Beginning
22 “ಒಬ್ಬನು ಎತ್ತನ್ನಾಗಲಿ ಕುರಿಯನ್ನಾಗಲಿ ಕದ್ದು ಅದನ್ನು ಕೊಯಿದರೆ ಅಥವಾ ಮಾರಿದರೆ, ಅವನು ತಾನು ಕದ್ದ ಎತ್ತಿಗೆ ಪ್ರತಿಯಾಗಿ ಐದು ಎತ್ತುಗಳನ್ನೂ ಅಥವಾ ತಾನು ಕದ್ದ ಕುರಿಗೆ ಪ್ರತಿಯಾಗಿ ನಾಲ್ಕು ಕುರಿಗಳನ್ನೂ ಕೊಡಬೇಕು. 2-4 ಅವನಲ್ಲಿ ಏನೂ ಇಲ್ಲದ ಪಕ್ಷಕ್ಕೆ, ಅವನು ಗುಲಾಮನಾಗುವನು. ಆದರೆ ಆ ಕಳ್ಳನು ಪಶುವನ್ನು ಇನ್ನೂ ಇಟ್ಟುಕೊಂಡಿರುವುದು ನಿಮಗೆ ಗೊತ್ತಾದರೆ, ಅವನು ಕದ್ದ ಪಶುವಿಗೆ ಪ್ರತಿಯಾಗಿ ಎರಡು ಪಶುಗಳನ್ನು ಮಾಲೀಕನಿಗೆ ಕೊಡಿಸಬೇಕು. ಕದ್ದದ್ದು ಎತ್ತಾಗಿರಬಹುದು, ಕತ್ತೆಯಾಗಿರಬಹುದು ಅಥವಾ ಕುರಿಯಾಗಿರಬಹುದು.
“ಕಳ್ಳನು ರಾತ್ರಿಯಲ್ಲಿ ಮನೆಗೆ ಕನ್ನ ಹಾಕಲು ಪ್ರಯತ್ನಿಸುತ್ತಿರುವಾಗ ಕೊಲ್ಲಲ್ಪಟ್ಟರೆ, ಅವನನ್ನು ಕೊಂದದ್ದಕ್ಕೆ ಯಾರೂ ತಪ್ಪಿತಸ್ಧರಾಗುವುದಿಲ್ಲ. ಆದರೆ ಇದು ಹಗಲಿನಲ್ಲಿ ನಡೆದರೆ ಕೊಂದವನು ಕೊಲೆಗಾರನಾಗುವನು.
5 “ಒಬ್ಬನು ತನ್ನ ಹೊಲದಲ್ಲಾಗಲಿ ದ್ರಾಕ್ಷಿತೋಟದಲ್ಲಾಗಲಿ ತನ್ನ ಪಶುವಿಗೆ ಮೇಯಲು ಬಿಡಬಹುದು. ಆದರೆ ಅದು ಅವನ ನೆರೆಯವನ ಹೊಲವನ್ನಾಗಲಿ, ದ್ರಾಕ್ಷಿತೋಟವನ್ನಾಗಲಿ ಹಾಳು ಮಾಡಿದರೆ, ಅವನು ತನ್ನ ನೆರೆಯವನಿಗೆ ಉಂಟಾದ ನಷ್ಟಕ್ಕೆ ಪ್ರತಿಯಾಗಿ ತನ್ನ ಉತ್ತಮ ಬೆಳೆಗಳನ್ನು ಕೊಡಬೇಕು.
6 “ಒಬ್ಬನು ತನ್ನ ಹೊಲದಲ್ಲಿರುವ ಮುಳ್ಳಿನ ಪೊದೆಗಳನ್ನು ಸುಟ್ಟುಹಾಕಲು ಬೆಂಕಿಯನ್ನು ಹೊತ್ತಿಸಬಹುದು. ಆದರೆ ಬೆಂಕಿಯು ಹೆಚ್ಚಾಗಿ ಅವನ ನೆರೆಯವನ ಬೆಳೆಯನ್ನಾಗಲಿ ಬೆಳೆಯುತ್ತಿರುವ ಧಾನ್ಯಗಳನ್ನಾಗಲಿ ಸುಟ್ಟುಹಾಕಿದರೆ ಬೆಂಕಿಯನ್ನು ಹೊತ್ತಿಸಿದವನು ತಾನು ಸುಟ್ಟುಹಾಕಿದ ವಸ್ತುಗಳಿಗೆ ಪ್ರತಿಯಾಗಿ ಈಡುಕೊಡಬೇಕು.
7 “ಒಬ್ಬನು ತನ್ನ ನೆರೆಯವನ ಮನೆಯಲ್ಲಿ ಸ್ವಲ್ಪ ಹಣವನ್ನಾಗಲಿ ವಸ್ತುಗಳನ್ನಾಗಲಿ ಇಟ್ಟಿದ್ದು, ಆ ಹಣವಾಗಲಿ ವಸ್ತುಗಳಾಗಲಿ ಕಳುವಾದರೆ ಕಳ್ಳನನ್ನು ಕಂಡುಹಿಡಿಯಲು ನೀವು ಪ್ರಯತ್ನಿಸಬೇಕು. ನೀವು ಕಳ್ಳನನ್ನು ಕಂಡುಹಿಡಿದರೆ, ಆಗ ಅವನು ತಾನು ಕದ್ದವಸ್ತುಗಳ ಬೆಲೆಯ ಎರಡರಷ್ಟನ್ನು ಕೊಡಬೇಕು. 8 ಆದರೆ ನೀವು ಕಳ್ಳನನ್ನು ಕಂಡುಹಿಡಿಯಲಾಗದಿದ್ದರೆ, ಆ ಮನೆಯ ಮಾಲೀಕನು ತಪ್ಪಿತಸ್ಧನಾಗಿದ್ದಾನೋ ಇಲ್ಲವೋ ಎಂದು ದೇವರು[a] ನಿರ್ಣಯಿಸುವನು. ಮನೆಯ ಮಾಲೀಕನು ದೇವರ ಸನ್ನಿಧಿಗೆ ಹೋಗಬೇಕು. ಅವನು ಕದ್ದಿದ್ದಾನೋ ಇಲ್ಲವೋ ಎಂದು ದೇವರು ತೀರ್ಮಾನಿಸುವನು.
9 “ಕಳೆದುಹೋದ ಎತ್ತು, ಕತ್ತೆ, ಕುರಿ, ಬಟ್ಟೆಬರೆ, ಅಥವಾ ವಸ್ತುವಿನ ವಿಷಯದಲ್ಲಿ ಒಬ್ಬನು, ‘ಇದು ನನ್ನದು’ ಎಂದು ಹೇಳಿದರೆ ಮತ್ತು ಇನ್ನೊಬ್ಬನು, ‘ಇಲ್ಲ, ಇದು ನನ್ನದು’ ಎಂದು ಹೇಳಿದರೆ, ಇವರಿಬ್ಬರೂ ದೇವರ ಸನ್ನಿಧಿಗೆ ಹೋಗಬೇಕು. ತಪ್ಪಿತಸ್ಥನಾರೆಂದು ದೇವರು ತೀರ್ಮಾನಿಸುವನು. ತಪ್ಪಿತಸ್ಥನು ಇನ್ನೊಬ್ಬನಿಗೆ ಕಳೆದುಹೋದ ವಸ್ತುವಿನ ಬೆಲೆಯ ಎರಡರಷ್ಟನ್ನು ಕೊಡಬೇಕು.
10 “ಸ್ವಲ್ಪಕಾಲದವರೆಗೆ ತನ್ನ ಪಶುವನ್ನು ಪೋಷಿಸಬೇಕೆಂದು ತನ್ನ ನೆರೆಯವನನ್ನು ಕೇಳಿಕೊಳ್ಳಬಹುದು. ಈ ಪಶುವು ಕತ್ತೆಯಾಗಿರಬಹುದು, ಎತ್ತಾಗಿರಬಹುದು, ಕುರಿಯಾಗಿರಬಹುದು ಅಥವಾ ಯಾವುದೇ ಪಶುವಾಗಿರಬಹುದು. ಆದರೆ ಅದು ಸತ್ತರೆ ಅಥವಾ ಅದಕ್ಕೆ ಪೆಟ್ಟಾದರೆ ಅಥವಾ ಕಳುವಾದರೆ, 11 ಆ ನೆರೆಯವನು ಆ ಪಶುವನ್ನು ಕದ್ದಿಲ್ಲದ್ದಿದ್ದರೆ ತಾನು ಕದ್ದಿಲ್ಲವೆಂದು ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಬೇಕು. ಪಶುವಿನ ಮಾಲೀಕನು ಈ ಪ್ರಮಾಣವನ್ನು ಸ್ವೀಕರಿಸಬೇಕು. ನೆರೆಯವನು ಮಾಲೀಕನಿಗೆ ಪಶುವಿಗಾಗಿ ಈಡು ಕೊಡಬೇಕಾಗಿಲ್ಲ. 12 ಆದರೆ ಪಶುವು ಕದಿಯಲ್ಪಟ್ಟಿದ್ದರೆ, ಅವನು ಅದಕ್ಕಾಗಿ ಈಡು ಕೊಡಬೇಕು. 13 ಕ್ರೂರಪ್ರಾಣಿಗಳು ಆ ಪಶುವನ್ನು ಕೊಂದುಹಾಕಿದ್ದರೆ, ನೆರೆಯವನು ಸತ್ತ ಪಶುವನ್ನು ಸಾಕ್ಷಿಯಾಗಿ ತರಬೇಕು. ನೆರೆಯವನು ಮಾಲೀಕನಿಗೆ ಸತ್ತ ಪಶುವಿಗಾಗಿ ಈಡು ಕೊಡಬೇಕಾಗಿಲ್ಲ.
14 “ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಸ್ವಲ್ಪಕಾಲಕ್ಕೆ ಸಾಲವಾಗಿ ತೆಗೆದುಕೊಂಡಿರುವಾಗ ಅದರ ಮಾಲೀಕನು ಅದರ ಸಮೀಪದಲ್ಲಿ ಇಲ್ಲದಿರುವ ಸಮಯದಲ್ಲಿ ಆ ಪಶುವಿಗೆ ಗಾಯವಾದರೆ ಅಥವಾ ಅದು ಸತ್ತುಹೋದರೆ, ಸಾಲ ತೆಗೆದುಕೊಂಡವನು ಆ ಪಶುವಿಗೆ ಈಡುಕೊಡಬೇಕು. 15 ಆದರೆ ಅದರ ಮಾಲೀಕನು ಪಶುವಿನೊಂದಿಗೆ ಅಲ್ಲಿದ್ದರೆ ಆಗ ನೆರೆಯವನು ಈಡುಕೊಡಬೇಕಾಗಿಲ್ಲ. ನೆರೆಯವನು ಪಶುವನ್ನು ಬಾಡಿಗೆಗೆ ತೆಗೆದುಕೊಂಡಿರುವಾಗ ಆ ಪಶು ಸತ್ತರೆ ಅಥವಾ ಅದಕ್ಕೆ ಪೆಟ್ಟಾದರೆ ಅವನು ಈಡುಕೊಡಬೇಕಾಗಿಲ್ಲ. ಆ ಪಶುವನ್ನು ಉಪಯೋಗಿಸಲು ಅವನು ಕೊಟ್ಟ ಬಾಡಿಗೆಯೇ ಸಾಕು.
16 “ಒಬ್ಬನು ಕನ್ನಿಕೆಯನ್ನು ಮರುಳುಗೊಳಿಸಿ ಕೂಡಿದರೆ, ಅವನು ಅವಳನ್ನು ಮದುವೆಯಾಗಬೇಕು. ಅವನು ಆಕೆಯ ತಂದೆಗೆ ತಕ್ಕ ತೆರವನ್ನು ಕೊಡಬೇಕು. 17 ತಂದೆಯು ತನ್ನ ಮಗಳನ್ನು ಅವನಿಗೆ ಕೊಡಲು ನಿರಾಕರಿಸಿದರೂ ಅವನು ತೆರವನ್ನು ಕೊಡಬೇಕು. ಅವನು ಅವಳಿಗೋಸ್ಕರ ಪೂರ್ಣ ತೆರವನ್ನು ಕೊಡಬೇಕು.
18 “ಮಾಟಗಾರ್ತಿಯನ್ನು ನೀವು ಜೀವಸಹಿತ ಉಳಿಸಬಾರದು.
19 “ಪಶುಸಂಗ ಮಾಡಿದವನಿಗೆ ಮರಣದಂಡನೆಯಾಗಬೇಕು.
20 “ಸುಳ್ಳುದೇವರಿಗೆ ಯಜ್ಞವನ್ನರ್ಪಿಸುವವನನ್ನು ನಾಶ ಮಾಡಬೇಕು.[b] ನೀವು ದೇವರಾದ ಯೆಹೋವನೊಬ್ಬನಿಗೇ ಯಜ್ಞವನ್ನರ್ಪಿಸಬೇಕು.
21 “ನೀವು ಮೊದಲು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದದ್ದನ್ನು ಜ್ಞಾಪಕಮಾಡಿಕೊಳ್ಳಿ. ಆದ್ದರಿಂದ ನೀವು ಮೋಸಮಾಡಬಾರದು; ನಿಮ್ಮ ದೇಶದಲ್ಲಿರುವ ಯಾವ ಪರದೇಶಸ್ಥನಿಗೂ ಕೇಡು ಮಾಡಬಾರದು.
22 “ನೀವೆಂದಿಗೂ ವಿಧವೆಯರಿಗೆ ಅಥವಾ ಅನಾಥ ಮಕ್ಕಳಿಗೆ ಕೇಡುಮಾಡಬಾರದು. 23 ನೀವು ಆ ವಿಧವೆಯರಿಗೆ ಅಥವಾ ಅನಾಥರಿಗೆ ಕೇಡುಮಾಡಿದರೆ, ನಾನು ಅವರ ಗೋಳಾಟವನ್ನು ಕೇಳಿ, 24 ನಿಮ್ಮ ಮೇಲೆ ಕೋಪಗೊಳ್ಳುವೆನು; ಕತ್ತಿಯಿಂದ ನಿಮ್ಮನ್ನು ಕೊಲ್ಲುವೆನು. ಆಗ ನಿಮ್ಮ ಹೆಂಡತಿಯರು ವಿಧವೆಯರಾಗುವರು; ನಿಮ್ಮ ಮಕ್ಕಳು ಅನಾಥರಾಗುವರು.
25 “ನನ್ನ ಜನರಲ್ಲಿ ಬಡವನಾಗಿರುವವನಿಗೆ ನೀವು ಹಣವನ್ನು ಸಾಲಕೊಟ್ಟರೆ, ನೀವು ಆ ಹಣಕ್ಕೆ ಬಡ್ಡಿ ಕೇಳಬಾರದು. ಬೇಗನೆ ಮರುಪಾವತಿ ಮಾಡುವಂತೆ ಅವನನ್ನು ಬಲವಂತಪಡಿಸಬಾರದು. 26 ಯಾವನಾದರೂ ನೀವು ಕೊಟ್ಟ ಸಾಲಕ್ಕೆ ತನ್ನ ಅಂಗಿಯನ್ನು ಒತ್ತೆಯಾಗಿಟ್ಟರೆ, ಸೂರ್ಯನು ಮುಳುಗುವ ಮೊದಲೇ ನೀವು ಆ ಅಂಗಿಯನ್ನು ಅವನಿಗೆ ಹಿಂತಿರುಗಿಸಬೇಕು. 27 ಯಾಕೆಂದರೆ ಅವನಿಗೆ ಬೇರೆ ಯಾವ ಹೊದಿಕೆಯೂ ಇಲ್ಲ; ಅದನ್ನೇ ಅವನು ಧರಿಸಿಕೊಳ್ಳಬೇಕು. ಅವನು ಮಲಗಿಕೊಳ್ಳುವಾಗ ಚಳಿಯಿಂದ ನನಗೆ ಮೊರೆಯಿಟ್ಟರೆ, ನಾನು ಅವನ ಮೊರೆಯನ್ನು ಕೇಳಿ ಅವನಿಗೆ ದಯೆತೋರುವೆನು.
28 “ನೀವು ದೇವರನ್ನಾಗಲಿ ಅಥವಾ ನಿಮ್ಮ ನಾಯಕರುಗಳನ್ನಾಗಲಿ ಶಪಿಸಬಾರದು.
29 “ಸುಗ್ಗಿಕಾಲದಲ್ಲಿ ನೀವು ಪ್ರಥಮಫಲವಾದ ಧಾನ್ಯವನ್ನು ಮತ್ತು ನಿಮ್ಮ ಪ್ರಥಮಫಲವಾದ ದ್ರಾಕ್ಷಾರಸವನ್ನು ನನಗೆ ಕೊಡಬೇಕು. ನೀವು ಅದನ್ನು ನಿಮಗಾಗಿಯೇ ಇಟ್ಟುಕೊಳ್ಳಬಾರದು.
“ನಿಮ್ಮ ಚೊಚ್ಚಲು ಗಂಡುಮಕ್ಕಳನ್ನು ನನಗೆ ಪ್ರತಿಷ್ಠಿಸಬೇಕು. 30 ಮಾತ್ರವಲ್ಲದೆ, ನಿಮ್ಮ ಕುರಿದನಗಳಲ್ಲಿ ಚೊಚ್ಚಲಾದವುಗಳನ್ನು ನನಗೆ ಅರ್ಪಿಸಬೇಕು. ಚೊಚ್ಚಲಾದವುಗಳು ತನ್ನ ತಾಯಿಯೊಂದಿಗೆ ಏಳು ದಿನಗಳಿರಲಿ. ಬಳಿಕ, ಎಂಟನೆಯ ದಿನದಲ್ಲಿ ನೀವು ಅದನ್ನು ನನಗೆ ಅರ್ಪಿಸಬೇಕು.
31 “ನೀವು ನನ್ನ ವಿಶೇಷ ಜನರಾಗಿದ್ದೀರಿ. ಆದ್ದರಿಂದ ಕ್ರೂರಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯ ಮಾಂಸವನ್ನು ನೀವು ತಿನ್ನಬಾರದು. ಅದನ್ನು ನಾಯಿಗಳು ತಿನ್ನಲಿ.
23 “ಬೇರೆಯವರ ವಿರುದ್ಧವಾಗಿ ಸುಳ್ಳು ಹೇಳಬೇಡಿರಿ. ನೀವು ನ್ಯಾಯಾಲಯದಲ್ಲಿ ದುಷ್ಟರ ಸಹಾಯಕ್ಕಾಗಿ ಸುಳ್ಳುಸಾಕ್ಷಿ ಹೇಳದಿರಿ.
2 “ದುಷ್ಕೃತ್ಯವನ್ನು ಮಾಡುವವರು ಬಹಳ ಮಂದಿಯೆಂದು ಅವರ ಜೊತೆಯಲ್ಲಿ ಸೇರಿಕೊಳ್ಳಬೇಡಿ. ಬಹಳ ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳದಿರಿ.
3 “ಇದಲ್ಲದೆ ಬಡವನೆಂದು ಕರುಣಿಸಿ ಪಕ್ಷಪಾತದ ತೀರ್ಪನ್ನು ನೀಡಬಾರದು.
4 “ನೀವು ಕಳೆದುಹೋದ ಎತ್ತನ್ನಾಗಲಿ ಕತ್ತೆಯನ್ನಾಗಲಿ ನೋಡಿದರೆ, ಆಗ ನೀವು ಅದನ್ನು ಅದರ ಮಾಲೀಕನಿಗೆ ಹಿಂತಿರುಗಿಸಬೇಕು. ಒಂದುವೇಳೆ ಆ ಮಾಲೀಕನು ನಿಮ್ಮ ವೈರಿಯಾಗಿದ್ದರೂ ನೀವು ಈ ಕಾರ್ಯವನ್ನು ಮಾಡಬೇಕು.
5 “ಬಹು ತೂಕದ ಹೊರೆಯಿಂದ ನಡೆಯಲಾಗದೆ ಬಿದ್ದಿರುವ ಕತ್ತೆಯನ್ನು ನೀವು ನೋಡಿದರೆ ಅದನ್ನು ಎಬ್ಬಿಸಲು ನೀವು ನಿಂತು ಸಹಾಯ ಮಾಡಬೇಕು. ಆ ಕತ್ತೆಯು ನಿಮ್ಮ ವೈರಿಯದಾಗಿದ್ದರೂ ನೀವು ಅದಕ್ಕೆ ಸಹಾಯ ಮಾಡಬೇಕು.
6 “ಬಡವರಿಗೆ ವ್ಯಾಜ್ಯದಲ್ಲಿ ನೀವು ಅನ್ಯಾಯವಾದ ತೀರ್ಪನ್ನು ಕೊಡಕೂಡದು.
7 “ನೀವು ಮೋಸದ ಕಾರ್ಯಕ್ಕೆ ದೂರವಿರಬೇಕು. ನಿರಪರಾಧಿಯೂ ನೀತಿವಂತನೂ ಆಗಿರುವ ವ್ಯಕ್ತಿಗೆ ಮರಣದಂಡನೆ ವಿಧಿಸಕೂಡದು. ಅಂಥ ದುಷ್ಟಕಾರ್ಯ ಮಾಡಿದವನಿಗೆ ನಾನು ದಂಡನೆಯನ್ನು ವಿಧಿಸೇ ವಿಧಿಸುವೆನು.
8 “ಲಂಚವನ್ನು ತೆಗೆದುಕೊಳ್ಳಕೂಡದು; ಲಂಚವು ಕಣ್ಣುಳ್ಳವರನ್ನು ಕುರುಡರನ್ನಾಗಿ ಮಾಡುತ್ತದೆ; ನಿರಪರಾಧಿಗೆ ಅನ್ಯಾಯ ಮಾಡುತ್ತದೆ.
9 “ನೀವು ಪರದೇಶಸ್ಥರಿಗೆ ತೊಂದರೆ ಕೊಡಬಾರದು. ನೀವು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.
ವಿಶೇಷ ವಿಶ್ರಾಂತಿ ದಿನಗಳು
10 “ಆರು ವರ್ಷ ನಿಮ್ಮ ಭೂಮಿಯಲ್ಲಿ ಬೀಜಬಿತ್ತಿ ಬೆಳೆಯನ್ನು ಬೆಳೆಯಿರಿ. 11 ಆದರೆ ಏಳನೆಯ ವರ್ಷದಲ್ಲಿ ನಿಮ್ಮ ಭೂಮಿಯನ್ನು ಬೀಳುಬಿಡಿರಿ; ಬೀಜಬಿತ್ತಬೇಡಿರಿ. ಏಳನೆಯ ವರ್ಷ ನೀವು ಏನನ್ನೂ ಬೆಳೆಸಬಾರದು. ನಿಮ್ಮ ಭೂಮಿಯಲ್ಲಿ ಏನಾದರೂ ಬೆಳೆದರೆ ಅದನ್ನು ಬಡವರು ತಿನ್ನಲಿ. ಉಳಿದದ್ದನ್ನು ಪ್ರಾಣಿಗಳು ಮೇಯಲಿ. ನಿಮ್ಮ ದ್ರಾಕ್ಷಿತೋಟಗಳ ವಿಷಯದಲ್ಲಿಯೂ ಆಲಿವ್ ಮರಗಳ ತೋಪಿನ ವಿಷಯದಲ್ಲಿಯೂ ಇದೇ ನಿಯಮವನ್ನು ಪಾಲಿಸಬೇಕು.
12 “ಆರು ದಿನಗಳಲ್ಲಿ ನಿಮ್ಮ ಕೆಲಸ ಮಾಡಿರಿ. ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಿರಿ. ಏಳನೆಯ ದಿನದಲ್ಲಿ ನಿಮ್ಮ ಗುಲಾಮರೂ ಎತ್ತುಗಳೂ ಕತ್ತೆಗಳೂ ವಿದೇಶಿಯರೂ ವಿಶ್ರಮಿಸಿಕೊಳ್ಳಲಿ.
13 “ನೀವು ಈ ಆಜ್ಞೆಗಳಿಗೆಲ್ಲಾ ಜಾಗರೂಕತೆಯಿಂದ ವಿಧೇಯರಾಗಬೇಕು. ಸುಳ್ಳುದೇವರುಗಳನ್ನು ಆರಾಧಿಸಬೇಡಿರಿ. ನೀವು ಅವುಗಳ ಹೆಸರುಗಳನ್ನು ಉಚ್ಚರಿಸಲೂ ಕೂಡದು.
14 “ಪ್ರತಿವರ್ಷ ನೀವು ಮೂರುಜಾತ್ರೆಗಳನ್ನು ಮಾಡಬೇಕು. 15 ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಹಬ್ಬ ಅವುಗಳಲ್ಲಿ ಒಂದಾಗಿದೆ. ನಾನು ನಿಮಗೆ ಆಜ್ಞಾಪಿಸಿದಂತೆ ಈ ಜಾತ್ರೆಯಲ್ಲಿ ಏಳು ದಿನ ಹುಳಿಯಿಲ್ಲದ ರೊಟ್ಟಿಯನ್ನು ನೀವು ತಿನ್ನಬೇಕು. ಈ ಹಬ್ಬವು ಏಳು ದಿನಗಳವರೆಗೆ ನಡೆಯುವುದು. ನೀವು ಇದನ್ನು ಅಬೀಬ್ ತಿಂಗಳಲ್ಲಿ ಮಾಡಬೇಕು. ಯಾಕೆಂದರೆ ಈ ತಿಂಗಳಲ್ಲಿಯೇ ನೀವು ಈಜಿಪ್ಟಿನಿಂದ ಹೊರಗೆ ಬಂದಿರಿ! ಈ ಹಬ್ಬದಲ್ಲಿ ಪ್ರತಿಯೊಬ್ಬನೂ ನನಗೆ ಕಾಣಿಕೆಯನ್ನು ಅರ್ಪಿಸಬೇಕು.
16 “ಇದಲ್ಲದೆ ನೀವು ಸುಗ್ಗಿಯ ಜಾತ್ರೆಯನ್ನು ಆಚರಿಸಬೇಕು. ನೀವು ಬಿತ್ತಿದ ಹೊಲಗಳಲ್ಲಿ ಬೆಳೆಗಳನ್ನು ಕೊಯ್ಯುವ ಕಾಲದಲ್ಲಿ ಈ ಜಾತ್ರೆಯು ಆರಂಭವಾಗುವುದು.
“ಇದಲ್ಲದೆ ಫಲಸಂಗ್ರಹ ಜಾತ್ರೆಯನ್ನೂ ನೀವು ಆಚರಿಸಬೇಕು. ವರ್ಷಾಂತ್ಯದಲ್ಲಿ ನೀವು ಹೊಲತೋಟಗಳ ಬೆಳೆಗಳನ್ನೆಲ್ಲಾ ಒಟ್ಟುಗೂಡಿಸುವ ಕಾಲದಲ್ಲಿ ಇದು ಆರಂಭವಾಗುವುದು.
17 “ಹೀಗೆ ಪ್ರತಿವರ್ಷ ಮೂರು ಸಲ ಗಂಡಸರೆಲ್ಲರೂ ಒಂದು ವಿಶೇಷ ಸ್ಥಳಕ್ಕೆ ದೇವರಾದ ಯೆಹೋವನ ಸನ್ನಿಧಿಗೆ ಬರಬೇಕು.
18 “ನೀವು ನನಗೆ ಯಜ್ಞವನ್ನು ಅರ್ಪಿಸುವಾಗ ಯಜ್ಞಪಶುವಿನ ರಕ್ತದೊಡನೆ ಹುಳಿಬೆರಸಿದ ಏನನ್ನೂ ಸಮರ್ಪಿಸಬಾರದು. ಅಲ್ಲದೆ ಅದರ ಮಾಂಸವನ್ನು ಒಂದೇ ದಿನದಲ್ಲಿ ತಿಂದು ಮುಗಿಸಬೇಕು; ಮರುದಿನದವರೆಗೂ ಇಟ್ಟುಕೊಳ್ಳಬಾರದು.
19 “ಸುಗ್ಗಿ ಕಾಲದಲ್ಲಿ ನಿಮ್ಮ ಬೆಳೆಯ ಫಲವನ್ನು ನಿಮ್ಮ ದೇವರಾದ ಯೆಹೋವನ ಆಲಯಕ್ಕೆ[c] ತರಬೇಕು.
“ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.”
20 “ಇಗೋ, ನಿಮ್ಮ ಮುಂದೆ ನಾನು ಒಬ್ಬ ದೂತನನ್ನು[d] ಕಳುಹಿಸುತ್ತಿದ್ದೇನೆ. ನಾನು ನಿಮಗಾಗಿ ಸಿದ್ಧಮಾಡಿದ ಸ್ಥಳಕ್ಕೆ ಈ ದೂತನು ನಿಮ್ಮನ್ನು ಮುನ್ನಡೆಸುವನು; ದಾರಿಯುದ್ದಕ್ಕೂ ಸಂರಕ್ಷಿಸುವನು. 21 ದೂತನಿಗೆ ವಿಧೇಯರಾಗಿ ಆತನನ್ನು ಹಿಂಬಾಲಿಸಿರಿ. ಆತನಿಗೆ ವಿರೋಧವಾಗಿ ದಂಗೆಯೇಳಬೇಡಿರಿ. ನೀವು ಅವಿಧೇಯರಾದರೆ ಆತನು ನಿಮ್ಮನ್ನು ಕ್ಷಮಿಸುವುದಿಲ್ಲ. ಆತನಲ್ಲಿ ನನ್ನ ಶಕ್ತಿಯು ಇರುತ್ತದೆ.[e] 22 ಆತನು ಹೇಳುವ ಪ್ರತಿಯೊಂದಕ್ಕೆ ನೀವು ವಿಧೇಯರಾಗಬೇಕು. ನನ್ನ ಆಜ್ಞೆಗಳನ್ನೆಲ್ಲಾ ನೀವು ಅನುಸರಿಸಬೇಕು. ಆಗ ನಾನು ನಿಮ್ಮ ಸಂಗಡ ಇರುವೆನು. ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿರುವೆನು; ನಿಮಗೆ ಕೇಡುಮಾಡುವವರಿಗೆಲ್ಲಾ ಕೇಡುಮಾಡುವೆನು.
23 “ನನ್ನ ದೂತನು ನಿಮ್ಮ ಮುಂದೆ ನಡೆದು ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಮತ್ತು ಯೆಬೂಸಿಯರು ಇರುವ ದೇಶಕ್ಕೆ ನಿಮ್ಮನ್ನು ನಡಿಸುವನು. ನಾನು ಅವರನ್ನೆಲ್ಲಾ ಸೋಲಿಸುವೆನು.
24 “ಅವರ ದೇವರುಗಳನ್ನು ಪೂಜಿಸಬೇಡಿರಿ. ಆ ದೇವರುಗಳಿಗೆ ನಮಸ್ಕರಿಸಬೇಡಿರಿ. ಅವರ ಆಚರಣೆಗಳನ್ನು ಅನುಸರಿಸಬೇಡಿರಿ. ನೀವು ಅವರ ವಿಗ್ರಹಗಳನ್ನು ನಾಶಮಾಡಬೇಕು. ಅವರ ಸ್ಮಾರಕ ಸ್ತಂಭಗಳನ್ನು ಕೆಡವಿಹಾಕಬೇಕು. 25 ನೀವು ನಿಮ್ಮ ದೇವರಾದ ಯೆಹೋವನನ್ನೇ ಆರಾಧಿಸಬೇಕು. ಆಗ ಆತನು ನಿಮ್ಮ ಅನ್ನಪಾನಗಳನ್ನು ಆಶೀರ್ವದಿಸುವನು. ನಾನು ನಿಮ್ಮೊಳಗಿಂದ ಎಲ್ಲಾ ವ್ಯಾಧಿಯನ್ನು ತೆಗೆದುಬಿಡುವೆನು. 26 ನಿಮ್ಮ ಸ್ತ್ರೀಯರು ಮಕ್ಕಳನ್ನು ಪಡೆಯಲು ಶಕ್ತರಾಗುವರು. ನಿಮ್ಮ ಮಕ್ಕಳು ಹುಟ್ಟುವಾಗಲೇ ಸಾಯುವುದಿಲ್ಲ; ನಿಮಗೆ ದೀರ್ಘಾಯುಷ್ಯವನ್ನು ಅನುಗ್ರಹಿಸುವೆನು.
27 “ನೀವು ನಿಮ್ಮ ವೈರಿಗಳ ವಿರುದ್ಧ ಯುದ್ಧ ಮಾಡುವಾಗ, ನಿಮ್ಮ ವೈರಿಗಳನ್ನೆಲ್ಲಾ ಸೋಲಿಸುವಂತೆ ನಾನು ನಿಮಗೆ ನನ್ನ ಮಹಾಶಕ್ತಿಯಿಂದ ಸಹಾಯ ಮಾಡುವೆನು. ನಿಮ್ಮ ವೈರಿಗಳು ಯುದ್ಧದಲ್ಲಿ ಭಯದಿಂದಲೂ ಗಲಿಬಿಲಿಯಿಂದಲೂ ಓಡಿಹೋಗುವರು. 28 ನಾನು ನಿಮ್ಮ ಮುಂದೆ ಹೆದ್ದುಂಬಿಯನ್ನು[f] ಕಳುಹಿಸುವೆನು. ನಿಮ್ಮ ವೈರಿಗಳಾದ ಹಿವ್ವಿಯರನ್ನು ಕಾನಾನ್ಯರನ್ನು ಮತ್ತು ಹಿತ್ತಿಯರನ್ನು ಅದು ಬಲವಂತದಿಂದ ಅಟ್ಟಿಬಿಡುವುದು. 29 ಆದರೆ ನಾನು ಒಂದೇ ವರ್ಷದಲ್ಲಿ ಅವರೆಲ್ಲರನ್ನೂ ಅಲ್ಲಿಂದ ಹೊರಡಿಸುವುದಿಲ್ಲ. ಯಾಕೆಂದರೆ ದೇಶದಲ್ಲಿ ಜನರು ಕಡಿಮೆಯಾಗುವುದರಿಂದ ಕ್ರೂರ ಪ್ರಾಣಿಗಳೆಲ್ಲಾ ಹೆಚ್ಚಾಗಿ ನಿಮಗೆ ಬಹಳ ತೊಂದರೆಯಾಗಬಹುದು. 30 ಆದ್ದರಿಂದ ನೀವು ಅಭಿವೃದ್ಧಿಯಾಗಿ ದೇಶದಲ್ಲೆಲ್ಲಾ ತುಂಬಿಕೊಳ್ಳುವತನಕ ಅವರನ್ನು ಸ್ವಲ್ಪ ಸ್ವಲ್ಪವಾಗಿ ಹೊರದೂಡುವೆನು.
31 “ಕೆಂಪುಸಮುದ್ರದಿಂದ ಯೂಫ್ರೇಟೀಸ್ ನದಿಯವರೆಗೆ ಇರುವ ಪ್ರದೇಶವನ್ನೆಲ್ಲಾ ಕೊಡುವೆನು. ಪಶ್ಚಿಮ ಗಡಿಯು ಫಿಲಿಷ್ಟಿಯ ಸಮುದ್ರವಾಗಿರುವುದು (ಮೆಡಿಟರೇನಿಯನ್ ಸಮುದ್ರ) ಮತ್ತು ಪೂರ್ವ ಗಡಿಯು ಅರೇಬಿಯಾ ಮರುಭೂಮಿಯಾಗಿರುವುದು. ನೀವು ಅಲ್ಲಿ ವಾಸಿಸುವ ಜನರನ್ನು ಸೋಲಿಸುವಂತೆ ನಾನು ಮಾಡುವೆನು; ಅವರೆಲ್ಲರನ್ನು ನೀವು ಬಲವಂತವಾಗಿ ಹೊರಗಟ್ಟುವಿರಿ.
32 “ನೀವು ಆ ಜನರೊಡನೆಯಾಗಲಿ ಅವರ ದೇವರುಗಳೊಡನೆಯಾಗಲಿ ಯಾವ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು. 33 ನಿಮ್ಮ ದೇಶದಲ್ಲಿ ವಾಸಿಸಲು ಅವರನ್ನು ಬಿಡಬೇಡಿರಿ. ಇಲ್ಲವಾದರೆ ಅವರು ನಿಮ್ಮಲ್ಲಿ ದ್ರೋಹ ಬುದ್ಧಿಯನ್ನು ಹುಟ್ಟಿಸಬಹುದು. ನೀವು ಅವರ ದೇವರುಗಳನ್ನು ಪೂಜಿಸಿದರೆ ಆ ಪೂಜೆಯೂ ನಿಮಗೆ ಉರುಲಾಗುವುದು.”
ದೇವರ ಮತ್ತು ಇಸ್ರೇಲರ ನಡುವೆ ಒಡಂಬಡಿಕೆ
24 ದೇವರು ಮೋಶೆಗೆ, “ನೀನು, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿಬಂದು ದೂರದಿಂದ ನನ್ನನ್ನು ಆರಾಧಿಸಬೇಕು. 2 ಬಳಿಕ ನೀನು ಮಾತ್ರ ನನ್ನ ಬಳಿಗೆ ಬರಬೇಕು; ಬೇರೆಯವರು ಬರಕೂಡದು; ಆದರೆ ಉಳಿದ ಜನರು ಬೆಟ್ಟವನ್ನೂ ಏರಕೂಡದು” ಎಂದು ಹೇಳಿದನು.
3 ಮೋಶೆಯು ಯೆಹೋವನ ಎಲ್ಲಾ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲರೂ, “ಯೆಹೋವನ ಆಜ್ಞೆಗಳಿಗೆಲ್ಲಾ ನಾವು ವಿಧೇಯರಾಗುವೆವು” ಎಂದು ಒಂದೇ ಸ್ವರದಿಂದ ಹೇಳಿದರು.
4 ಆದ್ದರಿಂದ ಮೋಶೆ ಯೆಹೋವನ ಆಜ್ಞೆಗಳನ್ನೆಲ್ಲಾ ಒಂದು ಸುರುಳಿಯಲ್ಲಿ ಬರೆದನು. ಮರುದಿನ ಮುಂಜಾನೆ, ಅವನು ಬೇಗನೆ ಎದ್ದು ಬೆಟ್ಟದ ಕೆಳಭಾಗದ ಹತ್ತಿರ, ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಂಬಗಳುಳ್ಳ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಇಸ್ರೇಲರ ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. 5 ಬಳಿಕ ಮೋಶೆಯು ಯಜ್ಞಗಳನ್ನು ಸಮರ್ಪಿಸುವುದಕ್ಕೆ ಇಸ್ರೇಲರ ಯೌವನಸ್ಥರನ್ನು ಕಳುಹಿಸಿದನು. ಅವರು ಯೆಹೋವನಿಗೆ ಎತ್ತುಗಳನ್ನು ಸರ್ವಾಂಗಹೋಮಗಳಾಗಿಯೂ ಸಮಾಧಾನಯಜ್ಞಗಳಾಗಿಯೂ ಅರ್ಪಿಸಿದರು.
6 ಮೋಶೆಯು ಈ ಪಶುಗಳ ರಕ್ತವನ್ನು ತೆಗೆದುಕೊಂಡು ಅದರಲ್ಲಿ ಅರ್ಧಭಾಗವನ್ನು ಬೋಗುಣಿಗಳಲ್ಲಿ ಹಾಕಿದನು; ಉಳಿದ ಅರ್ಧಭಾಗವನ್ನು ಯಜ್ಞವೇದಿಕೆಯ ಮೇಲೆ ಸುರಿದನು.
7 ವಿಶೇಷ ಒಡಂಬಡಿಕೆಯಿಂದ ಬರೆಯಲ್ಪಟ್ಟಿದ್ದ ಸುರುಳಿಯನ್ನು ಮೋಶೆಯು ಎಲ್ಲಾ ಜನರಿಗೆ ಕೇಳುವಂತೆ ಓದಿದನು. ಆಗ ಜನರು, “ಯೆಹೋವನ ಆಜ್ಞೆಗಳನ್ನೆಲ್ಲ ಅನುಸರಿಸಿ ಆತನಿಗೆ ವಿಧೇಯರಾಗಿರುತ್ತೇವೆ” ಅಂದರು.
8 ಆಗ ಮೋಶೆ ಯಜ್ಞಗಳ ರಕ್ತದಿಂದ ತುಂಬಿದ ಬೋಗುಣಿಯನ್ನು ತೆಗೆದುಕೊಂಡು ಅದರಲ್ಲಿದ್ದ ರಕ್ತವನ್ನು ಜನರ ಮೇಲೆ ಚಿಮಿಕಿಸಿ, “ಈ ಸುರುಳಿಯಲ್ಲಿರುವ ವಾಕ್ಯಗಳಿಗನುಸಾರವಾಗಿ ಯೆಹೋವನು ನಿಮ್ಮೊಡನೆ ಒಂದು ವಿಶೇಷ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆಂಬುದನ್ನು ಈ ರಕ್ತವು ಸೂಚಿಸುತ್ತದೆ” ಎಂದು ಹೇಳಿದನು.
9 ಬಳಿಕ ಮೋಶೆ, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿದರು. 10 ಈ ಜನರು ಇಸ್ರೇಲರ ಯೆಹೋವನನ್ನು ನೋಡಿದರು. ದೇವರು ಆಕಾಶಮಂಡಲದಂತೆ ಅತಿ ನಿರ್ಮಲವಾದ ಇಂದ್ರನೀಲಮಣಿಯ ನೆಲಗಟ್ಟಿನ ಮೇಲೆ ನಿಂತುಕೊಂಡಿದ್ದನು! 11 ಇಸ್ರೇಲರ ನಾಯಕರೆಲ್ಲರೂ ಯೆಹೋವನನ್ನು ನೋಡಿದರು, ಆದರೆ ದೇವರು ಅವರನ್ನು ನಾಶಮಾಡಲಿಲ್ಲ. ಅವರೆಲ್ಲರೂ ದೇವದರ್ಶನ ಮಾಡಿ ಅನ್ನಪಾನಗಳನ್ನು ತೆಗೆದುಕೊಂಡರು.
ಯೆಹೋವನ ನಿಬಂಧನೆಯನ್ನು ಪಡೆಯಲು ಮೋಶೆ ಹೋದದ್ದು
12 ಯೆಹೋವನು ಮೋಶೆಗೆ, “ನೀನು ಬೆಟ್ಟವನ್ನು ಹತ್ತಿ ಬಂದು ನನ್ನ ಬಳಿಯಲ್ಲಿರು. ನಾನು ನನ್ನ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದಿದ್ದೇನೆ. ಈ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ನೀನು ಜನರಿಗೆ ಬೋಧಿಸಬೇಕು. ನಾನು ಈ ಕಲ್ಲಿನ ಹಲಗೆಗಳನ್ನು ನಿನಗೆ ಕೊಡುವೆನು” ಎಂದು ಹೇಳಿದನು.
13 ಆದ್ದರಿಂದ ಮೋಶೆಯು ತನ್ನ ಶಿಷ್ಯನಾದ ಯೆಹೋಶುವನೊಡನೆ ಎದ್ದುನಿಂತು ದೇವರ ಬೆಟ್ಟದ ಮೇಲಕ್ಕೆ ಹೋದನು. 14 ಮೋಶೆಯು ಹಿರಿಯರಿಗೆ, “ನಾವು ನಿಮ್ಮ ಬಳಿಗೆ ಹಿಂತಿರುಗಿ ಬರುವ ತನಕ ನೀವು ಇಲ್ಲಿ ಕಾದುಕೊಂಡಿರಿ. ಆರೋನನು ಮತ್ತು ಹೂರನು ನಿಮ್ಮ ಬಳಿಯಿದ್ದಾರೆ; ನಿಮ್ಮಲ್ಲಿ ಯಾರಿಗಾದರೂ ಸಮಸ್ಯೆಯಿದ್ದರೆ ಅವರ ಬಳಿಗೆ ಹೋಗಲಿ” ಎಂದು ಹೇಳಿದನು.
ಮೋಶೆಯು ದೇವರನ್ನು ಭೇಟಿಯಾದದ್ದು
15 ಬಳಿಕ ಮೋಶೆ ಬೆಟ್ಟದ ಮೇಲಕ್ಕೆ ಹೋದನು. ಮೋಡವು ಬೆಟ್ಟವನ್ನು ಕವಿದುಕೊಂಡಿತ್ತು. 16 ಸೀನಾಯಿ ಬೆಟ್ಟದ ಮೇಲೆ ಯೆಹೋವನ ಮಹಿಮೆಯು ಇಳಿದು ಬಂದಿತು. ಮೋಡವು ಆರುದಿನಗಳವರೆಗೆ ಬೆಟ್ಟವನ್ನು ಕವಿದುಕೊಂಡಿತ್ತು. ಏಳನೆಯ ದಿನದಲ್ಲಿ, ಮೋಡದೊಳಗಿಂದ ಯೆಹೋವನು ಮೋಶೆಯೊಡನೆ ಮಾತಾಡಿದನು. 17 ಇಸ್ರೇಲರಿಗೆ ಯೆಹೋವನ ಮಹಿಮೆಯು ಬೆಟ್ಟದ ತುದಿಯಲ್ಲಿ ಉರಿಯುವ ಬೆಂಕಿಯಂತೆ ಕಾಣುತ್ತಿತ್ತು.
18 ಬಳಿಕ ಮೋಶೆಯು ಮೋಡದಲ್ಲಿ ಬೆಟ್ಟದ ಮೇಲೆ ಇನ್ನೂ ಎತ್ತರಕ್ಕೆ ಹೋದನು. ಮೋಶೆಯು ಬೆಟ್ಟದಲ್ಲಿ ಹಗಲಿರುಳು ನಲವತ್ತು ದಿವಸ ಇದ್ದನು.
Kannada Holy Bible: Easy-to-Read Version. All rights reserved. © 1997 Bible League International