Beginning
ಕೊಲೆಯಾದ ವ್ಯಕ್ತಿಯ ದೇಹ ಪತ್ತೆಯಾದರೆ
21 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಒಬ್ಬ ವ್ಯಕ್ತಿ ಕೊಲೆಯಾಗಿ ಹೊಲದಲ್ಲಿ ಬಿದ್ದಿರುವುದನ್ನು ನೀವು ಕಂಡರೆ ಮತ್ತು ಅವನನ್ನು ಕೊಲೆ ಮಾಡಿದ್ದು ಯಾರು ಎಂದು ನಿಮಗೆ ಗೊತ್ತಿಲ್ಲದಿದ್ದರೆ, 2 ಆಗ ಆ ಪಟ್ಟಣದ ನಾಯಕರು ಮತ್ತು ನ್ಯಾಯಾಧೀಶರು ಬಂದು ಪಟ್ಟಣಕ್ಕೂ ಆ ಶವದ ಸ್ಥಳಕ್ಕೂ ಎಷ್ಟು ದೂರವಿದೆ ಎಂದು ಅಳೆಯಬೇಕು. 3 ಯಾವ ಪಟ್ಟಣವು ಕೊಲೆಯಾದ ವ್ಯಕ್ತಿಯ ಶವಕ್ಕೆ ಹತ್ತಿರವಾಗಿದೆಯೋ ಆ ಪಟ್ಟಣದ ನಾಯಕರು ಮತ್ತು ನ್ಯಾಯಾಧೀಶರು ತಮ್ಮ ಹಟ್ಟಿಯಿಂದ ಎಂದೂ ಕರು ಈಯದ, ಕೆಲಸಕ್ಕೆ ಉಪಯೋಗಿಸದ ಒಂದು ಹಸುವನ್ನು ತೆಗೆದುಕೊಂಡು 4 ಹರಿಯುವ ನೀರಿರುವ ತಗ್ಗಿಗೆ ಅಟ್ಟಿಕೊಂಡು ಹೋಗಬೇಕು. ಆ ತಗ್ಗು ಉಳಿಮೆ ಮಾಡಿದ ಜಾಗವಾಗಿರಬಾರದು ಮತ್ತು ಆ ಸ್ಥಳದಲ್ಲಿ ಯಾವ ಸಸಿಯೂ ನೆಟ್ಟಿರಬಾರದು. ಅಲ್ಲಿ ಊರ ಹಿರಿಯರು ಆ ಹಸುವಿನ ಕುತ್ತಿಗೆ ಮುರಿಯಬೇಕು. 5 ಊರಿನಲ್ಲಿದ್ದ ಲೇವಿಯರೂ ಅಲ್ಲಿಗೆ ಹೋಗಬೇಕು. ಯೆಹೋವನು ಅವರ ಜನರನ್ನು ಆತನ ಹೆಸರಿನಲ್ಲಿ ಆಶೀರ್ವದಿಸುವುದಕ್ಕಾಗಿಯೂ ತನ್ನ ಸೇವೆ ಮಾಡುವುದಕ್ಕಾಗಿಯೂ ಆರಿಸಿದ್ದಾನೆ. ಎಲ್ಲಾ ವಾಗ್ವಾದಗಳನ್ನು ಯಾಜಕನೇ ಇತ್ಯರ್ಥಮಾಡುವನು. 6 ಕೊಲೆಯಾದವನ ದೇಹದ ಸಮೀಪವಿರುವ ಪಟ್ಟಣದ ಹಿರಿಯರು ಕುತ್ತಿಗೆ ಮುರಿಯಲ್ಪಟ್ಟ ಹಸುವಿನ ಮೇಲೆ ತಮ್ಮತಮ್ಮ ಕೈಗಳನ್ನು ತೊಳೆಯಬೇಕು. 7 ಆ ಹಿರಿಯರು ಹೀಗೆನ್ನಬೇಕು: ‘ನಾವು ಈ ವ್ಯಕ್ತಿಯನ್ನು ಹತ್ಯೆ ಮಾಡಲಿಲ್ಲ ಮತ್ತು ಅವನು ಕೊಲೆ ಮಾಡಲ್ಪಟ್ಟದ್ದನ್ನು ನಾವು ನೋಡಿಲ್ಲ. 8 ಯೆಹೋವನೇ, ನೀನು ಇಸ್ರೇಲನ್ನು ರಕ್ಷಿಸಿರುವೆ, ನಾವು ನಿನ್ನ ಜನಗಳಾಗಿದ್ದೇವೆ. ಈಗ ನೀನು ನಮ್ಮನ್ನು ಶುದ್ಧೀಕರಿಸು; ನಿರ್ದೋಷಿಯ ಕೊಲೆಗೆ ನಮ್ಮನ್ನು ಕಾರಣರನ್ನಾಗಿ ಮಾಡಬೇಡ!’ 9 ಹೀಗೆ ನೀವು ಯೆಹೋವನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ನಿಮ್ಮ ಸಮೂಹದಿಂದ ದೋಷವನ್ನು ತೆಗೆದುಹಾಕುವಿರಿ.
ಯುದ್ಧದಲ್ಲಿ ಸೆರೆಹಿಡಿಯಲ್ಪಟ್ಟ ಸ್ತ್ರೀಯರು
10 “ನೀವು ನಿಮ್ಮ ಶತ್ರುಗಳೊಂದಿಗೆ ಯುದ್ಧಮಾಡಿ ದೇವರ ಸಹಾಯದಿಂದ ಅವರನ್ನು ಸೋಲಿಸುವಿರಿ. ನೀವು ನಿಮ್ಮ ಶತ್ರುಗಳನ್ನು ಸೆರೆಹಿಡಿದು ಕೊಂಡೊಯ್ಯುವಿರಿ. 11 ಸೆರೆಹಿಡಿಯಲ್ಪಟ್ಟವರಲ್ಲಿ ಸುಂದರಿಯಾದ ಸ್ತ್ರೀಯನ್ನು ನೋಡಿ ಆಕೆಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳ ಬಯಸಿದರೆ 12 ಆಕೆಯನ್ನು ನಿನ್ನ ಮನೆಯೊಳಗೆ ಕರೆದುಕೊಂಡು ಬರಬೇಕು. ಆಕೆಯು ತಲೆಯನ್ನು ಬೋಳಿಸಿಕೊಂಡು ಉಗುರನ್ನು ಕತ್ತರಿಸಿಕೊಳ್ಳಬೇಕು. 13 ಆಕೆಯು ತನ್ನ ಸೆರೆವಾಸದ ಬಟ್ಟೆಯನ್ನು ತೆಗೆದಿಟ್ಟು ಒಂದು ತಿಂಗಳು ಪೂರ್ತಿ ತನ್ನ ತಂದೆತಾಯಿಗಳಿಗಾಗಿ ಶೋಕಿಸಬೇಕು. ಅನಂತರ ನೀನು ಆಕೆಯ ಬಳಿಗೆ ಹೋಗಿ ಆಕೆಯನ್ನು ವರಿಸಿ ಗಂಡನಾಗಬಹುದು. ಆಕೆಯು ನಿನ್ನ ಹೆಂಡತಿಯಾಗುವಳು. 14 ಆಕೆಯನ್ನು ನೀನು ಮೆಚ್ಚದಿದ್ದರೆ ವಿವಾಹವಿಚ್ಛೇದನೆ ಮಾಡಿ ಆಕೆಯನ್ನು ಸ್ವತಂತ್ರಳಾಗುವಂತೆ ಬಿಟ್ಟುಬಿಡಬಹುದು. ಆದರೆ ನೀನು ಆಕೆಯನ್ನು ಮಾರಬಾರದು. ಆಕೆಯನ್ನು ಗುಲಾಮಳಂತೆ ನೋಡಬಾರದು. ಯಾಕೆಂದರೆ ನೀನು ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡಿದ್ದಿಯಲ್ಲಾ.
ಹಿರಿಯ ಮಗನು
15 “ಒಬ್ಬ ಪುರುಷನಿಗೆ ಇಬ್ಬರು ಹೆಂಡತಿಯರಿದ್ದರೆ ಅವರಲ್ಲಿ ಒಬ್ಬಾಕೆಯನ್ನು ಅವನು ಹೆಚ್ಚಾಗಿ ಪ್ರೀತಿಸಿದರೂ ಪ್ರೀತಿಸಬಹುದು. ಆ ಇಬ್ಬರು ಅವನಿಗೆ ಮಕ್ಕಳನ್ನು ಹೆರುವರು. ಹಿರಿಮಗನು ತಾನು ಪ್ರೀತಿಸದ ಹೆಂಡತಿಯಲ್ಲಿ ಹುಟ್ಟಿದರೆ, 16 ಆ ಪುರುಷನು ತನ್ನ ಆಸ್ತಿಯನ್ನು ತನ್ನ ಮಕ್ಕಳಿಗೆ ಪಾಲುಮಾಡಿ ಕೊಡುವಾಗ ಚೊಚ್ಚಲಮಗನಿಗೆ ಸಿಗಬೇಕಾದ ಆಸ್ತಿಯನ್ನು ತಾನು ಪ್ರೀತಿಸುವ ಹೆಂಡತಿಯ ಮಗನಿಗೆ ಕೊಡಬಾರದು. 17 ತಾನು ಪ್ರೀತಿಸದೆ ಇರುವ ಹೆಂಡತಿಯ ಚೊಚ್ಚಲಮಗನನ್ನು ಅವನು ಸ್ವೀಕರಿಸಬೇಕು. ಆ ಚೊಚ್ಚಲಮಗನಿಗೆ ಬೇರೆ ಮಕ್ಕಳಿಗಿಂತ ಎರಡು ಪಾಲು ಆಸ್ತಿಯನ್ನು ಕೊಡಬೇಕು. ಯಾಕೆಂದರೆ ಅವನು ನಿಮ್ಮ ಚೊಚ್ಚಲ ಮಗನು. ಚೊಚ್ಚಲ ಮಗನ ಹಕ್ಕು ಅವನಿಗೆ ಸೇರಿದ್ದು.
ವಿಧೇಯರಾಗದ ಮಕ್ಕಳ ಬಗ್ಗೆ
18 “ಒಬ್ಬ ಮನುಷ್ಯನಿಗೆ ಹಠಮಾರಿಯಾದ ಅವಿಧೇಯ ಮಗನಿರಬಹುದು. ಈ ಮಗನು ತಂದೆಯ ಮಾತನ್ನಾಗಲಿ ತಾಯಿಯ ಮಾತನ್ನಾಗಲಿ ಕೇಳದವನಾಗಿದ್ದರೆ ಅವನಿಗೆ ಅವರು ಶಿಕ್ಷೆ ಕೊಟ್ಟರೂ ಅವನು ಅವರಿಗೆ ವಿಧೇಯನಾಗದಿದ್ದರೆ, ಅವರ ಮಾತುಗಳನ್ನು ಕೇಳದಿದ್ದರೆ, 19 ಆಗ ಅವನ ತಂದೆತಾಯಿಗಳು ಆ ಮಗನನ್ನು ಪಟ್ಟಣದ ಹಿರಿಯರು ಸೇರಿಬರುವ ಸ್ಥಳಕ್ಕೆ ಕರೆದುಕೊಂಡು ಹೋಗಿ 20 ಪಟ್ಟಣದ ಹಿರಿಯರಿಗೆ ಹೀಗೆ ಹೇಳಬೇಕು: ‘ನಮ್ಮ ಮಗನು ಹಠಮಾರಿಯೂ ಅವಿಧೇಯನೂ ಆಗಿರುತ್ತಾನೆ. ನಾವು ಹೇಳಿದ ಮಾತುಗಳೊಂದನ್ನೂ ಅವನು ಕೇಳುವುದಿಲ್ಲ. ಅವನು ಬಹಳವಾಗಿ ತಿಂದು ಕುಡಿಯುತ್ತಾನೆ.’ 21 ಆಗ ಆ ಪಟ್ಟಣದ ಜನರು ಸೇರಿ ಆ ಮಗನನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ನಿಮ್ಮಲ್ಲಿರುವ ದುಷ್ಟತನವನ್ನು ತೆಗೆದುಹಾಕಬೇಕು. ಎಲ್ಲಾ ಇಸ್ರೇಲರು ಇದನ್ನು ಕೇಳಿ ಭಯಗ್ರಸ್ತರಾಗುವರು.
ಅಪರಾಧಿಗಳನ್ನು ಕೊಂದು ನೇತು ಹಾಕುವ ಬಗ್ಗೆ
22 “ಒಬ್ಬ ಮನುಷ್ಯನು ಮರಣಶಿಕ್ಷೆಗೆ ಯೋಗ್ಯವಾದ ಅಪರಾಧವನ್ನು ಮಾಡಿದ್ದಿರಬಹುದು. ಅವನಿಗೆ ಮರಣಶಿಕ್ಷೆ ಕೊಟ್ಟ ನಂತರ ಅವನ ದೇಹವನ್ನು ಒಂದು ಮರಕ್ಕೆ ತೂಗುಹಾಕಿದರೆ 23 ಇಡೀ ರಾತ್ರಿ ಆ ಮರದಲ್ಲಿ ಅವನ ಶರೀರ ನೇತಾಡುವಂತೆ ಮಾಡಬಾರದು. ಅದೇ ದಿವಸದಲ್ಲಿ ಅವನ ಶವವು ಹೂಳಲ್ಪಡಬೇಕು. ಯಾಕೆಂದರೆ ಮರದಲ್ಲಿ ತೂಗುಹಾಕಲ್ಪಟ್ಟ ಮನುಷ್ಯನು ದೇವರಿಂದ ಶಪಿಸಲ್ಪಟ್ಟವನು. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ದೇಶವನ್ನು ನೀವು ಹೊಲಸು ಮಾಡಬೇಡಿರಿ.
ಇತರ ಕಟ್ಟಳೆಗಳು
22 “ನಿಮ್ಮ ನೆರೆಯವನ ಕಟ್ಟಿರುವ ದನವಾಗಲಿ ಕುರಿಯಾಗಲಿ ಹಗ್ಗ ಬಿಚ್ಚಿಕೊಂಡಿರುವುದನ್ನು ನೀವು ಕಂಡರೆ ಅದನ್ನು ನಿರ್ಲಕ್ಷಿಸದೆ, ಕೂಡಲೇ ಅದನ್ನು ಅದರ ಧಣಿಯ ಬಳಿಗೆ ಅಟ್ಟಿಕೊಂಡು ಹೋಗಬೇಕು. 2 ಆ ಪಶುವಿನ ಧಣಿ ಯಾರೆಂದು ನಿಮಗೆ ಗೊತ್ತಾಗದಿದ್ದರೆ ಅಥವಾ ಅವನು ನಿಮಗೆ ತುಂಬಾ ದೂರದಲ್ಲಿದ್ದರೆ ಅದರ ಧಣಿಯು ಅದನ್ನು ಹುಡುಕಿಕೊಂಡು ಬರುವ ತನಕ ನೀವು ಪಶುವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಅವನು ಬಂದಾಗ ಅದನ್ನು ಹಿಂದಿರುಗಿಸಬೇಕು. 3 ನಿಮ್ಮ ನೆರೆಯವನ ಕತ್ತೆಯ ವಿಷಯದಲ್ಲಿಯೂ ಬಟ್ಟೆಯ ವಿಷಯದಲ್ಲಿಯೂ ಇದೇ ನಿಯಮ ಅನ್ವಯಿಸುತ್ತದೆ.
4 “ನಿಮ್ಮ ನೆರೆಯವನ ಕತ್ತೆಯಾಗಲಿ ಹಸುವಾಗಲಿ ದಾರಿಯಲ್ಲಿ ಬಿದ್ದಿರುವುದನ್ನು ನೋಡಿದರೂ ನೋಡದಂತೆ ಹೋಗದೆ ಅದಕ್ಕೆ ಏಳಲು ಸಹಾಯ ಮಾಡಬೇಕು.
5 “ಹೆಂಗಸು ಗಂಡಸರ ಬಟ್ಟೆ ಧರಿಸಿಕೊಳ್ಳಬಾರದು, ಗಂಡಸು ಹೆಂಗಸರ ಬಟ್ಟೆ ಧರಿಸಬಾರದು. ಇದು ಯೆಹೋವನ ದೃಷ್ಟಿಯಲ್ಲಿ ಅಸಹ್ಯ.
6 “ನೀವು ದಾರಿಯಲ್ಲಿ ಹೋಗುತ್ತಿರುವಾಗ ನೆಲದ ಮೇಲಾಗಲಿ ಮರದಲ್ಲಿಯಾಗಲಿ ಗೂಡು ಕಟ್ಟಿಕೊಂಡು ಅದರೊಳಗೆ ತಾಯಿ ಪಕ್ಷಿಯು ತನ್ನ ಮೊಟ್ಟೆಗಳೊಂದಿಗೆ ಇಲ್ಲವೆ ಮರಿಗಳೊಂದಿಗೆ ಇರುವುದನ್ನು ಕಂಡಾಗ ನೀವು ಮರಿಗಳೊಂದಿಗೆ ತಾಯಿಪಕ್ಷಿಯನ್ನು ಹಿಡಿದು ಕೊಂಡೊಯ್ಯಬಾರದು. 7 ನೀವು ತಾಯಿಪಕ್ಷಿಯನ್ನು ಬಿಟ್ಟು ಮರಿಪಕ್ಷಿಗಳನ್ನು ಕೊಂಡೊಯ್ಯಬಹುದು. ಈ ನಿಯಮಗಳನ್ನು ನೀವು ಪಾಲಿಸಿದರೆ ನೀವು ಬಹುಕಾಲ ಬದುಕುವಿರಿ ಮತ್ತು ನಿಮಗೆ ಶುಭವಾಗುವುದು.
8 “ನೀವು ಮನೆ ಕಟ್ಟುವಾಗ ಅದರ ಮೇಲ್ಛಾವಣಿಯ ಸುತ್ತಲೂ ಅರ್ಧ ಗೋಡೆಯನ್ನು ಕಟ್ಟಬೇಕು. ಹೀಗೆ ಮಾಡದೆಹೋದರೆ ಯಾರಾದರೂ ಮೇಲ್ಛಾವಣಿಯಿಂದ ಕೆಳಗೆ ಬಿದ್ದು ಸತ್ತಲ್ಲಿ ಅವನ ಸಾವಿಗೆ ನೀವು ಕಾರಣರಾಗುವಿರಿ.
9 “ನೀವು ಧಾನ್ಯವನ್ನು ಮತ್ತು ದ್ರಾಕ್ಷಾಲತೆಗಳನ್ನು ಒಂದೇ ಹೊಲದಲ್ಲಿ ಬೆಳೆಸಬಾರದು. ಯಾಕೆಂದರೆ ಅವೆರಡೂ ಚೆನ್ನಾಗಿ ಬೆಳೆಯದೆ ಫಲ ಕೊಡದೆ ಹೋಗುವುದು.
10 “ಕತ್ತೆಯನ್ನೂ ಹಸುವನ್ನೂ ಒಟ್ಟಿಗೆ ನೊಗಕ್ಕೆ ಕಟ್ಟಿ ನೆಲವನ್ನು ಉಳಬಾರದು.
11 “ನಾರುಮಡಿಯನ್ನೂ ಉಣ್ಣೆಯನ್ನೂ ಮಿಶ್ರವಾಗಿ ನೇಯ್ದ ಬಟ್ಟೆಯನ್ನು ತೊಡಬಾರದು.
12 “ನೂಲಿನಿಂದ ಮಾಡಿದ ಗೊಂಡೆಗಳನ್ನು ನಿಮ್ಮ ನಿಲುವಂಗಿಗಳ ನಾಲ್ಕು ಮೂಲೆಗಳಿಗೆ ಕಟ್ಟಬೇಕು.
ಮದುವೆಗೆ ಸಂಬಂಧಿಸಿದ ಕಟ್ಟಳೆಗಳು
13 “ಒಬ್ಬ ಪುರುಷನು ಒಬ್ಬ ಸ್ತ್ರೀಯನ್ನು ಮದುವೆಯಾಗಿ ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡಿದ್ದು ಆಮೇಲೆ ಆಕೆಯನ್ನು ಇಷ್ಟಪಡದೆ, 14 ‘ನಾನು ಈಕೆಯನ್ನು ಮದುವೆಯಾದಾಗ ಈಕೆಯು ಕನ್ಯೆಯಲ್ಲವೆಂದು ನನಗೆ ತಿಳಿದುಬಂತು’ ಎಂದು ಜನರಿಗೆ ಸುಳ್ಳು ಹೇಳಿ ಆಕೆಯ ಮೇಲೆ ಸುಳ್ಳು ಅಪರಾಧ ಹೊರಿಸಿದರೆ, 15 ಹುಡುಗಿಯ ತಂದೆತಾಯಿಗಳು ಊರಿನ ಹಿರಿಯರ ಮುಂದೆ ಆಕೆಯು ಕನ್ನಿಕೆಯಾಗಿದ್ದಳೆಂದು ರುಜುವಾತುಪಡಿಸಬೇಕು. 16 ಹುಡುಗಿಯ ತಂದೆಯು ಹಿರಿಯರಿಗೆ, ‘ನನ್ನ ಮಗಳನ್ನು ಇವನಿಗೆ ಹೆಂಡತಿಯನ್ನಾಗಿ ಕೊಟ್ಟೆನು. ಆದರೆ ಈಗ ಅವನು ಆಕೆಯನ್ನು ದ್ವೇಷಿಸಿ ಬೇಡವೆನ್ನುತ್ತಾನೆ. 17 ಅವನು ನನ್ನ ಮಗಳ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾನೆ. “ಆಕೆಯಲ್ಲಿ ಕನ್ನಿಕೆಯ ಗುರುತು ಇರಲಿಲ್ಲ” ಎಂದು ಹೇಳುತ್ತಿದ್ದಾನೆ, ಆದರೆ ನನ್ನ ಮಗಳು ಮದುವೆಗಿಂತ ಮುಂಚೆ ಪುರುಷ ಸಂಪರ್ಕ ಮಾಡಲಿಲ್ಲವೆಂಬುದಕ್ಕೆ ಇದೇ ಗುರುತು’ ಎಂದು ಹೇಳಿ ರಕ್ತದ ಕಲೆಗಳಿರುವ ಬಟ್ಟೆಯನ್ನು ತೋರಿಸಬೇಕು. 18 ಆಗ ಊರಿನ ಹಿರಿಯರು ಆ ಮನುಷ್ಯನಿಗೆ ಶಿಕ್ಷೆ ವಿಧಿಸಬೇಕು. 19 ಹಿರಿಯರು ಅವನಿಂದ ನಲವತ್ತು ತೊಲೆ ಬೆಳ್ಳಿಯನ್ನು ಹುಡುಗಿಯ ತಂದೆಗೆ ಕೊಡಿಸಬೇಕು. ಯಾಕೆಂದರೆ ಒಬ್ಬ ಇಸ್ರೇಲಿನ ಹುಡುಗಿಗೆ ಅವನು ಅವಮಾನಪಡಿಸಿದ ಕಾರಣ ಆ ಹುಡುಗಿಯು ಅವನ ಹೆಂಡತಿಯಾಗಿಯೇ ಬಾಳಬೇಕು. ಅವನು ಆಕೆಯನ್ನು ಎಂದಿಗೂ ವಿವಾಹವಿಚ್ಛೇದನೆ ಮಾಡಬಾರದು.
20 “ಆದರೆ ಹುಡುಗಿಯ ಗಂಡನು ಆಕೆಯ ಬಗ್ಗೆ ಹೇಳಿದ್ದು ಸತ್ಯವಾಗಿದ್ದರೆ, ಹುಡುಗಿಯ ತಂದೆತಾಯಂದಿರ ಬಳಿ ಆಕೆಯು ಪುರುಷ ಸಂಪರ್ಕವಿಲ್ಲದವಳಾಗಿದ್ದಳು ಎಂಬುದಕ್ಕೆ ಪುರಾವೆ ಇಲ್ಲದಿದ್ದಲ್ಲಿ 21 ಊರಹಿರಿಯರು ಆ ಹುಡುಗಿಯನ್ನು ಆಕೆಯ ತಂದೆಯ ಮನೆಬಾಗಿಲಿಗೆ ತರಬೇಕು. ಅಲ್ಲಿ ಊರಜನರು ಆಕೆಯನ್ನು ಕಲ್ಲೆಸೆದು ಸಾಯಿಸಬೇಕು. ಯಾಕೆಂದರೆ ಆಕೆಯು ಇಸ್ರೇಲಿನಲ್ಲಿ ನಾಚಿಕೆಕರವಾದ ಕೃತ್ಯವನ್ನು ನಡೆಸಿದ್ದಾಳೆ; ತನ್ನ ತಂದೆಯ ಮನೆಯಲ್ಲಿದ್ದುಕೊಂಡು ವೇಶ್ಯಾವೃತ್ತಿ ನಡಿಸಿದ್ದಾಳೆ. ಅಂಥಾ ಪಾಪವನ್ನು ನೀವು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
ಲೈಂಗಿಕ ಪಾಪಕೃತ್ಯಗಳು
22 “ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನ ಹೆಂಡತಿಯ ಜೊತೆಗೆ ಲೈಂಗಿಕ ಸಂಬಂಧವನ್ನಿಟ್ಟಿದ್ದರೆ ಅವರಿಬ್ಬರನ್ನೂ ಸಾಯಿಸಬೇಕು. ಆ ಕೆಡುಕನ್ನು ನೀವು ಇಸ್ರೇಲಿನಿಂದ ತೆಗೆದುಹಾಕಬೇಕು.
23 “ಒಬ್ಬನು ಇನ್ನೊಬ್ಬನಿಗೆ ನಿಶ್ಚಿತಾರ್ಥವಾದ ಕನ್ನಿಕೆಯೊಬ್ಬಳನ್ನು ಸಂಧಿಸಿ ಅವಳನ್ನು ಕೂಡಿದರೆ, 24 ನಗರದ ಬಾಗಿಲಿನ ಬಳಿಯಿರುವ ಸಾರ್ವಜನಿಕ ಸ್ಥಳಕ್ಕೆ ನೀವು ಅವರಿಬ್ಬರನ್ನು ಕರೆದುಕೊಂಡು ಬಂದು ಅವರಿಬ್ಬರನ್ನೂ ಕಲ್ಲೆಸೆದು ಕೊಲ್ಲಬೇಕು. ನೀವು ಆ ಪುರುಷನನ್ನು ಕೊಲ್ಲಬೇಕು. ಏಕೆಂದರೆ ಅವನು ಮತ್ತೊಬ್ಬನ ಹೆಂಡತಿಯನ್ನು ಲೈಂಗಿಕವಾಗಿ ಹಿಂಸಿಸಿದನು. ನೀವು ಆ ಸ್ತ್ರೀಯನ್ನು ಕೊಲ್ಲಬೇಕು; ಯಾಕೆಂದರೆ ಆಕೆಯು ನಗರದಲ್ಲಿದ್ದರೂ ಸಹಾಯಕ್ಕಾಗಿ ಕೂಗಿಕೊಳ್ಳಲಿಲ್ಲ. ಆ ಕೆಡುಕನ್ನು ನೀವು ನಿಮ್ಮ ಜನರಿಂದ ತೆಗೆದುಹಾಕಬೇಕು.
25 “ಆದರೆ ಒಬ್ಬನು ಮತ್ತೊಬ್ಬನಿಗೆ ನಿಶ್ಚಿತಾರ್ಥವಾಗಿರುವ ಕನ್ನಿಕೆಯೊಬ್ಬಳನ್ನು ಹೊಲದಲ್ಲಿ ಕಂಡು ಆಕೆಯನ್ನು ಬಲಾತ್ಕಾರವಾಗಿ ಕೂಡಿದರೆ, ಅವನನ್ನು ಮಾತ್ರ ಕೊಲ್ಲಬೇಕು. 26 ಆ ಹುಡುಗಿಗೆ ನೀವು ಏನನ್ನೂ ಮಾಡಬಾರದು. ಆಕೆ ಶಿಕ್ಷೆಗೆ ಅರ್ಹಳಾಗುವಂಥ ಕಾರ್ಯವೇನೂ ಮಾಡಲಿಲ್ಲ. ಒಬ್ಬನು ತನ್ನ ಸ್ನೇಹಿತನ ಮೇಲೆ ಆಕ್ರಮಣ ಮಾಡಿ ಕೊಂದಂತೆಯಷ್ಟೇ. 27 ಆ ಮನುಷ್ಯನು ನಿಶ್ಚಿತಾರ್ಥವಾದ ಹುಡುಗಿಯನ್ನು ಹೊಲದಲ್ಲಿ ಒಬ್ಬಳೇ ಇರುವುದನ್ನು ಕಂಡು ಆಕೆಯ ಮೇಲೆ ಬಿದ್ದನು. ಆಕೆಯು ಸಹಾಯಕ್ಕಾಗಿ ಕೂಗಿಕೊಂಡಾಗ ಸಹಾಯ ಮಾಡಲು ಹತ್ತಿರದಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಆಕೆಯು ಶಿಕ್ಷಿಸಲ್ಪಡಬಾರದು.
28 “ಒಬ್ಬನು ನಿಶ್ಚಿತಾರ್ಥವಾಗಿಲ್ಲದ ಒಬ್ಬ ಕನ್ನಿಕೆಯನ್ನು ಕಂಡು ಆಕೆಯನ್ನು ಬಲಾತ್ಕಾರದಿಂದ ಕೂಡುವುದನ್ನು ಬೇರೆಯವರು ಕಂಡರೆ 29 ಅವನು ಹುಡುಗಿಯ ತಂದೆಗೆ ಇಪ್ಪತ್ತು ತೊಲೆ ಬೆಳ್ಳಿಯನ್ನು ಕೊಟ್ಟು ಆಕೆಯನ್ನು ತನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳಬೇಕು. ಅವನು ಆಕೆಯನ್ನು ಮದುವೆಗಿಂತ ಮುಂಚೆ ಕೂಡಿದ್ದರಿಂದ ಅವನು ಆಕೆಯನ್ನು ಎಂದಿಗೂ ಬಿಟ್ಟುಬಿಡಬಾರದು.
30 “ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಕೂಡಿ ತಂದೆಗೆ ಅವಮಾನ ಮಾಡಬಾರದು.”
ಇಸ್ರೇಲರ ದೇವಾರಾಧನೆಗೆ ಯೋಗ್ಯರಾದವರು
23 “ಜನನಾಂಗದ ಬೀಜವನ್ನು ಹೊಡಿಸಿಕೊಂಡವನಾಗಲಿ ಜನನಾಂಗದ ಒಂದು ಭಾಗವನ್ನು ಕತ್ತರಿಸಿಕೊಂಡವನಾಗಲಿ ಇಸ್ರೇಲ್ ಜನರೊಂದಿಗೆ ದೇವಾರಾಧನೆ ಮಾಡಬಾರದು. 2 ಒಬ್ಬನ ತಂದೆತಾಯಿಗಳು ಕಾನೂನು ಬದ್ಧವಾಗಿ ಮದುವೆಯಾಗಿಲ್ಲದಿದ್ದರೆ, ಅವನು ದೇವಾರಾಧನೆಯಲ್ಲಿ ಇಸ್ರೇಲರೊಡನೆ ಸೇರಕೂಡದು. ಅವನ ಸಂತತಿಯವರು ಹತ್ತನೆಯ ತಲೆಮಾರಿನ ತನಕ ಇಸ್ರೇಲ್ ಸಮೂಹದೊಂದಿಗೆ ಆರಾಧನೆ ಮಾಡಬಾರದು.
3 “ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ಇಸ್ರೇಲರೊಂದಿಗೆ ಸೇರಿ ದೇವಾರಾಧನೆ ಮಾಡಕೂಡದು. ಅವರ ಸಂತತಿಯ ಹತ್ತನೆಯ ತಲೆಮಾರಿನವರೆಗೂ ಆರಾಧನೆ ಮಾಡಬಾರದು. 4 ಯಾಕೆಂದರೆ ಇಸ್ರೇಲರು ಈಜಿಪ್ಟಿನಿಂದ ಹೊರಟುಬಂದು ಪ್ರಯಾಣದಲ್ಲಿದ್ದಾಗ ಅವರಿಗೆ ರೊಟ್ಟಿಯನ್ನಾಗಲಿ ನೀರನ್ನಾಗಲಿ ಕೊಡಲು ಅವರು ನಿರಾಕರಿಸಿದ್ದರು. ಅವರು ಮೆಸಪೊಟೋಮಿಯದಿಂದ ಬಿಳಾಮನನ್ನು ಕರೆಸಿ ಇಸ್ರೇಲರನ್ನು ಶಪಿಸುವಂತೆ ಬಲವಂತಪಡಿಸಿದರು. 5 ಆದರೆ ಯೆಹೋವನು ನಿಮ್ಮನ್ನು ಪ್ರೀತಿಸುತ್ತಿದ್ದುದರಿಂದ ಆ ಶಾಪವನ್ನು ನಿಮಗೆ ಆಶೀರ್ವಾದವಾಗಿ ಪರಿವರ್ತಿಸಿದನು. 6 ಅಮ್ಮೋನಿಯರೊಂದಿಗಾಗಲಿ ಮೋವಾಬ್ಯರೊಂದಿಗಾಗಲಿ ನೀವು ಸಂಧಾನ ಮಾಡಿಕೊಳ್ಳಲೇಬಾರದು; ನಿಮ್ಮ ಜೀವಮಾನವೆಲ್ಲಾ ಅವರೊಂದಿಗೆ ಸ್ನೇಹತ್ವದಲ್ಲಿರಬಾರದು.
7 “ಎದೋಮ್ಯರನ್ನು ನೀವು ದ್ವೇಷಿಸಬಾರದು, ಅವರು ನಿಮ್ಮ ಸಂಬಂಧಿಕರಾಗಿದ್ದಾರೆ. ಈಜಿಪ್ಟಿನವರನ್ನು ನೀವು ದ್ವೇಷಿಸಬಾರದು, ಅವರ ದೇಶದಲ್ಲಿ ನೀವು ಪರದೇಶಿಗಳಾಗಿದ್ದಿರಲ್ಲಾ. 8 ಎದೋಮ್ಯರ ಮತ್ತು ಈಜಿಪ್ಟಿನವರ ಮೂರನೆ ತಲೆಮಾರಿನವರು ಇಸ್ರೇಲರೊಂದಿಗೆ ದೇವಾರಾಧನೆ ಮಾಡಬಹುದು.
ಪಾಳೆಯವನ್ನು ಶುದ್ಧವಾಗಿಡಬೇಕು
9 “ನಿಮ್ಮ ಸೈನ್ಯವು ವೈರಿಗಳೊಂದಿಗೆ ಯುದ್ಧಮಾಡಲು ಹೋದಾಗ ನಿಮ್ಮನ್ನು ಅಶುದ್ಧಪಡಿಸುವ ಪ್ರತಿಯೊಂದರಿಂದಲೂ ನೀವು ದೂರವಾಗಿರಿ. 10 ಒಬ್ಬನಿಗೆ ರಾತ್ರಿ ಕಾಲದಲ್ಲಿ ವೀರ್ಯಸ್ಖಲನವಾದರೆ ಅವನು ಪಾಳೆಯದಿಂದ ಹೊರಗೆ ಹೋಗಿ ಪ್ರತ್ಯೇಕವಾಗಿರಬೇಕು. 11 ಸಾಯಂಕಾಲವಾದಾಗ ಅವನು ಸ್ನಾನಮಾಡಿ ಸೂರ್ಯ ಮುಳುಗಿದ ಬಳಿಕ ಪಾಳೆಯದೊಳಕ್ಕೆ ಬರಬಹುದು.
12 “ಪಾಳೆಯದ ಹೊರಗೆ ಬಹಿರ್ದೇಶಕ್ಕೆ ಹೋಗಲು ಒಂದು ಸ್ಥಳವನ್ನು ನೇಮಿಸಬೇಕು. 13 ನಿಮ್ಮ ಆಯುಧಗಳೊಂದಿಗೆ ನೀವು ಒಂದು ಕೋಲನ್ನು ಇಟ್ಟುಕೊಳ್ಳಬೇಕು. ಈ ಕೋಲಿನಿಂದ ಮಣ್ಣು ಅಗೆದು ನೆಲದಲ್ಲಿ ಚಿಕ್ಕ ಗುಂಡಿ ತೋಡಲೂ ಮತ್ತು ಹೊಟ್ಟೆ ಖಾಲಿ ಮಾಡಿದ ಬಳಿಕ ಆ ಗುಂಡಿಯನ್ನು ಮಣ್ಣಿನಿಂದ ಮುಚ್ಚಲೂ ಸಹಾಯವಾಗುವುದು. 14 ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸಂರಕ್ಷಿಸಲೂ ವೈರಿಗಳನ್ನು ಸೋಲಿಸುವಂತೆ ಸಹಾಯ ಮಾಡಲೂ ನಿಮ್ಮೊಂದಿಗೆ ಪಾಳೆಯದಲ್ಲಿರುವುದರಿಂದ ನಿಮ್ಮ ಪಾಳೆಯವು ಪವಿತ್ರವಾಗಿರಬೇಕು. ಇಲ್ಲದಿದ್ದಲ್ಲಿ ನಿಮ್ಮ ಪಾಳೆಯದಲ್ಲಿರುವ ಹೊಲಸನ್ನು ನೋಡಿ ಆತನು ಹಿಂದಿರುಗಿ ಹೋಗುವನು.
ಇತರ ವಿಧಿನಿಯಮಗಳು
15 “ಒಬ್ಬ ಗುಲಾಮನು ತನ್ನ ಧಣಿಯ ಬಳಿಯಿಂದ ನಿಮ್ಮ ಬಳಿಗೆ ಓಡಿ ಬಂದರೆ ನೀವು ಅವನ ಧಣಿಗೆ ಅವನನ್ನು ಒಪ್ಪಿಸಬಾರದು. 16 ಅವನು ನಿಮ್ಮ ಬಳಿಯಲ್ಲಿ ಇರಲು ಇಷ್ಟಪಟ್ಟರೆ ಅಥವಾ ಬೇರೆ ಊರಿಗೆ ಹೋಗಲು ಇಷ್ಟಪಟ್ಟರೆ ನೀವು ಅವನಿಗೆ ತೊಂದರೆಕೊಡಬಾರದು.
17 “ಇಸ್ರೇಲರ ಗಂಡಸಾಗಲಿ ಹೆಂಗಸಾಗಲಿ ದೇವಸ್ಥಾನದ ವೇಶ್ಯೆಯಾಗಬಾರದು. 18 ಸೂಳೆತನದಿಂದ ಗಳಿಸಿದ ಹಣವನ್ನು ನಿಮ್ಮ ದೇವರಾದ ಯೆಹೋವನ ವಿಶೇಷ ವಾಸಸ್ಥಾನಕ್ಕೆ ತೆಗೆದುಕೊಂಡು ಬರಬಾರದು. ಒಬ್ಬನು ತಾನು ಹೊತ್ತುಕೊಂಡ ಹರಕೆಯನ್ನು ಆ ಹಣದಿಂದ ಪೂರೈಸಕೂಡದು. ಯಾಕೆಂದರೆ ಲೈಂಗಿಕ ಪಾಪದಲ್ಲಿ ತಮ್ಮ ದೇಹಗಳನ್ನು ಮಾರುವವರನ್ನು ನಿಮ್ಮ ದೇವರಾದ ಯೆಹೋವನು ದ್ವೇಷಿಸುತ್ತಾನೆ; ಲೈಂಗಿಕ ಪಾಪಗಳ ಆದಾಯದಿಂದ ಬಂದ ಹಣದಿಂದ ಖರೀದಿ ಮಾಡಿದ ಕಾಣಿಕೆಗಳನ್ನು ಆತನು ದ್ವೇಷಿಸುತ್ತಾನೆ.
19 “ನೀವು ಇನ್ನೊಬ್ಬ ಇಸ್ರೇಲಿಗೆ ಸಾಲಕೊಟ್ಟರೆ ಅದಕ್ಕೆ ಬಡ್ಡಿ ವಸೂಲು ಮಾಡಬಾರದು. 20 ಪರದೇಶಸ್ಥರಿಗೆ ನೀವು ಬಡ್ಡಿಗೆ ಸಾಲ ಕೊಡಬಹುದು. ಆದರೆ ಸ್ವದೇಶದವನಾದ ಇಸ್ರೇಲಿನವನಿಗೆ ಬಡ್ಡಿಗೆ ಸಾಲ ಕೊಡಬಾರದು. ನೀವು ಹೀಗೆ ಮಾಡಿದ್ದಲ್ಲಿ, ನೀವು ಹೋಗಿ ನೆಲೆಸುವ ದೇಶದಲ್ಲಿ ನೀವು ಮಾಡುವ ಪ್ರತಿಯೊಂದರಲ್ಲೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸುವನು.
21 “ನೀವು ನಿಮ್ಮ ದೇವರಾದ ಯೆಹೋವನಿಗೆ ಹರಕೆ ಹೊತ್ತರೆ ಅದನ್ನು ಸಲ್ಲಿಸಲು ನಿಧಾನ ಮಾಡಬೇಡಿ. ನಿಮ್ಮ ದೇವರಾದ ಯೆಹೋವನು ಅದನ್ನು ನಿಮ್ಮಿಂದ ಕೇಳುವವನಾಗಿದ್ದಾನೆ. ಹರಕೆಹೊತ್ತು ಸಲ್ಲಿಸದಿದ್ದರೆ ನೀವು ಪಾಪಮಾಡುವವರಾಗಿದ್ದೀರಿ. 22 ನೀವು ಹರಕೆ ಮಾಡಿಕೊಳ್ಳದಿದ್ದರೆ ಪಾಪಮಾಡುವುದಿಲ್ಲ. 23 ಆದರೆ ನೀವು ಮಾಡಿದ ಹರಕೆಯನ್ನು ಪೂರೈಸಬೇಕು. ನೀವು ಹರಕೆ ಮಾಡುವಂತೆ ದೇವರು ನಿಮ್ಮನ್ನು ಬಲವಂತ ಮಾಡಲಿಲ್ಲವಲ್ಲಾ. ಆದ್ದರಿಂದ ನೀವು ವಾಗ್ದಾನ ಮಾಡಿದ್ದನ್ನು ಪೂರೈಸಬೇಕು.
24 “ಒಬ್ಬನ ತೋಟದೊಳಗಿಂದ ನೀವು ಹಾದುಹೋಗುತ್ತಿರುವಾಗ ನಿಮಗೆ ಬೇಕಾಗುವಷ್ಟು ಹಣ್ಣನ್ನು ಕಿತ್ತು ತಿನ್ನಿ. ಆದರೆ ನೀವು ಮಕ್ಕರಿಯಲ್ಲಿ ತುಂಬಿಸಿಕೊಂಡು ಹೋಗಬಾರದು. 25 ಒಬ್ಬನ ಧಾನ್ಯದ ಹೊಲದಲ್ಲಿ ನೀವು ಹಾದುಹೋಗುತ್ತಿರುವಾಗ ನಿಮ್ಮ ಕೈಯಿಂದ ಹೊಸೆದು ತಿನ್ನುವಷ್ಟು ಧಾನ್ಯವನ್ನು ನೀವು ತಿನ್ನಬಹುದು; ಆದರೆ ನೀವು ಕತ್ತಿಯಿಂದ ಧಾನ್ಯವನ್ನು ಕೊಯಿದು ನಿಮ್ಮೊಂದಿಗೆ ಒಯ್ಯಬೇಡಿ.
Kannada Holy Bible: Easy-to-Read Version. All rights reserved. © 1997 Bible League International