Beginning
4 ಸಮುವೇಲನ ಸುದ್ದಿಯು ಇಸ್ರೇಲಿನಲ್ಲೆಲ್ಲಾ ಹರಡಿತು. ಏಲಿಯು ಬಹು ವೃದ್ಧನಾದನು. ಅವನ ಮಕ್ಕಳು ಯೆಹೋವನ ಸನ್ನಿಧಿಯಲ್ಲಿ ಕೆಟ್ಟಕಾರ್ಯಗಳನ್ನು ನಡೆಸುತ್ತಲೇ ಇದ್ದರು.
ಇಸ್ರೇಲರನ್ನು ಫಿಲಿಷ್ಟಿಯರು ಸೋಲಿಸುವರು
ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರೇಲರಿಗೆ ವಿರುದ್ಧವಾಗಿ ಯುದ್ಧಮಾಡಲು ಒಟ್ಟುಗೂಡಿದರು. ಇಸ್ರೇಲರು ಫಿಲಿಷ್ಟಿಯರಿಗೆ ವಿರುದ್ಧವಾಗಿ ಹೊರಟು ಎಬೆನೆಜೆರಿನಲ್ಲಿ ಪಾಳೆಯ ಮಾಡಿಕೊಂಡರು; ಫಿಲಿಷ್ಟಿಯರು ಅಫೇಕಿನಲ್ಲಿ ಪಾಳೆಯ ಮಾಡಿಕೊಂಡರು. 2 ಫಿಲಿಷ್ಟಿಯರು ಇಸ್ರೇಲರ ಮೇಲೆ ಆಕ್ರಮಣಮಾಡಲು ಸಿದ್ಧರಾದರು. ಹೋರಾಟ ಆರಂಭವಾಯಿತು.
ಫಿಲಿಷ್ಟಿಯರು ಇಸ್ರೇಲರನ್ನು ಸೋಲಿಸಿ ಇಸ್ರೇಲಿನ ಸೈನ್ಯದಲ್ಲಿ ನಾಲ್ಕು ಸಾವಿರ ಸೈನಿಕರನ್ನು ಸಂಹರಿಸಿದರು. 3 ಇಸ್ರೇಲರ ಸೈನಿಕರು ಪಾಳೆಯಕ್ಕೆ ಹಿಂದಿರುಗಿದರು. ಇಸ್ರೇಲರ ಹಿರಿಯರು, “ಫಿಲಿಷ್ಟಿಯರು ನಮ್ಮನ್ನು ಸೋಲಿಸಲು ಯೆಹೋವನು ಅವಕಾಶ ನೀಡಿದ್ದೇಕೆ? ಶೀಲೋವಿನಿಂದ ಯೆಹೋವನ ಪವಿತ್ರ ಒಡಂಬಡಿಕೆಯ ಪೆಟ್ಟಿಗೆಯನ್ನು ತರಿಸೋಣ. ಈ ರೀತಿ ದೇವರು ನಮ್ಮೊಂದಿಗೆ ಯುದ್ಧರಂಗಕ್ಕೆ ಬರಲಿ. ಆತನು ನಮ್ಮನ್ನು ಶತ್ರುಗಳಿಂದ ರಕ್ಷಿಸುತ್ತಾನೆ” ಎಂದು ಹೇಳಿದರು.
4 ಆ ಕಾರಣಕ್ಕಾಗಿ ಶೀಲೋವಿಗೆ ಜನರನ್ನು ಕಳುಹಿಸಿದರು. ಸರ್ವಶಕ್ತನಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಜನರು ತಂದರು. ಪೆಟ್ಟಿಗೆಯ ಮೇಲ್ಭಾಗದಲ್ಲಿ ಕೆರೂಬಿಗಳಿದ್ದವು. ಅವುಗಳು ಯೆಹೋವನು ಕುಳಿತುಕೊಳ್ಳುವ ಸಿಂಹಾಸನದಂತಿದ್ದವು; ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸರು ಪೆಟ್ಟಿಗೆಯ ಜೊತೆಯಲ್ಲಿ ಬಂದರು.
5 ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಪಾಳೆಯಕ್ಕೆ ಬಂದಾಗ ಇಸ್ರೇಲರೆಲ್ಲರು ಆರ್ಭಟಿಸಿದರು. ಅವರ ಆರ್ಭಟವು ನೆಲವನ್ನು ನಡುಗಿಸಿತು. 6 ಇಸ್ರೇಲರ ಆರ್ಭಟವು ಫಿಲಿಷ್ಟಿಯರಿಗೆ ಕೇಳಿಸಿತು. “ಇಬ್ರಿಯರ ಪಾಳೆಯದಲ್ಲಿ ಆಗುತ್ತಿರುವ ಆರ್ಭಟಕ್ಕೆ ಕಾರಣವೇನು?” ಎಂದು ಅವರು ಕೇಳಿದರು.
ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಇಸ್ರೇಲರ ಪಾಳೆಯಕ್ಕೆ ತಂದಿರುವುದೇ ಅವರ ಆರ್ಭಟಕ್ಕೆ ಕಾರಣವೆಂದು ಫಿಲಿಷ್ಟಿಯರಿಗೆ ತಿಳಿದು ಬಂದಿತು. 7 ಫಿಲಿಷ್ಟಿಯರು ಭಯಗೊಂಡು, “ದೇವರುಗಳೇ ಅವರ ಪಾಳೆಯಕ್ಕೆ ಬಂದಿದ್ದಾರೆ! ನಾವು ತೊಂದರೆಯಲ್ಲಿದ್ದೇವೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ! 8 ಅಯ್ಯೋ, ಮಹಾಶಕ್ತಿಶಾಲಿಗಳಾದ ಈ ದೇವರುಗಳಿಂದ ನಮ್ಮನ್ನು ರಕ್ಷಿಸುವವರು ಯಾರು! ಈಜಿಪ್ಟಿನವರಿಗೆ ಕಾಯಿಲೆಗಳನ್ನು ಬರಮಾಡಿದ ದೇವರುಗಳು ಇವರೇ ಅಲ್ಲವೇ. 9 ಫಿಲಿಷ್ಟಿಯರೇ, ಧೈರ್ಯದಿಂದಿರಿ! ಶೂರರಂತೆ ಹೋರಾಡಿ! ಇಬ್ರಿಯರು ಪುರಾತನ ಕಾಲದಲ್ಲಿ ನಮಗೆ ಗುಲಾಮರಾಗಿದ್ದರು. ಆದಕಾರಣ ಶೂರರಂತೆ ಹೋರಾಡಿರಿ, ಇಲ್ಲವಾದರೆ ನೀವು ಅವರಿಗೆ ಗುಲಾಮರಾಗುವಿರಿ!” ಎಂದು ಹೇಳಿದರು.
10 ಫಿಲಿಷ್ಟಿಯರು ಶೌರ್ಯದಿಂದ ಹೋರಾಡಿ ಇಸ್ರೇಲರನ್ನು ಸೋಲಿಸಿದರು. ಇಸ್ರೇಲರ ಪ್ರತಿಯೊಬ್ಬ ಸೈನಿಕನೂ ತನ್ನ ಪಾಳೆಯಕ್ಕೆ ಓಡಿಹೋದನು. ಇಸ್ರೇಲರಿಗೆ ಭೀಕರ ಸೋಲಾಯಿತು. ಮೂವತ್ತು ಸಾವಿರ ಇಸ್ರೇಲರು ಹತರಾದರು. 11 ದೇವರ ಪವಿತ್ರ ಪೆಟ್ಟಿಗೆಯು ಫಿಲಿಷ್ಟಿಯರ ವಶವಾಯಿತು. ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸರನ್ನು ಅವರು ಕೊಂದರು.
12 ಆ ದಿನದಂದು ಬೆನ್ಯಾಮೀನ್ ಕುಲದ ಒಬ್ಬನು ದುಃಖದಿಂದ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಧೂಳನ್ನು ಹಾಕಿಕೊಂಡು, ರಣರಂಗದಿಂದ ತಪ್ಪಿಸಿಕೊಂಡು ಓಡಿಹೋದನು. 13 ಅವನು ಶೀಲೋವನ್ನು ತಲುಪಿದಾಗ ಏಲಿಯು ಪೀಠದ ಮೇಲೆ ಕುಳಿತಿದ್ದನು. ದೇವರ ಪವಿತ್ರ ಪೆಟ್ಟಿಗೆಗೆ ಏನಾಯಿತೋ ಎಂದು ಚಿಂತಿಸುತ್ತಾ ಏಲಿಯು ನಗರದ್ವಾರದಲ್ಲಿ ಕುರ್ಚಿಯ ಮೇಲೆ ಕಾಯುತ್ತಾ ಕುಳಿತಿದ್ದನು. ಆಗ ಬೆನ್ಯಾಮೀನ್ಯನು ಶೀಲೋವನ್ನು ಪ್ರವೇಶಿಸಿ ಅಲ್ಲಿನ ಕೆಟ್ಟ ಸುದ್ದಿಯನ್ನು ಹೇಳಿದನು. ನಗರದ ಜನರೆಲ್ಲರು ಜೋರಾಗಿ ಗೋಳಾಡಿದರು. 14-15 ಏಲಿಯು ತೊಂಭತ್ತೆಂಟು ವರ್ಷದ ವೃದ್ಧನಾಗಿದ್ದನು; ಅವನಿಗೆ ಕಣ್ಣು ಕಾಣುತ್ತಿರಲಿಲ್ಲ. ಅವನು ಅಳುವಿನ ಧ್ವನಿಯನ್ನು ಕೇಳಿ, “ಏಕಿಷ್ಟು ಗದ್ದಲ?” ಎಂದು ಕೇಳಿದನು.
16 ಆ ಬೆನ್ಯಾಮೀನ್ಯನು ಏಲಿಯ ಬಳಿಗೆ ಹೋಗಿ, “ನಾನು ಈ ದಿನವೇ ರಣರಂಗದಿಂದ ಓಡಿಬಂದೆನು” ಎಂದು ಹೇಳಿದನು.
ಏಲಿಯು, “ನನ್ನ ಮಗನೇ ಏನಾಯಿತು?” ಎಂದು ಕೇಳಿದನು.
17 ಆ ಬೆನ್ಯಾಮೀನ್ಯನು, “ಇಸ್ರೇಲರು ಫಿಲಿಷ್ಟಿಯರಿಂದ ಸೋತು, ಹಿಮ್ಮೆಟ್ಟಿದರು. ಇಸ್ರೇಲರ ಪಡೆಯು ಅನೇಕ ಸೈನಿಕರನ್ನು ಕಳೆದುಕೊಂಡಿತು. ನಿನ್ನ ಮಕ್ಕಳಿಬ್ಬರೂ ಸತ್ತರು. ಫಿಲಿಷ್ಟಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋದರು” ಎಂದು ಹೇಳಿದನು.
18 ಯೆಹೋವನ ಪವಿತ್ರ ಪೆಟ್ಟಿಗೆಯ ವಿಚಾರವನ್ನು ಬೆನ್ಯಾಮೀನ್ಯನು ತಿಳಿಸಿದಾಗ, ಏಲಿಯು ಕುರ್ಚಿಯಿಂದ ಹಿಂದಕ್ಕೆ ಬಾಗಿಲಿನ ಸಮೀಪದಲ್ಲಿ ಬಿದ್ದನು; ಅವನ ಕುತ್ತಿಗೆಯು ಮುರಿದು ಬಿತ್ತು. ಏಲಿಯು ಮುದುಕನೂ ಬೊಜ್ಜುಳ್ಳವನೂ ಆಗಿದ್ದುದರಿಂದ ಸತ್ತನು. ಅವನು ಇಸ್ರೇಲರನ್ನು ನಲವತ್ತು ವರ್ಷ ನಡೆಸಿದನು.
ವೈಭವವು ಇಲ್ಲವಾಯಿತು
19 ಏಲಿಯ ಸೊಸೆ ಅಂದರೆ ಫೀನೆಹಾಸನ ಹೆಂಡತಿಯು ಗರ್ಭಿಣಿಯಾಗಿದ್ದಳು. ಹೆರಿಗೆಯ ಸಮಯ ಸಮೀಪಿಸಿತ್ತು. ಯೆಹೋವನ ಪವಿತ್ರ ಪೆಟ್ಟಿಗೆಯು ಶತ್ರುಗಳ ವಶವಾದದ್ದನ್ನೂ ತನ್ನ ಮಾವನಾದ ಏಲಿಯು ಸತ್ತದ್ದನ್ನೂ ಗಂಡನಾದ ಫೀನೆಹಾಸನು ಸತ್ತ ಸುದ್ದಿಯನ್ನೂ ಅವಳು ಕೇಳಿದಳು. ಈ ಸುದ್ದಿಯನ್ನು ಕೇಳಿದ ತಕ್ಷಣ ಪ್ರಸವವೇದನೆಯಾಗಿ ಮಗುವನ್ನು ಹೆತ್ತಳು. 20 ಅವಳಿಗೆ ಸಹಾಯ ಮಾಡುತ್ತಿದ್ದ ಸ್ತ್ರೀಯರು, “ಚಿಂತಿಸಬೇಡ. ನೀನು ಗಂಡುಮಗುವಿಗೆ ಜನ್ಮ ನೀಡಿರುವೆ” ಎಂದು ಹೇಳಿದರು.
ಆದರೆ ಏಲಿಯ ಸೊಸೆಯು ಅವರ ಮಾತಿಗೆ ಉತ್ತರಿಸಲೂ ಇಲ್ಲ, ಲಕ್ಷ್ಯ ಕೊಡಲೂ ಇಲ್ಲ. 21 ಏಲಿಯ ಸೊಸೆಯು, “ಇಸ್ರೇಲರ ವೈಭವವು ಇಲ್ಲವಾಯಿತು” ಎಂದು ಹೇಳಿದಳು. ಅವಳು ತನ್ನ ಮಗುವಿಗೆ ಈಕಾಬೋದ್ ಎಂಬ ಹೆಸರಿಟ್ಟು ಮೃತಳಾದಳು. ಯೆಹೋವನ ಪವಿತ್ರ ಪೆಟ್ಟಿಗೆಯು ಶತ್ರುವಶವಾದದ್ದರಿಂದ ಮಾವನು ಮತ್ತು ಗಂಡನು ಸತ್ತದ್ದರಿಂದ, ಆಕೆ ತನ್ನ ಮಗನಿಗೆ ಈಕಾಬೋದ್ ಎಂದು ಹೆಸರಿಟ್ಟಳು. 22 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಫಿಲಿಷ್ಟಿಯರು ತೆಗೆದುಕೊಂಡು ಹೋದದ್ದರಿಂದ ಆಕೆಯು, “ಇಸ್ರೇಲರ ವೈಭವ ಇಲ್ಲವಾಯಿತು” ಎಂದು ಹೇಳಿದಳು.
ದೇವರ ಪವಿತ್ರ ಪೆಟ್ಟಿಗೆಯಿಂದ ಫಿಲಿಷ್ಟಿಯರಿಗೆ ತೊಂದರೆ
5 ಫಿಲಿಷ್ಟಿಯರು ದೇವರ ಪವಿತ್ರ ಪೆಟ್ಟಿಗೆಯನ್ನು ಎಬೆನೆಜೆರಿನಿಂದ ಅಷ್ಡೋದಿಗೆ ತೆಗೆದುಕೊಂಡು ಹೋದರು. 2 ಅವರು ದೇವರ ಪವಿತ್ರ ಪೆಟ್ಟಿಗೆಯನ್ನು ದಾಗೋನನ ಗುಡಿಗೆ ತೆಗೆದುಕೊಂಡು ಹೋಗಿ ದಾಗೋನಿನ ಪಕ್ಕದಲ್ಲಿಟ್ಟರು. 3 ಅಷ್ಡೋದಿನ ಜನರು ಮಾರನೆಯ ದಿನ ಬೆಳಿಗ್ಗೆ ಎದ್ದಾಗ, ದಾಗೋನನ ವಿಗ್ರಹವು ಯೆಹೋವನ ಪೆಟ್ಟಿಗೆಯ ಮುಂದೆ ಬೋರಲಾಗಿ ಬಿದ್ದಿತ್ತು.
ಅಷ್ಡೋದಿನ ಜನರು ದಾಗೋನ್ ವಿಗ್ರಹವನ್ನು ಅದರ ಸ್ಥಳದಲ್ಲಿ ಮತ್ತೆ ನಿಲ್ಲಿಸಿದರು. 4 ಆದರೆ ಮರುದಿನ ಬೆಳಿಗ್ಗೆ ಅಷ್ಡೋದಿನ ಜನರು ಎದ್ದಾಗ ದಾಗೋನ್ ವಿಗ್ರಹವು ನೆಲದ ಮೇಲೆ ಯೆಹೋವನ ಪವಿತ್ರ ಪೆಟ್ಟಿಗೆಯ ಮುಂದೆ ಬೋರಲಬಿದ್ದಿತ್ತು. ದಾಗೋನಿನ ತಲೆಯು ಮತ್ತು ಕೈಗಳು ಮುರಿದು ಹೊಸ್ತಿಲಿನ ಮೇಲೆ ಬಿದ್ದಿದ್ದವು; ದೇಹವು ಏಕಶಿಲೆಯಾಗಿ ಬಿದ್ದಿತ್ತು. 5 ಆದಕಾರಣವೇ ಇಂದಿಗೂ ಸಹ ಅಷ್ಡೋದಿನಲ್ಲಿ ದಾಗೋನನ ಗುಡಿಯನ್ನು ಪ್ರವೇಶಿಸುವ ಯಾಜಕರಾಗಲಿ ಇಲ್ಲವೆ ಇತರೆ ಜನರಾಗಲಿ ಹೊಸ್ತಿಲನ್ನು ತುಳಿಯುವುದಿಲ್ಲ.
6 ಅಷ್ಡೋದಿನ ಮತ್ತು ಅವರ ನೆರೆಹೊರೆಯ ಜನರ ಜೀವನವನ್ನು ಯೆಹೋವನು ಕಠಿಣಗೊಳಿಸಿದನು. ಯೆಹೋವನು ಅವರಿಗೆ ಹೆಚ್ಚು ತೊಂದರೆ ಕೊಟ್ಟನು. ಆತನು ಅವರಿಗೆ ಗಡ್ಡೆರೋಗವನ್ನು ಬರಮಾಡಿದನು. ಅಲ್ಲದೆ ಯೆಹೋವನು ಅವರ ಬಳಿಗೆ ಇಲಿಗಳನ್ನು ಕಳುಹಿಸಿದನು. ಆ ಇಲಿಗಳು ಅವರ ಹಡಗುಗಳಲ್ಲೆಲ್ಲಾ ಮತ್ತು ಭೂಮಿಯಲ್ಲೆಲ್ಲಾ ಹರಡಿಕೊಂಡವು. ನಗರದ ಜನರು ಬಹು ಭಯಗೊಂಡರು. 7 ಇದನ್ನೆಲ್ಲಾ ಕಂಡ ಅಷ್ಡೋದಿನ ಜನರು, “ಇಸ್ರೇಲರ ದೇವರ ಈ ಪವಿತ್ರ ಪೆಟ್ಟಿಗೆಯು ಇಲ್ಲಿರಬಾರದು. ಇಸ್ರೇಲರ ದೇವರು ನಮ್ಮನ್ನೂ ನಮ್ಮ ದೇವರಾದ ದಾಗೋನನನ್ನೂ ಬಾಧಿಸುತ್ತಿದ್ದಾನೆ” ಎಂದು ಹೇಳಿದರು.
8 ಅಷ್ಡೋದಿನ ಜನರು ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳನ್ನು ಒಟ್ಟಿಗೆ ಸೇರಿಸಿ “ಇಸ್ರೇಲರ ಯೆಹೋವನ ಪವಿತ್ರ ಪೆಟ್ಟಿಗೆಯನ್ನು ನಾವು ಏನು ಮಾಡೋಣ?” ಎಂದು ಕೇಳಿದರು.
ಅಧಿಪತಿಗಳು, “ಇಸ್ರೇಲರ ಪವಿತ್ರ ಪೆಟ್ಟಿಗೆಯನ್ನು ‘ಗತ್’ ನಗರಕ್ಕೆ ಕಳುಹಿಸಿ” ಎಂದು ಹೇಳಿದರು. ಅಂತೆಯೇ, ಅವರು ಅದನ್ನು ಗತ್ ನಗರಕ್ಕೆ ಕಳುಹಿಸಿದರು.
9 ಆದರೆ ಫಿಲಿಷ್ಟಿಯರು ದೇವರ ಪವಿತ್ರ ಪೆಟ್ಟಿಗೆಯನ್ನು “ಗತ್”ಗೆ ಕಳುಹಿಸಿದ ನಂತರ ಯೆಹೋವನು “ಗತ್” ನಗರವನ್ನು ದಂಡಿಸಿದನು. ಅಲ್ಲಿಯ ಜನರು ಬಹಳ ಭಯಗೊಂಡರು. ಚಿಕ್ಕವರು, ದೊಡ್ಡವರು ಎನ್ನದೆ ಎಲ್ಲರಿಗೂ ದೇವರು ತೊಂದರೆ ಮಾಡಿದನು. ಗತ್ ಜನರಿಗೂ ದೇವರು ಗಡ್ಡೆರೋಗವನ್ನು ಬರಮಾಡಿದನು. 10 ಆದ್ದರಿಂದ ಫಿಲಿಷ್ಟಿಯರು ದೇವರ ಪವಿತ್ರ ಪೆಟ್ಟಿಗೆಯನ್ನು ಎಕ್ರೋನಿಗೆ ಕಳುಹಿಸಿದರು.
ದೇವರ ಪವಿತ್ರ ಪೆಟ್ಟಿಗೆಯು ಎಕ್ರೋನಿಗೆ ಬಂದಾಗ, ಅಲ್ಲಿನ ಜನರು, “ಇಸ್ರೇಲರ ದೇವರನ್ನು ನಮ್ಮ ನಗರವಾದ ಎಕ್ರೋನಿಗೆ ನೀವೇಕೆ ತರುತ್ತಿರುವಿರಿ? ನಮ್ಮನ್ನೂ ನಮ್ಮ ಜನರನ್ನೂ ನೀವು ಕೊಲ್ಲಬೇಕೆಂದಿರುವಿರಾ?” ಎಂದು ಆಕ್ಷೇಪಿಸಿದರು. 11 ಎಕ್ರೋನಿನ ಜನರು ಫಿಲಿಷ್ಟಿಯರ ಅಧಿಪತಿಗಳನ್ನೆಲ್ಲಾ ಒಟ್ಟಿಗೆ ಸೇರಿಸಿ, “ಇಸ್ರೇಲರ ದೇವರ ಪವಿತ್ರಪೆಟ್ಟಿಗೆಯು ನಮ್ಮನ್ನೂ ನಮ್ಮ ಜನರನ್ನೂ ಕೊಲ್ಲುವುದಕ್ಕೆ ಮೊದಲೇ ಅದನ್ನು ಅದರ ಸ್ವಸ್ಥಳಕ್ಕೆ ಕಳುಹಿಸಿ” ಎಂದು ಹೇಳಿದರು.
ಎಕ್ರೋನಿನ ಜನರು ಬಹಳ ಹೆದರಿಕೊಂಡಿದ್ದರು. ದೇವರು ಅಲ್ಲಿಯ ಜನರ ಜೀವನವನ್ನು ಬಹು ಕಠಿಣಗೊಳಿಸಿದ್ದನು. 12 ಬಹಳ ಜನರು ಸತ್ತರು; ಸಾಯದೆ ಉಳಿದ ಜನರಿಗೆ ಗಡ್ಡೆರೋಗವು ಬಂದಿತು. ಅವರ ಗೋಳಾಟವು ಆಕಾಶಮಂಡಲವನ್ನು ಮುಟ್ಟಿತ್ತು.
ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಅದರ ಸ್ವಂತ ಸ್ಥಳಕ್ಕೆ ಹಿಂತಿರುಗಿಸಿದ್ದು
6 ಫಿಲಿಷ್ಟಿಯರು ಪವಿತ್ರ ಪೆಟ್ಟಿಗೆಯನ್ನು ಏಳು ತಿಂಗಳ ಕಾಲ ತಮ್ಮ ಪ್ರದೇಶದಲ್ಲಿ ಇರಿಸಿಕೊಂಡಿದ್ದರು. 2 ಫಿಲಿಷ್ಟಿಯರು ತಮ್ಮ ಅರ್ಚಕರನ್ನು ಮತ್ತು ಮಾಂತ್ರಿಕರನ್ನು ಕರೆದು, “ಯೆಹೋವನ ಪೆಟ್ಟಿಗೆಯನ್ನು ಏನು ಮಾಡೋಣ? ಇದನ್ನು ಮರಳಿ ಹಿಂದಕ್ಕೆ ಕಳುಹಿಸುವುದು ಹೇಗೆ?” ಎಂದು ಕೇಳಿದರು.
3 ಅರ್ಚಕರು ಮತ್ತು ಮಾಂತ್ರಿಕರು, “ಇಸ್ರೇಲರ ಪವಿತ್ರ ಪೆಟ್ಟಿಗೆಯನ್ನು ಹಿಂದಕ್ಕೆ ಕಳುಹಿಸುವುದಾದರೆ, ಬರಿದಾಗಿ ಕಳುಹಿಸಬೇಡಿ. ನೀವು ಕಾಣಿಕೆಗಳನ್ನು ಕಳುಹಿಸಲೇಬೇಕು. ಆಗ ಇಸ್ರೇಲರ ದೇವರು ನಿಮ್ಮ ಪಾಪಗಳನ್ನು ಪರಿಹರಿಸುತ್ತಾನೆ. ಆಗ ನೀವೆಲ್ಲಾ ಗುಣಹೊಂದುವಿರಿ; ಶುದ್ಧರಾಗುವಿರಿ. ದೇವರು ನಿಮ್ಮನ್ನು ದಂಡಿಸುವುದನ್ನು ನಿಲ್ಲಿಸಬೇಕಾದರೆ ನೀವು ಈ ಕಾರ್ಯಗಳನ್ನು ಮಾಡಬೇಕು. ಆಗ ದೇವರು ನಿಮ್ಮನ್ನು ಬಾಧಿಸುವುದಿಲ್ಲ” ಎಂದು ಉತ್ತರಿಸಿದರು.
4 ಫಿಲಿಷ್ಟಿಯರು, “ಇಸ್ರೇಲರ ದೇವರು ನಮ್ಮನ್ನು ಕ್ಷಮಿಸಬೇಕಾದರೆ ನಾವು ಯಾವ ಕಾಣಿಕೆಗಳನ್ನು ಕಳುಹಿಸಬೇಕು?” ಎಂದು ಕೇಳಿದರು.
ಅರ್ಚಕರು ಮತ್ತು ಮಾಂತ್ರಿಕರು, “ನಿಮ್ಮಲ್ಲಿ ಐದು ಮಂದಿ ಅಧಿಪತಿಗಳಿದ್ದೀರಿ. ಪ್ರತಿಯೊಂದು ನಗರಕ್ಕೆ ಒಬ್ಬ ಅಧಿಪತಿಯಿದ್ದಾನೆ. ನೀವು ಮತ್ತು ನಿಮ್ಮ ಅಧಿಪತಿಗಳೆಲ್ಲರೂ ಒಂದೇ ರೀತಿಯಲ್ಲಿ ತೊಂದರೆಗೊಳಗಾಗಿದ್ದೀರಿ. ಆದ್ದರಿಂದ ಚಿನ್ನದಲ್ಲಿ ಐದು ಗಡ್ಡೆಗಳನ್ನು ಹಾಗೂ ಐದು ಇಲಿಗಳನ್ನು ಮಾಡಿಸಬೇಕು. 5 ಹೀಗೆ ನಿಮ್ಮ ದೇಶವನ್ನು ನಾಶಗೊಳಿಸುತ್ತಿರುವ ಗಡ್ಡೆಗಳ, ಇಲಿಗಳ ಮಾದರಿಗಳನ್ನು ಮಾಡಿಸಿರಿ. ಇಸ್ರೇಲರ ದೇವರಿಗೆ ಚಿನ್ನದ ಆ ಮಾದರಿಗಳನ್ನು ಕಾಣಿಕೆಯಾಗಿ ಸಲ್ಲಿಸಿರಿ. ಆಗ ಇಸ್ರೇಲರ ದೇವರು ನಿಮ್ಮನ್ನೂ ನಿಮ್ಮ ದೇವರುಗಳನ್ನೂ ನಿಮ್ಮ ದೇಶವನ್ನೂ ಶಿಕ್ಷಿಸುವುದನ್ನು ನಿಲ್ಲಿಸಬಹುದು. 6 ಫರೋಹನಂತೆ ಮತ್ತು ಈಜಿಪ್ಟಿನವರಂತೆ ಮೊಂಡರಾಗಬೇಡಿ. ದೇವರು ಈಜಿಪ್ಟಿನವರನ್ನು ದಂಡಿಸಿದನು. ಆದ್ದರಿಂದ ಇಸ್ರೇಲರನ್ನು ಕಳುಹಿಸಿಕೊಡುವಂತೆ ಈಜಿಪ್ಟಿನವರನ್ನು ಬಲವಂತ ಮಾಡಲಾಯಿತು.
7 “ಈಗ ಒಂದು ಹೊಸ ಬಂಡಿಯನ್ನು ಮಾಡಿಸಿ ಮತ್ತು ಈಗ ತಾನೆ ಕರು ಹಾಕಿರುವ ಎರಡು ಹಸುಗಳನ್ನು ತೆಗೆದುಕೊಳ್ಳಿರಿ. ಈ ಹಸುಗಳು ಹೊಲಗಳಲ್ಲಿ ಹಿಂದೆಂದೂ ನೊಗ ಹೊತ್ತಿಲ್ಲದಂಥವುಗಳಾಗಿರಬೇಕು. ಈ ಹಸುಗಳನ್ನು ಬಂಡಿಗೆ ಹೂಡಿರಿ ಮತ್ತು ಕರುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅವುಗಳನ್ನು ದೊಡ್ಡಿಯಲ್ಲಿ ಬಿಡಿರಿ. ಅವುಗಳು ತಮ್ಮ ತಾಯಂದಿರನ್ನು ಹಿಂಬಾಲಿಸಲು ಅವಕಾಶಕೊಡಕೂಡದು.[a] 8 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಬಂಡಿಯ ಮೇಲಿಡಿರಿ. ಚಿನ್ನದ ಮಾದರಿಗಳನ್ನು ಚೀಲದಲ್ಲಿಟ್ಟು ಪೆಟ್ಟಿಗೆಯ ಪಕ್ಕದಲ್ಲಿಡಿರಿ. ಈ ಚಿನ್ನದ ಮಾದರಿಗಳು ನೀವು ನಿಮ್ಮ ಪಾಪಕ್ಷಮೆಗಾಗಿ ದೇವರಿಗೆ ಕಳುಹಿಸುತ್ತಿರುವ ಕಾಣಿಕೆಗಳಾಗಿವೆ; ಬಂಡಿಯನ್ನು ಅದರ ದಾರಿಯಲ್ಲಿ ಕಳುಹಿಸಿರಿ. 9 ಆದರೆ ಅದರ ಕಡೆ ಗಮನವಿರಲಿ. ಅದು ತಾನಾಗಿ ಇಸ್ರೇಲಿಗೆ ಸೇರಿದ ಬೇತ್‌ಷೆಮೆಷಿನ ಕಡೆಗೆ ಹೋದರೆ, ಆಗ ಆ ದೊಡ್ಡ ಕೇಡನ್ನು ನಮಗುಂಟು ಮಾಡಿದವನು ಯೆಹೋವನೇ ಸರಿ. ಆದರೆ ಹಸುಗಳು ಬೇತ್‌ಷೆಮೆಷಿಗೆ ಹೋಗದಿದ್ದರೆ, ನಮ್ಮನ್ನು ಶಿಕ್ಷಿಸಿದವನು ಯೆಹೋವನಲ್ಲವೆಂದು ನಮಗೆ ಗೊತ್ತಾಗುವುದು. ನಮಗುಂಟಾದ ಕಾಯಿಲೆಯು ತಾನಾಗಿಯೇ ಬಂದದ್ದೆಂದು ತಿಳಿಯುವುದು” ಎಂದು ಹೇಳಿದರು.
10 ಅರ್ಚಕರು ಮತ್ತು ಮಾಂತ್ರಿಕರು ಹೇಳಿದಂತೆಯೇ ಫಿಲಿಷ್ಟಿಯರು ಮಾಡಿದರು. ಫಿಲಿಷ್ಟಿಯರು ಆಗ ತಾನೇ ಕರುಹಾಕಿದ ಎರಡು ಹಸುಗಳನ್ನು ತಂದು, ಅವುಗಳನ್ನು ಬಂಡಿಗೆ ಹೂಡಿದರು. ಅವುಗಳ ಕರುಗಳನ್ನು ಮನೆಯ ದೊಡ್ಡಿಯಲ್ಲಿ ಬಿಟ್ಟರು. 11 ಆಮೇಲೆ ಫಿಲಿಷ್ಟಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಬಂಡಿಯ ಮೇಲಿಟ್ಟರು. ಅಲ್ಲದೆ ಚಿನ್ನದ ಗಡ್ಡೆಗಳನ್ನೂ ಇಲಿಗಳನ್ನೂ ಚೀಲದೊಳಗೆ ಹಾಕಿ ಬಂಡಿಯ ಮೇಲಿಟ್ಟರು. 12 ಹಸುಗಳು ಬೇತ್‌ಷೆಮೆಷಿಗೆ ನೇರವಾಗಿ ಹೋದವು. ಅವು ದಾರಿಯಲ್ಲಿಯೇ ಹೋದವು. ಅವು ದಾರಿಯುದ್ದಕ್ಕೂ ಕೂಗುತ್ತಾ ನಡೆದವು. ಅವು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಲಿಲ್ಲ. ಫಿಲಿಷ್ಟಿಯರ ಅಧಿಪತಿಗಳು ಬೇತ್‌ಷೆಮೆಷಿನ ಗಡಿಯವರೆಗೂ ಹಸುಗಳನ್ನು ಹಿಂಬಾಲಿಸಿಕೊಂಡು ಹೋದರು.
13 ಬೇತ್‌ಷೆಮೆಷಿನ ಕಣಿವೆಯಲ್ಲಿ ಅಲ್ಲಿನ ಜನರು ಗೋಧಿಯ ಬೆಳೆಯನ್ನು ಕೊಯ್ಯುತ್ತಿದ್ದರು. ಅವರು ಕಣ್ಣೆತ್ತಿ ನೋಡಿದಾಗ, ಪವಿತ್ರ ಪೆಟ್ಟಿಗೆಯು ಅವರಿಗೆ ಕಾಣಿಸಿತು. ಅವರಿಗೆ ಬಹಳ ಸಂತೋಷವಾಯಿತು. ಅವರು ಅದನ್ನು ಸ್ವೀಕರಿಸಲು ಓಡಿಹೋದರು. 14-15 ಬೇತ್‌ಷೆಮೆಷಿನ ಯೆಹೋಶುವನಿಗೆ ಸೇರಿದ ಹೊಲಕ್ಕೆ ಆ ಬಂಡಿಯು ಬಂದಿತು. ಆ ಹೊಲದ ಒಂದು ದೊಡ್ಡ ಕಲ್ಲಿನ ಬಳಿ ಆ ಬಂಡಿಯು ನಿಂತಿತು. ಬೇತ್‌ಷೆಮೆಷಿನ ಜನರು ಬಂಡಿಯ ಕಟ್ಟಿಗೆಗಳನ್ನು ಒಡೆದು ಆ ಹಸುಗಳನ್ನು ಯೆಹೋವನಿಗೆ ಆಹುತಿಯಾಗಿ ಅರ್ಪಿಸಿದರು.
ಕೆಲವು ಲೇವಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಇಳಿಸಿದರು. ಅಲ್ಲದೆ ಅವರು ಚಿನ್ನದ ಮಾದರಿಗಳಿದ್ದ ಚೀಲವನ್ನು ಇಳಿಸಿದರು. ಲೇವಿಯರು ಯೆಹೋವನ ಪೆಟ್ಟಿಗೆಯನ್ನು ಮತ್ತು ಆ ಚೀಲವನ್ನು ದೊಡ್ಡಕಲ್ಲಿನ ಮೇಲಿಟ್ಟರು. ಅದೇ ದಿನ ಬೇತ್‌ಷೆಮೆಷಿನ ಜನರು ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಿದರು.
16 ಬೇತ್‌ಷೆಮೆಷಿನ ಜನರು ಮಾಡಿದ್ದನ್ನೆಲ್ಲ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳು ನೋಡಿ ಅದೇ ದಿನ ಎಕ್ರೋನಿಗೆ ಹಿಂದಿರುಗಿದರು.
17 ಈ ರೀತಿ ಫಿಲಿಷ್ಟಿಯರು ತಾವು ಯೆಹೋವನಿಗೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಚಿನ್ನದ ಗಡ್ಡೆಗಳನ್ನು ಕಾಣಿಕೆಗಳನ್ನಾಗಿ ಕಳುಹಿಸಿದರು. ಅವರು ಪ್ರತಿಯೊಂದು ಫಿಲಿಷ್ಟಿಯ ನಗರಕ್ಕೆ ಒಂದರಂತೆ ಚಿನ್ನದ ಗಡ್ಡೆಗಳನ್ನು ಕಳುಹಿಸಿದ್ದರು. ಅಷ್ಡೋದ್, ಗಾಜಾ, ಅಷ್ಕೆಲೋನ್, ಗತ್ ಮತ್ತು ಎಕ್ರೋನ್‌ಗಳೇ ಆ ನಗರಗಳು. 18 ಫಿಲಿಷ್ಟಿಯರು ಚಿನ್ನದ ಇಲಿಗಳನ್ನೂ ಕಳುಹಿಸಿದ್ದರು. ಫಿಲಿಷ್ಟಿಯರ ಐದು ಅಧಿಪತಿಗಳಿಗೆ ಸೇರಿದ್ದ ಐದು ಪಟ್ಟಣಗಳ ಸಂಖ್ಯೆಗನುಸಾರವಾಗಿ ಈ ಇಲಿಗಳಿದ್ದವು. ಈ ಪಟ್ಟಣಗಳ ಸುತ್ತ ಗೋಡೆಗಳಿದ್ದು ಹಳ್ಳಿಗಳು ಈ ಪಟ್ಟಣಗಳನ್ನು ಸುತ್ತುವರಿದಿದ್ದವು. ಬೇತ್‌ಷೆಮೆಷಿನ ಜನರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಒಂದು ಕಲ್ಲಿನ ಮೇಲಿಟ್ಟರು. ಬೇತ್‌ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿ ಆ ಕಲ್ಲು ಈಗಲೂ ಇದೆ.
19 ಆದರೆ ಯಾಜಕರಿಲ್ಲದ ಕಾರಣ ಬೇತ್‌ಷೆಮೆಷಿನ ಜನರು ಪವಿತ್ರ ಪೆಟ್ಟಿಗೆಯನ್ನು ಹಣಿಕಿ ನೋಡಿದ್ದರಿಂದ ಬೇತ್‌ಷೆಮೆಷಿನ ಎಪ್ಪತ್ತು ಜನರನ್ನು ಯೆಹೋವನು ಕೊಂದನು. ಯೆಹೋವನು ಕ್ರೂರವಾಗಿ ಶಿಕ್ಷಿಸಿದ್ದರಿಂದ ಬೇತ್‌ಷೆಮೆಷಿನ ಜನರು ಗೋಳಾಡಿ, 20 “ಈ ಪವಿತ್ರ ಪೆಟ್ಟಿಗೆಯನ್ನು ನೋಡಿಕೊಳ್ಳಬಲ್ಲ ಯಾಜಕನೆಲ್ಲಿದ್ದಾನೆ?[b] ಈ ಪೆಟ್ಟಿಗೆಯು ಇಲ್ಲಿಂದ ಎಲ್ಲಿಗೆ ಹೋಗಬೇಕಾಗಿದೆ?” ಎಂದು ಬೇತ್‌ಷೆಮೆಷಿನ ಜನರು ಪ್ರಶ್ನಿಸಿದರು.
21 ಕಿರ್ಯತ್ಯಾರೀಮಿನಲ್ಲಿ ಒಬ್ಬ ಯಾಜಕನಿದ್ದನು. ಬೇತ್‌ಷೆಮೆಷಿನ ಜನರು ಕಿರ್ಯತ್ಯಾರೀಮಿನವರ ಬಳಿಗೆ ಸಂದೇಶಕರನ್ನು ಕಳುಹಿಸಿ, “ಫಿಲಿಷ್ಟಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹಿಂದಕ್ಕೆ ತಂದಿರುವರು. ನೀವು ಬಂದು ಅದನ್ನು ನಿಮ್ಮ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ” ಎಂದು ತಿಳಿಸಿದರು.
7 ಕಿರ್ಯತ್ಯಾರೀಮಿನ ಜನರು ಬಂದು, ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋದರು. ಯೆಹೋವನ ಪೆಟ್ಟಿಗೆಯನ್ನು ಬೆಟ್ಟದ ಮೇಲಿದ್ದ ಅಬೀನಾದಾಬನ ಮನೆಯಲ್ಲಿಟ್ಟರು. ಯೆಹೋವನ ಪೆಟ್ಟಿಗೆಯನ್ನು ಕಾಯುವುದಕ್ಕಾಗಿ ಅಬೀನಾದಾಬನ ಮಗನಾದ ಎಲ್ಲಾಜಾರನನ್ನು ಪ್ರತಿಷ್ಠಿಸಿದರು. 2 ಈ ಪೆಟ್ಟಿಗೆಯು ಕಿರ್ಯತ್ಯಾರೀಮಿನವರಲ್ಲಿ ಬಹುಕಾಲದವರೆಗೆ ಅಂದರೆ ಇಪ್ಪತ್ತು ವರ್ಷಗಳವರೆಗೆ ಇತ್ತು.
ಯೆಹೋವನು ಇಸ್ರೇಲರನ್ನು ರಕ್ಷಿಸುವನು
ಇಸ್ರೇಲರು ಯೆಹೋವನ ಮಾರ್ಗವನ್ನು ಮತ್ತೆ ಅನುಸರಿಸಲು ಆರಂಭಿಸಿದರು. 3 ಸಮುವೇಲನು ಇಸ್ರೇಲರಿಗೆ, “ನೀವು ಯೆಹೋವನ ಬಳಿಗೆ ಪೂರ್ಣಮನಸ್ಸಿನಿಂದ ಮತ್ತೆ ಬರುವುದಾದರೆ ನಿಮ್ಮ ಬಳಿಯಿರುವ ಅನ್ಯದೇವರುಗಳನ್ನು ಎಸೆಯಬೇಕು. ನೀವು ಅಷ್ಟೋರೆತ್ ದೇವತೆಯ ವಿಗ್ರಹಗಳನ್ನು ತ್ಯಜಿಸಬೇಕು. ನೀವು ನಿಮ್ಮನ್ನು ಯೆಹೋವನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಟ್ಟು ಆತನ ಸೇವೆಯನ್ನು ಮಾತ್ರ ಮಾಡಬೇಕು. ಆಗ ಆತನು ನಿಮ್ಮನ್ನು ಫಿಲಿಷ್ಟಿಯರಿಂದ ರಕ್ಷಿಸುತ್ತಾನೆ” ಎಂದು ಹೇಳಿದನು.
4 ಆದ್ದರಿಂದ ಇಸ್ರೇಲರು ಬಾಳ್‌ದೇವರನ್ನೂ ಅಷ್ಟೋರೆತ್ ದೇವತೆಯನ್ನೂ ತ್ಯಜಿಸಿ ಯೆಹೋವನ ಸೇವೆಯನ್ನು ಮಾತ್ರ ಮಾಡಿದರು.
5 ಸಮುವೇಲನು ಅವರಿಗೆ, “ಇಸ್ರೇಲರೆಲ್ಲರೂ ಮಿಚ್ಪೆಯಲ್ಲಿ ಒಟ್ಟುಗೂಡಬೇಕು. ನಾನು ನಿಮಗಾಗಿ ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದನು.
6 ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿದರು. ಅವರು ನೀರನ್ನು ತೆಗೆದುಕೊಂಡು ಬಂದು ಯೆಹೋವನ ಮುಂದೆ ಅದನ್ನು ಸುರಿದರು. ಈ ರೀತಿ ಅಂದು ಅವರು ಉಪವಾಸವನ್ನು ಆರಂಭಿಸಿದರು. ಅಂದು ಅವರು ಯಾವ ಆಹಾರವನ್ನೂ ತೆಗೆದುಕೊಳ್ಳಲಿಲ್ಲ. ಅಲ್ಲದೆ ಅವರು ತಮ್ಮ ಪಾಪಗಳನ್ನು ಅರಿಕೆ ಮಾಡಿದರು. “ನಾವು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆ” ಎಂದು ಅವರು ಹೇಳಿದರು. ಹೀಗಿರಲು, ಸಮುವೇಲನು ಇಸ್ರೇಲರ ನ್ಯಾಯಾಧೀಶನಾಗಿ ಮಿಚ್ಪೆಯಲ್ಲಿ ಸೇವೆ ಸಲ್ಲಿಸಿದನು.
7 ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿರುವುದು ಫಿಲಿಷ್ಟಿಯರಿಗೆ ಗೊತ್ತಾಯಿತು. ಫಿಲಿಷ್ಟಿಯ ಅಧಿಪತಿಗಳು ಇಸ್ರೇಲರ ವಿರುದ್ಧ ಹೋರಾಡಲು ಹೊರಟರು. ಫಿಲಿಷ್ಟಿಯರು ಬರುತ್ತಿರುವುದನ್ನು ಕೇಳಿ ಇಸ್ರೇಲರು ಭಯಗೊಂಡರು. 8 ಇಸ್ರೇಲರು ಸಮುವೇಲನಿಗೆ, “ನಮ್ಮ ದೇವರಾದ ಯೆಹೋವನಲ್ಲಿ ನಮಗಾಗಿ ಪ್ರಾರ್ಥಿಸು! ನಿಲ್ಲಿಸಬೇಡ! ಫಿಲಿಷ್ಟಿಯರಿಂದ ನಮ್ಮನ್ನು ರಕ್ಷಿಸಲು ಯೆಹೋವನಲ್ಲಿ ಬೇಡಿಕೊ!” ಎಂದು ಹೇಳಿದರು.
9 ಸಮುವೇಲನು ಕುರಿಮರಿಯೊಂದನ್ನು ತಂದು ಯೆಹೋವನಿಗೆ ಸರ್ವಾಂಗಹೋಮವನ್ನಾಗಿ ಅರ್ಪಿಸಿದನು. ಸಮುವೇಲನು ಇಸ್ರೇಲರಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಸಮುವೇಲನ ಪ್ರಾರ್ಥನೆಗೆ ಉತ್ತರಿಸಿದನು. 10 ಸಮುವೇಲನು ಕುರಿಮರಿಯನ್ನು ಸಮರ್ಪಿಸುವಾಗ, ಫಿಲಿಷ್ಟಿಯರು ಇಸ್ರೇಲರೊಡನೆ ಹೋರಾಡಲು ಬಂದರು. ಆದರೆ ಯೆಹೋವನು ಫಿಲಿಷ್ಟಿಯರ ಹತ್ತಿರ ದೊಡ್ಡ ಗುಡುಗನ್ನು ಉಂಟುಮಾಡಿದನು. ಗುಡುಗಿನ ಶಬ್ದವು ಫಿಲಿಷ್ಟಿಯರಲ್ಲಿ ಕಳವಳವನ್ನೂ ಭಯವನ್ನೂ ಉಂಟುಮಾಡಿತು. ಅವರ ಸೇನಾಧಿಪತಿಗಳಿಗೆ ಅವರನ್ನು ಹತೋಟಿಯಲ್ಲಿಡಲಾಗಲಿಲ್ಲ. ಆದಕಾರಣ ಇಸ್ರೇಲರು ಫಿಲಿಷ್ಟಿಯರನ್ನು ಯುದ್ಧದಲ್ಲಿ ಸೋಲಿಸಿದರು. 11 ಇಸ್ರೇಲರು ಮಿಚ್ಪೆಯಿಂದ ಬಂದು ಫಿಲಿಷ್ಟಿಯರನ್ನು ದಾರಿಯುದ್ದಕ್ಕೂ ಸಂಹರಿಸುತ್ತಾ ಬೇತ್ಕರಿನವರೆಗೆ ಅಟ್ಟಿಸಿಕೊಂಡು ಹೋದರು.
ಇಸ್ರೇಲಿನಲ್ಲಿ ಶಾಂತಿ ಸ್ಥಾಪನೆ
12 ಅನಂತರ ಸಮುವೇಲನು ವಿಶೇಷವಾದ ಕಲ್ಲನ್ನು ನೆಡಿಸಿದನು. ಯೆಹೋವನು ಮಾಡಿದ ಕಾರ್ಯಗಳನ್ನು ಜನರು ಜ್ಞಾಪಿಸಿಕೊಳ್ಳುತ್ತಿರಲಿ ಎಂಬುದಕ್ಕಾಗಿ ಅವನು ಈ ರೀತಿ ಮಾಡಿದನು. ಸಮುವೇಲನು ಮಿಚ್ಪೆ ಮತ್ತು ಶೇನಿಗಳ ಮಧ್ಯೆ ಕಲ್ಲನ್ನು ನೆಟ್ಟು, “ಯೆಹೋವನು ಇಲ್ಲಿಯವರೆಗೂ ನಮಗೆ ಸಹಾಯ ಮಾಡಿದನು” ಎಂದು ಹೇಳಿ, ಅದಕ್ಕೆ “ಸಹಾಯದ ಕಲ್ಲು”[c] ಎಂದು ಹೆಸರಿಟ್ಟನು.
13 ಫಿಲಿಷ್ಟಿಯರು ಸೋತುಹೋದರು. ಅವರು ಮತ್ತೆ ಇಸ್ರೇಲರ ಭೂಮಿಯಲ್ಲಿ ಹೆಜ್ಜೆ ಇಡಲಿಲ್ಲ. ಸಮುವೇಲನ ಜೀವಿತದ ಉಳಿದ ಭಾಗದಲ್ಲಿ ಯೆಹೋವನು ಫಿಲಿಷ್ಟಿಯರಿಗೆ ವಿರುದ್ಧವಾಗಿದ್ದನು. 14 ಫಿಲಿಷ್ಟಿಯರು ಎಕ್ರೋನ್‌ನಿಂದ ಗತ್‌ವರೆಗಿನ ಪ್ರದೇಶದ ಇಸ್ರೇಲ್ ಪಟ್ಟಣಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಇಸ್ರೇಲರು ಆ ಪಟ್ಟಣಗಳನ್ನು ಮರಳಿ ಗೆದ್ದುಕೊಂಡರು ಮತ್ತು ಆ ಪಟ್ಟಣದ ಸುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡರು.
ಇಸ್ರೇಲರ ಮತ್ತು ಅಮೋರಿಯರ ಮಧ್ಯೆ ಶಾಂತಿ ನೆಲೆಸಿತ್ತು.
15 ಸಮುವೇಲನು ತನ್ನ ಜೀವಮಾನವೆಲ್ಲಾ ಇಸ್ರೇಲರನ್ನು ಮುನ್ನಡೆಸಿದನು; 16 ಇಸ್ರೇಲಿನಲ್ಲಿ ನ್ಯಾಯಪರಿಪಾಲನೆಗಾಗಿ ಪ್ರತಿವರ್ಷವೂ ಬೇತೇಲ್, ಗಿಲ್ಗಾಲ್ ಮತ್ತು ಮಿಚ್ಪೆ ಎಂಬ ಪಟ್ಟಣಗಳಿಗೆ ಹೋದನು. ಹೀಗೆ ಅವನು ಈ ಸ್ಥಳಗಳಲ್ಲೆಲ್ಲಾ ಇಸ್ರೇಲರಿಗೆ ನ್ಯಾಯತೀರಿಸುತ್ತಾ ಅವರನ್ನು ಆಳಿದನು. 17 ಆದರೆ ಸಮುವೇಲನ ಮನೆಯು ರಾಮದಲ್ಲಿತ್ತು. ಆದ್ದರಿಂದ ಸಮುವೇಲನು ಯಾವಾಗಲೂ ರಾಮಕ್ಕೆ ಹಿಂತಿರುಗುತ್ತಿದ್ದನು. ಸಮುವೇಲನು ರಾಮದಿಂದ ಇಸ್ರೇಲರಿಗೆ ನ್ಯಾಯತೀರ್ಪು ನೀಡುತ್ತಾ ಆಳಿದನು; ರಾಮದಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯೊಂದನ್ನು ನಿರ್ಮಿಸಿದನು.
ಇಸ್ರೇಲರು ತಮಗೊಬ್ಬ ರಾಜನನ್ನು ಕೇಳಿಕೊಳ್ಳುವರು
8 ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರೇಲರಿಗೆ ನ್ಯಾಯಾಧೀಶರನ್ನಾಗಿ ಮಾಡಿದನು. 2 ಅವನ ಮೊದಲನೆಯ ಮಗ ಯೋವೇಲ್, ಎರಡನೆಯ ಮಗ ಅಬೀಯ. ಯೋವೇಲನು ಮತ್ತು ಅಬೀಯನು ಬೇರ್ಷೆಬದಲ್ಲಿ ನ್ಯಾಯಾಧೀಶರಾಗಿದ್ದರು. 3 ಆದರೆ ಸಮುವೇಲನ ಮಕ್ಕಳು ಅವನಂತೆ ನಡೆದುಕೊಳ್ಳಲಿಲ್ಲ. ಅವರು ಲಂಚವನ್ನು ಪಡೆದು ನ್ಯಾಯಾಲಯದಲ್ಲಿ ಅನ್ಯಾಯದ ತೀರ್ಪುಗಳು ಮಾಡುತ್ತಿದ್ದರು ಮತ್ತು ಜನರನ್ನು ವಂಚಿಸುತ್ತಿದ್ದರು. 4 ಆದ್ದರಿಂದ ಇಸ್ರೇಲರ ಹಿರಿಯರೆಲ್ಲ ಒಟ್ಟುಗೂಡಿದರು. ಅವರು ಸಮುವೇಲನನ್ನು ಭೇಟಿಮಾಡಲು ರಾಮಕ್ಕೆ ಹೋದರು. 5 ಹಿರಿಯರು ಸಮುವೇಲನಿಗೆ, “ನೀನು ಮುದುಕನಾಗಿರುವೆ ಮತ್ತು ನಿನ್ನ ಮಕ್ಕಳು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿಲ್ಲ, ಅವರು ನಿನ್ನಂತಲ್ಲ. ಈಗ, ಬೇರೆ ದೇಶಗಳಂತೆ ಒಬ್ಬ ರಾಜನನ್ನು ನಮ್ಮನ್ನಾಳಲು ನೇಮಿಸು” ಎಂದು ಹೇಳಿದರು.
6 ಹೀಗೆ ಹಿರಿಯರೆಲ್ಲರು ತಮ್ಮನ್ನು ಮುನ್ನಡೆಸಲು ರಾಜನೊಬ್ಬನು ಬೇಕೆಂದರು. ಸಮುವೇಲನಿಗೆ ಇದು ಸರಿಯೆನಿಸಲಿಲ್ಲ. ಆದ್ದರಿಂದ ಅವನು ಯೆಹೋವನಲ್ಲಿ ಪ್ರಾರ್ಥಿಸಿದನು. 7 ಯೆಹೋವನು ಅವನಿಗೆ, “ಜನರು ನಿನಗೆ ಹೇಳಿದಂತೆ ಮಾಡು ಅವರು ನಿನ್ನನ್ನು ತಿರಸ್ಕರಿಸಲಿಲ್ಲ. ಆದರೆ ನನ್ನನ್ನು ತಿರಸ್ಕರಿಸಿದ್ದಾರೆ! ಅವರಿಗೆ ನಾನು ರಾಜನಾಗಿರುವುದು ಬೇಕಿಲ್ಲ! 8 ಅವರು ಯಾವಾಗಲೂ ಮಾಡಿದಂತೆ ಈಗಲೂ ಮಾಡುತ್ತಿದ್ದಾರೆ. ಅವರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆನು. ಆದರೆ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳ ಸೇವೆ ಮಾಡಿದರು. ಅವರು ನಿನಗೂ ಹೀಗೆಯೇ ಮಾಡುತ್ತಿದ್ದಾರೆ. 9 ಆದ್ದರಿಂದ ಜನರ ಮಾತಿಗೆ ಕಿವಿಗೊಟ್ಟು ಅವರು ಹೇಳಿದಂತೆ ಮಾಡು. ಆದರೆ ಅವರಿಗೆ ಎಚ್ಚರಿಕೆಕೊಡು. ರಾಜನಾದವನು ಜನರಿಗೆ ಏನು ಮಾಡುತ್ತಾನೆ ಎಂಬುದನ್ನು ಅವರಿಗೆ ತಿಳಿಸಿ ಹೇಳು! ರಾಜನಾದವನು ಜನರನ್ನು ಹೇಗೆ ಆಳುತ್ತಾನೆಂಬುದನ್ನೂ ಅವರಿಗೆ ತಿಳಿಸಿಕೊಡು” ಎಂದು ಹೇಳಿದನು.
10 ಆ ಜನರು ರಾಜನೊಬ್ಬನನ್ನು ಕೇಳಿಕೊಂಡರು. ಆದ್ದರಿಂದ ಸಮುವೇಲನು ಅವರಿಗೆ ಯೆಹೋವನು ಹೇಳಿದ್ದನ್ನೆಲ್ಲ ತಿಳಿಸಿದನು. 11 ಸಮುವೇಲನು, “ನೀವು ನಿಮ್ಮನ್ನು ಆಳಲು ರಾಜನು ಬೇಕೆಂದರೆ, ಅವನು ಬಲವಂತದಿಂದ ಹೀಗೆಲ್ಲ ಮಾಡುತ್ತಾನೆ: ಅವನು ನಿಮ್ಮ ಗಂಡುಮಕ್ಕಳನ್ನು ತೆಗೆದುಕೊಂಡು ತನ್ನ ಸೇವಕರನ್ನಾಗಿಯೂ ಸೈನಿಕರನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥಸೈನ್ಯದಲ್ಲಿಯೂ ಅಶ್ವಸೈನ್ಯದಲ್ಲಿಯೂ ಸೇರಿ ಹೋರಾಡಬೇಕಾಗುತ್ತದೆ. ನಿನ್ನ ಮಕ್ಕಳು ರಾಜನ ರಥದ ಮುಂದೆ ಓಡುವ ಬೆಂಗಾವಲಿನವರಾಗಬೇಕಾಗುತ್ತದೆ.
12 “ರಾಜನು ನಿಮ್ಮ ಮಕ್ಕಳನ್ನು ಯೋಧರನ್ನಾಗಿ ಮಾಡಿಕೊಳ್ಳುವನು. ಅವರಲ್ಲಿ ಕೆಲವರು ಒಂದು ಸಾವಿರ ಮಂದಿ ಸೈನಿಕರಿಗೆ ಅಧಿಕಾರಿಗಳಾಗಬಹುದು. ಇನ್ನು ಕೆಲವರು ಐವತ್ತು ಮಂದಿ ಸೈನಿಕರಿಗೆ ಅಧಿಕಾರಿಗಳಾಗಬಹುದು.
“ತನ್ನ ಭೂಮಿಯನ್ನು ಉಳಲು ಮತ್ತು ಪೈರನ್ನು ಕೊಯ್ಯಲು ರಾಜನು ನಿಮ್ಮ ಮಕ್ಕಳನ್ನು ತೆಗೆದುಕೊಳ್ಳುವನು; ಯುದ್ಧದ ಆಯುಧಗಳನ್ನು ತಯಾರಿಸಲೂ ತನ್ನ ರಥಕ್ಕೆ ಬೇಕಾದ ಸಾಮಾಗ್ರಿಗಳನ್ನು ತಯಾರಿಸಲೂ ಅವನು ಅವರನ್ನು ಬಳಸಿಕೊಳ್ಳುವನು.
13 “ರಾಜನು ನಿಮ್ಮ ಹೆಣ್ಣುಮಕ್ಕಳನ್ನು ತೆಗೆದುಕೊಂಡು ತನಗಾಗಿ ಸುಗಂಧದ್ರವ್ಯಗಳನ್ನು ತಯಾರಿಸಲೂ ಅಡಿಗೆ ಮಾಡಲೂ ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು.
14 “ನಿಮಗೆ ಸೇರಿದ ಉತ್ತಮ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಆಲಿವ್ ತೋಪುಗಳನ್ನೂ ರಾಜನು ಕಿತ್ತುಕೊಂಡು ತನ್ನ ಅಧಿಕಾರಿಗಳಿಗೆ ಕೊಡುತ್ತಾನೆ. 15 ನೀವು ಬೆಳೆದ ಧಾನ್ಯಗಳಲ್ಲಿ ಮತ್ತು ದ್ರಾಕ್ಷಿಗಳಲ್ಲಿ ಅವನು ಹತ್ತನೆ ಒಂದು ಭಾಗವನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಸೇವಕರಿಗೂ ಕೊಡುತ್ತಾನೆ.
16 “ರಾಜನು, ನಿಮ್ಮ ಸೇವಕಸೇವಕಿಯರನ್ನು ತೆಗೆದುಕೊಳ್ಳುವನು; ಶ್ರೇಷ್ಠವಾದ ಎತ್ತುಗಳನ್ನೂ ಕತ್ತೆಗಳನ್ನೂ ತೆಗೆದುಕೊಂಡು ತನ್ನ ಕೆಲಸಕ್ಕಾಗಿ ಬಳಸಿಕೊಳ್ಳುವನು. 17 ನಿಮ್ಮ ಕುರಿಹಿಂಡುಗಳಲ್ಲಿ ಹತ್ತನೆಯ ಒಂದು ಭಾಗವನ್ನು ತೆಗೆದುಕೊಳ್ಳುವನು.
“ಆಗ ನೀವು ರಾಜನಿಗೆ ಸೇವಕರಾಗುವಿರಿ; 18 ರಾಜನು ಬೇಕೆಂದು ಕೇಳಿಕೊಂಡದ್ದಕ್ಕಾಗಿ ಗೋಳಾಡುವಿರಿ. ಆದರೆ ಆಗ ಯೆಹೋವನು ನಿಮಗೆ ಉತ್ತರಿಸುವುದಿಲ್ಲ” ಎಂದು ಹೇಳಿದನು.
19 ಆದರೆ ಸಮುವೇಲನ ಮಾತುಗಳಿಗೆ ಜನರು ಕಿವಿಗೊಡಲಿಲ್ಲ. ಅವರು, “ಇಲ್ಲ, ನಮ್ಮನ್ನಾಳಲು ಒಬ್ಬ ರಾಜನು ಇರಲೇ ಬೇಕು. 20 ಆಗ ನಾವು ಇತರ ಅನ್ಯಜನಾಂಗಗಳಂತೆ ಆಗುವೆವು. ನಮ್ಮ ರಾಜನು ನಮ್ಮನ್ನು ಮುನ್ನಡೆಸುವನು. ಅವನು ನಮ್ಮೊಡನೆ ಬಂದು ನಮಗೋಸ್ಕರ ಹೋರಾಡುವನು” ಎಂದು ಹೇಳಿದರು.
21 ಸಮುವೇಲನು ಅವರ ಮಾತುಗಳನ್ನೆಲ್ಲಾ ಯೆಹೋವನಿಗೆ ತಿಳಿಸಿದನು. 22 ಯೆಹೋವನು ಅವನಿಗೆ, “ಅವರ ಇಷ್ಟದಂತೆ ಅವರಿಗೊಬ್ಬ ರಾಜನನ್ನು ನೇಮಿಸು” ಎಂದು ಹೇಳಿದನು.
ಆಗ ಸಮುವೇಲನು ಇಸ್ರೇಲರಿಗೆ, “ಹಾಗೆಯೇ ಆಗಲಿ, ನೀವು ಒಬ್ಬ ಹೊಸ ರಾಜನನ್ನು ಪಡೆದುಕೊಳ್ಳುವಿರಿ. ಈಗ ನೀವೆಲ್ಲ ನಿಮ್ಮ ನಿಮ್ಮ ಮನೆಗಳಿಗೆ ಹಿಂದಿರುಗಿರಿ” ಎಂದನು.
Kannada Holy Bible: Easy-to-Read Version. All rights reserved. © 1997 Bible League International