Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 22-24

ದಾವೀದನು ಯೆಹೋವನಿಗಾಗಿ ರಚಿಸಿದ ಸ್ತುತಿಗೀತೆ

22 ಯೆಹೋವನು ದಾವೀದನನ್ನು ಸೌಲನಿಂದ ಮತ್ತು ಅವನ ಇತರ ಎಲ್ಲಾ ಶತ್ರುಗಳಿಂದ ರಕ್ಷಿಸಿದನು. ಆ ಸಮಯದಲ್ಲಿ ದಾವೀದನು ಈ ಹಾಡನ್ನು ರಚಿಸಿ ಹಾಡಿದನು:

ಯೆಹೋವನು ನನ್ನ ಬಂಡೆ; ನನ್ನ ಕೋಟೆ; ನನ್ನ ವಿಮೋಚಕ.
    ನಾನು ಸಹಾಯಕ್ಕಾಗಿ ದೇವರ ಬಳಿಗೆ ಓಡಿಹೋಗುತ್ತೇನೆ.
ಆತನೇ ನನ್ನ ಆಶ್ರಯಗಿರಿ. ಯೆಹೋವನು ನನ್ನ ಗುರಾಣಿ. ಆತನ ಶಕ್ತಿಯು ನನ್ನನ್ನು ರಕ್ಷಿಸುತ್ತದೆ.
    ಆತನು ನಾನು ಅಡಗಿಕೊಳ್ಳುವ ಸ್ಥಳ; ಬೆಟ್ಟಗಳ ಮೇಲಿರುವ ನನ್ನ ಸುರಕ್ಷಿತ ಸ್ಥಳ;
ಆತನು ನನ್ನನ್ನು ಕ್ರೂರ ಶತ್ರುಗಳಿಂದ ರಕ್ಷಿಸುವನು!
ಯೆಹೋವನು ಸ್ತೋತ್ರಕ್ಕೆ ಅರ್ಹನಾಗಿದ್ದಾನೆ.
    ನಾನು ಸಹಾಯಕ್ಕಾಗಿ ಆತನನ್ನು ಕರೆಯುವೆನು.
    ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುವನು.

ಸಾವಿನ ಅಲೆಗಳು ನನ್ನನ್ನು ಸುತ್ತುವರೆದಿವೆ;
    ತೊಂದರೆಗಳು ಪ್ರವಾಹದಂತೆ ನುಗ್ಗಿಬಂದಿವೆ.
    ಅವೆಲ್ಲ ನನ್ನಲ್ಲಿ ಭೀತಿಯನ್ನು ಉಂಟುಮಾಡಿವೆ.
ಪಾತಾಳದ ಪಾಶಗಳು ನನ್ನನ್ನು ಸುತ್ತುವರೆದಿವೆ;
    ಮರಣಕರವಾದ ಉರುಲುಗಳು ನನ್ನೆದುರಿನಲ್ಲಿವೆ.
ನಾನು ಅವುಗಳಲ್ಲಿ ಸಿಲುಕಿಕೊಂಡಿದ್ದಾಗ ಯೆಹೋವನಿಗೆ ಪ್ರಾರ್ಥಿಸಿದೆನು.
    ಹೌದು, ನನ್ನ ದೇವರಿಗೆ ನಾನು ಮೊರೆಯಿಟ್ಟೆನು;
ತನ್ನ ಆಲಯದಲ್ಲಿದ್ದ ಆತನಿಗೆ ನನ್ನ ಸ್ವರ ಕೇಳಿಸಿತು;
    ಸಹಾಯಕ್ಕಾಗಿ ನಾನಿಟ್ಟ ಮೊರೆಗೆ ಆತನು ಕಿವಿಗೊಟ್ಟನು.
ಆಗ ಭೂಮಿಯು ಗಡಗಡನೆ ನಡುಗಿತು.
    ಆಕಾಶದ ಅಡಿಪಾಯಗಳು ಅಲುಗಾಡಿದವು.
    ಏಕೆಂದರೆ ಯೆಹೋವನಿಗೆ ಸಿಟ್ಟೇರಿತ್ತು!
ಆತನ ಮೂಗಿನ ಹೊಳ್ಳೆಗಳಿಂದ ಹೊಗೆಯು ಹೊರಬಂದಿತು.
    ಬೆಂಕಿಕಿಡಿಯ ಜ್ವಾಲೆಗಳು ಆತನ ಬಾಯಿಂದ ಹೊರಬಂದವು;
    ದಹಿಸುವ ಬೆಂಕಿಯು ಆತನ ಬಾಯೊಳಗಿಂದ ಬಂದಿತು.
10 ಆತನು ಆಕಾಶವನ್ನು ಇಬ್ಭಾಗಮಾಡಿ ಕೆಳಗಿಳಿದು ಬಂದನು!
    ಆತನ ಕಾಲುಗಳ ಕೆಳಗೆ ಕತ್ತಲೆ ಕವಿದಿತ್ತು.
11 ಕೆರೂಬಿಗಳ ಮೇಲೆ ಆಸೀನನಾಗಿ ವಾಯುವೇ
    ತನ್ನ ರೆಕ್ಕೆಗಳೋ ಎಂಬಂತೆ ಹಾರಿಬಂದನು.
12 ಆತನು ಕಾರ್ಮೋಡಗಳನ್ನೇ ತನ್ನ ಸುತ್ತಲೂ ಗುಡಾರದಂತಾಗಿಸಿಕೊಂಡನು.
    ಆತನು ಆಕಾಶದ ನೀರನ್ನು, ಗುಡುಗುವ ದೊಡ್ಡ ಮೋಡಗಳನ್ನು ತನ್ನ ಸುತ್ತಲೂ ಕವಿಸಿಕೊಂಡನು.
13 ಉರಿಯುವ ಕಲ್ಲಿದ್ದಲಿನಂತಿದ್ದ ಕಿಡಿಗಳು
    ಆತನ ಸುತ್ತಲೂ ಇದ್ದ ಬೆಳಕಿನಿಂದ ಬಂದವು.
14 ಯೆಹೋವನು ಆಕಾಶದಿಂದ ಗುಡುಗಿದನು!
    ಸರ್ವೋನ್ನತನಾದ ದೇವರು ತನ್ನ ಸ್ವರ ಕೇಳುವಂತೆ ಮಾಡಿದನು.
15 ಆತನಿಂದ ಹೊರಟ ಬಾಣಗಳು ಶತ್ರುಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿದವು.
    ಆತನು ಸಿಡಿಲನ್ನು ಉಂಟುಮಾಡಿದನು, ಜನರು ಭೀತಿಯಿಂದ ಓಡಿಹೋದರು.

16 ಯೆಹೋವನೇ, ನೀನು ಗದರಿಸಿದಾಗ
    ನಿನ್ನ ಬಾಯಿಂದ ಪ್ರಬಲವಾದ ಗಾಳಿಯು ಬೀಸಿತು;
ನೀರು ಹಿಂದಕ್ಕೆ ತಳ್ಳಲ್ಪಟ್ಟಿತು. ಸಮುದ್ರದ ತಳವೂ
    ಭೂಮಿಯ ಅಸ್ತಿವಾರಗಳು ಕಣ್ಣಿಗೆ ಗೋಚರವಾದವು.

17 ಆತನು ಮೇಲಿನ ಲೋಕದಿಂದ ಕೆಳಗಿಳಿದನು.
    ಆತನು ನನ್ನನ್ನು ಹಿಡಿದುಕೊಂಡು ನನ್ನನ್ನು ನೀರಿನಡಿಯಿಂದ ಮೇಲಕ್ಕೆತ್ತಿದನು.
18 ನನ್ನನ್ನು ದ್ವೇಷಿಸುತ್ತಿದ್ದ ಶತ್ರುಗಳಿಂದ ಆತನೇ ರಕ್ಷಿಸಿದನು.
    ನನ್ನ ಶತ್ರುಗಳು ನನಗಿಂತಲೂ ಬಹಳ ಬಲಿಷ್ಠರೂ ಸೊಕ್ಕಿದವರೂ ಆಗಿದ್ದರು.
    ಅವರ ಕೈಯಿಂದ ಆತನೇ ನನ್ನನ್ನು ರಕ್ಷಿಸಿದನು.
19 ಶತ್ರುಗಳು ನನಗೆ ಮುತ್ತಿಗೆ ಹಾಕಿದಾಗ ನಾನು ತೊಂದರೆಯಲ್ಲಿದ್ದೆನು.
    ಆದರೆ ನನಗೆ ಯೆಹೋವನು ಸಹಾಯ ಮಾಡಿದನು.
20 ಆತನು ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ತಂದನು.
    ಆತನು ನನ್ನನ್ನು ಪ್ರೀತಿಸಿ ರಕ್ಷಿಸಿದನು.
21 ನಾನು ನೀತಿಗನುಸಾರವಾಗಿ ನಡೆದುಕೊಂಡಿದ್ದರಿಂದ ಯೆಹೋವನು ನನಗೆ ಪ್ರತಿಫಲವನ್ನು ಕೊಟ್ಟನು.
    ನಾನು ನಿರ್ದೋಷಿಯಾಗಿದ್ದರಿಂದ ಆತನು ನನಗೆ ಒಳ್ಳೆಯದನ್ನೇ ಮಾಡಿದನು.
22 ನಾನು ಆತನ ಮಾರ್ಗಗಳನ್ನೇ ಅನುಸರಿಸಿದೆನು.
    ನನ್ನ ದೇವರ ವಿರುದ್ಧ ನಾನು ಪಾಪವನ್ನು ಮಾಡಲಿಲ್ಲ.
23 ನಾನು ಯೆಹೋವನ ಆಜ್ಞೆಗಳನ್ನು ಯಾವಾಗಲೂ ಜ್ಞಾಪಿಸಿಕೊಂಡೆನು.
    ನಾನು ಯಾವಾಗಲೂ ಆತನ ಕಟ್ಟಳೆಗನುಸಾರವಾಗಿಯೇ ನಡೆದುಕೊಂಡೆನು.
24 ನಾನು ದೋಷಿಯಲ್ಲವೆಂಬುದು ಆತನಿಗೆ ತಿಳಿದಿದೆ.
    ನಾನು ಪಾಪದಲ್ಲಿ ಬೀಳದಂತೆ ಎಚ್ಚರಿಕೆ ವಹಿಸಿದೆನು.
25 ನಾನು ಒಳ್ಳೆಯದನ್ನೇ ಮಾಡಿದೆನು.
    ಯೆಹೋವನ ದೃಷ್ಟಿಯಲ್ಲಿ ನಾನು ತಪ್ಪೇನೂ ಮಾಡಲಿಲ್ಲ,
    ಆದ್ದರಿಂದ ಆತನು ನನಗೆ ಪ್ರತಿಫಲ ಕೊಡುವನು!

26 ನಿನ್ನನ್ನು ಪ್ರೀತಿಸುವವರನ್ನು ನೀನು ಪ್ರೀತಿಸುತ್ತಿ.
    ನಿನ್ನ ಮುಂದೆ ದೋಷವಿಲ್ಲದವನಾಗಿ ನಡೆಯುವವನಿಗೆ ನಿರ್ದೋಷಿಯಾಗಿರುತ್ತಿ.
27 ನೀನು ಪರಿಶುದ್ಧರಿಗೆ ಪರಿಶುದ್ಧನಾಗಿರುವೆ;
    ಮೋಸಗಾರರಿಗೆ ಜಾಣನಾಗಿರುವೆ.
28 ನೀನು ದೀನರನ್ನು ಮೇಲಕ್ಕೆತ್ತುವೆ;
    ಗರ್ವಿಷ್ಠರನ್ನಾದರೋ ತುಳಿದುಬಿಡುವೆ.
29 ಯೆಹೋವನೇ, ನನ್ನ ದೀಪವು ನೀನೇ.
    ಯೆಹೋವನು ನನಗೆ ಬೆಳಕು ಕೊಟ್ಟು ನನ್ನ ಸುತ್ತಲಿನ ಅಂಧಕಾರವನ್ನು ಪ್ರಕಾಶಮಯವಾಗುವಂತೆ ಮಾಡುವನು.
30 ನಿನ್ನ ಸಹಾಯದಿಂದಲೇ, ನಾನು ವೈರಿಗಳ ಮೇಲೆ ಬೀಳುವೆನು.
    ನಿನ್ನ ಸಹಾಯದಿಂದಲೇ ನಾನು ಶತ್ರುಗಳ ಗೋಡೆಗಳನ್ನು ಹತ್ತಬಲ್ಲೆನು.

31 ದೇವರ ಶಕ್ತಿಯು ಪರಿಪೂರ್ಣವಾದದ್ದು.
    ಯೆಹೋವನ ಮಾತು ಪರೀಕ್ಷಿಸಲ್ಪಟ್ಟದ್ದು;
    ಆತನು ತನ್ನಲ್ಲಿ ಭರವಸೆಯಿಟ್ಟವರನ್ನು ಸಂರಕ್ಷಿಸುತ್ತಾನೆ.
32 ಯೆಹೋವನ ಹೊರತು ಬೇರೆ ದೇವರಿಲ್ಲ.
    ನಮ್ಮ ದೇವರ ಹೊರತು ಬೇರೆ ಬಂಡೆಯಿಲ್ಲ.
33 ದೇವರು ನನ್ನ ಬಲವೂ ಕೋಟೆಯೂ ಆಗಿದ್ದಾನೆ.
    ಆತನು ನನ್ನ ಮಾರ್ಗವನ್ನು ದೋಷವಿಲ್ಲದ್ದಾಗಿ ಮಾಡುತ್ತಾನೆ.
34 ನಾನು ಉನ್ನತ ಪ್ರದೇಶಗಳಲ್ಲಿ ನಿಲ್ಲುವಂತೆ
    ಆತನು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳಂತೆ ಮಾಡುತ್ತಾನೆ.
35 ಆತನು ಯುದ್ಧಕ್ಕಾಗಿ ನನ್ನನ್ನು ತರಬೇತುಗೊಳಿಸುವನು.
    ಆದ್ದರಿಂದ ನನ್ನ ತೋಳುಗಳು ಹಿತ್ತಾಳೆಯ ಬಿಲ್ಲನ್ನೂ ಬಗ್ಗಿಸಬಲ್ಲವು.

36 ದೇವರೇ, ನೀನು ನನ್ನನ್ನು ಸಂರಕ್ಷಿಸಿ ಜಯಹೊಂದಲು ನನಗೆ ಸಹಾಯಮಾಡಿರುವೆ.
    ನನ್ನ ಶತ್ರುವನ್ನು ಸೋಲಿಸಲು ನೀನು ನನಗೆ ಸಹಾಯ ಮಾಡಿರುವೆ.
37 ನನ್ನ ಕಾಲುಗಳನ್ನೂ ಕೀಲುಗಳನ್ನೂ ಬಲಗೊಳಿಸು;
    ಆಗ ನಾನು ಎಡವದೆ ವೇಗವಾಗಿ ನಡೆಯಬಲ್ಲೆನು.
38 ನಾನು ನನ್ನ ಶತ್ರುಗಳನ್ನು ಅಟ್ಟಿಸಿಕೊಂಡು ಹೋದೆನು.
    ನಾನು ಅವರನ್ನು ನಾಶಗೊಳಿಸಿದೆನು!
    ನಾನು ನನ್ನ ಶತ್ರುಗಳನ್ನು ನಾಶಗೊಳಿಸುವ ತನಕ ಹಿಂದಿರುಗುವುದಿಲ್ಲ.
39 ನಾನು ನನ್ನ ಶತ್ರುಗಳನ್ನು ನಾಶಗೊಳಿಸಿದೆನು!
    ನಾನು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆನು.
ಅವರು ಮತ್ತೆ ಮೇಲೇಳುವುದಿಲ್ಲ.
    ಹೌದು, ನನ್ನ ಶತ್ರುಗಳು ನನ್ನ ಪಾದಗಳ ಕೆಳಗೆ ಬಿದ್ದಿದ್ದಾರೆ.

40 ದೇವರೇ, ನೀನು ನನ್ನನ್ನು ಯುದ್ಧಕ್ಕಾಗಿ ಬಲಪಡಿಸಿರುವೆ.
    ನನ್ನ ಶತ್ರುಗಳನ್ನು ನನಗೆ ಅಧೀನರಾಗುವಂತೆ ಮಾಡಿರುವೆ.
41 ನನ್ನ ಶತ್ರುಗಳು ಓಡಿಹೋಗಲು ನೀನೇ ಕಾರಣ.
    ಆದ್ದರಿಂದಲೇ ನನ್ನನ್ನು ದ್ವೇಷಿಸಿದ ಜನರನ್ನು ನಾನು ನಾಶ ಮಾಡಿದೆನು.
42 ನನ್ನ ಶತ್ರುಗಳು ಸಹಾಯಕ್ಕಾಗಿ ನೋಡಿದರು.
    ಆದರೆ ಅವರನ್ನು ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ.
ಅವರು ಯೆಹೋವನ ಕಡೆಗೂ ನೋಡಿದರು;
    ಆದರೆ ಆತನು ಅವರಿಗೆ ಉತ್ತರ ಕೊಡಲಿಲ್ಲ.
43 ನಾನು ನನ್ನ ಶತ್ರುಗಳನ್ನು
    ತುಂಡುತುಂಡಾಗಿ ಕತ್ತರಿಸಿಹಾಕಿದೆ.
ಅವರು ನೆಲದ ಮೇಲಿನ ಧೂಳಿನಂತಾದರು.
    ನನ್ನ ಶತ್ರುಗಳನ್ನು ರಸ್ತೆಯಲ್ಲಿನ ಮಣ್ಣಿನಂತಾಗುವವರೆಗೆ ತುಳಿದುಬಿಟ್ಟೆನು.

44 ಜನರು ನನ್ನ ವಿರುದ್ಧ ವಾದಿಸಿದಾಗ ನೀನು ನನ್ನನ್ನು ರಕ್ಷಿಸಿದೆ.
    ನೀನು ನನ್ನನ್ನು ಜನಾಂಗಗಳಿಗೆ ಅಧಿಪತಿಯನ್ನಾಗಿ ಮಾಡಿದೆ.
    ನಾನು ತಿಳಿಯದ ಜನರೂ ನನ್ನ ಸೇವೆಮಾಡುತ್ತಾರೆ!
45 ಅನ್ಯದೇಶದ ಜನರೂ ನನಗೆ ವಿಧೇಯರಾಗಿರುವರು!
    ಅವರು ನನ್ನ ಬಗ್ಗೆ ಕೇಳಿದಾಗ, ತಕ್ಷಣವೇ ನನಗೆ ವಿಧೇಯರಾಗುವರು!
    ಆ ಪರದೇಶಿಯರು ನನಗೆ ಭಯಪಡುವರು.
46 ಅನ್ಯದೇಶದ ಜನರು ಭಯಗೊಳ್ಳುವರು;
    ತಾವು ಅಡಗಿದ್ದ ಸ್ಥಳಗಳಿಂದ ನಡುಗುತ್ತಾ ಹೊರಬರುವರು.

47 ಯೆಹೋವನು ಜೀವಸ್ವರೂಪನಾಗಿದ್ದಾನೆ.
    ನನ್ನ ಬಂಡೆಗೆ ಸ್ತೋತ್ರವಾಗಲಿ.
ಯೆಹೋವನು ಮಹೋನ್ನತನು!
    ನನ್ನನ್ನು ರಕ್ಷಿಸುವ ಬಂಡೆಯಾದಾತನಿಗೆ ಸ್ತುತಿಯುಂಟಾಗಲಿ.
48 ನನ್ನ ಶತ್ರುಗಳನ್ನು ನನಗಾಗಿ ದಂಡಿಸುವ ದೇವರು ಆತನೇ.
    ಆತನು ಜನರನ್ನು ನನ್ನ ಅಧೀನತೆಗೆ ಒಳಪಡಿಸುವನು.
49 ನನ್ನ ಶತ್ರುಗಳಿಂದ ನನ್ನನ್ನು ಸ್ವತಂತ್ರನಾಗಿಸುವವನು ದೇವರೇ.

ಹೌದು, ನೀನು ನನ್ನನ್ನು ನನ್ನ ಶತ್ರುಗಳಿಂದ ತಪ್ಪಿಸಿ ಮೇಲಕ್ಕೇರಿಸುವೆ.
    ನನ್ನನ್ನು ಹಿಂಸಿಸಬೇಕೆನ್ನುವ ಮನುಷ್ಯನಿಂದ ನೀನು ನನಗೆ ರಕ್ಷಣೆ ನೀಡುವೆ.
50 ಯೆಹೋವನೇ, ಈ ಕಾರಣದಿಂದಲೇ ನಾನು ಅನ್ಯ ಜನಾಂಗಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.
    ಈ ಕಾರಣದಿಂದಲೇ ನಿನ್ನ ಹೆಸರಿನ ಮೇಲೆ ಹಾಡುಗಳನ್ನು ಹಾಡುವೆನು.

51 ಆತನು ತಾನು ನೇಮಿಸಿದ ರಾಜನಿಗೆ ಸಹಾಯಮಾಡಿ ಯುದ್ಧಗಳಲ್ಲಿ ಜಯ ದಯಪಾಲಿಸುವನು.
    ಆತನು ನನ್ನ ರಕ್ಷಣಾದುರ್ಗವಾಗಿದ್ದಾನೆ.
ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಪ್ರೀತಿಯನ್ನು ಮತ್ತು ದಯೆಯನ್ನು ತೋರುವನು.
    ದಾವೀದನಿಗೆ ಮತ್ತು ಅವನ ಸಂತತಿಯವರಿಗೆ ಆತನು ಎಂದೆಂದಿಗೂ ಕೃಪೆ ತೋರಿಸುವವನಾಗಿದ್ದಾನೆ.

ದಾವೀದನ ಕೊನೆಯ ಮಾತುಗಳು

23 ಇವು ಇಷಯನ ಮಗನಾದ ದಾವೀದನ ಕೊನೆಯ ಮಾತುಗಳು:

“ದಾವೀದನು ಈ ಹಾಡನ್ನು ಹಾಡಿದನು.
    ದೇವರಿಂದ ಉನ್ನತಿಗೇರಿಸಲ್ಪಟ್ಟವನ ಸಂದೇಶವಿದು.
ಯಾಕೋಬನ ದೇವರಿಂದ ಆರಿಸಲ್ಪಟ್ಟ ರಾಜನೇ ಅವನು.
    ಅವನು ಇಸ್ರೇಲಿನ ಒಳ್ಳೆಯ ಹಾಡುಗಾರ.
ಯೆಹೋವನ ಆತ್ಮವು ನನ್ನ ಮೂಲಕ ಮಾತನಾಡಿತು.
    ಆತನ ನುಡಿಗಳು ನನ್ನ ನಾಲಿಗೆಯ ಮೇಲಿವೆ.
ಇಸ್ರೇಲಿನ ದೇವರು ಮಾತನಾಡಿದನು.
    ಇಸ್ರೇಲಿನ ಬಂಡೆಯಾದಾತನು ನನಗೆ ತಿಳಿಸಿದನು.
‘ದೇವರಲ್ಲಿ ಭಯಭಕ್ತಿಯನ್ನಿಟ್ಟು
    ಜನರನ್ನು ನ್ಯಾಯವಾಗಿ ಆಳುವ ವ್ಯಕ್ತಿಯು
ಹೊತ್ತಾರೆಯ ಬೆಳಕಿನ ಕಿರಣಗಳಂತೆಯೂ
    ಮೋಡಗಳೇ ಇಲ್ಲದ ಮುಂಜಾನೆಯಂತೆಯೂ
ಮಳೆ ಬಿದ್ದನಂತರ ಬರುವ ಸೂರ್ಯನ ಬೆಳಕಿನಂತೆಯೂ
    ಗರಿಕೆಯನ್ನು ನೆಲದಿಂದ ಮೂಡಿಸುವ ಮಳೆಯಂತೆಯೂ ಇದ್ದಾನೆ.’

“ಯೆಹೋವನು ನನ್ನ ಕುಟುಂಬವನ್ನು ಸ್ಥಿರಗೊಳಿಸಿದನು.
    ಆತನು ನನ್ನೊಡನೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
ಆತನು ಈ ಒಡಂಬಡಿಕೆಯನ್ನು ಸಂಪೂರ್ಣವಾಗಿ ಸುಭದ್ರಗೊಳಿಸಿದನು.
ಆತನು ನನಗೆ ಎಲ್ಲೆಲ್ಲಿಯೂ ಜಯ ಕೊಡುವನು.
    ಆತನು ನನಗೆ ಬೇಕಾದದ್ದನ್ನೆಲ್ಲಾ ಕೊಡುವನು.

“ಆದರೆ ಕೆಟ್ಟಜನರೆಲ್ಲರೂ ಮುಳ್ಳುಗಳಂತಿದ್ದಾರೆ.
    ಜನರು ಮುಳ್ಳುಗಳನ್ನು ಹಿಡಿದುಕೊಳ್ಳುವುದಿಲ್ಲ;
    ಅವರು ಅವುಗಳನ್ನು ಎಸೆದುಬಿಡುವರು.
ಒಬ್ಬ ವ್ಯಕ್ತಿಯು ಅವುಗಳನ್ನು ಮುಟ್ಟಿದರೆ,
    ಅವು ಮರದ ಮತ್ತು ಕಬ್ಬಿಣದ ಕತ್ತಿಗಳಿಂದ ಚುಚ್ಚಿದಂತಾಗುತ್ತದೆ.
ಆ ಜನರು ಮುಳ್ಳುಗಳಂತಿದ್ದಾರೆ.
    ಅವರನ್ನು ಬೆಂಕಿಯಲ್ಲಿ ಎಸೆದು ಸಂಪೂರ್ಣವಾಗಿ ಸುಟ್ಟುಬಿಡುವರು!”

ದಾವೀದನ ಶೂರ ಸೈನಿಕರು

ದಾವೀದನ ಶೂರಸೈನಿಕರ ಹೆಸರುಗಳು ಹೀಗಿವೆ:

ತಹ್ಕೆಮೋನ್ಯನಾದ ಯೋಷೆಬಷ್ಷೆಬೆತನು. ಮೂವರು ವೀರರಿಗೆ ಯೋಷೆಬಷ್ಷೆಬೆತನು ಮುಖ್ಯಸ್ಥನಾಗಿದ್ದನು. ಅವನನ್ನು ಎಚ್ನೀಯನಾದ ಅದೀನೋ ಎಂದೂ ಕರೆಯುತ್ತಿದ್ದರು. ಯೋಷೆಬಷ್ಷೆಬೆತನು ಏಕಕಾಲದಲ್ಲಿ ಎಂಟುನೂರು ಜನರನ್ನು ಕೊಂದನು.

ಎರಡನೆಯವನು ಅಹೋಹ್ಯನಾದ ದೋದೋ ಎಂಬವನ ಮಗನಾದ ಎಲ್ಲಾಜಾರ. ದಾವೀದನು ಫಿಲಿಷ್ಟಿಯರನ್ನು ಎದುರಿಸಿದ ಸಮಯದಲ್ಲಿ ಅವನೊಂದಿಗಿದ್ದ ಮೂರು ಮಂದಿ ವೀರರಲ್ಲಿ ಎಲ್ಲಾಜಾರನು ಒಬ್ಬನಾಗಿದ್ದನು. ಫಿಲಿಷ್ಟಿಯರು ಯುದ್ಧಕ್ಕೆ ಕೂಡಿಬಂದಾಗ, ಇಸ್ರೇಲ್ ಸೈನಿಕರು ಓಡಿಹೋಗಿದ್ದರು. 10 ಎಲ್ಲಾಜಾರನು ಆಯಾಸಗೊಳ್ಳುವ ತನಕ ಫಿಲಿಷ್ಟಿಯರೊಡನೆ ಹೋರಾಡಿದನು. ಆದರೆ ಅವನು ತನ್ನ ಕೈ ಸೋತು ಹೋಗುವವರೆಗೂ ಫಿಲಿಷ್ಟಿಯರನ್ನು ಕೊಂದನು. ಯೆಹೋವನು ಇಸ್ರೇಲರಿಗೆ ಅಂದು ಮಹಾವಿಜಯವನ್ನು ಉಂಟುಮಾಡಿದನು. ಎಲ್ಲಾಜಾರನು ಯುದ್ಧದಲ್ಲಿ ವಿಜಯಿಯಾದ ಮೇಲೆ ಜನರು ಹಿಂದಿರುಗಿದರು. ಆದರೆ ಅವರು ಶತ್ರುಗಳಿಂದ ಬೆಲೆಬಾಳುವ ವಸ್ತುಗಳನ್ನು ಅಪಹರಿಸಲು ಮಾತ್ರವೇ ಬಂದಿದ್ದರು.

11 ಮೂರನೆಯವನು, ಹರಾರ್ಯನಾದ ಆಗೇಯನ ಮಗನಾದ ಶಮ್ಮ. ಫಿಲಿಷ್ಟಿಯರು ದೊಡ್ಡಗುಂಪಾಗಿ ಬಂದು ಅಲಸಂದಿಯ ಹೊಲದಲ್ಲಿ ಹೋರಾಡಿದರು. ಇಸ್ರೇಲರು ಫಿಲಿಷ್ಟಿಯರಿಂದ ಓಡಿಹೋದರು. 12 ಆದರೆ ಶಮ್ಮನು ಹೊಲದ ಮಧ್ಯಭಾಗದಲ್ಲಿ ನಿಂತು ಅದನ್ನು ಉಳಿಸಿಕೊಂಡನು. ಅವನು ಫಿಲಿಷ್ಟಿಯರನ್ನು ಕೊಂದನು. ಆ ಸಮಯದಲ್ಲಿ ಯೆಹೋವನು ಮಹಾವಿಜಯವನ್ನು ಕೊಟ್ಟನು.

13 ಸುಗ್ಗಿಯ ಕಾಲದ ಒಂದು ಸಮಯದಲ್ಲಿ ಮೂವತ್ತು ಮಂದಿ ಶೂರರಲ್ಲಿ[a] ಮೂವರು ದಾವೀದನ ಬಳಿಗೆ ಬಂದರು. ಈ ಮೂವರು ಅದುಲ್ಲಾಮ್ ಗವಿಗೆ ಬಂದರು. ಫಿಲಿಷ್ಟಿಯರ ಸೈನ್ಯವು ರೆಫಾಯೀಮ್ ಕಣಿವೆಯಲ್ಲಿ ತನ್ನ ಪಾಳೆಯವನ್ನು ಮಾಡಿಕೊಂಡಿತ್ತು.

14 ಆ ಸಮಯದಲ್ಲಿ ದಾವೀದನು ಕೋಟೆಯಲ್ಲಿದ್ದನು. ಫಿಲಿಷ್ಟಿಯ ಸೈನಿಕರಲ್ಲಿ ಕೆಲವರು ಬೆತ್ಲೆಹೇಮಿನಲ್ಲಿದ್ದರು. 15 ದಾವೀದನಿಗೆ ತನ್ನ ಸ್ವಸ್ಥಳದ ನೀರನ್ನು ಕುಡಿಯಲು ಅತಿಯಾಸೆಯಾಯಿತು. ದಾವೀದನು, “ಬೆತ್ಲೆಹೇಮ್ ನಗರದ್ವಾರದ ಬಾವಿಯಿಂದ ಯಾರಾದರೂ ನೀರನ್ನು ನನಗೆ ತಂದುಕೊಟ್ಟರೆ ಎಷ್ಟು ಚೆನ್ನಾಗಿರುವುದು” ಎಂದು ಹೇಳಿದನು. 16 ಆದರೆ ಈ ಮೂವರು ಪರಾಕ್ರಮಿಗಳು ಫಿಲಿಷ್ಟಿಯ ಸೈನ್ಯದಲ್ಲಿ ನುಗ್ಗಿಹೋಗಿ, ಬೆತ್ಲೆಹೇಮ್ ನಗರದ್ವಾರದ ಬಾವಿಯಿಂದ ನೀರನ್ನು ತಂದುಕೊಟ್ಟರು. ಆದರೆ ದಾವೀದನು ಆ ನೀರನ್ನು ಕುಡಿಯಲು ನಿರಾಕರಿಸಿದನು. ಆ ನೀರನ್ನು ಅವನು ಯೆಹೋವನ ಸನ್ನಿಧಿಯಲ್ಲಿ ಸುರಿದು, 17 “ಯೆಹೋವನೇ, ನಾನು ಈ ನೀರನ್ನು ಕುಡಿಯುವುದಿಲ್ಲ. ನಾನು ಈ ನೀರನ್ನು ಕುಡಿದರೆ, ನನಗಾಗಿ ತಮ್ಮ ಪ್ರಾಣಗಳನ್ನೇ ಆಪತ್ತಿಗೀಡುಮಾಡಿಕೊಂಡಿದ್ದ ಜನರ ರಕ್ತವನ್ನು ಕುಡಿದಂತಾಗುತ್ತದೆ” ಎಂದು ಹೇಳಿದನು. ಈ ಕಾರಣದಿಂದಲೇ ದಾವೀದನು ಆ ನೀರನ್ನು ಕುಡಿಯಲು ನಿರಾಕರಿಸಿದನು. ಈ ಮೂವರು ಪರಾಕ್ರಮಿಗಳು ಈ ರೀತಿಯ ಅನೇಕ ಕಾರ್ಯಗಳನ್ನು ಮಾಡಿದರು.

18 ಚೆರೂಯಳ ಮಗನೂ ಯೋವಾಬನ ಸೋದರನೂ ಆದ ಅಬೀಷೈಯನು ಈ ಮೂವರು ಪರಾಕ್ರಮಿಗಳಿಗೆ ನಾಯಕನು. ಅಬೀಷೈಯನು ಮುನ್ನೂರು ಮಂದಿ ಶತ್ರುಗಳ ವಿರುದ್ಧ ತನ್ನ ಬರ್ಜಿಯನ್ನು ಬಳಸಿ ಅವರನ್ನು ಕೊಂದನು. ಅವನೂ ಈ ಮೂವರಂತೆಯೇ ಪ್ರಸಿದ್ಧನಾದನು. 19 ಅಬೀಷೈಯನು ಈ ಮೂವರಿಗಿಂತಲೂ ಹೆಚ್ಚು ಗೌರವಕ್ಕೆ ಪಾತ್ರನಾದನು. ಅವನು ಈ ಮೂವರಿಗೆ ನಾಯಕನಾದನು. ಆದರೆ ಅವನು ಈ ಮೂವರಲ್ಲಿ ಒಬ್ಬನಾಗಿರಲಿಲ್ಲ.

20 ಯೆಹೋಯಾದಾವನ ಮಗನಾದ ಬೆನಾಯನು ಅವರಲ್ಲಿ ಒಬ್ಬನು. ಅವನು ಬಲಿಷ್ಠ ವ್ಯಕ್ತಿಯಾಗಿದ್ದನು. ಅವನು ಕಬ್ಜಯೇಲಿನವನಾಗಿದ್ದನು. ಬೆನಾಯನು ಅನೇಕ ಸಾಹಸಕಾರ್ಯಗಳನ್ನು ಮಾಡಿದನು. ಬೆನಾಯನು ಮೋವಾಬ್ಯನಾದ ಅರೀಯೇಲನ ಇಬ್ಬರು ಮಕ್ಕಳನ್ನು ಕೊಂದನು. ಬೆನಾಯನು ಮಂಜುಸುರಿಯುವಾಗ ಒಂದು ತಗ್ಗಿನಲ್ಲಿ ಇಳಿದು ಸಿಂಹವನ್ನು ಕೊಂದನು. 21 ಬೆನಾಯನು ವೀರಯೋಧನಾದ ಈಜಿಪ್ಟಿನವನೊಬ್ಬನನ್ನು ಕೊಂದನು. ಈಜಿಪ್ಟಿನವನ ಕೈಯಲ್ಲಿ ಒಂದು ಬರ್ಜಿಯಿತ್ತು. ಬೆನಾಯನ ಕೈಯಲ್ಲಿ ಒಂದು ಲಾಠಿ ಮಾತ್ರವೇ ಇದ್ದಿತು. ಬೆನಾಯನು ಈಜಿಪ್ಟಿನವನ ಕೈಯಲ್ಲಿದ್ದ ಬರ್ಜಿಯನ್ನು ಕಿತ್ತುಕೊಂಡು ಆ ಬರ್ಜಿಯಿಂದಲೇ ಅವನನ್ನು ಕೊಂದುಬಿಟ್ಟನು. 22 ಯೆಹೋಯಾದಾವನ ಮಗನಾದ ಬೆನಾಯನು ಈ ರೀತಿಯ ಅನೇಕ ಕಾರ್ಯಗಳನ್ನು ಮಾಡಿದನು. ಬೆನಾಯನು ಆ ಮೂವರು ಪರಾಕ್ರಮಿಗಳಷ್ಟೇ ಪ್ರಸಿದ್ಧನಾಗಿದ್ದನು. 23 ಬೆನಾಯನು ಮೂವತ್ತು ಮಂದಿ ಪರಾಕ್ರಮಿಗಳಿಗಿಂತ ಹೆಚ್ಚು ಗೌರವಕ್ಕೆ ಪಾತ್ರನಾದರೂ ಆ ಮೂವರು ಪರಾಕ್ರಮಿಗಳಲ್ಲಿ ಒಬ್ಬನಾಗಿರಲಿಲ್ಲ. ದಾವೀದನು ತನ್ನ ಅಂಗರಕ್ಷಕ ಪಡೆಯ ನಾಯಕನನ್ನಾಗಿ ಬೆನಾಯನನ್ನು ನೇಮಿಸಿದನು.

ಮೂವತ್ತು ಮಂದಿ ಪರಾಕ್ರಮಿಗಳು

24 ಯೋವಾಬನ ಸೋದರನಾದ ಅಸಾಹೇಲನು ಮೂವತ್ತು ಮಂದಿ ಪರಾಕ್ರಮಿಗಳಲ್ಲಿ ಒಬ್ಬನಾಗಿದ್ದನು. ಮೂವತ್ತು ಮಂದಿ ಪರಾಕ್ರಮಿಗಳ ಗುಂಪಿನಲ್ಲಿದ್ದ ಇತರ ಜನರೆಂದರೆ:

ಬೆತ್ಲೆಹೇಮಿನ ದೋದೋವಿನ ಮಗನಾದ ಎಲ್ಹಾನಾನ,

25 ಹೆರೋದಿನವರಾದ ಶಮ್ಮ,

ಎಲೀಕ,

26 ಪೆಲೆಟಿನವನಾದ ಹೆಲೆಚ್,

ತೆಕೋವದ ಇಕ್ಕೇಷನ ಮಗನಾದ ಈರಾ,

27 ಅಣತೋತಿನವನಾದ ಅಬೀಯೆಜೆರ್,

ಹುಷಾ ಊರಿನವನಾದ ಮೆಬುನ್ನೈ,

28 ಅಹೋಹಿನವನಾದ ಚಲ್ಮೋನ್,

ನೆಟೋಫದವನಾದ ಮಹರೈ,

29 ನೆಟೋಫದವನಾದ ಬಾಣನ ಮಗ ಹೇಲೆದ್,

ಬೆನ್ಯಾಮೀನ್ ಕುಟುಂಬದ ಗಿಬೆಯದ ರೀಬೈ ಎಂಬವನ ಮಗನಾದ ಇತ್ತೈ,

30 ಪಿರಾತೋನ್ಯನಾದ ಬೆನಾಯ,

ನಹಲೇಗಾಷಿನವನಾದ ಹಿದ್ದೈ,

31 ಅರಾಬಾದ ಅಬೀಅಲ್ಬೋನ್,

ಬರ್ಹುಮ್ಯನಾದ ಅಜ್ಮಾವೇತ್,

32 ಶಾಲ್ಬೋನ್ಯನಾದ ಎಲೆಯಖ್ಬಾ,

ಯಾಷೇನನ ಗಂಡುಮಕ್ಕಳು,

ಯೋನಾತಾನ, 33 ಹರಾರ್ಯನಾದ ಶಮ್ಮ,

ಅರಾರ್ಯನಾದ ಶಾರಾರನ ಮಗ ಅಹೀಯಾಮ್,

34 ಮಾಕಾದ ಅಹಸ್ಬೈನ ಮಗನಾದ ಎಲೀಫೆಲೆಟ್,

ಗಿಲೋವಿನ ಅಹೀತೋಫೆಲನ ಮಗ ಎಲೀಯಾಮ್,

35 ಕರ್ಮೆಲ್ಯನಾದ ಹೆಚ್ರೋ,

ಅರ್ಬೀಯನಾದ ಪಾರೈ,

36 ಚೋಬದ ನಾತಾನನ ಮಗನಾದ ಇಗಾಲ್,

ಗಾದ್ಯನಾದ ಬಾನೀ,

37 ಅಮ್ಮೋನಿಯನಾದ ಚೆಲೆಕ್,

ಚೆರೂಯಳ ಮಗನಾದ ಯೋವಾಬನ ಸಹಾಯಕನೂ

ಬೇರೋತ್ಯನೂ ಆದ ನಹರೈ,

38 ಇತ್ರೀಯರಾದ ಈರಾ

ಮತ್ತು ಗಾರೇಬ,

39 ಹಿತ್ತಿಯನಾದ ಊರೀಯ.

ಹೀಗೆ ಒಟ್ಟು ಮೂವತ್ತೇಳು ಜನರಿದ್ದರು.

ಜನಗಣತಿ ಮತ್ತು ಅದರ ಫಲ

24 ಯೆಹೋವನು ಇಸ್ರೇಲರ ಮೇಲೆ ಮತ್ತೆ ಕೋಪಗೊಂಡು ಇಸ್ರೇಲರ ವಿರುದ್ಧನಾಗುವಂತೆ ದಾವೀದನನ್ನು ಪ್ರೇರೇಪಿಸಿದನು. ದಾವೀದನು, “ಇಸ್ರೇಲಿನ ಮತ್ತು ಯೆಹೂದದ ಜನಗಣತಿ ಮಾಡಿರಿ” ಎಂದು ಆಜ್ಞಾಪಿಸಿದನು.

ರಾಜನಾದ ದಾವೀದನು ಸೈನ್ಯದ ಸೇನಾಧಿಪತಿಯಾದ ಯೋವಾಬನಿಗೆ, “ದಾನ್‌ನಿಂದ ಬೇರ್ಷೆಬದವರೆಗಿನ ಇಸ್ರೇಲಿನ ಎಲ್ಲಾ ಕುಲಗಳಲ್ಲಿ ಸಂಚರಿಸಿ ಜನರನ್ನು ಲೆಕ್ಕಹಾಕಿರಿ. ಆಗ ಅಲ್ಲಿ ಎಷ್ಟು ಜನರಿದ್ದಾರೆಂಬುದು ನನಗೆ ತಿಳಿಯುತ್ತದೆ” ಎಂದು ಹೇಳಿದನು.

ಆದರೆ ಯೋವಾಬನು ರಾಜನಿಗೆ, “ಅಲ್ಲಿ ಎಷ್ಟು ಜನರಿದ್ದಾರೆಂಬುದು ಅಗತ್ಯವಿಲ್ಲ. ನಿನ್ನ ದೇವರಾದ ಯೆಹೋವನು ಈಗ ಇರುವುದಕ್ಕಿಂತ ನೂರರಷ್ಟು ಹೆಚ್ಚು ಜನರನ್ನು ದಯಪಾಲಿಸಲಿ! ಈ ಕಾರ್ಯವು ಸಂಭವಿಸುವುದನ್ನು ನಿನ್ನ ಕಣ್ಣುಗಳಿಂದಲೇ ನೋಡು. ಆದರೆ ನೀನು ಈ ಕಾರ್ಯವನ್ನು ಮಾಡಬೇಕೆಂದಿರುವುದೇಕೆ?” ಎಂದು ಕೇಳಿದನು.

ಆದರೆ ರಾಜನಾದ ದಾವೀದನು ಯೋವಾಬನಿಗೆ ಮತ್ತು ಸೈನ್ಯದ ಸೇನಾಪತಿಗಳಿಗೆ ಜನರನ್ನು ಲೆಕ್ಕಹಾಕಲು ಆಜ್ಞಾಪಿಸಿದನು. ಆದ್ದರಿಂದ ಯೋವಾಬನು ಸೈನ್ಯದ ಸೇನಾಪತಿಗಳೊಡನೆ ಇಸ್ರೇಲಿನ ಜನರನ್ನು ಲೆಕ್ಕಹಾಕಲು ಹೊರಟನು. ಅವರು ಜೋರ್ಡನ್ ನದಿಯನ್ನು ದಾಟಿ ಅರೋಯೇರಿನಲ್ಲಿ ಪಾಳೆಯ ಮಾಡಿಕೊಂಡರು. ಅವರ ಪಾಳೆಯವು ನಗರದ ಬಲ ಅಂಚಿನಲ್ಲಿತ್ತು. (ಆ ನಗರವು ಗಾದ್ ಕಣಿವೆಯ ಮಧ್ಯಭಾಗದಲ್ಲಿಯೂ ಯಗ್ಜೇರಿನ ಮಾರ್ಗದಲ್ಲಿಯೂ ಇತ್ತು.)

ಆಗ ಅವರು ಗಿಲ್ಯಾದಿಗೆ ಮತ್ತು ತಖ್ತೀಮ್ ಹೊಜೀ ಪ್ರದೇಶಕ್ಕೂ ಯಾನಿನದಾನಿಗೂ, ಚೀದೋನಿನ ಸುತ್ತಲೂ ಹೋದರು. ಅವರು ತೂರ್ ಕೋಟೆಗೂ ಹಿವ್ವಿಯರ ಮತ್ತು ಕಾನಾನ್ಯರ ಎಲ್ಲಾ ನಗರಗಳಿಗೂ ಯೆಹೂದದ ದಕ್ಷಿಣಕ್ಕಿರುವ ಬೇರ್ಷೆಬಕ್ಕೂ ಹೋದರು. ಅವರು ದೇಶದಲ್ಲೆಲ್ಲಾ ಸಂಚರಿಸಿ ಒಂಭತ್ತು ತಿಂಗಳು ಮತ್ತು ಇಪ್ಪತ್ತು ದಿನಗಳ ತರುವಾಯ ಜೆರುಸಲೇಮಿಗೆ ಬಂದರು.

ಯೋವಾಬನು ರಾಜನಿಗೆ ಜನರ ಪಟ್ಟಿಯನ್ನು ಕೊಟ್ಟನು. ಇಸ್ರೇಲಿನಲ್ಲಿ ಕತ್ತಿಯನ್ನು ಬಳಸಬಲ್ಲ ಎಂಟು ಲಕ್ಷ ಜನರಿದ್ದರು. ಯೆಹೂದದಲ್ಲಿ ಐದು ಲಕ್ಷ ಜನರಿದ್ದರು.

ಯೆಹೋವನು ದಾವೀದನನ್ನು ದಂಡಿಸಿದನು

10 ದಾವೀದನು ಜನರನ್ನು ಲೆಕ್ಕಹಾಕಿದ ನಂತರ ಅವಮಾನಗೊಂಡಂತೆ ಭಾವಿಸಿದನು. ದಾವೀದನು ಯೆಹೋವನಿಗೆ, “ನಾನು ಈ ಕಾರ್ಯವನ್ನು ಮಾಡಿ ಮಹಾಪಾಪಕ್ಕೆ ಒಳಗಾದೆನು! ಯೆಹೋವನೇ, ನನ್ನ ಪಾಪಕ್ಕಾಗಿ ನನ್ನನ್ನು ಕ್ಷಮಿಸೆಂದು ಬೇಡುತ್ತೇನೆ. ನಾನು ಬಹಳ ಮೂರ್ಖನಾಗಿಬಿಟ್ಟೆ” ಎಂದು ಹೇಳಿದನು.

11 ದಾವೀದನು ಹೊತ್ತಾರೆಯಲ್ಲಿ ಎದ್ದಾಗ, ಅವನ ದರ್ಶಿಯಾದ ಗಾದನಿಗೆ ಯೆಹೋವನ ಮಾತುಗಳು ಬಂದವು. 12 ಯೆಹೋವನು ಅವನಿಗೆ, “ನೀನು ಹೋಗಿ, ದಾವೀದನಿಗೆ ಹೋಗಿ ಹೇಳು, ‘ಯೆಹೋವನು ಹೀಗೆ ಹೇಳುತ್ತಾನೆ, ನಾನು ಮೂರು ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಒಂದನ್ನು ಆರಿಸಿಕೋ’” ಎಂದು ಹೇಳಿದನು.

13 ಗಾದನು ದಾವೀದನ ಬಳಿಗೆ ಹೋಗಿ, “ಈ ಮೂರು ಶಿಕ್ಷೆಗಳಲ್ಲಿ ಒಂದನ್ನು ಆರಿಸಿಕೊ: ನಿನಗೆ ಮತ್ತು ನಿನ್ನ ದೇಶಕ್ಕೆ ಏಳು ವರ್ಷಗಳ ಕಾಲ ಬರಗಾಲ ಬರಬೇಕೇ? ಅಥವಾ ನಿನ್ನ ಶತ್ರುಗಳು ನಿನ್ನನ್ನು ಮೂರು ತಿಂಗಳ ಕಾಲ ಅಟ್ಟಿಸಬೇಕೇ? ಅಥವಾ ಮೂರು ದಿನಗಳ ಕಾಲ ನಿನ್ನ ದೇಶದಲ್ಲಿ ರೋಗರುಜಿನಗಳು ವ್ಯಾಪಿಸಬೇಕೇ? ಇವುಗಳ ಬಗ್ಗೆ ಯೋಚಿಸು, ನನ್ನನ್ನು ಕಳುಹಿಸಿದ ಯೆಹೋವನಿಗೆ ನಾನು ಏನು ಹೇಳಬೇಕೆಂಬುದನ್ನು ನೀನು ತೀರ್ಮಾನಿಸು” ಎಂದು ಹೇಳಿದನು.

14 ದಾವೀದನು ಗಾದನಿಗೆ, “ನಾನು ನಿಜವಾಗಿಯೂ ತೊಂದರೆಗೆ ಒಳಗಾದೆ! ಆದರೆ ಯೆಹೋವನು ಕೃಪಾಪೂರ್ಣನಾಗಿದ್ದಾನೆ. ಆದ್ದರಿಂದ ಆತನು ನನ್ನನ್ನು ದಂಡಿಸಲಿ; ಆದರೆ ಅದು ಜನರಿಂದ ಬಾರದಿರಲಿ” ಎಂದು ಹೇಳಿದನು.

15 ಆದ್ದರಿಂದ ಯೆಹೋವನು ಇಸ್ರೇಲಿಗೆ ರೋಗರುಜಿನಗಳನ್ನು ಬರಮಾಡಿದನು. ಇವು ಹೊತ್ತಾರೆಯಿಂದ ಆರಂಭವಾಗಿ ನಿಯಮಿತಕಾಲದವರೆಗೆ ಮುಂದುವರಿದವು. ದಾನ್‌ನಿಂದ ಬೇರ್ಷೆಬದವರೆಗೆ ಎಪ್ಪತ್ತುಸಾವಿರ ಜನರು ಸತ್ತರು. 16 ದೇವದೂತನು ಜೆರುಸಲೇಮನ್ನು ನಾಶಗೊಳಿಸಲು ಅದರತ್ತ ತನ್ನ ಕೈಯನ್ನು ಚಾಚಿದನು. ಆದರೆ ಸಂಭವಿಸಿದ ಕೆಟ್ಟಕಾರ್ಯಗಳ ಬಗ್ಗೆ ಯೆಹೋವನು ಪಶ್ಚಾತ್ತಾಪಪಟ್ಟನು. ಯೆಹೋವನು ಜನರನ್ನು ನಾಶಗೊಳಿಸಿದ ದೇವದೂತನಿಗೆ, “ಇಲ್ಲಿಗೆ ಸಾಕು! ನಿನ್ನ ಕೈಯನ್ನು ಕೆಳಗಿಳಿಸು” ಎಂದು ಹೇಳಿದನು. ಆಗ ಆ ಯೆಹೋವನ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು.

ದಾವೀದನು ಅರೌನನ ಕಣವನ್ನು ಕೊಂಡುಕೊಂಡನು

17 ಜನರನ್ನು ಕೊಂದ ದೂತನನ್ನು ದಾವೀದನು ನೋಡಿ ಯೆಹೋವನೊಂದಿಗೆ ಮಾತನಾಡಿದನು. ದಾವೀದನು ಯೆಹೋವನಿಗೆ, “ನಾನು ಪಾಪ ಮಾಡಿದೆನು. ನಾನು ತಪ್ಪು ಮಾಡಿದೆನು. ಆದರೆ ಈ ಜನರು ಕೇವಲ ಕುರಿಗಳಂತೆ ನಿರಪರಾಧಿಗಳು. ಅವರು ಯಾವ ತಪ್ಪನ್ನೂ ಮಾಡಲಿಲ್ಲ. ದಯಮಾಡಿ ನಿನ್ನ ದಂಡನೆಯು ನನಗೆ ಮತ್ತು ನನ್ನ ತಂದೆಯ ಕುಲದ ವಿರುದ್ಧವಾಗಿರಲಿ” ಎಂದು ಹೇಳಿದನು.

18 ಆ ದಿನ ಗಾದನು ದಾವೀದನ ಬಳಿಗೆ ಬಂದು, “ಹೋಗಿ, ಯೆಬೂಸಿಯನಾದ ಅರೌನನ ಕಣದಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸು” ಎಂದು ಹೇಳಿದನು. 19 ಅಂತೆಯೇ ದಾವೀದನು ಯೆಹೋವನ ಆಜ್ಞೆಗೆ ವಿಧೇಯನಾಗಿ ಅರೌನನನ್ನು ನೋಡಲು ಹೋದನು. 20 ರಾಜನು ಅವನ ಸೇವಕರೊಂದಿಗೆ ತನ್ನ ಕಡೆ ಬರುತ್ತಿರುವುದನ್ನು ಅರೌನನು ನೋಡಿದನು. ಅರೌನನು ಹೊರಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. 21 ಅರೌನನು, “ರಾಜನಾದ ನನ್ನ ಒಡೆಯನೇ, ನನ್ನ ಬಳಿ ಬಂದದ್ದೇಕೆ?” ಎಂದು ಕೇಳಿದನು.

ದಾವೀದನು, “ನಿನ್ನಿಂದ ಕಣವನ್ನು ಕೊಂಡುಕೊಳ್ಳುವುದಕ್ಕಾಗಿ ಬಂದೆನು. ನಾನು ಯೆಹೋವನಿಗೆ ಒಂದು ಯಜ್ಞವೇದಿಕೆಯನ್ನು ನಿರ್ಮಿಸುತ್ತೇನೆ. ಆಗ ರೋಗರುಜಿನಗಳು ನಿಲ್ಲುತ್ತವೆ” ಎಂದನು.

22 ಅರೌನನು ದಾವೀದನಿಗೆ, “ರಾಜನಾದ ನನ್ನ ಒಡೆಯನೇ, ಯಜ್ಞವನ್ನು ಸಮರ್ಪಿಸಲು ನೀನು ಏನನ್ನು ಬೇಕಾದರೂ ತೆಗೆದುಕೊ. ಸರ್ವಾಂಗಹೋಮವನ್ನು ಅರ್ಪಿಸಲು ಇಲ್ಲಿ ಕೆಲವು ಹೋರಿಗಳಿವೆ, ನೊಗ ಮುಂತಾದ ಮರದ ಸಲಕರಣೆಗಳಿವೆ. 23 ರಾಜನೇ, ನಾನು ಎಲ್ಲವನ್ನೂ ನಿನಗೆ ಅರ್ಪಿಸುತ್ತೇನೆ” ಎಂದು ಹೇಳಿದನು. ಇದಲ್ಲದೆ ಅರೌನನು ರಾಜನಿಗೆ, “ನಿನ್ನ ದೇವರಾದ ಯೆಹೋವನು ನಿನ್ನನ್ನು ಮೆಚ್ಚಿಕೊಳ್ಳಲಿ” ಎಂದೂ ಹೇಳಿದನು.

24 ಆದರೆ ರಾಜನು ಅರೌನನಿಗೆ, “ಇಲ್ಲ, ನಾನು ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ. ನಾನು ನಿನ್ನ ಭೂಮಿಗೆ ಬೆಲೆಯನ್ನು ಕೊಟ್ಟು ಕೊಂಡುಕೊಳ್ಳುತ್ತೇನೆ. ಉಚಿತವಾಗಿ ಸಿಕ್ಕಿದ್ದನ್ನು ನಾನು ನನ್ನ ದೇವರಾದ ಯೆಹೋವನಿಗೆ ಸರ್ವಾಂಗಹೋಮವನ್ನಾಗಿ ಅರ್ಪಿಸುವುದಿಲ್ಲ” ಎಂದು ಹೇಳಿದನು.

ಆದ್ದರಿಂದ ದಾವೀದನು ಕಣವನ್ನು ಮತ್ತು ಹೋರಿಗಳನ್ನು ಐವತ್ತು ಶೆಕೆಲ್‌ಗಳಿಗೆ ಕೊಂಡುಕೊಂಡನು. 25 ನಂತರ ದಾವೀದನು ಅಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸಿದನು. ದಾವೀದನು ಸರ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಸಮರ್ಪಿಸಿದನು.

ಅವನು ದೇಶಕ್ಕಾಗಿ ಮಾಡಿದ ಪ್ರಾರ್ಥನೆಗೆ ಯೆಹೋವನು ಉತ್ತರಕೊಟ್ಟನು. ಯೆಹೋವನು ಇಸ್ರೇಲಿನ ರೋಗರುಜಿನಗಳನ್ನು ನಿಲ್ಲಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International