Beginning
ಜನರು ಮತ್ತೆ ಗುಣುಗುಟ್ಟಿದರು
11 ಜನರು ತಮಗೆ ತೊಂದರೆ ಉಂಟಾಯಿತೆಂದು ಗಟ್ಟಿಯಾಗಿ ಗುಣುಗುಟ್ಟಿದರು. ಅದನ್ನು ಯೆಹೋವನು ಕೇಳಿ ಕೋಪಗೊಂಡನು. ಯೆಹೋವನಿಂದ ಬಂದ ಬೆಂಕಿ ಅವರ ವಿರುದ್ಧವಾಗಿ ಹೊತ್ತಿಕೊಂಡದ್ದರಿಂದ ಪಾಳೆಯದ ಹೊರಭಾಗದಲ್ಲಿದ್ದವರು ಸುಟ್ಟುಹೋದರು. 2 ಆಗ ಜನರು ಸಹಾಯಕ್ಕಾಗಿ ಮೋಶೆಗೆ ಮೊರೆಯಿಟ್ಟರು. ಮೋಶೆಯು ಅವರಿಗೋಸ್ಕರ ಯೆಹೋವನಿಗೆ ಪ್ರಾರ್ಥಿಸಲಾಗಿ ಬೆಂಕಿ ಆರಿಹೋಯಿತು. 3 ಯೆಹೋವನು ಅವರಿಗೆ ವಿರುದ್ಧವಾಗಿ ಬೆಂಕಿ ಉರಿಯುವಂತೆ ಮಾಡಿದ್ದರಿಂದ ಜನರು ಆ ಸ್ಥಳಕ್ಕೆ “ತಬೇರ” ಎಂದು ಹೆಸರಿಟ್ಟರು.
ಎಪ್ಪತ್ತು ಮಂದಿ ಹಿರಿಯರು
4 ಅವರ ಮಧ್ಯದಲ್ಲಿದ್ದ ಕಿರುಕುಳಕೊಡುವ ಪರದೇಶಸ್ಥರು ಬೇರೆ ರೀತಿಯ ಆಹಾರಕ್ಕಾಗಿ ಬಹಳವಾಗಿ ಆಶಿಸಿದರು. ಇಸ್ರೇಲರು ಸಹ ಮತ್ತೆ ಅಳಲು ಆರಂಭಿಸಿ, “ನಮಗೆ ಯಾರು ಮಾಂಸವನ್ನು ಕೊಡುತ್ತಾರೆ? 5 ನಾವು ಈಜಿಪ್ಟಿನಲ್ಲಿ ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸೌತೆಕಾಯಿ, ಕರ್ಬೂಜು, ಈರುಳ್ಳಿಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ ಇವುಗಳನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. 6 ಆದರೆ ನಾವು ಈಗ ನಮ್ಮ ಬಲವನ್ನು ಕಳೆದುಕೊಂಡಿದ್ದೇವೆ. ಈ ಮನ್ನವನ್ನು ಬಿಟ್ಟು ನಮ್ಮಲ್ಲಿ ತಿನ್ನಲು ಬೇರೇನೂ ಇಲ್ಲ” ಎಂದರು. 7 ಈ ಮನ್ನವು ಕೊತ್ತುಂಬರಿ ಕಾಳಿನಂತಿತ್ತು ಮತ್ತು ಅಂಟು ಪದಾರ್ಥದಂತೆ ಕಾಣಿಸಿತು. 8 ಜನರು ಮನ್ನವನ್ನು ಕೂಡಿಸಿಕೊಂಡು ಬೀಸುವ ಕಲ್ಲುಗಳಿಂದ ಬೀಸಿ ಅಥವಾ ಒರಳಲ್ಲಿ ಕುಟ್ಟಿ, ಮಡಕೆಗಳಲ್ಲಿ ಬೇಯಿಸಿ ತೆಳುವಾದ ರೊಟ್ಟಿಗಳನ್ನು ಮಾಡಿಕೊಂಡರು. ಅದರ ರುಚಿ ಆಲಿವ್ ಎಣ್ಣೆಯಿಂದ ಮಾಡಿದ ಭಕ್ಷ್ಯಗಳಂತಿತ್ತು. 9 ರಾತ್ರಿ ಕಾಲದಲ್ಲಿ ಮಂಜು ಪಾಳೆಯದಲ್ಲಿ ಬೀಳುತ್ತಿದ್ದಾಗ ಅದರೊಂದಿಗೆ ಮನ್ನವೂ ಬೀಳುತ್ತಿತ್ತು.
10 ಎಲ್ಲಾ ಕುಟುಂಬದವರೂ ತಮ್ಮತಮ್ಮ ಗುಡಾರದ ಬಾಗಿಲುಗಳಲ್ಲಿ ನಿಂತು ಗುಣಗುಟ್ಟುತ್ತಿರುವ ಶಬ್ದವು ಮೋಶೆಗೆ ಕೇಳಿಸಿತು. ಆಗ ಯೆಹೋವನು ಬಹು ಕೋಪಗೊಂಡನು. ಇದರಿಂದಾಗಿ ಮೋಶೆಗೆ ಬಹಳ ಬೇಸರವಾಯಿತು. 11 ಆಗ ಮೋಶೆ ಯೆಹೋವನಿಗೆ, “ನಿನ್ನ ಸೇವಕನಾದ ನನಗೆ ಯಾಕೆ ತೊಂದರೆಯನ್ನು ಉಂಟುಮಾಡಿದೆ? ನಾನು ನಿನಗೆ ಬೇಸರವನ್ನು ಉಂಟುಮಾಡಿದೆನೇ? ಈ ಜನರೆಲ್ಲರನ್ನು ಮುನ್ನಡೆಸಿಕೊಂಡು ಹೋಗುವ ಭಾರವನ್ನು ನೀನು ನನ್ನ ಮೇಲೆ ಯಾಕೆ ಹಾಕಿದೆ? 12 ನಾನು ಇವರಿಗೆ ಹೆತ್ತ ತಾಯಿಯೋ? ನಾನು ಅವರಿಗೆ ಜನ್ಮ ಕೊಡಲಿಲ್ಲವೆಂದು ನಿನಗೆ ಗೊತ್ತಿದೆ. ದಾದಿಯು ಮಗುವನ್ನು ಎತ್ತಿಕೊಂಡು ಹೋಗುವಂತೆ, ಈ ಜನರನ್ನು ನಾನು ನನ್ನ ಮಡಿಲಲ್ಲಿ ಇಟ್ಟು, ನೀನು ಅವರ ಪೂರ್ವಿಕರಿಗೆ ವಾಗ್ದಾನಮಾಡಿರುವ ದೇಶಕ್ಕೆ ಎತ್ತಿಕೊಂಡು ಹೋಗುವಂತೆ ನೀನು ನನಗೇಕೆ ಹೇಳುವೆ? 13 ಇವರು ನನ್ನ ಬಳಿಗೆ ಬಂದು, ‘ಮಾಂಸವನ್ನು ನಮಗೆ ತಿನ್ನಲಿಕ್ಕೆ ಕೊಡು’ ಎಂದು ಕೇಳಿಕೊಳ್ಳುತ್ತಾರಲ್ಲಾ! ಇಷ್ಟು ಜನಕ್ಕೆ ಬೇಕಾದ ಮಾಂಸವು ನನಗೆ ಎಲ್ಲಿಂದ ದೊರಕೀತು? 14 ಇಷ್ಟು ಜನರ ಭಾರವನ್ನು ನಾನೊಬ್ಬನೇ ಹೊರುವುದು ನನಗೆ ಅಸಾಧ್ಯ. ಅದು ನನ್ನ ಶಕ್ತಿಗೆ ಮೀರಿದ ಕೆಲಸ. 15 ನೀನು ಹೀಗೆಯೇ ನನಗೆ ಮಾಡುವುದಾಗಿದ್ದರೆ ಅದಕ್ಕೆ ಬದಲಾಗಿ ನನ್ನನ್ನು ಕೊಂದುಬಿಡು ಎಂದು ಬೇಡಿಕೊಳ್ಳುತ್ತೇನೆ. ಆಗ ನಾನು ಈ ದುರವಸ್ಥೆಗಳಿಂದ ವಿಮುಕ್ತನಾಗುವೆನು” ಎಂದು ಹೇಳಿದನು.
16 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಲ್ಲಿ ಹಿರಿಯರೆಂದೂ ಅಧಿಕಾರಿಗಳೆಂದೂ ನೀನು ತಿಳಿದುಕೊಂಡಿರುವ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನಗುಡಾರದ ಬಾಗಿಲಿಗೆ ಕರೆದುತಂದು ಅಲ್ಲೇ ನಿನ್ನೊಡನೆ ನಿಲ್ಲಿಸಿಕೊ. 17 ನಾನು ಅಲ್ಲಿಗೆ ಇಳಿದುಬಂದು ನಿನ್ನ ಸಂಗಡ ಮಾತಾಡುವೆನು. ಅದಲ್ಲದೆ ನಾನು ನಿನಗೆ ಅನುಗ್ರಹಿಸಿದ ಆತ್ಮವನ್ನೇ ಅವರ ಮೇಲೆ ಸುರಿಸುವೆನು. ಆಗ ಸ್ವತಃ ನೀನೇ ಈ ಜನರ ಭಾರವನ್ನು ವಹಿಸಬೇಕಾಗಿರುವುದಿಲ್ಲ. ಈ ಎಪ್ಪತ್ತು ಮಂದಿ ಹಿರಿಯರು ಆ ಭಾರವನ್ನು ಹೊರಲು ನಿನಗೆ ಸಹಾಯ ಮಾಡುವರು.
18 “ಇಸ್ರೇಲರಿಗೆ ಹೀಗೆ ಹೇಳು: ನಾಳೆಗಾಗಿ ನಿಮ್ಮನ್ನು ಪವಿತ್ರರನ್ನಾಗಿ ಮಾಡಿಕೊಳ್ಳಿರಿ. ನಾಳೆ ನೀವು ಮಾಂಸವನ್ನು ತಿನ್ನುವಿರಿ. ‘ನಮಗೆ ಮಾಂಸವನ್ನು ಕೊಡುವವರು ಯಾರು? ನಾವು ಈಜಿಪ್ಟಿನಲ್ಲಿ ಇದಕ್ಕಿಂತಲೂ ಚೆನ್ನಾಗಿದ್ದೆವಲ್ಲಾ’ ಎಂಬ ನಿಮ್ಮ ದೂರನ್ನು ಯೆಹೋವನು ಕೇಳಿದ್ದಾನೆ. ಆದ್ದರಿಂದ ಯೆಹೋವನು ನಿಮಗೆ ಮಾಂಸವನ್ನು ಕೊಡುವನು ಮತ್ತು ನೀವು ತಿನ್ನುವಿರಿ. 19 ನೀವು ಒಂದು ದಿನವಲ್ಲ, ಎರಡು ದಿನವಲ್ಲ, ಐದು ದಿನವಲ್ಲ, ಹತ್ತು ದಿನವಲ್ಲ, ಇಪ್ಪತ್ತು ದಿನವಲ್ಲ, 20 ಒಂದು ತಿಂಗಳು ಪೂರ್ತಿ ಮಾಂಸವನ್ನು ತಿನ್ನುವಿರಿ. ಅದು ನಿಮ್ಮ ಮೂಗಿನಲ್ಲಿ ಓಕರಿಕೆಯಾಗಿ ಹೊರಬರುವ ತನಕ ಮತ್ತು ನಿಮಗೆ ಅಸಹ್ಯವಾಗುವವರೆಗೆ ಅದನ್ನು ತಿನ್ನುವಿರಿ. ನೀವು ನಿಮ್ಮ ಮಧ್ಯದಲ್ಲಿರುವ ಯೆಹೋವನನ್ನು ತಿರಸ್ಕರಿಸಿದ್ದರಿಂದ ಮತ್ತು ‘ನಾವೇಕೆ ಈಜಿಪ್ಟನ್ನು ಬಿಟ್ಟು ಬಂದೆವು?’ ಎಂದು ಆತನ ಮುಂದೆ ದೂರು ಹೇಳಿದ್ದರಿಂದ ಇದು ನಿಮಗೆ ಸಂಭವಿಸುವುದು.”
21 ಅದಕ್ಕೆ ಮೋಶೆ, “ಯೆಹೋವನೇ, ಇಲ್ಲಿ ಆರು ಲಕ್ಷ ಗಂಡಸರು ನನ್ನೊಂದಿಗೆ ಇದ್ದಾರೆ. ಆದಾಗ್ಯೂ ನೀನು ಇವರಿಗೆ ಮಾಂಸ ಕೊಡುವುದಾಗಿಯೂ ಇವರು ಒಂದು ತಿಂಗಳೆಲ್ಲಾ ಅದನ್ನು ತಿನ್ನುವುದಾಗಿಯೂ ನೀನು ಹೇಳುತ್ತಿರುವೆ. 22 ನಾವು ಎಲ್ಲಾ ಕುರಿಗಳನ್ನು, ದನಕರುಗಳನ್ನು ಕೊಂದರೂ ಇಷ್ಟು ಜನರು ಒಂದು ತಿಂಗಳು ತಿನ್ನುವುದಕ್ಕೆ ಸಾಕಾಗದು. ಸಮುದ್ರದಲ್ಲಿರುವ ಮೀನುಗಳೆಲ್ಲವನ್ನು ಹಿಡಿದರೂ ಅದು ಇಷ್ಟು ಜನರಿಗೆ ಸಾಕಾಗದು” ಎಂದು ಹೇಳಿದನು.
23 ಆದರೆ ಯೆಹೋವನು ಮೋಶೆಗೆ, “ಯೆಹೋವನ ಶಕ್ತಿಗೆ ಮಿತಿಯಿಲ್ಲ. ನಾನು ಹೇಳುತ್ತಿರುವ ಸಂಗತಿಗಳು ನಡೆಯುವುದನ್ನು ನೀನು ನೋಡುವೆ” ಎಂದು ಹೇಳಿದನು.
24 ಮೋಶೆಯು ಹೊರಟುಹೋಗಿ, ಯೆಹೋವನು ಹೇಳಿದ್ದನ್ನು ಜನರಿಗೆ ತಿಳಿಸಿ, ಇಸ್ರೇಲರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಒಟ್ಟಾಗಿ ಸೇರಿಸಿದನು. ಅವರು ದೇವದರ್ಶನಗುಡಾರದ ಸುತ್ತಲೂ ನಿಲ್ಲುವಂತೆ ಆಜ್ಞಾಪಿಸಿದನು. 25 ಆಗ ಯೆಹೋವನು ಮೇಘದಲ್ಲಿ ಇಳಿದುಬಂದು ಮೋಶೆಯೊಡನೆ ಮಾತಾಡಿ ಅವನಲ್ಲಿದ್ದ ಆತ್ಮವನ್ನೇ[a] ಆ ಎಪ್ಪತ್ತು ಮಂದಿ ಹಿರಿಯರಿಗೆ ಕೊಟ್ಟನು. ಆತ್ಮಿಕ ವರಗಳು ಅವರಿಗೆ ಕೊಡಲ್ಪಟ್ಟಾಗ ಅವರು ಪ್ರವಾದಿಗಳಂತೆ ಪ್ರವಾದಿಸಿದರು. ಆದರೆ ಮತ್ತೆ ಅವರು ಹಾಗೆ ಪ್ರವಾದಿಸಲಿಲ್ಲ.
26 ಎಲ್ದಾದ್ ಮತ್ತು ಮೇದಾದ್ ಎಂಬ ಹಿರಿಯರಿಬ್ಬರು ಗುಡಾರದ ಬಳಿಗೆ ಹೋಗಲಿಲ್ಲ. ಹಿರಿಯರ ಹೆಸರುಗಳಿದ್ದ ಪಟ್ಟಿಯಲ್ಲಿ ಅವರ ಹೆಸರುಗಳಿದ್ದವು. ಆದರೆ ಅವರು ಪಾಳೆಯದಲ್ಲೇ ಉಳಿದುಕೊಂಡರು. ಆದರೆ ಅವರಿಗೆ ಆತ್ಮಿಕ ವರಗಳು ಕೊಡಲ್ಪಟ್ಟಿದ್ದರಿಂದ ಅವರು ಪಾಳೆಯದಲ್ಲಿ ಪ್ರವಾದಿಗಳಂತೆ ಪ್ರವಾದಿಸತೊಡಗಿದರು. 27 ಒಬ್ಬ ಯೌವನಸ್ಥನು ಮೋಶೆಯ ಬಳಿಗೆ ಓಡಿಹೋಗಿ, “ಎಲ್ದಾದ್ ಮತ್ತು ಮೇದಾದ್ ಎಂಬಿಬ್ಬರು ಪಾಳೆಯದಲ್ಲಿ ಪ್ರವಾದಿಗಳಂತೆ ಪ್ರವಾದಿಸುತ್ತಿದ್ದಾರೆ” ಎಂದು ಹೇಳಿದನು.
28 ನೂನನ ಮಗನಾದ ಯೆಹೋಶುವನು ಮೋಶೆಗೆ, “ಸ್ವಾಮೀ, ನೀನು ಅವರನ್ನು ತಡೆಯಬೇಕು” ಎಂದನು. (ಯೆಹೋಶುವನು ಯೌವನಸ್ಥನಾಗಿದ್ದಾಗಿನಿಂದಲೂ ಮೋಶೆಯ ಸಹಾಯಕನಾಗಿದ್ದನು.)
29 ಆದರೆ ಮೋಶೆಯು, “ನೀನು ನನ್ನ ವಿಷಯದಲ್ಲಿ ಚಿಂತೆಪಡುತ್ತಿರುವುದೇಕೆ? ಯೆಹೋವನ ಜನರೆಲ್ಲರೂ ಪ್ರವಾದಿಗಳಾಗಿರಬೇಕೆಂದು ನಾನು ಬಯಸುತ್ತೇನೆ. ಅವರೆಲ್ಲರ ಮೇಲೆ ಯೆಹೋವನು ತನ್ನ ಆತ್ಮನನ್ನು ಇರಿಸಬೇಕೆಂದು ನಾನು ಬಯಸುತ್ತೇನೆ” ಎಂದು ಉತ್ತರಿಸಿದನು. 30 ಬಳಿಕ ಮೋಶೆಯು ಮತ್ತು ಇಸ್ರೇಲರ ನಾಯಕರು ಪಾಳೆಯಕ್ಕೆ ಹಿಂತಿರುಗಿದರು.
ಲಾವಕ್ಕಿಗಳು
31 ಆಗ ಯೆಹೋವನು ಸಮುದ್ರದ ಕಡೆಯಿಂದ ಬಲವಾದ ಗಾಳಿಯು ಬೀಸುವಂತೆ ಮಾಡಿದನು. ಗಾಳಿಯು ಲಾವಕ್ಕಿಗಳನ್ನು ಹೊತ್ತುಕೊಂಡು ಬಂತು. ಲಾವಕ್ಕಿಗಳು ಪಾಳೆಯದ ಸುತ್ತಲೂ ಹಾರಿಬಂದವು. ಒಬ್ಬನು ಪ್ರತಿಯೊಂದು ದಿಕ್ಕಿನಲ್ಲಿ ಒಂದು ದಿನ ನಡೆಯಬಹುದಾದಷ್ಟು ದೂರದವರೆಗೂ ಲಾವಕ್ಕಿಗಳು ಭೂಮಿಯಿಂದ ಮೂರು ಅಡಿ ಎತ್ತರದಲ್ಲಿ ಹಾರಾಡುತ್ತಿದ್ದವು. 32 ಜನರು ಎದ್ದು ಆ ದಿನವೆಲ್ಲಾ ಮತ್ತು ರಾತ್ರಿಯೆಲ್ಲಾ ಮತ್ತು ಮರುದಿನವೆಲ್ಲಾ ಲಾವಕ್ಕಿಗಳನ್ನು ಕೂಡಿಸಿಕೊಂಡರು. ಸ್ವಲ್ಪ ಕೂಡಿಸಿಕೊಂಡವನು ಅರವತ್ತು ಕಿಲೋಗ್ರಾಂ ಕೂಡಿಸಿಕೊಂಡನು. ಬಳಿಕ ಜನರು ಲಾವಕ್ಕಿಗಳ ಮಾಂಸವನ್ನು ಪಾಳೆಯದ ಸುತ್ತಲೂ ಹರಡಿ ಬಿಸಿಲಿನಲ್ಲಿ ಒಣಗಿಸಿಕೊಂಡರು.
33 ಜನರು ಮಾಂಸವನ್ನು ಇನ್ನೂ ತಿನ್ನುತ್ತಿರುವಾಗಲೇ ಮತ್ತು ಲಾವಕ್ಕಿಗಳ ಸರಬರಾಜು ನಿಂತುಹೋಗುವುದಕ್ಕಿಂತ ಮೊದಲೇ ಯೆಹೋವನು ಬಹಳವಾಗಿ ಕೋಪಗೊಂಡು ಜನರ ಮಧ್ಯದಲ್ಲಿ ಭಯಂಕರವಾದ ಕಾಯಿಲೆಯನ್ನು ಉಂಟುಮಾಡಿದನು. ಜನರಲ್ಲಿ ಅನೇಕರು ಸತ್ತದ್ದರಿಂದ ಅವರನ್ನು ಅಲ್ಲೇ ಹೂಳಿಟ್ಟರು. 34 ಈ ಕಾರಣದಿಂದ ಆ ಸ್ಥಳಕ್ಕೆ, “ಕಿಬ್ರೋತ್ ಹತಾವಾ” ಎಂದು ಹೆಸರಿಟ್ಟರು. ಮಾಂಸಕ್ಕಾಗಿ ಅತ್ಯಾಶೆಪಟ್ಟವರನ್ನು ಅಲ್ಲಿ ಹೂಳಿಟ್ಟಿದ್ದರಿಂದ ಆ ಸ್ಥಳಕ್ಕೆ ಈ ಹೆಸರನ್ನು ಇಟ್ಟರು.
35 ಜನರು ಕಿಬ್ರೋತ್ ಹತಾವಾದಿಂದ ಪ್ರಯಾಣಮಾಡಿ ಹಚೇರೋತಿಗೆ ಹೋಗಿ ಅಲ್ಲಿ ಇಳಿದುಕೊಂಡರು.
ಮಿರ್ಯಾಮಳು ಮತ್ತು ಆರೋನನು ಮೋಶೆಗೆ ವಿರುದ್ಧವಾಗಿ ಗೊಣಗುಟ್ಟಿದ್ದು
12 ಮೋಶೆಯು ಇಥಿಯೋಪ್ಯದ ಸ್ತ್ರೀಯನ್ನು ಮದುವೆ ಮಾಡಿಕೊಂಡ ಕಾರಣ ಮಿರ್ಯಾಮಳೂ ಆರೋನನೂ ಮೋಶೆಗೆ ವಿರೋಧವಾಗಿ ಮಾತಾಡಿದರು. 2 ಅವರು, “ಯೆಹೋವನು ಮೋಶೆಯೊಡನೆ ಮಾತ್ರ ಮಾತಾಡಿದ್ದಾನೋ? ಆತನು ನಮ್ಮೊಡನೆಯೂ ಮಾತಾಡಿದನಲ್ಲವೇ?” ಅಂದರು.
ಯೆಹೋವನು ಅವರ ಮಾತುಗಳನ್ನು ಕೇಳಿದನು. 3 (ಮೋಶೆಯು ಬಹಳ ದೀನನಾದ ವ್ಯಕ್ತಿ. ಅವನು ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ದೀನನಾಗಿದ್ದನು.) 4 ಆದ್ದರಿಂದ ಕೂಡಲೇ ಯೆಹೋವನು, ಮೋಶೆ, ಆರೋನರ ಮತ್ತು ಮಿರ್ಯಾಮಳ ಸಂಗಡ ಮಾತಾಡಿ, “ನೀವು ಮೂವರು ದೇವದರ್ಶನಗುಡಾರಕ್ಕೆ ಬನ್ನಿ” ಎಂದು ಹೇಳಿದನು.
ಆದ್ದರಿಂದ ಮೋಶೆ, ಆರೋನರು ಮತ್ತು ಮಿರ್ಯಾಮಳು ದೇವದರ್ಶನಗುಡಾರಕ್ಕೆ ಹೋದರು. 5 ಯೆಹೋವನು ಎತ್ತರವಾದ ಮೇಘದಲ್ಲಿ ಇಳಿದು ಬಂದು ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿ ನಿಂತನು. ಯೆಹೋವನು ಆರೋನನನ್ನೂ ಮಿರ್ಯಾಮಳನ್ನೂ ಕರೆದನು. ಆರೋನನೂ ಮಿರ್ಯಾಮಳೂ ಹತ್ತಿರಕ್ಕೆ ಹೋದರು. 6 ದೇವರು, “ನನ್ನ ಮಾತನ್ನು ಕೇಳಿರಿ. ನಿಮ್ಮಲ್ಲಿ ಪ್ರವಾದಿಯಿದ್ದರೆ, ನಾನು ಅವನಿಗೆ ನನ್ನನ್ನು ದರ್ಶನದಲ್ಲಿ ಗೊತ್ತುಪಡಿಸಿಕೊಳ್ಳುವೆನು ಅಥವಾ ಸ್ವಪ್ನದಲ್ಲಿ ಅವನ ಸಂಗಡ ಮಾತಾಡುವೆನು. 7 ಆದರೆ ಮೋಶೆಯೊಡನೆ ನಾನು ಆ ರೀತಿ ಮಾಡುವುದಿಲ್ಲ. ಮೋಶೆಯು ನನ್ನ ನಂಬಿಗಸ್ತನಾದ ಸೇವಕನು. ಅವನ ಮೇಲೆ ನನಗೆ ಭರವಸೆಯಿದೆ. 8 ನಾನು ಅವನೊಂದಿಗೆ ಗೂಡಾರ್ಥದಿಂದ ಮಾತಾಡದೆ ನೇರವಾಗಿಯೂ ಸ್ಪಷ್ಟವಾಗಿಯೂ ಮಾತಾಡುತ್ತೇನೆ. ಅವನು ನನ್ನ ಸ್ವರೂಪವನ್ನೇ ನೋಡಬಲ್ಲನು. ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತಾಡಲು ನೀವು ಯಾಕೆ ಭಯಪಡಲಿಲ್ಲ?” ಎಂದು ಹೇಳಿದನು.
9 ಯೆಹೋವನು ಅವರ ಮೇಲೆ ಬಹಳವಾಗಿ ಕೋಪಗೊಂಡು ಹೊರಟುಹೋದನು. 10 ಮೇಘವು ಗುಡಾರದಿಂದ ಮೇಲಕ್ಕೆ ಎದ್ದಿತು. ಆರೋನನು ಹಿಂತಿರುಗಿ ಮಿರ್ಯಾಮಳನ್ನು ನೋಡಿದನು. ಆಕೆಯ ಚರ್ಮವು ಹಿಮದಂತೆ ಬೆಳ್ಳಗಾಗಿತ್ತು. ಆಕೆಗೆ ಭಯಂಕರವಾದ ಚರ್ಮರೋಗ ಹಿಡಿದಿತ್ತು.
11 ಆಗ ಆರೋನನು ಮೋಶೆಗೆ, “ಸ್ವಾಮೀ, ನಾವು ಮೂರ್ಖತನದಿಂದ ಮಾಡಿದ ಪಾಪಕ್ಕೆ ದಯವಿಟ್ಟು ನಮ್ಮನ್ನು ದಂಡಿಸಬೇಡ. 12 ಗರ್ಭದಲ್ಲೇ ಅರ್ಧ ಮಾಂಸ ಕೊಳೆತುಹೋಗಿ, ಹುಟ್ಟುವಾಗಲೇ ಸತ್ತ ಮಗುವಿನಂತೆ ಈಕೆಗೆ ಆಗದಂತೆ ದಯವಿಟ್ಟು ಕಾಪಾಡು” ಎಂದು ಬೇಡಿಕೊಂಡನು.
13 ಆದ್ದರಿಂದ ಮೋಶೆ ಯೆಹೋವನಿಗೆ ಪ್ರಾರ್ಥಿಸಿ, “ದೇವರೇ, ದಯಮಾಡಿ ಈಕೆಯನ್ನು ವಾಸಿಮಾಡು” ಎಂದು ಮೊರೆಯಿಟ್ಟನು.
14 ಅದಕ್ಕೆ ಯೆಹೋವನು, “ಆಕೆಯ ತಂದೆ ಮುಖದ ಮೇಲೆ ಉಗುಳಿದ್ದರೆ ಆಕೆ ಏಳು ದಿವಸ ನಾಚಿಕೆಯಿಂದ ಇರುತ್ತಿರಲಿಲ್ಲವೇ? ಹಾಗಾದರೆ ಆಕೆ ಏಳು ದಿವಸ ಪಾಳೆಯದ ಹೊರಗೆ ಇರಬೇಕು. ತರುವಾಯ ಆಕೆ ಪಾಳೆಯದೊಳಗೆ ಬರಬಹುದು” ಎಂದು ಉತ್ತರಿಸಿದನು.
15 ಆದಕಾರಣ ಅವರು ಮಿರ್ಯಾಮಳನ್ನು ಏಳು ದಿವಸಗಳವರೆಗೆ ಪಾಳೆಯದ ಹೊರಗೆ ಇಟ್ಟರು. ಆಕೆ ತಿರುಗಿ ಸೇರಿಕೊಳ್ಳುವ ತನಕ ಇಸ್ರೇಲರು ಪ್ರಯಾಣ ಮಾಡಲಿಲ್ಲ. 16 ಇದಾದನಂತರ, ಜನರು ಹಚೇರೋತಿನಿಂದ ಹೊರಟು ಪಾರಾನ್ ಮರುಭೂಮಿಯಲ್ಲಿ ಪಾಳೆಯ ಮಾಡಿಕೊಂಡರು.
ಗೂಢಚಾರರು ಕಾನಾನ್ ದೇಶಕ್ಕೆ ಹೋದದ್ದು
13 ಯೆಹೋವನು ಮೋಶೆಗೆ, 2 “ಕಾನಾನ್ ದೇಶದ ಬಗ್ಗೆ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಗೂಢಚಾರರನ್ನು ಕಳುಹಿಸು. ನಾನು ಇಸ್ರೇಲರಿಗೆ ಕೊಡುವ ದೇಶ ಇದಾಗಿದೆ. ಹನ್ನೆರಡು ಕುಲಗಳಿಂದ ಒಬ್ಬೊಬ್ಬ ನಾಯಕನನ್ನು ಕಳುಹಿಸು” ಎಂದು ಹೇಳಿದನು.
3 ಜನರು ಪಾರಾನ್ ಮರುಭೂಮಿಯಲ್ಲಿ ಇಳಿದುಕೊಂಡಿದ್ದಾಗ ಯೆಹೋವನ ಆಜ್ಞೆಗನುಸಾರವಾಗಿ ಮೋಶೆಯು ಈ ನಾಯಕರನ್ನು ಕಳುಹಿಸಿದನು. 4 ಆ ನಾಯಕರು ಯಾರೆಂದರೆ:
ರೂಬೇನ್ ಕುಲದಿಂದ ಜಕ್ಕೂರನ ಮಗನಾದ ಶಮ್ಮೂವ,
5 ಸಿಮೆಯೋನ್ ಕುಲದಿಂದ ಹೋರಿಯ ಮಗನಾದ ಶಾಫಾಟ್,
6 ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್,
7 ಇಸ್ಸಾಕಾರ್ ಕುಲದಿಂದ ಯೋಸೇಫನ ಮಗನಾದ ಇಗಾಲ್,
8 ಎಫ್ರಾಯೀಮ್ ಕುಲದಿಂದ ನೂನನ ಮಗನಾದ ಹೋಶೇಯ,
9 ಬೆನ್ಯಾಮೀನ್ ಕುಲದಿಂದ ರಾಫೂವನ ಮಗನಾದ ಪಲ್ಟೀ,
10 ಜೆಬುಲೂನ್ ಕುಲದಿಂದ ಸೋದೀಯ ಮಗನಾದ ಗದ್ದೀಯೇಲ್,
11 ಯೋಸೇಫನ ಮಗನಾದ ಮನಸ್ಸೆ ಕುಲದಿಂದ ಸೂಸೀಯ ಮಗನಾದ ಗದ್ದೀ,
12 ದಾನ್ ಕುಲದಿಂದ ಗೆಮಲ್ಲೀಯ ಮಗನಾದ ಅಮ್ಮೀಯೇಲ್,
13 ಆಶೇರ್ ಕುಲದಿಂದ ಮೀಕಾಯೇಲನ ಮಗನಾದ ಸೆತೂರ್,
14 ನಫ್ತಾಲಿ ಕುಲದಿಂದ ವಾಪೆಸೀಯನ ಮಗನಾದ ನಹಬೀ,
15 ಗಾದ್ ಕುಲದಿಂದ ಮಾಕೀಯನ ಮಗನಾದ ಗೆಯೂವೇಲ್.
16 ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಮೋಶೆ ಕಳುಹಿಸಿದ ಗೂಢಚಾರರ ಹೆಸರುಗಳು ಇವೇ. (ಮೋಶೆಯು ನೂನನ ಮಗನಾದ ಹೋಶೇಯನಿಗೆ ಯೆಹೋಶುವನೆಂದು ಹೆಸರಿಟ್ಟನು.)
17 ಕಾನಾನ್ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಮೋಶೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ಬೆಟ್ಟದ ಸೀಮೆಗೆ ನೆಗೆವ್ ಮೂಲಕ ಹತ್ತಿ ಹೋಗಿ 18 ಆ ದೇಶದ ಸಂಗತಿಯನ್ನೆಲ್ಲಾ ತಿಳಿದುಕೊಳ್ಳಿರಿ. ಅಲ್ಲಿನ ನಿವಾಸಿಗಳು ಬಲಿಷ್ಠರೋ ಅಥವಾ ಬಲಹೀನರೋ, ಬಹಳ ಮಂದಿಯೋ ಅಥವಾ ಸ್ವಲ್ಪ ಮಂದಿಯೋ, 19 ಅವರ ದೇಶ ಒಳ್ಳೆಯದೋ ಅಥವಾ ಕೆಟ್ಟದ್ದೋ, ಅವರ ಪಟ್ಟಣಗಳು ಗೋಡೆಗಳನ್ನು ಹೊಂದಿವೆಯೋ ಅಥವಾ ಇಲ್ಲವೋ, 20 ಭೂಮಿಯು ಸಾರವಾದದ್ದೋ ಅಥವಾ ನಿಸ್ಸಾರವಾದದ್ದೋ, ಮರಗಳನ್ನು ಹೊಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಅದಲ್ಲದೆ ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಲು ಪ್ರಯತ್ನ ಮಾಡಿ” ಎಂದು ಹೇಳಿದನು. (ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.)
21 ಅವರು ಬೆಟ್ಟದ ಸೀಮೆಗೆ ಹತ್ತಿಹೋಗಿ, ಚಿನ್ ಮರುಭೂಮಿಯಿಂದಿಡಿದು ಲೆಬೊಹಮಾತಿನ ಬಳಿಯಲ್ಲಿರುವ ರೆಹೋಬಿನವರೆಗೂ ದೇಶದ ವಿಷಯಗಳನ್ನು ಸಂಗ್ರಹಿಸಿಕೊಂಡರು. 22 ಅವರು ನೆಗೆವ್ ಮೂಲಕ ದೇಶವನ್ನು ಪ್ರವೇಶಿಸಿ ಹೆಬ್ರೋನಿಗೆ ಹೋದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳ ಮುಂಚೆ ಕಟ್ಟಲ್ಪಟ್ಟಿತ್ತು. ಅಲ್ಲಿ ಅಹೀಮನ್, ಶೇಫೈ ಮತ್ತು ತಲ್ಮೈ ಎಂಬವರು ವಾಸಿಸುತ್ತಿದ್ದರು. ಇವರು ಅನಾಕನ ಸಂತತಿಯವರು. 23 ಬಳಿಕ ಅವರು ಎಷ್ಕೋಲ್ ಕಣಿವೆಗೆ ಹೋದರು. ಅಲ್ಲಿ ಅವರು ದ್ರಾಕ್ಷಾಲತೆಯಿಂದ ಒಂದು ಕೊಂಬೆಯನ್ನು ಕಡಿದರು. ಆ ಕೊಂಬೆಯಲ್ಲಿ ದ್ರಾಕ್ಷೆಯ ಗೊಂಚಲಿತ್ತು. ಅವರು ಅದನ್ನು ಒಂದು ಕೋಲಿಗೆ ಕಟ್ಟಿ ಇಬ್ಬರು ಅದನ್ನು ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಹಣ್ಣುಗಳನ್ನು ಮತ್ತು ಅಂಜೂರದ ಹಣ್ಣುಗಳನ್ನು ಹೊತ್ತುತಂದರು. 24 ಇಸ್ರೇಲರು ಅಲ್ಲಿ ದ್ರಾಕ್ಷೆಯ ಗೊಂಚಲನ್ನು ಕತ್ತರಿಸಿದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಕಣಿವೆ ಎಂದು ಹೆಸರಾಯಿತು.
25 ಜನರು ನಲವತ್ತು ದಿನಗಳವರೆಗೆ ದೇಶವನ್ನು ಸಂಚರಿಸಿ ನೋಡಿ, ತಮ್ಮ ಪಾಳೆಯಕ್ಕೆ ಹಿಂತಿರುಗಿದರು. 26 ಇಸ್ರೇಲರು ಪಾರಾನ್ ಮರುಭೂಮಿಯ ಕಾದೇಶಿನಲ್ಲಿ ತಂಗಿದ್ದರು. ಅವರು ನೋಡಿದ್ದರ ಬಗ್ಗೆ ಎಲ್ಲವನ್ನು ಮೋಶೆಗೂ ಆರೋನನಿಗೂ ಎಲ್ಲಾ ಇಸ್ರೇಲರಿಗೂ ತಿಳಿಸಿದರು. ಅವರು ಕಾನಾನ್ ದೇಶದಿಂದ ತಂದ ಹಣ್ಣುಗಳನ್ನು ತೋರಿಸಿದರು. 27 ಜನರು ಮೋಶೆಗೆ, “ನೀನು ಕಳುಹಿಸಿದ ದೇಶಕ್ಕೆ ನಾವು ಹೋಗಿ ಸಂಚರಿಸಿ ನೋಡಿದೆವು. ಅದು ಹಾಲೂ ಜೇನೂ ಹರಿಯುವ ದೇಶವಾಗಿದೆ. ಇಗೋ, ಹಣ್ಣುಗಳಲ್ಲಿ ಕೆಲವು ಇಲ್ಲಿವೆ. 28 ಅಲ್ಲಿನ ಜನರು ಬಲಿಷ್ಠರು. ಪಟ್ಟಣಗಳೂ ಬಹಳ ದೊಡ್ಡದಾಗಿವೆ. ಪಟ್ಟಣಗಳು ಕೋಟೆಕೊತ್ತಲುಗಳುಳ್ಳದಾಗಿವೆ. ನಾವು ಕೆಲವು ಅನಾಕ್ಯರನ್ನು ಸಹ ನೋಡಿದೆವು. 29 ಅಮಾಲೇಕ್ಯರು ನೆಗೆವ್‌ನಲ್ಲಿ ವಾಸಿಸುತ್ತಾರೆ. ಹಿತ್ತಿಯರು, ಯೆಬೂಸಿಯರು ಮತ್ತು ಅಮೋರಿಯರು ಪರ್ವತ ಪ್ರದೇಶದಲ್ಲಿ ವಾಸಿಸುತ್ತಾರೆ. ಕಾನಾನ್ಯರು ಸಮುದ್ರ ತೀರದಲ್ಲಿಯೂ ಮತ್ತು ಯೋರ್ದನ್ ನದಿಯ ಉದ್ದಕ್ಕೂ ವಾಸಿಸುತ್ತಾರೆ” ಎಂದು ಹೇಳಿದರು.
30 ಕಾಲೇಬನು ಮೋಶೆಯ ಬಳಿಯಲ್ಲಿದ್ದ ಗೊಣಗುಟ್ಟುವ ಜನರನ್ನು ಸುಮ್ಮನಿರಿಸಿ, “ನಾವು ಹೋಗಿ ದೇಶವನ್ನು ವಶಪಡಿಸಿಕೊಳ್ಳಬೇಕು. ನಾವು ಸುಲಭವಾಗಿ ದೇಶವನ್ನು ವಶಪಡಿಸಿಕೊಳ್ಳಬಹುದು” ಎಂದು ಹೇಳಿದನು.
31 ಆದರೆ ಅವನೊಡನೆ ಹೋದ ಜನರು, “ನಾವು ಆ ಜನರೊಡನೆ ಹೋರಾಡಲಾರೆವು, ಅವರು ನಮಗಿಂತಲೂ ಬಲಿಷ್ಠರು” ಎಂದು ಹೇಳಿದರು. 32 “ನಾವು ಸಂಚರಿಸಿ ವಿಷಯ ಸಂಗ್ರಹಿಸಿಕೊಂಡು ಬಂದ ದೇಶವು ಅಲ್ಲಿ ವಾಸಿಸುವವರನ್ನು ನಾಶಪಡಿಸುವ ದೇಶವಾಗಿದೆ. ನಾವು ಅಲ್ಲಿ ನೋಡಿದ ಎಲ್ಲಾ ಜನರು ರಾಕ್ಷಸರಂತಿದ್ದಾರೆ. 33 ಪ್ರಚಂಡರಾದ ನೆಫೀಲಿಯರು ಅಲ್ಲಿ ವಾಸವಾಗಿರುವುದನ್ನು ನಾವು ನೋಡಿದೆವು. (ಅನಾಕ್ಯರು ನೆಫೀಲಿಯ ಜನರ ಸಂತತಿಯವರಾಗಿದ್ದಾರೆ.) ಅವರ ಮುಂದೆ ನಾವು ಮಿಡತೆಗಳೊ ಎಂದೆನಿಸಿತು. ಅವರಿಗೂ ಸಹ ನಾವು ಮಿಡತೆಗಳಂತೆ ಕಂಡುಬಂದೆವು” ಎಂದರು.
Kannada Holy Bible: Easy-to-Read Version. All rights reserved. © 1997 Bible League International