Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 1-4

ಯಜ್ಞಗಳು ಮತ್ತು ಕಾಣಿಕೆಗಳು

ಯೆಹೋವನು ಮೋಶೆಯನ್ನು ಕರೆದು ದೇವದರ್ಶನಗುಡಾರದೊಳಗಿಂದ ಅವನ ಸಂಗಡ ಮಾತಾಡಿದನು. ಯೆಹೋವನು ಹೀಗೆ ಹೇಳಿದನು: “ಇಸ್ರೇಲರಿಗೆ ನೀನು ಹೇಳಬೇಕಾದದ್ದೇನೆಂದರೆ, ನೀವು ಯೆಹೋವನಿಗೆ ಯಜ್ಞವನ್ನು ಕಾಣಿಕೆಯಾಗಿ ಅರ್ಪಿಸುವುದಾದರೆ ನೀವು ಸಾಕಿದ ಪಶುಗಳನ್ನೇ ಅರ್ಪಿಸಬೇಕು. ಅದು ದನವಾಗಲಿ ಕುರಿಯಾಗಲಿ ಆಡಾಗಲಿ ಆಗಿರಬಹುದು.

“ಒಬ್ಬನು ತನ್ನ ದನಗಳಲ್ಲಿ ಒಂದನ್ನು ಸರ್ವಾಂಗಹೋಮವಾಗಿ ಅರ್ಪಿಸಬಯಸಿದರೆ ಆ ಪಶುವು ಯಾವ ದೋಷವಿಲ್ಲದ ಹೋರಿಯಾಗಿರಬೇಕು. ಅವನು ಆ ಪಶುವನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಆಗ ಯೆಹೋವನು ಆ ಸಮರ್ಪಣೆಯನ್ನು ಮೆಚ್ಚಿಕೊಳ್ಳುವನು. ಅವನು ತನ್ನ ಕೈಯನ್ನು ಪ್ರಾಣಿಯ ತಲೆಯ ಮೇಲಿಡಬೇಕು. ಆ ವ್ಯಕ್ತಿಯ ದೋಷಪರಿಹಾರಕ್ಕಾಗಿ ಯೆಹೋವನು ಆ ಸರ್ವಾಂಗಹೋಮವನ್ನು ಸ್ವೀಕರಿಸುವನು.

“ಅವನು ಹೋರಿಯನ್ನು ಯೆಹೋವನ ಸನ್ನಿಧಿಯಲ್ಲಿ ವಧಿಸಬೇಕು. ಬಳಿಕ ಯಾಜಕರಾದ ಆರೋನನ ಪುತ್ರರು ರಕ್ತವನ್ನು ದೇವದರ್ಶನಗುಡಾರದ ಬಾಗಿಲಿನ ಹತ್ತಿರವಿರುವ ಯಜ್ಞವೇದಿಕೆಯ ಬಳಿಗೆ ತರಬೇಕು; ರಕ್ತವನ್ನು ಸುತ್ತಲೂ ಯಜ್ಞವೇದಿಕೆಯ ಮೇಲೆ ಚಿಮಿಕಿಸಬೇಕು. ಯಾಜಕನು ಆ ಪಶುವಿನ ಚರ್ಮವನ್ನು ಸುಲಿದು, ಪಶುವನ್ನು ತುಂಡುತುಂಡುಗಳಾಗಿ ಕಡಿಯಬೇಕು. ಯಾಜಕರಾದ ಆರೋನನ ಪುತ್ರರು ವೇದಿಕೆಯ ಮೇಲೆ ಬೆಂಕಿಯನ್ನಿಟ್ಟು ಅದರ ಮೇಲೆ ಕಟ್ಟಿಗೆಯನ್ನು ಇಡಬೇಕು. ಆರೋನನ ವಂಶದವರಾದ ಯಾಜಕರು ವೇದಿಕೆಯ ಮೇಲೆ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ಪಶುವಿನ ತುಂಡುಗಳನ್ನೂ ತಲೆ ಮತ್ತು ಕೊಬ್ಬನ್ನೂ ಇಡಬೇಕು. ಯಾಜಕನು ಪಶುವಿನ ಕಾಲುಗಳನ್ನು ಮತ್ತು ಒಳಗಿನ ಭಾಗಗಳನ್ನು ನೀರಿನಿಂದ ತೊಳೆದು ಈ ಎಲ್ಲಾ ಭಾಗಗಳನ್ನು ವೇದಿಕೆಯ ಮೇಲೆ ಹೋಮಮಾಡಬೇಕು. ಈ ಸರ್ವಾಂಗಹೋಮದ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

10 “ಒಬ್ಬನು ಕುರಿಯನ್ನಾಗಲಿ ಆಡನ್ನಾಗಲಿ ಸರ್ವಾಂಗಹೋಮವಾಗಿ ಅರ್ಪಿಸುವಾಗ, ಆ ಪ್ರಾಣಿಯು ಯಾವ ದೋಷವಿಲ್ಲದ ಗಂಡಾಗಿರಬೇಕು. 11 ಅವನು ಯೆಹೋವನ ಸನ್ನಿಧಿಯಲ್ಲಿ ಅಂದರೆ ವೇದಿಕೆಯ ಉತ್ತರ ಭಾಗದಲ್ಲಿ ಪಶುವನ್ನು ವಧಿಸಬೇಕು. ಬಳಿಕ ಯಾಜಕರಾದ ಆರೋನನ ಪುತ್ರರು ರಕ್ತವನ್ನು ವೇದಿಕೆಯ ಮೇಲೆ ಸುತ್ತಲೂ ಚಿಮಿಕಿಸಬೇಕು. 12 ಬಳಿಕ ಯಾಜಕನು ಆ ಪಶುವನ್ನು ತುಂಡುತುಂಡುಗಳಾಗಿ ಕತ್ತರಿಸಬೇಕು. ಯಾಜಕನು ವೇದಿಕೆಯ ಮೇಲೆ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ತುಂಡುಗಳನ್ನೂ ತಲೆ ಮತ್ತು ಕೊಬ್ಬನ್ನೂ ಇಡಬೇಕು. 13 ಯಾಜಕನು ಪಶುವಿನ ಕಾಲುಗಳನ್ನೂ ಒಳಗಿನ ಭಾಗಗಳನ್ನೂ ನೀರಿನಿಂದ ತೊಳೆಯಬೇಕು. ಬಳಿಕ ಯಾಜಕನು ಪಶುವಿನ ಈ ಎಲ್ಲಾ ಭಾಗಗಳನ್ನೂ ವೇದಿಕೆಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಸಮರ್ಪಿಸಲ್ಪಟ್ಟ ಸರ್ವಾಂಗಹೋಮವಾಗಿರುತ್ತದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

14 “ಒಬ್ಬನು ಪಕ್ಷಿಯನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಅರ್ಪಿಸುವಾಗ ಆ ಪಕ್ಷಿಯು ಬೆಳೆವಕ್ಕಿಯಾಗಲಿ ಪಾರಿವಾಳದ ಮರಿಯಾಗಲಿ ಆಗಿರಬೇಕು. 15 ಯಾಜಕನು ಅದನ್ನು ವೇದಿಕೆಯ ಬಳಿಗೆ ತರಬೇಕು. ಯಾಜಕನು ಪಕ್ಷಿಯ ಕುತ್ತಿಗೆಯನ್ನು ಮುರಿದು ವೇದಿಕೆಯ ಮೇಲೆ ಹೋಮಮಾಡಬೇಕು. ಪಕ್ಷಿಯ ರಕ್ತವು ವೇದಿಕೆಯ ಪಾರ್ಶ್ವದಲ್ಲಿ ಹಿಂಡಲ್ಪಡಬೇಕು. 16 ಯಾಜಕನು ಪಕ್ಷಿಯ ಕರುಳುಗಳನ್ನು ಮತ್ತು ಗರಿಗಳನ್ನು ತೆಗೆದು ಅವುಗಳನ್ನು ವೇದಿಕೆಯ ಪೂರ್ವದಿಕ್ಕಿನಲ್ಲಿ ಬಿಸಾಡಬೇಕು. ಈ ಸ್ಥಳವು ವೇದಿಕೆಯಿಂದ ತೆಗೆದ ಬೂದಿಯನ್ನು ಹಾಕುವ ಸ್ಥಳವಾಗಿದೆ. 17 ತರುವಾಯ ಯಾಜಕನು ಪಕ್ಷಿಯ ರೆಕ್ಕೆಗಳನ್ನು ಕಿತ್ತುಹಾಕಬೇಕು. ಆದರೆ ಅವನು ಪಕ್ಷಿಯನ್ನು ಎರಡು ಭಾಗಗಳಾಗಿ ವಿಭಾಗಿಸಬಾರದು. ಯಾಜಕನು ಪಕ್ಷಿಯನ್ನು ವೇದಿಕೆಯ ಮೇಲೆ ಬೆಂಕಿಯಲ್ಲಿರುವ ಕಟ್ಟಿಗೆಗಳ ಮೇಲಿಟ್ಟು ಹೋಮಮಾಡಬೇಕು. ಇದು ಅಗ್ನಿಯ ಮೂಲಕ ಸಮರ್ಪಣೆಯಾದ ಸರ್ವಾಂಗಹೋಮವಾಗಿದೆ. ಅದರ ಸುವಾಸನೆ ಯೆಹೋವನಿಗೆ ಪ್ರಿಯವಾಗಿದೆ.

ಧಾನ್ಯಸಮರ್ಪಣೆಗಳು

“ಒಬ್ಬನು ದೇವರಾದ ಯೆಹೋವನಿಗೆ ಧಾನ್ಯಸಮರ್ಪಣೆ ಮಾಡಬೇಕೆಂದಿದ್ದರೆ, ಅದು ಗೋಧಿಹಿಟ್ಟಾಗಿರಬೇಕು. ಅವನು ಈ ಹಿಟ್ಟಿನ ಮೇಲೆ ಎಣ್ಣೆಯನ್ನು ಹೊಯಿದು, ಧೂಪವನ್ನಿಡಬೇಕು. ಬಳಿಕ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಯಾಜಕನು ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ ಧೂಪವೆಲ್ಲವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಅದನ್ನು ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. ಧಾನ್ಯಸಮರ್ಪಣೆಯಲ್ಲಿ ಉಳಿದ ಭಾಗವು ಆರೋನನಿಗೂ ಅವನ ಪುತ್ರರಿಗೂ ಸೇರಿದ್ದಾಗಿವೆ. ಅಗ್ನಿಯ ಮೂಲಕ ಯೆಹೋವನಿಗೆ ಮಾಡಿದ ಈ ಸಮರ್ಪಣೆಯು ಮಹಾಪರಿಶುದ್ಧವಾಗಿದೆ.

ಬೇಯಿಸಿದ ಧಾನ್ಯಸಮರ್ಪಣೆಗಳು

“ಒಬ್ಬನು ಒಲೆಯಲ್ಲಿ ಬೇಯಿಸಿದ ಧಾನ್ಯನೈವೇದ್ಯವನ್ನು ಅರ್ಪಿಸಿದರೆ, ಆಗ ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಯಾಗಲಿ ಅಥವಾ ಎಣ್ಣೆ ಹೊಯಿದು ಮಾಡಿದ ಕಡುಬುಗಳಾಗಲಿ ಆಗಿರಬೇಕು. ನಿಮ್ಮ ಧಾನ್ಯನೈವೇದ್ಯವು ಕಬ್ಬಿಣದ ಹಂಚಿನಲ್ಲಿ ಬೇಯಿಸಲ್ಪಟ್ಟಿದ್ದರೆ, ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಶ್ರೇಷ್ಠ ಹಿಟ್ಟಿನಿಂದ ಮಾಡಿದ್ದಾಗಿರಬೇಕು. ನೀವು ಅದನ್ನು ಚೂರುಚೂರುಗಳಾಗಿ ಮುರಿದು ಅದರ ಮೇಲೆ ಎಣ್ಣೆ ಹೊಯ್ಯಬೇಕು. ಅದು ಧಾನ್ಯನೈವೇದ್ಯವಾಗಿದೆ. ನೀವು ಬಾಂಡ್ಲಿಯಲ್ಲಿ ಪಕ್ವಮಾಡಿದ ಪದಾರ್ಥವನ್ನು ಅರ್ಪಿಸಿದರೆ, ಅದು ಎಣ್ಣೆ ಬೆರೆಸಿದ ಶ್ರೇಷ್ಠ ಗೋಧಿಹಿಟ್ಟಿನಿಂದ ಮಾಡಿದ್ದಾಗಿರಬೇಕು.

“ನೀವು ಈ ವಸ್ತುಗಳಿಂದ ಮಾಡಿದ ಧಾನ್ಯನೈವೇದ್ಯಗಳನ್ನು ಯೆಹೋವನಿಗೆ ಅರ್ಪಿಸುವುದಾದರೆ ನೀವು ಆ ವಸ್ತುಗಳನ್ನು ಯಾಜಕನ ಬಳಿಗೆ ತೆಗೆದುಕೊಂಡು ಹೋಗಬೇಕು. ಅವನು ಅದನ್ನು ವೇದಿಕೆಯ ಮೇಲಿಡುವನು. ಬಳಿಕ ಯಾಜಕನು ಧಾನ್ಯನೈವೇದ್ಯದ ಸ್ವಲ್ಪ ಭಾಗವನ್ನು ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಹೋಮಮಾಡುವನು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. 10 ಧಾನ್ಯನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಅವನ ಪುತ್ರರಿಗೂ ಸೇರುವುದು. ಅಗ್ನಿಯ ಮೂಲಕ ಯೆಹೋವನಿಗೆ ಮಾಡಿದ ಈ ನೈವೇದ್ಯವು ಮಹಾಪರಿಶುದ್ಧವಾಗಿದೆ.

11 “ನೀವು ಹುಳಿಹಿಟ್ಟಿನಿಂದ ಮಾಡಿದ[a] ಯಾವದನ್ನೂ ಯೆಹೋವನಿಗೆ ಧಾನ್ಯಸಮರ್ಪಣೆಯಾಗಿ ಕೊಡಬಾರದು. ನೀವು ಹುಳಿಯನ್ನಾಗಲಿ ಜೇನುತುಪ್ಪವನ್ನಾಗಲಿ ಯೆಹೋವನಿಗೆ ಅಗ್ನಿಯ ಮೂಲಕ ಹೋಮಮಾಡಬಾರದು. 12 ನೀವು ಹುಳಿಯನ್ನು ಮತ್ತು ಜೇನುತುಪ್ಪವನ್ನು ಪ್ರಥಮಫಲವಾಗಿ ಅರ್ಪಿಸಬಹುದು. ಆದರೆ ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಕೂಡದು. 13 ನೀವು ಅರ್ಪಿಸುವ ಪ್ರತಿ ಧಾನ್ಯಸಮರ್ಪಣೆಯಲ್ಲೂ ಉಪ್ಪನ್ನು ಹಾಕಬೇಕು. ನಿಮ್ಮ ಧಾನ್ಯಸಮರ್ಪಣೆಯಲ್ಲಿ ದೇವರ ಒಡಂಬಡಿಕೆಯೆಂಬ ಉಪ್ಪು ಇರಲೇಬೇಕು. ನೀವು ಅರ್ಪಿಸುವ ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉಪ್ಪನ್ನು ಸೇರಿಸಬೇಕು.”

ಪ್ರಥಮಫಲದ ನೈವೇದ್ಯಗಳು

14 “ನೀವು ಪ್ರಥಮಫಲವನ್ನು ಯೆಹೋವನಿಗೆ ನೈವೇದ್ಯವಾಗಿ ಅರ್ಪಿಸುವಾಗ ಬೆಂಕಿಯಲ್ಲಿ ಸುಟ್ಟ ಗೋಧಿತೆನೆಗಳನ್ನು ತರಬೇಕು. ಅವುಗಳು ಜಜ್ಜಲ್ಪಟ್ಟ ಹಸಿ ತೆನೆಗಳಾಗಿರಬೇಕು. ಇದು ನಿಮ್ಮ ಪ್ರಥಮಫಲ ನೈವೇದ್ಯವಾಗಿರುವುದು. 15 ನೀವು ಅದಕ್ಕೆ ಎಣ್ಣೆಯನ್ನು ಹಾಕಿ ಅದರ ಮೇಲೆ ಧೂಪವನ್ನಿಡಬೇಕು. ಅದು ಧಾನ್ಯಸಮರ್ಪಣೆಯಾಗಿದೆ. 16 ಯಾಜಕನು ಜಜ್ಜಿದ ಧಾನ್ಯದಲ್ಲಿ ಒಂದು ಭಾಗವನ್ನೂ ಎಣ್ಣೆಯನ್ನೂ ಎಲ್ಲಾ ಧೂಪವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಹೋಮಮಾಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಯಾಗಿದೆ.

ಸಮಾಧಾನಯಜ್ಞವನ್ನು ಅರ್ಪಿಸುವ ಕ್ರಮ

“ಯಾವನಾದರೂ ಸಮಾಧಾನಯಜ್ಞ ಮಾಡಬೇಕಾದರೆ ಅವನು ತನ್ನ ಪಶುಮಂದೆಯಿಂದ ಗಂಡುಪಶುವನ್ನಾಗಲಿ ಹೆಣ್ಣುಪಶುವನ್ನಾಗಲಿ ಅರ್ಪಿಸಬಹುದು. ಯೆಹೋವನ ಎದುರಿನಲ್ಲಿ ಅರ್ಪಿಸಲ್ಪಡುವ ಅದು ಅಂಗದೋಷವಿಲ್ಲದ್ದಾಗಿರಬೇಕು. ಆ ವ್ಯಕ್ತಿಯು ತನ್ನ ಕೈಯನ್ನು ಪಶುವಿನ ತಲೆಯ ಮೇಲಿಟ್ಟು ದೇವದರ್ಶನಗುಡಾರದ ಬಾಗಿಲಲ್ಲಿ ಅದನ್ನು ವಧಿಸಬೇಕು. ಬಳಿಕ ಯಾಜಕರಾದ ಆರೋನನ ಪುತ್ರರು ಆ ರಕ್ತವನ್ನು ಯಜ್ಞವೇದಿಕೆಯ ಮೇಲೆ ಸುತ್ತಲೂ ಚಿಮಿಕಿಸಬೇಕು. 3-4 ಆ ಯಜ್ಞಪಶುವಿನ ವಪೆಯನ್ನೂ ಕರುಳುಗಳ ಮೇಲಿನ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ತೆಗೆದು ಪಿತ್ತಕೋಶದ ಹತ್ತಿರ ಮೂತ್ರಪಿಂಡಗಳವರೆಗೆ ಇರುವ ಕೊಬ್ಬನ್ನೂ ತೆಗೆದು ಯೆಹೋವನಿಗೆ ಹೋಮಮಾಡಬೇಕು. ಬಳಿಕ ಆರೋನನ ಪುತ್ರರು ಕೊಬ್ಬನ್ನು ವೇದಿಕೆಗೆ ತಂದು ಅದನ್ನು ಬೆಂಕಿಯಲ್ಲಿ ಕಟ್ಟಿಗೆಯ ಮೇಲಿರುವ ಸರ್ವಾಂಗಹೋಮದ ಮೇಲಿಡಬೇಕು. ಅದು ಅಗ್ನಿಯ ಮೂಲಕ ಅರ್ಪಿಸುವ ಹೋಮವಾಗಿರುತ್ತದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

“ಒಬ್ಬನು ಕುರಿಯನ್ನಾಗಲಿ ಆಡನ್ನಾಗಲಿ ಯೆಹೋವನಿಗೆ ಸಮಾಧಾನಯಜ್ಞವಾಗಿ ಕೊಡುವಾಗ, ಆ ಪಶುವಿನಲ್ಲಿ ಯಾವ ದೋಷವೂ ಇರಬಾರದು. ಅದು ಗಂಡು ಅಥವಾ ಹೆಣ್ಣಾಗಿರಬಹುದು. ಅವನು ಕುರಿಮರಿಯನ್ನು ಅರ್ಪಿಸುವುದಾದರೆ, ಅದನ್ನು ಯೆಹೋವನ ಸನ್ನಿಧಿಗೆ ತರಬೇಕು. ಅವನು ತನ್ನ ಕೈಯನ್ನು ಪಶುವಿನ ಮೇಲಿಟ್ಟು ದೇವದರ್ಶನಗುಡಾರದ ಮುಂದೆ ಅದನ್ನು ವಧಿಸಬೇಕು. ತರುವಾಯ ಆರೋನನ ಪುತ್ರರು ಅದರ ರಕ್ತವನ್ನು ವೇದಿಕೆಯ ಮೇಲೆ ಸುತ್ತಲೂ ಚಿಮಿಕಿಸಬೇಕು. ಅವನು ಸಮಾಧಾನಯಜ್ಞ ಪಶುವಿನ ಕೊಬ್ಬನ್ನು ಅಂದರೆ ಬಾಲದ ಮೇಲಿರುವ ಕೊಬ್ಬನ್ನು ಕರುಳುಗಳ ಮೇಲಿರುವ ಮತ್ತು ಅವುಗಳ ಸುತ್ತಲಿರುವ ಕೊಬ್ಬನ್ನೆಲ್ಲಾ ಹೋಮಮಾಡಬೇಕು. 10 ಅವನು ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ಪಿತ್ತಕೋಶದ ಮೇಲೆ ಮೂತ್ರಪಿಂಡಗಳವರೆಗೆ ಇರುವ ಕೊಬ್ಬನ್ನೂ ಯಾಜಕನು ಯಜ್ಞವೇದಿಕೆಯ ಮೇಲೆ ಹೋಮಮಾಡಬೇಕು. 11 ಅದು ಯೆಹೋವನಿಗೆ ಬೆಂಕಿಯ ಮೂಲಕ ಅರ್ಪಿಸಿದ ಆಹಾರವಾಗುವುದು.

12 “ಸಮರ್ಪಿಸಲ್ಪಡುವ ಪಶು ಆಡಾಗಿದ್ದರೆ, ಸಮರ್ಪಿಸುವವನು ಅದನ್ನು ಯೆಹೋವನ ಸನ್ನಿಧಿಗೆ ತರಬೇಕು. 13 ಅವನು ತನ್ನ ಕೈಯನ್ನು ಆಡಿನ ತಲೆಯ ಮೇಲಿಟ್ಟು ದೇವದರ್ಶನಗುಡಾರದ ಮುಂದೆ ಅದನ್ನು ವಧಿಸಬೇಕು. ಬಳಿಕ ಆರೋನನ ಗಂಡುಮಕ್ಕಳು ಆಡಿನ ರಕ್ತವನ್ನು ವೇದಿಕೆಯ ಮೇಲೆ ಅದರ ಸುತ್ತಲೂ ಚಿಮಿಕಿಸಬೇಕು. 14 ಅವನು ಸಮಾಧಾನಯಜ್ಞದ ಪಶುವಿನ ವಪೆಯನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ಪಿತ್ತಾಶಯದ ಹತ್ತಿರ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನೂ ಯೆಹೋವನಿಗೋಸ್ಕರ ಸಮರ್ಪಿಸಬೇಕು. 15 ಅವನು ಅದರ ಎರಡು ಮೂತ್ರಪಿಂಡಗಳನ್ನು ಮತ್ತು ಸೊಂಟದವರೆಗೆ ಅವುಗಳನ್ನು ಆವರಿಸಿರುವ ಕೊಬ್ಬನ್ನು ಸಮರ್ಪಿಸಬೇಕು. ಅವನು ಪಿತ್ತಾಶಯವನ್ನು ಮತ್ತು ಅದನ್ನು ಅವರಿಸಿರುವ ಕೊಬ್ಬನ್ನು ಸಮರ್ಪಿಸಬೇಕು. ಅವನು ಮೂತ್ರಪಿಂಡಗಳೊಂದಿಗೆ ಪಿತ್ತಾಶಯವನ್ನೂ ಸಮರ್ಪಿಸಬೇಕು. 16 ಬಳಿಕ ಯಾಜಕನು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಬೇಕು. ಇದು ಆಹಾರದ ರೂಪದಲ್ಲಿ ಯೆಹೋವನಿಗೆ ಅರ್ಪಿಸಿದ ಸುವಾಸನೆಯನ್ನು ಉಂಟುಮಾಡುವ ಸಮಾಧಾನಯಜ್ಞವಾಗಿರುತ್ತದೆ. ಆದರೆ ಅದರ ಕೊಬ್ಬು ಯೆಹೋವನಿಗೆ ಸೇರಿದೆ. 17 ನಿಮ್ಮ ಎಲ್ಲಾ ಸಂತತಿಗಳವರಿಗೆ ಈ ನಿಯಮವು ಶಾಶ್ವತವಾದದ್ದು. ನೀವೆಲ್ಲೇ ವಾಸಿಸಿದರೂ ಕೊಬ್ಬನ್ನಾಗಲಿ ರಕ್ತವನ್ನಾಗಲಿ ಎಂದಿಗೂ ತಿನ್ನಬಾರದು.”

ತಿಳಿಯದೆ ಮಾಡಿದ ಪಾಪಗಳ ಪರಿಹಾರಕ್ಕಾಗಿ ಸಮರ್ಪಣೆಗಳು

ಯೆಹೋವನು ಮೋಶೆಯೊಡನೆ ಮಾತನಾಡಿ ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಹೇಳು: ಯಾವನಾದರೂ ತಿಳಿಯದೆ ಪಾಪಮಾಡಿದರೆ ಮತ್ತು ಮಾಡಬಾರದೆಂದು ಹೇಳಿದವುಗಳನ್ನು ಮಾಡಿದರೆ, ಅವನು ಮಾಡಬೇಕಾದದ್ದೇನೆಂದರೆ:

“ಅಭಿಷಿಕ್ತನಾದ ಯಾಜಕನು ತಪ್ಪುಮಾಡಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ ತನ್ನ ದೋಷಪರಿಹಾರಕ್ಕಾಗಿ ಅವನು ಪೂರ್ಣಾಂಗವಾದ ಹೋರಿಯನ್ನು ಯೆಹೋವನಿಗೆ ಅರ್ಪಿಸಬೇಕು. ಅಭಿಷಿಕ್ತನಾದ ಯಾಜಕನು ಹೋರಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತಂದು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು. ಬಳಿಕ ಅವನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನಗುಡಾರದೊಳಗೆ ಹೋಗಬೇಕು. ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಮಹಾಪವಿತ್ರಸ್ಥಳದ ಪರದೆಯ ಮುಂಭಾಗದಲ್ಲಿರುವ ಯೆಹೋವನ ಸನ್ನಿಧಿಯಲ್ಲಿ ಏಳು ಸಾರಿ ಚಿಮಿಕಿಸಬೇಕು. ಯಾಜಕನು ಸ್ವಲ್ಪ ರಕ್ತವನ್ನು ಧೂಪವೇದಿಕೆಯ ಮೂಲೆಗಳಿಗೆ ಹಚ್ಚಬೇಕು. (ಈ ವೇದಿಕೆಯು ಯೆಹೋವನ ಸನ್ನಿಧಿಯಲ್ಲಿರುವ ದೇವದರ್ಶನಗುಡಾರದಲ್ಲಿದೆ.) ಯಾಜಕನು ಹೋರಿಯ ರಕ್ತವನ್ನೆಲ್ಲಾ ಸರ್ವಾಂಗಹೋಮ ಮಾಡುವ ವೇದಿಕೆಯ ಬುಡದಲ್ಲಿ ಸುರಿಯಬೇಕು. (ಈ ವೇದಿಕೆಯು ದೇವದರ್ಶನಗುಡಾರದ ಬಾಗಿಲಲ್ಲಿ ಇರುತ್ತದೆ.) ಅವನು ದೋಷಪರಿಹಾರಕ ಯಜ್ಞಕ್ಕಾಗಿ ತಂದಿರುವ ಹೋರಿಯ ಕೊಬ್ಬನ್ನೆಲ್ಲಾ ತೆಗೆಯಬೇಕು. ಅವನು ಅದರ ಒಳಗಿನ ಭಾಗಗಳ ಮೇಲೆ ಮತ್ತು ಅವುಗಳ ಸುತ್ತಲೂ ಇರುವ ಕೊಬ್ಬನ್ನೂ ಅದರ ಎರಡು ಮೂತ್ರಪಿಂಡಗಳನ್ನೂ ಅವುಗಳ ಸೊಂಟದವರೆಗೆ ಆವರಿಸಿರುವ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ತೆಗೆಯಬೇಕು. ಅವನು ಮೂತ್ರಪಿಂಡಗಳೊಡನೆ ಪಿತ್ತಾಶಯವನ್ನೂ ತೆಗೆಯಬೇಕು. 10 ಯಾಜಕನು ಈ ಭಾಗಗಳನ್ನು ಸಮಾಧಾನಯಜ್ಞ ಸಮರ್ಪಣೆಯಲ್ಲಿ ಹೋರಿಯ ಭಾಗಗಳನ್ನು ಅರ್ಪಿಸುವ ರೀತಿಯಲ್ಲಿಯೇ ಅರ್ಪಿಸಬೇಕು. ಯಾಜಕನು ಪಶುವಿನ ಭಾಗಗಳನ್ನು ಸರ್ವಾಂಗಹೋಮಮಾಡುವ ವೇದಿಕೆಯ ಮೇಲೆ ಹೋಮ ಮಾಡಬೇಕು.[b] 11-12 ಆದರೆ ಯಾಜಕನು ಹೋರಿಯ ಚರ್ಮವನ್ನು, ಒಳಗಿನ ಭಾಗಗಳನ್ನು, ದೇಹದ ಕಲ್ಮಶವನ್ನು, ಎಲ್ಲಾ ಮಾಂಸವನ್ನು ಮತ್ತು ತಲೆಕಾಲುಗಳನ್ನು ಹೊರಗೆ ತೆಗೆದುಕೊಂಡು ಪಾಳೆಯದ ಹೊರಗೆ ಬೂದಿಯನ್ನು ಸುರಿಯುವ ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಕಟ್ಟಿಗೆಯ ಮೇಲಿಟ್ಟು ಬೆಂಕಿಯಲ್ಲಿ ಸುಟ್ಟುಹಾಕಬೇಕು. ಬೂದಿಯನ್ನು ಸುರಿಯುವ ಸ್ಥಳದಲ್ಲಿಯೇ ಅದನ್ನು ಸುಡಬೇಕು.

13 “ಇಸ್ರೇಲರ ಇಡೀ ಜನಾಂಗವೆಲ್ಲಾ ತಿಳಿಯದೆ ಪಾಪಮಾಡುವ ಸ್ಥಿತಿ ಸಂಭವಿಸಬಹುದು. ಯೆಹೋವನು ಮಾಡಬಾರದೆಂದು ಆಜ್ಞಾಪಿಸಿದವುಗಳಲ್ಲಿ ಯಾವುದಾದರೊಂದನ್ನು ಅವರು ಮಾಡಿದರೆ ಅವರು ದೋಷಿಗಳಾಗುವರು. 14 ಆ ಪಾಪದ ಕುರಿತು ಅವರಿಗೆ ತಿಳಿದುಬಂದರೆ ಆಗ ಅವರು ಒಂದು ಹೋರಿಯನ್ನು ಇಡೀ ಜನಾಂಗದ ಪಾಪಪರಿಹಾರ ಮಾಡುವ ಸಮರ್ಪಣೆಯಾಗಿ ಅರ್ಪಿಸಬೇಕು. ಅವರು ಹೋರಿಯನ್ನು ದೇವದರ್ಶನಗುಡಾರಕ್ಕೆ ತರಬೇಕು. 15 ಜನರ ಹಿರಿಯರು ಯೆಹೋವನ ಸನ್ನಿಧಿಯಲ್ಲಿ ತಮ್ಮ ಕೈಗಳನ್ನು ಹೋರಿಯ ತಲೆಯ ಮೇಲಿಡಬೇಕು. ತರುವಾಯ ಒಬ್ಬನು ಯೆಹೋವನ ಸನ್ನಿಧಿಯಲ್ಲಿ ಹೋರಿಯನ್ನು ವಧಿಸಬೇಕು. 16 ಬಳಿಕ ಅಭಿಷಿಕ್ತನಾದ ಯಾಜಕನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನಗುಡಾರದೊಳಗೆ ಹೋಗಬೇಕು. 17 ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಯೆಹೋವನ ಸನ್ನಿಧಿಯಲ್ಲಿ ತೆರೆಯ ಮುಂದೆ ಏಳು ಸಾರಿ ಚಿಮಿಕಿಸಬೇಕು. 18 ಬಳಿಕ ಯಾಜಕನು ರಕ್ತದಲ್ಲಿ ಸ್ವಲ್ಪವನ್ನು ವೇದಿಕೆಯ ಮೂಲೆಗಳಲ್ಲಿ ಹಾಕಬೇಕು. (ಈ ವೇದಿಕೆಯು ದೇವದರ್ಶನಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಇರುತ್ತದೆ.) ಯಾಜಕನು ರಕ್ತವನ್ನೆಲ್ಲಾ ಸರ್ವಾಂಗಹೋಮ ಮಾಡುವ ವೇದಿಕೆಯ ಬುಡದಲ್ಲಿ ಸುರಿದುಬಿಡಬೇಕು. (ಈ ವೇದಿಕೆಯು ದೇವದರ್ಶನ ಗುಡಾರದ ಬಾಗಿಲಲ್ಲಿ ಇರುತ್ತದೆ.) 19 ತರುವಾಯ ಯಾಜಕನು ಪಶುವಿನಿಂದ ಕೊಬ್ಬನ್ನೆಲ್ಲಾ ತೆಗೆದು ಅದನ್ನು ವೇದಿಕೆಯ ಮೇಲೆ ಹೋಮಮಾಡಬೇಕು. 20 ಯಾಜಕನು ಪಾಪಪರಿಹಾರಕ ಯಜ್ಞದ ಹೋರಿಯ ಭಾಗಗಳನ್ನು ಸಮರ್ಪಿಸಿದಂತೆಯೇ ಈ ಭಾಗಗಳನ್ನು ಅರ್ಪಿಸಬೇಕು. ಈ ರೀತಿಯಾಗಿ, ಯಾಜಕನು ಜನರಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ದೇವರು ಅವರನ್ನು ಕ್ಷಮಿಸುವನು. 21 ಯಾಜಕನು ಈ ಹೋರಿಯನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ, ಆ ಮೊದಲನೆಯ ಹೋರಿಯನ್ನು ಸುಟ್ಟುಹಾಕಿದ ಸ್ಥಳದಲ್ಲಿಯೇ ಅದನ್ನು ಸುಡಬೇಕು. ಇದು ಇಡೀ ಸಮೂಹದ ಪಾಪವನ್ನು ಪರಿಹಾರ ಮಾಡುವ ಸಮರ್ಪಣೆಯಾಗಿದೆ.

22 “ಒಬ್ಬ ಅಧಿಪತಿಯು ತನ್ನ ದೇವರಾಗಿರುವ ಯೆಹೋವನು ನಿಷೇಧಿಸಿದವುಗಳಲ್ಲಿ ಯಾವುದಾದರೊಂದನ್ನು ತಿಳಿಯದೆ ಮಾಡಿದರೆ ಅವನು ದೋಷಿಯಾಗುತ್ತಾನೆ. 23 ಅಧಿಪತಿಯು ತನ್ನ ಪಾಪದ ಕುರಿತು ತಿಳಿದುಕೊಂಡರೆ, ಅಂಗದೋಷವಿಲ್ಲದ ಹೋತವನ್ನು ತರಬೇಕು. ಅದು ಅವನ ಕಾಣಿಕೆಯಾಗಿರುವುದು. 24 ಅಧಿಪತಿಯು ತನ್ನ ಕೈಯನ್ನು ಹೋತದ ತಲೆಯ ಮೇಲಿಟ್ಟು ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮ ಪಶುಗಳನ್ನು ವಧಿಸುವ ಸ್ಥಳದಲ್ಲಿ ಅದನ್ನು ವಧಿಸಬೇಕು. ಅದು ಪಾಪಪರಿಹಾರಕ ಯಜ್ಞವಾಗಿದೆ. 25 ಯಾಜಕನು ಪಾಪಪರಿಹಾರಕ ಯಜ್ಞದ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮಮಾಡುವ ವೇದಿಕೆಯ ಮೂಲೆಗಳಿಗೆ[c] ಹಚ್ಚಬೇಕು. ಯಾಜಕನು ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿದು, 26 ಹೋತದ ಕೊಬ್ಬನ್ನೆಲ್ಲಾ ವೇದಿಕೆಯ ಮೇಲೆ ಹೋಮಮಾಡಬೇಕು. ಅದು ಸಮಾಧಾನಯಜ್ಞವಾಗಿದೆ. ಕೊಬ್ಬನ್ನು ಹೋಮಮಾಡುವಂತೆ ಅದನ್ನು ಹೋಮಮಾಡಬೇಕು. ಹೀಗೆ ಯಾಜಕನು ಅಧಿಪತಿಯನ್ನು ಶುದ್ಧಗೊಳಿಸುವನು. ಆಗ ದೇವರು ಆ ಅಧಿಪತಿಯನ್ನು ಕ್ಷಮಿಸುವನು.

27 “ಸಾಮಾನ್ಯ ಜನರಲ್ಲಿ ಒಬ್ಬನು ಯೆಹೋವನು ನಿಷೇಧಿಸಿದವುಗಳಲ್ಲಿ ಯಾವುದಾದರೊಂದನ್ನು ತಿಳಿಯದೆ ಮಾಡಿದರೆ ಅವನು ದೋಷಿಯಾಗಿದ್ದಾನೆ. 28 ಆ ವ್ಯಕ್ತಿ ತನ್ನ ಪಾಪದ ಕುರಿತು ತಿಳಿದುಕೊಂಡರೆ, ಆಗ ಅವನು ಅಂಗದೋಷವಿಲ್ಲದ ಒಂದು ಆಡನ್ನು ತರಬೇಕು. ಅದು ಅವನ ಪಾಪಪರಿಹಾರಕ ಯಜ್ಞವಾಗಿದೆ. ಅವನು ತಾನು ಮಾಡಿದ ಪಾಪಕ್ಕಾಗಿ ಆಡನ್ನು ತರಬೇಕು. 29 ಅವನು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಸರ್ವಾಂಗಹೋಮಮಾಡುವ ಸ್ಥಳದಲ್ಲಿ ಅದನ್ನು ವಧಿಸಬೇಕು. 30 ಬಳಿಕ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮ ಮಾಡುವ ವೇದಿಕೆಯ ಮೂಲೆಗಳಿಗೆ ಹಚ್ಚಬೇಕು. ಬಳಿಕ ಯಾಜಕನು ಆಡಿನ ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿಯಬೇಕು. 31 ಯಾಜಕನು ಸಮಾಧಾನಯಜ್ಞಗಳಲ್ಲಿ ಕೊಬ್ಬನ್ನು ಪ್ರತ್ಯೇಕಿಸಿದಂತೆಯೇ ಆಡಿನ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಅದನ್ನು ಯೆಹೋವನಿಗೆ ಸುಗಂಧವಾಸನೆಯ ಹೋಮವಾಗಿ ವೇದಿಕೆಯ ಮೇಲೆ ಅರ್ಪಿಸಬೇಕು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಶುದ್ಧಿಗೊಳಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.

32 “ಆ ವ್ಯಕ್ತಿಯು ಕುರಿಮರಿಯನ್ನು ತನ್ನ ಪಾಪಪರಿಹಾರಕ ಯಜ್ಞವಾಗಿ ತರುವುದಾದರೆ ಅದು ದೋಷವಿಲ್ಲದ ಹೆಣ್ಣು ಕುರಿಮರಿಯಾಗಿರಬೇಕು. 33 ಅವನು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಅದನ್ನು ಸರ್ವಾಂಗಹೋಮದ ಯಜ್ಞಪಶುಗಳನ್ನು ವಧಿಸುವ ಸ್ಥಳದಲ್ಲಿ ಪಾಪಪರಿಹಾರಕಯಜ್ಞವಾಗಿ ವಧಿಸಬೇಕು. 34 ಯಾಜಕನು ಪಾಪಪರಿಹಾರಕಯಜ್ಞದ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮ ಮಾಡುವ ವೇದಿಕೆಯ ಮೂಲೆಗಳಿಗೆ ಹಚ್ಚಬೇಕು. ಬಳಿಕ ಯಾಜಕನು ಕುರಿಮರಿಯ ರಕ್ತವನ್ನೆಲ್ಲಾ ವೇದಿಕೆಯ ಬುಡದಲ್ಲಿ ಸುರಿಯಬೇಕು. 35 ಯಾಜಕನು ಸಮಾಧಾನಯಜ್ಞಗಳಲ್ಲಿ ಕುರಿಮರಿಯ ಕೊಬ್ಬನ್ನು ಪ್ರತ್ಯೇಕಿಸಿದಂತೆಯೇ ಈ ಕುರಿಮರಿಯ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಅದನ್ನು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸುವ ಸಮರ್ಪಣೆಯಂತೆ ವೇದಿಕೆಯ ಮೇಲೆ ಹೋಮಮಾಡಬೇಕು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಅವನು ಮಾಡಿದ ಪಾಪದಿಂದ ಶುದ್ಧಿಗೊಳಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International