Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 25-27

ದಾವೀದ ಮತ್ತು ನಾಬಾಲ್

25 ಸಮುವೇಲನು ಮರಣಹೊಂದಿದನು. ಇಸ್ರೇಲರೆಲ್ಲರೂ ಒಟ್ಟಾಗಿ ಸೇರಿ ಸಮುವೇಲನ ಮರಣಕ್ಕಾಗಿ ಗೋಳಾಡಿದರು. ಅವರು ಸಮುವೇಲನನ್ನು ಅವನ ನಿವಾಸವಿದ್ದ ರಾಮದಲ್ಲಿ ಸಮಾಧಿಮಾಡಿದರು.

ನಂತರ ದಾವೀದನು ಪಾರಾನ್ ಮರಳುಗಾಡಿಗೆ ಹೋದನು. ಮಾವೋನ್‌ನಲ್ಲಿ ಒಬ್ಬ ಮನುಷ್ಯನು ವಾಸಿಸುತ್ತಿದ್ದನು. ಈ ಮನುಷ್ಯನು ಬಹಳ ಶ್ರೀಮಂತನಾಗಿದ್ದನು. ಅವನು ಮೂರು ಸಾವಿರ ಕುರಿಗಳನ್ನೂ ಒಂದು ಸಾವಿರ ಆಡುಗಳನ್ನೂ ಹೊಂದಿದ್ದನು. ಅವನು ಕರ್ಮೆಲಿನಲ್ಲಿ ವ್ಯಾಪಾರ ಮಾಡುತ್ತಿದ್ದನು. ಒಮ್ಮೆ ಅವನು ಕುರಿಗಳ ತುಪ್ಪಟವನ್ನು ಕತ್ತರಿಸುವುದಕ್ಕಾಗಿ ಕರ್ಮೆಲಿಗೆ ಹೋಗಿದ್ದನು. ಈ ಮನುಷ್ಯನ ಹೆಸರು ನಾಬಾಲ್. ಅವನ ಹೆಂಡತಿಯ ಹೆಸರು ಅಬೀಗೈಲ್. ಅಬೀಗೈಲಳು ಬುದ್ಧಿವಂತೆಯೂ ಸುಂದರಿಯೂ ಆಗಿದ್ದಳು. ಆದರೆ ನಾಬಾಲನು ಕ್ರೂರಿ ಮತ್ತು ಕೀಳಾದ ವ್ಯಕ್ತಿ. ನಾಬಾಲನು ಕಾಲೇಬನ ಕುಟುಂಬಕ್ಕೆ ಸೇರಿದವನು.

ನಾಬಾಲನು ತನ್ನ ಕುರಿಗಳ ತುಪ್ಪಟವನ್ನು ಕತ್ತರಿಸುತ್ತಿದ್ದಾನೆಂಬ ಸುದ್ದಿಯು ಮರಳುಗಾಡಿನಲ್ಲಿದ್ದ ದಾವೀದನಿಗೆ ತಿಳಿಯಿತು. ಆದ್ದರಿಂದ ನಾಬಾಲನ ಸಂಗಡ ಮಾತನಾಡಲು ದಾವೀದನು ಹತ್ತು ಜನ ಯುವಕರನ್ನು ಕರೆದು ಅವರಿಗೆ, “ಕರ್ಮೆಲಿಗೆ ಹೋಗಿ ನಾಬಾಲನನ್ನು ಕಂಡುಹಿಡಿಯಿರಿ. ಅವನಿಗೆ ನನ್ನ ಪರವಾಗಿ ಶುಭವನ್ನು ಕೋರಿ.” ಈ ಸಂದೇಶವನ್ನು ಅವನಿಗೆ ಹೇಳಿರಿ: “ನೀನು ಮತ್ತು ನಿನ್ನ ಕುಟುಂಬದವರು ಕ್ಷೇಮವಾಗಿದ್ದೀರೆಂದು ನಾನು ನಂಬಿದ್ದೇನೆ. ನಿನ್ನ ಸಕಲ ಸಂಪತ್ತು ಚೆನ್ನಾಗಿರುವುದೆಂದು ನಾನು ನಂಬಿದ್ದೇನೆ. ನೀನು ನಿನ್ನ ಕುರಿಗಳ ತುಪ್ಪಟವನ್ನು ಕತ್ತರಿಸುತ್ತಿರುವುದು ನನಗೆ ತಿಳಿಯಿತು. ನಿನ್ನ ಕುರುಬರು ನಮ್ಮೊಡನೆ ಸ್ವಲ್ಪ ಸಮಯವಿದ್ದರು. ನಾವು ಅವರಿಗೆ ಕೆಟ್ಟದ್ದೇನನ್ನೂ ಮಾಡಲಿಲ್ಲ. ಅವರು ಕರ್ಮೆಲಿನಲ್ಲಿ ಸ್ವಲ್ಪ ಸಮಯವಿದ್ದಾಗ ನಾವು ಅವರಿಂದ ಏನನ್ನೂ ತೆಗೆದುಕೊಳ್ಳಲಿಲ್ಲ. ನಿನ್ನ ಸೇವಕರನ್ನು ಕೇಳು, ಇದು ನಿಜವೆಂಬುದನ್ನು ಅವರು ನಿನಗೆ ತಿಳಿಸುತ್ತಾರೆ. ನನ್ನ ಯುವಕರ ಬಗ್ಗೆ ದಯವಿಟ್ಟು ದಯಾಳುವಾಗಿರು. ಈ ಶುಭಸಂದರ್ಭದಲ್ಲಿ ನಾವು ನಿಮ್ಮ ಹತ್ತಿರಕ್ಕೆ ಬರುತ್ತೇವೆ. ಸ್ನೇಹಿತನಾದ[a] ದಾವೀದನಿಗಾಗಿ ನಿನಗೆ ಸಾಧ್ಯವಿದ್ದಷ್ಟನ್ನು ದಯವಿಟ್ಟು ಈ ಯುವಕರಿಗೆ ಕೊಡು” ಎಂದು ಹೇಳಿ ಕಳುಹಿಸಿದನು.

ದಾವೀದನ ಜನರು ನಾಬಾಲನ ಬಳಿಗೆ ಹೋಗಿ ಈ ಸಂದೇಶವನ್ನು ತಿಳಿಸಿದರು. 10 ಆದರೆ ನಾಬಾಲನು ಅವರನ್ನು ಕೀಳಾಗಿ ಕಂಡು, “ದಾವೀದನು ಯಾರು? ಈ ಇಷಯನ ಮಗನೆಂಬವನು ಯಾರು? ಇತ್ತೀಚಿನ ದಿನಗಳಲ್ಲಿ ತಮ್ಮ ಒಡೆಯರ ಹತ್ತಿರದಿಂದ ಓಡಿ ಹೋಗಿರುವ ಅನೇಕ ಗುಲಾಮರುಗಳಿದ್ದಾರೆ! 11 ನನ್ನ ಬಳಿ ನೀರು ಮತ್ತು ರೊಟ್ಟಿಗಳಿವೆ. ನನ್ನ ಕುರಿಗಳಿಂದ ತುಪ್ಪಟವನ್ನು ಕತ್ತರಿಸುತ್ತಿರುವ ಸೇವಕರಿಗೋಸ್ಕರ ಮಾಂಸವೂ ನನ್ನಲ್ಲಿದೆ. ಆದರೆ ನನಗೆ ಗೊತ್ತಿಲ್ಲದ ಜನರಿಗೆ ನಾನು ಕೊಡುವುದೇ ಇಲ್ಲ!” ಎಂದು ಹೇಳಿದನು.

12 ದಾವೀದನ ಜನರು ಹಿಂತಿರುಗಿ ಹೋಗಿ ನಾಬಾಲನು ಹೇಳಿದ್ದನ್ನೆಲ್ಲಾ ದಾವೀದನಿಗೆ ತಿಳಿಸಿದರು. 13 ಆಗ ದಾವೀದನು ತನ್ನ ಜನರಿಗೆ, “ನಿಮ್ಮ ಆಯುಧಗಳನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ!” ಎಂದು ಹೇಳಿದನು. ದಾವೀದನು ಮತ್ತು ಅವನ ಜನರು ಆಯುಧಗಳನ್ನು ಕಟ್ಟಿಕೊಂಡರು. ದಾವೀದನ ಸಂಗಡ ಸುಮಾರು ನಾನೂರು ಜನರು ಹೋದರು; ಇನ್ನೂರು ಜನರು ಸರಕುಗಳ ಬಳಿಯಲ್ಲಿ ಉಳಿದುಕೊಂಡರು.

ಅಬೀಗೈಲಳು ಕೇಡಿನಿಂದ ತಪ್ಪಿಸುವಳು

14 ನಾಬಾಲನ ಸೇವಕನೊಬ್ಬನು ನಾಬಾಲನ ಹೆಂಡತಿಯಾದ ಅಬೀಗೈಲಳಿಗೆ, “ನಮ್ಮ ಒಡೆಯನನ್ನು ವಂದಿಸಲು ದಾವೀದನು ಅರಣ್ಯದಿಂದ ಸಂದೇಶಕರನ್ನು ಕಳುಹಿಸಿದ್ದನು. ಆದರೆ ನಾಬಾಲನು ದಾವೀದನ ಸಂದೇಶಕರೊಂದಿಗೆ ಕೀಳಾಗಿ ನಡೆದುಕೊಂಡನು. 15 ಈ ಜನರು ನಮಗೆ ಬಹಳ ಒಳ್ಳೆಯವರಾಗಿದ್ದರು. ನಾವು ಆಡುಗಳೊಂದಿಗೆ ಹೊಲಗಳಿಗೆ ಹೋಗಿದ್ದಾಗ ದಾವೀದನ ಜನರು ಆ ಸಮಯದಲ್ಲೆಲ್ಲ ನಮ್ಮ ಜೊತೆಗಿದ್ದರು! ಅವರು ನಮಗೆ ಯಾವುದೇ ಕೆಡುಕನ್ನು ಮಾಡಲಿಲ್ಲ! ಅವರು ನಮ್ಮೊಂದಿಗಿದ್ದ ಸಮಯದಲ್ಲೆಲ್ಲ ನಮ್ಮಿಂದ ಏನನ್ನೂ ಕದಿಯಲಿಲ್ಲ! 16 ನಾವು ಕುರಿಗಳನ್ನು ಕಾಯುತ್ತಿದ್ದಾಗ ದಾವೀದನ ಜನರು ನಮ್ಮನ್ನು ಹಗಲುರಾತ್ರಿ ರಕ್ಷಿಸಿದರು! ಅವರು ನಮ್ಮ ಸುತ್ತಲೂ ಗೋಡೆಯಂತಿದ್ದರು. 17 ಈಗ ಅದರ ಬಗ್ಗೆ ಯೋಚಿಸಿ ನೀನು ಮಾಡಬೇಕಾದದ್ದನ್ನು ತೀರ್ಮಾನಿಸು. ಮೂರ್ಖನಾದ ನಾಬಾಲನೊಂದಿಗೆ ಮಾತಾಡಿ ಅವನ ಮನಸ್ಸನ್ನು ಬದಲಾಯಿಸುವುದು ಅಸಾಧ್ಯ. ನಮ್ಮ ಒಡೆಯನಿಗೂ ಅವನ ಕುಟುಂಬಕ್ಕೂ ಭೀಕರವಾದ ಕೇಡು ಬರಲಿದೆ” ಎಂದು ಹೇಳಿದನು.

18 ಅಬೀಗೈಲಳು ಇನ್ನೂರು ರೊಟ್ಟಿಗಳನ್ನೂ ಎರಡು ದ್ರಾಕ್ಷಾರಸದ ಚೀಲಗಳನ್ನೂ ಐದು ಕುರಿಗಳ ಬೇಯಿಸಿದ ಮಾಂಸವನ್ನೂ ಹದಿನೇಳು ಕಿಲೋಗ್ರಾಂ ಬೇಯಿಸಿದ ಕಾಳನ್ನೂ ನೂರುಗೊಂಚಲು ಒಣದ್ರಾಕ್ಷಿಯನ್ನೂ ಅಂಜೂರ ಹಣ್ಣಿನ ಇನ್ನೂರು ಉಂಡೆಗಳನ್ನೂ ತ್ವರಿತವಾಗಿ ತೆಗೆದುಕೊಂಡಳು. ಅವಳು ಅವುಗಳನ್ನು ಕತ್ತೆಗಳ ಮೇಲೆ ಹೇರಿದಳು. 19 ನಂತರ ಅಬೀಗೈಲಳು ತನ್ನ ಸೇವಕರಿಗೆ, “ಮುಂದೆ ನಡೆಯಿರಿ, ನಾನು ನಿಮ್ಮ ಹಿಂದೆ ಬರುತ್ತೇನೆ” ಎಂದಳು. ಆದರೆ ಅವಳು ತನ್ನ ಗಂಡನಿಗೆ ಹೇಳಲಿಲ್ಲ.

20 ಅಬೀಗೈಲಳು ಕತ್ತೆಯ ಮೇಲೆ ಸವಾರಿ ಮಾಡುತ್ತಾ ಬೆಟ್ಟದ ಮತ್ತೊಂದು ಕಡೆಗೆ ಬಂದು ಬೇರೊಂದು ದಿಕ್ಕಿನಿಂದ ಬರುತ್ತಿದ್ದ ದಾವೀದನನ್ನೂ ಅವನ ಜನರನ್ನೂ ಸಂಧಿಸಿದಳು.

21 ಅಬೀಗೈಲಳನ್ನು ಸಂಧಿಸುವುದಕ್ಕೆ ಮುಂಚೆ ದಾವೀದನು, “ನಾಬಾಲನ ಆಸ್ತಿಯನ್ನು ನಾನು ಅರಣ್ಯದಲ್ಲಿ ಕಾಪಾಡಿದೆನು. ಅವನ ಕುರಿಗಳಲ್ಲಿ ಒಂದೂ ತಪ್ಪಿಸಿಕೊಳ್ಳದಂತೆ ನಾನು ನೋಡಿಕೊಂಡೆನು. ನಾನು ಅವನಿಂದ ಏನನ್ನೂ ಅಪೇಕ್ಷಿಸದೆ ಇದನ್ನೆಲ್ಲ ಮಾಡಿದೆ! ನಾನು ಅವನಿಗೆ ಒಳ್ಳೆಯದನ್ನು ಮಾಡಿದೆ; ಆದರೆ ಅವನು ನನಗೆ ಕೆಟ್ಟವನಾದನು. 22 ನಾಳೆ ಬೆಳಗಾಗುವುದರೊಳಗಾಗಿ ನಾಬಾಲನ ಕುಟುಂಬದಲ್ಲಿ ಒಬ್ಬರಾದರೂ ಜೀವದಿಂದ ಉಳಿದುಕೊಳ್ಳಲು ನಾನು ಅವಕಾಶಕೊಟ್ಟರೆ ದೇವರು ನನ್ನನ್ನು ದಂಡಿಸಲಿ” ಎಂದು ಹೇಳಿದ್ದನು.

23 ಅಬೀಗೈಲಳು ದಾವೀದನನ್ನು ಕಂಡ ಕೂಡಲೆ ಕತ್ತೆಯಿಂದ ಬೇಗನೆ ಇಳಿದು ದಾವೀದನಿಗೆ ಸಾಷ್ಟಾಂಗನಮಸ್ಕಾರ ಮಾಡಿದಳು. 24 ಅಬೀಗೈಲಳು ದಾವೀದನ ಪಾದಗಳಿಗೆ ಬಿದ್ದು, “ಒಡೆಯನೇ, ನಿನ್ನೊಂದಿಗೆ ಮಾತನಾಡಲು ದಯವಿಟ್ಟು ನನಗೆ ಅವಕಾಶ ಕೊಡು. ನಾನು ಹೇಳುವುದನ್ನು ಆಲಿಸು. ನಡೆದುಹೋದ ಸಂಗತಿಗೆ ನನ್ನನ್ನೇ ನಿಂದಿಸು. 25 ನೀನು ಕಳುಹಿಸಿದ ಜನರನ್ನು ನಾನು ನೋಡಲಿಲ್ಲ. ಒಡೆಯನೇ, ಮೂರ್ಖನಾದ ಆ ಮನುಷ್ಯನ ಮೇಲೆ ಯಾವ ಲಕ್ಷ್ಯವನ್ನೂ ಇಡಬೇಡ. ಅವನು ತನ್ನ ಹೆಸರಿಗೆ ತಕ್ಕಂತೆ ಇದ್ದಾನೆ. ಅವನ ಹೆಸರಿನ ಅರ್ಥವೂ ‘ಮೂರ್ಖ’ ಮತ್ತು ಅವನು ನಿಜವಾಗಿಯೂ ಮೂರ್ಖ. 26 ಮುಗ್ದಜನರನ್ನು ಕೊಂದು ಅಪರಾಧಿಯಾಗದಂತೆ ಯೆಹೋವನು ನಿನ್ನನ್ನು ಕಾಪಾಡಿದ್ದಾನೆ. ಯೆಹೋವನ ಆಣೆಯಾಗಿಯೂ ನಿನ್ನ ಆಣೆಯಾಗಿಯೂ ನಿನ್ನ ಶತ್ರುಗಳೂ ನಿನಗೆ ಕೇಡುಮಾಡುವವರೂ ನಾಬಾಲನಂತಾಗಲಿ. 27 ಈಗ ನಾನು ನಿನಗಾಗಿ ಈ ಕೊಡುಗೆಗಳನ್ನು ತಂದಿದ್ದೇನೆ. ನಿನ್ನನ್ನು ಹಿಂಬಾಲಿಸುತ್ತಿರುವ ನಿನ್ನ ಸೇವಕರಿಗೆ ದಯವಿಟ್ಟು ಇವುಗಳನ್ನು ಕೊಡು. 28 ನಾನು ಮಾಡಿದ ತಪ್ಪನ್ನು ದಯವಿಟ್ಟು ಕ್ಷಮಿಸು. ಯೆಹೋವನು ನಿನ್ನ ಕುಟುಂಬವನ್ನು ಪ್ರಬಲಗೊಳಿಸುತ್ತಾನೆಂದೂ ನಿನ್ನ ಕುಟುಂಬದಿಂದ ಅನೇಕ ರಾಜರು ಬರುತ್ತಾರೆಂದೂ ನನಗೆ ತಿಳಿದಿದೆ! ನೀನು ಯೆಹೋವನ ಯುದ್ಧಗಳಲ್ಲಿ ಹೋರಾಡುವುದರಿಂದ ಯೆಹೋವನು ಇದನ್ನು ನೆರವೇರಿಸುತ್ತಾನೆ. ನೀನು ಜೀವಿಸಿರುವ ತನಕ ಜನರು ನಿನ್ನಲ್ಲಿ ಯಾವುದೇ ಬಗೆಯ ಕೆಟ್ಟದನ್ನು ಕಂಡುಹಿಡಿಯುವುದಿಲ್ಲ! 29 ನಿನ್ನನ್ನು ಕೊಲ್ಲಲು ಒಬ್ಬ ವ್ಯಕ್ತಿಯು ಅಟ್ಟಿಸಿಕೊಂಡು ಬಂದರೆ, ನಿನ್ನ ದೇವರಾದ ಯೆಹೋವನು ನಿನ್ನ ಜೀವವನ್ನು ರಕ್ಷಿಸುತ್ತಾನೆ! ಆದರೆ ಯೆಹೋವನು ನಿನ್ನ ಶತ್ರುಗಳನ್ನು ಕವಣೆಯ ಕಲ್ಲನ್ನು ಎಸೆಯುವಂತೆ ಎಸೆದುಬಿಡುತ್ತಾನೆ! 30 ನಿನಗಾಗಿ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿ ಯೆಹೋವನು ವಾಗ್ದಾನ ಮಾಡಿದ್ದಾನೆ. ಯೆಹೋವನು ತನ್ನ ಎಲ್ಲ ವಾಗ್ದಾನಗಳನ್ನೂ ನೆರವೇರಿಸುತ್ತಾನೆ! ದೇವರು ನಿನ್ನನ್ನು ಇಸ್ರೇಲರ ನಾಯಕನನ್ನಾಗಿ ಮಾಡಿದಾಗ 31 ನಿರಪರಾಧಿಗಳ ರಕ್ತವನ್ನು ಸುರಿಸಿದ ಅಪರಾಧಕ್ಕೆ ನೀನು ಗುರಿಯಾಗುವುದಿಲ್ಲ; ನೀನು ಆ ಬಲೆಗೂ ಬೀಳುವುದಿಲ್ಲ. ನೀನು ಆ ಮಹಾಪದವಿಗೆ ಬಂದಾಗ ನನ್ನನ್ನು ಮರೆತುಬಿಡಬೇಡ” ಎಂದು ಹೇಳಿದಳು.

32 ಆಗ ದಾವೀದನು ಅಬೀಗೈಲಳಿಗೆ, “ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ದೇವರೇ ನಿನ್ನನ್ನು ನನ್ನ ಬಳಿಗೆ ಕಳುಹಿಸಿದ್ದಾನೆ. 33 ನಿನ್ನ ಒಳ್ಳೆಯ ತೀರ್ಪಿಗಾಗಿ ದೇವರು ನಿನ್ನನ್ನು ಆಶೀರ್ವದಿಸಲಿ. ಈ ದಿನ ನಾನು ನಿರ್ದೋಷಿಗಳನ್ನು ಕೊಲ್ಲದಂತೆ ನೀನು ನನ್ನನ್ನು ತಡೆದೆ. 34 ಇಸ್ರೇಲರ ದೇವರಾದ ಯೆಹೋವನಾಣೆ, ನೀನು ನನ್ನನ್ನು ಸಂಧಿಸಲು ಬೇಗನೆ ಬರದಿದ್ದರೆ ನಾಳೆ ಹೊತ್ತಾರೆಯ ವೇಳೆಗೆ ನಾಬಾಲನ ಕುಟುಂಬದಲ್ಲಿ ಒಬ್ಬನೂ ಜೀವಸಹಿತ ಉಳಿಯುತ್ತಿರಲಿಲ್ಲ” ಎಂದು ಹೇಳಿದನು.

35 ನಂತರ ದಾವೀದನು ಅಬೀಗೈಲಳ ಕೊಡುಗೆಗಳನ್ನು ಸ್ವೀಕರಿಸಿ ಆಕೆಗೆ, “ಶಾಂತಿಯಿಂದ ಮನೆಗೆ ಹಿಂದಿರುಗು. ನಾನು ನಿನ್ನ ಮಾತುಗಳನ್ನು ಆಲಿಸಿದ್ದೇನೆ ಮತ್ತು ನೀನು ಕೇಳಿಕೊಂಡಿರುವುದನ್ನು ನೆರವೇರಿಸುತ್ತೇನೆ” ಎಂದು ಹೇಳಿದನು.

ನಾಬಾಲನ ಮರಣ

36 ಅಬೀಗೈಲಳು ನಾಬಾಲನ ಬಳಿಗೆ ಹಿಂದಿರುಗಿ ಹೋದಳು. ನಾಬಾಲನು ಮನೆಯಲ್ಲಿಯೇ ಇದ್ದನು. ನಾಬಾಲನು ರಾಜನಂತೆ ತಿನ್ನುತ್ತಾ ಕುಡಿದು ಮತ್ತನಾಗಿದ್ದನು. ಆದ್ದರಿಂದ ಅಬೀಗೈಲಳು ಮಾರನೆಯ ದಿನದ ಹೊತ್ತಾರೆಯವರೆಗೆ ನಾಬಾಲನಿಗೆ ಏನನ್ನೂ ಹೇಳಲಿಲ್ಲ. 37 ಮಾರನೆಯ ದಿನ ನಾಬಾಲನ ಮತ್ತಿಳಿದಿತ್ತು. ಅವನ ಹೆಂಡತಿಯು ಅವನಿಗೆ ಎಲ್ಲವನ್ನು ತಿಳಿಸಿದಳು. ನಾಬಾಲನಿಗೆ ಹೃದಯಾಘಾತವಾಯಿತು. ಅವನು ಸ್ತಬ್ಧನಾದನು. 38 ಹತ್ತು ದಿನಗಳಾದ ಮೇಲೆ, ಯೆಹೋವನು ನಾಬಾಲನಿಗೆ ಸಾವನ್ನು ಬರಮಾಡಿದನು.

39 ನಾಬಾಲನು ಸತ್ತನೆಂಬುದು ದಾವೀದನಿಗೆ ತಿಳಿಯಿತು. ದಾವೀದನು, “ಯೆಹೋವನಿಗೆ ಸ್ತೋತ್ರವಾಗಲಿ! ನಾಬಾಲನು ನನ್ನ ಬಗ್ಗೆ ಕೆಟ್ಟಮಾತುಗಳನ್ನು ಆಡಿದನು, ಆದರೆ ಯೆಹೋವನು ನನಗೆ ಸಹಾಯ ಮಾಡಿದನು. ನಾನು ತಪ್ಪುಮಾಡದಂತೆ ಯೆಹೋವನು ನನ್ನನ್ನು ತಡೆದನು. ನಾಬಾಲನು ಕೆಟ್ಟದನ್ನು ಮಾಡಿದ್ದರಿಂದ ಯೆಹೋವನು ಅವನಿಗೆ ಸಾವನ್ನು ಬರಮಾಡಿದನು” ಎಂದು ಹೇಳಿದನು.

ನಂತರ ದಾವೀದನು ಅಬೀಗೈಲಳಿಗೆ ಒಂದು ಸಂದೇಶವನ್ನು ಕಳುಹಿಸಿ ತನ್ನ ಹೆಂಡತಿಯಾಗಬೇಕೆಂದು ಕೇಳಿಕೊಂಡನು. 40 ದಾವೀದನ ಸೈನಿಕರು ಕರ್ಮೆಲಿಗೆ ಹೋಗಿ ಅಬೀಗೈಲಳಿಗೆ, “ದಾವೀದನು ನಿನ್ನನ್ನು ಕರೆತರಲು ಹೇಳಿದ್ದಾನೆ. ನಿನ್ನನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಳ್ಳಬೇಕೆಂಬುದು ದಾವೀದನ ಅಪೇಕ್ಷೆ” ಎಂದು ಹೇಳಿದರು.

41 ಅಬೀಗೈಲಳು ಸಾಷ್ಟಾಂಗನಮಸ್ಕಾರಮಾಡಿ, “ನಾನು ನಿಮ್ಮ ದಾಸಿ. ನಾನು ನಿಮ್ಮ ಸೇವೆಗೆ ಸಿದ್ಧಳಾಗಿದ್ದೇನೆ. ನಾನು ನನ್ನ ಒಡೆಯನ ಸೇವಕರ ಪಾದಗಳನ್ನು ತೊಳೆಯಲು ಸಿದ್ಧಳಾಗಿರುವೆ” ಎಂದಳು.

42 ಅಬೀಗೈಲಳು ಬೇಗನೆ ಒಂದು ಕತ್ತೆಯ ಮೇಲೇರಿ, ದಾವೀದನ ಸಂದೇಶಕರೊಂದಿಗೆ ಹೊರಟುಹೋದಳು. ಅಬೀಗೈಲಳು ಐದು ಜನ ಸೇವಕಿಯರನ್ನು ತನ್ನೊಂದಿಗೆ ಕರೆದುಕೊಂಡು ಹೋದಳು. ಅವಳು ದಾವೀದನ ಹೆಂಡತಿಯಾದಳು. 43 ದಾವೀದನು ಇಜ್ರೇಲಿನವಳಾದ ಅಹೀನೋವಮಳನ್ನು ಸಹ ಮದುವೆಯಾದನು. ಅಹೀನೋವಮಳು ಮತ್ತು ಅಬೀಗೈಲರಿಬ್ಬರೂ ದಾವೀದನ ಪತ್ನಿಯರು. 44 ಸೌಲನ ಮಗಳಾದ ಮೀಕಲಳೂ ದಾವೀದನ ಪತ್ನಿ. ಆದರೆ ಸೌಲನು ಅವಳನ್ನು ಗಲ್ಲೀಮ್‌ನ ಲಯಿಷನ ಮಗನಾದ ಪಲ್ಟೀ ಎಂಬವನಿಗೆ ಮದುವೆ ಮಾಡಿಕೊಟ್ಟನು.

ದಾವೀದ ಮತ್ತು ಅಬೀಷೈಸೌಲನ ಪಾಳೆಯನ್ನು ಪ್ರವೇಶಿಸುವರು

26 ಜೀಫಿನ ಜನರು ಸೌಲನನ್ನು ನೋಡುವುದಕ್ಕಾಗಿ ಗಿಬೆಯಕ್ಕೆ ಹೋದರು. ಅವರು ಸೌಲನಿಗೆ, “ದಾವೀದನು ಹಕೀಲಾ ಬೆಟ್ಟದ ಮೇಲೆ ಅಡಗಿಕೊಂಡಿದ್ದಾನೆ. ಈ ಬೆಟ್ಟವು ಜೆಸಿಮೋನ್ ಅರಣ್ಯಕ್ಕೆ ಎದುರಿನಲ್ಲಿದೆ” ಎಂದು ಹೇಳಿದರು.

ಸೌಲನು ಜೀಫ್ ಅರಣ್ಯಕ್ಕೆ ಹೋದನು. ಇಸ್ರೇಲಿನಲ್ಲೆಲ್ಲಾ ತಾನೇ ಆರಿಸಿದ ಮೂರು ಸಾವಿರ ಜನ ಸೈನಿಕರನ್ನು ಸೌಲನು ತನ್ನೊಡನೆ ಕರೆದುಕೊಂಡು ಹೋದನು. ಸೌಲನು ಮತ್ತು ಅವನ ಜನರು ದಾವೀದನನ್ನು ಜೀಫ್ ಅರಣ್ಯದಲ್ಲಿ ಹುಡುಕಿದರು. ಸೌಲನು ಹಕೀಲಾ ಬೆಟ್ಟದ ಮೇಲೆ ತನ್ನ ಪಾಳೆಯವನ್ನು ಮಾಡಿಕೊಂಡನು. ಈ ಪಾಳೆಯವು ಜೆಸಿಮೋನ್ ಅರಣ್ಯಕ್ಕೆ ಎದುರಿನಲ್ಲಿರುವ ರಸ್ತೆಯ ಅಂಚಿನಲ್ಲಿತ್ತು.

ದಾವೀದನು ಅರಣ್ಯದಲ್ಲಿ ನೆಲೆಸಿದ್ದನು. ಸೌಲನು ತನ್ನನ್ನು ಹಿಂಬಾಲಿಸಿಕೊಂಡು ಅಲ್ಲಿಗೆ ಬಂದಿರುವುದು ದಾವೀದನಿಗೆ ತಿಳಿಯಿತು. ಆಗ ದಾವೀದನು ಗೂಢಚಾರರನ್ನು ಕಳುಹಿಸಿದನು. ಸೌಲನು ಹಕೀಲಾಕ್ಕೆ ಬಂದಿರುವುದು ದಾವೀದನಿಗೆ ತಿಳಿಯಿತು. ಸೌಲನು ಪಾಳೆಯ ಮಾಡಿಕೊಂಡಿದ್ದ ಸ್ಥಳಕ್ಕೆ ದಾವೀದನು ಹೋಗಿ ಸೌಲನು ಮತ್ತು ಅಬ್ನೇರನು ಮಲಗಿರುವ ಸ್ಥಳವನ್ನು ನೋಡಿಕೊಂಡನು. (ನೇರನ ಮಗನಾದ ಅಬ್ನೇರನು ಸೌಲನ ಸೈನ್ಯದಲ್ಲಿ ಸೇನಾಪತಿಯಾಗಿದ್ದನು.) ಸೌಲನು ಪಾಳೆಯದ ಮಧ್ಯದಲ್ಲಿ ಮಲಗಿದ್ದನು. ಸೌಲನ ಸುತ್ತ ಸೈನ್ಯವೆಲ್ಲವೂ ಇದ್ದಿತು.

ದಾವೀದನು ಹಿತ್ತಿಯನಾದ ಅಹೀಮೆಲೆಕನ ಮತ್ತು ಚೆರೂಯಳ ಮಗನೂ ಯೋವಾಬನ ಸಹೋದರನೂ ಆದ ಅಬೀಷೈರೊಡನೆ ಮಾತನಾಡಿದನು. ಅವನು ಅವರಿಗೆ, “ನನ್ನೊಡನೆ ಸೌಲನ ಪಾಳೆಯಕ್ಕೆ ಯಾರು ಬರುತ್ತೀರಿ?” ಎಂದು ಕೇಳಿದನು.

“ನಾನು ಬರುತ್ತೇನೆ” ಎಂದು ಅಬೀಷೈ ಉತ್ತರಿಸಿದನು.

ರಾತ್ರಿಯಾಯಿತು. ದಾವೀದ ಮತ್ತು ಅಬೀಷೈ ಸೌಲನ ಪಾಳೆಯಕ್ಕೆ ಹೋದರು. ಪಾಳೆಯದ ಮಧ್ಯದಲ್ಲಿ ಸೌಲನು ನಿದ್ರಿಸುತ್ತಿದ್ದನು. ಅವನ ಭರ್ಜಿಯು ಅವನ ತಲೆಯ ಹತ್ತಿರ ನೆಲದಲ್ಲಿ ನೆಡಲ್ಪಟ್ಟಿತ್ತು. ಸೌಲನ ಸುತ್ತಲೂ ಅಬ್ನೇರನು ಸೈನ್ಯದೊಡನೆ ನಿದ್ರಿಸುತ್ತಿದ್ದನು. ಅಬೀಷೈಯು, “ಯೆಹೋವನು ಈ ದಿನ ನಿನ್ನ ಶತ್ರುವನ್ನು ಸೋಲಿಸಲು ನಿನಗೆ ಒಪ್ಪಿಸಿದ್ದಾನೆ. ಸೌಲನನ್ನು ಅವನ ಭರ್ಜಿಯಿಂದಲೇ ಅವನನ್ನು ನೆಲಕ್ಕೆ ಹತ್ತಿಕೊಳ್ಳುವಂತೆ ತಿವಿಯಲು ನನಗೆ ಅವಕಾಶಕೊಡು. ನಾನು ಒಂದೇ ಸಲಕ್ಕೆ ಆ ಕಾರ್ಯವನ್ನು ಮುಗಿಸಿಬಿಡುತ್ತೇನೆ!” ಎಂದು ದಾವೀದನನ್ನು ಕೇಳಿದನು.

ಆದರೆ ದಾವೀದನು ಅಬೀಷೈಗೆ, “ಸೌಲನನ್ನು ಕೊಲ್ಲಬೇಡ! ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಿಗೆ ಯಾರೇ ಕೇಡುಮಾಡಿದರೂ ಅವರನ್ನು ದಂಡಿಸಲೇಬೇಕು! 10 ಯೆಹೋವನಾಣೆ, ಸೌಲನನ್ನು ಸ್ವತಃ ಯೆಹೋವನೇ ದಂಡಿಸುತ್ತಾನೆ. ಸೌಲನು ಸ್ವಾಭಾವಿಕನಾದ ಮರಣಹೊಂದಬಹುದು ಅಥವಾ ಯುದ್ಧದಲ್ಲಿ ಕೊಲ್ಲಲ್ಪಡಬಹುದು. 11 ಆದರೆ ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನನ್ನು ನಾನು ಕೊಲ್ಲುವಂತಹ ಪರಿಸ್ಥಿತಿಯನ್ನು ಎಂದಿಗೂ ನನಗೆ ಕೊಡದಂತೆ ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ! ಈಗ ಸೌಲನ ತಲೆಯ ಹತ್ತಿರವಿರುವ ಭರ್ಜಿಯನ್ನೂ ನೀರಿನ ತಂಬಿಗೆಯನ್ನೂ ತೆಗೆದುಕೊಂಡ ನಂತರ ನಾವು ಹೋಗೋಣ” ಎಂದು ಹೇಳಿದನು.

12 ಅಂತೆಯೇ, ಸೌಲನ ತಲೆಯ ಹತ್ತಿರವಿದ್ದ ಭರ್ಜಿಯನ್ನೂ ನೀರಿನ ತಂಬಿಗೆಯನ್ನೂ ದಾವೀದನು ತೆಗೆದುಕೊಂಡನು. ನಂತರ ದಾವೀದ ಮತ್ತು ಅಬೀಷೈ ಸೌಲನ ಪಾಳೆಯನ್ನು ಬಿಟ್ಟು ಹೋದರು. ಇದನ್ನು ಯಾರೂ ನೋಡಲಿಲ್ಲ. ಇದರ ಬಗ್ಗೆ ಯಾರಿಗೂ ತಿಳಿಯಲಿಲ್ಲ. ಒಬ್ಬನಾದರೂ ನಿದ್ರೆಯಿಂದ ಎಚ್ಚರಗೊಳ್ಳಲಿಲ್ಲ! ಸೌಲನು ಮತ್ತು ಅವನ ಸೈನಿಕರೆಲ್ಲರೂ ನಿದ್ರಿಸುತ್ತಿದ್ದರು. ಏಕೆಂದರೆ ಯೆಹೋವನು ಅವರಿಗೆ ಗಾಢನಿದ್ರೆಯನ್ನು ಬರಮಾಡಿದ್ದನು.

ದಾವೀದನು ಸೌಲನಿಗೆ ಮತ್ತೆ ಅವಮಾನ ಮಾಡುವನು

13 ದಾವೀದನು ಕಣಿವೆಯ ಮತ್ತೊಂದು ಕಡೆಗೆ ಹೋಗಿ ಬೆಟ್ಟದ ತುದಿಯಲ್ಲಿ ನಿಂತುಕೊಂಡನು. ದಾವೀದನ ಮತ್ತು ಸೌಲನ ಪಾಳೆಯಗಳಿಗೆ ತುಂಬಾ ಅಂತರವಿತ್ತು. 14 ದಾವೀದನು ಸೌಲನ ಸೈನ್ಯವನ್ನೂ ನೇರನ ಮಗನಾದ ಅಬ್ನೇರನನ್ನೂ ಉದ್ದೇಶಿಸಿ, “ಅಬ್ನೇರನೇ, ನನಗೆ ಉತ್ತರಿಸು” ಎಂದು ಕೂಗಿಕೊಂಡನು.

ಅಬ್ನೇರನು, “ನೀನು ಯಾರು? ರಾಜನನ್ನು ನೀನು ಕರೆಯುತ್ತಿರುವುದೇಕೆ?” ಎಂದು ಕೇಳಿದನು.

15 ದಾವೀದನು, “ನೀನು ಶೂರನಲ್ಲವೇ? ಇಸ್ರೇಲಿನಲ್ಲಿನ ಇತರ ಶೂರರಿಗಿಂತಲೂ ನೀನು ಉತ್ತಮನಲ್ಲವೇ? ಹೀಗಿರುವಾಗ ನೀನು ನಿನ್ನ ಒಡೆಯನಾದ ರಾಜನನ್ನು ಏಕೆ ರಕ್ಷಿಸಲಿಲ್ಲ? ಒಬ್ಬ ಸಾಮಾನ್ಯ ಮನುಷ್ಯನು ನಿಮ್ಮ ಪಾಳೆಯಕ್ಕೆ ಬಂದಿದ್ದರೂ ನಿಮ್ಮ ಒಡೆಯನಾದ ರಾಜನನ್ನು ಕೊಲ್ಲುತ್ತಿದ್ದನು. 16 ನೀನು ದೊಡ್ಡ ತಪ್ಪನ್ನು ಮಾಡಿದೆ! ಯೆಹೋವನಾಣೆ, ನೀನು ಮತ್ತು ನಿನ್ನ ಜನರು ಸಾಯಲೇಬೇಕಾಗಿತ್ತು. ಏಕೆನ್ನುವಿಯೊ? ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಾದ ನಿನ್ನ ಒಡೆಯನನ್ನು ನೀನು ರಕ್ಷಿಸಲಾಗಲಿಲ್ಲ. ಸೌಲನ ತಲೆಯ ಹತ್ತಿರವಿದ್ದ ಭರ್ಜಿ ಮತ್ತು ನೀರಿನ ತಂಬಿಗೆಯನ್ನು ಹುಡುಕಿರಿ, ಅವು ಎಲ್ಲಿಗೆ ಹೋದವು?” ಎಂದು ಕೇಳಿದನು.

17 ದಾವೀದನ ಧ್ವನಿಯು ಸೌಲನಿಗೆ ತಿಳಿಯಿತು. ಸೌಲನು, “ನನ್ನ ಮಗನಾದ ದಾವೀದನೇ, ಇದು ನಿನ್ನ ಧ್ವನಿಯೇ?” ಎಂದು ಕೇಳಿದನು.

ದಾವೀದನು, “ಹೌದು, ನನ್ನ ಒಡೆಯನಾದ ರಾಜನೇ, ಇದು ನನ್ನ ಧ್ವನಿ” ಎಂದನು. 18 ದಾವೀದನು, “ಒಡೆಯನೇ, ನನ್ನನ್ನೇಕೆ ಅಟ್ಟಿಸಿಕೊಂಡು ಬರುತ್ತಿರುವೆ? ನಾನು ಮಾಡಿರುವ ತಪ್ಪಾದರೂ ಏನು? ನಾನು ತಪ್ಪಿತಸ್ಥನೇ? 19 ನನ್ನ ಒಡೆಯನೇ, ನನ್ನ ರಾಜನೇ, ನನ್ನ ಮಾತುಗಳನ್ನು ಆಲಿಸು! ನೀನು ನನ್ನ ಮೇಲೆ ಕೋಪಗೊಳ್ಳುವಂತೆ ಯೆಹೋವನು ಮಾಡಿರುವುದಾದರೆ ಆತನಿಗೆ ನೈವೇದ್ಯವನ್ನು ಅರ್ಪಿಸೋಣ. ಆದರೆ ನೀನು ನನ್ನ ಮೇಲೆ ಕೋಪಗೊಳ್ಳುವಂತೆ ಜನರು ಮಾಡಿದ್ದರೆ, ಅವರಿಗೆ ಯೆಹೋವನು ಕೇಡಾಗುವಂತೆ ಮಾಡಲಿ. ನನಗೆ ಯೆಹೋವನು ನೀಡಿದ ಭೂಮಿಯನ್ನು ನಾನು ಬಿಡುವಂತೆ ಜನರು ಬಲವಂತಪಡಿಸಿದರು. ‘ಹೋಗು, ಹೊರದೇಶೀಯರೊಂದಿಗೆ ನೆಲೆಸು. ಹೋಗು, ಇತರ ದೇವರುಗಳನ್ನು ಆರಾಧಿಸು’ ಎಂದು ಜನರು ನನಗೆ ಹೇಳಿದರು. 20 ಯೆಹೋವನ ಸನ್ನಿಧಿಯಿಂದ ದೂರದಲ್ಲಿರುವ ಈ ಸ್ಥಳದಲ್ಲಿ ನನ್ನನ್ನು ಸಾಯಿಸಬೇಡಿ. ಇಸ್ರೇಲರ ರಾಜನು ಒಂದು ಸಣ್ಣ ಹುಳಕ್ಕಾಗಿ ಹುಡುಕುತ್ತಾ ಹೊರ ಬಂದಿದ್ದಾನೆ. ಕೌಜುಗ ಹಕ್ಕಿಯನ್ನು ಬೆಟ್ಟಗಳಲ್ಲಿ ಬೇಟೆಯಾಡುವ ಬೇಟೆಗಾರನಂತೆ ನೀನಿರುವೆಯಲ್ಲಾ!” ಎಂದು ಹೇಳಿದನು.

21 ನಂತರ ಸೌಲನು, “ನಾನು ಪಾಪಮಾಡಿದ್ದೇನೆ. ನನ್ನ ಮಗನಾದ ದಾವೀದನೇ, ಹಿಂದಿರುಗಿ ಬಾ. ನನ್ನ ಜೀವವು ನಿನಗೆ ಮುಖ್ಯವೆಂಬುದನ್ನು ನನಗೆ ನೀನು ಈ ದಿನ ತೋರಿಸಿರುವೆ. ಆದ್ದರಿಂದ ನಾನು ನಿನ್ನನ್ನು ಹಿಂಸಿಸಲು ಪ್ರಯತ್ನಿಸುವುದಿಲ್ಲ. ನಾನು ಮೂರ್ಖನಂತೆ ವರ್ತಿಸಿದೆ. ನಾನು ದೊಡ್ಡ ತಪ್ಪನ್ನು ಮಾಡಿದ್ದೇನೆ” ಎಂದನು.

22 ದಾವೀದನು, “ರಾಜನ ಭರ್ಜಿಯು ಇಲ್ಲಿದೆ. ನಿನ್ನಲ್ಲಿರುವ ಒಬ್ಬ ಯುವಕನು ಇಲ್ಲಿಗೆ ಬಂದು ಅದನ್ನು ತೆಗೆದುಕೊಂಡು ಹೋಗಲಿ. 23 ಪ್ರತಿಯೊಬ್ಬನಿಗೂ ಅವನ ಕಾರ್ಯಗಳಿಗೆ ಮತ್ತು ನಂಬಿಗಸ್ತಿಕೆಗೆ ತಕ್ಕಂತೆ ಯೆಹೋವನು ಪ್ರತಿಫಲ ಕೊಡುವನು. ಇಂದು ಯೆಹೋವನು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೂ ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಾಗಿರುವ ನಿನಗೆ ನಾನು ಕೇಡನ್ನು ಮಾಡುವುದಿಲ್ಲ! 24 ನಿನ್ನ ಜೀವವು ನನಗೆ ಮುಖ್ಯವೆಂಬುದನ್ನು ಈ ದಿನ ನಾನು ನಿನಗೆ ತೋರಿಸಿದೆ! ಇದೇ ರೀತಿ, ನನ್ನ ಜೀವವು ತನಗೆ ಮುಖ್ಯವೆಂಬುದನ್ನು ಯೆಹೋವನು ತೋರಿಸುತ್ತಾನೆ! ಯೆಹೋವನು ನನ್ನನ್ನು ಎಲ್ಲಾ ಕೇಡುಗಳಿಂದಲೂ ರಕ್ಷಿಸುತ್ತಾನೆ” ಎಂದು ಹೇಳಿದನು.

25 ನಂತರ ಸೌಲನು ದಾವೀದನಿಗೆ, “ದೇವರು ನಿನ್ನನ್ನು ಆಶೀರ್ವದಿಸಲಿ, ನನ್ನ ಮಗನಾದ ದಾವೀದನೇ, ನೀನು ದೊಡ್ಡ ಕಾರ್ಯಗಳನ್ನು ಮಾಡುವೆ; ನೀನು ಯಶಸ್ವಿಯಾಗುವೆ” ಎಂದನು.

ದಾವೀದನು ತನ್ನ ಮಾರ್ಗದಲ್ಲಿ ಹೊರಟುಹೋದನು. ಸೌಲನು ಮನೆಗೆ ಹಿಂದಿರುಗಿದನು.

ದಾವೀದನು ಫಿಲಿಷ್ಟಿಯರ ಜೊತೆಯಲ್ಲಿ ವಾಸಿಸುವನು

27 ಆದರೆ ದಾವೀದನು, “ಸೌಲನು ಎಂದಾದರೂ ಒಂದು ದಿನ ನನ್ನನ್ನು ಹಿಡಿದುಕೊಳ್ಳುವನು. ಈಗ ಫಿಲಿಷ್ಟಿಯರ ರಾಜ್ಯಕ್ಕೆ ತಪ್ಪಿಸಿಕೊಂಡು ಹೋಗುವುದೇ ನಾನು ಮಾಡಬಹುದಾದ ಒಳ್ಳೆಯ ಕೆಲಸ. ಆಗ ಸೌಲನು ಇಸ್ರೇಲಿನಲ್ಲಿ ನನ್ನನ್ನು ಹುಡುಕುವುದನ್ನು ಬಿಟ್ಟುಬಿಡುತ್ತಾನೆ. ಸೌಲನಿಂದ ತಪ್ಪಿಸಿಕೊಳ್ಳಲು ಇದೇ ಸರಿಯಾದ ಮಾರ್ಗ” ಎಂದು ತನ್ನಲ್ಲೇ ಯೋಚಿಸಿದನು.

ಆದ್ದರಿಂದ ದಾವೀದನು ತನ್ನ ಆರುನೂರು ಜನರೊಡನೆ ಇಸ್ರೇಲನ್ನು ಬಿಟ್ಟುಹೋದನು. ಅವನು ಮಾವೋಕನ ಮಗನಾದ ಆಕೀಷನಲ್ಲಿಗೆ ಹೋದನು. ಆಕೀಷನು ಗತ್‌ನ ರಾಜ. ದಾವೀದನೂ ಅವನ ಜನರೂ ಅವರ ಕುಟುಂಬಗಳವರೂ ಆಕೀಷನೊಂದಿಗೆ ಗತ್‌ನಲ್ಲಿ ನೆಲೆಸಿದರು. ದಾವೀದನ ಜೊತೆಯಲ್ಲಿ ಅವನ ಇಬ್ಬರು ಹೆಂಡತಿಯರೂ ಇದ್ದರು. ಅವರು ಯಾರೆಂದರೆ, ಇಜ್ರೇಲ್ಯಳಾದ ಅಹೀನೋವಮಳು ಮತ್ತು ಕರ್ಮೆಲಿನ ಅಬೀಗೈಲಳು. ಅಬೀಗೈಲಳು ನಾಬಾಲನ ವಿಧವೆ. ದಾವೀದನು ಗತ್‌ಗೆ ಓಡಿಹೋದನೆಂದು ಜನರು ಸೌಲನಿಗೆ ತಿಳಿಸಿದರು. ಸೌಲನು ಅವನನ್ನು ಹುಡುಕುವುದನ್ನು ಬಿಟ್ಟುಬಿಟ್ಟನು.

ದಾವೀದನು ಆಕೀಷನಿಗೆ, “ನೀನು ನನ್ನನ್ನು ಮೆಚ್ಚಿಕೊಂಡಿದ್ದರೆ ಯಾವುದಾದರೊಂದು ಊರಲ್ಲ್ಲಿ ನನಗೆ ಸ್ಥಳವನ್ನು ಕೊಡು. ನಾನು ನಿನ್ನ ಸೇವಕನಷ್ಟೆ. ನಾನು ನಿನ್ನೊಡನೆ ಈ ರಾಜಧಾನಿಯಲ್ಲಿ ಇರುವುದಕ್ಕಿಂತ ಅಲ್ಲಿ ವಾಸಮಾಡುತ್ತೇನೆ” ಎಂದು ಹೇಳಿದನು.

ಆಕೀಷನು ಕೂಡಲೆ ದಾವೀದನಿಗೆ ಚಿಕ್ಲಗ್ ಎಂಬ ಊರನ್ನು ಕೊಟ್ಟನು. ಅಂದಿನಿಂದಲೂ ಚಿಕ್ಲಗ್ ಊರು ಯೆಹೂದದ ರಾಜನಿಗೆ ಸೇರಿರುತ್ತದೆ. ದಾವೀದನು ಫಿಲಿಷ್ಟಿಯರೊಂದಿಗೆ ಒಂದು ವರ್ಷ ನಾಲ್ಕು ತಿಂಗಳು ವಾಸಮಾಡಿದನು.

ದಾವೀದನು ರಾಜನಾದ ಆಕೀಷನನ್ನು ಮೋಸಗೊಳಿಸುವನು

ದಾವೀದನು ಮತ್ತು ಅವನ ಜನರು ಅಮಾಲೇಕ್ಯರ ಮೇಲೆಯೂ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಯುದ್ಧಮಾಡಲು ಹೋದರು. ದಾವೀದನ ಜನರು ಅವರನ್ನು ಸೋಲಿಸಿ ಅವರ ಸಂಪತ್ತನ್ನು ವಶಪಡಿಸಿಕೊಂಡರು. ಈಜಿಪ್ಟಿನವರೆಗೆ ವಿಸ್ತರಿಸಿರುವ ಶೂರಿನ ಸಮೀಪದ ತೇಲಾಮಿನವರೆಗೂ ಆ ಜನರು ವಾಸಿಸುತ್ತಿದ್ದರು. ದಾವೀದನು ಆ ಪ್ರದೇಶದ ಜನರೊಂದಿಗೆ ಯುದ್ಧಮಾಡಿ ಯಾರನ್ನೂ ಜೀವಸಹಿತ ಬಿಡಲಿಲ್ಲ. ಅವರಿಗೆ ಸೇರಿದ ಕುರಿಗಳನ್ನು ದನಗಳನ್ನು, ಹೇಸರಕತ್ತೆಗಳನ್ನು, ಒಂಟೆಗಳನ್ನು ಮತ್ತು ಬಟ್ಟೆಗಳನ್ನು ದಾವೀದನು ವಶಪಡಿಸಿಕೊಂಡನು. ನಂತರ ಅವುಗಳನ್ನು ಆಕೀಷನ ಬಳಿಗೆ ತಂದನು.

10 ದಾವೀದನು ಅನೇಕ ಸಲ ಹೀಗೆ ಮಾಡಿದನು. ಪ್ರತಿಸಲವೂ ಆಕೀಷನು ದಾವೀದನನ್ನು, “ನೀನು ಎಲ್ಲಿ ಯುದ್ಧಮಾಡಿದೆ ಮತ್ತು ಇವುಗಳನ್ನು ಎಲ್ಲಿಂದ ತಂದೆ” ಎಂದು ಕೇಳುತ್ತಿದ್ದನು. ದಾವೀದನು, “ನಾನು ಯೆಹೂದ ದೇಶದ ದಕ್ಷಿಣ ಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲಿ, “ನಾನು ಎರಹ್ಮೇಲ್ಯರ ದಕ್ಷಿಣಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲೀ “ನಾನು ಕೇನ್ಯರ ದಕ್ಷಿಣ ಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲೀ ಹೇಳುತ್ತಿದ್ದನು. 11 ದಾವೀದನು ಒಬ್ಬ ಗಂಡಸನ್ನಾಗಲಿ ಹೆಂಗಸನ್ನಾಗಲಿ ಗತ್ ಊರಿಗೆ ಜೀವಸಹಿತ ಎಂದೂ ತರಲಿಲ್ಲ. ದಾವೀದನು, “ನಾವು ಒಬ್ಬ ಮನುಷ್ಯನನ್ನು ಜೀವಸಹಿತ ಬಿಟ್ಟರೆ, ನಾನು ನಿಜವಾಗಿ ಮಾಡುತ್ತಿರುವುದನ್ನು ಅವನು ಆಕೀಷನಿಗೆ ತಿಳಿಸಬಹುದು” ಎಂದು ಯೋಚಿಸಿದನು.

ದಾವೀದನು ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಹೀಗೆಯೇ ಮಾಡುತ್ತಿದ್ದನು. 12 ಆಕೀಷನು ದಾವೀದನಲ್ಲಿ ಭರವಸೆ ಇಡತೊಡಗಿದನು. ಆಕೀಷನು ತನ್ನೊಳಗೆ, “ಈಗ ದಾವೀದನ ಸ್ವಂತ ಜನರೇ ಅವನನ್ನು ದ್ವೇಷಿಸುವರು. ಇಸ್ರೇಲರು ದಾವೀದನನ್ನು ಬಹಳವಾಗಿ ದ್ವೇಷಿಸುತ್ತಾರೆ. ಈಗ ದಾವೀದನು ಶಾಶ್ವತವಾಗಿ ನನ್ನ ಸೇವೆಮಾಡುವನು” ಎಂದುಕೊಂಡನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International