Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ನ್ಯಾಯಸ್ಥಾಪಕರು 3-5

1-2 ಇಸ್ರೇಲರ ಪ್ರದೇಶವನ್ನು ಬಿಟ್ಟುಹೋಗುವಂತೆ ಯೆಹೋವನು ಉಳಿದೆಲ್ಲ ಜನಾಂಗದವರನ್ನು ಒತ್ತಾಯಪಡಿಸಲಿಲ್ಲ. ಯೆಹೋವನು ಇಸ್ರೇಲರನ್ನು ಪರೀಕ್ಷಿಸಬೇಕೆಂದಿದ್ದನು. ಈಗ ಬದುಕಿದ್ದ ಇಸ್ರೇಲರಲ್ಲಿ ಯಾರೂ ಕಾನಾನ್ಯರ ಭೂಮಿಯನ್ನು ತೆಗೆದುಕೊಳ್ಳುವುದಕ್ಕಾಗಿ ಯುದ್ಧ ಮಾಡಿರಲಿಲ್ಲ. ಅದಕ್ಕಾಗಿ ಯೆಹೋವನು ಆ ಬೇರೆ ಜನಾಂಗದವರನ್ನು ಅವರ ದೇಶದಲ್ಲಿ ವಾಸಿಸಲು ಬಿಟ್ಟನು. (ಆ ಯುದ್ಧಗಳಲ್ಲಿ ಭಾಗವಹಿಸದ ಈ ಇಸ್ರೇಲರಿಗೆ ಯುದ್ಧ ಮಾಡುವುದನ್ನು ಕಲಿತುಕೊಳ್ಳಲು ಒಂದು ಅವಕಾಶ ದೊರೆಯುವಂತೆ ಯೆಹೋವನು ಹೀಗೆ ಮಾಡಿದ್ದನು.) ಯೆಹೋವನು ಆ ಭೂಮಿಯಲ್ಲಿ ವಾಸಿಸಲು ಬಿಟ್ಟ ಜನಾಂಗಗಳ ಹೆಸರುಗಳು ಇಂತಿವೆ: ಐದು ಮಂದಿ ಫಿಲಿಷ್ಟಿಯ ಪ್ರಭುಗಳು, ಎಲ್ಲಾ ಕಾನಾನ್ಯರು, ಚೀದೋನ್ಯರು, ಲೆಬನೋನ್ ಪರ್ವತಾವಳಿಯಲ್ಲಿ ಬಾಳ್‌ಹೆರ್ಮೊನ್ ಬೆಟ್ಟದಿಂದ ಲೆಬೂಹಮಾತಿನ ದಾರಿಯವರೆಗೆ ವಾಸವಾಗಿರುವ ಹಿವ್ವಿಯರು. ಯೆಹೋವನು ಇಸ್ರೇಲರನ್ನು ಪರೀಕ್ಷಿಸುವುದಕ್ಕಾಗಿ ಬೇರೆ ಜನಾಂಗದವರನ್ನು ಆ ಪ್ರದೇಶದಲ್ಲಿ ಬಿಟ್ಟಿದ್ದನು. ಯೆಹೋವನು ಮೋಶೆಯ ಮೂಲಕ ಅವರ ಪೂರ್ವಿಕರಿಗೆ ಕೊಟ್ಟ ಆಜ್ಞೆಗಳನ್ನು ಇಸ್ರೇಲರು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಆತನು ನೋಡಬೇಕೆಂದಿದ್ದನು.

ಇಸ್ರೇಲರು ಕಾನಾನ್ಯ, ಹಿತ್ತಿಯ, ಅಮೋರಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಜನಾಂಗಗಳೊಡನೆ ವಾಸಮಾಡತೊಡಗಿದರು. ಇಸ್ರೇಲರು ಅವರ ಕನ್ಯೆಯರನ್ನು ಮದುವೆಯಾಗ ತೊಡಗಿದರು ಮತ್ತು ತಮ್ಮ ಕನ್ಯೆಯರನ್ನು ಅವರ ಕುಮಾರರಿಗೆ ಮದುವೆ ಮಾಡಿಕೊಟ್ಟರು ಮತ್ತು ಅವರ ದೇವರುಗಳನ್ನು ಪೂಜಿಸಲು ಪ್ರಾರಂಭಿಸಿದರು.

ಒತ್ನೀಯೇಲ್ ಪ್ರಥಮ ನ್ಯಾಯಾಧೀಶ

ಇಸ್ರೇಲರ ದುಷ್ಕೃತ್ಯಗಳನ್ನು ಯೆಹೋವನು ನೋಡಿದನು. ಇಸ್ರೇಲರು ತಮ್ಮ ದೇವರಾದ ಯೆಹೋವನನ್ನು ಮರೆತು ಬಾಳ್ ಮತ್ತು ಅಶೇರ್ ಎಂಬ ಸುಳ್ಳುದೇವರುಗಳ ಸೇವೆ ಮಾಡುತ್ತಿದ್ದರು. ಇಸ್ರೇಲರ ಮೇಲೆ ಯೆಹೋವನು ಕೋಪಿಸಿಕೊಂಡಿದ್ದನು. ಹರೇಮ್‌ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮ್ ಎಂಬವನು ಅವರನ್ನು ಸೋಲಿಸುವುದಕ್ಕೂ ಆಳುವುದಕ್ಕೂ ಯೆಹೋವನು ಆಸ್ಪದ ಕೊಟ್ಟನು. ಇಸ್ರೇಲಿನ ಜನರು ಎಂಟು ವರ್ಷ ಆ ಅರಸನ ಅಧೀನದಲ್ಲಿದ್ದರು. ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು. ಅವರನ್ನು ರಕ್ಷಿಸಲು ಯೆಹೋವನು ಒಬ್ಬ ಮನುಷ್ಯನನ್ನು ಕಳುಹಿಸಿದನು. ಆ ಮನುಷ್ಯನ ಹೆಸರು ಒತ್ನೀಯೇಲ. ಅವನು ಕೆನಜ ಎಂಬವನ ಮಗನು. ಕೆನಜನು ಕಾಲೇಬನ ತಮ್ಮ. ಒತ್ನೀಯೇಲನು ಇಸ್ರೇಲರನ್ನು ರಕ್ಷಿಸಿದನು. 10 ಒತ್ನೀಯೇಲನ ಮೇಲೆ ಯೆಹೋವನ ಆತ್ಮ ಬಂದಿತು; ಆದ್ದರಿಂದ ಅವನು ಇಸ್ರೇಲರ ನ್ಯಾಯಾಧೀಶನಾದನು. ಒತ್ನೀಯೇಲನು ಇಸ್ರೇಲರನ್ನು ಯುದ್ಧಕ್ಕೆ ಕರೆದೊಯ್ದನು. ಅರಾಮಿನ ಅರಸನಾದ ಕೂಷನ್ ರಿಷಾತಯಿಮ್‌ನನ್ನು ಸೋಲಿಸಲು ಯೆಹೋವನು ಒತ್ನೀಯೇಲನಿಗೆ ಸಹಾಯ ಮಾಡಿದನು. 11 ಆದ್ದರಿಂದ ನಲವತ್ತು ವರ್ಷಗಳ ಕಾಲದವರೆಗೆ ಅಂದರೆ ಕೆನಜನ ಮಗನಾದ ಒತ್ನೀಯೇಲನ ಮರಣದವರೆಗೆ ಆ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು.

ನ್ಯಾಯಾಧೀಶ ಏಹೂದ

12 ಇಸ್ರೇಲರು ಪುನಃ ದುಷ್ಕೃತ್ಯಗಳನ್ನು ಮಾಡುವುದನ್ನು ಯೆಹೋವನು ನೋಡಿದನು. ಆದ್ದರಿಂದ ಆತನು ಮೋವಾಬ್ಯರ ಅರಸನಾದ ಎಗ್ಲೋನನಿಗೆ ಇಸ್ರೇಲರನ್ನು ಸೋಲಿಸುವ ಶಕ್ತಿಯನ್ನು ಕೊಟ್ಟನು. 13 ಇವನು ಅಮ್ಮೋನಿಯರಿಂದ ಮತ್ತು ಅಮಾಲೇಕ್ಯರಿಂದ ಸಹಾಯವನ್ನು ಪಡೆದನು. ಅವರು ಅವನೊಂದಿಗೆ ಸೇರಿಕೊಂಡು ಇಸ್ರೇಲರ ಮೇಲೆ ಧಾಳಿಮಾಡಿದರು. ಎಗ್ಲೋನ್ ಮತ್ತು ಅವನ ಸೈನಿಕರು ಇಸ್ರೇಲರನ್ನು ಸೋಲಿಸಿ ಅವರನ್ನು ಜೆರಿಕೊ ಎಂಬುವ ಖರ್ಜೂರ ನಗರದಿಂದ ಹೊರದೂಡಿದರು. 14 ಮೋವಾಬ್ಯರ ಅರಸನಾದ ಎಗ್ಲೋನನು ಇಸ್ರೇಲರ ಮೇಲೆ ಹದಿನೆಂಟು ವರ್ಷ ಆಳ್ವಿಕೆ ಮಾಡಿದನು.

15 ಜನರು ಯೆಹೋವನಿಗೆ ಮೊರೆಯಿಟ್ಟರು. ಇಸ್ರೇಲರನ್ನು ರಕ್ಷಿಸಲು ಯೆಹೋವನು ಒಬ್ಬ ಮನುಷ್ಯನನ್ನು ಕಳುಹಿಸಿದನು. ಆ ಮನುಷ್ಯನ ಹೆಸರು ಏಹೂದ. ಅವನು ಎಡಚನಾಗಿದ್ದನು. ಅವನು ಬೆನ್ಯಾಮೀನ್ ಕುಲದ ಗೇರ ಎಂಬವನ ಮಗನಾಗಿದ್ದನು. ಇಸ್ರೇಲರು ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪಕಾಣಿಕೆಯನ್ನು ಕೊಡಲು ಏಹೂದನನ್ನು ಕಳುಹಿಸಿದರು. 16 ಏಹೂದನು ತನಗೊಂದು ಖಡ್ಗವನ್ನು ಮಾಡಿಕೊಂಡನು. ಆ ಖಡ್ಗವು ಇಬ್ಬಾಯಿ ಖಡ್ಗವಾಗಿದ್ದು ಹದಿನೆಂಟು ಅಂಗುಲ ಉದ್ದವಾಗಿತ್ತು. ಅದನ್ನು ಅವನು ತನ್ನ ಬಲತೊಡೆಗೆ ಕಟ್ಟಿಕೊಂಡು ತನ್ನ ಬಟ್ಟೆಗಳಿಂದ ಮುಚ್ಚಿಕೊಂಡನು.

17 ಏಹೂದನು ಮೋವಾಬ್ಯರ ಅರಸನಾದ ಎಗ್ಲೋನನ ಹತ್ತಿರ ಬಂದು ಅವನಿಗೆ ಕಪ್ಪದ ಹಣವನ್ನು ಕೊಟ್ಟನು. ಎಗ್ಲೋನನು ಬಹಳ ದಪ್ಪ ಮನುಷ್ಯನಾಗಿದ್ದನು. 18 ಏಹೂದನು ಎಗ್ಲೋನನಿಗೆ ಹಣವನ್ನು ಕೊಟ್ಟ ತರುವಾಯ ಅದನ್ನು ಹೊತ್ತುಕೊಂಡು ಬಂದ ಜನರನ್ನು ಮನೆಗೆ ಕಳುಹಿಸಿಬಿಟ್ಟನು. 19 ಏಹೂದನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂತಿರುಗಿ ಎಗ್ಲೋನನ ಬಳಿಗೆ ಬಂದು, “ಅರಸನೇ, ನಿನಗೆ ತಿಳಿಸಬೇಕಾದ ಒಂದು ರಹಸ್ಯ ಸಂದೇಶವಿದೆ” ಎಂದು ಹೇಳಿದನು.

ಅರಸನು, “ಸುಮ್ಮನಿರು” ಎಂದು ಹೇಳಿ ತನ್ನ ಸೇವಕರೆಲ್ಲರನ್ನು ಕೋಣೆಯಿಂದ ಆಚೆ ಕಳುಹಿಸಿದನು. 20 ಏಹೂದನು ಅರಸನಾದ ಎಗ್ಲೋನನ ಹತ್ತಿರಕ್ಕೆ ಹೋದನು. ಎಗ್ಲೋನನು ತಂಪಾದ ಅರಮನೆಯ ಮಹಡಿಯ ಕೋಣೆಯಲ್ಲಿ ಒಬ್ಬಂಟಿಗನಾಗಿ ಕುಳಿತಿದ್ದನು.

ಆಗ ಏಹೂದನು, “ದೇವರಿಂದ ನಾನು ನಿನಗೆ ಒಂದು ಸಂದೇಶವನ್ನು ತಂದಿದ್ದೇನೆ” ಎಂದನು. ಅರಸನು ತನ್ನ ಸಿಂಹಾಸನದಿಂದ ಎದ್ದುನಿಂತನು. ಅವನು ಏಹೂದನಿಗೆ ತುಂಬ ಹತ್ತಿರದಲ್ಲಿದ್ದನು. 21 ಅರಸನು ತನ್ನ ಸಿಂಹಾಸನದಿಂದ ಎದ್ದುನಿಂತಾಗ ಏಹೂದನು ತನ್ನ ಎಡಗೈಯನ್ನು ಚಾಚಿ ತನ್ನ ಬಲತೊಡೆಗೆ ಕಟ್ಟಿದ್ದ ಕತ್ತಿಯನ್ನು ಹೊರತೆಗೆದನು. ಏಹೂದನು ಆ ಖಡ್ಗವನ್ನು ಅರಸನ ಹೊಟ್ಟೆಗೆ ತಿವಿದನು. 22 ಏಹೂದನು ಕತ್ತಿಯನ್ನು ಜೋರಾಗಿ ಒತ್ತಿದ್ದರಿಂದ ಅದು ಹಿಡಿಯ ಸಹಿತ ಮುಳುಗಿ ಹೋಯಿತು. ಅರಸನ ಕೊಬ್ಬಿದ ದೇಹದಲ್ಲಿ ಕತ್ತಿಯು ಸಂಪೂರ್ಣವಾಗಿ ಮುಚ್ಚಿಕೊಂಡಿತು. ಆದ್ದರಿಂದ ಏಹೂದನು ಎಗ್ಲೋನನ ಹೊಟ್ಟೆಯಲ್ಲಿಯೇ ಖಡ್ಗವನ್ನು ಬಿಟ್ಟನು. ಮಲವು ಹೊರಗೆ ಬಂದಿತು.

23 ಏಹೂದನು ಕೋಣೆಯ ಹೊರಗೆ ಹೋಗಿ ಬಾಗಿಲು ಹಾಕಿಕೊಂಡು ಬೀಗಹಾಕಿದನು. 24 ಏಹೂದನು ಹೋದ ಕೂಡಲೆ ಸೇವಕರು ಹಿಂದಿರುಗಿ ಬಂದರು. ಕೋಣೆಯ ಬಾಗಿಲಿಗೆ ಬೀಗ ಹಾಕಿದ್ದನ್ನು ಸೇವಕರು ನೋಡಿದರು. “ಅರಸನು ತನ್ನ ವಿಶ್ರಾಂತಿ ಕೋಣೆಯ ಶೌಚಾಲಯದಲ್ಲಿ ಇರಬಹುದು” ಎಂದುಕೊಂಡರು. 25 ಹೀಗಾಗಿ ಸೇವಕರು ಬಹಳ ಹೊತ್ತಿನವರೆಗೆ ಅರಸನಿಗಾಗಿ ಕಾಯುತ್ತಾ ಚಿಂತೆಗೊಳಗಾದರು. ಅವರು ಬೀಗದ ಕೈಯನ್ನು ತಂದು ಬಾಗಿಲುಗಳನ್ನು ತೆರೆದರು. ಸೇವಕರು ಒಳಗೆ ಹೋದಾಗ ತಮ್ಮ ಅರಸನು ನೆಲದ ಮೇಲೆ ಸತ್ತು ಬಿದ್ದಿರುವುದನ್ನು ಕಂಡರು.

26 ಸೇವಕರು ಅರಸನಿಗಾಗಿ ಕಾಯುತ್ತಾ ನಿಂತಿರುವಾಗ ತಪ್ಪಿಸಿಕೊಂಡು ಹೋಗುವುದಕ್ಕೆ ಏಹೂದನಿಗೆ ಅವಕಾಶ ಸಿಕ್ಕಿತು. ಏಹೂದನು ವಿಗ್ರಹಗಳ ಪಕ್ಕದಿಂದ ಹಾದು ಹೊಳೆದಾಟಿ 27 ಸೆಯೀರಾ ಎಂಬ ಸ್ಥಳಕ್ಕೆ ಬಂದನು. ಅಲ್ಲಿ ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿ ಅವನು ತುತ್ತೂರಿಯನ್ನು ಊದಿದನು. ಇಸ್ರೇಲರು ತುತ್ತೂರಿಯ ಧ್ವನಿಯನ್ನು ಕೇಳಿ ಬೆಟ್ಟದಿಂದ ಇಳಿದು ಏಹೂದನನ್ನು ಹಿಂಬಾಲಿಸಿ ಹೋದರು. 28 ಏಹೂದನು ಇಸ್ರೇಲರಿಗೆ, “ನನ್ನನ್ನು ಹಿಂಬಾಲಿಸಿರಿ, ನಮ್ಮ ಶತ್ರುಗಳಾದ ಮೋವಾಬ್ಯರನ್ನು ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡಿದ್ದಾನೆ” ಎಂದನು.

ಇಸ್ರೇಲರು ಏಹೂದನನ್ನು ಹಿಂಬಾಲಿಸಿದರು. ಅವರು ಜೋರ್ಡನ್ ನದಿಯ ಹಾಯಗಡಗಳನ್ನೆಲ್ಲಾ ವಶಪಡಿಸಿಕೊಂಡರು. ಆ ಸ್ಥಳಗಳು ಮೋವಾಬಿಗೆ ಹೋಗುವ ದಾರಿಯಲ್ಲಿದ್ದವು. ಜೋರ್ಡನ್ ನದಿಯನ್ನು ದಾಟಿಹೋಗಲು ಇಸ್ರೇಲರು ಯಾರಿಗೂ ಅವಕಾಶ ಕೊಡಲಿಲ್ಲ. 29 ಇಸ್ರೇಲರು ದೃಢಕಾಯರೂ ಧೈರ್ಯಶಾಲಿಗಳೂ ಆಗಿದ್ದ ಹತ್ತು ಸಾವಿರ ಮಂದಿ ಮೋವಾಬ್ಯರನ್ನು ಕೊಂದುಹಾಕಿದರು. ಒಬ್ಬ ಮೋವಾಬ್ಯನೂ ತಪ್ಪಿಸಿಕೊಳ್ಳಲಿಲ್ಲ. 30 ಅಂದಿನಿಂದ ಇಸ್ರೇಲರು ಮೋವಾಬ್ಯರನ್ನು ಆಳಲು ಪ್ರಾರಂಭಿಸಿದರು. ಆ ಪ್ರದೇಶದಲ್ಲಿ ಎಂಭತ್ತು ವರ್ಷಗಳವರೆಗೆ ಶಾಂತಿ ನೆಲೆಸಿತು.

ನ್ಯಾಯಾಧೀಶನಾದ ಶಮ್ಗರ

31 ಏಹೂದನು ಇಸ್ರೇಲರನ್ನು ರಕ್ಷಿಸಿದ ತರುವಾಯ, ಇನ್ನೊಬ್ಬ ವ್ಯಕ್ತಿಯು ಇಸ್ರೇಲರನ್ನು ರಕ್ಷಿಸಿದನು. ಅವನು ಅನಾತನ[a] ಮಗನಾದ ಶಮ್ಗರ. ಶಮ್ಗರನು ಎದ್ದು ಎತ್ತಿನ ಮುಳ್ಳುಗೋಲಿನಿಂದ ಆರುನೂರು ಮಂದಿ ಫಿಲಿಷ್ಟಿಯರನ್ನು ಕೊಂದನು.

ದೆಬೋರಾ—ಮಹಿಳಾ ನ್ಯಾಯಾಧೀಶೆ

ಏಹೂದನು ಮರಣಹೊಂದಿದ ಮೇಲೆ ಇಸ್ರೇಲರು ಮತ್ತೆ ಯೆಹೋವನ ವಿರೋಧವಾಗಿ ಪಾಪ ಮಾಡಿದರು. ಆದ್ದರಿಂದ ಕಾನಾನ್ಯರ ಅರಸನಾದ ಯಾಬೀನನು ಇಸ್ರೇಲರನ್ನು ಸೋಲಿಸುವಂತೆ ಯೆಹೋವನು ಅವಕಾಶ ಮಾಡಿದನು. ಯಾಬೀನನು ಹಾಚೋರ್ ಎಂಬ ನಗರದಲ್ಲಿ ಆಳುತ್ತಿದ್ದನು. ಸೀಸೆರ ಎಂಬವನು ಅವನ ಸೇನಾಧಿಪತಿಯಾಗಿದ್ದನು. ಸೀಸೆರನು ಹರೋಷೆತ್ ಹಗ್ಗೋಯಿಮ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದನು. ಸೀಸೆರನ ಹತ್ತಿರ ಒಂಭೈನೂರು ಕಬ್ಬಿಣದ ರಥಗಳಿದ್ದವು. ಅವನು ಇಪ್ಪತ್ತು ವರ್ಷಗಳ ಕಾಲ ಇಸ್ರೇಲರನ್ನು ತುಂಬ ಬಾಧಿಸಿದನು. ಆದ್ದರಿಂದ ಇಸ್ರೇಲರು ಸಹಾಯಕ್ಕಾಗಿ ಯೆಹೋವನಲ್ಲಿ ಮೊರೆಯಿಟ್ಟರು.

ಆಗ ದೆಬೋರಳೆಂಬ ಒಬ್ಬ ಪ್ರವಾದಿನಿ ಇದ್ದಳು. ಅವಳು ಲಪ್ಪೀದೋತ್ ಎಂಬವನ ಪತ್ನಿಯಾಗಿದ್ದಳು. ಅವಳು ಆಗ ಇಸ್ರೇಲಿನ ನ್ಯಾಯಾಧೀಶೆಯಾಗಿದ್ದಳು. ಒಂದು ದಿನ, ಆಕೆ ದೆಬೋರಳ ಖರ್ಜೂರದ ಮರವೆಂದು ಪ್ರಸಿದ್ಧವಾದ ಮರದ ಕೆಳಗೆ ಕುಳಿತಿದ್ದಳು. ಆಗ ಇಸ್ರೇಲಿನ ಜನರು ಆಕೆಯ ಹತ್ತಿರ ಬಂದು, “ಸೀಸೆರನ ಬಗ್ಗೆ ಏನು ಮಾಡಬೇಕು?” ಎಂದು ಕೇಳಿದರು. ದೆಬೋರಳ ಖರ್ಜೂರಮರವು ಎಫ್ರಾಯೀಮ್ ಬೆಟ್ಟಪ್ರದೇಶದ ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿ ಇದೆ. ದೆಬೋರಳು ತನ್ನನ್ನು ಬಂದು ಕಾಣಬೇಕೆಂದು ಬಾರಾಕನೆಂಬ ವ್ಯಕ್ತಿಗೆ ಹೇಳಿ ಕಳುಹಿಸಿದಳು. ಬಾರಾಕನು ಅಬೀನೋವಮನ ಮಗ. ಬಾರಾಕನು ನಫ್ತಾಲಿ ಪ್ರದೇಶದ ಕೆದೆಷ್ ಎಂಬ ಊರಲ್ಲಿ ವಾಸಮಾಡುತ್ತಿದ್ದನು. ದೆಬೋರಳು ಬಾರಾಕನಿಗೆ, “ಇಸ್ರೇಲಿನ ದೇವರಾದ ಯೆಹೋವನು, ‘ನೀನು ಹೋಗಿ ನಫ್ತಾಲಿ ಮತ್ತು ಜೆಬುಲೂನ್ ಕುಲಗಳವರ ಹತ್ತು ಸಾವಿರ ಜನರನ್ನು ಸೇರಿಸಿ ಅವರನ್ನು ತಾಬೋರ್ ಬೆಟ್ಟಕ್ಕೆ ಕರೆದುಕೊಂಡು ಹೋಗು. ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ ಅವನ ರಥಗಳನ್ನೂ ಅವನ ಸೈನ್ಯವನ್ನೂ ಕೀಷೋನ್ ನದಿಗೆ ಬರುವಂತೆ ಮಾಡುತ್ತೇನೆ. ಅಲ್ಲಿ ನೀನು ಸೀಸೆರನನ್ನು ಸೋಲಿಸುವಂತೆ ಮಾಡುತ್ತೇನೆ’ ಎಂದು ಹೇಳಿದ್ದಾನೆ” ಎಂದಳು.

ಆಗ ಬಾರಾಕನು ದೆಬೋರಳಿಗೆ, “ನೀನು ನನ್ನೊಂದಿಗೆ ಬಂದರೆ ನಾನು ಹೋಗುವೆನು; ನೀನು ನನ್ನೊಂದಿಗೆ ಬರದಿದ್ದರೆ ನಾನು ಹೋಗುವುದಿಲ್ಲ” ಎಂದನು.

ಅದಕ್ಕೆ ದೆಬೋರಳು, “ನಿಸ್ಸಂದೇಹವಾಗಿ ನಾನು ನಿನ್ನೊಂದಿಗೆ ಬರುತ್ತೇನೆ. ಆದರೆ ನಿನ್ನ ಈ ಮನೋಭಾವದಿಂದಾಗಿ ಸೀಸೆರನನ್ನು ಸೋಲಿಸಿದ ಗೌರವ ನಿನಗೆ ಸಲ್ಲುವುದಿಲ್ಲ. ಒಬ್ಬ ಹೆಂಗಸು ಸೀಸೆರನನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ” ಎಂದು ಉತ್ತರಿಸಿದಳು.

ದೆಬೋರಳು ಬಾರಾಕನ ಸಂಗಡ ಕೆದೆಷ್ ನಗರಕ್ಕೆ ಹೋದಳು. 10 ಕೆದೆಷ್ ನಗರದಲ್ಲಿ ಬಾರಾಕನು ಜೆಬುಲೂನ್ ಮತ್ತು ನಫ್ತಾಲಿ ಕುಲದವರನ್ನು ಒಟ್ಟಿಗೆ ಸೇರಿಸಿ ಆ ಕುಲಗಳಿಂದ ಹತ್ತು ಸಾವಿರ ಜನರನ್ನು ತನ್ನೊಂದಿಗೆ ಬರುವಂತೆ ಮಾಡಿದನು. ದೆಬೋರಳು ಸಹ ಬಾರಾಕನ ಸಂಗಡ ಹೋದಳು.

11 ಹೆಬೆರನೆಂಬ ಒಬ್ಬ ಮನುಷ್ಯನಿದ್ದನು. ಅವನು ಕೇನ್ಯರ ಕುಲದವನಾಗಿದ್ದನು. ಅವನು ಉಳಿದ ಕೇನ್ಯರನ್ನು ಬಿಟ್ಟು ಚಾನನ್ನೀಮ್ ಎಂಬ ಊರಲ್ಲಿ ಓಕ್ ವೃಕ್ಷದ ಬಳಿ ಮನೆ ಮಾಡಿಕೊಂಡಿದ್ದನು. (ಕೇನ್ಯರು ಹೋಬಾಬನ ಸಂತತಿಯವರಾಗಿದ್ದರು. ಹೋಬಾಬನು ಮೋಶೆಯ ಮಾವನಾಗಿದ್ದನು.) ಚಾನನ್ನೀಮ್ ಕೆದೆಷ್ ನಗರದ ಸಮೀಪದಲ್ಲಿತ್ತು.

12 ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟಕ್ಕೆ ಬಂದಿದ್ದಾನೆಂಬ ಸಮಾಚಾರ ಸೀಸೆರನಿಗೆ ತಿಳಿಯಿತು. 13 ಸೀಸೆರನು ತನ್ನ ಒಂಭೈನೂರು ಕಬ್ಬಿಣದ ರಥಗಳನ್ನು ಒಟ್ಟುಗೂಡಿಸಿದನು. ಸೀಸೆರನು ತನ್ನ ಎಲ್ಲಾ ಜನರನ್ನು ತನ್ನ ಜೊತೆ ಸೇರಿಸಿಕೊಂಡನು. ಅವರು ಹರೋಷೆತ್ ಹೆಗ್ಗೋಯಿಮ್‌ನಿಂದ ಕೀಷೋನ್ ನದಿಗೆ ನಡೆದರು.

14 ಆಗ ದೆಬೋರಳು ಬಾರಾಕನಿಗೆ, “ಈ ದಿನ ಯೆಹೋವನು ಸೀಸೆರನನ್ನು ಸೋಲಿಸಲು ನಿನಗೆ ಸಹಾಯ ಮಾಡುತ್ತಾನೆ. ಯೆಹೋವನು ನಿನಗಾಗಿ ದಾರಿಯನ್ನು ಸುಗಮಗೊಳಿಸಿದ್ದಾನೆಂಬುದು ನಿನಗೆ ಖಚಿತವಾಗಿ ಗೊತ್ತಿದೆ” ಎಂದು ಹೇಳಿದಳು. ಆದ್ದರಿಂದ ಬಾರಾಕನು ಹತ್ತು ಸಾವಿರ ಜನರೊಂದಿಗೆ ತಾಬೋರ್ ಬೆಟ್ಟದಿಂದ ಇಳಿದನು. 15 ಬಾರಾಕ ಮತ್ತು ಅವನ ಜನರು ಸೀಸೆರನ ಮೇಲೆ ಧಾಳಿ ಮಾಡಿದರು. ಯೆಹೋವನು ಸೀಸೆರನಲ್ಲಿ ಮತ್ತು ಅವನ ಸೈನ್ಯದಲ್ಲಿ ಮತ್ತು ಅವನ ರಥಗಳಲ್ಲಿ ಗಲಿಬಿಲಿ ಉಂಟುಮಾಡಿದನು. ಏನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ. ಬಾರಾಕ ಮತ್ತು ಅವನ ಸೈನಿಕರು ಸೀಸೆರನ ಸೈನ್ಯವನ್ನು ಸೋಲಿಸಿದರು. ಆದರೆ ಸೀಸೆರನು ತನ್ನ ರಥವನ್ನು ಬಿಟ್ಟು ಓಡಿಹೋದನು. 16 ಬಾರಾಕ ಮತ್ತು ಅವನ ಜನರು ಸೀಸೆರನ ಸೈನ್ಯವನ್ನು ಮತ್ತು ರಥಗಳನ್ನು ಹರೋಷೆತ್ ಹಗ್ಗೋಯಿಮ್‌ನವರೆಗೆ ಬೆನ್ನಟ್ಟಿದರು. ಬಾರಾಕ ಮತ್ತು ಅವನ ಜನರು ಖಡ್ಗದಿಂದ ಸೀಸೆರನ ಜನರನ್ನು ಕೊಂದುಹಾಕಿದರು. ಸೀಸೆರನ ಜನರಲ್ಲಿ ಒಬ್ಬನನ್ನೂ ಜೀವಂತವಾಗಿ ಬಿಡಲಿಲ್ಲ.

17 ಆದರೆ ಸೀಸೆರನು ಓಡಿಹೋದನು. ಅವನು ಯಾಯೇಲ ಎಂಬ ಒಬ್ಬ ಮಹಿಳೆ ವಾಸವಾಗಿದ್ದ ಗುಡಾರಕ್ಕೆ ಬಂದನು. ಯಾಯೇಲಳು ಹೆಬೆರನ ಹೆಂಡತಿ. ಹೆಬೆರನು ಕೇನ್ಯನಾಗಿದ್ದನು. ಹಾಚೋರಿನ ಅರಸನಾದ ಯಾಬೀನ ಮತ್ತು ಕೇನ್ಯನಾದ ಹೆಬೆರನ ಕುಟುಂಬಗಳ ಮಧ್ಯೆ ಒಳ್ಳೆಯ ಸಮಾಧಾನವಿದ್ದಿತು. ಅದಕ್ಕಾಗಿ ಸೀಸೆರನು ಯಾಯೇಲಳ ಗುಡಾರಕ್ಕೆ ಓಡಿಹೋಗಿದ್ದನು. 18 ಸೀಸೆರನು ಬರುವುದನ್ನು ಯಾಯೇಲಳು ಕಂಡಳು. ಆದ್ದರಿಂದ ಅವನನ್ನು ಬರಮಾಡಿಕೊಳ್ಳಲು ಹೊರಗೆ ಬಂದಳು. ಯಾಯೇಲಳು ಸೀಸೆರನಿಗೆ, “ಸ್ವಾಮೀ, ನನ್ನ ಗುಡಾರದೊಳಗೆ ಬನ್ನಿ, ಭಯಪಡಬೇಡಿ” ಎಂದು ಕರೆದಳು. ಆದ್ದರಿಂದ ಸೀಸೆರನು ಗುಡಾರದೊಳಗೆ ಹೋದನು. ಅವಳು ಸೀಸೆರನ ಮೇಲೆ ಕಂಬಳಿಯನ್ನು ಹೊದಿಸಿದಳು.

19 ಸೀಸೆರನು ಯಾಯೇಲಳಿಗೆ, “ನನಗೆ ಬಾಯಾರಿಕೆಯಾಗಿದೆ. ದಯವಿಟ್ಟು ಕುಡಿಯಲು ಸ್ವಲ್ಪ ನೀರನ್ನು ಕೊಡು” ಎಂದು ಕೇಳಿದನು. ಯಾಯೇಲಳ ಬಳಿ ಪ್ರಾಣಿಗಳ ಚರ್ಮದಿಂದ ಮಾಡಿದ ಒಂದು ಚೀಲವಿತ್ತು. ಆಕೆಯು ಅದರಲ್ಲಿ ಹಾಲಿಟ್ಟಿದ್ದಳು. ಯಾಯೇಲಳು ಸೀಸೆರನಿಗೆ ಒಂದು ಗುಟುಕು ಹಾಲನ್ನೇ ಕೊಟ್ಟಳು. ನಂತರ ಅವಳು ಸೀಸೆರನನ್ನು ಮುಚ್ಚಿಬಿಟ್ಟಳು.

20 ಆಗ ಸೀಸೆರನು ಯಾಯೇಲಳಿಗೆ, “ಹೋಗಿ ಗುಡಾರದ ಬಾಗಿಲಿನ ಹತ್ತಿರ ನಿಂತುಕೊಂಡಿರು. ಯಾರಾದರೂ ಬಂದು ‘ಗುಡಾರದಲ್ಲಿ ಯಾರಾದರೂ ಇದ್ದಾರೆಯೇ?’ ಎಂದು ಕೇಳಿದರೆ, ‘ಇಲ್ಲ’ ಎಂದು ಹೇಳು” ಎಂದನು.

21 ಯಾಯೇಲಳು ಗುಡಾರದ ಗೂಟವನ್ನು ಮತ್ತು ಕೊಡತಿಯನ್ನು ತೆಗೆದುಕೊಂಡು ಶಬ್ದಮಾಡದೆ ಸೀಸೆರನ ಹತ್ತಿರ ಹೋದಳು. ಸೀಸೆರನು ಬಹಳ ದಣಿದಿದ್ದ ಕಾರಣ ಗಾಢನಿದ್ರೆ ಮಾಡುತ್ತಿದ್ದನು. ಯಾಯೇಲಳು ಗುಡಾರದ ಗೂಟವನ್ನು ಸೀಸೆರನ ತಲೆಯ ಒಂದು ಪಾರ್ಶ್ವದಲ್ಲಿ ಇಟ್ಟು ಕೊಡತಿಯಿಂದ ಬಲವಾಗಿ ಹೊಡೆದಳು. ಆ ಗುಡಾರದ ಗೂಟವು ಸೀಸೆರನ ತಲೆಯ ಮತ್ತೊಂದು ಪಾರ್ಶ್ವಕ್ಕೆ ತೂರಿಬಂದು ಭೂಮಿಯಲ್ಲಿ ಸೇರಿತು. ಸೀಸೆರನು ಸತ್ತನು.

22 ಅದೇ ಕ್ಷಣದಲ್ಲಿ ಬಾರಾಕನು ಯಾಯೇಲಳ ಗುಡಾರದ ಹತ್ತಿರಕ್ಕೆ ಬಂದನು. ಅವನನ್ನು ಬರಮಾಡಿಕೊಳ್ಳುವುದಕ್ಕಾಗಿ ಯಾಯೇಲಳು ಹೊರಗೆ ಬಂದು, “ಇಲ್ಲಿ ಒಳಗೆ ಬನ್ನಿ. ನೀನು ಹುಡುಕುತ್ತಿರುವ ಮನುಷ್ಯನನ್ನು ತೋರಿಸುತ್ತೇನೆ” ಎಂದಳು. ಬಾರಾಕನು ಯಾಯೇಲಳ ಜೊತೆ ಗುಡಾರವನ್ನು ಪ್ರವೇಶಿಸಿದನು. ಅಲ್ಲಿ ಬಾರಾಕನು ಕಣತಲೆಯಲ್ಲಿ ಗೂಟವನ್ನು ಜಡಿಸಿಕೊಂಡು ನೆಲದ ಮೇಲೆ ಸತ್ತು ಬಿದ್ದಿದ್ದ ಸೀಸೆರನನ್ನು ಕಂಡನು.

23 ಆ ದಿನ ದೇವರು ಇಸ್ರೇಲರಿಗಾಗಿ ಕಾನಾನ್ಯ ರಾಜನಾದ ಯಾಬೀನನನ್ನು ಸೋಲಿಸಿದನು. 24 ಆತನು ಇಸ್ರೇಲರನ್ನು ಬಲಪಡಿಸಿದ್ದರಿಂದ ಅವರು ಕಾನಾನ್ಯ ಅರಸನಾದ ಯಾಬೀನನನ್ನು ಸಂಪೂರ್ಣವಾಗಿ ಸೋಲಿಸಿ ಅವನನ್ನು ನಿರ್ನಾಮ ಮಾಡಿದರು.

ದೆಬೋರಳ ಜಯಗೀತೆ

ಇಸ್ರೇಲರು ಸೀಸೆರನನ್ನು ಸೋಲಿಸಿದ ದಿನ ದೆಬೋರಳು ಮತ್ತು ಅಬೀನೋವಮನ ಮಗನಾದ ಬಾರಾಕನು ಈ ಗೀತೆಯನ್ನು ಹಾಡಿದರು:

“ಇಸ್ರೇಲರು ಯುದ್ಧ ಸನ್ನದ್ಧರಾಗುತ್ತಿದ್ದಾರೆ;
    ಜನರು ಸ್ವಇಚ್ಛೆಯಿಂದ ಯುದ್ಧಕ್ಕೆ ಹೋಗಲು ಒಪ್ಪಿದ್ದಾರೆ;
ಯೆಹೋವನಿಗೆ ಸ್ತೋತ್ರವಾಗಲಿ!

“ಅರಸರೇ ಕೇಳಿರಿ,
    ಆಳುವವರೇ ಗಮನಿಸಿರಿ!
ನಾನು ಹಾಡುವೆನು.
    ನಾನು ಯೆಹೋವನನ್ನು ಕೀರ್ತಿಸುವೆನು.
ಇಸ್ರೇಲಿನ ದೇವರಾದ ಯೆಹೋವನಿಗೆ
    ನಾನು ಗಾನ ಮಾಡುವೆನು.

“ಯೆಹೋವನೇ, ನೀನು ಹಿಂದೆ ಸೆಯೀರಿನ ಪ್ರದೇಶದಿಂದ ಬಂದೆ.
    ನೀನು ಎದೋಮ್ಯರ ಪ್ರದೇಶದಿಂದ ನಡೆದುಕೊಂಡು ಹೋದೆ.
ನೀನು ನಡೆಯುವಾಗ ಭೂಮಿ ನಡುಗಿತು; ಆಕಾಶ ಹನಿಗರೆಯಿತು.
    ಮೇಘಮಂಡಲವು ಮಳೆಗರೆಯಿತು.
ಸೀನಾಯಿ ಬೆಟ್ಟದ ದೇವರಾದ ಯೆಹೋವನ ಎದುರಿಗೆ,
    ಇಸ್ರೇಲರ ದೇವರಾದ ಯೆಹೋವನ ಎದುರಿಗೆ, ಪರ್ವತಗಳು ನಡುಗಿದವು.

“ಅನಾತನ ಮಗನಾದ ಶಮ್ಗರನ ಕಾಲದಲ್ಲಿಯೂ ಯಾಯೇಲಳ ದಿನಗಳಲ್ಲಿಯೂ
    ಮುಖ್ಯಮಾರ್ಗಗಳು ಬರಿದಾಗಿದ್ದವು.
    ವ್ಯಾಪಾರಿಗಳು[b] ಮತ್ತು ಪ್ರಯಾಣಿಕರು ಸೀಳುದಾರಿಯಿಂದ ಹೋಗುತ್ತಿದ್ದರು.

“ದೆಬೋರಳೇ, ನೀನು ಬರುವವರೆಗೆ,
    ನೀನು ಇಸ್ರೇಲರಿಗೆ ತಾಯಿಯಾಗಿ ಬರುವವರೆಗೆ, ಶೂರರೇ ಇರಲಿಲ್ಲ.
    ಇಸ್ರೇಲಿನಲ್ಲಿ ವೀರರೇ ಇರಲಿಲ್ಲ.
ಅವರು ಹೊಸ ದೇವರುಗಳನ್ನು ಆರಿಸಿಕೊಂಡರು;
    ಅದಕ್ಕಾಗಿ ಅವರು ತಮ್ಮ ಪಟ್ಟಣ ದ್ವಾರಗಳಲ್ಲಿ ಯುದ್ಧ ಮಾಡಬೇಕಾಯಿತು.
ಇಸ್ರೇಲರ ನಲವತ್ತು ಸಾವಿರ ಸೈನಿಕರಲ್ಲಿ
    ಒಬ್ಬನಿಗೂ ಗುರಾಣಿ ಬರ್ಜಿಗಳಿರಲಿಲ್ಲ.

“ನನ್ನ ಹೃದಯವು ಇಸ್ರೇಲಿನ ಸೇನಾಧಿಪತಿಗಳ ಸಂಗಡವಿದೆ.
    ಈ ಸೇನಾಧಿಪತಿಗಳು ಇಸ್ರೇಲಿಗಾಗಿ ಯುದ್ಧಮಾಡಲು ಸ್ವಇಚ್ಛೆಯಿಂದ ಬಂದರು.
ಯೆಹೋವನಿಗೆ ಸ್ತೋತ್ರವಾಗಲಿ.

10 “ಬಿಳಿಯ ಕತ್ತೆಗಳ ಮೇಲೆ ಸವಾರಿ ಮಾಡುವವರೇ,
    ರತ್ನಗಂಬಳಿಯ ಮೇಲೆ ಕುಳಿತುಕೊಳ್ಳುವವರೇ,
    ಮಾರ್ಗಗಳ ಮೇಲೆ ಹೋಗುವ ಪ್ರಯಾಣಿಕರೇ, ಗಮನಿಸಿರಿ!
11 ತಾಳ ಝಲ್ಲರಿಗಳ ಧ್ವನಿಯನ್ನು ಕೇಳಿರಿ;
    ಬಾವಿಗಳ ಹತ್ತಿರ ನೆರೆದ ಜನಸಮೂಹದ ಧ್ವನಿಯನ್ನು ಕೇಳಿರಿ;
ಅಲ್ಲಿ ಅವು ಯೆಹೋವನ ವಿಜಯದ ಬಗ್ಗೆ ಹೇಳುತ್ತವೆ.
ಯೆಹೋವನ ಜನರು ಪಟ್ಟಣ ದ್ವಾರದಲ್ಲಿ ಯುದ್ಧಕ್ಕೆ ಹೋದಾಗ
    ಇಸ್ರೇಲಿನಲ್ಲಿ ಅವರ ವಿಜಯದ ಬಗ್ಗೆ ಹೇಳುತ್ತವೆ.

12 “ಏಳು, ಏಳು ದೆಬೋರಳೇ!
    ಏಳು, ಎದ್ದೇಳು, ಒಂದು ಗೀತೆಯನ್ನು ಹಾಡು!
ಬಾರಾಕನೇ, ಏಳು!
    ಅಬೀನೋವಮನ ಮಗನೇ, ಹೋಗು; ನಿನ್ನ ಶತ್ರುಗಳನ್ನು ಸೆರೆ ಹಿಡಿದುಕೊ!

13 “ಆಗ ಬದುಕಿಕೊಂಡಿದ್ದವರು ನಾಯಕರ ಬಳಿಗೆ ಹೋದರು.
    ಯೆಹೋವನ ಜನರೇ, ನನ್ನೊಂದಿಗೂ ಸೈನಿಕರೊಂದಿಗೂ ಬನ್ನಿರಿ.

14 “ಅಮಾಲೇಕ್ ಪರ್ವತ ಪ್ರದೇಶದಲ್ಲಿ ವಾಸಮಾಡುತ್ತಿದ್ದ ಎಫ್ರಾಯೀಮ್ಯರು ಬಂದರು;
    ನಿನ್ನನ್ನೂ ನಿನ್ನ ಜನರನ್ನೂ ಅನುಸರಿಸುತ್ತಿದ್ದ ಬೆನ್ಯಾಮೀನ್ಯರೂ ಬಂದರು;
ಮಾಕೀರನ ಕುಲದಿಂದ ನಾಯಕರು ಬಂದರು;
    ಜೆಬುಲೂನ್ ಕುಲದಿಂದ ನಾಯಕರು ಕಂಚಿನ ದೊಣ್ಣೆಗಳೊಡನೆ ಬಂದರು.
15 ಇಸ್ಸಾಕಾರ್ ಕುಲದ ನಾಯಕರು ದೆಬೋರಳ ಜೊತೆಯಲ್ಲಿದ್ದರು.
    ಇಸ್ಸಾಕಾರ್ ಕುಲದವರು ಬಾರಾಕನಿಗೆ ನಂಬಿಗಸ್ತರಾಗಿದ್ದರು.
    ಅವರು ಕಾಲು ನಡಿಗೆಯಿಂದ ಕಣಿವೆಗೆ ಬಂದರು.

“ರೂಬೇನ್ಯರೇ, ನಿಮ್ಮ ಸೈನ್ಯದಲ್ಲಿ ತುಂಬ ಶೂರರಿದ್ದಾರೆ.
16     ಹೀಗಿರಲು ನೀವು ಕುರಿಯ ಹಟ್ಟಿಗಳ ಗೋಡೆಗೆ ಒರಗಿಕೊಂಡು ಕುಳಿತಿರುವುದೇಕೆ?
ರೂಬೇನ್ಯರ ಶೂರ ಸೈನಿಕರು ಯುದ್ಧದ ಬಗ್ಗೆ ಬಹಳವಾಗಿ ಯೋಚಿಸಿದರು,
    ಆದರೆ ಕುರಿಗಳಿಗಾಗಿ ಬಾರಿಸುವ ಸಂಗೀತವನ್ನು ಕೇಳುತ್ತಾ ಮನೆಯಲ್ಲಿ ಇದ್ದುಬಿಟ್ಟರು.
17 ಗಿಲ್ಯಾದಿನ ಜನರು ಜೋರ್ಡನ್ ನದಿಯ ಆಚೆಯ ದಡದಲ್ಲಿದ್ದ ತಮ್ಮ ಶಿಬಿರಗಳಲ್ಲಿ ಇದ್ದುಬಿಟ್ಟರು.[c]
    ದಾನ್ ಕುಲದವರೇ, ನೀವೇಕೆ ನಿಮ್ಮ ಹಡಗುಗಳಲ್ಲಿಯೇ ಉಳಿದುಬಿಟ್ಟಿರಿ?
ಆಶೇರ್ ಕುಲದವರು ಸಮುದ್ರತೀರದಲ್ಲಿರುವ
    ತಮ್ಮ ಸುರಕ್ಷಿತವಾದ ಬಂದರುಗಳಲ್ಲಿ ಉಳಿದುಕೊಂಡರು.

18 “ಆದರೆ ಜೆಬುಲೂನ್ಯರೂ ನಫ್ತಾಲ್ಯರೂ ಆ ಬೆಟ್ಟಗಳ ಮೇಲೆ
    ತಮ್ಮ ಜೀವವನ್ನೇ ಮುಡಿಪಾಗಿಟ್ಟು ಯುದ್ಧ ಮಾಡಿದರು.
19 ಕಾನಾನ್ಯ ಅರಸರು ಬಂದು ಯುದ್ಧಮಾಡಿದರು;
    ಅವರು ಮೆಗಿದ್ದೋ ಪ್ರವಾಹಗಳ ಬಳಿಯಲ್ಲಿರುವ ತಾನಾಕದಲ್ಲಿ ಹೋರಾಡಿದರು.
    ಆದರೆ ಅವರು ಯಾವ ಸಂಪತ್ತನ್ನು ತೆಗೆದುಕೊಂಡು ಹೋಗಲಿಲ್ಲ!
20 ಪರಲೋಕದಿಂದ ನಕ್ಷತ್ರಗಳು ಯುದ್ಧ ಮಾಡಿದವು.
    ನಕ್ಷತ್ರಗಳು ಆಕಾಶಪಥದಿಂದ ಸೀಸೆರನೊಡನೆ ಯುದ್ಧ ಮಾಡಿದವು.
21 ಪೂರ್ವಕಾಲದಿಂದ ಪ್ರಸಿದ್ಧವಾದ ಕೀಷೋನ್ ನದಿಯು
    ಸೀಸೆರನ ಜನರನ್ನು ಕೊಚ್ಚಿಕೊಂಡು ಹೋಯಿತು.
ನನ್ನ ಆತ್ಮವೇ, ಧೈರ್ಯದಿಂದ ಮುನ್ನುಗ್ಗು!
22 ಸೀಸೆರನ ಬಲಿಷ್ಠವಾದ ಕುದುರೆಗಳು ಭರದಿಂದ ಓಡಿದವು.
    ಆ ಕುದುರೆಗಳ ಕಾಲುಗಳು ನೆಲಕ್ಕೆ ಅಪ್ಪಳಿಸಿದವು.

23 “ಮೇರೋಜ್ ಊರಿಗೆ ಶಾಪಹಾಕಿರಿ;
    ಅಲ್ಲಿಯ ಜನರಿಗೆ ಶಾಪಹಾಕಿರಿ;
ಏಕೆಂದರೆ ಅವರು ಯೆಹೋವನ ಸಹಾಯಕ್ಕೆ ತಮ್ಮ ಸೈನ್ಯದೊಂದಿಗೆ ಬರಲಿಲ್ಲ”
    ಎಂದನು ಯೆಹೋವನ ದೂತನು.
24 ಕೇನ್ಯನಾದ ಹೆಬೆರನ ಹೆಂಡತಿ ಯಾಯೇಲಳಿಗೆ
    ಎಲ್ಲ ಹೆಂಗಸರಿಗಿಂತಲೂ ಹೆಚ್ಚಿಗೆ ದೇವರ ಆಶೀರ್ವಾದವಾಗುವುದು.
25 ಸೀಸೆರನು ನೀರು ಕೇಳಿದನು;
    ಯಾಯೇಲಳು ಅವನಿಗೆ ಹಾಲು ಕೊಟ್ಟಳು.
ಅರಸನಿಗೆ ಯೋಗ್ಯವಾದ ಬಟ್ಟಲಲ್ಲಿ
    ಅವಳು ಅವನಿಗೆ ಕೆನೆಯನ್ನು ತಂದಳು.
26 ನಂತರ ಯಾಯೇಲಳು ಕೈಚಾಚಿ ಗುಡಾರದ ಗೂಟವನ್ನು ತೆಗೆದುಕೊಂಡಳು.
    ಅವಳು ಬಲಗೈಯನ್ನು ಚಾಚಿ ದೊಡ್ಡ ಕೊಡತಿಯನ್ನು ತೆಗೆದುಕೊಂಡಳು,
ಆ ಕೊಡತಿಯಿಂದ ಸೀಸೆರನ ತಲೆಯನ್ನು ಬಿರುಸಾಗಿ ಒಡೆದುಬಿಟ್ಟಳು;
    ಅವನ ಕಣತಲೆಗೆ ತಿವಿದು ಬಡಿದಳು.
27 ಅವನು ಯಾಯೇಲಳ ಪಾದಗಳ ಬಳಿಯಲ್ಲಿ
    ಬಗ್ಗಿಕೊಂಡು ಉರುಳಿಬಿದ್ದನು;
ಅವನು ಅವಳ ಪಾದಗಳ ಬಳಿಯಲ್ಲಿ ಕುಸಿದುಬಿದ್ದನು.
    ಸೀಸೆರನು ಕುಸಿದುಬಿದ್ದಲ್ಲಿಯೇ ಸತ್ತನು.

28 “ಸೀಸೆರನ ತಾಯಿ ಕಿಟಿಕಿಯ ಮೂಲಕ ನೋಡಿದಳು;
    ಆಕೆಯು ತೆರೆಯ ಮೂಲಕ ನೋಡಿ ಕೂಗಿದಳು.
‘ಸೀಸೆರನ ರಥಾಗಮನಕ್ಕೆ ಇಷ್ಟು ತಡವೇಕೆ?
    ಅವನ ರಥದ ಕುದುರೆಗಳ ಧ್ವನಿ ಬರಲು ಇಷ್ಟು ತಡವೇಕೆ?’ ಅಂದಳು.

29 “ಅವಳ ಸೇವಕಿಯರಲ್ಲಿ ಅತಿಬುದ್ಧಿವಂತಳು ಹೀಗೆ ಉತ್ತರಿಸಿದಳು.
    ಹೌದು, ಸೇವಕಿಯು ಉತ್ತರಿಸಿದಳು,
30 ‘ಖಂಡಿತವಾಗಿ ಅವರು ಗೆದ್ದಿದ್ದಾರೆ,
    ತಾವು ಸೋಲಿಸಿದ ಜನರಿಂದ ವಸ್ತುಗಳನ್ನು ಪಡೆಯುತ್ತಿದ್ದಾರೆ!
ಆ ವಸ್ತುಗಳನ್ನು ತಮ್ಮಲ್ಲಿಯೇ ಹಂಚಿಕೊಳ್ಳುತ್ತಿದ್ದಾರೆ!
    ಪ್ರತಿಯೊಬ್ಬ ಸೈನಿಕನು ಒಬ್ಬಿಬ್ಬರು ಹುಡುಗಿಯರನ್ನು ತೆಗೆದುಕೊಳ್ಳುತ್ತಿರಬೇಕು.
ಸೀಸೆರನು ವರ್ಣರಂಜಿತ ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು.
    ಹೌದು! ವಿಜಯಿ ಸೀಸೆರನು ಧರಿಸಲು ಬಣ್ಣಬಣ್ಣದ ಒಂದು ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು;
    ಅಥವಾ ಎರಡು ಬಟ್ಟೆಗಳನ್ನು ತೆಗೆದುಕೊಳ್ಳುತ್ತಿರಬಹುದು.’

31 “ಯೆಹೋವನೇ, ನಿನ್ನ ವೈರಿಗಳೆಲ್ಲಾ ಹೀಗೇ ಸಾಯಲಿ;
    ಆದರೆ ನಿನ್ನನ್ನು ಪ್ರೀತಿಸುವವರೆಲ್ಲರೂ ಬಲವಾಗಿದ್ದು ಉದಯಿಸುವ ಸೂರ್ಯನಂತೆ ಬೆಳಗಲಿ!”

ನಲವತ್ತು ವರ್ಷಗಳವರೆಗೆ ದೇಶದಲ್ಲಿ ಶಾಂತಿ ನೆಲೆಸಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International