Beginning
ಸಂಸೋನನು ಗಾಜಾಕ್ಕೆ ಹೋದನು
16 ಒಂದು ದಿನ ಸಂಸೋನನು ಗಾಜಾ ನಗರಕ್ಕೆ ಹೋದನು. ಅವನು ಅಲ್ಲಿ ಒಬ್ಬ ವೇಶ್ಯೆಯನ್ನು ಕಂಡು ಆ ರಾತ್ರಿ ಅವಳೊಂದಿಗಿರಲು ಅವಳ ಮನೆಯೊಳಗೆ ಹೋದನು. 2 ಯಾರೋ ಒಬ್ಬರು, “ಸಂಸೋನನು ಇಲ್ಲಿಗೆ ಬಂದಿದ್ದಾನೆ” ಎಂದು ಗಾಜಾದ ಜನರಿಗೆ ಹೇಳಿದರು. ಅವರು ಅವನನ್ನು ಕೊಲ್ಲಬೇಕೆಂದಿದ್ದರು. ಅದಕ್ಕಾಗಿ ಅವರು ಆ ಸ್ಥಳವನ್ನು ಸುತ್ತುಗಟ್ಟಿದರು. ನಗರದ ಬಾಗಿಲುಗಳನ್ನು ಭದ್ರಪಡಿಸಿ ಅಡಗಿಕೊಂಡು ಸಂಸೋನನ ದಾರಿಕಾಯ್ದರು. ಇಡೀರಾತ್ರಿ ಅವರು ನಗರದ ಬಾಗಿಲಲ್ಲಿ ಸುಮ್ಮನಿದ್ದರು. “ಬೆಳಗಾದ ಮೇಲೆ ನಾವು ಸಂಸೋನನನ್ನು ಕೊಲ್ಲೋಣ” ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.
3 ಆದರೆ ಸಂಸೋನನು ಆ ವೇಶ್ಯೆಯ ಜೊತೆಯಲ್ಲಿ ಮಧ್ಯರಾತ್ರಿಯವರೆಗೆ ಮಾತ್ರ ಇದ್ದನು. ಸಂಸೋನನು ಮಧ್ಯರಾತ್ರಿಯಲ್ಲಿ ಎದ್ದುಬಿಟ್ಟನು. ಸಂಸೋನನು ನಗರ ದ್ವಾರದ ಬಾಗಿಲನ್ನು ಗಟ್ಟಿಯಾಗಿ ಹಿಡಿದು ಎಳೆದನು. ಕದಗಳು ಗೋಡೆಗಳಿಂದ ಕಿತ್ತುಬಂದವು. ಸಂಸೋನನು ಬಾಗಿಲಕದಗಳನ್ನೂ ಅದರ ನಿಲುವುಪಟ್ಟಿಗಳನ್ನೂ ಅಗುಳಿಗಳನ್ನೂ ಕಿತ್ತು ತನ್ನ ಹೆಗಲ ಮೇಲೆ ಹೊತ್ತು ಹೆಬ್ರೋನ್ ನಗರದ ಹತ್ತಿರವಿರುವ ಪರ್ವತ ಶಿಖರಕ್ಕೆ ತೆಗೆದುಕೊಂಡು ಹೋದನು.
ಸಂಸೋನ ಮತ್ತು ದೆಲೀಲಾ
4 ತರುವಾಯ ಸಂಸೋನನು ದೆಲೀಲಾ ಎಂಬ ಸ್ತ್ರೀಯನ್ನು ಪ್ರೀತಿಸಿದನು. ಅವಳು ಸೋರೇಕ್ ಕಣಿವೆಯವಳು.
5 ಫಿಲಿಷ್ಟಿಯ ಪ್ರಭುಗಳು ದೆಲೀಲಳ ಬಳಿಗೆ ಹೋಗಿ, “ಸಂಸೋನನು ಅಷ್ಟೊಂದು ಶಕ್ತಿಶಾಲಿಯಾಗಿರುವುದಕ್ಕೆ ಕಾರಣಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಅವನನ್ನು ಮರುಳುಗೊಳಿಸಿ ಅವನ ರಹಸ್ಯವನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡು. ಆಗ ನಾವು ಅವನನ್ನು ಸೋಲಿಸಿ, ಬಂಧಿಸಿ ನಮ್ಮ ಅಧೀನದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ನೀನು ಇದನ್ನು ಮಾಡಿದರೆ ನಮ್ಮಲ್ಲಿ ಪ್ರತಿಯೊಬ್ಬನೂ ನಿನಗೆ ಇಪ್ಪತ್ತೆಂಟು ಬೆಳ್ಳಿನಾಣ್ಯಗಳನ್ನು ಕೊಡುತ್ತೇವೆ” ಎಂದು ಹೇಳಿದರು.
6 ದೆಲೀಲಳು ಸಂಸೋನನಿಗೆ, “ನಿನಗೆ ಇಂಥ ಮಹಾಶಕ್ತಿ ಹೇಗೆ ಬಂತು? ನಿನ್ನನ್ನು ನಿರ್ಬಲಗೊಳಿಸಿ ಬಂಧಿಸುವುದು ಹೇಗೆ?” ಎಂದು ಕೇಳಿದಳು.
7 ಅದಕ್ಕೆ ಸಂಸೋನನು, “ಬಿಲ್ಲಿನ ಏಳು ಹೊಸತಂತಿಗಳಿಂದ ನನ್ನನ್ನು ಕಟ್ಟಿದರೆ ನಾನು ಬೇರೆ ಮನುಷ್ಯರಂತೆ ಬಲಹೀನನಾಗುತ್ತೇನೆ” ಎಂದು ಉತ್ತರಿಸಿದನು.
8 ಆಗ ಫಿಲಿಷ್ಟಿಯ ಅಧಿಪತಿಗಳು ದೆಲೀಲಳಿಗೆ ಬಿಲ್ಲಿನ ಏಳು ಹೊಸ ತಂತಿಗಳನ್ನು ತಂದುಕೊಟ್ಟರು. ಅವು ಇನ್ನೂ ಒಣಗಿರಲಿಲ್ಲ. ದೆಲೀಲಳು ಸಂಸೋನನನ್ನು ಬಿಲ್ಲಿನ ಆ ತಂತಿಗಳಿಂದ ಬಿಗಿದು ಕಟ್ಟಿದಳು. 9 ಪಕ್ಕದ ಕೋಣೆಯಲ್ಲಿ ಕೆಲವು ಜನ ಅಡಗಿಕೊಂಡಿದ್ದರು. ಆಗ ದೆಲೀಲಳು ಸಂಸೋನನಿಗೆ, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಹೇಳಿದಳು. ಆದರೆ ಸಂಸೋನನು ಸುಲಭವಾಗಿ ಆ ಬಿಲ್ಲಿನ ತಂತಿಗಳನ್ನು ಕಿತ್ತುಹಾಕಿದನು; ಸುಟ್ಟದಾರದಿಂದ ಬೂದಿ ಉದುರಿ ಬೀಳುವಂತೆ ಆ ತಂತಿಗಳು ಕಿತ್ತುಬಿದ್ದವು. ಹೀಗಾಗಿ ಫಿಲಿಷ್ಟಿಯರಿಗೆ ಸಂಸೋನನ ಬಲದ ರಹಸ್ಯ ತಿಳಿಯಲಿಲ್ಲ.
10 ಆಗ ದೆಲೀಲಳು ಸಂಸೋನನಿಗೆ, “ನೀನು ನನಗೆ ಸುಳ್ಳು ಹೇಳಿದೆ, ನನ್ನನ್ನು ವಂಚಿಸಿದೆ. ನಿನ್ನನ್ನು ಬಂಧಿಸುವದು ಹೇಗೆಂಬುದನ್ನು ದಯವಿಟ್ಟು ಹೇಳು” ಎಂದು ಕೇಳಿದಳು.
11 ಅದಕ್ಕೆ ಸಂಸೋನನು, “ಎಂದೂ ಉಪಯೋಗಿಸದ ಹೊಸ ಹಗ್ಗಗಳಿಂದ ನನ್ನನ್ನು ಕಟ್ಟಿದರೆ ನಾನು ಬೇರೆಯವರಂತೆ ನಿರ್ಬಲನಾಗುತ್ತೇನೆ” ಎಂದನು.
12 ದೆಲೀಲಳು ಕೆಲವು ಹೊಸ ಹಗ್ಗಗಳನ್ನು ತೆಗೆದುಕೊಂಡು ಸಂಸೋನನನ್ನು ಬಿಗಿದುಕಟ್ಟಿದಳು. ಕೆಲವು ಜನರು ಪಕ್ಕದ ಕೋಣೆಯಲ್ಲಿ ಅಡಗಿಕೊಂಡಿದ್ದರು. ದೆಲೀಲಳು, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಕೂಗಿದಳು. ಆದರೆ ಅವನು ದಾರಗಳನ್ನು ಕಿತ್ತುಹಾಕುವಂತೆ ಆ ಹಗ್ಗಗಳನ್ನು ಸುಲಭವಾಗಿ ಕಿತ್ತುಹಾಕಿದನು.
13 ಆಗ ದೆಲೀಲಳು ಸಂಸೋನನಿಗೆ, “ನೀನು ನನಗೆ ಪುನಃ ಸುಳ್ಳು ಹೇಳಿದೆ. ನೀನು ನನ್ನನ್ನು ವಂಚಿಸಿದೆ. ನಿನ್ನನ್ನು ಬಂಧಿಸುವುದು ಹೇಗೆಂಬುದನ್ನು ಈಗ ನನಗೆ ತಿಳಿಸು” ಎಂದು ಕೇಳಿದಳು.
ಸಂಸೋನನು, “ನನ್ನ ತಲೆಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದು ಕಟ್ಟಿದರೆ ನಾನು ಬೇರೆ ಮನುಷ್ಯರಂತೆ ದುರ್ಬಲನಾಗುತ್ತೇನೆ” ಎಂದು ಹೇಳಿದನು.
14 ಸಂಸೋನನು ಮಲಗಿಕೊಂಡಿರುವಾಗ ದೆಲೀಲಳು ಅವನ ತಲೆಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದಳು. ಆಮೇಲೆ ಆ ಮಗ್ಗವನ್ನು ಒಂದು ಗೂಟದಿಂದ ಭದ್ರಪಡಿಸಿದಳು. ಬಳಿಕ, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಮತ್ತೆ ಕೂಗಿಕೊಂಡಳು. ಸಂಸೋನನು ಗೂಟವನ್ನೂ ಮಗ್ಗವನ್ನೂ ಲಾಳಿಯನ್ನೂ ಕಿತ್ತುಹಾಕಿದನು.
15 ಆಗ ದೆಲೀಲಳು ಸಂಸೋನನಿಗೆ, “‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ನೀನು ಹೇಗೆ ಹೇಳಲು ಸಾಧ್ಯ? ನನ್ನನ್ನು ನೀನು ನಂಬುವುದೇ ಇಲ್ಲ. ನೀನು ನನಗೆ ನಿನ್ನ ರಹಸ್ಯವನ್ನು ತಿಳಿಸುವುದಿಲ್ಲ. ಮೂರನೆಯ ಸಲ ನೀನು ನನ್ನನ್ನು ವಂಚಿಸಿದೆ. ನೀನು ನನಗೆ ನಿನ್ನ ಶಕ್ತಿಯ ರಹಸ್ಯವನ್ನು ತಿಳಿಸಲಿಲ್ಲ” ಎಂದಳು. 16 ಅವಳು ಸಂಸೋನನನ್ನು ಪ್ರತಿದಿನ ಪೀಡಿಸತೊಡಗಿದಳು. ಅವನ ಶಕ್ತಿಯ ರಹಸ್ಯದ ಬಗ್ಗೆ ಅವಳು ಪದೇಪದೇ ಕೇಳುತ್ತಿದ್ದದರಿಂದ ಅವನಿಗೆ ಸಾಯುವಷ್ಟು ಬೇಸರವಾಯಿತು. 17 ಕೊನೆಗೆ ಸಂಸೋನನು ದೆಲೀಲಳಿಗೆ ಎಲ್ಲವನ್ನು ಹೇಳಿದನು. “ನಾನೆಂದೂ ನನ್ನ ತಲೆಕೂದಲನ್ನು ಕತ್ತರಿಸಿಕೊಂಡಿಲ್ಲ. ನಾನು ಹುಟ್ಟುವ ಮೊದಲೇ ನನ್ನನ್ನು ದೇವರಿಗೆ ಪ್ರತಿಷ್ಠಿಸಲಾಗಿತ್ತ್ತು. ಯಾರಾದರೂ ನನ್ನ ತಲೆಬೋಳಿಸಿದರೆ ನಾನು ನನ್ನ ಶಕ್ತಿಯನ್ನು ಕಳೆದುಕೊಳ್ಳುತ್ತೇನೆ. ನಾನು ಬೇರೆ ಮನುಷ್ಯರಷ್ಟೇ ದುರ್ಬಲನಾಗುತ್ತೇನೆ” ಎಂದು ಹೇಳಿದನು.
18 ಸಂಸೋನನು ತನ್ನ ರಹಸ್ಯವನ್ನು ತಿಳಿಸಿದನೆಂದು ದೆಲೀಲಳಿಗೆ ಗೊತ್ತಾಯಿತು. ಅವಳು ಫಿಲಿಷ್ಟಿಯ ಅಧಿಪತಿಗಳಿಗೆ ಸಂದೇಶವನ್ನು ಕಳುಹಿಸಿದಳು. ಅವಳು, “ಸಂಸೋನನು ನನಗೆ ಎಲ್ಲವನ್ನು ಹೇಳಿದ್ದಾನೆ, ಮತ್ತೊಮ್ಮೆ ಬನ್ನಿ” ಎಂದು ಹೇಳಿದಳು. ಫಿಲಿಷ್ಟಿಯ ಅಧಿಪತಿಗಳು ದೆಲೀಲಳ ಬಳಿಗೆ ಬಂದರು. ಅವರು ಅವಳಿಗೆ ಕೊಡುವುದಾಗಿ ಹೇಳಿದ್ದ ಹಣವನ್ನು ತಂದಿದ್ದರು.
19 ಸಂಸೋನನು ಅವಳ ತೊಡೆಯ ಮೇಲೆ ಮಲಗಿ ನಿದ್ರೆಮಾಡಿದನು. ಆಗ ಅವಳು ಸಂಸೋನನ ಏಳುಜಡೆಗಳನ್ನು ಬೋಳಿಸಲು ಒಬ್ಬ ಮನುಷ್ಯನನ್ನು ಒಳಗೆ ಕರೆದಳು. ಅವನು ಆ ಏಳು ಜಡೆಗಳನ್ನು ಬೋಳಿಸಲು, ಅವನು ಇತರರಂತೆ ದುರ್ಬಲನಾದನು. 20 ಆಮೇಲೆ ದೆಲೀಲಳು ಅವನನ್ನು, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಕೂಗಿದಳು. ಅವನು ಎಚ್ಚೆತ್ತನು. “ಮುಂಚಿನಂತೆಯೇ ನಾನು ತಪ್ಪಿಸಿಕೊಳ್ಳುವೆನು” ಎಂದು ಅವನು ತಿಳಿದಿದ್ದನು. ಆದರೆ ಯೆಹೋವನು ಅವನನ್ನು ಬಿಟ್ಟುಹೋಗಿದ್ದಾನೆಂಬುದು ಅವನಿಗೆ ಗೊತ್ತಾಗಲಿಲ್ಲ.
21 ಫಿಲಿಷ್ಟಿಯರು ಸಂಸೋನನನ್ನು ಬಂಧಿಸಿ ಅವನ ಕಣ್ಣುಗಳನ್ನು ಕಿತ್ತು ಗಾಜಾ ನಗರಕ್ಕೆ ತೆಗೆದುಕೊಂಡು ಹೋದರು. ಅವನು ಓಡಿಹೋಗದಂತೆ ಅವನಿಗೆ ಸಂಕೋಲೆಗಳನ್ನು ಬಿಗಿದರು. ಅವರು ಸಂಸೋನನನ್ನು ಒಂದು ಸೆರೆಮನೆಯಲ್ಲಿಟ್ಟು ಧಾನ್ಯಬೀಸುವ ಕೆಲಸಕ್ಕೆ ಹಚ್ಚಿದರು. 22 ಆದರೆ ಸಂಸೋನನ ಕೂದಲುಗಳು ಪುನಃ ಬೆಳೆಯತೊಡಗಿದವು.
23 ಫಿಲಿಷ್ಟಿಯ ಅಧಿಪತಿಗಳು ಒಂದು ಉತ್ಸವವನ್ನು ಮಾಡಲು ಸೇರಿಬಂದಿದ್ದರು. ಅವರು ತಮ್ಮ ದೇವರಾದ ದಾಗೋನನಿಗೆ ಒಂದು ಮಹಾಯಜ್ಞವನ್ನು ಸಮರ್ಪಿಸಬೇಕೆಂದಿದ್ದರು. “ನಮ್ಮ ಶತ್ರುವಾದ ಸಂಸೋನನನ್ನು ಸೋಲಿಸಲು ನಮ್ಮ ದೇವರು ನಮಗೆ ಸಹಾಯ ಮಾಡಿದನು” ಎಂದು ಅವರು ಭಾವಿಸಿದ್ದರು. 24 ಫಿಲಿಷ್ಟಿಯರು ಸಂಸೋನನನ್ನು ನೋಡಿದ ಕೂಡಲೇ ತಮ್ಮ ದೇವರನ್ನು ಸ್ತುತಿಸಿದರು. ಅವರು,
“ಇವನು ನಮ್ಮ ಜನರನ್ನು ಹಾಳುಮಾಡಿದನು.
ಇವನು ನಮ್ಮ ಅನೇಕ ಜನರನ್ನು ಕೊಂದನು.
ಆದರೆ ನಮ್ಮ ದೇವರು ನಮ್ಮ ಶತ್ರುವನ್ನು
ಸೆರೆಹಿಡಿಯಲು ಸಹಾಯ ಮಾಡಿದನು”
ಎಂದು ಹಾಡಿದರು.
25 ಆ ಉತ್ಸವದಲ್ಲಿ ಜನರು ಸಂತೋಷವಾಗಿದ್ದರು. ಅವರು, “ಸಂಸೋನನನ್ನು ಕರೆದು ತನ್ನಿ. ನಾವು ಅವನ ತಮಾಷೆಯನ್ನು ನೋಡಬೇಕು” ಎಂದರು. ಅವರು ಸಂಸೋನನನ್ನು ಸೆರೆಮನೆಯಿಂದ ತಂದು ಅವನನ್ನು ಅಪಹಾಸ್ಯ ಮಾಡಿದರು. ಸಂಸೋನನನ್ನು ಅವರ ದೇವರಾದ ದಾಗೋನನ ಮಂದಿರದಲ್ಲಿ ಎರಡು ಕಂಬಗಳ ಮಧ್ಯದಲ್ಲಿ ನಿಲ್ಲಿಸಿದರು. 26 ಒಬ್ಬ ಸೇವಕನು ಸಂಸೋನನ ಕೈಯನ್ನು ಹಿಡಿದುಕೊಂಡಿದ್ದನು. “ಈ ಮಂದಿರಕ್ಕೆ ಆಧಾರವಾಗಿರುವ ಕಂಬಗಳ ಹತ್ತಿರ ನನ್ನನ್ನು ಕರೆದುಕೊಂಡು ಹೋಗು. ನಾನು ಅವುಗಳಿಗೆ ಒರಗಿಕೊಳ್ಳುತ್ತೇನೆ” ಎಂದು ಸಂಸೋನನು ಅವನನ್ನು ಕೇಳಿಕೊಂಡನು.
27 ಆ ಮಂದಿರದಲ್ಲಿ ಗಂಡಸರು ಹೆಂಗಸರು ಕಿಕ್ಕಿರಿದು ನೆರೆದಿದ್ದರು. ಫಿಲಿಷ್ಟಿಯರ ಅಧಿಪತಿಗಳೆಲ್ಲರೂ ಅಲ್ಲಿದ್ದರು. ಮಾಳಿಗೆಯ ಮೇಲೆ ಸುಮಾರು ಮೂರು ಸಾವಿರ ಹೆಂಗಸರು ಮತ್ತು ಗಂಡಸರು ಇದ್ದರು. ಅವರು ನಕ್ಕು ಸಂಸೋನನನ್ನು ಅಪಹಾಸ್ಯ ಮಾಡುತ್ತಿದ್ದರು. 28 ಆಗ ಸಂಸೋನನು ಯೆಹೋವನಿಗೆ, “ಸರ್ವಶಕ್ತನಾದ ಯೆಹೋವನೇ, ನನ್ನ ಕಡೆಗೆ ಗಮನ ಹರಿಸು. ದೇವರೇ, ದಯವಿಟ್ಟು ನನಗಿನ್ನೊಂದು ಸಲ ಶಕ್ತಿಯನ್ನು ಕೊಡು. ಫಿಲಿಷ್ಟಿಯರು ನನ್ನ ಎರಡು ಕಣ್ಣುಗಳನ್ನು ಕಿತ್ತುಹಾಕಿದ್ದಕ್ಕೆ ಇದೊಂದು ಸಲ ಅವರನ್ನು ಶಿಕ್ಷಿಸುತ್ತೇನೆ” ಎಂದು ಬೇಡಿಕೊಂಡನು. 29 ಆಮೇಲೆ ಸಂಸೋನನು ಇಡೀ ಮಂದಿರಕ್ಕೆ ಆಧಾರವಾಗಿದ್ದ ಎರಡು ಕಂಬಗಳ ಮಧ್ಯದಲ್ಲಿ ನಿಂತುಕೊಂಡನು. ಒಂದು ಕಂಬವನ್ನು ಬಲಗೈಯಿಂದಲೂ ಇನ್ನೊಂದು ಕಂಬವನ್ನು ಎಡಗೈಯಿಂದಲೂ ಹಿಡಿದು, 30 “ಈ ಫಿಲಿಷ್ಟಿಯರ ಜೊತೆ ನಾನೂ ಸಾಯಲು ಸಿದ್ಧ” ಎಂದು ಹೇಳಿ ಆ ಎರಡೂ ಕಂಬಗಳನ್ನು ತನ್ನ ಎಲ್ಲಾ ಶಕ್ತಿಯಿಂದ ಎಳೆಯುತ್ತಾ ಬಾಗಿದನು. ಆಗ ಮಂದಿರವು ಅಧಿಪತಿಗಳ ಮೇಲೂ ಅಲ್ಲಿದ್ದ ಜನರೆಲ್ಲರ ಮೇಲೂ ಕುಸಿದು ಬಿತ್ತು. ಈ ಪ್ರಕಾರ ಸಂಸೋನನು ತಾನು ಜೀವದಿಂದಿದ್ದಾಗ ಕೊಂದ ಜನರಿಗಿಂತ ಹೆಚ್ಚು ಜನರನ್ನು ತಾನು ಸಾಯುವಾಗ ಕೊಂದನು.
31 ಸಂಸೋನನ ಸಹೋದರರು ಮತ್ತು ಅವನ ತಂದೆಯ ಕುಟುಂಬದವರೆಲ್ಲರು ಬಂದು ಅವನ ದೇಹವನ್ನು ತೆಗೆದುಕೊಂಡು ಹೋಗಿ ಅವನ ತಂದೆಯ ಸಮಾಧಿಯಲ್ಲಿ ಹೂಳಿಟ್ಟರು. ಅವನ ತಂದೆಯ ಹೆಸರು ಮಾನೋಹ. ಆ ಸಮಾಧಿಯು ಚೊರ್ಗಕ್ಕೂ ಮತ್ತು ಎಷ್ಟಾವೋಲಿಗೂ ಮಧ್ಯದಲ್ಲಿದೆ. ಸಂಸೋನನು ಇಪ್ಪತ್ತು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು.
ಮೀಕನ ವಿಗ್ರಹಗಳು
17 ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಮೀಕ ಎಂಬ ಮನುಷ್ಯನಿದ್ದನು. 2 ಮೀಕನು ತನ್ನ ತಾಯಿಗೆ, “ಅಮ್ಮಾ, ಯಾರೋ ನಿನ್ನ ಇಪ್ಪತ್ತೆಂಟು ತೊಲೆ ಬೆಳ್ಳಿಯನ್ನು ಕದ್ದಿದ್ದರಲ್ಲಾ, ನಿನಗೆ ನೆನಪಿದೆಯಾ? ನೀನು ಅದರ ಸಲುವಾಗಿ ಶಾಪಹಾಕುವದನ್ನು ನಾನು ಕೇಳಿದ್ದೆ. ನಾನು ಅದನ್ನು ತೆಗೆದುಕೊಂಡಿದ್ದೆ. ಇಗೋ ಆ ಬೆಳ್ಳಿ ನನ್ನ ಹತ್ತಿರ ಇದೆ” ಎಂದು ಹೇಳಿದನು.
ಅವನ ತಾಯಿಯು ಅವನಿಗೆ, “ಮಗನೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಎಂದು ಹರಸಿದಳು.
3 ಮೀಕನು ಇಪ್ಪತ್ತೆಂಟು ತೊಲೆ ಬೆಳ್ಳಿಯನ್ನು ತನ್ನ ತಾಯಿಗೆ ಕೊಟ್ಟನು. ಆಗ ಅವಳು, “ನಾನು ಈ ಬೆಳ್ಳಿಯನ್ನು ಯೆಹೋವನಿಗೆ ವಿಶೇಷ ಹರಕೆಯಾಗಿ ಕೊಡುವೆನು. ಇದನ್ನು ನಾನು ನನ್ನ ಮಗನಿಗೆ ಕೊಡುವೆನು, ಅವನು ಅದರಿಂದ ಒಂದು ವಿಗ್ರಹವನ್ನು ಮಾಡಿಸಿ ಅದಕ್ಕೆ ಬೆಳ್ಳಿಯ ಹೊದಿಕೆಯನ್ನು ಹಾಕಿಸುವನು” ಎಂದು ಹೇಳಿ ಆ ಬೆಳ್ಳಿಯನ್ನು ಮಗನ ಕೈಯಲ್ಲಿ ಕೊಟ್ಟಳು.
4 ಆದರೆ ಮೀಕನು ಆ ಬೆಳ್ಳಿಯನ್ನು ತನ್ನ ತಾಯಿಗೆ ಹಿಂದಿರುಗಿಸಿದನು. ಅವಳು ಸುಮಾರು ಐದು ತೊಲೆಯಷ್ಟು ಬೆಳ್ಳಿಯ ನಾಣ್ಯಗಳನ್ನು ಒಬ್ಬ ಅಕ್ಕಸಾಲಿಗನಿಗೆ ಕೊಟ್ಟಳು. ಆ ಅಕ್ಕಸಾಲಿಗನು ಅದರಿಂದ ಒಂದು ವಿಗ್ರಹವನ್ನು ಮಾಡಿ ಅದಕ್ಕೆ ಬೆಳ್ಳಿಯ ಹೊದಿಕೆ ಹಾಕಲು ಉಪಯೋಗಿಸಿದನು. ಆ ವಿಗ್ರಹವನ್ನು ಮೀಕನ ಮನೆಯಲ್ಲಿ ಇಡಲಾಯಿತು. 5 ವಿಗ್ರಹಗಳನ್ನು ಪೂಜಿಸುವುದಕ್ಕಾಗಿ ಮೀಕನಿಗೆ ಒಂದು ಮಂದಿರವಿತ್ತು. ಮೀಕನು ಏಫೋದನ್ನೂ ವಿಗ್ರಹಗಳನ್ನೂ ಪೂಜಿಸಲು ತನ್ನ ಒಬ್ಬ ಮಗನನ್ನು ಅರ್ಚಕನನ್ನಾಗಿ ನೇಮಿಸಿದನು. 6 (ಆ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಪ್ರತಿಯೊಬ್ಬರೂ ತಮಗೆ ಸರಿ ತೋರಿದಂತೆ ನಡೆದುಕೊಳ್ಳುತ್ತಿದ್ದರು.)
7 ಲೇವಿಯ ಕುಲದ ಒಬ್ಬ ತರುಣನಿದ್ದನು. ಅವನು ಯೆಹೂದದ ಬೆತ್ಲೆಹೇಮಿನವನಾಗಿದ್ದು ಯೆಹೂದ್ಯರ ಸಂಗಡ ವಾಸಮಾಡುತ್ತಿದ್ದನು. 8 ಆ ತರುಣನು ಯೆಹೂದ ಪ್ರದೇಶದ ಬೆತ್ಲೆಹೇಮನ್ನು ಬಿಟ್ಟು ವಾಸಮಾಡಲು ಬೇರೆ ಸ್ಥಳವನ್ನು ಹುಡುಕುತ್ತಿದ್ದನು. ಅವನು ಪ್ರಯಾಣ ಮಾಡುತ್ತಾ ಮೀಕನ ಮನೆಗೆ ಬಂದನು. ಮೀಕನ ಮನೆಯು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿತ್ತು. 9 ಮೀಕನು ಅವನನ್ನು, “ನೀನು ಎಲ್ಲಿಂದ ಬಂದಿರುವೆ?” ಎಂದು ಕೇಳಿದನು.
ಆ ತರುಣನು, “ನಾನು ಯೆಹೂದ ಪ್ರದೇಶದ ಬೆತ್ಲೆಹೇಮಿನವನಾದ ಲೇವಿಯನು. ನಾನು ವಾಸಮಾಡುವುದಕ್ಕೆ ಒಂದು ಸ್ಥಳವನ್ನು ಹುಡುಕುತ್ತಿದ್ದೇನೆ” ಎಂದು ಹೇಳಿದನು.
10 ಆಗ ಮೀಕನು ಅವನಿಗೆ, “ನಮ್ಮಲ್ಲಿಯೇ ಇರು. ನಮಗೆ ತಂದೆಯೂ ಯಾಜಕನೂ ಆಗಿರು. ನಾನು ನಿನಗೆ ಪ್ರತಿವರ್ಷ ನಾಲ್ಕು ಔನ್ಸ್ ಬೆಳ್ಳಿಯನ್ನೂ ಊಟವನ್ನೂ ವಸ್ತ್ರಗಳನ್ನೂ ಕೊಡುತ್ತೇನೆ” ಎಂದು ಹೇಳಿದನು.
ಮೀಕನು ಹೇಳಿದಂತೆ ಆ ಲೇವಿಯು ಮಾಡಿದನು. 11 ಆ ತರುಣ ಲೇವಿಯು ಮೀಕನಲ್ಲಿಯೇ ಇರಲು ಒಪ್ಪಿಕೊಂಡನು. ಆ ತರುಣನು ಮೀಕನ ಒಬ್ಬ ಮಗನಂತೆಯೇ ಆದನು. 12 ಮೀಕನು ಅವನನ್ನು ತಮಗೆ ಯಾಜಕನಾಗಬೇಕೆಂದು ಕೇಳಿಕೊಂಡನು. ಆದ್ದರಿಂದ ಆ ತರುಣನು ಯಾಜಕನಾಗಿ ಮೀಕನ ಮನೆಯಲ್ಲಿಯೇ ವಾಸಮಾಡಿದನು. 13 ಮೀಕನು ತನ್ನೊಳಗೆ, “ಯೆಹೋವನು ನನಗೆ ಕೃಪೆ ತೋರುವನು. ಏಕೆಂದರೆ ನನ್ನ ಮನೆಯಲ್ಲಿ ಲೇವಿಕುಲದ ಒಬ್ಬನು ಯಾಜಕನಾಗಿದ್ದಾನೆ” ಎಂದುಕೊಂಡನು.
ದಾನ್ಯರು ಲಯಿಷ್ ನಗರವನ್ನು ಸ್ವಾಧೀನಪಡಿಸಿಕೊಂಡರು
18 ಆ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಆ ಸಮಯದಲ್ಲಿ ದಾನ್ ಕುಲದವರು ಇನ್ನೂ ತಮ್ಮ ವಾಸಕ್ಕಾಗಿ ಒಂದು ಸ್ಥಳವನ್ನು ಹುಡುಕುತ್ತಿದ್ದರು. ಇನ್ನೂ ಅವರಿಗೆ ತಮ್ಮದೇ ಆದ ಒಂದು ಪ್ರದೇಶವೂ ಇರಲಿಲ್ಲ. ಇಸ್ರೇಲಿನ ಬೇರೆ ಕುಲಗಳಿಗೆ ತಮ್ಮದೇ ಆದ ಪ್ರದೇಶ ಇತ್ತು. ಆದರೆ ದಾನ್ ಕುಲದವರು ಮಾತ್ರ ಇನ್ನೂ ತಮ್ಮ ಪ್ರದೇಶವನ್ನು ಹೊಂದಿಕೊಂಡಿರಲಿಲ್ಲ.
2 ದಾನ್ ಕುಲದವರು ತಮಗೆ ಭೂಮಿಯನ್ನು ಹುಡುಕುವುದಕ್ಕಾಗಿ ಐದು ಮಂದಿ ಸೈನಿಕರನ್ನು ಕಳುಹಿಸಿದರು. ಅವರು ತಮ್ಮ ವಾಸಕ್ಕಾಗಿ ಒಳ್ಳೆಯ ಸ್ಥಳವನ್ನು ಹುಡುಕಲು ಹೋದರು. ಆ ಐದು ಮಂದಿ ಚೊರ್ಗಾ ಮತ್ತು ಎಷ್ಟಾವೋಲ್ ನಗರದವರಾಗಿದ್ದರು. ಅವರು ದಾನ್ ಕುಲದವರ ಮನೆತನಕ್ಕೆ ಸೇರಿದವರಾದ ಕಾರಣ “ಭೂಮಿಯನ್ನು ಹುಡುಕಲು” ಅವರನ್ನು ಕಳುಹಿಸಲಾಗಿತ್ತು.
ಆ ಐದು ಜನರು ಎಫ್ರಾಯೀಮ್ ಬೆಟ್ಟದ ಸೀಮೆಗೆ ಬಂದು ಮೀಕನ ಮನೆಯಲ್ಲಿ ಇಳಿದುಕೊಂಡರು. 3 ಆ ಐದು ಜನರು ಮೀಕನ ಮನೆಯ ಸಮೀಪಕ್ಕೆ ಬಂದಾಗ ತರುಣನಾಗಿದ್ದ ಲೇವಿಯ ಧ್ವನಿಯನ್ನು ಕೇಳಿ ಗುರುತಿಸಿದರು. ಆದ್ದರಿಂದ ಅವರು ಮೀಕನ ಮನೆಯಲ್ಲಿ ಇಳಿದುಕೊಂಡು ಆ ತರುಣನಿಗೆ, “ನಿನ್ನನ್ನು ಇಲ್ಲಿಗೆ ಯಾರು ಕರೆದುತಂದರು? ನೀನು ಇಲ್ಲಿ ಏನು ಮಾಡುತ್ತಿರುವೆ? ಇಲ್ಲಿ ನಿನ್ನ ಉದ್ಯೋಗವೇನು?” ಎಂದು ಕೇಳಿದರು.
4 ಮೀಕನು ತನಗಾಗಿ ಮಾಡಿದ ಎಲ್ಲಾ ವ್ಯವಸ್ಥೆಯನ್ನು ಅವರಿಗೆ ವಿವರಿಸಿ, “ನಾನು ಮೀಕನ ಯಾಜಕನಾಗಿ ಕೆಲಸ ಮಾಡುತ್ತಿದ್ದೇನೆ. ಅವನು ನನಗೆ ಸಂಬಳ ಕೊಡುತ್ತಾನೆ” ಎಂದು ಹೇಳಿದನು.
5 ಅವರು ಅವನಿಗೆ, “ವಾಸಕ್ಕಾಗಿ ಭೂಮಿಯನ್ನು ಹುಡುಕಲು ಕೈಕೊಂಡ ನಮ್ಮ ಪ್ರಯಾಣ ಸಫಲವಾಗುವುದೋ ಇಲ್ಲವೋ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ದಯವಿಟ್ಟು ದೇವರಲ್ಲಿ ಈ ವಿಷಯ ಕೇಳು” ಎಂದು ಕೇಳಿಕೊಂಡರು.
6 ಆ ಯಾಜಕನು, “ಸಮಾಧಾನದಿಂದ ಹೋಗಿರಿ; ಯೆಹೋವನು ನಿಮಗೆ ಮಾರ್ಗದರ್ಶನ ಮಾಡುತ್ತಾನೆ” ಎಂದು ಉತ್ತರಿಸಿದನು.
7 ಆ ಐದು ಜನರು ಹೊರಟರು. ಅವರು ಲಯಿಷ್ ನಗರಕ್ಕೆ ಬಂದರು. ಅಲ್ಲಿಯ ಜನರು ಸುರಕ್ಷಿತವಾಗಿರುವುದನ್ನು ಅವರು ನೋಡಿದರು. ಚೀದೋನ್ಯರು ಅವರನ್ನು ಆಳುತ್ತಿದ್ದರು. ಎಲ್ಲವೂ ಶಾಂತವಾಗಿತ್ತು; ಸಮಾಧಾನಕರವಾಗಿತ್ತು; ಸುಖಕರವಾಗಿತ್ತು. ಸಮೀಪದಲ್ಲಿ ಅವರನ್ನು ಪೀಡಿಸುವ ಶತ್ರುಗಳು ಇರಲಿಲ್ಲ. ಅವರು ಚೀದೋನ್ ನಗರದಿಂದ ಬಹಳ ದೂರ ಇದ್ದರು. ಅವರು ಆರಾಮಿನ ಜನರೊಡನೆ ಯಾವ ಒಪ್ಪಂದವನ್ನೂ ಇಟ್ಟುಕೊಂಡಿರಲಿಲ್ಲ.
8 ಆ ಐದು ಜನರು ಚೊರ್ಗಾ, ಎಷ್ಟಾವೋಲ್ ನಗರಗಳಿಗೆ ಹಿಂತಿರುಗಿಹೋದರು. ಅವರ ಬಂಧುಗಳು, “ನೀವು ಯಾವ ವರ್ತಮಾನ ತಂದಿದ್ದೀರಿ?” ಎಂದು ಕೇಳಿದರು.
9 ಈ ಐದು ಜನ, “ನಾವು ಒಂದು ಪ್ರದೇಶವನ್ನು ಹುಡುಕಿದ್ದೇವೆ. ಅದು ಬಹಳ ಚೆನ್ನಾಗಿದೆ. ತಡಮಾಡುವುದು ಬೇಡ. ಬೇಗ ಹೋಗಿ ಆ ಭೂಮಿಯನ್ನು ತೆಗೆದುಕೊಳ್ಳೋಣ. 10 ನೀವು ಆ ಸ್ಥಳಕ್ಕೆ ಬಂದಮೇಲೆ ಅಲ್ಲಿ ಸಾಕಷ್ಟು ಭೂಮಿ ಇದೆ ಎಂಬುದನ್ನು ಅರಿತುಕೊಳ್ಳುತ್ತೀರಿ. ಅಲ್ಲಿ ಎಲ್ಲವೂ ಸಮೃದ್ಧಿಕರವಾಗಿದೆ. ಅಲ್ಲಿಯ ಜನರಿಗೆ ಶತ್ರುಗಳು ಧಾಳಿ ಮಾಡಬಹುದೆಂಬ ಭಯವೇ ಇಲ್ಲ. ಖಂಡಿತವಾಗಿಯೂ ದೇವರು ಆ ಭೂಮಿಯನ್ನು ನಮಗೆ ಕೊಟ್ಟಿದ್ದಾನೆ” ಎಂದು ಉತ್ತರಿಸಿದರು.
11 ದಾನ್ ಕುಲದವರ ಆರುನೂರು ಜನರು ಚೊರ್ಗಾ ಮತ್ತು ಎಷ್ಟಾವೋಲ್ ನಗರಗಳಿಂದ ಹೊರಟರು. ಅವರು ಯುದ್ಧ ಸನ್ನದ್ಧರಾಗಿದ್ದರು. 12 ಲಯಿಷ್ ನಗರಕ್ಕೆ ಹೋಗುವ ಮಾರ್ಗದಲ್ಲಿ ಅವರು ಯೆಹೂದದ ಕಿರ್ಯತ್ಯಾರೀಮಿನ ಬಳಿಯಲ್ಲಿ ನಿಂತುಕೊಂಡರು. ಅವರು ಅಲ್ಲಿ ಒಂದು ಪಾಳೆಯ ಮಾಡಿಕೊಂಡರು. ಆದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ “ದಾನ್ಯರ ಪಾಳೆಯ”ವೆಂಬ ಹೆಸರಿದೆ. 13 ಅಲ್ಲಿಂದ ಆ ಆರುನೂರು ಮಂದಿ ಎಫ್ರಾಯೀಮಿನ ಬೆಟ್ಟಪ್ರದೇಶಕ್ಕೆ ಪ್ರಯಾಣಮಾಡಿ ಮೀಕನ ಮನೆಗೆ ಬಂದರು.
14 ಆಗ ಲಯಿಷ್ ದೇಶವನ್ನು ಸಂಚರಿಸಿ ನೋಡಲು ಹೋಗಿದ್ದ ಐದು ಜನರು ತಮ್ಮ ಬಂಧುಗಳಿಗೆ, “ಇಲ್ಲಿಯ ಒಂದು ಮನೆಯಲ್ಲಿ ಏಫೋದ್ ಇದೆ; ಮನೆದೇವರುಗಳೂ ಇವೆ. ಕೆತ್ತಿ ಮಾಡಿರುವ ಒಂದು ವಿಗ್ರಹವೂ ಇದೆ. ಈಗ ನೀವು ಹೋಗಿ ಅವುಗಳನ್ನು ತೆಗೆದುಕೊಂಡು ಬನ್ನಿರಿ” ಎಂದು ಹೇಳಿದರು. 15 ಅವರು ಯೌವನಸ್ಥನಾದ ಲೇವಿಯು ಇದ್ದ ಮೀಕನ ಮನೆಗೆ ಬಂದು ಇಳಿದುಕೊಂಡರು. ತರುಣನ ಯೋಗಕ್ಷೇಮವನ್ನು ಕೇಳಿದರು. 16 ದಾನ್ಯರ ಆರುನೂರು ಜನರು ಪುರದ್ವಾರದಲ್ಲಿ ನಿಂತಿದ್ದರು. ಅವರು ಆಯುಧಗಳನ್ನು ಹಿಡಿದುಕೊಂಡು ಯುದ್ಧ ಸನ್ನದ್ಧರಾಗಿದ್ದರು. 17-18 ಆ ಐದು ಜನ ಗೂಢಚಾರರು ಮನೆಯೊಳಗೆ ಪ್ರವೇಶ ಮಾಡಿದರು. ಯಾಜಕನು ಹೊರಗೆ ಬಾಗಿಲ ಬಳಿಯಲ್ಲಿ ಯುದ್ಧ ಸನ್ನದ್ಧರಾದ ಆರುನೂರು ಜನರ ಸಂಗಡ ನಿಂತಿದ್ದನು. ಆಗ ಆ ಐದು ಮಂದಿ ಮನೆಯೊಳಗೆ ಹೋಗಿ ಕೆತ್ತನೆಯ ವಿಗ್ರಹವನ್ನೂ ಏಫೋದನ್ನೂ ಬೆಳ್ಳಿವಿಗ್ರಹಗಳನ್ನೂ ಗೃಹದೇವತೆಗಳ ವಿಗ್ರಹಗಳನ್ನೂ ತೆಗೆದುಕೊಂಡರು. ಅವರನ್ನು ಕಂಡ ತರುಣ ಲೇವಿಯು, “ನೀವು ಏನು ಮಾಡುತ್ತಿದ್ದೀರಿ?” ಎಂದು ಕೇಳಿದನು.
19 ಆ ಐದು ಜನರು, “ಸುಮ್ಮನಿರು, ಶಬ್ದ ಮಾಡಬೇಡ. ನಮ್ಮ ಸಂಗಡ ಬಾ. ನಮಗೆ ತಂದೆಯೂ ಯಾಜಕನೂ ಆಗಿರು. ನೀನು ಕೇವಲ ಒಬ್ಬ ಮನುಷ್ಯನ ಯಾಜಕನಾಗಿರುವುದು ಒಳ್ಳೆಯದೋ ಅಥವಾ ಇಸ್ರೇಲರ ಒಂದು ಕುಲದ ಯಾಜಕನಾಗಿರುವುದು ಒಳ್ಳೆಯದೋ ಎಂಬುದನ್ನು ನೀನೇ ವಿಚಾರಮಾಡು” ಎಂದು ಉತ್ತರಿಸಿದರು.
20 ಇದರಿಂದ ಲೇವಿಯನಿಗೆ ಸಂತೋಷವಾಯಿತು. ಅವನು ಏಫೋದನ್ನೂ ಗೃಹದೇವತೆಗಳನ್ನೂ ಕೆತ್ತನೆಯ ಕೆಲಸದ ವಿಗ್ರಹವನ್ನೂ ತೆಗೆದುಕೊಂಡು ದಾನ್ಯರ ಜೊತೆಗೆ ಹೋದನು.
21 ಆಗ ದಾನ್ಯರ ಆರುನೂರು ಜನರು ಲೇವಿಯ ಯಾಜಕನೊಂದಿಗೆ ಮೀಕನ ಮನೆಯನ್ನು ಬಿಟ್ಟುಹೊರಟರು. ಅವರು ತಮ್ಮ ಹೆಂಡತಿಮಕ್ಕಳನ್ನೂ ತಮ್ಮ ದನಕರುಗಳನ್ನೂ ಎಲ್ಲಾ ವಸ್ತುಗಳನ್ನೂ ಮುಂದೆ ಕಳುಹಿಸಿದರು.
22 ಆ ಸ್ಥಳದಿಂದ ದಾನ್ಯರು ಬಹುದೂರ ಹೋದರು. ಮೀಕನೂ ಅವನ ನೆರೆಹೊರೆಯವರೆಲ್ಲರೂ ಒಂದೆಡೆ ಸೇರಿದರು. 23 ಅವರು ದಾನ್ಯರನ್ನು ಬೆನ್ನಟ್ಟಿಕೊಂಡು ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂತಿರುಗಿ ನೋಡಿ ಮೀಕನಿಗೆ, “ನಿನಗೇನಾಗಿದೆ? ಏಕೆ ಕೂಗಿಕೊಳ್ಳುತ್ತಿರುವೆ?” ಎಂದು ಕೇಳಿದರು.
24 ಮೀಕನು, “ದಾನ್ಯರಾದ ನೀವು ನನ್ನ ವಿಗ್ರಹಗಳನ್ನು ತೆಗೆದುಕೊಂಡಿದ್ದೀರಿ. ಆ ವಿಗ್ರಹಗಳನ್ನು ನಾನು ನನಗೋಸ್ಕರ ಮಾಡಿಸಿದ್ದೆ. ನೀವು ನನ್ನ ಯಾಜಕನನ್ನು ಸಹ ತೆಗೆದುಕೊಂಡಿದ್ದೀರಿ. ನನ್ನ ಹತ್ತಿರ ಈಗ ಏನು ಉಳಿದಿದೆ? ಹೀಗೆಲ್ಲ ಮಾಡಿ ನೀವು ನನಗೆ, ‘ನಿನಗೇನಾಗಿದೆ?’ ಎಂದು ಕೇಳಬಹುದೇ?” ಎಂದು ಉತ್ತರಕೊಟ್ಟನು.
25 ಅದಕ್ಕೆ ದಾನ್ಯರು, “ನೀನು ನಮ್ಮ ಜೊತೆ ವಾದವಿವಾದ ಮಾಡದಿರುವುದೇ ಒಳ್ಳೆಯದು. ನಮ್ಮಲ್ಲಿ ಬಹಳ ಸಿಟ್ಟಿನ ಕೆಲವರಿದ್ದಾರೆ. ನೀನು ಹೀಗೆ ಕೂಗಾಡಿದರೆ ಅವರು ನಿಮ್ಮ ಮೇಲೆ ಧಾಳಿ ಮಾಡಬಹುದು. ಆಗ ನೀನು ಮತ್ತು ನಿನ್ನ ಕುಟುಂಬದವರು ಸತ್ತು ಹೋಗುವಿರಿ” ಎಂದು ಪ್ರತ್ಯುತ್ತರ ಕೊಟ್ಟರು.
26 ಆಮೇಲೆ ದಾನ್ಯರು ಮತ್ತೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಅವರು ತುಂಬ ಬಲಿಷ್ಠರೆಂದೂ ತನ್ನಿಂದ ಏನೂ ಮಾಡಲು ಸಾಧ್ಯವಿಲ್ಲವೆಂದೂ ಮೀಕನು ತಿಳಿದುಕೊಂಡು ಮನೆಗೆ ಹಿಂದಿರುಗಿದನು.
27 ಮೀಕನು ಮಾಡಿಸಿದ ವಿಗ್ರಹಗಳನ್ನು ದಾನ್ಯರು ತೆಗೆದುಕೊಂಡರು. ಅವರು ಮೀಕನ ಜೊತೆಗಿದ್ದ ಯಾಜಕನನ್ನು ಸಹ ತೆಗೆದುಕೊಂಡು ಹೋದರು. ಅವರು ಲಯಿಷಿಗೆ ಬಂದು ಅಲ್ಲಿನ ಜನರ ಮೇಲೆ ಧಾಳಿಮಾಡಿದರು. ಆ ಜನರು ಶಾಂತಿಯಿಂದ ಇದ್ದರು. ಅವರು ಧಾಳಿಯನ್ನು ನಿರೀಕ್ಷಿಸಿರಲಿಲ್ಲ. ದಾನ್ಯರು ತಮ್ಮ ಖಡ್ಗಗಳಿಂದ ಆ ಜನರನ್ನು ಕೊಂದುಹಾಕಿದರು. ಆಮೇಲೆ ಆ ನಗರವನ್ನು ಸುಟ್ಟುಬಿಟ್ಟರು. 28 ಲಯಿಷಿನಲ್ಲಿ ವಾಸಮಾಡುತ್ತಿದ್ದ ಜನರನ್ನು ರಕ್ಷಿಸುವವರು ಯಾರೂ ಇರಲಿಲ್ಲ. ಅವರು ಚೀದೋನ್ ನಗರದಿಂದ ಬಹುದೂರದಲ್ಲಿದ್ದ ಕಾರಣ ಅವರೂ ಬರುವಂತಿರಲಿಲ್ಲ. ಲಯಿಷಿನವರು ಆರಾಮಿನ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಂಡಿರಲಿಲ್ಲ. ಹೀಗಾಗಿ ಅವರೂ ಸಹಾಯಕ್ಕೆ ಬರಲಿಲ್ಲ. ಬೇತ್‌ರೆಹೋಬಿನ ಕಣಿವೆಯಲ್ಲಿದ್ದ ಈ ನಗರವನ್ನು ದಾನ್ಯರು ಹೊಸದಾಗಿ ಕಟ್ಟಿದರು. ಆ ನಗರವು ಅವರ ವಾಸಸ್ಥಾನವಾಯಿತು. 29 ದಾನ್ಯರು ಆ ನಗರಕ್ಕೆ ಒಂದು ಹೊಸ ಹೆಸರನ್ನು ಕೊಟ್ಟರು. ಹಿಂದೆ ಅದರ ಹೆಸರು ಲಯಿಷ್ ಎಂದಿತ್ತು. ಆದರೆ ಅವರು ಅದಕ್ಕೆ ದಾನ್ ಎಂದು ಹೆಸರಿಟ್ಟರು. ಅವರು ತಮ್ಮ ಪೂರ್ವಿಕನಾದ ದಾನನ ಸ್ಮರಣಾರ್ಥವಾಗಿ ಆ ಹೆಸರನ್ನಿಟ್ಟರು. ದಾನನು ಇಸ್ರೇಲನ ಮಕ್ಕಳಲ್ಲಿ ಒಬ್ಬನು.
30 ದಾನ್ಯರು ದಾನ್ ನಗರದಲ್ಲಿ ಆ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಅವರು ಗೇರ್ಷೋಮನ ಮಗನಾದ ಯೆಹೋನಾತಾನನನ್ನು ತಮ್ಮ ಯಾಜಕನನ್ನಾಗಿ ಮಾಡಿಕೊಂಡರು. ಗೇರ್ಷೋಮನು ಮೋಶೆಯ[a] ಮಗನಾಗಿದ್ದನು. ಇಸ್ರೇಲರನ್ನು ಸೆರೆಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋಗುವವರೆಗೆ ಯೆಹೋನಾತಾನನು ಮತ್ತು ಅವನ ಮಕ್ಕಳು ದಾನ್ಯರ ಯಾಜಕರಾಗಿದ್ದರು. 31 ಮೀಕನು ಮಾಡಿದ್ದ ಆ ವಿಗ್ರಹಗಳನ್ನು ದಾನ್ಯರು ಪೂಜಿಸಿದರು. ಶೀಲೋವಿನಲ್ಲಿ ದೇವಸ್ಥಾನವಿದ್ದ ಕಾಲದಲ್ಲೆಲ್ಲಾ ಅವರು ಆ ವಿಗ್ರಹಗಳನ್ನು ಪೂಜಿಸಿದರು.
Kannada Holy Bible: Easy-to-Read Version. All rights reserved. © 1997 Bible League International