Beginning
ಕಾನಾನ್ಯರೊಡನೆ ಯುದ್ಧ
21 ಕಾನಾನ್ಯನಾಗಿದ್ದ ಅರಾದಿನ ರಾಜನು ನೆಗೆವ್‌ನಲ್ಲಿದ್ದುಕೊಂಡು ರಾಜ್ಯಭಾರ ಮಾಡುತ್ತಿದ್ದನು. ಇಸ್ರೇಲರು ಅತಾರೀಮಿನ ಮಾರ್ಗವಾಗಿ ಬರುತ್ತಾರೆಂಬ ಸುದ್ದಿಯು ಅವನಿಗೆ ಮುಟ್ಟಿತು. ಆದ್ದರಿಂದ ಅವನು ಹೋಗಿ ಇಸ್ರೇಲರೊಡನೆ ಯುದ್ಧಮಾಡಿ ಅವರಲ್ಲಿ ಕೆಲವರನ್ನು ಸೆರೆಹಿಡಿದನು. 2 ಇಸ್ರೇಲರು ಯೆಹೋವನಿಗೆ ಹರಕೆಯನ್ನು ಮಾಡಿಕೊಂಡು, “ನಾವು ಈ ಜನರನ್ನು ಜಯಿಸುವಂತೆ ನೀನು ಅನುಗ್ರಹಿಸಿದರೆ ನಾವು ಅವರ ಗ್ರಾಮಗಳನ್ನು ಪೂರ್ಣವಾಗಿ ಹಾಳುಮಾಡಿ ಯೆಹೋವನಿಗಾಗಿಯೇ ಬಿಟ್ಟುಬಿಡುತ್ತೇವೆ” ಅಂದರು.
3 ಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಜಯಿಸಲು ಸಹಾಯಮಾಡಿದ್ದರಿಂದ ಅವರು ಕಾನಾನ್ಯರನ್ನೂ ಅವರ ಗ್ರಾಮಗಳನ್ನೂ ಸಂಪೂರ್ಣವಾಗಿ ನಾಶಮಾಡಿಬಿಟ್ಟರು. ಆದ್ದರಿಂದ ಆ ಪ್ರದೇಶಕ್ಕೆ ಹೊರ್ಮಾ ಎಂದು ಹೆಸರಾಯಿತು.
ತಾಮ್ರದ ಸರ್ಪ
4 ಇಸ್ರೇಲರು ಹೋರ್ ಬೆಟ್ಟದಿಂದ ಹೊರಟು ಕೆಂಪು ಸಮುದ್ರದ ಮಾರ್ಗವಾಗಿ ಪ್ರಯಾಣಮಾಡಿದರು. ಅವರು ಎದೋಮ್ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಹೀಗೆ ಮಾಡಿದರು. ಜನರು ಮಾರ್ಗದಲ್ಲಿ ತಾಳ್ಮೆ ತಪ್ಪಿದರು. 5 ಆಗ ಅವರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತಾಡುತ್ತಾ, “ಈ ಮರುಭೂಮಿಯಲ್ಲಿ ಸಾಯಲೆಂದು ನಮ್ಮನ್ನು ಈಜಿಪ್ಟಿನಿಂದ ಯಾಕೆ ಬರಮಾಡಿದೆ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ. ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಯಿತು” ಎಂದು ಹೇಳಿದರು.
6 ಆದ್ದರಿಂದ ಯೆಹೋವನು ಅವರ ಮಧ್ಯದಲ್ಲಿ ವಿಷಕರವಾದ ಹಾವುಗಳನ್ನು ಕಳುಹಿಸಿದನು. ಅವುಗಳು ಅವರನ್ನು ಕಚ್ಚಿದ್ದರಿಂದ ಅನೇಕ ಇಸ್ರೇಲರು ಸತ್ತರು. 7 ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿನಗೂ ಯೆಹೋವನಿಗೂ ವಿರೋಧವಾಗಿ ಮಾತಾಡಿ ಪಾಪ ಮಾಡಿದ್ದೇವೆ. ಈ ಸರ್ಪಗಳನ್ನು ನಮ್ಮಿಂದ ತೊಲಗಿ ಹೋಗುವಂತೆ ಪ್ರಾರ್ಥನೆ ಮಾಡು” ಎಂದು ಬೇಡಿಕೊಂಡರು. ಮೋಶೆ ಜನರಿಗೋಸ್ಕರ ಪ್ರಾರ್ಥಿಸಿದನು.
8 ಯೆಹೋವನು ಮೋಶೆಗೆ, “ನೀನು ತಾಮ್ರದಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು, ಸರ್ಪಗಳಿಂದ ಕಚ್ಚಿಸಿಕೊಂಡವನು ಅದನ್ನು ನೋಡಿದರೆ ಬದುಕಿಕೊಳ್ಳುವನು” ಎಂದು ಆಜ್ಞಾಪಿಸಿದನು. 9 ಆದ್ದರಿಂದ ಮೋಶೆ ತಾಮ್ರದಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಕಚ್ಚಿಸಿಕೊಂಡಿದ್ದವನು ಆ ತಾಮ್ರದ ಸರ್ಪವನ್ನು ನೋಡಿ ಬದುಕಿಕೊಂಡನು.
ಹೋರ್ ಬೆಟ್ಟದಿಂದ ಮೋವಾಬಿಗೆ
10 ಇಸ್ರೇಲರು ಪ್ರಯಾಣವನ್ನು ಮುಂದುವರಿಸಿ ಓಬೋತ್ ಎಂಬ ಸ್ಥಳದಲ್ಲಿ ಇಳಿದುಕೊಂಡರು. 11 ಬಳಿಕ ಅವರು ಓಬೋತಿನಿಂದ ಇಯ್ಯೇ ಅಬಾರೀಮಿಗೆ ಹೋದರು. ಇದು ಮೋವಾಬಿನ ಪೂರ್ವದಲ್ಲಿರುವ ಮರುಭೂಮಿಯ ಪ್ರದೇಶದಲ್ಲಿತ್ತು. 12 ಬಳಿಕ ಜನರು ಅಲ್ಲಿಂದ ಹೊರಟು ಜೆರೆದ್ ಕಣಿವೆಗೆ ಪ್ರಯಾಣ ಮಾಡಿ ಅಲ್ಲಿ ಇಳಿದುಕೊಂಡರು. 13 ಅವರು ಅಲ್ಲಿಂದ ಹೊರಟು ಅರ್ನೋನ್ ಹೊಳೆಯ ಆಚೆ ಕಡೆಯಲ್ಲಿ ಅಂದರೆ ಅಮೋರಿಯರ ಪ್ರದೇಶದೊಳಗೆ ವಿಸ್ತರಿಸಿರುವ ಮರುಭೂಮಿಯಲ್ಲಿ ಪಾಳೆಯ ಮಾಡಿಕೊಂಡರು. ಅರ್ನೋನ್ ನದಿಯು ಮೋವಾಬ್ಯರಿಗೂ ಅಮೋರಿಯರಿಗೂ ಗಡಿಯಾಗಿದೆ. 14 ಅದಕ್ಕನುಸಾರವಾಗಿ “ಯೆಹೋವನ ಯುದ್ಧಗಳು” ಎಂಬ ಗ್ರಂಥದಲ್ಲಿ,
“ಸೂಫದಲ್ಲಿರುವ ವಾಹೇಬನ್ನು, ಅರ್ನೋನ್ ಹೊಳೆಗೆ ಕೂಡುವ ಕಣಿವೆಗಳನ್ನು ಮತ್ತು 15 ಆರ್ ವಸತಿ ಪ್ರದೇಶಕ್ಕೆ ನಡೆಸುವ ಮೋವಾಬಿನ ಗಡಿಯ ಉದ್ದಕ್ಕೂ ಇರುವ ಕಣಿವೆಗಳನ್ನು ದಾಟಿದ್ದಾಯಿತು” ಎಂದು ಬರೆದಿದೆ.
16 ಅಲ್ಲಿಂದ ಅವರು ಬೇರ್ ಎಂಬ ಸ್ಥಳಕ್ಕೆ ಬಂದರು. “ಜನರನ್ನು ಕೂಡಿಸಿಕೊ, ನಾನು ಅವರಿಗೆ ನೀರನ್ನು ಕೊಡುವೆನು” ಎಂದು ಯೆಹೋವನು ಮೋಶೆಗೆ ಹೇಳಿದ್ದು ಈ ಬಾವಿಯ ಸ್ಥಳದಲ್ಲೇ. 17 ಆಗ ಇಸ್ರೇಲರು ಈ ಹಾಡನ್ನು ಹಾಡಿದರು:
“ಬಾವಿಯೇ, ಉಕ್ಕುತ್ತಾ ಬಾ!
ಜನರೇ, ಅದರ ಕುರಿತು ಹಾಡಿ!
18 ಪ್ರಧಾನರು ಈ ಬಾವಿಯನ್ನು ತೋಡಿದರು.
ಪ್ರಮುಖ ನಾಯಕರು ಈ ಬಾವಿಯನ್ನು ತೋಡಿದರು.
ಅವರು ತಮ್ಮ ದೊಣ್ಣೆಗಳಿಂದ ಮತ್ತು ಕೋಲುಗಳಿಂದ ಈ ಬಾವಿಯನ್ನು ಅಗೆದರು.”
ಆಮೇಲೆ ಜನರು “ಮತ್ತಾನ” ಎಂಬ ಮರುಭೂಮಿಯಿಂದ ಹೊರಟರು. 19 ಬಳಿಕ ಅವರು ಮತ್ತಾನದಿಂದ ನಹಲೀಯೇಲಿಗೆ ಪ್ರಯಾಣ ಮಾಡಿದರು. ಬಳಿಕ ಅವರು ನಹಲೀಯೇಲಿನಿಂದ ಬಾಮೋತಿಗೆ ಪ್ರಯಾಣ ಮಾಡಿದರು. 20 ಜನರು ಬಾಮೋತಿನಿಂದ ಮೋವಾಬ್ಯರ ಪ್ರದೇಶದ ಕಣಿವೆಗೆ ಪ್ರಯಾಣ ಮಾಡಿದರು. ಪಿಸ್ಗಾ ಬೆಟ್ಟದ ತುದಿಯ ಸಮೀಪದಲ್ಲಿ ನಿಂತುಕೊಂಡರೆ ಮರುಭೂಮಿಯು ಕಾಣುವುದು.
ಸೀಹೋನ್ ಮತ್ತು ಓಗ್
21 ಇಸ್ರೇಲರು ಸಂದೇಶಕರನ್ನು ಅಮೋರಿಯರ ಅರಸನಾದ ಸೀಹೋನನ ಬಳಿಗೆ ಕಳುಹಿಸಿದರು. ಅವರು ಅರಸನಿಗೆ,
22 “ನಿಮ್ಮ ದೇಶವನ್ನು ಹಾದುಹೋಗುವುದಕ್ಕೆ ನಮಗೆ ಅಪ್ಪಣೆಕೊಡು. ನಿಮ್ಮ ಹೊಲಗಳಿಗಾಗಲಿ ದ್ರಾಕ್ಷಿತೋಟಗಳಿಗಾಗಲಿ ನಾವು ತಿರುಗಿಕೊಳ್ಳುವುದಿಲ್ಲ. ನಿಮ್ಮ ಯಾವ ಬಾವಿಗಳಿಂದಲೂ ನಾವು ನೀರು ಕುಡಿಯುವುದಿಲ್ಲ. ನಾವು ನಿಮ್ಮ ದೇಶವನ್ನು ದಾಟಿಹೋಗುವ ತನಕ ರಾಜಮಾರ್ಗದಲ್ಲಿಯೇ ಪ್ರಯಾಣ ಮಾಡುತ್ತೇವೆ” ಎಂದು ಹೇಳಿದರು.
23 ಆದರೆ ಅರಸನಾದ ಸೀಹೋನನು ಇಸ್ರೇಲರಿಗೆ ತನ್ನ ದೇಶದ ಮೂಲಕ ಹಾದುಹೋಗಲು ಬಿಡಲಿಲ್ಲ. ಅರಸನು ತನ್ನ ಇಡೀ ಸೈನ್ಯವನ್ನು ಕೂಡಿಸಿಕೊಂಡು ಇಸ್ರೇಲರ ವಿರುದ್ಧ ಯುದ್ಧಮಾಡಲು ಮರುಭೂಮಿಯ ಕಡೆಗೆ ಹೊರಟನು. ಅವನು ಯಹಜ್ ಎಂಬಲ್ಲಿಗೆ ಬಂದನು; ಅಲ್ಲಿ ರಾಜನ ಸೈನ್ಯವು ಇಸ್ರೇಲರಿಗೆ ವಿರೋಧವಾಗಿ ಯುದ್ಧಮಾಡಿತು.
24 ಆದರೆ ಇಸ್ರೇಲರು ಅರಸನನ್ನು ಕೊಂದುಹಾಕಿದರು. ಬಳಿಕ ಅವರು ಅರ್ನೋನ್ ನದಿಯಿಂದ ಹಿಡಿದು ಯಬ್ಬೋಕ್ ನದಿಯವರೆಗಿರುವ ಅವನ ಭೂಮಿಯನ್ನು ವಶಪಡಿಸಿಕೊಂಡರು. ಅವರು ಅಮ್ಮೋನಿಯರ ಮೇರೆಯವರೆಗಿರುವ ಪ್ರದೇಶವನ್ನೆಲ್ಲಾ ವಶಪಡಿಸಿಕೊಂಡರು. ಅಮ್ಮೋನಿಯರು ತಮ್ಮ ಗಡಿಯನ್ನು ಭದ್ರವಾಗಿ ರಕ್ಷಿಸಿಕೊಂಡದ್ದರಿಂದ ಇಸ್ರೇಲರು ಮುಂದಕ್ಕೆ ಹೋಗಲಿಲ್ಲ. 25 ಇಸ್ರೇಲರು ಅಮೋರಿಯರ ಪಟ್ಟಣಗಳನ್ನೆಲ್ಲಾ ವಶಪಡಿಸಿಕೊಂಡು ಅವುಗಳಲ್ಲಿ ವಾಸಿಸಿದರು. ಅವರು ಹೆಷ್ಬೋನನ್ನು ಮತ್ತು ಅದರ ಸುತ್ತಲಿರುವ ಎಲ್ಲಾ ಚಿಕ್ಕ ಪಟ್ಟಣಗಳನ್ನು ಸಹ ವಶಪಡಿಸಿಕೊಂಡರು. 26 ಹೆಷ್ಬೋನಿನಲ್ಲಿ ಅಮೋರಿಯರ ಅರಸನಾದ ಸೀಹೋನನು ವಾಸಿಸುತ್ತಿದ್ದನು. ಸೀಹೋನನು ಮೊದಲಿನ ಮೋವಾಬ್ಯರ ಅರಸನೊಡನೆ ಯುದ್ಧ ಮಾಡಿದ್ದನು. ಸೀಹೋನನು ಅರ್ನೋನ್ ನದಿಯವರೆಗಿರುವ ಆ ರಾಜನ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿದ್ದನು. 27 ಆದಕಾರಣ ಹಾಡುವವರು ಈ ಗೀತೆಯನ್ನು ಹಾಡುತ್ತಾರೆ:
“ಹೆಷ್ಬೋನಿಗೆ, ಬಾ! ಮತ್ತೆ ಅದನ್ನು ನಿರ್ಮಿಸು!
ಸೀಹೋನನ ಪಟ್ಟಣವನ್ನು ಮತ್ತೆ ಸ್ಥಾಪಿಸಿರಿ.
28 ಹೆಷ್ಬೋನಿನಲ್ಲಿ ಬೆಂಕಿಯುಂಟಾಯಿತು.
ಆ ಬೆಂಕಿ ಸೀಹೋನನ ಪಟ್ಟಣದಲ್ಲಿ ಉಂಟಾಯಿತು.
ಆ ಬೆಂಕಿಯು ಮೋವಾಬಿನಲ್ಲಿರುವ ‘ಆರ್’ ಪಟ್ಟಣವನ್ನು ನಾಶಮಾಡಿತು.
ಅದು ಅರ್ನೋನ್ ನದಿಯ ಬಳಿಯಲ್ಲಿರುವ ಬೆಟ್ಟಗಳನ್ನು ಸುಟ್ಟುಹಾಕಿತು.
29 ಮೋವಾಬೇ, ಇದು ನಿನಗೆ ಕೆಟ್ಟದ್ದಾಗಿದೆ.
ಕೆಮೋಷಿನ ಜನರೇ, ನೀವು ನಾಶವಾದಿರಿ.
ಅವನ ಪುತ್ರರು ಓಡಿಹೋದರು.
ಅಮೋರಿಯ ರಾಜನಾದ ಸೀಹೋನನು ಅವನ ಪುತ್ರಿಯರನ್ನು ಸೆರೆ ಒಯ್ದನು.
30 ಆದರೆ ನಾವು ಆ ಅಮೋರಿಯರನ್ನು ಸೋಲಿಸಿದೆವು.
ಹೆಷ್ಬೋನಿನಿಂದ ದೀಬೋನಿನವರೆಗಿರುವ ಅವರ ಪಟ್ಟಣಗಳನ್ನೂ
ನಾಶೀಮಿನಿಂದ ನೋಫಹದ (ಮೇದೆಬಾದ ಹತ್ತಿರ) ವರೆಗಿರುವ ಪಟ್ಟಣಗಳನ್ನೂ ನಾವು ನಾಶಮಾಡಿದೆವು.”
31 ಹೀಗೆ ಇಸ್ರೇಲರು ಅಮೋರಿಯರ ದೇಶದಲ್ಲಿ ತಮ್ಮ ಪಾಳೆಯ ಹಾಕಿದರು.
32 ಮೋಶೆಯು ಯಗ್ಜೇರ್ ಪಟ್ಟಣದ ಗುಟ್ಟನ್ನು ತಿಳಿದುಕೊಂಡು ಬರುವುದಕ್ಕೆ ಕೆಲವು ಜನರನ್ನು ಕಳುಹಿಸಿದ ನಂತರ, ಇಸ್ರೇಲರು ಆ ಪಟ್ಟಣವನ್ನು ವಶಪಡಿಸಿಕೊಂಡರು. ಅದರ ಸುತ್ತಲಿರುವ ಚಿಕ್ಕ ಪಟ್ಟಣಗಳನ್ನು ಅವರು ವಶಪಡಿಸಿಕೊಂಡರು. ಇಸ್ರೇಲರು ಅಲ್ಲಿದ್ದ ಅಮೋರಿಯರನ್ನು ಓಡಿಸಿದರು.
33 ಬಳಿಕ ಇಸ್ರೇಲರು ಬೇರೆ ದಿಕ್ಕಿಗೆ ತಿರುಗಿ ಬಾಷಾನಿನ ಮಾರ್ಗವಾಗಿ ಪ್ರಯಾಣಮಾಡಿದರು. ಆಗ ಬಾಷಾನಿನ ಅರಸನಾದ ಓಗನು ಎದ್ರೈ ಎಂಬಲ್ಲಿ ಇಸ್ರೇಲರೊಂದಿಗೆ ಯುದ್ಧಮಾಡಲು ತನ್ನ ಸೈನ್ಯ ಸಮೇತವಾಗಿ ಬಂದನು.
34 ಆದರೆ ಯೆಹೋವನು ಮೋಶೆಗೆ, “ಆ ಅರಸನಿಗೆ ಹೆದರಬೇಡ. ನೀನು ಅವನನ್ನು ಸೋಲಿಸುವಂತೆ ಮಾಡುವೆನು. ನೀನು ಅವನ ಸೈನ್ಯವನ್ನು ಮತ್ತು ಅವನ ದೇಶವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವೆ. ಹೆಷ್ಬೋನಿನಲ್ಲಿ ವಾಸಿಸಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದಂತೆ ಇವನಿಗೂ ಸಹ ಮಾಡುವಿರಿ” ಅಂದನು.
35 ಇಸ್ರೇಲರು ಓಗನನ್ನೂ ಅವನ ಸೈನ್ಯವನ್ನೂ ಸೋಲಿಸಿದರು. ಅವರು ಅವನನ್ನೂ ಅವನ ಪುತ್ರರನ್ನೂ ಕೊಂದುಹಾಕಿ ಅವನ ಸೈನ್ಯವನ್ನೆಲ್ಲಾ ನಾಶಮಾಡಿದರು. ಯಾರನ್ನೂ ಜೀವಂತವಾಗಿ ಉಳಿಸಲಿಲ್ಲ. ಇಸ್ರೇಲರು ಅವನ ದೇಶವನ್ನು ವಶಪಡಿಸಿಕೊಂಡರು.
ಬಿಳಾಮನು ಮತ್ತು ಮೋವಾಬ್ಯರ ಅರಸನು
22 ಬಳಿಕ ಇಸ್ರೇಲರು ಹೊರಟು ಜೆರಿಕೊ ಪಟ್ಟಣದ ಎದುರಾಗಿದ್ದ ಯೊರ್ದನ್ ನದಿಯ ಆಚೆ ಕಡೆಯಲ್ಲಿರುವ ಮೋವಾಬ್ಯರ ಬಯಲುಗಳಲ್ಲಿ ಪಾಳೆಯ ಮಾಡಿಕೊಂಡರು.
2 ಚಿಪ್ಪೋರನ ಮಗನಾದ ಬಾಲಾಕನು ಮೋವಾಬ್ಯರ ಅರಸನಾಗಿದ್ದನು. ಇಸ್ರೇಲರು ಅಮೋರಿಯರಿಗೆ ಮಾಡಿದ್ದೆಲ್ಲವನ್ನು ಅವನು ಕಂಡಿದ್ದನು. 3 ಮೋವಾಬ್ಯರು ನಿಜವಾಗಿಯೂ ಬಹಳ ಭಯಗೊಂಡಿದ್ದರು. ಯಾಕೆಂದರೆ ಇಸ್ರೇಲರು ಬಹುಸಂಖ್ಯಾತರಾಗಿದ್ದರು.
4 ಮೋವಾಬ್ಯರು ಮಿದ್ಯಾನ್ಯರ ಹಿರಿಯರಿಗೆ, “ಈ ಜನಸಮೂಹವು ನಮ್ಮನ್ನೂ ನಮ್ಮ ಸುತ್ತಲಿರುವ ಎಲ್ಲವನ್ನೂ ಹೋರಿಯಂತೆ ನಾಶಮಾಡುವುದು” ಎಂದು ಹೇಳಿದರು.
ಮೋವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ ಬಾಲಾಕನು, 5 ಬೆಯೋರನ ಮಗನಾದ ಬಿಳಾಮನನ್ನು ಕರೆಸುವುದಕ್ಕೆ ಕೆಲವು ಸಂದೇಶಕರನ್ನು ಕಳುಹಿಸಿದನು. ಬಿಳಾಮನು ಯೂಫ್ರೆಟೀಸ್ ನದಿಯ ಬಳಿ “ಪೆತೋರ್” ಎಂಬ ಸ್ಥಳದಲ್ಲಿದ್ದನು. ಬಿಳಾಮನ ಜನರು ಇಲ್ಲಿ ವಾಸಿಸುತ್ತಿದ್ದರು. ಬಾಲಾಕನು ತನ್ನ ಸಂದೇಶಕರನ್ನು ಕಳುಹಿಸಿ ಬಿಳಾಮನಿಗೆ,
“ಒಂದು ಜನಾಂಗವು ಈಜಿಪ್ಟಿನಿಂದ ಬಂದಿದೆ. ಅವರು ದೇಶವನ್ನೆಲ್ಲಾ ಮುಚ್ಚಿಕೊಂಡು ನನ್ನ ಪಕ್ಕದಲ್ಲಿ ನೆಲೆಸಿದ್ದಾರೆ. ಅವರು ನಮಗಿಂತ ಬಲಿಷ್ಠರು. 6 ಆದ್ದರಿಂದ ನೀನು ದಯಮಾಡಿ ಬಂದು ನನಗೋಸ್ಕರ ಈ ಜನಕ್ಕೆ ಶಾಪಕೊಡಬೇಕು, ಯಾಕೆಂದರೆ ಅವರು ನನಗಿಂತ ಬಲಿಷ್ಠರಾಗಿದ್ದಾರೆ. ನೀನು ಶಪಿಸಿದರೆ ಆಗ ನಾನು ಅವರನ್ನು ಸೋಲಿಸಿ ಈ ದೇಶದಿಂದ ಓಡಿಸಲು ನನಗೆ ಸಾಧ್ಯವಾಗುವುದು. ನೀನು ಯಾವನನ್ನು ಆಶೀರ್ವದಿಸುವಿಯೋ ಅವನು ಯಶಸ್ವಿಯಾಗುವನೆಂದೂ ನೀನು ಯಾವನನ್ನು ಶಪಿಸುವೆಯೋ ಅವನಿಗೆ ಸೋಲಾಗುವುದೆಂದೂ ನನಗೆ ಗೊತ್ತಿದೆ” ಎಂದು ಹೇಳಿದನು.
7 ಮೋವಾಬ್ಯರ ಹಿರಿಯರು ಮತ್ತು ಮಿದ್ಯಾನ್ಯರ ಹಿರಿಯರು ಬಿಳಾಮನ ಸೇವೆಗೋಸ್ಕರ ಹಣ ಕೊಡಲು ಹಣವನ್ನು ತೆಗೆದುಕೊಂಡು ಹೊರಟು ಅವನ ಬಳಿಗೆ ಬಂದು ಬಾಲಾಕನ ಮಾತುಗಳನ್ನು ತಿಳಿಸಿದರು.
8 ಬಿಳಾಮನು, “ಈ ರಾತ್ರಿ ನೀವು ಇಲ್ಲೇ ಇಳಿದುಕೊಳ್ಳಿರಿ. ಯೆಹೋವನು ನನಗೆ ಹೇಳುವ ಮಾತನ್ನು ಬೆಳಿಗ್ಗೆ ನಿಮಗೆ ತಿಳಿಸುವೆನು” ಎಂದು ಹೇಳಿದನು. ಆದ್ದರಿಂದ ಮೋವಾಬ್ಯರ ಹಿರಿಯರು ಆ ರಾತ್ರಿ ಬಿಳಾಮನ ಮನೆಯಲ್ಲಿ ಇಳಿದುಕೊಂಡರು.
9 ದೇವರು ಬಿಳಾಮನ ಬಳಿಗೆ ಬಂದು, “ನಿನ್ನ ಬಳಿಯಲ್ಲಿರುವ ಈ ಮನುಷ್ಯರು ಯಾರು?” ಎಂದು ಕೇಳಿದನು.
10 ಬಿಳಾಮನು ದೇವರಿಗೆ, “ಮೋವಾಬ್ಯರ ಅರಸನು ಅಂದರೆ ಚಿಪ್ಪೋರನ ಮಗನಾದ ಬಾಲಾಕನು ನನ್ನ ಬಳಿಗೆ ದೂತರನ್ನು ಕಳುಹಿಸಿ, 11 ಒಂದು ಜನಾಂಗವು ಈಜಿಪ್ಟಿನಿಂದ ಹೊರಟು ಬಂದಿದೆ ಮತ್ತು ಅವರು ದೇಶವನ್ನೆಲ್ಲಾ ಮುಚ್ಚಿಕೊಂಡಿದ್ದಾರೆ. ಈಗ ನೀನು ಬಂದು ನನಗೋಸ್ಕರ ಅವರನ್ನು ಶಪಿಸು. ನೀನು ಶಪಿಸಿದರೆ, ನಾನು ಅವರನ್ನು ಸೋಲಿಸಲು ಮತ್ತು ಓಡಿಸಲು ಸಾಧ್ಯವಾಗುತ್ತದೆ ಎಂಬುದಾಗಿ ಹೇಳಿ ಕಳುಹಿಸಿದ್ದಾನೆ” ಎಂದು ಉತ್ತರಕೊಟ್ಟನು.
12 ಅದಕ್ಕೆ ದೇವರು ಬಿಳಾಮನಿಗೆ, “ನೀನು ಅವರ ಜೊತೆಯಲ್ಲಿ ಹೋಗಬಾರದು, ಆ ಜನರಿಗೆ ಶಾಪಕೊಡಬಾರದು. ನಾನು ಅವರನ್ನು ಆಶೀರ್ವದಿಸಿದ್ದೇನೆ” ಎಂದು ಹೇಳಿದನು.
13 ಮರುದಿನ ಬೆಳಿಗ್ಗೆ ಬಿಳಾಮನು ಎದ್ದು ಬಾಲಾಕನ ಹಿರಿಯರಿಗೆ, “ನಿಮ್ಮ ಸ್ವಂತ ದೇಶಕ್ಕೆ ಹಿಂದಕ್ಕೆ ಹೋಗಿರಿ. ನಿಮ್ಮ ಸಂಗಡ ಬರಲು ಯೆಹೋವನು ನನಗೆ ಅಪ್ಪಣೆ ಕೊಡುತ್ತಿಲ್ಲ” ಎಂದು ಹೇಳಿದನು.
14 ಮೋವಾಬ್ಯರ ನಾಯಕರು ಬಾಲಾಕನ ಬಳಿಗೆ ಹಿಂತಿರುಗಿ, “ಬಿಳಾಮನು ನಮ್ಮೊಡನೆ ಬರಲು ಒಪ್ಪುತ್ತಿಲ್ಲ” ಎಂದು ತಿಳಿಸಿದರು.
15 ಆದ್ದರಿಂದ ಬಾಲಾಕನು ಅವರಿಗಿಂತಲೂ ಶ್ರೇಷ್ಠರಾದ ಅನೇಕ ನಾಯಕರನ್ನು ಕಳುಹಿಸಿದನು. 16 ಇವರು ಬಿಳಾಮನ ಬಳಿಗೆ ಬಂದು ಅವನಿಗೆ, “ಚಿಪ್ಪೋರನ ಮಗನಾದ ಬಾಲಾಕನು ಹೀಗೆನ್ನುತ್ತಾನೆ: ನೀನು ನನ್ನ ಬಳಿಗೆ ಬರಲು ಅಡ್ಡಿಮಾಡುವ ಯಾವುದಕ್ಕೂ ಅವಕಾಶ ಕೊಡಬೇಡ. 17 ನಾನು ಹೇಳುವುದನ್ನು ನೀನು ಮಾಡಿದರೆ, ನಾನು ನಿನಗೆ ಹಣವನ್ನು ಮತ್ತು ಗೌರವವನ್ನು ಬಹಳವಾಗಿ ಕೊಡುವೆನು ಮತ್ತು ನೀನು ಹೇಳಿದ್ದೆಲ್ಲವನ್ನು ಮಾಡುವೆನು. ಬಂದು, ನನಗಾಗಿ ಈ ಜನರನ್ನು ಶಪಿಸು” ಎಂದು ಹೇಳಿಸಿದನು.
18 ಬಿಳಾಮನು ಬಾಲಾಕನ ಅಧಿಕಾರಿಗಳಿಗೆ, “ಬಾಲಾಕನು ನನಗೆ ಬೆಳ್ಳಿಬಂಗಾರಗಳಿಂದ ತುಂಬಿದ ತನ್ನ ಅರಮನೆಯನ್ನು ಕೊಟ್ಟರೂ ನನ್ನ ದೇವರಾದ ಯೆಹೋವನ ಆಜ್ಞೆಗೆ ವಿರೋಧವಾಗಿ ನಾನೇನೂ ಮಾಡಲು ಸಾಧ್ಯವಿಲ್ಲ. ಯೆಹೋವನು ಅಪ್ಪಣೆ ಕೊಡದ ಹೊರತು ನಾನು ಚಿಕ್ಕಕಾರ್ಯವನ್ನಾಗಲಿ ದೊಡ್ಡಕಾರ್ಯವನ್ನಾಗಲಿ ಮಾಡಲಾರೆ. 19 ಆದ್ದರಿಂದ ನೀವೂ ಸಹ ಇತರ ಹಿರಿಯರಂತೆ ಈ ರಾತ್ರಿ ಇಲ್ಲೇ ಇರಬೇಕು. ಯೆಹೋವನು ನನಗೆ ಇನ್ನೂ ಹೇಳಬೇಕಾದದ್ದನ್ನು ಈ ರಾತ್ರಿ ತಿಳಿದುಕೊಳ್ಳುವೆನು” ಎಂದು ಹೇಳಿದನು.
20 ಆ ರಾತ್ರಿ ದೇವರು ಬಿಳಾಮನ ಬಳಿಗೆ ಬಂದು, “ಈ ಜನರು ನಿನ್ನನ್ನು ತಮ್ಮೊಡನೆ ಬರಬೇಕೆಂದು ಆಹ್ವಾನಿಸಲು ಬಂದಿದ್ದಾರೆ. ಆದ್ದರಿಂದ ನೀನು ಅವರೊಂದಿಗೆ ಹೋಗಬಹುದು. ಆದರೆ ನಾನು ಹೇಳುವುದನ್ನು ಮಾತ್ರ ಮಾಡು” ಎಂದು ಹೇಳಿದನು.
ಬಿಳಾಮನು ಮತ್ತು ಅವನ ಕತ್ತೆ
21 ಮರುದಿನ ಬೆಳಿಗ್ಗೆ ಬಿಳಾಮನು ತನ್ನ ಕತ್ತೆಗೆ ತಡಿಹಾಕಿಸಿ ಮೋವಾಬ್ಯರ ಪ್ರಧಾನರ ಜೊತೆಯಲ್ಲಿ ಹೊರಟನು. 22 ಬಿಳಾಮನು ಕತ್ತೆಯ ಮೇಲೆ ಸವಾರಿ ಮಾಡುತ್ತಿದ್ದನು. ಅವನ ಜೊತೆ ಇಬ್ಬರು ಆಳುಗಳಿದ್ದರು. ಬಿಳಾಮನು ಪ್ರಯಾಣ ಮಾಡತೊಡಗಿದ್ದರಿಂದ ದೇವರು ಕೋಪಗೊಂಡನು. ಆದ್ದರಿಂದ ಯೆಹೋವನ ದೂತನು ಬಿಳಾಮನನ್ನು ತಡೆಯಲು ದಾರಿಯಲ್ಲಿ ನಿಂತುಕೊಂಡನು.
23 ಯೆಹೋವನ ದೂತನು ಬಿಚ್ಚುಕತ್ತಿಯನ್ನು ಹಿಡಿದುಕೊಂಡು ದಾರಿಯಲ್ಲೇ ನಿಂತಿರುವುದನ್ನು ಆ ಕತ್ತೆ ನೋಡಿ ದಾರಿಯನ್ನು ಬಿಟ್ಟು ಬಯಲಿನ ಕಡೆ ಹೋಯಿತು. ಕತ್ತೆಯನ್ನು ದಾರಿಗೆ ತಿರುಗಿಸುವದಕ್ಕೆ ಬಿಳಾಮನು ಅದನ್ನು ಹೊಡೆದನು. ಅವನಿಗೆ ದೂತನು ಕಾಣಿಸಲಿಲ್ಲ.
24 ಆಮೇಲೆ ಯೆಹೋವನ ದೂತನು ಎರಡು ದ್ರಾಕ್ಷಿತೋಟಗಳ ನಡುವಿನ ಕಿರಿದಾದ ದಾರಿಯಲ್ಲಿ ನಿಂತುಕೊಂಡನು. ಎರಡು ಕಡೆಯಲ್ಲಿಯೂ ಗೋಡೆಗಳಿದ್ದವು. 25 ತಿರುಗಿ ಕತ್ತೆಯು ಯೆಹೋವನ ದೂತನನ್ನು ನೋಡಿ ಗೋಡೆಗೆ ತನ್ನನ್ನು ಒತ್ತರಿಸಿಕೊಂಡಿತು. ಆಗ ಬಿಳಾಮನ ಪಾದವು ಗೋಡೆಗೆ ಒತ್ತರಿಸಿತು. ಆದ್ದರಿಂದ ಬಿಳಾಮನು ತಿರುಗಿ ಕತ್ತೆಯನ್ನು ಹೊಡೆದನು.
26 ಬಳಿಕ ಯೆಹೋವನ ದೂತನು ಮತ್ತೆ ಮುಂದೆ ಹೋಗಿ ಕತ್ತೆಯು ಎಡಕ್ಕಾಗಲಿ ಬಲಕ್ಕಾಗಲಿ ಹೊರಳಲು ಸಾಧ್ಯವಿಲ್ಲದಷ್ಟು ಇನ್ನೂ ಕಿರಿದಾದ ಸ್ಥಳದಲ್ಲಿ ನಿಂತುಕೊಂಡನು. 27 ಕತ್ತೆಯು ಯೆಹೋವನ ದೂತನನ್ನು ನೋಡಿ ಬಿಳಾಮನ ಕೆಳಗೆ ಅಡಗಿ ಮಲಗಿಕೊಂಡಿತು. ಆಗ ಬಿಳಾಮನು ಸಿಟ್ಟುಗೊಂಡು ತನ್ನ ಕೋಲಿನಿಂದ ಕತ್ತೆಯನ್ನು ಹೊಡೆದನು.
28 ಆಗ ಯೆಹೋವನು ಆ ಕತ್ತೆಗೆ ಮಾತಾಡುವ ಶಕ್ತಿಯನ್ನು ಕೊಟ್ಟನು. ಅದು ಬಿಳಾಮನಿಗೆ, “ನೀನು ಮೂರು ಸಾರಿ ನನ್ನನ್ನು ಹೊಡೆದದ್ದೇಕೆ? ನಾನು ನಿನಗೇನು ಮಾಡಿದ್ದೇನೆ?” ಎಂದು ಕೇಳಿತು.
29 ಬಿಳಾಮನು, “ನೀನು ನನ್ನನ್ನು ಮೂರ್ಖನನ್ನಾಗಿ ಮಾಡಿರುವೆ. ನನ್ನ ಕೈಯಲ್ಲಿ ಕತ್ತಿಯಿದ್ದರೆ ನಿನ್ನನ್ನು ಈಗಲೇ ಕೊಂದುಹಾಕಿಬಿಡುತ್ತಿದ್ದೆ” ಅಂದನು.
30 ಅದಕ್ಕೆ ಕತ್ತೆಯು ಬಿಳಾಮನಿಗೆ, “ನೋಡು, ನಾನು ನಿನ್ನ ಸ್ವಂತ ಕತ್ತೆ. ಅನೇಕಾನೇಕ ವರ್ಷಗಳಿಂದ ನೀನು ನನ್ನ ಮೇಲೆ ಸವಾರಿ ಮಾಡುತ್ತಿರುವೆ. ನಾನು ಹಿಂದೆಂದೂ ಹೀಗೆ ಮಾಡಲಿಲ್ಲವೆಂದು ನಿನಗೆ ತಿಳಿದದೆ” ಎಂದು ಹೇಳಿತು.
ಅದಕ್ಕೆ ಬಿಳಾಮನು, “ಅದು ನಿಜ” ಅಂದನು.
31 ಆಗ ಯೆಹೋವನು ಬಿಳಾಮನ ಕಣ್ಣುಗಳನ್ನು ತೆರೆದು ಬಿಚ್ಚುಕತ್ತಿಯನ್ನು ಹಿಡಿದುಕೊಂಡು ದಾರಿಯಲ್ಲಿ ನಿಂತಿರುವ ಯೆಹೋವನ ದೂತನನ್ನು ನೋಡುವಂತೆ ಮಾಡಿದನು. ಅವನನ್ನು ಕಂಡಾಗ ಬಿಳಾಮನು ಮೊಣಕಾಲೂರಿ ತನ್ನ ಮುಖವನ್ನು ನೆಲದವರೆಗೂ ಬಾಗಿಸಿದನು.
32 ಯೆಹೋವನ ದೂತನು ಬಿಳಾಮನಿಗೆ, “ನೀನು ಮೂರು ಸಲವೂ ಕತ್ತೆಯನ್ನು ಹೊಡೆದದ್ದೇಕೆ? ನಿನ್ನ ಪ್ರಯಾಣವು ನನ್ನ ಚಿತ್ತಕ್ಕೆ ವಿರುದ್ಧವಾದದ್ದರಿಂದ ನಿನ್ನನ್ನು ತಡೆಯುವುದಕ್ಕೆ ನಾನೇ ಬಂದಿದ್ದೇನೆ. 33 ಆ ಕತ್ತೆ ನನ್ನನ್ನು ನೋಡಿ ಮೂರು ಸಲ ನನ್ನೆದುರಿನಿಂದ ಇನ್ನೊಂದು ಕಡೆಗೆ ತಿರುಗಿಕೊಂಡಿತು. ಹಾಗೆ ತಿರುಗಿಕೊಳ್ಳದಿದ್ದಲ್ಲಿ ನಾನು ಕತ್ತೆಯನ್ನು ಉಳಿಸಿ ನಿನ್ನನ್ನು ಆಗಲೇ ಕೊಂದುಹಾಕಿಬಿಡುತ್ತಿದ್ದೆನು” ಎಂದು ಹೇಳಿದನು.
34 ಆಗ ಬಿಳಾಮನು ಯೆಹೋವನ ದೂತನಿಗೆ, “ನಾನು ಪಾಪ ಮಾಡಿದ್ದೇನೆ. ನೀನು ದಾರಿಯಲ್ಲಿ ನಿಂತುಕೊಂಡಿರುವುದು ನನಗೆ ಗೊತ್ತಾಗಲಿಲ್ಲ. ನನ್ನ ಪ್ರಯಾಣವು ನಿನಗೆ ಮೆಚ್ಚಿಕೆಯಾಗಿಲ್ಲದಿದ್ದರೆ, ನಾನು ಮನೆಗೆ ಹಿಂತಿರುಗುವೆನು” ಎಂದು ಹೇಳಿದನು.
35 ಆಗ ಯೆಹೋವನ ದೂತನು ಬಿಳಾಮನಿಗೆ, “ಆ ಮನುಷ್ಯರ ಜೊತೆಯಲ್ಲಿ ಹೋಗು. ಆದರೆ ನಾನು ನಿನಗೆ ಹೇಳುವ ಮಾತನ್ನೇ ಹೊರತು ಬೇರೆ ಯಾವುದನ್ನೂ ಹೇಳಬಾರದು” ಎಂದು ಹೇಳಿದನು. ಆದ್ದರಿಂದ ಬಿಳಾಮನು ಬಾಲಾಕನ ನಾಯಕರೊಡನೆ ಹೋದನು.
36 ಬಿಳಾಮನು ಬರುತ್ತಿರುವ ಸುದ್ದಿಯನ್ನು ಬಾಲಾಕನು ಕೇಳಿ ಅವನನ್ನು ಎದುರುಗೊಳ್ಳುವುದಕ್ಕಾಗಿ ತನ್ನ ದೇಶದ ಸರಹದ್ದಿನಲ್ಲಿ ಅರ್ನೋನ್ ನದಿಯ ಬಳಿಯಲ್ಲಿರುವ ಮೋವ್ಯಾಬರ ಊರಿನಲ್ಲಿ ಅವನನ್ನು ಭೇಟಿಯಾಗಲು ಹೋದನು. 37 ಬಾಲಾಕನು ಬಿಳಾಮನನ್ನು ಕಂಡಾಗ, “ನಿನ್ನನ್ನು ಅವಸರದಿಂದ ಕರೆಸುವುದಕ್ಕೆ ದೂತರನ್ನು ಕಳುಹಿಸಿದೆನಲ್ಲಾ. ನೀನು ಆಗಲೇ ಯಾಕೆ ಬರಲಿಲ್ಲ? ನಿನ್ನನ್ನು ಘನಪಡಿಸುವುದಕ್ಕೆ ನಾನು ಸಮರ್ಥನಲ್ಲವೆಂದು ನೀನು ಭಾವಿಸಿಕೊಂಡಿರುವಿಯಾ?” ಎಂದು ಕೇಳಿದನು.
38 ಬಿಳಾಮನು, “ನಾನು ಈಗ ಬಂದಿದ್ದೇನೆ. ಆದರೆ, ನಿನಗೆ ಇಷ್ಟವಾಗುವಂಥದ್ದನ್ನು ಹೇಳಲು ನನಗೆ ಸಾಧ್ಯವಿಲ್ಲ. ದೇವರು ನನಗೆ ತಿಳಿಸುವುದನ್ನೇ ನಾನು ಹೇಳಬೇಕು” ಅಂದನು.
39 ಆಗ ಬಿಳಾಮನು ಬಾಲಾಕನೊಡನೆ ಕಿರ್ಯತ್‌ಹುಚೋತಿಗೆ ಹೋದನು. 40 ಬಾಲಾಕನು ಹೋರಿಗಳನ್ನು ಮತ್ತು ಕುರಿಗಳನ್ನು ವಧಿಸಿ ಯಜ್ಞಮಾಡಿ ಅದರಲ್ಲಿ ಸ್ವಲ್ಪ ಭಾಗವನ್ನು ಬಿಳಾಮನಿಗೂ ಅವನ ಸಂಗಡವಿದ್ದ ಪ್ರಧಾನರಿಗೂ ಕೊಟ್ಟನು.
41 ಮರದಿನ ಬೆಳಿಗ್ಗೆ ಬಾಲಾಕನು ಬಿಳಾಮನನ್ನು ಬಾಮೋತ್‌ಬಾಳ್ ಎಂಬ ಸ್ಥಳದವರೆಗೂ ಕರೆದುಕೊಂಡು ಹೋದನು. ಅಲ್ಲಿಂದ ಇಸ್ರೇಲರ ಪಾಳೆಯ ಸ್ವಲ್ಪಸ್ವಲ್ಪ ಕಾಣುತ್ತಿತ್ತು.
Kannada Holy Bible: Easy-to-Read Version. All rights reserved. © 1997 Bible League International