Beginning
ಮೂರು ಕುಲದವರು ತಮ್ಮ ಮನೆಗಳಿಗೆ ಹೋದರು
22 ತರುವಾಯ ಯೆಹೋಶುವನು ರೂಬೇನ್ಯರನ್ನು, ಗಾದ್ಯರನ್ನು ಮತ್ತು ಮನಸ್ಸೆಕುಲದ ಅರ್ಧಜನರನ್ನು ಒಟ್ಟಿಗೆ ಸೇರಿಸಿದನು. 2 ಯೆಹೋಶುವನು ಅವರಿಗೆ, “ಯೆಹೋವನ ಸೇವಕನಾಗಿದ್ದ ಮೋಶೆಯು ಮಾಡಬೇಕೆಂದು ನಿಮಗೆ ಹೇಳಿದ್ದನ್ನೆಲ್ಲಾ ನೀವು ಮಾಡಿದಿರಿ; ಮತ್ತು ನನ್ನ ಆಜ್ಞೆಗಳನ್ನೆಲ್ಲ ನೀವು ಪಾಲಿಸಿದಿರಿ. 3 ಈವರೆಗೆ ನೀವು ಇಸ್ರೇಲಿನ ಉಳಿದ ಜನರಿಗೆಲ್ಲ ಬೆಂಬಲ ಕೊಟ್ಟಿದ್ದೀರಿ. ನಿಮ್ಮ ದೇವರಾದ ಯೆಹೋವನು ಕೊಟ್ಟ ಎಲ್ಲ ಆಜ್ಞೆಗಳನ್ನು ನೀವು ಜಾಗರೂಕತೆಯಿಂದ ಪಾಲಿಸಿದ್ದೀರಿ. 4 ನಿಮ್ಮ ದೇವರಾದ ಯೆಹೋವನು ಇಸ್ರೇಲರಿಗೆ ಶಾಂತಿಯನ್ನು ದಯಪಾಲಿಸುವುದಾಗಿ ವಾಗ್ದಾನ ಮಾಡಿದ್ದನು. ಈಗ ಯೆಹೋವನು ತನ್ನ ವಾಗ್ದಾನವನ್ನು ಪೂರ್ಣಗೊಳಿಸಿದ್ದಾನೆ. ಆದ್ದರಿಂದ ಈಗ ನೀವು ನಿಮ್ಮ ಮನೆಗಳಿಗೆ ಹೋಗಬಹುದು. ಯೆಹೋವನ ಸೇವಕನಾದ ಮೋಶೆಯು ನಿಮಗೆ ಜೋರ್ಡನ್ ನದಿಯ ಪೂರ್ವಕ್ಕೆ ಸ್ವಾಸ್ತ್ಯವನ್ನು ಕೊಟ್ಟಿದ್ದಾನೆ. ಈಗ ನೀವು ಆ ಪ್ರದೇಶದಲ್ಲಿರುವ ನಿಮ್ಮ ಮನೆಗಳಿಗೆ ಹೋಗಬಹುದು. 5 ಆದರೆ ಮೋಶೆಯು ನಿಮಗೆ ಕೊಟ್ಟ ಧರ್ಮೋಪದೇಶವನ್ನು ಮತ್ತು ವಿಧಿಗಳನ್ನು ಪಾಲಿಸಬೇಕೆಂಬುದನ್ನು ಜ್ಞಾಪಕದಲ್ಲಿಡಿ. ನೀವು ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪ್ರೀತಿಸಬೇಕು ಮತ್ತು ಆತನ ಸೇವೆ ಮಾಡಬೇಕು. ನೀವು ಆತನನ್ನು ಅನುಸರಿಸುತ್ತಾ ನಿಮ್ಮಿಂದ ಸಾಧ್ಯವಾದಷ್ಟು ಆತನ ಸೇವೆ ಮಾಡಬೇಕು” ಎಂದು ಹೇಳಿದನು.
6 ಯೆಹೋಶುವನು ಅವರನ್ನು ಆಶೀರ್ವದಿಸಿ ಬೀಳ್ಕೊಟ್ಟನು. ಅವರು ತಮ್ಮತಮ್ಮ ಮನೆಗಳಿಗೆ ಹೋದರು. 7 ಮೋಶೆಯು ಮನಸ್ಸೆಕುಲದ ಅರ್ಧಜನರಿಗೆ ಬಾಷಾನ್ ಪ್ರದೇಶವನ್ನು ಕೊಟ್ಟಿದ್ದನು. ಯೆಹೋಶುವನು ಮನಸ್ಸೆಕುಲದ ಉಳಿದರ್ಧ ಜನರಿಗೆ ಜೋರ್ಡನ್ ನದಿಯ ಪಶ್ಚಿಮಕ್ಕೆ ಭೂಮಿಯನ್ನು ಕೊಟ್ಟನು. ಯೆಹೋಶುವನು ಅವರನ್ನು ಆಶೀರ್ವದಿಸಿ ಮನೆಗೆ ಕಳುಹಿಸಿದನು. 8 ಅವನು, “ನೀವು ಬಹಳ ಶ್ರೀಮಂತರಾಗಿದ್ದೀರಿ, ನಿಮ್ಮಲ್ಲಿ ಬಹಳ ಪಶುಗಳಿವೆ; ನಿಮ್ಮಲ್ಲಿ ಚಿನ್ನ, ಬೆಳ್ಳಿ ಮತ್ತು ಬೆಲೆಬಾಳುವ ರತ್ನಾಭರಣಗಳಿವೆ. ನಿಮ್ಮಲ್ಲಿ ಸುಂದರವಾದ ಅನೇಕ ಬಟ್ಟೆಗಳಿವೆ. ನೀವು ನಿಮ್ಮ ಶತ್ರುಗಳಿಂದ ಹಲವಾರು ವಸ್ತುಗಳನ್ನು ತೆಗೆದುಕೊಂಡಿದ್ದೀರಿ. ಈ ವಸ್ತುಗಳನ್ನು ನಿಮ್ಮ ಸಹೋದರರೊಂದಿಗೂ ಹಂಚಿಕೊಳ್ಳಿರಿ” ಅಂದನು.
9 ಆದ್ದರಿಂದ ರೂಬೇನ್ ಕುಲದವರು, ಗಾದ್ಯರು, ಮನಸ್ಸೆಕುಲದ ಅರ್ಧಜನರು ಇಸ್ರೇಲಿನ ಬೇರೆ ಕುಲದ ಜನರನ್ನು ಬಿಟ್ಟು ಹೊರಟರು. ಅವರು ಕಾನಾನಿನ ಶೀಲೋವಿನಲ್ಲಿದ್ದರು. ಅವರು ಆ ಸ್ಥಳವನ್ನು ಬಿಟ್ಟು ಗಿಲ್ಯಾದ್‌ಗೆ ಹಿಂದಿರುಗಿ ಹೋದರು. ಮೋಶೆಯು ಅವರಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದ ತಮ್ಮ ಪ್ರದೇಶಕ್ಕೆ ಅವರು ಹೋದರು. ಅವರಿಗೆ ಈ ಪ್ರದೇಶವನ್ನು ಕೊಡಬೇಕೆಂದು ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನು.
10 ಆಗ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಕುಲದ ಅರ್ಧಜನರು ಗೆಲಿಲೋತ್ ಎಂಬ ಸ್ಥಳಕ್ಕೆ ಹೋದರು. ಇದು ಕಾನಾನ್ ಪ್ರದೇಶದಲ್ಲಿ ಜೋರ್ಡನ್ ನದಿಯ ಹತ್ತಿರ ಇತ್ತು. ಆ ಸ್ಥಳದಲ್ಲಿ ಅವರು ಸುಂದರವಾದ ಒಂದು ಯಜ್ಞವೇದಿಕೆಯನ್ನು ಕಟ್ಟಿದರು. 11 ಇನ್ನೂ ಶೀಲೋವಿನಲ್ಲಿದ್ದ ಇಸ್ರೇಲಿನ ಉಳಿದ ಜನರು, ಈ ಮೂರು ಕುಲದವರು ಕಟ್ಟಿಸಿದ ಯಜ್ಞವೇದಿಕೆಯ ಬಗ್ಗೆ ಕೇಳಿದರು. ಕಾನಾನಿನ ಗಡಿಯ ಬಳಿಯಿರುವ ಗೆಲಿಲೋತ್ ಎಂಬಲ್ಲಿ ಇದನ್ನು ಕಟ್ಟಲಾಗಿದೆ ಎಂಬುದು ಅವರಿಗೆ ತಿಳಿಯಿತು. ಇದು ಇಸ್ರೇಲರಿಗೆ ಸೇರಿದ ಜೋರ್ಡನ್ ನದಿಯ ಸಮೀಪದಲ್ಲಿತ್ತು. 12 ಇಸ್ರೇಲರೆಲ್ಲರು ಈ ಮೂರು ಕುಲಗಳ ಮೇಲೆ ತುಂಬ ಕೋಪಗೊಂಡರು. ಅವರು ಒಟ್ಟಿಗೆ ಮೂರು ಕುಲಗಳ ವಿರುದ್ಧ ಯುದ್ಧಮಾಡಲು ನಿರ್ಧರಿಸಿದರು.
13-14 ಆದರೆ ಮೊದಲು ಇಸ್ರೇಲರು ರೂಬೇನ್ಯರ, ಗಾದ್ಯರ, ಮನಸ್ಸೆಕುಲದ ಅರ್ಧಜನರ ಸಂಗಡ ಮಾತನಾಡಲು ಕೆಲವು ಜನರನ್ನು ಕಳುಹಿಸಿದರು. ಮಹಾಯಾಜಕ ಎಲ್ಲಾಜಾರನ ಮಗನಾದ ಫೀನೆಹಾಸನ ನೇತೃತ್ವದಲ್ಲಿ ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ವ್ಯಕ್ತಿಯಂತೆ ಹತ್ತು ಜನರನ್ನು ಕಳುಹಿಸಿದರು. ಈ ಹತ್ತು ಜನರು ತಮ್ಮ ಕುಲಗಳ ಮುಖ್ಯ ನಾಯಕರಾಗಿದ್ದರು.
15 ಈ ಹತ್ತು ಮಂದಿ ಗಿಲ್ಯಾದಿಗೆ ಹೋಗಿ ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಕುಲದ ಅರ್ಧಜನರ ಜೊತೆಗೆ ಮಾತನಾಡಿ ಹೀಗೆಂದರು: 16 “ಇಸ್ರೇಲರೆಲ್ಲರೂ ನಿಮ್ಮನ್ನು ಕೇಳುವುದೇನೆಂದರೆ, ‘ಇಸ್ರೇಲಿನ ದೇವರ ವಿರುದ್ಧವಾಗಿ ನೀವು ಹೀಗೆ ಮಾಡಿದ್ದೇಕೆ? ನೀವು ಯೆಹೋವನ ವಿರುದ್ಧವಾಗಿ ತಿರುಗಿದ್ದೇಕೆ? ನಿಮಗಾಗಿ ಯಜ್ಞವೇದಿಕೆಯನ್ನು ಕಟ್ಟಿಕೊಂಡದ್ದೇಕೆ? ಇದು ದೇವರ ಉಪದೇಶಗಳಿಗೆ ವಿರುದ್ಧವಾಗಿದೆ ಎಂಬುದನ್ನು ನೀವು ಬಲ್ಲಿರಿ. 17 ಪೆಗೋರ್‌ನಲ್ಲಿ ಏನಾಯಿತೆಂಬುದನ್ನು ಸ್ಮರಿಸಿಕೊಳ್ಳಿ ಆ ಪಾಪಕ್ಕಾಗಿ ನಾವು ಇನ್ನೂ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ದೇವರು ನಮ್ಮಲ್ಲಿ ಬಹಳಷ್ಟು ಜನರನ್ನು ರೋಗಗ್ರಸ್ತರನ್ನಾಗಿ ಮಾಡಿದನು. ಆ ರೋಗದಿಂದ ಇಂದಿಗೂ ನಾವು ಕಷ್ಟಪಡುತ್ತಿದ್ದೇವೆ. 18 ಈಗ ನೀವು ಅದನ್ನೇ ಮಾಡುತ್ತಿದ್ದೀರಿ. ನೀವು ಯೆಹೋವನಿಗೆ ವಿಮುಖರಾಗುತ್ತಿದ್ದೀರಿ. ನೀವು ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ, ಪ್ರತಿಯೊಬ್ಬ ಇಸ್ರೇಲಿನವನ ಮೇಲೆಯೂ ಯೆಹೋವನು ಕೋಪಿಸಿಕೊಳ್ಳುವನು.
19 “‘ನಿಮ್ಮ ಪ್ರದೇಶವು ದೇವಾರಾಧನೆ ಮಾಡಲು ಅಶುದ್ಧವಾಗಿದ್ದರೆ ನಮ್ಮ ಪ್ರದೇಶಕ್ಕೆ ಬಂದುಬಿಡಿ. ಯೆಹೋವನ ಗುಡಾರವು ನಮ್ಮ ಪ್ರದೇಶದಲ್ಲಿದೆ. ನೀವು ನಮ್ಮ ಸ್ವಲ್ಪ ಭೂಮಿಯನ್ನು ತೆಗೆದುಕೊಂಡು ಅಲ್ಲಿ ವಾಸವಾಗಿರಬಹುದು. ಆದರೆ ಯೆಹೋವನಿಗೆ ವಿರುದ್ಧವಾಗಿ ಹೋಗಬೇಡಿ. ಬೇರೊಂದು ಯಜ್ಞವೇದಿಕೆಯನ್ನು ಕಟ್ಟಬೇಡಿ. ದೇವದರ್ಶನಗುಡಾರದಲ್ಲಿ ನಾವು ಈಗಾಗಲೇ ಯೆಹೋವನಾದ ನಮ್ಮ ದೇವರ ಯಜ್ಞವೇದಿಕೆಯನ್ನು ಹೊಂದಿದ್ದೇವೆ.
20 “‘ಜೆರಹನ ಮಗನಾದ ಆಕಾನನನ್ನು ನೆನಪು ಮಾಡಿಕೊಳ್ಳಿ ನಾಶಪಡಿಸಬೇಕಾಗಿದ್ದ ವಸ್ತುಗಳ ಬಗ್ಗೆ ಆತನ ಆಜ್ಞೆಯನ್ನು ತಿರಸ್ಕರಿಸಿದನು. ಅವನು ದೇವರ ನಿಯಮಗಳನ್ನು ಉಲ್ಲಂಘಿಸಿದನು; ಆದರೆ ಶಿಕ್ಷೆಯು ಇಸ್ರೇಲಿನ ಎಲ್ಲ ಜನರಿಗಾಯಿತು. ಆಕಾನನು ತನ್ನ ಪಾಪದಿಂದಾಗಿ ಸತ್ತನು. ಆದರೆ ಬಹಳಷ್ಟು ಬೇರೆ ಜನರೂ ಸತ್ತರು’” ಎಂದರು.
21 ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಕುಲದ ಅರ್ಧಜನರು ಆ ಹತ್ತು ಜನರಿಗೆ ಹೀಗೆ ಉತ್ತರಿಸಿದರು: 22 “ನಮ್ಮ ದೇವರು ಯೆಹೋವನೇ! ನಮ್ಮ ದೇವರು ಯೆಹೋವನೇ ಎಂದು ಇನ್ನೊಮ್ಮೆ ನಾವು ಹೇಳುತ್ತೇವೆ. ನಾವು ಇದನ್ನು ಏಕೆ ಮಾಡಿದೆವೆಂಬುದು ದೇವರಿಗೆ ತಿಳಿದಿದೆ. ನೀವೂ ಅದನ್ನು ತಿಳಿದುಕೊಂಡಿರಬೇಕೆಂಬುದು ನಮ್ಮ ಆಶೆ. ನಾವು ಮಾಡಿದ್ದನ್ನು ನೀವು ವಿವೇಚಿಸಿ ನೋಡಬಹುದು. ನಾವೇನಾದರೂ ತಪ್ಪುಮಾಡಿದ್ದೇವೆಂದು ಅನಿಸಿದ್ದಲ್ಲಿ ಆಗ ನೀವು ನಮ್ಮನ್ನು ಕೊಲ್ಲಬಹುದು. 23 ನಾವು ದೇವರ ಕಟ್ಟಳೆಗಳನ್ನು ಉಲ್ಲಂಘಿಸಿದ್ದರೆ ಯೆಹೋವನೇ ನಮ್ಮನ್ನು ಶಿಕ್ಷಿಸಲಿ ಎಂದು ಆತನಲ್ಲಿ ಕೇಳಿಕೊಳ್ಳುತ್ತೇವೆ. 24 ನಾವು ಈ ಯಜ್ಞವೇದಿಕೆಯನ್ನು ಸರ್ವಾಂಗಹೋಮ, ಸಮಾಧಾನಯಜ್ಞ, ಧಾನ್ಯಸಮರ್ಪಣೆ ಇವುಗಳನ್ನು ಸಮರ್ಪಿಸುವುದಕ್ಕೋಸ್ಕರ ಕಟ್ಟಿದ್ದೇವೆ ಎಂದು ನೀವು ತಿಳಿದಿರುವಿರೇನು? ಇಲ್ಲ! ನಾವು ಆ ಕಾರಣಕ್ಕಾಗಿ ಇದನ್ನು ಕಟ್ಟಲಿಲ್ಲ. ನಾವು ಈ ಯಜ್ಞವೇದಿಕೆಯನ್ನು ಕಟ್ಟಿರುವುದಕ್ಕೆ ಕಾರಣವೇನೆಂದರೆ ಮುಂದಿನ ಕಾಲದಲ್ಲಿ ನಿಮ್ಮ ಜನರು ನಮ್ಮನ್ನು ತಮ್ಮ ಜನಾಂಗದ ಒಂದು ಭಾಗವೆಂದು ಸ್ವೀಕರಿಸದೆ ಇಸ್ರೇಲಿನ ದೇವರಾದ ಯೆಹೋವನನ್ನು ಆರಾಧಿಸಲು ಅವಕಾಶಕೊಡದಿರಬಹುದು ಎಂಬ ಭಯ ನಮಗಿತ್ತು. 25 ದೇವರು ನಮಗೆ ಜೋರ್ಡನ್ ನದಿಯ ಮತ್ತೊಂದು ದಡದಲ್ಲಿ ಭೂಮಿಯನ್ನು ಕೊಟ್ಟಿದ್ದಾನೆ. ಅಂದರೆ ಜೋರ್ಡನ್ ನದಿಯು ನಮ್ಮನ್ನು ಬೇರ್ಪಡಿಸುತ್ತದೆ. ನಿಮ್ಮ ಮಕ್ಕಳು ದೊಡ್ಡವರಾಗಿ ನಿಮ್ಮ ಭೂಮಿಯನ್ನು ಆಳುವಾಗ, ನಾವು ನಿಮ್ಮ ಜನರೆಂಬುದನ್ನು ಮರೆತುಬಿಡಬಹುದು. ‘ರೂಬೇನ್ಯರು, ಗಾದ್ಯರು ಆದ ನೀವು ಇಸ್ರೇಲಿನ ಅಂಗವಾಗಿಲ್ಲ’ ಎಂದು ಹೇಳಿ ನಮ್ಮ ಮಕ್ಕಳು ಯೆಹೋವನನ್ನು ಆರಾಧಿಸದಂತೆ ನಿಮ್ಮ ಮಕ್ಕಳು ತಡೆಯಬಹುದು.
26 “ಅದಕ್ಕಾಗಿ ಈ ಯಜ್ಞವೇದಿಕೆಯನ್ನು ಕಟ್ಟಲು ನಾವು ನಿರ್ಧರಿಸಿದೆವು. ಆದರೆ ಅದನ್ನು ಸರ್ವಾಂಗಹೋಮಗಳಿಗಾಗಲಿ ಯಜ್ಞಗಳಿಗಾಗಲಿ ಬಳಸಲು ಕಟ್ಟಿಲ್ಲ. 27 ನೀವು ಆರಾಧಿಸುವ ದೇವರನ್ನೇ ನಾವೂ ಆರಾಧಿಸುತ್ತೇವೆಂಬುದನ್ನು ನಮ್ಮ ಜನರಿಗೆ ತೋರಿಸಿಕೊಡುವುದೇ ಈ ಯಜ್ಞವೇದಿಕೆಯ ನಿಜವಾದ ಉದ್ದೇಶವಾಗಿದೆ. ನಾವು ಯೆಹೋವನನ್ನು ಆರಾಧಿಸುತ್ತೇವೆ. ನಾವು ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನು ಯೆಹೋವನ ಸಾನ್ನಿಧ್ಯದಲ್ಲಿ ಸಮರ್ಪಿಸುತ್ತೇವೆ ಎಂಬುದಕ್ಕೆ ಈ ಯಜ್ಞವೇದಿಕೆಯು ನಿಮಗೂ ನಮಗೂ ಮತ್ತು ನಮ್ಮ ಮುಂದಿನ ಪೀಳಿಗೆಗಳಿಗೂ ಸಾಕ್ಷಿಯಾಗಿರುತ್ತದೆ. ನಾವು ಸಹ ನಿಮ್ಮಂತೆಯೇ ಇಸ್ರೇಲಿನ ಜನರೆಂಬುದನ್ನು ದೊಡ್ಡವರಾದ ಮೇಲೆ ನಿಮ್ಮ ಮಕ್ಕಳಿಗೆ ತಿಳಿದಿರಲಿ ಎಂಬುದು ನಮ್ಮ ಇಚ್ಛೆ. 28 ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳಿಗೆ ‘ನೀವು ಇಸ್ರೇಲಿಗೆ ಸಂಬಂಧಪಟ್ಟವರಲ್ಲ’ ಎಂದು ಹೇಳಿದರೆ, ನಮ್ಮ ಮಕ್ಕಳು ‘ಇಲ್ಲಿ ನೋಡಿ! ಗತಿಸಿಹೋದ ನಮ್ಮ ಪೂರ್ವಿಕರು ಒಂದು ಯಜ್ಞವೇದಿಕೆಯನ್ನು ಕಟ್ಟಿದ್ದಾರೆ. ಆ ಯಜ್ಞವೇದಿಕೆಯು ಪವಿತ್ರ ಗುಡಾರದಲ್ಲಿರುವ ಯಜ್ಞವೇದಿಕೆಯಂತಿದೆ. ನಾವು ಈ ಯಜ್ಞವೇದಿಕೆಯನ್ನು ಸರ್ವಾಂಗಹೋಮಗಳಿಗಾಗಲಿ ಯಜ್ಞಗಳಿಗಾಗಲಿ ಬಳಸುವುದಿಲ್ಲ. ನಾವು ಇಸ್ರೇಲಿಗೆ ಸೇರಿದವರೆಂಬುದಕ್ಕೆ ಈ ಯಜ್ಞವೇದಿಕೆ ಸಾಕ್ಷಿಯಾಗಿದೆ’ ಎಂದು ಹೇಳುವರು.
29 “ಯೆಹೋವನಿಗೆ ವಿರೋಧಿಗಳಾಗಲು ನಮಗೆ ನಿಜವಾಗಿಯೂ ಇಷ್ಟವಿಲ್ಲ. ಆತನಿಗೆ ಅವಿಧೇಯರಾಗುವುದಕ್ಕೂ ಇಷ್ಟವಿಲ್ಲ. ನಿಜವಾದ ಯಜ್ಞವೇದಿಕೆಯು ಪವಿತ್ರಗುಡಾರದ ಎದುರಿಗೆ ಮಾತ್ರ ಇದೆ. ಆ ಯಜ್ಞವೇದಿಕೆಯು ನಮ್ಮ ದೇವರಾದ ಯೆಹೋವನದು ಎಂಬುದನ್ನು ನಾವು ಬಲ್ಲೆವು” ಎಂಬುದಾಗಿ ಉತ್ತರಕೊಟ್ಟರು.
30 ಯಾಜಕನಾದ ಫೀನೆಹಾಸನು ಮತ್ತು ಅವನ ಜೊತೆಯಲ್ಲಿ ಬಂದ ಕುಲಾಧಿಪತಿಗಳು ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಕುಲದ ಅರ್ಧಜನರ ಮಾತುಗಳನ್ನು ಕೇಳಿದರು. ಇವರು ಹೇಳುತ್ತಿರುವುದು ಸತ್ಯ ಎಂದು ಅವರಿಗೆ ಮನದಟ್ಟಾಯಿತು. 31 ಆಗ ಯಾಜಕನಾದ ಫೀನೆಹಾಸನು ಈ ಕುಲಗಳವರಿಗೆ, “ಯೆಹೋವನು ನಮ್ಮೊಂದಿಗಿದ್ದಾನೆಂಬುದು ಮತ್ತು ನೀವು ಆತನಿಗೆ ವಿರೋಧಿಗಳಾಗಿಲ್ಲವೆಂಬುದು ಈಗ ನಮಗೆ ತಿಳಿಯಿತು. ಯೆಹೋವನು ಇಸ್ರೇಲರನ್ನು ಶಿಕ್ಷಿಸುವುದಿಲ್ಲವೆಂದು ನಮಗೆ ಸಂತೋಷವಾಗಿದೆ” ಎಂದು ಹೇಳಿದನು.
32 ಆಗ ಫೀನೆಹಾಸನು ಮತ್ತು ಕುಲಾಧಿಪತಿಗಳು ಆ ಸ್ಥಳದಿಂದ ತಮ್ಮ ಮನೆಗಳಿಗೆ ಹೋದರು. ಅವರು ರೂಬೇನ್ಯರನ್ನು ಮತ್ತು ಗಾದ್ಯರನ್ನು ಗಿಲ್ಯಾದ್ ಪ್ರದೇಶದಲ್ಲಿ ಬಿಟ್ಟು ಕಾನಾನಿಗೆ ಹಿಂತಿರುಗಿ ನಡೆದ ಸಂಗತಿಯನ್ನು ಇಸ್ರೇಲರಿಗೆ ತಿಳಿಸಿದರು. 33 ಆಗ ಇಸ್ರೇಲರಿಗೆ ಸಮಾಧಾನವಾಯಿತು. ಅವರು ಸಂತೋಷಪಟ್ಟು ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅವರು ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆ ಕುಲದವರೊಡನೆ ಯುದ್ಧ ಮಾಡಬಾರದೆಂದೂ ಅವರು ವಾಸಮಾಡುತ್ತಿರುವ ಪ್ರದೇಶವನ್ನು ನಾಶಮಾಡಬಾರದೆಂದೂ ನಿರ್ಧರಿಸಿದರು.
34 ರೂಬೇನ್ಯರು ಮತ್ತು ಗಾದ್ಯರು, “ಯೆಹೋವನೇ ದೇವರು ಎಂಬುದಕ್ಕೆ ಈ ಯಜ್ಞವೇದಿಕೆಯೇ ಸಾಕ್ಷಿ” ಎಂದು ಅದಕ್ಕೆ “ಏದ್” ಎಂದು ಹೆಸರಿಟ್ಟರು.
ಯೆಹೋಶುವನಿಂದ ಜನರಿಗೆ ಪ್ರೇರಣೆ
23 ಯೆಹೋವನು ಇಸ್ರೇಲರ ಶತ್ರುಗಳನ್ನು ಸದೆಬಡೆದು ಅವರಿಗೆ ವಿಶ್ರಾಂತಿಯನ್ನು ಕೊಟ್ಟನು. ಯೆಹೋವನು ಇಸ್ರೇಲನ್ನು ಸುರಕ್ಷಿತಗೊಳಿಸಿದನು. ಅನೇಕ ವರ್ಷಗಳು ಕಳೆದವು. ಯೆಹೋಶುವನು ಬಹಳ ಮುದುಕನಾದನು. 2 ಆಗ ಯೆಹೋಶುವನು ಎಲ್ಲಾ ಹಿರಿಯನಾಯಕರನ್ನು, ಕುಟುಂಬದ ಮುಖ್ಯಸ್ಥರನ್ನು, ನ್ಯಾಯಾಧೀಶರನ್ನು ಮತ್ತು ಇಸ್ರೇಲರ ಅಧಿಕಾರಿಗಳನ್ನು ಸಭೆ ಸೇರಿಸಿದನು. ಯೆಹೋಶುವನು ಅವರಿಗೆ, “ನಾನು ಬಹಳ ಮುದುಕನಾಗಿದ್ದೇನೆ. 3 ಯೆಹೋವನು ನಮ್ಮ ಶತ್ರುಗಳಿಗೆ ಏನು ಮಾಡಿದನೆಂಬುದು ನೀವು ನೋಡಿದ್ದೀರಿ. ನಮಗೆ ಸಹಾಯ ಮಾಡುವುದಕ್ಕಾಗಿ ನಮ್ಮ ದೇವರಾದ ಯೆಹೋವನು ನಮಗಾಗಿ ಯುದ್ಧಮಾಡಿದನು. 4 ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ಮತ್ತು ಜೋರ್ಡನ್ ನದಿಯ ಮಧ್ಯದ ಪ್ರದೇಶವನ್ನು ನೀವು ಸ್ವಾಧೀನಪಡಿಸಿಕೊಳ್ಳಬಹುದೆಂದು ನಾನು ನಿಮಗೆ ತಿಳಿಸಿದ್ದನ್ನು ಸ್ಮರಿಸಿಕೊಳ್ಳಿ. ನಾನು ಆ ಪ್ರದೇಶವನ್ನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ್ದೆ. ಆದರೆ ಇಲ್ಲಿಯವರೆಗೂ ಅದು ನಿಮ್ಮ ಅಧೀನಕ್ಕೆ ಬಂದಿಲ್ಲ. 5 ಆದರೆ ನಿಮ್ಮ ದೇವರಾದ ಯೆಹೋವನು ಅಲ್ಲಿಯ ನಿವಾಸಿಗಳನ್ನು ಬಲವಂತದಿಂದ ಹೊರಡಿಸುತ್ತಾನೆ. ಆ ಪ್ರದೇಶವನ್ನು ನೀವು ಪಡೆದುಕೊಳ್ಳುತ್ತೀರಿ. ನಿಮ್ಮ ದೇವರಾದ ಯೆಹೋವನು ನಿಮಗಾಗಿ ಇದನ್ನು ಮಾಡುವುದಾಗಿ ವಾಗ್ದಾನ ಮಾಡಿದ್ದಾನೆ.
6 “ಯೆಹೋವನ ಆಜ್ಞೆಗಳನ್ನೆಲ್ಲಾ ಜಾಗರೂಕತೆಯಿಂದ ಕೈಕೊಂಡು ನಡೆಯಿರಿ. ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಎಲ್ಲವನ್ನು ಪಾಲಿಸಿರಿ. ಆ ಧರ್ಮಶಾಸ್ತ್ರಕ್ಕೆ ವಿಮುಖರಾಗಬೇಡಿ. 7 ಇಸ್ರೇಲರಲ್ಲದ ಕೆಲವು ಜನರು ನಮ್ಮೊಂದಿಗೆ ವಾಸಮಾಡಿಕೊಂಡಿದ್ದಾರೆ. ಅವರು ತಮ್ಮ ದೇವರುಗಳನ್ನೇ ಪೂಜಿಸುತ್ತಾರೆ. ಅವರೊಂದಿಗೆ ಸ್ನೇಹ ಮಾಡಬೇಡಿ. ಅವರ ದೇವರುಗಳ ಸೇವೆಯನ್ನಾಗಲಿ ಪೂಜೆಯನ್ನಾಗಲಿ ಮಾಡಬೇಡಿ. ಆ ದೇವರುಗಳ ಹೆಸರುಗಳ ಮೂಲಕ ಬೇಡಿಕೊಳ್ಳಬೇಡಿ. ಅವುಗಳ ಮೇಲೆ ಪ್ರಮಾಣ ಮಾಡಬೇಡಿ. ಅವುಗಳಿಗೆ ಅಡ್ಡಬಿದ್ದು ಪೂಜಿಸಬೇಡಿ. 8 ನಿಮ್ಮ ದೇವರಾದ ಯೆಹೋವನನ್ನೇ ಅನುಸರಿಸಿಕೊಂಡಿರಿ. ಈವರೆಗೆ ನೀವು ಹೇಗಿದ್ದಿರೋ ಅದೇ ರೀತಿಯಲ್ಲಿ ಮುಂದೆಯೂ ಇರಿ.
9 “ದೊಡ್ಡದಾದ ಮತ್ತು ಪ್ರಬಲವಾದ ಜನಾಂಗಗಳನ್ನು ಸೋಲಿಸಲು ಯೆಹೋವನು ನಿಮಗೆ ನೆರವಾದನು. ಆತನು ಅವರನ್ನು ತನ್ನ ಬಲವುಳ್ಳ ಹಸ್ತದಿಂದ ಹೊರಗಟ್ಟಿದನು. ನಿಮ್ಮನ್ನು ಸೋಲಿಸಲು ಯಾವ ಜನಾಂಗಕ್ಕೂ ಸಾಧ್ಯವಿಲ್ಲ. 10 ಯೆಹೋವನ ಸಹಾಯದಿಂದ ನಿಮ್ಮಲ್ಲಿ ಒಬ್ಬ ಇಸ್ರೇಲಿಯು ಒಂದು ಸಾವಿರ ಮಂದಿ ಶತ್ರುಗಳನ್ನು ಸೋಲಿಸುವಂತಾಯಿತು; ಏಕೆಂದರೆ ನಿಮ್ಮ ದೇವರಾದ ಯೆಹೋವನು ನಿಮಗಾಗಿ ಯುದ್ಧ ಮಾಡುವುದಾಗಿ ಪ್ರಮಾಣ ಮಾಡಿದ್ದಾನೆ. 11 ಆದ್ದರಿಂದ ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸುವುದರಲ್ಲಿ ಬಹು ಎಚ್ಚರಿಕೆಯಿಂದಿರಿ.
12 “ಯೆಹೋವನನ್ನೇ ಅನುಸರಿಸಿರಿ. ಇಸ್ರೇಲಿಗೆ ಸೇರಿಲ್ಲದ ಅನ್ಯರೊಂದಿಗೆ ಸ್ನೇಹ ಮಾಡಬೇಡಿ. ಅವರ ಜನರನ್ನು ಮದುವೆಯಾಗಬೇಡಿ. ನೀವು ಅವರೊಂದಿಗೆ ಸ್ನೇಹ ಮಾಡಿದರೆ, 13 ನಿಮ್ಮ ದೇವರಾದ ಯೆಹೋವನು ಶತ್ರುಗಳನ್ನು ಸೋಲಿಸಲು ನಿಮಗೆ ಸಹಾಯ ಮಾಡುವುದಿಲ್ಲ, ಅವರು ನಿಮಗೆ ಉರುಲಿನಂತಾಗುತ್ತಾರೆ. ಹೊಗೆ ಮತ್ತು ಧೂಳು ನಿಮ್ಮ ಕಣ್ಣಿಗೆ ನೋವನ್ನುಂಟು ಮಾಡುವಂತೆ ಅವರು ನಿಮಗೆ ನೋವನ್ನುಂಟು ಮಾಡುತ್ತಾರೆ; ಈ ಒಳ್ಳೆಯ ದೇಶದಿಂದ ನಿಮ್ಮನ್ನು ಬಲಾತ್ಕಾರದಿಂದ ಹೊರಗಟ್ಟಲಾಗುವುದು. ನಿಮ್ಮ ದೇವರಾದ ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿದ್ದಾನೆ. ಆದರೆ ಯೆಹೋವನ ಆಜ್ಞೆಯನ್ನು ಪಾಲಿಸದಿದ್ದಲ್ಲಿ ನೀವು ಇದನ್ನು ಕಳೆದುಕೊಳ್ಳಬೇಕಾಗುತ್ತದೆ.
14 “ನಾನು ಇಹಲೋಕ ಯಾತ್ರೆಯನ್ನು ಮುಗಿಸುವ ಕಾಲಬಂದಂತಿದೆ. ಯೆಹೋವನು ನಿಮಗಾಗಿ ಅನೇಕ ಮಹತ್ಕಾರ್ಯಗಳನ್ನು ಮಾಡಿದ್ದು ನಿಮಗೆ ಗೊತ್ತಿದೆ; ಅದನ್ನು ನೀವು ಮನಃಪೂರ್ವಕವಾಗಿ ನಂಬುತ್ತೀರಿ. ಆತನು ತನ್ನ ಯಾವ ವಾಗ್ದಾನವನ್ನೂ ನೆರವೇರಿಸದೆ ಬಿಟ್ಟಿಲ್ಲ. ಯೆಹೋವನು ನಮಗೆ ಮಾಡಿದ ಪ್ರತಿಯೊಂದು ವಾಗ್ದಾನವನ್ನು ನೆರವೇರಿಸಿದ್ದಾನೆ. 15 ನಿಮ್ಮ ದೇವರಾದ ಯೆಹೋವನು ಮಾಡಿದ ಪ್ರತಿಯೊಂದು ಒಳ್ಳೆಯ ವಾಗ್ದಾನವು ನೆರವೇರಿದೆ. ಅದೇ ರೀತಿಯಲ್ಲಿ ಯೆಹೋವನು ತನ್ನ ಉಳಿದ ವಾಗ್ದಾನವನ್ನು ನೆರವೇರಿಸುವನು. ನೀವು ತಪ್ಪುಗಳನ್ನು ಮಾಡಿದರೆ ನಿಮಗೆ ಕೆಟ್ಟದ್ದಾಗುವುದೆಂದೂ ಆತನು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ಬಲವಂತವಾಗಿ ಹೊರಗಟ್ಟುವದಾಗಿಯೂ ಆತನು ಹೇಳಿದ್ದಾನೆ. 16 ನಿಮ್ಮ ದೇವರಾದ ಯೆಹೋವನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಪಾಲಿಸದೆ ಬೇರೆ ದೇವರುಗಳ ಸೇವೆಮಾಡಿದರೆ ಈ ದೇಶವನ್ನು ಕಳೆದುಕೊಳ್ಳುವಿರಿ. ನೀವು ಅನ್ಯದೇವರುಗಳನ್ನು ಪೂಜಿಸಬಾರದು. ಇಲ್ಲವಾದರೆ, ಯೆಹೋವನು ನಿಮ್ಮ ಮೇಲೆ ಬಹು ಕೋಪಗೊಂಡು ಆತನು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ಬಲವಂತವಾಗಿ ಹೊರಡಿಸುವನು,” ಅಂದನು.
ಯೆಹೋಶುವನು ವಂದನೆಗಳನ್ನು ಹೇಳಿದನು
24 ಯೆಹೋಶುವನು ಶೆಕೆಮಿನಲ್ಲಿ ಇಸ್ರೇಲಿನ ಎಲ್ಲ ಕುಲದವರನ್ನು, ಹಿರಿಯ ನಾಯಕರನ್ನು, ಕುಲದ ಪ್ರಧಾನರನ್ನು, ನ್ಯಾಯಾಧೀಶರನ್ನು, ಮುಖಂಡರನ್ನು ಮತ್ತು ಇಸ್ರೇಲಿನ ಅಧಿಕಾರಿಗಳನ್ನು ಒಟ್ಟಾಗಿ ಸೇರಿಸಿದನು. ಈ ಜನರು ದೇವರ ಸನ್ನಿಧಿಯಲ್ಲಿ ನಿಂತರು.
2 ಆಗ ಯೆಹೋಶುವನು ಅವರೆಲ್ಲರಿಗೆ, “ಇಸ್ರೇಲಿನ ದೇವರಾದ ಯೆಹೋವನು ನಿಮಗೆ ಹೇಳುವುದನ್ನು ನಾನು ನಿಮಗೆ ತಿಳಿಸುತ್ತಿದ್ದೇನೆ: ‘ಬಹಳ ಹಿಂದಿನ ಕಾಲದಲ್ಲಿ ನಿಮ್ಮ ಪೂರ್ವಿಕರು ಯೂಫ್ರೇಟೀಸ್ ನದಿಯ ಆಚೆಯ ದಡದಲ್ಲಿದ್ದರು, ನಾನು ಅಬ್ರಹಾಮ್ ಮತ್ತು ನಾಹೋರ್ ಎಂಬವರ ತಂದೆಯಾದ “ತೆರಹ” ಮೊದಲಾದ ಜನರ ಬಗ್ಗೆ ಮಾತನಾಡುತ್ತಿದ್ದೇನೆ. ಆ ಸಮಯದಲ್ಲಿ ಅವರು ಬೇರೆ ದೇವರುಗಳನ್ನು ಪೂಜಿಸುತ್ತಿದ್ದರು. 3 ಆದರೆ ಯೆಹೋವನಾದ ನಾನು ನಿಮ್ಮ ಪೂರ್ವಿಕನಾದ ಅಬ್ರಹಾಮನನ್ನು ಆ ಪ್ರದೇಶದಿಂದ ನದಿಯ ಮತ್ತೊಂದು ದಡಕ್ಕೆ ಕರೆದುಕೊಂಡು ಬಂದೆ. ನಾನು ಅವನನ್ನು ಕಾನಾನ್ ಪ್ರದೇಶದಲ್ಲೆಲ್ಲ ಸಂಚಾರ ಮಾಡಿಸಿ ಅವನಿಗೆ ಅನೇಕ ಮಕ್ಕಳನ್ನು ಕೊಟ್ಟೆನು, ನಾನು ಅಬ್ರಹಾಮನಿಗೆ ಇಸಾಕನೆಂಬ ಮಗನನ್ನು ಕೊಟ್ಟೆ. 4 ಇಸಾಕನಿಗೆ ಯಾಕೋಬ ಮತ್ತು ಏಸಾವ ಎಂಬ ಗಂಡುಮಕ್ಕಳನ್ನು ಕೊಟ್ಟೆನು. ಏಸಾವನಿಗೆ ಸೇಯೀರ್ ಪರ್ವತಗಳ ಸುತ್ತಮುತ್ತಲಿನ ಪ್ರದೇಶವನ್ನು ಕೊಟ್ಟೆನು. ಯಾಕೋಬ ಮತ್ತು ಅವನ ಮಕ್ಕಳು ಅಲ್ಲಿ ಇರಲಿಲ್ಲ. ಅವರು ಈಜಿಪ್ಟ್ ದೇಶದಲ್ಲಿ ವಾಸಮಾಡಲು ಹೋಗಿದ್ದರು.
5 “‘ತರುವಾಯ ನಾನು ಮೋಶೆ ಆರೋನರನ್ನು ಈಜಿಪ್ಟಿಗೆ ಕಳುಹಿಸಿದೆ. ಅವರು ನನ್ನ ಜನರನ್ನು ಈಜಿಪ್ಟಿನಿಂದ ಹೊರತರಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಈಜಿಪ್ಟಿನಲ್ಲಿ ಅನೇಕ ಅದ್ಭುತವಾದ ಕಾರ್ಯಗಳನ್ನು ನಡೆಸಿ ನಾನು ನಿಮ್ಮ ಜನರನ್ನು ಈಜಿಪ್ಟಿನಿಂದ ಹೊರಗೆ ತಂದೆ. 6 ಹೀಗೆ ನಿಮ್ಮ ಪೂರ್ವಿಕರು ಈಜಿಪ್ಟಿನಿಂದ ಹೊರಡು ಕೆಂಪು ಸಮುದ್ರಕ್ಕೆ ಬಂದರು. ಈಜಿಪ್ಟಿನ ಜನರು ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಅವರನ್ನು ಬೆನ್ನಟ್ಟಿಕೊಂಡು ಬಂದರು. 7 ಆಗ ನಿಮ್ಮ ಜನರು ಯೆಹೋವನಾದ ನನ್ನ ಸಹಾಯ ಕೋರಿದರು. ನಾನು ಈಜಿಪ್ಟಿನ ಜನರಿಗೂ ಅವರಿಗೂ ಮಧ್ಯದಲ್ಲಿ ಕತ್ತಲೆಯಾಗುವಂತೆ ಮಾಡಿದೆ; ಸಮುದ್ರವು ಅವರನ್ನು ಮುಚ್ಚಿಬಿಡುವಂತೆ ಮಾಡಿದೆ. ಈಜಿಪ್ಟಿನ ಸೈನ್ಯಕ್ಕೆ ನಾನು ಮಾಡಿದ್ದನ್ನು ನೀವೇ ನೋಡಿದ್ದೀರಿ.
“‘ತರುವಾಯ ಬಹಳ ಕಾಲದವರೆಗೆ ನೀವು ಅರಣ್ಯದಲ್ಲಿ ಪ್ರವಾಸ ಮಾಡಿಕೊಂಡಿದ್ದಿರಿ. 8 ಆಗ ನಾನು ನಿಮ್ಮನ್ನು ಜೋರ್ಡನ್ ನದಿಯ ಪೂರ್ವದಲ್ಲಿರುವ ಅಮೋರಿಯರ ಪ್ರದೇಶಕ್ಕೆ ಕರೆತಂದೆನು. ಆ ಜನರು ನಿಮ್ಮೊಂದಿಗೆ ಯುದ್ಧಮಾಡಿದರು. ಆದರೆ ನೀವು ಅವರನ್ನು ಸೋಲಿಸುವಂತೆ ನಾನು ಮಾಡಿದೆ. ಆ ಜನರನ್ನು ನಾಶಮಾಡುವ ಶಕ್ತಿಯನ್ನು ನಾನು ನಿಮಗೆ ಕೊಟ್ಟೆನು. ಆಗ ನೀವು ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿರಿ.
9 “‘ಅನಂತರ ಮೋವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ ಬಾಲಾಕನು ಇಸ್ರೇಲರೊಂದಿಗೆ ಯುದ್ಧಮಾಡಲು ಸಿದ್ಧತೆಮಾಡಿದನು. ಅವನು ಬೆಯೋರನ ಮಗನಾದ ಬಿಳಾಮನನ್ನು ಕರೆಯಿಸಿ ನಿಮ್ಮನ್ನು ಶಪಿಸಲು ಹೇಳಿದನು. 10 ಆದರೆ ಯೆಹೋವನಾದ ನಾನು ಬಿಳಾಮನಿಗೆ ಶಪಿಸಲು ಅನುಮತಿ ಕೊಡಲಿಲ್ಲ. ಅದಕ್ಕಾಗಿ ಬಿಳಾಮನು ನಿಮಗೆ ಶುಭವನ್ನೇ ಕೋರಿದನು. ಅವನು ಅನೇಕ ಸಲ ನಿಮ್ಮನ್ನು ಆಶೀರ್ವದಿಸಿದನು. ನಾನು ನಿಮ್ಮನ್ನು ಅವನ ಕೈಗಳಿಂದ ಬಿಡುಗಡೆ ಮಾಡಿದೆ.
11 “‘ತರುವಾಯ ನೀವು ಜೋರ್ಡನ್ ನದಿಯನ್ನು ದಾಟಿ ಜೆರಿಕೊ ನಗರಕ್ಕೆ ಹೋದಿರಿ. ಜೆರಿಕೊ ನಗರದ ಜನರು ನಿಮ್ಮ ಮೇಲೆ ಯುದ್ಧ ಮಾಡಿದರು. ಅಮೋರಿಯರು, ಪೆರಿಜ್ಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷಿಯರು, ಹಿವ್ವಿಯರು, ಯೆಬೂಸಿಯರು ಕೂಡ ನಿಮ್ಮ ಮೇಲೆ ಯುದ್ಧಕ್ಕೆ ಬಂದರು. ಆದರೆ ನೀವು ಅವರೆಲ್ಲರನ್ನು ಸೋಲಿಸುವಂತೆ ನಾನು ಮಾಡಿದೆನು. 12 ನಿಮ್ಮ ಸೈನಿಕರು ಯುದ್ಧಮಾಡಲು ಹೋಗುತ್ತಿರುವಾಗ ನಾನು ಅವರಿಗಿಂತ ಮುಂಚೆಯೇ ಕಡಜದ ಹುಳಗಳ ಗುಂಪನ್ನು ಕಳಿಸಿದ್ದೆ. ಈ ಹುಳಗಳು ಅಮೋರಿಯರ ಅರಸರಿಬ್ಬರನ್ನೂ ಓಡಿಸಿಬಿಟ್ಟವು. ಹೀಗೆ ನೀವು ಖಡ್ಗಗಳನ್ನು ಮತ್ತು ಬಿಲ್ಲುಬಾಣಗಳನ್ನು ಉಪಯೋಗಿಸದೆಯೇ ಆ ಪ್ರದೇಶವನ್ನು ವಶಪಡಿಸಿಕೊಂಡಿರಿ.
13 “‘ಯೆಹೋವನಾದ ನಾನು ನಿಮಗೆ ಆ ದೇಶವನ್ನು ಕೊಟ್ಟಿದ್ದೇನೆ. ನೀವು ಆ ದೇಶಕ್ಕಾಗಿ ಏನನ್ನೂ ಮಾಡಿಲ್ಲ. ನಿಮಗೆ ಅದನ್ನು ಕೊಟ್ಟವನು ನಾನೇ. ನೀವು ಆ ನಗರಗಳನ್ನು ಕಟ್ಟಲೇ ಇಲ್ಲ. ಅವುಗಳನ್ನು ನಿಮಗೆ ಕೊಟ್ಟವನು ನಾನೇ. ಈಗ ನೀವು ಆ ಪ್ರದೇಶದಲ್ಲಿ ಮತ್ತು ಆ ನಗರಗಳಲ್ಲಿ ವಾಸಮಾಡುತ್ತಿದ್ದೀರಿ. ನೀವು ದ್ರಾಕ್ಷಿ ಮತ್ತು ಆಲಿವ್ ಮರದ ತೋಟಗಳನ್ನು ಹೊಂದಿರುವಿರಿ. ಆದರೆ ಆ ತೋಟಗಳನ್ನು ನೀವು ಬೆಳೆಸಲಿಲ್ಲ.’”
14 ತರುವಾಯ ಯೆಹೋಶುವನು ಜನರಿಗೆ, “ಈಗ ನೀವು ಯೆಹೋವನ ಮಾತುಗಳನ್ನು ಕೇಳಿದ್ದೀರಿ. ನೀವು ಆತನಲ್ಲಿ ಭಯಭಕ್ತಿಯಿಂದಿರಬೇಕು. ನಿಮ್ಮ ಪೂರ್ವಿಕರು ಯೂಫ್ರೇಟೀಸ್ ನದಿಯ ಆಚೆಯಲ್ಲಿಯೂ ಈಜಿಪ್ಟಿನಲ್ಲಿಯೂ ಪೂಜಿಸುತ್ತಿದ್ದ ಸುಳ್ಳುದೇವರುಗಳನ್ನು ಎಸೆದುಬಿಡಿ. ಈಗ ನೀವು ಯೆಹೋವನ ಸೇವೆಯನ್ನು ಮಾತ್ರ ಮಾಡಬೇಕು.
15 “ನೀವು ಯೆಹೋವನ ಸೇವೆಮಾಡಲು ಇಷ್ಟಪಡದಿದ್ದರೆ ಯಾರ ಸೇವೆಯನ್ನು ಮಾಡಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ. ನಿಮ್ಮ ಪೂರ್ವಿಕರು ಯೂಫ್ರೇಟೀಸ್ ನದಿಯ ಆಚೆ ಇದ್ದಾಗ ಪೂಜಿಸುತ್ತಿದ್ದ ದೇವರುಗಳ ಸೇವೆಮಾಡುವಿರೋ ಅಥವಾ ಈ ಪ್ರದೇಶದಲ್ಲಿದ್ದ ಅಮೋರಿಯರ ದೇವತೆಗಳ ಸೇವೆಮಾಡುವಿರೋ ಎಂಬುದನ್ನು ನೀವು ಇಂದು ನಿರ್ಧರಿಸಬೇಕು. ಆಯ್ಕೆ ನಿಮಗೆ ಬಿಟ್ಟಿದ್ದು. ಆದರೆ ನಾನು ಮತ್ತು ನನ್ನ ಕುಟುಂಬದವರು ಯೆಹೋವನನ್ನೇ ಸೇವಿಸುತ್ತೇವೆ” ಅಂದನು.
16 ಅದಕ್ಕೆ ಜನರು, “ನಾವು ಯೆಹೋವನನ್ನು ಅನುಸರಿಸುವುದನ್ನು ಎಂದಿಗೂ ನಿಲ್ಲಿಸುವದಿಲ್ಲ. ನಾವು ಬೇರೆ ದೇವರುಗಳ ಸೇವೆಯನ್ನು ಎಂದಿಗೂ ಮಾಡುವುದಿಲ್ಲ. 17 ನಮ್ಮ ಜನರನ್ನು ಈಜಿಪ್ಟಿನಿಂದ ಹೊರತಂದವನು ನಮ್ಮ ದೇವರಾದ ಯೆಹೋವನೆಂದು ನಮಗೆ ಗೊತ್ತು. ನಾವು ಈಜಿಪ್ಟಿನಲ್ಲಿ ಗುಲಾಮರಾಗಿದ್ದೆವು; ಆದರೆ ಯೆಹೋವನು ಅಲ್ಲಿ ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿ ನಮ್ಮನ್ನು ಅಲ್ಲಿಂದ ಬಿಡಿಸಿಕೊಂಡು ಬಂದನು. ನಾವು ಬೇರೆ ದೇಶಗಳಲ್ಲಿ ಪ್ರವಾಸ ಮಾಡಿಕೊಂಡು ಬರುವಾಗ ನಮ್ಮನ್ನು ರಕ್ಷಿಸಿದನು. 18 ಆ ದೇಶಗಳ ಜನರನ್ನು ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡಿದನು. ಈಗ ನಾವಿರುವ ಸ್ಥಳದಲ್ಲಿ ಮುಂಚೆ ವಾಸಮಾಡಿಕೊಂಡಿದ್ದ ಅಮೋರಿಯರನ್ನು ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡಿದ್ದಾನೆ. ಅದಕ್ಕಾಗಿ ನಾವು ಯೆಹೋವನ ಸೇವೆಯನ್ನು ಮುಂದುವರಿಸುತ್ತೇವೆ; ಏಕೆಂದರೆ ಆತನು ನಮ್ಮ ದೇವರು” ಎಂದು ಉತ್ತರಕೊಟ್ಟರು.
19 ಆಗ ಯೆಹೋಶುವನು ಅವರಿಗೆ, “ಅದು ನಿಜವಲ್ಲ, ನೀವು ಯೆಹೋವನ ಸೇವೆಯನ್ನು ಮುಂದುವರೆಸಿಕೊಂಡು ಹೋಗಲಾರಿರಿ. ನಮ್ಮ ದೇವರಾದ ಯೆಹೋವನು ಪವಿತ್ರನಾಗಿದ್ದಾನೆ; ತನ್ನ ಜನರು ಅನ್ಯದೇವರುಗಳನ್ನು ಪೂಜಿಸುವುದನ್ನು ಆತನು ದ್ವೇಷಿಸುತ್ತಾನೆ. ಒಂದುವೇಳೆ ನೀವೇನಾದರೂ ಆತನ ವಿರುದ್ಧವಾಗಿ ತಿರುಗಿಕೊಂಡರೆ ಆತನು ನಿಮ್ಮನ್ನು ಕ್ಷಮಿಸುವುದಿಲ್ಲ. 20 ನೀವು ಯೆಹೋವನನ್ನು ಬಿಟ್ಟು ಅನ್ಯದೇವರುಗಳ ಸೇವೆಮಾಡಿದರೆ ಆತನು ನಿಮಗೆ ಕೇಡನ್ನು ಬರಮಾಡುವನು. ಯೆಹೋವನು ನಿಮ್ಮನ್ನು ನಾಶಮಾಡುತ್ತಾನೆ. ನಿಮ್ಮ ದೇವರಾದ ಯೆಹೋವನು ನಿಮಗೆ ಒಳ್ಳೆಯವನಾಗಿದ್ದಾನೆ. ಆದರೆ ನೀವು ಆತನಿಗೆ ವಿಮುಖರಾದರೆ ಆತನು ನಿಮ್ಮನ್ನು ನಾಶಮಾಡುತ್ತಾನೆ” ಅಂದನು.
21 ಆದರೆ ಜನರು, “ಇಲ್ಲ! ನಾವು ಯೆಹೋವನ ಸೇವೆ ಮಾಡುತ್ತೇವೆ” ಎಂದು ಹೇಳಿದರು.
22 ಅದಕ್ಕೆ ಯೆಹೋಶುವನು, “ನೀವು ನಿಮ್ಮನ್ನೂ ನಿಮ್ಮ ಸುತ್ತಲಿರುವ ಜನರನ್ನೂ ನೋಡಿರಿ. ನೀವು ಯೆಹೋವನ ಸೇವೆಯನ್ನೇ ಆರಿಸಿಕೊಂಡಿದ್ದೀರಿ ಎಂಬುದು ನಿಮ್ಮೆಲ್ಲರಿಗೆ ಗೊತ್ತು ಮತ್ತು ಅದಕ್ಕೆ ನೀವು ಒಪ್ಪಿದ್ದೀರಿ. ನೀವೆಲ್ಲರೂ ಇದಕ್ಕೆ ಸಾಕ್ಷಿಯಾಗಿರುವಿರಾ?” ಎಂದು ಕೇಳಿದನು.
ಜನರು, “ಹೌದು, ಇದು ನಿಜ! ನಾವೆಲ್ಲರು ಯೆಹೋವನ ಸೇವೆಯನ್ನೇ ಆರಿಸಿಕೊಂಡಿದ್ದೇವೆ” ಎಂದು ಉತ್ತರಿಸಿದರು.
23 ಆಗ ಯೆಹೋಶುವನು, “ಹಾಗಾದರೆ ನಿಮ್ಮಲ್ಲಿರುವ ಸುಳ್ಳುದೇವರುಗಳನ್ನು ಎಸೆದುಬಿಡಿ. ಇಸ್ರೇಲರ ದೇವರಾದ ಯೆಹೋವನ ಕಡೆಗೆ ನಿಮ್ಮ ಮನಸ್ಸನ್ನು ತಿರುಗಿಸಿಕೊಳ್ಳಿರಿ” ಎಂದು ಹೇಳಿದನು.
24 ಆಗ ಜನರು ಯೆಹೋಶುವನಿಗೆ, “ನಾವು ನಮ್ಮ ದೇವರಾದ ಯೆಹೋವನ ಸೇವೆಯನ್ನೇ ಮಾಡುವೆವು. ನಾವು ಆತನ ಆಜ್ಞೆಯನ್ನು ಪಾಲಿಸುವೆವು” ಎಂದರು.
25 ಆದ್ದರಿಂದ ಯೆಹೋಶುವನು ಶೆಕೆಮಿನಲ್ಲಿ ಜನರಿಗಾಗಿ ಒಂದು ಒಡಂಬಡಿಕೆಯನ್ನು ಮಾಡಿದನು. ಅದು ಅವರಿಗೆ ಪಾಲಿಸಬೇಕಾದ ಒಂದು ವಿಧಿಯಾಯಿತು. 26 ಯೆಹೋಶುವನು ಇವುಗಳನ್ನು ದೇವರ ಧರ್ಮಶಾಸ್ತ್ರ ಗ್ರಂಥದಲ್ಲಿ ಬರೆದನು. ಯೆಹೋಶುವನು ಅಲ್ಲಿದ್ದ ಒಂದು ದೊಡ್ಡ ಕಲ್ಲನ್ನು ತೆಗೆದುಕೊಂಡು ಈ ಒಡಂಬಡಿಕೆಗೆ ಸಾಕ್ಷಿಯಾಗಿ ಅದನ್ನು ಯೆಹೋವನ ಪವಿತ್ರಗುಡಾರದ ಹತ್ತಿರವಿದ್ದ ಓಕ್ ಮರದ ಕೆಳಗೆ ನಿಲ್ಲಿಸಿದನು.
27 ಆಗ ಯೆಹೋಶುವನು ಜನರೆಲ್ಲರಿಗೆ, “ನಾವು ಇಂದು ಹೇಳಿದ ಎಲ್ಲವನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಈ ಕಲ್ಲು ನಿಮಗೆ ಸಾಕ್ಷಿಯಾಗಿರುವುದು. ಇಂದು ಯೆಹೋವನು ನಮ್ಮೊಡನೆ ಮಾತನಾಡುತ್ತಿದ್ದಾಗ ಈ ಕಲ್ಲು ಇಲ್ಲಿಯೇ ಇತ್ತು. ಅದಕ್ಕಾಗಿ ಈ ಕಲ್ಲು ಇಂದು ನಡೆದ ಸಂಗತಿಯನ್ನು ನೆನಪಿನಲ್ಲಿಡಲು ನಮಗೆ ಸಹಾಯಕವಾಗುವುದು. ನೀವು ನಿಮ್ಮ ದೇವರಾದ ಯೆಹೋವನಿಗೆ ವಿಮುಖರಾದರೆ ಈ ಕಲ್ಲೇ ನಿಮಗೆ ವಿರೋಧವಾಗಿ ಸಾಕ್ಷಿ ಹೇಳುವುದು” ಎಂದು ಹೇಳಿದನು.
28 ಬಳಿಕ ಯೆಹೋಶುವನು ಜನರಿಗೆ ತಮ್ಮ ಮನೆಗಳಿಗೆ ಹೋಗುವಂತೆ ತಿಳಿಸಿದನು. ಆದ್ದರಿಂದ ಪ್ರತಿಯೊಬ್ಬರೂ ತಮ್ಮತಮ್ಮ ಸ್ವನಾಡಿಗೆ ಹೊರಟುಹೋದರು.
ಯೆಹೋಶುವನ ಮರಣ
29 ಇದಾದ ಮೇಲೆ ನೂನನ ಮಗನಾದ ಯೆಹೋಶುವನು ಮರಣ ಹೊಂದಿದನು. ಯೆಹೋಶುವನು ನೂರಹತ್ತು ವರ್ಷ ಬದುಕಿದನು. 30 ಯೆಹೋಶುವನನ್ನು ತಿಮ್ನತ್ ಸೆರಹದ ಅವನ ಸ್ವಂತ ಭೂಮಿಯಲ್ಲಿ ಸಮಾಧಿ ಮಾಡಿದರು. ಇದು ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿದೆ.
31 ಯೆಹೋಶುವನು ಜೀವಿಸಿದಾಗ ಇಸ್ರೇಲರು ಯೆಹೋವನ ಸೇವೆಮಾಡಿದರು; ಯೆಹೋಶುವನ ಮರಣಾನಂತರವೂ ಅವರು ಯೆಹೋವನ ಸೇವೆಯನ್ನು ಮುಂದುವರೆಸಿದರು. ಯೆಹೋವನು ಇಸ್ರೇಲರಿಗಾಗಿ ಮಾಡಿದ ಮಹತ್ಕಾರ್ಯಗಳನ್ನು ನೋಡಿದ್ದ ಅವರ ನಾಯಕರು ಜೀವಿಸಿದ್ದಾಗಲೂ ಇಸ್ರೇಲರು ಯೆಹೋವನ ಸೇವೆಮಾಡಿದರು.
ಯೋಸೇಫನ ಎಲುಬುಗಳನ್ನು ಸ್ವದೇಶದಲ್ಲಿ ಹೂಳಿಟ್ಟದ್ದು
32 ಇಸ್ರೇಲರು ಈಜಿಪ್ಟಿನಿಂದ ಹೊರಟಾಗ ತಮ್ಮೊಂದಿಗೆ ಯೋಸೇಫನ ಎಲುಬುಗಳನ್ನೂ ತೆಗೆದುಕೊಂಡು ಬಂದಿದ್ದರು. ಅವರು ಯೋಸೇಫನ ಎಲುಬುಗಳನ್ನು ಶೆಕೆಮಿನಲ್ಲಿ ಹೂಳಿಟ್ಟರು. ಯಾಕೋಬನು ಶೆಕೆಮನ ತಂದೆಯಾದ ಹಮೋರನ ಗಂಡುಮಕ್ಕಳಿಂದ ನೂರು ಬೆಳ್ಳಿನಾಣ್ಯಗಳನ್ನು ಕೊಟ್ಟು ಕೊಂಡುಕೊಂಡ ಶೆಕೆಮ್ ಊರಿನ ಹೊಲದಲ್ಲಿ ಆ ಎಲುಬುಗಳನ್ನು ಹೂಳಿಟ್ಟರು. ಈ ಭೂಮಿಯ ಯೋಸೇಫನ ಮಕ್ಕಳದಾಗಿತ್ತು.
33 ಆರೋನನ ಮಗನಾದ ಎಲ್ಲಾಜಾರನು ಮರಣಹೊಂದಿದನು. ಗಿಬೇತ್‌ನಲ್ಲಿ ಎಲ್ಲಾಜಾರನನ್ನು ಸಮಾಧಿ ಮಾಡಲಾಯಿತು. ಗಿಬೇತ್ ಊರು ಎಫ್ರಾಯೀಮ್ ಪರ್ವತ ಪ್ರಾಂತ್ಯದಲ್ಲಿತ್ತು. ಆ ಊರನ್ನು ಎಲ್ಲಾಜಾರನ ಮಗನಾದ ಫೀನೆಹಾಸನಿಗೆ ಕೊಡಲಾಗಿತ್ತು.
Kannada Holy Bible: Easy-to-Read Version. All rights reserved. © 1997 Bible League International