Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆಹೋಶುವನು 5-8

ಇಸ್ರೇಲರು ಜೋರ್ಡನ್ ನದಿಯನ್ನು ದಾಟುವವರೆಗೆ ಯೆಹೋವನು ಆ ನದಿಯನ್ನು ಬತ್ತಿಸಿದನು. ಜೋರ್ಡನ್ ನದಿಯ ಪಶ್ಚಿಮ ದಿಕ್ಕಿನಲ್ಲಿರುವ ಅಮೋರಿಯರ ಅರಸರು ಮತ್ತು ಭೂಮಧ್ಯ ಸಾಗರದ ಹತ್ತಿರವಿರುವ ಕಾನಾನ್ಯರ ಅರಸರು ಈ ಸಂಗತಿಯನ್ನು ಕೇಳಿ ಭಯಗ್ರಸ್ತರಾದರು; ಇಸ್ರೇಲರ ವಿರುದ್ಧವಾಗಿ ಹೋರಾಡುವಷ್ಟು ಧೈರ್ಯವಿಲ್ಲದವರಾದರು.

ಇಸ್ರೇಲಿನ ಜನರಿಗೆ ಸುನ್ನತಿ ಮಾಡಲಾಯಿತು

ಆ ಸಮಯದಲ್ಲಿ ಯೆಹೋವನು ಯೆಹೋಶುವನಿಗೆ, “ಕಲ್ಲುಗಳಿಂದ ಚೂರಿಗಳನ್ನು ಮಾಡಿಸಿ ಇಸ್ರೇಲಿನ ಗಂಡಸರಿಗೆ ಇನ್ನೊಮ್ಮೆ ಸುನ್ನತಿಯನ್ನು ಮಾಡಿಸು” ಎಂದು ಹೇಳಿದನು.

ಯೆಹೋಶುವನು ಕಲ್ಲುಗಳಿಂದ ಚೂರಿಗಳನ್ನು ಮಾಡಿಸಿ ಇಸ್ರೇಲರಿಗೆ ಗಿಬೆಯತ್ ಹಾರಲೋತ್‌ನಲ್ಲಿ[a] ಸುನ್ನತಿಯನ್ನು ಮಾಡಿದನು.

4-7 ಯೆಹೋಶುವನು ಸುನ್ನತಿ ಮಾಡಲು ಕಾರಣವೇನೆಂದರೆ: ಈಜಿಪ್ಟನ್ನು ಬಿಟ್ಟುಹೊರಟಾಗ ಸೈನ್ಯಸೇರಲು ಯೋಗ್ಯರಾದ ಇಸ್ರೇಲಿನ ಗಂಡಸರಿಗೆ ಸುನ್ನತಿಯಾಗಿತ್ತು. ಅವರು ಮರುಭೂಮಿಯಲ್ಲಿದ್ದಾಗ ಅನೇಕ ಯುದ್ಧವೀರರು ಯೆಹೋವನಿಗೆ ಕಿವಿಗೂಡಲಿಲ್ಲ. ಆದಕಾರಣ, “ಹಾಲೂ ಜೇನೂ ಹರಿಯುವ ವಾಗ್ದತ್ತ ನಾಡನ್ನು” ಆ ಜನರು ಕಾಣುವುದಿಲ್ಲ ಎಂದು ಯೆಹೋವನು ಪ್ರಮಾಣ ಮಾಡಿದನು. ನಮ್ಮ ಪೂರ್ವಿಕರಿಗೆ ಆ ಭೂಮಿಯನ್ನು ಕೊಡುವುದಾಗಿ ಯೆಹೋವನು ವಾಗ್ದಾನ ಮಾಡಿದ್ದನು. ಆದರೆ ಆ ಜನರು ಯೆಹೋವನ ಮಾತನ್ನು ಕೇಳದೆ ಅವಿಧೇಯರಾದ ಕಾರಣ ಆತನು ಅವರನ್ನು ನಲವತ್ತು ವರ್ಷಗಳ ಕಾಲ ಅಂದರೆ ಆ ಯೋಧರು ಸಾಯುವವರೆಗೆ ಮರುಭೂಮಿಯಲ್ಲಿ ಅಲೆದಾಡುವಂತೆ ಮಾಡಿದನು. ಆ ಎಲ್ಲ ಯುದ್ಧವೀರರು ಸತ್ತುಹೋದರು ಮತ್ತು ಅವರ ಸ್ಥಾನಕ್ಕೆ ಅವರ ಗಂಡುಮಕ್ಕಳು ಬಂದರು. ಆದರೆ ಈಜಿಪ್ಟಿನಿಂದ ಹೊರಟು ಮರುಭೂಮಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಹುಟ್ಟಿದ ಯಾವ ಗಂಡುಮಕ್ಕಳಿಗೂ ಸುನ್ನತಿ ಆಗಿರಲಿಲ್ಲ. ಅದಕ್ಕಾಗಿ ಯೆಹೋಶುವನು ಅವರಿಗೆ ಸುನ್ನತಿ ಮಾಡಿಸಿದನು.

ಯೆಹೋಶುವನು ಅವರೆಲ್ಲರಿಗೂ ಸುನ್ನತಿ ಮಾಡಿಸಿದನು. ಅವರೆಲ್ಲರ ಗಾಯಗಳು ವಾಸಿಯಾಗುವವರೆಗೆ ಅವರು ಅಲ್ಲಿಯೇ ತಮ್ಮತಮ್ಮ ಸ್ಥಳದ ಪಾಳೆಯದಲ್ಲಿ ಇದ್ದರು.

ಕಾನಾನಿನಲ್ಲಿ ಮೊದಲನೆಯ ಪಸ್ಕಹಬ್ಬ

ಆಗ ಯೆಹೋವನು ಯೆಹೋಶುವನಿಗೆ, “ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಅವಮಾನಕ್ಕೆ ಗುರಿಯಾಗಿದ್ದಿರಿ. ಆದರೆ ಇಂದು ಆ ನಾಚಿಕೆಯನ್ನು ತೆಗೆದು ಹಾಕಿದ್ದೇನೆ” ಎಂದನು. ಆದ್ದರಿಂದ ಯೆಹೋಶುವನು ಆ ಸ್ಥಳಕ್ಕೆ “ಗಿಲ್ಗಾಲ್” ಎಂದು ಹೆಸರಿಟ್ಟನು. ಈಗಲೂ ಆ ಸ್ಥಳಕ್ಕೆ “ಗಿಲ್ಗಾಲ್” ಎಂಬ ಹೆಸರಿದೆ.

10 ಇಸ್ರೇಲರು ಇನ್ನೂ ಗಿಲ್ಗಾಲಿನಲ್ಲಿಯೇ ಇಳಿದುಕೊಂಡಿದ್ದಾಗ ಜೆರಿಕೊವಿನ ಮೈದಾನಗಳಲ್ಲಿ ಅವರು ಆ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಪಸ್ಕಹಬ್ಬವನ್ನು ಆಚರಿಸಿದರು. 11 ಪಸ್ಕಹಬ್ಬದ ಮರುದಿನ ಮುಂಜಾನೆಯಲ್ಲಿ ಅವರು ಆ ಭೂಮಿಯಲ್ಲಿ ಬೆಳೆದ ಆಹಾರವನ್ನು ಊಟಮಾಡಿದರು; ಅವರು ಹುಳಿ ರಹಿತವಾದ ರೊಟ್ಟಿಯನ್ನು ಮತ್ತು ಹುರಿದ ಕಾಳುಗಳನ್ನು ಊಟ ಮಾಡಿದರು. 12 ಮೂರನೆಯ ದಿನ ಮುಂಜಾನೆ ಪರಲೋಕದಿಂದ ಬರುತ್ತಿದ್ದ ವಿಶಿಷ್ಟ ಆಹಾರವಾದ ಮನ್ನವು ನಿಂತುಹೋಯಿತು. ಜನರು ಕಾನಾನ್ ಪ್ರದೇಶದಲ್ಲಿ ಬೆಳೆದ ಆಹಾರವನ್ನು ತಿಂದ ದಿನದಿಂದ ಹೀಗಾಯಿತು. ಅಂದಿನಿಂದ ಇಸ್ರೇಲರು ಪರಲೋಕದ ವಿಶಿಷ್ಟವಾದ ಆಹಾರವನ್ನು ಪಡೆಯಲಿಲ್ಲ.

ಯೆಹೋವನ ಸೇನಾಧಿಪತಿ

13 ಯೆಹೋಶುವನು ಜೆರಿಕೊವಿನ ಸಮೀಪದಲ್ಲಿದ್ದಾಗ ಕಣ್ಣೆತ್ತಿ ನೋಡಲು ಒಬ್ಬ ಮನುಷ್ಯನು ಅವನ ಎದುರಿಗೆ ನಿಂತಿರುವುದನ್ನು ಕಂಡನು. ಆ ಮನುಷ್ಯನ ಕೈಯಲ್ಲಿ ಒಂದು ಖಡ್ಗವಿತ್ತು. ಯೆಹೋಶುವನು ಆ ಮನುಷ್ಯನ ಹತ್ತಿರಹೋಗಿ, “ನೀನು ನಮ್ಮ ಜನರ ಸ್ನೇಹಿತನೋ ಅಥವಾ ನೀನು ನಮ್ಮ ಶತ್ರುಗಳಲ್ಲಿ ಒಬ್ಬನೋ?” ಎಂದು ಕೇಳಿದನು.

14 ಆ ಮನುಷ್ಯನು, “ನಾನು ಶತ್ರುವಲ್ಲ, ನಾನು ಯೆಹೋವನ ಸೇನಾಧಿಪತಿ. ನಾನು ಈಗಲೇ ನಿನ್ನಲ್ಲಿಗೆ ಬಂದಿದ್ದೇನೆ” ಎಂದು ಉತ್ತರಿಸಿದನು.

ಆಗ ಯೆಹೋಶುವನು ನೆಲದವರೆಗೂ ತಲೆಬಾಗಿ ನಮಸ್ಕರಿಸಿ ಅವನಿಗೆ, “ನಾನು ನಿನ್ನ ಸೇವಕ. ನನ್ನ ಒಡೆಯನು ನನಗೆ ಯಾವುದಾದರೂ ಆಜ್ಞೆಯನ್ನು ವಿಧಿಸಬೇಕಾಗಿದೆಯೇ?” ಎಂದು ಕೇಳಿದನು.

15 ಯೆಹೋವನ ಸೇನಾಧಿಪತಿಯು, “ನಿನ್ನ ಪಾದರಕ್ಷೆಗಳನ್ನು ಬಿಚ್ಚಿಬಿಡು. ಈಗ ನೀನು ನಿಂತುಕೊಂಡಿರುವ ಸ್ಥಳವು ಪವಿತ್ರವಾದದ್ದು” ಎಂದು ಹೇಳಿದನು. ಯೆಹೋಶುವನು ಅವನು ಹೇಳಿದಂತೆಯೇ ಮಾಡಿದನು.

ಜೆರಿಕೊ ಪಟ್ಟಣದ ಬಾಗಿಲನ್ನು ಮುಚ್ಚಲಾಗಿತ್ತು. ಇಸ್ರೇಲರು ಸಮೀಪದಲ್ಲೇ ಇದ್ದುದರಿಂದ ಪಟ್ಟಣದ ಜನರು ಹೆದರಿಕೊಂಡಿದ್ದರು. ಒಬ್ಬರಾದರೂ ಪಟ್ಟಣದಲ್ಲಿ ಪ್ರವೇಶ ಮಾಡಲಿಲ್ಲ; ಒಬ್ಬರಾದರೂ ಪಟ್ಟಣದಿಂದ ಹೊರ ಬರಲಿಲ್ಲ.

ಆಗ ಯೆಹೋವನು ಯೆಹೋಶುವನಿಗೆ, “ಇಗೋ ನೋಡು, ನೀನು ಜೆರಿಕೊ ನಗರವನ್ನು ಗೆಲ್ಲುವಂತೆ ಮಾಡುತ್ತೇನೆ. ನೀನು ಅರಸನನ್ನು ಮತ್ತು ನಗರದ ಎಲ್ಲ ಯೋಧರನ್ನು ಸೋಲಿಸುವೆ. ಪ್ರತಿ ನಿತ್ಯ ಒಂದು ಸಲ ನಿನ್ನ ಸೇನೆಯೊಂದಿಗೆ ನಗರದ ಸುತ್ತಲೂ ಸುತ್ತಬೇಕು. ಹೀಗೆ ಆರು ದಿನಗಳವರೆಗೆ ಸುತ್ತಬೇಕು. ಏಳು ಮಂದಿ ಯಾಜಕರಿಗೆ ಟಗರಿನ ಕೊಂಬಿನಿಂದ ಮಾಡಿದ ತುತ್ತೂರಿಗಳನ್ನು ಹಿಡಿದುಕೊಂಡು ಪವಿತ್ರ ಪೆಟ್ಟಿಗೆಯ ಮುಂದೆ ಹೋಗಲು ಹೇಳು. ಏಳನೆಯ ದಿನದಲ್ಲಿ ನಗರದ ಸುತ್ತಲೂ ನೀವು ಏಳುಸಲ ಸುತ್ತಬೇಕು. ಏಳನೆಯ ದಿನದಲ್ಲಿ ಸುತ್ತುವಾಗ ತುತ್ತೂರಿಯನ್ನು ಊದಬೇಕೆಂದು ಯಾಜಕರಿಗೆ ಹೇಳು. ಯಾಜಕರ ತುತ್ತೂರಿ ಧ್ವನಿಯನ್ನು ಕೇಳಿದಾಗ ಜನರು ಆರ್ಭಟಿಸಬೇಕು. ಆಗ ನಗರದ ಗೋಡೆಗಳು ಬೀಳುವವು; ಆಗ ನೀವು ನೇರವಾಗಿ ನಗರದೊಳಗೆ ಹೋಗಿರಿ” ಅಂದನು.

ಜೆರಿಕೊವನ್ನು ಸ್ವಾಧೀನಪಡಿಸಿಕೊಂಡದ್ದು

ಆದ್ದರಿಂದ ನೂನನ ಮಗನಾದ ಯೆಹೋಶುವನು ಯಾಜಕರನ್ನು ಒಟ್ಟಿಗೆ ಕರೆದು, ಅವರಿಗೆ, “ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿರಿ. ಏಳು ಮಂದಿ ಯಾಜಕರು ತುತ್ತೂರಿಗಳನ್ನು ತೆಗೆದುಕೊಂಡು ಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಹೇಳಿದನು.

ಬಳಿಕ ಯೆಹೋಶುವನು ಜನರಿಗೆ, “ಈಗ ನಗರದ ಸುತ್ತ ಪ್ರದಕ್ಷಿಣೆ ಹಾಕಿರಿ. ಆಯುಧಗಳನ್ನು ಹಿಡಿದುಕೊಂಡು ಯೋಧರು ಯೆಹೋವನ ಪವಿತ್ರಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಆಜ್ಞಾಪಿಸಿದನು.

ಯೆಹೋಶುವನು ಜನರೊಂದಿಗೆ ಮಾತನಾಡುವದನ್ನು ಮುಗಿಸಿದ ಮೇಲೆ, ಏಳು ಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಊದುತ್ತಾ ಯೆಹೋವನ ಮುಂದೆ ನಡೆಯಲು ಪ್ರಾರಂಭಿಸಿದರು. ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ಅವರನ್ನು ಹಿಂಬಾಲಿಸಿದರು. ಆಯುಧಗಳನ್ನು ಹಿಡಿದುಕೊಂಡ ಯೋಧರು ಯಾಜಕರ ಮುಂದೆ ನಡೆದರು. ಪವಿತ್ರ ಪೆಟ್ಟಿಗೆಯ ಹಿಂದೆ ಜನರು ಕ್ರಮಬದ್ಧವಾಗಿ ಹೆಜ್ಜೆಯನ್ನು ಹಾಕುತ್ತಾ ತಮ್ಮ ತುತ್ತೂರಿಗಳನ್ನು ಊದುತ್ತಿದ್ದರು. 10 ಯೆಹೋಶುವನು ಜನರಿಗೆ, “ಆರ್ಭಟಿಸಬೇಡಿರಿ, ನಾನು ಹೇಳುವ ದಿನದವರೆಗೆ ಒಂದು ಶಬ್ದವನ್ನೂ ಉಚ್ಚರಿಸಬೇಡಿರಿ. ಆಮೇಲೆ ನೀವು ಆರ್ಭಟಿಸಬಹುದು” ಎಂದು ಹೇಳಿದನು.

11 ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಒಂದು ಸಲ ನಗರವನ್ನು ಸುತ್ತಿದ ಮೇಲೆ ಪಾಳೆಯಕ್ಕೆ ಹಿಂತಿರುಗಿ ಬಂದು ಆ ರಾತ್ರಿ ಅಲ್ಲಿಯೇ ಉಳಿದುಕೊಂಡರು.

12 ಯೆಹೋಶುವನು ಮರುದಿನ ಬೆಳಿಗ್ಗೆ ಎದ್ದನು. ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಪುನಃ ಹೊತ್ತುಕೊಂಡು ಹೋದರು. 13 ಏಳುಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಯೆಹೋವನ ಪವಿತ್ರ ಪೆಟ್ಟಿಗೆಯ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ನಡೆದರು. ಆಯಧ ಸನ್ನದ್ಧರಾದ ಸೈನಿಕರು ಅವರ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ನಡೆದರು. ಯೆಹೋವನ ಪವಿತ್ರ ಪೆಟ್ಟಿಗೆಯ ಹಿಂಭಾಗದಲ್ಲಿ ಉಳಿದ ಜನರು ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ಪಟ್ಟಣದ ಸುತ್ತಲೂ ನಡೆದರು. 14 ಎರಡನೆಯ ದಿನ ಅವರೆಲ್ಲರು ನಗರವನ್ನು ಒಂದು ಸಲ ಕ್ರಮಬದ್ಧವಾಗಿ ಸುತ್ತಿ ಪಾಳೆಯಕ್ಕೆ ಹಿಂತಿರುಗಿದರು. ಹೀಗೆ ಅವರು ಆರು ದಿನಗಳವರೆಗೆ ಮಾಡಿದರು.

15 ಏಳನೆಯ ದಿನ ಸೂರ್ಯೋದಯವಾಗುತ್ತಲೇ ಅವರು ಎದ್ದರು. ಪಟ್ಟಣದ ಸುತ್ತಲು ಅವರು ಏಳು ಸಲ ಸುತ್ತಿದರು. ಅವರು ಮುಂಚಿನ ದಿನಗಳಲ್ಲಿ ನಡೆದ ಕ್ರಮದಲ್ಲಿಯೇ ನಡೆದರು. ಆದರೆ ಆ ದಿನ ಅವರು ನಗರದ ಸುತ್ತಲು ಏಳು ಸಲ ಸುತ್ತಿದರು. 16 ಏಳನೆಯ ಸಲ ಅವರು ನಗರವನ್ನು ಸುತ್ತುವಾಗ ಯಾಜಕರು ತುತ್ತೂರಿಗಳನ್ನು ಊದಿದರು. ಆಗ ಯೆಹೋಶುವನು ಜನರಿಗೆ, “ಈಗ ಆರ್ಭಟಿಸಿರಿ, ಯೆಹೋವನು ಈ ನಗರವನ್ನು ನಿಮಗೆ ಕೊಟ್ಟಿದ್ದಾನೆ. 17 ಈ ನಗರ ಮತ್ತು ಇದರಲ್ಲಿರುವದೆಲ್ಲವೂ ಯೆಹೋವನ ಸ್ವತ್ತಾಗಿದೆ. ವೇಶ್ಯೆಯಾದ ರಾಹಾಬಳು ಮತ್ತು ಅವಳ ಮನೆಯಲ್ಲಿರುವ ಎಲ್ಲ ಜನರು ಮಾತ್ರ ಜೀವಸಹಿತ ಉಳಿಯಲಿ, ಅವರನ್ನು ಕೊಲ್ಲಬಾರದು. ಏಕೆಂದರೆ ರಾಹಾಬಳು ನಮ್ಮ ಆ ಇಬ್ಬರು ಗೂಢಚಾರರಿಗೆ ಸಹಾಯ ಮಾಡಿದ್ದಾಳೆ. 18 ಅಲ್ಲದೆ ನಾವು ಉಳಿದೆಲ್ಲವನ್ನು ನಾಶಪಡಿಸಬೇಕೆಂಬುದನ್ನು ನೆನಪಿಡಿ. ಅವರ ವಸ್ತುಗಳನ್ನು ತೆಗೆದುಕೊಳ್ಳಬೇಡಿ. ನೀವು ಅವರ ವಸ್ತುಗಳನ್ನು ತೆಗೆದುಕೊಂಡರೆ ಮತ್ತು ಅವುಗಳನ್ನು ನಮ್ಮ ಪಾಳೆಯಕ್ಕೆ ತಂದರೆ ನೀವೇ ನಾಶವಾಗುವಿರಿ; ಇಸ್ರೇಲಿನ ಎಲ್ಲಾ ಜನರಿಗೆ ಕಷ್ಟವನ್ನುಂಟುಮಾಡುವಿರಿ. 19 ಬೆಳ್ಳಿ, ಬಂಗಾರ, ಕಂಚು ಮತ್ತು ಕಬ್ಬಿಣಗಳಿಂದ ಮಾಡಿದ ಎಲ್ಲಾ ವಸ್ತುಗಳು ಯೆಹೋವನ ಸ್ವತ್ತಾಗಿವೆ. ಆದ್ದರಿಂದ ಅವುಗಳನ್ನು ಆತನ ಭಂಡಾರಕ್ಕೆ ಸೇರಿಸಬೇಕು” ಎಂದು ಆಜ್ಞಾಪಿಸಿದನು.

20 ಯಾಜಕರು ತುತ್ತೂರಿಗಳನ್ನು ಊದಿದಾಗ ಜನರು ಆರ್ಭಟಿಸತೊಡಗಿದರು. ಆಗ ಗೋಡೆಗಳು ಬಿದ್ದವು; ಜನರು ನೇರವಾಗಿ ನಗರದೊಳಗೆ ನುಗ್ಗಿದರು. ಹೀಗೆ ಇಸ್ರೇಲರು ನಗರವನ್ನು ಸ್ವಾಧೀನಪಡಿಸಿಕೊಂಡರು. 21 ಅವರು ನಗರದಲ್ಲಿದ್ದ ಎಲ್ಲವನ್ನು ನಾಶಪಡಿಸಿದರು; ಅಲ್ಲಿದ್ದ ತರುಣರನ್ನು, ವೃದ್ಧರನ್ನು, ತರುಣಿಯರನ್ನು, ವೃದ್ಧೆಯರನ್ನು, ದನಕರುಗಳನ್ನು, ಕುರಿಗಳನ್ನು ಮತ್ತು ಕತ್ತೆಗಳನ್ನು ಕೊಂದುಹಾಕಿದರು.

22 ಯೆಹೋಶುವನು ಆ ಇಬ್ಬರು ಗೂಢಚಾರರಿಗೆ, “ನೀವು ಪ್ರಮಾಣ ಮಾಡಿರುವುದರಿಂದ ಆ ವೇಶ್ಯೆಯ ಮನೆಗೆ ಹೋಗಿ ಅವಳನ್ನು ಹೊರಗೆ ಕರೆದುಕೊಂಡು ಬನ್ನಿ. ಅವಳ ಸಂಗಡ ಇರುವ ಎಲ್ಲಾ ಜನರನ್ನೂ ಕರೆದುಕೊಂಡು ಬನ್ನಿ” ಎಂದು ಹೇಳಿದನು.

23 ಆ ಇಬ್ಬರು, ರಾಹಾಬಳ ಮನೆಗೆ ಹೋಗಿ ಅವಳನ್ನು ಹೊರಗೆ ಕರೆದುಕೊಂಡು ಬಂದರು. ಅವಳ ತಂದೆ, ತಾಯಿ, ಸಹೋದರರು ಮತ್ತು ಅವಳ ಎಲ್ಲ ಕುಟುಂಬದವರನ್ನು ಮತ್ತು ಅವಳ ಸಂಗಡ ಅಲ್ಲಿ ಇದ್ದ ಬೇರೆ ಎಲ್ಲ ಜನರನ್ನು ಸಹ ಅವರು ಹೊರಗೆ ಕರೆದುಕೊಂಡು ಬಂದರು. ಅವರೆಲ್ಲರನ್ನು ಇಸ್ರೇಲಿನ ಜನರ ಪಾಳೆಯದ ಹೊರಗಡೆ ಒಂದು ಸುರಕ್ಷಿತವಾದ ಸ್ಥಳದಲ್ಲಿ ಇರಿಸಿದರು.

24 ಬಳಿಕ ಇಸ್ರೇಲರು ಇಡೀ ನಗರವನ್ನು ಸುಟ್ಟು ಹಾಕಿದರು. ಅವರು ಬೆಳ್ಳಿ, ಬಂಗಾರ, ಕಂಚು ಮತ್ತು ಕಬ್ಬಿಣಗಳಿಂದ ಮಾಡಿದ ವಸ್ತುಗಳನ್ನು ಬಿಟ್ಟು ನಗರದಲ್ಲಿನ ಉಳಿದೆಲ್ಲವನ್ನು ಸುಟ್ಟು ಹಾಕಿದರು. ಅವರು ಆ ವಸ್ತುಗಳನ್ನು ಯೆಹೋವನಿಗಾಗಿ ಉಳಿಸಿದರು. 25 ಯೆಹೋಶುವನು ವೇಶ್ಯೆಯಾದ ರಾಹಾಬಳನ್ನೂ ಅವಳ ಕುಟುಂಬವನ್ನೂ ಅವಳ ಸಂಗಡ ಇದ್ದ ಬೇರೆ ಜನರನ್ನೂ ಉಳಿಸಿದನು. ಯೆಹೋಶುವನು ಜೆರಿಕೊವಿಗೆ ಕಳಿಸಿಕೊಟ್ಟ ಗೂಢಚಾರರಿಗೆ ರಾಹಾಬಳು ಸಹಾಯ ಮಾಡಿದ್ದಕ್ಕಾಗಿ ಯೆಹೋಶುವನು ಅವರೆಲ್ಲರನ್ನು ಉಳಿಸಿದನು. ರಾಹಾಬಳು ಇಂದಿಗೂ ಸಹ ಇಸ್ರೇಲಿನ ಜನರೊಂದಿಗೆ ವಾಸವಾಗಿದ್ದಾಳೆ.

26 ಆ ಸಮಯದಲ್ಲಿ ಯೆಹೋಶುವನು, ಇಸ್ರೇಲಿನ ಜನರಿಂದ ಪ್ರಮಾಣಮಾಡಿಸಿ ಅವರಿಗೆ,

“ಈ ಜೆರಿಕೊ ಪಟ್ಟಣವನ್ನು ಪುನಃ ಕಟ್ಟಲು ಪ್ರಯತ್ನಿಸುವವನು
    ಯೆಹೋವನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಲಿ.
ಈ ನಗರಕ್ಕೆ ಅಡಿಗಲ್ಲನ್ನಿಡುವ ವ್ಯಕ್ತಿಯು
    ತನ್ನ ಹಿರಿಯ ಮಗನನ್ನು ಕಳೆದುಕೊಳ್ಳಲಿ;
ಹೆಬ್ಬಾಗಿಲನ್ನು ನಿಲ್ಲಿಸುವ ವ್ಯಕ್ತಿ
    ತನ್ನ ಕಿರಿಯ ಮಗನನ್ನು ಕಳೆದುಕೊಳ್ಳಲಿ”[b]

ಎಂದು ಹೇಳಿದನು.

27 ಯೆಹೋವನು ಯೆಹೋಶುವನ ಸಂಗಡ ಇದ್ದನು. ಯೆಹೋಶುವನು ದೇಶದಲ್ಲೆಲ್ಲಾ ಸುಪ್ರಸಿದ್ಧನಾದನು.

ಆಕಾನನ ಪಾಪ

ಇಸ್ರೇಲರು ಯೆಹೋವನ ಆಜ್ಞೆಗೆ ವಿಧೇಯರಾಗಲಿಲ್ಲ. ಯೆಹೂದ ಕುಲದವನೂ ಕರ್ಮೀಯ ಮಗನೂ ಜಬ್ದೀಯ ಮೊಮ್ಮಗನೂ ಜೆರಹನ ಗೋತ್ರದವನೂ ಆದ ಆಕಾನ ಎಂಬವನು ನಾಶಮಾಡಬೇಕಾದ ವಸ್ತುಗಳಲ್ಲಿ ಕೆಲವನ್ನು ಇಟ್ಟುಕೊಂಡಿದ್ದನು. ಅದಕ್ಕಾಗಿ ಯೆಹೋವನು ಇಸ್ರೇಲಿನವರ ಮೇಲೆ ತುಂಬಾ ಕೋಪಗೊಂಡನು.

ಜೆರಿಕೊವನ್ನು ಸ್ವಾಧೀನಪಡಿಸಿಕೊಂಡ ಮೇಲೆ ಯೆಹೋಶುವನು ಕೆಲವು ಜನರನ್ನು “ಆಯಿ” ಎಂಬ ಪಟ್ಟಣಕ್ಕೆ ಕಳುಹಿಸಿದನು. “ಆಯಿ” ಬೇತಾವೆನಿನ ಸಮೀಪಕ್ಕೂ ಬೇತೇಲಿನ ಪೂರ್ವಕ್ಕೂ ಇತ್ತು. ಯೆಹೋಶುವನು “‘ಆಯಿ’ಗೆ ಹೋಗಿರಿ ಮತ್ತು ಆ ಪ್ರಾಂತ್ಯದ ದುರ್ಬಲತೆಗಳನ್ನು ಕಂಡುಹಿಡಿಯಿರಿ” ಎಂದು ಹೇಳಿದನು. ಆಗ ಅವರು ಆ ಪ್ರದೇಶದಲ್ಲಿ ಗೂಢಚರ್ಯ ಮಾಡುವುದಕ್ಕೆ ಹೋದರು.

ತರುವಾಯ ಆ ಜನರು ಯೆಹೋಶುವನಲ್ಲಿಗೆ ಬಂದು, “ಆಯಿ ಒಂದು ದುರ್ಬಲ ಪ್ರದೇಶವಾಗಿದೆ, ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ನಮ್ಮ ಎಲ್ಲ ಜನರು ಬೇಕಾಗುವುದಿಲ್ಲ. ಅಲ್ಲಿ ಯುದ್ಧ ಮಾಡಲು ಎರಡು ಅಥವಾ ಮೂರುಸಾವಿರ ಜನರನ್ನು ಕಳುಹಿಸಿದರೆ ಸಾಕು, ಇಡೀ ಸೈನ್ಯವನ್ನು ಉಪಯೋಗಿಸುವ ಅವಶ್ಯಕತೆ ಇಲ್ಲ. ಅಲ್ಲಿ ನಮ್ಮ ವಿರುದ್ಧ ಹೋರಾಡಬಲ್ಲ ಕೆಲವೇ ಜನರು ಇದ್ದಾರೆ” ಎಂದು ಹೇಳಿದರು.

4-5 ಸುಮಾರು ಮೂರು ಸಾವಿರ ಜನರು “ಆಯಿ”ಗೆ ಹೋದರು. ಆದರೆ “ಆಯಿ”ಯ ಜನರು ಇಸ್ರೇಲಿನ ಸುಮಾರು ಮೂವತ್ತಾರು ಜನರನ್ನು ಕೊಂದು ಹಾಕಿದರು. ಆದ್ದರಿಂದ ಇಸ್ರೇಲಿನ ಜನರು ಓಡಿಹೋದರು. “ಆಯಿ”ಯ ಜನರು ಅವರನ್ನು ಪಟ್ಟಣದ ದ್ವಾರದಿಂದ ಕಲ್ಲುಗಣಿಗಳವರೆಗೆ ಬೆನ್ನಟ್ಟಿಕೊಂಡು ಬಂದರು. “ಆಯಿ”ಯ ಜನರು ಅವರನ್ನು ಚೆನ್ನಾಗಿ ಥಳಿಸಿದರು.

ಆಗ ಇಸ್ರೇಲರು ತುಂಬ ಭಯಗೊಂಡು ಧೈರ್ಯವನ್ನು ಕಳೆದುಕೊಂಡರು. ಇದನ್ನು ಕೇಳಿ ಯೆಹೋಶುವನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಪವಿತ್ರ ಪೆಟ್ಟಿಗೆಯ ಮುಂದೆ ನೆಲದ ಮೇಲೆ ಬೋರಲಾಗಿ ಬಿದ್ದುಕೊಂಡನು. ಸಾಯಂಕಾಲದವರೆಗೂ ಯೆಹೋಶುವನು ಹಾಗೆಯೇ ಇದ್ದನು. ಇಸ್ರೇಲಿನ ಹಿರಿಯರೂ ಹಾಗೆಯೇ ಮಾಡಿದರು. ಅವರು ದುಃಖದಿಂದ ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡರು.

ಯೆಹೋಶುವನು, “ಯೆಹೋವನೇ ನನ್ನ ಒಡೆಯನೇ, ನಮ್ಮ ಜನರನ್ನು ನೀನು ಜೋರ್ಡನ್ ನದಿ ದಾಟಿಸಿ ಕರೆದುಕೊಂಡು ಬಂದೆ. ನಮ್ಮನ್ನು ಇಲ್ಲಿಯವರೆಗೆ ಕರೆದು ತಂದು ಅಮೋರಿಯರಿಂದ ನಾಶವಾಗಲು ನಮ್ಮನ್ನು ಬಿಟ್ಟು ಕೊಡುವುದೇಕೆ? ನಾವು ಇದ್ದುದರಲ್ಲಿ ತೃಪ್ತಿಪಟ್ಟುಕೊಂಡು ಜೋರ್ಡನ್ ನದಿಯ ಆಚೆಯಲ್ಲಿಯೇ ಇರಬೇಕಾಗಿತ್ತು. ಯೆಹೋವನೇ, ಇಸ್ರೇಲರು ವೈರಿಗಳ ಮುಂದೆ ಸೋತು ಹೋಗಿದ್ದಾರಲ್ಲಾ! ಈಗ ನಾನೇನು ಹೇಳಲಿ? ಈ ವಿಷಯವು ಕಾನಾನ್ಯರಿಗೂ ದೇಶದ ಉಳಿದ ಎಲ್ಲಾ ಜನರಿಗೂ ತಿಳಿಯುವುದು. ಆಗ ಅವರು ನಮ್ಮ ಮೇಲೆ ಧಾಳಿಮಾಡಿ ನಮ್ಮೆಲ್ಲರನ್ನು ಕೊಂದು ಹಾಕುತ್ತಾರೆ. ಆಗ ನೀನು ನಿನ್ನ ಕೀರ್ತಿಯನ್ನು ಉಳಿಸಿಕೊಳ್ಳಲು ಏನು ಮಾಡುವೆ?” ಎಂದು ಪ್ರಲಾಪಿಸಿದನು.

10 ಯೆಹೋವನು ಯೆಹೋಶುವನಿಗೆ, “ಮೇಲಕ್ಕೆ ಏಳು, ನೀನು ಹೀಗೆ ಬೋರಲು ಬಿದ್ದಿರುವುದೇಕೆ? 11 ಇಸ್ರೇಲರು ಪಾಪಮಾಡಿದ್ದಾರೆ. ನಾನು ಮಾಡಿಕೊಂಡ ಒಡಂಬಡಿಕೆಯನ್ನು ಮೀರಿದ್ದಾರೆ. ನಾನು ನಾಶಪಡಿಸಲು ಹೇಳಿದ ವಸ್ತುಗಳಲ್ಲಿ ಕೆಲವನ್ನು ಅವರು ತೆಗೆದುಕೊಂಡಿದ್ದಾರೆ; ಅವರು ನನ್ನಿಂದ ಕದ್ದಿದ್ದಾರೆ; ಸುಳ್ಳು ಹೇಳಿದ್ದಾರೆ. ಅವರು ಆ ವಸ್ತುಗಳನ್ನು ತಮಗಾಗಿ ತೆಗೆದುಕೊಂಡಿದ್ದಾರೆ. 12 ಅದಕ್ಕಾಗಿಯೇ ಇಸ್ರೇಲಿನ ಸೈನ್ಯವು ಯುದ್ಧದಿಂದ ವಿಮುಖವಾಗಿ ಓಡಿಬಂತು. ಅವರು ತಪ್ಪನ್ನು ಮಾಡಿದ್ದರಿಂದಲೇ ಶಾಪಕ್ಕೆ ಗುರಿಯಾಗಿದ್ದಾರೆ. ಆ ಪಾಪವನ್ನು ನಿಮ್ಮಿಂದ ತೆಗೆದುಹಾಕಬೇಕು, ಅಲ್ಲಿಯವರೆಗೆ ನಾನು ನಿಮಗೆ ಸಹಾಯ ಮಾಡುವುದಿಲ್ಲ, ನಾನು ನಿಮ್ಮ ಸಂಗಡ ಬರುವುದೇ ಇಲ್ಲ.

13 “ಈಗ ಹೋಗಿ ಜನರನ್ನು ಶುದ್ಧಗೊಳಿಸು, ನೀನು ಜನರಿಗೆ, ‘ನೀವು ನಿಮ್ಮನ್ನು ಶುದ್ಧಿಗೊಳಿಸಿಕೊಳ್ಳಿರಿ, ನಾಳೆಗಾಗಿ ಸಿದ್ಧರಾಗಿರಿ, ಇಸ್ರೇಲಿನ ದೇವರಾದ ಯೆಹೋವನು ನಾಶಪಡಿಸಬೇಕೆಂದು ಆಜ್ಞಾಪಿಸಿದ ವಸ್ತುಗಳನ್ನು ಕೆಲ ಜನರು ಇಟ್ಟುಕೊಂಡಿದ್ದಾರೆಂದು ಹೇಳುತ್ತಾನೆ. ನೀವು ಆ ವಸ್ತುಗಳನ್ನು ಬಿಸಾಡುವವರೆಗೆ ನಿಮಗೆ ನಿಮ್ಮ ಶತ್ರುಗಳನ್ನು ಸೋಲಿಸಲು ಎಂದಿಗೂ ಸಾಧ್ಯವಿಲ್ಲ.

14 “‘ನಾಳೆ ಬೆಳಿಗ್ಗೆ ನೀವೆಲ್ಲರು ಯೆಹೋವನ ಮುಂದೆ ಬಂದು ನಿಲ್ಲಬೇಕು. ಎಲ್ಲಾ ಕುಲಗಳು ಯೆಹೋವನ ಮುಂದೆ ಬಂದು ನಿಲ್ಲಬೇಕು. ಯೆಹೋವನು ಒಂದು ಕುಲವನ್ನು ಸೂಚಿಸುತ್ತಾನೆ. ಆಗ ಆ ಕುಲ ಮಾತ್ರ ಮುಂದೆ ನಿಲ್ಲಬೇಕು. ಆಗ ಯೆಹೋವನು ಒಂದು ಗೋತ್ರವನ್ನು ಸೂಚಿಸುತ್ತಾನೆ. ಆಗ ಆ ಗೋತ್ರದವರು ಮಾತ್ರ ಯೆಹೋವನ ಮುಂದೆ ನಿಲ್ಲಬೇಕು. ಆಗ ಯೆಹೋವನು ಆ ಗೋತ್ರದ ಪ್ರತಿಯೊಂದು ಕುಟುಂಬವನ್ನು ನೋಡಿ, ಒಂದು ಕುಟುಂಬವನ್ನು ಸೂಚಿಸುತ್ತಾನೆ. ಬಳಿಕ ಯೆಹೋವನು ಆ ಕುಟುಂಬದ ಪ್ರತಿಯೊಬ್ಬ ಮನುಷ್ಯನನ್ನು ನೋಡುತ್ತಾನೆ. 15 ಆಗ ನಾವು ನಾಶಪಡಿಸಬೇಕಾಗಿದ್ದ ವಸ್ತುಗಳನ್ನು ಇಟ್ಟುಕೊಂಡ ಮನುಷ್ಯನು ಸಿಕ್ಕಿಬೀಳುತ್ತಾನೆ. ಬಳಿಕ ಆ ಮನುಷ್ಯನು ಬೆಂಕಿಯಿಂದ ನಾಶವಾಗುವನು. ಅವನ ಎಲ್ಲಾ ಸ್ವತ್ತು ಅವನೊಂದಿಗೆ ನಾಶವಾಗುವುದು. ಆ ಮನುಷ್ಯನು ಯೆಹೋವನ ಆಜ್ಞೆಯನ್ನು ಮೀರಿದ್ದಾನೆ. ಇಸ್ರೇಲರಿಗೆ ಕೇಡನ್ನು ಬರಮಾಡಿದ್ದಾನೆ’” ಎಂದನು.

16 ಮಾರನೆಯ ದಿನ, ಬೆಳಿಗ್ಗೆ ಯೆಹೋಶುವನು ಇಸ್ರೇಲಿನ ಎಲ್ಲ ಜನರನ್ನು ಯೆಹೋವನ ಮುಂದೆ ಕರೆದುಕೊಂಡು ಬಂದನು. ಎಲ್ಲ ಕುಲಗಳು ಯೆಹೋವನ ಮುಂದೆ ನಿಂತುಕೊಂಡವು. ಯೆಹೋವನು ಯೆಹೂದ ಕುಲವನ್ನು ಸೂಚಿಸಿದನು. 17 ಆದ್ದರಿಂದ ಯೆಹೂದ ಕುಲದ ಎಲ್ಲ ಗೋತ್ರಗಳು ಯೆಹೋವನ ಮುಂದೆ ಬಂದು ನಿಂತವು. ಯೆಹೋವನು ಜೆರಹನ ಗೋತ್ರವನ್ನು ಸೂಚಿಸಿದನು. ಆಗ ಜೆರಹನ ಗೋತ್ರದ ಎಲ್ಲ ಕುಟುಂಬಗಳು ಯೆಹೋವನ ಎದುರಿಗೆ ಬಂದು ನಿಂತವು. ಆಗ ಜಬ್ದೀಯ ಕುಟುಂಬವನ್ನು ಸೂಚಿಸಲಾಯಿತು. 18 ಆಗ ಯೆಹೋಶುವನು ಆ ಕುಟುಂಬದ ಎಲ್ಲ ಗಂಡಸರನ್ನು ಯೆಹೋವನ ಮುಂದೆ ಬರಲು ಹೇಳಿದನು. ಯೆಹೋವನು ಆಗ ಕರ್ಮೀಯ ಮಗನಾದ ಆಕಾನನನ್ನು ಸೂಚಿಸಿದನು. ಕರ್ಮೀಯು ಜಬ್ದೀಯ ಮಗನಾಗಿದ್ದನು, ಜಬ್ದೀಯು ಜೆರಹನ ಮಗನಾಗಿದ್ದನು.

19 ಆಗ ಯೆಹೋಶುವನು ಆಕಾನನಿಗೆ, “ನನ್ನ ಮಗನೇ, ಇಸ್ರೇಲಿನ ದೇವರಾದ ಯೆಹೋವನನ್ನು ಸನ್ಮಾನಿಸು; ಆತನಿಗೆ ಸ್ತೋತ್ರಸಲ್ಲಿಸು. ನಿನ್ನ ಪಾಪಗಳನ್ನು ಆತನಿಗೆ ಅರಿಕೆಮಾಡು. ನೀನು ಮಾಡಿದ್ದನ್ನು ನನಗೆ ಹೇಳು; ನನ್ನಿಂದ ಏನನ್ನೂ ಮುಚ್ಚಿಡಬೇಡ” ಎಂದನು.

20 ಆಗ ಆಕಾನನು, “ಇದು ಸತ್ಯ. ನಾನು ಇಸ್ರೇಲಿನ ದೇವರಾದ ಯೆಹೋವನಿಗೆ ವಿರೋಧವಾಗಿ ಪಾಪಮಾಡಿದ್ದೇನೆ. 21 ನಾವು ಜೆರಿಕೊ ನಗರವನ್ನು ಮತ್ತು ಅದರಲ್ಲಿದ್ದ ಎಲ್ಲ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಕೊಳ್ಳೆ ಹೊಡೆಯುತ್ತಿದ್ದಾಗ, ಬಾಬಿಲೋನಿನ ಒಂದು ಸುಂದರವಾದ ನಿಲುವಂಗಿಯನ್ನೂ ಸುಮಾರು ಐದು ಪೌಂಡಿನಷ್ಟು ಬೆಳ್ಳಿಯನ್ನೂ ಒಂದು ಪೌಂಡಿಗಿಂತಲೂ ಹೆಚ್ಚು ಬಂಗಾರವನ್ನೂ ಕಂಡೆನು. ಈ ವಸ್ತುಗಳನ್ನು ನನಗಾಗಿ ಇಟ್ಟುಕೊಳ್ಳಬೇಕೆಂದು ತುಂಬ ಆಶೆಯಾಯಿತು. ಅದಕ್ಕಾಗಿ ನಾನು ಅವುಗಳನ್ನು ತೆಗೆದುಕೊಂಡೆ. ಅವುಗಳನ್ನು ನನ್ನ ಗುಡಾರದಲ್ಲಿ ಹುಗಿದಿಟ್ಟಿದ್ದೇನೆ. ಬೆಳ್ಳಿಯು ನಿಲುವಂಗಿಯ ಕೆಳಗಡೆ ಇದೆ” ಎಂದು ಒಪ್ಪಿಕೊಂಡನು.

22 ಆಗ ಯೆಹೋಶುವನು ಕೆಲವರನ್ನು ಗುಡಾರಕ್ಕೆ ಕಳುಹಿಸಿದನು. ಅವರು ಗುಡಾರಕ್ಕೆ ಓಡಿಹೋಗಿ ಹುಗಿದಿಟ್ಟಿದ್ದ ಆ ವಸ್ತುಗಳನ್ನು ಕಂಡರು. ಬೆಳ್ಳಿಯು ನಿಲುವಂಗಿಯ ಕೆಳಗಡೆ ಇತ್ತು. 23 ಜನರು ಆ ವಸ್ತುಗಳನ್ನು ಗುಡಾರದ ಹೊರಗೆ ತೆಗೆದುಕೊಂಡು ಬಂದು ಯೆಹೋಶುವನ ಮತ್ತು ಎಲ್ಲಾ ಇಸ್ರೇಲರ ಬಳಿಗೆ ಬಂದರು. ಅವರು ಯೆಹೋವನ ಮುಂದೆ ಆ ವಸ್ತುಗಳನ್ನೆಲ್ಲಾ ನೆಲದ ಮೇಲೆ ಹಾಕಿದರು.

24 ಆಗ ಯೆಹೋಶುವನು ಮತ್ತು ಎಲ್ಲಾ ಇಸ್ರೇಲರು ಸೇರಿ ಜೆರಹನ ಮಗನಾದ ಆಕಾನನನ್ನು, ಬೆಳ್ಳಿಯನ್ನು, ನಿಲುವಂಗಿಯನ್ನು, ಬಂಗಾರವನ್ನು, ಆಕಾನನ ಮಕ್ಕಳನ್ನು, ಅವನ ದನಕರುಗಳನ್ನು, ಕತ್ತೆಗಳನ್ನು, ಅವನ ಕುರಿಗಳನ್ನು, ಅವನ ಗುಡಾರವನ್ನು ಮತ್ತು ಅವನ ಎಲ್ಲ ಸ್ವತ್ತನ್ನು “ಆಕೋರ್” ಕಣಿವೆಗೆ ತೆಗೆದುಕೊಂಡು ಹೋದರು. 25 ಆಗ ಯೆಹೋಶುವನು ಅವನಿಗೆ, “ನೀನು ನಮಗೆ ಕೇಡನ್ನು ಬರಮಾಡಿರುವೆ! ಆದ್ದರಿಂದ ಯೆಹೋವನು ನಿನಗೂ ಕೇಡನ್ನು ಮಾಡಲಿ!” ಎಂದನು. ಆಗ ಜನರೆಲ್ಲರೂ ಕಲ್ಲುಗಳನ್ನು ತೂರಿ ಆಕಾನನನ್ನೂ ಅವನ ಕುಟುಂಬದವರನ್ನೂ ಕೊಂದರು ಮತ್ತು ಅವನ ಎಲ್ಲ ಸ್ವತ್ತನ್ನು ಸುಟ್ಟುಹಾಕಿದರು. 26 ಆಕಾನನನ್ನು ಸುಟ್ಟ ಬಳಿಕ ಅವರು ಅವನ ದೇಹದ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಆ ಕುಪ್ಪೆಯು ಇಂದಿಗೂ ಅಲ್ಲಿದೆ. ಹೀಗೆ ದೇವರು ಆಕಾನನನ್ನು ಶಿಕ್ಷಿಸಿದನು. ಅದಕ್ಕಾಗಿ ಆ ಕಣಿವೆಗೆ “ಆಕೋರ್ ಕಣಿವೆ” ಎಂಬ ಹೆಸರು ಬಂದಿತು. ಬಳಿಕ ಯೆಹೋವನಿಗೆ ಜನರ ಮೇಲಿದ್ದ ಕೋಪ ಶಮನವಾಯಿತು.

“ಆಯಿ”ಯ ವಿನಾಶ

ಆಗ ಯೆಹೋವನು ಯೆಹೋಶುವನಿಗೆ, “ಭಯಪಡಬೇಡ, ನಿರಾಶೆಗೊಳ್ಳಬೇಡ. ನಿಮ್ಮ ಎಲ್ಲ ಯೋಧರನ್ನು ‘ಆಯಿ’ಗೆ ತೆಗೆದುಕೊಂಡು ಹೋಗು. ‘ಆಯಿ’ಯ ಅರಸನನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುತ್ತೇನೆ. ನಾನು ನಿನಗೆ ಅವನ ಜನರನ್ನು, ಅವನ ಪಟ್ಟಣವನ್ನು ಮತ್ತು ಅವನ ಪ್ರದೇಶವನ್ನು ಕೊಡುವೆನು. ಜೆರಿಕೊ ಮತ್ತು ಅದರ ಅರಸನಿಗೆ ಮಾಡಿದಂತೆಯೇ ನೀವು ‘ಆಯಿ’ ಮತ್ತು ಅದರ ಅರಸನಿಗೆ ಮಾಡಬೇಕು. ಈ ಸಲ ಮಾತ್ರ ನೀವು ಎಲ್ಲ ಸಂಪತ್ತನ್ನು ತೆಗೆದುಕೊಂಡು ನಿಮಗಾಗಿ ಇಟ್ಟುಕೊಳ್ಳಬೇಕು. ನೀವು ಈ ಸಂಪತ್ತನ್ನು ನಿಮ್ಮ ಜನರೊಂದಿಗೆ ಹಂಚಿಕೊಳ್ಳಿರಿ. ಈಗ, ನಿಮ್ಮ ಕೆಲವು ಯೋಧರಿಗೆ ಪಟ್ಟಣದ ಹಿಂಭಾಗದಲ್ಲಿ ಅಡಗಿಕೊಂಡಿರಲು ತಿಳಿಸು” ಅಂದನು.

ಯೆಹೋಶುವನು “ಆಯಿ”ಯ ಮೇಲೆ ಆಕ್ರಮಣಮಾಡಲು ಸೈನ್ಯಸಮೇತವಾಗಿ ಹೋದನು. ಮೂವತ್ತು ಸಾವಿರ ಯುದ್ಧವೀರರನ್ನು ಆರಿಸಿಕೊಂಡನು. ಯೆಹೋಶುವನು ಅವರಿಗೆ, “ಗಮನಕೊಟ್ಟು ಕೇಳಿರಿ. ನೀವು ನಗರದ ಹಿಂಭಾಗದ ಸ್ಥಳದಲ್ಲಿ ಅಡಗಿಕೊಂಡಿದ್ದು ಆಕ್ರಮಣಮಾಡಲು ಸಿದ್ಧರಾಗಿರಿ. ನಗರದಿಂದ ಬಹಳ ದೂರ ಹೋಗಬೇಡಿರಿ. ನಾನು ನನ್ನ ಸಂಗಡವಿರುವ ಜನರನ್ನು ಕರೆದುಕೊಂಡು ಪಟ್ಟಣದ ಕಡೆಗೆ ಹೋಗುತ್ತೇನೆ. ಪಟ್ಟಣದೊಳಗಿರುವ ಜನರು ನಮ್ಮ ಸಂಗಡ ಕಾದಾಡಲು ಹೊರಗೆ ಬರುತ್ತಾರೆ. ನಾವು ಮುಂಚಿನಂತೆ ಹಿಂತಿರುಗಿ ಅಲ್ಲಿಂದ ಓಡುತ್ತೇವೆ. ಅವರು ನಗರದಿಂದ ನಮ್ಮನ್ನು ಬೆನ್ನಟ್ಟಿಕೊಂಡು ಬರುತ್ತಾರೆ. ನಾವು ಮುಂಚಿನಂತೆ ಅವರ ಮುಂದೆ ಸೋತು ಓಡಿಹೋಗುತ್ತಿದ್ದೇವೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಹೀಗೆ ನಾವು ಬಹುದೂರ ಓಡಿಹೋದಾಗ ನೀವು ಯಾವ ಸ್ಥಳದಲ್ಲಿ ಅಡಗಿಕೊಂಡಿದ್ದೀರೋ ಆ ಸ್ಥಳದಿಂದ ಹೊರಬಂದು ಪಟ್ಟಣವನ್ನು ಸ್ವಾಧೀನಪಡಿಸಿಕೊಳ್ಳಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಗೆಲ್ಲುವ ಸಾಮರ್ಥ್ಯವನ್ನು ದಯಪಾಲಿಸುತ್ತಾನೆ.

“ಯೆಹೋವನು ಹೇಳಿದಂತೆಯೇ ನೀವು ಮಾಡಬೇಕು. ನೀವು ಪಟ್ಟಣವನ್ನು ಸ್ವಾಧೀನಪಡಿಸಿಕೊಂಡ ಮೇಲೆ ಅದನ್ನು ಸುಟ್ಟುಹಾಕಬೇಕು. ನನ್ನ ಕಡೆಗೆ ಗಮನವಿರಲಿ! ಆಕ್ರಮಣ ಮಾಡುವುದಕ್ಕೆ ನಾನು ಆಜ್ಞೆಯನ್ನು ಕೊಡುತ್ತೇನೆ” ಎಂದು ಆಜ್ಞಾಪಿಸಿದನು.

ಬಳಿಕ ಯೆಹೋಶುವನು ಅವರನ್ನು ಅವರು ಅಡಗಿಕೊಳ್ಳಬೇಕಾದ ಸ್ಥಳಕ್ಕೆ ಕಳುಹಿಸಿದನು. ಅವರು “ಬೇತೇಲ್” ಮತ್ತು “ಆಯಿ”ಯ ಮಧ್ಯದಲ್ಲಿದ್ದ ಒಂದು ಸ್ಥಳಕ್ಕೆ ಹೋದರು. ಇದು ಆಯಿಯ ಪಶ್ಚಿಮಕ್ಕಿತ್ತು. ಯೆಹೋಶುವನು ತನ್ನ ಜನರೊಂದಿಗೆ ಆ ರಾತ್ರಿ ಅಲ್ಲಿಯೇ ಇದ್ದನು.

10 ಮರುದಿನ ಬೆಳಿಗ್ಗೆ ಯೆಹೋಶುವನು ಎಲ್ಲ ಜನರನ್ನು ಒಂದು ಕಡೆ ಬೇಗನೆ ಸೇರಿಸಿದನು. ಆಮೇಲೆ ಯೆಹೋಶುವನು ಮತ್ತು ಇಸ್ರೇಲಿನ ನಾಯಕರು ಜನರನ್ನು “ಆಯಿ”ಗೆ ಮುನ್ನಡೆಸಿದರು. 11 ಅವನ ಜೊತೆಗಿದ್ದ ಎಲ್ಲ ಸೈನಿಕರು “ಆಯಿ”ಯ ಕಡೆಗೆ ಹೋದರು. ಅವರು ನಗರದ ಮುಂದುಗಡೆ ನಿಂತರು. ಸೈನ್ಯವು ನಗರದ ಉತ್ತರ ದಿಕ್ಕಿನಲ್ಲಿಳಿದುಕೊಂಡಿತು. ಈ ಸೈನ್ಯ ಮತ್ತು “ಆಯಿ” ಪಟ್ಟಣದ ನಡುವೆ ಒಂದು ಕಣಿವೆ ಇತ್ತು.

12 ಆಗ ಯೆಹೋಶುವನು ಸುಮಾರು ಐದು ಸಾವಿರ ಜನರನ್ನು ಆರಿಸಿ ಪಟ್ಟಣದ ಪಶ್ಚಿಮದಲ್ಲಿರುವ “ಬೇತೇಲ್” ಮತ್ತು “ಆಯಿ”ಯ ಮಧ್ಯದಲ್ಲಿರುವ ಕ್ಷೇತ್ರದಲ್ಲಿ ಅಡಗಿಕೊಳ್ಳಲು ಕಳುಹಿಸಿಕೊಟ್ಟನು. 13 ಯೆಹೋಶುವನು ತನ್ನ ಜನರನ್ನು ಯುದ್ಧಕ್ಕೆ ಸಿದ್ಧಗೊಳಿಸಿದ್ದನು. ಮುಖ್ಯ ಪಾಳೆಯವು ಪಟ್ಟಣದ ಉತ್ತರ ದಿಕ್ಕಿನಲ್ಲಿತ್ತು. ಉಳಿದ ಜನರು ಪಶ್ಚಿಮದಲ್ಲಿ ಅಡಗಿಕೊಂಡಿದ್ದರು. ಆ ರಾತ್ರಿ ಯೆಹೋಶುವನು ಕಣಿವೆಗೆ ಹೋದನು.

14 ತರುವಾಯ “ಆಯಿ”ಯ ಅರಸನು ಇಸ್ರೇಲರ ಸೈನ್ಯವನ್ನು ನೋಡಿದನು. ಅರಸನು ಮತ್ತು ಅವನ ಜನರು ಇಸ್ರೇಲರ ಸೈನ್ಯದೊಂದಿಗೆ ಯುದ್ಧಮಾಡಿ ಮುಗಿಸುವುದಕ್ಕಾಗಿ ತ್ವರೆಮಾಡಿ ಹೊರಟರು. “ಆಯಿ”ಯ ಅರಸನು ಪಟ್ಟಣದ ಪೂರ್ವಕ್ಕೆ ಹೋದನು. ಆದ್ದರಿಂದ ಅವನು ಪಟ್ಟಣದ ಹಿಂಭಾಗದಲ್ಲಿ ಅಡಗಿದ್ದ ಸೈನಿಕರನ್ನು ನೋಡಲಿಲ್ಲ.

15 ಯೆಹೋಶುವನು ಮತ್ತು ಇಸ್ರೇಲರ ಎಲ್ಲ ಜನರು “ಆಯಿ”ಯ ಸೈನ್ಯವು ತಮ್ಮನ್ನು ಹಿಮ್ಮೆಟ್ಟುವುದಕ್ಕೆ ಅವಕಾಶ ಮಾಡಿಕೊಟ್ಟರು. ಯೆಹೋಶುವನು ಮತ್ತು ಅವನ ಜನರು ಪೂರ್ವಕ್ಕೆ ಮರಭೂಮಿಯ ಕಡೆಗೆ ಓಡಲು ಪ್ರಾರಂಭಿಸಿದರು. 16 ಯೆಹೋಶುವನನ್ನು ಮತ್ತು ಅವನ ಜನರನ್ನು ಬೆನ್ನಟ್ಟಲು “ಆಯಿ” ಪಟ್ಟಣದಲ್ಲಿದ್ದ ಗಂಡಸರನ್ನೆಲ್ಲ ಕರೆಸಲಾಯಿತು. ಎಲ್ಲ ಜನರು ಪಟ್ಟಣವನ್ನು ಬಿಟ್ಟರು. 17 “ಆಯಿ” ಮತ್ತು ಬೇತೇಲಿನ ಎಲ್ಲ ಜನರು ಇಸ್ರೇಲಿನ ಸೈನ್ಯವನ್ನು ಬೆನ್ನಟ್ಟಿದರು. ಪಟ್ಟಣದ ಬಾಗಿಲನ್ನು ತೆರೆದಿಟ್ಟಿದ್ದರು; ಒಬ್ಬನಾದರೂ ಪಟ್ಟಣದ ರಕ್ಷಣೆಗೆ ಉಳಿದಿರಲಿಲ್ಲ.

18 ಆಗ ಯೆಹೋವನು ಯೆಹೋಶುವನಿಗೆ, “ನಿನ್ನ ಕೈಯಲ್ಲಿರುವ ಈಟಿಯನ್ನು ‘ಆಯಿ’ ಕಡೆಗೆ ಚಾಚು, ಆ ಪಟ್ಟಣವನ್ನು ನಾನು ನಿಮಗೆ ಕೊಟ್ಟಿದ್ದೇನೆ” ಎಂದನು. ಯೆಹೋಶುವನು ತನ್ನ ಈಟಿಯನ್ನು “ಆಯಿ”ಯ ಕಡೆಗೆ ಚಾಚಿದನು. 19 ಅಡಗಿಕೊಂಡಿದ್ದ ಇಸ್ರೇಲಿನ ಜನರು ಇದನ್ನು ನೋಡಿ ಕೂಡಲೇ ತಾವು ಅಡಗಿದ್ದ ಸ್ಥಳದಿಂದ ಹೊರಬಂದು ವೇಗವಾಗಿ ಪಟ್ಟಣದ ಕಡೆಗೆ ಧಾವಿಸಿದರು. ಅವರು ಪಟ್ಟಣವನ್ನು ಪ್ರವೇಶಿಸಿ ಅದನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ಬೆಂಕಿ ಹಚ್ಚಿದರು.

20 “ಆಯಿ”ಯ ಜನರು ಹಿಂತಿರುಗಿ ನೋಡಿದಾಗ ತಮ್ಮ ಪಟ್ಟಣ ಉರಿಯುತ್ತಿರುವುದನ್ನೂ ಹೊಗೆಯು ಆಕಾಶಕ್ಕೆ ಏರುತ್ತಿರುವುದನ್ನೂ ಕಂಡು ತಮ್ಮ ಶಕ್ತಿಯನ್ನೂ ಧೈರ್ಯವನ್ನೂ ಕಳೆದುಕೊಂಡರು. ಅವರು ಇಸ್ರೇಲಿನ ಜನರ ಬೆನ್ನಟ್ಟುವುದನ್ನು ಬಿಟ್ಟರು. ಇಸ್ರೇಲಿನ ಜನರು ಓಡಿಹೋಗುವುದನ್ನು ನಿಲ್ಲಿಸಿ “ಆಯಿ”ಯ ಜನರೊಂದಿಗೆ ಹೋರಾಡತೊಡಗಿದರು. “ಆಯಿ”ಯ ಜನರಿಗೆ ಓಡಿಹೋಗಲು ಸುರಕ್ಷಿತವಾದ ಯಾವ ಸ್ಥಳವೂ ಇರಲಿಲ್ಲ. 21 ಯೆಹೋಶುವನು ಮತ್ತು ಅವನ ಜನರು, ತಮ್ಮ ಸೈನ್ಯವು ಪಟ್ಟಣವನ್ನು ಸ್ವಾಧೀನಪಡಿಸಿಕೊಂಡದ್ದನ್ನು ನೋಡಿದರು. ಅವರು ಪಟ್ಟಣದಿಂದ ಏಳುತ್ತಿರುವ ಹೊಗೆಯನ್ನು ನೋಡಿದರು. ಆಗ ಅವರು ಓಡಿಹೋಗುವುದನ್ನು ನಿಲ್ಲಿಸಿ “ಆಯಿ” ಜನರೊಂದಿಗೆ ಹೋರಾಡಲು ಬಂದರು. 22 ಆಗ ಅಡಗಿಕೊಂಡಿದ್ದ ಜನರು ಯುದ್ಧದಲ್ಲಿ ಸಹಾಯ ಮಾಡಲು ಪಟ್ಟಣದಿಂದ ಹೊರಬಂದರು. ಇಸ್ರೇಲಿನ ಸೈನ್ಯವು “ಆಯಿ”ಯ ಜನರ ಎರಡು ಕಡೆಗೂ ಇತ್ತು. “ಆಯಿ”ಯ ಜನರು ಸಿಕ್ಕಿಬಿದ್ದರು. ಇಸ್ರೇಲರು ಅವರನ್ನು ಸೋಲಿಸಿ ಅವರಲ್ಲಿ ಒಬ್ಬರನ್ನೂ ಜೀವಂತವಾಗಿ ಉಳಿಸಲಿಲ್ಲ. ಅವರಲ್ಲಿ ಒಬ್ಬನಾದರೂ ತಪ್ಪಿಸಿಕೊಳ್ಳಲಾಗಲಿಲ್ಲ. 23 ಆದರೆ “ಆಯಿ”ಯ ಅರಸನನ್ನು ಜೀವಸಹಿತ ಉಳಿಸಿ ಯೆಹೋಶುವನ ಬಳಿಗೆ ತಂದರು.

ಯುದ್ಧದ ಪುನರಾವಲೋಕನ

24 ಯುದ್ಧದಲ್ಲಿ ಇಸ್ರೇಲರು “ಆಯಿ”ಯ ಜನರನ್ನು ಬೆನ್ನಟ್ಟಿ ಬಯಲುಗಳಲ್ಲಿಯೂ ಅರಣ್ಯದಲ್ಲಿಯೂ ಕೊಂದುಹಾಕಿದರು. ಬಳಿಕ ಇಸ್ರೇಲರು “ಆಯಿ”ಗೆ ಹಿಂತಿರುಗಿ ಪಟ್ಟಣದಲ್ಲಿ ಜೀವಸಹಿತ ಉಳಿದಿದ್ದ ಎಲ್ಲರನ್ನು ಕೊಂದುಹಾಕಿದರು. 25 “ಆಯಿ”ಯ ಜನರೆಲ್ಲಾ ಆ ದಿನ ಸತ್ತುಹೋದರು. ಅಲ್ಲಿ ಹನ್ನೆರಡು ಸಾವಿರ ಗಂಡಸರು ಮತ್ತು ಹೆಂಗಸರು ಇದ್ದರು. 26 ಆ ಪಟ್ಟಣವನ್ನು ನಾಶಮಾಡಲು ಸೂಚಿಸುವ ಸಂಕೇತದಂತೆ ಯೆಹೋಶುವನು ತನ್ನ ಈಟಿಯನ್ನು “ಆಯಿ”ಯ ಕಡೆಗೆ ಚಾಚಿದನು. ಆ ಪಟ್ಟಣದ ಜನರೆಲ್ಲರೂ ನಾಶವಾಗುವವರೆಗೆ ಯೆಹೋಶುವನು ಈಟಿ ಹಿಡಿದು ಚಾಚಿದ ಕೈಯನ್ನು ಹಿಂದೆಗೆಯಲಿಲ್ಲ. 27 ಆ ಪಟ್ಟಣ ನಿವಾಸಿಗಳ ಸ್ವತ್ತಾಗಿದ್ದ ಪಶುಗಳನ್ನು ಮತ್ತು ವಸ್ತುಗಳನ್ನು ಇಸ್ರೇಲಿನ ಜನರು ತಮಗಾಗಿ ಇಟ್ಟುಕೊಂಡರು. ಅವುಗಳನ್ನು ಇಟ್ಟುಕೊಳ್ಳಲು ಯೆಹೋವನು ಯೆಹೋಶುವನಿಗೆ ಅಪ್ಪಣೆಕೊಟ್ಟಿದ್ದನು.

28 ಅನಂತರ ಯೆಹೋಶುವನು “ಆಯಿ” ನಗರವನ್ನು ಸುಟ್ಟುಹಾಕಿದನು. ಆ ನಗರವು ಕೇವಲ ಕಲ್ಲುಬಂಡೆಗಳ ದಿಬ್ಬವಾಯಿತು. ಅದು ಇಂದಿಗೂ ಹಾಗೆಯೇ ಇದೆ. 29 ಯೆಹೋಶುವನು “ಆಯಿ”ಯ ಅರಸನನ್ನು ಒಂದು ಮರಕ್ಕೆ ಸಾಯಂಕಾಲದವರೆಗೂ ನೇತುಹಾಕಿದನು. ಸೂರ್ಯನು ಮುಳುಗಿದ ಮೇಲೆ, ಯೆಹೋಶುವನು ಆ ಅರಸನ ಶವವನ್ನು ಮರದಿಂದ ಕೆಳಗಿಳಿಸಿ ನಗರದ ದ್ವಾರದಲ್ಲೇ ಬಿಸಾಡಿ ಅದರ ಮೇಲೆ ಕಲ್ಲಿನ ದೊಡ್ಡ ಕುಪ್ಪೆಯನ್ನು ಮಾಡಿಸಿದನು. ಅದು ಇಂದಿನವರೆಗೂ ಹಾಗೆಯೇ ಇದೆ.

ಆಶೀರ್ವಾದಗಳ ಮತ್ತು ಶಾಪಗಳ ವಚನ

30 ಆಗ ಇಸ್ರೇಲಿನ ದೇವರಾದ ಯೆಹೋವನಿಗಾಗಿ ಯೆಹೋಶುವನು ಒಂದು ಯಜ್ಞವೇದಿಕೆಯನ್ನು ಏಬಾಲ್ ಬೆಟ್ಟದ ಮೇಲೆ ಕಟ್ಟಿಸಿದನು. 31 ಯಜ್ಞವೇದಿಕೆಯನ್ನು ಹೇಗೆ ಕಟ್ಟಬೇಕೆಂಬುದನ್ನು ಯೆಹೋವನ ಸೇವಕನಾದ ಮೋಶೆಯು ಇಸ್ರೇಲರಿಗೆ ಹೇಳಿ ಕೊಟ್ಟಿದ್ದನು. ಆದ್ದರಿಂದ ಮೋಶೆಯ ಧರ್ಮಶಾಸ್ತ್ರದ ಗ್ರಂಥದಲ್ಲಿ ವಿವರಿಸಿದಂತೆ ಯೆಹೋಶುವನು ಯಜ್ಞವೇದಿಕೆಯನ್ನು ಕಟ್ಟಿಸಿದನು. ಯಜ್ಞವೇದಿಕೆಯನ್ನು ಕಡಿಯದ ಕಲ್ಲುಗಳಿಂದ ಮಾಡಲಾಯಿತು. ಆ ಕಲ್ಲುಗಳ ಮೇಲೆ ಯಾವ ಉಪಕರಣವನ್ನೂ ಉಪಯೋಗಿಸಿರಲಿಲ್ಲ. ಯೆಹೋವನಿಗೆ ಆ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಅರ್ಪಿಸಿದರು.

32 ಆ ಸ್ಥಳದಲ್ಲಿ ಯೆಹೋಶುವನು ಮೋಶೆಯ ಧರ್ಮಶಾಸ್ತ್ರವನ್ನು ಕಲ್ಲಿನ ಹಲಗೆಗಳ ಮೇಲೆ ಬರೆಸಿದನು. ಇಸ್ರೇಲರೆಲ್ಲರೂ ಅದನ್ನು ನೋಡಬೇಕೆಂಬುದೇ ಅದರ ಉದ್ದೇಶವಾಗಿತ್ತು. 33 ಹಿರಿಯರು, ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಇಸ್ರೇಲರೆಲ್ಲರು ಪವಿತ್ರ ಪೆಟ್ಟಿಗೆಯ ಸುತ್ತಲೂ ನಿಂತುಕೊಂಡಿದ್ದರು. ಯೆಹೋವನ ಒಡಂಬಡಿಕೆಯ ಪವಿತ್ರ ಪೆಟ್ಟಿಗೆಯನ್ನು ಹೊತ್ತುತಂದ ಲೇವಿಯರ ಎದುರುಗಡೆ ಅವರು ನಿಂತುಕೊಂಡಿದ್ದರು. ಅರ್ಧಜನರು ಏಬಾಲ್ ಬೆಟ್ಟದ ಎದುರಿಗೂ ಮತ್ತು ಇನ್ನುಳಿದ ಅರ್ಧಜನರು ಗೆರಿಜ್ಜೀಮ್ ಬೆಟ್ಟದ ಎದುರಿಗೂ ನಿಂತುಕೊಂಡಿದ್ದರು. ಆಶೀರ್ವಾದವನ್ನು ಹೊಂದಿಕೊಳ್ಳಲು ಹೀಗೆ ಮಾಡಬೇಕೆಂದು ಯೆಹೋವನ ಸೇವಕನಾದ ಮೋಶೆಯು ಜನರಿಗೆ ಹೇಳಿದ್ದನು.

34 ಆಗ ಯೆಹೋಶುವನು ಧರ್ಮಶಾಸ್ತ್ರದ ಎಲ್ಲಾ ಆಶೀರ್ವಾದಗಳನ್ನು ಮತ್ತು ಶಾಪದ ವಾಕ್ಯಗಳನ್ನು ಧರ್ಮಶಾಸ್ತ್ರದಲ್ಲಿ ಬರೆದಿರುವಂತೆಯೇ ಓದಿದನು. 35 ಅಲ್ಲಿ ಇಸ್ರೇಲಿನ ಎಲ್ಲ ಜನರು ಸೇರಿ ಬಂದಿದ್ದರು. ಎಲ್ಲ ಹೆಂಗಸರು ಮತ್ತು ಮಕ್ಕಳು ಮತ್ತು ಇಸ್ರೇಲಿನ ಜನರೊಂದಿಗೆ ಇದ್ದ ಎಲ್ಲ ವಿದೇಶಿಯರು ಅಲ್ಲಿ ಇದ್ದರು. ಅವರೆಲ್ಲರಿಗೆ ಕೇಳಿಸುವಂತೆ ಮೋಶೆಯು ಕೊಟ್ಟಿದ್ದ ಪ್ರತಿಯೊಂದು ಆಜ್ಞೆಯನ್ನು ಯೆಹೋಶುವನು ಓದಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International