರೆಲ್ಲರೊಡನೆ ಗಿಬ್ಬೆತೋನನ್ನು ಬಿಟ್ಟು ತಿರ್ಚಕ್ಕೆ ಮುತ್ತಿಗೆ ಹಾಕಿದನು. 18 ಆ ನಗರವು ವಶವಾದುದನ್ನು ಜಿಮ್ರಿಯು ಕಂಡು ಅರಮನೆಯೊಳಕ್ಕೆ ಹೋಗಿ ಬೆಂಕಿಯನ್ನು ಹತ್ತಿಸಿದನು. ಅವನು ಅರಮನೆಯನ್ನು ಸುಟ್ಟುಹಾಕಿ ತಾನೂ ಸುಟ್ಟುಕೊಂಡನು. 19 ಜಿಮ್ರಿಯು ತಾನು ಮಾಡಿದ ಪಾಪದ ಕಾರಣದಿಂದಲೇ ಸತ್ತುಹೋದನು. ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಜಿಮ್ರಿಯು ಮಾಡಿದನು. ಯಾರೊಬ್ಬಾಮನು ಪಾಪಮಾಡಿದಂತೆ ಅವನೂ ಪಾಪವನ್ನು ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.

20 ಜಿಮ್ರಿಯ ರಹಸ್ಯಯೋಜನೆಗಳ ಕುರಿತಾಗಿಯೂ ಅವನು ಮಾಡಿದ ಇತರ ಕಾರ್ಯಗಳ ಕುರಿತಾಗಿಯೂ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ, ಜಿಮ್ರಿಯು ರಾಜನಾದ ಏಲಾಗೆ ವಿರುದ್ಧವಾಗಿ ತಿರುಗಿಬಿದ್ದಾಗ ಸಂಭವಿಸಿದ ಘಟನೆಗಳನ್ನೂ ಆ ಪುಸ್ತಕದಲ್ಲಿ ಬರೆಯಲಾಗಿದೆ.

ಇಸ್ರೇಲಿನ ರಾಜನಾದ ಒಮ್ರಿ

21 ಇಸ್ರೇಲಿನ ಜನರಲ್ಲಿ ಎರಡು ಪಕ್ಷಗಳಾದವು. ಗೀನತನ ಮಗನಾದ ತಿಬ್ನಿಯನ್ನು ಒಂದು ಪಕ್ಷದವರು ಅನುಸರಿಸಿ, ಅವನನ್ನು ತಮ್ಮ ರಾಜನನ್ನಾಗಿ ಮಾಡಲು ಅಪೇಕ್ಷೆಪಟ್ಟರು. ಮತ್ತೊಂದು ಪಕ್ಷದವರು ಒಮ್ರಿಯನ್ನು ಅನುಸರಿಸಿದರು. 22 ಆದರೆ ಗೀನತನ ಮಗ ತಿಬ್ನಿಯ ಹಿಂಬಾಲಕರಿಗಿಂತಲೂ ಒಮ್ರಿಯ ಹಿಂಬಾಲಕರು ಬಲಶಾಲಿಗಳಾಗಿದ್ದರು. ಆದ್ದರಿಂದ ತಿಬ್ನಿಯನ್ನು ಕೊಲ್ಲಲಾಯಿತು; ಒಮ್ರಿಯು ರಾಜನಾದನು.

23 ಆಸನು ಯೆಹೂದದ ರಾಜನಾಗಿದ್ದ ಮೂವತ್ತೊಂದನೇ ವರ್ಷದಲ್ಲಿ ಒಮ್ರಿಯು ಇಸ್ರೇಲಿನ ರಾಜನಾದನು. ಒಮ್ರಿಯು ಇಸ್ರೇಲನ್ನು ಹನ್ನೆರಡು ವರ್ಷ ಆಳಿದನು. ಆ ಹನ್ನೆರಡು ವರ್ಷಗಳಲ್ಲಿ ಆರು ವರ್ಷ ಅವನು ತಿರ್ಚದಲ್ಲಿ ಆಳಿದನು. 24 ಆದರೆ ಒಮ್ರಿಯು ಸಮಾರ್ಯ ಬೆಟ್ಟವನ್ನು ಶೆಮೆರನಿಂದ ಅರವತ್ತೆಂಟು ಕಿಲೋಗ್ರಾಂ ಬೆಳ್ಳಿಗೆ ಕೊಂಡುಕೊಂಡನು. ಒಮ್ರಿಯು ಆ ಬೆಟ್ಟದ ಮೇಲೆ ಒಂದು ನಗರವನ್ನು ಕಟ್ಟಿಸಿದನು. ಅವನು ಆ ನಗರಕ್ಕೆ ಸಮಾರ್ಯವೆಂದು ಅದರ ಒಡೆಯನಾದ ಶೆಮೆರನ ಹೆಸರನ್ನು ಇಟ್ಟನು.

25 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೆಲ್ಲ ಒಮ್ರಿಯು ಮಾಡಿದನು. ಒಮ್ರಿಯು ಅವನಿಗಿಂತಲೂ ಮುಂಚೆ ಇದ್ದ ರಾಜರುಗಳಲ್ಲೆಲ್ಲಾ ಅತ್ಯಂತ ಕೆಟ್ಟವನು. 26 ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಗಳನ್ನೇ ಅವನೂ ಮಾಡಿದನು, ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಆದ್ದರಿಂದ ಅವರು ಇಸ್ರೇಲಿನ ದೇವರಾದ ಯೆಹೋವನನ್ನು ಹೆಚ್ಚು ಕೋಪಗೊಳಿಸಿದರು. ಅವರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಆರಾಧಿಸಿದ್ದರಿಂದ ಯೆಹೋವನು ಕೋಪಗೊಂಡನು.

27 ಒಮ್ರಿಯ ಕುರಿತಾದ ಇತರ ಸಂಗತಿಗಳನ್ನೂ ಅವನ ಪರಾಕ್ರಮಗಳನ್ನೂ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 28 ಒಮ್ರಿಯು ಸತ್ತುಹೋದನು; ಅವನನ್ನು ಸಮಾರ್ಯದಲ್ಲಿ ಸಮಾಧಿಮಾಡಿದರು, ಅವನ ನಂತರ ಅವನ ಮಗನಾದ ಅಹಾಬನು ಹೊಸ ರಾಜನಾದನು.

ಇಸ್ರೇಲಿನ ರಾಜನಾದ ಅಹಾಬ

29 ಆಸನು ಯೆಹೂದದ ರಾಜನಾಗಿದ್ದ ಮೂವತ್ತೆಂಟನೇ ವರ್ಷದಲ್ಲಿ ಒಮ್ರಿಯ ಮಗನಾದ ಅಹಾಬನು ಇಸ್ರೇಲಿನ ರಾಜನಾದನು. ಅಹಾಬನು ಇಸ್ರೇಲನ್ನು ಸಮಾರ್ಯ ಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳಿದನು. 30 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಅಹಾಬನು ಮಾಡಿದನು. ಅವನಿಗಿಂತಲೂ ಮುಂಚೆ ಇದ್ದ ರಾಜರುಗಳಲ್ಲೆಲ್ಲಾ ಅಹಾಬನೇ ಅತ್ಯಂತ ಕೆಟ್ಟವನು. 31 ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಗಳನ್ನೇ ಅಹಾಬನು ಮಾಡಿದರೂ ಅವು ಅವನಿಗೆ ಸಾಕಾಗಲಿಲ್ಲ. ಆದ್ದರಿಂದ ಅಹಾಬನು ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾದನು. ಎತ್ಬಾಳನು ಚೀದೋನ್ಯರ ರಾಜನಾಗಿದ್ದನು. ನಂತರ ಅಹಾಬನು ಬಾಳ್ ದೇವರನ್ನು ಪೂಜಿಸಿ ಅದರ ಸೇವೆ ಮಾಡಲಾರಂಭಿಸಿದನು. 32 ಬಾಳನನ್ನು ಪೂಜಿಸಲು ಅಹಾಬನು ಸಮಾರ್ಯದಲ್ಲಿ ಒಂದು ಗುಡಿಯನ್ನು ಕಟ್ಟಿಸಿದನು. ಆ ಗುಡಿಯಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. 33 ಅಹಾಬನು ಅಶೇರ ದೇವತೆಯನ್ನು ಆರಾಧಿಸಲು ಒಂದು ವಿಶೇಷ ಸ್ತಂಭವನ್ನು ನೆಡಿಸಿದನು. ಹೀಗೆ ಎಷ್ಟೋ ಕೆಟ್ಟಕಾರ್ಯಗಳನ್ನು ಮಾಡಿ ತನ್ನ ಮುಂಚೆ ಇದ್ದ ಇಸ್ರೇಲ್ ರಾಜರುಗಳಿಗಿಂತಲೂ ಹೆಚ್ಚಾಗಿ ಇಸ್ರೇಲ್ ದೇವರಾದ ಯೆಹೋವನನ್ನು ರೇಗಿಸಿದನು.

34 ಅಹಾಬನ ಕಾಲದಲ್ಲಿ ಬೇತೇಲಿನ ಹೀಯೇಲನು ಜೆರಿಕೊ ಪಟ್ಟಣವನ್ನು ಮತ್ತೆ ನಿರ್ಮಿಸಿದನು. ಹೀಯೇಲನು ನಗರದಲ್ಲಿ ಈ ಕೆಲಸವನ್ನು ಮಾಡಲು ಆರಂಭಿಸಿದ ಕಾಲದಲ್ಲಿಯೇ ಅವನ ಹಿರಿಯ ಮಗನಾದ ಅಬೀರಾಮನು ಸತ್ತುಹೋದನು. ಹೀಯೇಲನು ನಗರದ ಬಾಗಿಲುಗಳನ್ನು ಕಟ್ಟಿಸಿದಾಗ, ಅವನ ಕಿರಿಯ ಮಗನಾದ ಸೆಗೂಬನು ಸತ್ತುಹೋದನು. ಯೆಹೋವನು ಹೇಳಿದಂತೆಯೇ ಇದು ಸಂಭವಿಸಿತು. ನೂನನ ಮಗನಾದ ಯೆಹೋಶುವನ ಮೂಲಕ ಯೆಹೋವನು ಇದನ್ನು ತಿಳಿಸಿದ್ದನು.[a]

ಎಲೀಯ ಮತ್ತು ಬರಗಾಲ

17 ಎಲೀಯನು ಗಿಲ್ಯಾದಿನ ತಿಷ್ಬೀ ಪಟ್ಟಣದ ಒಬ್ಬ ಪ್ರವಾದಿ. ಎಲೀಯನು ರಾಜನಾದ ಅಹಾಬನಿಗೆ, “ನಾನು ಇಸ್ರೇಲರ ದೇವರಾದ ಯೆಹೋವನ ಸೇವಕನಾಗಿದ್ದೇನೆ. ಮುಂದಿನ ಕೆಲವು ವರ್ಷಗಳವರೆಗೆ ಹಿಮವಾಗಲಿ ಮಳೆಯಾಗಲಿ ಬೀಳುವುದಿಲ್ಲವೆಂದು ನಾನು ಆತನ ಹೆಸರಿನ ಮೇಲೆ ಪ್ರಮಾಣ ಮಾಡುತ್ತೇನೆ. ನಾನು ಬೀಳುವಂತೆ ಮಳೆಗೆ ಆಜ್ಞಾಪಿಸಿದರೆ ಮಾತ್ರ ಅದು ಬೀಳುತ್ತದೆ” ಎಂದು ಹೇಳಿದನು.

ನಂತರ ಯೆಹೋವನು ಎಲೀಯನಿಗೆ, “ಈ ಸ್ಥಳವನ್ನು ತ್ಯಜಿಸಿ, ಪೂರ್ವದಿಕ್ಕಿಗೆ ಹೋಗು. ಕೆರೀತ್ ಹಳ್ಳದ ಹತ್ತಿರ ಅಡಗಿಕೊ. ಆ ಹಳ್ಳವು ಜೋರ್ಡನ್ ನದಿಯ ಪೂರ್ವದಲ್ಲಿದೆ. ನೀನು ಆ ಹಳ್ಳದ ನೀರನ್ನು ಕುಡಿಯಬಹುದು. ಆ ಸ್ಥಳದಲ್ಲಿರುವ ನಿನಗೆ ಆಹಾರವನ್ನು ತಂದುಕೊಡಬೇಕೆಂದು ನಾನು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ” ಎಂದು ಹೇಳಿದನು. ಆದ್ದರಿಂದ ಯೆಹೋವನು ಹೇಳಿದಂತೆ ಅವನು ಮಾಡಿದನು. ಅವನು ಜೋರ್ಡನ್ ನದಿಯ ಪೂರ್ವಕ್ಕಿರುವ ಕೆರೀತ್ ಹಳ್ಳದ ಹತ್ತಿರ ವಾಸಿಸಲು ಹೋದನು. ಕಾಗೆಗಳು ಪ್ರತಿ ಮುಂಜಾನೆ ಮತ್ತು ಸಂಜೆ ಎಲೀಯನಿಗೆ ರೊಟ್ಟಿ ಮತ್ತು ಮಾಂಸವನ್ನು ತಂದುಕೊಡುತ್ತಿದ್ದವು. ಎಲೀಯನು ಹಳ್ಳದ ನೀರನ್ನು ಕುಡಿಯುತ್ತಿದ್ದನು.

ಅಲ್ಲಿಯೂ ಮಳೆಯಿಲ್ಲದ್ದರಿಂದ, ಸ್ವಲ್ಪಕಾಲದ ಬಳಿಕ ಹಳ್ಳವೂ ಬತ್ತಿಹೋಯಿತು. ನಂತರ ಯೆಹೋವನು ಎಲೀಯನಿಗೆ, “ಚೀದೋನ್ಯರ ಚಾರೆಪ್ತಗೆ ಹೋಗಿ ಅಲ್ಲಿ ವಾಸಮಾಡು. ಆ ಸ್ಥಳದಲ್ಲಿ ಒಬ್ಬ ವಿಧವೆಯು ವಾಸಿಸುತ್ತಾಳೆ. ನಿನಗೆ ಆಹಾರವನ್ನು ಕೊಡುವಂತೆ ಅವಳಿಗೆ ನಾನು ಆಜ್ಞಾಪಿಸಿದ್ದೇನೆ” ಎಂದು ಹೇಳಿದನು.

10 ಎಲೀಯನು ಚಾರೆಪ್ತಗೆ ಹೋದನು. ಅವನು ಊರು ಬಾಗಿಲಿಗೆ ಹೋದಾಗ, ಅಲ್ಲಿ ಒಬ್ಬ ವಿಧವೆಯನ್ನು ನೋಡಿದನು. ಆ ಸ್ತ್ರೀಯು ಬೆಂಕಿಗಾಗಿ ಸೌದೆಯನ್ನು ಒಟ್ಟುಗೂಡಿಸುತ್ತಿದ್ದಳು. ಎಲೀಯನು ಅವಳಿಗೆ, “ನನಗೆ ಕುಡಿಯುವುದಕ್ಕೆ ಚಂಬಿನಲ್ಲಿ ಸ್ವಲ್ಪ ನೀರನ್ನು ನೀನು ತರುವೆಯಾ?” ಎಂದು ಕೇಳಿದನು. 11 ಆ ಸ್ತ್ರೀಯು ಅವನಿಗೆ ನೀರನ್ನು ತರಲು ಹೋಗುತ್ತಿರುವಾಗ, ಎಲೀಯನು, “ದಯವಿಟ್ಟು ಒಂದು ತುಂಡು ರೊಟ್ಟಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.

12 ಆ ಸ್ತ್ರೀಯು, “ನನ್ನಲ್ಲಿ ರೊಟ್ಟಿಯಿಲ್ಲವೆಂದು ನಿನ್ನ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಾನು ಪ್ರಮಾಣ ಮಾಡುತ್ತೇನೆ. ನನ್ನ ಮಡಕೆಯಲ್ಲಿ ಸ್ವಲ್ಪ ಹಿಟ್ಟು ಮಾತ್ರ ಇದೆ; ಪಾತ್ರೆಯಲ್ಲಿ ಸ್ವಲ್ಪ ಆಲೀವ್ ಎಣ್ಣೆಯಿದೆ. ಬೆಂಕಿ ಹೊತ್ತಿಸಲು ಸೌದೆ ಚೂರುಗಳನ್ನು ಆಯ್ದುಕೊಳ್ಳವುದಕ್ಕಾಗಿ ನಾನು ಈ ಸ್ಥಳಕ್ಕೆ ಬಂದೆ. ಸೌಧೆಯನ್ನು ನಾನು ಮನೆಗೆ ತೆಗೆದುಕೊಂಡು ಹೋಗಿ, ನಮ್ಮ ಕೊನೆಯ ಊಟವನ್ನು ಸಿದ್ಧಪಡಿಸುತ್ತೇನೆ. ನನ್ನ ಮಗ ಮತ್ತು ನಾನು ಅದನ್ನು ತಿಂದು, ನಂತರ ಹಸಿವಿನಿಂದ ಸಾಯುತ್ತೇವೆ” ಎಂದು ಹೇಳಿದಳು.

13 ಎಲೀಯನು ಆ ಸ್ತ್ರೀಗೆ, “ಚಿಂತಿಸದಿರು, ಮನೆಗೆ ಹೋಗಿ ನೀನು ಹೇಳಿದಂತೆ ಆಹಾರವನ್ನು ಸಿದ್ಧಪಡಿಸು. ಆದರೆ ನಿನ್ನಲ್ಲಿರುವ ಹಿಟ್ಟಿನಿಂದ ಮೊದಲು ಒಂದು ಚಿಕ್ಕ ರೊಟ್ಟಿಯನ್ನು ಮಾಡು. ಆ ರೊಟ್ಟಿಯನ್ನು ನನಗೆ ತಂದುಕೊಡು; ನಂತರ ನಿನಗೆ ಮತ್ತು ನಿನ್ನ ಮಗನಿಗೆ ಅಡಿಗೆ ಮಾಡಿಕೋ. 14 ಇಸ್ರೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, ‘ಆ ಮಡಕೆಯಲ್ಲಿರುವ ಹಿಟ್ಟು ಎಂದೆಂದಿಗೂ ಖಾಲಿಯಾಗುವುದಿಲ್ಲ. ಆ ಪಾತ್ರೆಯಲ್ಲಿ ಯಾವಾಗಲೂ ಎಣ್ಣೆಯಿರುತ್ತದೆ. ಯೆಹೋವನು ಭೂಮಿಯ ಮೇಲೆ ಮಳೆಯನ್ನು ಸುರಿಸುವ ತನಕ ಇದು ಹೀಗೆಯೇ ಮುಂದುವರಿಯುತ್ತದೆ’” ಎಂದು ಹೇಳಿದನು.

15 ಆ ಸ್ತ್ರೀಯು ತನ್ನ ಮನೆಗೆ ಹೋದಳು. ಎಲೀಯನು ಹೇಳಿದಂತೆ ಆಕೆಯು ಮಾಡಿದಳು. ಎಲೀಯನು, ಆ ಸ್ತ್ರೀಯು ಮತ್ತು ಅವಳ ಮಗನು ಅನೇಕ ದಿನಗಳಿಗಾಗುವಷ್ಟು ಆಹಾರವನ್ನು ಹೊಂದಿದ್ದರು. 16 ಮಡಕೆಯಲ್ಲಿದ್ದ ಹಿಟ್ಟು ಮತ್ತು ಪಾತ್ರೆಯಲ್ಲಿದ್ದ ಎಣ್ಣೆ ಎಂದೆಂದಿಗೂ ಖಾಲಿಯಾಗಲಿಲ್ಲ. ಯೆಹೋವನು ಎಲೀಯನ ಮೂಲಕ ಹೇಳಿದ್ದಂತೆಯೇ ಇದು ಸಂಭವಿಸಿತು.

17 ಸ್ವಲ್ಪಕಾಲದ ತರುವಾಯ ಆ ಸ್ತ್ರೀಯ ಮಗನು ಅಸ್ವಸ್ಥನಾದನು. ಅವನಿಗೆ ರೋಗವು ಹೆಚ್ಚಾಗುತ್ತಲೇ ಇತ್ತು. ಕೊನೆಗೆ ಆ ಬಾಲಕನು ಉಸಿರಾಡುವುದನ್ನೇ ನಿಲ್ಲಿಸಿದನು. 18 ಆ ಸ್ತ್ರೀಯು ಎಲೀಯನಿಗೆ, “ನೀನು ದೇವಮನುಷ್ಯ. ನೀನು ನನಗೆ ಸಹಾಯಮಾಡಲು ಬಂದಿರುವೆಯಾ? ಅಥವಾ ನನ್ನ ಪಾಪಗಳನ್ನೆಲ್ಲ ನನ್ನ ನೆನಪಿಗೆ ತಂದುಕೊಳ್ಳುವಂತೆ ಮಾಡಲು, ನನ್ನ ಮಗನಿಗೆ ಸಾವನ್ನು ಉಂಟುಮಾಡುವುದಕ್ಕಾಗಿಯೇ ಬಂದಿರುವೆಯಾ?” ಎಂದು ಕೇಳಿದಳು.

19 ಎಲೀಯನು ಅವಳಿಗೆ, “ನಿನ್ನ ಮಗನನ್ನು ನನಗೆ ಕೊಡು” ಎಂದು ಹೇಳಿದನು. ಎಲೀಯನು ಬಾಲಕನನ್ನು ಅವಳಿಂದ ತೆಗೆದುಕೊಂಡು, ಮೇಲಂತಸ್ತಿಗೆ ಹೋದನು. ಅವನು ನೆಲೆಸಿದ್ದ ಕೊಠಡಿಯ ಹಾಸಿಗೆಯ ಮೇಲೆ ಆ ಬಾಲಕನನ್ನು ಮಲಗಿಸಿದನು. 20 ನಂತರ ಎಲೀಯನು, “ನನ್ನ ದೇವರಾದ ಯೆಹೋವನೇ, ಈ ವಿಧವೆಯು ತನ್ನ ಮನೆಯಲ್ಲಿ ನನಗೆ ಸ್ಥಳವನ್ನು ಕೊಟ್ಟಿದ್ದಾಳೆ. ನೀನು ಅವಳಿಗೆ ಈ ಕೇಡನ್ನು ಮಾಡುವೆಯಾ? ನೀನು ಅವಳ ಮಗುವನ್ನು ಸಾಯಿಸುವೆಯಾ?” ಎಂದು ಪ್ರಾರ್ಥಿಸಿದನು. 21 ಬಳಿಕ ಆ ಬಾಲಕನ ಮೇಲೆ ಎಲೀಯನು ಮೂರು ಬಾರಿ ಬೋರಲಬಿದ್ದು, “ನನ್ನ ದೇವರಾದ ಯೆಹೋವನೇ, ಈ ಬಾಲಕನಿಗೆ ಮತ್ತೆ ಜೀವವನ್ನು ಕೊಡು” ಎಂದು ಪ್ರಾರ್ಥಿಸಿದನು.

22 ಯೆಹೋವನು ಎಲೀಯನ ಪ್ರಾರ್ಥನೆಗೆ ಕಿವಿಗೊಟ್ಟನು. ಆ ಬಾಲಕನು ಮತ್ತೆ ಉಸಿರಾಡಲಾರಂಭಿಸಿದನು. ಅವನು ಜೀವಂತನಾದನು! 23 ಎಲೀಯನು ಆ ಬಾಲಕನನ್ನು ಕೆಳ ಅಂತಸ್ತಿಗೆ ಕರೆದೊಯ್ದನು. ಎಲೀಯನು ಬಾಲಕನನ್ನು ಅವನ ತಾಯಿಗೆ ಒಪ್ಪಿಸಿ, “ನಿನ್ನ ಮಗ ಬದುಕಿದ್ದಾನೆ, ನೋಡು” ಎಂದು ಹೇಳಿದನು.

24 ಆ ಸ್ತ್ರೀಯು, “ಈಗ ನಿಜವಾಗಿಯೂ ನೀನು ದೇವಮನುಷ್ಯನೆಂಬುದು ನನಗೆ ತಿಳಿಯಿತು. ಯೆಹೋವನು ನಿನ್ನ ಮೂಲಕ ನಿಜವಾಗಿಯೂ ಮಾತಾಡುತ್ತಾನೆಂಬುದು ನನಗೆ ತಿಳಿದಿದೆ” ಎಂದು ಹೇಳಿದಳು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International