Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 5-6

ಶುದ್ಧಾಚಾರದ ಕುರಿತು ನಿಯಮಗಳು

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಭಯಂಕರವಾದ ಚರ್ಮರೋಗವುಳ್ಳವರನ್ನೂ ದೈಹಿಕಸ್ರಾವವುಳ್ಳವರನ್ನೂ ಹೆಣದ ಸೋಂಕಿನಿಂದ ಅಶುದ್ಧರಾದವರನ್ನೂ ಪಾಳೆಯದಿಂದ ಹೊರಗಿಡಬೇಕೆಂದು ಇಸ್ರೇಲರಿಗೆ ಆಜ್ಞಾಪಿಸು. ಅಂಥವರು ಗಂಡಸರೇ ಆಗಲಿ ಹೆಂಗಸರೇ ಆಗಲಿ ಅವರೆಲ್ಲರನ್ನೂ ಪಾಳೆಯದಿಂದ ಹೊರಡಿಸಬೇಕು. ನಾನೇ ಅವರ ಪಾಳೆಯದಲ್ಲಿ ವಾಸಮಾಡುವುದರಿಂದ ಅವರು ಅದನ್ನು ಅಪವಿತ್ರ ಮಾಡಬಾರದು.”

ಯೆಹೋವನ ಅಪ್ಪಣೆಯ ಮೇರೆಗೆ ಇಸ್ರೇಲರು ತಮ್ಮಲ್ಲಿರುವ ಅಂಥವರೆಲ್ಲರನ್ನೂ ಪಾಳೆಯದ ಹೊರಗಿರಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಮಾಡಿದರು.

ತಪ್ಪುಕಾರ್ಯಗಳಿಗೆ ಪ್ರಾಯಶ್ಚಿತ್ತ ವಿಧಿ

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇದನ್ನು ಇಸ್ರೇಲರಿಗೆ ತಿಳಿಸು: ಯಾವ ಪುರುಷನಾಗಲಿ ಸ್ತ್ರೀಯಾಗಲಿ ಮತ್ತೊಬ್ಬನನ್ನು ಆಸ್ತಿಯ ವಿಷಯದಲ್ಲಿ ಮೋಸಗೊಳಿಸಿದರೆ ಅವನು ಸುಳ್ಳುಪ್ರಮಾಣ ಮಾಡುವುದರ ಮೂಲಕ ಯೆಹೋವನಿಗೆ ವಿರೋಧವಾಗಿ ಹೊಲಸಾದ ಕಾರ್ಯವನ್ನು ಮಾಡಿದಂತಾಯಿತು. ಆದ್ದರಿಂದ ಅವನು ದೋಷಿಯಾಗಿದ್ದಾನೆ. ಆದ್ದರಿಂದ ಅಂಥವನು ತನ್ನ ಪಾಪವನ್ನು ಅರಿಕೆಮಾಡಬೇಕು. ಅದಲ್ಲದೆ, ಅಪರಾಧ ಮಾಡಿದವನು ನಷ್ಟಪಟ್ಟವನಿಗೆ ಮೂಲದ್ರವ್ಯದ ಬೆಲೆಯೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು. ದಂಡವನ್ನು ತೆಗೆದುಕೊಳ್ಳತಕ್ಕವನು ತೀರಿಹೋಗಿ, ಹತ್ತಿರ ಸಂಬಂಧಿಯೂ ಇಲ್ಲದ ಪಕ್ಷಕ್ಕೆ, ಆ ದ್ರವ್ಯವನ್ನು ಯೆಹೋವನಿಗೆ ಕೊಡಬೇಕು. ಅವನು ಯಾಜಕನಿಗೆ ಪೂರ್ಣ ಬೆಲೆಯನ್ನು ಕೊಡಬೇಕು. ತಪ್ಪು ಮಾಡಿದವನು ಯಾಜಕನಿಗೆ ಒಂದು ಟಗರನ್ನೂ ತಂದುಕೊಡಬೇಕು. ಈ ಟಗರನ್ನು ತಪ್ಪುಮಾಡಿದವನ ಪ್ರಾಯಶ್ಚಿತ್ತಕ್ಕಾಗಿ ಯಜ್ಞಮಾಡಬೇಕು. ಆದರೆ ಉಳಿದದ್ದನ್ನು ಯಾಜಕನು ಇಟ್ಟುಕೊಳ್ಳಬಹುದು.

9-10 “ಒಬ್ಬನು ದೇವರಿಗೆ ವಿಶೇಷ ಕಾಣಿಕೆಯನ್ನು ಅರ್ಪಿಸಿದರೆ, ಅದನ್ನು ಸ್ವೀಕರಿಸುವ ಯಾಜಕನು ತನಗಾಗಿ ಅದನ್ನು ಇಟ್ಟುಕೊಳ್ಳಬಹುದು. ಅದು ಅವನದಾಗಿರುತ್ತದೆ. ಒಬ್ಬನು ಈ ವಿಶೇಷ ಕಾಣಿಕೆಗಳನ್ನು ಕೊಡಬೇಕಾಗಿಲ್ಲ. ಆದರೆ ಅವನು ಅವುಗಳನ್ನು ಕೊಟ್ಟರೆ ಅವು ಯಾಜಕನಿಗೆ ಸೇರುತ್ತವೆ.”

ಸಂಶಯಪಡುವ ಗಂಡಂದಿರು

11 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 12 “ಈ ವಿಷಯಗಳನ್ನು ಇಸ್ರೇಲರಿಗೆ ಹೇಳು: ಒಬ್ಬನ ಹೆಂಡತಿ ಸನ್ಮಾರ್ಗವನ್ನು ಬಿಟ್ಟು ತನ್ನ ಗಂಡನಿಗೆ ಅಪನಂಬಿಗಸ್ತಳಾಗಿದ್ದು, 13 ಇನ್ನೊಬ್ಬನೊಡನೆ ಲೈಂಗಿಕ ಸಂಬಂಧ ಮಾಡಿರಬಹುದು. ಅವಳ ಈ ಕಾರ್ಯವು ಗಂಡನಿಗೆ ಗೊತ್ತಿಲ್ಲದಿರಬಹುದು; ಯಾವ ಸಾಕ್ಷಿಯೂ ಇಲ್ಲದಿರುವುದರಿಂದ ಮತ್ತು ಅವಳು ಈ ಕಾರ್ಯ ಮಾಡುತ್ತಿರುವಾಗಲೇ ಸಿಕ್ಕಿಕೊಂಡಿಲ್ಲದಿರುವುದರಿಂದ ತಾನು ತನ್ನನ್ನು ಅಶುದ್ಧಳನ್ನಾಗಿ ಮಾಡಿಕೊಂಡ ಸತ್ಯಾಂಶವನ್ನು ಆಕೆ ಗುಪ್ತವಾಗಿಡಬಹುದು. 14 ಆದರೆ ಗಂಡನು ಈರ್ಷೆ ಉಳ್ಳವನಾಗಿ ತನ್ನ ಹೆಂಡತಿ ತನ್ನನ್ನು ಅಶುದ್ಧಳನ್ನಾಗಿ ಮಾಡಿಕೊಂಡಿದ್ದಾಳೆ ಎಂದು ಸಂಶಯಪಡುವುದಾಗಿದ್ದರೆ ಅವಳು ಮಾಡಿಕೊಂಡಿರಲಿ ಮಾಡಿಕೊಂಡಿಲ್ಲದಿರಲಿ 15 ಅವನು ಅವಳನ್ನು ಯಾಜಕನ ಬಳಿಗೆ ಕರೆದುಕೊಂಡು ಹೋಗಬೇಕು. ಅಲ್ಲದೆ ಅವನು ಮೂರು ಸೇರು ಗೋಧಿಹಿಟ್ಟನ್ನು ಕಾಣಿಕೆಯಾಗಿ ಯಾಜಕನಿಗೆ ತಂದು ಕೊಡಬೇಕು. ಅವನು ಅದರ ಮೇಲೆ ಎಣ್ಣೆ ಹಾಕಬಾರದು; ಅವನು ಅದರ ಮೇಲೆ ಧೂಪಹಾಕಬಾರದು; ಯಾಕೆಂದರೆ ಇದು ಈರ್ಷೆಯುಳ್ಳ ಗಂಡನ ಧಾನ್ಯಸಮರ್ಪಣೆಯಾಗಿದೆ. ಆಕೆಯ ದೋಷವನ್ನು ಹೊರಪಡಿಸಲು ಕೊಟ್ಟಂಥ ಧಾನ್ಯಸಮರ್ಪಣೆ ಇದಾಗಿದೆ.

16 “ಯಾಜಕನು ಅವಳನ್ನು ತಂದು ಯೆಹೋವನ ಎದುರಿನಲ್ಲಿ ನಿಲ್ಲಿಸಬೇಕು. 17 ಬಳಿಕ ಅವನು ಮಣ್ಣಿನ ಪಾತ್ರೆಯಲ್ಲಿ ಸ್ವಲ್ಪ ಪವಿತ್ರ ಜಲವನ್ನು ತೆಗೆದುಕೊಂಡು ಪವಿತ್ರ ಗುಡಾರದ ನೆಲದಿಂದ ಸ್ವಲ್ಪ ಧೂಳನ್ನು ಆ ನೀರಿನಲ್ಲಿ ಹಾಕಬೇಕು. 18 ಯಾಜಕನು ಅವಳನ್ನು ಯೆಹೋವನ ಮುಂದೆ ನಿಲ್ಲಿಸಿ ಅವಳ ತಲೆಯ ಕೂದಲನ್ನು ಕೆದರಿಸಿ ಆಕೆಯ ದೋಷವನ್ನು ಹೊರಪಡಿಸುವ ಧಾನ್ಯಸಮರ್ಪಣೆಯನ್ನು ಅವಳ ಕೈಯಲ್ಲಿ ಇಡಬೇಕು. ಅದು ಈರ್ಷೆಯುಳ್ಳ ಗಂಡನ ಧಾನ್ಯಸಮರ್ಪಣೆ. ಅದೇ ಸಮಯದಲ್ಲಿ ಶಾಪವನ್ನು ಉಂಟುಮಾಡುವ ನೀರಿನ ವಿಶೇಷ ಪಾತ್ರೆಯನ್ನು ಯಾಜಕನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕು.

19 “ಬಳಿಕ ಯಾಜಕನು ಸ್ತ್ರೀಗೆ ಸುಳ್ಳಾಡದೆ ಸತ್ಯವನ್ನೇ ಹೇಳಬೇಕೆಂದು ಪ್ರಮಾಣ ಮಾಡಿಸುವನು. ಯಾಜಕನು ಅವಳಿಗೆ ಹೀಗೆನ್ನಬೇಕು: ‘ನೀನು ಪರಪುರುಷನ ಸಂಗ ಮಾಡದೆ ಗಂಡನ ಅಧೀನದಲ್ಲಿದ್ದು ಪಾತಿವ್ರತ್ಯವನ್ನು ಬಿಡದೆ ದುಷ್ಕೃತ್ಯವನ್ನು ಮಾಡದೆ ಇರುವವಳಾದರೆ, ಶಾಪವನ್ನು ಉಂಟುಮಾಡುವ ಕಹಿನೀರಿನಿಂದ ನಿನಗೆ ಹಾನಿಯಾಗಬಾರದು. 20 ಆದರೆ ನೀನು ನಿನ್ನ ಗಂಡನಲ್ಲದ ಪರಪುರುಷನೊಡನೆ ಸಂಗಮಾಡಿ ನಿನ್ನ ಗಂಡನಿಗೆ ವಿರುದ್ಧವಾಗಿ ಪಾಪಮಾಡಿದ್ದರೆ, ನೀನು ಶುದ್ಧಳಲ್ಲ. 21 ಆದ್ದರಿಂದ ನೀನು ಈ ವಿಶೇಷ ಜಲವನ್ನು ಕುಡಿಯುವಾಗ, ನಿನಗೆ ಹಾನಿಯುಂಟಾಗುವುದು. ನಿನಗೆ ಮಕ್ಕಳಾಗುವುದಿಲ್ಲ. ನೀನು ಬಸುರಾಗಿದ್ದರೆ, ನಿನ್ನ ಮಗು ಸಾಯುವುದು. ಆಗ ನಿನ್ನ ಜನರು ನಿನ್ನನ್ನು ದೂರಮಾಡಿ ನಿನ್ನ ವಿರುದ್ಧವಾಗಿ ಕೆಟ್ಟ ಸಂಗತಿಗಳನ್ನು ಹೇಳುವರು.’

“ಬಳಿಕ ಯಾಜಕನು ಆ ಸ್ತ್ರೀಗೆ ಪ್ರಮಾಣ ಮಾಡಲು ಹೇಳಬೇಕು. ಅವಳು, ‘ನಾನು ಸುಳ್ಳಾಡಿದ್ದರೆ, ಈ ಕೆಟ್ಟ ಸಂಗತಿಗಳು ನನಗೆ ಸಂಭವಿಸಲಿ’ ಎಂದು ಹೇಳಬೇಕು. 22 ಯಾಜಕನು, ‘ಹಾನಿಯನ್ನು ಉಂಟುಮಾಡುವ ಈ ನೀರನ್ನು ನೀನು ಕುಡಿಯಬೇಕು. ನೀನು ಪಾಪ ಮಾಡಿದ್ದರೆ ನಿನಗೆ ಮಕ್ಕಳಾಗುವುದಿಲ್ಲ ಮತ್ತು ನೀನು ಪಡೆಯುವ ಮಗು ಹುಟ್ಟುವ ಮೊದಲೇ ಸಾಯುವುದು’ ಎಂದು ಹೇಳಬೇಕು. ಅದಕ್ಕೆ ಸ್ತ್ರೀಯು, ‘ಹಾಗೆಯೇ ಆಗಲಿ’ ಎಂದು ಹೇಳಬೇಕು.

23 “ಯಾಜಕನು ಈ ಶಾಪಗಳನ್ನು ಒಂದು ಸುರುಳಿಯಲ್ಲಿ ಬರೆಯಬೇಕು. ಬಳಿಕ ಆ ಕಹಿ ನೀರಿನಿಂದ ಆ ಸುರುಳಿಯ ವಾಕ್ಯವನ್ನು ತೊಳೆಯಬೇಕು. 24 ಆಮೇಲೆ ಶಾಪವನ್ನು ಬರಮಾಡುವ ಆ ನೀರನ್ನು ಆ ಸ್ತ್ರೀಗೆ ಕುಡಿಸಬೇಕು. ಈ ನೀರು ಅವಳೊಳಗೆ ಸೇರುವುದು. ಅವಳು ದೋಷಿಯಾಗಿದ್ದರೆ ಅವಳಿಗೆ ಮಹಾಸಂಕಟವನ್ನು ಉಂಟುಮಾಡುವುದು.

25 “ಯಾಜಕನು ಈರ್ಷೆಯುಳ್ಳ ಗಂಡನ ಧಾನ್ಯಸಮರ್ಪಣೆಯನ್ನು ಆಕೆಯ ಕೈಗಳಿಂದ ತೆಗೆದುಕೊಂಡು ಅದನ್ನು ಯೆಹೋವನ ಮುಂದೆ ಪ್ರತಿಷ್ಠಿಸಿ, ಬಳಿಕ ಅದನ್ನು ವೇದಿಕೆಯ ಮೇಲೆ ಅರ್ಪಿಸಬೇಕು. 26 ಯಾಜಕನು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಆ ಹಿಟ್ಟಿನಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಯಜ್ಞವೇದಿಕೆಯ ಮೇಲೆ ಹೋಮಮಾಡಬೇಕು. ತರುವಾಯ ಅವನು ಆ ನೀರನ್ನು ಕುಡಿಯಲು ಸ್ತ್ರೀಗೆ ಕೊಡಬೇಕು. 27 ಅವಳು ಅಶುದ್ಧಳಾಗಿದ್ದರೆ ಮತ್ತು ತನ್ನ ಗಂಡನಿಗೆ ವಿರುದ್ಧವಾಗಿ ಪಾಪಮಾಡಿದ್ದರೆ, ನೀರು ಅವಳಿಗೆ ಹಾನಿಯನ್ನು ಉಂಟುಮಾಡುವುದು, ನೀರು ಅವಳೊಳಗೆ ಹೋಗಿ ಅವಳಿಗೆ ಮಹಾಸಂಕಟವನ್ನು ಉಂಟುಮಾಡುವುದು. ನೀರು ಅವಳನ್ನು ಆ ಕೂಡಲೇ ಬಂಜೆಯನ್ನಾಗಿ ಮಾಡುವುದು. ಅವಳು ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗಿರುವಳು. 28 ಆದರೆ ಅವಳು ತನ್ನ ಗಂಡನಿಗೆ ವಿರುದ್ಧವಾಗಿ ಪಾಪ ಮಾಡದೆ ಶುದ್ಧಳಾಗಿದ್ದರೆ, ಯಾಜಕನು ಅವಳನ್ನು ದೋಷಿಯಲ್ಲವೆಂದು ಹೇಳುವನು. ಆಗ ಅವಳಿಗೆ ಯಾವ ಹಾನಿಯಾಗದೆ, ಇನ್ನೂ ಮಕ್ಕಳನ್ನು ಹೆರಲು ಶಕ್ತಳಾಗಿರುವಳು.

29 “ಇದೇ ವ್ಯಭಿಚಾರ ಸಂಶಯವನ್ನು ಪರಿಹರಿಸುವ ವಿಧಿ. ಗಂಡನ ಸ್ವಾಧೀನದಲ್ಲಿರುವ ಹೆಂಡತಿಯು 30 ಪಾತಿವ್ರತ್ಯವನ್ನು ಬಿಟ್ಟು ಜಾರತ್ವ ಮಾಡಿರುವಾಗಲೂ ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯಪಡುವಾಗಲೂ ಅವನು ಮಾಡಬೇಕಾದದ್ದು ಇದೇ. ಯಾಜಕನು ಸ್ತ್ರೀಗೆ ಯೆಹೋವನ ಮುಂದೆ ನಿಲ್ಲಲು ಹೇಳಬೇಕು. ಆಗ ಯಾಜಕನು ಈ ಎಲ್ಲಾ ಸಂಗತಿಗಳನ್ನು ಮಾಡುವನು. ಇದು ನಿಯಮವಾಗಿದೆ. 31 ಗಂಡನು ನಿರಪರಾಧಿಯಾಗಿರುವನು. ಆದರೆ ಸ್ತ್ರೀಯು ಪಾಪಮಾಡಿದ್ದರೆ, ಆಕೆ ಅದರ ಫಲವನ್ನು ಅನುಭವಿಸಬೇಕು.”

ನಾಜೀರವ್ರತ

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಈ ಸಂಗತಿಗಳನ್ನು ಇಸ್ರೇಲರಿಗೆ ಹೇಳು: ಯಾವ ಪುರುಷನಾಗಲಿ ಸ್ತ್ರೀಯಾಗಲಿ ನಾಜೀರವ್ರತವನ್ನು ಮಾಡುವುದರ ಮೂಲಕ ತನ್ನನ್ನು ಪ್ರತಿಷ್ಠಿಸಿಕೊಂಡರೆ, ಯೆಹೋವನಿಗೋಸ್ಕರ ಹರಕೆ ಮಾಡಿಕೊಂಡರೆ, ಆ ಸಮಯದಲ್ಲಿ ಅವನು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಮುಟ್ಟಬಾರದು; ದ್ರಾಕ್ಷಾರಸದ ಹುಳಿಯನ್ನಾಗಲಿ ಬೇರೆ ಮದ್ಯದ ಹುಳಿಯನ್ನಾಗಲಿ ಕುಡಿಯಬಾರದು; ದ್ರಾಕ್ಷಿಯ ಹಣ್ಣಿನಿಂದ ಮಾಡಿದ ಯಾವ ಪಾನವನ್ನೂ ಕುಡಿಯಬಾರದು; ಹಸಿ ಅಥವಾ ಒಣ ದ್ರಾಕ್ಷಿಯನ್ನು ಸಹ ತಿನ್ನಬಾರದು; ಅವನು ಹರಕೆ ಮಾಡಿಕೊಂಡಿರುವ ದಿನಗಳಲ್ಲಿ ದ್ರಾಕ್ಷಾಲತೆಯಿಂದ ಉತ್ಪನ್ನವಾಗುವ ಯಾವದನ್ನೂ ತಿನ್ನಬಾರದು. ಅವನು ದ್ರಾಕ್ಷಿಯ ಬೀಜವನ್ನಾಗಲಿ ಸಿಪ್ಪೆಯನ್ನಾಗಲಿ ತಿನ್ನಬಾರದು.

“ಅವನ ವ್ರತದ ಕಾಲದಲ್ಲಿ ಕ್ಷೌರದ ಕತ್ತಿಯು ಅವನ ತಲೆಯನ್ನು ಸೋಂಕಬಾರದು. ಯೆಹೋವನಿಗೋಸ್ಕರ ಪ್ರತಿಷ್ಠಿತವಾದ ತನ್ನ ಕಾಲವನ್ನು ಪೂರ್ಣಗೊಳಿಸುವ ತನಕ ಅವನು ಪರಿಶುದ್ಧನಾಗಿರಬೇಕು. ತನ್ನ ವ್ರತದ ದಿನಗಳು ಮುಗಿಯುವ ತನಕ ಅವನು ಕೂದಲನ್ನು ಬೆಳೆಸಿಕೊಳ್ಳಬೇಕು.[a]

“ಅವನು ಯೆಹೋವನಿಗೋಸ್ಕರ ಹರಕೆ ಮಾಡಿಕೊಂಡ ಕಾಲವೆಲ್ಲಾ, ಯಾವ ಶವದ ಬಳಿಗೆ ಹೋಗಕೂಡದು. ಅವನ ತಂದೆ, ತಾಯಿ, ಸಹೋದರ, ಸಹೋದರಿ ಸತ್ತರೂ ಅವನು ಅವರ ಹೆಣವನ್ನು ಮುಟ್ಟಬಾರದು. ಮುಟ್ಟಿದರೆ ಅವನು ಅಶುದ್ಧನಾಗುವನು. ದೇವರಿಗೋಸ್ಕರ ಮೀಸಲಾಗಿರುವ ಅವನ ಕೂದಲು ಅವನ ತಲೆಯನ್ನು ಮುಚ್ಚಿಕೊಂಡಿರುತ್ತದೆ; ಆದ್ದರಿಂದ ಅವನು ಪರಿಶುದ್ಧನಾಗಿರಬೇಕು. ಅವನು ತನ್ನನ್ನು ಪ್ರತಿಷ್ಠಿಸಿಕೊಂಡ ದಿನಗಳಲ್ಲೆಲ್ಲಾ ಅವನು ಯೆಹೋವನಿಗೆ ಪವಿತ್ರನಾಗಿರಬೇಕು. ಯಾವನಾದರೂ ಇದ್ದಕ್ಕಿದ್ದಂತೆ ಅವನ ಬಳಿಯಲ್ಲೇ ಸತ್ತದ್ದರಿಂದ ತಾನು ಪ್ರತಿಷ್ಠಿಸಿಕೊಂಡ ತಲೆಕೂದಲು ಅಪವಿತ್ರವಾದರೆ ಏಳನೆಯ ದಿನದಲ್ಲಿ ತಲೆಯನ್ನು ಕ್ಷೌರ ಮಾಡಿಸಿಕೊಳ್ಳಬೇಕು. 10 ಬಳಿಕ ಎಂಟನೆಯ ದಿನದಲ್ಲಿ ಅವನು ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿಯಿರುವ ಯಾಜಕನಿಗೆ ತಂದುಕೊಡಬೇಕು. 11 ಆಗ ಯಾಜಕನು ಒಂದನ್ನು ದೋಷಪರಿಹಾರಕ ಯಜ್ಞವಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಅರ್ಪಿಸುವನು. ಅವನಿಗೆ ಹೆಣವು ಸೋಂಕಿ ಅವನು ಅಶುದ್ಧನಾದದ್ದರಿಂದ ಈ ಸರ್ವಾಂಗಹೋಮವು ಅವನಿಗೆ ಪ್ರಾಯಶ್ಚಿತ್ತ ಯಜ್ಞವಾಗಿದೆ. ಆ ಸಮಯದಲ್ಲಿ, ಅವನು ತನ್ನ ತಲೆಯ ಕೂದಲನ್ನು ಯೆಹೋವನಿಗೆ ಕಾಣಿಕೆಯಾಗಿ ಮತ್ತೆ ಹರಕೆ ಮಾಡುವನು. 12 ಅವನು ಮತ್ತೊಮ್ಮೆ ನಿರ್ದಿಷ್ಟ ಕಾಲದವರೆಗೆ ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಳ್ಳಬೇಕೆಂಬುದೇ ಇದರರ್ಥ. ಅವನು ಒಂದು ವರ್ಷದ ಕುರಿಮರಿಯನ್ನು ತಂದು ಅದನ್ನು ದೋಷಪರಿಹಾರಕ ಯಜ್ಞಕ್ಕಾಗಿ ಕೊಡಬೇಕು. ಶವವು ಅವನನ್ನು ಅಶುದ್ಧನನ್ನಾಗಿ ಮಾಡಿದ್ದರಿಂದ ಮೊದಲಿನ ದಿನಗಳು ಲೆಕ್ಕಿಸಲ್ಪಡುವುದಿಲ್ಲ. ಅವನು ಮತ್ತೊಮ್ಮೆ ಪ್ರತಿಷ್ಠೆಯನ್ನು ಹೊಸದಾಗಿ ಆರಂಭಿಸಬೇಕು.

13 “ನಾಜೀರನು ತನ್ನ ವ್ರತದ ದಿನಗಳು ಮುಗಿದ ನಂತರ, ಮಾಡಬೇಕಾದ ಕ್ರಮ: ಅವನು ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿಗೆ ಬಂದು 14 ಯೆಹೋವನಿಗೆ ತನ್ನ ಸಮರ್ಪಣೆಯನ್ನು ಮಾಡಬೇಕು. ಅವನು ಸಮರ್ಪಿಸಬೇಕಾದದು ಯಾವುವೆಂದರೆ,

ಸರ್ವಾಂಗಹೋಮಕ್ಕೆ ದೋಷವಿಲ್ಲದ ಒಂದು ವರ್ಷದ ಗಂಡು ಕುರಿಮರಿ,

ದೋಷಪರಿಹಾರ ಯಜ್ಞಕ್ಕಾಗಿ ಯಾವ ದೋಷವಿಲ್ಲದ ಒಂದು ವರ್ಷದ ಹೆಣ್ಣು ಕುರಿಮರಿ,

ಸಮಾಧಾನಯಜ್ಞಕ್ಕಾಗಿ ಯಾವ ದೋಷವಿಲ್ಲದ ಒಂದು ಟಗರು ಇವೇ.

15 ಶುದ್ಧವಾದ ಹಿಟ್ಟಿನಿಂದ ಮತ್ತು ಎಣ್ಣೆಯಿಂದ ಮಾಡಿದ ಹುಳಿಯಿಲ್ಲದ ರೊಟ್ಟಿಗಳನ್ನೂ ಎಣ್ಣೆಹಾಕಿ ಮಾಡಿದ ಹುಳಿಯಿಲ್ಲದ ತೆಳುವಾದ ರೊಟ್ಟಿಗಳನ್ನೂ ಒಂದು ಪುಟ್ಟಿತುಂಬಾ ಸಮರ್ಪಿಸಬೇಕು;

ಅಲ್ಲದೆ ಮೇಲೆ ವಿವರಿಸಿದ ಯಜ್ಞಗಳೊಡನೆ ಕೊಡಬೇಕಾದ ಧಾನ್ಯದ್ರವ್ಯಗಳನ್ನೂ ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.

16 “ಬಳಿಕ ಯಾಜಕನು ಇವುಗಳನ್ನು ಯೆಹೋವನ ಬಳಿಗೆ ತಂದು ದೋಷಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಮಾಡುವನು. 17 ಯಾಜಕನು ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯನ್ನು ಯೆಹೋವನಿಗೆ ಸಮರ್ಪಿಸುವನು. ಬಳಿಕ ಅವನು ಟಗರನ್ನು ವಧಿಸಿ ಸಮಾಧಾನಯಜ್ಞವಾಗಿ ಅರ್ಪಿಸುವನು. ಅವನು ಅದನ್ನು ಧಾನ್ಯಸಮರ್ಪಣೆ ಮತ್ತು ಪಾನದ್ರವ್ಯ ಸಮರ್ಪಣೆಯೊಂದಿಗೆ ಅರ್ಪಿಸುವನು.

18 “ನಾಜೀರವ್ರತವನ್ನು ಆಚರಿಸುತ್ತಿರುವವನು ಯೆಹೋವನಿಗಾಗಿ ಪ್ರತಿಷ್ಠಿಸಿದ್ದ ತಲೆಯ ಕೂದಲನ್ನು ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿ ಕ್ಷೌರಮಾಡಿಸಿಕೊಳ್ಳಬೇಕು. ಆ ಕೂದಲನ್ನು ಸಮಾಧಾನಯಜ್ಞದ್ರವ್ಯಗಳ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು.

19 “ನಾಜೀರನು ತನ್ನ ತಲೆಕೂದಲನ್ನು ಕ್ಷೌರಮಾಡಿಸಿಕೊಂಡ ನಂತರ, ಯಾಜಕನು ಅವನಿಗೆ ಆ ಟಗರಿನ ಬೆಂದ ಮುಂದೊಡೆಯನ್ನೂ ಪುಟ್ಟಿಯಲ್ಲಿನ ಒಂದು ಹುಳಿಯಿಲ್ಲದ ಸಿಹಿರೊಟ್ಟಿಯನ್ನೂ ಒಂದು ಹುಳಿಯಿಲ್ಲದ ತೆಳುವಾದ ರೊಟ್ಟಿಯನ್ನೂ ಅವನ ಕೈಯಲ್ಲಿ ಇಡಬೇಕು. 20 ನೈವೇದ್ಯವಾಗಿ ಅದನ್ನು ಯೆಹೋವನ ಸನ್ನಿಧಿಯಲ್ಲಿ ವಿಶೇಷ ಕಾಣಿಕೆಯಾಗಿ ನಿವಾಳಿಸಬೇಕು. ಇವುಗಳು ಪವಿತ್ರವಾಗಿದ್ದು ಯಾಜಕರ ಪಾಲಾಗುತ್ತವೆ. ಅಲ್ಲದೆ ಮೀಸಲಾಗಿಟ್ಟಿರುವ ನಿವಾಳಿಸಲ್ಪಟ್ಟ ಕಾಣಿಕೆಯ ಎದೆಯ ಭಾಗ ಮತ್ತು ತೊಡೆಯ ಭಾಗ ಸಹ ಯಾಜಕನ ಭಾಗವಾಗಿರುತ್ತದೆ. ಇದರ ನಂತರ ನಾಜೀರನು ದ್ರಾಕ್ಷಾರಸವನ್ನು ಕುಡಿಯಬಹುದು.

21 “ಇದೇ ನಾಜೀರರ ವ್ರತವಿಧಿ. ಅವರು ತಮ್ಮ ವ್ರತ ಪೂರ್ತಿಗಾಗಿ ಯೆಹೋವನಿಗೆ ಸಮರ್ಪಿಸಬೇಕಾದ ಕಾಣಿಕೆ ಇದೇ. ಅವರು ತಮ್ಮ ಶಕ್ತಿಮೀರಿ ಕೊಡಬಹುದು. ಆದರೆ ತಾವು ಕೊಡುತ್ತೇವೆಂದು ಹರಕೆ ಮಾಡಿದಷ್ಟನ್ನು ವ್ರತವಿಧಿಗನುಸಾರವಾಗಿ ಕೊಡಲೇಬೇಕು.”

ಯಾಜಕರು ಹೇಳಬೇಕಾದ ಆಶೀರ್ವಚನ

22 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 23 “ನೀನು ಆರೋನನಿಗೂ ಅವನ ಪುತ್ರರಿಗೂ ಹೀಗೆ ಆಜ್ಞಾಪಿಸು: ನೀವು ಇಸ್ರೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು:

24 ‘ಯೆಹೋವನು ನಿಮ್ಮನ್ನು ಆಶೀರ್ವದಿಸಿ ಕಾಪಾಡಲಿ.
25 ಯೆಹೋವನು ನಿಮ್ಮನ್ನು ಕನಿಕರದಿಂದ ನೋಡಿ
    ನಿಮ್ಮ ಮೇಲೆ ದಯವಿಡಲಿ.
26 ಯೆಹೋವನು ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು
    ಶಾಂತಿಯನ್ನು ಅನುಗ್ರಹಿಸಲಿ.’”

27 ಬಳಿಕ ಯೆಹೋವನು, “ಹೀಗೆ ಆರೋನನೂ ಅವನ ಪುತ್ರರೂ ಇಸ್ರೇಲರನ್ನು ನನ್ನ ಹೆಸರಿನಿಂದ ಆಶೀರ್ವದಿಸುವುದರಿಂದ ನಾನು ಅವರನ್ನು ಆಶೀರ್ವದಿಸುವೆನು” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International