Beginning
ಧೂಪವೇದಿಕೆ
30 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಜಾಲೀಮರದಿಂದ ಧೂಪವೇದಿಕೆಯನ್ನು ಮಾಡಿಸು. 2 ಈ ಧೂಪವೇದಿಕೆಯು ಚೌಕವಾಗಿ ಒಂದು ಮೊಳ ಉದ್ದ, ಒಂದು ಮೊಳ ಅಗಲ, ಎರಡು ಮೊಳ ಎತ್ತರ ಇರಬೇಕು. ಅದರ ನಾಲ್ಕು ಮೂಲೆಗಳಲ್ಲೂ ಕೊಂಬುಗಳಿರಬೇಕು. ಈ ಕೊಂಬುಗಳು ಧೂಪವೇದಿಕೆಯ ಅವಿಭಾಜ್ಯ ಭಾಗವಾಗಿರಬೇಕು. 3 ಧೂಪವೇದಿಕೆಯ ಮೇಲ್ಭಾಗವನ್ನೂ ಎಲ್ಲಾ ಪಾರ್ಶ್ವಗಳನ್ನೂ ಅದರ ಕೊಂಬುಗಳನ್ನೂ ಶುದ್ಧಬಂಗಾರದ ತಗಡಿನಿಂದ ಹೊದಿಸಬೇಕು ಮತ್ತು ಸುತ್ತಲೂ ಚಿನ್ನದ ಕಟ್ಟನ್ನು ಕಟ್ಟಿಸಬೇಕು. 4 ಧೂಪವೇದಿಕೆಯ ಎದುರುಬದುರಾಗಿರುವ ಎರಡು ಗೋಡೆಗಳಲ್ಲಿ ಕಟ್ಟಿನ ಕೆಳಗೆ ಎರಡು ಚಿನ್ನದ ಬಳೆಗಳನ್ನು ಮಾಡಿಸು. ಧೂಪವೇದಿಕೆಯನ್ನು ಹೊರುವ ಕೋಲುಗಳನ್ನು ಈ ಬಳೆಗಳು ಹಿಡಿದುಕೊಂಡಿರುತ್ತವೆ. 5 ಕೋಲುಗಳನ್ನು ಜಾಲೀಮರದಿಂದ ಮಾಡಿಸು. ಚಿನ್ನದ ತಗಡಿನಿಂದ ಆ ಕೋಲುಗಳನ್ನು ಹೊದಿಸು. 6 ವಿಶೇಷ ಪರದೆಯ (ಒಡಂಬಡಿಕೆಯ ಪೆಟ್ಟಿಗೆಯನ್ನು ಆವರಿಸಿಕೊಂಡಿರುವ) ಮುಂಭಾಗದಲ್ಲಿ ಧೂಪವೇದಿಕೆಯನ್ನು ಇಡು. ಧೂಪವೇದಿಕೆಯು ಒಡಂಬಡಿಕೆ ಪೆಟ್ಟಿಗೆಯ ಕೃಪಾಸನದ ಮುಂಭಾಗದಲ್ಲಿರುವುದು. ಇದು ನಾನು ನಿನ್ನನ್ನು ಸಂಧಿಸುವ ಸ್ಥಳವಾಗಿದೆ.
7 “ಆರೋನನು ಪ್ರತಿಮುಂಜಾನೆ ಧೂಪವೇದಿಕೆಯ ಮೇಲೆ ಸುಗಂಧದ್ರವ್ಯಗಳ ಧೂಪವನ್ನು ಉರಿಸಬೇಕು. ಅವನು ದೀಪಗಳನ್ನು ಸರಿಪಡಿಸಲು ಬರುವಾಗ ಇದನ್ನು ಮಾಡುವನು. 8 ತಿರುಗಿ ಸಾಯಂಕಾಲದಲ್ಲಿ ಧೂಪವನ್ನು ಉರಿಸಬೇಕು. ಇದು ಸಾಯಂಕಾಲಗಳಲ್ಲಿ ಅವನು ದೀಪಗಳನ್ನು ಹೊತ್ತಿಸುವ ಸಮಯವಾಗಿರುತ್ತದೆ. ಹೀಗೆ ಪ್ರತಿದಿನ ಯೆಹೋವನ ಮುಂದೆ ನಿತ್ಯವಾದ ಧೂಪಸಮರ್ಪಣೆ ಇರುವುದು. 9 ಈ ಧೂಪವೇದಿಕೆಯನ್ನು ಬೇರೆ ವಿಧದ ಧೂಪಸಮರ್ಪಣೆಗಾಗಲಿ ಸರ್ವಾಂಗಹೋಮವನ್ನು ಅರ್ಪಿಸುವುದಕ್ಕಾಗಲಿ ಯಾವುದೇ ಧಾನ್ಯಸಮರ್ಪಣೆಗಾಗಲಿ ಪಾನದ್ರವ್ಯಸಮರ್ಪಣೆಗಾಗಲಿ ಉಪಯೋಗಿಸಬಾರದು.
10 “ಆರೋನನು ವರ್ಷಕ್ಕೊಮ್ಮೆ ಯೆಹೋವನಿಗೆ ವಿಶೇಷ ಯಜ್ಞವನ್ನು ಸಮರ್ಪಿಸಬೇಕು. ಜನರ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಆರೋನನು ದೋಷಪರಿಹಾರಕ ಯಜ್ಞದ ರಕ್ತವನ್ನು ಉಪಯೋಗಿಸುವನು. ಆರೋನನು ಇದನ್ನು ಈ ಯಜ್ಞವೇದಿಕೆಯ ಕೊಂಬುಗಳಲ್ಲಿ ಮಾಡುವನು. ಆ ದಿನವು ದೋಷಪರಿಹಾರಕ ದಿನವೆಂದು ಕರೆಯಲ್ಪಡುವುದು. ಯೆಹೋವನಿಗೆ ಇದು ಅತೀ ಪರಿಶುದ್ಧವಾದ ವಿಶೇಷ ದಿನವಾಗಿದೆ.”
ದೇವಾಲಯದ ತೆರಿಗೆ
11 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 12 “ಇಸ್ರೇಲರನ್ನು ಲೆಕ್ಕಿಸು. ಹೀಗಾಗಿ ಎಷ್ಟು ಮಂದಿ ಜನರಿರುತ್ತಾರೆಂದು ನೀನು ತಿಳಿದುಕೊಳ್ಳುವೆ. ಪ್ರತಿಸಾರಿ ಇದನ್ನು ಮಾಡಿದಾಗ, ಪ್ರತಿಯೊಬ್ಬನು ತನಗೋಸ್ಕರವಾಗಿ ಯೆಹೋವನಿಗೆ ತೆರಿಗೆಯನ್ನು ಕೊಡಬೇಕು. ಆಗ ಜನರಿಗೆ ಯಾವ ಕೇಡುಗಳೂ ಉಂಟಾಗುವುದಿಲ್ಲ. 13 ಲೆಕ್ಕಿಸಲ್ಪಟ್ಟ ಪ್ರತಿಯೊಬ್ಬನು ಅಧಿಕೃತ ಅಳತೆಗನುಸಾರವಾಗಿರುವ ಅರ್ಧಶೆಕೆಲ್ ಕಪ್ಪಕಾಣಿಕೆಯನ್ನು ಕೊಡಬೇಕು. ಈ ಅರ್ಧಶೆಕೆಲ್ ಯೆಹೋವನಿಗೆ ಕಾಣಿಕೆಯಾಗಿರುತ್ತದೆ. 14 ಲೆಕ್ಕಿಸಲ್ಪಟ್ಟವರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕೆ ಮೇಲ್ಪಟ್ಟವರೂ ಈ ಕಾಣಿಕೆಯನ್ನು ಯೆಹೋವನಿಗೆ ಕೊಡಬೇಕು. 15 ಐಶ್ವರ್ಯವಂತರು ಅರ್ಧಶೆಕೆಲಿಗಿಂತ ಹೆಚ್ಚು ಕೊಡಬಾರದು; ಬಡವರು ಅರ್ಧಶೆಕೆಲಿಗಿಂತ ಕಡಿಮೆ ಕೊಡಬಾರದು. ಜನರೆಲ್ಲರೂ ಈ ಕಾಣಿಕೆಯನ್ನು ಯೆಹೋವನಿಗೆ ಅರ್ಪಿಸಬೇಕು. ಇದು ನಿಮ್ಮ ಪ್ರಾಣರಕ್ಷಣೆಯ ತೆರಿಗೆಯಾಗಿದೆ. 16 ಇಸ್ರೇಲರಿಂದ ಈ ಹಣವನ್ನು ಒಟ್ಟುಗೂಡಿಸಬೇಕು. ದೇವದರ್ಶನಗುಡಾರದ ಸೇವೆಗಾಗಿ ಹಣವನ್ನು ಉಪಯೋಗಿಸಬೇಕು. ಯೆಹೋವನು ತನ್ನ ಜನರನ್ನು ಜ್ಞಾಪಿಸಿಕೊಳ್ಳುವುದಕ್ಕಾಗಿ ಈ ಕಪ್ಪವು ಒಂದು ಮಾರ್ಗವಾಗಿದೆ. ಅವರು ತಮ್ಮ ಪ್ರಾಣರಕ್ಷಣೆಗಾಗಿ ಹಣವನ್ನು ಕೊಡುತ್ತಿರುವರು.”
ಗಂಗಾಳ
17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 18 “ತಾಮ್ರದ ಗಂಗಾಳವನ್ನು ಮಾಡಿ ಅದನ್ನು ತಾಮ್ರದ ಪೀಠದ ಮೇಲಿಡು. ತೊಳೆದುಕೊಳ್ಳುವುದಕ್ಕೆ ನೀವು ಇದನ್ನು ಉಪಯೋಗಿಸುವಿರಿ. ಗಂಗಾಳವನ್ನು ದೇವದರ್ಶನಗುಡಾರ ಮತ್ತು ಯಜ್ಞವೇದಿಕೆಯ ನಡುವೆ ಇಡು. ಗಂಗಾಳದಲ್ಲಿ ನೀರನ್ನು ತುಂಬಿಸು. 19 ಆರೋನನು ಮತ್ತು ಅವನ ಪುತ್ರರು ಈ ಗಂಗಾಳದಲ್ಲಿರುವ ನೀರಿನಿಂದ ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. 20 ಪ್ರತಿಸಾರಿ ದೇವದರ್ಶನಗುಡಾರಕ್ಕೆ ಪ್ರವೇಶಿಸುವಾಗ ಅಥವಾ ಯೆಹೋವನಿಗಾಗಿ ಸರ್ವಾಂಗಹೋಮಗಳನ್ನು ಅರ್ಪಿಸಲು ಯಜ್ಞವೇದಿಕೆಯ ಹತ್ತಿರಕ್ಕೆ ಬರುವಾಗ ಅವರು ನೀರಿನಿಂದ ತೊಳೆದುಕೊಳ್ಳಬೇಕು. ಆಗ ಅವರು ಸಾಯುವುದಿಲ್ಲ. 21 ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳುವುದರಿಂದ ಅವರು ಸಾಯುವುದಿಲ್ಲ. ಆರೋನನಿಗೂ ಅವನ ಸಂತತಿಯವರಿಗೂ ಇದು ಶಾಶ್ವತವಾದ ನಿಯಮ. ತಲೆಮಾರುಗಳವರೆಗೆ ಆರೋನನ ಸಂತತಿಯವರಿಗೆಲ್ಲಾ ಇದೇ ಕಟ್ಟಳೆಯಿರುವುದು.”
ಅಭಿಷೇಕತೈಲ
22 ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 23 “ಶ್ರೇಷ್ಠವಾದ ಸುಗಂಧದ್ರವ್ಯಗಳನ್ನು ಮಾಡಿಸು. ಹನ್ನೆರಡು ಪೌಂಡುಗಳಷ್ಟು ಅಚ್ಚ ರಕ್ತಬೋಳ, ಅದರ ಅರ್ಧದಷ್ಟು ಅಂದರೆ ಆರು ಪೌಂಡು ಸುವಾಸನೆಯುಳ್ಳ ದಾಲ್ಚಿನ್ನಿ, ಹನ್ನೆರಡು ಪೌಂಡುಗಳಷ್ಟು ಸುವಾಸನೆಯುಳ್ಳ ಬಜೆ, 24 ಮತ್ತು ಹನ್ನೆರಡು ಪೌಂಡುಗಳಷ್ಟು ಲವಂಗಚಕ್ಕೆಯನ್ನು ತೆಗೆದುಕೊಂಡು ಬಾ. ಇವುಗಳನ್ನೆಲ್ಲ ಅಧಿಕೃತ ಅಳತೆಮಾಪಕದಿಂದ ಅಳತೆಮಾಡು. ಒಂದು ಗ್ಯಾಲನ್ ಆಲಿವ್ ಎಣ್ಣೆಯನ್ನೂ ತೆಗೆದುಕೊಂಡು ಬಾ.
25 “ಸುವಾಸನೆಯುಳ್ಳ ಪವಿತ್ರ ಅಭಿಷೇಕತೈಲವನ್ನು ಮಾಡಲು ಇವುಗಳನ್ನೆಲ್ಲ ಒಟ್ಟಿಗೆ ಬೆರೆಸು. 26 ದೇವದರ್ಶನಗುಡಾರವನ್ನು ಮತ್ತು ಒಡಂಬಡಿಕೆಯ ಪೆಟ್ಟಿಗೆಯನ್ನು ಅಭಿಷೇಕಿಸಲು ಈ ತೈಲವನ್ನು ಉಪಯೋಗಿಸು. 27 ಈ ತೈಲವನ್ನು ಮೇಜಿನ ಮೇಲಿರುವ ಎಲ್ಲಾ ಉಪಕರಣಗಳ ಮೇಲೆ ಸುರಿ. ಈ ತೈಲವನ್ನು ದೀಪಸ್ತಂಭ ಮತ್ತು ಅದರ ಉಪಕರಣಗಳೆಲ್ಲದರ ಮೇಲೆ ಸುರಿ. ಆ ಯಜ್ಞವೇದಿಕೆಯ ಮೇಲಿರುವ ಅದರ ಉಪಕರಣಗಳ ಮೇಲೆಯೂ ಈ ತೈಲವನ್ನು ಸುರಿ. ತೈಲವನ್ನು ಧೂಪವೇದಿಕೆಯ ಮೇಲೆ ಸುರಿ. 28 ದೇವರಿಗೆ ಬೆಂಕಿಯ ಮೂಲಕ ಅರ್ಪಿಸುವ ಹೋಮಗಳ ಮೇಲೆಯೂ ತೈಲವನ್ನು ಸುರಿ. ಈ ತೈಲವನ್ನು ಗಂಗಾಳದ ಮೇಲೆಯೂ ಮತ್ತು ಗಂಗಾಳದ ಕೆಳಗಿರುವ ಪೀಠದ ಮೇಲೆಯೂ ಸುರಿ. 29 ಆಗ ನೀನು ಈ ಉಪಕರಣಗಳನ್ನೆಲ್ಲ ಪವಿತ್ರಗೊಳಿಸುವೆ. ಅವುಗಳು ಯೆಹೋವನಿಗೆ ಬಹು ವಿಶೇಷವಾಗಿವೆ. ಅವುಗಳಿಗೆ ಸೋಂಕಿದ್ದೆಲ್ಲವೂ ಪವಿತ್ರವಾಗುತ್ತವೆ.
30 “ಆರೋನನನ್ನು ಮತ್ತು ಅವನ ಪುತ್ರರನ್ನು ಈ ತೈಲದಿಂದ ಅಭಿಷೇಕಿಸು. ಅವರು ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡುತ್ತಾರೆಂದು ಇದು ತೋರಿಸುವುದು. ಆಗ ಅವರು ಅಭಿಷೇಕಿಸಲ್ಪಟ್ಟ ಯಾಜಕರಾಗಿ ನನ್ನ ಸೇವೆಮಾಡಬಹುದು. 31 ಅಭಿಷೇಕತೈಲವು ಪವಿತ್ರವಾದದ್ದು. ಅದನ್ನು ಯಾವಾಗಲೂ ನನಗಾಗಿ ಮಾತ್ರವೇ ಉಪಯೋಗಿಸಬೇಕೆಂದು ಇಸ್ರೇಲರಿಗೆ ಹೇಳು. 32 ಯಾರೂ ಇದನ್ನು ಸಾಮಾನ್ಯವಾದ ಸುಗಂಧ ವಾಸನೆಯುಳ್ಳ ತೈಲವಾಗಿ ಉಪಯೋಗಿಸಬಾರದು. ಈ ವಿಶೇಷವಾದ ತೈಲವನ್ನು ಮಾಡುವ ರೀತಿಯಲ್ಲಿ ಸಾಮಾನ್ಯವಾದ ಸುಗಂಧತೈಲವನ್ನು ಮಾಡಬಾರದು. ಈ ತೈಲವು ಪವಿತ್ರವಾದದ್ದು. ಇದು ನಿಮಗೆ ಬಹಳ ವಿಶೇಷವಾದದ್ದಾಗಿರಬೇಕು. 33 ಯಾವನಾದರೂ ಸುಗಂಧತೈಲವನ್ನು ಈ ಪವಿತ್ರತೈಲದಂತೆ ಮಾಡಿ ಯಾಜಕನಲ್ಲದ ಒಬ್ಬನಿಗೆ ಅದನ್ನು ಕೊಟ್ಟರೆ, ಅವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”
ಧೂಪ
34 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ನೀನು ಹಾಲುಮಡ್ಡಿ, ಗುಗ್ಗುಲ, ಗಂಧದ ಚೆಕ್ಕೆ ಎಂಬ ಸುಗಂಧ ದ್ರವ್ಯಗಳನ್ನು ಸಮವಾಗಿ ತೆಗೆದುಕೊ. 35 ಸುವಾಸನೆಯುಳ್ಳ ಧೂಪವನ್ನು ಮಾಡುವುದಕ್ಕೆ ಈ ಸುಗಂಧ ದ್ರವ್ಯಗಳನ್ನು ಒಟ್ಟಾಗಿ ಬೆರೆಸು. ಸುಗಂಧದ್ರವ್ಯಕಾರನು ಮಾಡುವ ಪ್ರಕಾರವೇ ಇದನ್ನು ಮಾಡು. ಈ ಧೂಪಕ್ಕೆ ಉಪ್ಪನ್ನು ಬೆರೆಸು. ಉಪ್ಪು ಅದನ್ನು ಶುದ್ಧಗೊಳಿಸುವುದು. 36 ಸ್ವಲ್ಪ ಧೂಪವನ್ನು ಅರೆದು ಪುಡಿ ಮಾಡು. ಈ ಪುಡಿಯನ್ನು ದೇವದರ್ಶನಗುಡಾರದಲ್ಲಿರುವ ಒಡಂಬಡಿಕೆ ಪೆಟ್ಟಿಗೆಯ ಮುಂದೆ ನಾನು ನಿನಗೆ ದರ್ಶನ ಕೊಡುವ ಸ್ಥಳದಲ್ಲಿಡು. ಈ ಧೂಪದ ಪುಡಿಯನ್ನು ಅದರ ವಿಶೇಷ ಉದ್ದೇಶಕ್ಕಾಗಿ ಮಾತ್ರವೇ ಉಪಯೋಗಿಸಬೇಕು. ಅದು ಅತಿ ಪರಿಶುದ್ಧವಾದದ್ದು. 37 ನೀನು ಈ ಧೂಪವನ್ನು ಯೆಹೋವನಿಗಾಗಿ ವಿಶೇಷವಾದ ರೀತಿಯಲ್ಲಿ ಮಾತ್ರ ಉಪಯೋಗಿಸಬೇಕು. ನೀನು ಈ ಧೂಪವನ್ನು ವಿಶೇಷವಾದ ರೀತಿಯಲ್ಲಿ ತಯಾರಿಸಬೇಕು. ಈ ರೀತಿ ವಿಶೇಷವಾಗಿ ಬೇರೆ ಯಾವ ಧೂಪವನ್ನೂ ಮಾಡಬಾರದು. 38 ಸುವಾಸನೆಗೋಸ್ಕರ ಒಬ್ಬನು ತನಗಾಗಿ ಸ್ವಲ್ಪ ಧೂಪವನ್ನು ಈ ರೀತಿಯಲ್ಲಿ ಮಾಡಿದರೆ ಅವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”
ಬೆಚಲೇಲ್ ಮತ್ತು ಒಹೊಲೀಯಾಬ
31 ತರುವಾಯ ಯೆಹೋವನು ಮೋಶೆಗೆ ಹೀಗೆಂದನು: 2 “ನಾನು ಯೆಹೂದ ಕುಲದಿಂದ ಊರಿಯ ಮಗನಾದ ಬೆಚಲೇಲನನ್ನು ಆರಿಸಿಕೊಂಡಿದ್ದೇನೆ. ಊರಿಯು ಹೂರನ ಮಗನು. 3 ನಾನು ಬೆಚಲೇಲನನ್ನು ದೇವರಾತ್ಮಭರಿತನನ್ನಾಗಿ ಮಾಡಿದ್ದೇನೆ. ನಾನು ಅವನಿಗೆ ಎಲ್ಲಾ ಬಗೆಯ ಕೆಲಸಗಳನ್ನು ಮಾಡಲು ನಿಪುಣತೆಯನ್ನೂ ಜ್ಞಾನವನ್ನೂ ಅನುಗ್ರಹಿಸಿದ್ದೇನೆ. 4 ಬೆಚಲೇಲನು ಬಹಳ ಉತ್ತಮ ಚಿತ್ರಕಾರನಾಗಿದ್ದಾನೆ. ಬೆಳ್ಳಿಬಂಗಾರಗಳ ಮತ್ತು ತಾಮ್ರದ ವಸ್ತುಗಳನ್ನು ಅವನು ಮಾಡಬಲ್ಲನು. 5 ಅವನು ರತ್ನಗಳನ್ನು ಕೆತ್ತಿ ಅಂದವಾದ ಆಭರಣಗಳನ್ನು ಮಾಡಬಲ್ಲನು ಮತ್ತು ಮರಗೆಲಸವನ್ನು ಮಾಡಬಲ್ಲನು. ಅವನು ಎಲ್ಲಾ ತರದ ಕೆಲಸಗಳನ್ನು ಮಾಡಬಲ್ಲನು. 6 ಅವನೊಂದಿಗೆ ಕೆಲಸ ಮಾಡಲು ನಾನು ಒಹೊಲೀಯಾಬನನ್ನು ಆರಿಸಿಕೊಂಡಿದ್ದೇನೆ. ಒಹೊಲೀಯಾಬನು ದಾನ್ ಕುಲದ ಅಹೀಸಾಮಾಕನ ಮಗನು. ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವುದಕ್ಕೆ ಬೇರೆ ಕೆಲಸಗಾರರಿಗೆಲ್ಲಾ ನಿಪುಣತೆಯನ್ನು ಅನುಗ್ರಹಿಸಿದ್ದೇನೆ:
7 ದೇವದರ್ಶನಗುಡಾರ,
ಒಡಂಬಡಿಕೆ ಪೆಟ್ಟಿಗೆ,
ಕೃಪಾಸನ, ಗುಡಾರದ ಎಲ್ಲಾ ಉಪಕರಣಗಳು,
8 ಮೇಜು ಮತ್ತು ಅದರ ಮೇಲಿನ ವಸ್ತುಗಳು,
ಬಂಗಾರದ ದೀಪಸ್ತಂಭ ಮತ್ತು ಅದರ ಉಪಕರಣಗಳು,
9 ಧೂಪವೇದಿಕೆ, ಯಜ್ಞವೇದಿಕೆ ಮತ್ತು ಅವುಗಳ ಉಪಕರಣಗಳು,
ಗಂಗಾಳ ಮತ್ತು ಅದರ ಪೀಠ.
10 ಮಹಾಯಾಜಕನಾದ ಆರೋನನ ಎಲ್ಲಾ ವಿಶೇಷ ಬಟ್ಟೆಗಳು,
ಆರೋನನ ಪುತ್ರರು ಯಾಜಕರಾಗಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ಎಲ್ಲಾ ಬಟ್ಟೆಗಳು.
11 ಸುವಾಸನೆಯುಳ್ಳ ಅಭಿಷೇಕತೈಲ,
ಪವಿತ್ರ ಸ್ಥಳದಲ್ಲಿ ಉಪಯೋಗಿಸುವ ಸುವಾಸನೆಯುಳ್ಳ ಧೂಪ.
ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲೇ ಈ ಕೆಲಸಗಾರರು ಈ ವಸ್ತುಗಳನ್ನೆಲ್ಲಾ ಮಾಡತಕ್ಕದ್ದು.”
ಸಬ್ಬತ್
12 ತರುವಾಯ ಯೆಹೋವನು ಮೋಶೆಗೆ ಹೀಗೆಂದನು: 13 “ಇದನ್ನು ಇಸ್ರೇಲರಿಗೆ ಹೇಳು: ‘ನೀವು ನನ್ನ ವಿಶೇಷವಾದ ಸಬ್ಬತ್ ದಿನವನ್ನು ಖಂಡಿತವಾಗಿ ಆಚರಿಸಬೇಕು. ಯೆಹೋವನಾದ ನಾನು ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿರುವುದಕ್ಕೆ ಇದು ಗುರುತಾಗಿದೆ.
14 “‘ಸಬ್ಬತ್ ದಿನವನ್ನು ವಿಶೇಷ ದಿನವೆಂದು ಪರಿಗಣಿಸಿ ಆಚರಿಸಿರಿ. ಆ ದಿನವನ್ನು ಬೇರೆ ದಿನದಂತೆ ಪರಿಗಣಿಸಿ ನಡೆಯುವವನಿಗೆ ಮರಣದಂಡನೆಯಾಗಬೇಕು. ಸಬ್ಬತ್ ದಿನದಲ್ಲಿ ಯಾವನಾದರೂ ಕೆಲಸಮಾಡಿದರೆ ಅವನನ್ನು ಬಹಿಷ್ಕರಿಸಬೇಕು. 15 ಕೆಲಸ ಮಾಡುವುದಕ್ಕೆ ವಾರದಲ್ಲಿ ಬೇರೆ ಆರು ದಿನಗಳಿವೆ. ಆದರೆ ಏಳನೆಯ ದಿನವು ವಿಶ್ರಾಂತಿಯ ಬಹು ವಿಶೇಷವಾದ ದಿನವಾಗಿದೆ. ಯೆಹೋವನನ್ನು ಸನ್ಮಾನಿಸಲು ಅದೊಂದು ವಿಶೇಷ ದಿನವಾಗಿದೆ. ಸಬ್ಬತ್ತಿನ ಸಮಯದಲ್ಲಿ ಕೆಲಸಮಾಡುವವನು ಕೊಲ್ಲಲ್ಪಡಬೇಕು. 16 ಇಸ್ರೇಲರು ಸಬ್ಬತ್ ದಿನವನ್ನು ಜ್ಞಾಪಿಸಿಕೊಂಡು ಅದನ್ನು ವಿಶೇಷ ದಿನವನ್ನಾಗಿ ಮಾಡಿಕೊಳ್ಳತಕ್ಕದ್ದು. ಅವರು ಇದನ್ನು ಎಂದೆಂದೂ ಮಾಡತಕ್ಕದ್ದು. ಇದು ಎಂದೆಂದಿಗೂ ಮುಂದುವರಿಯುವ ಒಡಂಬಡಿಕೆ. 17 ಸಬ್ಬತ್ ನನಗೂ ಮತ್ತು ಇಸ್ರೇಲರಿಗೂ ನಡುವೆ ಎಂದೆಂದೂ ಇರುವ ಸೂಚನೆಯಾಗಿರುವುದು.’” ಯೆಹೋವನು ಆರು ದಿನಗಳಲ್ಲಿ ಕೆಲಸಮಾಡಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು. ಏಳನೆಯ ದಿನದಲ್ಲಿ ಕೆಲಸ ಮಾಡದೆ ವಿಶ್ರಮಿಸಿಕೊಂಡನು.
18 ಹೀಗೆ, ಯೆಹೋವನು ಮೋಶೆಯೊಡನೆ ಸೀನಾಯಿ ಬೆಟ್ಟದಲ್ಲಿ ಮಾತಾಡುವುದನ್ನು ಮುಗಿಸಿದನು. ಬಳಿಕ ಯೆಹೋವನು ಒಡಂಬಡಿಕೆ ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಮೋಶೆಗೆ ಕೊಟ್ಟನು. ಅವು ದೇವರ ಬೆರಳಿನಿಂದ ಲಿಖಿತವಾಗಿತ್ತು.
ಚಿನ್ನದ ಬಸವ
32 ಬಹಳ ಸಮಯ ದಾಟಿಹೋದರೂ ಮೋಶೆ ಬೆಟ್ಟದಿಂದ ಕೆಳಗಿಳಿಯಲಿಲ್ಲವಾದ್ದರಿಂದ ಇಸ್ರೇಲರು ಆರೋನನ ಬಳಿಗೆ ಒಟ್ಟಾಗಿ ಬಂದು, “ನೋಡು, ಮೋಶೆಯು ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದನು. ಆದರೆ ಅವನಿಗೇನಾಯಿತೋ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡೆಸಲು ಕೆಲವು ದೇವರುಗಳನ್ನು ಮಾಡಿಕೊಡು” ಎಂದು ಹೇಳಿದರು.
2 ಆರೋನನು ಅವರಿಗೆ, “ನಿಮ್ಮ ಹೆಂಡತಿಯ ಮತ್ತು ಗಂಡು ಹೆಣ್ಣುಮಕ್ಕಳಲ್ಲಿರುವ ಚಿನ್ನದ ಓಲೆಗಳನ್ನು ತಂದು ನನಗೆ ಕೊಡಿರಿ” ಎಂದು ಹೇಳಿದನು.
3 ಆದ್ದರಿಂದ ಅವರೆಲ್ಲರೂ ತಮ್ಮ ಚಿನ್ನದ ಓಲೆಗಳನ್ನು ತಂದುಕೊಟ್ಟರು. 4 ಆರೋನನು ಬಸವನ ಮೂರ್ತಿಯನ್ನು ಚಿನ್ನದಿಂದ ಎರಕಹೊಯ್ಯಿಸಿದನು.
ಬಳಿಕ ಅವರು, “ಇಸ್ರೇಲರೇ, ನಿಮ್ಮ ದೇವರುಗಳು ಇಲ್ಲಿವೆ! ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರುಗಳು ಇವುಗಳೇ” ಎಂದು ಹೇಳಿದರು.
5 ಆರೋನನು ಇವೆಲ್ಲವನ್ನು ನೋಡಿ, ಬಸವನ ಮುಂದೆ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಬಳಿಕ, “ನಾಳೆ ಯೆಹೋವನನ್ನು ಸನ್ಮಾನಿಸಲು ಒಂದು ವಿಶೇಷ ಹಬ್ಬವಿರುವುದು” ಎಂದು ಪ್ರಕಟಿಸಿದನು.
6 ಮರುದಿನ ಮುಂಜಾನೆ ಜನರೆಲ್ಲರೂ ಬೇಗನೆ ಎದ್ದು ತಮ್ಮ ಪಶುಗಳನ್ನು ವಧಿಸಿ ಸರ್ವಾಂಗಹೋಮಗಳನ್ನಾಗಿಯೂ ಸಮಾಧಾನಯಜ್ಞಗಳನ್ನಾಗಿಯೂ ಅರ್ಪಿಸಿ ತಿನ್ನುವುದಕ್ಕೂ ಕುಡಿಯುವುದಕ್ಕೂ ಕುಳಿತುಕೊಂಡರು. ಬಳಿಕ ಎದ್ದು ಕುಣಿದಾಡಿದರು ಮತ್ತು ಕೂಗಾಡಿದರು.
7 ಅದೇ ಸಮಯದಲ್ಲಿ ಯೆಹೋವನು ಮೋಶೆಗೆ, “ಬೆಟ್ಟದಿಂದ ಇಳಿದುಹೋಗು. ನೀನು ಈಜಿಪ್ಟಿನಿಂದ ಕರೆದುಕೊಂಡು ಬಂದ ನಿನ್ನ ಜನರು ಭಯಂಕರವಾದ ಪಾಪ ಮಾಡಿದ್ದಾರೆ. 8 ನಾನು ಅವರಿಗೆ ಆಜ್ಞಾಪಿಸಿದವುಗಳಿಗೆ ಬಹುಬೇಗನೆ ಅವಿಧೇಯರಾಗಿದ್ದಾರೆ. ಚಿನ್ನವನ್ನು ಕರಗಿಸಿ ಅದರಿಂದ ಬಸವನನ್ನು ಮಾಡಿಕೊಂಡು ಅದನ್ನು ಪೂಜಿಸುತ್ತಾ ಅದಕ್ಕೆ ಯಜ್ಞಗಳನ್ನು ಸಮರ್ಪಿಸುತ್ತಿದ್ದಾರೆ. ‘ಇಸ್ರೇಲರೇ ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರುಗಳು ಇವುಗಳು’ ಎಂದು ಜನರು ಹೇಳುತ್ತಿದ್ದಾರೆ” ಎಂದನು.
9 ಯೆಹೋವನು ಮೋಶೆಗೆ, “ನಾನು ಈ ಜನರನ್ನು ನೋಡಿದ್ದೇನೆ. ಅವರು ಬಹಳ ಮೊಂಡರೆಂದು ನಾನು ಬಲ್ಲೆನು. ಅವರು ಯಾವಾಗಲೂ ನಿನಗೆ ವಿರೋಧವಾಗಿ ದಂಗೆ ಏಳುವರು. 10 ಆದ್ದರಿಂದ ನಾನು ಅವರನ್ನು ಕೋಪದಿಂದ ನಾಶಮಾಡಿಬಿಡುತ್ತೇನೆ. ನನ್ನನ್ನು ತಡೆಯಬೇಡ. ಬಳಿಕ ನಾನು ನಿನ್ನಿಂದ ಒಂದು ಮಹಾಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು.
11 ಆದರೆ ಮೋಶೆಯು ತನ್ನ ದೇವರಾದ ಯೆಹೋವನಿಗೆ, “ಯೆಹೋವನೇ, ನಿನ್ನ ಕೋಪವು ನಿನ್ನ ಜನರನ್ನು ನಾಶಮಾಡದಿರಲಿ. ನಿನ್ನ ಮಹಾಶಕ್ತಿಯಿಂದಲೂ ಬಲದಿಂದಲೂ ಈ ಜನರನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆಯಲ್ಲಾ. 12 ಆದರೆ ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು, ‘ಯೆಹೋವನು ತನ್ನ ಜನರಿಗೆ ಕೇಡನ್ನು ಮಾಡುವುದಕ್ಕಾಗಿಯೇ ಈಜಿಪ್ಟಿನಿಂದ ಕರೆದುಕೊಂಡು ಹೋದನು. ಆತನು ಅವರನ್ನು ಬೆಟ್ಟಗಳಲ್ಲಿ ಕೊಲ್ಲಬೇಕೆಂದಿದ್ದನು; ತನ್ನ ಜನರನ್ನು ಭೂಮಿಯಿಂದ ನಿರ್ಮೂಲ ಮಾಡಬೇಕೆಂದಿದ್ದನು’ ಎಂದು ಹೇಳುವರು. ಆದ್ದರಿಂದ ನಿನ್ನ ಜನರ ಮೇಲೆ ಕೋಪಗೊಳ್ಳಬೇಡ. ನಿನ್ನ ಕೋಪವನ್ನು ಬಿಟ್ಟುಬಿಡು. ನಿನ್ನ ಜನರನ್ನು ನಾಶಮಾಡಬೇಡ. 13 ನಿನ್ನ ಸೇವೆಮಾಡಿದ ಅಬ್ರಹಾಮನನ್ನು, ಇಸಾಕನನ್ನು, ಯಾಕೋಬನನ್ನು ಜ್ಞಾಪಿಸಿಕೊ. ನೀನು ನಿನ್ನ ಹೆಸರನ್ನು ಉಪಯೋಗಿಸಿ ಆ ಜನರಿಗೆ ವಾಗ್ದಾನವನ್ನು ಮಾಡಿದೆ. ‘ನಾನು ನಿನ್ನ ಸಂತತಿಯವರನ್ನು ಆಕಾಶದ ನಕ್ಷತ್ರಗಳಷ್ಟು ಮಾಡುವೆನು. ನಾನು ವಾಗ್ದಾನ ಮಾಡಿದಂತೆ ಈ ದೇಶವನ್ನೆಲ್ಲಾ ನಿನ್ನ ಸಂತತಿಗಳವರಿಗೆ ಕೊಡುವೆನು. ಈ ದೇಶ ಎಂದೆಂದಿಗೂ ಅವರದಾಗಿರುವುದು’ ಎಂದು ನೀನು ನಿನ್ನ ಹೆಸರಿನಲ್ಲಿ ವಾಗ್ದಾನ ಮಾಡಿದೆಯಲ್ಲಾ” ಅಂದನು.
14 ಆದ್ದರಿಂದ ಯೆಹೋವನು ಜನರಿಗಾಗಿ ಮರುಕಪಟ್ಟು ತನ್ನ ಮನಸ್ಸನ್ನು ಮಾರ್ಪಡಿಸಿಕೊಂಡನು; ತಾನು ಹೇಳಿದ್ದ ಕೇಡನ್ನು ಮಾಡಲಿಲ್ಲ; ತನ್ನ ಜನರನ್ನು ನಾಶಮಾಡಲಿಲ್ಲ.
15 ಬಳಿಕ ಮೋಶೆ ಬೆಟ್ಟದಿಂದಿಳಿದು ಬಂದನು. ಮೋಶೆಯೊಡನೆ ಆಜ್ಞಾಶಾಸನಗಳ ಎರಡು ಕಲ್ಲಿನ ಹಲಿಗೆಗಳಿದ್ದವು. ಈ ಆಜ್ಞಾಶಾಸನಗಳ ಕಲ್ಲುಗಳ ಮುಂದೆಯೂ ಹಿಂದೆಯೂ ಬರೆಯಲ್ಪಟ್ಟಿದ್ದವು. 16 ಯೆಹೋವನು ತಾನೇ ಆ ಕಲ್ಲುಗಳನ್ನು ಮಾಡಿ ಅವುಗಳ ಮೇಲೆ ಬರೆದಿದ್ದನು.
17 ಇಸ್ರೇಲರ ಗದ್ದಲವನ್ನೂ ಕೂಗಾಟವನ್ನೂ ಯೆಹೋಶುವನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಯುದ್ಧದ ಧ್ವನಿ ಕೇಳಿಬರುತ್ತಿದೆ” ಅಂದನು.
18 ಅದಕ್ಕೆ ಮೋಶೆ, “ಅದು ಸೈನ್ಯದ ಜಯಧ್ವನಿಯಲ್ಲ. ಅದು ಸೋಲಿನಿಂದ ಕೂಗುವ ಸೈನ್ಯದ ಧ್ವನಿಯೂ ಅಲ್ಲ. ನಾನು ಕೇಳುತ್ತಿರುವುದು ಉತ್ಸವದ ಧ್ವನಿ” ಎಂದು ಉತ್ತರಿಸಿದನು.
19 ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದನು. ಅವನು ಚಿನ್ನದ ಬಸವನನ್ನೂ ಜನರ ನರ್ತನವನ್ನೂ ನೋಡಿ ಬಹುಕೋಪಗೊಂಡು ಕಲ್ಲಿನ ಹಲಿಗೆಗಳನ್ನು ನೆಲದ ಮೇಲೆ ಬಿಸಾಡಿಬಿಟ್ಟನು; ಅವು ಚೂರುಚೂರಾಗಿ ಒಡೆದುಹೋದವು. 20 ಬಳಿಕ ಮೋಶೆಯು ಆ ಬಸವನ ಮೂರ್ತಿಯನ್ನು ಬೆಂಕಿಯಲ್ಲಿ ಕರಗಿಸಿ ಅದರ ಚಿನ್ನವನ್ನು ಧೂಳಿನಂತೆ ಅರೆದು ನೀರಿಗೆ ಹಾಕಿ ಆ ನೀರನ್ನು ಇಸ್ರೇಲರಿಗೆ ಕುಡಿಸಿದನು.
21 ಮೋಶೆಯು ಆರೋನನಿಗೆ, “ಈ ಜನರು ನಿನಗೇನು ಮಾಡಿದರು? ಇಂಥಾ ಕೆಟ್ಟ ಪಾಪವನ್ನು ಮಾಡುವಂತೆ ಯಾಕೆ ಅವರನ್ನು ನಡಿಸಿದೆ?” ಎಂದು ಹೇಳಿದನು.
22 ಆರೋನನು, “ಕೋಪಗೊಳ್ಳಬೇಡ. ಇವರು ಯಾವಾಗಲೂ ಪಾಪಮಾಡಲು ಸಿದ್ಧರಾಗಿರುವುದು ನಿನಗೆ ಗೊತ್ತೇ ಇದೆ. 23 ಅವರು ನನಗೆ, ‘ಮೋಶೆಯು ನಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದನು. ಆದರೆ ಅವನಿಗೇನಾಯಿತೋ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡೆಸಲು ದೇವರುಗಳನ್ನು ಮಾಡಿಕೊಡು’ ಎಂದು ಕೇಳಿದರು. 24 ಆದ್ದರಿಂದ ನಾನು ಅವರಿಗೆ, ‘ನಿಮ್ಮಲ್ಲಿ ಚಿನ್ನದ ಆಭರಣಗಳಿದ್ದರೆ ನನಗೆ ಕೊಡಿರಿ’ ಎಂದು ಹೇಳಿದೆನು. ಅವರು ಆಭರಣಗಳನ್ನು ನನಗೆ ತಂದುಕೊಟ್ಟರು. ನಾನು ಅವುಗಳನ್ನು ಬೆಂಕಿಯಲ್ಲಿ ಕರಗಿಸಿ ಈ ಬಸವನ ಮೂರ್ತಿಯನ್ನು ಎರಕಹೊಯ್ದೆನು” ಎಂದು ಉತ್ತರಿಸಿದನು.
25 ಜನರು ಅಂಕೆತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಬಿಟ್ಟುಬಿಟ್ಟಿರುವುದು ಮೋಶೆಗೆ ತಿಳಿಯಿತು. ಜನರು ಕ್ರಮವಿಲ್ಲದೆ ಸ್ವೇಚ್ಛೆಯಿಂದ ನಡೆಯುತ್ತಿದ್ದರು; ಅವರ ಮೂರ್ಖತನವು ಅವರ ವಿರೋಧಿಗಳಿಗೆ ಎದ್ದುಕಾಣುತ್ತಿತ್ತು! 26 ಆದ್ದರಿಂದ ಪಾಳೆಯದ ದ್ವಾರದಲ್ಲಿ ಮೋಶೆಯು ನಿಂತು, “ಯೆಹೋವನ ಪಕ್ಷದವರು ನನ್ನ ಬಳಿಗೆ ಬರಬೇಕು” ಎಂದು ಹೇಳಿದನು. ಲೇವಿ ಕುಲದವರೆಲ್ಲಾ ಮೋಶೆಯ ಬಳಿಗೆ ಬಂದರು.
27 ಆಗ ಮೋಶೆ ಅವರಿಗೆ, “ಇಸ್ರೇಲರ ದೇವರಾದ ಯೆಹೋವನು ಹೇಳುವುದನ್ನು ನಿಮಗೆ ತಿಳಿಸುತ್ತೇನೆ: ‘ನಿಮ್ಮಲ್ಲಿ ಪ್ರತಿಯೊಬ್ಬನು ಕತ್ತಿಯನ್ನು ತೆಗೆದುಕೊಂಡು ಪಾಳೆಯದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಹೋಗಿ ಜನರನ್ನು ಶಿಕ್ಷಿಸಬೇಕು. ನಿಮ್ಮ ಸಹೋದರರಾಗಿದ್ದರೂ ಸ್ನೇಹಿತರಾಗಿದ್ದರೂ ಅಥವಾ ನೆರೆಯವರಾಗಿದ್ದರೂ ಸರಿ, ಕೊಲ್ಲಿರಿ’” ಎಂದು ಹೇಳಿದನು.
28 ಲೇವಿಕುಲದವರು ಮೋಶೆಯ ಮಾತಿಗೆ ವಿಧೇಯರಾದರು. ಅಂದು ಇಸ್ರೇಲರಲ್ಲಿ ಸುಮಾರು ಮೂರು ಸಾವಿರ ಮಂದಿ ಸತ್ತರು. 29 ಆಗ ಮೋಶೆಯು ಅವರಿಗೆ, “ಇಂದು ನೀವು ಯೆಹೋವನಿಗೆ ಮೀಸಲಾದ ಜನರಾದಿರಿ; ಯಾಕೆಂದರೆ ನೀವು ನಿಮ್ಮ ಸ್ವಂತ ಗಂಡುಮಗನಿಗೂ ಸಹೋದರನಿಗೂ ವಿರೋಧವಾದಿರಿ. ಇಂದು ಆತನು ನಿಮ್ಮನ್ನು ಆಶೀರ್ವದಿಸಿದ್ದಾನೆ” ಅಂದನು.
30 ಮರುದಿನ ಮುಂಜಾನೆ ಮೋಶೆಯು ಜನರಿಗೆ, “ನೀವು ಭಯಂಕರವಾದ ಪಾಪವನ್ನು ಮಾಡಿದ್ದೀರಿ. ಆದರೆ ಈಗ ನಾನು ಯೆಹೋವನ ಬಳಿಗೆ ಹೋಗಿ, ಆತನು ನಿಮ್ಮ ಪಾಪಗಳನ್ನು ಕ್ಷಮಿಸುವಂತೆ ನಾನೇನಾದರೂ ಮಾಡಬಹುದೊ ಎಂದು ವಿಚಾರಿಸುತ್ತೇನೆ” ಎಂದನು. 31 ಅಂತೆಯೇ ಮೋಶೆಯು ಯೆಹೋವನ ಬಳಿಗೆ ಮರಳಿ ಹೋಗಿ, “ದಯವಿಟ್ಟು ಆಲಿಸು! ಈ ಜನರು ಬಹಳ ಕೆಟ್ಟ ಪಾಪವನ್ನು ಮಾಡಿದ್ದಾರೆ. ಚಿನ್ನದಿಂದ ಮೂರ್ತಿಯನ್ನು ಮಾಡಿಕೊಂಡಿದ್ದಾರೆ. 32 ಅವರ ಈ ಪಾಪವನ್ನು ಕ್ಷಮಿಸು. ನೀನು ಅವರನ್ನು ಕ್ಷಮಿಸುವುದಿಲ್ಲವಾದರೆ ನಿನ್ನ ಜೀವಭಾದ್ಯರ ಪಟ್ಟಿಯ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು” ಎಂದು ಪ್ರಾರ್ಥಿಸಿದನು.
33 ಆದರೆ ಯೆಹೋವನು ಮೋಶೆಗೆ, “ನನಗೆ ವಿರೋಧವಾಗಿ ಪಾಪಮಾಡುವ ಜನರ ಹೆಸರನ್ನು ಮಾತ್ರವೇ ನನ್ನ ಪುಸ್ತಕದಿಂದ ಅಳಿಸುತ್ತೇನೆ. 34 ಆದ್ದರಿಂದ ಈಗ ಕೆಳಗಿಳಿದು ನಾನು ನಿನಗೆ ಹೇಳುವಲ್ಲಿಗೆ ಜನರನ್ನು ನಡಿಸು. ನನ್ನ ದೂತನು ನಿನ್ನ ಮುಂದೆ ಹೋಗಿ ನಿನ್ನನ್ನು ನಡಿಸುವನು. ಪಾಪಮಾಡಿದ ಜನರನ್ನು ಶಿಕ್ಷಿಸುವ ಸಮಯ ಬಂದಾಗ ಅವರು ಶಿಕ್ಷಿಸಲ್ಪಡುವರು” ಎಂದು ಹೇಳಿದನು. 35 ಆದ್ದರಿಂದ ಯೆಹೋವನು ಜನರಿಗೆ ಭಯಂಕರವಾದ ವ್ಯಾದಿಯನ್ನು ಬರಮಾಡಿದನು. ಅವರು ಆರೋನನಿಂದ ಬಸವನನ್ನು ಮಾಡಿಸಿಕೊಂಡದ್ದೇ ಇದಕ್ಕೇ ಕಾರಣ.
Kannada Holy Bible: Easy-to-Read Version. All rights reserved. © 1997 Bible League International