Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 16-18

ದೋಷಪರಿಹಾರಕ ದಿನ

16 ಆರೋನನ ಇಬ್ಬರು ಪುತ್ರರು ಯೆಹೋವನಿಗೆ ಆತನು ಆಜ್ಞಾಪಿಸದೇ ಇದ್ದ ಧೂಪವನ್ನು ಅರ್ಪಿಸುತ್ತಿದ್ದಾಗ ಸತ್ತರು. ಅದಾದ ನಂತರ ಯೆಹೋವನು ಮೋಶೆಯೊಡನೆ ಮಾತಾಡಿದನು. ಆತನು ಹೇಳಿದ್ದೇನೆಂದರೆ: “ನಿನ್ನ ಸಹೋದರನಾದ ಆರೋನನೊಡನೆ ಮಾತಾಡು. ಅವನು ತನಗೆ ಇಷ್ಟಬಂದಾಗಲೆಲ್ಲಾ ತೆರೆಯ ಹಿಂದಿರುವ ಮಹಾ ಪವಿತ್ರಸ್ಥಳದೊಳಕ್ಕೆ ಹೋಗಬಾರದೆಂದು ಅವನಿಗೆ ಹೇಳು. ಆ ತೆರೆಯ ಹಿಂದೆ ಇರುವ ಕೋಣೆಯೊಳಗೆ ಪವಿತ್ರ ಪೆಟ್ಟಿಗೆಯು ಇರುತ್ತದೆ. ಕೃಪಾಸನವು ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿರುತ್ತದೆ. ಕೃಪಾಸನದ ಮೇಲೆ ಮೇಘದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಆರೋನನು ಆ ಕೋಣೆಯೊಳಗೆ ಹೋದರೆ ಸಾಯುವನು!

“ದೋಷಪರಿಹಾರಕ ದಿನದಲ್ಲಿ ಆರೋನನು ಮಹಾ ಪವಿತ್ರಸ್ಥಳದೊಳಗೆ ಪ್ರವೇಶಿಸುವ ಮೊದಲು ಪಾಪಪರಿಹಾರಕ ಯಜ್ಞವಾಗಿ ಹೋರಿಯನ್ನೂ ಸರ್ವಾಂಗಹೋಮವಾಗಿ ಟಗರನ್ನೂ ಅರ್ಪಿಸಬೇಕು. ಆರೋನನು ತನ್ನ ಪೂರ್ಣಶರೀರವನ್ನು ನೀರಿನಿಂದ ತೊಳೆದುಕೊಳ್ಳಬೇಕು. ಬಳಿಕ ಅವನು ಈ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಆರೋನನು ಪವಿತ್ರ ನಾರಿನ ನಿಲುವಂಗಿಯನ್ನೂ ನಾರಿನ ಚಡ್ಡಿಯನ್ನೂ ಧರಿಸಿಕೊಂಡಿರಬೇಕು. ಅವನು ನಾರಿನ ನಡುಕಟ್ಟನ್ನು ಕಟ್ಟಿಕೊಳ್ಳಬೇಕು; ನಾರಿನ ಮುಂಡಾಸವನ್ನು ಇಟ್ಟುಕೊಳ್ಳಬೇಕು. ಇವುಗಳು ಪವಿತ್ರವಾದವುಗಳಾಗಿವೆ.

“ಆರೋನನು ಇಸ್ರೇಲರಿಂದ ಪಾಪಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಳ್ಳಬೇಕು. ಬಳಿಕ ಆರೋನನು ಪಾಪಪರಿಹಾರಕ ಯಜ್ಞಕ್ಕೋಸ್ಕರ ಹೋರಿಯನ್ನು ಅರ್ಪಿಸಬೇಕು. ಈ ಪಾಪಪರಿಹಾರಕ ಯಜ್ಞವು ಅವನಿಗಾಗಿ ಇರುತ್ತದೆ. ಆರೋನನು ತನಗೂ ತನ್ನ ಕುಟುಂಬದವರಿಗೂ ಪ್ರಾಯಶ್ಚಿತ್ತ ಮಾಡಲು ಇದನ್ನು ಮಾಡಬೇಕು.

“ತರುವಾಯ ಆರೋನನು ಆ ಎರಡು ಹೋತಗಳನ್ನು ತೆಗೆದುಕೊಂಡು ಅವುಗಳನ್ನು ದೇವದರ್ಶನಗುಡಾರದ ಬಾಗಿಲಿನಲ್ಲಿ ಯೆಹೋವನ ಸನ್ನಿಧಿಗೆ ತರಬೇಕು. ಆರೋನನು ಚೀಟುಹಾಕಿ ಒಂದು ಹೋತವನ್ನು ಯೆಹೋವನಿಗಾಗಿಯೂ ಇನ್ನೊಂದನ್ನು ಅಜಾಜೇಲನಿಗಾಗಿಯೂ ಎಂದು ನಿರ್ಧರಿಸಬೇಕು.

“ಬಳಿಕ ಆರೋನನು ಚೀಟು ಹಾಕುವುದರ ಮೂಲಕ ಯೆಹೋವನಿಗೋಸ್ಕರ ಆರಿಸಲ್ಪಟ್ಟ ಹೋತವನ್ನು ಅರ್ಪಿಸುವನು. ಆರೋನನು ಈ ಹೋತವನ್ನು ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು. 10 ಆದರೆ ಚೀಟು ಹಾಕುವುದರ ಮೂಲಕ ಅಜಾಜೇಲನಿಗಾಗಿ ಆರಿಸಲ್ಪಟ್ಟ ಹೋತವನ್ನು ಜೀವಂತವಾಗಿ ಯೆಹೋವನ ಸನ್ನಿಧಿಗೆ ತರಬೇಕು ಮತ್ತು ಈ ಹೋತವನ್ನು ಮರುಭೂಮಿಯಲ್ಲಿರುವ ಅಜಾಜೇಲನಿಗೆ ಕಳುಹಿಸಬೇಕು. ಜನರಿಗೋಸ್ಕರ ಪ್ರಾಯಶ್ಚಿತ್ತ ಮಾಡಲು ಹೀಗೆ ಮಾಡಬೇಕು.

11 “ಬಳಿಕ ಆರೋನನು ಹೋರಿಯನ್ನು ತನ್ನ ಪಾಪಪರಿಹಾರಕ ಯಜ್ಞವಾಗಿ ಅರ್ಪಿಸುವನು. ಆರೋನನು ತನಗಾಗಿಯೂ ತನ್ನ ಕುಟುಂಬದವರಿಗಾಗಿಯೂ ಪ್ರಾಯಶ್ಚಿತ್ತ ಮಾಡುವನು. ಆರೋನನು ಹೋರಿಯನ್ನು ತನ್ನ ಪಾಪಪರಿಹಾರಕ ಯಜ್ಞವಾಗಿ ವಧಿಸುವನು. 12 ಬಳಿಕ ಅವನು ಯೆಹೋವನ ಸನ್ನಿಧಿಯಲ್ಲಿರುವ ವೇದಿಕೆಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತೆಗೆದುಕೊಳ್ಳಬೇಕು. ಆರೋನನು ಪರಿಮಳ ಧೂಪ ದ್ರವ್ಯದ ಪುಡಿಯಲ್ಲಿ ಎರಡು ಹಿಡಿ ತೆಗೆದುಕೊಳ್ಳುವನು. ಆರೋನನು ಆ ಧೂಪವನ್ನು ತೆರೆಯ ಹಿಂದೆ ಇರುವ ಕೋಣೆಗೆ ತೆಗೆದುಕೊಂಡು ಬರಬೇಕು. 13 ಆರೋನನು ಯೆಹೋವನ ಸನ್ನಿಧಿಯಲ್ಲಿ ಬೆಂಕಿಯ ಮೇಲೆ ಧೂಪವನ್ನು ಹಾಕಬೇಕು. ಆಗ ಒಡಂಬಡಿಕೆಯ ಪೆಟ್ಟಿಗೆ ಮೇಲಿರುವ ಕೃಪಾಸವನ್ನು ಧೂಪದ ಹೊಗೆಯು ಮುಚ್ಚಿಕೊಳ್ಳುವುದು. ಹೀಗೆ ಮಾಡುವುದರಿಂದ ಆರೋನನು ಸಾಯುವುದಿಲ್ಲ. 14 ಅಲ್ಲದೆ ಆರೋನನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಕೃಪಾಸನದ ಪೂರ್ವಭಾಗದಲ್ಲಿ ತನ್ನ ಬೆರಳಿನಿಂದ ಚಿಮಿಕಿಸಬೇಕು. ಕೃಪಾಸನದ ಮುಂಭಾಗದಲ್ಲಿ ಅವನು ತನ್ನ ಬೆರಳಿನಿಂದ ರಕ್ತವನ್ನು ಏಳು ಬಾರಿ ಚಿಮಿಕಿಸುವನು.

15 “ಬಳಿಕ ಆರೋನನು ಜನರಿಗೋಸ್ಕರವಾಗಿರುವ ಪಾಪಪರಿಹಾರಕ ಪಶುವಾದ ಹೋತವನ್ನು ವಧಿಸಬೇಕು. ಆರೋನನು ಈ ಹೋತದ ರಕ್ತವನ್ನು ತೆರೆಯ ಹಿಂಭಾಗದಲ್ಲಿರುವ ಕೋಣೆಗೆ ತೆಗೆದುಕೊಂಡು ಬರಬೇಕು. ಆರೋನನು ಹೋರಿಯ ರಕ್ತದಿಂದ ಮಾಡಿದಂತೆ ಹೋತದ ರಕ್ತದಿಂದಲೂ ಮಾಡಬೇಕು. ಆರೋನನು ಹೋತದ ರಕ್ತವನ್ನು ಕೃಪಾಸನದ ಮೇಲೂ ಮತ್ತು ಕೃಪಾಸನದ ಮುಂಭಾಗದಲ್ಲಿಯೂ ಚಿಮಿಕಿಸಬೇಕು. 16 ಆರೋನನು ಮಹಾ ಪವಿತ್ರಸ್ಥಳವನ್ನು ಪರಿಶುದ್ಧ ಮಾಡಲು ಅನುಸರಿಸಬೇಕಾದ ನಿಯಮಗಳು: ಇಸ್ರೇಲರ ಅಶುದ್ಧತ್ವ, ದಂಗೆಕೋರತನ ಮತ್ತು ಅವರ ಯಾವುದೇ ಪಾಪಗಳ ಪರಿಹಾರಕ್ಕಾಗಿ ಆರೋನನು ಇದನ್ನು ಮಾಡಬೇಕು. ಅವರ ಅಶುದ್ಧತ್ವದ ನಡುವೆ ಇರುವ ದೇವದರ್ಶನಗುಡಾರಕ್ಕೂ ಅವನು ಇದನ್ನೇ ಮಾಡಬೇಕು.

17 “ಆರೋನನು ಮಹಾ ಪವಿತ್ರಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡಲು ದೇವದರ್ಶನಗುಡಾರದೊಳಗೆ ಹೋದ ಸಮಯದಿಂದ ಅವನು ಬರುವ ತನಕ ಗುಡಾರದೊಳಗೆ ಯಾರೂ ಇರಕೂಡದು. ಆರೋನನು ಬರುವ ತನಕ ಯಾರೂ ಒಳಗೆ ಹೋಗಕೂಡದು. ಹೀಗೆ ಆರೋನನು ತನಗಾಗಿಯೂ ತನ್ನ ಕುಟುಂಬಕ್ಕಾಗಿಯೂ ಇಡೀ ಇಸ್ರೇಲ್ ಸಮೂಹಕ್ಕಾಗಿಯೂ ಪ್ರಾಯಶ್ಚಿತ್ತ ಮಾಡುವನು. 18 ತರುವಾಯ ಆರೋನನು ಹೊರಗೆ ಬಂದು ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಕೆಯ ಬಳಿಗೆ ಹೋಗುವನು. ಆರೋನನು ಯಜ್ಞವೇದಿಕೆಯನ್ನು ಶುದ್ಧೀಕರಿಸುವನು. ಆರೋನನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ಮತ್ತು ಹೋತದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಕೆಯ ಎಲ್ಲಾ ಮೂಲೆಗಳಿಗೆ ಹಚ್ಚುವನು. 19 ಬಳಿಕ ಆರೋನನು ತನ್ನ ಬೆರಳಿನಿಂದ ಸ್ವಲ್ಪ ರಕ್ತವನ್ನು ಯಜ್ಞವೇದಿಕೆಯ ಮೇಲೆ ಏಳು ಸಲ ಚಿಮಿಕಿಸುವನು. ಹೀಗೆ ಆರೋನನು ಯಜ್ಞವೇದಿಕೆಯನ್ನು ಇಸ್ರೇಲರಿಂದ ಅದಕ್ಕುಂಟಾದ ಅಶುದ್ಧತ್ವದಿಂದ ದೂರಮಾಡಿ ಪರಿಶುದ್ಧಗೊಳಿಸುವನು.

20 “ಹೀಗೆ ಆರೋನನು ಮಹಾ ಪವಿತ್ರಸ್ಥಳವನ್ನೂ ದೇವದರ್ಶನಗುಡಾರವನ್ನೂ ಯಜ್ಞವೇದಿಕೆಯನ್ನೂ ಶುದ್ಧೀಕರಿಸುವನು. ಬಳಿಕ ಆರೋನನು ಜೀವಂತವಾಗಿರುವ ಹೋತವನ್ನು ಯೆಹೋವನ ಬಳಿಗೆ ತರುವನು. 21 ಆರೋನನು ಸಜೀವವಾದ ಹೋತದ ತಲೆಯ ಮೇಲೆ ತನ್ನ ಎರಡು ಕೈಗಳನ್ನಿಟ್ಟು ಇಸ್ರೇಲರು ಮಾಡಿದ ಪಾಪಗಳನ್ನು ಮತ್ತು ದ್ರೋಹಗಳನ್ನು ಅರಿಕೆಮಾಡುವನು. ಹೀಗೆ ಆರೋನನು ಜನರ ಪಾಪಗಳನ್ನು ಹೋತದ ತಲೆಯ ಮೇಲೆ ಹೊರಿಸುವನು. ಬಳಿಕ ಅವನು ಹೋತವನ್ನು ಮರುಭೂಮಿಗೆ ಕಳುಹಿಸಿಬಿಡುವನು. ಒಬ್ಬ ಮನುಷ್ಯನು ಹೋತವನ್ನು ನಡಿಸಿಕೊಂಡು ಹೋಗಲು ಸಿದ್ಧನಾಗಿ ನಿಂತಿರುವನು. 22 ಹೀಗೆ ಹೋತವು ಜನರ ಪಾಪಗಳನ್ನು ಹೊತ್ತುಕೊಂಡು ಬರಿದಾದ ಮರುಭೂಮಿಗೆ ಹೋಗುವುದು. ಹೋತವನ್ನು ನಡಿಸಿಕೊಂಡು ಹೋಗುವ ಮನುಷ್ಯನು ಮರುಭೂಮಿಯಲ್ಲಿ ಅದನ್ನು ಬಿಟ್ಟುಬಿಡುವನು.

23 “ಬಳಿಕ ಆರೋನನು ದೇವದರ್ಶನಗುಡಾರವನ್ನು ಪ್ರವೇಶಿಸುವನು. ಅವನು ಪವಿತ್ರಸ್ಥಳದೊಳಗೆ ಹೋಗಿದ್ದಾಗ ಧರಿಸಿಕೊಂಡಿದ್ದ ನಾರುಬಟ್ಟೆಯನ್ನು ತೆಗೆದುಹಾಕುವನು. ಅವನು ಈ ಬಟ್ಟೆಗಳನ್ನು ಅಲ್ಲಿಯೇ ಬಿಡಬೇಕು. 24 ಅವನು ತನ್ನ ಶರೀರವನ್ನು ಪವಿತ್ರಸ್ಥಳದಲ್ಲಿ ನೀರಿನಿಂದ ತೊಳೆದುಕೊಳ್ಳುವನು. ಬಳಿಕ ಅವನು ತನ್ನ ಇತರ ವಿಶೇಷ ಬಟ್ಟೆಗಳನ್ನು ಧರಿಸಿಕೊಳ್ಳುವನು. ಅವನು ಹೊರಗೆ ಬಂದು, ತನ್ನ ಸರ್ವಾಂಗಹೋಮವನ್ನು ಮತ್ತು ಜನರ ಸರ್ವಾಂಗಹೋಮವನ್ನು ಅರ್ಪಿಸುವನು. ಅವನು ತನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತ ಮಾಡುವನು. 25 ಬಳಿಕ ಅವನು ಪಾಪಪರಿಹಾರಕ ಯಜ್ಞದ ಕೊಬ್ಬನ್ನು ವೇದಿಕೆಯ ಮೇಲೆ ಹೋಮಮಾಡುವನು.

26 “ಅಜಾಜೇಲನಿಗೆ ಹೋತವನ್ನು ನಡೆಸಿಕೊಂಡು ಹೋದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಿಂದ ತನ್ನ ಪೂರ್ಣಶರೀರವನ್ನು ತೊಳೆದುಕೊಳ್ಳಬೇಕು. ಬಳಿಕ ಅವನು ಪಾಳೆಯದೊಳಗೆ ಬರಬಹುದು.

27 “ಪಾಪಪರಿಹಾರಕ ಯಜ್ಞಕ್ಕಾಗಿ ಇರುವ ಹೋರಿಯನ್ನು ಮತ್ತು ಹೋತವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಬೇಕು. (ಆ ಪಶುಗಳ ರಕ್ತವನ್ನು, ಪವಿತ್ರವಸ್ತುಗಳನ್ನು ಶುದ್ಧೀಕರಿಸುವುದಕ್ಕೆ ಪವಿತ್ರಸ್ಥಳಕ್ಕೆ ತರಲಾಯಿತು.) ಯಾಜಕರು ಆ ಪಶುಗಳ ಚರ್ಮ, ಮಾಂಸ ಮತ್ತು ದೇಹದ ಕಲ್ಮಶವನ್ನೆಲ್ಲಾ ಬೆಂಕಿಯಿಂದ ಸುಟ್ಟುಹಾಕಿಸಬೇಕು. 28 ಬಳಿಕ ಅವುಗಳನ್ನು ಸುಡುವ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ತನ್ನ ಪೂರ್ಣದೇಹವನ್ನು ನೀರಿನಿಂದ ತೊಳೆದುಕೊಳ್ಳಬೇಕು. ಬಳಿಕ ಅವನು ಪಾಳೆಯದೊಳಗೆ ಬರಬಹುದು.

29 “ಇದು ನಿಮಗೆ ಶಾಶ್ವತವಾದ ಕಟ್ಟಳೆ: ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನೀವು ಆಹಾರವನ್ನು[a] ತೆಗೆದುಕೊಳ್ಳದೆ ಉಪವಾಸ ಮಾಡಬೇಕು. ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. ನಿಮ್ಮ ದೇಶದಲ್ಲಿ ವಾಸಿಸುವ ಪ್ರವಾಸಿಗರಾಗಲಿ ಪರದೇಶಸ್ಥರಾಗಲಿ ಯಾವ ಕೆಲಸವನ್ನು ಮಾಡಬಾರದು. 30 ಯಾಕೆಂದರೆ ಈ ದಿನದಲ್ಲಿ ಯಾಜಕನು ನಿಮ್ಮನ್ನು ಶುದ್ಧೀಕರಿಸಲು ನಿಮಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ನೀವು ಯೆಹೋವನಿಗಾಗಿ ನಿಮ್ಮ ಎಲ್ಲಾ ಪಾಪಗಳಿಂದ ಬಿಡುಗಡೆಯಾಗಿ ಪರಿಶುದ್ಧರಾಗುವಿರಿ. 31 ಈ ದಿನವು ನಿಮಗೆ ಬಹಳ ಪ್ರಾಮುಖ್ಯವಾದ ವಿಶ್ರಾಂತಿ ದಿನವಾಗಿದೆ. ನೀವು ಉಪವಾಸ ಮಾಡಬೇಕು. ಈ ನಿಯಮ ಶಾಶ್ವತವಾದದ್ದು.

32 “ಆದ್ದರಿಂದ ಪ್ರಧಾನಯಾಜಕನಾಗಿ ಆರಿಸಲ್ಪಟ್ಟವನು ವಸ್ತುಗಳನ್ನು ಶುದ್ಧೀಕರಿಸಲು ಈ ಆಚರಣೆಯನ್ನು ಮಾಡಬೇಕು. ಈತನು ತನ್ನ ತಂದೆಯ ನಂತರ ಪ್ರಧಾನಯಾಜಕನಾಗಿ ಸೇವೆಮಾಡುವುದಕ್ಕೆ ನೇಮಿಸಲ್ಪಟ್ಟವನಾಗಿದ್ದಾನೆ. ಆ ಯಾಜಕನು ಪವಿತ್ರವೂ ಶ್ರೇಷ್ಠವೂ ಆಗಿರುವ ನಾರುಬಟ್ಟೆಯನ್ನು ಧರಿಸಿಕೊಳ್ಳಬೇಕು. 33 ಅವನು ಮಹಾ ಪವಿತ್ರಸ್ಥಳ, ದೇವದರ್ಶನಗುಡಾರ ಮತ್ತು ವೇದಿಕೆಯನ್ನು ಶುದ್ಧೀಕರಿಸಬೇಕು; ಅವನು ಯಾಜಕರನ್ನು ಇಸ್ರೇಲರನ್ನು ಶುದ್ಧೀಕರಿಸಬೇಕು. 34 ಇಸ್ರೇಲರನ್ನು ಶುದ್ಧೀಕರಿಸುವ ಕಟ್ಟಳೆ ಶಾಶ್ವತವಾದದ್ದು. ನೀವು ಆ ಕಾರ್ಯಗಳನ್ನು ವರ್ಷಕ್ಕೊಮ್ಮೆ ಇಸ್ರೇಲರ ಪಾಪಗಳ ದೆಸೆಯಿಂದ ಮಾಡಬೇಕು.”

ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಆ ಕಾರ್ಯಗಳನ್ನು ಮಾಡಿದರು.

ಪ್ರಾಣಿಗಳನ್ನು ಕೊಲ್ಲುವುದರ ಮತ್ತು ತಿನ್ನುವುದರ ಕುರಿತು ನಿಯಮಗಳು

17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: ಆರೋನನೊಡನೆಯೂ ಅವನ ಪುತ್ರರೊಡನೆಯೂ ಇಸ್ರೇಲರೆಲ್ಲರೊಡನೆಯೂ ಮಾತಾಡು. ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆಂದು ಹೇಳು. ಅದೇನೆಂದರೆ, ಇಸ್ರೇಲರಲ್ಲಿ ಯಾವನಾದರೂ ಹೋರಿಯನ್ನಾಗಲಿ ಕುರಿಮರಿಯನ್ನಾಗಲಿ ಹೋತವನ್ನಾಗಲಿ ಪಾಳೆಯದೊಳಗೆ ಅಥವಾ ಪಾಳೆಯದ ಹೊರಗೆ ವಧಿಸಬಹುದು. ಅವನು ಆ ಪ್ರಾಣಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಅವನು ಆ ಪಶುವಿನ ಒಂದು ಭಾಗವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಅವನು ರಕ್ತವನ್ನು ಸುರಿಸಿದ್ದರಿಂದ ತನ್ನ ಕಾಣಿಕೆಯನ್ನು ಯೆಹೋವನ ಪವಿತ್ರ ಗುಡಾರದೊಳಗೆ ತೆಗೆದುಕೊಂಡು ಹೋಗಬೇಕು. ಅವನು ಪ್ರಾಣಿಯ ಒಂದು ಭಾಗವನ್ನು ಯೆಹೋವನಿಗೆ ಉಡುಗೊರೆಯಾಗಿ ತೆಗೆದುಕೊಂಡು ಹೋಗದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು. ಸಮಾಧಾನಯಜ್ಞರೂಪವಾಗಿ ಇದನ್ನು ಯೆಹೋವನಿಗೆ ಅರ್ಪಿಸುವ ಯಜ್ಞಕ್ಕೆ ಇದೇ ನಿಯಮ. ಇಸ್ರೇಲರು ಹೊಲಗಳಲ್ಲಿ ಕೊಲ್ಲುವ ತಮ್ಮ ಪ್ರಾಣಿಗಳನ್ನು ದೇವದರ್ಶನಗುಡಾರದ ಬಾಗಿಲಿಗೆ ಅಂದರೆ ಯೆಹೋವನ ಸನ್ನಿಧಿಯಲ್ಲಿರುವ ಯಾಜಕರ ಬಳಿಗೆ ತರಬೇಕು. ಬಳಿಕ ಯಾಜಕನು ಆ ಪಶುಗಳ ರಕ್ತವನ್ನು ದೇವದರ್ಶನಗುಡಾರದ ಬಾಗಿಲಿನ ಹತ್ತಿರವಿರುವ ಯೆಹೋವನ ಯಜ್ಞವೇದಿಕೆಗೆ ಚೆಲ್ಲುವನು ಮತ್ತು ಅವುಗಳ ಕೊಬ್ಬನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡುವನು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. ಅವರು “ಅಜದೇವತೆಗಳಿಗೆ” ಇನ್ನು ಮುಂದೆ ಬಲಿಕೊಡಬಾರದು. ಅವರು ಅನ್ಯದೇವತೆಗಳ ಹಿಂದೆ ಹೋಗಿದ್ದಾರೆ. ಆ ರೀತಿಯಲ್ಲಿ ಅವರು ಸೂಳೆಯರ ಹಾಗೆ ವರ್ತಿಸಿದ್ದಾರೆ. ಈ ನಿಯಮಗಳು ಶಾಶ್ವತವಾಗಿವೆ.

“ಜನರಿಗೆ ಹೇಳಬೇಕಾದದ್ದೇನೆಂದರೆ: ನಿಮ್ಮ ಮಧ್ಯದಲ್ಲಿ ವಾಸಿಸುತ್ತಿರುವ ಯಾವ ಇಸ್ರೇಲನಾಗಲಿ ಅನ್ಯನಾಗಲಿ ಸರ್ವಾಂಗಹೋಮವನ್ನಾಗಲಿ ಯಜ್ಞವನ್ನಾಗಲಿ ಅರ್ಪಿಸಬಹುದು. ಅವನು ತನ್ನ ಬಲಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತೆಗೆದುಕೊಂಡು ಬಂದು ಯೆಹೋವನಿಗೆ ಅರ್ಪಿಸಬೇಕು. ಇಲ್ಲವಾದರೆ ಅವನನ್ನು ಅವನ ಕುಲದಿಂದ ತೆಗೆದುಹಾಕಬೇಕು.

10 “ರಕ್ತವನ್ನು ತಿನ್ನುವ ಪ್ರತಿಯೊಬ್ಬನಿಗೂ ನಾನು ವಿರುದ್ಧವಾಗಿರುವೆನು. ಅವನು ನಿಮ್ಮ ಮಧ್ಯದಲ್ಲಿ ವಾಸವಾಗಿರುವ ಇಸ್ರೇಲನಾಗಲಿ ಪರದೇಶಸ್ಥನಾಗಲಿ ಆಗಿರಬಹುದು. ನಾನು ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕುವೆನು. 11 ಯಾಕೆಂದರೆ ದೇಹದ ಜೀವ ರಕ್ತದಲ್ಲಿದೆ. ನೀವು ನಿಮಗೋಸ್ಕರವಾಗಿ ಯಜ್ಞವೇದಿಕೆಯ ಮೇಲೆ ಪ್ರಾಯಶ್ಚಿತ್ತ ಮಾಡಲಿ ಎಂದು ನಾನು ಅದನ್ನು ನಿಮಗೆ ಕೊಟ್ಟಿದ್ದೇನೆ. ನೀವು ನಿಮಗೋಸ್ಕರವಾಗಿ ಪ್ರಾಯಶ್ಚಿತ್ತ ಮಾಡಲು ಈ ನಿಯಮಗಳನ್ನು ಉಪಯೋಗಿಸಬೇಕು. ಒಬ್ಬನ ಜೀವಕ್ಕೆ ರಕ್ತವೇ ಪ್ರಾಯಶ್ಚಿತ್ತವಾಗಿದೆ. ಜೀವಿಯೊಂದನ್ನು ಕೊಂದಿದ್ದರ ಬೆಲೆಯಾಗಿ ನೀವು ನನಗೆ ಆ ರಕ್ತವನ್ನು ಕೊಡಬೇಕು. 12 ಆದ್ದರಿಂದ ನಾನು ಇಸ್ರೇಲರಿಗೆ ಹೇಳುವುದೇನೆಂದರೆ: ನಿಮ್ಮಲ್ಲಿ ಯಾವನೂ ರಕ್ತಭೋಜನ ಮಾಡಬಾರದು ಮತ್ತು ನಿಮ್ಮ ಮಧ್ಯದಲ್ಲಿ ವಾಸಿಸುವ ಯಾವ ಪರದೇಶಸ್ಥನೂ ರಕ್ತಭೋಜನ ಮಾಡಬಾರದು.

13 “ಯಾವನಾದರೂ ಒಂದು ಪ್ರಾಣಿಯನ್ನು ಬೇಟೆಯಾಡಿದರೆ ಅಥವಾ ಪಕ್ಷಿಯನ್ನು ಹಿಡಿದರೆ, ಅವನು ಅದರ ರಕ್ತವನ್ನು ನೆಲದ ಮೇಲೆ ಸುರಿದು ಅದನ್ನು ಮಣ್ಣಿನಿಂದ ಮುಚ್ಚಿಬಿಡಬೇಕು. ಅವನು ಇಸ್ರೇಲನಾದರೂ ನಿಮ್ಮ ಮಧ್ಯದಲ್ಲಿ ವಾಸಿಸುವ ಪರದೇಶಸ್ಥನಾದರೂ ಹಾಗೆಯೇ ಮಾಡಬೇಕು. 14 ನೀವು ಇದನ್ನು ಯಾಕೆ ಮಾಡಬೇಕೆಂದರೆ, ಮಾಂಸದಲ್ಲಿ ರಕ್ತವು ಇನ್ನೂ ಇದ್ದರೆ, ಅದರ ಪ್ರಾಣವು ಇನ್ನೂ ಮಾಂಸದಲ್ಲಿ ಇದೆ. ಆದ್ದರಿಂದ ನಾನು ಇಸ್ರೇಲರಿಗೆ ಈ ಅಪ್ಪಣೆಯನ್ನು ಕೊಡುತ್ತೇನೆ. ರಕ್ತದಿಂದ ಕೂಡಿರುವ ಮಾಂಸವನ್ನು ತಿನ್ನಬಾರದು. ಯಾವನಾದರೂ ರಕ್ತ ಭೋಜನ ಮಾಡಿದರೆ, ಅವನು ತನ್ನ ಜನರಿಂದ ತೆಗೆದುಹಾಕಲ್ಪಡಬೇಕು.

15 “ಅಲ್ಲದೆ ಯಾವನಾದರೂ ತನ್ನಷ್ಟಕ್ಕೆ ಸತ್ತ ಪ್ರಾಣಿಯನ್ನು ತಿಂದರೆ ಅಥವಾ ಬೇರೆ ಪ್ರಾಣಿಯಿಂದ ಕೊಲ್ಲಲ್ಪಟ್ಟ ಪ್ರಾಣಿಯನ್ನು ತಿಂದರೆ, ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿಕೊಳ್ಳಬೇಕು. ಅವನು ಇಸ್ರೇಲನಾಗಿದ್ದರೂ ನಿಮ್ಮ ಮಧ್ಯದಲ್ಲಿ ವಾಸಿಸುವ ಪರದೇಶಸ್ಥನಾಗಿದ್ದರೂ ಹಾಗೆಯೇ ಮಾಡಬೇಕು. 16 ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳದೆಯೂ ಸ್ನಾನ ಮಾಡಿಕೊಳ್ಳದೆಯೂ ಹೋದರೆ ಆಗ ಅವನು ಪಾಪಮಾಡಿದ ದೋಷಿಯಾಗಿರುವನು.”

ಲೈಂಗಿಕ ಸಂಬಂಧಗಳ ನಿಯಮಗಳು

18 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಹೇಳು: ನಾನು ನಿಮ್ಮ ದೇವರಾಗಿರುವ ಯೆಹೋವನು. ಹಿಂದೆ ನೀವು ಈಜಿಪ್ಟಿನಲ್ಲಿ ವಾಸಿಸಿದಿರಿ. ಈಜಿಪ್ಟಿನ ಜನರು ಆಚರಿಸುವ ಆಚಾರಗಳನ್ನು ನೀವು ಅನುಸರಿಸಬಾರದು. ಆ ದೇಶದಲ್ಲಿ ಮಾಡುತ್ತಿದ್ದ ಕಾರ್ಯಗಳನ್ನು ನೀವು ಮಾಡಬಾರದು. ನಾನು ನಿಮ್ಮನ್ನು ಕಾನಾನಿಗೆ ನಡೆಸುತ್ತಿದ್ದೇನೆ. ಆ ದೇಶದಲ್ಲಿ ಮಾಡುವ ಕಾರ್ಯಗಳನ್ನು ನೀವು ಮಾಡಕೂಡದು. ಅವರ ಸಂಪ್ರದಾಯಗಳನ್ನು ಅನುಸರಿಸಬೇಡಿ. ನೀವು ನನ್ನ ನಿಯಮಗಳಿಗೆ ವಿಧೇಯರಾಗಿ ನನ್ನ ಕಟ್ಟಳೆಗಳನ್ನು ಅನುಸರಿಸಬೇಕು. ಆ ನಿಯಮಗಳನ್ನು ತಪ್ಪದೆ ಪಾಲಿಸಿರಿ. ಯಾಕೆಂದರೆ ನಾನು ನಿಮ್ಮ ದೇವರಾದ ಯೆಹೋವನು. ಆದ್ದರಿಂದ ನೀವು ನನ್ನ ಕಟ್ಟಳೆಗಳಿಗೆ ಮತ್ತು ನಿಯಮಗಳಿಗೆ ವಿಧೇಯರಾಗಬೇಕು. ಒಬ್ಬನು ನನ್ನ ಕಟ್ಟಳೆಗಳಿಗೆ ಮತ್ತು ನಿಯಮಗಳಿಗೆ ವಿಧೇಯನಾದರೆ, ಅವನು ಜೀವಿಸುವನು! ನಾನೇ ಯೆಹೋವನು!

“ನೀವು ಎಂದಿಗೂ ನಿಮ್ಮ ಹತ್ತಿರದ ಸಂಬಂಧಿಗಳೊಂದಿಗೆ ಲೈಂಗಿಕ ಸಂಬಂಧ[b] ಮಾಡಬಾರದು. ನಾನೇ ಯೆಹೋವನು!

“ತಾಯಿಯೊಂದಿಗೆ ಲೈಂಗಿಕ ಸಂಬಂಧ ಮಾಡಿ ನಿಮ್ಮ ತಂದೆಗೆ ಎಂದಿಗೂ ಅವಮಾನ ತರಬಾರದು. ಆಕೆ ನಿಮ್ಮ ತಾಯಿಯಾಗಿದ್ದಾಳೆ. ನೀವು ಆಕೆಯೊಂದಿಗೆ ಎಂದಿಗೂ ಲೈಂಗಿಕ ಸಂಬಂಧ ಮಾಡಬಾರದು. ಮಲತಾಯಿಯೊಂದಿಗೂ ಲೈಂಗಿಕ ಸಂಬಂಧ ಮಾಡಬಾರದು. ಅದು ನಿಮ್ಮ ತಂದೆಗೆ ಅವಮಾನ ತರುವುದು.

“ಸಹೋದರಿಯೊಂದಿಗೆ, ಅಂದರೆ ನಿಮ್ಮ ತಂದೆ ಅಥವಾ ತಾಯಿಯ ಮಗಳೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ನಿಮ್ಮ ಸಹೋದರಿಯು ನಿಮ್ಮ ಮನೆಯಲ್ಲಾಗಲಿ[c] ಅಥವಾ ಇನ್ನೊಂದು ಸ್ಥಳದಲ್ಲಾಗಲಿ ಹುಟ್ಟಿದರೂ ಆಕೆಯೊಡನೆ ಲೈಂಗಿಕ ಸಂಬಂಧ ಮಾಡಬಾರದು.

10 “ನೀವು ನಿಮ್ಮ ಮೊಮ್ಮಗಳೊಡನೆ ಲೈಂಗಿಕ ಸಂಬಂಧ ಮಾಡಬಾರದು. ಅದು ನಿಮಗೆ ಅವಮಾನ ತರುವುದು.

11 “ತಂದೆಗೆ ಮತ್ತು ಅವನ ಹೆಂಡತಿಗೆ ಒಬ್ಬ ಮಗಳಿದ್ದರೆ, ಆಕೆ ನಿಮ್ಮ ಸಹೋದರಿಯಾಗಿದ್ದಾಳೆ. ನೀವು ಆಕೆಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು.

12 “ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಆಕೆಯು ನಿಮ್ಮ ತಂದೆಯ ಹತ್ತಿರದ ಸಂಬಂಧಿ. 13 ತಾಯಿಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಆಕೆಯು ನಿಮ್ಮ ತಾಯಿಯ ಹತ್ತಿರದ ಸಂಬಂಧಿಯಾಗಿದ್ದಾಳೆ. 14 ನೀವು ನಿಮ್ಮ ತಂದೆಯ ಸಹೋದರನ ಹೆಂಡತಿಯೊಡನೆ ಲೈಂಗಿಕ ಸಂಬಂಧವಿಟ್ಟುಕೊಂಡರೆ ಅವನನ್ನು ಅವಮಾನಪಡಿಸಿದಂತಾಗುವುದು. ಯಾಕೆಂದರೆ ಆಕೆಯು ನಿಮ್ಮ ದೊಡ್ಡಮ್ಮ ಅಥವಾ ಚಿಕ್ಕಮ್ಮ.

15 “ಸೊಸೆಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಆಕೆಯು ನಿಮ್ಮ ಮಗನ ಹೆಂಡತಿ.

16 “ಸಹೋದರನ ಹೆಂಡತಿಯೊಡನೆ ಲೈಂಗಿಕ ಸಂಬಂಧ ಮಾಡಬಾರದು. ಅಂಥ ಸಂಬಂಧವು ನಿಮ್ಮ ಸಹೋದರನಿಗೆ ಅವಮಾನವನ್ನು ಉಂಟುಮಾಡುವುದು.

17 “ಒಬ್ಬ ಸ್ತ್ರೀಯೊಡನೆಯೂ ಆಕೆಯ ಮಗಳೊಡನೆಯೂ ಲೈಂಗಿಕ ಸಂಬಂಧ ಮಾಡಬಾರದು. ಆ ಸ್ತ್ರೀಯ ಮೊಮ್ಮಗಳೊಡನೆಯೂ ಲೈಂಗಿಕ ಸಂಬಂಧ ಮಾಡಬಾರದು. ಈ ಮೊಮ್ಮಗಳು ಈ ಸ್ತ್ರೀಯ ಮಗನ ಅಥವಾ ಮಗಳ ಮಗಳಾಗಿರಬಹುದು. ಆಕೆಯ ಮೊಮ್ಮಕ್ಕಳಾದ ಹೆಣ್ಣುಮಕ್ಕಳು ಆಕೆಯ ಹತ್ತಿರದ ಸಂಬಂಧಿಕರಾಗಿದ್ದಾರೆ. ಆಕೆಯೊಡನೆ ಲೈಂಗಿಕ ಸಂಬಂಧ ಮಾಡುವುದು ತಪ್ಪು.

18 “ಹೆಂಡತಿ ಇನ್ನೂ ಜೀವದಿಂದಿರುವಾಗ, ಆಕೆಯ ಸಹೋದರಿಯನ್ನು ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು. ಇಲ್ಲವಾದರೆ ಆ ಇಬ್ಬರು ಸಹೋದರಿಯರು ಒಬ್ಬರಿಗೊಬ್ಬರು ವೈರಿಗಳಾಗುವರು. ಹೆಂಡತಿಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು.

19 “ಅಲ್ಲದೆ ಸ್ತ್ರೀಯು ಮುಟ್ಟಿನಿಂದ ಅಶುದ್ಧಳಾಗಿರುವಾಗ ಲೈಂಗಿಕ ಸಂಬಂಧಕ್ಕಾಗಿ ಆಕೆಯ ಹತ್ತಿರ ಹೋಗಬಾರದು.

20 “ನೆರೆಯವನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಇಂಥ ಸಂಬಂಧವು ನಿಮ್ಮನ್ನು ಅಶುದ್ಧರನ್ನಾಗಿ ಮಾಡುವುದು.

21 “ನೀವು ನಿಮ್ಮ ಯಾವ ಮಕ್ಕಳನ್ನೂ ಅಗ್ನಿಯ ಮೂಲಕ ಮೊಲೆಕನಿಗೆ ಕೊಡಬಾರದು. ಇಲ್ಲವಾದರೆ ನೀವು ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡುವಿರಿ. ನಾನೇ ಯೆಹೋವನು!

22 “ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು. ಅದು ಭಯಂಕರ ಪಾಪ!

23 “ಪಶುವಿನೊಡನೆ ಲೈಂಗಿಕ ಸಂಬಂಧ ಮಾಡಬಾರದು. ಇಂಥ ಸಂಬಂಧವು ನಿಮ್ಮನ್ನು ಅಪವಿತ್ರರನ್ನಾಗಿ ಮಾಡುವುದು. ಅಲ್ಲದೆ ಸ್ತ್ರೀಯು ಪಶುವಿನೊಡನೆ ಲೈಂಗಿಕ ಸಂಬಂಧ ಪಡೆಯಬಾರದು. ಇಂಥ ಸಂಬಂಧ ಸ್ವಭಾವಕ್ಕೆ ವಿರುದ್ದವಾದದ್ದು.

24 “ಆ ದುರಾಚಾರಗಳಲ್ಲಿ ಯಾವುದರಿಂದಲೂ ನಿಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಬೇಡಿರಿ. ನಾನು ಜನಾಂಗಗಳನ್ನು ಅವರ ದೇಶಗಳಿಂದ ಹೊರಡಿಸಿ ಅವರ ದೇಶವನ್ನು ನಿಮಗೆ ಕೊಡುತ್ತಿದ್ದೇನೆ. ಯಾಕೆಂದರೆ ಅವರು ಅಂಥ ಭಯಂಕರ ಪಾಪಗಳನ್ನು ಮಾಡಿದರು. 25 ಆದ್ದರಿಂದ ದೇಶವು ಸಹ ಅಶುದ್ಧವಾಯಿತು. ಆದ್ದರಿಂದ ನಾನು ಅದನ್ನು ಅದರ ಪಾಪಗಳಿಗಾಗಿ ದಂಡಿಸಿದೆನು. ಆ ದೇಶವು ತನ್ನಲ್ಲಿ ವಾಸಿಸಿದ ಜನರನ್ನು ಕಾರಿಬಿಟ್ಟಿತು.

26 “ಆದ್ದರಿಂದ ನೀವು ನನ್ನ ಕಟ್ಟಳೆಗಳಿಗೂ ನಿಯಮಗಳಿಗೂ ಆಜ್ಞಾವಿಧಿಗಳಿಗೂ ವಿಧೇಯರಾಗಬೇಕು. ನೀವು ಆ ಭಯಂಕರ ಪಾಪಗಳಲ್ಲಿ ಯಾವುದನ್ನೂ ಮಾಡಬಾರದು. ಆ ವಿಧಿಗಳು ಇಸ್ರೇಲರಿಗಾಗಿ ಮತ್ತು ನಿಮ್ಮ ಮಧ್ಯದಲ್ಲಿ ವಾಸಿಸುವ ಅನ್ಯಜನರಿಗಾಗಿ ಇರುತ್ತವೆ. 27 ನಿಮಗಿಂತ ಮುಂಚೆ ಈ ದೇಶದಲ್ಲಿ ವಾಸಿಸಿದ ಜನರು ಆ ಭಯಂಕರ ಕೃತ್ಯಗಳನ್ನು ಮಾಡಿದರು. ಆದ್ದರಿಂದ ದೇಶವು ಹೊಲೆಯಾಯಿತು. 28 ನೀವು ಈ ಕಾರ್ಯಗಳನ್ನು ಮಾಡಿದರೆ, ನೀವು ಆ ದೇಶವನ್ನು ಹೊಲೆಮಾಡುವಿರಿ. ಅದು ಮೊದಲು ವಾಸಿಸಿದ ಜನಾಂಗಗಳನ್ನು ಕಾರಿಬಿಟ್ಟಂತೆ ನಿಮ್ಮನ್ನೂ ಕಾರಿಬಿಡುವುದು. 29 ಯಾವನಾದರೂ ಆ ಭಯಂಕರ ಪಾಪಗಳಲ್ಲಿ ಯಾವುದನ್ನಾದರೂ ಮಾಡಿದರೆ, ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕಬೇಕು. 30 ಅನ್ಯಜನರು ಆ ಭಯಂಕರ ಪಾಪಗಳನ್ನು ಮಾಡಿದ್ದಾರೆ. ಆದರೆ ನೀವು ನನ್ನ ಕಟ್ಟಳೆಗಳಿಗೆ ವಿಧೇಯರಾಗಬೇಕು. ನೀವು ಆ ಭಯಂಕರ ಪಾಪಗಳಲ್ಲಿ ಯಾವುದನ್ನೂ ಮಾಡಬಾರದು. ಆ ಭಯಂಕರ ಪಾಪಗಳಿಂದ ನಿಮ್ಮನ್ನು ಹೊಲೆ ಮಾಡಿಕೊಳ್ಳಬೇಡಿರಿ. ನಾನೇ ನಿಮ್ಮ ದೇವರಾದ ಯೆಹೋವನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International