Beginning
ಯೋವಾಬನು ದಾವೀದನನ್ನು ಖಂಡಿಸಿದ್ದು
19 ಈ ಸುದ್ದಿಯನ್ನು ಜನರು ಯೋವಾಬನಿಗೆ ತಿಳಿಸಿದರು. ಅವರು ಯೋವಾಬನಿಗೆ, “ನೋಡು, ರಾಜನು ಅಳುತ್ತಿದ್ದಾನೆ ಮತ್ತು ಅಬ್ಷಾಲೋಮನಿಗಾಗಿ ಬಹಳ ದುಃಖಪಡುತ್ತಿದ್ದಾನೆ” ಎಂದು ಹೇಳಿದರು. 2 ದಾವೀದನ ಸೈನ್ಯವು ಅಂದು ಯುದ್ಧದಲ್ಲಿ ಜಯಗಳಿಸಿತು. ಆದರೆ ಜನರಿಗೆಲ್ಲ ಆ ದಿನವೇ ಅತ್ಯಂತ ಶೋಕದ ದಿನವೂ ಆಯಿತು. “ರಾಜನು ಮಗನಿಗಾಗಿ ಬಹಳ ದುಃಖಪಡುತ್ತಿದ್ದಾನೆ” ಎಂಬುದನ್ನು ಜನರು ಕೇಳಿ ದುಃಖಪಟ್ಟರು.
3 ಜನರು ನಾಚಿಕೆಯಿಂದ ನಗರದೊಳಕ್ಕೆ ಸದ್ದಿಲ್ಲದೆ ಬಂದರು. ಅವರು ಯುದ್ಧದಲ್ಲಿ ಸೋತುಬಂದವರಂತೆ ಕಾಣುತ್ತಿದ್ದರು. 4 ರಾಜನು ತನ್ನ ಮುಖವನ್ನು ಮುಚ್ಚಿಕೊಂಡಿದ್ದನು. ರಾಜನು, “ನನ್ನ ಮಗನೇ, ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ಮಗನೇ” ಎಂದು ಗಟ್ಟಿಯಾಗಿ ಅಳುತ್ತಿದ್ದನು.
5 ಯೋವಾಬನು ರಾಜನ ಮನೆಗೆ ಬಂದನು. ಅವನು ರಾಜನಿಗೆ, “ನೀನು ನಿನ್ನ ಎಲ್ಲಾ ಸೈನಿಕರನ್ನು ಅವಮಾನ ಮಾಡುತ್ತಿರುವೆ! ನಿನ್ನ ಸೈನಿಕರು ಇಂದು ನಿನ್ನ ಜೀವವನ್ನು ರಕ್ಷಿಸಿದರು. ಅವರು ನಿನ್ನ ಗಂಡುಮಕ್ಕಳ, ಹೆಣ್ಣುಮಕ್ಕಳ, ಪತ್ನಿಯರ ಮತ್ತು ದಾಸಿಯರ ಜೀವಗಳನ್ನು ರಕ್ಷಿಸಿದರು. 6 ನಿನ್ನನ್ನು ದ್ವೇಷಿಸುವ ಜನರನ್ನು ನೀನು ಪ್ರೀತಿಸುವೆ; ನಿನ್ನನ್ನು ಪ್ರೀತಿಸುವ ಜನರನ್ನು ನೀನು ದ್ವೇಷಿಸುವೆ. ಆದ್ದರಿಂದ ನಿನ್ನ ಸೇವಕರು ಅವಮಾನಿತರಾಗಿದ್ದಾರೆ. ನಿನ್ನ ಅಧಿಕಾರಿಗಳು ಮತ್ತು ನಿನ್ನ ಜನರು ನಿನಗೆ ಮುಖ್ಯವಲ್ಲ ಎಂಬುದನ್ನು ನೀನಿಂದು ರುಜುವಾತುಪಡಿಸಿದೆ. ಇಂದು ಅಬ್ಷಾಲೋಮನು ಬದುಕಿದ್ದು, ನಾವೆಲ್ಲರೂ ಸತ್ತಿದ್ದರೆ, ನೀನು ಬಹಳ ಹರ್ಷಗೊಳುತ್ತಿದ್ದೆ ಎಂಬುದನ್ನು ನಾನು ಈ ದಿನ ಕಂಡುಕೊಂಡೆನು. 7 ಈಗ ಮೇಲೆದ್ದು ನಿನ್ನ ಸೇವಕರೊಂದಿಗೆ ಮಾತನಾಡು; ಅವರನ್ನು ಪ್ರೋತ್ಸಾಹಿಸು. ಯೆಹೋವನಾಣೆ, ಈ ಕಾರ್ಯವನ್ನು ಮಾಡಲು ನೀನಿಂದು ಹೊರಗೆ ಹೋಗದಿದ್ದರೆ, ರಾತ್ರಿಯ ವೇಳೆಗೆ ನಿನ್ನೊಂದಿಗೆ ಯಾವ ಮನುಷ್ಯನೂ ಉಳಿಯುವುದಿಲ್ಲ. ನೀನು ನಿನ್ನ ಚಿಕ್ಕಂದಿನಿಂದ ಈವರೆಗೆ ಅನುಭವಿಸಿದ ಸಂಕಷ್ಟಗಳಲ್ಲೆಲ್ಲ ಇದು ತೀರ ಕೆಟ್ಟದಾಗಿರುತ್ತದೆ” ಎಂದು ಹೇಳಿದನು.
8 ಆಗ ರಾಜನು ನಗರದ ಬಾಗಿಲಿಗೆ ಹೋದನು. ರಾಜನು ಬಾಗಿಲಿನ ಬಳಿಯಲ್ಲಿದ್ದಾನೆಂಬ ಸುದ್ದಿಯು ಹರಡಿತು. ಆದ್ದರಿಂದ ಜನರೆಲ್ಲರೂ ರಾಜನನ್ನು ನೋಡಲು ಬಂದರು. ಅಬ್ಷಾಲೋಮನ ಹಿಂಬಾಲಕರಾದ ಇಸ್ರೇಲರೆಲ್ಲ ಮನೆಗಳಿಗೆ ಓಡಿಹೋದರು.
ದಾವೀದನು ಮತ್ತೆ ರಾಜನಾದನು
9 ಇಸ್ರೇಲಿನ ಕುಲಗಳ ಜನರೆಲ್ಲರೂ ತಮ್ಮಲ್ಲೇ ಚರ್ಚಿಸಿದರು. ಅವರು, “ರಾಜನಾದ ದಾವೀದನು ಫಿಲಿಷ್ಟಿಯರಿಂದ ಮತ್ತು ಇತರ ಶತ್ರುಗಳಿಂದ ನಮ್ಮನ್ನು ರಕ್ಷಿಸಿದನು. ಅಬ್ಷಾಲೋಮನಿಂದಾಗಿ ದಾವೀದನು ಓಡಿಹೋಗಬೇಕಾಯಿತು. 10 ನಾವು ನಮ್ಮನ್ನು ಆಳಲು ಅಬ್ಷಾಲೋಮನನ್ನು ಆರಿಸಿಕೊಂಡೆವು. ಆದರೆ ಅವನೀಗ ಯುದ್ಧದಲ್ಲಿ ಸತ್ತಿದ್ದಾನೆ. ದಾವೀದನನ್ನು ನಾವು ಮತ್ತೆ ರಾಜನನ್ನಾಗಿ ಮಾಡೋಣ” ಎಂದರು.
11 ಈ ಸುದ್ದಿ ರಾಜನಿಗೆ ಮುಟ್ಟಿತು. ಆಗ ಅವನು ಯಾಜಕರಾದ ಚಾದೋಕನಿಗೆ ಮತ್ತು ಎಬ್ಯಾತಾರನಿಗೆ ಸಂದೇಶವನ್ನು ಕಳುಹಿಸಿದನು. ಅವನು ಹೇಳಿದ್ದೇನೆಂದರೆ, “ಯೆಹೂದದ ನಾಯಕರೊಂದಿಗೆ ಮಾತಾಡಿರಿ. ಅವರಿಗೆ, ‘ಅರಸನಾದ ನನ್ನನ್ನು ಅರಮನೆಗೆ ಕರೆದುಕೊಂಡು ಹೋಗುವುದರಲ್ಲಿ ನೀವು ಕೊನೆಯವರಾದದ್ದೇಕೆ? ನೋಡಿ, ರಾಜನನ್ನು ಹಿಂದೆ ಕರೆತರಬೇಕೆಂದು ಇಸ್ರೇಲರೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. 12 ನೀವು ನನ್ನ ಸೋದರರು, ನೀವು ನನ್ನ ಕುಟುಂಬದವರು. ಹೀಗಿರುವಾಗ ನನ್ನನ್ನು ಮತ್ತೆ ಕರೆತರಲು ನೀವೇಕೆ ಕೊನೆಯವರಾದಿರಿ?’ ಎಂದು ಹೇಳಿ. 13 ಅಲ್ಲದೆ ಅಮಾಸನಿಗೆ, ‘ನೀನು ನನ್ನ ಕುಟುಂಬದ ಒಂದು ಭಾಗವಾಗಿರುವೆ. ನಾನು ನಿನ್ನನ್ನು ಯೋವಾಬನ ಸ್ಥಾನದಲ್ಲಿ ಸೇನಾಪತಿಯನ್ನಾಗಿ ಮಾಡದೆ ಹೋದರೆ, ದೇವರು ನನ್ನನ್ನು ದಂಡಿಸಲಿ’ ಎಂದು ಹೇಳಿ” ಎಂದನು.
14 ದಾವೀದನ ಮಾತುಗಳು ಯೆಹೂದದ ಜನರೆಲ್ಲರ ಹೃದಯಗಳಿಗೆ ತಾಕಿದವು, ಅವರೆಲ್ಲರೂ ಒಂದೇ ಮನಸ್ಸಿನಿಂದ ಒಪ್ಪಿಕೊಂಡರು. ಯೆಹೂದದ ಜನರು ರಾಜನಿಗೆ, “ನೀನು ನಿನ್ನ ಸೇವಕರೆಲ್ಲರೊಡನೆ ಹಿಂದಿರುಗಿ ಬಾ” ಎಂಬ ಸಂದೇಶವೊಂದನ್ನು ಕಳುಹಿಸಿದರು.
15 ಆಗ ರಾಜನಾದ ದಾವೀದನು ಜೋರ್ಡನ್ ನದಿಯ ಬಳಿಗೆ ಬಂದನು. ಯೆಹೂದದ ಜನರು ರಾಜನನ್ನು ಭೇಟಿ ಮಾಡಲು ಗಿಲ್ಗಾಲಿಗೆ ಬಂದರು. ರಾಜನಾದ ದಾವೀದನನ್ನು ಜೋರ್ಡನ್ ನದಿಯಿಂದ ಈಚೆಗೆ ಕರೆತರಬೇಕೆಂದು ಅವರೆಲ್ಲ ಬಂದರು.
ಶಿಮ್ಮಿಯು ದಾವೀದನಿಂದ ಕ್ಷಮೆ ಕೇಳಿದ್ದು
16 ಗೇರನ ಮಗನಾದ ಶಿಮ್ಮಿಯು ಬೆನ್ಯಾಮೀನ್ ಕುಲದವನು. ಅವನು ಬಹುರೀಮಿನಲ್ಲಿ ನೆಲೆಸಿದ್ದನು. ರಾಜನಾದ ದಾವೀದನನ್ನು ಭೇಟಿ ಮಾಡಲು ಶಿಮ್ಮಿಯು ತ್ವರಿತವಾಗಿ ಯೆಹೂದದ ಜನರೊಂದಿಗೆ ಬಂದನು. 17 ಬೆನ್ಯಾಮೀನ್ ಕುಲದ ಒಂದು ಸಾವಿರ ಜನರು ಸಹ ಶಿಮ್ಮಿಯೊಂದಿಗೆ ಬಂದರು. ಸೌಲನ ಕುಲದಲ್ಲಿ ಸೇವಕನಾಗಿದ್ದ ಚೀಬನು ಸಹ ಬಂದನು. ಚೀಬನು ತನ್ನ ಹದಿನೈದು ಜನ ಮಕ್ಕಳನ್ನು ಮತ್ತು ಇಪ್ಪತ್ತು ಜನ ಸೇವಕರನ್ನು ತನ್ನೊಂದಿಗೆ ಕರೆತಂದನು. ಇವರೆಲ್ಲರೂ ರಾಜನಾದ ದಾವೀದನನ್ನು ಸಂಧಿಸಲು ಜೋರ್ಡನ್ ನದಿಯ ಹತ್ತಿರಕ್ಕೆ ಬಂದರು.
18 ರಾಜನ ಕುಟುಂಬವನ್ನು ಯೆಹೂದಕ್ಕೆ ಕರೆತರಲು ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿ ಹೋದರು. ರಾಜನು ಅಪೇಕ್ಷೆಪಟ್ಟಿದ್ದನ್ನು ಜನರು ಮಾಡಿದರು. ರಾಜನು ನದಿಯನ್ನು ದಾಟುತ್ತಿರುವಾಗ, ಗೇರನ ಮಗನಾದ ಶಿಮ್ಮಿಯು ಅವನನ್ನು ಸಂಧಿಸಲು ಬಂದನು. ರಾಜನ ಎದುರಿನಲ್ಲಿ ಶಿಮ್ಮಿಯು ನೆಲಕ್ಕೆ ಬಾಗಿ ನಮಸ್ಕರಿಸಿದನು. 19 ಶಿಮ್ಮಿಯು ರಾಜನಿಗೆ, “ನನ್ನ ಒಡಯನೇ, ನಾನು ಮಾಡಿದ ಕೆಟ್ಟಕಾರ್ಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳದಿರು. ನನ್ನ ರಾಜನಾದ ಒಡೆಯನೇ, ನೀನು ಜೆರುಸಲೇಮನ್ನು ಬಿಟ್ಟುಹೋದಾಗ ನಾನು ಮಾಡಿದ ಕೆಟ್ಟಕಾರ್ಯಗಳನ್ನು ನೆನಪಿಗೆ ತಂದುಕೊಳ್ಳಬೇಡ. 20 ನಾನು ಪಾಪಮಾಡಿದ್ದೇನೆಂದು ಒಪ್ಪಿಕೊಳ್ಳುತ್ತೇನೆ. ಆದ ಕಾರಣವೇ, ನನ್ನ ರಾಜನಾದ ಒಡೆಯನೇ, ನಿನ್ನನ್ನು ಭೇಟಿಮಾಡಲು ಬಂದ ಯೋಸೇಫ್ಯರ ಕುಲದಲ್ಲಿ ನಾನೇ ಮೊದಲಿಗನು” ಎಂದು ಹೇಳಿದನು.
21 ಆದರೆ ಚೆರೂಯಳ ಮಗನಾದ ಅಬೀಷೈಯನು, “ಯೆಹೋವನಿಂದ ಆರಿಸಲ್ಪಟ್ಟ ರಾಜನಿಗೆ ಕೆಟ್ಟದ್ದು ಸಂಭವಿಸಲಿ ಎಂದು ಶಿಮ್ಮಿಯು ಅಪೇಕ್ಷಿಸಿದ್ದರಿಂದ ಮರಣ ಶಿಕ್ಷೆಗೆ ಗುರಿಯಾಗಲೇಬೇಕು” ಎಂದು ಹೇಳಿದನು.
22 ದಾವೀದನು, “ಚೆರೂಯಳ ಮಕ್ಕಳೇ, ನಾನು ನಿಮಗೆ ಏನು ಮಾಡಲಿ? ನೀವಿಂದು ನನಗೆ ವಿರುದ್ಧರಾಗಿರುವಿರಿ. ವಿಶೇಷವಾದ ಈ ದಿನದಲ್ಲಿ ಒಬ್ಬ ಇಸ್ರೇಲನನ್ನು ಸಾವಿಗೆ ಗುರಿಮಾಡುವುದು ಸರಿಯಾಗಿರುವುದೇ? ಇಸ್ರೇಲಿನಲ್ಲಿ ಈ ದಿನ ನಾನು ಇಸ್ರೇಲಿಗೆಲ್ಲ ರಾಜನೆಂಬುದು ನನಗೆ ತಿಳಿದಿದೆ” ಎಂದನು.
23 ನಂತರ ರಾಜನು ಶಿಮ್ಮಿಗೆ, “ನಿನ್ನನ್ನು ಕೊಲ್ಲುವುದಿಲ್ಲ” ಎಂದು ವಾಗ್ದಾನ ಮಾಡಿದನು.[a]
ಮೆಫೀಬೋಶೆತನು ದಾವೀದನನ್ನು ನೋಡಲು ಬಂದದ್ದು
24 ಸೌಲನ ಮೊಮ್ಮಗನಾದ ಮೆಫೀಬೋಶೆತನು ರಾಜನಾದ ದಾವೀದನನ್ನು ನೋಡಲು ಬಂದನು. ರಾಜನು ಜೆರುಸಲೇಮನ್ನು ಬಿಟ್ಟು ಸುರಕ್ಷಿತವಾಗಿ ಮತ್ತೆ ಹಿಂದಿರುಗುವತನಕ ಮೆಫೀಬೋಶೆತನು ತನ್ನ ಪಾದಗಳನ್ನು ಲಕ್ಷಿಸಿರಲಿಲ್ಲ; ಗಡ್ಡವನ್ನು ಬೋಳಿಸಿರಲಿಲ್ಲ ಮತ್ತು ಬಟ್ಟೆಗಳನ್ನು ಒಗೆದಿರಲಿಲ್ಲ. 25 ಮೆಫೀಬೋಶೆತನು ರಾಜನನ್ನು ನೋಡಲು ಜೆರುಸಲೇಮಿನಿಂದ ಬಂದನು. ರಾಜನು ಅವನಿಗೆ, “ಮೆಫೀಬೋಶೆತನೇ, ನಾನು ಜೆರುಸಲೇಮಿನಿಂದ ಓಡಿಹೋದಾಗ ನೀನು ನನ್ನೊಡನೆ ಏಕೆ ಬರಲಿಲ್ಲ?” ಎಂದು ಕೇಳಿದನು.
26 ಮೆಫೀಬೋಶೆತನು, “ರಾಜನಾದ ನನ್ನ ಒಡೆಯನೇ, ನನ್ನ ಸೇವಕನಾದ ಚೀಬನು ನನಗೆ ಮೋಸಮಾಡಿದನು. ನಾನು ಚೀಬನಿಗೆ, ‘ನಾನು ಕುಂಟನಾಗಿರುವದರಿಂದ ತಡಿಯೊಂದನ್ನು ಹೇಸರಕತ್ತೆಯ ಮೇಲೆ ಹಾಕು. ನಾನು ಹೇಸರಕತ್ತೆಯ ಮೇಲೆ ಕುಳಿತು, ರಾಜನೊಂದಿಗೆ ಹೋಗುತ್ತೇನೆ’ ಎಂದೆನು. 27 ಆದರೆ ನನ್ನ ಸೇವಕನು ನನ್ನನ್ನು ಮೋಸಗೊಳಿಸಿದನು. ಅವನು ನನ್ನ ಬಗ್ಗೆ ನಿನಗೆ ಕೆಟ್ಟದ್ದನ್ನು ಹೇಳಿದನು. ಆದರೆ ರಾಜನಾದ ನನ್ನ ಒಡೆಯನು ದೇವದೂತನಂತಿದ್ದಾನೆ. ನಿನಗೆ ಒಳ್ಳೆಯದೆಂದು ತೋರಿದ್ದನ್ನು ಮಾಡು. 28 ನೀನು ನನ್ನ ತಾತನ ಕುಟುಂಬವನ್ನೆಲ್ಲ ಕೊಲ್ಲಬಹುದಾಗಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ. ನೀನು ನಿನ್ನ ಪಂಕ್ತಿಯಲ್ಲಿ ಊಟಮಾಡುವ ಜನರ ಜೊತೆಯಲ್ಲಿ ನನ್ನನ್ನೂ ಸೇರಿಸಿದೆ. ಆದ್ದರಿಂದ ರಾಜನ ಬಗ್ಗೆ ದೂರು ಹೇಳಲು ನನಗೆ ಯಾವ ಹಕ್ಕಿಲ್ಲ” ಎಂದು ಹೇಳಿದನು.
29 ರಾಜನು ಮೆಫೀಬೋಶೆತನಿಗೆ, “ನಿನ್ನ ಸಮಸ್ಯೆಗಳ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಬೇಡ. ನಾನು ಈ ರೀತಿ ತೀರ್ಮಾನಿಸಿದ್ದೇನೆ. ನೀನು ಮತ್ತು ಚೀಬನು ಭೂಮಿಯನ್ನು ಹಂಚಿಕೊಳ್ಳಿ” ಎಂದು ಹೇಳಿದನು.
30 ಮೆಫೀಬೋಶೆತನು ರಾಜನಿಗೆ, “ಚೀಬನೇ ಎಲ್ಲಾ ಭೂಮಿಯನ್ನು ತೆಗೆದುಕೊಳ್ಳಲಿ. ನನ್ನ ಒಡೆಯನಾದ ರಾಜನು ತನ್ನ ಸ್ವಂತ ಮನೆಗೆ ಸುರಕ್ಷಿತನಾಗಿ ಬಂದದ್ದೇ ಸಾಕು” ಎಂದು ಹೇಳಿದನು.
ದಾವೀದನು ಬರ್ಜಿಲ್ಲೈಗೆ, ಜೆರುಸಲೇಮಿಗೆ ಬರುವಂತೆ ಹೇಳಿದ್ದು
31 ಗಿಲ್ಯಾದಿನ ಬರ್ಜಿಲ್ಲೈಯನು ರೋಗೆಲೀಮಿನಿಂದ ರಾಜನಾದ ದಾವೀದನೊಂದಿಗೆ ಜೋರ್ಡನ್ ನದಿಯ ಬಳಿಗೆ ಬಂದನು. ರಾಜನು ನದಿಯನ್ನು ದಾಟುವಾಗ ರಾಜನೊಂದಿಗಿರಲು ಅವನು ಬಂದನು. 32 ಬರ್ಜಿಲ್ಲೈಯನು ಮುದುಕನಾಗಿದ್ದನು. ಅವನಿಗೆ ಎಂಭತ್ತು ವರ್ಷ ವಯಸ್ಸಾಗಿತ್ತು. ದಾವೀದನು ಮಹನಯಿಮಿನಲ್ಲಿ ವಾಸಿಸುತ್ತಿದ್ದಾಗ ಅವನು ದಾವೀದನಿಗೆ ಆಹಾರವನ್ನೂ ಮತ್ತಿತರ ವಸ್ತುಗಳನ್ನೂ ಕೊಟ್ಟಿದ್ದನು; ಯಾಕೆಂದರೆ ಅವನು ಶ್ರೀಮಂತನಾಗಿದ್ದನು. 33 ದಾವೀದನು ಬರ್ಜಿಲ್ಲೈಯನಿಗೆ, “ನದಿಯನ್ನು ದಾಟಿ ನನ್ನೊಂದಿಗೆ ಆಚೇದಡಕ್ಕೆ ಬಾ. ನೀನು ಜೆರುಸಲೇಮಿನಲ್ಲಿ ನನ್ನೊಂದಿಗೆ ವಾಸಿಸುವುದಾದರೆ, ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ” ಎಂದು ಹೇಳಿದನು.
34 ಆದರೆ ಬರ್ಜಿಲ್ಲೈಯನು ದಾವೀದನಿಗೆ, “ನನಗೆ ಎಷ್ಟು ವಯಸ್ಸಾಗಿದೆಯೆಂಬುದು ನಿನಗೆ ತಿಳಿದಿಲ್ಲವೇ? ನಾನು ನಿನ್ನೊಂದಿಗೆ ಜೆರುಸಲೇಮಿಗೆ ಬರಬಹುದೇ? 35 ನನಗೀಗ ಎಂಭತ್ತು ವರ್ಷ. ಒಳಿತು ಕೆಡುಕುಗಳಿಗಿರುವ ವ್ಯತ್ಯಾಸ ಈಗ ನನಗೆ ತಿಳಿಯುವುದಿಲ್ಲ. ನಾನು ತಿನ್ನುವ ಇಲ್ಲವೆ ಕುಡಿಯುವ ವಸ್ತುಗಳ ರುಚಿಯೂ ನನಗೆ ಗೊತ್ತಾಗುವುದಿಲ್ಲ. ಹಾಡುತ್ತಿರುವ ಗಂಡಸರ ಮತ್ತು ಹೆಂಗಸರ ಯಾವುದೇ ಧ್ವನಿಯೂ ನನಗೆ ಕೇಳಿಸುವುದಿಲ್ಲ. ನನ್ನ ಒಡೆಯನಾದ ರಾಜನಿಗೆ ನಾನೇಕೆ ಭಾರವಾಗಬೇಕು? 36 ನೀನು ನನಗೆ ಕೊಡಬೇಕೆಂದಿರುವ ಯಾವ ವಸ್ತುಗಳೂ ನನಗೆ ಬೇಕಿಲ್ಲ. ನಾನು ನಿನ್ನೊಂದಿಗೆ ಜೋರ್ಡನ್ ನದಿಯನ್ನು ದಾಟುತ್ತೇನೆ. 37 ಆದರೆ ದಯವಿಟ್ಟು ನನ್ನನ್ನು ಹಿಂದಿರುಗಲು ಬಿಡು. ನಂತರ ನಾನು ನನ್ನ ಸ್ವಂತ ಸ್ಥಳದಲ್ಲಿ ಸಾಯುತ್ತೇನೆ. ನನ್ನ ತಂದೆತಾಯಿಗಳನ್ನು ಸಮಾಧಿ ಮಾಡಿದ ಸ್ಮಶಾನದಲ್ಲಿಯೇ ನನ್ನನ್ನು ಸಮಾಧಿ ಮಾಡಲಿ. ಆದರೆ ನನ್ನ ಒಡೆಯನಾದ ರಾಜನೇ, ಇಲ್ಲಿರುವ ಕಿಮ್ಹಾಮನು ನಿನ್ನ ಸೇವಕನಾಗಿರುತ್ತಾನೆ; ಅವನು ನಿನ್ನೊಂದಿಗೆ ಬರುತ್ತಾನೆ. ನಿನಗೆ ಇಷ್ಟಬಂದಂತೆ ಅವನಿಗೆ ಮಾಡು” ಎಂದು ಹೇಳಿದನು.
38 ರಾಜನು, “ಕಿಮ್ಹಾಮನು ನನ್ನೊಂದಿಗೆ ಬರಲಿ. ನಾನು ನಿನಗೋಸ್ಕರ ಅವನಿಗೆ ದಯೆತೋರಿಸುವೆನು. ಅವನಿಗಾಗಿ ನೀನು ಏನು ಮಾಡಬೇಕೆಂದು ಬಯಸುತ್ತೀಯೋ ಅದನ್ನೆಲ್ಲಾ ಮಾಡುತ್ತೇನೆ” ಎಂದು ಉತ್ತರಿಸಿದನು.
ದಾವೀದನು ಮನೆಗೆ ಹಿಂದಿರುಗಿದ್ದು
39 ರಾಜನು ಬರ್ಜಿಲ್ಲೈಯನಿಗೆ ಮುದ್ದಿಟ್ಟು ಆಶೀರ್ವದಿಸಿದನು. ಬರ್ಜಿಲ್ಲೈಯನು ಮನೆಗೆ ಹಿಂದಿರುಗಿದನು. ರಾಜನು ತನ್ನ ಜನರೆಲ್ಲರೊಂದಿಗೆ ನದಿಯನ್ನು ದಾಟಿದನು.
40 ರಾಜನು ಜೋರ್ಡನ್ ನದಿಯನ್ನು ದಾಟಿ ಗಿಲ್ಗಾಲಿಗೆ ಹೋದನು. ಕಿಮ್ಹಾಮನು ಅವನೊಂದಿಗೆ ಹೋದನು. ಯೆಹೂದ ದೇಶದ ಜನರೆಲ್ಲರು ಮತ್ತು ಇಸ್ರೇಲಿನ ಅರ್ಧದಷ್ಟು ಜನರು ದಾವೀದನನ್ನು ನದಿ ದಾಟಿಸಿ ಕರೆದುಕೊಂಡು ಹೋದರು.
ಇಸ್ರೇಲರು ಯೆಹೂದದ ಜನರೊಂದಿಗೆ ವಾದ ಮಾಡಿದ್ದು
41 ಇಸ್ರೇಲರೆಲ್ಲರೂ ರಾಜನ ಬಳಿಗೆ ಬಂದರು. ಅವರು ರಾಜನಿಗೆ, “ನಮ್ಮ ಸೋದರರಾದ ಯೆಹೂದದ ಜನರು ತಾವೇ ಬಂದು ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ನಿನ್ನ ಜನರೊಂದಿಗೆ ಜೋರ್ಡನ್ ನದಿಯನ್ನು ದಾಟಿಸಿ ಕರೆತಂದದ್ದೇಕೆ?” ಎಂದು ಕೇಳಿದರು.
42 ಯೆಹೂದದ ಜನರೆಲ್ಲರು ಇಸ್ರೇಲರಿಗೆ, “ಏಕೆಂದರೆ ರಾಜನು ನಮ್ಮ ಸಮೀಪದ ಬಂಧು. ಇದರ ಕುರಿತು ನೀವೇಕೆ ನಮ್ಮ ಮೇಲೆ ಕೋಪಗೊಳ್ಳುತ್ತೀರಿ? ರಾಜನ ಖರ್ಚಿನಲ್ಲೇನೂ ನಾವು ಊಟಮಾಡಲಿಲ್ಲ. ರಾಜನು ನಮಗೆ ಯಾವ ಬಹುಮಾನವನ್ನೂ ನೀಡಲಿಲ್ಲ” ಎಂದು ಉತ್ತರಿಸಿದರು.
43 ಇಸ್ರೇಲರು, “ದಾವೀದನಲ್ಲಿ ನಾವು ಹತ್ತುಪಾಲನ್ನು ಹೊಂದಿದ್ದೇವೆ. ಆದ್ದರಿಂದ ದಾವೀದನ ಮೇಲೆ ನಿಮಗಿಂತಲೂ ನಮಗೆ ಹೆಚ್ಚಿನ ಹಕ್ಕಿದೆ. ಆದರೆ ನೀವು ನಮ್ಮನ್ನು ಕಡೆಗಣಿಸಿದ್ದೇಕೆ? ರಾಜನನ್ನು ಹಿಂದಕ್ಕೆ ಕರೆತರಲು ಮಾತಾನಾಡಿದವರಲ್ಲಿ ನಾವೇ ಮೊದಲಿಗರು” ಎಂದು ಉತ್ತರಿಸಿದರು.
ಆದರೆ ಯೆಹೂದದ ಜನರು ಇಸ್ರೇಲರಿಗೆ ಕಟುವಾಗಿ ಉತ್ತರಿಸಿದರು. ಯೆಹೂದ ಜನರ ಮಾತುಗಳು ಇಸ್ರೇಲರ ಮಾತುಗಳಿಗಿಂತ ಹೆಚ್ಚು ಕಟುವಾಗಿದ್ದವು.
ಶೆಬನು ದಾವೀದನ ವಿರುದ್ಧವಾಗಿ ದಂಗೆ ಎದ್ದದ್ದು
20 ಬಿಕ್ರೀಯ ಮಗನಾದ ಶೆಬ ಅಲ್ಲಿದ್ದನು. ಇವನು ದುಷ್ಟನಾಗಿದ್ದನು; ಬೆನ್ಯಾಮೀನ್ ಕುಲದವನಾಗಿದ್ದ ಇವನು, ತುತ್ತೂರಿಯನ್ನು ಊದುತ್ತಾ,
“ದಾವೀದನಲ್ಲಿ ನಮ್ಮ ಪಾಲು ಏನೂ ಇಲ್ಲ.
ಇಷಯನ ಮಗನಲ್ಲಿ ನಮಗೇನೂ ಇಲ್ಲ.
ನಾವೆಲ್ಲ, ಅಂದರೆ ಇಸ್ರೇಲರೆಲ್ಲ ನಮ್ಮನಮ್ಮ ಗುಡಾರಗಳಿಗೆ ಹೋಗೋಣ”
ಎಂದು ಹೇಳಿದನು.
2 ಆಗ ಇಸ್ರೇಲರೆಲ್ಲರೂ ದಾವೀದನನ್ನು ತೊರೆದು, ಬಿಕ್ರೀಯ ಮಗನಾದ ಶೆಬನನ್ನು ಹಿಂಬಾಲಿಸಿದರು. ಆದರೆ ಯೆಹೂದದ ಜನರೆಲ್ಲರೂ ಜೋರ್ಡನ್ ನದಿಯಿಂದ ಜೆರುಸಲೇಮಿನ ತನಕ ತಮ್ಮ ರಾಜನ ಜೊತೆಯಲ್ಲಿಯೇ ಇದ್ದರು.
3 ದಾವೀದನು ಜೆರುಸಲೇಮಿನ ತನ್ನ ಅರಮನೆಗೆ ಬಂದನು. ದಾವೀದನು ಮನೆಕಾಯಲು ಬಿಟ್ಟುಹೋದ ತನ್ನ ಹತ್ತುಮಂದಿ ಉಪಪತ್ನಿಯರನ್ನು[b] ಒಂದು ಮನೆಯಲ್ಲಿ ಇಟ್ಟಿದ್ದನು. ಈ ಮನೆಯನ್ನು ಕಾವಲುಗಾರರು ಕಾಯುತ್ತಿದ್ದರು. ಈ ಹೆಂಗಸರು ತಾವು ಸಾಯುವವರೆಗೆ ಈ ಮನೆಯಲ್ಲಿಯೇ ನೆಲೆಸಿದ್ದರು. ದಾವೀದನು ಅವರಿಗೆ ಆಹಾರ ವಸ್ತ್ರಗಳನ್ನು ಕೊಟ್ಟನು. ಆದರೆ ಅವನು ಅವರೊಂದಿಗೆ ಮಲಗಿಕೊಳ್ಳಲಿಲ್ಲ. ಅವರು ಸಾಯುವವರೆಗೆ ವಿಧವೆಯರಂತಿದ್ದರು.
4 ರಾಜನು ಅಮಾಸನಿಗೆ, “ಯೆಹೂದದ ಜನರು ನನ್ನನ್ನು ಮೂರು ದಿನಗಳಲ್ಲಿ ನೋಡುವಂತೆ ಅವರಿಗೆ ತಿಳಿಸು. ನೀನು ಸಹ ಇಲ್ಲಿಯೇ ಇರು” ಎಂದು ಹೇಳಿದನು.
5 ಆಗ ಅಮಾಸನು ಯೆಹೂದದ ಜನರನ್ನು ಒಟ್ಟಾಗಿ ಕರೆಯಲು ಹೋದನು; ಆದರೆ ನೇಮಕವಾದ ಸಮಯಕ್ಕೆ ಬರದೆ ತಡಮಾಡಿದನು.
ಶೆಬನನ್ನು ಕೊಲ್ಲುವಂತೆ ಅಬೀಷೈಯನಿಗೆ ದಾವೀದನು ಹೇಳಿದ್ದು
6 ದಾವೀದನು ಅಬೀಷೈಯನಿಗೆ, “ಬಿಕ್ರೀಯ ಮಗನಾದ ಶೆಬನು ಅಬ್ಷಾಲೋಮನಿಗಿಂತ ನಮಗೆ ಹೆಚ್ಚು ಅಪಾಯಕಾರಿಯಾಗಿದ್ದಾನೆ. ಆದ್ದರಿಂದ ನನ್ನ ಸೇವಕರನ್ನು ಕರೆದುಕೊಂಡು, ಶೆಬನನ್ನು ಅಟ್ಟಿಸಿಕೊಂಡು ಹೋಗು. ಶೆಬನು ಕೋಟೆಗಳಿರುವ ನಗರಗಳಲ್ಲಿ ಸೇರಿಕೊಳ್ಳುವುದಕ್ಕಿಂತ ಮುಂಚೆಯೇ ತ್ವರಿತವಾಗಿ ಹೋಗು. ಶೆಬನು ಕೋಟೆಗಳಿರುವ ನಗರಗಳಲ್ಲಿ ಸೇರಿಕೊಂಡರೆ, ಅವನು ನಮ್ಮಿಂದ ತಪ್ಪಿಸಿಕೊಂಡು ಬಿಡುತ್ತಾನೆ” ಎಂದು ಹೇಳಿದನು.
7 ಆದ್ದರಿಂದ ಯೋವಾಬನು ಕೆರೇತ್ಯರ ಪೆಲೇತ್ಯರ ಮತ್ತು ಸೈನಿಕರೆಲ್ಲರ ಸಮೇತವಾಗಿ ಜೆರುಸಲೇಮಿನಿಂದ ಹೊರಟು ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋದರು.
ಯೋವಾಬನು ಅಮಾಸನನ್ನು ಕೊಂದದ್ದು
8 ಯೋವಾಬನು ತನ್ನ ಸೈನ್ಯದೊಂದಿಗೆ ಗಿಬ್ಯೋನಿನಲ್ಲಿದ್ದ “ದೊಡ್ಡ ಕಲ್ಲಿನ” ಬಳಿಗೆ ಬಂದಾಗ, ಅಮಾಸನು ಅವರನ್ನು ಸಂಧಿಸಲು ಬಂದನು. ಯೋವಾಬನು ತನ್ನ ಸಮವಸ್ತ್ರಗಳನ್ನು ಧರಿಸಿದ್ದನು. ಸೊಂಟಪಟ್ಟಿಯನ್ನು ಕಟ್ಟಿಕೊಂಡಿದ್ದನು. ಅವನ ಖಡ್ಗವು ಒರೆಯಲ್ಲಿತ್ತು. ಅವನು ಅಮಾಸನನ್ನು ಸಂಧಿಸಲು ಮುಂದೆ ಸಾಗಿದಾಗ, ಅವನ ಖಡ್ಗವು ಒರೆಯಿಂದ ಹೊರಗೆ ಬಿದ್ದಿತು. ಯೋವಾಬನು ಖಡ್ಗವನ್ನು ಎತ್ತಿಕೊಂಡು ಅದನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡನು. 9 ಅವನು ಅಮಾಸನನ್ನು, “ಸೋದರನೇ, ನೀವೆಲ್ಲ ಕ್ಷೇಮವೇ?” ಎಂದು ಕೇಳಿದನು. ಯೋವಾಬನು ಅಮಾಸನಿಗೆ ಮುದ್ದಿಡಲು ಅವನ ಗಡ್ಡವನ್ನು ಬಲಗೈಯಲ್ಲಿ ಹಿಡಿದನು. 10 ಅವನ ಕೈಯಲ್ಲಿದ್ದ ಖಡ್ಗವನ್ನು ಅಮಾಸನು ಗಮನಿಸಲಿಲ್ಲ. ಅಮಾಸನ ಹೊಟ್ಟೆಯಲ್ಲಿದ್ದದ್ದೆಲ್ಲ ಹೊರಚೆಲ್ಲಿ ನೆಲದ ಮೇಲೆ ಬೀಳುವಂತೆ ಯೋವಾಬನು ಅವನ ಹೊಟ್ಟೆಗೆ ಖಡ್ಗದಿಂದ ತಿವಿದನು. ಅಮಾಸನು ಆಗಲೇ ಸತ್ತದ್ದರಿಂದ ಯೋವಾಬನು ಮತ್ತೆ ತಿವಿಯಲಿಲ್ಲ.
ದಾವೀದನ ಜನರು ಶೆಬನನ್ನು ಹುಡುಕತೊಡಗಿದ್ದು
ನಂತರ ಯೋವಾಬನು ತನ್ನ ಸೋದರನಾದ ಅಬೀಷೈಯನೊಂದಿಗೆ ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋದನು. 11 ಯೋವಾಬನ ಯುವಸೈನಿಕರಲ್ಲಿ ಒಬ್ಬನು ಅಮಾಸನ ದೇಹದ ಹತ್ತಿರ ನಿಂತುಕೊಂಡು, “ಯೋವಾಬನನ್ನು ಮತ್ತು ದಾವೀದನನ್ನು ಬೆಂಬಲಿಸುವ ಪ್ರತಿಯೊಬ್ಬರೂ ಯೋವಾಬನನ್ನು ಹಿಂಬಾಲಿಸಲೇಬೇಕು. ಶೆಬನನ್ನು ಅಟ್ಟಿಸಿಕೊಂಡು ಹೋಗಲು ಅವನಿಗೆ ಸಹಾಯಮಾಡಿ” ಎಂದು ಹೇಳಿದನು.
12 ಅಮಾಸನು ರಸ್ತೆಯ ಮಧ್ಯದಲ್ಲಿ ತನ್ನ ರಕ್ತದಲ್ಲಿಯೇ ಬಿದ್ದಿದ್ದನು. ಅವನ ದೇಹವನ್ನು ನೋಡಲು ಜನರೆಲ್ಲರೂ ನಿಲ್ಲುತ್ತಿದ್ದರು. ಆದ್ದರಿಂದ ಆ ಯುವಕನು ಅಮಾಸನ ದೇಹವನ್ನು ರಸ್ತೆಯಿಂದ ಎತ್ತಿ ಹೊಲದಲ್ಲಿಟ್ಟನು. ನಂತರ ಅವನು ಅಮಾಸನ ದೇಹದ ಮೇಲೆ ಒಂದು ವಸ್ತ್ರವನ್ನು ಹೊದಿಸಿದನು. 13 ಅಮಾಸನ ದೇಹವನ್ನು ರಸ್ತೆಯಿಂದ ಎತ್ತಿಕೊಂಡು ಹೋದ ಮೇಲೆ ಜನರೆಲ್ಲರೂ ಯೋವಾಬನನ್ನು ಹಿಂಬಾಲಿಸಿದರು. ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋಗಲು ಅವರು ಯೋವಾಬನೊಂದಿಗೆ ಹೋದರು.
ಶೆಬನು ತಪ್ಪಿಸಿಕೊಂಡು ಆಬೇಲ್ಬೇತ್ಮಾಕಾಗೆ ಹೋದದ್ದು
14 ಬಿಕ್ರೀಯ ಮಗನಾದ ಶೆಬನು ಇಸ್ರೇಲಿನ ಎಲ್ಲಾ ಕುಲಗಳ ಮೂಲಕ ಸಂಚರಿಸುತ್ತಾ ಆಬೇಲ್ಬೇತ್ಮಾಕಾ ಎಂಬಲ್ಲಿಗೆ ಹೋದನು. ಬೇರಿಯ ಕುಲದವರೆಲ್ಲರೂ ಒಟ್ಟಿಗೆ ಸೇರಿಕೊಂಡು ಶೆಬನನ್ನು ಹಿಂಬಾಲಿಸಿದರು.
15 ಯೋವಾಬನು ತನ್ನ ಜನರೊಂದಿಗೆ ಆಬೇಲ್ಬೇತ್ಮಾಕಾ ಊರಿಗೆ ಬಂದನು. ಯೋವಾಬನ ಸೈನ್ಯವು ಪಟ್ಟಣವನ್ನು ಸುತ್ತುಗಟ್ಟಿತು. ಅವರು ನಗರದ ಗೋಡೆಯ ಹತ್ತಿರ ಮಣ್ಣಿನ ದಿಬ್ಬವನ್ನು ಮಾಡಿ ಗೋಡೆಯನ್ನು ಸಮೀಪಿಸಿದರು; ನಂತರ ಆ ಗೋಡೆಯನ್ನು ಬೀಳಿಸುವುದಕ್ಕಾಗಿ ಅದನ್ನು ಹೊಡೆಯಲಾಂಭಿಸಿದರು.
16 ಆ ನಗರದ ಬುದ್ಧಿವಂತೆ ಸ್ತ್ರೀಯೊಬ್ಬಳು ಪಟ್ಟಣದೊಳಗಿಂದ ಜೋರಾಗಿ ಕೂಗುತ್ತಾ, “ನನ್ನ ಮಾತನ್ನು ಕೇಳಿ. ಯೋವಾಬನನ್ನು ಇಲ್ಲಿಗೆ ಬರಲು ಹೇಳಿ. ನಾನು ಅವನ ಜೊತೆಯಲ್ಲಿ ಮಾತಾಡಬೇಕಾಗಿದೆ” ಎಂದು ಹೇಳಿದಳು.
17 ಯೋವಾಬನು ಆ ಸ್ತ್ರೀಯೊಂದಿಗೆ ಮಾತಾಡಲು ಹತ್ತಿರಕ್ಕೆ ಬಂದನು. ಅವಳು, “ನೀನು ಯೋವಾಬನೇ?” ಎಂದು ಕೇಳಿದಳು.
“ಹೌದು, ನಾನೇ ಯೋವಾಬನು” ಎಂದು ಅವನು ಉತ್ತರಿಸಿದನು.
ಆಗ ಅವಳು ಯೋವಾಬಿಗೆ, “ನಾನು ಹೇಳುವುದನ್ನು ಕೇಳು” ಎಂದಳು.
“ಆಗಲಿ, ಕೇಳುತ್ತೇನೆ” ಎಂದು ಯೋವಾಬನು ಉತ್ತರಿಸಿದನು.
18 ಆಗ ಅವಳು, “ಪೂರ್ವಕಾಲದಲ್ಲಿ ಜನರು, ‘ಅಗತ್ಯವಿದ್ದಾಗ ಆಬೇಲಿನವರ ಸಲಹೆಯನ್ನು ಕೇಳಿ, ಆಗ ನಿಮಗೆ ಸೂಕ್ತ ಸಲಹೆ ದೊರಕುತ್ತದೆ’ ಎಂದು ಹೇಳುತ್ತಿದ್ದರು. 19 ನಮ್ಮ ಪಟ್ಟಣವು ಇಸ್ರೇಲರಲ್ಲಿ ಶಾಂತಿಯಿಂದಲೂ ರಾಜನಿಷ್ಠೆಯಿಂದಲೂ ಇದೆ. ಈ ಕಾರಣದಿಂದ ಈ ಪಟ್ಟಣವು ಇಸ್ರೇಲ್ ಪಟ್ಟಣಗಳಲ್ಲಿ ತಾಯಿ ಎನಿಸಿಕೊಂಡಿದೆ. ಇಂಥ ಪಟ್ಟಣವನ್ನು ನೀನು ನಾಶಮಾಡುವುದು ಸರಿಯೋ?” ಎಂದು ಕೇಳಿದಳು.
20 ಅದಕ್ಕೆ ಯೋವಾಬನು, “ಇಲ್ಲ, ಇಲ್ಲ! ನಾನು ಏನನ್ನೂ ನಾಶಪಡಿಸಲು ಇಚ್ಛಿಸಿಲ್ಲ. ನಿಮ್ಮ ಪಟ್ಟಣವನ್ನು ನಾಶಪಡಿಸಲು ನಾನು ಬಂದಿಲ್ಲ. 21 ಆದರೆ ಎಫ್ರಾಯೀಮ್ ಬೆಟ್ಟಪ್ರದೇಶದ ಒಬ್ಬ ಮನುಷ್ಯನಿದ್ದಾನೆ ಅವನನ್ನು ಶೆಬ ಎನ್ನುತ್ತಾರೆ. ಅವನು ಬಿಕ್ರೀಯನ ಮಗನು. ಅವನು ರಾಜನಾದ ದಾವೀದನ ವಿರುದ್ಧ ದಂಗೆ ಎದ್ದಿದ್ದಾನೆ. ನೀನು ಅವನನ್ನು ನನ್ನ ಬಳಿಗೆ ತಂದು ಒಪ್ಪಿಸಿದರೆ, ನಾನು ಈ ನಗರವನ್ನು ಬಿಟ್ಟುಹೋಗುತ್ತೇನೆ” ಎಂದು ಉತ್ತರಿಸಿದನು.
ಅವಳು ಯೋವಾಬನಿಗೆ, “ಸರಿ, ಅವನ ತಲೆಯನ್ನು ಗೋಡೆಯ ಮೇಲಿನಿಂದ ನಿನ್ನ ಕಡೆಗೆ ಎಸೆಯಲಾಗುವುದು” ಎಂದು ಹೇಳಿದಳು.
22 ನಂತರ ಅವಳು ನಗರದ ಎಲ್ಲ ಜನರೊಂದಿಗೆ ಬಹಳ ಜಾಣತನದಿಂದ ಮಾತನಾಡಿದಳು. ಆಗ ಜನರು ಬಿಕ್ರೀಯ ಮಗನಾದ ಶೆಬನ ತಲೆಯನ್ನು ಕತ್ತರಿಸಿಹಾಕಿ ಅದನ್ನು ನಗರದ ಗೋಡೆಯಿಂದಾಚೆಗೆ ಯೋವಾಬನ ಕಡೆಗೆ ಎಸೆದರು.
ಆ ಕೂಡಲೇ ಯೋವಾಬನು ತುತ್ತೂರಿಯನ್ನು ಊದಿಸಿದನು. ಸೈನ್ಯವು ನಗರವನ್ನು ಬಿಟ್ಟುಹೋಯಿತು. ಪ್ರತಿಯೊಬ್ಬರೂ ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು. ಯೋವಾಬನು ಜೆರುಸಲೇಮಿನಲ್ಲಿದ್ದ ರಾಜನ ಬಳಿಗೆ ಹಿಂದಿರುಗಿ ಹೋದನು.
ದಾವೀದನ ಆಸ್ಥಾನದಲ್ಲಿದ್ದ ಜನರು
23 ಯೋವಾಬನು ಇಸ್ರೇಲಿನ ಸೈನ್ಯಕ್ಕೆಲ್ಲ ಮುಖ್ಯ ಸೇನಾಪತಿಯಾಗಿದ್ದನು. ಕೆರೇತ್ಯರಿಗೆ ಮತ್ತು ಪೆಲೇತ್ಯರಿಗೆ ಯೆಹೋಯಾದಾವನ ಮಗನಾದ ಬೆನಾಯನು ಅಧಿಪತಿಯಾಗಿದ್ದನು. 24 ಅದೋರಾಮನು ಬಿಟ್ಟೀಕೆಲಸ ಮಾಡುವವರ ಮೇಲಾಧಿಕಾರಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಇತಿಹಾಸಕಾರನಾಗಿದ್ದನು. 25 ಶೆವನು ಕಾರ್ಯದರ್ಶಿಯಾಗಿದ್ದನು. ಚಾದೋಕ್ ಮತ್ತು ಎಬ್ಯಾತಾರರು ಯಾಜಕರಾಗಿದ್ದರು. 26 ಯಾಯೀರಿನವನಾದ ಈರನು ದಾವೀದನ ಮುಖ್ಯ ಸೇವಕನಾಗಿದ್ದನು.[c]
ಸೌಲನ ಕುಟುಂಬಕ್ಕಾದ ದಂಡನೆ
21 ದಾವೀದನ ಕಾಲದಲ್ಲಿ ಒಮ್ಮೆ ಮೂರು ವರ್ಷಗಳವರೆಗೆ ಬರಗಾಲವಿತ್ತು. ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿದನು. ಆಗ ಯೆಹೋವನು, “ಸೌಲನು ಮತ್ತು ಕೊಲೆಗಾರರಾದ ಅವನ ಕುಟುಂಬದವರು ಈ ಬರಗಾಲಕ್ಕೆ ಕಾರಣ. ಸೌಲನು ಗಿಬ್ಯೋನ್ಯರನ್ನು ಕೊಂದದ್ದರಿಂದ ಈಗಿನ ಬರಗಾಲವು ಬಂದಿದೆ” ಎಂದು ಹೇಳಿದನು. 2 (ಗಿಬ್ಯೋನ್ಯರು ಇಸ್ರೇಲರಲ್ಲ, ಅವರು ಇನ್ನೂ ಜೀವಂತವಾಗಿ ಉಳಿದಿರುವ ಅಮೋರಿಯರ ಕುಟುಂಬದವರು. ಗಿಬ್ಯೋನ್ಯರನ್ನು ಹಿಂಸಿಸುವುದಿಲ್ಲವೆಂದು ಇಸ್ರೇಲರು ಪ್ರಮಾಣ ಮಾಡಿದ್ದರು. ಆದರೆ ಸೌಲನು ಇಸ್ರೇಲಿನ ಮತ್ತು ಯೆಹೂದದ ಜನರ ಮೇಲೆ ಹೆಚ್ಚಿನ ಅಭಿಮಾನವನ್ನಿಟ್ಟಿದ್ದನು. ಆದ್ದರಿಂದ ಅವನು ಗಿಬ್ಯೋನ್ಯರನ್ನು ಕೊಲ್ಲಲು ಪ್ರಯತ್ನಿಸಿದನು.)
ರಾಜನಾದ ದಾವೀದನು ಗಿಬ್ಯೋನ್ಯರನ್ನು ಒಟ್ಟಾಗಿ ಕರೆದು ಅವರೊಂದಿಗೆ ಮಾತನಾಡಿದನು. 3 ದಾವೀದನು ಗಿಬ್ಯೋನ್ಯರಿಗೆ, “ನಾನು ನಿಮಗೆ ಏನು ಮಾಡಲಿ? ಇಸ್ರೇಲಿನ ಪಾಪವನ್ನು ತೆಗೆದುಹಾಕಲು, ಯೆಹೋವನ ಜನರನ್ನು ನೀವು ಹರಸಲು, ನಾನು ನಿಮಗೆ ಏನು ಮಾಡಬೇಕು?” ಎಂದು ಕೇಳಿದನು.
4 ಗಿಬ್ಯೋನ್ಯರು ದಾವೀದನಿಗೆ, “ಸೌಲನ ಬೆಳ್ಳಿಬಂಗಾರವಾಗಲಿ ಅವನ ಮನೆಯಾಗಲಿ ನಮಗೆ ಬೇಕಾಗಿಲ್ಲ ಮತ್ತು ಇಸ್ರೇಲಿನ ಯಾವ ವ್ಯಕ್ತಿಯನ್ನೂ ಕೊಲ್ಲಲು ನಮಗೆ ಹಕ್ಕಿಲ್ಲ” ಎಂದು ಹೇಳಿದರು.
ದಾವೀದನು, “ಆದರೆ ನಿಮಗಾಗಿ ನಾನು ಏನು ಮಾಡಲಿ?” ಎಂದನು.
5 ಗಿಬ್ಯೋನ್ಯರು ರಾಜನಾದ ದಾವೀದನಿಗೆ, “ಸೌಲನು ನಮ್ಮ ವಿರುದ್ಧ ಯೋಜಿಸಿ ಇಸ್ರೇಲಿನ ದೇಶದಲ್ಲಿ ಉಳಿದಿದ್ದ ನಮ್ಮ ಜನರನ್ನೆಲ್ಲ ನಾಶಪಡಿಸಲು ಪ್ರಯತ್ನಿಸಿದನು. 6 ಅವನ ಏಳು ಮಂದಿ ಗಂಡುಮಕ್ಕಳನ್ನು ನಮ್ಮ ಬಳಿಗೆ ಕಳುಹಿಸು. ಸೌಲನು ವಾಸವಾಗಿದ್ದ ಗಿಬೆಯ ಬೆಟ್ಟದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕುತ್ತೇವೆ” ಎಂದು ಹೇಳಿದರು.
ರಾಜನಾದ ದಾವೀದನು, “ಆ ಗಂಡುಮಕ್ಕಳನ್ನು ನಾನು ನಿಮಗೆ ಒಪ್ಪಿಸುತ್ತೇನೆ” ಎಂದು ಹೇಳಿದನು. 7 ಆದರೆ ಯೋನಾತಾನನ ಮಗನಾದ ಮೆಫೀಬೋಶೆತನನ್ನು ರಾಜನು ರಕ್ಷಿಸಿದನು. (ಯೋನಾತಾನನು ಸೌಲನ ಮಗ.) ದಾವೀದನು ಯೆಹೋವನ ಹೆಸರಿನಲ್ಲಿ ಯೋನಾತಾನನಿಗೆ ವಾಗ್ದಾನ ಮಾಡಿದ್ದನು.[d] ಆದ್ದರಿಂದ ಮೆಫೀಬೋಶೆತನಿಗೆ ಅವರಿಂದ ತೊಂದರೆಯಾಗದಂತೆ ನೋಡಿಕೊಂಡನು. 8 ಆದರೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಸೌಲನ ಗಂಡುಮಕ್ಕಳಾದ ಅರ್ಮೋನ್ ಮತ್ತು ಮೆಫೀಬೋಶೆತ್ ಎಂಬ ಇಬ್ಬರು ಗಂಡುಮಕ್ಕಳನ್ನೂ ಮೆಹೋಲದ ಬರ್ಜಿಲ್ಲೈಯ ಮಗನಾದ ಅದಿಯೇಲನಿಗೆ ಸೌಲನ ಮಗಳಾದ ಮೇರಬಳಲ್ಲಿ ಹುಟ್ಟಿದ್ದ ಐದು ಮಂದಿ ಗಂಡುಮಕ್ಕಳನ್ನೂ ತೆಗೆದುಕೊಂಡು ಗಿಬ್ಯೋನ್ಯರಿಗೆ ಒಪ್ಪಿಸಿದನು. 9 ಗಿಬ್ಯೋನ್ಯರು ಈ ಏಳು ಮಂದಿ ಗಂಡುಮಕ್ಕಳನ್ನು ಗಿಬೆಯ ಬೆಟ್ಟದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕಿದರು. ಈ ಏಳು ಮಂದಿ ಒಟ್ಟಿಗೆ ಸತ್ತರು. ಅವರನ್ನು ಸುಗ್ಗಿಯ ಆರಂಭದ ದಿನಗಳಲ್ಲಿ ಕೊಲ್ಲಲಾಯಿತು. (ಬಾರ್ಲಿಯ ಸುಗ್ಗಿಯು ಆಗ ತಾನೇ ಆರಂಭವಾಗಿತ್ತು.)
ರಿಚ್ಪಳು ತನ್ನ ಮಕ್ಕಳ ದೇಹಗಳನ್ನು ಕಾಯುತ್ತಿದ್ದಳು
10 ಅಯ್ಯಾಹನ ಮಗಳಾದ ರಿಚ್ಪಳು ಶೋಕವಸ್ತ್ರವನ್ನು ಕಲ್ಲಿನ ಮೇಲೆ ಹಾಸಿದಳು. ಸುಗ್ಗಿಯ ಆರಂಭದಿಂದ, ಆ ದೇಹಗಳ ಮೇಲೆ ಮಳೆಯು ಬೀಳುವ ತನಕ, ಆಕೆ ಆ ವಸ್ತ್ರದ ಮೇಲೆ ಕುಳಿತುಕೊಂಡಳು. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಹಗಲು ಹೊತ್ತಿನಲ್ಲಿಯೂ, ಕಾಡಿನ ಪ್ರಾಣಿಗಳು ರಾತ್ರಿಯ ಹೊತ್ತಿನಲ್ಲಿಯೂ ತನ್ನ ಮಕ್ಕಳ ದೇಹಗಳನ್ನು ಮುಟ್ಟಲು ರಿಚ್ಪಳು ಅವಕಾಶಕೊಡಲಿಲ್ಲ.
11 ಅಯ್ಯಾಹನ ಮಗಳೂ ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡುತ್ತಿರುವುದನ್ನು ಜನರು ದಾವೀದನಿಗೆ ತಿಳಿಸಿದರು. 12 ಆಗ ದಾವೀದನು ಸೌಲನ ಮತ್ತು ಯೋನಾತಾನನ ಮೂಳೆಗಳನ್ನು ತರುವುದಕ್ಕೋಸ್ಕರ ಯಾಬೇಷ್‌ಗಿಲ್ಯಾದಿಗೆ ಹೋದನು. ಸೌಲ ಮತ್ತು ಯೋನಾತಾನರನ್ನು ಫಿಲಿಷ್ಟಿಯರು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವರ ಶವಗಳನ್ನು ಬೇತ್‌ಷೆಯಾನಿನ ಬೀದಿಯಲ್ಲಿ ತೂಗುಹಾಕಿದ್ದರು. ಯಾಬೇಷ್‌ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು. 13 ದಾವೀದನು ಯಾಬೇಷ್‌ಗಿಲ್ಯಾದಿನಿಂದ ಸೌಲನ ಮತ್ತು ಅವನ ಮಗನಾದ ಯೋನಾತಾನನ ಮೂಳೆಗಳನ್ನೂ ನೇತುಹಾಕಲ್ಪಟ್ಟಿದ್ದ ಸೌಲನ ಏಳು ಮಂದಿ ಮಕ್ಕಳ ದೇಹಗಳನ್ನೂ ಜನರು ಒಟ್ಟಾಗಿ ಸೇರಿಸಿದರು. 14 ಸೌಲ ಮತ್ತು ಅವನ ಮಗನಾದ ಯೋನಾತಾನರ ಮೂಳೆಗಳನ್ನು ಅವರು ಬೆನ್ಯಾಮೀನಿನ ಪ್ರದೇಶದಲ್ಲಿ ಸಮಾಧಿ ಮಾಡಿದರು. ಸೌಲನ ತಂದೆಯಾದ ಕೀಷನ ಸ್ಮಶಾನದಲ್ಲಿ ಈ ದೇಹಗಳನ್ನು ಜನರು ಸಮಾಧಿ ಮಾಡಿದರು. ರಾಜನು ಆಜ್ಞಾಪಿಸಿದ್ದನ್ನೆಲ್ಲ ಜನರು ಮಾಡಿದರು. ನಂತರ ಆ ದೇಶದ ಜನರ ಪ್ರಾರ್ಥನೆಯನ್ನು ದೇವರು ಆಲಿಸಿದನು.
ಫಿಲಿಷ್ಟಿಯರೊಡನೆ ಯುದ್ಧ
15 ಫಿಲಿಷ್ಟಿಯರು ದಾವೀದನೊಡನೆ ಮತ್ತೆ ಯುದ್ಧವನ್ನು ಮಾಡಿದರು. ದಾವೀದನು ತನ್ನ ಜನರೊಂದಿಗೆ ಫಿಲಿಷ್ಟಿಯರ ವಿರುದ್ಧ ಹೋರಾಡಲು ಹೋದನು. ಆದರೆ ದಾವೀದನು ಆಯಾಸಗೊಂಡು ಬಲಹೀನನಾದನು. 16 ಇಷ್ಬೀಬೆನೋಬನು ಒಬ್ಬ ರಾಕ್ಷಸನ ಮಗ. ಅವನ ಬರ್ಜಿಯು ಏಳುವರೆ ಪೌಂಡುಗಳಷ್ಟು ತೂಕವಿತ್ತು. ಅವನು ಹೊಸ ಖಡ್ಗವನ್ನು ಹೊಂದಿದ್ದನು. ಅವನು ದಾವೀದನನ್ನು ಕೊಲ್ಲುವುದಕ್ಕಿದ್ದನು. 17 ಆದರೆ ಚೆರೂಯಳ ಮಗನಾದ ಅಬೀಷೈ ಆ ಫಿಲಿಷ್ಟಿಯನನ್ನು ಕೊಂದು ದಾವೀದನನ್ನು ರಕ್ಷಿಸಿದನು.
ಆಗ ದಾವೀದನ ಜನರು ಅವನಿಂದ ವಿಶೇಷ ಪ್ರಮಾಣವನ್ನು ಮಾಡಿಸಿದರು. ಅವರು ಅವನಿಗೆ, “ನೀನು ನಮ್ಮೊಂದಿಗೆ ಇನ್ನು ಮೇಲೆ ಯುದ್ಧಕ್ಕೆ ಬರಬಾರದು. ನೀನು ಯುದ್ಧಕ್ಕೆ ಹೋಗಿ ಕೊಲ್ಲಲ್ಪಟ್ಟರೆ, ಇಸ್ರೇಲಿನ ಅತ್ಯಂತ ಮಹಾಪುರುಷನನ್ನು ಕಳೆದುಕೊಂಡಂತಾಗುತ್ತದೆ” ಎಂದು ಹೇಳಿದರು.
18 ತರುವಾಯ, ಫಿಲಿಷ್ಟಿಯರೊಡನೆ ಮತ್ತೊಂದು ಯುದ್ಧವು ಗೋಬ್ ಎಂಬ ಸ್ಥಳದಲ್ಲಿ ನಡೆಯಿತು. ಹುಷಾದ ಸಿಬ್ಬೆಕೈ ಎನ್ನುವವನು ರೆಫಾಯನಾದ ಸಫ್ ಎಂಬವನನ್ನು ಕೊಂದನು.
19 ಆಗ ಗೋಬ್ ಎಂಬ ಸ್ಥಳದಲ್ಲಿ ಫಿಲಿಷ್ಟಿಯರೊಡನೆ ಮತ್ತೊಂದು ಯುದ್ಧವು ಆರಂಭವಾಯಿತು. ಯಾರೇಯೋರೆಗೀವ್ ಎಂಬವನು ಬೆನ್ಯಾಮೀನ್ ಕುಲದವನೂ ಬೆತ್ಲೆಹೇಮಿನವನೂ ಆಗಿದ್ದನು. ಇವನ ಮಗನಾದ ಎಲ್ಹಾನಾನನು ಗಿತ್ತಿಯನಾದ ಗೊಲ್ಯಾತನನ್ನು ಕೊಂದನು. ಗೊಲ್ಯಾತನ ಭರ್ಜಿಯು ನೇಕಾರನ ಕುಂಟೆಯಷ್ಟು ಗಾತ್ರವಿತ್ತು.
20 ಗತ್‌ನಲ್ಲಿ ಮತ್ತೆ ಯುದ್ಧವು ನಡೆಯಿತು. ಅಲ್ಲಿ ಬಹಳ ಎತ್ತರವಾದ ಮನುಷ್ಯನಿದ್ದನು. ಈ ಮನುಷ್ಯನ ಪ್ರತಿಯೊಂದು ಕೈಯಲ್ಲಿ ಆರು ಬೆರಳುಗಳೂ ಪಾದಗಳಲ್ಲಿ ಆರು ಬೆರಳುಗಳೂ ಇದ್ದವು. (ಅವನಿಗೆ ಒಟ್ಟು ಇಪ್ಪತ್ತನಾಲ್ಕು ಬೆರಳುಗಳಿದ್ದವು.) ಇವನು ಸಹ ರೆಫಾಯರಲ್ಲಿ ಒಬ್ಬನಾಗಿದ್ದನು. 21 ಈ ಮನುಷ್ಯನು ಇಸ್ರೇಲನ್ನು ಪ್ರತಿಭಟಿಸಿದನು. ಆದರೆ ಇವನನ್ನು ಯೋನಾತಾನನು ಕೊಂದನು. (ಯೋನಾತಾನನು ದಾವೀದನ ಸೋದರನಾದ ಶಿಮೆಯಾನನ ಮಗ.)
22 ಈ ನಾಲ್ಕು ಜನರು ಗತ್ ಊರಿನ ರೆಫಾಯರು. ಅವರೆಲ್ಲರೂ ದಾವೀದನಿಂದ ಮತ್ತು ಅವನ ಜನರಿಂದ ಕೊಲ್ಲಲ್ಪಟ್ಟರು.
Kannada Holy Bible: Easy-to-Read Version. All rights reserved. © 1997 Bible League International