Beginning
ದಶಾಜ್ಞೆಗಳು
5 ಇಸ್ರೇಲ್ ಸಮೂಹದವರನ್ನೆಲ್ಲಾ ಮೋಶೆ ಒಟ್ಟಾಗಿ ಸೇರಿಸಿ ಅವರಿಗೆ ಹೇಳಿದ್ದೇನೆಂದರೆ: “ಇಸ್ರೇಲ್ ಜನರೇ, ನಾನು ಈ ಹೊತ್ತು ಹೇಳುವ ಕಟ್ಟಳೆಗಳಿಗೆ ಕಿವಿಗೊಡಿರಿ. ಇವುಗಳನ್ನು ಕಲಿತುಕೊಂಡು ಪಾಲಿಸುವವರಾಗಿರಿ. 2 ಹೋರೇಬ್ ಎಂಬ ಸೀನಾಯಿ ಪರ್ವತದಲ್ಲಿ ಯೆಹೋವ ದೇವರು ನಮ್ಮೊಂದಿಗೆ ಒಡಂಬಡಿಕೆಯನ್ನು ಮಾಡಿರುತ್ತಾನೆ. 3 ಯೆಹೋವನು ನಮ್ಮ ಪೂರ್ವಿಕರೊಂದಿಗೆ ಒಡಂಬಡಿಕೆ ಮಾಡದೆ ಈಗ ಇಲ್ಲಿ ಜೀವಂತರಾಗಿರುವ ನಮ್ಮೊಂದಿಗೆ ಮಾಡಿರುತ್ತಾನೆ. 4 ಆ ಪರ್ವತದಲ್ಲಿ ಯೆಹೋವನು ನಿಮ್ಮೊಂದಿಗೆ ಮುಖಾಮುಖಿಯಾಗಿ ಬೆಂಕಿಯೊಳಗಿಂದ ನಿಮ್ಮೊಂದಿಗೆ ಮಾತಾಡಿರುತ್ತಾನೆ. 5 ಆದರೆ ನೀವು ಬೆಂಕಿಗೆ ಭಯಪಟ್ಟಿದ್ದರಿಂದ ಬೆಟ್ಟವನ್ನು ಏರಲಿಲ್ಲ. ಆಗ ನಾನು ನಿಮಗೂ ಯೆಹೋವನಿಗೂ ಮಧ್ಯದಲ್ಲಿದ್ದುಕೊಂಡು ಯೆಹೋವನು ಹೇಳಿದ್ದನ್ನು ತಿಳಿಸಿದೆನು.
6 “ಯೆಹೋವನು ಹೇಳಿದ್ದೇನೆಂದರೆ:
‘ನಾನು ನಿಮ್ಮ ದೇವರಾದ ಯೆಹೋವನು. ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ನಿಮ್ಮನ್ನು ಅಲ್ಲಿಂದ ಬಿಡುಗಡೆ ಮಾಡಿದೆನು. ಆದ್ದರಿಂದ ನೀವು ಈ ಆಜ್ಞೆಗಳಿಗೆ ವಿಧೇಯರಾಗಬೇಕು:
7 ‘ನೀವು ನನ್ನ ಹೊರತು ಬೇರೆ ಯಾವ ದೇವರುಗಳನ್ನೂ ಪೂಜಿಸಬಾರದು.
8 ‘ನೀವು ವಿಗ್ರಹಗಳನ್ನು ಮಾಡಿಕೊಳ್ಳಬಾರದು. ಆಕಾಶದ ಮೇಲಾಗಲಿ ಭೂಮಿಯ ಮೇಲಾಗಲಿ ಭೂಮಿಯ ಕೆಳಗಿರುವ ನೀರಿನಲ್ಲಾಗಲಿ ಯಾವ ವಸ್ತುಗಳ ವಿಗ್ರಹಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಮಾಡಿಕೊಳ್ಳಬಾರದು. 9 ನಾನೇ ನಿಮ್ಮ ದೇವರಾದ ಯೆಹೋವನು. ಆದ್ದರಿಂದ ನೀವು ಯಾವ ವಿಗ್ರಹವನ್ನೂ ಪೂಜಿಸಬಾರದು ಮತ್ತು ಅದರ ಸೇವೆ ಮಾಡಬಾರದು. ನನ್ನ ಜನರು ಇತರ ದೇವರುಗಳನ್ನು ಆರಾಧಿಸುವುದನ್ನು ನಾನು ದ್ವೇಷಿಸುತ್ತೇನೆ. ನನಗೆ ವಿರುದ್ಧವಾಗಿ ಪಾಪ ಮಾಡಿದವರನ್ನು ನಾನು ಶಿಕ್ಷಿಸುತ್ತೇನೆ. ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ನನ್ನ ದಂಡನೆಗೆ ಗುರಿಯಾಗುವರು. 10 ಆದರೆ ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳಿಗೆ ವಿಧೇಯರಾಗುವವರ ಮೇಲೆ ನಾನು ದಯೆ ತೋರಿಸುವೆನು. ಅವರ ಕುಟುಂಬಗಳವರಿಗೆ ಸಾವಿರ ತಲೆಮಾರುಗಳವರೆಗೂ ಕರುಣೆಯನ್ನು ತೋರಿಸುವೆನು.
11 ‘ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತಬಾರದು. ಯಾರಾದರೂ ಅಯೋಗ್ಯ ಕಾರ್ಯಕ್ಕಾಗಿ ನನ್ನ ಹೆಸರನ್ನು ಉಪಯೋಗಿಸಿದರೆ ನಾನು ಅವನನ್ನು ಶಿಕ್ಷಿಸುವೆನು.
12 ‘ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ಸಬ್ಬತ್ ದಿನವನ್ನು ವಿಶೇಷದಿನವೆಂದು ಪರಿಗಣಿಸಬೇಕು. 13 ವಾರದ ಆರು ದಿನಗಳಲ್ಲಿ ಕೆಲಸಮಾಡಿರಿ. 14 ಆದರೆ ಏಳನೆಯ ದಿನವು ವಿಶ್ರಾಂತಿಯ ದಿನವಾಗಿದೆ. ಆ ದಿನ ಯಾರೂ ಕೆಲಸ ಮಾಡಬಾರದು. ನೀವು ಮಾತ್ರವೇ ಅಲ್ಲ, ನಿಮ್ಮ ಮಕ್ಕಳು, ಸೇವಕರು, ನಿಮ್ಮ ಪಶುಗಳು, ನಿಮ್ಮಲ್ಲಿರುವ ಪರದೇಶಿಯರು ಕೆಲಸಮಾಡದೆ ವಿಶ್ರಾಂತಿಯಲ್ಲಿರಬೇಕು. ನಿಮ್ಮ ದೇವರಾದ ಯೆಹೋವನ ಗೌರವಾರ್ಥವಾಗಿ ಸಬ್ಬತ್ ದಿನವು ವಿಶ್ರಾಂತಿಯ ದಿನವಾಗಿದೆ. 15 ನೀವು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಿರೆಂಬುದನ್ನು ಮರೆಯಬೇಡಿ. ನಿಮ್ಮ ದೇವರಾದ ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದಲೇ ನಿಮ್ಮ ದೇವರು ಸಬ್ಬತ್ ದಿನವನ್ನು ಆಚರಿಸಬೇಕೆಂದು ಆಜ್ಞೆ ಮಾಡಿದ್ದು.
16 ‘ನಿಮ್ಮ ತಂದೆತಾಯಿಗಳನ್ನು ನೀವು ಸನ್ಮಾನಿಸಬೇಕು. ಇದು ನಿಮ್ಮ ದೇವರ ಆಜ್ಞೆ. ನೀವು ಇದಕ್ಕೆ ವಿಧೇಯರಾದರೆ ದೇವರು ನಿಮಗೆ ಕೊಡುವ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ ಮತ್ತು ನಿಮಗೆ ಯಾವಾಗಲೂ ಶುಭವಿರುವುದು.
17 ‘ಕೊಲೆ ಮಾಡಬಾರದು.
18 ‘ವ್ಯಭಿಚಾರ ಮಾಡಬಾರದು.
19 ‘ಕದಿಯಬಾರದು.
20 ‘ಇತರರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಬಾರದು.
21 ‘ಇನ್ನೊಬ್ಬನ ಹೆಂಡತಿಯನ್ನು ಆಶಿಸಬಾರದು. ಅವನ ಮನೆಯನ್ನಾಗಲಿ ಹೊಲವನ್ನಾಗಲಿ ಸೇವಕರನ್ನಾಗಲಿ ದನವನ್ನಾಗಲಿ ಕತ್ತೆಯನ್ನಾಗಲಿ ನೀವು ಅಪೇಕ್ಷಿಸಬಾರದು. ಇನ್ನೊಬ್ಬನ ವಸ್ತುಗಳಲ್ಲಿ ಯಾವುದನ್ನೂ ಆಶಿಸಬಾರದು!’”
ಜನರು ದೇವರಿಗೆ ಹೆದರಿದರು
22 ಮೋಶೆಯು ಹೇಳಿದ್ದೇನೆಂದರೆ: “ನೀವೆಲ್ಲಾ ಆ ಬೆಟ್ಟದ ಬಳಿಯಲ್ಲಿರುವಾಗ ದೇವರಾದ ಯೆಹೋವನು ಈ ಆಜ್ಞೆಗಳನ್ನು ನಿಮಗೆ ಕೊಟ್ಟನು. ಬೆಂಕಿ, ಮೋಡ ಮತ್ತು ಕಾರ್ಗತ್ತಲೊಳಗಿನಿಂದ ಯೆಹೋವನು ಗಟ್ಟಿಯಾದ ಸ್ವರದಲ್ಲಿ ಮಾತಾಡಿದ್ದನ್ನು ನೀವು ಕೇಳಿದಿರಿ. ಆತನು ಈ ಆಜ್ಞೆಗಳನ್ನು ಕೊಟ್ಟ ಬಳಿಕ ಬೇರೆ ಏನನ್ನೂ ಹೇಳಲಿಲ್ಲ. ಆತನು ತನ್ನ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದು ನನಗೆ ಕೊಟ್ಟನು.
23 “ಬೆಟ್ಟವು ಬೆಂಕಿಯಿಂದ ಉರಿಯುತ್ತಿರುವಾಗ ಕಾರ್ಗತ್ತಲೆಯಿಂದ ಬಂದ ಸ್ವರವನ್ನು ನೀವು ಕೇಳಿದಿರಿ. ಆಗ ನಿಮ್ಮ ಹಿರಿಯರು, ಕುಲಪ್ರಧಾನರು ನನ್ನ ಬಳಿಗೆ ಬಂದು ಹೇಳಿದ್ದೇನೆಂದರೆ: 24 ‘ನಮ್ಮ ದೇವರಾದ ಯೆಹೋವನು ತನ್ನ ಮಹಿಮೆಯನ್ನೂ ಪ್ರತಾಪವನ್ನೂ ನಮಗೆ ತೋರಿಸಿದ್ದಾನೆ. ಬೆಂಕಿಯೊಳಗಿಂದ ಆತನು ಮಾತನಾಡಿದ್ದನ್ನು ನಾವು ಕೇಳಿದ್ದೇವೆ. ದೇವರು ಒಬ್ಬನೊಡನೆ ಸ್ವತಃ ಮಾತನಾಡಿದ ಬಳಿಕವೂ ಅವನು ಜೀವದಿಂದುಳಿಯಲು ಸಾಧ್ಯ ಎಂಬುದನ್ನು ನಾವು ಕಣ್ಣಾರೆ ಕಂಡೆವು. 25 ಆದರೆ ನಮ್ಮ ದೇವರಾದ ಯೆಹೋವನು ಮಾತನಾಡುವುದನ್ನು ನಾವು ಮತ್ತೆ ಕೇಳಿದರೆ ಖಂಡಿತವಾಗಿ ಸಾಯುವೆವು. ಆ ಭಯಂಕರವಾದ ಬೆಂಕಿಯು ನಮ್ಮನ್ನು ದಹಿಸುವುದು. ನಮಗೆ ಸಾಯಲು ಇಷ್ಟವಿಲ್ಲ. 26 ಜೀವಸ್ವರೂಪನಾದ ದೇವರ ನುಡಿಯನ್ನು ಪ್ರತ್ಯಕ್ಷವಾಗಿ ನಾವು ಕೇಳಿದ ಹಾಗೆ ಬೇರೆ ಯಾರೂ ಕೇಳಿಲ್ಲ. ಆದರೂ ನಾವು ಜೀವದಿಂದಿದ್ದೇವೆ. 27 ಮೋಶೆಯೇ, ನೀನು ಹತ್ತಿರ ಹೋಗಿ ಯೆಹೋವನು ಹೇಳುವುದನ್ನೆಲ್ಲಾ ಕೇಳಿ ನಮಗೆ ಅದನ್ನು ತಿಳಿಸು. ನಾವು ನಿನ್ನ ಮಾತುಗಳನ್ನು ಕೇಳಿ ನೀನು ಹೇಳಿದ ಹಾಗೆ ಮಾಡುವೆವು.’
ಯೆಹೋವನು ಮೋಶೆಯ ಸಂಗಡ ಮಾತನಾಡುತ್ತಾನೆ
28 “ನೀವು ಹೇಳಿದ್ದನ್ನು ಯೆಹೋವನು ಕೇಳಿ ನನ್ನೊಡನೆ ಹೀಗೆಂದನು: ‘ನಿನ್ನ ಜನರು ಹೇಳುವುದನ್ನು ನಾನು ಕೇಳಿದೆನು. ಆ ಮಾತುಗಳೆಲ್ಲಾ ಒಳ್ಳೆಯವೇ. 29 ಆದರೆ ಅವರು ಆಲೋಚಿಸುವ ರೀತಿಯನ್ನು ನಾನು ಬದಲಾಯಿಸಬೇಕಾಗಿದೆ. ಅವರು ನನಗೆ ವಿಧೇಯರಾಗಿ ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸಿ ತಮ್ಮ ಹೃದಯಗಳಿಂದ ನನ್ನನ್ನು ಗೌರವಿಸಬೇಕು. ಆಗ ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿ ಶುಭವಿರುವುದು.
30 “‘ನೀನು ಹೋಗಿ ಜನರಿಗೆ ಅವರವರ ಗುಡಾರಗಳಿಗೆ ಹಿಂದಿರುಗಿ ಹೋಗಲು ತಿಳಿಸು. 31 ಆದರೆ ಮೋಶೆಯೇ, ನೀನು ನನ್ನ ಬಳಿಯಲ್ಲಿಯೇ ನಿಂತಿರು. ನೀನು ಅವರಿಗೆ ಉಪದೇಶಿಸಬೇಕಾಗಿರುವ ಎಲ್ಲಾ ಆಜ್ಞೆಗಳನ್ನು, ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ನಾನು ನಿನಗೆ ತಿಳಿಸುತ್ತೇನೆ. ಅವರ ವಾಸಕ್ಕಾಗಿ ನಾನು ಕೊಡಲಿರುವ ದೇಶದಲ್ಲಿ ಅವರು ಇವುಗಳೆಲ್ಲವನ್ನು ಪರಿಪಾಲಿಸಬೇಕು.’
32 “ಆದ್ದರಿಂದ, ಇಸ್ರೇಲ್ ಜನರೇ, ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಅನುಸರಿಸಲು ನೀವು ಎಚ್ಚರದಿಂದಿರಬೇಕು. ಆತನನ್ನು ಹಿಂಬಾಲಿಸುವುದನ್ನು ನಿಲ್ಲಿಸಬೇಡಿ. 33 ನಿಮ್ಮ ದೇವರಾದ ಯೆಹೋವನು ಹೇಳಿದ ಆಜ್ಞೆಗಳಿಗನುಸಾರವಾಗಿ ನಡೆದರೆ ನೀವು ಜೀವಿಸುವಿರಿ. ಆಗ ನೀವು ಶುಭವನ್ನೇ ಹೊಂದುವಿರಿ. ನಿಮಗೆ ದೊರಕಿದ ಸ್ವಾಸ್ತ್ಯಭೂಮಿಯಲ್ಲಿ ನೀವು ಬಹುಕಾಲ ಬಾಳುವಿರಿ.
ಯಾವಾಗಲೂ ದೇವರನ್ನು ಪ್ರೀತಿಸಿ ಆತನಿಗೆ ವಿಧೇಯರಾಗಿರಿ
6 “ನಿಮ್ಮದೇವರಾದ ಯೆಹೋವನು ನಿಮಗೆ ಉಪದೇಶಿಸಲೆಂದು ನನಗೆ ಕೊಟ್ಟ ಆಜ್ಞೆಗಳು, ಕಟ್ಟಳೆಗಳು ಮತ್ತು ನಿಯಮಗಳು ಇವೇ. ನೀವು ವಾಸಮಾಡಲು ಪ್ರವೇಶಿಸಲಿರುವ ದೇಶದಲ್ಲಿ ಅವುಗಳನ್ನು ಪಾಲಿಸಿರಿ. 2 ನೀವೂ ಮತ್ತು ನಿಮ್ಮ ಸಂತತಿಯವರೂ ಜೀವಿಸುವ ದಿನಗಳಲ್ಲೆಲ್ಲಾ ದೇವರಾದ ಯೆಹೋವನನ್ನು ಗೌರವಿಸಬೇಕು. ನಾನೀಗ ಕೊಡುವ ಎಲ್ಲಾ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸಬೇಕು. ಹಾಗೆ ಮಾಡಿದ್ದಲ್ಲಿ ನೀವು ನೆಲೆಸುವ ಜಾಗದಲ್ಲಿ ನೀವು ಬಹುಕಾಲ ಜೀವಿಸುವಿರಿ. 3 ಇಸ್ರೇಲಿನ ಜನರೇ, ಕಿವಿಗೊಟ್ಟು ಕೇಳಿರಿ. ದೇವರ ಆಜ್ಞೆಗಳಿಗೆ ವಿಧೇಯರಾಗಿರಿ. ಆಗ ನಿಮಗೆ ಎಲ್ಲಾದರಲ್ಲಿ ಶುಭವಾಗುವುದು. ನಿಮಗೆ ಹೆಚ್ಚು ಮಕ್ಕಳಾಗುವವು. ನೀವು ನೆಲೆಸುವ ದೇಶವು ನಿಮ್ಮ ಪೂರ್ವಿಕರಿಗೆ ದೇವರು ವಾಗ್ದಾನ ಮಾಡಿದ ಪ್ರಕಾರ ಫಲಭರಿತವಾಗುವುದು.
4 “ಇಸ್ರೇಲಿನ ಜನರೇ, ಕಿವಿಗೊಡಿರಿ. ಯೆಹೋವನೇ ನಮ್ಮ ದೇವರು. ದೇವರು ಒಬ್ಬನೇ! 5 ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. 6 ನಾನೀಗ ಕೊಡುವ ಆಜ್ಞೆಗಳನ್ನು ಯಾವಾಗಲೂ ನಿಮ್ಮ ಜ್ಞಾಪದಲ್ಲಿಟ್ಟುಕೊಂಡಿರಿ. 7 ನಿಮ್ಮ ಮಕ್ಕಳಿಗೆ ಇದನ್ನು ಕಲಿಸಲು ಮರೆಯಬೇಡಿರಿ. ನಿಮ್ಮ ಮನೆಗಳಲ್ಲಿ ಕುಳಿತಿರುವಾಗ, ರಸ್ತೆಗಳಲ್ಲಿ ನಡೆಯುತ್ತಿರುವಾಗ, ನೀವು ಮಲಗಿರುವಾಗ, ಎದ್ದಾಗ ಈ ಆಜ್ಞೆಗಳ ಕುರಿತಾಗಿ ಮಾತಾಡಿಕೊಳ್ಳಿರಿ. 8 ಈ ಆಜ್ಞೆಗಳನ್ನು ಬರೆದು ನಿಮ್ಮ ಕೈಗಳಿಗೆ ಕಟ್ಟಿರಿ, ನಿಮ್ಮ ಹಣೆಗಳ ಮೇಲೆ ಕಟ್ಟಿರಿ. ಇವು ನನ್ನ ಬೋಧನೆಯ ವಿಚಾರವಾಗಿ ನಿಮಗೆ ಜ್ಞಾಪಕ ಹುಟ್ಟಿಸಲು ಸಹಾಯವಾಗುವುದು. 9 ಅವುಗಳನ್ನು ನಿಮ್ಮ ಬಾಗಿಲಿನ ಮೇಲೆಯೂ ನಿಲುವುಪಟ್ಟಿಗಳ ಮೇಲೆಯೂ ಬರೆಯಿರಿ.
10 “ದೇವರಾದ ಯೆಹೋವನು ನಮಗೆ ಈ ದೇಶವನ್ನು ಕೊಡುವುದಾಗಿ ನಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ ಮತ್ತು ಯಾಕೋಬನಿಗೆ ವಾಗ್ದಾನ ಮಾಡಿದ್ದನು. ಈಗ ಆ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ಅದರಲ್ಲಿರುವ ದೊಡ್ಡದೊಡ್ಡ ನಗರಗಳನ್ನು ನೀವು ಕೈಯಿಂದ ಕಟ್ಟಲಿಲ್ಲ. 11 ನೀವು ಕೂಡಿಸಿಡದ ಉತ್ತಮ ವಸ್ತುಗಳಿಂದ ತುಂಬಿರುವ ಮನೆಗಳನ್ನು ಯೆಹೋವನು ನಿಮಗೆ ಕೊಡುತ್ತಾನೆ. ನೀವು ತೋಡದಿರುವ ಬಾವಿಗಳನ್ನು ನಿಮಗೆ ಕೊಡುವನು. ನೀವು ನೆಡದಿರುವ ದ್ರಾಕ್ಷಾತೋಟಗಳನ್ನೂ ಎಣ್ಣೆಮರಗಳ ತೋಪುಗಳನ್ನೂ ನಿಮಗೆ ಕೊಡುವನು. ನಿಮಗೆ ತಿನ್ನಲು ಯಾವ ಕೊರತೆಯೂ ಇರುವುದಿಲ್ಲ.
12 “ನಿಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಿ ಆತನನ್ನೇ ಸೇವಿಸಿರಿ. ಆತನನ್ನು ಮರೆತುಬಿಡಬೇಡಿರಿ. ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಾಗ ಆತನೇ ನಿಮ್ಮನ್ನು ವಿಮೋಚಿಸಿದನಲ್ಲಾ? 13 ಆತನ ಹೆಸರಿನಲ್ಲಿಯೇ ವಾಗ್ದಾನಗಳನ್ನು ಮಾಡಿರಿ; ಅನ್ಯ ದೇವರ ಹೆಸರಿನಲ್ಲಿ ಮಾಡಕೂಡದು. 14 ಇತರ ದೇವರುಗಳನ್ನು ಅವಲಂಭಿಸಬಾರದು. ನಿಮ್ಮ ಸುತ್ತಲೂ ಇರುವವರ ದೇವರುಗಳನ್ನು ಪೂಜಿಸಬಾರದು. 15 ನಿಮ್ಮ ದೇವರಾದ ಯೆಹೋವನು ಯಾವಾಗಲೂ ನಿಮ್ಮ ಜೊತೆಯಲ್ಲಿರುವನು. ಸುಳ್ಳುದೇವರನ್ನು ಪೂಜಿಸುವವರನ್ನು ಯೆಹೋವನು ದ್ವೇಷಿಸುವುದರಿಂದ ಅವರನ್ನು ಈ ಲೋಕದಿಂದ ಅಳಿಸಿಬಿಡುವನು.
16 “ಮಸ್ಸಾದಲ್ಲಿ ನೀವು ನಿಮ್ಮ ದೇವರನ್ನು ಪರೀಕ್ಷಿಸಿದಂತೆ ಆತನನ್ನು ಪರೀಕ್ಷಿಸಬಾರದು. 17 ಆತನ ಆಜ್ಞೆಗಳಿಗೆ ವಿಧೇಯರಾಗಿರಲು ಎಚ್ಚರದಿಂದಿರಬೇಕು. ಆತನು ನಿಮಗೆ ಕೊಟ್ಟ ವಿಧಿನಿಯಮಗಳನ್ನು ಪರಿಪಾಲಿಸಲು ತಯಾರಾಗಿರಬೇಕು. 18 ಯೋಗ್ಯವಾದವುಗಳನ್ನು, ಸರಿಯಾದವುಗಳನ್ನು ಮತ್ತು ಯೆಹೋವನು ಮೆಚ್ಚುವ ಕಾರ್ಯಗಳನ್ನು ನೀವು ಮಾಡಬೇಕು. ಆಗ ನಿಮ್ಮ ಕಾರ್ಯಗಳೆಲ್ಲವೂ ಸಫಲವಾಗುವುವು. ಅಲ್ಲದೆ ಯೆಹೋವನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶದೊಳಗೆ ನೀವು ಹೋಗಿ ಅದನ್ನು ವಶಪಡಿಸಿಕೊಳ್ಳಬಹುದು. 19 ಯೆಹೋವನು ಹೇಳಿದಂತೆಯೇ, ಅಲ್ಲಿ ವಾಸವಾಗಿರುವ ನಿಮ್ಮ ವೈರಿಗಳನ್ನೆಲ್ಲಾ ಹೊರಗಟ್ಟುವಿರಿ.
ದೇವರ ಕಾರ್ಯಗಳನ್ನು ನಿಮ್ಮ ಮಕ್ಕಳಿಗೆ ತಿಳಿಸಬೇಕು
20 “ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳು ನಿಮಗೆ ಈ ಪ್ರಶ್ನೆ ಕೇಳಬಹುದು: ‘ಯೆಹೋವದೇವರು ನಮಗೆ ನ್ಯಾಯವಿಧಿ, ನಿಯಮಗಳನ್ನು ಕೊಟ್ಟಿರುತ್ತಾನೆ. ಇವುಗಳ ಅರ್ಥವೇನು?’ 21 ಆಗ ನೀವು ಹೀಗೆ ಉತ್ತರಿಸಬೇಕು: ‘ನಾವು ಈಜಿಪ್ಟಿನಲ್ಲಿ ಫರೋಹನ ಗುಲಾಮರಾಗಿದ್ದೆವು. ಆದರೆ ನಮ್ಮ ದೇವರಾದ ಯೆಹೋವನು ತನ್ನ ಪರಾಕ್ರಮದಿಂದ ನಮ್ಮನ್ನು ಬಿಡುಗಡೆ ಮಾಡಿದನು. 22 ಯೆಹೋವನು ಈಜಿಪ್ಟಿನವರನ್ನೂ ಫರೋಹನನ್ನೂ ಅವನ ಪರಿವಾರದವರನ್ನೂ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಮಹತ್ಕಾರ್ಯಗಳಿಂದಲೂ ಭಯಂಕರ ಕಾರ್ಯಗಳಿಂದಲೂ ಬಾಧಿಸಿದನು. 23 ಯೆಹೋವನು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನದಂತೆ ನಮಗೆ ಆ ದೇಶವನ್ನು ಕೊಡುವುದಕ್ಕಾಗಿ ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. 24 ಈ ಉಪದೇಶಗಳನ್ನೆಲ್ಲಾ ಅನುಸರಿಸಬೇಕೆಂದು ಯೆಹೋವನು ನಮಗೆ ಆಜ್ಞಾಪಿಸಿದ್ದಾನೆ. ನಮ್ಮ ದೇವರಾದ ಯೆಹೋವನನ್ನು ನಾವು ಗೌರವಿಸತಕ್ಕದ್ದು. ಆಗ ಇಂದಿನಂತೆ ಯೆಹೋವನು ನಮ್ಮನ್ನು ಜೀವಂತವಾಗಿರಿಸಿ ನಮಗೆ ಒಳ್ಳೆಯದನ್ನು ಮಾಡುತ್ತಾನೆ. 25 ನಮ್ಮ ದೇವರಾದ ಯೆಹೋವನು ಹೇಳಿದಂತೆಯೇ, ಇಡೀ ಧರ್ಮಶಾಸ್ತ್ರಕ್ಕೆ ನಾವು ಚಾಚೂತಪ್ಪದೆ ಎಚ್ಚರಿಕೆಯಿಂದ ವಿಧೇಯರಾದರೆ, ನಾವು ಒಳ್ಳೆಯದನ್ನು ಮಾಡಿದೆವೆಂದು ದೇವರು ಹೇಳುತ್ತಾನೆ.’
ಇಸ್ರೇಲ್, ದೇವಜನಾಂಗ
7 “ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶಕ್ಕೆ ಯೆಹೋವನು ನಿಮ್ಮನ್ನು ನಡೆಸುವನು. ನಿಮಗಿಂತ ಬಲಿಷ್ಠವಾಗಿದ್ದು ಅಲ್ಲಿ ವಾಸಿಸುತ್ತಿರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ಎಂಬ ಏಳು ಜನಾಂಗಗಳನ್ನು ಆ ದೇಶದಿಂದ ನಿಮಗಾಗಿ ಹೊರಗಟ್ಟುವನು. 2 ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳನ್ನು ನಿಮಗೆ ಅಧೀನಪಡಿಸುವನು. ನೀವು ಅವರನ್ನು ಸೋಲಿಸಿಬಿಡುವಿರಿ. ನೀವು ಅವರನ್ನು ಸಂಪೂರ್ಣವಾಗಿ ನಾಶಮಾಡಬೇಕು. ಅವರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಬೇಡಿ ಮತ್ತು ಅವರಿಗೆ ಕರುಣೆಯನ್ನು ತೋರಬೇಡಿ. 3 ಅವರೊಳಗಿಂದ ಹೆಣ್ಣನ್ನು ತರಬೇಡಿ. ನಿಮ್ಮ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಅವರನ್ನು ಮದುವೆಯಾಗಬಾರದು. 4 ಯಾಕೆಂದರೆ, ನನ್ನನ್ನು ಹಿಂಬಾಲಿಸದಂತೆ ಅವರು ನಿಮ್ಮ ಮಕ್ಕಳನ್ನು ಮಾರ್ಪಡಿಸುವರು. ಆಗ ನಿಮ್ಮ ಮಕ್ಕಳು ಅನ್ಯದೇವರುಗಳ ಸೇವೆಮಾಡುವರು. ಆಗ ಯೆಹೋವನು ನಿಮ್ಮ ಮೇಲೆ ಬಹಳ ಕೋಪಗೊಂಡು ನಿಮ್ಮನ್ನು ಬೇಗನೆ ನಾಶಮಾಡುವನು.
ಸುಳ್ಳುದೇವರುಗಳನ್ನು ನಾಶಮಾಡಿರಿ
5 “ಆ ಜನಾಂಗಗಳ ಯಜ್ಞವೇದಿಕೆಗಳನ್ನೆಲ್ಲಾ ನೀವು ಕೆಡವಿಹಾಕಿ ನೆಲಸಮಮಾಡಬೇಕು. ಅವರ ಸ್ಮಾರಕ ಕಲ್ಲುಗಳನ್ನು ಒಡೆದು ಚೂರುಚೂರು ಮಾಡಬೇಕು. ಅವರ ಅಶೇರಸ್ತಂಭಗಳನ್ನು ಕತ್ತರಿಸಿಹಾಕಬೇಕು; ಅವುಗಳ ಪ್ರತಿಮೆಗಳನ್ನು ಸುಟ್ಟುಹಾಕಬೇಕು. 6 ಯಾಕೆಂದರೆ ನೀವು ಯೆಹೋವನ ಪ್ರಜೆಗಳಾಗಿದ್ದೀರಿ. ಭೂಲೋಕದಲ್ಲಿರುವ ಎಲ್ಲಾ ಜನಾಂಗಗಳಿಂದ ಆತನು ನಿಮ್ಮನ್ನು ಆರಿಸಿಕೊಂಡಿದ್ದಾನೆ. ನೀವು ಆತನ ಸ್ವಕೀಯ ಪ್ರಜೆಯಾಗಿದ್ದೀರಿ. 7 ದೇವರು ನಿಮ್ಮನ್ನೇ ಯಾಕೆ ಪ್ರೀತಿಸಿ ಆರಿಸಿಕೊಂಡನು? ನೀವು ದೊಡ್ಡ ಜನಾಂಗವಾಗಿರುವ ಕಾರಣದಿಂದಲ್ಲ, ನಿಜವಾಗಿಯೂ ನೀವು ಚಿಕ್ಕ ಜನಾಂಗವೇ. 8 ಆದರೆ ಯೆಹೋವನು ತನ್ನ ಪರಾಕ್ರಮವನ್ನು ತೋರಿಸಿ ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ನಿಮ್ಮನ್ನು ದಾಸತ್ವದಿಂದ ಬಿಡುಗಡೆ ಮಾಡಿದನು; ಫರೋಹನ ಹಿಡಿತದಿಂದ ನಿಮ್ಮನ್ನು ಬಿಡಿಸಿದನು; ಯಾಕೆಂದರೆ ಆತನು ನಿಮ್ಮನ್ನು ಪ್ರೀತಿಸುತ್ತಾನೆ; ನಿಮ್ಮ ಪೂರ್ವಿಕರಿಗೆ ತಾನು ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂದಿದ್ದಾನೆ.
9 “ಆದ್ದರಿಂದ ನಿಮ್ಮ ದೇವರಾದ ಯೆಹೋವನೊಬ್ಬನೇ ನಿಜವಾದ ದೇವರೆಂಬುದು ನಿಮಗೆ ತಿಳಿದಿರಲಿ. ನೀವು ಆತನ ಮೇಲೆ ಭರವಸವಿಡಬಹುದು. ಆತನು ತಾನು ಮಾಡಿದ ಒಡಂಬಡಿಕೆಯನ್ನು ನೆರವೇರಿಸುವಾತನಾಗಿದ್ದಾನೆ. ಆತನನ್ನು ಪ್ರೀತಿಸಿ ಆತನ ಕಟ್ಟಳೆಗಳಿಗೆ ವಿಧೇಯರಾಗುವವರನ್ನೆಲ್ಲಾ ಆತನು ಪ್ರೀತಿಸುತ್ತಾನೆ; ಅವರಿಗೆ ಕರುಣೆ ತೋರುತ್ತಾನೆ. ಈ ಪ್ರೀತಿ, ಕರುಣೆಗಳು ಸಾವಿರ ತಲೆಮಾರುಗಳವರೆಗೂ ಮುಂದುವರಿಯುವವು. 10 ಆದರೆ ಆತನು ತನ್ನನ್ನು ದ್ವೇಷಿಸುವವರನ್ನು ಶಿಕ್ಷಿಸುತ್ತಾನೆ. ತನ್ನನ್ನು ದ್ವೇಷಿಸುವ ಜನರನ್ನು ಶಿಕ್ಷಿಸಲು ಆತನು ನಿಧಾನ ಮಾಡುವುದಿಲ್ಲ. 11 ಆದ್ದರಿಂದ ನಾನು ಈ ದಿನ ನಿಮಗೆ ಕೊಡುವ ಆಜ್ಞಾವಿಧಿನಿಯಮಗಳನ್ನು ನೀವು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು.
12 “ನೀವು ಈ ಕಟ್ಟಳೆಗಳಿಗೆ ಕಿವಿಗೊಡುವುದಾದರೆ ಮತ್ತು ಅವುಗಳಿಗೆ ಎಚ್ಚರಿಕೆಯಿಂದ ವಿಧೇಯರಾದರೆ, ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರೊಡನೆ ಮಾಡಿಕೊಂಡ ಪ್ರೀತಿಯ ಒಡಂಬಡಿಕೆಯನ್ನು ನೆರವೇರಿಸುವನು; 13 ಮತ್ತು ಆತನು ಆಶೀರ್ವದಿಸುವನು. ನಿಮ್ಮ ಜನಾಂಗವು ವೃದ್ಧಿಯಾಗುವಂತೆ ಮಾಡುವನು. ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಆಶೀರ್ವದಿಸುವನು. ನಿಮ್ಮ ಹೊಲಗಳಲ್ಲಿ ಸಮೃದ್ಧಿಯಾದ ಬೆಳೆಯು ಉಂಟಾಗುವಂತೆ ಆಶೀರ್ವದಿಸುವನು. ಆತನು ನಿಮಗೆ ಧಾನ್ಯ, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಗಳನ್ನು ಕೊಡುವನು. ನಿಮ್ಮ ದನಕುರಿಗಳು ಮರಿಗಳನ್ನು ಈಯುವಂತೆ ಆಶೀರ್ವದಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶದಲ್ಲಿ ನೀವು ನೆಲೆಸಿರುವಾಗ ನಿಮಗೆ ಈ ಆಶೀರ್ವಾದಗಳೆಲ್ಲಾ ಪ್ರಾಪ್ತವಾಗುವವು.
14 “ಎಲ್ಲಾ ಜನರಿಗಿಂತ ನೀವು ಹೆಚ್ಚಾಗಿ ಆಶೀರ್ವದಿಸಲ್ಪಡುವಿರಿ. ಪ್ರತಿಯೊಂದು ಕುಟುಂಬದಲ್ಲಿ ಹೆಚ್ಚು ಮಕ್ಕಳಿರುವರು. ನಿಮ್ಮ ಹಸುಗಳು ಮರಿಗಳನ್ನು ಈಯುವವು. 15 ನಿಮ್ಮಿಂದ ಎಲ್ಲಾ ತರದ ಕಾಯಿಲೆಗಳನ್ನು ಯೆಹೋವನು ತೆಗೆದುಹಾಕುವನು. ಈಜಿಪ್ಟಿನಲ್ಲಿ ನಿಮ್ಮನ್ನು ಬಾಧಿಸುತ್ತಿದ್ದ ಭಯಂಕರ ಕಾಯಿಲೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಆ ಕಾಯಿಲೆಗಳು ನಿಮ್ಮ ವೈರಿಗಳಿಗೆ ಉಂಟಾಗುವವು. 16 ಆ ದೇಶದಲ್ಲಿ ನೀವು ಯೆಹೋವನ ಸಹಾಯದಿಂದ ಸೋಲಿಸುವ ಜನರನ್ನೆಲ್ಲಾ ಕೊಂದುಬಿಡಬೇಕು. ಅವರಿಗೆ ಕನಿಕರ ತೋರಬಾರದು. ಅವರ ದೇವರುಗಳನ್ನು ಪೂಜಿಸಕೂಡದು! ಯಾಕೆಂದರೆ ಅವು ನಿಮಗೆ ಉರುಲಾಗಿ ನಿಮ್ಮ ಜೀವಿತವನ್ನು ಹಾಳುಮಾಡುತ್ತವೆ.
ತನ್ನ ಜನರಿಗೆ ಸಹಾಯ ಮಾಡುವುದಾಗಿ ಯೆಹೋವನ ವಾಗ್ದಾನ
17 “ನಿಮ್ಮ ಮನಸ್ಸಿನಲ್ಲಿ, ‘ಈ ಜನಾಂಗಗಳು ನಮ್ಮ ಜನಾಂಗಗಳಿಗಿಂತ ದೊಡ್ಡದಾಗಿವೆ. ಇವರನ್ನು ಹೀಗೆ ಹೊರಡಿಸಲು ಸಾಧ್ಯವೇ ಎಂದು ಯಾಕೆ ಅಂದುಕೊಳ್ಳುತ್ತೀರಿ.’ 18 ನೀವು ಅವರಿಗೆ ಭಯಪಡಬಾರದು. ನಿಮ್ಮ ದೇವರಾದ ಯೆಹೋವನು ಫರೋಹನಿಗೂ ಈಜಿಪ್ಟಿನ ಎಲ್ಲಾ ಜನರಿಗೂ ಮಾಡಿದ್ದನ್ನು ನೆನಪು ಮಾಡಿಕೊಳ್ಳಿರಿ. 19 ಆತನು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನಡೆಸಿದ್ದನ್ನು ನೀವು ನೋಡಿದಿರಿ. ಆತನು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬರಲು ತನ್ನ ಮಹಾಶಕ್ತಿಯನ್ನೂ ಬಲವನ್ನೂ ಬಳಸಿದ್ದನ್ನು ನೀವು ನೋಡಿದಿರಿ. ನೀವು ಭಯಪಡುವ ಎಲ್ಲಾ ಜನರ ಮೇಲೆ ದೇವರಾದ ಯೆಹೋವನು ಅದೇ ಶಕ್ತಿಯನ್ನು ಬಳಸುವನು.
20 “ನಿಮ್ಮಿಂದ ತಪ್ಪಿಸಿಕೊಂಡು ಅಡಗಿಕೊಳ್ಳುವ ಜನರನ್ನು ಶಿಕ್ಷಿಸಲು ದೇವರು ಕಡಜದ ಹುಳಗಳನ್ನು ಅವರ ಮಧ್ಯಕ್ಕೆ ಕಳುಹಿಸುವನು ಮತ್ತು ಅವರನ್ನೆಲ್ಲಾ ನಾಶಮಾಡುವನು. 21 ಅವರಿಗೆ ನೀವು ಭಯಪಡಬೇಡಿರಿ; ಯಾಕೆಂದರೆ ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ಆತನು ಭಯಂಕರನೂ ಮಹಾ ದೇವರೂ ಆಗಿದ್ದಾನೆ. 22 ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳವರನ್ನು ಸ್ವಲ್ಪ ಸ್ವಲ್ಪವಾಗಿಯೇ ಅಲ್ಲಿಂದ ತೆಗೆದುಬಿಡುವನು. ನೀವು ಒಂದೇ ಸಮಯಕ್ಕೆ ಎಲ್ಲರನ್ನು ನಾಶಮಾಡಬಾರದು. ಹಾಗೆ ಮಾಡಿದ್ದಲ್ಲಿ ದೇಶದಲ್ಲೆಲ್ಲಾ ಕಾಡುಪ್ರಾಣಿಗಳು ತುಂಬಿಹೋಗುತ್ತವೆ. 23 ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳವರನ್ನು ಸೋಲಿಸಲು ನಿಮಗೆ ಅವಕಾಶ ಮಾಡಿಕೊಡುವನು. ಯುದ್ಧಮಾಡುವಾಗ ಅವರ ಮಧ್ಯದಲ್ಲಿ ಗಲಿಬಿಲಿ ಹುಟ್ಟಿಸಿ ಅವರು ನಾಶವಾಗುವಂತೆ ಮಾಡುವನು. 24 ಅವರ ರಾಜರನ್ನು ನೀವು ಸೋಲಿಸುವಂತೆ ಮಾಡುವನು. ನೀವು ಅವರನ್ನು ಕೊಂದು ಅವರ ಹೆಸರು ಉಳಿಯದಂತೆ ಮಾಡುವಿರಿ. ನಿಮ್ಮನ್ನು ಯಾರೂ ತಡೆಯಲಾರರು. ನೀವು ಪ್ರತಿಯೊಬ್ಬರನ್ನು ನಾಶಮಾಡಿಬಿಡುವಿರಿ.
25 “ಅವರ ದೇವರುಗಳ ಪ್ರತಿಮೆಗಳನ್ನು ಬೆಂಕಿಯಲ್ಲಿ ಸುಟ್ಟುಬಿಡಬೇಕು. ಅವರ ವಿಗ್ರಹಗಳಲ್ಲಿರುವ ಬೆಳ್ಳಿಬಂಗಾರಗಳನ್ನು ನೀವು ತೆಗೆದುಕೊಳ್ಳಬೇಡಿ. ನೀವು ತೆಗೆದುಕೊಂಡರೆ ಅವು ನಿಮಗೆ ಉರುಲಾಗಿ ನಿಮ್ಮನ್ನೇ ನಾಶಮಾಡುತ್ತವೆ. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ವಿಗ್ರಹಗಳನ್ನು ದ್ವೇಷಿಸುತ್ತಾನೆ. 26 ಅಂಥ ಅಸಹ್ಯ ವಿಗ್ರಹಗಳನ್ನು ನಿಮ್ಮ ಮನೆಯೊಳಗೆ ತರಲೂಬಾರದು, ಅವುಗಳನ್ನು ಬಯಸಲೂಬಾರದು; ನೀವು ಅವುಗಳನ್ನು ದ್ವೇಷಿಸಬೇಕು ಮತ್ತು ನಾಶಮಾಡಬೇಕು. ಇಲ್ಲವಾದರೆ ನೀವೂ ಅವುಗಳಂತೆಯೇ ನಾಶನಕ್ಕೆ ಗುರಿಯಾಗುವಿರಿ.
Kannada Holy Bible: Easy-to-Read Version. All rights reserved. © 1997 Bible League International