Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 8-10

ದೀಪಸ್ತಂಭ

ಯೆಹೋವನು ಮೋಶೆಗೆ, “ಆರೋನನು ಪವಿತ್ರಗುಡಾರದಲ್ಲಿ ದೀಪಸ್ತಂಭದ ಮೇಲಿನ ದೀಪಗಳನ್ನು ಕ್ರಮಪಡಿಸಲು ಹೇಳು. ಆಗ ದೀಪಸ್ತಂಭದ ಮುಂದಿನ ಸ್ಥಳದಲ್ಲಿ ಬೆಳಕು ಪ್ರಕಾಶಿಸುವುದು” ಎಂದು ಹೇಳಿದನು.

ಅಂತೆಯೇ ಆರೋನನು ಮಾಡಿದನು. ಆರೋನನು ದೀಪಗಳನ್ನು ಸರಿಯಾದ ಸ್ಥಳದಲ್ಲಿಟ್ಟು ಅವುಗಳು ದೀಪಸ್ತಂಭದ ಎದುರಿನಲ್ಲಿ ಪ್ರಕಾಶಿಸುವಂತೆ ಮಾಡಿದನು. ಹೀಗೆ ಯೆಹೋವನು ಹೇಳಿದಂತೆಯೇ ಮೋಶೆಯು ಮಾಡಿದನು. ಆ ದೀಪಸ್ತಂಭವನ್ನು ಅದರ ಬುಡದಿಂದ ಪುಷ್ಪಾಲಂಕಾರಗಳವರೆಗೂ ಸಂಪೂರ್ಣವಾಗಿ ಚಿನ್ನದ ತಗಡಿನಿಂದ ಮಾಡಲಾಗಿತ್ತು. ಯೆಹೋವನು ಮೋಶೆಗೆ ತೋರಿಸಿದ ಮಾದರಿಯಂತೆ ಅದು ಮಾಡಲ್ಪಟ್ಟಿತ್ತು.

ಲೇವಿಯರ ಶುದ್ಧೀಕರಣ

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಂದ ಲೇವಿಯರನ್ನು ಪ್ರತ್ಯೇಕಿಸಿ ಶುದ್ಧೀಕರಿಸು. ಅವರನ್ನು ಶುದ್ಧೀಕರಿಸುವ ಕ್ರಮ ಹೇಗೆಂದರೆ, ನೀನು ಅವರ ಮೇಲೆ ದೋಷಪರಿಹಾರಕ ಜಲವನ್ನು ಚಿಮಿಕಿಸಬೇಕು. ಬಳಿಕ ಅವರು ಸರ್ವಾಂಗಕ್ಷೌರ ಮಾಡಿಸಿಕೊಂಡು ತಮ್ಮ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಹೀಗೆ ತಮ್ಮನ್ನು ಶುದ್ಧಪಡಿಸಿಕೊಳ್ಳಬೇಕು.

“ತರುವಾಯ ಲೇವಿಯರು ಸರ್ವಾಂಗಹೋಮಕ್ಕಾಗಿ ಒಂದು ಎಳೆಹೋರಿಯನ್ನು ಮತ್ತು ಅದರೊಡನೆ ಸಮರ್ಪಿಸಬೇಕಾದ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಯಹಿಟ್ಟನ್ನು ತೆಗೆದುಕೊಂಡು ಬರಬೇಕು; ನೀನು ಅವರಿಂದ ದೋಷಪರಿಹಾರಕ ಯಜ್ಞಕ್ಕಾಗಿ ಮತ್ತೊಂದು ಎಳೆಹೋರಿಯನ್ನು ತೆಗೆದುಕೊಳ್ಳಬೇಕು. ಲೇವಿಯರನ್ನು ದೇವದರ್ಶನಗುಡಾರದ ಮುಂಭಾಗಕ್ಕೆ ಕರೆದುಕೊಂಡು ಬಂದು ಇಸ್ರೇಲರನ್ನು ಒಟ್ಟಾಗಿ ಸೇರಿಸು. 10 ನೀನು ಲೇವಿಯರನ್ನು ಯೆಹೋವನ ಮುಂದೆ ಕರೆದುಕೊಂಡು ಬಂದಾಗ ಇಸ್ರೇಲರು ತಮ್ಮ ಕೈಗಳನ್ನು ಅವರ ತಲೆಯ ಮೇಲಿಡುವರು. 11 ಆಗ ಆರೋನನು ಲೇವಿಯರನ್ನು ಯೆಹೋವನಿಗೆ ಇಸ್ರೇಲರ ಕಾಣಿಕೆಯಾಗಿ ಕೊಡುವನು. ಈ ರೀತಿಯಾಗಿ ಲೇವಿಯರು ಯೆಹೋವನ ಪರಿಚರ್ಯ ಕೆಲಸಕ್ಕಾಗಿ ಸಿದ್ಧರಾಗುವರು.

12 “ಲೇವಿಯರು ಆ ಹೋರಿಗಳ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟ ನಂತರ, ನೀನು ಯೆಹೋವನಿಗೆ ದೋಷಪರಿಹಾರಕ ಯಜ್ಞವಾಗಿ ಒಂದು ಹೋರಿಯನ್ನೂ ಸರ್ವಾಂಗಹೋಮವಾಗಿ ಇನ್ನೊಂದು ಹೋರಿಯನ್ನೂ ಸಮರ್ಪಿಸಬೇಕು. ಇವು ಲೇವಿಯರಿಗೆ ನೈವೇದ್ಯದ ಸಮರ್ಪಣೆಗಳಾಗಿವೆ. 13 ಈ ರೀತಿಯಲ್ಲಿ ನೀನು ಲೇವಿಯರನ್ನು ಆರೋನ ಮತ್ತು ಅವನ ಪುತ್ರರ ಅಧೀನದಲ್ಲಿ ಸೇವೆ ಮಾಡುವಂತೆ ಮಾಡುವೆ ಮತ್ತು ಲೇವಿಯರನ್ನು ಯೆಹೋವನಿಗೆ ವಿಶೇಷ ಕೊಡುಗೆಯಾಗಿ ಸಲ್ಲಿಸುವೆ. 14 ನೀನು ಲೇವಿಯರನ್ನು ಇತರ ಇಸ್ರೇಲರಿಂದ ಪ್ರತ್ಯೇಕಿಸಬೇಕು. ಲೇವಿಯರು ನನ್ನ ಆಸ್ತಿಯಾಗಿದ್ದಾರೆ.

15 “ನೀನು ಲೇವಿಯರನ್ನು ಶುದ್ಧೀಕರಿಸಿ ಅವರನ್ನು ವಿಶೇಷ ಕೊಡುಗೆಯಾಗಿ ನನಗೆ ಕೊಟ್ಟ ಮೇಲೆ, ಅವರು ಬಂದು ದೇವದರ್ಶನಗುಡಾರದ ಕೆಲಸವನ್ನು ಮಾಡಬಹುದು. 16 ಯಾಕೆಂದರೆ ಲೇವಿಯರು ಇಸ್ರೇಲರ ಮಧ್ಯದಿಂದ ನನಗಾಗಿ ಸಂಪೂರ್ಣವಾಗಿ ಪ್ರತಿಷ್ಠಿತರಾಗಿದ್ದಾರೆ. ಇಸ್ರೇಲರ ಚೊಚ್ಚಲು ಗಂಡುಮಕ್ಕಳಿಗೆ ಬದಲಾಗಿ ನಾನು ಇವರನ್ನೇ ನನ್ನ ಸ್ವಂತಕ್ಕಾಗಿ ತೆಗೆದುಕೊಂಡಿದ್ದೇನೆ. 17 ಇಸ್ರೇಲರಲ್ಲಿ ಚೊಚ್ಚಲಾದ ಮನುಷ್ಯರೂ ಪಶುಗಳೂ ನನ್ನ ಸ್ವತ್ತಾಗಿರುವರು. ಈಜಿಪ್ಟ್ ದೇಶದಲ್ಲಿದ್ದ ಚೊಚ್ಚಲಾದದ್ದನ್ನೆಲ್ಲ ನಾನು ಸಂಹರಿಸಿದಾಗ ಇಸ್ರೇಲರ ಚೊಚ್ಚಲಾದದ್ದನ್ನು ನನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡೆನಲ್ಲಾ. 18 ಆದರೆ ಈಗ ನಾನು ಇಸ್ರೇಲರ ಚೊಚ್ಚಲು ಗಂಡುಮಕ್ಕಳಿಗೆ ಬದಲಾಗಿ ಲೇವಿಯರನ್ನು ತೆಗೆದುಕೊಳ್ಳುವೆನು. 19 ಇಸ್ರೇಲರ ಮಧ್ಯದಿಂದ ನಾನು ಲೇವಿಯರನ್ನು ಆರಿಸಿಕೊಂಡಿದ್ದೇನೆ ಮತ್ತು ದೇವದರ್ಶನಗುಡಾರದಲ್ಲಿ ಇಸ್ರೇಲರ ಪರವಾಗಿ ಕೆಲಸ ಮಾಡಲೂ ಮತ್ತು ಇಸ್ರೇಲರಿಗೆ ದೋಷಪರಿಹಾರ ಮಾಡುವುದಕ್ಕೂ ನಾನು ಅವರನ್ನು ಆರೋನ ಮತ್ತು ಅವನ ಪುತ್ರರಿಗೆ ಒಪ್ಪಿಸಿಕೊಟ್ಟಿದ್ದೇನೆ. ಇಸ್ರೇಲರನ್ನು ಶುದ್ಧಿಗೊಳಿಸುವ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಅವರು ಸಹಾಯ ಮಾಡುವರು. ಹೀಗಿರುವುದರಿಂದ ಇಸ್ರೇಲರು ಪವಿತ್ರವಸ್ತುಗಳ ಅತೀ ಸಮೀಪಕ್ಕೆ ಬಂದರೂ ಅವರಿಗೆ ಅಪಾಯವು ಸಂಭವಿಸುವುದಿಲ್ಲ.”

20 ಯೆಹೋವನು ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆ ಮೋಶೆ ಆರೋನರೂ ಇಸ್ರೇಲರ ಸಮೂಹದವರೆಲ್ಲರೂ ಮಾಡಿದರು. 21 ಲೇವಿಯರು ತಮ್ಮನ್ನು ಶುದ್ಧಮಾಡಿಕೊಂಡು ಬಟ್ಟೆಗಳನ್ನು ಒಗೆದುಕೊಂಡರು. ಬಳಿಕ ಆರೋನನು ಅವರನ್ನು ಯೆಹೋವನಿಗೆ ವಿಶೇಷ ಕೊಡುಗೆಯಾಗಿ ಕೊಟ್ಟನು. ಆರೋನನು ಅವರನ್ನು ಶುದ್ಧೀಕರಿಸುವುದಕ್ಕಾಗಿ ದೋಷಪರಿಹಾರ ಮಾಡಿದನು. 22 ಆಗ ಲೇವಿಯರು ದೇವದರ್ಶನಗುಡಾರದಲ್ಲಿ ಆರೋನನ ಮತ್ತು ಅವನ ಪುತ್ರರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಲು ಅರ್ಹರಾದರು. ಯೆಹೋವನು ಮೋಶೆಗೆ ಲೇವಿಯರ ಬಗ್ಗೆ ಆಜ್ಞಾಪಿಸಿದ್ದಂತೆಯೇ ಅವರಿಗೆ ಮಾಡಲಾಯಿತು.

23 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 24 “ಲೇವಿಯರು ಅನುಸರಿಸಬೇಕಾದ ಪದ್ಧತಿ ಏನೆಂದರೆ: ಲೇವಿಯರಲ್ಲಿ ಇಪ್ಪತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಗಂಡಸರು ದೇವದರ್ಶನಗುಡಾರದ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾಗಿದ್ದಾರೆ. 25 ಅವರ ವಯಸ್ಸು ಐವತ್ತು ವರ್ಷವಾದ ನಂತರ ಸೇವೆಯಿಂದ ನಿವೃತ್ತರಾಗಬೇಕು; ಪವಿತ್ರ ಗುಡಾರವನ್ನು ವರ್ಗಾವಣೆ ಮಾಡುವ ಭಾರವಾದ ಕೆಲಸವನ್ನು ಅವರೆಂದಿಗೂ ಮಾಡಕೂಡದು. 26 ಅವರು ಕಾವಲುಗಾರರಾಗಿ ದೇವದರ್ಶನಗುಡಾರದ ಬಳಿ ಇತರ ಲೇವಿಯರಿಗೆ ಸಹಾಯ ಮಾಡಬಹುದೇ ಹೊರತು ಭಾರವಾದ ಕೆಲಸವನ್ನು ಮಾಡಲೇಕೂಡದು. ನೀನು ಈ ರೀತಿಯಲ್ಲಿ ಲೇವಿಯರಿಗೆ ಕೆಲಸವನ್ನು ಹಂಚಿಕೊಡಬೇಕು.”

ಪಸ್ಕಹಬ್ಬ

ಇಸ್ರೇಲರು ಈಜಿಪ್ಟ್ ದೇಶವನ್ನು ಬಿಟ್ಟುಬಂದ ನಂತರ ಎರಡನೆ ವರ್ಷದ ಮೊದಲನೆಯ ತಿಂಗಳಲ್ಲಿ ಸೀನಾಯಿ ಮರುಭೂಮಿಯಲ್ಲಿ ಯೆಹೋವನು ಮೋಶೆಯೊಡನೆ ಮಾತಾಡಿದನು. ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರು ನೇಮಕವಾದ ಕಾಲದಲ್ಲಿ ಪಸ್ಕಹಬ್ಬವನ್ನು ಆಚರಿಸಬೇಕು. ಅವರು ಈ ತಿಂಗಳ ಹದಿನಾಲ್ಕನೆಯ ದಿನದ ನಸುಸಂಜೆಯ ವೇಳೆ ಪಸ್ಕದ ಊಟವನ್ನು ಮಾಡಬೇಕು. ಅವರು ಇದನ್ನು ಪಸ್ಕಹಬ್ಬದ ಎಲ್ಲಾ ನಿಯಮಗಳ ಪ್ರಕಾರ ನೇಮಕವಾದ ಕಾಲದಲ್ಲಿ ಮಾಡಬೇಕು.”

ಆದ್ದರಿಂದ ಮೋಶೆ ಇಸ್ರೇಲರಿಗೆ, ಪಸ್ಕಹಬ್ಬವನ್ನು ಆಚರಿಸಬೇಕೆಂದು ಹೇಳಿದನು. ಜನರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ನಸುಸಂಜೆಯ ವೇಳೆಯಲ್ಲಿ ಸೀನಾಯಿ ಮರುಭೂಮಿಯಲ್ಲಿ ಇದನ್ನು ಆಚರಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಪ್ರತಿಯೊಂದನ್ನೂ ಮಾಡಿದರು.

ಆದರೆ ಕೆಲವು ಜನರು ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿ ಆ ದಿನದಲ್ಲಿ ಪಸ್ಕಹಬ್ಬವನ್ನು ಆಚರಿಸಲಾಗಲಿಲ್ಲ. ಆದ್ದರಿಂದ ಅವರು ಆ ದಿನ ಮೋಶೆ ಆರೋನರ ಬಳಿಗೆ ಬಂದು, “ನಾವು ಮನುಷ್ಯ ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿದ್ದೇವೆ. ಆದರೆ ನೇಮಕವಾದ ಕಾಲದಲ್ಲಿ ಯೆಹೋವನ ಪಸ್ಕಹಬ್ಬದ ಯಜ್ಞವನ್ನು ಇತರ ಇಸ್ರೇಲರೊಡನೆ ಅರ್ಪಿಸುವುದಕ್ಕೆ ಸಾಧ್ಯವಿಲ್ಲವೇ?” ಎಂದು ಕೇಳಿದರು.

ಮೋಶೆಯು ಅವರಿಗೆ, “ಇಲ್ಲೇ ಇರಿ. ಇದರ ವಿಷಯದಲ್ಲಿ ಯೆಹೋವನು ಏನು ಹೇಳುತ್ತಾನೆಂದು ನಾನು ಆತನನ್ನು ವಿಚಾರಿಸುತ್ತೇನೆ” ಎಂದು ಹೇಳಿದನು.

ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 10 “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ನಿಮ್ಮಲ್ಲಿಯಾಗಲಿ ನಿಮ್ಮ ಸಂತತಿಯವರಲ್ಲಿಯಾಗಲಿ ಮನುಷ್ಯಶವ ಸೋಂಕಿದ್ದರಿಂದ ಅಶುದ್ಧರಾದವರೂ ದೂರಪ್ರಯಾಣದಲ್ಲಿರುವವರೂ ಸಹ ಯೆಹೋವನ ಪಸ್ಕಹಬ್ಬವನ್ನು ಆಚರಿಸಲೇಬೇಕು. 11 ಅಂಥವರು ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದ ನಸುಸಂಜೆ ವೇಳೆಯಲ್ಲಿ ಪಸ್ಕಹಬ್ಬವನ್ನು ಆಚರಿಸಬೇಕು. ಆ ಸಮಯದಲ್ಲಿ ಅವರು ಪಸ್ಕದ ಕುರಿಮರಿಯ ಮಾಂಸವನ್ನು ಹುಳಿಯಿಲ್ಲದ ರೊಟ್ಟಿಗಳೊಡನೆ ಮತ್ತು ಕಹಿಯಾದ ಸೊಪ್ಪುಗಳೊಡನೆ ಊಟಮಾಡಬೇಕು. 12 ಅದರಲ್ಲಿ ಯಾವುದನ್ನೂ ಮರುದಿನದವರೆಗೆ ಇಡಬಾರದು. ಅವರು ಅದೆಲ್ಲವನ್ನು ತಿಂದುಬಿಡಬೇಕು. ಆ ಕುರಿಮರಿಯ ಎಲುಬುಗಳನ್ನು ಮುರಿಯಬಾರದು. ಅವರು ಪಸ್ಕಹಬ್ಬದ ವಿಷಯವಾಗಿ ನೇಮಕವಾಗಿರುವ ನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು. 13 ಆದರೆ ಯಾವನಾದರೂ ಶುದ್ಧನಾಗಿದ್ದರೂ ಪ್ರಯಾಣದಲ್ಲಿಲ್ಲದಿದ್ದರೂ ಪಸ್ಕಹಬ್ಬವನ್ನು ಆಚರಿಸದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು. ಅವನು ಯೆಹೋವನಿಂದ ನೇಮಕವಾದ ಯಜ್ಞವನ್ನು ಸರಿಯಾದ ಕಾಲದಲ್ಲಿ ಸಮರ್ಪಿಸದೆ ಹೋದದ್ದರಿಂದ ಅವನು ದೋಷಿಯಾಗಿದ್ದಾನೆ ಮತ್ತು ಅವನಿಗೆ ಶಿಕ್ಷೆಯಾಗಬೇಕು.

14 “ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯದೇಶಸ್ಥನು ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ, ಅದರ ವಿಷಯವಾದ ನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು. ಪರದೇಶದವನಿಗೂ ಸ್ವದೇಶದವನಿಗೂ ಒಂದೇ ವಿಧಿಯಿರಬೇಕು.”

ಮೇಘಸ್ತಂಭ ಮತ್ತು ಅಗ್ನಿಸ್ತಂಭ

15 ಇಸ್ರೇಲರು ಒಡಂಬಡಿಕೆಯ ಗುಡಾರವಾದ ಪವಿತ್ರ ಗುಡಾರವನ್ನು ಎತ್ತಿ ನಿಲ್ಲಿಸಿದ ದಿನದಲ್ಲಿ ಮೇಘವು ಅದರ ಮೇಲೆ ಮುಚ್ಚಿಕೊಂಡಿತು ಮತ್ತು ಅದು ರಾತ್ರಿಯಲ್ಲಿ ಬೆಂಕಿಯಂತೆ ಕಾಣಿಸುತ್ತಿತ್ತು. 16 ಹೀಗೆ ಮೇಘವು ಯಾವಾಗಲೂ ದೇವದರ್ಶನಗುಡಾರವನ್ನು ಮುಚ್ಚಿಕೊಂಡಿರುವುದು. ರಾತ್ರಿವೇಳೆಯಲ್ಲಿ ಆ ಮೇಘವು ಬೆಂಕಿಯಂತೆ ಕಾಣಿಸುವುದು. 17 ಆ ಮೇಘವು ಪವಿತ್ರ ಗುಡಾರದಿಂದ ಮೇಲಕ್ಕೆ ಎದ್ದಾಗಲೆಲ್ಲಾ ಇಸ್ರೇಲರು ಮುಂದಕ್ಕೆ ಪ್ರಯಾಣಮಾಡುವರು. ಆ ಮೇಘವು ನಿಂತಲ್ಲೆಲ್ಲಾ ಇಸ್ರೇಲರು ಪಾಳೆಯ ಮಾಡಿಕೊಳ್ಳುವರು. 18 ಇಸ್ರೇಲರು ಯೆಹೋವನ ಸೂಚನೆಯನ್ನು ಹೊಂದಿದ ಮೇಲೆ ಪ್ರಯಾಣಮಾಡುವರು. ಆ ಮೋಡವು ಪವಿತ್ರಗುಡಾರದ ಮೇಲಿರುವ ತನಕ ಅವರು ತಾವಿರುವಲ್ಲಿಯೇ ಇರುವರು. 19 ಕೆಲವು ಬಾರಿ ಆ ಮೇಘವು ಬಹುದಿನಗಳವರೆಗೂ ಪವಿತ್ರಗುಡಾರದ ಮೇಲೆ ಇರುವ ಸಂದರ್ಭದಲ್ಲಿ ಇಸ್ರೇಲರು ಯೆಹೋವನಿಗೆ ವಿಧೇಯರಾಗಿ ಮುಂದಕ್ಕೆ ಪ್ರಯಾಣಮಾಡಲಿಲ್ಲ. 20 ಒಂದೊಂದು ವೇಳೆಯಲ್ಲಿ ಮೇಘವು ಕೆಲವು ದಿವಸ ಮಾತ್ರ ಪವಿತ್ರ ಗುಡಾರದ ಮೇಲೆ ನಿಂತಿರುವುದು. ಯೆಹೋವನ ಆಜ್ಞೆಯ ಪ್ರಕಾರ ಅವರು ಇಳಿದುಕೊಳ್ಳುತ್ತಿದ್ದರು ಮತ್ತು ಯೆಹೋವನ ಆಜ್ಞೆಯ ಪ್ರಕಾರ ಹೊರಡುತ್ತಿದ್ದರು. 21 ಕೆಲವು ಸಮಯಗಳಲ್ಲಿ ಮೇಘವು ಸಾಯಂಕಾಲದಿಂದ ಹೊತ್ತಾರೆಯವರೆಗೂ ಇರುತ್ತಿತ್ತು; ಬೆಳಿಗ್ಗೆ ಅದು ಮೇಲಕ್ಕೆ ಎದ್ದಾಗ ಜನರು ಪ್ರಯಾಣ ಮಾಡುತ್ತಿದ್ದರು. ಮೋಡವು ಚಲಿಸಿದಾಗ ಅದು ಹಗಲಾಗಿರಲಿ ರಾತ್ರಿಯಾಗಿರಲಿ ಜನರು ಅದನ್ನು ಹಿಂಬಾಲಿಸುವರು. 22 ಆ ಮೇಘವು ಪವಿತ್ರಗುಡಾರದ ಮೇಲೆ ಎರಡು ದಿನವಾಗಲಿ ಒಂದು ತಿಂಗಳಾಗಲಿ ಒಂದು ವರ್ಷವಾಗಲಿ ನಿಂತರೆ ಅದು ನಿಂತಿರುವ ತನಕ ಇಸ್ರೇಲರು ಪ್ರಯಾಣ ಮಾಡದೆ ಇಳಿದುಕೊಂಡೇ ಇರುವರು. ಅದು ಮೇಲಕ್ಕೆ ಎದ್ದಾಗ ಅವರು ಹೊರಡುವರು. 23 ಹೀಗೆ ಯೆಹೋವನ ಸೂಚನೆಯಂತೆ ಜನರು ಪಾಳೆಯ ಮಾಡಿಕೊಳ್ಳುವರು; ಪ್ರಯಾಣ ಮುಂದುವರಿಸುವರು. ಮೋಶೆಯ ಮೂಲಕವಾಗಿ ಆಜ್ಞಾಪಿಸಿದಂತೆ ಜನರು ಯೆಹೋವನ ಸೂಚನೆಗಳನ್ನು ಲಕ್ಷ್ಯವಿಟ್ಟು ಅನುಸರಿಸಿ ನಡೆಯುತ್ತಿದ್ದರು.

ಬೆಳ್ಳಿಯ ತುತ್ತೂರಿಗಳು

10 ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ: “ನೀನು ಬೆಳ್ಳಿಯ ತಗಡುಗಳಿಂದ ಎರಡು ತುತ್ತೂರಿಗಳನ್ನು ಮಾಡಿಸಬೇಕು. ಜನಸಮೂಹದವರನ್ನು ಒಟ್ಟಾಗಿ ಕರೆಸುವುದಕ್ಕೂ ಅವರು ಯಾವಾಗ ಹೊರಡಬೇಕೆಂದು ಹೇಳುವುದಕ್ಕೂ ಇವುಗಳನ್ನು ಉಪಯೋಗಿಸಬೇಕು. ನೀನು ಎರಡು ತುತ್ತೂರಿಗಳನ್ನು ಲಘು ಸ್ವರದಿಂದ ಊದಿಸುವಾಗ ಜನಸಮೂಹದವರೆಲ್ಲರೂ ನಿನ್ನ ಹತ್ತಿರ ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿಯಲ್ಲಿ ಕೂಡಿರಬೇಕು. ಆದರೆ ನೀನು ಒಂದು ತುತ್ತೂರಿಯನ್ನು ಮಾತ್ರ ಊದಿಸಿದರೆ ಇಸ್ರೇಲಿನ ಕುಲಪ್ರಧಾನರಾದ ಮುಖ್ಯಸ್ಥರು ಮಾತ್ರ ನಿನ್ನನ್ನು ಸಂಧಿಸಲು ಬರಬೇಕು.

“ಜನರ ಕುಲಗಳು ಪಾಳೆಯದಿಂದ ಪ್ರಯಾಣ ಮಾಡಬೇಕೆಂಬುದಕ್ಕೆ ಸೂಚನೆಗಾಗಿ ತುತ್ತೂರಿಯನ್ನು ಆರ್ಭಟದಿಂದ ಊದಿಸಬೇಕು. ನೀವು ಮೊದಲನೆ ಸಲ ತುತ್ತೂರಿಯನ್ನು ಆರ್ಭಟದಿಂದ ಊದಿಸುವಾಗ ದೇವದರ್ಶನಗುಡಾರದ ಪೂರ್ವ ದಿಕ್ಕಿನಲ್ಲಿ ಪಾಳೆಯ ಹಾಕಿಕೊಂಡಿರುವ ಕುಲಗಳು ಹೊರಡಬೇಕು. ನೀವು ಎರಡನೆಯ ಸಲ ತುತ್ತೂರಿಗಳನ್ನು ಆರ್ಭಟ ಸ್ವರದಲ್ಲಿ ಊದಿಸುವಾಗ ದೇವದರ್ಶನಗುಡಾರದ ದಕ್ಷಿಣ ದಿಕ್ಕಿನಲ್ಲಿ ಪಾಳೆಯ ಹಾಕಿಕೊಂಡಿರುವ ಕುಲಗಳು ಹೊರಡಬೇಕು. ಆದರೆ ಜನಸಮುದಾಯವು ಕೂಡಿಬರಬೇಕಾದಾಗ ತುತ್ತೂರಿಗಳನ್ನು ಲಘುಸ್ವರದಲ್ಲಿ ಊದಿಸಬೇಕೇ ಹೊರತು ಆರ್ಭಟ ಸ್ವರದಲ್ಲಲ್ಲ. ಯಾಜಕರಾದ ಆರೋನನ ಪುತ್ರರು ಮಾತ್ರವೇ ಆ ತುತ್ತೂರಿಗಳನ್ನು ಊದಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮ.

“ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮ ಶತ್ರುಗಳನ್ನು ಎದುರಿಸುವುದಕ್ಕಾಗಿ ಯುದ್ಧಕ್ಕೆ ಹೊರಡುವಾಗ ತುತ್ತೂರಿಗಳನ್ನು ಆರ್ಭಟ ಸ್ವರದಲ್ಲಿ ಊದಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಜ್ಞಾಪಕಮಾಡಿಕೊಂಡು ಶತ್ರುಗಳಿಂದ ನಿಮ್ಮನ್ನು ರಕ್ಷಿಸುವನು. 10 ಇದಲ್ಲದೆ, ನೀವು ಉತ್ಸವಕಾಲಗಳಲ್ಲಿಯೂ ಹಬ್ಬಗಳಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುವಾಗ ಆ ತುತ್ತೂರಿಗಳನ್ನು ಊದಿಸಬೇಕು. ನಿಮ್ಮನ್ನು ಗಮನಿಸಬೇಕೆಂದು ಆ ತುತ್ತೂರಿ ಧ್ವನಿಗಳು ನಿಮ್ಮ ದೇವರಿಗೆ ನೆನಪನ್ನುಂಟುಮಾಡುತ್ತವೆ. ನೀವು ಇದನ್ನು ಮಾಡಬೇಕೆಂದು ನಾನು ಆಜ್ಞಾಪಿಸುತ್ತೇನೆ. ನಿಮ್ಮ ದೇವರಾದ ಯೆಹೋವನು ನಾನೇ.”

ಇಸ್ರೇಲರ ಪ್ರಯಾಣ

11 ಇಸ್ರೇಲರು ಈಜಿಪ್ಟನ್ನು ಬಿಟ್ಟ ನಂತರದ ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ಮೇಘವು ಒಡಂಬಡಿಕೆಯ ಗುಡಾರದಿಂದ ಮೇಲೆ ಎದ್ದಿತು. 12 ಆದ್ದರಿಂದ, ಇಸ್ರೇಲರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ಸೀನಾಯಿ ಮರುಭೂಮಿಯನ್ನು ಬಿಟ್ಟು ಮೇಘವು ಪಾರಾನ್ ಮರುಭೂಮಿಯಲ್ಲಿ ನಿಲ್ಲುವವರೆಗೆ ಪ್ರಯಾಣ ಮಾಡಿದರು. 13 ಯೆಹೋವನು ಮೋಶೆಯ ಮೂಲಕ ಕೊಟ್ಟ ಸೂಚನೆಯ ಪ್ರಕಾರ ಅವರು ಮೊಟ್ಟಮೊದಲನೆಯ ಸಲ ಪ್ರಯಾಣವನ್ನು ಆರಂಭಿಸಿದರು.

14 ಮೊದಲು ಯೆಹೂದ ಪಾಳೆಯದ ಮೂರು ದಂಡುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀನಾದಾಬನ ಮಗನಾದ ನಹಶೋನನು ಯೆಹೂದ ಕುಲದ ಸೇನಾಧಿಪತಿಯಾಗಿದ್ದನು. 15 ಚೂವಾರನ ಮಗನಾದ ನೆತನೇಲನು ಇಸ್ಸಾಕಾರನ ಕುಲದ ಸೇನಾಧಿಪತಿ. 16 ಹೇಲೋನನ ಮಗನಾದ ಎಲೀಯಾಬನು ಜೆಬುಲೂನ್ ಕುಲದ ಸೇನಾಧಿಪತಿ.

17 ಬಳಿಕ ಪವಿತ್ರ ಗುಡಾರವನ್ನು ಕೆಳಗಿಳಿಸಲಾಯಿತು. ಗೇರ್ಷೋನ್ ಮತ್ತು ಮೆರಾರೀ ಕುಲಗಳ ಗಂಡಸರು ಪವಿತ್ರ ಗುಡಾರವನ್ನು ಹೊತ್ತುಕೊಂಡು ಅವರ ಹಿಂದೆ ಹೊರಟರು.

18 ಅವರ ತರುವಾಯ ರೂಬೇನ್ ಕುಲದಿಂದ ಮುನ್ನಡೆಸಲ್ಪಟ್ಟ ಮೂರು ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಹೊರಟರು. ಶೆದೇಯೂರನ ಮಗನಾದ ಎಲೀಚೂರನು ರೂಬೇನ್ ಕುಲದ ಸೇನಾಧಿಪತಿಯಾಗಿದ್ದನು. 19 ಚೂರೀಷದ್ದೈನ ಮಗನಾದ ಶೆಲುಮೀಯೇಲನು ಸಿಮೆಯೋನ್ ಕುಲದ ಸೇನಾಧಿಪತಿ. 20 ದೆಗೂವೇಲನ ಮಗನಾದ ಎಲ್ಯಾಸಾಫನು ಗಾದ್ ಕುಲದ ಸೇನಾಧಿಪತಿ. 21 ಬಳಿಕ ಕೆಹಾತನ ಕುಲದವರು ಹೊರಟರು. ಅವರು ದೇವಸ್ಥಾನದ ಪವಿತ್ರವಸ್ತುಗಳನ್ನು ಹೊತ್ತುಕೊಂಡಿದ್ದರು. ಕೆಹಾತ್ಯರು ಪವಿತ್ರವಸ್ತುಗಳೊಡನೆ ಬರುವಷ್ಟರೊಳಗೆ ಇತರ ಲೇವಿಯರು ದೇವದರ್ಶನಗುಡಾರವನ್ನು ಎತ್ತಿ ನಿಲ್ಲಿಸಿದರು.

22 ಬಳಿಕ ಎಫ್ರಾಯೀಮ್ ಪಾಳೆಯದಿಂದ ಮೂರು ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀಹೂದನ ಮಗನಾದ ಎಲೀಷಾಮನು ಎಫ್ರಾಯೀಮ್ ಕುಲದ ಸೇನಾಧಿಪತಿ. 23 ಪೆದಾಚೂರನ ಮಗನಾದ ಗಮ್ಲೀಯೇಲನು ಮನಸ್ಸೆ ಕುಲದ ಸೇನಾಧಿಪತಿ. 24 ಗಿದ್ಯೋನಿಯ ಮಗನಾದ ಅಬೀದಾನನು ಬೆನ್ಯಾಮೀನ್ ಕುಲದ ಸೇನಾಧಿಪತಿ.

25 ಆಮೇಲೆ ಎಲ್ಲಾ ಕುಲಗಳ ಹಿಂಭಾಗದಲ್ಲಿ ದಾನ್ ಕುಲದಿಂದ ಮುನ್ನಡೆಸಲ್ಪಟ್ಟ ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀಷದ್ದೈನ ಮಗನಾದ ಅಹೀಗೆಜೆರನು ದಾನ್ ಕುಲದ ಸೇನಾಧಿಪತಿ. 26 ಆಶೇರನ ಕುಲಕ್ಕೆ ಒಕ್ರಾನನ ಮಗನಾದ ಪಗೀಯೇಲನು ಸೇನಾಧಿಪತಿಯಾಗಿದ್ದನು. 27 ನಫ್ತಾಲಿ ಕುಲಕ್ಕೆ ಏನಾನನ ಮಗನಾದ ಅಹೀರನು ಸೇನಾಧಿಪತಿಯಾಗಿದ್ದನು. 28 ಈ ರೀತಿಯಾಗಿ ಇಸ್ರೇಲರು ತಮ್ಮ ಗುಂಪುಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡಿದರು.

29 ಹೋಬಾಬನು ಮಿದ್ಯಾನ್ಯನಾದ ರೆಗೂವೇಲನ ಮಗನು. ರೆಗೂವೇಲನು ಮೋಶೆಯ ಮಾವ. ಮೋಶೆಯು ಹೋಬಾಬನಿಗೆ, “ದೇವರು ನಮಗೆ ಕೊಡುತ್ತೇನೆಂದು ವಾಗ್ದಾನ ಮಾಡಿದ ದೇಶಕ್ಕೆ ನಾವು ಪ್ರಯಾಣ ಮಾಡುತ್ತಿದ್ದೇವೆ. ನಮ್ಮೊಂದಿಗೆ ಬಾ. ನೀನು ನಮ್ಮೊಂದಿಗೆ ಉದ್ದಾರವಾಗುವೆ; ಯಾಕೆಂದರೆ ಯೆಹೋವನು ಇಸ್ರೇಲರಿಗೆ ಒಳ್ಳೆಯವುಗಳನ್ನು ವಾಗ್ದಾನ ಮಾಡಿದ್ದಾನೆ.”

30 ಆದರೆ ಹೋಬಾಬನು, “ಇಲ್ಲ. ನಾನು ನಿಮ್ಮೊಂದಿಗೆ ಬರುವುದಿಲ್ಲ. ನಾನು ನನ್ನ ದೇಶಕ್ಕೂ ನನ್ನ ಜನರ ಬಳಿಗೂ ಹೋಗುವೆನು” ಎಂದು ಉತ್ತರಕೊಟ್ಟನು.

31 ಆಗ ಮೋಶೆ, “ದಯಮಾಡಿ ನಮ್ಮನ್ನು ಬಿಟ್ಟು ಹೋಗಬೇಡ. ನಾವು ಮರುಭೂಮಿಯಲ್ಲಿ ಎಲ್ಲಿ ಪಾಳೆಯ ಮಾಡಿಕೊಳ್ಳಬಹುದೆಂಬುದು ನಿನಗೆ ಗೊತ್ತಿದೆ. ನೀನು ನಮ್ಮ ಮಾರ್ಗದರ್ಶಕನಾಗಿರಬಹುದು. 32 ನೀನು ನಮ್ಮೊಂದಿಗೆ ಬಂದರೆ, ಯೆಹೋವನು ನಮಗೆ ಕೊಡುವ ಎಲ್ಲಾ ಒಳ್ಳೆಯ ವಸ್ತುಗಳಲ್ಲಿ ನಿನಗೆ ಪಾಲು ಕೊಡುವೆವು” ಎಂದು ಹೇಳಿದನು.

33 ಅವರು ಯೆಹೋವನ ಬೆಟ್ಟದಿಂದ ಹೊರಟು ಮೂರು ದಿನ ಪ್ರಯಾಣ ಮಾಡಿದರು. ಲೇವಿಯರು ಹೊತ್ತುಕೊಂಡಿದ್ದ ಯೆಹೋವನ ಒಡಂಬಡಿಕೆ ಪೆಟ್ಟಿಗೆಯು ಮತ್ತೆ ಪಾಳೆಯ ಹಾಕಲು ಯೋಗ್ಯವಾದ ಸ್ಥಳವನ್ನು ಎದುರು ನೋಡುತ್ತಾ ಜನರ ಮುಂದೆ ಮೂರು ದಿನಗಳವರೆಗೆ ಹೋಯಿತು. 34 ಅವರು ಪಾಳೆಯದೊಡನೆ ಹೊರಟಾಗ ಪ್ರತಿದಿನವೂ ಯೆಹೋವನ ಮೋಡವು ಅವರ ಮೇಲಿರುತ್ತಿತ್ತು.

35 ಜನರು ಪವಿತ್ರ ಪೆಟ್ಟಿಗೆಯನ್ನು ಎತ್ತಿಕೊಂಡು ಹೊರಡುವಾಗ, ಮೋಶೆಯು,

“ಯೆಹೋವನೇ, ಎದ್ದೇಳು!
    ನಿನ್ನ ವೈರಿಗಳು ಚದರಿಹೋಗಲಿ,
    ನಿನ್ನ ಶತ್ರುಗಳು ಬೆನ್ನುಕೊಟ್ಟು ಓಡಿಹೋಗಲಿ”

ಎಂದು ಹೇಳುತ್ತಿದ್ದನು.

36 ಪವಿತ್ರ ಪೆಟ್ಟಿಗೆಯು ಕೆಳಗಿಳಿಸಲ್ಪಟ್ಟಾಗ, ಮೋಶೆಯು,

“ಯೆಹೋವನೇ ಇಸ್ರೇಲರ ಲಕ್ಷಾಂತರ ಕುಟುಂಬಗಳ
    ಬಳಿಗೆ ಹಿಂತಿರುಗಿ ಬಾ”

ಎಂದು ಹೇಳುತ್ತಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International