Beginning
ಸೌಲನಿಂದ ಅಮಾಲೇಕ್ಯರ ನಾಶನ
15 ಒಂದು ದಿನ ಸಮುವೇಲನು ಸೌಲನಿಗೆ, “ಯೆಹೋವನು ಇಸ್ರೇಲರ ಮೇಲೆ ನಿನ್ನನ್ನು ರಾಜನನ್ನಾಗಿ ಅಭಿಷೇಕಿಸಲು ನನ್ನನ್ನು ಕಳುಹಿಸಿದನು. ಈಗ ಯೆಹೋವನ ಸಂದೇಶವನ್ನು ಕೇಳು. 2 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ಇಸ್ರೇಲರು ಈಜಿಪ್ಟಿನಿಂದ ಹೊರಬಂದಾಗ ಅಮಾಲೇಕ್ಯರು ಅವರನ್ನು ಕಾನಾನಿಗೆ ಹೋಗದಂತೆ ತಡೆಯಲು ಪ್ರಯತ್ನಿಸಿದರು. ಅಮಾಲೇಕ್ಯರು ಮಾಡಿದ್ದನ್ನು ನಾನು ನೋಡಿದೆ. 3 ಈಗ, ನೀನು ಹೋಗಿ ಅಮಾಲೇಕ್ಯರ ವಿರುದ್ಧ ಹೋರಾಡು. ನೀನು ಅಮಾಲೇಕ್ಯರನ್ನೂ ಮತ್ತು ಅವರಿಗೆ ಸೇರಿದ ಎಲ್ಲವನ್ನೂ ನಾಶಗೊಳಿಸಬೇಕು. ಯಾರನ್ನೂ ಜೀವದಿಂದ ಉಳಿಸಬೇಡ, ನೀನು ಎಲ್ಲ ಗಂಡಸರನ್ನು ಮತ್ತು ಹೆಂಗಸರನ್ನು ಕೊಲ್ಲಬೇಕು. ನೀನು ಎಲ್ಲ ಮಕ್ಕಳನ್ನೂ ಎಳೆಕೂಸುಗಳನ್ನೂ ಕೊಲ್ಲಬೇಕು. ನೀನು ಅವರಿಗೆ ಸೇರಿದ ಎಲ್ಲ ಹಸುಗಳನ್ನೂ ಕುರಿಗಳನ್ನೂ ಒಂಟೆಗಳನ್ನೂ ಕತ್ತೆಗಳನ್ನೂ ಕೊಂದುಹಾಕಬೇಕು’” ಎಂದು ಹೇಳಿದನು.
4 ಸೌಲನು ತೆಲಾಯೀಮಿನಲ್ಲಿ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದನು. ಅಲ್ಲಿ ಎರಡು ಲಕ್ಷ ಮಂದಿ ಭೂಸೈನಿಕರಿದ್ದರು ಮತ್ತು ಇತರ ಹತ್ತು ಸಾವಿರ ಮಂದಿ ಜನರಿದ್ದರು. ಯೆಹೂದ್ಯರೂ ಅವರೊಂದಿಗೆ ಸೇರಿಕೊಂಡಿದ್ದರು. 5 ಸೌಲನು ಅಮಾಲೇಕ್ಯರ ನಗರಕ್ಕೆ ಹೋಗಿ ಅಲ್ಲಿನ ಕಣಿವೆಯಲ್ಲಿ ಹೊಂಚುಹಾಕುತ್ತಿದ್ದನು. 6 ಸೌಲನು ಕೇನ್ಯದ ಜನರಿಗೆ, “ಅಮಾಲೇಕ್ಯರನ್ನು ತ್ಯಜಿಸಿ ಹೊರಗೆ ಹೋಗಿ, ಆಗ ನಿಮ್ಮನ್ನು ಅಮಾಲೇಕ್ಯರೊಂದಿಗೆ ನಾಶಗೊಳಿಸುವುದಿಲ್ಲ. ಇಸ್ರೇಲರು ಈಜಿಪ್ಟಿನಿಂದ ಹೊರ ಬಂದಾಗ ನೀವು ಅವರಿಗೆ ಅನುಕಂಪ ತೋರಿದ್ದೀರಿ” ಎಂದು ಹೇಳಿದನು. ಆದ್ದರಿಂದ ಕೇನ್ಯರು ಅಮಾಲೇಕ್ಯರನ್ನು ಬಿಟ್ಟುಹೋದರು.
7 ಸೌಲನು ಅಮಾಲೇಕ್ಯರನ್ನು ಸೋಲಿಸಿದನು. ಅವನು ಹವೀಲಾದಿಂದ ಈಜಿಪ್ಟಿನ ಗಡಿಯಲ್ಲಿರುವ ಶೂರಿನವರೆಗೂ ಅವರೊಡನೆ ಹೋರಾಡಿದನು. 8 ಸೌಲನು ಅಮಾಲೇಕ್ಯರ ರಾಜನಾದ ಅಗಾಗನನ್ನು ಜೀವಸಹಿತ ಉಳಿಸಿದನು. ಆದರೆ ಉಳಿದ ಅಮಾಲೇಕ್ಯರನ್ನೆಲ್ಲ ಕೊಂದುಹಾಕಿದನು. 9 ಹೀಗೆ ಸೌಲನು ಮತ್ತು ಇಸ್ರೇಲ್ ಸೈನಿಕರು ಅಗಾಗನಿಗೆ ಜೀವದಾನ ಮಾಡಿದರು. ಅವರು ಉತ್ತಮ ಕುರಿಗಳನ್ನೂ ದನಗಳನ್ನೂ ಆಡಿನ ಮರಿಗಳನ್ನೂ ಉಳಿಸಿದರು. ಅವರು ಉಪಯುಕ್ತವಾದುದನ್ನು ಉಳಿಸಿ, ಅನುಪಯುಕ್ತವಾದುದನ್ನು ನಾಶಗೊಳಿಸಿದರು.
ಸಮುವೇಲನು ಸೌಲನಿಗೆ ಅವನ ಪಾಪದ ಬಗ್ಗೆ ತಿಳಿಸುವನು
10 ಸಮುವೇಲನಿಗೆ ಯೆಹೋವನ ಸಂದೇಶ ಬಂದಿತು. 11 ಯೆಹೋವನು ಸಮುವೇಲನಿಗೆ, “ಸೌಲನು ನನ್ನ ಮಾರ್ಗವನ್ನು ತ್ಯಜಿಸಿದನು. ನಾನು ಸೌಲನನ್ನು ರಾಜನನ್ನಾಗಿ ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತೇನೆ. ನಾನು ಆಜ್ಞಾಪಿಸಿದ ಕಾರ್ಯಗಳನ್ನು ಅವನು ಮಾಡುತ್ತಿಲ್ಲ” ಎಂದು ಹೇಳಿದನು. ಸಮುವೇಲನು ತಳಮಳಗೊಂಡನು. ಅವನು ರಾತ್ರಿಯೆಲ್ಲ ಅಳುತ್ತಾ ಯೆಹೋವನಲ್ಲಿ ಮೊರೆಯಿಟ್ಟನು.
12 ಸಮುವೇಲನು ಮಾರನೆಯ ದಿನ ಬೆಳಿಗ್ಗೆ ಮೇಲೆದ್ದು, ಸೌಲನನ್ನು ಭೇಟಿಮಾಡಲು ಹೋದನು. ಆದರೆ ಜನರೆಲ್ಲ ಸಮುವೇಲನಿಗೆ, “ಸೌಲನು ತನ್ನ ಗೌರವಾರ್ಥವಾಗಿ ಜ್ಞಾಪಕಸ್ತಂಭವನ್ನು ನಿರ್ಮಿಸಲು ಕರ್ಮೆಲ್ ಎಂಬ ಪಟ್ಟಣಕ್ಕೆ ಹೋದನು. ನಂತರ ಸೌಲನು ಕೆಲವು ಪ್ರದೇಶಗಳನ್ನು ಸುತ್ತಿಕೊಂಡು ಗಿಲ್ಗಾಲಿಗೆ ಹೋದನು” ಎಂದು ಹೇಳಿದರು.
ಸಮುವೇಲನು ಸೌಲನಿದ್ದ ಸ್ಥಳಕ್ಕೆ ಹೋದನು. ಸೌಲನು ಅಮಾಲೇಕ್ಯರಿಂದ ವಶಪಡಿಸಿಕೊಂಡ ಪಶುಗಳನ್ನು ಪ್ರಥಮ ಸರ್ವಾಂಗಹೋಮವಾಗಿ ಯೆಹೋವನಿಗೆ ಅರ್ಪಿಸುತ್ತಿದ್ದನು. 13 ಸೌಲನು ಸಮುವೇಲನ ಹತ್ತಿರಕ್ಕೆ ಹೋಗಿ, “ಯೆಹೋವನು ನಿನ್ನನ್ನು ಆಶೀರ್ವದಿಸಲಿ; ನಾನು ಯೆಹೋವನ ಆಜ್ಞೆಗಳನ್ನು ಪಾಲಿಸಿದ್ದೇನೆ” ಎಂದು ಹೇಳಿದನು.
14 ಅದಕ್ಕೆ ಸಮುವೇಲನು, “ಹಾಗಿದ್ದರೆ ನಾನು ಕೇಳುತ್ತಿರುವ ಶಬ್ದವೇನು? ದನಕುರಿಗಳ ಶಬ್ದವು ಕೇಳುತ್ತಿದೆಯಲ್ಲಾ!” ಎಂದನು.
15 ಸೌಲನು, “ಸೈನಿಕರು ಅಮಾಲೇಕ್ಯರಿಂದ ವಶಪಡಿಸಿಕೊಂಡ ಪಶುಗಳಲ್ಲಿ ಉತ್ತಮವಾದುದ್ದನ್ನು ನಿನ್ನ ದೇವರಾದ ಯೆಹೋವನಿಗೆ ಅರ್ಪಿಸುವುದಕ್ಕಾಗಿ ತೆಗೆದುಕೊಂಡು ಬಂದಿದ್ದಾರೆ. ಆದರೆ ನಾವು ಉಳಿದೆಲ್ಲವನ್ನು ನಾಶಪಡಿಸಿದೆವು” ಎಂದು ಉತ್ತರಿಸಿದನು.
16 ಸಮುವೇಲನು ಸೌಲನಿಗೆ, “ಯೆಹೋವನು ಕಳೆದ ರಾತ್ರಿ ನನಗೆ ಹೇಳಿದ್ದನ್ನು ನಿನಗೆ ತಿಳಿಸುತ್ತೇನೆ” ಎಂದನು.
ಸೌಲನು. “ಸರಿ, ತಿಳಿಸು” ಎಂದು ಉತ್ತರಿಸಿದನು.
17 ಸಮುವೇಲನು, “ನೀನು ಮೊದಲು ನಿನ್ನನ್ನು ಅಲ್ಪನೆಂದು ತಿಳಿದಿದ್ದೆ. ಯೆಹೋವನು ನಿನ್ನನ್ನು ಇಸ್ರೇಲರಿಗೆ ರಾಜನನ್ನಾಗಿ ಆರಿಸಿಕೊಂಡದ್ದರಿಂದ ಇಸ್ರೇಲ್ ಕುಲಗಳಿಗೆ ನಾಯಕನಾದೆ. 18 ಆತನು ನಿನಗೆ, ‘ಹೋಗು ದುಷ್ಟರಾದ ಅಮಾಲೇಕ್ಯರ ಮೇಲೆ ಯುದ್ಧ ಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಗೊಳಿಸು’ ಎಂದು ಆಜ್ಞಾಪಿಸಿದರು. 19 ಆದರೆ ನೀನು ಯೆಹೋವನ ಮಾತುಗಳಿಗೆ ಕಿವಿಗೊಡಲಿಲ್ಲ. ನೀನು ಅವುಗಳನ್ನು ನಿನ್ನ ಬಳಿಯಲ್ಲಿಟ್ಟುಕೊಳ್ಳಲು ಬಯಸಿದೆ. ಹೀಗೆ ಯೆಹೋವನು ಕೆಟ್ಟದೆಂದು ಹೇಳಿದ್ದನ್ನೇ ನೀನು ಮಾಡಿದೆ!” ಎಂದು ಹೇಳಿದನು.
20 ಸೌಲನು, “ಆದರೆ ನಾನು ಯೆಹೋವನಿಗೆ ವಿಧೇಯನಾದೆ. ಆತನು ಕಳುಹಿಸಿದಲ್ಲಿಗೆ ನಾನು ಹೋಗಿ ಅಮಾಲೇಕ್ಯರೆಲ್ಲರನ್ನು ನಾಶಗೊಳಿಸಿದೆ. ಆದರೆ ಒಬ್ಬನನ್ನೇ ನಾನು ತಂದೆನು. ಅವನೇ ರಾಜನಾದ ಅಗಾಗ. 21 ನಿನ್ನ ದೇವರಾದ ಯೆಹೋವನಿಗೆ ಗಿಲ್ಗಾಲಿನಲ್ಲಿ ಯಜ್ಞವನ್ನರ್ಪಿಸುವುದಕ್ಕಾಗಿ ಸೈನಿಕರು ಉತ್ತಮವಾದ ದನಕುರಿಗಳನ್ನು ವಶಪಡಿಸಿಕೊಂಡು ಬಂದರು” ಎಂದು ಉತ್ತರಿಸಿದನು.
22 ಆದಕ್ಕೆ ಸಮುವೇಲನು, “ಯೆಹೋವನಿಗೆ ಯಾವುದು ಹೆಚ್ಚು ಮೆಚ್ಚಿಗೆಯಾಗಿದೆ? ಸರ್ವಾಂಗಹೋಮಗಳೇ? ಯಜ್ಞಗಳೇ? ಇಲ್ಲವೆ ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವುದೇ? ದೇವರಿಗೆ ಯಜ್ಞವನ್ನು ಸಮರ್ಪಿಸುವುದಕ್ಕಿಂತ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದೇ ಉತ್ತಮ. ಟಗರುಗಳ ಕೊಬ್ಬನ್ನು ಅರ್ಪಿಸುವುದಕ್ಕಿಂತ ಆತನ ಮಾತುಗಳನ್ನು ಆಲಿಸುವುದು ಉತ್ತಮ. 23 ಅವಿಧೇಯತೆಯು ಮಾಟಮಂತ್ರಗಳಷ್ಟೇ ಪಾಪಪೂರಿತವಾದುದು. ಮೊಂಡುತನದಿಂದ ತನ್ನ ಇಷ್ಟದಂತೆ ಮಾಡುವುದು ವಿಗ್ರಹಾರಾಧನೆಯಷ್ಟೇ ಪಾಪಪೂರಿತವಾದುದು. ನೀನು ಯೆಹೋವನ ಆಜ್ಞೆಗಳಿಗೆ ವಿಧೇಯನಾಗಲಿಲ್ಲ. ಈ ಕಾರಣದಿಂದ ಈಗ ಯೆಹೋವನು ನಿನ್ನನ್ನು ರಾಜನನ್ನಾಗಿ ಸ್ವೀಕರಿಸಿಕೊಳ್ಳುವುದಿಲ್ಲ” ಎಂದು ಸೌಲನಿಗೆ ಉತ್ತರಿಸಿದನು.
24 ಆಗ ಸೌಲನು ಸಮುವೇಲನಿಗೆ, “ನಾನು ಪಾಪ ಮಾಡಿದ್ದೇನೆ. ನಾನು ಯೆಹೋವನ ಆಜ್ಞೆಗಳಿಗೆ ವಿಧೇಯನಾಗಲಿಲ್ಲ; ನೀನು ಹೇಳಿದ್ದನ್ನು ನಾನು ಮಾಡಲಿಲ್ಲ. ನಾನು ಜನರಿಗೆ ಹೆದರಿ ಅವರು ಹೇಳಿದಂತೆ ಮಾಡಿದೆ. 25 ಈಗ ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ, ನನ್ನ ಪಾಪವನ್ನು ಕ್ಷಮಿಸು. ನನ್ನೊಂದಿಗೆ ಹಿಂದಿರುಗಿ ಬಾ, ಆಗ ನಾನು ಯೆಹೋವನನ್ನು ಆರಾಧಿಸಲು ಸಾಧ್ಯವಾಗುವುದು” ಎಂದು ಅವನನ್ನು ಬೇಡಿಕೊಂಡನು.
26 ಆದರೆ ಸಮುವೇಲನು ಸೌಲನಿಗೆ, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಆಜ್ಞೆಯನ್ನು ನಿರಾಕರಿಸಿರುವೆ. ಈಗ ಆತನೂ ನಿನ್ನನ್ನು ಇಸ್ರೇಲಿನ ರಾಜತ್ವದಿಂದ ನಿರಾಕರಿಸುತ್ತಾನೆ” ಎಂದು ಹೇಳಿದನು.
27 ಸಮುವೇಲನು ಹೋಗಲು ತಿರುಗಿದಾಗ ಸೌಲನು ಸಮುವೇಲನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು. ಮೇಲಂಗಿಯು ಹರಿದುಹೋಯಿತು. 28 ಆಗ ಸಮುವೇಲನು ಸೌಲನಿಗೆ, “ನೀನು ನನ್ನ ಮೇಲಂಗಿಯನ್ನು ಹರಿದುಹಾಕಿದೆ. ಇದೇರೀತಿ ಯೆಹೋವನು ಈ ದಿನ ನಿನ್ನಿಂದ ಇಸ್ರೇಲ್ ರಾಜ್ಯವನ್ನು ಹರಿದುಹಾಕಿದನು. ನಿನ್ನ ಸ್ನೇಹಿತರಲ್ಲಿ ಒಬ್ಬನಿಗೆ ಯೆಹೋವನು ರಾಜ್ಯಾಧಿಕಾರವನ್ನು ಕೊಟ್ಟಿದ್ದಾನೆ. ಅವನು ನಿನಗಿಂತ ಉತ್ತಮ ವ್ಯಕ್ತಿ. 29 ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಯೆಹೋವನು ಸರ್ವಕಾಲದಲ್ಲೂ ಇರುವನು. ಯೆಹೋವನು ಸುಳ್ಳಾಡುವುದಿಲ್ಲ; ಆತನು ಮನುಷ್ಯನಂತೆ ಪದೇಪದೇ ಮನಸ್ಸನ್ನು ಬದಲಾಯಿಸುವವನಲ್ಲ” ಎಂದು ಹೇಳಿದನು.
30 ಅದಕ್ಕೆ ಸೌಲನು, “ನಾನು ಪಾಪಮಾಡಿದ್ದೇನೆಂಬುದು ಸರಿ. ಆದರೆ ದಯವಿಟ್ಟು ನನ್ನ ಜೊತೆಯಲ್ಲಿ ಹಿಂದಿರುಗಿ ಬಾ. ಇಸ್ರೇಲಿನ ಜನರೆದುರು ಮತ್ತು ನಾಯಕರೆದುರು ಸ್ವಲ್ಪ ಗೌರವವನ್ನು ತೋರಿಸು. ನನ್ನ ಜೊತೆಯಲ್ಲಿ ನೀನು ಹಿಂದಿರುಗಿ ಬಂದರೆ, ನಾನು ನಿನ್ನ ದೇವರಾದ ಯೆಹೋವನನ್ನು ಆರಾಧಿಸಬಹುದು” ಎಂದು ಬೇಡಿಕೊಂಡನು. 31 ಆಗ ಸಮುವೇಲನು ಸೌಲನ ಜೊತೆಯಲ್ಲಿ ಹೋದನು. ಸೌಲನು ದೇವರನ್ನು ಆರಾಧಿಸಿದನು.
32 ಸಮುವೇಲನು, “ಅಮಾಲೇಕ್ಯರ ರಾಜನಾದ ಅಗಾಗನನ್ನು ನನ್ನ ಬಳಿಗೆ ಕರೆದುಕೊಂಡು ಬಾ” ಎಂದು ಹೇಳಿದನು.
ಅಗಾಗನು ಸಮುವೇಲನ ಹತ್ತಿರಕ್ಕೆ ಬಂದನು. ಅಗಾಗನನ್ನು ಸರಪಣಿಗಳಿಂದ ಬಂಧಿಸಲಾಗಿತ್ತು. ಅಗಾಗನು, “ಅವನು ನನ್ನನ್ನು ನಿಜವಾಗಿಯೂ ಕೊಲ್ಲುವುದಿಲ್ಲ” ಎಂದು ಆಲೋಚಿಸಿದನು.
33 ಆದರೆ ಸಮುವೇಲನು ಅಗಾಗನಿಗೆ, “ನಿನ್ನ ಕತ್ತಿಯು ಅನೇಕ ತಾಯಂದಿರಿಗೆ ಮಕ್ಕಳಿಲ್ಲದಂತೆ ಮಾಡಿದೆ. ಆದ್ದರಿಂದ ಈಗ ನಿನ್ನ ತಾಯಿಗೆ ಮಕ್ಕಳಿಲ್ಲದಂತಾಯಿತು” ಎಂದು ಹೇಳಿ ಅಗಾಗನನ್ನು ಗಿಲ್ಗಾಲಿನ ಯೆಹೋವನ ಸನ್ನಿಧಿಯಲ್ಲೇ ಕಡಿದುಹಾಕಿದನು.
34 ನಂತರ ಸಮುವೇಲನು ಅಲ್ಲಿಂದ ಹೊರಟು ರಾಮಕ್ಕೆ ಹೋದನು. ಸೌಲನು ಗಿಬೆಯದ ತನ್ನ ಮನೆಗೆ ಹೋದನು. 35 ಅನಂತರ ಸಮುವೇಲನು ತನ್ನ ಜೀವಿತದ ಅವಧಿಯಲ್ಲಿ ಸೌಲನನ್ನು ನೋಡಲಿಲ್ಲ. ಸಮುವೇಲನು ಸೌಲನಿಗಾಗಿ ಬಹಳ ದುಃಖಪಟ್ಟನು. ಸೌಲನನ್ನು ಇಸ್ರೇಲರ ರಾಜನನ್ನಾಗಿ ಮಾಡಿದ್ದಕ್ಕೆ ಯೆಹೋವನು ಬಹಳ ಸಂತಾಪಪಟ್ಟನು.
ಸಮುವೇಲನು ಬೆತ್ಲೆಹೇಮಿಗೆ ಹೋಗುವನು
16 ಯೆಹೋವನು ಸಮುವೇಲನಿಗೆ, “ನೀನು ಸೌಲನಿಗಾಗಿ ಎಷ್ಟುಕಾಲ ಶೋಕಿಸುವೆ? ನಾನು ಸೌಲನನ್ನು ಇಸ್ರೇಲರ ರಾಜತ್ವದಿಂದ ತಿರಸ್ಕರಿಸಿರುತ್ತೇನೆ. ನೀನು ಕೊಂಬಿನಲ್ಲಿ ಎಣ್ಣೆಯನ್ನು ತುಂಬಿಕೊಂಡು ಬಾ. ನಾನು ನಿನ್ನನ್ನು ಇಷಯನೆಂಬ ಮನುಷ್ಯನ ಬಳಿಗೆ ಕಳುಹಿಸುತ್ತೇನೆ. ಇಷಯನು ಬೆತ್ಲೆಹೇಮಿನಲ್ಲಿ ವಾಸಿಸುತ್ತಿದ್ದನು. ನಾನು ಅವನ ಮಕ್ಕಳಲ್ಲಿ ಒಬ್ಬನನ್ನು ಹೊಸ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.
2 ಅದಕ್ಕೆ ಸಮುವೇಲನು, “ನಾನು ಹೊರಟರೆ ಸೌಲನಿಗೆ ಈ ಸುದ್ದಿಯು ತಿಳಿಯುತ್ತದೆ. ಆಗ ಅವನು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ” ಎಂದನು.
ಯೆಹೋವನು, “ಬೆತ್ಲೆಹೇಮಿಗೆ ಹೋಗು. ನಿನ್ನೊಡನೆ ಒಂದು ಎಳೆಕರುವನ್ನು ತೆಗೆದುಕೊಂಡು ಹೋಗು. ‘ನಾನು ಯೆಹೋವನಿಗೆ ಯಜ್ಞವನ್ನರ್ಪಿಸಲು ಬಂದಿದ್ದೇನೆ’ ಎಂದು ಹೇಳು. 3 ಯಜ್ಞಕಾರ್ಯಕ್ಕೆ ಇಷಯನನ್ನು ಆಹ್ವಾನಿಸು. ಆ ಮೇಲೆ ನೀನು ಮಾಡಬೇಕಾದದ್ದನ್ನು ನಾನು ತೋರಿಸುತ್ತೇನೆ. ನಾನು ತೋರಿಸಿದ ಮನುಷ್ಯನಿಗೆ ನೀನು ಅಭಿಷೇಕವನ್ನು ಮಾಡಬೇಕು” ಎಂದು ಹೇಳಿದನು.
4 ಸಮುವೇಲನು ತನಗೆ ಯೆಹೋವನು ಹೇಳಿದಂತೆ ಮಾಡಿದನು. ಸಮುವೇಲನು ಬೆತ್ಲೆಹೇಮಿಗೆ ಹೋದನು. ಬೆತ್ಲೆಹೇಮಿನ ಹಿರಿಯರು ಭಯದಿಂದ ನಡುಗಿದರು. ಅವರು ಸಮುವೇಲನನ್ನು ಕಂಡು, “ನಿನ್ನ ಆಗಮನವು ಶುಭಕರವಾಗಿದೆಯೇ?” ಎಂದು ಕೇಳಿದರು.
5 ಸಮುವೇಲನು, “ಹೌದು, ಶುಭಕರವಾಗಿದೆ. ನಾನು ಯೆಹೋವನಿಗೆ ಯಜ್ಞವನ್ನು ಅರ್ಪಿಸಲು ಬಂದಿದ್ದೇನೆ. ನೀವೆಲ್ಲ ಸಿದ್ಧರಾಗಿ ಯಜ್ಞಕಾರ್ಯಕ್ಕಾಗಿ ನನ್ನೊಂದಿಗೆ ಬನ್ನಿ” ಎಂದು ಹೇಳಿದನು. ಸಮುವೇಲನು ಇಷಯನನ್ನೂ ಅವನ ಮಕ್ಕಳನ್ನೂ ಸಿದ್ಧಗೊಳಿಸಿದನು. ನಂತರ ಸಮುವೇಲನು ಅವರನ್ನು ಯಜ್ಞದಲ್ಲಿ ಭಾಗಿಗಳಾಗಲು ಆಹ್ವಾನಿಸಿದನು.
6 ಇಷಯನು ಮತ್ತು ಅವನ ಮಕ್ಕಳು ಬಂದಾಗ, ಸಮುವೇಲನು ಎಲೀಯಾಬನನ್ನು ನೋಡಿದನು. ಸಮುವೇಲನು ತನ್ನಲ್ಲೇ ಯೋಚಿಸುತ್ತಾ, “ಯೆಹೋವನು ಆಯ್ಕೆ ಮಾಡಿರುವವನು ನಿಜವಾಗಿಯೂ ಅವನೇ ಇರಬೇಕು” ಎಂದುಕೊಂಡನು.
7 ಆದರೆ ಯೆಹೋವನು ಸಮುವೇಲನಿಗೆ, “ಎಲೀಯಾಬನ ಎತ್ತರವನ್ನಾಗಲಿ ರೂಪವನ್ನಾಗಲಿ ಪರಿಗಣಿಸಬೇಡ. ಯಾಕೆಂದರೆ ನಾನು ಅವನನ್ನು ತಿರಸ್ಕರಿಸಿದ್ದೇನೆ. ಮನುಷ್ಯರಾದರೋ ಹೊರತೋರಿಕೆಯನ್ನು ಪರಿಗಣಿಸುತ್ತಾರೆ; ಯೆಹೋವನಾದರೋ ಹೊರತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ” ಎಂದು ಹೇಳಿದನು.
8 ನಂತರ ಇಷಯನು ಎರಡನೆಯ ಮಗನಾದ ಅಬೀನಾದಾಬನನ್ನು ಕರೆದನು. ಅಬೀನಾದಾಬನು ಸಮುವೇಲನ ಹತ್ತಿರಕ್ಕೆ ಬಂದನು. ಸಮುವೇಲನು, “ಯೆಹೋವನು ಆರಿಸಿಕೊಂಡಿರುವ ವ್ಯಕ್ತಿ ಇವನಲ್ಲ” ಎಂದು ಹೇಳಿದನು.
9 ಅನಂತರ ಇಷಯನು ಶಮ್ಮನನ್ನು ಸಮುವೇಲನ ಬಳಿಗೆ ಕಳುಹಿಸಿದನು. ಆದರೆ ಸಮುವೇಲನು, “ಯೆಹೋವನು ಇವನನ್ನೂ ಆರಿಸಲಿಲ್ಲ” ಎಂದನು.
10 ಇಷಯನು ತನ್ನ ಏಳು ಜನ ಮಕ್ಕಳನ್ನು ಸಮುವೇಲನಿಗೆ ತೋರಿಸಿದನು. ಆದರೆ ಸಮುವೇಲನು, “ಯೆಹೋವನು ಇವರಲ್ಲಿ ಯಾರೊಬ್ಬನನ್ನೂ ಆರಿಸಿಕೊಳ್ಳಲಿಲ್ಲ” ಎಂದನು.
11 ನಂತರ ಸಮುವೇಲನು ಇಷಯನನ್ನು, “ನಿನಗೆ ಇರುವ ಮಕ್ಕಳು ಇಷ್ಟೆಯೋ?” ಎಂದು ಕೇಳಿದನು.
ಇಷಯನು, “ಇಲ್ಲ, ನನಗೆ ಇನ್ನೊಬ್ಬ ಕಿರಿಯ ಮಗನಿದ್ದಾನೆ. ಅವನು ಕುರಿಮೇಯಿಸುವದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು.
ಆಗ ಸಮುವೇಲನು, “ಅವನನ್ನು ಕರೆಕಳುಹಿಸು. ಅವನನ್ನು ಇಲ್ಲಿಗೆ ಬರಹೇಳು. ಅವನು ಬರುವತನಕ ನಾವು ಊಟಕ್ಕೆ ಕುಳಿತುಕೊಳ್ಳುವುದು ಬೇಡ” ಎಂದು ಹೇಳಿದನು.
12 ಇಷಯನು ಕಿರಿಯ ಮಗನನ್ನು ಕರೆತರಲು ಒಬ್ಬನನ್ನು ಕಳುಹಿಸಿದನು. ಇವನಾದರೋ ಕೆಂಬಣ್ಣದವನೂ ಸುಂದರನೇತ್ರನೂ ನೋಟಕ್ಕೆ ರಮಣೀಯನೂ ಆಗಿದ್ದನು.
ಯೆಹೋವನು ಸಮುವೇಲನಿಗೆ, “ಮೇಲೆದ್ದು ನಿಲ್ಲು, ಅವನನ್ನು ಅಭಿಷೇಕಿಸು. ಇವನನ್ನೇ ನಾನು ಆರಿಸಿದ್ದು” ಎಂದು ಆಜ್ಞಾಪಿಸಿದನು.
13 ಸಮುವೇಲನು ಎಣ್ಣೆಯಿದ್ದ ಕೊಂಬನ್ನು ತೆಗೆದುಕೊಂಡು, ಅದರಲ್ಲಿದ್ದ ವಿಶೇಷವಾದ ಎಣ್ಣೆಯನ್ನು ಇಷಯನ ಕಿರಿಮಗನ ಮೇಲೆ, ಅವನ ಸೋದರರ ಎದುರಿನಲ್ಲೇ ಸುರಿದನು. ಆ ದಿನದಿಂದ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ದಾವೀದನಲ್ಲಿ ನೆಲೆಸಿತು. ಅನಂತರ ಸಮುವೇಲನು ರಾಮಕ್ಕೆ ಹಿಂದಿರುಗಿದನು.
ದುರಾತ್ಮವು ಸೌಲನನ್ನು ಪೀಡಿಸುವುದು
14 ಯೆಹೋವನ ಆತ್ಮವು ಸೌಲನನ್ನು ಬಿಟ್ಟುಹೋಯಿತು. ನಂತರ ಯೆಹೋವನು ದುರಾತ್ಮವೊಂದನ್ನು ಸೌಲನ ಬಳಿಗೆ ಕಳುಹಿಸಿದನು. ಅದು ಅವನಿಗೆ ಬಹಳ ತೊಂದರೆ ಮಾಡಿತು. 15 ಸೌಲನ ಸೇವಕರು ಅವನಿಗೆ, “ದೇವರು ಕಳುಹಿಸಿರುವ ದುರಾತ್ಮವು ನಿನ್ನನ್ನು ಪೀಡಿಸುತ್ತಿದೆ. 16 ನಮಗೆ ಆಜ್ಞಾಪಿಸುವುದಾದರೆ, ಕಿನ್ನರಿ ಬಾರಿಸುವವನನ್ನು ಹುಡುಕಿ ಕರೆದುಕೊಂಡು ಬರುತ್ತೇವೆ. ಯೆಹೋವನಿಂದ ಬಂದ ದುರಾತ್ಮವು ನಿನ್ನ ಮೈಮೇಲೆ ಬಂದಾಗ ಅವನು ಕಿನ್ನರಿ ಬಾರಿಸಿದರೆ, ದುರಾತ್ಮವು ನಿನ್ನನ್ನು ಬಿಟ್ಟುಹೋಗಿ ನಿನಗೆ ಉಪಶಮನವಾಗುತ್ತದೆ” ಎಂದು ಹೇಳಿದರು.
17 ಸೌಲನು ಅವನ ಸೇವಕರಿಗೆ, “ಚೆನ್ನಾಗಿ ಕಿನ್ನರಿ ಬಾರಿಸುವವನನ್ನು ಹುಡುಕಿಕೊಂಡು ನನ್ನ ಬಳಿಗೆ ಕರೆತನ್ನಿ” ಎಂದು ಹೇಳಿದನು.
18 ಅವನ ಸೇವಕರಲ್ಲಿ ಒಬ್ಬನು, “ಇಷಯ ಎಂಬ ಹೆಸರಿನ ಒಬ್ಬ ಮನುಷ್ಯನು ಬೆತ್ಲೆಹೇಮಿನಲ್ಲಿ ವಾಸಿಸುತ್ತಿದ್ದಾನೆ. ನಾನು ಇಷಯನ ಮಗನನ್ನು ನೋಡಿದ್ದೇನೆ. ಅವನು ಕಿನ್ನರಿ ಬಾರಿಸುತ್ತಾನೆ. ಅವನು ಧೈರ್ಯಶಾಲಿ ಮತ್ತು ಒಳ್ಳೆಯ ಹೋರಾಟಗಾರ; ಅವನು ಬುದ್ಧಿವಂತನೂ ರಣಶೂರನೂ ರೂಪವಂತನೂ ಆಗಿದ್ದಾನೆ. ಅದಲ್ಲದೆ ಯೆಹೋವನು ಅವನೊಂದಿಗಿದ್ದಾನೆ” ಎಂದು ಹೇಳಿದನು.
19 ಸೌಲನು ಸಂದೇಶಕರ ಮೂಲಕ ಇಷಯನಿಗೆ, “ನಿನಗೆ ದಾವೀದನೆಂಬ ಮಗನಿದ್ದಾನೆ. ಅವನು ನಿನ್ನ ಕುರಿಗಳನ್ನು ಕಾಯುತ್ತಾನೆ. ಅವನನ್ನು ನನ್ನ ಬಳಿಗೆ ಕಳುಹಿಸು” ಎಂದು ತಿಳಿಸಿದನು.
20 ಇಷಯನು ಕೆಲವು ರೊಟ್ಟಿಗಳನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ಒಂದು ಹೋತಮರಿಯನ್ನೂ ಕತ್ತೆಯ ಮೇಲೆ ಹೇರಿಸಿ ತನ್ನ ಮಗನಾದ ದಾವೀದನ ಮೂಲಕ ಸೌಲನಿಗೆ ಕೊಡುಗೆಗಳಾಗಿ ಕಳುಹಿಸಿದನು. 21 ದಾವೀದನು ಸೌಲನ ಹತ್ತಿರಕ್ಕೆ ಹೋಗಿ, ಅವನ ಮುಂದೆ ನಿಂತನು. ಸೌಲನು ದಾವೀದನನ್ನು ಬಹಳ ಪ್ರೀತಿಸಿದನು. ದಾವೀದನು ಸೌಲನ ಆಯುಧಗಳನ್ನು ಹೊರುವ ಸಹಾಯಕನಾದನು. 22 ತರುವಾಯ ಸೌಲನು ಇಷಯನಿಗೆ, “ದಾವೀದನು ಇಲ್ಲಿಯೇ ನನ್ನ ಸೇವೆಯಲ್ಲಿ ಇರಲಿ. ನಾನು ಅವನನ್ನು ಬಹಳ ಪ್ರೀತಿಸುತ್ತೇನೆ” ಎಂಬ ಸುದ್ದಿಯನ್ನು ಹೇಳಿ ಕಳುಹಿಸಿದನು.
23 ದೇವರು ಕಳುಹಿಸಿದ ದುರಾತ್ಮವು ಸೌಲನ ಮೈಮೇಲೆ ಬಂದಾಗಲೆಲ್ಲಾ, ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ಆಗ ದುರಾತ್ಮವು ಸೌಲನನ್ನು ಬಿಟ್ಟುಹೋಗಿ ಅವನಿಗೆ ಉಪಶಮನವಾಗುತ್ತಿತ್ತು.
ಗೊಲ್ಯಾತನು ಇಸ್ರೇಲರ ಮೇಲೆ ಸ್ಪರ್ಧಿಸಿದ್ದು
17 ಫಿಲಿಷ್ಟಿಯರು ತಮ್ಮ ಸೈನ್ಯವನ್ನು ಯುದ್ಧಕ್ಕಾಗಿ ಯೆಹೂದದೇಶದ ಸೋಕೋವಿನಲ್ಲಿ ಒಟ್ಟುಗೂಡಿಸಿದರು. ಅವರು ಸೋಕೋವಿಗೂ ಅಜೇಕಕ್ಕೂ ಮಧ್ಯದಲ್ಲಿರುವ ಎಫೆಸ್ದಮ್ಮೀಮ್ ಎಂಬ ಹೆಸರಿನ ಪಟ್ಟಣದಲ್ಲಿ ಪಾಳೆಯಮಾಡಿಕೊಂಡರು.
2 ಸೌಲನು ಮತ್ತು ಇಸ್ರೇಲಿನ ಸೈನಿಕರು ಒಟ್ಟಾಗಿ ಸೇರಿ ಏಲಾ ಕಣಿವೆಯಲ್ಲಿ ಪಾಳೆಯಮಾಡಿಕೊಂಡರು. ಸೌಲನ ಸೈನಿಕರು ಸಾಲಾಗಿನಿಂತು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಸಿದ್ಧರಾದರು. 3 ಫಿಲಿಷ್ಟಿಯರು ಒಂದು ಗುಡ್ಡದ ಮೇಲೂ ಇಸ್ರೇಲರು ಮತ್ತೊಂದು ಗುಡ್ಡದ ಮೇಲೂ ನಿಂತರು. ಕಣಿವೆಯು ಆ ಎರಡು ಗುಡ್ಡಗಳ ಮಧ್ಯೆ ಇದ್ದಿತು.
4 ಫಿಲಿಷ್ಟಿಯರಲ್ಲಿ ಗೊಲ್ಯಾತನೆಂಬ ಹೆಸರಿನ ವೀರ ಯೋಧನಿದ್ದನು. ಆತನು ಗತ್ ಊರಿನವನು. ಗೊಲ್ಯಾತನು ಒಂಭತ್ತು ಅಡಿ ಎತ್ತರವಾಗಿದ್ದನು. ಅವನು ಫಿಲಿಷ್ಟಿಯರ ಪಾಳೆಯದಿಂದ ಹೊರಬಂದನು. 5 ಅವನು ತಾಮ್ರದ ಶಿರಸ್ತ್ರಾಣವನ್ನು ಧರಿಸಿದ್ದನು. ಮೀನಿನ ಮೇಲಿರುವ ಚಿಪ್ಪುಗಳಂತಿದ್ದ ತಾಮ್ರದ ಕವಚವನ್ನು ಅವನು ತೊಟ್ಟಿದ್ದನು. ಅದು ನೂರಿಪ್ಪತ್ತೈದು ಪೌಂಡ್‌ಗಳಷ್ಟು ಭಾರವಾಗಿತ್ತು. 6 ಗೊಲ್ಯಾತನು ಕಾಲುಗಳಿಗೂ ತಾಮ್ರದ ಕವಚವನ್ನು ತೊಟ್ಟಿದ್ದನು. ಅವನು ಹೆಗಲಿನಲ್ಲಿ ತಾಮ್ರದ ಈಟಿಯನ್ನು ಕಟ್ಟಿಕೊಂಡಿದ್ದನು. 7 ಗೊಲ್ಯಾತನ ಬರ್ಜಿಯ ಹಿಡಿಕೆಯು ನೇಕಾರರ ಕುಂಟೆಯ ಗಾತ್ರದಷ್ಟಿತ್ತು. ಆ ಬರ್ಜಿಯ ಅಲಗಿನ ಭಾರವು ಹದಿನೈದು ಪೌಂಡ್‌ಗಳಷ್ಟಿತ್ತು. ಗೊಲ್ಯಾತನ ಗುರಾಣಿಯನ್ನು ಹೊತ್ತಿದ್ದ ಅವನ ಸಹಾಯಕನು ಅವನ ಮುಂದೆ ಹೋಗುತ್ತಿದ್ದನು.
8 ಗೊಲ್ಯಾತನು ಪ್ರತಿದಿನ ಹೊರಕ್ಕೆ ಬಂದು ಇಸ್ರೇಲಿನ ಸೈನಿಕರನ್ನು ಕಂಡು ಆರ್ಭಟಿಸುತ್ತಿದ್ದನು. ಅವನು, “ನೀವೆಲ್ಲ ಸಾಲಾಗಿನಿಂತು ಯುದ್ಧಕ್ಕೆ ಸಿದ್ಧರಾಗಿರುವುದೇಕೆ? ನೀವು ಸೌಲನ ಸೇವಕರು. ನಾನು ಫಿಲಿಷ್ಟಿಯನು, ನೀವು ಒಬ್ಬನನ್ನು ಆರಿಸಿ ನನ್ನೊಡನೆ ಹೋರಾಡಲು ಕಳುಹಿಸಿ. 9 ಅವನು ನನ್ನನ್ನು ಕೊಂದುಬಿಟ್ಟರೆ, ನಾವು ಅಂದರೆ ಫಿಲಿಷ್ಟಿಯರೆಲ್ಲ ನಿಮ್ಮ ಗುಲಾಮರಾಗುತ್ತೇವೆ. ಆದರೆ ನಾನು ಅವನನ್ನು ಸೋಲಿಸಿ ಕೊಂದುಬಿಟ್ಟರೆ, ನೀವೆಲ್ಲ ನಮಗೆ ಗುಲಾಮರಾಗಿದ್ದು ನಮ್ಮ ಸೇವೆಯನ್ನು ಮಾಡಬೇಕು” ಎಂದು ಆರ್ಭಟಿಸಿದನು.
10 ಫಿಲಿಷ್ಟಿಯನು, “ಈ ದಿನ ನಾನು ಇಸ್ರೇಲ್ ಸೈನ್ಯವನ್ನು ಹೀಯಾಳಿಸುವೆನು. ನನ್ನೊಂದಿಗೆ ಹೋರಾಡಲು ನಿಮ್ಮ ಮನುಷ್ಯನೊಬ್ಬನನ್ನು ಕಳುಹಿಸಿ” ಎಂದು ಕೊಚ್ಚಿಕೊಂಡನು.
11 ಸೌಲನು ಮತ್ತು ಅವನ ಸೈನಿಕರು ಗೊಲ್ಯಾತನು ಹೇಳಿದ್ದನ್ನು ಕೇಳಿ ಬಹಳ ಭಯಪಟ್ಟರು.
ದಾವೀದನು ಯುದ್ಧರಂಗದ ಮುಂಭಾಗಕ್ಕೆ ಬರುವನು
12 ದಾವೀದನು ಇಷಯನ ಮಗ. ಇಷಯನು ಯೆಹೂದ ಪ್ರಾಂತ್ಯದ ಬೆತ್ಲೆಹೇಮಿನ ಎಫ್ರಾತ ವಂಶದವನು. ಇಷಯನಿಗೆ ಎಂಟು ಜನ ಮಕ್ಕಳಿದ್ದರು. ಸೌಲನ ಕಾಲಕ್ಕಾಗಲೇ ಇಷಯನು ಮುದುಕನಾಗಿದ್ದನು. 13 ಇಷಯನ ಮೂವರು ಹಿರಿಯ ಮಕ್ಕಳು ಸೌಲನೊಂದಿಗೆ ಯುದ್ಧಕ್ಕೆ ಹೋಗಿದ್ದರು. ಎಲೀಯಾಬನು ಮೊದಲನೆಯ ಮಗ. ಅಬೀನಾದಾಬನು ಎರಡನೆಯ ಮಗ. ಶಮ್ಮನು ಮೂರನೆಯ ಮಗ. 14 ದಾವೀದನು ಎಲ್ಲರಿಗಿಂತ ಕಿರಿಯ ಮಗ. ಅವನಿಗಿಂತ ಹಿರಿಯರಾದ ಮೂವರು ಮಕ್ಕಳು ಸೌಲನ ಸೈನ್ಯದಲ್ಲಿದ್ದರು. 15 ಆದರೆ ದಾವೀದನು ಆಗಾಗ್ಗೆ ಸೌಲನನ್ನು ಬಿಟ್ಟು ತನ್ನ ತಂದೆಯ ಕುರಿಗಳನ್ನು ಕಾಯುವುದಕ್ಕಾಗಿ ಬೆತ್ಲೆಹೇಮಿಗೆ ಹೋಗುತ್ತಿದ್ದನು.
16 ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗೊಲ್ಯಾತನು ಹೊರಬಂದು ಇಸ್ರೇಲ್ ಸೈನ್ಯಕ್ಕೆ ಎದುರಾಗಿ ನಿಲ್ಲುತ್ತಿದ್ದನು. ಈ ರೀತಿ ಗೊಲ್ಯಾತನು ಇಸ್ರೇಲರನ್ನು ನಲವತ್ತು ದಿನಗಳ ಕಾಲ ಹೀಯಾಳಿಸಿದನು.
17 ಒಂದು ದಿನ ಇಷಯನು ತನ್ನ ಮಗನಾದ ದಾವೀದನಿಗೆ, “ಬೇಯಿಸಿದ ಮೂವತ್ತು ಸೇರು ಕಾಳುಗಳನ್ನು ಮತ್ತು ಹತ್ತು ರೊಟ್ಟಿಗಳನ್ನು ಸೈನ್ಯದಲ್ಲಿರುವ ನಿನ್ನ ಸಹೋದರರಿಗಾಗಿ ತೆಗೆದುಕೊಂಡು ಹೋಗು. 18 ನಿನ್ನ ಸಹೋದರರ ಸಹಸ್ರಾಧಿಪತಿಗೆ ಹತ್ತು ಉಂಡೆ ಗಿಣ್ಣನ್ನೂ ತೆಗೆದುಕೊಂಡು ಹೋಗು. ನಿನ್ನ ಸಹೋದರರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು, ಅವರು ಕ್ಷೇಮವಾಗಿದ್ದಾರೆಂಬುದಕ್ಕೆ ಒಂದು ಗುರುತನ್ನು ತೆಗೆದುಕೊಂಡು ಬಾ. 19 ನಿನ್ನ ಸಹೋದರರು ಎಲ್ಲಾ ಇಸ್ರೇಲ್ ಸೈನಿಕರಂತೆ ಸೌಲನ ಜೊತೆಯಲ್ಲಿ ಏಲಾ ಕಣಿವೆಯಲ್ಲಿದ್ದಾರೆ. ಅವರು ಫಿಲಿಷ್ಟಿಯರ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಹೇಳಿದನು.
20 ದಾವೀದನು ಮಾರನೆಯ ದಿನ ಬೆಳಿಗ್ಗೆ ಕುರುಬನೊಬ್ಬನಿಗೆ ತನ್ನ ಕುರಿಗಳನ್ನು ಕಾಯಲು ಒಪ್ಪಿಸಿದನು. ಇಷಯನು ತಿಳಿಸಿದಂತೆ ದಾವೀದನು ಆಹಾರವನ್ನೆಲ್ಲ ತೆಗೆದುಕೊಂಡು ಹೊರಟನು. ದಾವೀದನು ತನ್ನ ಬಂಡಿಯನ್ನು ಪಾಳೆಯಕ್ಕೆ ಹೊಡೆದುಕೊಂಡು ಹೋದನು. ದಾವೀದನು ಅಲ್ಲಿಗೆ ಬರುವಷ್ಟರಲ್ಲಿ ಸೈನಿಕರೆಲ್ಲರು ಯುದ್ಧಭೂಮಿಗೆ ಹೋಗುವುದರಲ್ಲಿದ್ದರು. ಸೈನಿಕರೆಲ್ಲರು ಆರ್ಭಟಿಸುತ್ತಾ ಯುದ್ಧಭೂಮಿಯಲ್ಲಿ ಸೇರುತ್ತಿದ್ದರು. 21 ಇಸ್ರೇಲರು ಮತ್ತು ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾಗಲು ಸಾಲುಸಾಲಾಗಿ ನಿಲ್ಲುತ್ತಿದ್ದರು.
22 ದಾವೀದನು ತಾನು ತಂದಿದ್ದವುಗಳನ್ನು ಕಾವಲುಗಾರನ ಬಳಿಯಲ್ಲಿಟ್ಟು ಇಸ್ರೇಲ್ ಸೈನಿಕರಿದ್ದ ಸ್ಥಳಕ್ಕೆ ಓಡಿಹೋಗಿ ತನ್ನ ಸಹೋದರರ ಬಗ್ಗೆ ವಿಚಾರಿಸಿದನು. 23 ಬಳಿಕ ತನ್ನ ಸಹೋದರರನ್ನು ಕಂಡುಕೊಂಡು ಅವರೊಂದಿಗೆ ಮಾತಾಡತೊಡಗಿದನು. ಆ ಸಮಯದಲ್ಲಿ ಗತ್ ದೇಶದ ಗೊಲ್ಯಾತನೆಂಬ ಹೆಸರಿನ ಫಿಲಿಷ್ಟಿಯ ರಣವೀರನು ಆ ಸೇನೆಯಿಂದ ಹೊರಬಂದನು. ಗೊಲ್ಯಾತನು ಎಂದಿನಂತೆ ಇಸ್ರೇಲರ ವಿರುದ್ಧ ಆರ್ಭಟಿಸಿದನು. ದಾವೀದನಿಗೆ ಅವನ ಆರ್ಭಟವು ಕೇಳಿಸಿತು.
24 ಇಸ್ರೇಲ್ ಸೈನಿಕರು ಗೊಲ್ಯಾತನನ್ನು ಕಂಡು ಬಹಳವಾಗಿ ಭಯಪಟ್ಟು ಅಲ್ಲಿಂದ ಓಡಿಹೋದರು. 25 ಇಸ್ರೇಲರಲ್ಲಿನ ಒಬ್ಬನು, “ನೀವು ಅವನನ್ನು ನೋಡಿದಿರಾ! ಅವನನ್ನು ನೋಡಿ! ಆ ಗೊಲ್ಯಾತನು ಪ್ರತಿನಿತ್ಯ ಹೊರಗೆ ಬಂದು ಇಸ್ರೇಲರನ್ನು ಮತ್ತೆಮತ್ತೆ ಹಾಸ್ಯಮಾಡುತ್ತಿದ್ದಾನೆ. ಅವನನ್ನು ಕೊಂದವನಿಗೆ ಸೌಲನು ಅಪಾರ ಐಶ್ವರ್ಯವನ್ನು ಕೊಡುವುದಲ್ಲದೆ ತನ್ನ ಮಗಳನ್ನೂ ಅವನಿಗೆ ಕೊಟ್ಟು ಮದುವೆ ಮಾಡುತ್ತಾನೆ; ಅಲ್ಲದೆ ಅವನ ವಂಶವನ್ನು ಇಸ್ರೇಲಿನಲ್ಲಿ ಸ್ವತಂತ್ರಗೊಳಿಸುತ್ತಾನೆ” ಎಂದು ಹೇಳಿದನು.
26 ದಾವೀದನು ತನ್ನ ಹತ್ತಿರ ನಿಂತಿದ್ದವನಿಗೆ, “ಈ ಫಿಲಿಷ್ಟಿಯನನ್ನು ಕೊಂದು ಇಸ್ರೇಲರಿಗೆ ಉಂಟಾಗಿರುವ ಅಪನಿಂದೆಯನ್ನು ಹೋಗಲಾಡಿಸುವವನಿಗೆ ಸಿಗುವ ಬಹುಮಾನವೇನು? ಈ ಗೊಲ್ಯಾತನ್ಯಾರು? ಇವನು ಕೇವಲ ಒಬ್ಬ ಪರದೇಶಿ. ಗೊಲ್ಯಾತನು ಫಿಲಿಷ್ಟಿಯನೇ ಹೊರತು ಬೇರೆ ಯಾರೂ ಅಲ್ಲ. ಜೀವಸ್ವರೂಪನಾದ ದೇವರ ಸೈನ್ಯದ ವಿರೋಧವಾಗಿ ಮಾತಾಡಲು ಇವನು ತನ್ನನ್ನು ಯಾರೆಂದು ಯೋಚಿಸಿಕೊಂಡಿದ್ದಾನೆ?” ಎಂದನು.
27 ಗೊಲ್ಯಾತನನ್ನು ಕೊಲ್ಲುವದರಿಂದ ಸಿಗುವ ಬಹುಮಾನವನ್ನು ಇಸ್ರೇಲರು ದಾವೀದನಿಗೆ ತಿಳಿಸಿದರು. 28 ದಾವೀದನು ಸೈನಿಕರೊಡನೆ ಮಾತಾಡುತ್ತಿರುವುದನ್ನು ಅವನ ಹಿರಿಯ ಅಣ್ಣ ಎಲೀಯಾಬನು ಕೇಳಿಸಿಕೊಂಡನು. ಎಲೀಯಾಬನು ದಾವೀದನ ಮೇಲೆ ಕೋಪಗೊಂಡು ಅವನಿಗೆ, “ನೀನು ಇಲ್ಲಿಗೆ ಬಂದದ್ದೇಕೆ? ಅಲ್ಲಿದ್ದ ಕೆಲವು ಕುರಿಗಳನ್ನು ಯಾರ ಬಳಿ ಬಿಟ್ಟಿರುವೆ? ನೀನು ಇಲ್ಲಿಗೆ ಏಕೆ ಬಂದಿರುವೆಯೆಂಬುದು ನನಗೆ ಗೊತ್ತು. ನಿನಗೆ ಹೇಳಿದ್ದನ್ನು ನೀನು ಮಾಡುವುದಿಲ್ಲ. ನೀನು ಕೇವಲ ಯುದ್ಧವನ್ನು ನೋಡುವುದಕ್ಕಾಗಿಯೇ ಇಲ್ಲಿಗೆ ಬಂದಿರುವೆ” ಎಂದು ಗದರಿಸಿದನು.
29 ಅದಕ್ಕೆ ದಾವೀದನು, “ನಾನೇನು ಮಾಡಿದೆ? ನಾನು ಯಾವ ತಪ್ಪನ್ನೂ ಮಾಡಲಿಲ್ಲ. ನಾನು ಕೇವಲ ಮಾತನಾಡುತ್ತಿದ್ದೆ” ಎಂದು ಹೇಳಿದನು. 30 ದಾವೀದನು ಬೇರೆ ಜನರ ಕಡೆಗೆ ತಿರುಗಿ, ಅವರಿಗೂ ಅದೇ ಪ್ರಶ್ನೆಗಳನ್ನು ಕೇಳಿದನು. ಅವರು ಸಹ ಅದೇ ಉತ್ತರಗಳನ್ನು ದಾವೀದನಿಗೆ ಕೊಟ್ಟರು.
31 ದಾವೀದನು ಮಾತನಾಡುತ್ತಿರುವುದನ್ನು ಕೆಲವು ಜನರು ಕೇಳಿಸಿಕೊಂಡರು. ಅವರು ಸೌಲನಿಗೆ ದಾವೀದನ ಬಗ್ಗೆ ಹೇಳಿದರು. ಸೌಲನು ದಾವೀದನನ್ನು ಅವನ ಹತ್ತಿರ ಕರೆತರಲು ಅಪ್ಪಣೆ ಮಾಡಿದನು. 32 ದಾವೀದನು ಸೌಲನಿಗೆ, “ಜನರು ಗೊಲ್ಯಾತನಿಗೆ ಹೆದರಿಕೊಳ್ಳುವುದು ಬೇಕಾಗಿಲ್ಲ. ನಾನು ನಿನ್ನ ಸೇವಕ. ನಾನು ಈ ಫಿಲಿಷ್ಟಿಯನ ವಿರುದ್ಧ ಹೋರಾಡುತ್ತೇನೆ” ಎಂದು ಹೇಳಿದನು.
33 ಸೌಲನು, “ನೀನು ಹೊರಗೆ ಹೋಗಿ ಗೊಲ್ಯಾತನೊಂದಿಗೆ ಹೋರಾಡಲು ಸಾಧ್ಯವಿಲ್ಲ. ನೀನು ಒಬ್ಬ ಸೈನಿಕನೂ ಅಲ್ಲ! ಗೊಲ್ಯಾತನು ಬಾಲ್ಯದಿಂದಲೂ ಯುದ್ಧವೀರನಾಗಿದ್ದಾನೆ” ಎಂದನು.
34 ಆದರೆ ದಾವೀದನು ಸೌಲನಿಗೆ, “ನಾನು ನಿನ್ನ ಸೇವಕ. ನಾನು ನನ್ನ ತಂದೆಯ ಕುರಿಗಳನ್ನು ಕಾಯುತ್ತಿದ್ದೆ. ಸಿಂಹವಾಗಲಿ ಕರಡಿಯಾಗಲಿ ಬಂದು ಕುರಿಮಂದೆಯಿಂದ ಕುರಿಗಳನ್ನು ಹಿಡಿದುಕೊಂಡರೆ, 35 ಆದನ್ನು ನಾನು ಅಟ್ಟಿಸಿಕೊಂಡು ಹೋಗುತ್ತಿದ್ದೆ. ನಾನು ಆ ಕ್ರೂರ ಮೃಗದ ಮೇಲೆ ಆಕ್ರಮಣ ಮಾಡಿ, ಅದರ ಬಾಯಿಂದ ಕುರಿಯನ್ನು ಬಿಡಿಸುತ್ತಿದ್ದೆನು. ಅದು ನನ್ನ ಮೇಲೆ ಆಕ್ರಮಣ ಮಾಡಿದರೆ, ನಾನು ಅದರ ಗಡ್ಡ ಹಿಡಿದು ಹೋರಾಡಿ ಅದನ್ನು ಕೊಲ್ಲುತ್ತಿದ್ದೆನು. 36 ನಾನು ಒಂದು ಸಿಂಹವನ್ನೂ ಒಂದು ಕರಡಿಯನ್ನೂ ಕೊಂದಿದ್ದೇನೆ. ಅದೇ ರೀತಿಯಲ್ಲಿ ನಾನು ಅನ್ಯದೇಶಿಯನಾದ ಗೊಲ್ಯಾತನನ್ನೂ ಕೊಂದು ಹಾಕುತ್ತೇನೆ. ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸಿದ್ದರಿಂದ ಗೊಲ್ಯಾತನು ಸಾಯಲೇಬೇಕು. 37 ಯೆಹೋವನು ನನ್ನನ್ನು ಸಿಂಹದಿಂದಲೂ ಕರಡಿಯಿಂದಲೂ ರಕ್ಷಿಸಿದನು. ಯೆಹೋವನು ಈ ಗೊಲ್ಯಾತನಿಂದಲೂ ನನ್ನನ್ನು ರಕ್ಷಿಸುತ್ತಾನೆ” ಎಂದು ಹೇಳಿದನು.
ಸೌಲನು ದಾವೀದನಿಗೆ, “ಹೋಗು, ಯೆಹೋವನು ನಿನ್ನೊಂದಿಗಿರಲಿ” ಎಂದು ಹೇಳಿದನು.
38 ಸೌಲನು ತನ್ನ ಯುದ್ಧವಸ್ತ್ರಗಳನ್ನು ದಾವೀದನಿಗೆ ತೊಡಿಸಿದನು. ಸೌಲನು ತಾಮ್ರದ ಶಿರಸ್ತ್ರಾಣವನ್ನು ದಾವೀದನ ತಲೆಯ ಮೇಲಿಟ್ಟನು ಮತ್ತು ಲೋಹದ ಕವಚವನ್ನು ದಾವೀದನ ಮೈಗೆ ತೊಡಿಸಿದನು. 39 ದಾವೀದನು ಕತ್ತಿಯನ್ನು ಸಿಕ್ಕಿಸಿಕೊಂಡು, ಆ ಕಡೆ ಈ ಕಡೆ ಸುತ್ತಾಡಿದನು. ಸೌಲನ ಯುದ್ಧ ವಸ್ತ್ರಗಳನ್ನು ದಾವೀದನು ಧರಿಸಲು ಪ್ರಯತ್ನಿಸಿದನು. ಆದರೆ ದಾವೀದನಿಗೆ ಅಂತಹ ಭಾರದ ವಸ್ತ್ರಗಳನ್ನು ಧರಿಸಿ ಅಭ್ಯಾಸವಿರಲಿಲ್ಲ.
ದಾವೀದನು ಸೌಲನಿಗೆ, “ನಾನು ಇವುಗಳನ್ನು ಧರಿಸಿಕೊಂಡು ಹೋರಾಡಲಾಗುವುದಿಲ್ಲ; ನನಗೆ ಇವುಗಳನ್ನು ಧರಿಸಿಕೊಂಡು ಅಭ್ಯಾಸವಿಲ್ಲ” ಎಂದು ಹೇಳಿ ಅವುಗಳನ್ನೆಲ್ಲ ತೆಗೆದು ಹಾಕಿದನು. 40 ದಾವೀದನು ತನ್ನ ಕೋಲನ್ನು ಕೈಯಲ್ಲಿ ಹಿಡಿದುಕೊಂಡು, ಕಣಿವೆಯಲ್ಲಿ ಐದು ನುಣುಪುಕಲ್ಲುಗಳನ್ನು ಆರಿಸಿಕೊಂಡು ಅವುಗಳನ್ನು ಕುರಿಕಾಯಲು ಬಳಸುವ ಚೀಲದಲ್ಲಿ ಹಾಕಿಕೊಂಡು ಕವಣೆಯನ್ನು ಕೈಯಲ್ಲಿ ಹಿಡಿದುಕೊಂಡನು. ನಂತರ ಗೊಲ್ಯಾತನನ್ನು ಎದುರಿಸಲು ಹೋದನು.
ದಾವೀದನು ಗೊಲ್ಯಾತನನ್ನು ಕೊಂದದ್ದು
41 ಫಿಲಿಷ್ಟಿಯನು (ಗೊಲ್ಯಾತನು) ದಾವೀದನ ಬಳಿಗೆ ನಿಧಾನವಾಗಿ ನಡೆಯುತ್ತಾ ಬಂದನು. ಗೊಲ್ಯಾತನ ಮುಂದೆ ಅವನ ಸಹಾಯಕನು ಗುರಾಣಿಯನ್ನು ಹೊತ್ತುಕೊಂಡು ನಡೆಯುತ್ತಾ ಹೋದನು. 42 ಗೊಲ್ಯಾತನು ದಾವೀದನನ್ನು ನೋಡಿ ನಕ್ಕನು. ದಾವೀದನು ಸೈನಿಕನಲ್ಲವೆಂಬುದು ಗೊಲ್ಯಾತನಿಗೆ ಗೊತ್ತಾಯಿತು. ದಾವೀದನು ಕೆಂಬಣ್ಣದ ಸುಂದರ ಯುವಕನಾಗಿದ್ದನು. 43 ಗೊಲ್ಯಾತನು ದಾವೀದನಿಗೆ, “ಈ ಕೋಲು ಏನಕ್ಕೆ? ನಾಯಿಯನ್ನು ಓಡಿಸುವಂತೆ ನನ್ನನ್ನು ಓಡಿಸುವುದಕ್ಕೆ ಬಂದೆಯಾ?” ಎಂದು ಕೇಳಿದನು. ಬಳಿಕ ಗೊಲ್ಯಾತನು ತನ್ನ ದೇವರ ಹೆಸರುಗಳ ಮೇಲೆ ದಾವೀದನನ್ನು ಶಪಿಸಿದನು. 44 ಗೊಲ್ಯಾತನು ದಾವೀದನಿಗೆ, “ಬಾ ಇಲ್ಲಿಗೆ, ನಿನ್ನ ದೇಹವನ್ನು ಪಕ್ಷಿಗಳಿಗೂ ಕ್ರೂರಪ್ರಾಣಿಗಳಿಗೂ ಆಹಾರವನ್ನಾಗಿ ಮಾಡುತ್ತೇನೆ!” ಎಂದನು.
45 ದಾವೀದನು ಫಿಲಿಷ್ಟಿಯನಿಗೆ, “ನೀನಾದರೋ ಖಡ್ಗ, ಈಟಿ ಮತ್ತು ಭರ್ಜಿಗಳನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದಿರುವೆ. ನಾನಾದರೋ ಸರ್ವಶಕ್ತನೂ ಇಸ್ರೇಲರ ಸೈನ್ಯಗಳ ದೇವರೂ ಆಗಿರುವ ಯೆಹೋವನ ಹೆಸರಿನಲ್ಲಿ ನಿನ್ನ ಬಳಿಗೆ ಬಂದಿರುವೆ! ನೀನು ಹೀಯಾಳಿಸಿದ್ದು ಆತನನ್ನೇ. 46 ಇಂದು ನಾನು ನಿನ್ನನ್ನು ಸೋಲಿಸಲು ಯೆಹೋವನು ಸಹಾಯಮಾಡುತ್ತಾನೆ. ನಾನು ನಿನ್ನನ್ನು ಕೊಲ್ಲುತ್ತೇನೆ. ಇಂದು ನಾನು ನಿನ್ನ ತಲೆಯನ್ನು ಕತ್ತರಿಸಿ ನಿನ್ನ ದೇಹವನ್ನು ಪಕ್ಷಿಗಳಿಗೂ ಕ್ರೂರಮೃಗಗಳಿಗೂ ಆಹಾರವನ್ನಾಗಿ ಕೊಡುತ್ತೇನೆ. ಉಳಿದೆಲ್ಲ ಫಿಲಿಷ್ಟಿಯರಿಗೂ ಸಹ ನಾವು ಅದೇ ರೀತಿ ಮಾಡುತ್ತೇವೆ. ಆಗ ಇಸ್ರೇಲಿನಲ್ಲಿ ದೇವರಿದ್ದಾನೆಂಬುದು ಇಡೀ ಜಗತ್ತಿಗೆಲ್ಲ ಗೊತ್ತಾಗುವುದು! 47 ಜನರನ್ನು ರಕ್ಷಿಸಲು ಯೆಹೋವನಿಗೆ ಕತ್ತಿ ಮತ್ತು ಈಟಿಗಳ ಅಗತ್ಯವಿಲ್ಲ ಎಂಬುದು ಇಲ್ಲಿ ಸೇರಿರುವ ಜನರಿಗೆಲ್ಲ ತಿಳಿಯುತ್ತದೆ. ಇದು ಯೆಹೋವನ ಯುದ್ಧ. ಫಿಲಿಷ್ಟಿಯರನ್ನೆಲ್ಲ ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡುತ್ತಾನೆ” ಎಂದು ಹೇಳಿದನು.
48 ಫಿಲಿಷ್ಟಿಯನಾದ ಗೊಲ್ಯಾತನು ಆಕ್ರಮಣಮಾಡಲು ದಾವೀದನ ಹತ್ತಿರಕ್ಕೆ ಬಂದನು. ದಾವೀದನೂ ಗೊಲ್ಯಾತನನ್ನು ಸಂಧಿಸಲು ವೇಗವಾಗಿ ಓಡಿದನು.
49 ದಾವೀದನು ತನ್ನ ಚೀಲದಿಂದ ಒಂದು ಕಲ್ಲನ್ನು ಹೊರತೆಗೆದನು. ಅದನ್ನು ಅವನು ಕವಣೆಯಲ್ಲಿ ಸಿಕ್ಕಿಸಿ ಬೀಸಿ ಹೊಡೆದನು. ಕವಣೆಯಿಂದ ಅವನು ಬೀಸಿದ ಕಲ್ಲು ಗೊಲ್ಯಾತನ ಹಣೆಗೆ ಬಡಿಯಿತು. ಆ ಕಲ್ಲು ಅವನ ಹಣೆಯಲ್ಲಿ ಆಳವಾದ ಗಾಯವನ್ನು ಮಾಡಿತು. ಕೂಡಲೇ ಗೊಲ್ಯಾತನು ಬೋರಲಾಗಿ ನೆಲದ ಮೇಲೆ ಬಿದ್ದನು.
50 ಹೀಗೆ ದಾವೀದನು ಕವಣಿಯ ಒಂದೇ ಕಲ್ಲಿನಿಂದ ಫಿಲಿಷ್ಟಿಯನನ್ನು ಹೊಡೆದು ಕೊಂದನು! ದಾವೀದನು ಕತ್ತಿಯನ್ನೂ ಹೊಂದಿರಲಿಲ್ಲ. 51 ದಾವೀದನು ಓಡುತ್ತಾ ಹೋಗಿ ಫಿಲಿಷ್ಟಿಯನ ಪಕ್ಕದಲ್ಲಿ ನಿಂತುಕೊಂಡನು. ದಾವೀದನು ಗೊಲ್ಯಾತನ ಕತ್ತಿಯನ್ನು ಒರೆಯಿಂದ ತೆಗೆದು ಅದೇ ಕತ್ತಿಯಿಂದ ಅವನ ತಲೆಯನ್ನು ಕತ್ತರಿಸಿ ಹಾಕಿದನು. ದಾವೀದನು ಈ ರೀತಿಯಲ್ಲಿ ಗೊಲ್ಯಾತನನ್ನು ಕೊಂದನು.
ಫಿಲಿಷ್ಟಿಯರು ತಮ್ಮ ನಾಯಕನು ಸತ್ತದ್ದನ್ನು ನೋಡಿದಾಗ ಹಿಂದಿರುಗಿ ಓಡಿಹೋದರು. 52 ಇಸ್ರೇಲಿನ ಮತ್ತು ಯೆಹೂದದ ಸೈನಿಕರು ಆರ್ಭಟಮಾಡುತ್ತಾ ಫಿಲಿಷ್ಟಿಯರ ಬೆನ್ನಟ್ಟಿದರು. ಇಸ್ರೇಲರು ಫಿಲಿಷ್ಟಿಯರನ್ನು ಗತ್ ನಗರದ ಗಡಿಯವರೆಗೂ ಎಕ್ರೋನಿನ ಬಾಗಿಲುಗಳ ವರೆಗೂ ಅಟ್ಟಿಸಿಕೊಂಡು ಹೋದರು. ಅವರು ಅನೇಕ ಫಿಲಿಷ್ಟಿಯರನ್ನು ಕೊಂದರು. ಅವರ ಶವಗಳು ಶಾರಯಿಮಿನ ಮಾರ್ಗದುದ್ದಕ್ಕೂ ಗತ್ ಮತ್ತು ಎಕ್ರೋನ್‌ಗಳವರೆಗೆ ಬಿದ್ದಿದ್ದವು. 53 ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋಗಿದ್ದ ಇಸ್ರೇಲರು ಫಿಲಿಷ್ಟಿಯರ ಪಾಳೆಯಕ್ಕೆ ನುಗ್ಗಿ ಅವರ ಪಾಳೆಯದಲ್ಲಿದ್ದ ಅನೇಕ ವಸ್ತುಗಳನ್ನು ವಶಪಡಿಸಿಕೊಂಡರು.
54 ದಾವೀದನು ಗೊಲ್ಯಾತನ ತಲೆಯನ್ನು ಜೆರುಸಲೇಮಿಗೆ ತೆಗೆದುಕೊಂಡು ಹೋದನು. ದಾವೀದನು ಅವನ ಆಯುಧಗಳನ್ನು ತನ್ನ ಗುಡಾರದಲ್ಲೇ ಇರಿಸಿಕೊಂಡನು.
ಸೌಲನು ದಾವೀದನ ಬಗ್ಗೆ ಹೆದರಲಾರಂಭಿಸಿದನು
55 ದಾವೀದನು ಗೊಲ್ಯಾತನೊಂದಿಗೆ ಯುದ್ಧಕ್ಕೆ ಹೊರಟಿದ್ದನ್ನು ಸೌಲನು ಗಮನಿಸುತ್ತಿದ್ದನು. ಸೌಲನು ತನ್ನ ಸೇನಾಧಿಪತಿಯಾದ ಅಬ್ನೇರನನ್ನು, “ಆ ಯುವಕನ ತಂದೆ ಯಾರು?” ಎಂದು ಪ್ರಶ್ನಿಸಿದನು.
ಅಬ್ನೇರನು, “ಅರಸನೇ, ನಿನ್ನ ಜೀವದಾಣೆ, ಅವನು ಯಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.
56 ಅದಕ್ಕೆ ಅರಸನು, “ಆ ಯುವಕನ ತಂದೆ ಯಾರೆಂಬುದನ್ನು ಪತ್ತೆಹಚ್ಚು” ಎಂದು ಹೇಳಿದನು.
57 ದಾವೀದನು ಗೊಲ್ಯಾತನನ್ನು ಕೊಂದು ಹಿಂದಿರುಗಿದಾಗ, ಅಬ್ನೇರನು ಅವನನ್ನು ಸೌಲನ ಹತ್ತಿರಕ್ಕೆ ಕರೆತಂದನು. ದಾವೀದನು ಫಿಲಿಷ್ಟಿಯನ ತಲೆಯನ್ನು ಕೈಯಲ್ಲಿ ಹಿಡಿದುಕೊಂಡೇ ಇದ್ದನು.
58 ಸೌಲನು, “ಯುವಕನೇ, ನಿನ್ನ ತಂದೆ ಯಾರು?” ಎಂದು ಪ್ರಶ್ನಿಸಿದನು.
ದಾವೀದನು, “ನಾನು ನಿಮ್ಮ ಸೇವಕನಾದ ಬೆತ್ಲೆಹೇಮಿನ ಇಷಯನ ಮಗ” ಎಂದು ಉತ್ತರಿಸಿದನು.
Kannada Holy Bible: Easy-to-Read Version. All rights reserved. © 1997 Bible League International