Beginning
ದಾವೀದ ಮತ್ತು ಯೋನಾತಾನರು ಆತ್ಮೀಯ ಗೆಳೆಯರಾದರು
18 ದಾವೀದನು ಸೌಲನೊಂದಿಗೆ ಮಾತನಾಡಿದ ಬಳಿಕ ಯೋನಾತಾನನು ದಾವೀದನೊಂದಿಗೆ ಒಂದಾದನು. ಯೋನಾತಾನನು ತನ್ನನ್ನು ಪ್ರೀತಿಸುವಷ್ಟೇ ದಾವೀದನನ್ನು ಪ್ರೀತಿಸಲಾರಂಭಿಸಿದನು. 2 ಸೌಲನು ಅಂದಿನಿಂದ ದಾವೀದನನ್ನು ತನ್ನ ಜೊತೆಯಲ್ಲಿಯೇ ಇರಿಸಿಕೊಂಡನು. ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಲು ಬಿಡಲಿಲ್ಲ. 3 ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಅವನು ದಾವೀದನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. 4 ಯೋನಾತಾನನು ತಾನು ಧರಿಸಿದ್ದ ಮೇಲಂಗಿಯನ್ನೂ ತನ್ನ ಸಮವಸ್ತ್ರಗಳನ್ನೂ ತನ್ನ ಬಿಲ್ಲನ್ನೂ ಕತ್ತಿಯನ್ನೂ ಸೊಂಟಪಟ್ಟಿಯನ್ನೂ ದಾವೀದನಿಗೆ ಕೊಟ್ಟನು.
ಸೌಲನು ದಾವೀದನ ಯಶಸ್ಸನ್ನು ಗಮನಿಸಿದನು
5 ಸೌಲನು ದಾವೀದನನ್ನು ಬೇರೆಬೇರೆ ಯುದ್ಧಗಳಲ್ಲಿ ಹೋರಾಡಲು ಕಳುಹಿಸಿದನು. ದಾವೀದನು ಆ ಯುದ್ಧಗಳಲ್ಲೆಲ್ಲಾ ಯಶ್ವಸಿಯಾದನು. ಆದ್ದರಿಂದ ಸೌಲನು ದಾವೀದನನ್ನು ಸೈನ್ಯಾಧಿಪತಿಯನ್ನಾಗಿ ನೇಮಿಸಿದನು. ಇದು ಸೌಲನ ಅಧಿಕಾರಿಗಳಿಗೂ ಇತರರಿಗೂ ಸಂತಸವನ್ನು ಉಂಟುಮಾಡಿತು! 6 ದಾವೀದನು ಫಿಲಿಷ್ಟಿಯರೊಡನೆ ಹೋರಾಡಲು ಹೋಗುತ್ತಿದ್ದನು. ಯುದ್ಧದ ನಂತರ ಅವನು ಮನೆಗೆ ಹಿಂದಿರುಗುತ್ತಿದ್ದನು. ಇಸ್ರೇಲಿನ ಎಲ್ಲ ಪಟ್ಟಣಗಳಲ್ಲೂ ಹೆಂಗಸರು ದಾವೀದನನ್ನು ನೋಡುವುದಕ್ಕಾಗಿ ಹೊರಬರುತ್ತಿದ್ದರು. ಅವರು ಡೋಲು ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಕೇಕೆ ಹಾಕಿ ನಗುತ್ತಾ ನರ್ತಿಸುತ್ತಿದ್ದರು. ಅವರು ಸೌಲನ ಸಮ್ಮುಖದಲ್ಲಿಯೇ ಇವನ್ನೆಲ್ಲ ಮಾಡುತ್ತಿದ್ದರು. 7 ಹೆಂಗಸರು,
“ಸೌಲನು ಸಾವಿರಾರು ಶತ್ರುಗಳನ್ನು ಕೊಂದರೆ,
ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು”
ಎಂದು ಹಾಡುತ್ತಿದ್ದರು.
8 ಹೆಂಗಸರ ಈ ಹಾಡಿನಿಂದ ಸೌಲನು ಬಹಳವಾಗಿ ವ್ಯಸನಗೊಂಡನು ಮತ್ತು ರೋಷಗೊಂಡನು. “ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು ಎಂದು ಇವರು ಹಾಡುತ್ತಾರಲ್ಲಾ, ಇವನಿಗೆ ರಾಜ್ಯವೊಂದನ್ನು ಬಿಟ್ಟು ಬೇರೆ ಏನು ಕಡಿಮೆಯಾಯಿತು?” ಎಂದು ಆಲೋಚಿಸತೊಡಗಿದನು. “ಸೌಲನು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದ ಹೆಂಗಸರ ಮಾತುಗಳಿಂದ ಸೌಲನು ಚಿಂತೆಗೀಡಾದನು. 9 ಸೌಲನು ಅಂದಿನಿಂದ ದಾವೀದನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು.
ಸೌಲನು ದಾವೀದನಿಗೆ ಭಯಪಟ್ಟನು
10 ಮಾರನೆಯ ದಿನ, ದೇವರಿಂದ ಬಂದ ದುರಾತ್ಮವು ಸೌಲನನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿತು. ಸೌಲನು ತನ್ನ ಮನೆಯಲ್ಲಿ ಹುಚ್ಚನಂತೆ ಕೂಗಿಕೊಳ್ಳುತ್ತಿದ್ದನು. ಆಗ ದಾವೀದನು ಎಂದಿನಂತೆ ಕಿನ್ನರಿಯನ್ನು ಬಾರಿಸುತ್ತಿದ್ದನು. 11 ಸೌಲನ ಕೈಯಲ್ಲಿ ಒಂದು ಈಟಿಯಿತ್ತು. “ಗೋಡೆಗೆ ಹತ್ತಿಕೊಳ್ಳುವಂತೆ ನಾನು ದಾವೀದನನ್ನು ತಿವಿಯುವೆ” ಎಂದು ಅವನು ಯೋಚಿಸಿ ಎರಡು ಬಾರಿ ಈಟಿಯನ್ನು ಎಸೆದನು. ಆದರೆ ದಾವೀದನು ಎರಡು ಸಲವೂ ತಪ್ಪಿಸಿಕೊಂಡನು.
12 ಯೆಹೋವನು ಸೌಲನನ್ನು ಬಿಟ್ಟು ದಾವೀದನ ಜೊತೆಗಿದ್ದನು. ಆದ್ದರಿಂದ ಸೌಲನು ದಾವೀದನಿಗೆ ಭಯಪಟ್ಟನು. 13 ಸೌಲನು ದಾವೀದನನ್ನು ತನ್ನಿಂದ ದೂರಕಳುಹಿಸಿದನು. ಸೌಲನು ದಾವೀದನನ್ನು ಒಂದು ಸಾವಿರ ಸೈನಿಕರಿಗೆ ಸೇನಾಪತಿಯನ್ನಾಗಿ ಮಾಡಿದನು. ದಾವೀದನು ಯುದ್ಧದಲ್ಲಿ ಸೈನಿಕರನ್ನು ಮುನ್ನಡೆಸಿದನು. 14 ಯೆಹೋವನು ದಾವೀದನ ಜೊತೆಗಿದ್ದನು. ಆದ್ದರಿಂದ ದಾವೀದನು ಎಲ್ಲದರಲ್ಲೂ ಯಶ್ವಸಿಯಾದನು. 15 ದಾವೀದನು ಬಹಳವಾಗಿ ಯಶ್ವಸಿಯಾಗುತ್ತಿರುವುದನ್ನು ಕಂಡ ಸೌಲನು ದಾವೀದನಿಗೆ ಮತ್ತಷ್ಟು ಭಯಪಟ್ಟನು. 16 ಆದರೆ ಇಸ್ರೇಲಿನ ಮತ್ತು ಯೆಹೂದದ ಜನರೆಲ್ಲ ದಾವೀದನನ್ನು ಪ್ರೀತಿಸಿದರು. ಅವನು ಯುದ್ಧದಲ್ಲಿ ಅವರನ್ನು ಮುನ್ನಡೆಸಿದ್ದರಿಂದ ಮತ್ತು ಅವರಿಗೋಸ್ಕರ ಹೋರಾಡಿದ್ದರಿಂದ ಅವರು ಅವನನ್ನು ಬಹಳವಾಗಿ ಪ್ರೀತಿಸಿದರು.
ಸೌಲನ ಮಗಳೊಂದಿಗೆ ದಾವೀದನ ಮದುವೆ
17 ಆದರೆ ಸೌಲನು ದಾವೀದನನ್ನು ಕೊಲ್ಲಬೇಕೆಂದಿದ್ದನು. ದಾವೀದನಿಗೆ ಮೋಸಮಾಡಲು ಸೌಲನು ಒಂದು ಉಪಾಯವನ್ನು ಹೂಡಿ ಅವನಿಗೆ, “ನನ್ನ ಹಿರಿಯ ಮಗಳಾದ ಮೇರಬಳು ಇದ್ದಾಳೆ. ನಾನು ಅವಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಆಗ ನೀನೊಬ್ಬ ಬಲಶಾಲಿಯಾದ ಸೈನಿಕನಾಗುವೆ. ನೀನು ನನಗೆ ಮಗನಂತಿರುವೆ! ನಂತರ ನೀನು ಹೋಗಿ ಯೆಹೋವನ ಯುದ್ಧಗಳಲ್ಲಿ ಹೋರಾಡು” ಎಂದು ಹೇಳಿದನು. ಆದರೆ ಇದೊಂದು ಮೋಸವಾಗಿತ್ತು. “ಈಗ ನಾನು ದಾವೀದನನ್ನು ಕೊಲ್ಲುವ ಅಗತ್ಯವಿಲ್ಲ. ನನಗೋಸ್ಕರ ಫಿಲಿಷ್ಟಿಯರೇ ಅವನನ್ನು ಕೊಲ್ಲುವಂತೆ ಮಾಡುತ್ತೇನೆ” ಎಂಬದು ಸೌಲನ ನಿಜವಾದ ಆಲೋಚನೆಯಾಗಿತ್ತು.
18 ಆದರೆ ದಾವೀದನು, “ನಾನು ಪ್ರಮುಖ ಕುಲದವನೂ ಅಲ್ಲ; ಪ್ರಮುಖನಾದ ವ್ಯಕ್ತಿಯೂ ಅಲ್ಲ! ರಾಜನ ಮಗಳನ್ನು ಮದುವೆಯಾಗಲು ನಾನು ಯೋಗ್ಯನಲ್ಲ” ಎಂದು ಹೇಳಿದನು.
19 ಸೌಲನ ಮಗಳಾದ ಮೇರಾಬಳಿಗೆ ದಾವೀದನನ್ನು ಮದುವೆಯಾಗುವ ಕಾಲ ಬಂದಾಗ, ಸೌಲನು ಅವಳನ್ನು ಮೆಹೋಲದ ಅದ್ರೀಯೇಲನಿಗೆ ಮದುವೆ ಮಾಡಿಕೊಟ್ಟನು.
20 ಸೌಲನ ಮತ್ತೊಬ್ಬ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಮೀಕಲಳು ದಾವೀದನನ್ನು ಪ್ರೀತಿಸುತ್ತಿರುವುದನ್ನು ಸೌಲನಿಗೆ ಜನರು ತಿಳಿಸಿದರು. ಸೌಲನಿಗೆ ಇದು ಸಂತಸವನ್ನು ಉಂಟುಮಾಡಿತು. 21 ಸೌಲನು, “ನಾನು ದಾವೀದನನ್ನು ಬಲೆಗೆ ಬೀಳಿಸಲು ಮೀಕಲಳನ್ನು ಬಳಸಿಕೊಳ್ಳುತ್ತೇನೆ. ದಾವೀದನನ್ನು ಮದುವೆಯಾಗಲು ನಾನು ಮೀಕಲಳಿಗೆ ಅವಕಾಶ ಕೊಡುತ್ತೇನೆ. ನಂತರ ಅವನನ್ನು ಕೊಲ್ಲಲು ಫಿಲಿಷ್ಟಿಯರಿಗೆ ಬಿಟ್ಟುಕೊಡುತ್ತೇನೆ” ಎಂದು ಯೋಚಿಸಿದನು. ಹೀಗೆ ಸೌಲನು ಎರಡನೆಯ ಸಲ ದಾವೀದನಿಗೆ, “ನೀನು ನನ್ನ ಮಗಳನ್ನು ಇಂದು ಮದುವೆಯಾಗು” ಎಂದು ಹೇಳಿದನು.
22 ಸೌಲನು ತನ್ನ ಅಧಿಕಾರಿಗಳಿಗೆ ಅಪ್ಪಣೆ ಮಾಡಿದನು. ಸೌಲನು ಅವರಿಗೆ, “ದಾವೀದನೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ‘ರಾಜನು ನಿನ್ನನ್ನು ಇಷ್ಟಪಟ್ಟಿದ್ದಾನೆ. ಅವನ ಅಧಿಕಾರಿಗಳೂ ನಿನ್ನನ್ನು ಇಷ್ಟಪಡುತ್ತಾರೆ. ನೀನು ಅವನ ಮಗಳನ್ನು ಮದುವೆಯಾಗಬೇಕು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು.
23 ಸೌಲನ ಅಧಿಕಾರಿಗಳು ದಾವೀದನಿಗೆ ಆ ವಿಚಾರಗಳನ್ನು ತಿಳಿಸಿದರು. ಆದರೆ ದಾವೀದನು, “ರಾಜನ ಅಳಿಯನಾಗುವುದು ಸುಲಭವೆಂದು ನೀವು ತಿಳಿದಿರುವಿರಾ? ರಾಜನ ಮಗಳಿಗೆ ಕೊಡಲು ನನ್ನ ಹತ್ತಿರ ಹಣವೇ ಇಲ್ಲ! ನಾನು ಕೇವಲ ಬಡವ, ಸಾಮಾನ್ಯ ಮನುಷ್ಯ” ಎಂದು ಉತ್ತರಿಸಿದನು.
24 ದಾವೀದನು ತಿಳಿಸಿದ್ದನ್ನೆಲ್ಲ ಸೌಲನ ಅಧಿಕಾರಿಗಳು ಸೌಲನಿಗೆ ಹೇಳಿದರು. 25 ಸೌಲನು ಅವರಿಗೆ, “ನೀವು ದಾವೀದನ ಬಳಿಗೆ ಹೋಗಿ ಹೇಳಿ: ‘ನೀನು ರಾಜನ ಮಗಳಿಗಾಗಿ ಹಣ ಕೊಡಬೇಕಿಲ್ಲ. ಸೌಲನು ತನ್ನ ಶತ್ರುಗಳ ಮೇಲೆ ಸೇಡನ್ನು ತೀರಿಸಿಕೊಳ್ಳುತ್ತಾನೆ. ಆದ್ದರಿಂದ ಅವನ ಮಗಳನ್ನು ಮದುವೆಯಾಗಲು ಕೊಡಬೇಕಾದ ದಕ್ಷಿಣೆ ಏನೆಂದರೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲುಗಳು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು. ಸೌಲನ ರಹಸ್ಯವಾದ ಉಪಾಯ ಇದಾಗಿದ್ದಿತು. ಫಿಲಿಷ್ಟಿಯರು ದಾವೀದನನ್ನು ಕೊಂದು ಬಿಡಬಹುದೆಂದು ಸೌಲನು ಭಾವಿಸಿದ್ದನು.
26 ಸೌಲನ ಅಧಿಕಾರಿಗಳು ಆ ಸಂಗತಿಗಳನ್ನು ದಾವೀದನಿಗೆ ತಿಳಿಸಿದರು. ದಾವೀದನು ರಾಜನ ಅಳಿಯನಾಗಬೇಕೆಂದು ಬಯಸಿದನು. ಆದ್ದರಿಂದ ಅವನು ತಕ್ಷಣವೇ ಕಾರ್ಯನಿರತನಾದನು. 27 ದಾವೀದನು ಮತ್ತು ಅವನ ಜನರು ಫಿಲಿಷ್ಟಿಯರೊಂದಿಗೆ ಹೋರಾಡಲು ಹೋದರು. ಅವರು ಇನ್ನೂರು ಜನ ಫಿಲಿಷ್ಟಿಯರನ್ನು ಕೊಂದು ಅವರ ಮುಂದೊಗಲುಗಳನ್ನು ತೆಗೆದುಕೊಂಡು ಬಂದು ರಾಜನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಸಂಪೂರ್ಣವಾಗಿ ಸೌಲನಿಗೆ ಒಪ್ಪಿಸಿದರು.
ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ದಾವೀದನಿಗೆ ಮದುವೆ ಮಾಡಿಕೊಟ್ಟನು. 28 ಯೆಹೋವನು ದಾವೀದನೊಂದಿಗಿರುವುದನ್ನೂ ತನ್ನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸುತ್ತಿರುವುದನ್ನೂ ಸೌಲನು ಗಮನಿಸಿದನು. 29 ಆದ್ದರಿಂದ ಸೌಲನು ದಾವೀದನಿಗೆ ಇನ್ನೂ ಹೆಚ್ಚು ಭಯಪಟ್ಟನು. ಸೌಲನು ಆ ಕಾಲದಲ್ಲೆಲ್ಲ ದಾವೀದನಿಗೆ ವಿರೋಧವಾಗಿದ್ದನು.
30 ಫಿಲಿಷ್ಟಿಯ ಸೇನಾಧಿಪತಿಗಳು ಇಸ್ರೇಲರೊಂದಿಗೆ ಹೋರಾಡಲು ಹೋಗುತ್ತಲೇ ಇದ್ದರು. ಆದರೆ ದಾವೀದನು ಪ್ರತಿಸಲವೂ ಅವರನ್ನು ಸೋಲಿಸುತ್ತಿದ್ದನು. ದಾವೀದನು ಸೌಲನ ಒಬ್ಬ ಯಶಸ್ವಿಯಾದ ಅಧಿಕಾರಿಯಾಗಿದ್ದನು! ಆದ್ದರಿಂದ ದಾವೀದನು ಪ್ರಖ್ಯಾತನಾದನು.
ಯೋನಾತಾನನಿಂದ ದಾವೀದನಿಗೆ ಸಹಾಯ
19 ಸೌಲನು ತನ್ನ ಮಗನಾದ ಯೋನಾತಾನನಿಗೂ ತನ್ನ ಅಧಿಕಾರಿಗಳಿಗೂ ದಾವೀದನನ್ನು ಕೊಂದು ಹಾಕಲು ತಿಳಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳ ಇಷ್ಟಪಡುತ್ತಿದ್ದನು. 2 ಯೋನಾತಾನನು ದಾವೀದನಿಗೆ, “ಎಚ್ಚರಿಕೆಯಿಂದಿರು! ಸೌಲನು ನಿನ್ನನ್ನು ಕೊಲ್ಲಲು ಅವಕಾಶವನ್ನು ಕಾಯುತ್ತಿದ್ದಾನೆ. ಬೆಳಿಗ್ಗೆ, ಹೊಲದೊಳಗೆ ಹೋಗಿ ಅಡಗಿಕೊ. 3 ನಾನು ನನ್ನ ತಂದೆಯೊಡನೆ ಹೊಲಕ್ಕೆ ಬರುತ್ತೇನೆ. ನೀನು ಅಡಗಿರುವ ಸ್ಥಳದ ಹತ್ತಿರ ನಾವು ನಿಲ್ಲುತ್ತೇವೆ. ನಾನು ನನ್ನ ತಂದೆಯೊಡನೆ ನಿನ್ನ ಬಗ್ಗೆ ಮಾತನಾಡುತ್ತೇನೆ. ನಂತರ ನಾನು ತಿಳಿದುಕೊಂಡದ್ದನ್ನು ನಿನಗೆ ಹೇಳುತ್ತೇನೆ” ಎಂದನು.
4 ಯೋನಾತಾನನು ತನ್ನ ತಂದೆಯಾದ ಸೌಲನೊಂದಿಗೆ ಮಾತನಾಡಿದನು. ಯೋನಾತಾನನು ದಾವೀದನ ಬಗ್ಗೆ ಒಳ್ಳೆಯ ಸಂಗತಿಗಳನ್ನು ತಿಳಿಸಿದನು. ಯೋನಾತಾನನು, “ನೀನು ರಾಜ. ದಾವೀದನು ನಿನ್ನ ಸೇವಕ. ದಾವೀದನು ನಿನಗೆ ಯಾವ ಕೇಡನ್ನೂ ಮಾಡಿಲ್ಲ. ಆದ್ದರಿಂದ ಅವನಿಗೆ ಯಾವ ಕೇಡನ್ನೂ ಮಾಡಬೇಡ. ದಾವೀದನು ನಿನಗೆ ಯಾವಾಗಲೂ ಒಳ್ಳೆಯವನಾಗಿಯೇ ಇದ್ದಾನೆ. 5 ದಾವೀದನು ಫಿಲಿಷ್ಟಿಯನಾದ ಗೊಲ್ಯಾತನನ್ನು ಕೊಂದಾಗ ತನ್ನ ಜೀವವನ್ನೇ ಪಣವಾಗಿಟ್ಟಿದ್ದನು. ಯೆಹೋವನು ಇಸ್ರೇಲರೆಲ್ಲರಿಗೂ ಬಹು ದೊಡ್ಡ ಜಯವನ್ನುಂಟುಮಾಡಿದನು. ನೀನು ಅದನ್ನು ನೋಡಿದೆ ಮತ್ತು ಸಂತೋಷಗೊಂಡೆ. ದಾವೀದನಿಗೆ ಕೇಡುಮಾಡಲು ನೀನು ಏಕೆ ಬಯಸಿರುವೆ? ಅವನು ನಿರಪರಾಧಿ. ಅವನನ್ನು ಕೊಲ್ಲಲು ಯಾವ ಕಾರಣವೂ ಇಲ್ಲ!” ಎಂದು ಹೇಳಿದನು.
6 ಯೋನಾತಾನನು ಹೇಳಿದ್ದನ್ನೆಲ್ಲ ಸೌಲನು ಕೇಳಿ, “ಯೆಹೋವನಾಣೆ, ದಾವೀದನನ್ನು ಕೊಲ್ಲುವುದಿಲ್ಲ” ಎಂದು ಪ್ರಮಾಣ ಮಾಡಿ ಹೇಳಿದನು.
7 ಆದ್ದರಿಂದ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಎಲ್ಲವನ್ನೂ ತಿಳಿಸಿದನು. ಬಳಿಕ ಯೋನಾತಾನನು ದಾವೀದನನ್ನು ಸೌಲನ ಹತ್ತಿರಕ್ಕೆ ಕರೆದುಕೊಂಡು ಬಂದನು. ದಾವೀದನು ಮೊದಲಿನಂತೆ ಸೌಲನ ಜೊತೆಗಿದ್ದನು.
ದಾವೀದನನ್ನು ಕೊಲ್ಲಲು ಸೌಲನ ಮರುಪ್ರಯತ್ನ
8 ಯುದ್ಧವು ಮತ್ತೆ ಬಂದಿತು. ದಾವೀದನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋಗಿ ಅವರನ್ನು ಸೋಲಿಸಿ ಓಡಿಸಿಬಿಟ್ಟನು. 9 ಆದರೆ ಯೆಹೋವನಿಂದ ಬಂದ ದುರಾತ್ಮವು ಸೌಲನ ಮೈಮೇಲೆ ಬಂದಿತು. ಸೌಲನು ತನ್ನ ಮನೆಯಲ್ಲಿ ಕುಳಿತಿದ್ದನು. ಸೌಲನ ಈಟಿಯು ಅವನ ಕೈಯಲ್ಲಿಯೇ ಇದ್ದಿತು. 10 ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿವಿಯಬೇಕೆಂದು ಸೌಲನು ತನ್ನ ಈಟಿಯನ್ನು ಎಸೆದನು. ಆದರೆ ದಾವೀದನು ಸರಿದುಕೊಂಡಿದ್ದರಿಂದ ಈಟಿಯು ಗೋಡೆಗೆ ನಾಟಿಕೊಂಡಿತು. ದಾವೀದನು ಆ ದಿನ ರಾತ್ರಿಯಲ್ಲೇ ತಪ್ಪಿಸಿಕೊಂಡು ಓಡಿಹೋದನು.
11 ಸೌಲನು ದಾವೀದನ ಮನೆಗೆ ತನ್ನ ಜನರನ್ನು ಕಳುಹಿಸಿದನು. ಅವರು ದಾವೀದನ ಮನೆಯನ್ನು ಕಾಯ್ದರು. ಅವರು ರಾತ್ರಿಯೆಲ್ಲಾ ಅಲ್ಲಿಯೇ ಇದ್ದರು. ಅವರು ದಾವೀದನನ್ನು ಬೆಳಿಗ್ಗೆ ಕೊಲ್ಲಲು ಕಾಯುತ್ತಿದ್ದರು. ಆದರೆ ದಾವೀದನ ಹೆಂಡತಿಯಾದ ಮೀಕಲಳು ಅವನಿಗೆ, “ನೀನು ಈ ರಾತ್ರಿಯೇ ಓಡಿಹೋಗಿ, ನಿನ್ನ ಜೀವವನ್ನು ಕಾಪಾಡಿಕೋ. ಇಲ್ಲವಾದರೆ, ನಿನ್ನನ್ನು ಅವರು ಕೊಂದುಬಿಡುತ್ತಾರೆ” ಎಂದು ಎಚ್ಚರಿಸಿದಳು. 12 ನಂತರ ಮೀಕಲಳು ಕಿಟಿಕಿಯಿಂದ ದಾವೀದನನ್ನು ಹೊರಗೆ ಇಳಿಸಿದಳು. ದಾವೀದನು ತಪ್ಪಿಸಿಕೊಂಡು ಓಡಿಹೋದನು. 13 ಮೀಕಲಳು ಮನೆಯಲ್ಲಿದ್ದ ವಿಗ್ರಹವನ್ನು ಹಾಸಿಗೆಯ ಮೇಲೆ ಇಟ್ಟು ಅದಕ್ಕೆ ಬಟ್ಟೆಗಳನ್ನು ತೊಡಿಸಿ ಅದರ ತಲೆಗೆ ಹೋತದ ಕೂದಲನ್ನೂ ಅಂಟಿಸಿದಳು.
14 ಸೌಲನು ದಾವೀದನನ್ನು ಬಂಧಿಸಿ ಕರೆತರಲು ಸಂದೇಶಕರನ್ನು ಕಳುಹಿಸಿದನು. ಆದರೆ ಮೀಕಲಳು, “ದಾವೀದನಿಗೆ ಹುಷಾರಿಲ್ಲ” ಎಂದು ಹೇಳಿದಳು.
15 ಸಂದೇಶಕರು ಹೋಗಿ ಸೌಲನಿಗೆ ವಿಷಯ ತಿಳಿಸಿದಾಗ ಅವನು ದಾವೀದನನ್ನು ನೋಡಲು ಮತ್ತೆ ಸಂದೇಶಕರನ್ನು ಕಳುಹಿಸಿದನು. ಸೌಲನು ಅವರಿಗೆ, “ದಾವೀದನನ್ನು ನನ್ನ ಬಳಿಗೆ ಕರೆತನ್ನಿ! ಹಾಸಿಗೆಯ ಮೇಲೆ ಮಲಗಿರುವ ಅವನನ್ನು ಹಾಸಿಗೆಯ ಸಮೇತವಾಗಿ ತೆಗೆದುಕೊಂಡು ಬನ್ನಿ! ನಾನು ಅವನನ್ನು ಕೊಲ್ಲುತ್ತೇನೆ” ಎಂದು ಹೇಳಿದನು.
16 ಸಂದೇಶಕರು ದಾವೀದನ ಮನೆಗೆ ಹೋದರು. ಅವರು ದಾವೀದನನ್ನು ಕರೆದೊಯ್ಯಲು ಒಳಗಡೆ ಹೋದಾಗ ಹಾಸಿಗೆಯ ಮೇಲಿರುವುದು ಕೇವಲ ವಿಗ್ರಹವೆಂಬುದೂ ಅದರ ಕೂದಲು ಕೇವಲ ಹೋತದ ಕೂದಲೆಂಬುದೂ ಅವರಿಗೆ ಗೊತ್ತಾಯಿತು.
17 ಸೌಲನು ಮೀಕಲಳಿಗೆ, “ನೀನು ಈ ರೀತಿ ನನಗೆ ಮೋಸ ಮಾಡಿದ್ದೇಕೆ? ನನ್ನ ಶತ್ರುವು ತಪ್ಪಿಸಿಕೊಳ್ಳಲು ನೀನು ಅವಕಾಶ ಮಾಡಿಕೊಟ್ಟೆ! ದಾವೀದನು ಓಡಿಹೋದನಲ್ಲಾ!” ಎಂದು ಹೇಳಿದನು.
ಮೀಕಲಳು ಸೌಲನಿಗೆ, “ತಪ್ಪಿಸಿಕೊಳ್ಳಲು ತನಗೆ ಸಹಾಯ ಮಾಡದಿದ್ದರೆ ನನ್ನನ್ನು ಕೊಲ್ಲುವುದಾಗಿ ದಾವೀದನು ತಿಳಿಸಿದ!” ಎಂದು ಹೇಳಿದಳು.
ರಾಮದ ಪಾಳೆಯದಲ್ಲಿ ದಾವೀದ
18 ದಾವೀದನು ತಪ್ಪಿಸಿಕೊಂಡು ರಾಮದಲ್ಲಿದ್ದ ಸಮುವೇಲನ ಹತ್ತಿರಕ್ಕೆ ಓಡಿಹೋದನು. ಸೌಲನು ತನಗೆ ಮಾಡಿದ್ದನ್ನೆಲ್ಲ ದಾವೀದನು ಸಮುವೇಲನಿಗೆ ಹೇಳಿದನು. ನಂತರ ದಾವೀದನು ಮತ್ತು ಸಮುವೇಲನು ಪ್ರವಾದಿಗಳಿದ್ದ ಪಾಳೆಯಕ್ಕೆ ಹೋದರು. ದಾವೀದನು ಅಲ್ಲಿ ನೆಲೆಸಿದನು.
19 ದಾವೀದನು ರಾಮದ ಪಾಳೆಯದಲ್ಲಿರುವ ಸಂಗತಿಯು ಸೌಲನಿಗೆ ತಿಳಿದುಬಂದಿತು. 20 ದಾವೀದನನ್ನು ಬಂಧಿಸಿ ತರಲು ಸೌಲನು ಜನರನ್ನು ಕಳುಹಿಸಿದನು. ಆದರೆ ಆ ಜನರು ಪಾಳೆಯಕ್ಕೆ ಬರುವಷ್ಟರಲ್ಲಿ ಪ್ರವಾದಿಗಳು ಅಲ್ಲಿ ಪ್ರವಾದಿಸುತ್ತಿದ್ದರು. ಸಮುವೇಲನು ಅವರ ನಾಯಕನಾಗಿ ನಿಂತಿದ್ದನು. ದೇವರಾತ್ಮವು ಸಂದೇಶಕರ ಮೇಲೆ ಬಂದದ್ದರಿಂದ ಅವರೂ ಪ್ರವಾದಿಸಲಾರಂಭಿಸಿದರು.
21 ಸೌಲನು ಈ ಸುದ್ದಿಯನ್ನು ಕೇಳಿ ಇತರ ಸಂದೇಶಕರನ್ನು ಕಳುಹಿಸಿದನು. ಆದರೆ ಅವರೂ ಪ್ರವಾದಿಸಲಾರಂಭಿಸಿದರು. ಆದ್ದರಿಂದ ಸೌಲನು ಮೂರನೆಯ ಬಾರಿ ಸಂದೇಶಕರನ್ನು ಕಳುಹಿಸಿದನು, ಅವರೂ ಪ್ರವಾದಿಸಲಾರಂಭಿಸಿದರು. 22 ಕಡೆಯದಾಗಿ ಸೌಲನೇ ರಾಮಕ್ಕೆ ಹೋದನು. ಸೇಕೂವಿನಲ್ಲಿ ಕಣದ ಬಳಿ ಇರುವ ದೊಡ್ಡ ಬಾವಿಯ ಸಮೀಪಕ್ಕೆ ಅವನು ಬಂದು, “ಸಮುವೇಲ ಮತ್ತು ದಾವೀದ ಎಲ್ಲಿದ್ದಾರೆ?” ಎಂದು ಕೇಳಿದನು.
ಜನರು, “ರಾಮದ ಹತ್ತಿರವಿರುವ ಪಾಳೆಯದಲ್ಲಿದ್ದಾರೆ” ಎಂದು ಉತ್ತರಕೊಟ್ಟರು.
23 ನಂತರ ಸೌಲನು ರಾಮದ ಹತ್ತಿರವಿರುವ ಪಾಳೆಯಕ್ಕೆ ಹೋದನು. ದೇವರಾತ್ಮವು ಸೌಲನ ಮೈಮೇಲೂ ಬಂದಿತು. ಅವನೂ ಪ್ರವಾದಿಸಲಾರಂಭಿಸಿದನು. ಸೌಲನು ರಾಮದ ಪಾಳೆಯದವರೆಗೂ ಪ್ರವಾದಿಸುತ್ತಾ ಹೋದನು. 24 ನಂತರ ಸೌಲನು ತಾನು ಧರಿಸಿದ್ದ ಬಟ್ಟೆಗಳನ್ನು ತೆಗೆದುಹಾಕಿದನು. ಸಮುವೇಲನ ಎದುರಿನಲ್ಲಿ ಸೌಲನೂ ಸಹ ಪ್ರವಾದಿಸುತ್ತಿದ್ದನು. ಅಂದು ಹಗಲು ರಾತ್ರಿಯೆಲ್ಲ ಸೌಲನು ಬೆತ್ತಲೆಯಾಗಿ ಅಲ್ಲಿಯೇ ಮಲಗಿದ್ದನು.
ಆದ್ದರಿಂದಲೇ ಜನರು, “ಸೌಲನೂ ಪ್ರವಾದಿಗಳಲ್ಲಿ ಒಬ್ಬನೇ?” ಎಂದು ಹೇಳುತ್ತಾರೆ.
ದಾವೀದ ಮತ್ತು ಯೋನಾತಾನರ ಒಪ್ಪಂದ
20 ದಾವೀದನು ರಾಮದ ಪಾಳೆಯದಿಂದ ಓಡಿಹೋದನು. ದಾವೀದನು ಯೋನಾತಾನನ ಬಳಿಗೆ ಹೋಗಿ, “ನಾನು ಮಾಡಿರುವ ತಪ್ಪೇನು? ನನ್ನ ಅಪರಾಧವೇನು? ನಿನ್ನ ತಂದೆಯು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದೇಕೆ?” ಎಂದು ಕೇಳಿದನು.
2 ಯೋನಾತಾನನು, “ಎಂದಿಗೂ ಇಲ್ಲ. ನನ್ನ ತಂದೆಯು ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿಲ್ಲ! ನನ್ನ ತಂದೆಯು ನನಗೆ ತಿಳಿಸದೆ ಏನನ್ನೂ ಮಾಡುವುದಿಲ್ಲ. ಅದು ಬಹು ಮುಖ್ಯವಾದದ್ದೇ ಆಗಿರಲಿ ಇಲ್ಲವೆ ಮುಖ್ಯವಾಗಿಲ್ಲದ್ದೇ ಆಗಿರಲಿ, ನನ್ನ ತಂದೆಯು ನನಗೆ ತಿಳಿಸೇ ತಿಳಿಸುತ್ತಾನೆ. ನನ್ನ ತಂದೆಯು ನಿನ್ನನ್ನು ಕೊಲ್ಲಬೇಕೆಂದಿದ್ದರೆ ನಾನು ನಿನಗೆ ತಿಳಿಸುತ್ತಿರಲಿಲ್ಲವೇ?” ಎಂದು ಹೇಳಿದನು.
3 ಆದರೆ ದಾವೀದನು, “ನಾನು ನಿನ್ನ ಗೆಳೆಯನೆಂಬುದು ನಿನ್ನ ತಂದೆಗೆ ಚೆನ್ನಾಗಿ ತಿಳಿದಿದೆ. ನಿನ್ನ ತಂದೆಯು, ‘ಯೋನಾತಾನನಿಗೆ ಇದು ತಿಳಿಯಲೇಬಾರದು. ಅವನಿಗೆ ತಿಳಿದುಬಿಟ್ಟರೆ ಅವನು ತನ್ನ ಹೃದಯದಲ್ಲಿ ದುಃಖಪಟ್ಟು ದಾವೀದನಿಗೆ ಹೇಳಿಬಿಡುತ್ತಾನೆ’ ಎಂದುಕೊಂಡಿದ್ದಾನೆ. ಯೆಹೋವನಾಣೆ, ನಿನ್ನ ಜೀವದಾಣೆ, ನಾನು ಸಾವಿಗೆ ಬಹು ಹತ್ತಿರವಾಗಿದ್ದೇನೆ” ಎಂದು ಹೇಳಿದನು.
4 ಯೋನಾತಾನನು, “ನೀನು ಬಯಸುವ ಏನನ್ನಾದರೂ ಮಾಡಲು ನಾನು ಸಿದ್ಧನಿದ್ದೇನೆ” ಎಂದು ದಾವೀದನಿಗೆ ಹೇಳಿದನು.
5 ಆಗ ದಾವೀದನು, “ನಾಳೆ ಅಮಾವಾಸ್ಯೆ ಹಬ್ಬ, ನಾನು ರಾಜನ ಜೊತೆಯಲ್ಲಿ ಊಟಮಾಡಬೇಕಾಗಿದೆ. ಆದರೆ ನಾನು ಈಗಲೇ ಹೋಗಿ ಸಂಜೆಯವರೆಗೆ ಹೊಲದಲ್ಲಿ ಅಡಗಿಕೊಳ್ಳಲು ಅವಕಾಶ ಮಾಡಿಕೊಡು. 6 ನಾನು ಇಲ್ಲದಿರುವುದನ್ನು ನಿಮ್ಮ ತಂದೆಯು ಗಮನಿಸಿದರೆ ಅವನಿಗೆ, ‘ದಾವೀದನು ಬೆತ್ಲೆಹೇಮಿನ ತನ್ನ ಮನೆಗೆ ಹೋಗಲು ಬಯಸಿದನು. ಅವನ ಕುಟುಂಬದವರು ಅಲ್ಲಿ ವಾರ್ಷಿಕಯಜ್ಞದ ಔತಣವನ್ನು ಏರ್ಪಡಿಸಿದ್ದಾರೆ. ಬೆತ್ಲೆಹೇಮಿಗೆ ಹೋಗಿ ತನ್ನ ಕುಟುಂಬದವರ ಜೊತೆಯಿರಲು ಅವಕಾಶ ಕೊಡಬೇಕೆಂದು ದಾವೀದನು ನನ್ನನ್ನು ಕೇಳಿಕೊಂಡನು’ ಎಂದು ಹೇಳು. 7 ನಿನ್ನ ತಂದೆಯು, ‘ಒಳ್ಳೆಯದಾಯಿತು’ ಎಂದರೆ ನಾನು ಬದುಕಿದೆ. ಆದರೆ ನಿನ್ನ ತಂದೆಯು ಕೋಪಗೊಂಡರೆ ಅವನು ನನಗೆ ಕೇಡುಮಾಡಲು ಬಯಸಿದ್ದಾನೆಂದು ತಿಳಿದುಕೋ. 8 ಯೋನಾತಾನನೇ, ನನ್ನ ಮೇಲೆ ದಯೆಯಿರಲಿ. ನಾನು ನಿನ್ನ ಸೇವಕ. ನೀನು ಯೆಹೋವನ ಮುಂದೆ ನನ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವೆ. ನಾನು ತಪ್ಪಿತಸ್ಥನಾಗಿದ್ದರೆ, ನೀನೇ ನನ್ನನ್ನು ಕೊಂದುಬಿಡು! ಆದರೆ ನಿನ್ನ ತಂದೆಯ ಹತ್ತಿರಕ್ಕೆ ನನ್ನನ್ನು ಕರೆದೊಯ್ಯಬೇಡ” ಎಂದು ಹೇಳಿದನು.
9 ಯೋನಾತಾನನು, “ಇಲ್ಲ, ಎಂದೆಂದಿಗೂ ಇಲ್ಲ! ನನ್ನ ತಂದೆಯು ನಿನಗೆ ಕೇಡು ಮಾಡುವುದಕ್ಕಾಗಿ ಉಪಾಯ ಮಾಡುತ್ತಿರುವುದು ನನಗೆ ತಿಳಿದುಬಂದರೆ ನಾನು ನಿನ್ನನ್ನು ಎಚ್ಚರಿಸುತ್ತೇನೆ” ಎಂದು ಉತ್ತರಿಸಿದನು.
10 ದಾವೀದನು, “ನಿನ್ನ ತಂದೆಯು ನಿನಗೆ ಕೆಟ್ಟ ಸಂಗತಿಗಳನ್ನು ಹೇಳಿದರೆ, ನನ್ನನ್ನು ಎಚ್ಚರಿಸುವವರು ಯಾರು?” ಎಂದು ಕೇಳಿದನು.
11 ಆಗ ಯೋನಾತಾನನು, “ನಾವು ಹೊಲದೊಳಕ್ಕೆ ಹೋಗೋಣ ಬಾ” ಎಂದು ಹೇಳಿದನು. ಅಂತೆಯೇ ಯೋನಾತಾನನು ಮತ್ತು ದಾವೀದನು ಒಟ್ಟಾಗಿ ಹೊಲದೊಳಕ್ಕೆ ಹೋದರು.
12 ಯೋನಾತಾನನು ದಾವೀದನಿಗೆ, “ನಾನು ಇಸ್ರೇಲರ ದೇವರಾದ ಯೆಹೋವನ ಎದುರಿನಲ್ಲಿ ಈ ಪ್ರಮಾಣವನ್ನು ಮಾಡುತ್ತೇನೆ. ನನ್ನ ತಂದೆಯು ನಿನ್ನ ಬಗ್ಗೆ ಒಳ್ಳೆಯ ಭಾವನೆಯನ್ನು ಹೊಂದಿರುವನೊ ಇಲ್ಲವೊ ಎಂಬುದನ್ನು ತಿಳಿದುಕೊಳ್ಳುತ್ತೇನೆ. ನಂತರ ಸಂದೇಶವೊಂದನ್ನು ನಾನು ಮೂರು ದಿನಗಳೊಳಗಾಗಿ ನಿನಗೆ ಕಳುಹಿಸಿಕೊಡುತ್ತೇನೆ. 13 ನನ್ನ ತಂದೆಯು ನಿನಗೆ ಕೇಡುಮಾಡಬೇಕೆಂದಿದ್ದರೆ, ಅದನ್ನು ನಾನು ನಿನಗೆ ತಿಳಿಸಿ, ನೀನು ಸುರಕ್ಷಿತವಾಗಿರಲು ಅವಕಾಶ ಮಾಡಿಕೊಡುತ್ತೇನೆ. ಈ ಕಾರ್ಯವನ್ನು ನಾನು ಮಾಡದೆ ಹೋದರೆ ಯೆಹೋವನು ನನ್ನನ್ನು ದಂಡಿಸಲಿ. ಯೆಹೋವನು ನನ್ನ ತಂದೆಯ ಜೊತೆಯಲ್ಲಿದ್ದಂತೆ ನಿನ್ನ ಜೊತೆಯೂ ಇರಲಿ. 14 ನನ್ನ ಜೀವಮಾನವೆಲ್ಲಾ ನೀನು ನನಗೆ ದಯಾಳುವಾಗಿರು. 15 ನನ್ನ ಕುಟುಂಬದ ಮೇಲೆ ಶಾಶ್ವತವಾಗಿ ನಿನ್ನ ದಯೆಯಿರಲಿ. ಭೂಮಿಯ ಮೇಲಿರುವ ನಿನ್ನ ಶತ್ರುಗಳೆಲ್ಲರನ್ನೂ ಯೆಹೋವನು ನಾಶಪಡಿಸುತ್ತಾನೆ. 16 ಒಂದುವೇಳೆ ಆ ಸಮಯದಲ್ಲಿ ಯೋನಾತಾನನ ಕುಟುಂಬವು ದಾವೀದನಿಂದ ಅಗಲಿ ಹೋಗಬೇಕಿದ್ದರೆ ಅಗಲಿ ಹೋಗಲಿ. ದಾವೀದನ ಶತ್ರುಗಳನ್ನು ಯೆಹೋವನು ದಂಡಿಸಲಿ” ಎಂದು ಹೇಳಿದನು.
17 ಯೋನಾತಾನನು ದಾವೀದನಿಂದ ತನ್ನ ಪ್ರೀತಿಯ ವಾಗ್ದಾನವನ್ನು ಮತ್ತೆ ಹೇಳಿಸಿದನು. ಯೋನಾತಾನನು ತನ್ನನ್ನು ತಾನು ಪ್ರೀತಿಸುತ್ತಿದ್ದಷ್ಟೆ ದಾವೀದನನ್ನೂ ಪ್ರೀತಿಸುತ್ತಿದ್ದುದ್ದೇ ಅದಕ್ಕೆ ಕಾರಣ.
18 ಯೋನಾತಾನನು ದಾವೀದನಿಗೆ, “ನಾಳೆ ಅಮಾವಾಸ್ಯೆಯ ಔತಣ. ನಿನ್ನ ಸ್ಥಳವು ಖಾಲಿಯಾಗಿರುವುದನ್ನು ನನ್ನ ತಂದೆಯು ಕಂಡು, ನೀನು ಹೊರಟುಹೋಗಿರುವೆ ಎಂದು ತಿಳಿದುಕೊಳ್ಳುವನು. 19 ಈ ತೊಂದರೆಯು ಆರಂಭವಾದಾಗ ಎಲ್ಲಿ ಅಡಗಿದ್ದೆಯೋ ಅದೇ ಸ್ಥಳಕ್ಕೆ ಮೂರನೆಯ ದಿನ ಹೋಗು. ಆ ಬೆಟ್ಟದ ಸಮೀಪದಲ್ಲಿ ಕಾಯುತ್ತಿರು. 20 ಮೂರನೆಯ ದಿನ, ನಾನು ಆ ಬೆಟ್ಟಕ್ಕೆ ಹೋಗುತ್ತೇನೆ ಮತ್ತು ಗುರಿಯಿಟ್ಟು ಹೊಡೆಯುವವನಂತೆ ಕೆಲವು ಬಾಣಗಳನ್ನು ಹೊಡೆಯುತ್ತೇನೆ. 21 ನಂತರ ಆ ಬಾಣಗಳನ್ನು ಹುಡುಕಿಕೊಂಡು ಬರಲು ಹುಡುಗನನ್ನು ಕಳುಹಿಸುತ್ತೇನೆ. ಎಲ್ಲವೂ ಒಳಿತಾಗಿದ್ದರೆ ನಾನು ಆ ಹುಡುಗನಿಗೆ, ‘ನೀನು ಬಹು ದೂರ ಹೋಗಿರುವೆ! ಬಾಣಗಳು ನನ್ನ ಹತ್ತಿರದಲ್ಲೇ ಇವೆ. ಹಿಂತಿರುಗಿಬಂದು ಅವುಗಳನ್ನು ತೆಗೆದುಕೋ’ ಎಂದು ಹೇಳುತ್ತೇನೆ. ನಾನು ಆ ರೀತಿ ಹೇಳಿದರೆ, ನೀನು ಅಡಗಿದ್ದ ಸ್ಥಳದಿಂದ ಹೊರಗೆ ಬಾ. ಯೆಹೋವನಾಣೆ, ನೀನು ಸುರಕ್ಷಿತನಾಗಿರುವೆ. ನಿನಗೆ ಯಾವ ಅಪಾಯವೂ ಇಲ್ಲ. 22 ಆದರೆ ಅಲ್ಲಿ ತೊಂದರೆಯಿರುವುದಾದರೆ, ನಾನು ಆ ಹುಡುಗನಿಗೆ, ‘ಬಾಣಗಳು ಬಹಳ ದೂರದಲ್ಲಿವೆ. ಹೋಗಿ ಅವುಗಳನ್ನು ತೆಗೆದುಕೊಂಡು ಬಾ’ ಎಂದು ಹೇಳುವೆ. ನಾನು ಆ ರೀತಿ ಹೇಳಿದರೆ, ನೀನು ಅಲ್ಲಿಂದ ಹೊರಟುಹೋಗು. ಯೆಹೋವನೇ ನಿನ್ನನ್ನು ದೂರ ಕಳುಹಿಸುತ್ತಿದ್ದಾನೆ. 23 ನಿನ್ನ ಮತ್ತು ನನ್ನ ಮಧ್ಯೆ ನಡೆದ ಈ ಒಪ್ಪಂದವನ್ನು ಜ್ಞಾಪಿಸಿಕೊ. ಯೆಹೋವನು ಸದಾಕಾಲ ನಮಗೆ ಸಾಕ್ಷಿಯಾಗಿರುವನು” ಎಂದು ಹೇಳಿದನು.
24 ನಂತರ ದಾವೀದನು ಹೊಲದಲ್ಲಿ ಅಡಗಿಕೊಂಡನು.
ಔತಣದಲ್ಲಿ ಸೌಲನ ವರ್ತನೆ
ಅಮಾವಾಸ್ಯೆಯ ಔತಣದ ಸಮಯವು ಬಂದಿತು. ರಾಜನು ಊಟಕ್ಕೆ ಕುಳಿತನು. 25 ರಾಜನು ತಾನು ಯಾವಾಗಲೂ ಕುಳಿತುಕೊಳ್ಳುವಂತೆ ಗೋಡೆಯ ಸಮೀಪದಲ್ಲಿ ಕುಳಿತುಕೊಂಡನು. ಯೋನಾತಾನನು ಸೌಲನ ಎದುರಾಗಿ ಕುಳಿತುಕೊಂಡನು. ಸೌಲನ ಪಕ್ಕದಲ್ಲಿ ಅಬ್ನೇರನು ಕುಳಿತುಕೊಂಡನು. ಆದರೆ ದಾವೀದನ ಸ್ಥಳವು ಖಾಲಿಯಾಗಿತ್ತು. 26 ಸೌಲನು ಆ ದಿನ ಏನನ್ನೂ ಹೇಳದೆ, “ದಾವೀದನಿಗೆ ಏನೋ ಸಂಭವಿಸಿರಬಹುದು ಆದ್ದರಿಂದ ಅವನು ಇಂದು ಶುದ್ಧನಾಗಿರಲಿಕ್ಕಿಲ್ಲ” ಎಂದು ಯೋಚಿಸಿದನು.
27 ಮಾರನೆಯ ದಿನದಲ್ಲಿ, ಅಂದರೆ ಆ ತಿಂಗಳ ಎರಡನೆಯ ದಿನದಲ್ಲಿ ದಾವೀದನ ಸ್ಥಳವು ಮತ್ತೆ ಖಾಲಿಯಾಗಿತ್ತು. ಆಗ ಸೌಲನು ತನ್ನ ಮಗನಾದ ಯೋನಾತಾನನಿಗೆ, “ನಿನ್ನೆ ಮತ್ತು ಇಂದು ಅಮಾವಾಸ್ಯೆ ಔತಣಕ್ಕೆ ಇಷಯನ ಮಗನಾದ ದಾವೀದನು ಏಕೆ ಬರಲಿಲ್ಲ?” ಎಂದು ಕೇಳಿದನು.
28 ಯೋನಾತಾನನು, “ಬೆತ್ಲೆಹೇಮಿಗೆ ಹೋಗಲು ತನಗೆ ಅವಕಾಶಕೊಡಬೇಕೆಂದು ದಾವೀದನು ನನ್ನನ್ನು ಬಹಳವಾಗಿ ಕೇಳಿಕೊಂಡನು. 29 ‘ನಮ್ಮ ಗೋತ್ರದವರು ಬೆತ್ಲೆಹೇಮಿನಲ್ಲಿ ಯಜ್ಞವನ್ನು ಅರ್ಪಿಸುತ್ತಿರುವುದರಿಂದ ನನ್ನ ಸಹೋದರರು ನನಗೂ ಬರಬೇಕೆಂದು ಕೇಳಿಕೊಂಡಿದ್ದಾರೆ. ನೀನು ನನ್ನ ಗೆಳೆಯನಾಗಿರುವುದಾದರೆ ನನ್ನ ಸೋದರರನ್ನು ನೋಡಿಕೊಂಡು ಬರಲು ದಯವಿಟ್ಟು ನನಗೆ ಅವಕಾಶಕೊಡು ಎಂದು ಹೇಳಿದನು.’ ಆದ್ದರಿಂದಲೇ ದಾವೀದನು ರಾಜನ ಊಟದ ಮೇಜಿಗೆ ಬಂದಿಲ್ಲ” ಎಂದು ಉತ್ತರಿಸಿದನು.
30 ಸೌಲನು ಯೋನಾತಾನನ ಮೇಲೆ ಬಹಳ ಕೋಪಗೊಂಡು, “ನೀನು ಅವಿಧೇಯಳಾದ ದಾಸಿಯ ಮಗ. ನೀನೂ ಅವಳಂತೆಯೇ ಅವಿಧೇಯ. ನೀನು ದಾವೀದನ ಪಕ್ಷವಹಿಸಿರುವುದು ನನಗೆ ಗೊತ್ತಿದೆ. ನೀನು ನಿನಗೂ ಮತ್ತು ನಿನ್ನ ತಾಯಿಗೂ ನಾಚಿಕೆಯನ್ನು ತಂದಿರುವೆ. 31 ಇಷಯನ ಮಗ ಬದುಕಿರುವವರೆಗೆ ನೀನು ರಾಜನಾಗುವುದೇ ಇಲ್ಲ; ನಿನಗೆ ರಾಜ್ಯಾಧಿಕಾರವೂ ಸಿಗುವುದಿಲ್ಲ. ಈಗ ದಾವೀದನನ್ನು ಕರೆದುಕೊಂಡು ಬಾ! ಅವನೊಬ್ಬ ಸತ್ತಮನುಷ್ಯ!” ಎಂದು ಹೇಳಿದನು.
32 ಯೋನಾತಾನನು ತನ್ನ ತಂದೆಗೆ, “ದಾವೀದನನ್ನು ಏಕೆ ಕೊಲ್ಲಬೇಕು? ಅವನು ಮಾಡಿದ ತಪ್ಪಾದರೂ ಏನು?” ಎಂದು ಕೇಳಿದನು.
33 ಆದರೆ ಸೌಲನು ಯೋನಾತಾನನನ್ನು ಕೊಲ್ಲುವುದಕ್ಕಾಗಿ ಈಟಿಯನ್ನು ಅವನ ಕಡೆಗೆ ಎಸೆದನು. ದಾವೀದನನ್ನು ಕೊಲ್ಲಲು ತನ್ನ ತಂದೆಯು ದೃಢನಿರ್ಧಾರ ಮಾಡಿದ್ದಾನೆಂದು ಯೋನಾತಾನನು ತಿಳಿದುಕೊಂಡನು. 34 ಯೋನಾತಾನನು ಬಹಳ ಕೋಪಗೊಂಡು ಊಟದ ಮೇಜನ್ನು ಬಿಟ್ಟುಹೋದನು. ಯೋನಾತಾನನು ತನ್ನ ತಂದೆಯ ಮೇಲೆ ಬಹಳವಾಗಿ ಬೇಸರಗೊಂಡಿದ್ದರಿಂದ ಮತ್ತು ಕೋಪವುಳ್ಳವನಾಗಿದ್ದರಿಂದ ಎರಡನೆ ದಿನ ಔತಣದಲ್ಲಿ ಅವನು ಏನನ್ನೂ ತಿನ್ನಲಿಲ್ಲ. ಸೌಲನು ದಾವೀದನಿಗೆ ಅವಮಾನ ಮಾಡಿದ್ದರಿಂದ ಯೋನಾತಾನನು ಕೋಪಗೊಂಡಿದ್ದನು. ಸೌಲನು ದಾವೀದನನ್ನು ಕೊಲ್ಲಬೇಕೆಂದಿದ್ದುದರಿಂದ ಯೋನಾತಾನನು ದುಃಖಿಸಿದನು.
ದಾವೀದ ಮತ್ತು ಯೋನಾತಾನರ ಬೀಳ್ಕೊಡುಗೆ
35 ಮಾರನೆಯ ದಿನ ಬೆಳಿಗ್ಗೆ ಯೋನಾತಾನನು ಹೊಲಕ್ಕೆ ಹೋದನು. ಅವನು ದಾವೀದನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ಅವನನ್ನು ನೋಡಲು ಹೋದನು. ಯೋನಾತಾನನು ಒಬ್ಬ ಬಾಲಕನನ್ನು ತನ್ನೊಂದಿಗೆ ಕರೆದುಕೊಂಡು ಹೋದನು. 36 ಯೋನಾತಾನನು ಆ ಬಾಲಕನಿಗೆ, “ನಾನು ಪ್ರಯೋಗಿಸುವ ಬಾಣಗಳನ್ನು ಹುಡುಕಲು ಹೋಗು” ಎಂದು ಹೇಳಿದನು. ಬಾಲಕನು ಓಡಲು ಆರಂಭಿಸಿದನು, ಯೋನಾತಾನನು ಆ ಬಾಲಕನ ಆಚೆಗೆ ಬಾಣಗಳನ್ನು ಪ್ರಯೋಗಿಸಿದನು. 37 ಬಾಣಗಳು ಹೋಗಿ ಬಿದ್ದ ಸ್ಥಳಕ್ಕೆ ಬಾಲಕನು ಹೋದನು. ಆದರೆ ಯೋನಾತಾನನು, “ಬಾಣಗಳು ಬಹಳ ದೂರದಲ್ಲಿವೆ!” ಎಂದು ಹೇಳಿದನು. 38 ನಂತರ ಯೋನಾತಾನನು, “ಬೇಗ ಹೋಗು! ಅವುಗಳನ್ನು ತೆಗೆದುಕೊಂಡು ಬಾ! ಅಲ್ಲಿಯೇ ನಿಲ್ಲಬೇಡ!” ಎಂದು ಕೂಗಿಹೇಳಿದನು. ಆ ಬಾಲಕನು ಬಾಣಗಳನ್ನೆಲ್ಲ ಆರಿಸಿಕೊಂಡು ತನ್ನ ಒಡೆಯನ ಬಳಿಗೆ ತಂದನು. 39 ಅಲ್ಲಿ ಏನು ನಡೆಯಿತು ಎಂಬುದು ಬಾಲಕನಿಗೇನೂ ತಿಳಿಯಲಿಲ್ಲ. ಯೋನಾತಾನ ಮತ್ತು ದಾವೀದರಿಗೆ ಮಾತ್ರ ತಿಳಿದಿತ್ತು. 40 ಯೋನಾತಾನನು ತನ್ನ ಬಿಲ್ಲು ಮತ್ತು ಬಾಣಗಳನ್ನು ಬಾಲಕನಿಗೆ ಕೊಟ್ಟನು. ನಂತರ ಯೋನಾತಾನನು ಆ ಬಾಲಕನಿಗೆ, “ಪಟ್ಟಣಕ್ಕೆ ಹಿಂದಿರುಗಿ ಹೋಗು” ಎಂದು ಹೇಳಿದನು.
41 ಬಾಲಕನು ಹೊರಟುಹೋದನು. ದಾವೀದನು ತಾನು ಅಡಗಿದ್ದ ಬೆಟ್ಟದ ಮತ್ತೊಂದು ಕಡೆಯ ಸ್ಥಳದಿಂದ ಹೊರಬಂದನು. ದಾವೀದನು ಯೋನಾತಾನನ ಮುಂದೆ ಬಂದು ಮೂರು ಸಲ ತನ್ನ ಮುಖವನ್ನು ನೆಲದವರೆಗೂ ಬಗ್ಗಿಸಿ ನಮಸ್ಕರಿಸಿದನು. ನಂತರ ದಾವೀದ ಮತ್ತು ಯೋನಾತಾನರು ಪರಸ್ಪರ ಮುದ್ದಿಟ್ಟರು, ಅವರಿಬ್ಬರೂ ಒಟ್ಟಾಗಿ ಅತ್ತರು. ದಾವೀದನು ಯೋನಾತಾನನಿಗಿಂತ ಹೆಚ್ಚು ಅತ್ತನು.
42 ಯೋನಾತಾನನು ದಾವೀದನಿಗೆ, “ಸಮಾಧಾನದಿಂದ ಹೋಗು. ನಾವಿಬ್ಬರೂ ಗೆಳೆಯರಾಗಿರಲು ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದ್ದೇವೆ. ನಮ್ಮಿಬ್ಬರಿಗೂ ನಮ್ಮ ಸಂತತಿಯವರಿಗೂ ಇರುವ ಸಂಬಂಧಕ್ಕೆ ಯೆಹೋವನೇ ಸಾಕ್ಷಿ ಎಂದು ಹೇಳಿದ್ದೇವೆ” ಎಂದನು.
Kannada Holy Bible: Easy-to-Read Version. All rights reserved. © 1997 Bible League International