Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 8-10

ದೇವರಾದ ಯೆಹೋವನನ್ನು ಸ್ಮರಿಸಿರಿ

“ನಾನು ಈ ದಿನ ಕೊಡುವ ಎಲ್ಲಾ ಆಜ್ಞೆಗಳನ್ನು ನೀವು ಅನುಸರಿಸಬೇಕು. ಆಗ ನೀವು ದೊಡ್ಡ ಜನಾಂಗವಾಗಿ ಅಭಿವೃದ್ಧಿಯಾಗುವಿರಿ. ನಿಮ್ಮ ಪೂರ್ವಿಕರಿಗೆ ಯೆಹೋವನು ವಾಗ್ದಾನ ಮಾಡಿದ ದೇಶವನ್ನು ನೀವು ಪಡೆದುಕೊಳ್ಳುವಿರಿ. ನಿಮ್ಮ ದೇವರಾದ ಯೆಹೋವನು ಈ ನಲವತ್ತು ವರ್ಷಗಳ ಕಾಲ ನಿಮ್ಮನ್ನು ಅರಣ್ಯ ಪ್ರಯಾಣದಲ್ಲಿ ಮೊದಲು ನಡೆಸಿದ್ದನ್ನು ನೀವು ಯಾವಾಗಲೂ ಸ್ಮರಿಸಬೇಕು. ಯೆಹೋವನು ನಿಮ್ಮನ್ನು ಪರೀಕ್ಷಿಸುತ್ತಿದ್ದನು ಮತ್ತು ನಿಮ್ಮನ್ನು ದೀನರನ್ನಾಗಿ ಮಾಡಬೇಕೆಂದಿದ್ದನು. ನಿಮ್ಮ ಹೃದಯದ ಆಲೋಚನೆಗಳನ್ನು ಆತನು ತಿಳಿದುಕೊಳ್ಳಬೇಕೆಂದಿದ್ದನು; ನೀವು ಆತನ ಆಜ್ಞೆಗಳಿಗೆ ವಿಧೇಯರಾಗುವಿರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕೆಂದಿದ್ದನು. ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿ ನಿಮಗೆ ಹಸಿವೆಯಾಗುವಂತೆ ಮಾಡಿದನು. ಆ ಬಳಿಕ ಮನ್ನದ ಮೂಲಕ ನಿಮ್ಮ ಹಸಿವೆಯನ್ನು ನೀಗಿದನು. ಇದರ ವಿಷಯವಾಗಿ ನೀವು ಹಿಂದೆಂದೂ ಕೇಳಿರಲಿಲ್ಲ. ನಿಮ್ಮ ಪೂರ್ವಿಕರೂ ನೋಡಿರಲಿಲ್ಲ. ಆತನು ಹೀಗೇಕೆ ಮಾಡಿದನು? ಯಾಕೆಂದರೆ ಕೇವಲ ರೊಟ್ಟಿ ತಿಂದ ಮಾತ್ರದಿಂದ ಮನುಷ್ಯರು ಬದುಕದೆ ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೇ ಬದುಕುವರೆಂಬುದನ್ನು ನೀವು ತಿಳಿಯಬೇಕೆಂದು ಹೀಗೆ ಮಾಡಿದನು. ಆತನು ನಿಮ್ಮನ್ನು ಕಾಪಾಡಿ ಸಂರಕ್ಷಿಸಿದ್ದರಿಂದ ಈ ನಲವತ್ತು ವರ್ಷ ನಿಮ್ಮ ಬಟ್ಟೆಗಳು ಹರಿದುಹೋಗಲಿಲ್ಲ; ನಿಮ್ಮ ಕಾಲುಗಳು ಊದಿಕೊಳ್ಳಲಿಲ್ಲ. ಇವೆಲ್ಲವನ್ನು ನಿಮ್ಮ ದೇವರಾದ ಯೆಹೋವನು ನಿಮಗೆ ಮಾಡಿದನು. ತಂದೆಯು ತನ್ನ ಮಗನನ್ನು ತಿದ್ದಿ ಶಿಸ್ತಿನಲ್ಲಿ ನಡೆಸುವಂತೆ ದೇವರು ನಿಮ್ಮೊಂದಿಗೆ ವರ್ತಿಸಿದನು.

“ಆತನ ಆಜ್ಞೆಗಳಿಗೆ ವಿಧೇಯರಾಗಿರಿ. ಆತನನ್ನು ಅನುಸರಿಸಿ ಗೌರವಿಸಿರಿ. ನಿಮ್ಮ ದೇವರಾದ ಯೆಹೋವನು ಉತ್ತಮವಾದ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ಆ ದೇಶದಲ್ಲಿ ನೀರು ಸಮೃದ್ಧಿಯಾಗಿರುವುದು. ನೀರು ಕಣಿವೆಗಳಲ್ಲಿಯೂ ಬೆಟ್ಟಗಳಲ್ಲಿಯೂ ನೆಲದ ಮೇಲೂ ಹರಿದುಬರುವುದು. ಆ ದೇಶವು ಗೋಧಿ, ಜವೆಗೋಧಿ, ದ್ರಾಕ್ಷಾಲತೆಗಳು, ಅಂಜೂರ, ದಾಳಿಂಬೆ ಮರಗಳಿಂದ ತುಂಬಿದೆ. ಅಲ್ಲಿ ಎಣ್ಣೆ, ಜೇನುತುಪ್ಪ ಧಾರಾಳವಾಗಿ ಸಿಗುವವು. ಅಲ್ಲಿ ನೀವು ಯಥೇಚ್ಛವಾಗಿ ತಿನ್ನುವಿರಿ. ನಿಮಗೆ ಬೇಕಾದದ್ದೆಲ್ಲಾ ನಿಮಗಿರುವುದು. ಅಲ್ಲಿಯ ಕಲ್ಲುಗಳು ಕಬ್ಬಿಣದಂತಿವೆ. ಬೆಟ್ಟಗಳಿಂದ ನೀವು ತಾಮ್ರವನ್ನು ಅಗೆದು ತೆಗೆಯುವಿರಿ. 10 ನಿಮಗೆ ಬೇಕಾದಷ್ಟು ಆಹಾರ ಇರುವುದು. ಆಗ ನೀವು ನಿಮಗೆ ಉತ್ತಮ ದೇಶವನ್ನು ಕೊಟ್ಟಿರುವ ಯೆಹೋವ ದೇವರನ್ನು ಸ್ತುತಿಸುವಿರಿ.

ಯೆಹೋವನು ಮಾಡಿದ್ದನ್ನು ಮರೆಯಬೇಡಿರಿ

11 “ನೀವು ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡದಂತೆ ಎಚ್ಚರವಾಗಿರಿ. ನಾನು ಕೊಡುವ ವಿಧಿನಿಯಮಗಳಿಗೆ ವಿಧೇಯರಾಗಿರಿ. 12 ಆಗ ನಿಮಗೆ ಸಮೃದ್ಧಿಯಾಗಿ ಆಹಾರವಿರುವುದು. ನೀವು ಒಳ್ಳೆಯ ಮನೆಗಳನ್ನು ಕಟ್ಟಿಕೊಂಡು ವಾಸಿಸುವಿರಿ. 13 ನಿಮ್ಮ ಹಿಂಡು ವೃದ್ಧಿಯಾಗುವುದು. ನಿಮಗೆ ಬೆಳ್ಳಿಬಂಗಾರಗಳು ಹೇರಳವಾಗಿ ದೊರಕುವವು ಮತ್ತು ನೀವು ಪ್ರತಿಯೊಂದು ವಿಷಯದಲ್ಲೂ ಸಮೃದ್ಧಿಯನ್ನು ಕಾಣುವಿರಿ. 14 ಆಗ ನೀವು ಹೆಮ್ಮೆಯಿಂದ ಸೊಕ್ಕಿನ ಕಣ್ಣುಳ್ಳವರಾಗಿರಬೇಡಿ. ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಡಿರಿ. ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಆತನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು. 15 ಆತನು ನಿಮ್ಮನ್ನು ಭಯಂಕರವಾದ ಆ ಅಡವಿಯಲ್ಲಿ ಮೊದಲು ನಡೆಸಿದನು. ಅಲ್ಲಿ ವಿಷದ ಹಾವುಗಳು, ಚೇಳುಗಳು ಇದ್ದವು. ನೆಲವು ಕಾದಿದ್ದು ಎಲ್ಲಿಯೂ ನೀರು ಸಿಗುತ್ತಿರಲಿಲ್ಲ. ಆದರೆ ನಿಮ್ಮ ದೇವರಾದ ಯೆಹೋವನು ಬಂಡೆಯೊಳಗಿಂದ ನೀರನ್ನು ನಿಮಗೆ ಒದಗಿಸಿದನು. 16 ನಿಮ್ಮ ಪೂರ್ವಿಕರು ನೋಡಿಲ್ಲದ ಮನ್ನವನ್ನು ಯೆಹೋವನು ನಿಮಗೆ ಮರುಭೂಮಿಯಲ್ಲಿ ತಿನ್ನಲು ಕೊಟ್ಟನು. ಯೆಹೋವನು ನಿಮ್ಮನ್ನು ಪರೀಕ್ಷಿಸಿದನು. ನೀವು ಒಳ್ಳೆಯ ಫಲಭರಿತವಾದ ಜೀವಿತವನ್ನು ನಡೆಸಬೇಕೆಂದು ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿದನು. 17 ‘ಇವೆಲ್ಲಾ ನಾವೇ ಸಂಪಾದಿಸಿದ್ದು, ನಮ್ಮ ಶಕ್ತಿಸಾಮರ್ಥ್ಯಗಳಿಂದ ಇವುಗಳನ್ನು ನಾವು ಪಡೆದೆವು’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿ. 18 ನಿಮ್ಮ ದೇವರಾದ ಯೆಹೋವನನ್ನು ಜ್ಞಾಪಕಮಾಡಿಕೊಳ್ಳಿ. ಇವೆಲ್ಲಾ ಸಂಪಾದಿಸುವುದಕ್ಕೆ ಆತನೇ ನಿಮಗೆ ಶಕ್ತಿ ಕೊಟ್ಟನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯೆಹೋವನು ನಿಮಗೆ ಹೀಗೆ ಮಾಡುವುದರ ಉದ್ದೇಶವೇನಾಗಿತ್ತು? ಆತನು ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು.

19 “ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಡಿ. ಅನ್ಯದೇವರುಗಳನ್ನು ಅನುಸರಿಸಬೇಡಿ. ಅವುಗಳನ್ನು ಪೂಜಿಸಬೇಡಿ; ಅವುಗಳ ಸೇವೆ ಮಾಡಬೇಡಿ. ಇಲ್ಲವಾದರೆ ನೀವು ಖಂಡಿತವಾಗಿ ನಾಶವಾಗುವಿರಿ. 20 ಯೆಹೋವನು ನಿಮಗೋಸ್ಕರ ಇತರ ಜನಾಂಗಗಳನ್ನು ನಾಶಮಾಡುತ್ತಾನೆ. ನಿಮ್ಮ ದೇವರಾದ ಯೆಹೋವನಿಗೆ ನೀವು ಕಿವಿಗೊಡದೆ ಅನ್ಯದೇವರುಗಳನ್ನು ಅನುಸರಿಸುವುದಾದರೆ ನೀವೂ ಅವರಂತೆ ನಾಶವಾಗುವಿರಿ.

ಯೆಹೋವನು ಇಸ್ರೇಲರೊಂದಿಗಿರುವನು

“ಇಸ್ರೇಲ್ ಜನರೇ, ಕೇಳಿರಿ. ಈ ದಿನ ನೀವು ಜೋರ್ಡನ್ ನದಿಯನ್ನು ದಾಟಿ ಆ ದೇಶವನ್ನು ಪ್ರವೇಶಿಸಿ ನಿಮಗಿಂತ ಬಲಿಷ್ಠವಾದ ಜನಾಂಗಗಳನ್ನು ಹೊಡೆದೋಡಿಸುವಿರಿ. ಅವರ ಪಟ್ಟಣಗಳು ದೊಡ್ಡದಾಗಿವೆ; ಅದರ ಗೋಡೆಗಳು ಆಕಾಶದಷ್ಟು ಎತ್ತರವಾಗಿವೆ; ಅಲ್ಲಿಯ ಜನರು ಬಲಿಷ್ಠರಾಗಿದ್ದಾರೆ. ಅನಾಕ್ಯರು ಎತ್ತರವಾಗಿ ಬೆಳೆದವರು ಎಂದು ಆ ದೇಶಕ್ಕೆ ಹೋದ ಗೂಢಚಾರರು ನಿಮಗೆ ತಿಳಿಸಿದ್ದು ನೆನಪಿಲ್ಲವೇ? ‘ಅನಾಕ್ಯರ ಮುಂದೆ ಯಾರೂ ನಿಲ್ಲಲಾರರು’ ಎಂದು ಅವರು ಹೇಳಿದರು. ಆದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ನದಿಯನ್ನು ದಾಟುತ್ತಾನೆಂಬುದು ನಿಮಗೆ ನಿಶ್ಚಯವಾಗಿ ತಿಳಿದಿರಲಿ. ಆತನು ದಹಿಸುವ ಬೆಂಕಿಯಂತಿದ್ದಾನೆ. ಆತನು ಆ ಜನಾಂಗಗಳನ್ನು ಬೇಗನೆ ನಾಶಪಡಿಸುವನು; ನಿಮ್ಮ ಎದುರಿನಲ್ಲಿ ಅವರು ಬಿದ್ದುಹೋಗುವಂತೆ ಮಾಡುವನು. ಇದು ನೆರವೇರುವುದಾಗಿ ಯೆಹೋವನೇ ನಿಮಗೆ ವಾಗ್ದಾನ ಮಾಡಿದ್ದಾನೆ.

“ಅಲ್ಲಿಯ ಜನರನ್ನು ದೇವರಾದ ಯೆಹೋವನು ಹೊಡೆದೋಡಿಸುವನು. ಆದರೆ ನೀವು ನಿಮ್ಮ ಮನಸ್ಸಿನಲ್ಲಿ, ‘ನಾವು ನೀತಿವಂತರಾಗಿದುದ್ದರಿಂದ ಮತ್ತು ಒಳ್ಳೆಯವರಾಗಿದ್ದುದರಿಂದ ಆತನು ನಮ್ಮನ್ನು ಈ ಒಳ್ಳೆಯ ದೇಶಕ್ಕೆ ತಂದನು’ ಎಂದು ನೆನಸಿಕೊಳ್ಳಬೇಡಿ. ಅದು ಕಾರಣವಲ್ಲ. ಅಲ್ಲಿಯ ಜನರು ಬಹು ಕೆಟ್ಟವರಾಗಿದ್ದ ಕಾರಣ ಯೆಹೋವನು ಅವರನ್ನು ಹೊರಡಿಸಿದನು. ನೀವು ಉತ್ತಮ ರೀತಿಯಲ್ಲಿ ಜೀವಿಸುವಿರಿ ಎಂದು ದೇವರು ನಿಮಗೆ ಆ ದೇಶವನ್ನು ಕೊಡುವುದಿಲ್ಲ. ಅವರು ಕೆಟ್ಟದ್ದಾಗಿ ಜೀವಿಸುತ್ತಿರುವುದರಿಂದ ದೇವರು ಅವರನ್ನು ಹೊರಡಿಸಿ ನೀವು ಆ ದೇಶವನ್ನು ಅನುಭವಿಸುವಂತೆ ಮಾಡಿದನು; ಆತನು ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಕೊಟ್ಟಿರುವ ವಾಗ್ದಾನಗಳನ್ನು ನೆರವೇರಿಸುವುದಕ್ಕಾಗಿ ನಿಮಗೆ ಆ ದೇಶವನ್ನು ಕೊಡುವನು. ನಿಮ್ಮ ದೇವರಾದ ಯೆಹೋವನು ಆ ಉತ್ತಮವಾದ ದೇಶವನ್ನು ನಿಮಗೆ ವಾಸಿಸಲು ಕೊಡುವನು. ನೀವು ಒಳ್ಳೆಯವರು ಎಂಬುದಾಗಿ ಅಲ್ಲ. ನಿಜವಾಗಿ ಹೇಳಬೇಕಾದರೆ ನೀವು ಹಠಮಾರಿಗಳು.

ಯೆಹೋವನ ಕೋಪವನ್ನು ನೆನಪಿಗೆ ತಂದುಕೊಳ್ಳಿರಿ

“ನೀವು ಅರಣ್ಯದಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಿಮ್ಮ ದೇವರಾದ ಯೆಹೋವನನ್ನು ನೀವು ಸಿಟ್ಟಿಗೆಬ್ಬಿಸಿದ್ದನ್ನು ಮರೆಯಬೇಡಿರಿ. ನೀವು ಈಜಿಪ್ಟ್ ದೇಶವನ್ನು ಬಿಟ್ಟುಬಂದಂದಿನಿಂದ ಈ ದಿನದ ತನಕವೂ ಆತನ ಮಾತನ್ನು ಅನುಸರಿಸಲು ನಿರಾಕರಿಸಿರುವಿರಿ. ನೀವು ಹೋರೇಬ್ ಎಂಬ ಸೀನಾಯ್ ಬೆಟ್ಟದಲ್ಲಿ ಯೆಹೋವನನ್ನು ಬಹಳ ಸಿಟ್ಟಿಗೆಬ್ಬಿಸಿದ್ದೀರಿ. ಯೆಹೋವನು ನಿಮ್ಮನ್ನು ನಾಶಪಡಿಸುವಷ್ಟು ಕೋಪಗೊಂಡಿದ್ದನು. ನಾನು ಕಲ್ಲಿನ ಹಲಗೆಗಳನ್ನು ತೆಗೆದುಕೊಂಡು ಬರಲು ಬೆಟ್ಟದ ಮೇಲೇರಿದ್ದೆನು. ಯೆಹೋವ ದೇವರು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆ ಆ ಹಲಗೆಯ ಮೇಲೆ ಬರೆಯಲ್ಪಟ್ಟಿತ್ತು. ನಾನು ಆ ಬೆಟ್ಟದ ಮೇಲೆ ನಲವತ್ತು ದಿವಸ ಹಗಲಿರುಳು ಕಳೆದೆನು. ನಾನು ಅನ್ನವನ್ನಾಗಲಿ ನೀರನ್ನಾಗಲಿ ತೆಗೆದುಕೊಳ್ಳಲಿಲ್ಲ. 10 ಯೆಹೋವನು ತನ್ನ ಬೆರಳಿನಿಂದ ಕಲ್ಲಿನ ಹಲಗೆಗಳ ಮೇಲೆ ಆಜ್ಞೆಗಳನ್ನು ಬರೆದು ನನಗೆ ಕೊಟ್ಟನು. ನೀವು ಸೀನಾಯ್ ಬೆಟ್ಟದ ಬಳಿ ಸಮೂಹವಾಗಿ ಸೇರಿಬಂದಿದ್ದಾಗ ಆತನು ಬೆಂಕಿಯ ಜ್ವಾಲೆಯೊಳಗಿಂದ ನಿಮಗೆ ತಿಳಿಸಿದ ಪ್ರತಿಯೊಂದನ್ನೂ ಬರೆದಿದ್ದನು.

11 “ಹಾಗೆ ನಲವತ್ತು ದಿನಗಳ ಅಂತ್ಯದಲ್ಲಿ ಯೆಹೋವನು ಒಡಂಬಡಿಕೆಯನ್ನು ಬರೆದಿದ್ದ ಆ ಎರಡು ಕಲ್ಲಿನ ಹಲಗೆಗಳನ್ನು ನನಗೆ ಕೊಟ್ಟನು. 12 ಆಗ ಆತನು ನನಗೆ, ‘ಎದ್ದು ಬೇಗನೆ ಕೆಳಗಿಳಿ. ಯಾಕೆಂದರೆ ನೀನು ಈಜಿಪ್ಟಿನಿಂದ ಬಿಡಿಸಿತಂದ ಜನರು ತಮ್ಮನ್ನು ತಾವೇ ಕೆಡಿಸಿಕೊಂಡಿದ್ದಾರೆ. ಇಷ್ಟು ಬೇಗನೆ ಅವರು ನನ್ನ ಆಜ್ಞೆಗಳನ್ನು ಮೀರಿದ್ದಾರೆ. ಅವರು ಬಂಗಾರವನ್ನು ಕರಗಿಸಿ ತಮಗಾಗಿ ವಿಗ್ರಹವನ್ನು ಮಾಡಿಕೊಂಡಿದ್ದಾರೆ’ ಎಂದು ಹೇಳಿದನು.

13 “ಅಲ್ಲದೆ ಯೆಹೋವನು ನನಗೆ, ‘ನಾನು ಈ ಜನರನ್ನು ಗಮನಿಸುತ್ತಿದ್ದೇನೆ. ಇವರು ತುಂಬಾ ಹಠಮಾರಿಗಳು. 14 ಇವರನ್ನು ನಾನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಅವರ ಹೆಸರುಗಳನ್ನು ಯಾರೂ ನೆನಪಿನಲ್ಲಿಟ್ಟುಕೊಳ್ಳದಂತೆ ಮಾಡುತ್ತೇನೆ. ಆಮೇಲೆ ನಾನು ನಿನ್ನಿಂದ ಬಲಿಷ್ಠವಾದ ಮಹಾಜನಾಂಗವನ್ನು ನಿರ್ಮಿಸುತ್ತೇನೆ’ ಎಂದು ಹೇಳಿದನು.

ಬಂಗಾರದ ಬಸವ

15 “ನಾನು ಕೂಡಲೇ ಬೆಟ್ಟದಿಂದ ಹಿಂತಿರುಗಿ ಬಂದೆನು. ಅದು ಬೆಂಕಿಯಿಂದ ಸುಡುತ್ತಲಿತ್ತು ಮತ್ತು ಒಡಂಬಡಿಕೆಯ ಕಲ್ಲಿನ ಹಲಗೆಗಳು ನನ್ನ ಬಳಿಯಲ್ಲಿ ಇದ್ದವು. 16 ನಾನು ಕೆಳಗೆ ನೋಡಿದಾಗ ಬಂಗಾರದಿಂದ ಬಸವನನ್ನು ಮಾಡಿಕೊಂಡು ಯೆಹೋವನ ವಿರುದ್ಧವಾಗಿ ಪಾಪ ಮಾಡಿದ್ದಿರಿ. ಯೆಹೋವನ ಆಜ್ಞೆಯನ್ನು ಅಷ್ಟು ಬೇಗನೇ ನೀವು ಉಲ್ಲಂಘಿಸಿದ್ದಿರಿ. 17 ನನ್ನ ಬಳಿಯಲ್ಲಿದ್ದ ಆ ಕಲ್ಲಿನ ಹಲಗೆಗಳನ್ನು ನಾನು ನೆಲಕ್ಕೆ ಅಪ್ಪಳಿಸಿದೆನು. ನಿಮ್ಮ ಕಣ್ಣೆದುರಿನಲ್ಲಿ ಅವುಗಳನ್ನು ತುಂಡುತುಂಡಾಗಿ ಮಾಡಿದೆನು. 18 ಆಮೇಲೆ ನಾನು ನಲವತ್ತು ದಿನ ಹಗಲಿರುಳು ಯೆಹೋವನ ಮುಂದೆ ಬೋರಲ ಬಿದ್ದಿದ್ದೆನು. ನಾನು ಊಟ ಮಾಡಲಿಲ್ಲ, ನೀರನ್ನು ಕುಡಿಯಲಿಲ್ಲ ಯಾಕೆಂದರೆ ನೀವು ಪಾಪಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ ಆತನು ಕೋಪಗೊಂಡಿದ್ದನು. 19 ಯೆಹೋವನ ಭಯಂಕರ ಕೋಪಕ್ಕೆ ನಾನು ಹೆದರಿದ್ದೆನು. ನಿಮ್ಮನ್ನು ನಾಶಮಾಡುವಷ್ಟರ ತನಕ ಆತನು ಕೋಪಗೊಂಡಿದ್ದನು. ಆದರೆ ಆತನು ನನ್ನ ಬಿನ್ನಹಗಳನ್ನು ಲಾಲಿಸಿದನು. 20 ಯೆಹೋವನು ಆರೋನನನ್ನು ನಾಶಪಡಿಸುವಷ್ಟು ಕೋಪೋದ್ರಿಕ್ತನಾಗಿದ್ದನು. ನಾನು ಅವನಿಗಾಗಿ ಪ್ರಾರ್ಥಿಸಿದೆನು. 21 ನೀವು ಮಾಡಿದ ಬಂಗಾರದ ಬಸವನನ್ನು ತೆಗೆದುಕೊಂಡು ಚೂರುಚೂರು ಮಾಡಿ, ಬೆಂಕಿಯಲ್ಲಿ ಸುಟ್ಟುಬಿಟ್ಟೆನು. ಮತ್ತೆ ಅದನ್ನು ಒಡೆದು ಧೂಳನ್ನಾಗಿ ಮಾಡಿ ಆ ಧೂಳನ್ನು ಬೆಟ್ಟದಿಂದ ಹರಿಯುತ್ತಿದ್ದ ನದಿಯಲ್ಲಿ ಬಿಸಾಡಿಬಿಟ್ಟೆನು.

ಇಸ್ರೇಲರನ್ನು ಮನ್ನಿಸಲು ದೇವರಿಗೆ ಮೋಶೆಯ ಬಿನ್ನಹ

22 “ಅದೇ ಪ್ರಕಾರ ತಬೇರಾ, ಮಸ್ಸಾ ಮತ್ತು ಕಿಬ್ರೋತ್‌ಹತಾವಾಗಳಲ್ಲಿಯೂ ನೀವು ಯೆಹೋವನನ್ನು ಸಿಟ್ಟಿಗೆಬ್ಬಿಸಿದ್ದಿರಿ. 23 ಕಾದೇಶ್‌ಬರ್ನೇಯದಿಂದ ಹೊರಡಲು ಆತನು ನಿಮಗೆ ಹೇಳಿದಾಗ ನೀವು ಆತನಿಗೆ ವಿಧೇಯರಾಗಲಿಲ್ಲ. ಆತನು ನಿಮಗೆ, ‘ನೀವು ಬೆಟ್ಟಪ್ರದೇಶವನ್ನು ಹತ್ತಿಹೋಗಿ ನಾನು ನಿಮಗೆ ಕೊಡುವ ದೇಶವನ್ನು ವಶಪಡಿಸಿಕೊಳ್ಳಿ’ ಎಂದು ಹೇಳಿದಾಗ ನಿಮ್ಮ ದೇವರಾದ ಯೆಹೋವನಿಗೆ ವಿಧೇಯರಾಗಲಿಲ್ಲ. ನೀವು ಆತನಲ್ಲಿ ಭರವಸೆ ಇಡಲಿಲ್ಲ. ನೀವು ಆತನ ಆಜ್ಞೆಗೆ ಕಿವಿಗೊಡಲಿಲ್ಲ. 24 ನಾನು ನಿಮ್ಮನ್ನು ತಿಳಿದಿರುವ ಕಾಲದಿಂದ ನೀವು ಯೆಹೋವನಿಗೆ ಅವಿಧೇಯರಾಗಿಯೇ ಇದ್ದೀರಿ.

25 “ನಾನು ಯೆಹೋವನ ಮುಂದೆ ನಲವತ್ತು ದಿನ ಹಗಲಿರುಳು ಬೋರಲಬಿದ್ದು ಆತನು ನಾಶಮಾಡಬೇಕೆಂದಿದ್ದ ನಿಮಗಾಗಿ ಪ್ರಾರ್ಥಿಸಿದೆನು. 26 ‘ನನ್ನ ಒಡೆಯನೇ, ಯೆಹೋವನೇ, ನಿನ್ನ ಜನರನ್ನು ನೀನು ನಾಶಮಾಡಬೇಡ. ಅವರು ನಿನ್ನ ಜನಾಂಗ. ನಿನ್ನ ಪರಾಕ್ರಮದಿಂದ ನೀನು ಈಜಿಪ್ಟಿನಿಂದ ಅವರನ್ನು ಬಿಡಿಸಿ ಹೊರತಂದಿರುವೆ. 27 ಯೆಹೋವನೇ, ನೀನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಮಾಡಿದ ವಾಗ್ದಾನವನ್ನು ನಿನ್ನ ನೆನಪಿಗೆ ತಂದುಕೋ. ಇವರು ಎಷ್ಟು ಹಠಮಾರಿಗಳೆಂಬುದನ್ನು ಮರೆತುಬಿಡು. ಅವರ ಪಾಪಮಾರ್ಗವನ್ನಾಗಲಿ ಪಾಪಗಳನ್ನಾಗಲಿ ನೋಡಬೇಡ. 28 ನೀನು ಇವರಿಗೆ ಶಿಕ್ಷೆಕೊಟ್ಟರೆ ಈಜಿಪ್ಟಿನವರು, “ದೇವರು ತನ್ನ ಜನರನ್ನು ತಾನು ವಾಗ್ದಾನ ಮಾಡಿದ ದೇಶಕ್ಕೆ ನಡೆಸಲು ಅಸಮರ್ಥನಾದನು. ಆತನು ಅವರನ್ನು ದ್ವೇಷಿಸುತ್ತಾನೆ; ಆದ್ದರಿಂದ ಅವರನ್ನು ಮರುಭೂಮಿಯಲ್ಲಿ ಹತಮಾಡಲು ಕೊಂಡೊಯ್ದಿದ್ದಾನೆ” ಎಂದು ಹೇಳುವರು. 29 ಆದರೆ ಅವರು ನಿನ್ನ ಜನರಾಗಿದ್ದಾರೆ. ಅವರು ನಿನಗೆ ಸಂಬಂಧಪಟ್ಟವರಾಗಿದ್ದಾರೆ; ನಿನ್ನ ಬಲಪರಾಕ್ರಮದಿಂದ ಅವರನ್ನು ದಾಸತ್ವದಿಂದ ಬಿಡುಗಡೆ ಮಾಡಿರುವೆ.’

ಹೊಸ ಕಲ್ಲಿನ ಹಲಗೆಗಳು

10 “ಆಗ ಯೆಹೋವನು ನನಗೆ, ‘ಮೊದಲಿನ ಎರಡು ಕಲ್ಲಿನ ಹಲಗೆಗಳಂತೆಯೇ ಎರಡು ಕಲ್ಲಿನ ಹಲಗೆಗಳನ್ನು ಮಾಡು. ಆಮೇಲೆ ಬೆಟ್ಟದ ಮೇಲೆ ನನ್ನ ಬಳಿಗೆ ಬಾ. ಅಲ್ಲದೆ ಒಂದು ಮರದ ಪೆಟ್ಟಿಗೆಯನ್ನೂ ತಯಾರು ಮಾಡು. ನೀನು ಒಡೆದುಹಾಕಿದ ಮೊದಲಿನ ಕಲ್ಲು ಹಲಗೆಗಳ ಮೇಲೆ ಯಾವ ಪದಗಳನ್ನು ಬರೆದಿದ್ದೆನೋ ಅದೇ ಪದಗಳನ್ನು ಈ ಕಲ್ಲಿನ ಹಲಗೆಗಳ ಮೇಲೆ ಬರೆಯುತ್ತೇನೆ. ಈ ಹೊಸ ಕಲ್ಲಿನ ಹಲಗೆಗಳನ್ನು ನೀನು ಮರದ ಪೆಟ್ಟಿಗೆಯಲ್ಲಿಡಬೇಕು’ ಎಂದು ಹೇಳಿದನು.

“ನಾನು ಜಾಲೀಮರದಿಂದ ಪೆಟ್ಟಿಗೆಯನ್ನು ಮಾಡಿದೆನು. ಎರಡು ಕಲ್ಲಿನ ಹಲಗೆಗಳನ್ನು ತಯಾರಿಸಿ ಬೆಟ್ಟವನ್ನೇರಿದೆನು. ಆಗ ಯೆಹೋವನು ಮುಂಚಿನಂತೆಯೇ ಇದರಲ್ಲೂ ದಶಾಜ್ಞೆಗಳನ್ನು ಬರೆದು ನನಗೆ ಕೊಟ್ಟನು. ನೀವು ಬೆಟ್ಟದ ಬಳಿ ಒಟ್ಟಾಗಿ ಸೇರಿ ಬಂದಿದ್ದಾಗ ಆತನು ಬೆಂಕಿಯೊಳಗಿಂದ ಹೇಳಿದ್ದ ದಶಾಜ್ಞೆಗಳೇ ಇವು. ನಾನು ಬೆಟ್ಟದಿಂದಿಳಿದು ಆ ಕಲ್ಲಿನ ಹಲಗೆಗಳನ್ನು ಯೆಹೋವನ ಅಪ್ಪಣೆಯಂತೆ ನಾನು ಮಾಡಿದ ಪೆಟ್ಟಿಗೆಯೊಳಗಿಟ್ಟೆನು. ಆ ಕಲ್ಲಿನ ಹಲಗೆಗಳು ಈಗಲೂ ಇವೆ.”

(ಇಸ್ರೇಲರು ಯಾಕಾನ್ಯರ ಬಾವಿಗಳ ಬಳಿಯಿಂದ ಪ್ರಯಾಣ ಮಾಡಿ ಮೋಸೇರಕ್ಕೆ ಬಂದರು. ಆರೋನನು ಸತ್ತುಹೋದದ್ದು ಮತ್ತು ಅವನ ಶವವನ್ನು ಹೂಳಿಟ್ಟದ್ದು ಅಲ್ಲಿಯೇ. ಆರೋನನ ಬದಲಿಗೆ ಅವನ ಮಗನಾದ ಎಲ್ಲಾಜಾರನು ಯಾಜಕನಾದನು. ಆಮೇಲೆ ಇಸ್ರೇಲ್ ಜನರು ಮೋಸೇರದಿಂದ ಗುದ್ಗೋದ ಎಂಬ ಸ್ಥಳಕ್ಕೆ ಬಂದರು. ಆಮೇಲೆ ಗುದ್ಗೋದದಿಂದ ಯೊಟ್ಬಾತ ಎಂಬ ನದಿಗಳುಳ್ಳ ಸ್ಥಳದಲ್ಲಿ ಪಾಳೆಯ ಮಾಡಿದರು. ಆ ಸಮಯದಲ್ಲಿ ಯೆಹೋವನು ಲೇವಿಕುಲದವರನ್ನು ಒಂದು ವಿಶೇಷವಾದ ಕೆಲಸಕ್ಕಾಗಿ ಬೇರೆ ಕುಲಗಳವರಿಂದ ಪ್ರತ್ಯೇಕಿಸಿದನು. ಅವರಿಗೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಎತ್ತಿಕೊಂಡು ಹೋಗುವ ಕೆಲಸ ಕೊಡಲ್ಪಟ್ಟಿತು. ಯೆಹೋವನ ಸನ್ನಿಧಾನದಲ್ಲಿ ಅವರು ಯಾಜಕರ ಕೆಲಸವನ್ನು ಮಾಡಿದರು. ಅಲ್ಲದೆ ಯೆಹೋವನ ಜನರಿಗೆ ದೇವರ ಆಶೀರ್ವಾದ ವಚನಗಳನ್ನು ಹೇಳುವ ಕೆಲಸವನ್ನು ಅವರು ಮಾಡಿದರು. ಹೀಗಿದ್ದುದರಿಂದ ಅವರಿಗೆ ತಮ್ಮ ಸಹೋದರರ ಜೊತೆಯಲ್ಲಿ ವಾಗ್ದಾನದ ದೇಶದೊಳಗೆ ಸ್ವಾಸ್ತ್ಯವು ದೊರಕಲಿಲ್ಲ. ಅವರ ಸ್ವಾಸ್ತ್ಯವು ಯೆಹೋವನೇ ಆಗಿದ್ದನು. ಇದು ದೇವರಾದ ಯೆಹೋವನ ವಾಗ್ದಾನ.)

10 “ಹಿಂದಿನ ಪ್ರಕಾರ ಈ ಸಾರಿಯೂ ನಾನು ನಲವತ್ತು ದಿನ ಹಗಲಿರುಳು ಬೆಟ್ಟದ ಮೇಲಿದ್ದೆನು. ನನ್ನ ಮಾತುಗಳನ್ನು ಯೆಹೋವನು ಆಲೈಸಿದನು; ನಿಮ್ಮನ್ನು ನಾಶಮಾಡುವುದಿಲ್ಲವೆಂದು ಪ್ರಮಾಣ ಮಾಡಿದನು. 11 ಯೆಹೋವನು ನನಗೆ, ‘ನನ್ನ ಜನರನ್ನು ಪ್ರಯಾಣದಲ್ಲಿ ಮುನ್ನಡೆಸು; ನಾನು ಅವರ ಪೂರ್ವಿಕರಿಗೆ ವಾಗ್ದಾನ ಮಾಡಿದ ಆ ದೇಶದಲ್ಲಿ ಅವರು ನೆಲೆಸಬೇಕು’ ಎಂದು ಹೇಳಿದನು.

ಯೆಹೋವನು ಅಪೇಕ್ಷಿಸುವುದೇನೆಂದರೆ

12 “ಇಸ್ರೇಲ್ ಜನರೇ, ಕೇಳಿರಿ! ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ನಿಜವಾಗಿಯೂ ಅಪೇಕ್ಷಿಸುವುದೇನು? ನೀವು ಆತನನ್ನು ಗೌರವಿಸಬೇಕೆಂದೂ ಆತನ ಆಜ್ಞಾವಿಧಿಗಳಿಗೆ ವಿಧೇಯರಾಗಬೇಕೆಂದೂ ಅಪೇಕ್ಷಿಸುತ್ತಾನೆ. ನೀವು ಆತನನ್ನು ಪ್ರೀತಿಸಿ, ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಆತನ ಸೇವೆ ಮಾಡಬೇಕೆಂದು ಆತನು ಅಪೇಕ್ಷಿಸುತ್ತಾನೆ. 13 ಆದ್ದರಿಂದ ನಾನು ನಿಮಗೆ ಕೊಡುವ ಆತನ ಕಟ್ಟಳೆ, ವಿಧಿನಿಯಮಗಳಿಗೆ ವಿಧೇಯರಾಗಿರಿ. ಇವೆಲ್ಲವೂ ನಿಮ್ಮ ಒಳ್ಳೆಯದಕ್ಕಾಗಿಯೇ ಇರುತ್ತದೆ.

14 “ಪ್ರತಿಯೊಂದೂ ಯೆಹೋವನದೇ, ಉನ್ನತವಾದ ಆಕಾಶವೂ ಯೆಹೋವನದೇ. ಈ ಭೂಮಿಯೂ, ಅದರಲ್ಲಿರುವ ಸಮಸ್ತವೂ ದೇವರಿಗೇ ಸೇರಿದ್ದು. 15 ಯೆಹೋವನು ನಿಮ್ಮ ಪೂರ್ವಿಕರನ್ನು ಎಷ್ಟು ಪ್ರೀತಿಮಾಡಿದ್ದನೆಂದರೆ, ಅವರ ಸಂತಾನದವರಾದ ನಿಮ್ಮನ್ನು ತನ್ನ ಜನರನ್ನಾಗಿ ಆರಿಸಿಕೊಳ್ಳುವಷ್ಟು ಪ್ರೀತಿಸಿದನು; ಬೇರೆ ಜನಾಂಗದವರ ಬದಲಾಗಿ ನಿಮ್ಮನ್ನೇ ಆರಿಸಿಕೊಂಡನು. ನೀವು ಇಂದಿಗೂ ಆತನಿಂದ ಆರಿಸಲ್ಪಟ್ಟ ಜನರಾಗಿದ್ದೀರಿ.

16 “ಆದ್ದರಿಂದ ಹಠಮಾರಿಗಳಾಗಬೇಡಿರಿ. ನಿಮ್ಮ ಹೃದಯಗಳನ್ನು ಯೆಹೋವನಿಗೆ ಕೊಡಿರಿ. 17 ಯಾಕೆಂದರೆ ಯೆಹೋವನೇ ನಿಮ್ಮ ದೇವರು. ಆತನು ದೇವರುಗಳ ದೇವರೂ ಪ್ರಭುಗಳ ಪ್ರಭುವೂ ಆಗಿದ್ದಾನೆ. ಆತನು ಮಹಾದೇವರೂ ಆಶ್ಚರ್ಯಕಾರನೂ ಪರಾಕ್ರಮಶಾಲಿಯೂ ಭಯಂಕರನೂ ಆಗಿದ್ದಾನೆ. ಆತನಿಗೆ ಎಲ್ಲಾ ಜನರೂ ಒಂದೇ. ಆತನು ತನ್ನ ತೀರ್ಮಾನವನ್ನು ಬದಲಾಯಿಸಲು ಲಂಚ ಸ್ವೀಕರಿಸುವವನಲ್ಲ. 18 ಅನಾಥಮಕ್ಕಳಿಗೂ ವಿಧವೆಯರಿಗೂ ಆತನು ಸಹಾಯಕನಾಗಿದ್ದಾನೆ. ನಮ್ಮ ದೇಶದಲ್ಲಿರುವ ಪರದೇಶಿಯರನ್ನೂ ಆತನು ಪ್ರೀತಿಸುತ್ತಾನೆ; ಅವರಿಗೆ ಊಟಬಟ್ಟೆಗಳನ್ನು ಒದಗಿಸುತ್ತಾನೆ. 19 ಆದ್ದರಿಂದ ನೀವೂ ಪರದೇಶಿಯರನ್ನು ಪ್ರೀತಿಸಬೇಕು. ನೀವೂ ಸಹ ಈಜಿಪ್ಟ್ ದೇಶದಲ್ಲಿ ಪರದೇಶಿಗಳಾಗಿದ್ದಿರಿ.

20 “ನೀವು ನಿಮ್ಮ ದೇವರಾದ ಯೆಹೋವನನ್ನು ಗೌರವಿಸಿ ಆತನೊಬ್ಬನನ್ನೇ ಆರಾಧಿಸಬೇಕು. ಆತನನ್ನು ಬಿಟ್ಟು ತೊಲಗದಿರಿ. ವಾಗ್ದಾನ, ಒಡಂಬಡಿಕೆಗಳನ್ನು ಮಾಡುವಾಗ ಆತನ ಹೆಸರಿನಲ್ಲಿಯೇ ಮಾಡಿರಿ. 21 ಯೆಹೋವನನ್ನು ಮಾತ್ರ ನೀವು ಸ್ತುತಿಸಬೇಕು. ಆತನೇ ನಿಮ್ಮ ದೇವರು. ಆತನು ನಿಮಗಾಗಿ ಭಯಂಕರವಾದ ಮಹತ್ಕಾರ್ಯಗಳನ್ನು ಮಾಡಿದ್ದಾನೆ. ಅವುಗಳನ್ನು ನೀವು ಕಣ್ಣಾರೆ ಕಂಡಿದ್ದೀರಿ. 22 ನಿಮ್ಮ ಪೂರ್ವಿಕರು ಈಜಿಪ್ಟಿಗೆ ಹೋದಾಗ ಅವರಲ್ಲಿ ಕೇವಲ ಎಪ್ಪತ್ತು ಮಂದಿ ಮಾತ್ರ ಇದ್ದರು. ಆದರೆ ನಿಮ್ಮ ದೇವರಾದ ಯೆಹೋವನು ಆಕಾಶದಲ್ಲಿರುವ ನಕ್ಷತ್ರಗಳಂತೆ ನಿಮ್ಮನ್ನು ಅನೇಕಾನೇಕ ಜನರನ್ನಾಗಿ ಮಾಡಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International