Beginning
ಯಾಜಕರು ಧರಿಸಬೇಕಾದ ಬಟ್ಟೆಗಳು
28 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಂದ ನಿನ್ನ ಬಳಿಗೆ ಬರಲು ನಿನ್ನ ಅಣ್ಣನಾದ ಆರೋನನಿಗೂ ಅವನ ಗಂಡುಮಕ್ಕಳಾದ ನಾದಾಬ, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರಿಗೂ ಹೇಳು. ಇವರು ಯಾಜಕರಾಗಿ ನನ್ನ ಸೇವೆ ಮಾಡುವರು.
2 “ನಿನ್ನ ಅಣ್ಣನಾದ ಆರೋನನಿಗೆ ವಿಶೇಷ ಬಟ್ಟೆಗಳನ್ನು ಮಾಡಿಸು. ಈ ಬಟ್ಟೆಗಳು ಅವನಿಗೆ ಘನತೆಯನ್ನೂ ಗೌರವವನ್ನೂ ನೀಡುತ್ತವೆ. 3 ಈ ಬಟ್ಟೆಗಳನ್ನು ಮಾಡುವಂಥ ಕೆಲವು ನಿಪುಣರಿದ್ದಾರೆ. ನಾನು ಅವರಿಗೆ ವಿಶೇಷ ಜ್ಞಾನವನ್ನು ಕೊಟ್ಟಿದ್ದೇನೆ. ಆರೋನನಿಗೆ ಬೇಕಾದ ಬಟ್ಟೆಗಳನ್ನು ಮಾಡಲು ಅವರಿಗೆ ಹೇಳು. ಅವನು ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡುತ್ತಾನೆಂದು ಈ ಬಟ್ಟೆಗಳು ತೋರಿಸುತ್ತವೆ. ಆಗ ಅವನು ಯಾಜಕನಾಗಿ ನನ್ನ ಸೇವೆ ಮಾಡಬಹುದು. 4 ಅವರು ಮಾಡತಕ್ಕ ಬಟ್ಟೆಗಳು ಯಾವುವೆಂದರೆ: ದೈವನಿರ್ಣಯಕ ಪದಕ, ಏಫೋದು, ನೀಲಿಯ ನಿಲುವಂಗಿ, ಹೆಣೆದ ಬಿಳಿಯ ನಿಲುವಂಗಿ, ಮುಂಡಾಸು ಮತ್ತು ನಡುಕಟ್ಟು. ನಿನ್ನ ಅಣ್ಣನಾದ ಆರೋನನಿಗೂ ಅವನ ಗಂಡುಮಕ್ಕಳಿಗೂ ಈ ವಿಶೇಷ ಬಟ್ಟೆಗಳನ್ನು ಅವರು ಮಾಡಬೇಕು. ಆಗ ಆರೋನನೂ ಅವನ ಗಂಡುಮಕ್ಕಳೂ ಯಾಜಕರಾಗಿ ನನ್ನ ಸೇವೆಮಾಡಬಹುದು. 5 ಚಿನ್ನದ ದಾರಗಳು, ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಲು ಅವರಿಗೆ ಹೇಳು.
ಏಫೋದು ಮತ್ತು ನಡುಕಟ್ಟು
6 “ಏಫೋದನ್ನು ಚಿನ್ನದ ದಾರಗಳು, ನಾರಿನಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಚಾಣಾಕ್ಷತೆಯಿಂದ ಹೆಣೆದು ತಯಾರಿಸಬೇಕು. 7 ಏಫೋದಿನ ಪ್ರತಿಭುಜದಲ್ಲಿ ಭುಜದ ಪಟ್ಟಿಯಿರಬೇಕು. ಭುಜದ ಈ ಪಟ್ಟಿಗಳು ಏಫೋದಿನ ಎರಡು ಕೊನೆಗಳಿಗೆ ಕಟ್ಟಿರಬೇಕು.
8 “ಇವರು ಏಫೋದಿಗೆ ಸೇರಿಸಲ್ಪಟ್ಟಿರುವ ನಡುಕಟ್ಟನ್ನು ಬಹಳ ಎಚ್ಚರಿಕೆಯಿಂದ ಹೆಣೆಯಬೇಕು. ಏಫೋದನ್ನು ತಯಾರಿಸಿದಂತೆಯೇ ಈ ನಡುಕಟ್ಟನ್ನು ತಯಾರಿಸಬೇಕು. ಚಿನ್ನದ ದಾರಗಳು, ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು.
9 “ಎರಡು ಗೋಮೇಧಕ ರತ್ನಗಳನ್ನು ತೆಗೆದುಕೊ. ಈ ರತ್ನಗಳ ಮೇಲೆ ಇಸ್ರೇಲನ ಹನ್ನೆರಡು ಗಂಡುಮಕ್ಕಳ ಹೆಸರನ್ನು ಬರೆಸು. 10 ಒಂದು ರತ್ನದ ಮೇಲೆ ಆರು ಹೆಸರುಗಳನ್ನೂ ಇನ್ನೊಂದು ರತ್ನದ ಮೇಲೆ ಆರು ಹೆಸರುಗಳನ್ನೂ ಬರೆಸು. ಹಿರಿಮಗನಿಂದ ಹಿಡಿದು ಕಿರಿ ಮಗನವರೆಗೆ ಕ್ರಮಾನುಸಾರವಾಗಿ ಹೆಸರುಗಳನ್ನು ಬರೆಸು. 11 ಈ ಕಲ್ಲುಗಳ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರನ್ನು ಕೆತ್ತಿಸು. ಒಬ್ಬ ಕೆಲಸಗಾರನು ಮುದ್ರೆಯನ್ನು ಮಾಡುವ ರೀತಿಯಲ್ಲಿ ಇದನ್ನು ಮಾಡಿಸು. ಚಿನ್ನದ ಕುಂದಣದಲ್ಲಿ ರತ್ನಗಳನ್ನಿಡು. 12 ಬಳಿಕ ಈ ಎರಡು ರತ್ನಗಳನ್ನು ಏಫೋದಿನ ಪ್ರತಿಭುಜದ ಪಟ್ಟಿಯಲ್ಲಿಡು. ಆರೋನನು ಯೆಹೋವನ ಮುಂದೆ ನಿಲ್ಲುವಾಗ ಈ ವಿಶೇಷ ಅಂಗಿಯನ್ನು ಧರಿಸಿಕೊಂಡಿರುವನು. ಇಸ್ರೇಲನ ಗಂಡುಮಕ್ಕಳ ಹೆಸರುಗಳುಳ್ಳ ಎರಡು ರತ್ನಗಳು ಏಫೋದಿನ ಮೇಲಿರುತ್ತವೆ. ದೇವರು ಇಸ್ರೇಲರನ್ನು ಜ್ಞಾಪಿಸಿಕೊಳ್ಳುವಂತೆ ಈ ರತ್ನಗಳು ಮಾಡುವವು. 13 ಏಫೋದಿನಲ್ಲಿ ಕಲ್ಲುಗಳು ಬಿಗಿಯಾಗಿ ಹಿಡಿದುಕೊಂಡಿರಲು ಉತ್ತಮ ಚಿನ್ನವನ್ನು ಉಪಯೋಗಿಸು. 14 ಹೆಣಿಗೆ ಕೆಲಸದಿಂದ ಶುದ್ಧಬಂಗಾರದ ಎರಡು ಸರಪಣಿಗಳನ್ನು ಮಾಡಿಸಿ ಚಿನ್ನದ ಗೂಡುಗಳಿಗೆ ಬಿಗಿಯಾಗಿ ಸಿಕ್ಕಿಸಬೇಕು.
ದೈವನಿರ್ಣಯದ ಪದಕ
15 “ಮಹಾಯಾಜಕನಿಗೆ ದೈವನಿರ್ಣಯದ ಪದಕವನ್ನು ಮಾಡಿಸು. ಏಫೋದನ್ನು ಮಾಡಿಸಿದಂತೆ ನಿಪುಣರಾದ ಕೆಲಸಗಾರರಿಂದ ಇದನ್ನು ಮಾಡಿಸಬೇಕು. ಚಿನ್ನದ ದಾರಗಳು, ಉತ್ಕೃಷ್ಟವಾದ ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪು ದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು. 16 ಅದು ಚೌಕವಾಗಿದ್ದು ಒಂಭತ್ತು ಇಂಚು ಉದ್ದವಾಗಿಯೂ ಒಂಭತ್ತು ಇಂಚು ಅಗಲವಾಗಿಯೂ ಇರಬೇಕು. 17 ಅದರ ಮೇಲೆ ಅಂದವಾದ ರತ್ನಗಳನ್ನು ನಾಲ್ಕು ಸಾಲುಗಳಾಗಿ ಹಾಕಿಸಬೇಕು. ರತ್ನಗಳ ಮೊದಲಿನ ಸಾಲಿನಲ್ಲಿ ಮಾಣಿಕ್ಯ, ಪುಷ್ಪರಾಗ, ಸ್ಪಟಿಕಗಳಿರಬೇಕು. 18 ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ, ಪಚ್ಚೆಗಳಿರಬೇಕು. 19 ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಕ ಮತ್ತು ಧೂಮ್ರಮಣಿಗಳಿರಬೇಕು. 20 ನಾಲ್ಕನೆಯ ಸಾಲಿನಲ್ಲಿ ಪೀತರತ್ನ ಮತ್ತು ಬೆರುಲ್ಲ ವಜ್ರಗಳಿರಬೇಕು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು. 21 ಇಸ್ರೇಲನ ಗಂಡುಮಕ್ಕಳಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ರತ್ನದಂತೆ ದೈವನಿರ್ಣಯ ಪದಕದಲ್ಲಿ ಹನ್ನೆರಡು ರತ್ನಗಳಿರಬೇಕು. ಪ್ರತಿಯೊಂದು ಕಲ್ಲುಗಳಲ್ಲಿ ಇಸ್ರೇಲನ ಗಂಡುಮಕ್ಕಳ ಒಬ್ಬೊಬ್ಬರ ಹೆಸರನ್ನು ಬರೆಸಬೇಕು. ಒಬ್ಬ ಕೆಲಸಗಾರನು ಮುದ್ರೆಯನ್ನು ಕೆತ್ತುವಂತೆ ಈ ಹೆಸರುಗಳನ್ನು ಪ್ರತಿ ರತ್ನದ ಮೇಲೆ ಕೆತ್ತಿಸಬೇಕು.
22 “ದೈವನಿರ್ಣಯ ಪದಕದಲ್ಲಿ ಶುದ್ಧಬಂಗಾರದ ಸರಪಣಿಗಳನ್ನು ಮಾಡಿಸು. ಈ ಸರಪಣಿಗಳು ಹುರಿಗಳಂತಿರುವ ಹಗ್ಗದಂತೆ ಇರಬೇಕು. 23 ಬಂಗಾರದ ಎರಡು ಬಳೆಗಳನ್ನು ಮಾಡಿಸಿ ಅದರ ಎರಡು ಕೊನೆಗಳಲ್ಲಿ ಸಿಕ್ಕಿಸಬೇಕು. 24 ಅದರ ಕೊನೆಯಲ್ಲಿರುವ ಎರಡು ಬಳೆಗಳ ಮೂಲಕ ಚಿನ್ನದ ಎರಡು ಸರಪಣಿಗಳನ್ನು ಸಿಕ್ಕಿಸಬೇಕು. 25 ಚಿನ್ನದ ಸರಪಣಿಗಳ ಇನ್ನೊಂದು ಕೊನೆಗಳನ್ನು ಎರಡು ಪಟ್ಟಿಗಳಿಗೆ ಬಿಗಿಯಾಗಿ ಕಟ್ಟಿಸಬೇಕು. ಇದು ಮುಂಬದಿಯಲ್ಲಿರುವ ಏಫೋದಿನ ಎರಡು ಭುಜದ ಪಟ್ಟಿಗಳಿಗೆ ಬಿಗಿಯಾಗಿ ಹಿಡಿದುಕೊಂಡಿರುವಂತೆ ಮಾಡುವುದು. 26 ಇನ್ನೂ ಎರಡು ಚಿನ್ನದ ಬಳೆಗಳನ್ನು ಮಾಡಿಸಿ, ಅವುಗಳನ್ನು ದೈವನಿರ್ಣಯದ ಪದಕದ ಬೇರೆ ಎರಡು ಕೊನೆಗಳಿಗೆ ಸಿಕ್ಕಿಸು. ಇದು ದೈವನಿರ್ಣಯದ ಪದಕದ ಒಳಗಣ ಅಂಚಿನಲ್ಲಿರುವುದು. 27 ಇನ್ನೆರಡು ಚಿನ್ನದ ಬಳೆಗಳನ್ನು ಮಾಡಿಸಿ ಅವುಗಳನ್ನು ಏಫೋದಿನ ಭುಜಪಟ್ಟಿಗಳ ಮುಂಭಾಗದ ಕೆಳಗೆ ಸಿಕ್ಕಿಸು. ಈ ಚಿನ್ನದ ಬಳೆಗಳನ್ನು ಏಫೋದಿನ ನಡುಕಟ್ಟಿನ ಮೇಲ್ಗಡೆ ಇರಿಸು. 28 ದೈವನಿರ್ಣಯದ ಪದಕದ ಬಳೆಗಳನ್ನು ಏಫೋದಿನ ಬಳೆಗಳಿಗೆ ಜೋಡಿಸಲು ನೀಲಿದಾರವನ್ನು ಉಪಯೋಗಿಸು. ಈ ರೀತಿಯಲ್ಲಿ ದೈವನಿರ್ಣಯದ ಪದಕವು ನಡುಕಟ್ಟಿಗೆ ಹತ್ತಿರವಾಗಿದ್ದು ಏಫೋದಿಗೆ ಬಿಗಿಯಾಗಿ ಅಂಟಿಕೊಂಡಿರುವುದು.
29 “ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ, ದೈವನಿರ್ಣಯದ ಪದಕವನ್ನು ಧರಿಸಿಕೊಳ್ಳಬೇಕು. ಈ ರೀತಿ ಎದೆಯ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರುಗಳಿರಬೇಕು. ಅವನು ನ್ಯಾಯತೀರಿಸಲು ಧರಿಸಿಕೊಂಡಿರುವ ದೈವನಿರ್ಣಯದ ಪದಕದ ಮೇಲೆ ಈ ಹೆಸರುಗಳಿರುತ್ತವೆ. ಈ ರೀತಿಯಲ್ಲಿ ಇಸ್ರೇಲನ ಹನ್ನೆರಡು ಮಂದಿ ಗಂಡುಮಕ್ಕಳನ್ನು ಯೆಹೋವನಿಗೆ ಯಾವಾಗಲೂ ಜ್ಞಾಪಿಸಲಾಗುವುದು. 30 ದೈವನಿರ್ಣಯದ ಪದಕದೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಡು. ಆರೋನನು ಯೆಹೋವನ ಮುಂದೆ ಹೋಗುವಾಗ ಅವುಗಳು ಅವನ ಎದೆಯ ಮೇಲಿರುವವು. ಹೀಗೆ ಆರೋನನು ಯೆಹೋವನ ಮುಂದೆ ನಿಲ್ಲುವಾಗಲೆಲ್ಲಾ, ಜನರಿಗೆ ತೀರ್ಪು ನೀಡತಕ್ಕದ್ದನ್ನು ಯಾವಾಗಲೂ ತನ್ನ ಎದೆಯ ಮೇಲೆ ಹೊತ್ತುಕೊಂಡಿರುವನು.
ಯಾಜಕರ ಇತರ ಬಟ್ಟೆಗಳು
31 “ಏಫೋದಿನ ಒಳಗೆ ಹಾಕಿಕೊಳ್ಳಲು ಒಂದು ನಿಲುವಂಗಿಯನ್ನು ನೀಲಿಬಟ್ಟೆಯಿಂದ ಮಾಡಿಸಬೇಕು. 32 ತಲೆಯನ್ನು ತೂರಿಸುವುದಕ್ಕೆ ಮಧ್ಯದಲ್ಲಿ ಒಂದು ಸಂದು ಮಾಡಿಸು. ಈ ಸಂದಿನ ಸುತ್ತಲೂ ಹೆಣೆದ ಬಟ್ಟೆಯನ್ನು ಹೊಲಿಸು. ಈ ಬಟ್ಟೆಯು ಸಂದು ಹರಿದುಹೋಗದಂತೆ ಕಾಪಾಡುವುದು. 33 ಬಟ್ಟೆಯ ಅಂಚಿನ ಸುತ್ತಲೂ ದಾಳಿಂಬೆ ಹಣ್ಣುಗಳನ್ನು ಮಾಡಲು ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಬೇಕು. ಆ ದಾಳಿಂಬೆ ಹಣ್ಣಿನ ಚೆಂಡುಗಳನ್ನು ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ನೇತಾಡುವಂತೆ ಸಿಕ್ಕಿಸಬೇಕು. ದಾಳಿಂಬೆ ಹಣ್ಣಿನ ಚೆಂಡುಗಳ ನಡುವೆ ಚಿನ್ನದ ಗೆಜ್ಜೆಗಳನ್ನು ಸಿಕ್ಕಿಸಬೇಕು. 34 ಹೀಗೆ ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ಗೆಜ್ಜೆಗಳು ಮತ್ತು ದಾಳಿಂಬೆ ಹಣ್ಣುಗಳು ಇರಬೇಕು. ಪ್ರತಿ ಎರಡು ದಾಳಿಂಬೆ ಹಣ್ಣಿನ ನಡುವೆ ಗೆಜ್ಜೆ ಇರಬೇಕು. 35 ಆರೋನನು ಯಾಜಕನಾಗಿ ಸೇವೆಮಾಡುವಾಗ ಈ ನಿಲುವಂಗಿಯನ್ನು ಧರಿಸಿಕೊಂಡಿರುವನು. ಯೆಹೋವನ ಮುಂದೆ ನಿಲ್ಲುವುದಕ್ಕೆ ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ ಗೆಜ್ಜೆಗಳು ಶಬ್ದ ಮಾಡುತ್ತಿರುತ್ತವೆ. ಅವನು ಪವಿತ್ರಸ್ಥಳವನ್ನು ಬಿಡುವಾಗಲೂ ಗೆಜ್ಜೆಗಳು ಶಬ್ಧ ಮಾಡುತ್ತಿರುತ್ತವೆ. ಹೀಗಾಗಿ ಆರೋನನು ಸಾಯುವುದಿಲ್ಲ.
36 “ಶುದ್ಧಬಂಗಾರದ ಪಟ್ಟಿಯನ್ನು ಮಾಡಿಸಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ “ಯೆಹೋವನಿಗೆ ಮೀಸಲು” ಎಂಬ ಮಾತುಗಳನ್ನು ಚಿನ್ನದಲ್ಲಿ ಕೆತ್ತಿಸಬೇಕು. 37 ಚಿನ್ನದ ಪಟ್ಟಿಯನ್ನು ನೀಲಿದಾರಕ್ಕೆ ಬಿಗಿಯಾಗಿ ಕಟ್ಟಿಸಬೇಕು. ನೀಲಿದಾರವನ್ನು ಮುಂಡಾಸದ ಸುತ್ತಲೂ ಅದರಲ್ಲಿ ಕೆತ್ತಿಸಬೇಕು. ಚಿನ್ನದ ಪಟ್ಟಿಯು ಮುಂಡಾಸದ ಮುಂಭಾಗದಲ್ಲಿರಬೇಕು. 38 ಆರೋನನು ಇದನ್ನು ತನ್ನ ಹಣೆಯ ಮೇಲೆ ಧರಿಸಿಕೊಳ್ಳುವನು. ಹೀಗೆ, ಇಸ್ರೇಲರು ಅರ್ಪಿಸಿದ ಕಾಣಿಕೆಗಳಲ್ಲಿ ದೋಷವೇನಾದರೂ ಇದ್ದರೆ ಅವನು ಅದನ್ನು ತನ್ನ ಮೇಲೆ ತೆಗೆದುಕೊಂಡು ತಾನೇ ಅದನ್ನು ವಹಿಸಿಕೊಳ್ಳುವನು. ಇವು ಜನರು ಯೆಹೋವನಿಗೆ ಸಮರ್ಪಿಸುವ ಕಾಣಿಕೆಗಳಾಗಿವೆ. ಜನರ ಕಾಣಿಕೆಗಳನ್ನು ಯೆಹೋವನು ಅಂಗೀಕರಿಸುವಂತೆ ಆರೋನನು ಇದನ್ನು ಯಾವಾಗಲೂ ತನ್ನ ಶಿರದಲ್ಲಿ ಧರಿಸಿಕೊಂಡಿರುವನು.
39 “ಹೆಣೆದ ಅಂಗಿಯನ್ನು ಮತ್ತು ಮುಂಡಾಸವನ್ನು ಮಾಡಲು ಉತ್ಕೃಷ್ಟವಾದ ನಾರಿನ ಬಟ್ಟೆಯನ್ನು ಉಪಯೋಗಿಸು. ನಡುಕಟ್ಟನ್ನು ಬುಟ್ಟೀದಾರಿ ಕೆಲಸದಿಂದ ಮಾಡಿಸಬೇಕು. 40 ಆರೋನನ ಗಂಡುಮಕ್ಕಳಿಗೂ ಅಂಗಿಗಳನ್ನು, ನಡುಕಟ್ಟುಗಳನ್ನು ಮತ್ತು ಮುಂಡಾಸಗಳನ್ನು ಮಾಡಿಸು. ಇವು ಅವರಿಗೆ ಘನತೆ ಮತ್ತು ಗೌರವಗಳನ್ನು ಕೊಡುತ್ತವೆ. 41 ನಿನ್ನ ಸಹೋದರನಾದ ಆರೋನನಿಗೆ ಮತ್ತು ಅವನ ಗಂಡುಮಕ್ಕಳಿಗೆ ಬಟ್ಟೆಗಳನ್ನು ತೊಡಿಸು. ಬಳಿಕ ಅವರನ್ನು ಯಾಜಕರನ್ನಾಗಿ ಮಾಡಲು ವಿಶೇಷ ತೈಲದಿಂದ ಅಭಿಷೇಕಿಸು. ಇದು ಅವರನ್ನು ಪ್ರತಿಷ್ಠಿಸುವುದು ಮತ್ತು ಪವಿತ್ರರನ್ನಾಗಿ ಮಾಡುವುದು. ಅವರು ಯಾಜಕರಾಗಿ ನನ್ನ ಸೇವೆ ಮಾಡುವರು.
42 “ಯಾಜಕರಿಗೆ ಒಳಗಿನ ಉಡುಪುಗಳನ್ನು ಮಾಡಲು ನಾರುಬಟ್ಟೆಯನ್ನು ಉಪಯೋಗಿಸು. ಈ ಒಳಗಿನ ಉಡುಪುಗಳು ಅವರನ್ನು ಸೊಂಟದಿಂದ ತೊಡೆಯವರೆಗೆ ಮುಚ್ಚುವುದು. 43 ಆರೋನನು ಮತ್ತು ಅವನ ಗಂಡುಮಕ್ಕಳು ದೇವದರ್ಶನ ಗುಡಾರದೊಳಗೆ ಪ್ರವೇಶಿಸುವಾಗಲೆಲ್ಲಾ ಈ ಉಡುಪುಗಳನ್ನು ಧರಿಸಿಕೊಳ್ಳಬೇಕು. ಪವಿತ್ರಸ್ಥಳದಲ್ಲಿ ಯಾಜಕರಾಗಿ ಸೇವೆಮಾಡಲು ಯಜ್ಞವೇದಿಕೆಯ ಬಳಿಗೆ ಬರುವಾಗ ಅವರು ಈ ಬಟ್ಟೆಗಳನ್ನು ಧರಿಸಿಕೊಂಡಿರಬೇಕು. ಅವರು ಈ ಉಡುಪುಗಳನ್ನು ಧರಿಸಿಕೊಳ್ಳದಿದ್ದರೆ, ದೋಷಿಗಳಾಗಿ ಸಾಯುವರು. ಇವುಗಳೆಲ್ಲಾ ಆರೋನನಿಗೂ ಅವನ ನಂತರ ಅವನ ಕುಟುಂಬಸ್ಥರೆಲ್ಲರಿಗೂ ಶಾಶ್ವತವಾದ ಕಟ್ಟಳೆಯಾಗಿವೆ.”
ಯಾಜಕರನ್ನು ನೇಮಿಸುವ ಆಚಾರವಿಧಿ
29 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಆರೋನನು ಮತ್ತು ಅವನ ಗಂಡುಮಕ್ಕಳು ಅಭಿಷೇಕಿಸಲ್ಪಟ್ಟ ಮತ್ತು ಪ್ರತ್ಯೇಕಿಸಲ್ಪಟ್ಟ ಯಾಜಕರಾಗಿ ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡಲು ಅವರು ಮಾಡತಕ್ಕದ್ದೇನೆಂಬುದನ್ನು ನಾನೀಗ ಹೇಳುವೆನು. ಯಾವ ಅಂಗದೋಷವಿಲ್ಲದ ಒಂದು ಹೋರಿಮರಿಯನ್ನು ಮತ್ತು ಎರಡು ಟಗರುಗಳನ್ನು ತೆಗೆದುಕೊ. 2 ಬಳಿಕ ಹುಳಿಯಿಲ್ಲದ ರೊಟ್ಟಿಯನ್ನೂ ಆಲಿವ್ ಎಣ್ಣೆ ಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನೂ ಎಣ್ಣೆ ಹಾಕಿದ ತೆಳುವಾದ ಕಡುಬುಗಳನ್ನೂ ಗೋಧಿಹಿಟ್ಟಿನಿಂದ ಮಾಡಿಸಿ ಒಂದೇ ಬುಟ್ಟಿಯಲ್ಲಿ ತುಂಬಿಸಬೇಕು. 3 ಬಳಿಕ ಆ ಬುಟ್ಟಿಯನ್ನು ಆರೋನನಿಗೂ ಮತ್ತು ಅವನ ಪುತ್ರರಿಗೂ ಕೊಡು. ಅದೇ ಸಮಯದಲ್ಲಿ ಹೋರಿಯನ್ನು ಮತ್ತು ಎರಡು ಟಗರುಗಳನ್ನು ಅವರಿಗೆ ಕೊಡು.
4 “ತರುವಾಯ ಆರೋನನನ್ನೂ ಅವನ ಪುತ್ರರನ್ನೂ ದೇವದರ್ಶನಗುಡಾರದ ದ್ವಾರಕ್ಕೆ ಕರೆದುಕೊಂಡು ಬಾ. ಅವರನ್ನು ನೀರಿನಲ್ಲಿ ಸ್ನಾನಮಾಡಿಸು. 5 ವಿಶೇಷವಾದ ಬಟ್ಟೆಗಳನ್ನು ಆರೋನನಿಗೆ ತೊಡಿಸು. ಹೆಣೆದ ಅಂಗಿಯನ್ನು ಮತ್ತು ಏಫೋದಿನೊಡನೆ ಧರಿಸತಕ್ಕ ದೈವನಿರ್ಣಯದ ಪದಕವನ್ನು ಅವನಿಗೆ ತೊಡಿಸು. ಬಳಿಕ ಅಂದವಾದ ನಡುಕಟ್ಟನ್ನು ಅವನಿಗೆ ಕಟ್ಟು. 6 ಅವನ ತಲೆಗೆ ಮುಂಡಾಸನ್ನು ಇಡು ಮತ್ತು ಮುಂಡಾಸಕ್ಕೆ ವಿಶೇಷವಾದ ಕಿರೀಟವನ್ನು ಕಟ್ಟಿಸು. 7 ಅಭಿಷೇಕತೈಲವನ್ನು ತೆಗೆದುಕೊಂಡು ಆರೋನನ ತಲೆಯ ಮೇಲೆ ಸುರಿ.
8 “ತರುವಾಯ ಆರೋನನ ಪುತ್ರರನ್ನು ಆ ಸ್ಥಳಕ್ಕೆ ಕರೆದುಕೊಂಡು ಬಾ. ಅವರಿಗೆ ಹೆಣೆದ ಅಂಗಿಗಳನ್ನು ತೊಡಿಸು. 9 ಬಳಿಕ ಅವರ ಸೊಂಟಗಳಿಗೆ ನಡುಕಟ್ಟುಗಳನ್ನು ಸುತ್ತಿಸು. ಅಂದಿನಿಂದ ಅವರು ಯಾಜಕರಾಗಿರುವರು. ವಿಶೇಷವಾದ ಈ ಕಟ್ಟಳೆಯು ಶಾಶ್ವತವಾಗಿರುವುದರಿಂದ ಅವರು ಯಾಜಕರಾಗಿರುವರು. ಹೀಗೆ ಆರೋನನನ್ನೂ ಅವನ ಪುತ್ರರನ್ನೂ ನೀನು ಯಾಜಕರನ್ನಾಗಿ ಮಾಡುವೆ.
10 “ತರುವಾಯ ನೀನು ಹೋರಿಯನ್ನು ದೇವದರ್ಶನಗುಡಾರದ ಎದುರಿಗೆ ತರಬೇಕು. ಆರೋನನು ಮತ್ತು ಅವನ ಪುತ್ರರು ತಮ್ಮ ಕೈಗಳನ್ನು ಹೋರಿಯ ತಲೆಯ ಮೇಲಿಡಬೇಕು. 11 ಬಳಿಕ ದೇವದರ್ಶನಗುಡಾರದ ದ್ವಾರದಲ್ಲಿ ಹೋರಿಯನ್ನು ವಧಿಸು. ಯೆಹೋವನು ಇದನ್ನು ನೋಡುವನು. 12 ತರುವಾಯ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಕೆಯ ಬಳಿಗೆ ಹೋಗು. ವೇದಿಕೆಯ ಕೊಂಬುಗಳಿಗೆ ನಿನ್ನ ಬೆರಳಿನಿಂದ ರಕ್ತವನ್ನು ಹಚ್ಚು. ಉಳಿದ ರಕ್ತವನ್ನೆಲ್ಲಾ ಯಜ್ಞವೇದಿಕೆಯ ಬುಡಕ್ಕೆ ಸುರಿದುಬಿಡು. 13 ಬಳಿಕ ಹೋರಿಯ ಒಳಗಿನ ಕೊಬ್ಬನ್ನೂ ಪಿತ್ತಕೋಶದ ಸುತ್ತಲಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳ ಸುತ್ತಲಿರುವ ಕೊಬ್ಬನ್ನೂ ತೆಗೆದುಬಿಡು. ಈ ಕೊಬ್ಬನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡು. 14 ಬಳಿಕ ಹೋರಿಯ ಮಾಂಸ, ಚರ್ಮ, ಇತರ ಭಾಗಗಳನ್ನು ತೆಗೆದುಕೊಂಡು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಸುಟ್ಟುಬಿಡು. ಇದು ಯಾಜಕರ ಪಾಪಗಳನ್ನು ಪರಿಹರಿಸುವ ಕಾಣಿಕೆಯಾಗಿದೆ.
15 “ತರುವಾಯ ಆರೋನನಿಗೂ ಅವನ ಪುತ್ರರಿಗೂ ತಮ್ಮ ಕೈಗಳನ್ನು ಒಂದು ಟಗರಿನ ತಲೆಯ ಮೇಲೆ ಇಡಬೇಕೆಂದು ಹೇಳು. 16 ಆ ಟಗರನ್ನು ವಧಿಸಿ ಅದರ ರಕ್ತವನ್ನು ಯಜ್ಞವೇದಿಕೆಯ ನಾಲ್ಕು ಕಡೆಗಳಿಗೆ ಚೆಲ್ಲು. 17 ಬಳಿಕ ಟಗರನ್ನು ಅನೇಕ ತುಂಡುಗಳಾಗಿ ಕತ್ತರಿಸು. ಟಗರಿನ ಒಳಗಿನ ಎಲ್ಲಾ ಭಾಗಗಳನ್ನು ಮತ್ತು ಕಾಲುಗಳನ್ನು ತೊಳೆಯಬೇಕು. ಅವುಗಳನ್ನು ತಲೆಯ ಮತ್ತು ಟಗರಿನ ಇತರ ತುಂಡುಗಳೊಡನೆ ಇಡು. 18 ತರುವಾಯ ಯಜ್ಞವೇದಿಕೆಯ ಮೇಲೆ ಇಡೀ ಟಗರನ್ನು ಹೋಮಮಾಡು. ಇದು ವಿಶೇಷವಾದ ಸರ್ವಾಂಗಹೋಮವಾಗಿದೆ. ಇದು ಯೆಹೋವನಿಗೆ ಪರಿಮಳ ವಾಸನೆಯಾಗಿದ್ದು ಆತನಿಗೆ ಮೆಚ್ಚಿಕೆಕರವಾಗಿದೆ.
19 “ಮತ್ತೊಂದು ಟಗರಿನ ಮೇಲೆ ತಮ್ಮ ಕೈಗಳನ್ನಿಡಲು ಆರೋನನಿಗೂ ಅವನ ಪುತ್ರರಿಗೂ ಹೇಳು. 20 ಆ ಟಗರನ್ನು ವಧಿಸಿ ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊ. ಆ ರಕ್ತವನ್ನು ಆರೋನ ಮತ್ತು ಅವನ ಪುತ್ರರ ಬಲಗಿವಿಯ ತುದಿಗೆ ಹಚ್ಚು. ಅದಲ್ಲದೆ ಅವರ ಬಲಗೈಗಳ ಹೆಬ್ಬೆರಳುಗಳಿಗೂ ಸ್ವಲ್ಪ ರಕ್ತವನ್ನು ಹಚ್ಚು. ಸ್ವಲ್ಪ ರಕ್ತವನ್ನು ಅವರ ಬಲಗಾಲಿನ ಹೆಬ್ಬೊಟ್ಟಿಗೂ ಹಚ್ಚು. ಬಳಿಕ ಉಳಿದ ರಕ್ತವನ್ನು ಯಜ್ಞವೇದಿಕೆಯ ನಾಲ್ಕು ಕಡೆಗಳಿಗೆ ಚೆಲ್ಲು. 21 ತರುವಾಯ ಯಜ್ಞವೇದಿಕೆಯಿಂದ ಸ್ವಲ್ಪ ರಕ್ತವನ್ನು ತೆಗೆದುಕೊ. ಅದನ್ನು ವಿಶೇಷವಾದ ಅಭೀಷೇಕತೈಲದಲ್ಲಿ ಬೆರಸಿ ಆರೋನನ ಮೇಲೆಯೂ ಅವನ ಬಟ್ಟೆಗಳ ಮೇಲೆಯೂ ಚಿಮಿಕಿಸು. ಅವನ ಪುತ್ರರ ಮತ್ತು ಅವರ ಬಟ್ಟೆಗಳ ಮೇಲೆಯೂ ಚಿಮಿಕಿಸು. ಆಗ ಅವರು ಪರಿಶುದ್ಧಗೊಳ್ಳುವರು, ಅವರ ಬಟ್ಟೆಗಳೂ ಪರಿಶುದ್ಧಗೊಳ್ಳುವವು. ಆರೋನನು ಮತ್ತು ಅವನ ಪುತ್ರರು ವಿಶೇಷವಾದ ರೀತಿಯಲ್ಲಿ ನನ್ನ ಸೇವೆ ಮಾಡುತ್ತಾರೆಂದು ಇದು ತೋರಿಸುವುದು.
22 “ಬಳಿಕ ಟಗರಿನ ಕೊಬ್ಬನ್ನೂ ತೆಗೆದುಕೊ. (ಇದು ಆರೋನನನ್ನು ಮಹಾಯಾಜಕನನ್ನಾಗಿ ಮಾಡುವ ಆಚಾರವಿಧಿಯಲ್ಲಿ ಉಪಯೋಗಿಸಲ್ಪಡುವ ಟಗರು.) ಬಾಲದ ಸುತ್ತಲಿರುವ ಕೊಬ್ಬನ್ನು, ದೇಹದ ಒಳಗಿನ ಅಂಗಗಳನ್ನು ಮುಚ್ಚಿಕೊಂಡಿರುವ ಕೊಬ್ಬನ್ನು, ಪಿತ್ತಕೋಶದ ಸುತ್ತಲಿರುವ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು ಮತ್ತು ಬಲತೊಡೆಯನ್ನು ತೆಗೆದುಕೊ. 23 ಬಳಿಕ ನೀನು ಮಾಡಿದ ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯನ್ನು ತೆಗೆದುಕೊ. ಇದು ಯೆಹೋವನ ಮುಂದೆ ಇಟ್ಟ ಬುಟ್ಟಿಯಾಗಿದೆ. ಒಂದು ತುಂಡು ರೊಟ್ಟಿ, ಎಣ್ಣೆಯಿಂದ ಮಾಡಿದ ಒಂದು ಹೋಳಿಗೆ, ತೆಳುವಾದ ಒಂದು ಕಡುಬು ಇವುಗಳನ್ನು ಬುಟ್ಟಿಯಿಂದ ತೆಗೆದುಕೊ. 24 ಇವುಗಳನ್ನು ಆರೋನನಿಗೂ ಅವನ ಪುತ್ರರಿಗೂ ಕೊಡು. ಯೆಹೋವನ ಮುಂದೆ ಇವುಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ನಿವಾಳಿಸಬೇಕೆಂದು ಅವರಿಗೆ ಹೇಳು. ಇದು ಯೆಹೋವನಿಗೆ ವಿಶೇಷವಾದ ನೈವೇದ್ಯಾರ್ಪಣೆಯಾಗಿದೆ. 25 ಬಳಿಕ ಈ ವಸ್ತುಗಳನ್ನು ಆರೋನನ ಮತ್ತು ಅವನ ಪುತ್ರರ ಕೈಯಿಂದ ತೆಗೆದುಕೊಂಡು ಟಗರಿನ ಜೊತೆ ಯಜ್ಞವೇದಿಕೆಯ ಮೇಲಿಡು. ಈ ಸರ್ವಾಂಗಹೋಮವು ಯೆಹೋವನಿಗೆ ಸುಗಂಧಹೋಮವಾಗಿದ್ದು ಆತನನ್ನು ಮೆಚ್ಚಿಸುವುದು.
26 “ತರುವಾಯ ಟಗರಿನ ಎದೆಯ ಭಾಗವನ್ನು ತೆಗೆದುಕೊ. (ಆರೋನನನ್ನು ಮಹಾಯಾಜಕನನ್ನಾಗಿ ಮಾಡುವ ಆಚಾರವಿಧಿಯಲ್ಲಿ ಉಪಯೋಗಿಸಲ್ಪಡುವ ಟಗರು ಇದಾಗಿದೆ.) ಟಗರಿನ ಎದೆಯ ಭಾಗವನ್ನು ವಿಶೇಷ ಸಮರ್ಪಣೆಯಾಗಿ ಯೆಹೋವನ ಮುಂದೆ ನಿವಾಳಿಸಬೇಕು. ಪಶುವಿನ ಈ ಭಾಗವು ನಿನಗೆ ಸಲ್ಲತಕ್ಕ ಪಾಲು. 27 ಬಳಿಕ ಆರೋನನನ್ನು ಮಹಾಯಾಜಕನನ್ನಾಗಿ ಮಾಡಲು ನಿವಾಳಿಸಲ್ಪಟ್ಟ ಟಗರಿನ ಎದೆಯ ಭಾಗವನ್ನೂ ಯಾಜಕರ ಭಾಗವಾದ ನಿವಾಳಿಸಲ್ಪಟ್ಟ ಟಗರಿನ ತೊಡೆಯನ್ನೂ ತೆಗೆದುಕೊ. ಅವುಗಳನ್ನು ಆರೋನನಿಗೂ ಅವನ ಪುತ್ರರಿಗೂ ಕೊಡು. ಇದು ಕಾಣಿಕೆಯ ವಿಶೇಷ ಭಾಗವಾಗಿದೆ. 28 ಇಸ್ರೇಲರು ಆರೋನನಿಗೂ ಅವನ ಪುತ್ರರಿಗೂ ಈ ಭಾಗಗಳನ್ನು ಯಾವಾಗಲೂ ಕೊಡುವರು. ಇಸ್ರೇಲರು ಯೆಹೋವನಿಗೆ ಅರ್ಪಿಸುವ ಕಾಣಿಕೆಗಳಲ್ಲಿ ಈ ಭಾಗಗಳು ಯಾವಾಗಲೂ ಯಾಜಕರಿಗೆ ಸೇರಿದ್ದಾಗಿವೆ. ಅವರು ಯಾಜಕರಿಗೆ ಕೊಡುವ ಈ ಭಾಗಗಳು ಯೆಹೋವನಿಗೆ ಸಮರ್ಪಿಸಲ್ಪಟ್ಟಂತಿರುತ್ತವೆ.
29 “ಆರೋನನಿಗೋಸ್ಕರ ಮಾಡಿಸಿದ ವಿಶೇಷವಾದ ವಸ್ತ್ರಗಳನ್ನು ಅವನ ತರುವಾಯ ಅವನ ವಂಶಸ್ಥರೂ ಯಾಜಕ ಉದ್ಯೋಗಕ್ಕೆ ಆರಿಸಲ್ಪಟ್ಟಾಗ, ಅವುಗಳನ್ನು ಧರಿಸಿಕೊಳ್ಳುವರು. 30 ಆರೋನನ ತರುವಾಯ ಅವನ ಮಗನು ಮಹಾಯಾಜಕನಾಗುವನು. ಅವನು ಪವಿತ್ರಸ್ಥಳದಲ್ಲಿ ಸೇವೆಮಾಡಲು ದೇವದರ್ಶನಗುಡಾರಕ್ಕೆ ಪ್ರವೇಶಿಸಿದಂದಿನಿಂದ ಏಳು ದಿನಗಳವರೆಗೆ ಆ ವಸ್ತ್ರಗಳನ್ನು ಧರಿಸಿಕೊಂಡಿರುವನು.
31 “ಆರೋನನನ್ನು ಮಹಾಯಾಜಕನನ್ನಾಗಿ ಮಾಡಲು ಉಪಯೋಗಿಸಿದ ಟಗರಿನ ಮಾಂಸವನ್ನು ದೇವದರ್ಶನಗುಡಾರದ ಪ್ರಾಕಾರದಲ್ಲಿ ಬೇಯಿಸು. 32 ಬಳಿಕ ಆರೋನನು ಮತ್ತು ಅವನ ಪುತ್ರರು ದೇವದರ್ಶನಗುಡಾರದ ಮುಂಭಾಗದಲ್ಲಿ ಆ ಮಾಂಸವನ್ನೂ ಬುಟ್ಟಿಯಲ್ಲಿರುವ ರೊಟ್ಟಿಯನ್ನೂ ತಿನ್ನಬೇಕು. 33 ಅವರು ಯಾಜಕರಾಗಿ ಮಾಡಲ್ಪಟ್ಟಾಗ ಅವರ ಪಾಪನಿವಾರಣೆಗಾಗಿ ಇವುಗಳನ್ನು ಸಮರ್ಪಿಸಲಾಗಿತ್ತು. ಆದ್ದರಿಂದ ಆ ಸಮರ್ಪಣೆಗಳನ್ನು ಅವರು ಮಾತ್ರ ತಿನ್ನಬೇಕೇ ಹೊರತು ಬೇರೆಯವರು ತಿನ್ನಬಾರದು; ಯಾಕೆಂದರೆ ಅವು ಪರಿಶುದ್ಧವಾಗಿವೆ ಮತ್ತು ಪ್ರತ್ಯೇಕಿಸಲ್ಪಟ್ಟವುಗಳಾಗಿವೆ. 34 ಟಗರಿನ ಮಾಂಸ ಅಥವಾ ರೊಟ್ಟಿಯೇನಾದರೂ ಮರುದಿನ ಮುಂಜಾನೆಯವರೆಗೆ ಉಳಿದರೆ, ಅದನ್ನು ಸುಟ್ಟುಬಿಡಬೇಕು. ನೀವು ಆ ರೊಟ್ಟಿಯನ್ನಾಗಲಿ ಮಾಂಸವನ್ನಾಗಲಿ ತಿನ್ನಬಾರದು. ಯಾಕೆಂದರೆ ಅದನ್ನು ವಿಶೇಷವಾದ ಸಂದರ್ಭದಲ್ಲಿ ವಿಶೇಷವಾದ ರೀತಿಯಲ್ಲಿ ಮಾತ್ರ ತಿನ್ನಬೇಕು.
35 “ನಾನು ನಿನಗೆ ಆಜ್ಞಾಪಿಸಿದ ಇವುಗಳನ್ನೆಲ್ಲ ಆರೋನ ಮತ್ತು ಅವನ ಪುತ್ರರಿಗೋಸ್ಕರ ಮಾಡು. ಅವರನ್ನು ಯಾಜಕರನ್ನಾಗಿ ನೇಮಿಸುವ ಸಮಾರಂಭವು ಏಳು ದಿನಗಳವರೆಗೆ ನಡೆಯಬೇಕು. 36 ಏಳು ದಿನಗಳವರೆಗೆ ಪ್ರತಿದಿನ ಒಂದು ಹೋರಿಯನ್ನು ವಧಿಸು. ಇದು ಆರೋನನ ಮತ್ತು ಅವನ ಪುತ್ರರ ಪಾಪನಿವಾರಣೆಯ ಸಮರ್ಪಣೆಯಾಗಿರುವುದು. ಅದಲ್ಲದೆ ಯಜ್ಞವೇದಿಕೆಯನ್ನು ಪರಿಶುದ್ಧಗೊಳಿಸಲು ಅದರ ಮೇಲೆ ದೋಷಪರಿಹಾರಕ ಯಜ್ಞವನ್ನು ಸಮರ್ಪಿಸಿ ಅದನ್ನು ದೇವರ ಸೇವೆಗೋಸ್ಕರ ಅಭಿಷೇಕಿಸಬೇಕು. 37 ಹೀಗೆ ಏಳು ದಿನಗಳವರೆಗೆ ಯಜ್ಞವೇದಿಕೆಯನ್ನು ಶುದ್ಧಗೊಳಿಸಿ ಪವಿತ್ರಗೊಳಿಸಬೇಕು. ಆ ಸಮಯದಲ್ಲಿ ಯಜ್ಞವೇದಿಕೆಯು ಮಹಾಪವಿತ್ರವಾಗಿರುವುದು. ಯಜ್ಞವೇದಿಕೆಗೆ ಸೋಂಕಿದ ವಸ್ತುಗಳೆಲ್ಲವೂ ಪವಿತ್ರವಾಗುವುದು.
38 “ಯಜ್ಞವೇದಿಕೆಯ ಮೇಲೆ ಪ್ರತಿದಿನ ಯಜ್ಞವನ್ನು ಸಮರ್ಪಿಸಬೇಕು. ಒಂದು ವರ್ಷದ ಎರಡು ಕುರಿಮರಿಗಳನ್ನು ನೀನು ವಧಿಸಬೇಕು. 39 ಮುಂಜಾನೆ ಒಂದು ಕುರಿಮರಿಯನ್ನು ಮತ್ತು ಸಾಯಂಕಾಲ ಮತ್ತೊಂದು ಕುರಿಮರಿಯನ್ನು ಸಮರ್ಪಿಸಬೇಕು. 40 ನೀನು ಮೊದಲಿನ ಕುರಿಮರಿಯನ್ನು ವಧಿಸುವಾಗ ಮೂರು ಸೇರು ಶ್ರೇಷ್ಠ ಗೋಧಿ ಹಿಟ್ಟನ್ನೂ ಸಮರ್ಪಿಸು. ಆ ಹಿಟ್ಟನ್ನು ಒಂದೂವರೆ ಸೇರು ದ್ರಾಕ್ಷಾರಸದೊಂದಿಗೆ ಬೆರೆಸು. 41 ನೀನು ಸಾಯಂಕಾಲದಲ್ಲಿ ಮತ್ತೊಂದು ಕುರಿಮರಿಯನ್ನು ವಧಿಸುವಾಗಲೂ ಮೂರು ಸೇರು ಶ್ರೇಷ್ಠ ಗೋಧಿಯನ್ನೂ ಅರ್ಧ ಸೇರು ದ್ರಾಕ್ಷಾರಸವನ್ನೂ ಸಮರ್ಪಿಸು. ಇದು ಯೆಹೋವನಿಗೆ ಸುಗಂಧಹೋಮವಾಗಿರುವುದು.
42 “ನೀನು ಪ್ರತಿದಿನ ಈ ಸರ್ವಾಂಗಹೋಮವನ್ನು ಸಮರ್ಪಣೆಯಾಗಿ ಅರ್ಪಿಸಬೇಕು. ದೇವದರ್ಶನಗುಡಾರದ ದ್ವಾರದಲ್ಲಿ ಯೆಹೋವನ ಮುಂದೆ ಇದನ್ನು ಮಾಡು. ನೀನು ಸಮರ್ಪಣೆಯನ್ನು ಮಾಡುವಾಗ ಯೆಹೋವನಾದ ನಾನು ಅಲ್ಲಿ ನಿನ್ನನ್ನು ಸಂಧಿಸಿ ನಿನ್ನೊಡನೆ ಮಾತಾಡುವೆನು. 43 ಆ ಸ್ಥಳದಲ್ಲಿ ನಾನು ಇಸ್ರೇಲರನ್ನು ಸಂಧಿಸುವೆನು. ನನ್ನ ಪ್ರಭಾವದಿಂದ ಆ ಸ್ಥಳವು ಪವಿತ್ರವಾಗುವುದು.
44 “ಅಲ್ಲದೆ ನಾನು ದೇವದರ್ಶನಗುಡಾರವನ್ನೂ ಯಜ್ಞವೇದಿಕೆಯನ್ನೂ ಪವಿತ್ರಗೊಳಿಸುವೆನು. ಆರೋನನನ್ನೂ ಅವನ ಪುತ್ರರನ್ನೂ ಪವಿತ್ರಗೊಳಿಸುವೆನು; ಆಗ ಅವರು ಯಾಜಕರಾಗಿ ನನಗೆ ಸೇವೆಮಾಡಲು ಶಕ್ತರಾಗುವರು. 45 ನಾನು ಇಸ್ರೇಲರ ಮಧ್ಯದಲ್ಲಿ ವಾಸಿಸುವೆನು ಮತ್ತು ಅವರ ದೇವರಾಗಿರುವೆನು. 46 ನಾನು ಅವರ ದೇವರಾದ ಯೆಹೋವನಾಗಿದ್ದೇನೆಂದು ಜನರು ತಿಳಿದುಕೊಳ್ಳುವರು. ಅವರ ಮಧ್ಯದಲ್ಲಿ ವಾಸಮಾಡುವುದಕ್ಕಾಗಿ ಈಜಿಪ್ಟಿನಿಂದ ಅವರನ್ನು ಕರೆದುಕೊಂಡು ಬಂದವನು ನಾನೇ ಎಂದು ಅವರು ತಿಳಿದುಕೊಳ್ಳುವರು. ನಾನು ಅವರ ದೇವರಾಗಿರುವ ಯೆಹೋವನೇ.”
Kannada Holy Bible: Easy-to-Read Version. All rights reserved. © 1997 Bible League International