Beginning
ಮೋಶೆಗೆ ಸಾಕ್ಷಿ
4 ಆಗ ಮೋಶೆಯು ಯೆಹೋವನಿಗೆ, “ಆದರೆ ನೀನು ನನ್ನನ್ನು ಕಳುಹಿಸಿರುವೆ ಎಂದು ಇಸ್ರೇಲರು ನಂಬುವುದೂ ಇಲ್ಲ; ಕೇಳುವುದೂ ಇಲ್ಲ. ಅವರು, ‘ಯೆಹೋವನು ನಿನಗೆ ಪ್ರತ್ಯಕ್ಷನಾಗಲಿಲ್ಲ’ ಎಂದು ಹೇಳುವರು” ಎಂದು ಹೇಳಿದನು.
2 ಯೆಹೋವನು ಮೋಶೆಗೆ, “ನಿನ್ನ ಕೈಯಲ್ಲಿರುವುದೇನು?” ಅಂದನು.
ಮೋಶೆ, “ಊರುಗೋಲು” ಎಂದು ಉತ್ತರಿಸಿದನು.
3 ಆಗ ಯೆಹೋವನು, “ನಿನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡು” ಅಂದನು.
ಮೋಶೆ, ತನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡಿದನು. ಆಗ ಕೋಲು ಹಾವಾಯಿತು. ಮೋಶೆ ಅದರ ಬಳಿಯಿಂದ ಓಡಿಹೋದನು. 4 ಬಳಿಕ ಯೆಹೋವನು ಮೋಶೆಗೆ, “ನಿನ್ನ ಕೈಚಾಚಿ ಅದರ ಬಾಲವನ್ನು ಹಿಡಿದುಕೊ” ಎಂದು ಹೇಳಿದನು.
ಮೋಶೆಯು ಕೈಚಾಚಿ ಹಾವಿನ ಬಾಲವನ್ನು ಹಿಡಿದನು. ಆಗ ಹಾವು ಕೋಲಾಯಿತು. 5 ಆಗ ದೇವರು, “ನಿನ್ನ ಕೋಲನ್ನು ಈ ರೀತಿಯಲ್ಲಿ ಉಪಯೋಗಿಸು. ನಿನ್ನ ಪೂರ್ವಿಕರ, ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರು ನಿನಗೆ ಪ್ರತ್ಯಕ್ಷನಾದನೆಂದು ಆಗ ಅವರು ನಂಬುವರು” ಎಂದು ಹೇಳಿದನು.
6 ಬಳಿಕ ಯೆಹೋವನು ಮೋಶೆಗೆ, “ನಾನು ನಿನಗೆ ಇನ್ನೊಂದು ಸಾಕ್ಷಿಯನ್ನು ಕೊಡುತ್ತೇನೆ. ನಿನ್ನ ಕೈಯನ್ನು ಉಡಿಯಲ್ಲಿ ಹಾಕು” ಅಂದನು.
ಮೋಶೆ ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರತೆಗೆದಾಗ ಅದಕ್ಕೆ ತೊನ್ನು ಹಿಡಿದಿತ್ತು.
7 ಆಗ ದೇವರು, “ನಿನ್ನ ಕೈಯನ್ನು ತಿರಿಗಿ ಉಡಿಯಲ್ಲಿ ಹಾಕು” ಅಂದನು. ಅಂತೆಯೇ ಮೋಶೆಯು ತನ್ನ ಕೈಯನ್ನು ಮತ್ತೆ ಉಡಿಯಲ್ಲಿ ಹಾಕಿ ಹೊರತೆಗೆದಾಗ ಅದು ಮೊದಲಿನಂತೆ ಆಗಿತ್ತು.
8 ಆಗ ಯೆಹೋವನು ಅವನಿಗೆ, “ನೀನು ನಿನ್ನ ಊರುಗೋಲಿನಿಂದ ಸೂಚಕಕಾರ್ಯ ಮಾಡುವಾಗ ಜನರು ನಿನ್ನನ್ನು ನಂಬುವರು; ನಿನ್ನ ಮಾತಿಗೆ ಲಕ್ಷ್ಯಕೊಡುವರು. 9 ನೀನು ಈ ಎರಡು ಸೂಚಕಕಾರ್ಯಗಳನ್ನು ತೋರಿಸಿದ ನಂತರವೂ ಅವರು ನಂಬದಿದ್ದರೆ, ನೈಲ್ ನದಿಯಿಂದ ಸ್ವಲ್ಪ ನೀರನ್ನು ತೆಗೆದುಕೊಂಡು ಅದನ್ನು ನೆಲದ ಮೇಲೆ ಸುರಿ; ನೀರು ನೆಲವನ್ನು ಮುಟ್ಟಿದ ಕೊಡಲೇ ರಕ್ತವಾಗುವುದು” ಎಂದು ಹೇಳಿದನು.
10 ಮೋಶೆಯು ಯೆಹೋವನಿಗೆ, “ಸ್ವಾಮೀ, ನಾನು ನಿನಗೆ ಸತ್ಯವಾಗಿ ಹೇಳುವುದೇನೆಂದರೆ ನನಗೆ ವಾಕ್ಚಾತುರ್ಯವಿಲ್ಲ. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು.
11 ಆಗ ಯೆಹೋವನು ಅವನಿಗೆ, “ಮನುಷ್ಯನ ಬಾಯನ್ನು ಯಾರು ಮಾಡಿದರು? ಮನುಷ್ಯನನ್ನು ಕಿವುಡನನ್ನಾಗಿ ಅಥವಾ ಮೂಕನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನನ್ನು ಕುರುಡನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನಿಗೆ ದೃಷ್ಟಿಕೊಟ್ಟವನು ಯಾರು? ಯೆಹೋವನಾದ ನಾನಲ್ಲವೇ. 12 ಈಗ ಹೋಗು. ನೀನು ಮಾತಾಡುವಾಗ ನಾನೇ ನಿನ್ನೊಂದಿಗಿರುವೆನು. ನೀನು ಹೇಳಬೇಕಾದ ಮಾತುಗಳನ್ನು ನಾನು ನಿನಗೆ ಕೊಡುವೆನು” ಎಂದು ಹೇಳಿದನು.
13 ಆದರೆ ಮೋಶೆ, “ನನ್ನ ಯೆಹೋವನೇ, ದಯಮಾಡಿ ನನ್ನ ಬದಲಾಗಿ ಬೇರೊಬ್ಬನನ್ನು ಕಳುಹಿಸು” ಎಂದು ಬೇಡಿಕೊಂಡನು.
14 ಯೆಹೋವನು ಮೋಶೆಯ ಮೇಲೆ ಕೋಪಗೊಂಡು, “ಹಾಗಾದರೆ ನಿನ್ನ ಅಣ್ಣನಾದ ಲೇವಿ ಕುಟುಂಬದ ಆರೋನನನ್ನು ನಾನು ಉಪಯೋಗಿಸುವೆನು. ಅವನಿಗೆ ವಾಕ್ಚಾತುರ್ಯವಿದೆ. ಈಗ ಅವನು ನಿನ್ನ ಬಳಿಗೆ ಬರುತ್ತಿದ್ದಾನೆ. ನಿನ್ನನ್ನು ಕಂಡು ಅವನಿಗೆ ಸಂತೋಷವಾಗುವುದು. 15 ಅವನು ನಿನ್ನೊಡನೆ ಫರೋಹನ ಬಳಿಗೆ ಬರುವನು. ನೀನು ಹೇಳಬೇಕಾದದ್ದನ್ನು ನಾನೇ ನಿನಗೆ ತಿಳಿಸುವೆನು. ಅದನ್ನು ನೀನು ಆರೋನನಿಗೆ ತಿಳಿಸು. ಆರೋನನು ಫರೋಹನೊಡನೆ ಸರಿಯಾಗಿ ಮಾತಾಡುವನು. 16 ಆರೋನನು ಜನರೊಂದಿಗೂ ನಿನ್ನ ಪರವಾಗಿಯೂ ಮಾತಾಡುವನು. ನೀನು ಮಹಾರಾಜನಂತೆ ಇರುವೆ; ಅವನು ನಿನಗೆ ಅಧಿಕೃತ ಮಾತುಗಾರನಂತೆ ಇರುವನು.[a] 17 ಆದ್ದರಿಂದ ಹೋಗು. ನಿನ್ನ ಊರುಗೋಲನ್ನೂ ತೆಗೆದುಕೊಂಡು ಹೋಗು. ಯಾಕೆಂದರೆ ಅದರಿಂದಲೇ ನೀನು ಅದ್ಭುತಕಾರ್ಯಗಳನ್ನು ಮಾಡುವೆ” ಎಂದು ಹೇಳಿದನು.
ಮೋಶೆ ಈಜಿಪ್ಟಿಗೆ ಹಿಂತಿರುಗಿದ್ದು
18 ಬಳಿಕ ಮೋಶೆ ತನ್ನ ಮಾವನಾದ ಇತ್ರೋನನ ಬಳಿಗೆ ಹಿಂತಿರುಗಿದನು. ಮೋಶೆ ಇತ್ರೋನನಿಗೆ, “ಈಜಿಪ್ಟಿನಲ್ಲಿರುವ ನನ್ನ ಜನರ ಬಳಿಗೆ ಹೋಗಿ ಅವರು ಇನ್ನೂ ಜೀವಂತವಾಗಿದ್ದಾರೋ ಏನೋ ನೋಡುವೆನು” ಎಂದು ಹೇಳಿದನು.
ಇತ್ರೋನನು ಮೋಶೆಗೆ, “ನೀನು ಸಮಾಧಾನದಿಂದ ಹೋಗಿ ಬಾ” ಎಂದು ಹೇಳಿದನು.
19 ಮೋಶೆ ಇನ್ನೂ ಮಿದ್ಯಾನಿನಲ್ಲಿದ್ದಾಗ ಯೆಹೋವನು, “ಈಗ ನೀನು ಸುರಕ್ಷಿತವಾಗಿ ಈಜಿಪ್ಟಿಗೆ ಹೋಗಬಹುದು. ನಿನ್ನನ್ನು ಕೊಲ್ಲಬೇಕೆಂದಿದ್ದವರು ಸತ್ತುಹೋಗಿದ್ದಾರೆ” ಅಂದನು.
20 ಆದ್ದರಿಂದ ಮೋಶೆ ತನ್ನ ಹೆಂಡತಿಯನ್ನೂ ಗಂಡುಮಕ್ಕಳನ್ನೂ ಕತ್ತೆಗಳ ಮೇಲೆ ಕುಳ್ಳಿರಿಸಿ ಈಜಿಪ್ಟ್ ದೇಶಕ್ಕೆ ಮರಳಿ ಪ್ರಯಾಣ ಮಾಡಿದನು. ಮೋಶೆಯು ಯೆಹೋವನ ಶಕ್ತಿಯಿಂದ ಕೂಡಿದ ತನ್ನ ಊರುಗೋಲನ್ನು ಹಿಡಿದುಕೊಂಡು ಹೋದನು.[b]
21 ಮೋಶೆ ಈಜಿಪ್ಟಿಗೆ ಪ್ರಯಾಣ ಮಾಡುತ್ತಿದ್ದಾಗ ಯೆಹೋವನು ಅವನೊಡನೆ ಮಾತಾಡಿ, “ನೀನು ಫರೋಹನೊಂದಿಗೆ ಮಾತಾಡುವಾಗ ನಾನು ತೋರಿಸಿಕೊಟ್ಟ ಅದ್ಭುತಕಾರ್ಯಗಳನ್ನೆಲ್ಲಾ ಅವನ ಮುಂದೆ ಮಾಡು. ಆದರೂ ನಾನು ಫರೋಹನ ಹೃದಯವನ್ನು ಕಠಿಣಗೊಳಿಸುವುದರಿಂದ ಅವನು ಇಸ್ರೇಲರನ್ನು ಹೋಗಗೊಡಿಸುವುದಿಲ್ಲ. 22 ಆಗ ನೀನು ಫರೋಹನಿಗೆ, ‘ಇಸ್ರೇಲ್ ಜನಾಂಗವು ಯೆಹೋವನಿಗೆ ಚೊಚ್ಚಲು ಮಗನಂತಿದೆ. 23 ನನ್ನ ಮಗನು ನಿನ್ನ ದೇಶದಿಂದ ಹೋಗಿ ನನ್ನನ್ನು ಆರಾಧಿಸಲು ನೀನು ಅಪ್ಪಣೆಕೊಡಬೇಕು. ಇಲ್ಲವಾದರೆ ನಾನು ನಿನ್ನ ಚೊಚ್ಚಲಮಗನನ್ನು ಕೊಲ್ಲುವೆನು’ ಎಂದು ಯೆಹೋವನು ಹೇಳುತ್ತಾನೆ” ಎಂಬುದಾಗಿ ತಿಳಿಸಬೇಕು.
ಮೋಶೆಯ ಮಗನಿಗೆ ಸುನ್ನತಿಯಾದದ್ದು
24 ಮೋಶೆಯು ಈಜಿಪ್ಟಿಗೆ ತನ್ನ ಪ್ರಯಾಣವನ್ನು ಮುಂದುವರೆಸಿ ಛತ್ರವೊಂದರಲ್ಲಿ ಇಳಿದುಕೊಂಡನು. ಆಗ ಯೆಹೋವನು ಮೋಶೆಯನ್ನು ಸಂಧಿಸಿ ಅವನನ್ನು ಕೊಲ್ಲಬೇಕೆಂದಿದ್ದನು.[c] 25 ಆದರೆ ಚಿಪ್ಪೋರಳು ಕಲ್ಲಿನ ಚೂರಿಯನ್ನು ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿಮಾಡಿ ಚರ್ಮವನ್ನು ತೆಗೆದುಕೊಂಡು ಮೋಶೆಯ ಪಾದಗಳಿಗೆ ಮುಟ್ಟಿಸಿ, “ನೀನು ನನಗೆ ರಕ್ತಧಾರೆಯಿಂದಾದ ಮದುವಣಿಗನಾದೆ” ಅಂದಳು. 26 ಆಕೆ ಸುನ್ನತಿಯ ನಿಮಿತ್ತವೇ “ನೀನು ನನಗೆ ರಕ್ತಧಾರೆಯಿಂದಾದ ಮದುವಣಿಗನಾದೆ” ಎಂದು ಹೇಳಿದ್ದರಿಂದ ಯೆಹೋವನು ಅವನನ್ನು ಉಳಿಸಿದನು.
ಯೆಹೋವನ ಮುಂದೆ ಮೋಶೆ ಆರೋನರು
27 ಯೆಹೋವನು ಆರೋನನೊಡನೆ ಮಾತಾಡಿ ಅವನಿಗೆ, “ಅರಣ್ಯಕ್ಕೆ ಹೋಗಿ ಮೋಶೆಯನ್ನು ಭೇಟಿಯಾಗು” ಎಂದು ಹೇಳಿದ್ದನು. ಆದ್ದರಿಂದ ಆರೋನನು ಹೋಗಿ ದೇವರ ಬೆಟ್ಟದಲ್ಲಿ ಮೋಶೆಯನ್ನು ಭೇಟಿಯಾದನು. ಆರೋನನು ಮೋಶೆಯನ್ನು ಕಂಡು ಅವನಿಗೆ ಮುದ್ದಿಟ್ಟನು. 28 ಯೆಹೋವನು ಹೇಳಿದ್ದನ್ನೆಲ್ಲಾ ಮೋಶೆಯು ಆರೋನನಿಗೆ ತಿಳಿಸಿದನು. ಯೆಹೋವನು ತನ್ನನ್ನು ಯಾಕೆ ಕಳುಹಿಸಿದನೆಂದೂ ತಾನು ಯಾವ ಅದ್ಭುತಕಾರ್ಯಗಳನ್ನು ಮಾಡಬೇಕೆಂದೂ ಆರೋನನಿಗೆ ವಿವರಿಸಿದನು.
29 ಆದ್ದರಿಂದ ಮೋಶೆ ಆರೋನರು ಹೋಗಿ ಇಸ್ರೇಲ್ ಜನರ ಹಿರಿಯರೆಲ್ಲರನ್ನು ಒಟ್ಟುಗೂಡಿಸಿದರು. 30 ಆಗ ಆರೋನನು ಜನರೊಂದಿಗೆ ಮಾತಾಡಿದನು. ಯೆಹೋವನು ಮೋಶೆಗೆ ಹೇಳಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸಿದನು. ಬಳಿಕ ಮೋಶೆ ಜನರೆಲ್ಲರೂ ನೋಡುವಂತೆ ಅದ್ಭುತಕಾರ್ಯಗಳನ್ನು ಮಾಡಿದನು. 31 ಯೆಹೋವನು ಮೋಶೆಯನ್ನು ಕಳುಹಿಸಿದ್ದಾನೆಂದು ಜನರು ನಂಬಿದರು. ಯೆಹೋವನು ಇಸ್ರೇಲರಿಗೆ ಸಹಾಯಮಾಡಬೇಕೆಂದಿರುವುದನ್ನು ಅವರು ತಿಳಿದು ತಲೆಬಾಗಿ ಆತನನ್ನು ಆರಾಧಿಸಿದರು. ಯೆಹೋವನು ತಮ್ಮ ಸಂಕಟಗಳನ್ನು ನೋಡಿದ್ದರಿಂದ ಅವರು ಆತನನ್ನು ಆರಾಧಿಸಿದರು.
ಫರೋಹನ ಮುಂದೆ ಮೋಶೆ ಆರೋನರು
5 ಮೋಶೆ ಆರೋನರು ಜನರೊಡನೆ ಮಾತಾಡಿದ ನಂತರ ಫರೋಹನ ಬಳಿಗೆ ಹೋಗಿ, “ಇಸ್ರೇಲರ ದೇವರಾದ ಯೆಹೋವನು ನಿನಗೆ, ‘ನನ್ನ ಜನರು ಅರಣ್ಯದೊಳಗೆ ಹೋಗಿ ಜಾತ್ರೆ ನಡೆಸಲು ಅಪ್ಪಣೆಕೊಡಬೇಕು’ ಎನ್ನುತ್ತಾನೆ” ಎಂದು ಹೇಳಿದರು.
2 ಆದರೆ ಫರೋಹನು, “ಯೆಹೋವನು ಯಾರು? ನಾನು ಆತನಿಗೆ ಯಾಕೆ ವಿಧೇಯನಾಗಬೇಕು. ಇಸ್ರೇಲರನ್ನು ನಾನು ಯಾಕೆ ಹೋಗಗೊಡಿಸಬೇಕು. ನೀವು ಯೆಹೋವನೆಂದು ಕರೆಯುವ ಆತನನ್ನು ನಾನು ಅರಿಯೆನು, ಆದ್ದರಿಂದ ಇಸ್ರೇಲರನ್ನು ಹೋಗಗೊಡಿಸುವುದಿಲ್ಲ” ಅಂದನು.
3 ಅದಕ್ಕೆ ಮೋಶೆ ಆರೋನರು, “ಇಬ್ರಿಯರ ದೇವರು ನಮ್ಮ ಸಂಗಡ ಮಾತಾಡಿದ್ದಾನೆ. ಆದ್ದರಿಂದ ನಾವು ಅರಣ್ಯದಲ್ಲಿ ಮೂರು ದಿನಗಳವರೆಗೆ ಪ್ರಯಾಣಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞವನ್ನು ಸಮರ್ಪಿಸುವೆವು. ಇಲ್ಲವಾದರೆ ಆತನು ನಮ್ಮನ್ನು ಕಾಯಿಲೆಯಿಂದಲೋ ಕತ್ತಿಯಿಂದಲೋ ಸಂಹರಿಸುವನು” ಎಂದು ಹೇಳಿದರು.
4 ಆದರೆ ಈಜಿಪ್ಟಿನ ರಾಜನು ಅವರಿಗೆ, “ಮೋಶೆ ಆರೋನರೇ, ನೀವು ಕೆಲಸಗಾರರಿಗೆ ತೊಂದರೆ ಮಾಡುತ್ತಿದ್ದೀರಿ, ಅವರು ತಮ್ಮ ಕೆಲಸ ಮಾಡಲಿ! ನೀವು ನಿಮ್ಮ ಕೆಲಸವನ್ನು ಮಾಡಿ! 5 ಇಲ್ಲಿ ಬಹಳ ಮಂದಿ ಕೆಲಸಗಾರರಿದ್ದಾರೆ; ಅವರು ಕೆಲಸ ಮಾಡದಂತೆ ನೀವು ತಡೆಯುವುದೇಕೆ?” ಎಂದು ಹೇಳಿದನು.
ಫರೋಹನು ಜನರನ್ನು ದಂಡಿಸಿದ್ದು
6 ಅದೇ ದಿನ ಫರೋಹನು ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳಿಗೆ ಮತ್ತು ಮೇಸ್ತ್ರಿಗಳಿಗೆ, 7 “ಇಟ್ಟಿಗೆಗಳನ್ನು ಮಾಡುವುದಕ್ಕೆ ಬೇಕಾದ ಹುಲ್ಲನ್ನು ನೀವು ಜನರಿಗೆ ಇಲ್ಲಿಯವರೆಗೆ ಕೊಟ್ಟಿದ್ದೀರಿ. ಆದರೆ ಈಗ ಇಟ್ಟಿಗೆಗಳನ್ನು ಮಾಡಲು ಅವರೇ ಹುಲ್ಲನ್ನು ಕಂಡುಕೊಳ್ಳಬೇಕೆಂದು ಅವರಿಗೆ ಹೇಳಿರಿ. 8 ಆದರೂ ಅವರು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಈಗಲೂ ಮಾಡಬೇಕು. ಅವರು ಸೋಮಾರಿಗಳಾಗಿದ್ದಾರೆ. ಆದಕಾರಣ ತಮ್ಮನ್ನು ಹೋಗಬಿಡಬೇಕೆಂದು ಕೇಳುತ್ತಿದ್ದಾರೆ. ಅವರಿಗೆ ಸಾಕಷ್ಟು ಕೆಲಸವಿಲ್ಲ. ಆದ್ದರಿಂದ ತಮ್ಮ ದೇವರಿಗೆ ಯಜ್ಞಗಳನ್ನು ಅರ್ಪಿಸಲು ಹೋಗಗೊಡಿಸಬೇಕೆಂದು ಕೇಳುತ್ತಾರೆ. 9 ಈ ಜನರಿಗೆ ಇನ್ನೂ ಕಷ್ಟಕರವಾದ ಕೆಲಸವನ್ನು ಕೊಡಿರಿ. ಅವರು ಕಾರ್ಯಮಗ್ನರಾಗಿರುವಂತೆ ನೋಡಿಕೊಳ್ಳಿರಿ. ಆಗ ಅವರಿಗೆ ಮೋಶೆಯ ಸುಳ್ಳುಗಳನ್ನು ಕೇಳುವುದಕ್ಕೆ ಸಮಯವಿರುವುದಿಲ್ಲ” ಎಂದು ಹೇಳಿದನು.
10 ಆದ್ದರಿಂದ ಈಜಿಪ್ಟಿನ ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳು ಮತ್ತು ಮೇಸ್ತ್ರಿಗಳು ಇಸ್ರೇಲರ ಬಳಿಗೆ ಬಂದು, “ಫರೋಹನು ಇಟ್ಟಿಗೆಗಳನ್ನು ಮಾಡಲು ನಿಮಗೆ ಹುಲ್ಲು ಕೊಡುವುದಿಲ್ಲವೆಂದು ತೀರ್ಮಾನಿಸಿದ್ದಾನೆ. 11 ಆದ್ದರಿಂದ ನೀವೇ ಹೋಗಿ ಹುಲ್ಲನ್ನು ಕಂಡುಕೊಳ್ಳಿರಿ. ಆದರೆ ನೀವು ಮೊದಲು ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕು” ಎಂದು ಹೇಳಿದರು.
12 ಆದ್ದರಿಂದ ಜನರು ಹುಲ್ಲನ್ನು ಹುಡುಕುತ್ತಾ ಈಜಿಪ್ಟಿನ ಪ್ರತಿಯೊಂದು ಕಡೆಗೂ ಹೋದರು. 13 ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳು, ಜನರಿಂದ ಕಷ್ಟಕರವಾದ ಕೆಲಸಗಳನ್ನು ಬಲವಂತದಿಂದ ಮಾಡಿಸುತ್ತಲೇ ಇದ್ದರು. ಮೊದಲು ಅವರಿಗೆ ಹುಲ್ಲನ್ನು ಕೊಟ್ಟಿದ್ದಾಗ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಈಗಲೂ ಬಲವಂತದಿಂದ ಮಾಡಿಸಿದರು. 14 ಈಜಿಪ್ಟಿನ ಈ ಅಧಿಕಾರಿಗಳು ಇಬ್ರಿಯ ಮೇಸ್ತ್ರಿಗಳನ್ನು ಆರಿಸಿ ಜನರು ಮಾಡಿದ ಕೆಲಸಕ್ಕೆ ಅವರನ್ನು ಜವಾಬ್ದಾರರನ್ನಾಗಿ ಮಾಡಿದರು. ಈಜಿಪ್ಟಿನ ಅಧಿಕಾರಿಗಳು ಇಬ್ರಿಯ ಮೇಸ್ತ್ರಿಗಳನ್ನು ಹೊಡೆದು, “ನೀವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಯಾಕೆ ಮಾಡುತ್ತಿಲ್ಲ? ಹಿಂದೆ ನೀವು ಮಾಡಲು ಸಾಧ್ಯವಾಗಿದ್ದರೆ, ಈಗಲೂ ನೀವು ಮಾಡಬಹುದು” ಎಂದು ಹೇಳಿದರು.
15 ಆಗ ಇಬ್ರಿಯ ಮೇಸ್ತ್ರಿಗಳು ಫರೋಹನ ಬಳಿಗೆ ಹೋಗಿ, “ನಿನ್ನ ಸೇವಕರಾದ ನಮಗೆ ನೀನು ಯಾಕೆ ಈ ರೀತಿ ಮಾಡುತ್ತಿ? 16 ನೀನು ನಮಗೆ ಹುಲ್ಲು ಕೊಡುವುದಿಲ್ಲ. ಆದರೆ ನಾವು ಮೊದಲು ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕೆಂದು ನಮಗೆ ಅಪ್ಪಣೆಯಾಗಿರುವುದರಿಂದ ನಾವು ಅಧಿಕಾರಿಗಳಿಂದ ಹೊಡೆತ ತಿನ್ನಬೇಕಾಯಿತು. ಹೀಗೆ ನಿನ್ನ ಜನರು ತಪ್ಪು ಮಾಡುತ್ತಿದ್ದಾರೆ” ಎಂದು ದೂರು ಹೇಳಿದರು.
17 ಫರೋಹನು, “ನೀವು ಸೋಮಾರಿಗಳು. ನಿಮಗೆ ಕೆಲಸ ಮಾಡಲು ಇಷ್ಟವಿಲ್ಲ. ಆದ್ದರಿಂದ ನಿಮ್ಮನ್ನು ಹೋಗಗೊಡಿಸಬೇಕೆಂದು ನೀವು ನನ್ನನ್ನು ಕೇಳುತ್ತೀರಿ. ಇಲ್ಲಿಂದ ಹೊರಟುಹೋಗಿ ಯೆಹೋವನಿಗೆ ಯಜ್ಞಗಳನ್ನು ಮಾಡಬೇಕೆಂದು ಅಪೇಕ್ಷಿಸುತ್ತೀರಿ. 18 ಈಗ ನಿಮ್ಮ ಕೆಲಸಕ್ಕೆ ಹೋಗಿರಿ! ನಾವು ನಿಮಗೆ ಹುಲ್ಲನ್ನು ಕೊಡುವುದಿಲ್ಲ. ಆದರೆ ನೀವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕು” ಎಂದು ಉತ್ತರಿಸಿದನು.
19 ಇಬ್ರಿಯ ಮೇಸ್ತ್ರಿಗಳಿಗೆ ತಾವು ತೊಂದರೆಯಲ್ಲಿದ್ದೇವೆಂದು ತಿಳಿಯಿತು. ತಾವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ತಮ್ಮಿಂದ ಮಾಡಲಾಗುವುದಿಲ್ಲವೆಂದು ಅವರಿಗೆ ಗೊತ್ತಿತ್ತು.
20 ಅವರು ಫರೋಹನನ್ನು ಸಂಧಿಸಿ ಹೊರಟುಹೋಗುವಾಗ ತಮಗಾಗಿ ಕಾಯತ್ತಿದ್ದ ಮೋಶೆ ಆರೋನರನ್ನು ಕಂಡು, 21 “ನಮಗೆ ಹೋಗಲು ಅಪ್ಪಣೆಕೊಡಬೇಕೆಂದು ನೀವು ಫರೋಹನನ್ನು ಕೇಳಿ ನಮಗೆ ಕೆಟ್ಟದ್ದನ್ನು ಮಾಡಿದಿರಿ. ಫರೋಹನು ಮತ್ತು ಅವನ ಅಧಿಕಾರಿಗಳು ನಮ್ಮನ್ನು ದ್ವೇಷಿಸುವಂತೆ ನೀವು ಮಾಡಿದ್ದರಿಂದ ಯೆಹೋವನು ನಿಮಗೆ ತೀರ್ಪು ನೀಡಲಿ. ಅವರು ನಮ್ಮನ್ನು ಕೊಲ್ಲುವುದಕ್ಕೆ ನೀವು ಅವಕಾಶ ಮಾಡಿಕೊಟ್ಟಿರಿ” ಎಂದು ಹೇಳಿದರು.
ಮೋಶೆಯು ದೇವರಿಗೆ ಸಲ್ಲಿಸಿದ ದೂರು
22 ಆಗ ಮೋಶೆಯು ಯೆಹೋವನಿಗೆ ಪ್ರಾರ್ಥಿಸಿ, “ಯೆಹೋವನೇ, ನಿನ್ನ ಜನರಿಗೆ ಈ ಕೇಡನ್ನು ಏಕೆ ಮಾಡಿದೆ? ನನ್ನನ್ನು ಯಾಕೆ ಇಲ್ಲಿಗೆ ಕಳುಹಿಸಿದೆ? 23 ನಾನು ಫರೋಹನ ಬಳಿಗೆ ಹೋಗಿ ನೀನು ಹೇಳಿದ್ದನ್ನೇ ತಿಳಿಸಿದೆ. ಆದರೆ ಅಂದಿನಿಂದ ಅವನು ಜನರನ್ನು ಕೀಳಾಗಿ ಕಾಣುತ್ತಿದ್ದಾನೆ. ಅಲ್ಲದೆ ನೀನೂ ನಿನ್ನ ಜನರಿಗೆ ಸಹಾಯ ಮಾಡುತ್ತಿಲ್ಲ” ಅಂದನು.
6 ಆಗ ಯೆಹೋವನು ಮೋಶೆಗೆ, “ನಾನು ಫರೋಹನಿಗೆ ಮಾಡುವುದನ್ನು ಈಗ ನೀನು ನೋಡುವೆ. ನಾನು ನನ್ನ ಮಹಾಶಕ್ತಿಯನ್ನು ಅವನಿಗೆ ವಿರುದ್ಧವಾಗಿ ಉಪಯೋಗಿಸುವುದರಿಂದ ಅವನು ನನ್ನ ಜನರನ್ನು ಹೋಗಗೊಡಿಸುವನು; ಬಲವಂತದಿಂದ ಅವರನ್ನು ಹೊರಡಿಸುವನು” ಎಂದು ಹೇಳಿದನು.
2 ಬಳಿಕ ಯೆಹೋವನು ಮೋಶೆಗೆ, 3 “ನಾನು ಯೆಹೋವನೇ. ನಾನು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಕಾಣಿಸಿಕೊಂಡೆನು. ಅವರು ನನ್ನನ್ನು ‘ಎಲ್ ಶದ್ದಾಯ್’ (ಸರ್ವಶಕ್ತನಾದ ದೇವರು) ಎಂದು ಕರೆದರು. ಆದರೆ ನಾನು ನನ್ನನ್ನು ಯೆಹೋವ ಎಂಬ ನನ್ನ ಹೆಸರಿನಲ್ಲಿ ಅವರಿಗೆ ಗೊತ್ತುಪಡಿಸಿಕೊಳ್ಳಲಿಲ್ಲ. 4 ನಾನು ಅವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು. ಕಾನಾನ್ ದೇಶವನ್ನು ಅವರಿಗೆ ಕೊಡುವುದಾಗಿ ನಾನು ವಾಗ್ದಾನ ಮಾಡಿದೆನು. ಅವರು ಆ ದೇಶದಲ್ಲಿ ಜೀವಿಸಿದರೂ ಅದು ಅವರ ಸ್ವಂತ ದೇಶವಾಗಿರಲಿಲ್ಲ. 5 ಈಗ ಇಸ್ರೇಲರ ಕಷ್ಟಗಳನ್ನೂ ಬಲ್ಲೆನು; ಅವರು ಈಜಿಪ್ಟಿನವರ ಗುಲಾಮರೆಂದೂ ಬಲ್ಲೆನು; ನಾನು ನನ್ನ ಒಡಂಬಡಿಕೆಯನ್ನು ಜ್ಞಾಪಿಸಿಕೊಂಡಿದ್ದೇನೆ. 6 ಆದ್ದರಿಂದ ನನ್ನ ಈ ಮಾತುಗಳನ್ನು ಇಸ್ರೇಲರಿಗೆ ತಿಳಿಸು: ‘ನಾನೇ ಯೆಹೋವನು. ಈಜಿಪ್ಟಿನವರು ನಿಮ್ಮಿಂದ ಮಾಡಿಸುವ ಬಿಟ್ಟೀಕೆಲಸದಿಂದ ತಪ್ಪಿಸಿ ಈಜಿಪ್ಟಿನವರ ಗುಲಾಮಗಿರಿಯಿಂದ ಬಿಡಿಸುವೆನು. ನನ್ನ ಮಹಾಶಕ್ತಿಯಿಂದ ಈಜಿಪ್ಟಿನವರನ್ನು ಭಯಂಕರವಾಗಿ ದಂಡಿಸುವೆನು; ಬಳಿಕ ನಿಮ್ಮನ್ನು ರಕ್ಷಿಸುವೆನು. 7 ನೀವು ನನ್ನ ಜನರಾಗಿರುವಿರಿ; ನಾನು ನಿಮ್ಮ ದೇವರಾಗಿರುವೆನು. ನಿಮ್ಮ ದೇವರಾಗಿರುವ ಯೆಹೋವನಾದ ನಾನೇ ನಿಮ್ಮನ್ನು ಈಜಿಪ್ಟಿನವರ ಬಿಟ್ಟೀಕೆಲಸದಿಂದ ಬಿಡುಗಡೆಗೊಳಿಸಿದೆನೆಂದು ಆಗ ನೀವು ತಿಳಿದುಕೊಳ್ಳುವಿರಿ. 8 ಇದಲ್ಲದೆ ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ನಾನು ವಾಗ್ದಾನ ಮಾಡಿದ ದೇಶಕ್ಕೆ ನಿಮ್ಮನ್ನು ನಡಿಸುವೆನು. ನಾನು ಆ ದೇಶವನ್ನು ನಿಮಗೆ ಕೊಡುವೆನು. ಅದು ನಿಮ್ಮದಾಗಿರುವುದು. ನಾನೇ ಯೆಹೋವನು’” ಎಂದು ಹೇಳಿದನು.
9 ಅಂತೆಯೇ ಮೋಶೆಯು ಇಸ್ರೇಲರಿಗೆ ತಿಳಿಸಿದನು. ಆದರೆ ಜನರು ಬಹು ಪ್ರಯಾಸಪಟ್ಟು ದುಡಿಯುತ್ತಿದ್ದುದರಿಂದ ಮೋಶೆಯ ಮಾತಿಗೆ ಕಿವಿಗೊಡುವಷ್ಟು ತಾಳ್ಮೆ ಅವರಿಗಿರಲಿಲ್ಲ.
10 ಆಗ ಯೆಹೋವನು ಮೋಶೆಗೆ, 11 “ಹೋಗು, ಇಸ್ರೇಲರನ್ನು ಈಜಿಪ್ಟಿನಿಂದ ಕಳುಹಿಸಬೇಕೆಂದು ಫರೋಹನಿಗೆ ಹೇಳು” ಅಂದನು.
12 ಅದಕ್ಕೆ ಮೋಶೆ, “ಇಸ್ರೇಲರು ನನ್ನ ಮಾತನ್ನು ಕೇಳುವುದಿಲ್ಲ! ಆದ್ದರಿಂದ ಫರೋಹನು ನನ್ನ ಮಾತನ್ನು ಖಂಡಿತವಾಗಿ ಕೇಳುವುದಿಲ್ಲ. ನಾನು ಮಾತಾಡುವುದರಲ್ಲಿ ಜಾಣನಲ್ಲ”[d] ಎಂದು ಹೇಳಿದನು.
13 ಆದರೆ, ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಇಸ್ರೇಲರೊಡನೆಯೂ ಫರೋಹನೊಡನೆಯೂ ಮಾತಾಡಬೇಕೆಂದು ಆಜ್ಞಾಪಿಸಿದನು. ಅಲ್ಲದೆ ಈಜಿಪ್ಟಿನಿಂದ ಇಸ್ರೇಲರನ್ನು ಬಿಡಿಸಿಕೊಂಡು ಹೋಗಬೇಕೆಂದು ಯೆಹೋವನು ಅವರಿಗೆ ಆಜ್ಞಾಪಿಸಿದನು.
ಇಸ್ರೇಲರ ಕೆಲವು ಕುಟುಂಬಗಳು
14 ಇಸ್ರೇಲರ ಕುಟುಂಬಗಳ ನಾಯಕರುಗಳ ಹೆಸರುಗಳು ಇಲ್ಲಿವೆ:
ಇಸ್ರೇಲನ ಮೊದಲನೆಯ ಮಗನಾದ ರೂಬೇನನಿಗೆ ನಾಲ್ಕು ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಹನೋಕ್, ಫಲ್ಲು, ಹೆಚ್ರೋನ್ ಮತ್ತು ಕರ್ಮೀ.
15 ಸಿಮೆಯೋನನ ಗಂಡುಮಕ್ಕಳು ಯಾರೆಂದರೆ: ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಸೌಲ. (ಸೌಲನು ಕಾನಾನ್ಯ ಸ್ತ್ರೀಯ ಮಗನು.)
16 ಲೇವಿಯು ನೂರಮೂವತ್ತೇಳು ವರ್ಷ ಜೀವಿಸಿದನು. ಲೇವಿಯ ಗಂಡುಮಕ್ಕಳ ವಂಶಾವಳಿ: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.
17 ಗೇರ್ಷೋನನಿಗೆ ಲಿಬ್ನೀ ಮತ್ತು ಶಿಮ್ಮೀ ಎಂಬ ಇಬ್ಬರು ಗಂಡುಮಕ್ಕಳಿದ್ದರು.
18 ಕೆಹಾತನು ನೂರಮೂವತ್ತು ಮೂರು ವರ್ಷ ಜೀವಿಸಿದನು. ಕೆಹಾತನ ಗಂಡುಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
19 ಮೆರಾರೀಯ ಗಂಡುಮಕ್ಕಳು: ಮಹ್ಲೀ ಮತ್ತು ಮೂಷೀ. ಇಸ್ರೇಲನ ಮಗನಾದ ಲೇವಿಯಿಂದುಂಟಾದ ಗೋತ್ರಗಳು ಇವೇ.
20 ಅಮ್ರಾಮನು ನೂರಮೂವತ್ತೇಳು ವರ್ಷ ಜೀವಿಸಿದನು. ಅಮ್ರಾಮನು ತನ್ನ ತಂದೆಯ ಸಹೋದರಿಯಾದ ಯೋಕೆಬೆದಳನ್ನು ಮದುವೆಯಾದನು. ಅಮ್ರಾಮ್ ಮತ್ತು ಯೋಕೆಬೆದಳು ಆರೋನ ಮತ್ತು ಮೋಶೆಗೆ ಜನ್ಮವಿತ್ತರು.
21 ಇಚ್ಹಾರನ ಗಂಡುಮಕ್ಕಳು: ಕೋರಹ, ನೆಫೆಗ್ ಮತ್ತು ಜಿಕ್ರಿ.
22 ಉಜ್ಜೀಯೇಲನ ಗಂಡುಮಕ್ಕಳು: ಮೀಷಾಯೇಲ್, ಎಲ್ಚಾಫಾನ್ ಮತ್ತು ಸಿತ್ರೀ.
23 ಆರೋನನು ಎಲೀಶೇಬಳನ್ನು ಮದುವೆಯಾದನು. (ಎಲೀಶೇಬಳು ಅಮ್ಮೀನಾದಾಬನ ಮಗಳು ಮತ್ತು ನಹಶೋನನ ತಂಗಿ.) ಆರೋನನಿಗೆ ಎಲೀಶೇಬಳಲ್ಲಿ ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬ ಗಂಡುಮಕ್ಕಳು ಹುಟ್ಟಿದರು.
24 ಕೋರಹನ ಗಂಡುಮಕ್ಕಳು: ಅಸ್ಸೀರ್, ಎಲ್ಕಾನಾ ಮತ್ತು ಅಬೀಯಾಸಾಫ್. ಇವರೇ ಕೋರಹನ ಕುಲಗಳು.
25 ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಗಳನ್ನು ಮದುವೆಯಾದನು; ಆಕೆ ಫೀನೆಹಾಸನಿಗೆ ಜನ್ಮವಿತ್ತಳು. ಇವರೆಲ್ಲರೂ ಇಸ್ರೇಲನ ಮಗನಾದ ಲೇವಿಯ ಗೋತ್ರದವರು.
26 ಮೋಶೆ ಆರೋನರು ಸಹ ಲೇವಿ ಕುಲದವರು. “ನನ್ನ ಜನರನ್ನು ಗುಂಪುಗುಂಪಾಗಿ[e] ಈಜಿಪ್ಟಿನಿಂದ ನಡೆಸಿಕೊಂಡು ಹೋಗಿ” ಎಂದು ದೇವರು ಹೇಳಿದ್ದು ಇವರಿಗೇ. 27 ಇಸ್ರೇಲರು ಈಜಿಪ್ಟಿನಿಂದ ಹೊರಟುಹೋಗಲು ಅನುಮತಿ ನೀಡಬೇಕೆಂದು ಈಜಿಪ್ಟಿನ ರಾಜನಾದ ಫರೋಹನೊಂದಿಗೆ ಮಾತಾಡಿದವರು ಮೋಶೆ ಮತ್ತು ಆರೋನರೇ.
ಯೆಹೋವನು ಮೋಶೆಯನ್ನು ತಿರುಗಿ ಕರೆದದ್ದು
28 ಬಳಿಕ ಯೆಹೋವನು ಮೋಶೆಯ ಸಂಗಡ ಈಜಿಪ್ಟಿನಲ್ಲಿ ಮಾತಾಡಿ, 29 “ನಾನು ಯೆಹೋವನು. ನಾನು ನಿನಗೆ ತಿಳಿಸುವ ಪ್ರತಿಯೊಂದನ್ನು ಈಜಿಪ್ಟಿನ ರಾಜನಿಗೆ ಹೇಳು” ಅಂದನು.
30 ಆದರೆ ಮೋಶೆ ಯೆಹೋವನಿಗೆ, “ನಾನು ಒಳ್ಳೆಯ ಮಾತುಗಾರನಲ್ಲ. ರಾಜನು ನನ್ನ ಮಾತನ್ನು ಕೇಳುವನೇ?” ಎಂದು ಉತ್ತರಿಸಿದನು.
Kannada Holy Bible: Easy-to-Read Version. All rights reserved. © 1997 Bible League International