Beginning
ಚೀಬನು ದಾವೀದನನ್ನು ಭೇಟಿ ಮಾಡುವನು
16 ದಾವೀದನು ಆಲೀವ್ ಬೆಟ್ಟದ ಮೇಲೆ ಸ್ವಲ್ಪ ದೂರ ಬಂದನು. ಅಲ್ಲಿ ಮೆಫೀಬೋಶೆತನ ಸೇವಕನಾದ ಚೀಬನು ದಾವೀದನನ್ನು ಸಂಧಿಸಿದನು. ಚೀಬನ ಹತ್ತಿರ ತಡಿಹಾಕಲ್ಪಟ್ಟ ಎರಡು ಹೇಸರಕತ್ತೆಗಳಿದ್ದವು. ಆ ಹೇಸರಕತ್ತೆಗಳ ಮೇಲೆ ಇನ್ನೂರು ರೊಟ್ಟಿಗಳು, ಒಂದುನೂರು ಗೊಂಚಲು ಒಣದ್ರಾಕ್ಷಿ, ಒಂದುನೂರು ಹಣ್ಣುಗಳು ಮತ್ತು ದ್ರಾಕ್ಷಾರಸದ ಒಂದು ಚೀಲ ಇದ್ದವು. 2 ರಾಜನಾದ ದಾವೀದನು ಚೀಬನಿಗೆ, “ಈ ವಸ್ತುಗಳೆಲ್ಲ ಏತಕ್ಕಾಗಿ?” ಎಂದು ಕೇಳಿದನು.
ಚೀಬನು, “ಹೇಸರಕತ್ತೆಗಳನ್ನು ರಾಜನ ಕುಟುಂಬದವರು ಸವಾರಿ ಮಾಡುವುದಕ್ಕಾಗಿಯೂ ರೊಟ್ಟಿಗಳನ್ನು ಮತ್ತು ಹಣ್ಣುಗಳನ್ನು ಸೇವಕರು ತಿನ್ನುವುದಕ್ಕಾಗಿಯೂ ತಂದಿದ್ದೇನೆ. ಅರಣ್ಯದಲ್ಲಿ ಶಕ್ತಿಗುಂದಿಹೋದವನು ದ್ರಾಕ್ಷಾರಸವನ್ನು ಕುಡಿಯಲಿ” ಎಂದು ಉತ್ತರಿಸಿದನು.
3 ರಾಜನು, “ಮೆಫೀಬೋಶೆತನು ಎಲ್ಲಿ?” ಎಂದು ಕೇಳಿದನು.
ಚೀಬನು ರಾಜನಿಗೆ, “ಮೆಫೀಬೋಶೆತನು ಜೆರುಸಲೇಮಿನಲ್ಲಿಯೇ ಇದ್ದಾನೆ. ಯಾಕೆಂದರೆ ‘ಇಸ್ರೇಲರು ನನ್ನ ತಾತನ ರಾಜ್ಯಾಧಿಕಾರವನ್ನು ಈ ದಿನ ನನಗೆ ಹಿಂದಕ್ಕೆ ಕೊಡುತ್ತಾರೆ’ ಎಂಬುದು ಅವನ ಆಲೋಚನೆಯಾಗಿದೆ” ಎಂದನು.
4 ಆಗ ರಾಜನು, “ಆದ್ದರಿಂದ ಮೆಫೀಬೋಶೆತನಿಗೆ ಸೇರಿರುವುದೆಲ್ಲವನ್ನೂ ಈಗ ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
ಚೀಬನು, “ನಾನು ನಿನಗೆ ಸಾಷ್ಟಾಂಗನಮಸ್ಕಾರ ಮಾಡುತ್ತೇನೆ; ಒಡೆಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ” ಎಂದನು.
ಶಿಮ್ಮಿಯು ದಾವೀದನನ್ನು ಶಪಿಸುವನು
5 ದಾವೀದನು ಬಹುರೀಮಿಗೆ ಬಂದನು. ಸೌಲನ ಕುಟುಂಬಕ್ಕೆ ಸೇರಿದ ಗೇರನ ಮಗನಾದ ಶಿಮ್ಮಿಯು ದಾವೀದನನ್ನು ಶಪಿಸುತ್ತಾ ಬಹುರೀಮಿನಿಂದ ಹೊರಗೆ ಬಂದನು.
6 ದಾವೀದನ ಮತ್ತು ಅವನ ಸೇವಕರ ಮೇಲೆ ಶಿಮ್ಮಿಯು ಕಲ್ಲುಗಳನ್ನು ಎಸೆಯಲಾರಂಭಿಸಿದನು. ಆದರೆ ದಾವೀದನ ಸುತ್ತಲೂ ಜನರು ಮತ್ತು ಸೇವಕರು ಒಟ್ಟುಗೂಡಿದರು. 7 ಶಿಮ್ಮಿಯು ದಾವೀದನನ್ನು ಶಪಿಸುತ್ತಾ “ತೊಲಗಿಹೋಗು! ನೀನು ಕೊಲೆಗಾರ! ನೀನು ದುಷ್ಟ! 8 ಯೆಹೋವನು ನಿನ್ನನ್ನು ದಂಡಿಸುತ್ತಿದ್ದಾನೆ. ಏಕೆಂದರೆ ನೀನು ಸೌಲನ ಕುಟುಂಬದವರನ್ನು ಕೊಂದು ಸೌಲನ ರಾಜಪದವಿಯನ್ನು ಕದ್ದಿರುವೆ. ಈಗ ನಿನಗೂ ಅದೇ ಸಂಭವಿಸುತ್ತಿದೆ. ಯೆಹೋವನು ರಾಜ್ಯಾಧಿಕಾರವನ್ನು ನಿನ್ನ ಮಗನಿಗೆ ಕೊಟ್ಟಿದ್ದಾನೆ. ಏಕೆಂದರೆ ನೀನೊಬ್ಬ ಕೊಲೆಗಾರ” ಎಂದನು.
9 ಚೆರೂಯಳ ಮಗನಾದ ಅಬೀಷೈಯು ರಾಜನಿಗೆ “ನನ್ನ ರಾಜನಾದ ಪ್ರಭುವೇ, ಈ ಸತ್ತನಾಯಿಯು ನಿನ್ನನ್ನು ಶಪಿಸುವುದೇಕೆ? ಶಿಮ್ಮಿಯ ತಲೆಯನ್ನು ಕತ್ತರಿಸಿಹಾಕುತ್ತೇನೆ, ನನಗೆ ಅಪ್ಪಣೆಕೊಡು” ಎಂದನು.
10 ಆದರೆ ರಾಜನು, “ಚೆರೂಯಳ ಗಂಡುಮಕ್ಕಳೇ, ಈಗ ನಾನೇನು ಮಾಡಲಿ? ಶಿಮ್ಮಿಯು ನನ್ನನ್ನು ಶಪಿಸುತ್ತಿರುವುದು ನಿಜ. ಆದರೆ ನನ್ನನ್ನು ಶಪಿಸಲು ಯೆಹೋವನೇ ಅವನಿಗೆ ಹೇಳಿದ್ದಾನೆ” ಎಂದನು. 11 ದಾವೀದನು ಅಬೀಷೈಗೆ ಮತ್ತು ತನ್ನ ಎಲ್ಲಾ ಸೇವಕರಿಗೆ, “ನೋಡಿ, ನನ್ನ ಸ್ವಂತ ಮಗನೇ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ. ಬೆನ್ಯಾಮೀನ್ ಕುಲದ ಇವನು ನನ್ನನ್ನು ಶಪಿಸುವುದು ಯಾವ ದೊಡ್ಡ ಮಾತು; ಅವನು ನನ್ನನ್ನು ಶಪಿಸುತ್ತಲೇ ಇರಲಿ. ಹೀಗೆ ಮಾಡುವಂತೆ ಯೆಹೋವನೇ ಅವನಿಗೆ ತಿಳಿಸಿದ್ದಾನೆ. 12 ಯೆಹೋವನು ನನಗುಂಟಾಗುತ್ತಿರುವ ಕೇಡುಗಳನ್ನು ನೋಡಿ ಶಿಮ್ಮಿಯ ಶಾಪಕ್ಕೆ ಬದಲಾಗಿ ಶುಭವನ್ನು ಅನುಗ್ರಹಿಸಬಹುದೇನೋ” ಎಂದನು.
13 ಆದ್ದರಿಂದ ದಾವೀದನು ತನ್ನ ಜನರೊಂದಿಗೆ ಮುಂದೆ ಸಾಗಿದನು. ಆದರೆ ಶಿಮ್ಮಿಯು ದಾವೀದನನ್ನು ಹಿಂಬಾಲಿಸುತ್ತಲೇ ಇದ್ದನು. ಬೆಟ್ಟದ ಪಕ್ಕದ ರಸ್ತೆಯ ಅಂಚಿನಲ್ಲಿ ಶಿಮ್ಮಿಯು ನಡೆಯುತ್ತಾ ದಾವೀದನನ್ನು ಶಪಿಸುತ್ತಲೇ ಇದ್ದನು. ಶಿಮ್ಮಿಯು ಕಲ್ಲುಗಳನ್ನು ಮತ್ತು ಧೂಳನ್ನು ಸಹ ದಾವೀದನತ್ತ ಎಸೆದನು.
14 ರಾಜನಾದ ದಾವೀದನು ಮತ್ತು ಅವನ ಜನರೆಲ್ಲರೂ ಬಹುರೀಮಿಗೆ ಬಂದರು. ರಾಜನು ಮತ್ತು ಅವನ ಜನರು ಆಯಾಸಗೊಂಡಿದ್ದರಿಂದ ಅವರು ಬಹುರೀಮಿನಲ್ಲಿ ವಿಶ್ರಾಂತಿ ಪಡೆದರು.
15 ಅಬ್ಷಾಲೋಮನು, ಅಹೀತೋಫೆಲನು ಮತ್ತು ಇಸ್ರೇಲಿನ ಜನರೆಲ್ಲ ಜೆರುಸಲೇಮಿಗೆ ಬಂದರು. 16 ದಾವೀದನ ಸ್ನೇಹಿತನೂ ಅರ್ಕೀಯನೂ ಆದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದನು. ಹೂಷೈಯು, “ರಾಜನು ಚಿರಾಯುವಾಗಿರಲಿ, ರಾಜನು ಚಿರಾಯುವಾಗಿರಲಿ” ಎಂದು ಅಬ್ಷಾಲೋಮನಿಗೆ ಹೇಳಿದನು.
17 ಅಬ್ಷಾಲೋಮನು, “ನಿನ್ನ ಸ್ನೇಹಿತನಾದ ದಾವೀದನಿಗೆ ನೀನೇಕೆ ನಂಬಿಗಸ್ತನಾಗಿಲ್ಲ? ನಿನ್ನ ಸ್ನೇಹಿತನೊಡನೆ ನೀನು ಜೆರುಸಲೇಮಿನಿಂದ ಯಾಕೆ ಹೋಗಲಿಲ್ಲ” ಎಂದು ಕೇಳಿದನು.
18 ಹೂಷೈಯು, “ಯೆಹೋವನು ಆರಿಸಿಕೊಂಡ ವ್ಯಕ್ತಿಗೆ ನಾನು ಸೇರಿದವನು. ಈ ಜನರು ಮತ್ತು ಇಸ್ರೇಲಿನ ಜನರು ನಿನ್ನನ್ನು ಆರಿಸಿದ್ದಾರೆ. ನಾನು ನಿನ್ನೊಡನೆ ನೆಲೆಸುತ್ತೇನೆ. 19 ಮುಂಚೆ ನಾನು ನಿನ್ನ ತಂದೆಯ ಸೇವೆ ಮಾಡಿದೆನು. ಈಗ ದಾವೀದನ ಮಗನ ಸೇವೆ ಮಾಡಬೇಕು. ನಾನು ನಿನ್ನ ಸೇವೆ ಮಾಡುತ್ತೇನೆ” ಎಂದು ಉತ್ತರಕೊಟ್ಟನು.
ಅಹೀತೋಫೆಲನ ಸಲಹೆಯನ್ನು ಅಬ್ಷಾಲೋಮನು ಕೇಳುವನು
20 ಅಬ್ಷಾಲೋಮನು, “ನಾವೇನು ಮಾಡಬೇಕೆಂಬುದನ್ನು ದಯವಿಟ್ಟು ನಮಗೆ ತಿಳಿಸು” ಎಂದು ಅಹೀತೋಫೆಲನನ್ನು ಕೇಳಿದನು.
21 ಅಹೀತೋಫೆಲನು ಅಬ್ಷಾಲೋಮನಿಗೆ, “ನಿಮ್ಮ ತಂದೆಯು, ಮನೆಯನ್ನು ಕಾಯುವುದಕ್ಕೆ ತನ್ನ ಕೆಲವು ಪತ್ನಿಯರನ್ನು[a] ಇಲ್ಲಿ ಬಿಟ್ಟುಹೋಗಿದ್ದಾನೆ. ನೀನು ಅವರೊಂದಿಗೆ ಮಲಗಿಕೋ. ನಿನ್ನ ತಂದೆಯು ನಿನ್ನನ್ನು ದ್ವೇಷಿಸುವನೆಂಬುದು ಇಸ್ರೇಲರಿಗೆಲ್ಲ ಆಗ ತಿಳಿಯುವುದು; ನಿನಗೆ ಮತ್ತಷ್ಟು ಬೆಂಬಲವನ್ನು ಕೊಡಲು ನಿನ್ನ ಜನರೆಲ್ಲರನ್ನು ಪ್ರೋತ್ಸಾಹಿಸಿದಂತಾಗುತ್ತದೆ” ಎಂದನು.
22 ಆಗ ಅವರು ಅಬ್ಷಾಲೋಮನಿಗಾಗಿ ಮನೆಯ ಮಾಳಿಗೆಯ ಮೇಲೆ ಒಂದು ಗುಡಾರವನ್ನು ಹಾಕಿದರು. ಅಬ್ಷಾಲೋಮನು ತನ್ನ ತಂದೆಯ ಪತ್ನಿಯರೊಡನೆ ಮಲಗಿಕೊಂಡನು. ಇಸ್ರೇಲರೆಲ್ಲ ಇದನ್ನು ನೋಡಿದರು. 23 ಆ ಸಮಯದಲ್ಲಿ ದಾವೀದನಿಗೆ ಮತ್ತು ಅಬ್ಷಾಲೋಮನಿಗೆ ಅಹೀತೋಫೆಲನ ಸಲಹೆಯು ಬಹಳ ಮುಖ್ಯವಾಗಿತ್ತು. ದೇವರ ವಾಕ್ಯವು ಮನುಷ್ಯನಿಗೆಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿತ್ತು.
ದಾವೀದನ ಬಗ್ಗೆ ಅಹೀತೋಫೆಲನ ಸಲಹೆ
17 ಅಹೀತೋಫೆಲನು, “ಈಗ ನಾನು ಹನ್ನೆರಡು ಸಾವಿರ ಜನರನ್ನು ಆರಿಸಿಕೊಂಡು ಈ ರಾತ್ರಿಯೇ ದಾವೀದನನ್ನು ಅಟ್ಟಿಸಿಕೊಂಡು ಹೋಗುತ್ತೇನೆ. 2 ಅವನು ಆಯಾಸದಿಂದ ಬಲಹೀನನಾದಾಗ ಅವನ ಮೇಲೆ ದಾಳಿಮಾಡಿ ಹೆದರಿಸುವೆನು; ಆಗ ಅವನ ಜನರೆಲ್ಲರೂ ಓಡಿಹೋಗುತ್ತಾರೆ. ಆದರೆ ನಾನು ರಾಜನಾದ ದಾವೀದನನ್ನು ಮಾತ್ರ ಕೊಲ್ಲುತ್ತೇನೆ. 3 ಅನಂತರ ನಾನು ಜನರೆಲ್ಲರನ್ನೂ ಹಿಂದಕ್ಕೆ ನಿನ್ನ ಬಳಿಗೆ ಕರೆತರುತ್ತೇನೆ. ದಾವೀದನು ಸತ್ತರೆ, ಜನರೆಲ್ಲರೂ ಸಮಾಧಾನದಿಂದ ಹಿಂದಕ್ಕೆ ಬರುತ್ತಾರೆ” ಎಂದು ಅಬ್ಷಾಲೋಮನಿಗೆ ಹೇಳಿದನು.
4 ಈ ಉಪಾಯವು ಅಬ್ಷಾಲೋಮನಿಗೆ ಮತ್ತು ಇಸ್ರೇಲಿನ ನಾಯಕರಿಗೆಲ್ಲ ಸರಿಯೆಂದು ಕಂಡಿತು. 5 ಆದರೆ ಅಬ್ಷಾಲೋಮನು, “ಈಗ ಅರ್ಕೀಯನಾದ ಹೂಷೈಯನನ್ನು ಕರೆಯಿರಿ. ಅವನು ಏನು ಹೇಳುತ್ತಾನೆಂಬುದನ್ನು ನಾನು ಕೇಳಬೇಕಾಗಿದೆ” ಎಂದು ಹೇಳಿದನು.
ಅಹೀತೋಫೆಲನ ಸಲಹೆಯನ್ನು ಹೂಷೈ ನಿರರ್ಥಕಗೊಳಿಸಿದ್ದು
6 ಹೂಷೈಯು ಅಬ್ಷಾಲೋಮನ ಬಳಿಗೆ ಬಂದನು. ಅಬ್ಷಾಲೋಮನು ಹೂಷೈಗೆ, “ಇದು ಅಹೀತೋಫೆಲನು ನೀಡಿದ ಉಪಾಯ. ಇದನ್ನು ನಾವು ಅನುಸರಿಸಬೇಕೇ? ಅಥವಾ ಅನುಸರಿಸಬಾರದೆ? ನಮಗೆ ತಿಳಿಸು.” ಎಂದನು.
7 ಹೂಷೈಯು ಅಬ್ಷಾಲೋಮನಿಗೆ, “ಈ ಸಮಯದಲ್ಲಿ ಅಹೀತೋಫೆಲನ ಸಲಹೆಯು ಸರಿಯಲ್ಲ” ಎಂದು ಹೇಳಿದನು. 8 ಅವನು ಮಾತನ್ನು ಮುಂದುವರಿಸಿ, “ನಿನ್ನ ತಂದೆಯು ಮತ್ತು ಅವನ ಜನರು ಶೂರರೆಂಬುದು ನಿನಗೆ ತಿಳಿದಿದೆ. ಕಾಡಿನಲ್ಲಿ ತನ್ನ ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರು ರೋಷವುಳ್ಳವರಾಗಿದ್ದಾರೆ. ನಿನ್ನ ತಂದೆಯು ಒಬ್ಬ ನುರಿತ ಹೋರಾಟಗಾರ. ಅವನು ಜನರೊಂದಿಗೆ ರಾತ್ರಿಯಲ್ಲಿ ಇರುವುದಿಲ್ಲ. 9 ಈಗಾಗಲೇ ಅವನು ಒಂದು ಗವಿಯಲ್ಲಾಗಲಿ ಇಲ್ಲವೆ ಬೇರೆ ಯಾವ ಸ್ಥಳದಲ್ಲಾಗಲಿ ಅಡಗಿಕೊಂಡಿರಬಹುದು. ನಿನ್ನ ತಂದೆಯು ನಿನ್ನ ಜನರ ಮೇಲೆ ಆಕ್ರಮಣ ಮಾಡಿದರೆ, ಆಗ ಜನರಿಗೆ ಸುದ್ದಿಯು ತಿಳಿಯುತ್ತದೆ. ‘ಅಬ್ಷಾಲೋಮನ ಹಿಂಬಾಲಕರು ಸೋಲುತ್ತಿದ್ದಾರೆ’ ಎಂದು ಅವರು ಯೋಚಿಸುತ್ತಾರೆ. 10 ಆಗ ಸಿಂಹದಂತೆ ಶೂರರಾದ ಜನರು ಸಹ ಹೆದರಿಕೊಳ್ಳುತ್ತಾರೆ. ಏಕೆಂದರೆ ನಿನ್ನ ತಂದೆಯು ರಣವೀರನೆಂದು ಮತ್ತು ಅವನ ಜನರು ಧೈರ್ಯಶಾಲಿಗಳೆಂದು ತಿಳಿದಿದೆ.
11 “ನನ್ನ ಸಲಹೆ ಹೀಗಿದೆ: ನೀನು ದಾನ್‌ನಿಂದ ಬೇರ್ಷೆಬದವರೆಗಿನ ಇಸ್ರೇಲರನ್ನೆಲ್ಲ ಒಟ್ಟುಗೂಡಿಸು. ಆಗ ಸಮುದ್ರ ತೀರದ ಮರಳಿನ ಕಣಗಳಂತೆ ಅಲ್ಲಿ ಅನೇಕ ಜನರಿರುತ್ತಾರೆ. ನೀನೇ ಸ್ವತಃ ಯುದ್ಧರಂಗಕ್ಕೆ ಹೋಗಬೇಕು. 12 ದಾವೀದನನ್ನು ಅವನು ಅಡಗಿಕೊಂಡಿರುವ ಸ್ಥಳದಲ್ಲಿಯೇ ನಾವು ಹಿಡಿದುಕೊಳ್ಳುತ್ತೇವೆ. ಮಂಜಿನ ಹನಿಗಳು ಭೂಮಿಯ ಮೇಲೆ ಬೀಳುವಂತೆ ನಾವು ದಾವೀದನ ಮೇಲೆ ಬೀಳುವೆವು. ದಾವೀದನನ್ನು ಮತ್ತು ಅವನ ಜನರೆಲ್ಲರನ್ನು ನಾವು ಕೊಲ್ಲುವೆವು. ಯಾರನ್ನೂ ಜೀವಸಹಿತ ಬಿಡುವುದಿಲ್ಲ. 13 ಆದರೆ ದಾವೀದನು ತಪ್ಪಿಸಿಕೊಂಡು ಬಂದು ನಗರಕ್ಕೆ ನುಗ್ಗಿದರೆ, ಇಸ್ರೇಲರೆಲ್ಲ ಆ ನಗರದ ಹತ್ತಿರಕ್ಕೆ ಹಗ್ಗಗಳನ್ನು ತರುತ್ತಾರೆ. ನಾವು ಆ ನಗರದ ಗೋಡೆಗಳನ್ನು ಕಣಿವೆಯ ಆಳಕ್ಕೆ ಎಳೆದು ಬಿಡುತ್ತೇವೆ. ಆ ನಗರದಲ್ಲಿ ಒಂದು ಸಣ್ಣ ಕಲ್ಲು ಸಹ ಉಳಿಯಲು ಬಿಡುವುದಿಲ್ಲ” ಎಂದು ಹೇಳಿದನು.
14 ಅಬ್ಷಾಲೋಮನು ಮತ್ತು ಇಸ್ರೇಲರೆಲ್ಲ, “ಅರ್ಕೀಯನಾದ ಹೂಷೈಯನ ಸಲಹೆಯು ಅಹೀತೋಫೆಲನ ಸಲಹೆಗಿಂತ ಉತ್ತಮವಾಗಿದೆ” ಎಂದು ಹೇಳಿದರು. ಇದು ಯೆಹೋವನ ಯೋಜನೆಯಾಗಿದ್ದ ಕಾರಣ ಅವರು ಹಾಗೆ ಹೇಳಿದರು. ಅಹೀತೋಫೆಲನ ಒಳ್ಳೆಯ ಸಲಹೆಯನ್ನು ನಾಶಗೊಳಿಸಲು ಯೆಹೋವನು ಈ ಯೋಜನೆಯನ್ನು ಮಾಡಿದ್ದನು. ಹೀಗೆ ಯೆಹೋವನು ಅಬ್ಷಾಲೋಮನನ್ನು ದಂಡಿಸಲಿದ್ದನು.
ದಾವೀದನಿಗೆ ಹೂಷೈನ ಎಚ್ಚರಿಕೆ
15 ಹೂಷೈಯು ಯಾಜಕರಾದ ಚಾದೋಕನಿಗೆ ಮತ್ತು ಎಬ್ಯಾತಾರನಿಗೆ ಆ ವಿಚಾರಗಳನ್ನು ಹೇಳಿದನು. ಅಬ್ಷಾಲೋಮನಿಗೆ ಮತ್ತು ಇಸ್ರೇಲಿನ ನಾಯಕರಿಗೆ ಅಹೀತೋಫೆಲನು ಮಾಡಿದ ಸಲಹೆಗಳ ವಿಚಾರವನ್ನು ಮತ್ತು ತಾನು ನೀಡಿದ ಸಲಹೆಗಳ ವರದಿಯನ್ನು, ಚಾದೋಕ ಮತ್ತು ಎಬ್ಯಾತಾರನಿಗೆ ತಿಳಿಸಿದನು. 16 ಹೂಷೈಯು ಅವರಿಗೆ, ನೀವು ದಾವೀದನಿಗೆ ಹೀಗೆ ಹೇಳಿರಿ: “ಈ ರಾತ್ರಿ ನದಿಯನ್ನು ದಾಟುವ ಅಡವಿಯಲ್ಲಿ ತಂಗಬೇಡ, ಆದಷ್ಟು ಬೇಗನೆ ನದಿಯನ್ನು ದಾಟಿ ಆಚೆ ಹೋದರೆ ಒಳ್ಳೆಯದು. ಇಲ್ಲವಾದರೆ ನೀನು ನಿನ್ನ ಜನರೊಂದಿಗೆ ನಾಶವಾಗುವೆ” ಎಂದು ಹೇಳಿದನು.
17 ಯಾಜಕರ ಮಕ್ಕಳಾದ ಯೋನಾತಾನನು ಮತ್ತು ಅಹೀಮಾಚನು ಎನ್-ರೋಗೆಲಿನ ಬುಗ್ಗೆಯ ಹತ್ತಿರ ಕಾದಿದ್ದರು. ತಾವು ನಗರದೊಳಕ್ಕೆ ಹೋಗುವುದನ್ನು ಯಾರೂ ನೋಡಬಾರದೆಂದು ಅವರು ಅಲ್ಲಿ ಅಡಗಿಕೊಂಡಿದ್ದರು. ಆದ್ದರಿಂದ ಕೆಲಸದ ಹುಡುಗಿಯೊಬ್ಬಳು ಹೊರಗೆ ಬಂದು ಅವರಿಗೆ ಆ ಸಂದೇಶವನ್ನು ತಿಳಿಸಿದಳು. ಬಳಿಕ ಯೋನಾತಾನನು ಮತ್ತು ಅಹೀಮಾಚನು ದಾವೀದ ರಾಜನ ಬಳಿಗೆ ಹೋಗಿ ಅದನ್ನು ತಿಳಿಸಿದರು.
18 ಆದರೆ ಯೋನಾತಾನ್ ಮತ್ತು ಅಹೀಮಾಚರನ್ನು ಒಬ್ಬ ಬಾಲಕನು ನೋಡಿದನು. ಆ ಬಾಲಕನು ಅಬ್ಷಾಲೋಮನಿಗೆ ತಿಳಿಸಲು ಓಡಿದನು. ಯೋನಾತಾನನು ಮತ್ತು ಅಹೀಮಾಚನು ಬೇಗನೆ ಓಡಿಹೋಗಿ ಬಹುರೀಮಿನಲ್ಲಿ ಒಬ್ಬನ ಮನೆಯೊಳಗೆ ಹೋದರು. ಅವನ ಮನೆಯ ಅಂಗಳದಲ್ಲಿ ಒಂದು ಬಾವಿಯಿತ್ತು. ಯೋನಾತಾನನು ಮತ್ತು ಅಹೀಮಾಚನು ಈ ಬಾವಿಯೊಳಗೆ ಇಳಿದರು. 19 ಆ ಮನುಷ್ಯನ ಹೆಂಡತಿಯು ಒಂದು ಹಲಗೆಯನ್ನು ಬಾವಿಯ ಮೇಲೆ ಹಾಕಿದಳು. ನಂತರ ಅವಳು ಅದರ ಮೇಲೆ ಗೋಧಿಯನ್ನು ಹರಡಿದಳು. ಅದು ಗೋಧಿಯ ರಾಶಿಯಂತೆ ಕಂಡಿತು. ಆದ್ದರಿಂದ ಯೋನಾತಾನನು ಮತ್ತು ಅಹೀಮಾಚರು ಅಲ್ಲಿ ಅಡಗಿಕೊಂಡಿದ್ದಾರೆಂಬುದು ಯಾರಿಗೂ ಗೊತ್ತಾಗಲಿಲ್ಲ. 20 ಅಬ್ಷಾಲೋಮನ ಸೇವಕರು ಆ ಮನೆಯಲ್ಲಿದ್ದ ಹೆಂಗಸಿನ ಬಳಿಗೆ ಬಂದು, “ಅಹೀಮಾಚ್ ಮತ್ತು ಯೋನಾತಾನರು ಎಲ್ಲಿ?” ಎಂದು ಕೇಳಿದರು.
ಆ ಸ್ತ್ರೀಯು ಅಬ್ಷಾಲೋಮನ ಸೇವಕರಿಗೆ, “ಅವರು ಈಗಾಗಲೇ ಹಳ್ಳವನ್ನು ದಾಟಿಹೋಗಿರಬೇಕು” ಎಂದಳು.
ಆಗ ಅಬ್ಷಾಲೋಮನ ಸೇವಕರು ಯೋನಾತಾನ್ ಮತ್ತು ಅಹೀಮಾಚರನ್ನು ಹುಡುಕಲು ಹೋದರು. ಆದರೆ ಅವರು ಸೇವಕರಿಗೆ ಸಿಗಲಿಲ್ಲ. ಆದ್ದರಿಂದ ಅಬ್ಷಾಲೋಮನ ಸೇವಕರು ಜೆರುಸಲೇಮಿಗೆ ಹಿಂದಿರುಗಿದರು.
21 ಅಬ್ಷಾಲೋಮನ ಸೈನಿಕರು ಹೋದ ಮೇಲೆ ಯೋನಾತಾನ್ ಮತ್ತು ಅಹೀಮಾಚರು ಬಾವಿಯಿಂದ ಮೇಲಕ್ಕೆ ಬಂದರು. ಅವರು ಅರಸನಾದ ದಾವೀದನ ಬಳಿಗೆ ಹೋಗಿ, “ಬೇಗ, ನದಿಯನ್ನು ದಾಟಿಹೋಗು. ಅಹೀತೋಫೆಲನು ನಿನ್ನ ವಿರುದ್ಧವಾಗಿ ಈ ಸಂಗತಿಗಳನ್ನು ಹೇಳಿದ್ದಾನೆ” ಎಂದರು.
22 ದಾವೀದನು ಮತ್ತು ಅವನ ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿಹೋದರು. ಸೂರ್ಯನು ಮೇಲೇರುವುದಕ್ಕೆ ಮುಂಚೆಯೇ, ದಾವೀದನ ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿಹೋಗಿದ್ದರು.
ಅಹೀತೋಫೆಲನು ಆತ್ಮಹತ್ಯೆ ಮಾಡಿಕೊಂಡಿದ್ದು
23 ಅಹೀತೋಫೆಲನು ತನ್ನ ಸಲಹೆಯನ್ನು ಇಸ್ರೇಲರು ಸ್ವೀಕರಿಸಲಿಲ್ಲವೆಂಬುದನ್ನು ತಿಳಿದು ತನ್ನ ಹೇಸರಕತ್ತೆಯ ಮೇಲೆ ತಡಿಯನ್ನು ಹಾಕಿ ತನ್ನ ಸ್ವಂತ ಊರಿನಲ್ಲಿದ್ದ ಮನೆಗೆ ಹೋದನು. ಅವನು ತನ್ನ ಕುಟುಂಬಕ್ಕೆ ಯೋಜನೆಗಳನ್ನು ಮಾಡಿದನು. ನಂತರ ಅವನೇ ನೇಣು ಹಾಕಿಕೊಂಡು ಸತ್ತನು. ಅಹೀತೋಫೆಲನನ್ನು ಜನರು ಅವನ ತಂದೆಯ ಸಮಾಧಿಯ ಬಳಿ ಸಮಾಧಿ ಮಾಡಿದರು.
ಅಬ್ಷಾಲೋಮನು ಜೋರ್ಡನ್ ನದಿಯನ್ನು ದಾಟಿದ್ದು
24 ದಾವೀದನು ಮಹನಯಿಮಿಗೆ ಬಂದನು. ಅಬ್ಷಾಲೋಮನು ಮತ್ತು ಇಸ್ರೇಲರೆಲ್ಲರೂ ಜೋರ್ಡನ್ ನದಿಯನ್ನು ದಾಟಿದರು. 25 ಅಬ್ಷಾಲೋಮನು ಅಮಾಸನನ್ನು ಸೈನ್ಯದ ಅಧಿಪತಿಯನ್ನಾಗಿ ಮಾಡಿದನು. ಅಮಾಸನು ಯೋವಾಬನ ಸ್ಥಾನಕ್ಕೆ ಬಂದನು.[b] ಅಮಾಸನು ಇಸ್ರೇಲನಾದ ಇತ್ರನ ಮಗ. ಅಮಾಸನ ತಾಯಿಯಾದ ಅಬೀಗಲಳು, ನಾಹಾಷನ ಮಗಳು ಮತ್ತು ಚೆರೂಯಳ ಸೋದರಿ. 26 ಅಬ್ಷಾಲೋಮನು ಮತ್ತು ಇಸ್ರೇಲರು ಗಿಲ್ಯಾದ್ ದೇಶದಲ್ಲಿ ಪಾಳೆಯವನ್ನು ಮಾಡಿದರು.
ಶೋಬಿ, ಮಾಕೀರ್ ಮತ್ತು ಬರ್ಜಿಲ್ಲೈಯರು
27 ದಾವೀದನು ಮಹನಯಿಮಿಗೆ ಬಂದನು. ಶೋಬಿ, ಮಾಕೀರ್ ಮತ್ತು ಬರ್ಜಿಲ್ಲೈಯರು ಆ ಸ್ಥಳದಲ್ಲಿದ್ದರು. (ಶೋಬಿಯು ಅಮ್ಮೋನಿಯರ ಪಟ್ಟಣವಾದ ರಬ್ಬಾದ ಊರಿನ ನಾಹಾಷನ ಮಗ. ಮಾಕೀರನು ಲೋದೆಬಾರಿನ ಅಮ್ಮೀಯೇಲನ ಮಗ. ಬರ್ಜಿಲ್ಲೈಯು ಗಿಲ್ಯಾದ್ ನಾಡಿನ ರೋಗೆಲೀಮ್ ನಗರದವನು.) 28-29 ಅವರು, “ಅರಣ್ಯದಲ್ಲಿ ಪ್ರಯಾಣಮಾಡಿ ಜನರು ದಣಿದಿದ್ದಾರೆ, ಹಸಿದಿದ್ದಾರೆ ಮತ್ತು ದಾಹಗೊಂಡಿದ್ದಾರೆ” ಎಂದು ಹೇಳಿ, ದಾವೀದನಿಗೂ ಅವನ ಜನರಿಗೂ ತಿನ್ನಲು ಅನೇಕ ಆಹಾರಪದಾರ್ಥಗಳನ್ನು ತಂದರು. ಅವರು ಹಾಸಿಗೆಗಳನ್ನು, ಬಟ್ಟಲುಗಳನ್ನು ಮತ್ತು ಮಡಕೆಕುಡಿಕೆಗಳನ್ನು, ಗೋಧಿ, ಬಾರ್ಲಿ, ಹಿಟ್ಟು, ಹುರಿದಕಾಳುಗಳು, ಅವರೆ, ಅಲಸಂದಿ, ಒಣಗಿಸಿದ ಬೇಳೆ, ಜೇನುತುಪ್ಪ, ಬೆಣ್ಣೆ, ಕುರಿ ಮತ್ತು ಹಸುವಿನ ಹಾಲಿನಿಂದ ಮಾಡಿದ ಗಿಣ್ಣು ಇವುಗಳನ್ನು ತಂದುಕೊಟ್ಟರು.
ದಾವೀದನು ಯುದ್ಧಕ್ಕೆ ಸಿದ್ಧನಾಗುವನು
18 ದಾವೀದನು ತನ್ನ ಜನರನ್ನು ಲೆಕ್ಕಮಾಡಿದನು. ಅವನು ಸಹಸ್ರಾಧಿಪತಿಗಳನ್ನು ಮತ್ತು ಶತಾಧಿಪತಿಗಳನ್ನು ನೇಮಿಸಿದನು. 2 ದಾವೀದನು ತನ್ನ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಅವರನ್ನು ಹೊರಗೆ ಕಳುಹಿಸಿದನು. ಯೋವಾಬನು ಮೊದಲನೆ ಗುಂಪನ್ನು, ಅಬೀಷೈ ಎರಡನೆ ಗುಂಪನ್ನು, ಗತ್‌ನ ಇತ್ತೈಯನು ಮೂರನೆ ಗುಂಪನ್ನು ನಡೆಸಿದರು.
ರಾಜನಾದ ದಾವೀದನು, “ನಾನೂ ನಿಮ್ಮ ಜೊತೆಯಲ್ಲಿ ಬರುತ್ತೇನೆ” ಎಂದು ಅವರಿಗೆ ಹೇಳಿದನು.
3 ಆದರೆ ಅವರು, “ಬೇಡ, ನೀನು ನಮ್ಮ ಜೊತೆ ಬರುವುದು ಬೇಡ. ಏಕೆಂದರೆ ನಾವು ಯುದ್ಧರಂಗದಿಂದ ಓಡಿಹೋಗಿಬಿಟ್ಟರೆ, ಅಬ್ಷಾಲೋಮನ ಜನರು ಲಕ್ಷಿಸುವುದಿಲ್ಲ. ನಮ್ಮಲ್ಲಿ ಅರ್ಧದಷ್ಟು ಜನರು ಸತ್ತರೂ, ಅಬ್ಷಾಲೋಮನ ಜನರು ಲಕ್ಷಿಸುವುದಿಲ್ಲ. ಆದರೆ ನೀನು ನಮ್ಮ ಹತ್ತು ಸಾವಿರ ಜನರಷ್ಟು ಬೆಲೆಯುಳ್ಳವನಾಗಿರುವೆ! ನೀನು ನಗರದಲ್ಲಿರುವುದೇ ಉತ್ತಮ. ಅಲ್ಲಿಂದಲೇ ನೀನು ನಮಗೆ ಸಹಾಯ ಮಾಡಬಹುದು” ಎಂದು ಹೇಳಿದರು.
4 ರಾಜನು ತನ್ನ ಜನರಿಗೆ, “ನೀವು ಉತ್ತಮವೆಂದು ಯೋಚಿಸಿದ ಕಾರ್ಯವನ್ನು ನಾನು ಮಾಡುತ್ತೇನೆ” ಎಂದು ಹೇಳಿದನು.
ಆಗ ರಾಜನು ಊರಬಾಗಿಲಿನ ಪಕ್ಕದಲ್ಲಿ ನಿಂತುಕೊಂಡನು. ಸೈನ್ಯವು ಹೊರಗೆ ಹೋಯಿತು. ಅವರು ನೂರು ಮತ್ತು ಒಂದು ಸಾವಿರ ಮಂದಿಯ ಗುಂಪುಗಳಾಗಿ ಹೋದರು.
“ಯುವಕನಾದ ಅಬ್ಷಾಲೋಮನಿಗೆ ಕರುಣೆ ತೋರಿಸಿರಿ!”
5 ರಾಜನು ಯೋವಾಬನಿಗೆ, ಅಬೀಷೈಯನಿಗೆ ಮತ್ತು ಇತ್ತೈಯನಿಗೆ, “ನೀವು ನನಗೋಸ್ಕರವಾಗಿ ಯುವಕನಾದ ಅಬ್ಷಾಲೋಮನಿಗೆ ಕರುಣೆ ತೋರಿಸಿ!” ಎಂದು ಆಜ್ಞಾಪಿಸಿದನು. ಅಬ್ಷಾಲೋಮನ ಬಗ್ಗೆ ತನ್ನ ಸೇನಾಪತಿಗಳಿಗೆ ರಾಜನು ನೀಡಿದ ಆಜ್ಞೆಯು ಜನರೆಲ್ಲರಿಗೂ ಕೇಳಿಸಿತು.
ದಾವೀದನ ಸೈನ್ಯವು ಅಬ್ಷಾಲೋಮನ ಸೈನ್ಯವನ್ನು ಸೋಲಿಸಿತು
6 ದಾವೀದನ ಸೈನ್ಯವು ಇಸ್ರೇಲರಾದ ಅಬ್ಷಾಲೋಮನ ವಿರುದ್ಧ ಎಫ್ರಾಯೀಮ್ ಕಾಡಿನಲ್ಲಿ ಯುದ್ಧಮಾಡಿತು. 7 ದಾವೀದನ ಸೈನ್ಯವು ಇಸ್ರೇಲರನ್ನು ಸೋಲಿಸಿತು. ಅಂದು ಇಪ್ಪತ್ತು ಸಾವಿರ ಜನರು ಕೊಲ್ಲಲ್ಪಟ್ಟರು. 8 ಯುದ್ಧವು ದೇಶವನ್ನೆಲ್ಲ ವ್ಯಾಪಿಸಿತು. ಆದರೆ ಅಂದು ಕತ್ತಿಯಿಂದ ಸತ್ತ ಜನರಿಗಿಂತ ಹೆಚ್ಚು ಜನರು ಕಾಡಿನಲ್ಲಿ ಸತ್ತರು.
9 ಅಬ್ಷಾಲೋಮನು ದಾವೀದನ ಸೈನಿಕರ ಕೈಗೆ ಸಿಕ್ಕಿಕೊಂಡನು. ಅವನು ಹೇಸರಕತ್ತೆಯ ಮೇಲೆ ಸವಾರಿ ಮಾಡುತ್ತಾ ತಪ್ಪಿಸಿಕೊಳ್ಳಲು ಹೋದನು. ಆ ಹೇಸರಕತ್ತೆಯು ದೊಡ್ಡ ಓಕ್ ಮರದ ರೆಂಬೆಗಳ ಕೆಳಗೆ ಓಡುತ್ತಾ ಹೋಯಿತು. ಆ ರೆಂಬೆಗಳು ದಟ್ಟವಾಗಿದ್ದುದರಿಂದ ಅಬ್ಷಾಲೋಮನ ತಲೆಯು ಮರದಲ್ಲಿ ಸಿಕ್ಕಿಹಾಕಿಕೊಂಡಿತು. ಅವನು ಕುಳಿತುಕೊಂಡಿದ್ದ ಹೇಸರಕತ್ತೆಯು ಓಡಿಹೋದುದರಿಂದ ಅಬ್ಷಾಲೋಮನು ಮರದಲ್ಲಿ[c] ನೇತಾಡುವವನಾದನು.
10 ಇದನ್ನು ಕಂಡ ಒಬ್ಬನು ಯೋವಾಬನ ಬಳಿಗೆ ಹೋಗಿ, “ಅಬ್ಷಾಲೋಮನು ಒಂದು ಓಕ್ ಮರದಲ್ಲಿ ನೇತಾಡುತ್ತಿದ್ದುದನ್ನು ನಾನು ನೋಡಿದೆ” ಎಂದು ತಿಳಿಸಿದನು.
11 ಯೋವಾಬನು ಆ ಮನುಷ್ಯನಿಗೆ, “ನೀನು ಅವನನ್ನು ಕೊಂದು ನೆಲಕ್ಕುರುಳಿಸಲಿಲ್ಲವೇಕೆ? ನಾನು ನಿನಗೆ ಒಂದು ಸೊಂಟಪಟ್ಟಿಯನ್ನು ಮತ್ತು ಹತ್ತು ಬೆಳ್ಳಿರೂಪಾಯಿಗಳನ್ನು ಕೊಡುತ್ತಿದ್ದೆನಲ್ಲ!” ಎಂದನು.
12 ಆ ಮನುಷ್ಯನು ಯೋವಾಬನಿಗೆ, “ನೀನು ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಕೊಟ್ಟಿದ್ದರೂ ನಾನು ರಾಜನ ಮಗನನ್ನು ಕೊಲ್ಲಲು ಪ್ರಯತ್ನಿಸುತ್ತಿರಲಿಲ್ಲ. ಏಕೆಂದರೆ ನಿನಗೆ, ಅಬೀಷೈಯನಿಗೆ ಮತ್ತು ಇತ್ತೈಯನಿಗೆ ರಾಜನು ನೀಡಿದ್ದ ಆಜ್ಞೆಯನ್ನು ನಾವು ಕೇಳಿದ್ದೇವೆ. ‘ಎಚ್ಚರದಿಂದಿರಿ, ಯುವಕನಾದ ಅಬ್ಷಾಲೋಮನಿಗೆ ಕೇಡುಮಾಡದಿರಿ’ ಎಂದು ರಾಜನು ಹೇಳಿದ್ದಾನೆ. 13 ನಾನು ಅಬ್ಷಾಲೋಮನನ್ನು ಕೊಂದಿದ್ದರೆ ಸ್ವತಃ ರಾಜನೇ ಕಂಡು ಹಿಡಿಯುತ್ತಿದ್ದನು. ನೀನೇ ನನ್ನನ್ನು ದಂಡಿಸುತ್ತಿದ್ದೆ” ಎಂದು ಹೇಳಿದನು.
14 ಯೋವಾಬನು, “ನಿನ್ನೊಂದಿಗೆ ನಾನಿಲ್ಲಿ ನನ್ನ ಕಾಲವನ್ನು ವ್ಯರ್ಥಮಾಡುವುದಿಲ್ಲ” ಎಂದನು.
ಅಬ್ಷಾಲೋಮನು ಓಕ್ ಮರದಲ್ಲಿ ನೇತಾಡುತ್ತಾ ಇನ್ನೂ ಜೀವಂತವಾಗಿದ್ದನು. ಯೋವಾಬನು ಮೂರು ಬರ್ಜಿಗಳನ್ನು ತೆಗೆದುಕೊಂಡು ಅಬ್ಷಾಲೋಮನತ್ತ ಎಸೆದನು. ಬರ್ಜಿಗಳು ಅಬ್ಷಾಲೋಮನ ಹೃದಯವನ್ನು ಛೇದಿಸಿಕೊಂಡು ಹೋದವು. 15 ಯೋವಾಬನೊಂದಿಗೆ ಹತ್ತು ಮಂದಿ ಯುವಕರು ಅವನಿಗೆ ಯುದ್ಧದಲ್ಲಿ ಸಹಾಯ ಮಾಡಿದರು. ಈ ಹತ್ತು ಜನರೂ ಅಬ್ಷಾಲೋಮನನ್ನು ಸುತ್ತುವರಿದು ಅವನನ್ನು ಕೊಂದರು.
16 ಯೋವಾಬನು ತುತೂರಿಯನ್ನು ಊದಿ, ಅಬ್ಷಾಲೋಮನ ಕಡೆಯವರಾದ ಇಸ್ರೇಲರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಜನರನ್ನು ನಿಲ್ಲಿಸಿದನು. 17 ನಂತರ ಯೋವಾಬನ ಜನರು ಅಬ್ಷಾಲೋಮನ ದೇಹವನ್ನು ತೆಗೆದುಕೊಂಡು ಹೋಗಿ, ಕಾಡಿನ ಒಂದು ದೊಡ್ಡ ಕುಣಿಯಲ್ಲಿ ಎಸೆದರು. ಅವರು ಆ ದೊಡ್ಡ ಕುಣಿಯನ್ನು ಕಲ್ಲುಗಳಿಂದ ತುಂಬಿಸಿದರು.
ಅಬ್ಷಾಲೋಮನನ್ನು ಹಿಂಬಾಲಿಸಿಕೊಂಡು ಬಂದಿದ್ದ ಇಸ್ರೇಲರೆಲ್ಲ ಮನೆಗೆ ಓಡಿಹೋದರು.
18 ಅಬ್ಷಾಲೋಮನು ಬದುಕಿದ್ದಾಗ, ರಾಜನ ಕಣಿವೆಯಲ್ಲಿ ಒಂದು ಸ್ತಂಭವನ್ನು ನೆಡಿಸಿದ್ದನು. ಅಬ್ಷಾಲೋಮನು, “ನನ್ನ ಹೆಸರನ್ನು ಜೀವಂತವಾಗಿರಿಸಲು ನನಗೆ ಗಂಡುಮಕ್ಕಳಿಲ್ಲ” ಎಂದು ಹೇಳಿ ಆ ಸ್ತಂಭಕ್ಕೆ ತನ್ನ ಹೆಸರನ್ನೇ ಕೊಟ್ಟಿದ್ದನು. ಆ ಸ್ತಂಭವನ್ನು “ಅಬ್ಷಾಲೋಮನ ಸ್ಮಾರಕಸ್ತಂಭ” ಎಂದು ಇಂದಿಗೂ ಕರೆಯುತ್ತಾರೆ.
ಯೋವಾಬನು ದಾವೀದನಿಗೆ ವರ್ತಮಾನವನ್ನು ಕಳುಹಿಸಿದನು
19 ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ, “ಈಗ ಓಡುತ್ತಾಹೋಗಿ ರಾಜನಾದ ದಾವೀದನಿಗೆ ಈ ವರ್ತಮಾನವನ್ನು ತಿಳಿಸುತ್ತೇನೆ. ಯೆಹೋವನು ನಿನ್ನ ಶತ್ರುವನ್ನು ನಾಶಮಾಡಿದನೆಂದು ನಾನು ಅವನಿಗೆ ಹೇಳುತ್ತೇನೆ” ಎಂದನು.
20 ಯೋವಾಬನು ಅಹೀಮಾಚನಿಗೆ, “ಇಲ್ಲ, ದಾವೀದನಿಗೆ ಇಂದು ನೀನು ಈ ವರ್ತಮಾನವನ್ನು ತಿಳಿಸುವಂತಿಲ್ಲ. ನೀನು ಬೇರೊಂದು ದಿನದಲ್ಲಿ ವರ್ತಮಾನವನ್ನು ತಿಳಿಸಬಹುದು, ಏಕೆಂದರೆ ಇಂದು ರಾಜನ ಮಗನು ಸತ್ತಿದ್ದಾನೆ” ಎಂದು ಉತ್ತರಿಸಿದನು.
21 ಆಗ ಯೋವಾಬನು ಇಥಿಯೋಪ್ಯನಾದ ಒಬ್ಬನಿಗೆ, “ಹೋಗು, ನೀನು ನೋಡಿದ ಸಂಗತಿಗಳನ್ನು ರಾಜನಿಗೆ ತಿಳಿಸು” ಎಂದು ಹೇಳಿದನು.
ಇಥಿಯೋಪ್ಯನು ಯೋವಾಬನಿಗೆ ಸಾಷ್ಟಾಂಗನಮಸ್ಕಾರಮಾಡಿ ದಾವೀದನಿಗೆ ಹೇಳಲು ಓಡಿಹೋದನು.
22 ಆದರೆ ಚಾದೋಕನ ಮಗನಾದ ಅಹೀಮಾಚನು ಯೋವಾಬನನ್ನು ಮತ್ತೆ ಬೇಡುತ್ತಾ, “ಏನು ಸಂಭವಿಸುತ್ತದೆಯೊ ಸಂಭವಿಸಲಿ, ಇಥಿಯೋಪ್ಯದವನ ಹಿಂದೆ ಓಡಿಹೋಗಲು ನನಗೆ ಅವಕಾಶಕೊಡು!” ಎಂದನು.
ಯೋವಾಬನು, “ಮಗನೇ, ಈ ವರ್ತಮಾನವನ್ನು ತೆಗೆದುಕೊಂಡು ಹೋಗಲು ನೀನು ಏಕೆ ಇಚ್ಛಿಸುವೆ? ನೀನು ತೆಗೆದುಕೊಂಡು ಹೋಗುವ ವರ್ತಮಾನಕ್ಕೆ ನಿನಗೆ ಯಾವ ಬಹುಮಾನವೂ ಸಿಕ್ಕುವುದಿಲ್ಲ” ಎಂದನು.
23 ಅಹೀಮಾಚನು, “ಏನಾದರೂ ಆಗಲಿ, ನಾನು ಓಡಿಹೋಗುತ್ತೇನೆ” ಎಂದು ಉತ್ತರಿಸಿದನು.
“ಓಡು” ಎಂದು ಯೋವಾಬನು ಅಹೀಮಾಚನಿಗೆ ಹೇಳಿದನು.
ಆಗ ಅಹೀಮಾಚನು ಜೋರ್ಡನ್ ಕಣಿವೆಯ ಮೂಲಕ ಓಡಿಹೋದನು. ಅವನು ಇಥಿಯೋಪ್ಯದವನಿಗಿಂತ ಮೊದಲೇ ಹೋದನು.
ದಾವೀದನು ಸುದ್ದಿಯನ್ನು ಕೇಳಿದ್ದು
24 ದಾವೀದನು ನಗರದ ಎರಡು ಬಾಗಿಲುಗಳ ನಡುವೆ ಕುಳಿತಿದ್ದನು. ಕಾವಲುಗಾರನು ಊರಬಾಗಿಲುಗಳ ಮಾಳಿಗೆಯ ಮೇಲಕ್ಕೆ ಹೋದನು. ಕಾವಲುಗಾರನು ದೃಷ್ಟಿಸಿ ನೋಡಿದಾಗ, ಒಬ್ಬ ಮನುಷ್ಯನು ಒಬ್ಬಂಟಿಗನಾಗಿ ಓಡಿಬರುತ್ತಿರುವುದನ್ನು ನೋಡಿದನು. 25 ರಾಜನಿಗೆ ಹೇಳುವುದಕ್ಕಾಗಿ ಕಾವಲುಗಾರನು ಜೋರಾಗಿ ಕೂಗಿದನು.
ರಾಜನಾದ ದಾವೀದನು, “ಆ ಮನುಷ್ಯನು ಒಬ್ಬಂಟಿಗನಾಗಿದ್ದರೆ ಅವನು ಸುದ್ದಿಯನ್ನು ತರುತ್ತಿದ್ದಾನೆ” ಎಂದನು.
ಆ ಮನುಷ್ಯನು ಓಡುತ್ತಾ ನಗರದ ಹತ್ತಿರಕ್ಕೆ ಬಂದನು. 26 ಅವನ ಹಿಂದೆ ಇನ್ನೊಬ್ಬ ಮನುಷ್ಯನು ಓಡಿಬರುತ್ತಿರುವುದನ್ನು ಕಾವಲುಗಾರನು ನೋಡಿದನು. ಕಾವಲುಗಾರನು ದ್ವಾರಪಾಲಕನನ್ನು ಕರೆದು, “ನೋಡು! ಇನ್ನೊಬ್ಬ ಮನುಷ್ಯನು ಒಬ್ಬಂಟಿಗನಾಗಿ ಓಡುತ್ತಾ ಬರುತ್ತಿದ್ದಾನೆ” ಎಂದನು.
ರಾಜನು, “ಅವನು ಸಹ ಸುದ್ದಿಯನ್ನು ತರುತ್ತಿದ್ದಾನೆ” ಎಂದನು.
27 ಕಾವಲುಗಾರನು, “ಮೊದಲನೆಯ ಮನುಷ್ಯನು ಓಡುತ್ತಿರುವುದು ಚಾದೋಕನ ಮಗನಾದ ಅಹೀಮಾಚನಂತಿದೆಯೆಂದು ನನ್ನ ಭಾವನೆ” ಎಂದು ಹೇಳಿದನು.
ರಾಜನು, “ಅಹೀಮಾಚನು ಒಳ್ಳೆಯ ಮನುಷ್ಯ. ಅವನು ಶುಭಸಮಾಚಾರವನ್ನು ತರುತ್ತಿರಬೇಕು” ಎಂದನು.
28 ಅಹೀಮಾಚನು ರಾಜನ ಬಳಿಗೆ ಬಂದು, “ಎಲ್ಲವೂ ಶುಭಕರವಾಗಿದೆ” ಎಂದು ಹೇಳಿ ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಅಹೀಮಾಚನು, “ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ರಾಜನಾದ ಒಡೆಯನೇ, ನಿನ್ನ ವಿರುದ್ಧವಾಗಿದ್ದ ಜನರನ್ನು ಯೆಹೋವನು ಸೋಲಿಸಿದ್ದಾನೆ” ಎಂದು ಹೇಳಿದನು.
29 ರಾಜನು, “ಯುವಕನಾದ ಅಬ್ಷಾಲೋಮನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಅಹೀಮಾಚನು, “ಯೋವಾಬನು ನನ್ನನ್ನು ಕಳುಹಿಸಿದಾಗ, ನಾನು ಒಂದು ದೊಡ್ಡ ಕೋಲಾಹಲವನ್ನು ನೋಡಿದೆನು. ಆದರೆ ಅದು ಏನೆಂದು ನನಗೆ ಗೊತ್ತಿಲ್ಲ” ಎಂದು ಉತ್ತರಿಸಿದನು.
30 ಆಗ ರಾಜನು, “ಅತ್ತ ಸರಿದು ನಿಲ್ಲು” ಎಂದನು. ಅಹೀಮಾಚನು ಸರಿದು ನಿಂತುಕೊಂಡನು.
31 ಇಥಿಯೋಪ್ಯದವನು ಬಂದನು. ಅವನು, “ನನ್ನ ರಾಜನಾದ ಪ್ರಭುವಿಗೆ ಸುದ್ದಿಯಿದೆ, ನಿನ್ನ ವಿರುದ್ಧವಾಗಿದ್ದ ಜನರನ್ನು ಇಂದು ಯೆಹೋವನು ದಂಡಿಸಿದನು!” ಎಂದು ಹೇಳಿದನು.
32 ರಾಜನು ಅವನಿಗೆ, “ಯುವಕನಾದ ಅಬ್ಷಾಲೋಮನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಇಥಿಯೋಪ್ಯದವನು, “ನಿನ್ನ ಶತ್ರುಗಳು ಮತ್ತು ನಿನಗೆ ಕೇಡುಮಾಡಲು ನಿನಗೆ ವಿರುದ್ಧವಾಗಿ ಬಂದ ಜನರೆಲ್ಲರು ಈ ಯುವಕನಂತೆಯೇ ದಂಡಿಸಲ್ಪಡುವರು” ಎಂದು ಉತ್ತರಿಸಿದನು.
33 ಅಬ್ಷಾಲೋಮನು ಸತ್ತಿದ್ದಾನೆಂಬುದು ಆಗ ರಾಜನಿಗೆ ತಿಳಿಯಿತು. ರಾಜನು ಬಹಳ ತಳಮಳಗೊಂಡನು. ಅವನು ನಗರ ದ್ವಾರದಲ್ಲಿದ್ದ ಕೊಠಡಿಗೆ ಹೋಗಿ ಅಲ್ಲಿ ಗೋಳಾಡಿದನು. ಬಳಿಕ ಅಲ್ಲಿಂದ ತನ್ನ ಕೊಠಡಿಗೆ ಹೋಗುತ್ತಾ, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನಾದ ಅಬ್ಷಾಲೋಮನೇ! ನಿನಗೆ ಬದಲಾಗಿ ನಾನು ಸತ್ತಿದ್ದರೆ ಚೆನ್ನಾಗಿತ್ತು. ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ!” ಎಂದು ಗೋಳಾಡಿದನು.
Kannada Holy Bible: Easy-to-Read Version. All rights reserved. © 1997 Bible League International