Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆಹೋಶುವನು 12-15

ಇಸ್ರೇಲರು ಸೋಲಿಸಿದ ಅರಸರು

12 ಇಸ್ರೇಲರು ಜೋರ್ಡನ್ ನದಿಯ ಪೂರ್ವದಿಕ್ಕಿನ ಭೂಮಿಯನ್ನು ಸ್ವಾಧೀನಪಡಿಸಿಕೊಂಡರು. ಅರ್ನೋನ್ ನದಿಯಿಂದ ಹೆರ್ಮೋನ್ ಪರ್ವತದವರೆಗಿನ ಪ್ರದೇಶ ಮತ್ತು ಜೋರ್ಡನ್ ಕಣಿವೆಯ ಪೂರ್ವದಿಕ್ಕಿಗೆ ಉದ್ದಕ್ಕೂ ಹಬ್ಬಿರುವ ಪ್ರದೇಶ ಅವರ ವಶಕ್ಕೆ ಬಂತು. ಈ ದೇಶವನ್ನು ತೆಗೆದುಕೊಳ್ಳುವುದಕ್ಕಾಗಿ ಇಸ್ರೇಲರು ಸೋಲಿಸಿದ ಅರಸರ ವಿವರ ಹೀಗಿದೆ:

ಅವರು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾದ ಸೀಹೋನನನ್ನು ಸೋಲಿಸಿದರು. ಅವನು ಅರ್ನೋನ್ ನದಿಯ ತೀರದಲ್ಲಿದ್ದ ಅರೋಯೇರ್‌ನಿಂದ ಯಬ್ಬೋಕ್ ನದಿಯವರೆಗಿರುವ ಪ್ರದೇಶವನ್ನು ಆಳುತ್ತಿದ್ದನು. ಅವನ ರಾಜ್ಯವು ಆ ತಗ್ಗು ಪ್ರದೇಶದ ಮಧ್ಯದಿಂದ ಪ್ರಾರಂಭವಾಗುತ್ತಿತ್ತು. ಇದು ಅಮ್ಮೋನಿಯರ ಪ್ರದೇಶಕ್ಕೂ ಮೇರೆಯಾಗಿತ್ತು. ಗಿಲ್ಯಾದಿನ ಅರ್ಧ ಪ್ರದೇಶವು ಸೀಹೋನನ ಆಳ್ವಿಕೆಗೆ ಒಳಗಾಗಿತ್ತು. ಗಲಿಲಾಯ ಸರೋವರದಿಂದ ಲವಣಸಮುದ್ರದವರೆಗೆ ಹಬ್ಬಿದ ಜೋರ್ಡನ್ ಕಣಿವೆಯ ಪೂರ್ವಭಾಗವು ಕೂಡ ಅವನ ಆಳ್ವಿಕೆಗೆ ಒಳಪಟ್ಟಿತ್ತು. ಬೇತ್‌ಯೆಷಿಮೋತಿನಿಂದ ದಕ್ಷಿಣದಲ್ಲಿ ಪಿಸ್ಗಾ ಬೆಟ್ಟದವರೆಗೆ ಹಬ್ಬಿದ ಪ್ರದೇಶವನ್ನು ಸಹ ಅವನು ಆಳುತ್ತಿದ್ದನು.

ಅವರು ಬಾಷಾನಿನ ಅರಸನಾದ ಓಗನನ್ನು ಸಹ ಸೋಲಿಸಿದರು. ಓಗನು ರೆಫಾಯರ ವಂಶಸ್ಥನಾಗಿದ್ದನು. ಅಷ್ಟರೋತ್ ಮತ್ತು ಎದ್ರೈ ಎಂಬ ನಗರಗಳಲ್ಲಿ ವಾಸವಾಗಿದ್ದ ಓಗನು ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಮತ್ತು ಬಾಷಾನಿನ ಎಲ್ಲ ಪ್ರದೇಶ, ಇವುಗಳನ್ನು ಆಳುತ್ತಿದ್ದನು. ಗೆಷೂರ್ಯರು ಮತ್ತು ಮಾಕತೀ ಜನರು ವಾಸಮಾಡುವ ಪ್ರದೇಶವು ಇವನ ರಾಜ್ಯದ ಮೇರೆಯಾಗಿತ್ತು. ಹೆಷ್ಬೋನಿನ ಅರಸನಾದ ಸೀಹೋನನ ರಾಜ್ಯದ ಮೇರೆಯವರೆಗೆ ಹಬ್ಬಿದ ಗಿಲ್ಯಾದಿನ ಅರ್ಧಪ್ರಾಂತ್ಯವನ್ನು ಕೂಡ ಓಗನು ಆಳುತ್ತಿದ್ದನು.

ಯೆಹೋವನ ಸೇವಕನಾದ ಮೋಶೆಯು ಮತ್ತು ಇಸ್ರೇಲರು ಈ ಎಲ್ಲ ಅರಸರನ್ನು ಸೋಲಿಸಿದರು. ಮೋಶೆಯು ಈ ಪ್ರದೇಶವನ್ನು ರೂಬೇನನ ಕುಲದವರಿಗೂ ಗಾದನ ಕುಲದವರಿಗೂ ಮನಸ್ಸೆ ಕುಲದ ಅರ್ಧಜನರಿಗೂ ಸ್ವಾಸ್ತ್ಯವಾಗಿ ಕೊಟ್ಟುಬಿಟ್ಟನು.

ಇಸ್ರೇಲರು ಜೋರ್ಡನ್ ನದಿಯ ಪಶ್ಚಿಮ ಪ್ರದೇಶದಲ್ಲಿದ್ದ ಅರಸರನ್ನು ಸಹ ಸೋಲಿಸಿದರು. ಈ ಪ್ರದೇಶದಲ್ಲಿ ಯೆಹೋಶುವನು ಜನರ ಮುಂದಾಳಾದನು. ಯೆಹೋಶುವನು ಈ ಪ್ರದೇಶವನ್ನು ಇಸ್ರೇಲಿನ ಹನ್ನೆರಡು ಕುಲಗಳಿಗೆ ಹಂಚಿದನು. ದೇವರು ಅವರಿಗೆ ಕೊಡುವುದಾಗಿ ವಾಗ್ದಾನ ಮಾಡಿದ್ದ ಪ್ರದೇಶವೇ ಅದಾಗಿತ್ತು. ಈ ಪ್ರದೇಶವು ಲೆಬನೋನ್ ಕಣಿವೆಯ ಬಾಲ್ಗಾದ್ ಮತ್ತು ಸೇಯೀರ್ ಹತ್ತಿರವಿದ್ದ ಹಾಲಾಕ್ ಬೆಟ್ಟದ ನಡುವೆ ಇತ್ತು. ಪರ್ವತ ಪ್ರದೇಶ, ಪಶ್ಚಿಮದಿಕ್ಕಿನ ಇಳಿಜಾರು ಪ್ರದೇಶ, ಜೋರ್ಡನ್ ಕಣಿವೆ, ಪೂರ್ವದಿಕ್ಕಿನ ಬೆಟ್ಟಗಳು, ಮರುಭೂಮಿ ಮತ್ತು ನೆಗೆವ್ ಇದರಲ್ಲಿ ಸೇರಿಕೊಂಡಿದ್ದವು. ಈ ಪ್ರದೇಶವು ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ವಾಸಸ್ಥಾನವಾಗಿತ್ತು. ಇಸ್ರೇಲರು ಸೋಲಿಸಿದ ಅರಸರ ಪಟ್ಟಿಯು ಇಂತಿದೆ:

ಜೆರಿಕೊವಿನ ಅರಸ

ಆಯಿಯ ಅರಸ ಬೇತೇಲ್ ಹತ್ತಿರ

10 ಜೆರುಸಲೇಮಿನ ಅರಸ

ಹೆಬ್ರೋನಿನ ಅರಸ

11 ಯರ್ಮೂತಿನ ಅರಸ

ಲಾಕೀಷಿನ ಅರಸ

12 ಎಗ್ಲೋನಿನ ಅರಸ

ಗೆಜೆರಿನ ಅರಸ

13 ದೆಬೀರಿನ ಅರಸ

ಗೆದೆರಿನ ಅರಸ

14 ಹೊರ್ಮದ ಅರಸ

ಅರಾದಿನ ಅರಸ

15 ಲಿಬ್ನದ ಅರಸ

ಅದುಲ್ಲಾಮದ ಅರಸ

16 ಮಕ್ಕೇದದ ಅರಸ

ಬೇತೇಲಿನ ಅರಸ

17 ತಪ್ಪೂಹದ ಅರಸ

ಹೇಫೆರಿನ ಅರಸ

18 ಅಫೇಕದ ಅರಸ

ಲಷ್ಷಾರೋನಿನ ಅರಸ

19 ಮಾದೋನಿನ ಅರಸ

ಹಾಚೋರಿನ ಅರಸ

20 ಶಿಮ್ರೋನ್ಮೆರೋನಿನ ಅರಸ

ಅಕ್ಷಾಫಿನ ಅರಸ

21 ತಾನಕದ ಅರಸ

ಮೆಗಿದ್ದೋವಿನ ಅರಸ

22 ಕೆದೆಷಿನ ಅರಸ

ಕರ್ಮೆಲ್‌ ಬೆಟ್ಟದ ಯೊಕ್ನೆಯಾಮದ ಅರಸ

23 ದೋರ್ ಬೆಟ್ಟದ ಮೇಲಿರುವ ದೋರಿನ ಅರಸ

ಗಿಲ್ಗಾಲದಲ್ಲಿಯ ಗೋಯಿಮ್‌ನ ಅರಸ

24 ತಿರ್ಚದ ಅರಸ

ಒಟ್ಟು ಅರಸರು 31 ಮಂದಿ.

ವಶಪಡಿಸಿಕೊಂಡಿಲ್ಲದ ಪ್ರದೇಶ

13 ಯೆಹೋಶುವನು ತುಂಬಾ ಮುದುಕನಾದಾಗ ಯೆಹೋವನು ಅವನಿಗೆ, “ಯೆಹೋಶುವನೆ, ನೀನು ವೃದ್ಧನಾದೆ. ಆದರೆ ನೀನು ಇನ್ನೂ ಸ್ವಾಧೀನಪಡಿಸಿಕೊಳ್ಳಬೇಕಾದ ಪ್ರದೇಶ ಬಹಳಷ್ಟಿದೆ” ಅಂದನು. ನೀನು ಗೆಷೂರ ಪ್ರದೇಶವನ್ನು ಮತ್ತು ಫಿಲಿಷ್ಟಿಯರ ಪ್ರದೇಶವನ್ನು ಇನ್ನೂ ವಶಪಡಿಸಿಕೊಂಡಿಲ್ಲ. ಈಜಿಪ್ಟಿನ ಶೀಹೋರ್ ನದಿಯಿಂದ ಉತ್ತರದ ಎಕ್ರೋನ್ ಸೀಮೆಯವರೆಗೂ ಚಾಚಿಕೊಂಡಿರುವ ಭೂಮಿಯನ್ನು ನೀನು ವಶಪಡಿಸಿಕೊಂಡಿಲ್ಲ. ಆ ಭೂಮಿಯು ಇನ್ನೂ ಕಾನಾನ್ಯರ ಅಧೀನದಲ್ಲಿದೆ. ನೀನು ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರು ಮತ್ತು ಎಕ್ರೋನಿನ ಎಂಬ ಐದು ಮಂದಿ ಫಿಲಿಷ್ಟಿಯರ ನಾಯಕರನ್ನು ಇನ್ನೂ ಸೋಲಿಸಬೇಕಾಗಿದೆ. ಗೆಷೂರ್ಯ ಸೀಮೆಯು, ಕಾನಾನ್ ದೇಶದ ದಕ್ಷಿಣದಲ್ಲಿ ವಾಸವಾಗಿರುವ ಅವ್ವೀಯರನ್ನು ಸಹ ನೀನು ಸೋಲಿಸಬೇಕಾಗಿದೆ. ನೀನು ಇಲ್ಲಿಯವರೆಗೂ ಗೆಬಾಲ್ಯರನ್ನು ಸೋಲಿಸಿಲ್ಲ. ಹೆರ್ಮೋನ್ ಬೆಟ್ಟದ ಬುಡದಲ್ಲಿರುವ ಬಾಲ್ಗಾದಿನ ಪೂರ್ವದಿಂದಿಡಿದು ಲೆಬೊಹಾಮಾತಿನವರೆಗೆ ಇರುವ ಪ್ರದೇಶವನ್ನು ನೀನು ಗೆಲ್ಲಬೇಕು. ಬಾಲ್ಗಾದ್ ಲೆಬನೋನ್ ಪ್ರದೇಶದಲ್ಲಿದೆ.

“ಲೆಬನೋನಿನಿಂದ ಮಿಸ್ರೆಪೋತ್ಮಯಿಮಿನವರೆಗಿರುವ ಪರ್ವತ ಪ್ರದೇಶದಲ್ಲಿ ಚೀದೋನ್ಯರು ವಾಸವಾಗಿದ್ದಾರೆ. ಆದರೆ ಇಸ್ರೇಲರಿಗಾಗಿ ನಾನು ಅವರನ್ನೆಲ್ಲಾ ಹೊರ ತಳ್ಳುತ್ತೇನೆ. ಇಸ್ರೇಲರಿಗೆ ದೇಶವನ್ನು ಹಂಚುವಾಗ ಈ ಪ್ರದೇಶವನ್ನು ಸೇರಿಸಿ ಒಂಭತ್ತು ಕುಲಗಳಿಗೂ ಮನಸ್ಸೆ ಕುಲದ ಅರ್ಧಜನರಿಗೂ ಪಾಲು ಮಾಡಿಕೊಡು.”

ದೇಶದ ಹಂಚಿಕೆ

ಮನಸ್ಸೆ ಕುಲದ ಅರ್ಧಜನರು, ರೂಬೇನ್ ಮತ್ತು ಗಾದ್ ಕುಲಗಳವರು ಈಗಾಗಲೇ ತಮ್ಮ ಸ್ವಾಸ್ತ್ಯವನ್ನು ತೆಗೆದುಕೊಂಡಿದ್ದರು. ಯೆಹೋವನ ಸೇವಕನಾದ ಮೋಶೆಯು ಜೋರ್ಡನ್ ನದಿಯ ಪೂರ್ವದಿಕ್ಕಿನ ಪ್ರದೇಶವನ್ನು ಅವರಿಗೆ ಕೊಟ್ಟಿದ್ದನು. ಅವರಿಗೆ ದೊರಕಿದ ಪ್ರದೇಶವು ಅರ್ನೋನ್ ಕಣಿವೆಯ ಬಳಿಯಲ್ಲಿದ್ದ ಅರೋಯೇರ್‌ನಿಂದ ಆರಂಭಗೊಂಡು ಮಧ್ಯಕಣಿವೆಯಲ್ಲಿದ್ದ ಊರಿನವರೆಗೂ ವಿಸ್ತರಿಸಿಕೊಂಡಿತ್ತು. ಮೇದೆಬದಿಂದ ದೀಬೋನಿನವರೆಗಿದ್ದ ಇಡೀ ಬಯಲು ಪ್ರದೇಶವನ್ನು ಇದು ಒಳಗೊಂಡಿತ್ತು. 10 ಅಮೋರಿಯರ ಅರಸನಾದ ಸೀಹೋನನು ಆಳುತ್ತಿದ್ದ ಎಲ್ಲ ಪಟ್ಟಣಗಳು ಆ ಪ್ರದೇಶದಲ್ಲಿದ್ದವು. ಆ ಅರಸನು ಹೆಷ್ಬೋನ್ ನಗರದಲ್ಲಿ ಆಳುತ್ತಿದ್ದನು. ಅಮ್ಮೋನಿಯರು ಮೊದಲು ನೆಲೆಸಿದ್ದ ಪ್ರದೇಶದವರೆಗೆ ಈ ಪ್ರದೇಶ ವಿಸ್ತರಿಸಿತ್ತು. 11 ಗಿಲ್ಯಾದ್ ಪಟ್ಟಣವೂ ಸಹ ಈ ಪ್ರದೇಶಕ್ಕೆ ಒಳಪಟ್ಟಿತ್ತು. ಗೆಷೂರ್ಯರು ಮತ್ತು ಮಾಕತೀಯರು ವಾಸಮಾಡುತ್ತಿದ್ದ ಪ್ರದೇಶವು ಸಹ ಈ ಪ್ರದೇಶಕ್ಕೆ ಸೇರಿತ್ತು. ಇಡೀ ಹೆರ್ಮೋನ್ ಬೆಟ್ಟಪ್ರದೇಶ ಮತ್ತು ಸಲ್ಕಾ ಪಟ್ಟಣದವರೆಗೆ ವಿಸ್ತರಿಸಿಕೊಂಡಿದ್ದ ಬಾಷಾನಿನ ಎಲ್ಲಾ ಪ್ರಾಂತ್ಯಗಳು ಆ ಪ್ರದೇಶಕ್ಕೆ ಸೇರಿಕೊಂಡಿದ್ದವು. 12 ಓಗ್ ರಾಜನ ಎಲ್ಲ ಪ್ರಾಂತ್ಯಗಳು ಆ ಪ್ರದೇಶದಲ್ಲಿ ಸೇರಿತ್ತು. ಓಗ್ ರಾಜನು ಬಾಷಾನಿನಲ್ಲಿ ಆಳುತ್ತಿದ್ದನು. ಮೊದಲು ಅವನು ಅಷ್ಟರೋತ್ ಮತ್ತು ಎದ್ರೈಗಳಲ್ಲಿದ್ದುಕೊಂಡು ಆಳುತ್ತಿದ್ದನು. ಓಗನು ರೆಫಾಯರ ವಂಶಸ್ಥನಾಗಿದ್ದನು. ಮೊದಲು ಮೋಶೆಯು ಆ ಜನರನ್ನು ಸೋಲಿಸಿ ಅವರ ಪ್ರದೇಶವನ್ನು ತೆಗೆದುಕೊಂಡಿದ್ದನು. 13 ಇಸ್ರೇಲರು ಗೆಷೂರ್ಯರನ್ನೂ ಮಾಕತೀಯರನ್ನೂ ಹೊರತಳ್ಳಲಿಲ್ಲ. ಅವರು ಇಂದಿಗೂ ಇಸ್ರೇಲರ ಜೊತೆಯಲ್ಲಿಯೇ ಇರುತ್ತಾರೆ.

14 ಲೇವಿಕುಲದವರಿಗೆ ಮಾತ್ರ ಯಾವ ಪ್ರದೇಶವೂ ಸಿಕ್ಕಲಿಲ್ಲ. ಅದಕ್ಕೆ ಬದಲಾಗಿ, ಇಸ್ರೇಲರ ದೇವರಾದ ಯೆಹೋವನು ಅವರಿಗೆ ವಾಗ್ದಾನ ಮಾಡಿದಂತೆ ಸರ್ವಾಂಗಹೋಮಗಳಾಗಿ ಅರ್ಪಿತವಾಗುವ ಎಲ್ಲಾ ಪಶುಗಳಲ್ಲಿ ಉಳಿದ ಭಾಗವನ್ನು ಅವರು ಪಡೆದುಕೊಳ್ಳುವರು.

15 ಮೋಶೆಯು ರೂಬೇನನ ಕುಲದ ಪ್ರತಿಯೊಂದು ಗೋತ್ರದವರಿಗೆ ಸ್ವಲ್ಪಸ್ವಲ್ಪ ಪ್ರದೇಶವನ್ನು ಕೊಟ್ಟಿದ್ದನು. ಅವರಿಗೆ ಕೊಟ್ಟ ಪ್ರದೇಶದ ವಿವರ ಹೀಗಿದೆ: 16 ಅರ್ನೋನ್ ತಗ್ಗಿನ ಸಮೀಪದಲ್ಲಿದ್ದ ಅರೋಯೇರ್‌ನಿಂದ ಮೇದೆಬದವರೆಗಿರುವ ಪ್ರದೇಶ. ಇದು ಇಡೀ ತಪ್ಪಲ ಪ್ರದೇಶವನ್ನು ಮತ್ತು ಆ ತಗ್ಗು ಪ್ರದೇಶದ ಮಧ್ಯದಲ್ಲಿದ್ದ ಊರುಗಳನ್ನು ಒಳಗೊಂಡಿತ್ತು. 17 ಆ ಪ್ರದೇಶವು ಹೆಷ್ಬೋನಿನವರೆಗೆ ವಿಸ್ತರಿಸಿ ತಪ್ಪಲಪ್ರದೇಶದ ಎಲ್ಲಾ ಊರುಗಳನ್ನೊಳಗೊಂಡಿತ್ತು. ಆ ಊರುಗಳು ಯಾವುವೆಂದರೆ: ದೀಬೋನ್, ಬಾಮೋತ್‌ಬಾಳ್, ಬೇತ್ಬಾಳ್ಮೆಯೋನ್, 18 ಯಹಚಾ, ಕೆದೇಮೋತ್, ಮೇಫಾಯತ್, 19 ಕಣಿವೆಯಲ್ಲಿರುವ ಪ್ರದೇಶ, ಬೆಟ್ಟದ ಮೇಲಿನ ಕಿರ್ಯಾತಯಿಮ್, ಸಿಬ್ಮಾ, ಚೆರೆತ್‌ಶಹರ್, 20 ಬೇತ್ಪೆಗೋರ್, ಪಿಸ್ಗಾ ಬೆಟ್ಟಗಳು ಮತ್ತು ಬೇತ್‌ಯೆಷಿಮೋತ್. 21 ಆದ್ದರಿಂದ ಅಮೋರಿಯರ ಅರಸನಾದ ಸೀಹೋನನ ಆಳ್ವಿಕೆಯಲ್ಲಿದ್ದ ಎಲ್ಲ ಊರುಗಳನ್ನು ಆ ಪ್ರದೇಶವು ಒಳಗೊಂಡಿತ್ತು. ಆ ಅರಸನು ಹೆಷ್ಬೋನ್ ಪಟ್ಟಣದಲ್ಲಿ ಆಳಿದನು. ಆದರೆ ಮೋಶೆಯು ಅವನನ್ನು ಮತ್ತು ಮಿದ್ಯಾನ್ ಜನರ ನಾಯಕರನ್ನು ಸೋಲಿಸಿದ್ದನು. ಎವೀ, ರೆಕೆಮ್, ಚೂರ್, ಹೂರ್ ಮತ್ತು ರೆಬಾ, ಇವರೇ ಆ ನಾಯಕರಾಗಿದ್ದರು. (ಈ ನಾಯಕರೆಲ್ಲ ಸೀಹೋನನ ಜೊತೆ ಸೇರಿ ಯುದ್ಧಮಾಡಿದ್ದರು.) ಈ ನಾಯಕರೆಲ್ಲ ಅದೇ ದೇಶದಲ್ಲಿ ವಾಸವಾಗಿದ್ದರು. 22 ಇಸ್ರೇಲರು ಬೆಯೋರನ ಮಗನಾದ ಬಿಳಾಮನನ್ನು ಕೊಂದರು. (ಬಿಳಾಮನು ಮಂತ್ರ ವಿದ್ಯೆಯಿಂದ ಭವಿಷ್ಯವನ್ನು ಹೇಳುತ್ತಿದ್ದನು.) ಯುದ್ಧದಲ್ಲಿ ಇಸ್ರೇಲರು ಬಹಳಷ್ಟು ಜನರನ್ನು ಕೊಂದರು. 23 ರೂಬೇನನ ಜನರಿಗೆ ಕೊಟ್ಟ ಪ್ರದೇಶ ಜೋರ್ಡನ್ ನದಿಯ ದಡಕ್ಕೆ ಸೀಮಿತವಾಗಿತ್ತು. ಈ ಪ್ರಕಾರ ರೂಬೇನನ ಕುಲದ ಗೋತ್ರದವರಿಗೆ ಕೊಟ್ಟ ಪ್ರದೇಶವು ಇಲ್ಲಿ ಪಟ್ಟಿ ಮಾಡಿದ ಎಲ್ಲ ಊರುಗಳನ್ನು ಮತ್ತು ಅವುಗಳ ಹೊಲಗಳನ್ನು ಒಳಗೊಂಡಿತ್ತು.

24 ಮೋಶೆಯು ಗಾದನ ಕುಲದ ಪ್ರತಿಯೊಂದು ಗೋತ್ರದವರಿಗೆ ಕೊಟ್ಟ ಪ್ರದೇಶ ಇಂತಿದೆ:

25 ಮೋಶೆ ಅವರಿಗೆ ಯಗ್ಜೇರಿನ ಪ್ರದೇಶ ಮತ್ತು ಗಿಲ್ಯಾದಿನ ಎಲ್ಲ ಪಟ್ಟಣಗಳನ್ನೂ ರಬ್ಬಾದ ಹತ್ತಿರವಿದ್ದ ಅರೋಯೇರ್‌ವರೆಗಿನ ಅಮ್ಮೋನಿಯರ ಅರ್ಧಪ್ರದೇಶವನ್ನು ಕೊಟ್ಟನು. 26 ಆ ಪ್ರದೇಶವು ಹೆಷ್ಬೋನ್‌ನಿಂದ ರಾಮತ್‌ಮಿಚ್ಛೆ ಮತ್ತು ಬೆಟೋನೀಮ್ ಊರುಗಳವರೆಗೂ ಇರುವ ಪ್ರದೇಶ ಮತ್ತು ಮಹನಯಿಮಿನಿಂದ ದೆಬೀರ್ ಪ್ರಾಂತ್ಯದವರೆಗೆ ಇರುವ ಪ್ರದೇಶವನ್ನು ಒಳಗೊಂಡಿತ್ತು. 27 ಆ ಪ್ರದೇಶವು ಬೇತ್‌ಹಾರಾಮ್, ಬೇತ್‌ನಿಮ್ರಾ, ಸುಕ್ಕೋತ್ ಮತ್ತು ಚಾಫೋನ್ ಕಣಿವೆಗಳನ್ನು ಒಳಗೊಂಡಿತ್ತು. ಹೆಷ್ಬೋನಿನ ಅರಸನಾದ ಸೀಹೋನನ ರಾಜ್ಯಕ್ಕೆ ಸೇರಿದ ಉಳಿದೆಲ್ಲ ಪ್ರದೇಶವನ್ನು ಇದರಲ್ಲಿ ಸೇರಿಸಲಾಗಿತ್ತು. ಈ ಪ್ರದೇಶವು ಜೋರ್ಡನ್ ನದಿಯ ಪೂರ್ವ ಭಾಗದಲ್ಲಿತ್ತು. ಈ ಪ್ರದೇಶವು ಗಲಿಲೇಯ ಸರೋವರದ ಕೊನೆಯವರೆಗೆ ವಿಸ್ತರಿಸಿತ್ತು. 28 ಮೋಶೆಯು ಗಾದ್ ಕುಲದವರಿಗೆ ಈ ಪ್ರದೇಶವನ್ನು ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದನು. ಈ ಪ್ರದೇಶಕ್ಕೆ ಸೇರಿದ್ದ ಊರುಗಳನ್ನೆಲ್ಲ ಮೋಶೆಯು ಅವರ ಕುಟುಂಬಗಳಿಗನುಸಾರವಾಗಿ ಹಂಚಿಕೊಟ್ಟಿದ್ದನು.

29 ಮೋಶೆಯು ಮನಸ್ಸೆ ಕುಲದ ಅರ್ಧಕುಲದವರಿಗೆ ಅವರ ಕುಟುಂಬಗಳಿಗನುಸಾರವಾಗಿ ಕೊಟ್ಟ ಪ್ರದೇಶದ ವಿವರ:

30 ಈ ಪ್ರದೇಶವು ಮಹನಯಿಮಿನಿಂದ ಪ್ರಾರಂಭವಾಗುತ್ತದೆ. ಇಡೀ ಬಾಷಾನ್, ಅರಸನಾದ ಓಗನ ಆಳ್ವಿಕೆಗೆ ಒಳಪಟ್ಟ ಪ್ರದೇಶ, ಬಾಷಾನಿನಲ್ಲಿರುವ ಯಾಯೀರನ ಎಲ್ಲ ಊರುಗಳು (ಒಟ್ಟು ಅರವತ್ತು ಊರುಗಳು) ಇದರಲ್ಲಿ ಸೇರಿವೆ. 31 ಗಿಲ್ಯಾದಿನ ಅರ್ಧಭಾಗವು, ಅಷ್ಟರೋತ್, ಎದ್ರೈ ಎಂಬ ಪಟ್ಟಣಗಳೂ ಇದರಲ್ಲಿ ಸೇರಿವೆ. (ಗಿಲ್ಯಾದ್, ಅಷ್ಟರೋತ್ ಮತ್ತು ಎದ್ರೈ ಎಂಬ ಪಟ್ಟಣಗಳಲ್ಲಿ ರಾಜನಾದ ಓಗ್ ವಾಸವಾಗಿದ್ದನು.) ಈ ಎಲ್ಲ ಪ್ರದೇಶವನ್ನು ಮನಸ್ಸೆಯ ಮಗನಾದ ಮಾಕೀರನ ಅರ್ಧಗೋತ್ರದವರಿಗೆ ಕೊಡಲಾಯಿತು.

32 ಮೋಶೆಯು ಈ ಪ್ರದೇಶಗಳನ್ನೆಲ್ಲ ಆಯಾ ಕುಲಗಳಿಗೆ ಮೋವಾಬ್ ಬಯಲಿನಲ್ಲಿ ಇಳಿದುಕೊಂಡಿದ್ದಾಗ ಹಂಚಿಕೊಟ್ಟನು. ಮೋವಾಬ್ ಬಯಲು ಜೆರಿಕೊ ನಗರಕ್ಕೆ ಪೂರ್ವದಲ್ಲಿಯೂ ಜೋರ್ಡನ್ ನದಿಯ ಆಚೆದಡದಲ್ಲೂ ಇತ್ತು. 33 ಮೋಶೆಯು ಲೇವಿಕುಲದವರಿಗೆ ಯಾವ ಪ್ರದೇಶವನ್ನೂ ಕೊಡಲಿಲ್ಲ. ಇಸ್ರೇಲಿನ ದೇವರಾದ ಯೆಹೋವನು ಲೇವಿಯ ಕುಲದವರಿಗೆ ವಾಗ್ದಾನ ಮಾಡಿದಂತೆ ಆತನೇ ಅವರಿಗೆ ಸ್ವಾಸ್ತ್ಯವಾಗಿದ್ದನು.

14 ಯಾಜಕನಾದ ಎಲ್ಲಾಜಾರನು, ನೂನನ ಮಗನಾದ ಯೆಹೋಶುವನು ಮತ್ತು ಇಸ್ರೇಲಿನ ಕುಲಗಳ ನಾಯಕರು, ಇಸ್ರೇಲರಿಗೆ ಕಾನಾನ್ ನಾಡಿನ ಯಾವಯಾವ ಭಾಗವನ್ನು ಕೊಡಬೇಕೆಂಬುದನ್ನು ತೀರ್ಮಾನಿಸಿದರು. ಜನರು ತಮ್ಮ ಪ್ರದೇಶವನ್ನು ಯಾವ ವಿಧಾನದಿಂದ ಆರಿಸಿಕೊಳ್ಳಬೇಕೆಂಬುದರ ಬಗ್ಗೆ ಬಹುಕಾಲದ ಹಿಂದೆಯೇ ಯೆಹೋವನು ಮೋಶೆಗೆ ತಿಳಿಸಿದ್ದನು. ತಮ್ಮತಮ್ಮ ಪ್ರದೇಶಗಳನ್ನು ನಿರ್ಣಯಿಸಲು ಇಸ್ರೇಲಿನ ಒಂಭತ್ತುವರೆ ಕುಲಗಳ ಜನರು ಚೀಟುಹಾಕಿದರು. ಎರಡುವರೆ ಕುಲಗಳ ಜನರಿಗೆ ಮೋಶೆಯು ಜೋರ್ಡನ್ ನದಿಯ ಪೂರ್ವದಿಕ್ಕಿನ ಪ್ರದೇಶವನ್ನು ಕೊಟ್ಟಿದ್ದನು. ಆದರೆ ಲೇವಿಯ ಕುಲದವರಿಗೆ ಉಳಿದವರಂತೆ ಯಾವ ಪ್ರದೇಶವನ್ನೂ ಕೊಡಲಿಲ್ಲ. ಹನ್ನೆರಡು ಕುಲಗಳಿಗೆ ಅವರವರ ಪ್ರದೇಶಗಳ ಪೂರ್ಣಸ್ವಾಸ್ತ್ಯವನ್ನು ಕೊಡಲಾಯಿತು. ಯೋಸೇಫನ ಮನೆತನದವರು ಮನಸ್ಸೆ ಮತ್ತು ಎಫ್ರಾಯೀಮ್ ಎಂಬ ಎರಡು ಕುಲಗಳಾಗಿ ವಿಂಗಡಿಸಲ್ಪಟ್ಟಿದ್ದರು. ಪ್ರತಿಯೊಂದು ಕುಲಕ್ಕೂ ಸ್ವಲ್ಪಸ್ವಲ್ಪ ಪ್ರದೇಶ ದೊರೆಯಿತು. ಆದರೆ ಲೇವಿ ಕುಲದ ಜನರಿಗೆ ಯಾವ ಪ್ರದೇಶವನ್ನೂ ಕೊಡಲಿಲ್ಲ. ಅವರಿಗೆ ವಾಸಿಸಲು ಕೆಲವು ಊರುಗಳನ್ನು ಮಾತ್ರ ಕೊಡಲಾಯಿತು. ಈ ಊರುಗಳು ಪ್ರತಿಯೊಂದು ಕುಲದ ಜನರ ಪ್ರದೇಶದಲ್ಲಿ ಇದ್ದವು. ಅವರ ಪಶುಗಳಿಗಾಗಿ ಹುಲ್ಲುಗಾವಲುಗಳನ್ನು ಕೊಡಲಾಯಿತು. ಇಸ್ರೇಲರ ಕುಲಗಳಿಗೆ ಪ್ರದೇಶವನ್ನು ಹೇಗೆ ಹಂಚಬೇಕೆಂಬುದನ್ನು ಯೆಹೋವನು ಮೋಶೆಗೆ ಹೇಳಿದ್ದನು. ಆತನು ಆಜ್ಞಾಪಿಸಿದ ರೀತಿಯಲ್ಲಿಯೇ ಇಸ್ರೇಲರು ಪ್ರದೇಶವನ್ನು ಹಂಚಿಕೊಂಡರು.

ಕಾಲೇಬನಿಗೆ ದೊರೆತ ಪ್ರದೇಶ

ಒಂದು ದಿವಸ ಯೆಹೂದ ಕುಲದ ಕೆಲವರು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಬಳಿಗೆ ಬಂದರು. ಅವರಲ್ಲಿ ಕನಿಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಒಬ್ಬನಾಗಿದ್ದನು. ಕಾಲೇಬನು ಯೆಹೋಶುವನಿಗೆ, “ಕಾದೇಶ್‌ಬರ್ನೇಯದಲ್ಲಿ ಯೆಹೋವನು ತನ್ನ ಸೇವಕನಾದ[a] ಮೋಶೆಯೊಂದಿಗೆ ನಮ್ಮಿಬ್ಬರ ವಿಷಯವಾಗಿ ಮಾತಾಡಿದ್ದು ನಿನಗೆ ನೆನಪಿದೆಯಷ್ಟೇ. ಯೆಹೋವನ ಸೇವಕನಾದ ಮೋಶೆಯು, ಈ ದೇಶದಲ್ಲಿ ಗೂಢಚರ್ಯ ಮಾಡುವುದಕ್ಕೆ ನನ್ನನ್ನು ಕಳುಹಿಸಿದ್ದನು. ಆಗ ನನಗೆ ನಲವತ್ತು ವರ್ಷವಾಗಿತ್ತು. ನಾನು ಹಿಂತಿರುಗಿ ಬಂದಾಗ ಈ ದೇಶದ ಬಗ್ಗೆ ದೇವರ ವಾಗ್ದಾನಗಳನ್ನು ನಂಬಿ ಯಥಾರ್ಥವಾದ ಸಂಗತಿಗಳನ್ನು ಮೋಶೆಗೆ ಹೇಳಿದೆ. ನನ್ನ ಜೊತೆಯಲ್ಲಿ ಬಂದ ಬೇರೆಯವರು ಭಯವನ್ನುಂಟುಮಾಡುವ ಸಂಗತಿಗಳನ್ನು ಹೇಳಿದರು. ಆದರೆ ಯೆಹೋವನು ಆ ಭೂಮಿಯನ್ನು ನಮಗೆ ಕೊಡುತ್ತಾನೆಂದು ನಾನು ನಿಜವಾಗಿ ನಂಬಿದ್ದೆ. ಆದ್ದರಿಂದ ಮೋಶೆಯು ಅಂದು ನನಗೆ, ‘ನೀನು ಸಂಚರಿಸಿ ನೋಡಿದ ಆ ಭೂಮಿಯು ನಿನ್ನ ಸ್ವಂತ ಭೂಮಿಯಾಗುತ್ತದೆ. ನಿನ್ನ ಮಕ್ಕಳು ಶಾಶ್ವತವಾಗಿ ಅದರ ಸ್ವಾಸ್ತ್ಯವನ್ನು ಹೊಂದಿರುತ್ತಾರೆ. ನೀನು ನನ್ನ ದೇವರಾದ ಯೆಹೋವನಲ್ಲಿ ನಿಜವಾದ ನಂಬಿಕೆ ಇಟ್ಟಿದ್ದಕ್ಕಾಗಿ ಆ ಪ್ರದೇಶವನ್ನು ನಿನಗೆ ಕೊಡುತ್ತೇನೆ’ ಎಂದು ವಾಗ್ದಾನ ಮಾಡಿದನು.

10 “ಯೆಹೋವನು ತಾನು ಹೇಳಿದಂತೆ ನನ್ನನ್ನು ನಲವತ್ತೈದು ವರ್ಷ ಜೀವಂತವಾಗಿ ಉಳಿಸಿದ್ದಾನೆ. ಆ ಸಮಯದಲ್ಲಿ ನಾವೆಲ್ಲರು ಅರಣ್ಯದಲ್ಲಿ ಸುತ್ತಾಡಿದೆವು. ಈಗ ನಾನು ಎಂಭತ್ತೈದು ವರ್ಷದವನಾಗಿದ್ದೇನೆ. 11 ಮೋಶೆಯು ನನ್ನನ್ನು ಕಳುಹಿಸಿ ಕೊಟ್ಟಾಗ ನಾನು ದೃಢಕಾಯನಾಗಿದ್ದಂತೆಯೇ ಈಗಲೂ ಸಹ ದೃಢಕಾಯನಾಗಿದ್ದೇನೆ. ಆಗ ನಾನು ಯುದ್ಧಮಾಡಲು ಹೇಗೆ ಸಿದ್ಧವಾಗಿರುತ್ತಿದ್ದೆನೋ ಅದೇ ರೀತಿ ಈಗಲೂ ಸಿದ್ಧನಾಗಿದ್ದೇನೆ. 12 ಆದ್ದರಿಂದ ಯೆಹೋವನು ನನಗೆ ಬಹಳ ಹಿಂದೆಯೇ ವಾಗ್ದಾನ ಮಾಡಿದ್ದ ಬೆಟ್ಟಪ್ರದೇಶವನ್ನು ಈಗ ನನಗೆ ಕೊಡು. ಬಲಿಷ್ಠರಾದ ಅನಾಕವಂಶಸ್ಥರು ವಾಸವಾಗಿರುವ ಆ ಪಟ್ಟಣಗಳು ಬಹಳ ದೊಡ್ಡದಾಗಿವೆಯೆಂದೂ ಸುಭದ್ರವಾದವುಗಳೆಂದೂ ನೀನು ಕೇಳಿರುವೆ. ಆದರೆ ಯೆಹೋವನು ನನ್ನೊಂದಿಗಿರುವುದರಿಂದ ಆತನು ಹೇಳಿದಂತೆಯೇ ಆ ಪ್ರದೇಶವನ್ನು ನಾನು ತೆಗೆದುಕೊಳ್ಳುತ್ತೇನೆ” ಅಂದನು.

13 ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬನನ್ನು ಆಶೀರ್ವದಿಸಿ ಹೆಬ್ರೋನ್ ನಗರವನ್ನು ಅವನಿಗೆ ಸ್ವಾಸ್ತ್ಯವಾಗಿ ಕೊಟ್ಟನು. 14 ಆ ನಗರ ಈಗಲೂ ಕೆನಿಜ್ಜೀಯನಾದ ಯೆಫುನ್ನೆಯ ಮಗನಾದ ಕಾಲೇಬನ ವಂಶದವರ ಸ್ವಾಸ್ತ್ಯವಾಗಿದೆ. ಏಕೆಂದರೆ ಅವನು ಇಸ್ರೇಲಿನ ದೇವರಾದ ಯೆಹೋವನನ್ನು ನಂಬಿದ್ದನು ಮತ್ತು ಆತನ ಆಜ್ಞೆಯನ್ನು ಪಾಲಿಸಿದನು. 15 ಹಿಂದೆ ಆ ನಗರದ ಹೆಸರು ಕಿರ್ಯಾತ್ ಅರ್ಬ ಎಂದಿತ್ತು. ಅನಾಕ ವಂಶದವರಲ್ಲಿ ಶ್ರೇಷ್ಠನಾದ ಅರ್ಬ ಎಂಬವನ ಸ್ಮರಣಾರ್ಥವಾಗಿ ಆ ನಗರಕ್ಕೆ ಅವನ ಹೆಸರನ್ನೇ ಇಡಲಾಗಿತ್ತು.

ಇದಾದ ಮೇಲೆ, ಆ ಪ್ರದೇಶದಲ್ಲಿ ಶಾಂತಿ ನೆಲೆಸಿತು.

ಯೆಹೂದ ಕುಲದವರಿಗೆ ಸ್ವಾಸ್ತ್ಯ

15 ಯೆಹೂದಕುಲಕ್ಕೆ ಕೊಟ್ಟ ಸ್ವಾಸ್ತ್ಯವನ್ನು ಆ ಕುಲದ ಗೋತ್ರಗಳಲ್ಲಿ ಹಂಚಲಾಗಿತ್ತು. ಆ ಪ್ರದೇಶವು ಎದೋಮಿನ ಗಡಿಯವರೆಗೂ ದಕ್ಷಿಣದಲ್ಲಿ ತೇಮಾನಿನ ಅಂಚಿನಲ್ಲಿರುವ ಚಿನ್ ಅರಣ್ಯದವರೆಗೂ ವಿಸ್ತರಿಸಿಕೊಂಡಿತ್ತು. ಯೆಹೂದ್ಯರ ಸ್ವಾಸ್ತ್ಯವು ಲವಣಸಮುದ್ರದ ದಕ್ಷಿಣ ತೀರದಿಂದ ಆರಂಭವಾಗಿತ್ತು. ಆ ಸೀಮೆಯು ದಕ್ಷಿಣದಲ್ಲಿ ಸ್ಕಾರ್ಪಿಯನ್ ಎಂಬ ಇಕ್ಕಟ್ಟಾದ ಮಾರ್ಗದಿಂದ ಮುನ್ನಡೆದು ಚಿನ್ ಮರುಭೂಮಿಯವರೆಗೆ ಹೋಗಿತ್ತು. ಅಲ್ಲಿಂದ ಅದು ದಕ್ಷಿಣದಲ್ಲಿ ಕಾದೇಶ್‌ಬರ್ನೇಯದವರೆಗೂ ಹೆಚ್ರೋನ್‌ನಿಂದ ಅದ್ದಾರವರೆಗೂ ಮುಂದುವರಿದು ಅಲ್ಲಿ ತಿರುಗಿಕೊಂಡು ಕರ್ಕದವರೆಗೆ ವಿಸ್ತರಿಸಿತ್ತು. ಆ ಸೀಮೆಯು ಈಜಿಪ್ಟಿನ ಅಚ್ಮೋನಿನ ಹಳ್ಳಕ್ಕೆ ಮುಂದುವರೆದು ಮೆಡಿಟರೆನಿಯನ್ ಸಮುದ್ರದವರೆಗೆ ಹಬ್ಬಿತ್ತು. ಈ ಭೂಮಿಯೆಲ್ಲಾ ಅವರ ದಕ್ಷಿಣ ಸೀಮೆಯಲ್ಲಿತ್ತು.

ಅವರ ಪ್ರದೇಶದ ಪೂರ್ವದಿಕ್ಕಿನ ಸೀಮೆ ಮೃತ್ಯುಸಾಗರದ ದಂಡೆಯಿಂದ ಜೋರ್ಡನ್ ನದಿಯು ಸಮುದ್ರವನ್ನು ಸೇರುವ ಕ್ಷೇತ್ರದವರೆಗೆ ಹಬ್ಬಿತ್ತು.

ಅವರ ಉತ್ತರ ಸೀಮೆಯು ಜೋರ್ಡನ್ ನದಿಯು ಮೃತ್ಯುಸಾಗರವನ್ನು ಸೇರುವ ಕ್ಷೇತ್ರದಿಂದ ಆರಂಭವಾಗಿ ಅಲ್ಲಿಂದ ಬೇತ್‌ಹೊಗ್ಲಾಕ್ಕೆ ಸಾಗಿ ಬೇತ್‌ಅರಬಾದ ಉತ್ತರಕ್ಕೆ ಮುಂದುವರಿದಿತ್ತು. ಅಲ್ಲಿಂದ ಅದು ರೂಬೇನನ ಮಗನಾದ ಬೋಹನನ ಬಂಡೆಯವರೆಗೆ ಸಾಗಿತ್ತು. ಅಲ್ಲಿಂದ ಅದು ಆಕೋರಿನ ಕಣಿವೆಯಿಂದ ಹಾದು ದೆಬೀರಕ್ಕೆ ಮುಟ್ಟಿ ಅಲ್ಲಿ ಉತ್ತರಕ್ಕೆ ತಿರುಗಿ ಗಿಲ್ಗಾಲಕ್ಕೆ ಮುಟ್ಟಿತ್ತು. ಅದು ಮೀಮಿನ ಬೆಟ್ಟದಿಂದ ಹೋಗುವ ದಾರಿಯ ಎದುರಿಗೆ ಗಿಲ್ಗಾಲ್ ಇದೆ. ಅದು ಹಳ್ಳದ ದಕ್ಷಿಣ ಭಾಗದಲ್ಲಿದೆ. ಈ ಸೀಮೆಯು ಏನ್‌ಷೆಮೆಷ್ ನದಿಯವರೆಗೆ ಹೋಗಿ ಏನ್‌ರೋಗೆಲ್‌ನಲ್ಲಿ ಕೊನೆಗೊಳ್ಳುತ್ತದೆ. ಆ ಸೀಮೆಯು ಜೆರುಸಲೇಮ್ ಎಂದು ಕರೆಯಲ್ಪಟುವ ಯೆಬೂಸಿಯ ನಗರದ ದಕ್ಷಿಣ ಮಾರ್ಗವಾಗಿ ಬೆನ್‌ಹಿನ್ನೋಮ್ ಕಣಿವೆಗೆ ಹೋಗುತ್ತದೆ. ಆ ಸ್ಧಳದಲ್ಲಿ ಸೀಮೆಯು ಹಿನ್ನೋಮ್ ಕಣಿವೆಯ ಪಶ್ಚಿಮದಿಕ್ಕಿನ ಬೆಟ್ಟದ ತುದಿಗೆ ಹೋಗುತ್ತದೆ. ಇದು ರೆಫಾಯೀಮ್ ಕಣಿವೆಯ ಉತ್ತರದ ಕೊನೆ. ಅಲ್ಲಿಂದ ಆ ಸೀಮೆಯು ನೆಫ್ತೋಹ ಬುಗ್ಗೆಗೆ ಹೋಗುತ್ತದೆ; ಅಲ್ಲಿಂದ ಎಫ್ರೋನ್ ಬೆಟ್ಟದ ಸಮೀಪದ ನಗರಗಳಿಗೆ ಹೋಗುತ್ತದೆ; ಅಲ್ಲಿಂದ ತಿರುಗಿ “ಬಾಲಾ” ಎಂಬ ಊರಿಗೆ ಹೋಗುತ್ತದೆ. (ಬಾಲಾವನ್ನು ಕಿರ್ಯತ್ಯಾರೀಮ್ ಎಂದೂ ಕರೆಯುತ್ತಾರೆ.) 10 ಬಾಲಾದಲ್ಲಿ ಆ ಸೀಮೆಯು ಪಶ್ಚಿಮಕ್ಕೆ ತಿರುಗಿಕೊಂಡು ಸೇಯೀರ್ ಬೆಟ್ಟಪ್ರದೇಶಕ್ಕೆ ಹೋಗುತ್ತದೆ; ಅಲ್ಲಿಂದ ಅದು ಕೆಸಾಲೋನ್ ಎಂಬ ಯಾರೀಮ್ ಬೆಟ್ಟದ ಉತ್ತರ ಮಾರ್ಗವಾಗಿ ಇಳಿಯುತ್ತಾ ಬೇತ್‌ಷೆಮೆಷಿಗೂ ಅಲ್ಲಿಂದ ತಿಮ್ನಾ ಊರಿಗೂ ಹೋಗುತ್ತದೆ. 11 ಅಲ್ಲಿಂದ ಆ ಗಡಿಯು ಉತ್ತರ ದಿಕ್ಕಿನಲ್ಲಿರುವ ಎಕ್ರೋನ್ ಗುಡ್ಡಕ್ಕೆ ಹೋಗಿ ಅಲ್ಲಿಂದ ಶಿಕ್ಕೆರೋನಿಗೆ ತಿರುಗಿಕೊಂಡು ಬಾಲಾ ಗುಡ್ಡವನ್ನು ತಲುಪುತ್ತದೆ. ಆ ಗಡಿಯು ಯಬ್ನೇಲಿನವರೆಗೆ ಮುಂದುವರೆದು ನಂತರ ಮೆಡಿಟರೆನಿಯನ್ ಸಮುದ್ರ ತೀರದಲ್ಲಿ ಮುಗಿಯುವುದು. 12 ಮೆಡಿಟರೆನಿಯನ್ ಸಮುದ್ರತೀರವೇ ಯೆಹೂದ್ಯರ ಸ್ವಾಸ್ತ್ಯದ ಪಶ್ಚಿಮ ಸೀಮೆಯಾಗಿತ್ತು. ಹೀಗೆ ಯೆಹೂದ್ಯರ ಸ್ವಾಸ್ತ್ಯವು ಈ ನಾಲ್ಕು ಸೀಮೆಯ ಒಳಗಡೆ ಇತ್ತು. ಯೆಹೂದ್ಯರ ಗೋತ್ರಗಳು ಈ ಪ್ರದೇಶದಲ್ಲಿದ್ದವು.

13 ಯೆಫುನ್ನೆಯ ಮಗನಾದ ಕಾಲೇಬನಿಗೆ ಯೆಹೂದ ಕುಲದವರ ಸ್ವಾಸ್ತ್ಯದಲ್ಲಿಯೇ ಸ್ವಲ್ಪ ಪ್ರದೇಶವನ್ನು ಕೊಡಬೇಕೆಂದು ದೇವರು ಯೆಹೋಶುವನಿಗೆ ಹೇಳಿದ್ದನು. ಅದಕ್ಕಾಗಿ ಯೆಹೋಶುವನು ಕಾಲೇಬನಿಗೆ ದೇವರು ಆಜ್ಞಾಪಿಸಿದ ಪ್ರದೇಶವನ್ನು ಕೊಟ್ಟನು. ಯೆಹೋಶುವನು ಅವನಿಗೆ ಹೆಬ್ರೋನ್ ಎಂಬ ಕಿರ್ಯಾತರ್ಬ ಊರನ್ನು ಕೊಟ್ಟನು. (ಅರ್ಬನು ಅನಾಕನ ತಂದೆ.) 14 ಹೆಬ್ರೋನ್‌ನಲ್ಲಿ ವಾಸವಾಗಿದ್ದ ಮೂರು ಅನಾಕ ಕುಟುಂಬಗಳನ್ನು ಕಾಲೇಬನು ಅಲ್ಲಿಂದ ಬಲವಂತವಾಗಿ ಹೊರಡಿಸಿದನು. ಆ ಕುಟುಂಬಗಳ ಹೆಸರುಗಳು ಶೇಷೈ, ಅಹೀಮನ್ ಮತ್ತು ತಲ್ಮೈ. ಅವರು ಅನಾಕನ ವಂಶಸ್ಥರಾಗಿದ್ದರು. 15 ಆಮೇಲೆ ಕಾಲೇಬನು ದೆಬೀರಿನಲ್ಲಿ ವಾಸಮಾಡುತ್ತಿದ್ದ ಜನರ ವಿರುದ್ಧ ಹೋರಾಡಿದನು. (ಹಿಂದಿನ ಕಾಲದಲ್ಲಿ ದೆಬೀರಿಗೆ ಕಿರ್ಯತ್‌ಸೇಫೇರ್ ಎಂದು ಕರೆಯುತ್ತಿದ್ದರು.) 16 ಕಾಲೇಬನು, “ನಾನು ಕಿರ್ಯತ್ ಸೇಫೇರಿನ ಮೇಲೆ ಧಾಳಿ ಮಾಡಲಿಚ್ಛಿಸುತ್ತೇನೆ. ಆ ನಗರದ ಮೇಲೆ ಧಾಳಿಮಾಡಿ ಅದನ್ನು ಗೆದ್ದುಕೊಟ್ಟವರಿಗೆ ನನ್ನ ಮಗಳಾದ ಅಕ್ಷಾಳನ್ನು ಮದುವೆಮಾಡಿ ಕೊಡುತ್ತೇನೆ” ಎಂದು ಸಾರಿದನು.

17 ಕೆನಜನ ಮಗನಾದ ಒತ್ನೀಯೇಲನು ಆ ಪಟ್ಟಣವನ್ನು ಗೆದ್ದನು. ಕಾಲೇಬನು ತನ್ನ ಮಗಳಾದ ಅಕ್ಷಾಳನ್ನು ಒತ್ನೀಯೇಲನಿಗೆ ಮದುವೆ ಮಾಡಿಕೊಟ್ಟನು. 18 ಒತ್ನೀಯೇಲನ ಮನೆಗೆ ಅಕ್ಷಾ ಹೋದಳು. ಕಾಲೇಬನಿಂದ ಇನ್ನಷ್ಟು ಭೂಮಿಯನ್ನು ಕೇಳಲು ಅಕ್ಷಾಳನ್ನು ಒತ್ನೀಯೇಲನು[b] ಪ್ರೇರೇಪಿಸಿದನು. ಅಕ್ಷಾಳು ತನ್ನ ತಂದೆಯ ಬಳಿಗೆ ಬಂದು ಕತ್ತೆಯ ಮೇಲಿಂದ ಇಳಿದಾಗ, “ನಿನಗೆ ಏನುಬೇಕು?” ಎಂದು ಕಾಲೇಬನು ಕೇಳಿದನು.

19 ಅದಕ್ಕೆ ಅವಳು “ನನ್ನನ್ನು ಆಶೀರ್ವದಿಸು.[c] ನೀನು ನನಗೆ ನೆಗೆವ್‌ನಲ್ಲಿ ಮರುಭೂಮಿಯನ್ನು ಕೊಟ್ಟಿರುವೆ. ದಯವಿಟ್ಟು ನೀರಿರುವ ಭೂಮಿಯನ್ನು ಸ್ವಲ್ಪಕೊಡು” ಎಂದು ಕೇಳಿಕೊಂಡಳು. ಅವಳ ಕೋರಿಕೆಗನುಸಾರವಾಗಿ ಕಾಲೇಬನು ಮೇಲಿನ ಮತ್ತು ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು.

20 ದೇವರು ವಾಗ್ದಾನ ಮಾಡಿದ ಭೂಮಿಯನ್ನು ಯೆಹೂದ ಕುಲವು ಪಡೆದುಕೊಂಡಿತು. ಪ್ರತಿಯೊಂದು ಗೋತ್ರವು ಆ ಭೂಮಿಯ ಸ್ವಲ್ಪ ಭಾಗವನ್ನು ಪಡೆಯಿತು.

21 ಯೆಹೂದ ಕುಲವು ನೆಗೆವ್ ದಕ್ಷಿಣಭಾಗದಲ್ಲಿದ್ದ ಎಲ್ಲ ಊರುಗಳನ್ನು ಪಡೆಯಿತು. ಈ ಊರುಗಳು ಎದೋಮಿನ ಸೀಮೆಯ ಹತ್ತಿರ ಇದ್ದವು. ಆ ಊರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:

ಕಬ್ಜೇಲ್, ಏದೆರ್, ಯಾಗೂರ್, 22 ಕೀನಾ, ದೀಮೋನಾ, ಆದಾದಾ, 23 ಕೆದೆಷ್, ಹಾಚೋರ್, ಇತ್ನಾನ್, 24 ಜೀಫ್, ಟೆಲೆಮ್, ಬೆಯಾಲೋತ್, 25 ಹಾಚೋರ್‌ಹದತ್ತಾ, ಹಾಚೋರ್ ಎಂಬುವ ಕಿರ್ಯೋತ್‌ಹೆಚ್ರೋನ್, 26 ಅಮಾಮ್, ಶೆಮ, ಮೋಲಾದಾ, 27 ಹಚರ್‌ಗದ್ದಾ, ಹೆಷ್ಮೋನ್, ಬೇತ್ಪೆಲೆಟ್, 28 ಹಚರ್‌ಷೂವಾಲ್, ಬೇರ್ಷೆಬ, ಬಿಜ್ಯೋತ್ಯಾ, 29 ಬಾಲಾ, ಇಯ್ಯೀಮ್, ಎಚೆಮ್, 30 ಎಲ್ಟೋಲದ್, ಕೆಸೀಲ್, ಹೊರ್ಮಾ, 31 ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ, 32 ಲೆಬಾವೋತ್, ಶಿಲ್ಹೀಮ್, ಆಯಿನ್ ಮತ್ತು ರಿಮ್ಮೋನ್. ಒಟ್ಟಿಗೆ ಇಪ್ಪತ್ತೊಂಭತ್ತು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.

33 ಯೆಹೂದ ಕುಲದವರು ಪಶ್ಚಿಮ ದಿಕ್ಕಿನ ಇಳಕಲಿನ ಪ್ರದೇಶದಲ್ಲಿಯೂ ಕೆಲವು ಊರುಗಳನ್ನು ಪಡೆದಿದ್ದರು. ಆ ಊರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:

ಎಷ್ಟಾವೋಲ್, ಚೊರ್ಗಾ, ಅಶ್ನಾ, 34 ಜನೋಹ, ಏಂಗನ್ನೀಮ್, ತಪ್ಪೂಹ, ಏನಾಮ್, 35 ಯರ್ಮೂತ್, ಅದುಲ್ಲಾಮ್, ಸೋಕೋ, ಅಜೇಕಾ, 36 ಶಾರಯೀಮ್, ಅದೀತಯಿಮ್, ಗೆದೇರಾ ಮತ್ತು ಗೆದೆರೋತಯಿಮ್. ಒಟ್ಟಿನಲ್ಲಿ ಹದಿನಾಲ್ಕು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.

37 ಯೆಹೂದ ಕುಲದವರಿಗೆ ಈ ಊರುಗಳನ್ನು ಸಹ ಕೊಡಲಾಯಿತು:

ಚೆನಾನ್, ಹದಾಷಾ, ಮಿಗ್ದಲ್ಗಾದ್, 38 ದಿಲಾನ್, ಮಿಚ್ಪೆ, ಯೊಕ್ತೇಲ್, 39 ಲಾಕೀಷ್, ಬೊಚ್ಕತ್, ಎಗ್ಲೋನ್, 40 ಕಬ್ಬೋನ್, ಲಹ್ಮಾಸ್, ಕಿತ್ಲೀಷ್, 41 ಗೆದೇರೋತ್, ಬೇತ್‌ದಾಗೋನ್, ನಾಮಾ ಮತ್ತು ಮಕ್ಕೆದಾ. ಒಟ್ಟಿನಲ್ಲಿ ಹದಿನಾರು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.

42 ಯೆಹೂದದ ಜನರು ಈ ಊರುಗಳನ್ನು ಸಹ ಪಡೆದುಕೊಂಡರು:

ಲಿಬ್ನಾ, ಎತೆರ್, ಆಷಾನ್, 43 ಇಫ್ತಾಹ, ಅಶ್ನಾ, ನೆಚೀಬ್, 44 ಕೆಯೀಲಾ, ಅಕ್ಜೀಬ್, ಮಾರೇಷಾ ಎಂಬ ಒಂಭತ್ತು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು. 45 ಯೆಹೂದದ ಜನರು ಎಕ್ರೋನ್ ಪಟ್ಟಣವನ್ನು ಮತ್ತು ಅದರ ಸಮೀಪದಲ್ಲಿದ್ದ ಎಲ್ಲ ಸಣ್ಣ ಊರುಗಳನ್ನು ಮತ್ತು ಹೊಲಗದ್ದೆಗಳನ್ನು ಪಡೆದುಕೊಂಡರು. 46 ಎಕ್ರೋನಿನ ಪಶ್ಚಿಮದಲ್ಲಿದ್ದ ಪ್ರದೇಶ ಮತ್ತು ಅಷ್ಡೋದಿನ ಹತ್ತಿರದ ಎಲ್ಲಾ ಊರುಗಳನ್ನು ಮತ್ತು ಹೊಲಗದ್ದೆಗಳನ್ನು ಸಹ ಅವರು ಪಡೆದುಕೊಂಡರು. 47 ಅಷ್ಡೋದಿನ ಸುತ್ತಮುತ್ತಲಿನ ಎಲ್ಲ ಕ್ಷೇತ್ರ ಮತ್ತು ಅಲ್ಲಿಯ ಸಣ್ಣ ಊರುಗಳು ಯೆಹೂದ ಪ್ರದೇಶದ ಭಾಗವಾಗಿದ್ದವು. ಯೆಹೂದದ ಜನರು ಗಾಜಾದ ಸುತ್ತಮುತ್ತಲಿನ ಕ್ಷೇತ್ರ ಮತ್ತು ಹತ್ತಿರದ ಊರುಕೇರಿಗಳನ್ನೂ ಹೊಲಗದ್ದೆಗಳನ್ನೂ ಪಡೆದುಕೊಂಡರು. ಅವರ ನೆಲವು ಈಜಿಪ್ಟಿನ ನದಿಯವರೆಗೂ ವಿಸ್ತರಿಸಿತ್ತು; ಮೆಡಿಟರೆನಿಯನ್ ಸಮುದ್ರದ ತೀರದುದ್ದಕ್ಕೂ ಚಾಚಿತ್ತು.

48 ಯೆಹೂದದ ಜನರಿಗೆ ಬೆಟ್ಟಪ್ರದೇಶದಲ್ಲಿಯೂ ಊರುಗಳನ್ನು ಕೊಡಲಾಗಿತ್ತು. ಆ ಊರುಗಳ ಪಟ್ಟಿ ಇಂತಿದೆ:

ಶಾಮೀರ್, ಯತ್ತೀರ್, ಸೋಕೋ, 49 ದನ್ನಾ, ದೆಬೀರ್ ಎಂಬ ಕಿರ್ಯತ್‌ಸನ್ನಾ, 50 ಅನಾಬ್, ಎಷ್ಟೆಮೋ, ಅನೀಮ್, 51 ಗೋಷೆನ್, ಹೋಲೋನ್ ಮತ್ತು ಗಿಲೋ ಎಂಬ ಹನ್ನೊಂದು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.

52 ಯೆಹೂದದ ಜನರಿಗೆ ಈ ಊರುಗಳನ್ನು ಸಹ ಕೊಡಲಾಯಿತು:

ಅರಬ್, ದೂಮಾ, ಎಷಾನ್, 53 ಯಾನೂಮ್, ಬೇತ್‌ತಪ್ಪೂಹ, ಅಫೇಕಾ, 54 ಹುಮ್ಟಾ ಹೆಬ್ರೋನ್ ಎಂಬ ಕಿರ್ಯತರ್ಬ ಮತ್ತು ಚೀಯೋರ್ ಎಂಬ ಒಂಭತ್ತು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.

55 ಯೆಹೂದದ ಜನರಿಗೆ ಈ ಊರುಗಳನ್ನೂ ಕೊಡಲಾಯಿತು:

ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ, 56 ಇಜ್ರೇಲ್, ಯೆಗ್ದೆಯಾಮ್, ಜನೋಹ, 57 ಕಯಿನ್, ಗಿಬೆಯಾ ಮತ್ತು ತಿಮ್ನಾ ಎಂಬ ಹತ್ತು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.

58 ಯೆಹೂದದ ಜನರಿಗೆ ಈ ಊರುಗಳನ್ನೂ ಕೊಡಲಾಯಿತು:

ಹಲ್ಹೂಲ್, ಬೇತ್‌ಚೂರ್, ಗೆದೋರ್, 59 ಮಾರಾತ್, ಬೇತನೋತ್, ಎಲ್ಟೆಕೋನ್ ಎಂಬ ಆರು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.

60 ಯೆಹೂದದ ಜನರಿಗೆ ರಬ್ಬಾ ಮತ್ತು ಕಿರ್ಯತ್ಯಾರೀಮ್ ಎಂದು ಕರೆಯಲ್ಪಡುವ ಕಿರ್ಯತ್‌ಬಾಳ್ ಎಂಬ ಎರಡು ಊರುಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ಸಹ ಕೊಡಲಾಯಿತು.

61 ಯೆಹೂದದ ಜನರಿಗೆ ಮರುಭೂಮಿಯಲ್ಲಿಯೂ ಕೆಲವು ಊರುಗಳನ್ನು ಕೊಡಲಾಯಿತು. ಆ ಊರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:

ಬೇತ್‌ಅರಾಬಾ, ಮಿದ್ದೀನ್, ಸೆಕಾಕಾ, 62 ನಿಬ್ಷಾನ್, ಉಪ್ಪಿನಪಟ್ಟಣ ಮತ್ತು ಏಂಗೆದೀ ಎಂಬ ಆರು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.

63 ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಹಾಕಲು ಯೆಹೂದ ಕುಲದವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಯೆಬೂಸಿಯರು ಇಂದಿನವರೆಗೂ ಜೆರುಸಲೇಮಿನಲ್ಲಿ ಯೆಹೂದ ಕುಲದವರೊಡನೆ ವಾಸವಾಗಿದ್ದಾರೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International