Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 3-4

ಯಾಜಕರಾದ ಆರೋನನ ಕುಟುಂಬ

ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯೊಡನೆ ಮಾತಾಡಿದ ಸಮಯದಲ್ಲಿದ್ದ ಆರೋನ ಮತ್ತು ಮೋಶೆಯ ವಂಶದವರು ಇವರೇ. ಆರೋನನಿಗೆ ನಾಲ್ಕು ಮಂದಿ ಗಂಡುಮಕ್ಕಳಿದ್ದರು. ನಾದಾಬನು ಚೊಚ್ಚಲ ಮಗ. ಅನಂತರ ಹುಟ್ಟಿದವರು ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್. ಈ ಗಂಡುಮಕ್ಕಳು ಯಾಜಕರಾಗಿ ಸೇವೆಮಾಡಲು ಅಭಿಷೇಕಿಸಲ್ಪಟ್ಟವರಾಗಿದ್ದರು ಮತ್ತು ಪ್ರತಿಷ್ಠೀತರಾದವರಾಗಿದ್ದರು.

ಆದರೆ ನಾದಾಬ ಮತ್ತು ಅಬೀಹೂ ಎಂಬಿಬ್ಬರು ಸೀನಾಯಿ ಮರುಭೂಮಿಯಲ್ಲಿ ಯೆಹೋವನಿಗೆ ಧೂಪವನ್ನು ಸಮರ್ಪಿಸುವಾಗ ಯೆಹೋವನು ಅಪ್ಪಣೆ ಕೊಡದೆ ಇದ್ದ ಬೆಂಕಿಯನ್ನು ಉಪಯೋಗಿಸಿದರು. ಆದ್ದರಿಂದ ನಾದಾಬ ಮತ್ತು ಅಬೀಹೂ ಅಲ್ಲಿ ಸತ್ತರು. ಅವರಿಗೆ ಗಂಡುಮಕ್ಕಳಿಲ್ಲದ್ದರಿಂದ ಎಲ್ಲಾಜಾರನು ಮತ್ತು ಈತಾಮಾರನು ಅವರ ತಂದೆಯಾದ ಆರೋನನ ಕೈಕೆಳಗೆ ಯೆಹೋವನ ಸೇವೆ ಮಾಡಿದರು.

ಯಾಜಕರ ಸಹಾಯಕರಾದ ಲೇವಿಯರು

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಲೇವಿ ಕುಲದವರನ್ನು ಯಾಜಕನಾದ ಆರೋನನ ಬಳಿಗೆ ಕರೆದುಕೊಂಡು ಬಾ. ಅವರು ಆರೋನನಿಗೆ ಸಹಾಯಕರಾಗಿರುವರು. ಲೇವಿಯರು ಅವನಿಗಾಗಿ ಮತ್ತು ಇಡೀ ಸಮೂಹಕ್ಕಾಗಿ ದೇವದರ್ಶನಗುಡಾರದ ಮುಂದೆ ಕಾವಲುಗಾರರಾಗಿರುವರು ಮತ್ತು ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸಗಳನ್ನು ಮಾಡುವರು. ದೇವದರ್ಶನಗುಡಾರವು ಚಲಿಸುತ್ತಿರುವಾಗ ಲೇವಿಯರು ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸಗಳನ್ನು ಮಾಡುವುದಲ್ಲದೆ, ದೇವದರ್ಶನ ಗುಡಾರದ ಎಲ್ಲಾ ಉಪಕರಣಗಳನ್ನು ಇಸ್ರೇಲರಿಗೋಸ್ಕರ ಕಾಯಬೇಕು.

“ಲೇವಿಯರನ್ನು ಆರೋನನಿಗೂ ಅವನ ಪುತ್ರರಿಗೂ ಒಪ್ಪಿಸಿಕೊಡು. ಅವರು ಇಸ್ರೇಲರ ಮಧ್ಯದಿಂದ ಆರೋನನಿಗೋಸ್ಕರವಾಗಿ ಪ್ರತಿಷ್ಠಿತರಾಗಿದ್ದಾರೆ.

10 “ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸು. ಅವರು ತಮ್ಮತಮ್ಮ ಯಾಜಕ ಉದ್ಯೋಗವನ್ನು ಕಾಪಾಡಿಕೊಳ್ಳಬೇಕು. ಯಾಜಕರ ಕರ್ತವ್ಯಗಳನ್ನು ಮಾಡಲು ಪವಿತ್ರ ವಸ್ತುಗಳ ಬಳಿಗೆ ಬರಲು ಬೇರೆ ಯಾವನಾದರೂ ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡಬೇಕು.”

11 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 12 “ಇಸ್ರೇಲಿನ ಪ್ರತಿ ಕುಟುಂಬವು ತನ್ನ ಚೊಚ್ಚಲ ಮಗನನ್ನು ನನಗೆ ಕೊಡಬೇಕೆಂದು ನಿನಗೆ ಹೇಳಿದ್ದೆ. ಆದರೆ ನನ್ನ ಸೇವೆಮಾಡುವುದಕ್ಕೆ ಈಗ ನಾನು ಲೇವಿಯರನ್ನು ಆರಿಸಿಕೊಂಡಿದ್ದೇನೆ. ಅವರು ನನ್ನವರಾಗಿರುವರು. ಆದ್ದರಿಂದ ಬೇರೆ ಎಲ್ಲಾ ಇಸ್ರೇಲರು ತಮ್ಮ ಚೊಚ್ಚಲು ಗಂಡುಮಕ್ಕಳನ್ನು ನನಗೆ ಕೊಡಬೇಕಾಗಿಲ್ಲ. 13 ನೀವು ಈಜಿಪ್ಟಿನಲ್ಲಿದ್ದಾಗ ನಾನು ಈಜಿಪ್ಟಿನವರ ಎಲ್ಲಾ ಚೊಚ್ಚಲು ಮಕ್ಕಳನ್ನು ಕೊಂದೆನು. ಆ ಕಾಲದಲ್ಲಿ ನಾನು ಇಸ್ರೇಲರ ಎಲ್ಲಾ ಚೊಚ್ಚಲು ಮಕ್ಕಳನ್ನು ನನ್ನವರನ್ನಾಗಿ ತೆಗೆದುಕೊಂಡೆನು. ಎಲ್ಲಾ ಚೊಚ್ಚಲು ಗಂಡುಮಕ್ಕಳು ಮತ್ತು ಚೊಚ್ಚಲು ಪಶುಗಳು ನನ್ನದಾಗಿದ್ದವು. ಆದರೆ ಈಗ ನಿಮ್ಮ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ನಿಮಗೇ ಹಿಂದಕ್ಕೆ ಕೊಡುತ್ತಿದ್ದೇನೆ ಮತ್ತು ಲೇವಿಯರನ್ನು ನನ್ನವರನ್ನಾಗಿ ಮಾಡುತ್ತಿದ್ದೇನೆ. ನಾನೇ ಯೆಹೋವನು!”

14 ಯೆಹೋವನು ತಿರುಗಿ ಸೀನಾಯಿ ಮರುಭೂಮಿಯಲ್ಲಿ ಮೋಶೆಯೊಡನೆ ಮಾತಾಡಿದನು. ಯೆಹೋವನು ಹೇಳಿದ್ದೇನೆಂದರೆ: 15 “ಲೇವಿಯರನ್ನು ಅವರ ಕುಟುಂಬಗಳಿಗನುಗುಣವಾಗಿಯೂ ಗೋತ್ರಗಳಿಗನುಸಾರವಾಗಿಯೂ ಲೆಕ್ಕಿಸು. ಪ್ರತಿಯೊಬ್ಬ ಗಂಡಸನ್ನೂ ಒಂದು ತಿಂಗಳು ಮೇಲ್ಪಟ್ಟ ಪ್ರತಿಯೊಬ್ಬ ಗಂಡುಮಗುವನ್ನೂ ಲೆಕ್ಕಿಸು.” 16 ಮೋಶೆ ಯೆಹೋವನಿಗೆ ವಿಧೇಯನಾಗಿ ಅವರೆಲ್ಲರನ್ನೂ ಲೆಕ್ಕಿಸಿದನು.

17 ಲೇವಿಗೆ ಮೂರು ಗಂಡುಮಕ್ಕಳಿದ್ದರು. ಅವರ ಹೆಸರುಗಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.

18 ಪ್ರತಿಯೊಬ್ಬ ಮಗನು ಅನೇಕ ಗೋತ್ರಗಳ ನಾಯಕನಾಗಿದ್ದನು.

ಗೇರ್ಷೋನನ ಗೋತ್ರಗಳು: ಲಿಬ್ನೀ ಮತ್ತು ಶಿಮ್ಮೀ.

19 ಕೆಹಾತನ ಗೋತ್ರಗಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.

20 ಮೆರಾರೀಯ ಗೋತ್ರಗಳು: ಮಹ್ಲೀ ಮತ್ತು ಮೂಷೀ.

ಅವು ಲೇವಿ ಕುಲದ ಗೋತ್ರಗಳಾಗಿವೆ.

21 ಲಿಬ್ನೀ ಮತ್ತು ಶಿಮ್ಮೀಯ ಕುಟುಂಬಗಳು ಗೇರ್ಷೋನನ ಕುಟುಂಬಕ್ಕೆ ಸೇರಿದವುಗಳಾಗಿದ್ದವು. 22 ಈ ಎರಡು ಕುಲಗಳಲ್ಲಿ ಒಂದು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ 7,500 ಮಂದಿ ಗಂಡಸರು ಮತ್ತು ಗಂಡುಮಕ್ಕಳು ಇದ್ದರು. 23 ಗೇರ್ಷೋನನ ಕುಲದವರು ಪಶ್ಚಿಮ ದಿಕ್ಕಿನಲ್ಲಿ ದೇವದರ್ಶನಗುಡಾರದ ಹಿಂಭಾಗದಲ್ಲಿ ಪಾಳೆಯ ಮಾಡಿಕೊಂಡರು. 24 ಗೇರ್ಷೋನನ ಗೋತ್ರಗಳ ನಾಯಕನು ಲಾಯೇಲನ ಮಗನಾದ ಎಲ್ಯಾಸಾಫ್. 25 ದೇವದರ್ಶನಗುಡಾರದಲ್ಲಿ ಪವಿತ್ರ ಗುಡಾರವನ್ನು, ಹೊರಡೇರೆಯನ್ನು ಮತ್ತು ಅದರ ಮೇಲ್ಹೊದಿಕೆಯನ್ನು ನೋಡಿಕೊಳ್ಳವುದು ಗೇರ್ಷೋನ ವಂಶದವರ ಕೆಲಸವಾಗಿತ್ತು. ಇದಲ್ಲದೆ ಅವರು ಅಂಗಳದ ಪರದೆಯನ್ನೂ ನೋಡಿಕೊಳ್ಳುತ್ತಿದ್ದರು. 26 ಅವರು ಅಂಗಳದ ಪರದೆಗಳನ್ನೂ ಅಂಗಳದ ಪ್ರವೇಶದ್ವಾರದ ಪರದೆಯನ್ನೂ ನೋಡಿಕೊಳ್ಳಬೇಕು. ಈ ಅಂಗಳವು ಪವಿತ್ರ ಗುಡಾರದ ಮತ್ತು ವೇದಿಕೆಯ ಸುತ್ತಲೂ ಇತ್ತು. ಅವರು ಹಗ್ಗಗಳನ್ನೂ ಪರದೆಗಳೊಂದಿಗೆ ಉಪಯೋಗಿಸುವ ಪ್ರತಿಯೊಂದನ್ನೂ ನೋಡಿಕೊಂಡರು.

27 ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಗೋತ್ರಗಳವರು ಕೆಹಾತನ ಕುಲದವರಾಗಿದ್ದರು. 28 ಈ ಕುಲದಲ್ಲಿ ಒಂದು ತಿಂಗಳು ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳ 8,300[a] ಗಂಡಸರು ಮತ್ತು ಗಂಡುಮಕ್ಕಳು ಇದ್ದರು. ಕೆಹಾತ್ಯರಿಗೆ ಪವಿತ್ರಸ್ಥಳದ ವಸ್ತುಗಳನ್ನು ನೋಡಿಕೊಳ್ಳುವ ಕೆಲಸ ಕೊಡಲ್ಪಟ್ಟಿತು. 29 ಕೆಹಾತ್ಯರ ಗೋತ್ರಗಳವರು ಪವಿತ್ರ ಗುಡಾರದ ದಕ್ಷಿಣ ದಿಕ್ಕಿನ ಉದ್ದಕ್ಕೂ ಪಾಳೆಯ ಹಾಕಿಕೊಂಡರು. 30 ಕೆಹಾತ್ಯರ ನಾಯಕ ಉಜ್ಜೀಯೇಲನ ಮಗನಾದ ಎಲೀಚಾಫಾನ್. 31 ಅವರು ಪವಿತ್ರಪೆಟ್ಟಿಗೆ, ಮೇಜು, ದೀಪಸ್ತಂಭ, ವೇದಿಕೆಗಳನ್ನು ಮತ್ತು ಪವಿತ್ರಸ್ಥಳದ ಸಾಮಗ್ರಿಗಳನ್ನು, ಪರದೆಯನ್ನು ಮತ್ತು ಅವುಗಳಿಗೆ ಸಂಬಂಧಪಟ್ಟ ಎಲ್ಲಾ ಕಷ್ಟಕರವಾದ ಕೆಲಸಗಳನ್ನು ನೋಡಿಕೊಳ್ಳಬೇಕಾಗಿತ್ತು.

32 ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ಲೇವಿಯರಿಗೆ ನಾಯಕನಾಗಿದ್ದನು. ಪವಿತ್ರವಸ್ತುಗಳನ್ನು ನೋಡಿಕೊಳ್ಳುವ ಜನರಿಗೆಲ್ಲಾ ಎಲ್ಲಾಜಾರನು ಮೇಲ್ವಿಚಾರಕನಾಗಿದ್ದನು.

33-34 ಮಹ್ಲೀ ಮತ್ತು ಮೂಷೀಯ ಗೋತ್ರಗಳವರು ಮೆರಾರೀಯ ಕುಲದವರಾಗಿದ್ದರು. ಮಹ್ಲೀಯ ಗೋತ್ರದಲ್ಲಿ ಒಂದು ತಿಂಗಳು ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳ 6,200 ಮಂದಿ ಗಂಡಸರು ಮತ್ತು ಗಂಡುಮಕ್ಕಳು ಇದ್ದರು. 35 ಮೆರಾರೀ ಗೋತ್ರಗಳ ನಾಯಕನು ಅಬೀಹೈಲನ ಮಗನಾದ ಚೂರೀಯೇಲ್. ಮೆರಾರೀ ಗೋತ್ರಗಳವರು ಪವಿತ್ರ ಗುಡಾರದ ಉತ್ತರ ದಿಕ್ಕಿನಲ್ಲಿ ಪಾಳೆಯ ಮಾಡಿಕೊಂಡರು. 36 ಮೆರಾರೀ ಕುಲದವರಿಗೆ ಪವಿತ್ರ ಗುಡಾರದ ಚೌಕಟ್ಟುಗಳನ್ನು ನೋಡಿಕೊಳ್ಳುವ ಕೆಲಸ ಕೊಡಲ್ಪಟ್ಟಿತು. ಅವರು ಎಲ್ಲಾ ಅಗುಳಿಗಳನ್ನು, ಕಂಬಗಳನ್ನು, ಗದ್ದಿಗೇಕಲ್ಲುಗಳನ್ನು, ಅದರ ಎಲ್ಲ ಉಪಕರಣಗಳನ್ನು ಮತ್ತು ಅವುಗಳಿಗೆ ಸಂಬಂಧಪಟ್ಟ ಕಷ್ಟಕರವಾದ ಎಲ್ಲಾ ಕೆಲಸವನ್ನು ನೋಡಿಕೊಳ್ಳಬೇಕಾಗಿತ್ತು. 37 ಅವರು ಪವಿತ್ರ ಗುಡಾರದ ಸುತ್ತಲಿನ ಅಂಗಳದ ಎಲ್ಲಾ ಕಂಬಗಳನ್ನು ನೋಡಿಕೊಳ್ಳಬೇಕಾಗಿತ್ತು. ಇದರಲ್ಲಿ ಎಲ್ಲಾ ಗದ್ದಿಗೇಕಲ್ಲುಗಳೂ ಗುಡಾರದ ಗೂಟಗಳೂ ಹಗ್ಗಗಳೂ ಸೇರಿವೆ.

38 ಮೋಶೆ, ಆರೋನ ಮತ್ತು ಆರೋನನ ಪುತ್ರರು ದೇವದರ್ಶನಗುಡಾರದ ಮುಂದೆ ಪವಿತ್ರ ಗುಡಾರದ ಪೂರ್ವ ದಿಕ್ಕಿನಲ್ಲಿ ಪಾಳೆಯಮಾಡಿಕೊಂಡರು. ಪವಿತ್ರಸ್ಥಳವನ್ನು ನೋಡಿಕೊಳ್ಳುವ ಕೆಲಸ ಅವರಿಗೆ ಕೊಡಲ್ಪಟ್ಟಿತು. ಅವರು ಇಸ್ರೇಲರೆಲ್ಲರಿಗೋಸ್ಕರ ಇದನ್ನು ಮಾಡಿದರು. ಇವರ ಕರ್ತವ್ಯಗಳನ್ನು ಬೇರೆ ಯಾವನಾದರೂ ಮಾಡಲು ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡಬೇಕು.

39 ಆ ಲೇವಿಯರಲ್ಲಿದ್ದ ಒಂದು ತಿಂಗಳು ಮೊದಲುಗೊಂಡು ಹೆಚ್ಚು ವಯಸ್ಸುಳ್ಳ ಎಲ್ಲಾ ಗಂಡಸರನ್ನು ಮತ್ತು ಗಂಡುಮಕ್ಕಳನ್ನು ಅವರ ಗೋತ್ರಗಳಿಗನುಸಾರವಾಗಿ ಲೆಕ್ಕಿಸಬೇಕೆಂದು ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದನು. ಅವರ ಒಟ್ಟು ಸಂಖ್ಯೆ 22,000.

ಲೇವಿಯರಿಗೆ ಚೊಚ್ಚಲು ಪುತ್ರರ ಸ್ಥಾನ

40 ಯೆಹೋವನು ಮೋಶೆಗೆ, “ನೀನು ಇಸ್ರೇಲರ ಒಂದು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲಾ ಚೊಚ್ಚಲು ಗಂಡಸರನ್ನು ಲೆಕ್ಕಿಸು. ಅವರ ಹೆಸರುಗಳ ಪಟ್ಟಿಮಾಡು. 41 ನಾನು ಈಗ ಇಸ್ರೇಲಿನ ಚೊಚ್ಚಲು ಗಂಡಸರನ್ನು ತೆಗೆದುಕೊಳ್ಳುವುದಿಲ್ಲ. ಯೆಹೋವನಾದ ನಾನು ಲೇವಿಯರನ್ನು ತೆಗೆದುಕೊಳ್ಳುವೆನು. ಮಾತ್ರವಲ್ಲದೆ ಇಸ್ರೇಲಿನಲ್ಲಿ ಇತರ ಜನರ ಚೊಚ್ಚಲು ಪ್ರಾಣಿಗಳ ಬದಲು, ಲೇವಿಯರ ಎಲ್ಲಾ ಚೊಚ್ಚಲು ಪ್ರಾಣಿಗಳನ್ನು ತೆಗೆದುಕೊಳ್ಳುವೆನು” ಎಂದು ಹೇಳಿದನು.

42 ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. ಮೋಶೆಯು ಇಸ್ರೇಲರ ಚೊಚ್ಚಲು ಗಂಡಸರನ್ನೆಲ್ಲ್ಲ ಲೆಕ್ಕಿಸಿದನು. 43 ಒಂದು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲಾ ಚೊಚ್ಚಲು ಗಂಡಸರ ಹೆಸರುಗಳನ್ನು ಮೋಶೆ ಪಟ್ಟಿ ಮಾಡಿದನು. ಆ ಪಟ್ಟಿಯಲ್ಲಿ 22,273 ಹೆಸರುಗಳಿದ್ದವು.

44 ಯೆಹೋವನು ಮೋಶೆಗೆ ಮತ್ತೆ ಹೇಳಿದ್ದೇನೆಂದರೆ: 45 “ದೇವರಾದ ನಾನು ಈ ಆಜ್ಞೆಯನ್ನು ಕೊಡುತ್ತೇನೆ: ‘ಇಸ್ರೇಲಿನ ಇತರ ಕುಟುಂಬಗಳಿಂದ ಚೊಚ್ಚಲು ಗಂಡಸರನ್ನು ತೆಗೆದುಕೊಳ್ಳುವ ಬದಲು ಲೇವಿಯರನ್ನೇ ತೆಗೆದುಕೊ. ಇಸ್ರೇಲರ ಚೊಚ್ಚಲು ಪಶುಗಳನ್ನು ತೆಗೆದುಕೊಳ್ಳುವ ಬದಲು ಲೇವಿಯರ ಪಶುಗಳನ್ನೇ ತೆಗೆದುಕೊ. ಲೇವಿಯರು ನನ್ನ ಸ್ವತ್ತಾಗಿದ್ದಾರೆ. 46 ಲೇವಿಯರ ಸಂಖ್ಯೆ 22,000. ಆದರೆ ಬೇರೆ ಕುಟುಂಬಗಳ ಚೊಚ್ಚಲು ಪುತ್ರರ ಸಂಖ್ಯೆ 22,273. ಹೀಗೆ ಲೇವಿಯರಿಗಿಂತ 273 ಮಂದಿ ಹೆಚ್ಚು ಚೊಚ್ಚಲು ಪುತ್ರರಿರುತ್ತಾರೆ. 47 ಅಧಿಕೃತ ಅಳತೆಯನ್ನು ಉಪಯೋಗಿಸಿ ಪ್ರತಿಯೊಬ್ಬನಿಗೆ ಅಂದರೆ 273 ಮಂದಿಗೆ ಐದೈದು ಶೆಕೆಲ್ ಬೆಳ್ಳಿಯನ್ನು ಸಂಗ್ರಹಿಸು. (ಅಧಿಕೃತ ಅಳತೆಯಲ್ಲಿ ಒಂದು ಶೆಕೆಲ್ ಅಂದರೆ ಇಪ್ಪತ್ತು ಗೆರಾ.) ಇಸ್ರೇಲರಿಂದ ಈ ಬೆಳ್ಳಿಯನ್ನು ಸಂಗ್ರಹಿಸು. 48 ಆ ಬೆಳ್ಳಿಯನ್ನು ಆರೋನನಿಗೂ ಅವನ ಪುತ್ರರಿಗೂ ಕೊಡು. ಈ ಹಣವು ಇಸ್ರೇಲರ 273 ಮಂದಿಗೆ ಈಡಾಗಿದೆ.’”

49 ಲೇವಿಯರಿಗಿಂತ ಇಸ್ರೇಲರಲ್ಲಿ 273 ಮಂದಿ ಚೊಚ್ಚಲು ಗಂಡಸರು ಹೆಚ್ಚಾಗಿದ್ದುದರಿಂದ ಮೋಶೆಯು ಆ 273 ಮಂದಿಗೆ ಈಡು ಕೊಡುವುದಕ್ಕಾಗಿ ಹಣವನ್ನು ಸಂಗ್ರಹಿಸಿದನು. 50 ಮೋಶೆಯು ಇಸ್ರೇಲರಲ್ಲಿ ಚೊಚ್ಚಲಾದ ಗಂಡಸರಿಂದ ಬೆಳ್ಳಿಯನ್ನು ಸಂಗ್ರಹಿಸಿದನು. ಅವನು ಅಧಿಕೃತ ಅಳತೆಯನ್ನು ಉಪಯೋಗಿಸಿ 1,365 ಶೆಕಲ್ ಬೆಳ್ಳಿಯನ್ನು ಸಂಗ್ರಹಿಸಿದನು. 51 ಮೋಶೆಯು ಯೆಹೋವನಿಗೆ ವಿಧೇಯನಾಗಿ ಆತನ ಆಜ್ಞೆಯಂತೆ ಬೆಳ್ಳಿಯನ್ನು ಆರೋನನಿಗೂ ಅವನ ಪುತ್ರರಿಗೂ ಕೊಟ್ಟನು.

ಕೆಹಾತ್ ಗೋತ್ರದವರ ಕೆಲಸಗಳು

ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ: “ಕೆಹಾತ್ ಗೋತ್ರದ ಪುರುಷರನ್ನು ಲೆಕ್ಕಿಸು. (ಕೆಹಾತ್ಯರು ಲೇವಿ ವಂಶದವರಾಗಿದ್ದಾರೆ.) ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡಲು ಯೋಗ್ಯರಾದ ಮೂವತ್ತರಿಂದ ಐವತ್ತರೊಳಗಿನ ಎಲ್ಲಾ ಪುರುಷರನ್ನು ಲೆಕ್ಕಿಸು. ಅವರು ದೇವದರ್ಶನಗುಡಾರದಲ್ಲಿರುವ ಮಹಾ ಪರಿಶುದ್ಧವಸ್ತುಗಳನ್ನು ನೋಡಿಕೊಳ್ಳಬೇಕು.

“ಇಸ್ರೇಲರು ಹೊಸ ಸ್ಥಳಕ್ಕೆ ಪ್ರಯಾಣ ಮಾಡುವಾಗ ಆರೋನನೂ ಅವನ ಪುತ್ರರೂ ದೇವದರ್ಶನಗುಡಾರದೊಳಕ್ಕೆ ಹೋಗಿ, ಮಹಾ ಪವಿತ್ರ ಸ್ಥಳವನ್ನು ಮರೆಮಾಡುವ ತೆರೆಯನ್ನು ಇಳಿಸಿ, ಅದನ್ನು ಒಡಂಬಡಿಕೆಯ ಪವಿತ್ರ ಪೆಟ್ಟಿಗೆಗೆ ಹೊದಿಸಬೇಕು. ಬಳಿಕ ಅವರು ಇವುಗಳಿಗೆಲ್ಲ ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನು ಹೊದಿಸಬೇಕು. ಆಮೇಲೆ ಅವರು ನೀಲಿಬಟ್ಟೆಯನ್ನು ತೊಗಲಿನ ಮೇಲೆ ಹಾಸಿ ಪವಿತ್ರ ಪೆಟ್ಟಿಗೆಯ ಬಳೆಗಳಲ್ಲಿ ಹೊರುವ ಕೋಲುಗಳನ್ನು ಸೇರಿಸಬೇಕು.”

“ಬಳಿಕ ಅವರು ಪವಿತ್ರ ಮೇಜಿನ ಮೇಲೆ ನೀಲಿಬಟ್ಟೆಯನ್ನು ಹಾಸಬೇಕು. ಪಾನದ್ರವ್ಯಾರ್ಪಣೆಗಳಿಗಾಗಿ ತಟ್ಟೆಗಳನ್ನೂ ಚಮಚಗಳನ್ನೂ ಬಟ್ಟಲುಗಳನ್ನೂ ಹೂಜೆಗಳನ್ನೂ ವಿಶೇಷ ರೊಟ್ಟಿಯನ್ನೂ ಮೇಜಿನ ಮೇಲೆ ಇಡಬೇಕು. ಬಳಿಕ ಅವುಗಳ ಮೇಲೆ ಕೆಂಪುಬಟ್ಟೆಯನ್ನು ಹಾಸಿ, ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನು ಅದಕ್ಕೆ ಹೊದಿಸಬೇಕು. ಬಳಿಕ ಹೊರುವ ಕೋಲುಗಳನ್ನು ಮೇಜಿನ ಬಳೆಗಳಲ್ಲಿ ಸೇರಿಸಬೇಕು.

“ಆಮೇಲೆ ದೀಪಸ್ತಂಭಕ್ಕೂ ಅದರ ದೀಪಗಳಿಗೂ ದೀಪಗಳ ಉಪಕರಣಗಳಿಗೂ ಬೂದಿ ತೆಗೆಯುವ ಅಗ್ಗಿಷ್ಠಿಕೆಗೂ ಮತ್ತು ಅದಕ್ಕಾಗಿ ಉಪಯೋಗಿಸುವ ಎಲ್ಲಾ ಎಣ್ಣೆಯ ಪಾತ್ರೆಗಳಿಗೂ ನೀಲಿಬಟ್ಟೆಯನ್ನು ಹೊದಿಸಬೇಕು. 10 ಬಳಿಕ ದೀಪಸ್ತಂಭಕ್ಕೂ ಅದರ ಎಲ್ಲಾ ಉಪಕರಣಗಳಿಗೂ ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನು ಹೊದಿಸಬೇಕು. ಆಮೇಲೆ ಅವರು ಈ ಎಲ್ಲಾ ವಸ್ತುಗಳನ್ನು ಹೊರುವ ಕೋಲುಗಳಿಗೆ ಕಟ್ಟಬೇಕು.

11 “ಅವರು ಚಿನ್ನದ ವೇದಿಕೆಯ ಮೇಲೆ ನೀಲಿ ಬಟ್ಟೆಯನ್ನು ಹಾಸಿ, ಶ್ರೇಷ್ಠ ತೊಗಲಿಂದ ಅದನ್ನು ಮುಚ್ಚಬೇಕು. ಬಳಿಕ ಅವರು ಹೊರುವ ಕೋಲುಗಳನ್ನು ವೇದಿಕೆಯ ಬಳೆಗಳಿಗೆ ಸೇರಿಸಬೇಕು.

12 “ಬಳಿಕ ಆರಾಧನೆಗಾಗಿ ಪವಿತ್ರಸ್ಥಳದಲ್ಲಿ ಉಪಯೋಗಿಸಲ್ಪಡುವ ಎಲ್ಲಾ ವಿಶೇಷ ವಸ್ತುಗಳನ್ನು ಒಟ್ಟಾಗಿ ಸೇರಿಸಬೇಕು. ಅವುಗಳನ್ನು ನೀಲಿಬಟ್ಟೆಯಿಂದ ಮುಚ್ಚಬೇಕು. ಬಳಿಕ ಅವುಗಳಿಗೆ ಶ್ರೇಷ್ಠವಾದ ತೊಗಲನ್ನು ಹೊದಿಸಬೇಕು. ಅವರು ಈ ವಸ್ತುಗಳನ್ನು ಹೊರುವುದಕ್ಕಾಗಿ ಚೌಕಟ್ಟಿಗೆ ಕಟ್ಟಬೇಕು.

13 “ಅವರು ತಾಮ್ರದ ವೇದಿಕೆಯಿಂದ ಬೂದಿಯನ್ನು ತೆಗೆದು, ನೇರಳೆಬಟ್ಟೆಯನ್ನು ಅದರ ಮೇಲೆ ಹಾಸಬೇಕು. 14 ಬಳಿಕ ಅವರು ವೇದಿಕೆಯಲ್ಲಿ ಆರಾಧನೆಗಾಗಿ ಉಪಯೋಗಿಸಲ್ಪಡುವ ಎಲ್ಲಾ ವಸ್ತುಗಳನ್ನು ಒಟ್ಟಾಗಿ ಸೇರಿಸಬೇಕು. ಅವುಗಳು ಯಾವುವೆಂದರೆ, ಅಗ್ಗಿಷ್ಟಿಗೆಗಳು, ಮುಳ್ಳುಚಮಚಗಳು, ಸಲಿಕೆಗಳು ಮತ್ತು ಬೋಗುಣಿಗಳು. ಅವರು ಇವುಗಳನ್ನು ತಾಮ್ರದ ವೇದಿಕೆಯ ಮೇಲೆ ಇಡಬೇಕು. ಬಳಿಕ ಅವರು ಶ್ರೇಷ್ಠವಾದ ತೊಗಲಿನ ಹೊದಿಕೆಯನ್ನು ಇವುಗಳಿಗೆಲ್ಲ ಹೊದಿಸಿ, ಹೊರುವ ಕೋಲುಗಳನ್ನು ವೇದಿಕೆಯ ಬಳೆಗಳಲ್ಲಿ ಸೇರಿಸಬೇಕು.

15 “ಇಸ್ರೇಲರು ಪ್ರಯಾಣಮಾಡುವ ಸಮಯದಲ್ಲಿ ಆರೋನನು ಮತ್ತು ಅವನ ಪುತ್ರರು ಪವಿತ್ರವಸ್ತುಗಳಿಗೂ ಪವಿತ್ರ ಉಪಕರಣಗಳಿಗೂ ಹೊದಿಸಿದ ನಂತರ, ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಹೋಗಬಹುದು. ಈ ರೀತಿ ಅವರು ಪವಿತ್ರವಸ್ತುಗಳನ್ನು ಮುಟ್ಟಬಾರದು; ಅವರು ಮುಟ್ಟಿದರೆ ಸಾಯುತ್ತಾರೆ.

16 “ಮಹಾಯಾಜಕನಾದ ಆರೋನನ ಮಗನಾದ ಎಲ್ಲಾಜಾರನು ಇಡೀ ಪವಿತ್ರ ಗುಡಾರವನ್ನು ಮತ್ತು ಎಲ್ಲಾ ಪವಿತ್ರಸ್ಥಳವನ್ನು ಮತ್ತು ಅದರೊಳಗಿರುವ ಎಲ್ಲಾ ಪಾತ್ರೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾನೆ. ದೀಪದ ಎಣ್ಣೆಗೂ ಪರಿಮಳಧೂಪಕ್ಕೂ ದೈನಂದಿನ ಧಾನ್ಯಸಮರ್ಪಣೆಗೂ ಅಭಿಷೇಕತೈಲಕ್ಕೂ ಅವನು ಜವಾಬ್ದಾರನಾಗಿದ್ದಾನೆ.”

17 ಯೆಹೋವನು ಮೋಶೆ ಆರೋನರಿಗೆ, 18 “ಕೆಹಾತ್ಯರು ಲೇವಿಯರ ಮಧ್ಯದಿಂದ ಇಲ್ಲವಾಗದಂತೆ ಎಚ್ಚರಿಕೆಯಾಗಿರಿ. 19 ಅವರು ಮಹಾಪರಿಶುದ್ಧ ವಸ್ತುಗಳ ಹತ್ತಿರ ಬಂದಾಗ ಸಾಯದಂತೆ ನೀವು ಅವರ ವಿಷಯದಲ್ಲಿ ಮಾಡಬೇಕಾದದ್ದೇನೆಂದರೆ, ಆರೋನನೂ ಅವನ ಪುತ್ರರೂ ಒಳಗೆ ಬಂದು, ಪ್ರತಿಯೊಬ್ಬ ಕೆಹಾತ್ಯನು ಮಾಡಬೇಕಾದ ಕೆಲಸವನ್ನು ಮತ್ತು ಹೊತ್ತುಕೊಂಡು ಹೋಗಬೇಕಾದದ್ದನ್ನು ತೋರಿಸಲಿ. 20 ಇಲ್ಲವಾದರೆ, ಕೆಹಾತ್ಯರು ಒಳಗೆ ಬಂದು ಪರಿಶುದ್ಧವಸ್ತುಗಳನ್ನು ಮುಟ್ಟುವರು. ಆ ಮಹಾ ಪರಿಶುದ್ಧವಸ್ತುಗಳನ್ನು ಅವರು ಒಂದು ಕ್ಷಣ ಮುಟ್ಟಿದರೂ ಸಾಯುತ್ತಾರೆ” ಎಂದು ಹೇಳಿದನು.

ಗೇರ್ಷೋನ್ ಕುಟುಂಬದವರ ಕೆಲಸಗಳು

21 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 22-23 “ನೀನು ಗೇರ್ಷೋನ್ಯರನ್ನು ಕುಟುಂಬಗಳಿಗನುಸಾರವಾಗಿ ಮತ್ತು ಕುಲಗಳಿಗನುಸಾರವಾಗಿ ಲೆಕ್ಕಿಸು. ಅಲ್ಲದೆ ದೇವದರ್ಶನಗುಡಾರದ ಸೇವೆಯನ್ನು ಮಾಡಲು ಯೋಗ್ಯರಾದ ಗಂಡಸರನ್ನು ಪಟ್ಟಿಮಾಡು. ಅವರ ವಯಸ್ಸು ಮೂವತ್ತರಿಂದ ಐವತ್ತು ವರ್ಷದೊಳಗಿರಬೇಕು.

24 “ವರ್ಗಾವಣೆಗಾಗಿ ಸಾಮಾನುಗಳನ್ನು ಕಟ್ಟುವುದರಲ್ಲಿಯೂ ವರ್ಗಾವಣೆಯಲ್ಲಿಯೂ ಗೇರ್ಷೋನ್ಯರು ಮಾಡತಕ್ಕ ಕೆಲಸ ಯಾವುದೆಂದರೆ: 25 ಅವರು ಪವಿತ್ರ ಗುಡಾರದ ಬಟ್ಟೆಗಳನ್ನು, ದೇವದರ್ಶನಗುಡಾರ ಮತ್ತು ಅದರ ಹೊದಿಕೆ, ಅದರ ಮೇಲಿರುವ ಶ್ರೇಷ್ಠವಾದ ತೊಗಲಿನ ಹೊದಿಕೆ ಮತ್ತು ದೇವದರ್ಶನಗುಡಾರದಲ್ಲಿರುವ ಪ್ರವೇಶದ್ವಾರದ ಪರದೆಯನ್ನು ವರ್ಗಾಯಿಸಬೇಕು. 26 ಅಂಗಳದ ಪರದೆಗಳನ್ನು, ಪವಿತ್ರ ಗುಡಾರವನ್ನು ಮತ್ತು ವೇದಿಕೆಯ ಸುತ್ತಲೂ ಇರುವ ಅಂಗಳ ಪ್ರವೇಶದ್ವಾರದ ಪರದೆಯನ್ನು, ಅವುಗಳ ಹಗ್ಗಗಳನ್ನು ಮತ್ತು ಇವುಗಳ ಎಲ್ಲಾ ಉಪಕರಣಗಳನ್ನು ವರ್ಗಾಯಿಸಬೇಕು. 27 ಗೇರ್ಷೋನ್ಯರು ಮಾಡುವ ಎಲ್ಲಾ ಕೆಲಸಗಳನ್ನು ಅಂದರೆ ವರ್ಗಾವಣೆಗಾಗಿ ಸಾಮಾನುಗಳನ್ನು ಕಟ್ಟುವುದರಲ್ಲಿಯೂ ವರ್ಗಾವಣೆ ಮಾಡುವುದರಲ್ಲಿಯೂ ಆರೋನ ಮತ್ತು ಅವನ ಪುತ್ರರು ಮಾರ್ಗದರ್ಶನ ನೀಡುವರು. ಗೇರ್ಷೋನ್ಯರು ವರ್ಗಾಯಿಸುವ ಎಲ್ಲವನ್ನು ಅವರೇ ಕಾಯಬೇಕೆಂಬ ಜವಾಬ್ದಾರಿಕೆಯನ್ನು ನೀನು ಅವರಿಗೆ ಕೊಡು. 28 ದೇವದರ್ಶನಗುಡಾರಕ್ಕೋಸ್ಕರ ಮತ್ತು ತಮ್ಮ ಕಾವಲಿನ ಕರ್ತವ್ಯದಲ್ಲಿ ಗೇರ್ಷೋನ್ಯರು ಮಾಡಬೇಕಾದ ಕೆಲಸ ಇದೇ. ಆರೋನನ ಮಗನಾದ ಈತಾಮಾರನು ಅವರ ಮೇಲ್ವಿಚಾರಕನಾಗಿರಬೇಕು.”

ಮೆರಾರೀ ಕುಟುಂಬದವರ ಕೆಲಸಗಳು

29 “ನೀನು ಮೆರಾರೀಯರನ್ನೂ ಅವರ ಕುಲಗಳಿಗನುಗುಣವಾಗಿ ಮತ್ತು ಕುಟುಂಬಗಳಿಗನುಗುಣವಾಗಿ ಲೆಕ್ಕಿಸು. 30 ದೇವದರ್ಶನಗುಡಾರದ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾದ ಗಂಡಸರನ್ನು ಲೆಕ್ಕಿಸು. ಅವರ ವಯಸ್ಸು ಮೂವತ್ತರಿಂದ ಮೊದಲುಗೊಂಡು ಐವತ್ತರೊಳಗಿರಬೇಕು. 31 ಈ ಕೆಳಕಂಡ ವಸ್ತುಗಳನ್ನು ಮೆರಾರೀಯರು ವರ್ಗಾವಣೆಗಾಗಿ ಕಟ್ಟುವರು, ವರ್ಗಾಯಿಸುವರು ಮತ್ತು ಕಾವಲುಕಾಯುವರು: ಪವಿತ್ರ ಡೇರೆಯ ಚೌಕಟ್ಟುಗಳು, ಅದರ ಅಡ್ಡಪಟ್ಟಿಗಳು, ಅದರ ಸ್ತಂಭಗಳು, ಅದರ ಗದ್ದಿಗೇಕಲ್ಲುಗಳು, 32 ಅಂಗಳದ ಸ್ತಂಭಗಳು ಮತ್ತು ಅವುಗಳ ಗದ್ದಿಗೇಕಲ್ಲುಗಳು, ಅಗುಳಿಗಳು, ಹಗ್ಗಗಳು ಮತ್ತು ಅವರ ಕೆಲಸಕ್ಕೆ ಬೇಕಾದ ಎಲ್ಲಾ ಉಪಕರಣಗಳು. ಅವರು ವರ್ಗಾಯಿಸಬೇಕಾದ ಮತ್ತು ಕಾವಲುಕಾಯಬೇಕಾದ ವಸ್ತುಗಳನ್ನು ನೀನು ಹೆಸರೆಸರಾಗಿ ಅವರಿಗೆ ವಹಿಸಿಕೊಡಬೇಕು. 33 ದೇವದರ್ಶನಗುಡಾರಕ್ಕೋಸ್ಕರ ಮೆರಾರೀಯರು ಮಾಡತಕ್ಕ ಕೆಲಸ ಇದೇ. ಅವರ ಕೆಲಸವನ್ನು ಮೇಲ್ವಿಚಾರಣೆ ಮಾಡುವುದು ಮಹಾಯಾಜಕ ಆರೋನನ ಮಗನಾದ ಈತಾಮಾರನ ಜವಾಬ್ದಾರಿಯಾಗಿದೆ.”

ಲೇವಿ ಕುಟುಂಬಗಳು

34-35 ಮೋಶೆ ಆರೋನರೂ, ಸಮುದಾಯದ ಪ್ರಧಾನರೂ ಕುಲ ಮತ್ತು ಕುಟುಂಬಗಳಿಗನುಗುಣವಾಗಿ ಕೆಹಾತ್ಯರಲ್ಲಿ ಮೂವತ್ತು ವರ್ಷದಿಂದ ಮೊದಲುಗೊಂಡು ಐವತ್ತು ವರ್ಷದೊಳಗಿರುವ ಗಂಡಸರನ್ನು ಲೆಕ್ಕಿಸಿದರು. ದೇವದರ್ಶನಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸ ಮಾಡಲು ಯೋಗ್ಯರಾದ ಗಂಡಸರನ್ನೇ ಅವರು ಲೆಕ್ಕಿಸಿದರು.

36 ಅವರಲ್ಲಿ ಈ ಕೆಲಸವನ್ನು ಮಾಡಲು ಅರ್ಹರಾಗಿ ಗೋತ್ರ ಕುಟುಂಬಗಳ ಪ್ರಕಾರ ಲೆಕ್ಕಿಸಲ್ಪಟ್ಟವರು 2,750 ಮಂದಿ. 37 ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮೋಶೆ ಆರೋನರು ಕೆಹಾತ್ಯರನ್ನು ಲೆಕ್ಕಿಸಲಾಗಿ ಅವರಲ್ಲಿ ದೇವದರ್ಶನಗುಡಾರಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡತಕ್ಕವರು ಇವರೇ.

38-39 ಗೇರ್ಷೋನ್ಯರಲ್ಲಿಯೂ ಮೂವತ್ತು ವರ್ಷ ಮೊದಲುಗೊಂಡು ಐವತ್ತು ವರ್ಷದೊಳಗಿರುವ ಮತ್ತು ದೇವದರ್ಶನಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸ ಮಾಡಲು ಯೋಗ್ಯರಾದ ಗಂಡಸರನ್ನು ಕುಲ ಮತ್ತು ಕುಟುಂಬಗಳಿಗನುಗುಣವಾಗಿ ಲೆಕ್ಕಿಸಲಾಯಿತು. 40 ಅವರ ಸಂಖ್ಯೆ 2,630. 41 ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಗೇರ್ಷೋನ್ಯರನ್ನು ಲೆಕ್ಕಿಸಿದರು. ಅವರಲ್ಲಿ ದೇವದರ್ಶನಗುಡಾರದ ವಿಶೇಷ ಕೆಲಸವನ್ನು ಮಾಡತಕ್ಕವರು ಇವರೇ.

42-43 ಮೆರಾರೀಯರಲ್ಲಿಯೂ ಮೂವತ್ತರಿಂದ ಐವತ್ತು ವರ್ಷದ ಒಳಗಿರುವ ಮತ್ತು ದೇವದರ್ಶನ ಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾದ ಗಂಡಸರನ್ನು ಕುಲ ಮತ್ತು ಕುಟುಂಬಗಳಿಗೆ ಅನುಗುಣವಾಗಿ ಲೆಕ್ಕಿಸಲಾಯಿತು. 44 ಅವರ ಒಟ್ಟು ಸಂಖ್ಯೆ 3,200. 45 ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಅವರನ್ನು ಲೆಕ್ಕಿಸಿದರು. ಮೆರಾರೀಯರ ಕುಲಗಳಿಂದ ಈ ಗಂಡಸರನ್ನು ದಾಖಲಾತಿ ಮಾಡಿಕೊಳ್ಳಲಾಯಿತು.

46 ಹೀಗೆ ಮೋಶೆ ಆರೋನರು ಇಸ್ರೇಲರ ಪ್ರಧಾನರನ್ನೂ ಎಲ್ಲಾ ಲೇವಿಯರನ್ನೂ ಕುಲ ಮತ್ತು ಕುಟುಂಬಗಳಿಗೆ ಅನುಗುಣವಾಗಿ ಲೆಕ್ಕಿಸಿದರು. 47 ಮೂವತ್ತರಿಂದ ಐವತ್ತು ವರ್ಷದೊಳಗಿರುವ ಮತ್ತು ದೇವದರ್ಶನಗುಡಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ವರ್ಗಾವಣೆಗಾಗಿ ಕಟ್ಟುವುದಕ್ಕೂ ವರ್ಗಾವಣೆಯ ಕೆಲಸಕ್ಕೂ ಯೋಗ್ಯರಾದ ಎಲ್ಲಾ ಗಂಡಸರನ್ನು ಲೆಕ್ಕಿಸಿದರು. 48 ಅವರ ಒಟ್ಟು ಸಂಖ್ಯೆ 8,580. 49 ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದ ಮೇರೆಗೆ ಅವನಿಂದ ಪ್ರತಿಯೊಬ್ಬನೂ ಲೆಕ್ಕಿಸಲ್ಪಟ್ಟನು. ಪ್ರತಿಯೊಬ್ಬನಿಗೂ ವರ್ಗಾವಣೆಗಾಗಿ ವಸ್ತುಗಳನ್ನು ಕಟ್ಟುವ ಮತ್ತು ವರ್ಗಾವಣೆ ಕೆಲಸದ ಕರ್ತವ್ಯಗಳನ್ನು ಗೊತ್ತುಪಡಿಸಲಾಯಿತು. ಯೆಹೋವನು ಆಜ್ಞಾಪಿಸಿದ ಮೇರೆಗೆ ಇದು ಮಾಡಲ್ಪಟ್ಟಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International