Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 13-14

ಸೌಲನು ಮಾಡಿದ ಮೊದಲ ತಪ್ಪು

13 ಆ ಸಮಯದಲ್ಲಿ ಸೌಲನು ರಾಜನಾಗಿ ಒಂದು ವರ್ಷವಾಗಿತ್ತು. ಸೌಲನು ಎರಡು ವರ್ಷಗಳ ಕಾಲ ಇಸ್ರೇಲನ್ನು ಆಳಿದ ನಂತರ, ಅವನು ಮೂರು ಸಾವಿರ ಇಸ್ರೇಲ್ ಗಂಡಸರನ್ನು ಆರಿಸಿಕೊಂಡನು. ಅವರಲ್ಲಿ ಎರಡು ಸಾವಿರ ಗಂಡಸರು ಗುಡ್ಡಗಾಡು ಪ್ರದೇಶವಾದ ಬೇತೇಲಿನಲ್ಲಿಯೂ ಮಿಕ್ಮಾಷಿನಲ್ಲಿಯೂ ಅವನೊಂದಿಗೆ ಇದ್ದರು. ಉಳಿದ ಒಂದು ಸಾವಿರ ಗಂಡಸರು ಬೆನ್ಯಾಮೀನನ ಗಿಬೆಯದಲ್ಲಿ ಯೋನಾತಾನನೊಂದಿಗೆ ಇದ್ದರು. ಸೌಲನು ಸೈನ್ಯದಲ್ಲಿದ್ದ ಇತರರನ್ನು ಅವರವರ ಮನೆಗಳಿಗೆ ಮರಳಿ ಕಳುಹಿಸಿದನು.

ಯೋನಾತಾನನು ಫಿಲಿಷ್ಟಿಯರನ್ನು ಅವರ ಶಿಬಿರವಿದ್ದ ಗೆಬದಲ್ಲಿ ಸೋಲಿಸಿದನು. ಫಿಲಿಷ್ಟಿಯರು ಈ ವಿಚಾರವನ್ನು ಕೇಳಿ, “ಇಬ್ರಿಯರು ದಂಗೆ ಎದ್ದಿದ್ದಾರೆ” ಎಂದು ಹೇಳಿದರು.

ಸೌಲನು, “ಏನು ನಡೆಯಿತೆಂಬುದು ಇಬ್ರಿಯರಿಗೆ ತಿಳಿಯಲಿ” ಎಂದು ಹೇಳಿದನು. ಆದ್ದರಿಂದ ಸೌಲನು ಇಸ್ರೇಲ್ ದೇಶದಲ್ಲೆಲ್ಲಾ ಕೊಂಬೂದಿಸಬೇಕೆಂದು ಜನರಿಗೆ ಹೇಳಿದನು. ಇಸ್ರೇಲರೆಲ್ಲರೂ ಈ ಸುದ್ದಿಯನ್ನು ಕೇಳಿ, “ಸೌಲನು ಫಿಲಿಷ್ಟಿಯರ ನಾಯಕನನ್ನು ಕೊಂದನು. ಈಗ ಫಿಲಿಷ್ಟಿಯರು ಇಸ್ರೇಲರನ್ನು ನಿಜವಾಗಿಯೂ ದ್ವೇಷಿಸುತ್ತಾರೆ” ಎಂದು ಹೇಳಿದರು.

ಇಸ್ರೇಲರೆಲ್ಲ ಗಿಲ್ಗಾಲಿನಲ್ಲಿ ಸೌಲನನ್ನು ಜೊತೆಸೇರಲು ಕರೆಹೋಯಿತು. ಫಿಲಿಷ್ಟಿಯರು ಇಸ್ರೇಲರೊಡನೆ ಹೋರಾಡಲು ಒಟ್ಟುಗೂಡಿದರು. ಫಿಲಿಷ್ಟಿಯರಲ್ಲಿ ಮೂರು ಸಾವಿರ[a] ರಥಗಳಿದ್ದವು; ಆರು ಸಾವಿರ ಅಶ್ವಸೈನಿಕರಿದ್ದರು. ಫಿಲಿಷ್ಟಿಯರಲ್ಲಿ ನದಿದಂಡೆಯ ಮರಳಿನ ಕಣಗಳಷ್ಟು ಯೋಧರಿದ್ದರು. ಫಿಲಿಷ್ಟಿಯರು ಬೇತಾವೆನಿನ ಪೂರ್ವ ದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡರು.

ಇಸ್ರೇಲರು ತಾವು ತೊಂದರೆಗೆ ಒಳಗಾಗಿರುವುದನ್ನೂ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿರುವುದನ್ನೂ ತಿಳಿದುಕೊಂಡರು. ಅವರು ಗವಿಗಳಲ್ಲಿ ಮತ್ತು ಬಂಡೆಗಲ್ಲುಗಳ ಸಂಧಿಗಳಲ್ಲಿ ಅಡಗಿಕೊಳ್ಳಲು ಓಡಿಹೋದರು. ಅವರು ಬಂಡೆಗಳ ಮಧ್ಯದಲ್ಲಿಯೂ ಬಾವಿಗಳಲ್ಲಿಯೂ ಮತ್ತು ನೆಲದ ಕುಳಿಗಳಲ್ಲಿಯೂ ಅಡಗಿಕೊಂಡರು. ಇಬ್ರಿಯರಲ್ಲಿ ಕೆಲವರು ಜೋರ್ಡನ್ ನದಿಯನ್ನು ದಾಟಿ ಗಾದ್ ಮತ್ತು ಗಿಲ್ಯಾದ್ ಪ್ರದೇಶಕ್ಕೆ ಹೊರಟುಹೋದರು. ಸೌಲನು ಇನ್ನೂ ಗಿಲ್ಗಾಲಿನಲ್ಲೇ ಇದ್ದನು. ಅವನ ಸೈನ್ಯದಲ್ಲಿದ್ದ ಜನರೆಲ್ಲ ಭಯದಿಂದ ನಡುಗತೊಡಗಿದರು.

ಸಮುವೇಲನು ತಾನು ಸೌಲನನ್ನು ಗಿಲ್ಗಾಲಿನಲ್ಲಿ ಭೇಟಿಮಾಡುವುದಾಗಿ ಹೇಳಿಕಳುಹಿಸಿದನು. ಆದ್ದರಿಂದ ಸೌಲನು ಏಳು ದಿನಗಳವರೆಗೆ ಅಲ್ಲಿ ಕಾದುಕೊಂಡಿದ್ದನು. ಆದರೆ ಸಮುವೇಲನು ಗಿಲ್ಗಾಲಿಗೆ ಬರುವುದಕ್ಕಿಂತ ಮೊದಲೇ ಸೈನಿಕರು ಸೌಲನನ್ನು ಬಿಟ್ಟುಹೋಗ ತೊಡಗಿದರು. ಆದ್ದರಿಂದ ಸೌಲನು, “ಸರ್ವಾಂಗಹೋಮಕ್ಕೂ ಸಮಾಧಾನಯಜ್ಞಕ್ಕೂ ಬೇಕಾದವುಗಳನ್ನು ತನ್ನಿ” ಎಂದು ಹೇಳಿದನು. ಬಳಿಕ ಸೌಲನು ಸರ್ವಾಂಗಹೋಮವನ್ನು ಅರ್ಪಿಸಿದನು. 10 ಸೌಲನು ಸರ್ವಾಂಗಹೋಮವನ್ನು ಅರ್ಪಿಸಿ ಮುಗಿಸುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸಲು ಹೊರಗೆ ಹೋದನು.

11 ಸಮುವೇಲನು, “ನೀನು ಮಾಡಿದ್ದೇನು?” ಎಂದು ಕೇಳಿದನು.

ಸೌಲನು, “ಸೈನಿಕರು ನನ್ನನ್ನು ಬಿಟ್ಟುಹೋಗುತ್ತಿರುವುದನ್ನೂ ನೀನು ನಿಯಮಿತಕಾಲದಲ್ಲಿ ಇಲ್ಲಿ ಇಲ್ಲದಿರುವುದನ್ನೂ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಒಟ್ಟುಗೂಡುತ್ತಿರುವುದನ್ನೂ ನೋಡಿದೆನು. 12 ನಾನು ನನ್ನಲ್ಲಿಯೇ ಯೋಚಿಸುತ್ತಾ, ‘ಫಿಲಿಷ್ಟಿಯರು ಇಲ್ಲಿಗೆ ಬಂದು ಗಿಲ್ಗಾಲಿನಲ್ಲಿ ನನ್ನ ಮೇಲೆ ಆಕ್ರಮಣ ಮಾಡುತ್ತಾರೆ. ನಮಗೆ ಸಹಾಯ ಮಾಡುವಂತೆ ನಾನು ದೇವರಲ್ಲಿ ಇನ್ನೂ ಪ್ರಾರ್ಥಿಸಿಲ್ಲ. ಆದ್ದರಿಂದ ನನ್ನಲ್ಲಿಯೇ ಆದ ಒತ್ತಡದಿಂದ ಸರ್ವಾಂಗಹೋಮವನ್ನು ಅರ್ಪಿಸಿದೆನು’” ಎಂದನು.

13 ಸಮುವೇಲನು, “ನೀನು ಬುದ್ಧಿಹೀನಕೃತ್ಯವನ್ನು ಮಾಡಿದೆ. ನಿನ್ನ ದೇವರಾದ ಯೆಹೋವನ ಆಜ್ಞೆಗೆ ನೀನು ವಿಧೇಯನಾಗಲಿಲ್ಲ. ನೀನು ಯೆಹೋವನ ಆಜ್ಞೆಗೆ ವಿಧೇಯನಾಗಿದ್ದರೆ, ನಿನ್ನ ಕುಟುಂಬವು ಇಸ್ರೇಲನ್ನು ಶಾಶ್ವತವಾಗಿ ಆಳುವಂತೆ ಯೆಹೋವನು ಮಾಡುತ್ತಿದ್ದನು. 14 ಆದರೆ ಈಗ ನಿನ್ನ ಆಳ್ವಿಕೆಯು ಮುಂದುವರಿಯುವುದಿಲ್ಲ. ಯೆಹೋವನು ತನಗೆ ವಿಧೇಯನಾಗಿರುವಂತಹ ಮನುಷ್ಯನಿಗಾಗಿ ಹುಡುಕುತ್ತಿದ್ದನು. ಯೆಹೋವನಿಗೆ ಅಂತಹ ಮನುಷ್ಯನು ಸಿಕ್ಕಿದ್ದಾನೆ. ತನ್ನ ಜನರನ್ನು ಆಳಲು ಯೆಹೋವನು ಅವನನ್ನು ಹೊಸ ನಾಯಕನನ್ನಾಗಿ ನೇಮಿಸುತ್ತಾನೆ. ನೀನು ಯೆಹೋವನ ಆಜ್ಞೆಗೆ ವಿಧೇಯನಾಗಲಿಲ್ಲ. ಆದ್ದರಿಂದ ಯೆಹೋವನು ಹೊಸ ನಾಯಕನನ್ನು ಆರಿಸಿಕೊಳ್ಳುವನು” ಎಂದು ಹೇಳಿದನು. 15 ನಂತರ ಸಮುವೇಲನು ಎದ್ದು ಗಿಲ್ಗಾಲನ್ನು ಬಿಟ್ಟುಹೊರಟನು.

ಮಿಕ್ಮಾಷಿನ ಕದನ

ಸೌಲನು ತನ್ನ ಸೈನ್ಯಸಮೇತವಾಗಿ ಗಿಲ್ಗಾಲಿನಿಂದ ಹೊರಟನು. ಅವರು ಬೆನ್ಯಾಮೀನ್ ಪ್ರಾಂತ್ಯದ ಗಿಬೆಯಕ್ಕೆ ಹೋದರು. ಸೌಲನು ತನ್ನೊಂದಿಗೆ ಇನ್ನೂ ಇದ್ದ ಜನರನ್ನು ಲೆಕ್ಕ ಹಾಕಿದನು. ಅವನ ಜೊತೆಯಲ್ಲಿ ಆರುನೂರು ಜನರಿದ್ದರು. 16 ಸೌಲನು ಮತ್ತು ಅವನ ಮಗನಾದ ಯೋನಾತಾನನು ಮತ್ತು ಸೈನಿಕರು ಬೆನ್ಯಾಮೀನ್ ಪ್ರಾಂತ್ಯದ ಗಿಬೆಯಕ್ಕೆ ಹೋದರು.

ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡಿದ್ದರು. 17 ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಇಸ್ರೇಲರನ್ನು ಶಿಕ್ಷಿಸಲು ಫಿಲಿಷ್ಟಿಯರು ತೀರ್ಮಾನಿಸಿದ್ದರು. ಆದ್ದರಿಂದ ಅವರ ಬಲಿಷ್ಠ ಸೈನ್ಯವು ಆಕ್ರಮಣಕ್ಕಾಗಿ ಆ ಸ್ಥಳವನ್ನು ಬಿಟ್ಟುಹೊರಟಿತು. ಫಿಲಿಷ್ಟಿಯ ಸೈನ್ಯವನ್ನು ಮೂರು ಗುಂಪುಗಳನ್ನಾಗಿ ಮಾಡಲಾಯಿತು. ಒಂದು ಗುಂಪು ಉತ್ತರದಿಕ್ಕಿನ ಒಫ್ರದ ಮಾರ್ಗವಾಗಿ ಶುವಲ್ ದೇಶಕ್ಕೆ ಹೊರಟಿತು. 18 ಎರಡನೆ ಗುಂಪು ಈಶಾನ್ಯ ದಿಕ್ಕಿನ ಮಾರ್ಗವಾಗಿ ಬೇತ್‌ಹೋರೋನಿನ ಕಡೆಗೆ ಹೊರಟಿತು. ಆ ಮೂರನೆಯ ಗುಂಪು ಪೂರ್ವದಿಕ್ಕಿನ ಗಡಿಪ್ರದೇಶದ ಕಡೆಗೆ ಹೊರಟಿತು. ಆ ರಸ್ತೆಯು ಜೆಬೋಯೀಮ್ ಕಣಿವೆಯ ಮರುಭೂಮಿಯ ಕಡೆಗೆ ಹೋಗುತ್ತಿತ್ತು.

19 ಕಬ್ಬಿಣದಿಂದ ಆಯುಧಗಳನ್ನು ತಯಾರಿಸಲು ಇಸ್ರೇಲರಿಗೆ ಗೊತ್ತಿರಲಿಲ್ಲ. ಇಸ್ರೇಲಿನಲ್ಲಿ ಯಾವ ಕಮ್ಮಾರರೂ ಇರಲಿಲ್ಲ. ಇಸ್ರೇಲರು ಕಬ್ಬಿಣದಿಂದ ಕತ್ತಿಗಳನ್ನು ಮತ್ತು ಈಟಿಗಳನ್ನು ತಯಾರಿಸಬಹುದೆಂಬ ಭೀತಿಯು ಫಿಲಿಷ್ಟಿಯರಿಗೆ ಇದ್ದಕಾರಣ ಅವರು ಇಸ್ರೇಲರಿಗೆ ಕಬ್ಬಿಣದಿಂದ ತಯಾರಿಸುವ ವಸ್ತುಗಳ ಬಗ್ಗೆ ತಿಳುವಳಿಕೆ ನೀಡಿರಲಿಲ್ಲ. 20 ಫಿಲಿಷ್ಟಿಯರು ಮಾತ್ರ ಕಬ್ಬಿಣದ ವಸ್ತುಗಳನ್ನು ಹರಿತಗೊಳಿಸುತ್ತಿದ್ದರು. ಆದ್ದರಿಂದ ಇಸ್ರೇಲರು ತಮ್ಮ ನೇಗಿಲುಗಳನ್ನು, ಗುದ್ದಲಿಗಳನ್ನು, ಸಲಿಕೆಗಳನ್ನು ಮತ್ತು ಕೊಡಲಿಗಳನ್ನು ಹರಿತಗೊಳಿಸಲು ಫಿಲಿಷ್ಟಿಯರ ಹತ್ತಿರಕ್ಕೆ ಹೋಗಬೇಕಾಗಿತ್ತು. 21 ಫಿಲಿಷ್ಟಿಯರ ಕಮ್ಮಾರರು ನೇಗಿಲನ್ನಾಗಲಿ ಕಳೆಗುದ್ದಲಿಗಳನ್ನಾಗಲಿ ಹರಿತಗೊಳಿಸಲು 1/3 ತೊಲ ಬೆಳ್ಳಿಯನ್ನು ದರವಾಗಿ ತೆಗೆದುಕೊಳ್ಳುತ್ತಿದ್ದರು; ಸಲಿಕೆಯನ್ನಾಗಲಿ ಕೊಡಲಿಯನ್ನಾಗಲಿ ನೇಗಿಲಿನ ಗುಳವನ್ನಾಗಲಿ ಹರಿತಗೊಳಿಸಲು 1/6 ತೊಲ ಬೆಳ್ಳಿಯನ್ನು ತೆಗೆದುಕೊಳ್ಳುತ್ತಿದ್ದರು. 22 ಆದ್ದರಿಂದ ಯುದ್ಧದ ದಿನ ಸೌಲನ ಬಳಿಯಿದ್ದ ಸೈನಿಕರಲ್ಲಿ ಯಾರ ಹತ್ತಿರವೂ ಕತ್ತಿಯಾಗಲಿ ಈಟಿಯಾಗಲಿ ಇರಲಿಲ್ಲ. ಸೌಲ ಮತ್ತು ಅವನ ಮಗನಾದ ಯೋನಾತಾನನ ಹತ್ತಿರ ಮಾತ್ರ ಕಬ್ಬಿಣದ ಆಯುಧಗಳಿದ್ದವು.

23 ಫಿಲಿಷ್ಟಿಯರ ಸೈನ್ಯದ ಒಂದು ಗುಂಪು ಮಿಕ್ಮಾಷಿನ ಕಣಿವೆಗೆ ಕಾವಲಾಗಿತ್ತು.

ಯೋನಾತಾನನು ಮತ್ತು ಅವನ ಸಹಾಯಕನು ಫಿಲಿಷ್ಟಿಯರನ್ನು ಆಕ್ರಮಣ ಮಾಡುವರು

14 ಅಂದು ಸೌಲನ ಮಗನಾದ ಯೋನಾತಾನನು ತನ್ನ ಆಯುಧಗಳನ್ನು ಹೊತ್ತುತರುವ ಯುವಕನೊಂದಿಗೆ ಮಾತನಾಡುತ್ತಾ, “ಕಣಿವೆಯ ಆಚೆಗಿರುವ ಫಿಲಿಷ್ಟಿಯರ ಪಾಳೆಯಕ್ಕೆ ಹೋಗೋಣ” ಎಂದು ಹೇಳಿದನು. ಆದರೆ ಯೋನಾತಾನನು ತನ್ನ ತಂದೆಗೆ ಇದನ್ನು ತಿಳಿಸಲಿಲ್ಲ.

ಸೌಲನು ಮಿಗ್ರೋನಿನ ಬೆಟ್ಟದ ತುದಿಯಲ್ಲಿರುವ ಒಂದು ದಾಳಿಂಬೆ ಮರದ ಅಡಿಯಲ್ಲಿ ಕುಳಿತಿದ್ದನು. ಅದು ಆ ಸ್ಥಳದ ಕಣಕ್ಕೆ ಸಮೀಪವಾಗಿತ್ತು. ಸೌಲನ ಜೊತೆಯಲ್ಲಿ ಆರುನೂರು ಜನರಿದ್ದರು. ಅವರಲ್ಲಿ ಅಹೀಯನೂ ಒಬ್ಬನು. ಶೀಲೋವಿನಲ್ಲಿ ಏಲಿಯು ಯೆಹೋವನ ಯಾಜಕನಾಗಿದ್ದನು. ಏಫೋದನ್ನು ಧರಿಸಿದ್ದ ಅಹೀಯನು ಆಗ ಅಲ್ಲಿ ಯಾಜಕನಾಗಿದ್ದನು. ಅಹೀಯನು ಈಕಾಬೋದನ ಸೋದರನಾದ ಅಹೀಟೂಬನ ಮಗ. ಈಕಾಬೋದನು ಫೀನೆಹಾಸನ ಮಗ. ಫೀನೆಹಾಸನು ಏಲಿಯ ಮಗ.

ಯೋನಾತಾನನು ಹೊರಟುಹೋದನೆಂಬುದು ಜನರಿಗೆ ಗೊತ್ತಿರಲಿಲ್ಲ. ಆ ಮಾರ್ಗದ ಎರಡು ಕಡೆಗಳಲ್ಲೂ ದೊಡ್ಡದೊಡ್ಡ ಬಂಡೆಗಲ್ಲುಗಳಿದ್ದವು. ಯೋನಾತಾನನು ಫಿಲಿಷ್ಟಿಯರ ಪಾಳೆಯಕ್ಕೆ ಆ ಮಾರ್ಗದಲ್ಲಿ ಹೋಗಲು ಉಪಾಯ ಮಾಡಿದನು. ಆ ಮಾರ್ಗದ ಒಂದು ಕಡೆಗಿದ್ದ ಬಂಡೆಗಲ್ಲಿಗೆ ಬೋಚೇಚ್ ಎಂದು ಹೆಸರು; ಇನ್ನೊಂದು ಕಡೆಗಿದ್ದ ಬಂಡೆಗಲ್ಲಿಗೆ ಸೆನೆ ಎಂದು ಹೆಸರು. ಒಂದು ಬಂಡೆಗಲ್ಲು ಉತ್ತರದಿಕ್ಕಿನ ಮಿಕ್ಮಾಷಿನ ಕಡೆಗೂ ಇನ್ನೊಂದು ಬಂಡೆಗಲ್ಲು ದಕ್ಷಿಣದಿಕ್ಕಿನ ಗೆಬದ ಕಡೆಗೂ ಇದ್ದವು.

ಯೋನಾತಾನನು ತನ್ನ ಆಯುಧಗಳನ್ನು ಹೊತ್ತುಕೊಂಡು ಬರುತ್ತಿದ್ದ ಯುವಸಹಾಯಕನಿಗೆ, “ಆ ಹೊರದೇಶಿಯರ ಪಾಳೆಯಕ್ಕೆ ಹೋಗೋಣ ಬಾ. ಈ ಜನರನ್ನು ಸೋಲಿಸಲು ಯೆಹೋವನು ಬಹುಶಃ ನಮ್ಮನ್ನು ಬಳಸಬಹುದು. ಯೆಹೋವನನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ನಮ್ಮಲ್ಲಿ ಅನೇಕ ಸೈನಿಕರಿದ್ದರೂ ಇಲ್ಲವೆ ಕೆಲವೇ ಸೈನಿಕರಿದ್ದರೂ ಅದು ಲೆಕ್ಕಕ್ಕೆ ಬರುವುದಿಲ್ಲ” ಎಂದು ಹೇಳಿದನು.

ಯೋನಾತಾನನ ಆಯುಧಗಳನ್ನು ಹೊತ್ತುಕೊಂಡು ಬರುತ್ತಿದ್ದ ಯುವಕನು, “ನಿನಗೆ ಒಳ್ಳೆಯದೆಂದು ತೋಚಿದ್ದನ್ನು ಮಾಡು. ನಿನ್ನ ಕೆಲಸದಲ್ಲೆಲ್ಲಾ ನಾನು ನಿನ್ನೊಂದಿಗಿರುತ್ತೇನೆ” ಎಂದು ಹೇಳಿದನು.

ಯೋನಾತಾನನು, “ನಾವು ಕಣಿವೆಯನ್ನು ದಾಟಿ ಫಿಲಿಷ್ಟಿಯ ಕಾವಲುಗಾರರ ಕಡೆಗೆ ಹೋಗಿ ಅವರಿಗೆ ಕಾಣಿಸಿಕೊಳ್ಳೋಣ. ಅವರು, ‘ನಾವು ಬರುವ ತನಕ ನೀವು ಅಲ್ಲೇ ನಿಲ್ಲಿ’ ಎಂದು ಹೇಳಿದರೆ, ನಾವು ನಿಂತಲ್ಲೇ ನಿಲ್ಲೋಣ. ನಾವು ಮೇಲೆ ಹತ್ತಿ ಅವರ ಹತ್ತಿರಕ್ಕೆ ಹೋಗುವುದು ಬೇಡ. 10 ಆದರೆ ಫಿಲಿಷ್ಟಿಯರು, ‘ನಮ್ಮ ಬಳಿಗೆ ಹತ್ತಿ ಬನ್ನಿ’ ಎಂದರೆ, ನಾವು ಅವರ ಬಳಿಗೆ ಹತ್ತಿ ಹೋಗೋಣ; ಯಾಕೆಂದರೆ ಅದು ದೇವರ ಗುರುತು. ದೇವರು ಅವರನ್ನು ಸೋಲಿಸಲು ನಮಗೆ ಅವಕಾಶ ಕಲ್ಪಿಸಿದ್ದಾನೆ ಎಂಬುದೇ ಅದರ ಅರ್ಥ” ಎಂದು ಹೇಳಿದನು.

11 ಹೀಗೆ ಯೋನಾತಾನ ಮತ್ತು ಅವನ ಸಹಾಯಕನು ಫಿಲಿಷ್ಟಿಯರಿಗೆ ಕಾಣಿಸಿಕೊಂಡರು. ಫಿಲಿಷ್ಟಿಯರ ಕಾವಲುಗಾರರು, “ಇಗೋ, ಇಬ್ರಿಯರು ತಾವು ಅಡಗಿಕೊಂಡಿದ್ದ ಗುಹೆಗಳಿಂದ ಹೊರಬರುತ್ತಿದ್ದಾರೆ” ಎಂದು ಹೇಳಿದರು. 12 ಆ ಕೋಟೆಯಲ್ಲಿದ್ದ ಫಿಲಿಷ್ಟಿಯರು ಯೋನಾತಾನ ಮತ್ತು ಅವನ ಸಹಾಯಕನಿಗೆ, “ನಮ್ಮ ಹತ್ತಿರಕ್ಕೆ ಬನ್ನಿ. ನಾವು ನಿಮಗೆ ಒಂದು ಪಾಠ ಕಲಿಸುತ್ತೇವೆ” ಎಂದು ಕೂಗಿ ಹೇಳಿದರು.

ಯೋನಾತಾನನು ತನ್ನ ಸಹಾಯಕನಿಗೆ, “ಬೆಟ್ಟದ ಮೇಲಿನವರೆಗೆ ನನ್ನನ್ನು ಹಿಂಬಾಲಿಸು. ಯೆಹೋವನು ಇಸ್ರೇಲರ ವಶಕ್ಕೆ ಫಿಲಿಷ್ಟಿಯರನ್ನು ಒಪ್ಪಿಸಿದ್ದಾನೆ” ಎಂದು ಹೇಳಿದನು.

13-14 ಯೋನಾತಾನನು ತನ್ನ ಕೈಕಾಲುಗಳಿಂದ ಬೆಟ್ಟವನ್ನು ಹತ್ತಿದನು. ಅವನನ್ನು ಹಿಂಬಾಲಿಸಿಕೊಂಡು ಅವನ ಸಹಾಯಕನೂ ಬೆಟ್ಟವನ್ನು ಹತ್ತಿದನು. ಯೋನಾತಾನ ಮತ್ತು ಅವನ ಸಹಾಯಕನು ಫಿಲಿಷ್ಟಿಯರ ಮೇಲೆ ಆಕ್ರಮಣ ಮಾಡಿದರು ಅವರು ಮೊದಲ ಆಕ್ರಮಣದಲ್ಲಿ ಅರ್ಧಎಕರೆ ಸ್ಥಳದಲ್ಲಿದ್ದ ಇಪ್ಪತ್ತು ಮಂದಿ ಫಿಲಿಷ್ಟಿಯರನ್ನು ಕೊಂದರು. ಆಕ್ರಮಣಮಾಡಲು ಬಂದವರೊಡನೆ ಯೋನಾತಾನನು ಮುಖಾಮುಖಿಯಾಗಿ ಹೋರಾಡಿದನು. ಯೋನಾತಾನನ ಸಹಾಯಕನು ಅವನ ಹಿಂದೆ ಬರುತ್ತಾ ಗಾಯಾಳುಗಳನ್ನು ಕೊಂದನು.

15 ಹೊರವಲಯದ ಪಾಳೆಯದಲ್ಲಿದ್ದ ಮತ್ತು ಕೋಟೆಯಲ್ಲಿದ್ದ ಎಲ್ಲಾ ಫಿಲಿಷ್ಟಿಯ ಸೈನಿಕರು ಭಯದಿಂದ ನಡುಗಿದರು. ಹೊಲದಲ್ಲಿದ್ದ ಸೈನಿಕರು ಸಹ ಹೆದರಿಕೊಂಡಿದ್ದರು. ಅತ್ಯಂತ ಧೈರ್ಯವಂತರಾದ ಸೈನಿಕರು ಸಹ ಹೆದರಿಕೊಂಡಿದ್ದರು. ಭೂಮಿಯು ನಡುಗಿದ್ದರಿಂದ ಫಿಲಿಷ್ಟಿಯ ಸೈನಿಕರು ನಿಜವಾಗಿಯೂ ಹೆದರಿಕೊಂಡರು.

16 ಫಿಲಿಷ್ಟಿಯ ಸೈನಿಕರು ದಿಕ್ಕುಪಾಲಾಗಿ ಚದರಿ ಓಡಿಹೋಗುತ್ತಿರುವುದನ್ನು ಬೆನ್ಯಾಮೀನ್ ಪ್ರಾಂತ್ಯದ ಗಿಬೆಯದಲ್ಲಿದ್ದ ಸೌಲನ ಕಾವಲುಗಾರರು ನೋಡಿದರು. 17 ಸೌಲನು ತನ್ನೊಡನೆ ಇದ್ದ ಸೈನಿಕರಿಗೆ, “ಪಾಳೆಯದಲ್ಲಿರುವ ಜನರನ್ನು ಲೆಕ್ಕಹಾಕಿ. ಯಾರು ಪಾಳೆಯದಿಂದ ಹೊರಗೆ ಹೋಗಿದ್ದಾರೆ ಎಂಬುದನ್ನು ನಾನು ತಿಳಿಯಬೇಕು” ಎಂದು ಹೇಳಿದನು.

ಅವರು ಲೆಕ್ಕಹಾಕಿದಾಗ, ಯೋನಾತಾನನೂ ಅವನ ಸಹಾಯಕನೂ ಹೊರಗೆ ಹೋಗಿರುವುದು ತಿಳಿಯಿತು.

18 ಸೌಲನು ಅಹೀಯನಿಗೆ, “ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು. (ಆ ಸಮಯದಲ್ಲಿ ದೇವರ ಪವಿತ್ರ ಪೆಟ್ಟಿಗೆಯು ಇಸ್ರೇಲರೊಂದಿಗೆ ಇತ್ತು.) 19 ಸೌಲನು ಯಾಜಕನಾದ ಅಹೀಯನ ಜೊತೆ ಮಾತನಾಡುತ್ತಿದ್ದನು. ಸೌಲನು ಯೆಹೋವನ ಸಲಹೆಗಾಗಿ ಕಾಯುತ್ತಿದ್ದನು. ಆದರೆ ಫಿಲಿಷ್ಟಿಯರ ಪಾಳೆಯದಲ್ಲಿ ಗದ್ದಲವೂ ಗಲಿಬಿಲಿಯೂ ಹೆಚ್ಚತೊಡಗಿದವು. ಸೌಲನು ತಾಳ್ಮೆಯಿಲ್ಲದಂತಾದನು. ಕೊನೆಯದಾಗಿ ಸೌಲನು ಯಾಜಕನಾದ ಅಹೀಯನಿಗೆ, “ಅಷ್ಟೇ ಸಾಕು, ಕೈಗಳನ್ನು ಕೆಳಗಿಳಿಸಿ ಪ್ರಾರ್ಥನೆಯನ್ನು ನಿಲ್ಲಿಸು” ಎಂದು ಹೇಳಿದನು.

20 ಸೌಲನು ಸೈನಿಕರನ್ನೆಲ್ಲ ಒಟ್ಟುಗೂಡಿಸಿಕೊಂಡು ಯುದ್ಧಕ್ಕೆ ಹೋದನು. ಫಿಲಿಷ್ಟಿಯ ಸೈನಿಕರಲ್ಲಿ ನಿಜವಾಗಿಯೂ ಗಲಿಬಿಲಿಯುಂಟಾಗಿತ್ತು. ಅವರು ತಮ್ಮತಮ್ಮಲ್ಲಿಯೇ ಕತ್ತಿಗಳಿಂದ ಹೋರಾಡುತ್ತಿದ್ದರು. 21 ಫಿಲಿಷ್ಟಿಯರ ಸೇವೆಯಲ್ಲಿ ಮೊದಲಿಂದಲೂ ಇದ್ದ ಇಬ್ರಿಯರು ಈಗಲೂ ಅವರ ಪಾಳೆಯದಲ್ಲಿದ್ದರು. ಆದರೆ ಆಗ ಈ ಇಬ್ರಿಯರು ಸೌಲ ಮತ್ತು ಯೋನಾತಾನರೊಂದಿಗೆ ಸೇರಿಕೊಂಡರು. 22 ಫಿಲಿಷ್ಟಿಯ ಸೈನಿಕರು ಓಡಿಹೋಗುತ್ತಿರುವುದನ್ನು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿ ಅಡಗಿಕೊಂಡಿದ್ದ ಎಲ್ಲ ಇಸ್ರೇಲರೂ ಕೇಳಿದರು. ಆದ್ದರಿಂದ ಆ ಇಸ್ರೇಲರೂ ಯುದ್ಧದಲ್ಲಿ ಭಾಗಿಗಳಾಗಿ ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋದರು.

23 ಹೀಗೆ ಯೆಹೋವನು ಅಂದು ಇಸ್ರೇಲರನ್ನು ರಕ್ಷಿಸಿದನು. ಯುದ್ಧವು ಬೇತಾವೆನಿನ ಆಚೆಯ ತನಕ ನಡೆಯಿತು. ಸೌಲನ ಬಳಿ ಒಟ್ಟು ಹತ್ತು ಸಾವಿರ ಮಂದಿ ಸೈನಿಕರಿದ್ದರು. ಎಫ್ರಾಯೀಮ್ ಬೆಟ್ಟಪ್ರದೇಶದ ಎಲ್ಲಾ ನಗರಗಳಿಗೂ ಯುದ್ಧವು ಹಬ್ಬಿತು.

ಸೌಲನು ಮಾಡಿದ ಇನ್ನೊಂದು ತಪ್ಪು

24 ಆದರೆ ಸೌಲನು ಆ ದಿನ ಮತ್ತೊಂದು ದೊಡ್ಡ ತಪ್ಪನ್ನು ಮಾಡಿದನು. ಇಸ್ರೇಲರು ಬಳಲಿದ್ದರು ಮತ್ತು ಹಸಿದಿದ್ದರು. ಸೌಲನು ಅವರಿಗೆ, “ನಾನು ಶತ್ರುಗಳನ್ನು ಸೋಲಿಸಬೇಕಾಗಿರುವುದರಿಂದ ನಿಮ್ಮಲ್ಲಿ ಸಾಯಂಕಾಲದೊಳಗೆ ಊಟಮಾಡಿದವನು ಶಾಪಗ್ರಸ್ತನಾಗಲಿ” ಎಂದು ಆಣೆಯಿಟ್ಟು ಹೇಳಿದ್ದರಿಂದ ಇಸ್ರೇಲಿನ ಯಾವ ಸೈನಿಕನೂ ಊಟಮಾಡಲಿಲ್ಲ.

25-26 ಯುದ್ಧವು ನಡೆಯುತ್ತಲೇ ಇದ್ದುದರಿಂದ ಅವರೆಲ್ಲ ಕಾಡಿನೊಳಗೆ ಹೋದರು. ಅಲ್ಲಿ ನೆಲದ ಮೇಲೆಲ್ಲಾ ಇದ್ದ ಜೇನನ್ನು ನೋಡಿದರು. ಇಸ್ರೇಲರು ಜೇನು ಕಟ್ಟಿರುವ ಸ್ಥಳಕ್ಕೆ ಬಂದರು. ಅವರು ಹಸಿದಿದ್ದರೂ ಬಳಲಿದ್ದರೂ ಆ ಜೇನನ್ನು ತಿನ್ನಲಿಲ್ಲ. ತಾವು ಶಾಪಕ್ಕೆ ಗುರಿಯಾಗುತ್ತೇವೆ ಎಂಬ ಭಯ ಅವರಿಗಿತ್ತು. 27 ಆದರೆ ಯೋನಾತಾನನಿಗೆ ಈ ಶಾಪದ ಕುರಿತು ತಿಳಿದಿರಲಿಲ್ಲ; ತನ್ನ ತಂದೆಯು ಜನರಿಗೆ ಆಣೆಯಿಟ್ಟು ಹೇಳಿದ್ದೂ ಗೊತ್ತಿರಲಿಲ್ಲ. ಯೋನಾತಾನನ ಕೈಯಲ್ಲಿ ಒಂದು ಕೋಲಿತ್ತು. ಅವನು ಆ ಕೋಲನ್ನು ಜೇನುಗೂಡಿನಲ್ಲಿ ಚುಚ್ಚಿ ಸ್ವಲ್ಪ ಜೇನನ್ನು ತೆಗೆದುಕೊಂಡು ತಿಂದನು. ಆಗ ಅವನು ಸ್ವಲ್ಪ ಬಲಗೊಂಡನು.

28 ಸೈನಿಕನೊಬ್ಬ ಯೋನಾತಾನನಿಗೆ, “‘ಈ ದಿನ ಸಾಯಂಕಾಲದೊಳಗೆ ಊಟಮಾಡುವವನು ಶಾಪಗ್ರಸ್ತನಾಗಲಿ’ ಎಂದು ನಿಮ್ಮ ತಂದೆ ಆಣೆಯಿಟ್ಟು ಹೇಳಿದ್ದಾನೆ ಆದಕಾರಣವೇ ಸೈನಿಕರು ಬಲಹೀನರಾಗಿದ್ದಾರೆ” ಎಂದು ತಿಳಿಸಿದನು.

29 ಬಳಲಿಹೋಗಿದ್ದ ಜನರನ್ನು ಕಂಡ ಯೋನಾತಾನನು, “ನನ್ನ ತಂದೆಯು ದೇಶಕ್ಕೆ ತೊಂದರೆ ಮಾಡಿದನು. ನಾನು ಸ್ವಲ್ಪ ಜೇನನ್ನು ತಿಂದ ಮೇಲೆ ಎಷ್ಟೋ ಚೈತನ್ಯ ಬಂದಿತು. 30 ಈ ದಿನ ಶತ್ರುಗಳಿಂದ ವಶಪಡಿಸಿಕೊಂಡ ಆಹಾರವನ್ನು ತಿನ್ನಲು ಜನರಿಗೆ ಅವಕಾಶ ಕೊಟ್ಟಿದ್ದರೆ ಬಹಳ ಒಳ್ಳೆಯದಾಗುತ್ತಿತ್ತು; ನಾವು ಮತ್ತಷ್ಟು ಫಿಲಿಷ್ಟಿಯರನ್ನು ಕೊಲ್ಲಬಹುದಾಗಿತ್ತು” ಎಂದು ಹೇಳಿದನು.

31 ಅಂದು ಇಸ್ರೇಲರು ಫಿಲಿಷ್ಟಿಯರನ್ನು ಸೋಲಿಸಿದರು. ಅವರು ಮಿಕ್ಮಾಷಿನಿಂದ ಅಯ್ಯಾಲೋನಿನವರೆಗೂ ದಾರಿಯುದ್ದಕ್ಕೂ ಹೋರಾಡಿದರು. ಆದಕಾರಣ ಜನರು ಬಹಳವಾಗಿ ಬಳಲಿದ್ದರು ಮತ್ತು ಹಸಿದಿದ್ದರು. 32 ಅವರು ಫಿಲಿಷ್ಟಿಯರಿಂದ ಕುರಿಗಳನ್ನೂ ದನಕರುಗಳನ್ನೂ ಕೊಳ್ಳೆ ಹೊಡೆದಿದ್ದರು. ಆಗ ಇಸ್ರೇಲರು ಎಷ್ಟು ಹಸಿದಿದ್ದರೆಂದರೆ ಆ ಪಶುಗಳನ್ನು ನೆಲದ ಮೇಲೆಯೇ ಕೊಂದು ಅವುಗಳ ಮಾಂಸವನ್ನು ತಿಂದರು. ಆ ಮಾಂಸದಲ್ಲಿ ಇನ್ನೂ ರಕ್ತವಿತ್ತು.

33 ಒಬ್ಬನು ಸೌಲನಿಗೆ, “ಜನರೆಲ್ಲ ಯೆಹೋವನಿಗೆ ವಿರೋಧವಾಗಿ ಪಾಪ ಮಾಡುತ್ತಿದ್ದಾರೆ. ಅವರು ಮಾಂಸವನ್ನು ರಕ್ತಸಮೇತವಾಗಿ ತಿನ್ನುತ್ತಿದ್ದಾರೆ” ಎಂದು ಹೇಳಿದನು.

ಅದಕ್ಕೆ ಸೌಲನು, “ಅದು ಪಾಪವೇ ಹೌದು! ಈಗ ನೀನು ಒಂದು ದೊಡ್ಡ ಕಲ್ಲನ್ನು ಇಲ್ಲಿಗೆ ಉರುಳಿಸಿದ ನಂತರ 34 ಜನರ ಹತ್ತಿರಕ್ಕೆ ಹೋಗಿ, ‘ನಿಮ್ಮ ದನಕುರಿಗಳನ್ನು ಇಲ್ಲಿಗೆ ತಂದು ಕೊಯ್ದು ತಿನ್ನಬೇಕೆಂದೂ ಮಾಂಸವನ್ನು ರಕ್ತ ಸಮೇತವಾಗಿ ತಿಂದು ಯೆಹೋವನಿಗೆ ವಿರೋಧವಾಗಿ ಪಾಪಮಾಡಬಾರದೆಂದೂ ತಿಳಿಸು’” ಎಂದು ಹೇಳಿ ಕಳುಹಿಸಿದನು.

ಆ ರಾತ್ರಿ ಎಲ್ಲರೂ ಅವರವರ ಪಶುಗಳನ್ನು ಅಲ್ಲಿಗೆ ತಂದು ಕೊಯ್ದು ತಿಂದರು. 35 ಸೌಲನು ಯೆಹೋವನಿಗಾಗಿ ಒಂದು ಯಜ್ಞವೇದಿಕೆಯನ್ನು ನಿರ್ಮಿಸಿದನು. ಯೆಹೋವನಿಗಾಗಿ ಆ ಯಜ್ಞವೇದಿಕೆಯನ್ನು ಸ್ವತಃ ಸೌಲನೇ ಕಟ್ಟಿದನು.

36 ಸೌಲನು ತನ್ನ ಸೈನಿಕರಿಗೆ, “ಈ ರಾತ್ರಿಯೇ ಫಿಲಿಷ್ಟಿಯರ ಬೆನ್ನಟ್ಟೋಣ. ಅವರಲ್ಲಿರುವುದನ್ನೆಲ್ಲ ವಶಪಡಿಸಿಕೊಂಡು ಅವರನ್ನೆಲ್ಲ ಕೊಲ್ಲೋಣ” ಎಂದು ಹೇಳಿದನು.

ಸೈನಿಕರು, “ನಿನಗೆ ಸರಿಕಂಡದ್ದನ್ನು ಮಾಡು” ಎಂದು ಉತ್ತರಕೊಟ್ಟರು. ಆದರೆ ಯಾಜಕನು, “ದೇವರನ್ನು ಕೇಳೋಣ” ಎಂದು ಹೇಳಿದನು.

37 ಆದ್ದರಿಂದ ಸೌಲನು ದೇವರನ್ನು, “ನಾವು ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋಗಬೇಕೇ? ನಾವು ಫಿಲಿಷ್ಟಿಯರನ್ನು ಸೋಲಿಸುವಂತೆ ನೀನು ಮಾಡುವಿಯೋ?” ಎಂದು ಕೇಳಿದನು. ಆದರೆ ದೇವರು ಆ ದಿನ ಸೌಲನಿಗೆ ಉತ್ತರಿಸಲಿಲ್ಲ.

38 ಸೌಲನು, “ಎಲ್ಲಾ ನಾಯಕರನ್ನೂ ನನ್ನ ಹತ್ತಿರಕ್ಕೆ ಕರೆದು ತನ್ನಿ. ಈ ದಿನ ಯಾರು ಪಾಪಮಾಡಿದ್ದಾರೆಂಬುದನ್ನು ಗುರುತಿಸೋಣ. 39 ಇಸ್ರೇಲನ್ನು ರಕ್ಷಿಸುವ ಯೆಹೋವನಾಣೆಯಿಟ್ಟು ಹೇಳುತ್ತಿದ್ದೇನೆ, ನನ್ನ ಸ್ವಂತ ಮಗನಾದ ಯೋನಾತಾನನೇ ಈ ಪಾಪ ಮಾಡಿದ್ದರೂ ಅವನು ಸಾಯಲೇಬೇಕು” ಎಂದು ಹೇಳಿದನು. ಜನರಲ್ಲಿ ಯಾರೊಬ್ಬರೂ ಮಾತನಾಡಲಿಲ್ಲ.

40 ಆಗ ಸೌಲನು, “ನೀವು ಈ ಕಡೆ ನಿಲ್ಲಿ. ನಾನು ಮತ್ತು ನನ್ನ ಮಗನಾದ ಯೋನಾತಾನನು ಆ ಕಡೆ ನಿಲ್ಲುತ್ತೇವೆ” ಎಂದು ಇಸ್ರೇಲರಿಗೆಲ್ಲ ಹೇಳಿದನು.

ಅವರೆಲ್ಲ “ನಿಮ್ಮ ಇಷ್ಟದಂತಾಗಲಿ, ಸ್ವಾಮಿ” ಎಂದರು.

41 ಆಗ ಸೌಲನು, “ಇಸ್ರೇಲಿನ ದೇವರಾದ ಯೆಹೋವನೇ, ನಾನು ನಿನ್ನ ಸೇವಕ. ಈ ದಿನ ನೀನು ನನಗೇಕೆ ಉತ್ತರಿಸಲಿಲ್ಲ? ನಾನಾಗಲಿ ನನ್ನ ಮಗನಾದ ಯೋನಾತಾನನಾಗಲಿ ಇಸ್ರೇಲರಾಗಲಿ ಪಾಪಮಾಡಿದ್ದರೆ ಅದನ್ನು ನಮಗೆ ತಿಳಿಸಿಕೊಡು” ಎಂದು ಪ್ರಾರ್ಥಿಸಿದನು.

ಚೀಟುಹಾಕಿದಾಗ ಅದು ಸೌಲನಿಗೂ ಯೋನಾತಾನನಿಗೂ ಬಂದಿತು. ಜನರೆಲ್ಲಾ ಬಿಡುಗಡೆಗೊಂಡರು. 42 ಸೌಲನು, “ಪಾಪ ಮಾಡಿದವನು ನಾನೋ ಅಥವಾ ನನ್ನ ಮಗ ಯೋನಾತಾನನೋ ಎಂಬುದನ್ನು ತೋರಿಸಲು ಚೀಟುಹಾಕಿರಿ” ಎಂದು ಹೇಳಿದನು. ಚೀಟು ಯೋನಾತಾನನಿಗೆ ಬಂದಿತು.

43 ಸೌಲನು ಯೋನಾತಾನನಿಗೆ, “ನೀನು ಏನು ಮಾಡಿದೆಯೆಂಬುದನ್ನು ನನಗೆ ತಿಳಿಸು” ಎಂದು ಕೇಳಿದನು.

ಯೋನಾತಾನನು ಸೌಲನಿಗೆ, “ನಾನು ನನ್ನ ಕೋಲಿನ ತುದಿಯಿಂದ ಸ್ವಲ್ಪ ಜೇನನ್ನು ತೆಗೆದುಕೊಂಡು ತಿಂದೆನು. ನಾನು ಅದಕ್ಕಾಗಿ ಸಾಯಬೇಕೇ?” ಎಂದು ಕೇಳಿದನು.

44 ಸೌಲನು, “ನಾನು ನನ್ನ ಆಣೆಯನ್ನು ನೆರವೇರಿಸದಿದ್ದರೆ ಯೆಹೋವನು ಬಹುಶಃ ನನಗೆ ಬಹಳ ಕೆಟ್ಟದ್ದನ್ನು ಮಾಡಬಹುದು. ಯೋನಾತಾನನು ಸಾಯಲೇಬೇಕು” ಎಂದು ಹೇಳಿದನು.

45 ಆದರೆ ಸೈನಿಕರು ಸೌಲನಿಗೆ, “ಈ ದಿನ ಇಸ್ರೇಲರನ್ನು ಮುನ್ನಡೆಸಿ ಮಹಾವಿಜಯವನ್ನು ಉಂಟುಮಾಡಿದ ಯೋನಾತಾನನು ಸಾಯಬೇಕೋ? ಇಲ್ಲ! ಜೀವಸ್ವರೂಪನಾದ ಯೆಹೋವನಾಣೆ, ಯೋನಾತಾನನ ತಲೆಕೂದಲುಗಳಲ್ಲಿ ಒಂದಾದರೂ ನೆಲಕ್ಕೆ ಬೀಳಲು ನಾವು ಬಿಡುವುದಿಲ್ಲ. ಇಂದು ಫಿಲಿಷ್ಟಿಯರ ವಿರುದ್ಧ ಹೋರಾಡಲು ದೇವರು ಯೋನಾತಾನನಿಗೆ ಸಹಾಯಮಾಡಿದ್ದಾನೆ” ಎಂದು ಹೇಳಿದರು. ಹೀಗೆ ಜನರು ಯೋನಾತಾನನನ್ನು ರಕ್ಷಿಸಿದರು. ಅವನನ್ನು ಸಾಯಿಸಲಿಲ್ಲ.

46 ಸೌಲನು ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋಗಲಿಲ್ಲ. ಫಿಲಿಷ್ಟಿಯರು ತಮ್ಮ ಸ್ವಸ್ಥಳಕ್ಕೆ ಹಿಂದಿರುಗಿದರು.

ಸೌಲನು ಇಸ್ರೇಲರ ಶತ್ರುಗಳೊಡನೆ ಹೋರಾಡುವನು

47 ಸೌಲನು ಇಸ್ರೇಲನ್ನು ಪೂರ್ಣವಾಗಿ ಹತೋಟಿಯಲ್ಲಿಟ್ಟುಕೊಂಡು ತಾನು ರಾಜನೆಂಬುದನ್ನು ತೋರಿಸಿಕೊಟ್ಟನು. ಸೌಲನು ಇಸ್ರೇಲಿನ ಸುತ್ತಲೂ ವಾಸಿಸುತ್ತಿದ್ದ ಶತ್ರುಗಳೊಡನೆ ಅಂದರೆ ಮೋವಾಬ್ಯರೊಡನೆ, ಅಮ್ಮೋನಿಯರೊಡನೆ, ಎದೋಮ್ಯರೊಡನೆ, ಚೋಬದ ಅರಸರೊಡನೆ ಮತ್ತು ಫಿಲಿಷ್ಟಿಯರೊಡನೆ ಹೋರಾಡಿದನು. ಸೌಲನು ತಾನು ಹೋದ ಕಡೆಯಲ್ಲೆಲ್ಲಾ ಇಸ್ರೇಲರ ಶತ್ರುಗಳನ್ನು ಸೋಲಿಸಿದನು. 48 ಸೌಲನು ಬಹಳ ಧೈರ್ಯಶಾಲಿ. ಅವನು ಅಮಾಲೇಕ್ಯರನ್ನೂ ಸೋಲಿಸಿದನು. ಇಸ್ರೇಲರನ್ನು ಕೊಳ್ಳೆಹೊಡೆಯಬೇಕೆಂದಿದ್ದ ಶತ್ರುಗಳಿಂದ ಸೌಲನು ಇಸ್ರೇಲರನ್ನು ರಕ್ಷಿಸಿದನು.

49 ಸೌಲನ ಗಂಡುಮಕ್ಕಳು ಯಾರೆಂದರೆ: ಯೋನಾತಾನ್, ಇಷ್ವಿ ಮತ್ತು ಮಲ್ಕೀಷೂವ. ಸೌಲನ ಹಿರಿಯ ಮಗಳ ಹೆಸರು ಮೇರಾಬ್, ಸೌಲನ ಕಿರಿಯ ಮಗಳ ಹೆಸರು ಮೀಕಲ್. 50 ಸೌಲನ ಹೆಂಡತಿಯ ಹೆಸರು ಅಹೀನೋವಮ್. ಅಹೀನೋವಮಳ ತಂದೆ ಅಹೀಮಾಚ.

ನೇರನ ಮಗನಾದ ಅಬ್ನೇರನು ಸೌಲನ ಸೈನ್ಯದ ಸೇನಾಪತಿ. ನೇರನು ಸೌಲನ ಚಿಕ್ಕಪ್ಪ. 51 ಸೌಲನ ತಂದೆಯಾದ ಕೀಷನೂ ಅಬ್ನೇರನ ತಂದೆಯಾದ ನೇರನೂ ಅಬೀಯೇಲನ ಮಕ್ಕಳು.

52 ಸೌಲನು ತನ್ನ ಜೀವಮಾನವೆಲ್ಲ ಶೌರ್ಯದಿಂದ ಫಿಲಿಷ್ಟಿಯರ ವಿರುದ್ಧ ತೀವ್ರವಾಗಿ ಹೋರಾಡಿದನು. ಸೌಲನು ವೀರನನ್ನಾಗಲಿ ಧೈರ್ಯಶಾಲಿಯನ್ನಾಗಲಿ ಯಾವಾಗಲಾದರೂ ನೋಡಿದರೆ, ಅಂತಹವರನ್ನು ಸೈನ್ಯಕ್ಕೆ ತೆಗೆದುಕೊಂಡು, ಅವರನ್ನು ರಾಜನ ಅಂಗರಕ್ಷಕ ಪಡೆಗೆ ಸೇರಿಸಿಕೊಳ್ಳುತ್ತಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International