Beginning
ಇಸ್ರೇಲರಿಗೆ ಮೋಶೆಯ ಸಂದೇಶ
1 ಇಸ್ರೇಲರಿಗೆ ಮೋಶೆಯು ಈ ಆಜ್ಞೆಗಳನ್ನು ಕೊಟ್ಟನು. ಆಗ ಅವರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿರುವ ಅಡವಿಯಲ್ಲಿ ಪಾಳೆಯ ಮಾಡಿಕೊಂಡಿದ್ದರು. ಇದು ಸೂಫಿಗೆ ಎದುರಾಗಿ, ಪಾರಾನಿನ ಮರುಭೂಮಿಗೂ ತೋಫೆಲ್, ಲಾಬಾನ್, ಹಚೇರೋತ್ ಮತ್ತು ದೀಜಾಹಾಬ್ ಪಟ್ಟಣಗಳ ನಡುವೆ ಇತ್ತು.
2 ಹೋರೇಬ್ (ಸೀನಾಯಿ) ಬೆಟ್ಟದಿಂದ ಸೇಯೀರ್ ಬೆಟ್ಟದ ಮಾರ್ಗವಾಗಿ ಕಾದೇಶ್‌ಬರ್ನೇಯಕ್ಕೆ ತಲುಪಲು ಹನ್ನೊಂದು ದಿವಸದ ಪ್ರಯಾಣ ಮಾಡಬೇಕಾಗುತ್ತದೆ. 3 ಆದರೆ ಇಸ್ರೇಲರು ಈಜಿಪ್ಟನ್ನು ಬಿಟ್ಟು ಈ ಸ್ಥಳಕ್ಕೆ ಬರಲು ನಲವತ್ತು ವರ್ಷಗಳು ಹಿಡಿದವು. ನಲವತ್ತನೆ ವರ್ಷದ ಹನ್ನೊಂದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಮೋಶೆಯು ಜನರೊಂದಿಗೆ ಮಾತಾಡಿ ಯೆಹೋವನು ಆಜ್ಞಾಪಿಸಿದ ಸಮಸ್ತ ವಿಷಯಗಳನ್ನು ತಿಳಿಸಿದನು. 4 ಸೀಹೋನನನ್ನು ಮತ್ತು ಓಗನನ್ನು ದೇವರಾದ ಯೆಹೋವನು ಸೋಲಿಸಿದ ಬಳಿಕ ನಡೆದ ಸಂಗತಿಯಿದು. (ಸೀಹೋನನು ಅಮೋರಿಯರ ರಾಜನಾಗಿದ್ದನು. ಅವನು ಹೆಷ್ಬೋನಿನಲ್ಲಿ ವಾಸಿಸುತ್ತಿದ್ದನು. ಓಗನು ಬಾಷಾನಿನ ಅರಸನು. ಇವನು ಅಷ್ಟಾರೋತ್ ಮತ್ತು ಎದ್ರೈ ಎಂಬಲ್ಲಿ ವಾಸವಾಗಿದ್ದನು.) 5 ಇಸ್ರೇಲರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿ ಮೋವಾಬ್ಯರ ಸ್ಥಳದಲ್ಲಿ ಪಾಳೆಯ ಮಾಡಿಕೊಂಡಿದ್ದರು. ದೇವರು ತಿಳಿಸಿದ ಕಟ್ಟಳೆಗಳನ್ನು ಮೋಶೆಯು ವಿವರಿಸುತ್ತಾ ಹೀಗೆಂದನು:
6 “ನಮ್ಮ ದೇವರಾದ ಯೆಹೋವನು ಹೋರೇಬ್ ಬೆಟ್ಟದಲ್ಲಿ ನಮ್ಮೊಂದಿಗೆ ಮಾತಾಡಿದನು. ಆತನು ಹೇಳಿದ್ದೇನೆಂದರೆ: ‘ನೀವು ಈ ಪ್ರದೇಶಕ್ಕೆ ಬಂದು ಬಹಳ ಕಾಲವಾಯಿತು. 7 ಅಮೋರಿಯರು ವಾಸಿಸುವ ಬೆಟ್ಟಪ್ರಾಂತ್ಯಗಳಿಗೆ ಹೋಗಿರಿ, ಅದರ ಸುತ್ತಲೂ ಇರುವ ಜೋರ್ಡನಿನ ಬಯಲು ಪ್ರದೇಶಕ್ಕೆ, ಬೆಟ್ಟಪ್ರದೇಶಕ್ಕೆ, ಪಶ್ಚಿಮದ ಇಳಕಲುಪ್ರದೇಶಕ್ಕೆ, ನೆಗೆವ್ ಮತ್ತು ಸಮುದ್ರ ಕರಾವಳಿ ಪ್ರದೇಶಗಳಿಗೆ ಹೋಗಿರಿ. ಕಾನಾನ್ ಮತ್ತು ಲೆಬನೋನ್ ಪ್ರದೇಶಗಳ ಮೂಲಕ ಯೂಫ್ರೇಟೀಸ್ ಮಹಾನದಿಯವರೆಗೂ ಹೋಗಿರಿ. 8 ನಾನು ನಿಮಗೆ ಆ ಪ್ರಾಂತ್ಯವನ್ನೆಲ್ಲಾ ಕೊಡುವೆನು. ಅಲ್ಲಿಗೆ ಹೋಗಿ ಅದನ್ನು ತೆಗೆದುಕೊಳ್ಳಿರಿ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಮತ್ತು ಅವರ ಸಂತತಿಯವರಿಗೆ ಆ ಪ್ರದೇಶವನ್ನು ಕೊಡುವೆನು ಎಂದು ನಾನು ವಾಗ್ದಾನ ಮಾಡಿದ್ದೇನೆ.’”
ಮೋಶೆಯಿಂದ ನಾಯಕರ ಆಯ್ಕೆ
9 “ಆ ಸಮಯದಲ್ಲಿ ನಾನು ನಿಮಗೆ, ‘ನಿಮ್ಮನ್ನು ಪರಾಂಬರಿಸಲು ನನಗೆ ಸಾಧ್ಯವಿಲ್ಲ’ ಎಂದು ಹೇಳಿದೆನು. 10 ಈಗ ನಿಮ್ಮ ಜನಸಂಖ್ಯೆಯು ಇನ್ನೂ ಅಧಿಕವಾಗಿರುತ್ತದೆ. ದೇವರಾದ ಯೆಹೋವನು ನಿಮ್ಮನ್ನು ವೃದ್ಧಿಪಡಿಸುತ್ತಿರುವುದರಿಂದ ನೀವು ಈಗ ಆಕಾಶದ ನಕ್ಷತ್ರಗಳಷ್ಟು ಇರುವಿರಿ. 11 ನಮ್ಮ ಪೂರ್ವಿಕರ ದೇವರಾದ ಯೆಹೋವನು ಈಗ ಇರುವುದಕ್ಕಿಂತ ಸಾವಿರಪಟ್ಟು ಅಧಿಕವಾಗಿ ನಿಮ್ಮ ಜನಸಂಖ್ಯೆಯನ್ನು ಹೆಚ್ಚಿಸಲಿ. ತನ್ನ ವಾಗ್ದಾನಕ್ಕನುಸಾರವಾಗಿ ನಿಮ್ಮನ್ನು ಆಶೀರ್ವದಿಸಲಿ. 12 ಆದರೆ ನಾನೇ ಸ್ವತಃ ನಿಮ್ಮನ್ನು ಪರಾಂಬರಿಸುವುದಕ್ಕಾಗಲಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಲಿ ಸಾಧ್ಯವಾಗಲಿಲ್ಲ. 13 ಆಗ ನಾನು ನಿಮಗೆ ಹೇಳಿದ್ದೇನೆಂದರೆ: ‘ನಿಮ್ಮನಿಮ್ಮ ಕುಲಗಳಿಂದ ಯೋಗ್ಯರಾದವರನ್ನು ಆರಿಸಿರಿ. ಅವರನ್ನು ನಿಮ್ಮ ನಾಯಕರನ್ನಾಗಿ ನೇಮಿಸುವೆನು. ಅವರು ವಿವೇಕಿಗಳಾಗಿಯೂ ಅನುಭವಶಾಲಿಗಳಾಗಿಯೂ ಇರಬೇಕು’ ಎಂದು ಹೇಳಿದೆನು.
14 “ಆಗ ನೀವು, ‘ಇದು ಒಳ್ಳೆಯ ಆಲೋಚನೆ’ ಎಂದು ಹೇಳಿದಿರಿ.
15 “ಆದ್ದರಿಂದ, ನಿಮ್ಮ ಕುಲಗಳಿಂದ ನೀವು ಆರಿಸಿಕೊಂಡ ಬುದ್ಧಿವಂತರಾದ ಮತ್ತು ಅನುಭವಸ್ಥರಾದ ಜನರನ್ನು ನಾನು ನೇಮಿಸಿದೆನು. ಈ ರೀತಿಯಾಗಿ ಅವರನ್ನು ಸಾವಿರ ಜನರ ಮೇಲೆಯೂ, ನೂರು ಜನರ ಮೇಲೆಯೂ, ಐವತ್ತು ಜನರ ಮೇಲೆಯೂ ಮತ್ತು ಹತ್ತು ಜನರ ಮೇಲೆಯೂ ನಾಯಕರನ್ನಾಗಿ ನೇಮಿಸಿದೆನು. ಅಲ್ಲದೆ ನಿಮ್ಮನಿಮ್ಮ ಕುಲಗಳಿಗೆ ಪ್ರಧಾನರನ್ನೂ ನೇಮಿಸಿದೆನು.
16 “ನಿಮ್ಮ ನ್ಯಾಯಗಳನ್ನು ತೀರಿಸುವ, ಆ ನಾಯಕರುಗಳಿಗೆ ಹೇಳಿದ್ದೇನೆಂದರೆ: ‘ನಿಮ್ಮ ಅಧೀನದಲ್ಲಿರುವ ಜನರ ದೂರುಗಳನ್ನು ಚೆನ್ನಾಗಿ ಕೇಳಿಕೊಂಡು ಪಕ್ಷಪಾತವಿಲ್ಲದೆ ನ್ಯಾಯತೀರಿಸಬೇಕು. ಅವರಿಬ್ಬರೂ ಇಸ್ರೇಲರೇ ಆಗಿರಬಹುದು ಅಥವಾ ಒಬ್ಬನು ಇಸ್ರೇಲನೂ ಮತ್ತೊಬ್ಬನು ಪರದೇಶಿಯೂ ಆಗಿರಬಹುದು. ನೀವು ಪ್ರತಿಯೊಂದು ದೂರನ್ನು ನ್ಯಾಯವಾಗಿ ಬಗೆಹರಿಸಿ ತೀರ್ಪು ನೀಡಬೇಕು. 17 ನ್ಯಾಯತೀರಿಸುವಾಗ ಒಬ್ಬನು ಇನ್ನೊಬ್ಬನಿಗಿಂತ ವಿಶೇಷ ವ್ಯಕ್ತಿಯಾಗಿದ್ದಾನೆ ಎಂಬುದನ್ನು ಲೆಕ್ಕಿಸದೆ ಇಬ್ಬರೂ ಸಮಾನರೆಂದು ಪರಿಗಣಿಸಿ ಸರಿಯಾದ ತೀರ್ಪು ಕೊಡಬೇಕು. ನೀವು ಯಾರಿಗೂ ಭಯಪಡಬೇಡಿರಿ. ಯಾಕೆಂದರೆ ನಿಮ್ಮ ತೀರ್ಪು ದೇವರಿಂದ ಬಂದ ತೀರ್ಪಾಗಿರುತ್ತದೆ. ನಿಮಗೆ ಬಗೆಹರಿಸಲು ಕಷ್ಟವಾಗುವ ದೂರುಗಳಿದ್ದಲ್ಲಿ ಅವುಗಳನ್ನು ನನ್ನ ಬಳಿಗೆ ತನ್ನಿರಿ. ಅವುಗಳಿಗೆ ನಾನು ನ್ಯಾಯತೀರ್ಪು ನೀಡುವೆನು.’ 18 ಅದೇ ಸಮಯದಲ್ಲಿ, ನೀವು ಮಾಡತಕ್ಕ ಬೇರೆ ಎಲ್ಲಾ ಸಂಗತಿಗಳನ್ನೂ ನಾನು ನಿಮಗೆ ತಿಳಿಸಿದೆನು.
ಕಾನಾನ್ ದೇಶಕ್ಕೆ ಗೂಢಚಾರರನ್ನು ಕಳುಹಿಸಿದ್ದು
19 “ಬಳಿಕ ನಾವು ನಮ್ಮ ದೇವರಾದ ಯೆಹೋವನ ಆಜ್ಞಾನುಸಾರವಾಗಿ ಹೋರೇಬ್ ಬೆಟ್ಟಪ್ರದೇಶವನ್ನು ಬಿಟ್ಟು ಅಮೋರಿಯರ ಗುಡ್ಡಗಾಡು ಪ್ರದೇಶದಲ್ಲಿ ಪ್ರಯಾಣಮಾಡುತ್ತಾ ನೀವು ನೋಡಿದ ಅತ್ಯಂತ ಭಯಂಕರವಾದ ಮತ್ತು ವಿಶಾಲವಾದ ಮರುಭೂಮಿಯನ್ನು ದಾಟಿ ಕಾದೇಶ್‌ಬರ್ನೇಯಕ್ಕೆ ಬಂದೆವು. 20 ಆಗ ನಾನು ನಿಮಗೆ ಹೇಳಿದ್ದೇನೆಂದರೆ: ‘ನೀವೀಗ ಅಮೋರಿಯರ ಬೆಟ್ಟಪ್ರದೇಶಕ್ಕೆ ಬಂದಿರುವಿರಿ. ನಮ್ಮ ದೇವರಾದ ಯೆಹೋವನು ಈ ದೇಶವನ್ನು ನಮಗೆ ಕೊಡುವನು. 21 ದೇಶ ನಿಮ್ಮೆದುರಿಗೇ ಇದೆ, ಎದ್ದು ವಶಪಡಿಸಿಕೊಳ್ಳಿರಿ. ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಹೀಗೆಯೇ ಆಜ್ಞಾಪಿಸಿದ್ದಾನೆ. ಆದ್ದರಿಂದ ಭಯಪಡಬೇಡಿ; ಯಾವುದಕ್ಕೂ ಹೆದರಬೇಡಿ!’
22 “ಆದರೆ ನೀವೆಲ್ಲಾ ನನ್ನ ಬಳಿಗೆ ಬಂದು, ‘ಆ ದೇಶವನ್ನು ಸಂಚರಿಸಿ ಅದರ ಬಲವುಳ್ಳ ಮತ್ತು ಬಲಹೀನ ಸ್ಥಳಗಳನ್ನು ನೋಡಿಕೊಂಡು ನಾವು ಯಾವ ಮಾರ್ಗವಾಗಿ ಹೋಗಬೇಕು ಮತ್ತು ಯಾವಯಾವ ಪಟ್ಟಣಗಳನ್ನು ದಾಟಬೇಕು ಎಂಬುದನ್ನು ನಮಗೆ ತಿಳಿಸಲು ನಮ್ಮಲ್ಲಿ ಕೆಲವರನ್ನು ಕಳುಹಿಸಿ’ ಎಂದು ಹೇಳಿದಿರಿ.
23 “ಇದು ಒಂದು ಒಳ್ಳೆಯ ಆಲೋಚನೆ ಎಂದುಕೊಂಡು ನಿಮ್ಮ ಕುಲಗಳಿಂದ ಹನ್ನೆರಡು ಮಂದಿಯನ್ನು ಆರಿಸಿಕೊಂಡೆನು. 24 ಅವರು ಹೊರಟುಹೋಗಿ ಬೆಟ್ಟಪ್ರದೇಶಗಳನ್ನು ದಾಟಿ ಎಷ್ಕೋಲ್ ಕಣಿವೆಯನ್ನೆಲ್ಲಾ ಸಂಚರಿಸಿ ವಿಷಯಗಳನ್ನು ಸಂಗ್ರಹಿಸಿದರು. 25 ಅಲ್ಲಿ ಬೆಳೆಯುವ ಹಣ್ಣುಗಳನ್ನು ಕಿತ್ತು ನಮ್ಮ ಬಳಿಗೆ ತಂದರು. ಅವರು ಆ ದೇಶದ ವಿಷಯವಾಗಿ ತಿಳಿಸಿದರು. ‘ನಮ್ಮ ದೇವರಾದ ಯೆಹೋವನು ನಮಗೆ ಒಳ್ಳೆಯ ದೇಶವನ್ನು ಕೊಡುತ್ತಿದ್ದಾನೆ!’ ಅಂದರು.
26 “ಆದರೆ ನೀವು ದೇಶದೊಳಗೆ ಪ್ರವೇಶಿಸಿ ಸ್ವಾಧೀನ ಮಾಡಿಕೊಳ್ಳಲಿಲ್ಲ; ನಿಮ್ಮ ದೇವರಾದ ಯೆಹೋವನ ಮಾತನ್ನು ಕೇಳಲಿಲ್ಲ. 27 ನಿಮ್ಮನಿಮ್ಮ ಗುಡಾರಗಳಲ್ಲಿ ಯೆಹೋವನ ವಿರುದ್ಧವಾಗಿ ಗೊಣಗುಟ್ಟಿದಿರಿ, ‘ನಮ್ಮ ಯೆಹೋವನು ನಮ್ಮನ್ನು ದ್ವೇಷಿಸುತ್ತಾನೆ! ನಮ್ಮನ್ನು ಈಜಿಪ್ಟ್ ದೇಶದಿಂದ ಹೊರತಂದು ಅಮೋರಿಯರಿಂದ ನಾಶಪಡಿಸುತ್ತಿದ್ದಾನೆ! 28 ನಾವೀಗ ಎಲ್ಲಿಗೆ ಹೋಗೋಣ? ನಮ್ಮ ಸಹೋದರರು ತಮ್ಮ ವರದಿಯಿಂದ ನಮ್ಮನ್ನು ಹೆದರಿಸಿದ್ದಾರೆ. ಅಲ್ಲಿಯ ಜನರು ದೃಢಕಾಯರೂ ಬಲಶಾಲಿಗಳೂ ಎತ್ತರವಾದ ಪುರುಷರೂ ಆಗಿದ್ದಾರೆ. ಅವರ ಪಟ್ಟಣಗಳು ದೊಡ್ಡವುಗಳಾಗಿದ್ದು ಅವುಗಳ ಗೋಡೆಗಳು ಆಕಾಶಕ್ಕೆ ಮುಟ್ಟುವಷ್ಟು ಎತ್ತರವಾಗಿವೆ. ನಾವು ಅಲ್ಲಿ ಅನಾಕ್ಯರೆಂಬ ಮಹಾಶರೀರಗಳನ್ನು ನೋಡಿದೆವು!’ ಎಂದು ಅವರು ಹೇಳಿದಾಗ ನಾವು ಭಯದಿಂದ ತತ್ತರಿಸಿದೆವು.
29 “ಆಗ ನಾನು, ‘ನೀವು ಕಳವಳಗೊಳ್ಳಬೇಡಿರಿ! ಆ ಜನರಿಗೆ ಭಯಪಡಬೇಡಿರಿ! 30 ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ಹೋಗಿ ಅವರೊಂದಿಗೆ ಯುದ್ಧಮಾಡುವನು. ಈಜಿಪ್ಟ್‌ನಲ್ಲಿ ಆತನು ಮಾಡಿದಂತೆಯೇ ಇಲ್ಲಿಯೂ ಮಾಡುವನು. 31 ಅಡವಿಗಳಲ್ಲಿಯೂ ಮರುಭೂಮಿಗಳಲ್ಲಿಯೂ ಮನುಷ್ಯನು ತನ್ನ ಮಗುವನ್ನು ಹೊತ್ತುಕೊಂಡು ತರುವಂತೆ ದೇವರಾದ ಯೆಹೋವನು ನಿಮ್ಮನ್ನು ಹೊತ್ತುಕೊಂಡು ತಂದಿದ್ದಾನೆ. ಈ ಸ್ಥಳಕ್ಕೆ ಸುರಕ್ಷಿತವಾಗಿ ನಿಮ್ಮನ್ನು ತಂದು ಮುಟ್ಟಿಸಿದ್ದಾನೆ’ ಎಂದು ಹೇಳಿದೆನು.
32 “ಆದರೂ ನೀವು ಇನ್ನೂ ನಿಮ್ಮ ದೇವರಾದ ಯೆಹೋವನ ಮೇಲೆ ಭರವಸೆ ಇಡಲಿಲ್ಲ. 33 ನೀವು ಪ್ರಯಾಣ ಮಾಡುತ್ತಿರುವಾಗ ಆತನು ನಿಮ್ಮ ಮುಂದೆ ಹೋದನು. ತಂಗಲು ಯೋಗ್ಯವಾದ ಸ್ಥಳದಲ್ಲಿ ನೀವು ಪಾಳೆಯ ಮಾಡಿಕೊಳ್ಳುವಂತೆ ಮಾಡಿದನು. ಹಗಲಲ್ಲಿ ಮೇಘಸ್ತಂಭವಾಗಿಯೂ ರಾತ್ರಿಯಲ್ಲಿ ಅಗ್ನಿಸ್ತಂಭವಾಗಿಯೂ ಆತನು ನಿಮಗೆ ಮಾರ್ಗದರ್ಶಕನಾಗಿದ್ದನು.
ಜನರನ್ನು ಕಾನಾನ್ ದೇಶದೊಳಗೆ ಹೋಗದಂತೆ ಮಾಡಿದ್ದು
34 “ನೀವು ಹೇಳುತ್ತಿದ್ದದ್ದನ್ನು ಯೆಹೋವನು ಕೇಳಿ ಸಿಟ್ಟುಗೊಂಡು, 35 ‘ಈಗ ಜೀವಿಸುತ್ತಿರುವ ದುಷ್ಟಜನರಾದ ನಿಮ್ಮಲ್ಲಿ ಯಾರೂ ನಾನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಒಳ್ಳೆಯನಾಡಿಗೆ ಹೋಗುವುದಿಲ್ಲ. 36 ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಆ ದೇಶವನ್ನು ನೋಡುವನು. ಕಾಲೇಬನು ಸಂಚರಿಸಿದ ನಾಡನ್ನು ಅವನಿಗೂ ಅವನ ಸಂತತಿಯವರಿಗೂ ಕೊಡುವೆನು. ಯಾಕೆಂದರೆ ನಾನು ಆಜ್ಞಾಪಿಸಿದ್ದನ್ನೆಲ್ಲ ಕಾಲೇಬನು ಮಾಡಿದನು’ ಎಂದು ಪ್ರಮಾಣಮಾಡಿದನು.
37 “ದೇವರಾದ ಯೆಹೋವನು ನಿಮ್ಮಿಂದಾಗಿ ನನ್ನ ಮೇಲೂ ಸಿಟ್ಟುಗೊಂಡು, ‘ಮೋಶೆಯೇ, ನೀನೂ ಸಹ ವಾಗ್ದಾನದ ದೇಶವನ್ನು ಪ್ರವೇಶಿಸುವುದಿಲ್ಲ. 38 ಆದರೆ ನಿನ್ನ ಸಹಾಯಕನಾದ ನೂನನ ಮಗನಾದ ಯೆಹೋಶುವನು ಆ ದೇಶವನ್ನು ಪ್ರವೇಶಿಸುವನು. ಯೆಹೋಶುವನನ್ನು ಪ್ರೋತ್ಸಾಹಿಸು; ಯಾಕೆಂದರೆ ಆ ದೇಶವನ್ನು ವಶಪಡಿಸಿಕೊಳ್ಳಲು ಅವನು ಇಸ್ರೇಲರನ್ನು ಮುನ್ನಡೆಸಬೇಕು’ ಎಂದು ಹೇಳಿದನು. 39 ದೇವರಾದ ಯೆಹೋವನು ನಮಗೆ ಹೇಳಿದ್ದೇನೆಂದರೆ: ‘ವೈರಿಗಳ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕಮಕ್ಕಳಿಗೂ ಒಳ್ಳೆಯದು ಮತ್ತು ಕೆಟ್ಟದ್ದು ಅರಿಯದ ನಿಮ್ಮ ಮಕ್ಕಳಿಗೂ ಆ ದೇಶವನ್ನು ಕೊಡುವೆನು; ಅವರು ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವರು. 40 ಆದರೆ ನೀವು ಹಿಂತಿರುಗಿ ಕೆಂಪುಸಮುದ್ರಕ್ಕೆ ಹೋಗುವ ಮರುಭೂಮಿಯ ಮಾರ್ಗದಲ್ಲಿ ಹೋಗಬೇಕು.’
41 “ಆಗ ನೀವು ಹೀಗೆ ಹೇಳಿದಿರಿ: ‘ಮೋಶೆಯೇ, ನಾವು ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡಿದೆವು. ದೇವರಾದ ಯೆಹೋವನು ನಮಗೆ ಆಜ್ಞೆಮಾಡಿದ ಪ್ರಕಾರ ನಾವು ಈಗ ಹೋಗಿ ಅವರೊಂದಿಗೆ ಯುದ್ಧಮಾಡುತ್ತೇವೆ.’
“ಆಮೇಲೆ ನೀವು ಪ್ರತಿಯೊಬ್ಬರೂ ಆಯುಧಗಳನ್ನು ಧರಿಸಿಕೊಂಡಿರಿ. ಬೆಟ್ಟಪ್ರದೇಶಗಳನ್ನು ಜಯಿಸುವುದು ಸುಲಭವೆಂದು ನೀವು ಭಾವಿಸಿದ್ದಿರಿ. 42 ಆದರೆ ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಆ ಜನರಿಗೆ ಬೆಟ್ಟವನ್ನೇರಿ ಯುದ್ಧಮಾಡಬಾರದೆಂದು ಹೇಳು. ಯಾಕೆಂದರೆ ನಾನು ಅವರೊಂದಿಗಿರುವುದಿಲ್ಲ ಮತ್ತು ಅವರ ವೈರಿಗಳು ಅವರನ್ನು ಸೋಲಿಸಿಬಿಡುವರು!’
43 “ನಾನು ನಿಮ್ಮೊಂದಿಗೆ ಮಾತನಾಡಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ. ನೀವು ಯೆಹೋವನ ಆಜ್ಞೆಗೆ ವಿಧೇಯರಾಗಲು ಒಪ್ಪಲಿಲ್ಲ. ನೀವು ನಿಮ್ಮ ಸ್ವಂತ ಶಕ್ತಿಯಿಂದ ಜಯ ಹೊಂದುವುದಾಗಿ ಭಾವಿಸಿ ಬೆಟ್ಟಪ್ರದೇಶವನ್ನು ಏರಿದಿರಿ. 44 ಆದರೆ ಅಲ್ಲಿ ವಾಸಿಸುತ್ತಿದ್ದ ಅಮೋರಿಯರು ಹೊರಗೆ ಬಂದು ಜೇನುಹುಳಗಳಂತೆ ನಿಮ್ಮನ್ನು ಮುತ್ತಿ ಸೇಯೀರ್‌ನಿಂದ ಹೊರ್ಮದ ತನಕ ನಿಮ್ಮನ್ನು ಓಡಿಸಿದರು. 45 ಆಗ ನೀವು ಹಿಂತಿರುಗಿ ಬಂದು ಯೆಹೋವನ ಸಹಾಯಕ್ಕಾಗಿ ಮೊರೆಯಿಟ್ಟಿರಿ. ಆದರೆ ಯೆಹೋವನು ನಿಮಗೆ ಕಿವಿಗೊಡಲಿಲ್ಲ. 46 ಹೀಗೆ ನೀವು ಕಾದೇಶಿನಲ್ಲಿ ತುಂಬ ದಿನಗಳನ್ನು ಕಳೆದಿರುವಿರಿ.
ಮರುಭೂಮಿಯಲ್ಲಿ ಇಸ್ರೇಲರ ಅಲೆದಾಟ
2 “ಆಗ ಯೆಹೋವನು ನನಗೆ ಆಜ್ಞಾಪಿಸಿದಂತೆ ನಾವು ಮರುಭೂಮಿಗೆ ತಿರುಗಿಹೋದೆವು. ಆ ಮಾರ್ಗವು ಕೆಂಪುಸಮುದ್ರದ ಕಡೆ ಹೋಗುತ್ತಿತ್ತು. ಸೇಯೀರ್ ಬೆಟ್ಟವನ್ನು ಸುತ್ತಿಕೊಂಡು ಹೋಗುವುದಕ್ಕೆ ನಮಗೆ ತುಂಬಾ ದಿವಸಗಳಾದವು. 2 ಆಗ ಯೆಹೋವನು ನನಗೆ ಹೀಗೆ ಹೇಳಿದನು: 3 ‘ನೀವು ಬೆಟ್ಟದ ಸುತ್ತ ಸುತ್ತುತ್ತಾ ಬಹಳ ದಿವಸಗಳನ್ನು ಕಳೆದಿರಿ. ಈಗ ನೀವು ಉತ್ತರದಿಕ್ಕಿಗೆ ತಿರುಗಿರಿ. 4 ಇದನ್ನು ಜನರಿಗೆ ತಿಳಿಸು: ನೀವು ಸೇಯೀರ್ ದೇಶದ ಮೂಲಕ ದಾಟಿಹೋಗುವಿರಿ. ಇದು ನಿಮ್ಮ ಸಂಬಂಧಿಕರ ದೇಶ. ಇವರು ಏಸಾವನ ಸಂತತಿಯವರು. ಅವರು ನಿಮಗೆ ಭಯಪಡುವರು; ಆದರೆ ನೀವು ಅವರ ವಿಷಯದಲ್ಲಿ ಎಚ್ಚರಿಕೆಯಾಗಿರಿ. 5 ಅವರ ವಿರುದ್ಧ ಯುದ್ಧ ಮಾಡಬಾರದು. ನಾನು ನಿಮಗೆ ಅವರ ದೇಶದಲ್ಲಿ ಯಾವ ಪಾಲನ್ನೂ ಕೊಡುವುದಿಲ್ಲ. ಅದರ ಒಂದು ಅಡಿ ಜಾಗವನ್ನೂ ಕೊಡುವುದಿಲ್ಲ. ಯಾಕೆಂದರೆ ಸೇಯೀರ್ ಬೆಟ್ಟಪ್ರದೇಶವನ್ನು ಏಸಾವನ ಸ್ವಂತ ದೇಶವನ್ನಾಗಿ ಕೊಟ್ಟಿರುತ್ತೇನೆ. 6 ನೀವು ಅವರ ದೇಶವನ್ನು ದಾಟುವಾಗ ಅವರ ಆಹಾರಸಾಮಾಗ್ರಿಗಳಿಗೂ ನೀರಿಗೂ ಹಣವನ್ನು ಕೊಡಬೇಕು. 7 ನಿಮ್ಮ ದೇವರಾದ ಯೆಹೋವನು ಪ್ರತಿಯೊಂದು ವಿಷಯದಲ್ಲಿ ನಿಮ್ಮನ್ನು ಆಶೀರ್ವದಿಸಿದ್ದನ್ನು ನೆನಪಿಗೆ ತಂದುಕೊಳ್ಳಿರಿ. ಈ ಮಹಾ ಮರುಭೂಮಿಯ ಮೂಲಕ ನೀವು ನಡೆದುಹೋದದ್ದರ ಬಗ್ಗೆಯೂ ಆತನಿಗೆ ತಿಳಿದಿದೆ. ಕಳೆದ ನಲವತ್ತು ವರ್ಷಗಳಿಂದ ದೇವರು ನಿಮ್ಮೊಂದಿಗಿದ್ದು ನಿಮ್ಮನ್ನು ನಡಿಸಿದ್ದಾನೆ. ನಿಮಗೆ ಬೇಕಾದವುಗಳನ್ನೆಲ್ಲಾ ಒದಗಿಸಿರುತ್ತಾನೆ.’
8 “ಹಾಗೆ ನಾವು ನಮ್ಮ ಸಂಬಂಧಿಕರಾದ ಏಸಾವನ ಜನರ ದೇಶದ ಮೂಲಕ ಪ್ರಯಾಣ ಬೆಳೆಸಿದೆವು. ಜೋರ್ಡನ್ ಕಣಿವೆಯಿಂದ ಏಲತ್ ಮತ್ತು ಎಚ್ಯೋನ್ಗೆಬೆರ್ ಪಟ್ಟಣಗಳಿಗೆ ಹೋಗುವ ಮಾರ್ಗವನ್ನು ಬಿಟ್ಟು, ನಾವು ಮೋವಾಬ್ ದೇಶದ ಮರುಭೂಮಿಗೆ ಹೋಗುವ ರಸ್ತೆಯಲ್ಲಿ ನಡೆದೆವು.
ಆರ್‌ನಲ್ಲಿ ಇಸ್ರೇಲರು
9 “ಯೆಹೋವನು ನನಗೆ ಹೀಗೆ ಹೇಳಿದನು: ‘ಮೋವಾಬಿನ ಜನರಿಗೆ ತೊಂದರೆ ಕೊಡಬೇಡ. ಅವರ ವಿರುದ್ಧ ಯುದ್ಧಕ್ಕೆ ಹೋಗಬೇಡ; ಅವರ ದೇಶದಲ್ಲಿ ನಿಮಗೆ ಯಾವ ಪಾಲೂ ಸಿಗದು. ಅವರು ಲೋಟನ ಸಂತತಿಯವರು. ನಾನು ಅವರಿಗೆ ಆರ್ ಪಟ್ಟಣವನ್ನು ಕೊಟ್ಟಿರುತ್ತೇನೆ.’”
10 (ಹಿಂದಿನ ಕಾಲದಲ್ಲಿ, ಏಮಿಯ ಜನರು ಆರ್‌ನಲ್ಲಿ ವಾಸಮಾಡುತ್ತಿದ್ದರು. ಅವರು ಬಲಾಢ್ಯರೂ ಉನ್ನತ ಪುರುಷರೂ ಆಗಿದ್ದರು ಮತ್ತು ಅವರ ಸಂಖ್ಯೆ ಹೆಚ್ಚಾಗಿತ್ತು. 11 ಅವರು ಅನಾಕ್ಯರಂತೆ ರೆಫಾಯರಿಗೆ ಸೇರಿದವರೆಂದು ಹೇಳಲಾಗುತ್ತಿತ್ತು. ಆದರೆ ಮೋವಾಬ್ಯರು ಅವರನ್ನು ಏಮಿಯರು ಎಂದೇ ಕರೆಯುತ್ತಿದ್ದರು. 12 ಹೋರಿಯರು ಕೂಡಾ ಸೇಯೀರ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು. ಆದರೆ ಏಸಾವನ ಜನರು ಅವರಿಂದ ದೇಶವನ್ನು ವಶಮಾಡಿಕೊಂಡು, ಹೋರಿಯರನ್ನು ಸಂಹರಿಸಿ ಆ ದೇಶದಲ್ಲಿ ನೆಲೆಸಿದರು. ಇಸ್ರೇಲರೂ ಅದೇ ರೀತಿಯಲ್ಲಿ ಯೆಹೋವನು ವಾಗ್ದಾನ ಮಾಡಿದ ದೇಶದಲ್ಲಿದ್ದ ನಿವಾಸಿಗಳನ್ನು ಸೋಲಿಸಿ ಅವರ ದೇಶವನ್ನು ಸ್ವಾಧೀನ ಮಾಡಿಕೊಂಡರು.)
13 “ಯೆಹೋವನು ನನಗೆ, ‘ಜೆರೆದ್ ಕಣಿವೆಯ ಆಚೆಕಡೆಗೆ ಹೋಗು’ ಎಂದು ಹೇಳಿದನು. ಆದ್ದರಿಂದ ನಾವು ಜೆರೆದ್ ಕಣಿವೆಯನ್ನು ದಾಟಿದೆವು. 14 ಕಾದೇಶ್‌ಬರ್ನೇಯದಿಂದ ಜೆರೆದ್ ಕಣಿವೆಯನ್ನು ದಾಟಿ ಆಗಲೇ ಮೂವತ್ತೆಂಟು ವರ್ಷಗಳು ದಾಟಿದ್ದವು. ನಮ್ಮ ಸಮೂಹದಲ್ಲಿದ್ದ ಯುದ್ಧಭಟರೆಲ್ಲಾ ಸತ್ತುಹೋಗಿದ್ದರು. ಹೀಗೆ ಆಗುವುದೆಂದು ದೇವರು ಪ್ರಮಾಣ ಮಾಡಿದ್ದನು. 15 ಯೆಹೋವನು ಅವರಿಗೆ ವಿರುದ್ಧವಾಗಿ ಇದ್ದುದರಿಂದ ಅವರೆಲ್ಲಾ ಸತ್ತು ಜನಸಮೂಹದಿಂದ ಇಲ್ಲವಾದರು.
16 “ಯುದ್ಧಭಟರೆಲ್ಲಾ ಸತ್ತುಹೋದ ಬಳಿಕ 17 ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: 18 ‘ಈ ಹೊತ್ತು ಆರ್ ಎಂಬ ಪಟ್ಟಣದ ಗಡಿಯನ್ನು ದಾಟಿ ಮೋವಾಬ್ ದೇಶವನ್ನು ಪ್ರವೇಶಿಸಬೇಕು. 19 ನೀನು ಅಮ್ಮೋನಿಯರ ಬಳಿಗೆ ಹೋಗಬೇಕು. ಆದರೆ ಅವರಿಗೆ ತೊಂದರೆ ಕೊಡಬೇಡ. ಅವರೊಂದಿಗೆ ಯುದ್ಧಮಾಡಬೇಡ. ಯಾಕೆಂದರೆ ಅವರ ದೇಶದಲ್ಲಿ ನಿನಗೆ ಪಾಲಿಲ್ಲ. ಅವರು ಲೋಟನ ಸಂತತಿಯವರು, ಆ ದೇಶವನ್ನು ನಾನು ಅವರಿಗೆ ಕೊಟ್ಟಿರುತ್ತೇನೆ.’”
20 (ಆ ಪ್ರದೇಶವನ್ನು ರೆಫಾಯ ದೇಶವೆಂದೂ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ರೆಫಾಯರು ಅಲ್ಲಿ ವಾಸಿಸುತ್ತಿದ್ದರು. ಅಮ್ಮೋನಿಯರು ಅವರನ್ನು ಜಮ್‌ಜುಮ್ಯರು ಎಂದು ಕರೆಯುತ್ತಿದ್ದರು. 21 ಜಮ್‌ಜುಮ್ಯರು ತುಂಬಾ ಬಲಶಾಲಿಗಳಾಗಿದ್ದರು; ಅನಾಕ್ಯರಂತೆ ಉನ್ನತ ಪುರುಷರಾಗಿದ್ದರು. ಆದರೆ ಯೆಹೋವನು ಜಮ್‌ಜುಮ್ಯರನ್ನು ಸೋಲಿಸಲು ಅಮೋರಿಯರಿಗೆ ಸಹಾಯ ಮಾಡಿದನು. ಅಮೋರಿಯರು ಆ ದೇಶವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಈಗ ಅದರಲ್ಲಿ ನೆಲೆಸಿರುತ್ತಾರೆ. 22 ಏಸಾವನ ಜನರಿಗೂ ದೇವರು ಅದೇ ರೀತಿ ಮಾಡಿದನು. ಹಿಂದಿನ ಕಾಲದಲ್ಲಿ ಹೋರಿಯರು ಸೇಯೀರ್‌ನಲ್ಲಿ ವಾಸಿಸುತ್ತಿದ್ದರು. ಆದರೆ ಏಸಾವನ ಜನರು ಅವರನ್ನು ಸೋಲಿಸಿದರು. ಅವನ ಸಂತತಿಯವರು ಈಗಲೂ ಅಲ್ಲಿ ವಾಸಮಾಡುತ್ತಿದ್ದಾರೆ. 23 ಕಫ್ತೋರ್ಯದವರಿಗೂ ದೇವರು ಅದೇ ರೀತಿ ಮಾಡಿದ್ದನು. ಗಾಜಾದ ಸುತ್ತಲಿನ ಪಟ್ಟಣಗಳಲ್ಲಿ ಅವ್ವಿಯ ಜನರು ವಾಸಿಸುತ್ತಿದ್ದರು. ಆದರೆ ಕಫ್ತೋರ್ಯದಿಂದ ಬಂದ ಜನರು ಅವ್ವಿಯರನ್ನು ನಾಶಮಾಡಿ ಅವರ ದೇಶದಲ್ಲಿ ಈಗಲೂ ಅವರು ವಾಸಿಸಿರುತ್ತಾರೆ.)
ಅಮೋರಿಯರೊಂದಿಗೆ ಯುದ್ಧ
24 “ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಅರ್ನೋನ್ ಕಣಿವೆಯನ್ನು ದಾಟಲು ಸಿದ್ಧಪಡಿಸಿಕೊ. ಅಮೋರಿಯನೂ ಹೆಷ್ಬೋನಿನ ರಾಜನೂ ಆಗಿರುವ ಸೀಹೋನನನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುವೆನು. ಅವನ ರಾಜ್ಯವನ್ನು ನಾನು ನಿನಗೆ ಕೊಡುವೆನು. ಆದುದರಿಂದ ಅವನಿಗೆ ವಿರುದ್ಧವಾಗಿ ಯುದ್ಧಮಾಡಿ ದೇಶವನ್ನು ಸ್ವಾಧೀನಪಡಿಸಿಕೊ. 25 ಸುತ್ತಲಿರುವ ಜನಾಂಗಗಳು ನಿಮಗೆ ಹೆದರಿ ನಡುಗುವಂತೆ ನಾನು ಮಾಡುತ್ತಿದ್ದೇನೆ. ಅವರು ನಿಮ್ಮ ಬಗ್ಗೆ ಸುದ್ದಿಯನ್ನು ಕೇಳಿ ಹೆದರಿಕೊಳ್ಳುವರು ಮತ್ತು ಭಯದಿಂದ ನಡುಗುವರು.’
26 “ನಾವು ಕೆದೇಮೋತಿನ ಮರುಭೂಮಿಯಲ್ಲಿರುವಾಗ ಹೆಷ್ಬೋನಿನ ಅರಸನಾದ ಸೀಹೋನನ ಬಳಿಗೆ ದೂತರನ್ನು ಸಮಾಧಾನದ ಸಂದೇಶದೊಂದಿಗೆ ಕಳುಹಿಸಿದೆನು. ಆ ದೂತರು ಸೀಹೋನನಿಗೆ ಸಮಾಧಾನವನ್ನು ತಂದಿದ್ದರು. 27 ಅವರು ಸೀಹೋನನಿಗೆ, ‘ನಿನ್ನ ರಾಜ್ಯವನ್ನು ನಾವು ದಾಟುವಂತೆ ನಮಗೆ ಅಪ್ಪಣೆ ಕೊಡು. ನಾವು ಮಾರ್ಗದಲ್ಲಿ ಬಲಕ್ಕಾಗಲಿ ಎಡಕ್ಕಾಗಲಿ ಹೋಗುವುದಿಲ್ಲ. 28 ನಾವೇನಾದರೂ ನಿನ್ನ ದೇಶದ ಆಹಾರಪದಾರ್ಥಗಳನ್ನು ತೆಗೆದುಕೊಂಡರೆ, ನೀರನ್ನು ಉಪಯೋಗಿಸಿದರೆ ಅದಕ್ಕೆ ಪ್ರತಿಯಾಗಿ ಬೆಳ್ಳಿಯನ್ನು ಪಾವತಿ ಮಾಡುವೆವು. ನಿಮ್ಮ ದೇಶದ ಮೂಲಕ ನಾವು ಹಾದುಹೋಗಬೇಕಾಗಿದೆಯಷ್ಟೇ. 29 ನಾವು ಜೋರ್ಡನ್ ನದಿಯನ್ನು ದಾಟುವವರೆಗೆ ನಿಮ್ಮ ದೇಶದ ಮೂಲಕ ಹೋಗಿ, ನಮ್ಮ ದೇವರಾದ ಯೆಹೋವನು ಕೊಡಲಿರುವ ದೇಶವನ್ನು ಪ್ರವೇಶಿಸುತ್ತೇವೆ. ಸೇಯೀರ್‌ನಲ್ಲಿ ವಾಸಿಸುವ ಏಸಾವನ ಜನರೂ, ಆರ್‌ನಲ್ಲಿ ವಾಸಿಸುವ ಮೋವಾಬ್ಯರೂ ತಮ್ಮ ದೇಶಗಳ ಮೂಲಕ ಹೋಗಲು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಹೇಳಿದರು.
30 “ಆದರೆ ಸೀಹೋನನು ನಮಗೆ ದಾಟಿಹೋಗಲು ಬಿಡಲಿಲ್ಲ. ನಮ್ಮ ದೇವರಾದ ಯೆಹೋವನು ಅವನ ಹೃದಯವನ್ನು ಕಠಿಣಗೊಳಿಸಿದನು. ನಾವು ಅವನನ್ನು ಸೋಲಿಸಿ ಅವನ ರಾಜ್ಯವನ್ನು ವಶಪಡಿಸಿಕೊಳ್ಳಬೇಕೆಂದು ಯೆಹೋವನು ಹಾಗೆ ಮಾಡಿದನು. ಆ ರಾಜ್ಯವು ಇಂದಿಗೂ ನಮ್ಮ ವಶದಲ್ಲಿದೆ.
31 “ಯೆಹೋವನು ನನಗೆ, ‘ನಾನು ನಿನಗೆ ಸೀಹೋನನನ್ನೂ ಅವನ ಎಲ್ಲಾ ಜನರನ್ನೂ ಅವನ ದೇಶವನ್ನೂ ನಿನಗೆ ಕೊಡುತ್ತೇನೆ. ಈಗ ಹೋಗಿ ಅವನ ದೇಶವನ್ನು ವಶಪಡಿಸಿಕೊ!’ ಎಂದು ಹೇಳಿದನು.
32 “ಅನಂತರ ಸೀಹೋನ್ ಅರಸನೂ ಅವನ ಜನರೂ ನಮ್ಮೊಂದಿಗೆ ಕಾದಾಡಲು ಯಹಜಿ ಎಂಬ ಸ್ಥಳಕ್ಕೆ ಬಂದರು. 33 ಆದರೆ ನಮ್ಮ ದೇವರಾದ ಯೆಹೋವನು ಅವನನ್ನು ನಮ್ಮ ವಶಕ್ಕೆ ಕೊಟ್ಟನು. ನಾವು ಸೀಹೋನ್ ಅರಸನನ್ನೂ ಅವನ ಮಕ್ಕಳನ್ನೂ ಅವನ ಎಲ್ಲಾ ಜನರನ್ನೂ ಸದೆಬಡೆದು ಸೋಲಿಸಿದೆವು. 34 ಅವನಿಗೆ ಒಳಪಟ್ಟ ಪಟ್ಟಣಗಳನ್ನೆಲ್ಲಾ ವಶಪಡಿಸಿಕೊಂಡೆವು. ಪ್ರತಿಯೊಂದು ಪಟ್ಟಣದಲ್ಲಿದ್ದ ಗಂಡಸರು, ಹೆಂಗಸರು, ಮಕ್ಕಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದೆವು. ಯಾರನ್ನೂ ಜೀವಂತವಾಗಿ ಉಳಿಸಲಿಲ್ಲ. 35 ಅವರ ದನಕರುಗಳನ್ನು ಮತ್ತು ಅವರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಸೂರೆಮಾಡಿದೆವು. 36 ನಾವು ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಎಂಬ ಊರನ್ನು ಮತ್ತು ಆ ಕಣಿವೆಯ ಮಧ್ಯದಲ್ಲಿದ್ದ ಇನ್ನೊಂದು ಊರನ್ನು ವಶಪಡಿಸಿಕೊಂಡೆವು. ಅರ್ನೋನ್ ಕಣಿವೆ ಮತ್ತು ಗಿಲ್ಯಾದ್‌ಗಳ ನಡುವೆ ಇರುವ ಎಲ್ಲಾ ಪಟ್ಟಣಗಳನ್ನು ಸೋಲಿಸಲು ಯೆಹೋವನು ಅವಕಾಶ ಮಾಡಿಕೊಟ್ಟನು. ಯಾವ ಪಟ್ಟಣವೂ ನಮಗೆ ಅಸಾಧ್ಯವಾಗಿ ಕಂಡುಬರಲಿಲ್ಲ. 37 ಆದರೆ ಅಮ್ಮೋನಿಯರಿಗೆ ಸೇರಿದ ದೇಶದ ಸಮೀಪಕ್ಕೆ ನಾವು ಹೋಗಲಿಲ್ಲ: ಯಬ್ಬೋಕ್ ನದಿಯ ಬದಿಗೂ ನಾವು ಹೋಗಲಿಲ್ಲ: ಬೆಟ್ಟಪ್ರದೇಶಗಳ ಪಟ್ಟಣಗಳಿಗೂ ನಾವು ಹೋಗಲಿಲ್ಲ: ನಮ್ಮ ದೇವರಾದ ಯೆಹೋವನು ನಮಗೆ ಕೊಡದೆ ಇರುವ ದೇಶಗಳ ಬಳಿಗೆ ನಾವು ಹೋಗಲೇ ಇಲ್ಲ.
Kannada Holy Bible: Easy-to-Read Version. All rights reserved. © 1997 Bible League International