Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 17-20

ಕಳಂಕ, ದೋಷವಿಲ್ಲದ ಪ್ರಾಣಿಗಳನ್ನೇ ಬಲಿಕೊಡಿರಿ

17 “ನಿಮ್ಮ ದೇವರಾದ ಯೆಹೋವನಿಗೆ ನೀವು ಪಶುಗಳನ್ನಾಗಲಿ ಆಡುಕುರಿಮರಿಗಳನ್ನಾಗಲಿ ಸಮರ್ಪಿಸುವಾಗ ಅವು ಕಳಂಕವಿಲ್ಲದೆ ಪೂರ್ಣಾಂಗವಾಗಿರಬೇಕು; ದೋಷಪೂರಿತ ಯಜ್ಞವನ್ನು ಆತನು ದ್ವೇಷಿಸುತ್ತಾನೆ.

ವಿಗ್ರಹಾರಾಧನೆ ಮಾಡಿದರೆ ದೊರಕುವ ಶಿಕ್ಷೆ

“ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಒಂದು ಪಟ್ಟಣದಲ್ಲಿ ನೀವು ಕೆಟ್ಟ ಸುದ್ದಿಯೊಂದನ್ನು ಅಂದರೆ ಒಬ್ಬ ಸ್ತ್ರೀಯಾಗಲಿ ಅಥವಾ ಪುರುಷನಾಗಲಿ ದೇವರೊಂದಿಗೆ ಮಾಡಿದ ಒಡಂಬಡಿಕೆಯನ್ನು ಮುರಿದು ಆತನಿಗೆ ವಿರುದ್ಧವಾಗಿ ಪಾಪಮಾಡಿ ಅವರು ಬೇರೆ ದೇವರುಗಳನ್ನಾಗಲಿ ಸೂರ್ಯಚಂದ್ರ ನಕ್ಷತ್ರಗಳನ್ನಾಗಲಿ ಪೂಜಿಸುತ್ತಾರೆ ಎಂಬ ಸುದ್ದಿಯನ್ನು ನೀವು ಕೇಳಿದರೂ ಕೇಳಬಹುದು, ಅದು ದೇವರ ಕಟ್ಟಳೆಗೆ ವಿರುದ್ಧವಾದದ್ದು. ಇಂಥಾ ಕೆಟ್ಟ ಸುದ್ದಿಯನ್ನು ನೀವು ಕೇಳಿದರೆ ಮೊಟ್ಟಮೊದಲಾಗಿ ಅದು ಸತ್ಯವೋ ಸುಳ್ಳೋ ಎಂಬುದನ್ನು ಸರಿಯಾಗಿ ಪರಿಶೀಲಿಸಬೇಕು. ಅಂಥ ಭಯಂಕರ ಸಂಗತಿಯು ಇಸ್ರೇಲಿನಲ್ಲಿ ಸಂಭವಿಸಿದ್ದು ನಿಜವಾಗಿದ್ದಲ್ಲಿ, ಆ ಪಾಪಮಾಡಿದವನಿಗೆ ಶಿಕ್ಷೆಯನ್ನು ವಿಧಿಸಬೇಕು. ಪಟ್ಟಣದ ಹೆಬ್ಬಾಗಿಲ ಹೊರಗಿರುವ ಬಯಲಿಗೆ ಆ ತಪ್ಪು ಮಾಡಿದ ಸ್ತ್ರೀಯನ್ನೂ, ಪುರುಷನನ್ನೂ ತೆಗೆದುಕೊಂಡು ಹೋಗಿ ಅಲ್ಲಿ ಅವರನ್ನು ಕಲ್ಲೆಸೆದು ಸಾಯಿಸಬೇಕು. ಅವರು ವಿಗ್ರಹಾರಾಧನೆ ಮಾಡಿದ್ದಕ್ಕೆ ಒಂದೇ ಸಾಕ್ಷಿ ಇರುವುದಾದರೆ ಅವರಿಗೆ ಮರಣಶಿಕ್ಷೆಯಾಗಬಾರದು. ಆದರೆ ಇಬ್ಬರು ಅಥವಾ ಮೂವರು ಸಾಕ್ಷಿಗಳು ಅವರು ವಿಗ್ರಹಾರಾಧನೆ ಮಾಡಿದ್ದು ಸತ್ಯವೆಂದು ಹೇಳಿದರೆ ಮಾತ್ರ ಅವರನ್ನು ಸಾಯಿಸಬೇಕು. ಸತ್ಯವೆಂದು ಹೇಳಿದ ಸಾಕ್ಷಿಗಳು ಮೊದಲು ಅವರ ಮೇಲೆ ಕಲ್ಲೆಸೆಯಬೇಕು. ಅನಂತರ ಬೇರೆಯವರು ಕಲ್ಲೆಸೆದು ಅವರನ್ನು ಸಾಯಿಸಬೇಕು. ಈ ರೀತಿಯಾಗಿ ನಿಮ್ಮ ಮಧ್ಯೆ ಇದ್ದ ದುಷ್ಕೃತ್ಯವನ್ನು ತೆಗೆದುಹಾಕಬೇಕು.

ನ್ಯಾಯಸ್ಥಾನದಲ್ಲಿ ಬಗೆಹರಿಸಲಾಗದ ವಿಷಯಗಳು

“ನಿಮ್ಮ ನ್ಯಾಯಸ್ಥಾನದಲ್ಲಿ ನ್ಯಾಯತೀರಿಸಲಾಗದ ಕಷ್ಟದ ಸಮಸ್ಯೆಗಳು ಬರುವವು. ಅವು ಕೊಲೆ ಅಥವಾ ಇಬ್ಬರ ಮಧ್ಯೆ ವಿವಾದವಿರಬಹುದು; ಅಥವಾ ಜಗಳಮಾಡಿ ಗಾಯಗೊಂಡಿರುವ ಪ್ರಕರಣವಾಗಿರಬಹುದು. ನಿಮ್ಮ ಪಟ್ಟಣಗಳ ನ್ಯಾಯಸ್ಥಾನದಲ್ಲಿ ಈ ಪ್ರಕರಣಗಳ ವಿಚಾರಣೆ ನಡಿಸುವಾಗ ಸರಿಯಾದ ಇತ್ಯರ್ಥಮಾಡಿ ತೀರ್ಪುಮಾಡಲು ಕಷ್ಟವಾದಲ್ಲಿ ನೀವು ದೇವರು ಆರಿಸುವ ಸ್ಥಳಕ್ಕೆ ಹೋಗಬೇಕು. ಲೇವಿಕುಲದ ಯಾಜಕರ ಬಳಿಗೂ ಅಲ್ಲಿ ಆ ಸಮಯದಲ್ಲಿರುವ ನ್ಯಾಯಾಧೀಶನ ಬಳಿಗೂ ಹೋಗಿ ಅವರಿಗೆ ವಿಷಯವನ್ನು ತಿಳಿಸಬೇಕು. ಅವರು ನಿಮ್ಮ ಮುಂದಿರುವ ಬಗೆಹರಿಯಲಾಗದ ಪ್ರಕರಣವನ್ನು ಆಲೈಸಿ, ವಿಚಾರಿಸಿ, 10 ಯೆಹೋವನ ವಿಶೇಷವಾದ ಸ್ಥಳದಲ್ಲಿ ತಮ್ಮ ತೀರ್ಪನ್ನು ಕೊಡುವರು. ಅವರು ಏನು ಹೇಳುತ್ತಾರೋ ಅದಕ್ಕೆ ಸಂಪೂರ್ಣವಾಗಿ ಒಪ್ಪಿಗೆ ನೀಡಬೇಕು. ನೀವು ಏನು ಮಾಡಬೇಕೆಂದು ಅವರು ಹೇಳುತ್ತಾರೋ ಅದನ್ನು ನೀವು ಮಾಡಲೇಬೇಕು. 11 ಅವರು ಹೇಳಿದ ಹಾಗೆ ಎಲ್ಲವನ್ನು ಅಕ್ಷರಶಃ ಪರಿಪಾಲಿಸಬೇಕು. ಅವರ ತೀರ್ಪನ್ನು ಬದಲಾಯಿಸಬಾರದು.

12 “ನಿಮ್ಮ ದೇವರಾದ ಯೆಹೋವನ ಸೇವೆಮಾಡುತ್ತಿರುವ ಯಾಜಕನಾಗಲಿ ನ್ಯಾಯಾಧೀಶನಾಗಲಿ ಹೇಳಿದ ತೀರ್ಪನ್ನು ಉಲ್ಲಂಘಿಸಿದವನಿಗೆ ಮರಣದಂಡನೆ ಆಗಬೇಕು. ನೀವು ಆ ದುಷ್ಟನನ್ನು ಇಸ್ರೇಲಿನಿಂದ ನಿರ್ಮೂಲ ಮಾಡಬೇಕು. 13 ಈ ದಂಡನೆಯ ಬಗ್ಗೆ ಜನರು ಕೇಳಿ ಭಯಪಟ್ಟು ಅಂಥ ಕೆಟ್ಟ ಕೃತ್ಯಗಳನ್ನು ಮಾಡದಿರುವರು.

ಅರಸನನ್ನು ಆರಿಸುವ ರೀತಿ

14 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಪ್ರವೇಶಿಸುವಿರಿ. ಆ ಸ್ಥಳಗಳನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ನೆಲೆಸುವಿರಿ. ಆಗ ನೀವು ‘ನಮ್ಮ ಸುತ್ತಲಿನ ದೇಶದಲ್ಲಿರುವಂತೆಯೇ ನಮಗೂ ಒಬ್ಬ ರಾಜನು ಬೇಕು’ ಎಂದು ಹೇಳುವಿರಿ. 15 ಅಂಥ ಸಮಯದಲ್ಲಿ ಯೆಹೋವನು ಆರಿಸಿಕೊಂಡವನನ್ನೇ ನೀವು ರಾಜನನ್ನಾಗಿ ಆರಿಸಿಕೊಳ್ಳಬೇಕು; ಅವನು ನಿಮ್ಮ ಸ್ವಂತ ಜನರಲ್ಲಿ ಒಬ್ಬನಾಗಿರಬೇಕು; ಪರದೇಶಸ್ಥನನ್ನು ನೀವು ನಿಮ್ಮ ರಾಜನನ್ನಾಗಿ ಆರಿಸಬಾರದು. 16 ಅರಸನು ತನ್ನ ಉಪಯೋಗಕ್ಕಾಗಿ ಹೆಚ್ಚೆಚ್ಚಾಗಿ ಕುದುರೆಗಳನ್ನು ಖರೀದಿಸಬಾರದು; ಜನರನ್ನು ಈಜಿಪ್ಟಿಗೆ ಕಳುಹಿಸಿ ಅಲ್ಲಿಂದ ಹೆಚ್ಚುಹೆಚ್ಚು ಕುದುರೆಗಳನ್ನು ತರಿಸಬಾರದು; ಯಾಕೆಂದರೆ, ‘ನೀವು ಆ ಮಾರ್ಗದಲ್ಲಿ ಹಿಂದಕ್ಕೆ ಹೋಗಲೇಬಾರದು’ ಎಂದು ಯೆಹೋವನು ಹೇಳಿದ್ದಾನೆ. 17 ಅರಸನಿಗೆ ಮಿತಿಮೀರಿ ಪತ್ನಿಯರು ಇರಬಾರದು. ಯಾಕೆಂದರೆ ಅವರು ಅರಸನನ್ನು ಯೆಹೋವನ ಮಾರ್ಗದಲ್ಲಿ ನಡೆಯದಂತೆ ಮಾಡಿ ಬೇರೆ ಕಡೆಗೆ ತಿರುಗಿಸುವರು. ರಾಜನು ಬೆಳ್ಳಿಬಂಗಾರಗಳನ್ನು ಶೇಖರಿಸಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಳ್ಳಬಾರದು.

18 “ರಾಜನು ರಾಜ್ಯವಾಳಲು ಆರಂಭಿಸುವಾಗ, ಯಾಜಕರ ಮತ್ತು ಲೇವಿಯರ ಪುಸ್ತಕಗಳಿಂದ ಧರ್ಮಶಾಸ್ತ್ರವನ್ನು ತನಗಾಗಿ ಪುಸ್ತಕ ರೂಪದಲ್ಲಿ ಬರೆಸಿಟ್ಟುಕೊಳ್ಳಬೇಕು. 19 ಅವನು ಆ ಪುಸ್ತಕವನ್ನು ತನ್ನೊಂದಿಗಿಟ್ಟುಕೊಂಡು ಅದನ್ನು ತನ್ನ ಜೀವಮಾನ ಪೂರ್ತಿ ಪದೇಪದೇ ಓದುತ್ತಿರಬೇಕು. ಯಾಕೆಂದರೆ ಧರ್ಮಶಾಸ್ತ್ರವು ಆಜ್ಞಾಪಿಸುವ ಪ್ರತಿಯೊಂದಕ್ಕೂ ಸಂಪೂರ್ಣವಾಗಿ ವಿಧೇಯನಾಗಲು ಅವನು ಕಲಿತುಕೊಳ್ಳಬೇಕು. 20 ಆಗ ಅರಸನು ತನ್ನ ಪ್ರಜೆಗಳಿಗಿಂತ ತಾನು ಉತ್ತಮನಲ್ಲವೆಂದು ತಿಳಿದುಕೊಳ್ಳುವನು. ಆಗ ಅವನು ಧರ್ಮಶಾಸ್ತ್ರಕ್ಕೆ ವಿಮುಖನಾಗದೆ ಅದನ್ನು ಚಾಚೂತಪ್ಪದೆ ಅನುಸರಿಸುವನು. ಆಗ ರಾಜನೂ ಅವನ ಸಂತತಿಯವರೂ ಇಸ್ರೇಲ್ ರಾಜ್ಯವನ್ನು ಬಹುಕಾಲ ಆಳುವರು.

ಯಾಜಕರ ಮತ್ತು ಲೇವಿಯರ ಜೀವನಾಧಾರ

18 “ಇಸ್ರೇಲ್ ದೇಶದೊಳಗೆ ಲೇವಿಕುಲದವರಿಗೆ ಸ್ವಾಸ್ತ್ಯವು ಇರುವುದಿಲ್ಲ. ಅವರು ಯಾಜಕರಾಗಿ ಸೇವೆ ಸಲ್ಲಿಸುವರು. ದೇವರಿಗೆ ಸಮರ್ಪಿಸಿದ ಕಾಣಿಕೆಗಳಲ್ಲಿ ಬೆಂಕಿಯಲ್ಲಿ ಬೇಯಿಸಿದ ಯಜ್ಞಶೇಷವೇ ಅವರ ಆಹಾರ. ಬೇರೆ ಕುಲದವರಂತೆ ಅವರಿಗೆ ಭೂಮಿ ದೊರೆಯುವುದಿಲ್ಲ. ದೇವರು ಹೇಳಿದ ಪ್ರಕಾರ ಅವರ ಪಾಲು ಯೆಹೋವನೇ.

“ನೀವು ಯಜ್ಞಕ್ಕಾಗಿ ಒಂದು ದನವನ್ನಾಗಲಿ ಕುರಿಯನ್ನಾಗಲಿ ಕೊಯ್ದಾಗ ಯಾಜಕರಿಗೆ ಭುಜವನ್ನು, ಎರಡು ದವಡೆಗಳನ್ನು ಮತ್ತು ಉದರ ಭಾಗವನ್ನು ಕೊಡಬೇಕು. ನಿಮ್ಮ ಯಾಜಕರಿಗೆ ನಿಮ್ಮ ಬೆಳೆಯ ಪ್ರಥಮ ಫಲವನ್ನು ಕೊಡಬೇಕು. ನಿಮ್ಮ ಧಾನ್ಯಗಳ ಪ್ರಥಮ ಫಲವನ್ನು, ದ್ರಾಕ್ಷಾರಸದಲ್ಲಿ, ಎಣ್ಣೆಯಲ್ಲಿ ಮತ್ತು ನಿಮ್ಮ ಉಣ್ಣೆಯಲ್ಲಿ ಪ್ರಥಮ ಫಲವನ್ನು ಕೊಡಬೇಕು. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ಇಸ್ರೇಲ್ ಕುಲದವರಿಂದ ಲೇವಿಕುಲದವರನ್ನು ನಿರಂತರವಾಗಿ ಆತನ ಸೇವೆಮಾಡುವುದಕ್ಕೆ ಆರಿಸಿಕೊಂಡಿರುತ್ತಾನೆ.

“ಪ್ರತಿಯೊಬ್ಬ ಲೇವಿಯನಿಗೂ ದೇವಾಲಯದಲ್ಲಿ ಸೇವೆಮಾಡಲು ಒಂದು ನಿರ್ಧಿಷ್ಟ ಸಮಯವನ್ನು ಗೊತ್ತುಪಡಿಸಲಾಗಿದೆ. ಆದರೆ ಬೇರೆ ಸಮಯದಲ್ಲಿಯೂ ಸಹ ಅವನು ಅಲ್ಲಿ ಸೇವೆಮಾಡಲು ಇಷ್ಟಪಟ್ಟರೆ, ಅವನು ತನಗೆ ಇಷ್ಟಬಂದ ಸಮಯದಲ್ಲಿ ಸೇವೆ ಮಾಡಬಹುದು. ಇಸ್ರೇಲಿನ ಯಾವದೇ ಭಾಗದಲ್ಲಿರುವ ಯಾವುದೇ ಊರಿನಲ್ಲಿರುವ ಲೇವಿಯನು ತನ್ನ ಸ್ವಂತ ಸ್ಥಳವನ್ನು ಬಿಟ್ಟು ಯೆಹೋವನ ವಿಶೇಷ ಸ್ಥಳಕ್ಕೆ ಬರಬಹುದು. ಅವನು ತನಗೆ ಇಷ್ಟಬಂದ ಯಾವುದೇ ಸಮಯದಲ್ಲಿ ಬೇಕಾದರೂ ಹೀಗೆ ಮಾಡಬಹುದು. ಯೆಹೋವನ ಸನ್ನಿಧಿಯಲ್ಲಿ ಸೇವೆಮಾಡುತ್ತಿರುವ ತನ್ನ ಎಲ್ಲಾ ಸಹೋದರರಾದ ಲೇವಿಯರಂತೆ ಈ ಲೇವಿಯನು ಸಹ ತನ್ನ ದೇವರಾದ ಯೆಹೋವನ ಹೆಸರಿನಲ್ಲಿ ಸೇವೆಮಾಡಬಹುದು. ಆ ಲೇವಿಯನು ಇತರ ಲೇವಿಯರೊಂದಿಗೆ ಸಮಾನ ಪಾಲನ್ನು ಹೊಂದುವನು. ಇದಲ್ಲದೆ ಅವನ ಕುಟುಂಬದವರು ಯಥಾಪ್ರಕಾರ ತಮಗೆ ಬರತಕ್ಕ ಪಾಲನ್ನೂ ಹೊಂದುವರು.

ಇತರ ಜನಾಂಗಗಳವರಂತೆ ಇಸ್ರೇಲರು ಜೀವಿಸಬಾರದು

“ನೀವು ನಿಮ್ಮ ವಾಗ್ದತ್ತ ದೇಶಕ್ಕೆ ಬಂದಾಗ ಸುತ್ತಮುತ್ತಲಿನ ಜನರು ನಡೆಯುವ ರೀತಿಯಲ್ಲಿ ನೀವು ನಡೆಯಬಾರದು. ಅವರ ಅಸಹ್ಯವಾದ ಪದ್ದತಿಗಳನ್ನು ಅನುಸರಿಸಬಾರದು. 10 ನಿಮ್ಮ ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ನಿಮ್ಮ ಯಜ್ಞವೇದಿಕೆಯ ಬೆಂಕಿಯ ಮೇಲೆ ಬಲಿಯನ್ನಾಗಿ ಅರ್ಪಿಸಬೇಡಿ. ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳುವುದಕ್ಕಾಗಿ ಕಣಿಹೇಳುವವರ ಬಳಿಗಾಗಲಿ, ಮಂತ್ರಗಾರರ ಬಳಿಗಾಗಲಿ ಬೇತಾಳಿಕರ ಬಳಿಗಾಗಲಿ, ಮಾಟಗಾರರ ಬಳಿಗಾಗಲಿ ಹೋಗಬೇಡಿ. 11 ಬೇರೆಯವರ ಮೇಲೆ ಮಂತ್ರ ಮಾಡಲು ಯಾರಿಗೂ ಅವಕಾಶ ಕೊಡಬೇಡಿ. ಬೇತಾಳಿಕರಾಗುವುದಕ್ಕಾಗಲಿ, ಮಾಟಗಾರರಾಗುವುದಕ್ಕಾಗಲಿ ನಿಮ್ಮಲ್ಲಿ ಯಾರಿಗೂ ಅವಕಾಶ ಕೊಡಬೇಡಿ. ಸತ್ತುಹೋದವನೊಡನೆ ನಿಮ್ಮಲ್ಲಿ ಯಾರೂ ಮಾತಾಡಕೂಡದು. 12 ಇಂಥ ಕಾರ್ಯಗಳನ್ನು ಮಾಡುವ ಜನರನ್ನು ದೇವರು ದ್ವೇಷಿಸುತ್ತಾನೆ. ಆದ್ದರಿಂದಲೇ ಆ ಜನಾಂಗಗಳವರನ್ನು ನಿಮಗೋಸ್ಕರವಾಗಿ ಈ ದೇಶದಿಂದ ಹೊರಡಿಸುವನು. 13 ನಿಮ್ಮ ದೇವರಾದ ಯೆಹೋವನಿಗೆ ನೀವು ನಂಬಿಗಸ್ತರಾಗಿರಬೇಕು.

ಯೆಹೋವನ ಮಾತುಗಳನ್ನು ತಿಳಿಸುವ ಪ್ರವಾದಿ

14 “ನಿಮ್ಮ ದೇಶದೊಳಗಿಂದ ಇತರ ಜನಾಂಗದವರನ್ನು ನಾಶಮಾಡಬೇಕು. ಆ ಜನರು ಮಾಟಮಂತ್ರಗಳ ಮೂಲಕ ಮತ್ತು ಕಣಿ ಹೇಳುವವರಿಂದ ತಮ್ಮ ಭವಿಷ್ಯವನ್ನು ವಿಚಾರಿಸುವರು. ಆದರೆ ನಿಮ್ಮ ದೇವರಾದ ಯೆಹೋವನು ಅಂಥಾ ಕೆಲಸವನ್ನು ಮಾಡಲು ನಿಮ್ಮನ್ನು ಬಿಡುವುದಿಲ್ಲ. 15 ನಿಮ್ಮ ದೇವರು ನಿಮ್ಮ ಬಳಿಗೆ ಪ್ರವಾದಿಯನ್ನು ಕಳುಹಿಸುವನು. ಆ ಪ್ರವಾದಿಯು ನಿಮ್ಮ ಕುಲದವರಲ್ಲಿ ಒಬ್ಬನಾಗಿರುವನು. ಅವನು ನನ್ನ ಹಾಗೆ ಇರುವನು ಮತ್ತು ನೀವು ಅವನ ಮಾತುಗಳನ್ನು ಕೇಳಬೇಕು. 16 ನೀವು ಕೇಳಿದ ಪ್ರಕಾರ ದೇವರು ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವನು. ನೀವು ಹೋರೇಬ್ ಎಂಬ ಸೀನಾಯಿ ಪರ್ವತದಲ್ಲಿ ಒಟ್ಟಾಗಿ ಸೇರಿದಾಗ ದೇವರ ಸ್ವರಕ್ಕೆ ಭಯಪಟ್ಟಿರಿ; ಪರ್ವತದಲ್ಲಿದ್ದ ಬೆಂಕಿಯನ್ನು ನೋಡಿಯೂ ತತ್ತರಿಸಿದಿರಿ. ಆಗ ನೀವು, ‘ನಮ್ಮ ದೇವರಾದ ಯೆಹೋವನ ಸ್ವರವನ್ನು ನಾವು ತಿರುಗಿ ಕೇಳದ ಹಾಗೆ ಮಾಡು. ನಾವು ತಿರುಗಿ ಆ ಮಹಾ ಬೆಂಕಿಯ ಜ್ವಾಲೆಯನ್ನು ನೋಡದ ಹಾಗೆ ಮಾಡು; ಇಲ್ಲವಾದರೆ ನಾವು ಸಾಯುತ್ತೇವೆ!’ ಎಂದು ನನ್ನನ್ನು ಕೇಳಿಕೊಂಡಿರಿ.

17 “ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಅವರು ಕೇಳುವ ವಿಷಯವು ಒಳ್ಳೆಯದೇ. 18 ನಾನು ಅವರಿಗಾಗಿ ನಿನ್ನ ತರಹದ ಒಬ್ಬ ಪ್ರವಾದಿಯನ್ನು ಕಳುಹಿಸುವೆನು. ಅವನು ಅವರ ಜನರಲ್ಲಿ ಒಬ್ಬನಾಗಿರುವನು. ಅವನು ಜನರಿಗೆ ತಿಳಿಸಬೇಕಾದ ವಿಷಯವನ್ನು ನಾನೇ ಅವನಿಗೆ ತಿಳಿಸುವೆನು. ನಾನು ಆಜ್ಞಾಪಿಸುವುದೆಲ್ಲವನ್ನು ಅವನು ಜನರಿಗೆ ತಿಳಿಸುವನು. 19 ಈ ಪ್ರವಾದಿಯು ನನ್ನ ಪ್ರತಿನಿಧಿಯಾಗಿ ಮಾತನಾಡುವನು. ಅವನು ಮಾತಾಡುವಾಗ ಯಾವನಾದರೂ ನನ್ನ ಆಜ್ಞೆಗಳನ್ನು ಕೇಳದೆಹೋದರೆ ನಾನು ಅವನನ್ನು ಶಿಕ್ಷಿಸುವೆನು.’

ಸುಳ್ಳು ಪ್ರವಾದಿಗಳನ್ನು ಕಂಡುಹಿಡಿಯುವ ಬಗ್ಗೆ

20 “ಒಬ್ಬ ಪ್ರವಾದಿಯು ನಾನು ಹೇಳದ ಸಂಗತಿಯನ್ನು ನಿಮಗೆ ಹೇಳಿದರೂ ಹೇಳಬಹುದು. ದೇವರಿಂದ ಬಂದ ಸಂದೇಶವನ್ನು ನಿಮಗೆ ತಿಳಿಸುತ್ತಿರುವೆನು ಎಂದು ಅವನು ಹೇಳಬಹುದು. ಇಂಥಾ ಸಂದರ್ಭಗಳು ಬಂದಲ್ಲಿ ಆ ಪ್ರವಾದಿಯನ್ನು ಸಾಯಿಸಬೇಕು. ಇಷ್ಟು ಮಾತ್ರವಲ್ಲ ಇತರ ದೇವರುಗಳ ಸಂದೇಶವನ್ನು ಕೊಡುವ ಪ್ರವಾದಿಗಳೂ ಬರಬಹುದು. ಅವರನ್ನೂ ನೀವು ಸಾಯಿಸಬೇಕು. 21 ‘ಆ ಪ್ರವಾದಿಯು ಹೇಳಿದ್ದು ದೇವರ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ?’ ಎಂದು ನೀವು ಅಂದುಕೊಳ್ಳಬಹುದು. 22 ಒಬ್ಬ ಪ್ರವಾದಿಯು ತಾನು ಯೆಹೋವನಿಂದ ಕಳುಹಿಸಲ್ಪಟ್ಟವನು ಎಂದು ಹೇಳಿಕೊಂಡರೆ ಮತ್ತು ಅವನು ಹೇಳಿದ ಮಾತುಗಳು ನೆರವೇರದೆ ಹೋದರೆ ಆಗ ಆ ವಿಷಯಗಳನ್ನು ಯೆಹೋವನು ಹೇಳಲಿಲ್ಲವೆಂದು ನಿಮಗೆ ಗೊತ್ತಾಗುವುದು. ಆ ಪ್ರವಾದಿಯು ತನ್ನದೆ ಆದ ಆಲೋಚನೆಯನ್ನು ನಿಮಗೆ ಹೇಳುತ್ತಿದ್ದಾನೆಂದು ನಿಮಗೆ ತಿಳಿಯುವುದು. ನೀವು ಅವನಿಗೆ ಭಯಪಡಬೇಡಿರಿ.

ಆಶ್ರಯನಗರಗಳು

19 “ಬೇರೆ ಜನಾಂಗಗಳು ವಾಸಿಸುವ ದೇಶವನ್ನು ನಿಮ್ಮ ದೇವರು ನಿಮಗೆ ಕೊಡುತ್ತಿದ್ದಾನೆ. ಆ ಜನಾಂಗಗಳನ್ನು ಆತನು ನಾಶಮಾಡುತ್ತಾನೆ. ಅವರು ವಾಸಿಸುತ್ತಿದ್ದ ಸ್ಥಳಗಳಲ್ಲಿ ನೀವು ವಾಸಿಸುವಿರಿ. ಅವರ ಮನೆಗಳನ್ನೂ ಪಟ್ಟಣಗಳನ್ನೂ ನೀವು ವಶಪಡಿಸಿಕೊಳ್ಳುವಿರಿ. ಅಂಥಾ ಸಮಯದಲ್ಲಿ 2-3 ನಿಮ್ಮ ದೇಶವನ್ನು ನೀವು ಮೂರು ವಿಭಾಗ ಮಾಡಬೇಕು. ಪ್ರತಿಯೊಂದು ವಿಭಾಗದಲ್ಲಿ ನೀವು ಒಂದು ನಗರವನ್ನು ಆರಿಸಬೇಕು. ಅದು ಎಲ್ಲಾ ಜನರಿಗೆ ಹೋಗಲು ಅನುಕೂಲವಾಗಿರಬೇಕು. ಅದಕ್ಕಾಗಿ ನೀವು ರಸ್ತೆಗಳನ್ನು ಮಾಡಬೇಕು. ಆಗ ಯಾವನಾದರೂ ಅಪ್ಪಿತಪ್ಪಿ ಇನ್ನೊಬ್ಬನನ್ನು ಕೊಂದರೆ ಅವನು ರಕ್ಷಣೆಗಾಗಿ ಆ ನಗರಗಳಿಗೆ ಓಡಿಹೋಗಬಹುದು.

“ಅಂಥಾ ಮನುಷ್ಯನಿಗೆ ಅನ್ವಯಿಸುವ ನಿಯಮಗಳು ಯಾವುವೆಂದರೆ: ಆ ಮನುಷ್ಯನು ಇನ್ನೊಬ್ಬನನ್ನು ಕೊಂದದ್ದು ಆಕಸ್ಮಿಕವಾಗಿರಬೇಕು; ಕೊಲ್ಲಲ್ಪಟ್ಟವನ ಮೇಲೆ ಅವನಿಗೆ ದ್ವೇಷವಿರಬಾರದು. ಇದೊಂದು ಉದಾಹರಣೆ: ಒಬ್ಬನು ಇನ್ನೊಬ್ಬ ವ್ಯಕ್ತಿಯೊಂದಿಗೆ ಅಡವಿಗೆ ಕಟ್ಟಿಗೆ ಕಡಿಯಲು ಹೋಗುತ್ತಾನೆ. ಒಂದು ಮರವನ್ನು ಕಡಿಯಲು ತನ್ನ ಕೊಡಲಿಯನ್ನು ಬೀಸುವಾಗ ಅವನ ಕೊಡಲಿಯು ಕಾವಿನಿಂದ ಕಳಚಿಕೊಂಡು ಪಕ್ಕದಲ್ಲಿ ನಿಂತಿದ್ದವನಿಗೆ ಬಡಿದು ಅವನ ಸಾವಿಗೆ ಕಾರಣವಾದರೆ, ಕೊಡಲಿಯನ್ನು ಬೀಸಿದವನು ಆ ಮೂರು ನಗರಗಳಲ್ಲಿ ಒಂದರಲ್ಲಿ ಆಶ್ರಯವನ್ನು ಪಡೆದುಕೊಂಡು ಸುರಕ್ಷಿತವಾಗಿರಬಹುದು. ಆದರೆ ಆ ನಗರವು ತುಂಬಾ ದೂರವಿದ್ದಲ್ಲಿ ಅವನು ಅಲ್ಲಿಗೆ ಸೇರುವ ಮೊದಲೇ ಸತ್ತವನ ಹತ್ತಿರದ ಸಂಬಂಧಿ ಅವನನ್ನು ಹಿಂಬಾಲಿಸಿ ಅವನ ಮೇಲೆ ಮುಯ್ಯಿತೀರಿಸಿಕೊಳ್ಳುವನು. ಅವನ ಮೇಲೆ ಕೋಪಗೊಂಡು ಅವನನ್ನು ಕೊಂದರೆ ನಿಷ್ಕಾರಣವಾಗಿ ಅವನು ಕೊಲ್ಲಲ್ಪಟ್ಟಂತಾಯಿತು. ಯಾಕೆಂದರೆ ಸತ್ತವನನ್ನು ಅವನು ದ್ವೇಷಿಸುತ್ತಿರಲಿಲ್ಲ. ಆದ್ದರಿಂದ ಆ ನಗರಗಳು ಎಲ್ಲರಿಗೂ ಸುಲಭವಾಗಿ ಸೇರುವಂಥವುಗಳಾಗಿರಬೇಕು; ಅಂಥವುಗಳನ್ನು ನೀವು ಆರಿಸಿಕೊಳ್ಳಬೇಕು.

“ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಿಗೆ ನಿಮ್ಮ ದೇಶವನ್ನು ವಿಸ್ತಾರ ಮಾಡುವುದಾಗಿ ವಾಗ್ದಾನ ಮಾಡಿದನು. ಅವರಿಗೆ ಕೊಡುವುದಾಗಿ ವಾಗ್ದಾನಮಾಡಿದ ದೇಶವನ್ನೆಲ್ಲಾ ನಿಮಗೆ ಕೊಡುವನು. ಈ ಹೊತ್ತು ನಾನು ನಿಮಗೆ ಕೊಡುವ ಆಜ್ಞೆಗಳಿಗೆ ನೀವು ವಿಧೇಯರಾದರೆ ಮಾತ್ರ ನಿಮ್ಮ ದೇಶವನ್ನು ಆತನು ವಿಸ್ತರಿಸುವನು. ನೀವು ನಿಮ್ಮ ದೇವರಾದ ಯೆಹೋವನನ್ನು ಯಾವಾಗಲೂ ಪ್ರೀತಿಸಬೇಕು. ದೇವರು ನಿಮ್ಮ ದೇಶದ ಮೇರೆಯನ್ನು ವಿಸ್ತರಿಸಿದಾಗ ನೀವು ಇನ್ನೂ ಮೂರು ಆಶ್ರಯ ನಗರಗಳನ್ನು ಆರಿಸಿಕೊಳ್ಳಬೇಕು. 10 ಆಗ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಅಂಥ ನಿರಪರಾಧಿಗಳು ಕೊಲ್ಲಲ್ಪಡುವುದಿಲ್ಲ; ನೀವು ಯಾವ ಮರಣದ ವಿಷಯದಲ್ಲಿಯೂ ದೋಷಿಗಳಾಗಿರುವುದಿಲ್ಲ.

11 “ಆದರೆ ಒಬ್ಬನು ಇನ್ನೊಬ್ಬ ವ್ಯಕ್ತಿಯನ್ನು ದ್ವೇಷಿಸಿದರೆ, ಅವನನ್ನು ಉದ್ದೇಶಪೂರ್ವಕವಾಗಿ ಕೊಂದು ಆಶ್ರಯ ನಗರದೊಳಗೆ ಸುರಕ್ಷಿತನಾಗಿದ್ದಲ್ಲಿ 12 ಅವನ ಊರಿನ ಹಿರಿಯರು ಅವನನ್ನು ಆ ಆಶ್ರಯನಗರದೊಳಗಿಂದ ಹಿಡಿದುತಂದು ಕೊಲೆ ಮಾಡಲ್ಪಟ್ಟವನ ಸಮೀಪ ಬಂಧುವಿಗೆ ಒಪ್ಪಿಸಬೇಕು, ಕೊಲೆಗಾರನು ಸಾಯಲೇಬೇಕು. 13 ನೀವು ಅವನ ವಿಷಯದಲ್ಲಿ ದುಃಖಪಡಬಾರದು. ಯಾಕೆಂದರೆ ಅವನು ನಿರಪರಾಧಿಯನ್ನು ಕೊಂದ ಅಪರಾಧಿಯಾಗಿದ್ದಾನೆ. ಅವನು ಮಾಡಿದ ಪಾಪವನ್ನು ಇಸ್ರೇಲಿನಿಂದ ತೆಗೆದುಹಾಕಬೇಕು. ಆಗ ನಿಮಗೆ ಶುಭವಾಗುವುದು.

ಆಸ್ತಿಯ ಮೇರೆಗಳು

14 “ನಿಮ್ಮ ನೆರೆಯವನ ಭೂಮಿಯ ಗಡಿಕಲ್ಲುಗಳ ಸ್ಥಳವನ್ನು ನೀವು ಬದಲಾಯಿಸಬಾರದು. ಹಿಂದಿನ ಕಾಲದಲ್ಲಿ ಜನರು ತಮ್ಮ ಭೂಮಿಯ ಮೇರೆಯನ್ನು ಗುರುತಿಸಲು ನೆಟ್ಟಿರುತ್ತಾರೆ. ಆ ಗಡಿಕಲ್ಲುಗಳು ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ಆ ಭೂಮಿಗೆ ಗುರುತಾಗಿದೆ.

ಸಾಕ್ಷಿಗಳು

15 “ಒಬ್ಬನು ಕಟ್ಟಳೆಗಳಿಗೆ ವಿರುದ್ಧವಾಗಿ ನಡೆದುಕೊಂಡು ಅಪಾದಿಸಲ್ಪಟ್ಟದ್ದಲ್ಲಿ ಒಬ್ಬನ ಸಾಕ್ಷಿಯಿಂದ ಅವನು ತಪ್ಪಿತಸ್ಥನೆಂದು ತೀರ್ಮಾನಿಸಬಾರದು. ಅವನು ತಪ್ಪಿತಸ್ಥನೆಂದು ತೋರಿಸಲು ಎರಡು ಅಥವಾ ಮೂರು ಸಾಕ್ಷಿಗಳಿರಬೇಕು.

16 “ಒಬ್ಬ ಸಾಕ್ಷಿದಾರನು ಇನ್ನೊಬ್ಬನು ತನಗೆ ಹಾನಿ ಮಾಡಿದ್ದಾನೆಂದು ಸುಳ್ಳುಹೇಳಿ ಅವನನ್ನು ಶಿಕ್ಷೆಗೆ ಒಳಪಡಿಸಲು ಪ್ರಯತ್ನಿಸಿದಾಗ, 17 ಆ ಪ್ರಕರಣಕ್ಕೆ ಸೇರಿದವರಿಬ್ಬರೂ ಯೆಹೋವನು ಆರಿಸಿದ ಸ್ಥಳಕ್ಕೆ ಹೋಗಿ ಅಲ್ಲಿ ಕಾರ್ಯತತ್ಪರರಾಗಿರುವ ಯಾಜಕರನ್ನು ಮತ್ತು ನ್ಯಾಯಾಧೀಶರನ್ನು ಕಾಣಬೇಕು. 18 ನ್ಯಾಯಾಧೀಶರು ಅವರನ್ನು ಪ್ರಶ್ನಿಸಿ ಸರಿಯಾಗಿ ವಿಚಾರಿಸಬೇಕು. ಸಾಕ್ಷಿಯವನು ಸುಳ್ಳು ಹೇಳಿದ್ದಾನೆಂಬುದನ್ನು ಅವರು ಕಂಡುಹಿಡಿದರೆ 19 ಆ ಸಾಕ್ಷಿಯವನಿಗೆ ಶಿಕ್ಷೆ ವಿಧಿಸಬೇಕು. ತನ್ನ ವಿರೋಧಿಗೆ ಯಾವ ಶಿಕ್ಷೆ ಬರಬೇಕೆಂಬುದಾಗಿ ಅವನು ಸುಳ್ಳಾಡಿದ್ದನೋ, ಅದೇ ಶಿಕ್ಷೆಯನ್ನು ಅವನಿಗೆ ವಿಧಿಸಬೇಕು. ಈ ರೀತಿಯಾಗಿ ಆ ದುಷ್ಟತನವನ್ನು ನಿಮ್ಮ ಕುಲಗಳಿಂದ ತೆಗೆದುಹಾಕಬೇಕು. 20 ಇದನ್ನು ಬೇರೆಯವರು ಕೇಳಿ ಭಯಪಟ್ಟು ಅಂಥಾ ದುಷ್ಕೃತ್ಯವನ್ನು ಅವರು ಮಾಡುವುದಿಲ್ಲ.

21 “ಅಪರಾಧ ಎಷ್ಟು ಭಯಂಕರವಾಗಿರುವುದೋ ಅಷ್ಟೇ ಭಯಂಕರ ಶಿಕ್ಷೆಯೂ ಇರಬೇಕು. ತಪ್ಪು ಮಾಡಿದವನನ್ನು ಶಿಕ್ಷಿಸಲು ಬೇಸರಪಟ್ಟುಕೊಳ್ಳಬಾರದು. ಒಬ್ಬನು ಪ್ರಾಣಹತ್ಯೆ ಮಾಡಿದರೆ ಅವನ ಪ್ರಾಣವೂ ತೆಗೆಯಲ್ಪಡಬೇಕು. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ಎಂಬ ನೀತಿಯನ್ನು ಅನುಸರಿಸಬೇಕು.

ಯುದ್ಧ ಕ್ರಮಗಳು

20 “ನೀವು ನಿಮಗಿಂತ ಬಲಿಷ್ಠರಾದ ವೈರಿಗಳ ಮೇಲೆ ಯುದ್ಧಕ್ಕೆ ಹೋದಾಗ ಅವರ ರಥಾಶ್ವಗಳನ್ನು ಮತ್ತು ನಿಮಗಿಂತಲೂ ಹೆಚ್ಚಾದ ಸೈನ್ಯಬಲವನ್ನು ನೋಡಿ ನೀವು ಭಯಗ್ರಸ್ತರಾಗಬೇಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ತಂದವನು ಆತನೇ.

“ನೀವು ಯುದ್ಧಕ್ಕೆ ಹೊರಟುನಿಂತಾಗ ಯಾಜಕನು ಸೈನಿಕರ ಬಳಿಗೆ ಹೋಗಿ ಹೀಗೆ ಹೇಳಬೇಕು: ‘ಇಸ್ರೇಲ್ ಜನರೇ, ನನ್ನ ಮಾತನ್ನು ಆಲಿಸಿರಿ. ಈ ದಿವಸ ನಿಮ್ಮ ವೈರಿಗಳೊಂದಿಗೆ ಕಾದಾಡಲು ಹೋಗುತ್ತಿದ್ದೀರಿ. ನೀವು ಅಧೈರ್ಯಗೊಳ್ಳಬೇಡಿರಿ. ಗಲಿಬಿಲಿಗೆ ಸಿಕ್ಕಿಕೊಳ್ಳಬೇಡಿ; ವೈರಿಗಳಿಗೆ ಭಯಪಡಬೇಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ಹೋಗುವನು. ವೈರಿಗಳೊಂದಿಗೆ ಯುದ್ಧಮಾಡಲು ಆತನು ನಿಮಗೆ ಸಹಾಯ ಮಾಡುವನು ಮತ್ತು ನಿಮಗೆ ಜಯವನ್ನು ಕೊಡುವನು.’

“ಆ ಲೇವಿಯ ಅಧಿಕಾರಿಗಳು ಸೈನಿಕರಿಗೆ, ‘ನಿಮ್ಮಲ್ಲಿ ಯಾರಾದರೂ ಹೊಸಮನೆಯನ್ನು ಕಟ್ಟಿ ಗೃಹಪ್ರವೇಶ ಮಾಡಿರದಿದ್ದರೆ ಅವನು ತನ್ನ ಮನೆಗೆ ಹೋಗಲಿ. ಒಂದುವೇಳೆ ಅವನು ರಣರಂಗದಲ್ಲಿ ಸತ್ತರೆ ಇನ್ನೊಬ್ಬನು ಅವನ ಮನೆಗೆ ಸೇರಿಕೊಳ್ಳಬಹುದು. ನಿಮ್ಮಲ್ಲಿ ಯಾವನಾದರೂ ದ್ರಾಕ್ಷಿತೋಟವನ್ನು ಮಾಡಿ ಅದರ ಫಲವನ್ನು ಕೂಡಿಸಿಲ್ಲದಿದ್ದರೆ ಅವನು ತನ್ನ ಮನೆಗೆ ಹೋಗಲಿ. ಅವನು ರಣರಂಗದಲ್ಲಿ ಮಡಿದರೆ ಅವನ ದ್ರಾಕ್ಷಿತೋಟದ ಫಲಗಳು ಬೇರೊಬ್ಬನ ಪಾಲಾಗುವುದು. ನಿಮ್ಮಲ್ಲಿ ಯಾರಾದರೂ ಮದುವೆಯಾಗಲು ಹೆಣ್ಣನ್ನು ನಿಶ್ಚಯಿಸಿದ್ದರೆ ಅವನು ತನ್ನ ಮನೆಗೆ ಹಿಂತಿರುಗಿಹೋಗಲಿ; ಯಾಕೆಂದರೆ ಅವನು ರಣರಂಗದಲ್ಲಿ ಮಡಿದರೆ ಅವನಿಗೆ ನಿಶ್ಚಯವಾದ ಹೆಣ್ಣನ್ನು ಇನ್ನೊಬ್ಬನು ಮದುವೆ ಮಾಡಿಕೊಳ್ಳಬಹುದು’ ಎಂದು ಹೇಳುವರು.

“ಆ ಲೇವಿಯ ಅಧಿಕಾರಿಗಳು ಹೇಳಬೇಕಾದದ್ದೇನೆಂದರೆ: ‘ನಿಮ್ಮಲ್ಲಿ ಯಾರಾದರೂ ತಮ್ಮ ಧೈರ್ಯವನ್ನು ಕಳೆದುಕೊಂಡಿದ್ದರೆ ಅವನು ತನ್ನ ಮನೆಗೆ ಹೋಗಲಿ. ಅವನಿಂದಾಗಿ ಇತರ ಸೈನಿಕರೂ ತಮ್ಮ ಧೈರ್ಯವನ್ನು ಕಳೆದುಕೊಳ್ಳಬಹುದು.’ ಲೇವಿಯ ಅಧಿಕಾರಿಗಳು ಸೈನಿಕರೊಂದಿಗೆ ಮಾತಾಡುವುದನ್ನು ನಿಲ್ಲಿಸಿದ ಬಳಿಕ ಅವರು ತಮಗೆ ಸೈನ್ಯಾಧಿಕಾರಿಗಳನ್ನು ನೇಮಿಸಬೇಕು.

10 “ನೀವು ಒಂದು ಪಟ್ಟಣವನ್ನು ಆಕ್ರಮಿಸಲು ಹೋದಾಗ, ಅಲ್ಲಿಯ ಜನರಿಗೆ ‘ಶಾಂತಿಸಂಧಾನಕ್ಕೆ’ ಕರೆಯನ್ನು ಕೊಡಬೇಕು. 11 ಅವರು ನಿಮ್ಮ ಸಂಧಾನವನ್ನು ಸ್ವೀಕರಿಸಿ ನಿಮಗೆ ತಮ್ಮ ಬಾಗಿಲುಗಳನ್ನು ತೆರೆದುಕೊಟ್ಟರೆ ಆ ಪಟ್ಟಣದಲ್ಲಿರುವವರೆಲ್ಲರೂ ನಿಮಗೆ ಗುಲಾಮರಾಗುವರು. ಅವರು ನಿಮ್ಮ ಕೆಲಸಗಳನ್ನು ಮಾಡಲೇಬೇಕು. 12 ಆದರೆ ಆ ಪಟ್ಟಣದವರು ನಿಮ್ಮೊಂದಿಗೆ ಶಾಂತಿಸಂಧಾನ ಮಾಡಲು ಒಪ್ಪದಿದ್ದರೆ ಮತ್ತು ನಿಮ್ಮೊಂದಿಗೆ ಕಾದಾಡಲು ಬಂದರೆ ನೀವು ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು. 13 ನಿಮ್ಮ ದೇವರಾದ ಯೆಹೋವನು ಆ ಪಟ್ಟಣವನ್ನು ಸ್ವಾಧೀನ ಮಾಡಲು ಸಹಾಯಮಾಡಿದಾಗ ನೀವು ಆ ಪಟ್ಟಣದೊಳಗಿದ್ದ ಗಂಡಸರನ್ನೆಲ್ಲಾ ಕೊಂದುಬಿಡಬೇಕು. 14 ಹೆಂಗಸರನ್ನು, ಮಕ್ಕಳನ್ನು, ದನಕುರಿಗಳನ್ನು ಮತ್ತು ಪಟ್ಟಣದೊಳಗಿದ್ದವುಗಳನ್ನೆಲ್ಲಾ ನಿಮ್ಮ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಳ್ಳಬಹುದು. ನಿಮ್ಮ ದೇವರಾದ ಯೆಹೋವನು ಅವುಗಳನ್ನು ನಿಮಗೆ ಕೊಟ್ಟಿದ್ದಾನೆ. 15 ನಿಮ್ಮಿಂದ ಬಹುದೂರವಿರುವ ಪಟ್ಟಣಗಳಿಗೆ ಅಂದರೆ ನೀವು ವಾಸಿಸಲಿರುವ ದೇಶದಿಂದ ದೂರವಿರುವ ಪಟ್ಟಣಗಳಿಗೆ ನೀವು ಆ ರೀತಿಯಾಗಿ ಮಾಡಬೇಕು.

16 “ಆದರೆ ನಿಮಗೆ ವಾಗ್ದಾನ ಮಾಡಿದ ದೇಶದ ಪಟ್ಟಣಗಳನ್ನು ಸ್ವಾಧೀನ ಮಾಡುವಾಗ ನೀವು ಪಟ್ಟಣದಲ್ಲಿರುವವರೆಲ್ಲರನ್ನು ಕೊಲ್ಲಬೇಕು. 17 ನೀವು ಹಿತ್ತಿಯರನ್ನು, ಅಮೋರಿಯರನ್ನು, ಕಾನಾನ್ಯರನ್ನು, ಪೆರಿಜ್ಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ಸಂಪೂರ್ಣವಾಗಿ ಹತ್ಯೆ ಮಾಡಬೇಕು. ಇದು ನಿಮ್ಮ ದೇವರಾದ ಯೆಹೋವನ ಅಪ್ಪಣೆ. 18 ಯಾಕೆಂದರೆ ಆಗ ಅವರು ನಿಮ್ಮ ದೇವರಾದ ಯೆಹೋವನಿಗೆ ವಿರೋಧವಾಗಿ ಪಾಪಮಾಡುವಂತೆ ನಿಮಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ; ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ಮಾಡುವ ಭಯಂಕರ ಕೃತ್ಯಗಳನ್ನು ಮಾಡುವಂತೆ ನಿಮಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ.

19 “ನೀವು ಒಂದು ಪಟ್ಟಣವನ್ನು ಬಹುಕಾಲದಿಂದ ಮುತ್ತಿಗೆ ಹಾಕಿದರೆ ಸುತ್ತಮುತ್ತಲಿರುವ ಮರಗಳನ್ನು ಕಡಿದುಹಾಕಬಾರದು. ಅವುಗಳ ಫಲಗಳನ್ನು ತಿನ್ನಬಹುದು; ಆದರೆ ಕಡಿಯಬಾರದು. ಅವು ನಿಮ್ಮ ವೈರಿಗಳಲ್ಲವಲ್ಲಾ? ಅವು ನಿಮ್ಮೊಂದಿಗೆ ಯುದ್ಧ ಮಾಡುವುದಿಲ್ಲವಲ್ಲಾ? 20 ಹಣ್ಣುಗಳನ್ನು ಕೊಡದ ಮರಗಳನ್ನು ಕಡಿಯಬಹುದು. ಆ ಮರಗಳಿಂದ ಆಯುಧಗಳನ್ನು ತಯಾರಿಸಿ[a] ಆ ಪಟ್ಟಣದ ಜನರೊಂದಿಗೆ ಯುದ್ಧ ಮಾಡಬಹುದು. ಆ ಪಟ್ಟಣವು ನಿಮ್ಮ ಕೈವಶವಾಗುವ ತನಕ ನೀವು ಅದನ್ನು ಉಪಯೋಗಿಸಬಹುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International