Beginning
7 ಯೆಹೋವನು ಮೋಶೆಗೆ, “ನಾನು ನಿನ್ನನ್ನು ಫರೋಹನಿಗೆ ಮಹಾರಾಜನಂತೆ ಮಾಡಿರುವೆನು; ಆರೋನನು ಅಧಿಕೃತ ಮಾತುಗಾರನಾಗಿರುವನು. 2 ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಆರೋನನಿಗೆ ಹೇಳು. ಆಗ ಅವನು ಅವುಗಳನ್ನೆಲ್ಲಾ ರಾಜನಿಗೆ ತಿಳಿಸುವನು. ಇಸ್ರೇಲರು ಈ ದೇಶವನ್ನು ಬಿಟ್ಟು ಹೋಗುವುದಕ್ಕೆ ಫರೋಹನು ಸಮ್ಮತಿಸುವನು. 3 ಆದರೆ ನಾನು ಫರೋಹನ ಹೃದಯವನ್ನು ಕಠಿಣಗೊಳಿಸುವುದರಿಂದ ಅವನು ನನ್ನ ಆಜ್ಞೆಗಳಿಗೆ ವಿಧೇಯನಾಗುವುದಿಲ್ಲ. ಆಗ ನಾನು ಈಜಿಪ್ಟಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡುವೆನು. ಆದರೂ ಅವನು ವಿಧೇಯನಾಗುವುದಿಲ್ಲ. 4 ಆಗ ನಾನು ಈಜಿಪ್ಟನ್ನು ಭಯಂಕರವಾಗಿ ದಂಡಿಸಿ ನನ್ನ ಜನರನ್ನು ಆ ದೇಶದಿಂದ ಹೊರತರುವೆನು. 5 ನಾನು ಈಜಿಪ್ಟಿನ ವಿರುದ್ಧವಾಗಿ ನನ್ನ ಕೈಯನ್ನು ಚಾಚಿ ನನ್ನ ಜನರನ್ನು ಅವರ ದೇಶದಿಂದ ಬಿಡುಗಡೆ ಮಾಡಿದಾಗ, ನಾನೇ ಯೆಹೋವನೆಂದು ಅವರು ತಿಳಿದುಕೊಳ್ಳುವರು.”
6 ಯೆಹೋವನು ಆಜ್ಞಾಪಿಸಿದವುಗಳಿಗೆಲ್ಲಾ ಮೋಶೆ ಆರೋನರು ವಿಧೇಯರಾದರು. 7 ಅವರು ಫರೋಹನೊಡನೆ ಮಾತಾಡಿದಾಗ ಮೋಶೆಗೆ ಎಂಭತ್ತು ವರ್ಷ ವಯಸ್ಸಾಗಿತ್ತು. ಆರೋನನಿಗೆ ಎಂಭತ್ತ ಮೂರು ವರ್ಷ ವಯಸ್ಸಾಗಿತ್ತು.
ಊರುಗೋಲು ಸರ್ಪವಾಯಿತು
8 ಯೆಹೋವನು ಮೋಶೆ ಆರೋನರಿಗೆ, 9 “ಫರೋಹನು ನಿಮಗೆ, ಅದ್ಭುತಕಾರ್ಯವೊಂದನ್ನು ಮಾಡಿ ನಿಮ್ಮ ಅಧಿಕಾರವನ್ನು ರುಜುವಾತುಪಡಿಸಬೇಕೆಂದು ಕೇಳುವನು. ಆಗ ಮೋಶೆಯು ಆರೋನನಿಗೆ ಊರುಗೋಲನ್ನು ನೆಲದ ಮೇಲೆ ಬಿಸಾಡಲು ಹೇಳಬೇಕು. ಆರೋನನು ಬಿಸಾಡಿದ ಕೂಡಲೇ ಆ ಕೋಲು ಅವರ ಕಣ್ಣೆದುರಿನಲ್ಲಿಯೇ ಸರ್ಪವಾಗುವುದು” ಅಂದನು.
10 ಆದ್ದರಿಂದ ಮೋಶೆ ಆರೋನರು ಫರೋಹನ ಬಳಿಗೆ ಹೋದರು. ಯೆಹೋವನು ಆಜ್ಞಾಪಿಸಿದ್ದಂತೆಯೇ ಅವರು ಮಾಡಿದರು. ಆರೋನನು ತನ್ನ ಊರುಗೋಲನ್ನು ಫರೋಹನ ಮತ್ತು ಅವನ ಅಧಿಕಾರಿಗಳ ಮುಂದೆ ನೆಲದ ಮೇಲೆ ಬಿಸಾಡಿದಾಗ ಅದು ಸರ್ಪವಾಯಿತು.
11 ಆಗ ರಾಜನು ತನ್ನ ವಿಧ್ವಾಂಸರನ್ನೂ ಮಂತ್ರಗಾರರನ್ನೂ ಕರೆಯಿಸಿದನು. ಅವರು ತಮ್ಮ ಮಂತ್ರವಿದ್ಯೆಯಿಂದ ಅದೇ ರೀತಿ ಮಾಡಿದರು. 12 ಅವರು ತಮ್ಮ ಊರುಗೋಲುಗಳನ್ನು ನೆಲದ ಮೇಲೆ ಬಿಸಾಡಿದಾಗ ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು. 13 ಯೆಹೋವನು ಹೇಳಿದ್ದಂತೆಯೇ ಫರೋಹನ ಹೃದಯವು ಕಠಿಣವಾಯಿತು. ಅವನು ಮೋಶೆ ಮತ್ತು ಆರೋನರ ಮಾತಿಗೆ ಕಿವಿಗೊಡಲಿಲ್ಲ.
ನೀರು ರಕ್ತವಾದದ್ದು
14 ಆಗ ಯೆಹೋವನು ಮೋಶೆಗೆ, “ಫರೋಹನ ಹೃದಯ ಮೊಂಡಾಗಿದೆ; ಅವನು ಜನರನ್ನು ಹೋಗಗೊಡಿಸುವುದಿಲ್ಲ. 15 ಮುಂಜಾನೆ ಅವನು ನದಿಗೆ ಹೋಗುವನು. ಸರ್ಪವಾಗಿ ಮಾರ್ಪಾಟಾದ ಊರುಗೋಲನ್ನು ತೆಗೆದುಕೊಂಡು ನದಿಯ ತೀರಕ್ಕೆ ಹೋಗಿ ಅವನನ್ನು ಭೇಟಿಯಾಗಿ ಅವನಿಗೆ, 16 ‘ಇಬ್ರಿಯರ ದೇವರಾದ ಯೆಹೋವನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ. ಆತನ ಜನರು ಅರಣ್ಯದಲ್ಲಿ ಆತನನ್ನು ಆರಾಧಿಸುವುದಕ್ಕೆ ನೀನು ಅವರಿಗೆ ಅಪ್ಪಣೆಕೊಡಬೇಕೆಂದು ಆತನು ನಿನಗೆ ಆಜ್ಞಾಪಿಸುತ್ತಾನೆ. ಇದುವರೆಗೆ ನೀನು ಯೆಹೋವನ ಮಾತಿಗೆ ಕಿವಿಗೊಡಲಿಲ್ಲ. 17 ಆದ್ದರಿಂದ ಆತನೇ ಯೆಹೋವನೆಂದು ನಿನಗೆ ತಿಳಿಯಲೆಂದು ನನ್ನ ಕೈಯಲ್ಲಿರುವ ಕೋಲಿನಿಂದ ನೈಲ್ ನದಿಯ ನೀರನ್ನು ಹೊಡೆಯುವೆನು; ಆ ನದಿಯ ನೀರು ರಕ್ತವಾಗುವುದು. 18 ನದಿಯಲ್ಲಿರುವ ಮೀನುಗಳು ಸಾಯುವವು; ನದಿಯು ಹೊಲಸಾಗುವುದು; ಈಜಿಪ್ಟಿನವರು ನದಿಯ ನೀರನ್ನು ಕುಡಿಯಲಾಗುವುದಿಲ್ಲ’ ಎಂದು ಹೇಳಬೇಕು” ಅಂದನು.
19 ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೈಯಲ್ಲಿರುವ ಊರುಗೋಲನ್ನು ನದಿಗಳ, ಕಾಲುವೆಗಳ, ಕೆರೆಗಳ ಮತ್ತು ನೀರಿರುವ ಪ್ರತಿಯೊಂದು ಸ್ಥಳದ ಮೇಲೆ ಚಾಚು’ ಎಂದು ಹೇಳು. ಅವನು ಚಾಚಿದಾಗ ನೀರೆಲ್ಲಾ ರಕ್ತವಾಗುವುದು. ಮರದ ಮತ್ತು ಕಲ್ಲಿನ ಪಾತ್ರೆಗಳಲ್ಲಿರುವ ನೀರು ಸಹ ರಕ್ತವಾಗುವುದು” ಎಂದು ಹೇಳಿದನು.
20 ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಆರೋನರು ಮಾಡಿದರು. ಆರೋನನು ಫರೋಹನ ಮತ್ತು ಅವನ ಅಧಿಕಾರಿಗಳ ಮುಂದೆ ಕೋಲನ್ನು ಎತ್ತಿ ನೈಲ್ ನದಿಯ ನೀರನ್ನು ಹೊಡೆದನು. ಆಗ ನದಿಯ ನೀರೆಲ್ಲಾ ರಕ್ತವಾಯಿತು. 21 ನದಿಯಲ್ಲಿದ್ದ ಮೀನುಗಳು ಸತ್ತವು; ನದಿಯು ಹೊಲಸಾಗತೊಡಗಿತು. ಆದ್ದರಿಂದ ಈಜಿಪ್ಟಿನವರು ನದಿಯ ನೀರನ್ನು ಕುಡಿಯಲಾಗಲಿಲ್ಲ. ಈಜಿಪ್ಟಿನ ನೀರೆಲ್ಲಾ ರಕ್ತವೇ ಆಗಿತ್ತು.
22 ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇ ರೀತಿ ಮಾಡಿದರು. ಆದ್ದರಿಂದ ಫರೋಹನು ಮೋಶೆ ಆರೋನರ ಮಾತನ್ನು ಕೇಳಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು. 23 ಫರೋಹನು ತನ್ನ ಮನೆಗೆ ಹೊರಟುಹೋದನು. ಮೋಶೆ ಆರೋನರು ಮಾಡಿದ ಮಹತ್ಕಾರ್ಯಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ.
24 ಈಜಿಪ್ಟಿನವರು ನದಿಯ ನೀರನ್ನು ಕುಡಿಯಲಾಗಲಿಲ್ಲ. ಆದ್ದರಿಂದ ಅವರು ನದಿಯ ಸುತ್ತಲೂ ಕುಡಿಯುವ ನೀರಿಗಾಗಿ ಬಾವಿಗಳನ್ನು ಅಗೆದರು.
ಕಪ್ಪೆಗಳಿಂದ ಬಾಧೆ
25 ಯೆಹೋವನು ನೈಲ್ ನದಿಯ ನೀರನ್ನು ರಕ್ತವನ್ನಾಗಿ ಮಾರ್ಪಡಿಸಿದ ಬಳಿಕ ಏಳು ದಿನಗಳು ಕಳೆದವು.
8 ಆಗ ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹೋಗಿ ಯೆಹೋವನು ಹೀಗೆನ್ನುತ್ತಾನೆ ಎಂದು ಹೇಳು: ‘ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರು ಹೋಗಲಿ. 2 ನನ್ನ ಜನರನ್ನು ನೀನು ಹೋಗಗೊಡಿಸದಿದ್ದರೆ ನಾನು ಈಜಿಪ್ಟನ್ನು ಕಪ್ಪೆಗಳಿಂದ ತುಂಬಿಸುವೆನು. 3 ನೈಲ್ ನದಿಯು ಕಪ್ಪೆಗಳಿಂದ ತುಂಬಿ ಹೋಗುವುದು. ಕಪ್ಪೆಗಳು ನದಿಯಿಂದ ಬಂದು ನಿಮ್ಮ ಮನೆಗಳನ್ನು ಪ್ರವೇಶಿಸುವವು; ನಿಮ್ಮ ಮಲಗುವ ಕೋಣೆಯಲ್ಲಿಯೂ ನಿಮ್ಮ ಹಾಸಿಗೆಗಳಲ್ಲಿಯೂ ನಿಮ್ಮ ಅಧಿಕಾರಿಗಳ ಮನೆಗಳಲ್ಲಿಯೂ ನಿಮ್ಮ ಒಲೆಗಳಲ್ಲಿಯೂ ನೀರಿನ ಜಾಡಿಗಳಲ್ಲಿಯೂ ಹಿಟ್ಟುನಾದುವ ತಟ್ಟೆಗಳಲ್ಲಿಯೂ ಇರುವವು; 4 ನಿನ್ನ ಮೇಲೆಯೂ ನಿನ್ನ ಪ್ರಜೆಗಳ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ಇರುವವು’” ಅಂದನು.
5 ಬಳಿಕ ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಹಿಡಿದುಕೊಂಡು ಹೊಳೆಗಳ, ಕಾಲುವೆಗಳ ಮತ್ತು ಕೆರೆಗಳ ಮೇಲೆ ಕೈಚಾಚು’ ಎಂದು ಹೇಳು. ಆಗ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳು ಹೊರಬರುವವು” ಎಂದು ಹೇಳಿದನು.
6 ಅಂತೆಯೇ ಆರೋನನು ಈಜಿಪ್ಟಿನ ನೀರುಗಳ ಮೇಲೆ ತನ್ನ ಕೈಯನ್ನು ಚಾಚಿದಾಗ ಕಪ್ಪೆಗಳು ನೀರುಗಳಿಂದ ಹೊರಬಂದು ಈಜಿಪ್ಟ್ ದೇಶವನ್ನು ಆವರಿಸಿಕೊಳ್ಳತೊಡಗಿದವು.
7 ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇರೀತಿ ಮಾಡಿ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು.
8 ಫರೋಹನು ಮೋಶೆ ಆರೋನರನ್ನು ಕರೆಯಿಸಿ, “ನನ್ನಿಂದ ಮತ್ತು ನನ್ನ ಜನರ ಮೇಲಿಂದ ಕಪ್ಪೆಗಳನ್ನು ತೊಲಗಿಸಬೇಕೆಂದು ಯೆಹೋವನನ್ನು ಕೇಳಿಕೊಳ್ಳಿರಿ. ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಲು ನಾನು ಆತನ ಜನರನ್ನು ಹೋಗಗೊಡಿಸುವೆನು” ಎಂದು ಹೇಳಿದನು.
9 ಮೋಶೆಯು ಫರೋಹನಿಗೆ, “ಕಪ್ಪೆಗಳು ಯಾವಾಗ ಬಿಟ್ಟುಹೋಗಬೇಕೆಂದು ತಿಳಿಸು. ನಾನು ನಿನಗೋಸ್ಕರ, ನಿನ್ನ ಜನರಿಗೋಸ್ಕರ ಮತ್ತು ನಿನ್ನ ಅಧಿಕಾರಿಗಳಿಗೋಸ್ಕರ ಪ್ರಾರ್ಥಿಸುವೆನು. ಆಗ ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿಯುತ್ತವೆ” ಎಂದು ಹೇಳಿದನು.
10 ಅದಕ್ಕೆ ಫರೋಹನು, “ನಾಳೆ” ಅಂದನು.
ಮೋಶೆ, “ನೀನು ಹೇಳಿದಂತೆಯೇ ಆಗುವುದು. ನಮ್ಮ ದೇವರಾದ ಯೆಹೋವನಿಗೆ ಸಮಾನನಾದ ದೇವರೇ ಇಲ್ಲವೆಂದು ನೀನು ತಿಳಿದುಕೊಳ್ಳುವೆ. 11 ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ನಿನ್ನ ಅಧಿಕಾರಿಗಳನ್ನೂ ನಿನ್ನ ಜನರನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿದುಕೊಳ್ಳುವವು” ಎಂದು ಹೇಳಿದನು.
12 ಮೋಶೆ ಆರೋನರು ಫರೋಹನ ಬಳಿಯಿಂದ ಹೋದರು. ಫರೋಹನ ವಿರುದ್ಧವಾಗಿ ಕಳುಹಿಸಿದ ಕಪ್ಪೆಗಳನ್ನು ತೊಲಗಿಸಬೇಕೆಂದು ಮೋಶೆಯು ಯೆಹೋವನಿಗೆ ಪ್ರಾರ್ಥಿಸಿದನು. 13 ಯೆಹೋವನು ಮೋಶೆಯ ಬೇಡಿಕೆಯನ್ನು ಅನುಗ್ರಹಿಸಿದನು. ಕಪ್ಪೆಗಳು ಮನೆಗಳಲ್ಲಿಯೂ ಅಂಗಳಗಳಲ್ಲಿಯೂ ಹೊಲಗಳಲ್ಲಿಯೂ ಸತ್ತುಹೋದವು. 14 ಅವುಗಳನ್ನು ಕೂಡಿಸಿದಾಗ ರಾಶಿರಾಶಿಗಳಾದವು. ದೇಶವು ದುರ್ವಾಸನೆಯಿಂದ ತುಂಬಿಹೋಯಿತು. 15 ಕಪ್ಪೆಗಳಿಂದ ಬಿಡುಗಡೆಯಾದದ್ದನ್ನು ಫರೋಹನು ಕಂಡು ಮತ್ತೆ ತನ್ನ ಹೃದಯವನ್ನು ಕಠಿಣಪಡಿಸಿಕೊಂಡನು. ಮೋಶೆ ಆರೋನರ ಬೇಡಿಕೆಯನ್ನು ಅವನು ಈಡೇರಿಸಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
ಹೇನುಗಳು
16 ಬಳಿಕ ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡೆ’ ಎಂದು ಹೇಳು. ಆಗ ಧೂಳು ಈಜಿಪ್ಟಿನಲ್ಲೆಲ್ಲಾ ಹೇನುಗಳಾಗುವವು” ಎಂದು ಹೇಳಿದನು.
17 ಅವರು ಹಾಗೆಯೇ ಮಾಡಿದರು. ಆರೋನನು ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡೆದನು. ಆಗ ಈಜಿಪ್ಟಿನ ಪ್ರತಿಯೊಂದು ಸ್ಥಳದ ಧೂಳು ಹೇನುಗಳಾಗಿ ಪ್ರಾಣಿಗಳ ಮೇಲೂ ಜನರ ಮೇಲೂ ಏರಿಕೊಂಡವು.
18 ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇರೀತಿ ಮಾಡಲು ಪ್ರಯತ್ನಿಸಿದರೂ ಧೂಳಿನಿಂದ ಹೇನುಗಳನ್ನು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಹೇನುಗಳು ಪ್ರಾಣಿಗಳ ಮೇಲೂ ಜನರ ಮೇಲೂ ಉಳಿದುಕೊಂಡವು. 19 ಆದ್ದರಿಂದ ಮಾಂತ್ರಿಕರು ಫರೋಹನಿಗೆ, “ಇದು ದೇವರ ಕಾರ್ಯವೇ” ಎಂದು ಹೇಳಿದರು. ಆದರೆ ಫರೋಹನು ಅವರ ಮಾತಿಗೆ ಕಿವಿಗೊಡಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
ಹುಳಗಳು
20 ಯೆಹೋವನು ಮೋಶೆಗೆ, “ಬೆಳಿಗ್ಗೆ ಎದ್ದು ಫರೋಹನ ಬಳಿಗೆ ಹೋಗು. ಫರೋಹನು ನದಿಗೆ ಹೋಗುವನು. ನೀನು ಅವನಿಗೆ, ‘ಯೆಹೋವನು ಹೀಗೆನ್ನುತ್ತಾನೆ: ನನ್ನ ಜನರು ಹೋಗಿ ನನ್ನನ್ನು ಆರಾಧಿಸಲಿ! 21 ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ, ಹುಳಗಳು ನಿನ್ನ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ನಿನ್ನ ಜನರ ಮೇಲೆಯೂ ನಿಮ್ಮ ಮನೆಗಳಲ್ಲಿಯೂ ತುಂಬಿಕೊಳ್ಳುವವು; ನೆಲದ ಮೇಲೆಲ್ಲಾ ಇರುವವು. 22 ಆದರೆ ನಾನು ಈಜಿಪ್ಟಿನವರೊಡನೆ ವರ್ತಿಸುವಂತೆ ಇಸ್ರೇಲರೊಡನೆ ವರ್ತಿಸುವುದಿಲ್ಲ. ನನ್ನ ಜನರು ವಾಸಿಸುವ ಗೋಷೆನ್ ಪ್ರದೇಶದಲ್ಲಿ ಯಾವ ಹುಳವೂ ಇರುವುದಿಲ್ಲ. ನಾನೇ ಭೂಲೋಕವನ್ನು ಆಳುವ ಯೆಹೋವನೆಂದು ಆಗ ನೀನು ತಿಳಿದುಕೊಳ್ಳುವೆ. 23 ಆದ್ದರಿಂದ ನಾಳೆ ನನ್ನ ಜನಕ್ಕೂ ನಿನ್ನ ಜನಕ್ಕೂ ವ್ಯತ್ಯಾಸ ಮಾಡುವೆನು. ಅದೇ ನನ್ನ ಸಾಕ್ಷಿ’ ಎಂದು ಹೇಳಬೇಕು” ಎಂದು ಹೇಳಿದನು.
24 ಯೆಹೋವನು ತಾನು ಹೇಳಿದಂತೆಯೇ ಮಾಡಿದನು. ಲೆಕ್ಕವಿಲ್ಲದಷ್ಟು ಹುಳಗಳು ಈಜಿಪ್ಟಿಗೆ ಬಂದು ಫರೋಹನ ಮನೆಯಲ್ಲಿಯೂ ಅವನ ಅಧಿಕಾರಿಗಳ ಮನೆಗಳಲ್ಲಿಯೂ ತುಂಬಿಕೊಂಡವು. ಇಡೀ ಈಜಿಪ್ಟನ್ನೇ ಅವು ತುಂಬಿಕೊಂಡದ್ದರಿಂದ ದೇಶವು ಹಾಳಾಯಿತು. 25 ಆಗ ಫರೋಹನು ಮೋಶೆ ಆರೋನರನ್ನು ಕರೆಯಿಸಿ, “ನಿಮ್ಮ ದೇವರಿಗೆ ಈ ದೇಶದಲ್ಲಿಯೇ ಯಜ್ಞಗಳನ್ನು ಅರ್ಪಿಸಿರಿ” ಎಂದು ಹೇಳಿದನು.
26 ಅದಕ್ಕೆ ಮೋಶೆ, “ಅದು ಸರಿಯಲ್ಲ. ನಮ್ಮ ದೇವರಾದ ಯೆಹೋವನಿಗೆ ನಾವು ಅರ್ಪಿಸುವ ಯಜ್ಞಗಳು ಈಜಿಪ್ಟಿನವರಿಗೆ ನಿಷಿದ್ಧವಾಗಿವೆ. ಹೀಗಿರಲು ಅವರ ಕಣ್ಣೆದುರಿಗೇ ಅಂಥ ಯಜ್ಞಗಳನ್ನು ಅರ್ಪಿಸಿದರೆ, ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವುದಿಲ್ಲವೇ? 27 ನಾವು ಅರಣ್ಯದಲ್ಲಿ ಮೂರು ದಿನ ಪ್ರಯಾಣ ಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸುವಂತಾಗಲಿ. ಹೀಗೆ ಮಾಡಲು ಯೆಹೋವನೇ ನಮಗೆ ಹೇಳಿದ್ದಾನೆ” ಅಂದನು.
28 ಅದಕ್ಕೆ ಫರೋಹನು, “ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಲು ನಾನು ನಿಮಗೆ ಅಪ್ಪಣೆ ಕೊಡುವೆನು; ಆದರೆ ಬಹುದೂರ ಹೋಗಬೇಡಿ; ಈಗ ಹೋಗಿ ನನಗೋಸ್ಕರ ಪ್ರಾರ್ಥಿಸಿರಿ” ಅಂದನು.
29 ಅದಕ್ಕೆ ಮೋಶೆ, “ನಾನು ಇಲ್ಲಿಂದ ಹೋದಾಗ, ನಿನಗೂ ನಿನ್ನ ಪ್ರಜೆಗಳಿಗೂ ನಿನ್ನ ಅಧಿಕಾರಿಗಳಿಗೂ ಹುಳಗಳ ಬಾಧೆ ನಾಳೆಯಿಂದ ಇರಬಾರದೆಂಬುದಾಗಿ ಯೆಹೋವನಿಗೆ ಪ್ರಾರ್ಥಿಸುವೆನು. ಆದರೆ ಮತ್ತೆ ನೀನು ವಂಚಿಸಿ ಜನರು ಯಜ್ಞಗಳನ್ನು ಸಮರ್ಪಿಸದಂತೆ ತಡೆಯಬಾರದು” ಎಂದು ಹೇಳಿದನು.
30 ಮೋಶೆಯು ಫರೋಹನ ಬಳಿಯಿಂದ ಹೋಗಿ ಯೆಹೋವನಿಗೆ ಪ್ರಾರ್ಥಿಸಿದನು. 31 ಯೆಹೋವನು ಮೋಶೆಯ ಬೇಡಿಕೆಯನ್ನು ಅನುಗ್ರಹಿಸಿದನು. ಯೆಹೋವನು ಫರೋಹನಿಂದಲೂ ಅವನ ಅಧಿಕಾರಿಗಳಿಂದಲೂ ಅವನ ಜನರಿಂದಲೂ ಹುಳಗಳನ್ನು ತೊಲಗಿಸಿದನು. ಯಾವ ಹುಳಗಳೂ ಉಳಿಯಲಿಲ್ಲ. 32 ಆದರೆ ಫರೋಹನು ಮತ್ತೆ ತನ್ನ ಹೃದಯವನ್ನು ಕಠಿಣಪಡಿಸಿಕೊಂಡು ಜನರನ್ನು ಹೋಗಗೊಡಿಸಲಿಲ್ಲ.
ಹೊಲದ ಪ್ರಾಣಿಗಳ ವ್ಯಾಧಿ
9 ಆಗ ಯೆಹೋವನು ಮೋಶೆಗೆ, “ನೀನು ಫರೋಹನ ಬಳಿಗೆ ಹೋಗಿ ಅವನಿಗೆ ಹೀಗೆ ಹೇಳು: ‘ಇಬ್ರಿಯರ ದೇವರಾದ ಯೆಹೋವನು ಹೇಳುವುದೇನೆಂದರೆ, ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರು ಹೋಗಲಿ. 2 ನೀನು ಅವರನ್ನು ಬಿಡದೆ ಇನ್ನೂ ತಡೆದರೆ, 3 ನಾನು ಕೈಯೆತ್ತಿ ಹೊಲಗಳಲ್ಲಿರುವ ನಿನ್ನ ಪಶುಗಳನ್ನೂ ನಿನ್ನ ಎಲ್ಲಾ ಕುದುರೆಗಳನ್ನೂ ಕತ್ತೆಗಳನ್ನೂ ಒಂಟೆಗಳನ್ನೂ ದನಕರುಗಳನ್ನೂ ಕುರಿಗಳನ್ನೂ ಘೋರವ್ಯಾದಿಯಿಂದ ಸಾಯಿಸುವೆನು. 4 ಆದರೆ ಇಸ್ರೇಲರ ಪಶುಗಳಿಗೂ ಈಜಿಪ್ಟಿನವರ ಪಶುಗಳಿಗೂ ವ್ಯತ್ಯಾಸ ಮಾಡುವೆನು. ಇಸ್ರೇಲರ ಯಾವ ಪಶುವೂ ಸಾಯುವುದಿಲ್ಲ. 5 ಇದು ನಡೆಯತಕ್ಕ ಕಾಲವನ್ನು ನಿರ್ಣಯಿಸಿ ನಾಳೆಯೇ ಇದನ್ನು ಕಾರ್ಯರೂಪಕ್ಕೆ ತರುವೆನು’ ಎಂದು ಹೇಳಬೇಕು” ಅಂದನು.
6 ಮರುದಿನ ಯೆಹೋವನು ಈ ಕಾರ್ಯವನ್ನು ಮಾಡಿದನು. ಈಜಿಪ್ಟಿನ ಹೊಲಗಳಲ್ಲಿದ್ದ ಪಶುಗಳೆಲ್ಲಾ ಸತ್ತುಹೋದವು; ಆದರೆ ಇಸ್ರೇಲರಿಗೆ ಸೇರಿದ ಯಾವ ಪಶುವೂ ಸಾಯಲಿಲ್ಲ. 7 ಇಸ್ರೇಲರ ಯಾವ ಪಶುವಾದರೂ ಸತ್ತಿದೆಯೋ ಎಂದು ತಿಳಿದುಕೊಳ್ಳಲು ಫರೋಹನು ಜನರನ್ನು ಕಳುಹಿಸಿದನು. ಇಸ್ರೇಲರ ಪಶುಗಳಲ್ಲಿ ಒಂದಾದರೂ ಸತ್ತಿರಲಿಲ್ಲ. ಆದರೂ ಫರೋಹನು ತನ್ನ ಹೃದಯವನ್ನು ಕಠಿಣಪಡಿಸಿಕೊಂಡದ್ದರಿಂದ ಇಸ್ರೇಲರನ್ನು ಹೋಗಗೊಡಿಸಲಿಲ್ಲ.
ಹುಣ್ಣುಗಳು
8 ಯೆಹೋವನು ಮೋಶೆ ಆರೋನರಿಗೆ, “ನೀವು ಒಲೆಯ ಬೂದಿಯನ್ನು ಕೈತುಂಬ ತೆಗೆದುಕೊಳ್ಳಿರಿ. ಮೋಶೆಯು ಅದನ್ನು ಫರೋಹನ ಮುಂದೆ ಗಾಳಿಯಲ್ಲಿ ತೂರಲಿ. 9 ಅದು ಧೂಳಾಗಿ ಈಜಿಪ್ಟಿನಲ್ಲೆಲ್ಲಾ ಹರಡಿಕೊಳ್ಳುವುದು; ಈ ಧೂಳು ಈಜಿಪ್ಟಿನಲ್ಲಿರುವ ಮನುಷ್ಯರನ್ನಾಗಲಿ ಪಶುಗಳನ್ನಾಗಲಿ ತಾಗಿದಾಗ ಅವರ ಚರ್ಮದ ಮೇಲೆ ಹುಣ್ಣುಗಳಾಗುತ್ತವೆ” ಎಂದು ಹೇಳಿದನು.
10 ಆದ್ದರಿಂದ ಮೋಶೆ ಆರೋನರು ಒಲೆಯಿಂದ ಬೂದಿಯನ್ನು ತೆಗೆದುಕೊಂಡು ಹೋಗಿ ಫರೋಹನ ಮುಂದೆ ನಿಂತುಕೊಂಡರು. ಅವರು ಬೂದಿಯನ್ನು ಗಾಳಿಯಲ್ಲಿ ತೂರಿದಾಗ ಜನರ ಮೇಲೂ ಪ್ರಾಣಿಗಳ ಮೇಲೂ ಹುಣ್ಣುಗಳಾಗತೊಡಗಿದವು. 11 ಮೋಶೆಯ ಈ ಕಾರ್ಯವನ್ನು ವಿಫಲಗೊಳಿಸಲು ಮಾಂತ್ರಿಕರಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಈಜಿಪ್ಟಿನ ಎಲ್ಲಾ ಜನರಂತೆ ಮಾಂತ್ರಿಕರ ಮೇಲೆಯೂ ಹುಣ್ಣುಗಳಾದವು. 12 ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣಗೊಳಿಸಿದ್ದರಿಂದ ಫರೋಹನು ಮೋಶೆ ಆರೋನರ ಮಾತನ್ನು ಕೇಳಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
ಆಲಿಕಲ್ಲು
13 ಬಳಿಕ ಯೆಹೋವನು ಮೋಶೆಗೆ, “ಮುಂಜಾನೆ ಎದ್ದು ಫರೋಹನ ಬಳಿಗೆ ಹೋಗಿ, ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನನ್ನನ್ನು ಆರಾಧಿಸಲು ನನ್ನ ಜನರು ಹೋಗಲಿ! 14 ಇಲ್ಲವಾದರೆ, ನಾನು ನಿನ್ನ ವಿರುದ್ಧವಾಗಿಯೂ ನಿನ್ನ ಅಧಿಕಾರಿಗಳ ವಿರುದ್ಧವಾಗಿಯೂ ನಿನ್ನ ಜನರ ವಿರುದ್ಧವಾಗಿಯೂ ನನ್ನ ಪೂರ್ಣಶಕ್ತಿಯಿಂದ ಉಪದ್ರವಗಳನ್ನು ಕಳುಹಿಸುವೆನು. ಆಗ ನನ್ನಂಥ ದೇವರು ಲೋಕದಲ್ಲಿ ಇಲ್ಲವೇ ಇಲ್ಲವೆಂದು ನೀನು ತಿಳಿದುಕೊಳ್ಳುವೆ. 15 ನಾನು ನನ್ನ ಶಕ್ತಿಯಿಂದ ನಿನಗೂ ನಿನ್ನ ಜನರಿಗೂ ವ್ಯಾಧಿಯನ್ನು ಬರಮಾಡಿ ನಿಮ್ಮನ್ನು ನಿರ್ಮೂಲ ಮಾಡಬಹುದಿತ್ತು. 16 ಆದರೆ, ನನ್ನ ಶಕ್ತಿಯನ್ನು ನಿನಗೆ ತೋರಿಸಬೇಕೆಂದೂ ಲೋಕದ ಜನರೆಲ್ಲರು ನನ್ನ ಬಗ್ಗೆ ತಿಳಿದುಕೊಳ್ಳಬೇಕೆಂದೂ ನಾನು ನಿನ್ನನ್ನು ಇನ್ನೂ ಉಳಿಸಿದ್ದೇನೆ. 17 ಆದರೂ ನೀನು ನನ್ನ ಜನರಿಗೆ ವಿರುದ್ಧವಾಗಿರುವೆ; ಅವರಿಗೆ ಸ್ವತಂತ್ರವನ್ನು ಕೊಡದಿರುವೆ. 18 ಆದ್ದರಿಂದ ನಾಳೆ ಇದೇ ಸಮಯಕ್ಕೆ ಸರಿಯಾಗಿ ಭೀಕರವಾದ ಆಲಿಕಲ್ಲಿನ ಮಳೆಯನ್ನು ಸುರಿಸುವೆನು. ಈಜಿಪ್ಟ್ ರಾಜ್ಯವು ಸ್ಥಾಪನೆಯಾದಂದಿನಿಂದ ಇಂಥ ಆಲಿಕಲ್ಲಿನ ಮಳೆ ಬಿದ್ದಿಲ್ಲ. 19 ಈಗ ನೀನು ನಿನ್ನ ಪಶುಗಳನ್ನೂ ನಿನ್ನ ಹೊಲದಲ್ಲಿರುವ ನಿನ್ನ ಪ್ರತಿಯೊಂದನ್ನೂ ಸುರಕ್ಷಿತವಾದ ಸ್ಥಳದಲ್ಲಿ ಇರಿಸಬೇಕು. ಮನೆಯೊಳಗಿರದೆ ಹೊಲದಲ್ಲಿರುವ ಮನುಷ್ಯರೂ ಪಶುಗಳೂ ಆಲಿಕಲ್ಲಿನ ಮಳೆಗೆ ಸಿಕ್ಕಿಕೊಂಡು ಸಾಯುವರು’ ಎಂದು ಹೇಳಬೇಕು” ಅಂದನು.
20 ಫರೋಹನ ಅಧಿಕಾರಿಗಳಲ್ಲಿ ಕೆಲವರು ಯೆಹೋವನ ಸಂದೇಶಕ್ಕೆ ಕಿವಿಗೊಟ್ಟು ತಮ್ಮ ಎಲ್ಲಾ ಪಶುಗಳನ್ನೂ ಗುಲಾಮರನ್ನೂ ಮನೆಯೊಳಗೆ ಸೇರಿಸಿಕೊಂಡರು. 21 ಆದರೆ ಇತರರು ಯೆಹೋವನ ಸಂದೇಶವನ್ನು ನಿರ್ಲಕ್ಷ್ಯಮಾಡಿ ತಮ್ಮ ಎಲ್ಲಾ ಗುಲಾಮರನ್ನೂ ಪಶುಗಳನ್ನೂ ಹೊಲಗಳಲ್ಲಿಯೇ ಬಿಟ್ಟರು.
22 ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು; ಆಗ ಈಜಿಪ್ಟಿನಲ್ಲೆಲ್ಲಾ ಆಲಿಕಲ್ಲಿನ ಮಳೆ ಬೀಳತೊಡಗುವುದು. ಆಲಿಕಲ್ಲಿನ ಮಳೆಯು ಜನರ, ಪ್ರಾಣಿಗಳ ಮತ್ತು ಈಜಿಪ್ಟಿನ ಹೊಲಗಳಲ್ಲಿರುವ ಎಲ್ಲಾ ಸಸ್ಯಗಳ ಮೇಲೆ ಬೀಳುವುದು” ಎಂದು ಹೇಳಿದನು.
23 ಆದ್ದರಿಂದ ಮೋಶೆ ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದನು. ಕೂಡಲೇ ಯೆಹೋವನು, ಗುಡುಗು ಮಿಂಚುಗಳಿಂದ ಕೂಡಿದ ಆಲಿಕಲ್ಲಿನ ಮಳೆಯನ್ನು ಈಜಿಪ್ಟಿನಲ್ಲೆಲ್ಲಾ ಸುರಿಸಿದನು. 24 ಆಲಿಕಲ್ಲಿನ ಮಳೆಯು ಭೀಕರವಾಗಿತ್ತು, ಝಗಝಗಿಸುವ ಮಿಂಚೂ ಅದರೊಂದಿಗಿತ್ತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಇಂಥ ಭೀಕರವಾದ ಆಲಿಕಲ್ಲಿನ ಮಳೆ ಎಂದೂ ಆಗಿರಲಿಲ್ಲ. 25 ಈಜಿಪ್ಟಿನ ಹೊಲಗಳಲ್ಲಿದ್ದ ಪ್ರತಿಯೊಂದನ್ನೂ ಬಿರುಗಾಳಿ ನಾಶಮಾಡಿತು. ಆಲಿಕಲ್ಲು ಜನರನ್ನೂ ಪ್ರಾಣಿಗಳನ್ನೂ ಸಸ್ಯಗಳನ್ನೂ ನಾಶಮಾಡಿತು; ಹೊಲಗಳಲ್ಲಿದ್ದ ಎಲ್ಲಾ ಮರಗಳನ್ನು ಮುರಿದುಹಾಕಿತು. 26 ಇಸ್ರೇಲರು ವಾಸವಾಗಿದ್ದ ಗೋಷೆನ್ ಪ್ರದೇಶದಲ್ಲಿ ಮಾತ್ರ ಆಲಿಕಲ್ಲಿನ ಮಳೆಯಾಗಲಿಲ್ಲ.
27 ಫರೋಹನು ಮೋಶೆ ಆರೋನರನ್ನು ಕರೆಸಿ ಅವರಿಗೆ, “ಈ ಸಾರಿ ನಾನು ಪಾಪಮಾಡಿದ್ದೇನೆ. ಯೆಹೋವನೇ ನೀತಿವಂತನು. ನಾನೂ ನನ್ನ ಜನರೂ ದೋಷಿಗಳಾಗಿದ್ದೇವೆ. 28 ಭಯಂಕರವಾದ ಗುಡುಗೂ ಆಲಿಕಲ್ಲಿನ ಮಳೆಯೂ ಬಹಳ ಹೆಚ್ಚಾದವು. ಇವುಗಳನ್ನು ನಿಲ್ಲಿಸಬೇಕೆಂದು ದೇವರನ್ನು ಪ್ರಾರ್ಥಿಸಿರಿ; ನಿಮ್ಮನ್ನು ಈ ದೇಶದಿಂದ ಕಳುಹಿಸಿಕೊಡುತ್ತೇನೆ; ತಡೆಯುವುದಿಲ್ಲ” ಎಂದು ಹೇಳಿದನು.
29 ಮೋಶೆಯು ಫರೋಹನಿಗೆ, “ನಾನು ಪಟ್ಟಣದಿಂದಾಚೆಗೆ ಹೋದಕೂಡಲೇ ಕೈಯೆತ್ತಿ ಯೆಹೋವನಲ್ಲಿ ಪ್ರಾರ್ಥಿಸುವೆನು, ಆಗ ಗುಡುಗೂ ಆಲಿಕಲ್ಲಿನ ಮಳೆಯೂ ನಿಂತುಹೋಗುವವು. ಭೂಲೋಕವು ಯೆಹೋವನ ಅಧೀನದಲ್ಲಿದೆಯೆಂದು ಆಗ ನೀನು ತಿಳಿದುಕೊಳ್ಳುವೆ. 30 ಆದರೆ ನೀನಾಗಲಿ ನಿನ್ನ ಅಧಿಕಾರಿಗಳಾಗಲಿ ಇನ್ನೂ ದೇವರಿಗೆ ಭಯಪಡುವುದಿಲ್ಲ ಎಂಬುದು ನನಗೆ ಗೊತ್ತಿದೆ” ಎಂದು ಹೇಳಿದನು.
31 ಅಗಸೆಗೆ ಮೊಗ್ಗೆಯೂ ಬಾರ್ಲಿಗೆ ತೆನೆಯೂ ಬಂದಿದ್ದರಿಂದ ಈ ಎರಡು ಬೆಳೆಗಳು ನಾಶವಾದವು. 32 ಆದರೆ ಗೋಧಿಯೂ ಕಡಲೆಯೂ ಬೇರೆ ಧಾನ್ಯಗಳ ನಂತರ ಆಗುವ ಬೆಳೆಗಳಾಗಿದ್ದವು. ಆದ್ದರಿಂದ ಈ ಪೈರುಗಳು ನಾಶವಾಗಲಿಲ್ಲ.
33 ಮೋಶೆಯು ಫರೋಹನ ಬಳಿಯಿಂದ ಹೊರಟು ಪಟ್ಟಣದಾಚೆಗೆ ಹೋದಾಗ ಕೈಯೆತ್ತಿ ಯೆಹೋವನಲ್ಲಿ ಪ್ರಾರ್ಥಿಸಿದನು. ಆಗ ಗುಡುಗೂ ಆಲಿಕಲ್ಲಿನ ಮಳೆಯೂ ನಿಂತುಹೋದವು; ಮಳೆಯೂ ನಿಂತುಹೋಯಿತು.
34 ಮಳೆಯೂ ಆಲಿಕಲ್ಲಿನ ಮಳೆಯೂ ಗುಡುಗೂ ನಿಂತುಹೋದದ್ದನ್ನು ಕಂಡ ಫರೋಹನು ಮತ್ತು ಅವನ ಅಧಿಕಾರಿಗಳು ಮತ್ತೆ ತಮ್ಮ ಹೃದಯಗಳನ್ನು ಕಠಿಣಪಡಿಸಿಕೊಂಡು ಪಾಪ ಮಾಡಿದರು. 35 ಇಸ್ರೇಲರು ಸ್ವತಂತ್ರರಾಗಿ ಹೋಗಲು ಫರೋಹನು ಬಿಡಲಿಲ್ಲ. ಯೆಹೋವನು ಮೋಶೆಯ ಮೂಲಕ ಹೇಳಿಸಿದಂತೆಯೇ ಇದಾಯಿತು.
Kannada Holy Bible: Easy-to-Read Version. All rights reserved. © 1997 Bible League International