Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 48-50

ಮನಸ್ಸೆ ಮತ್ತು ಎಫ್ರಾಯೀಮರಿಗೆ ಆಶೀರ್ವಾದಗಳು

48 ಸ್ವಲ್ಪ ಕಾಲದ ನಂತರ, ತಂದೆಯು ಬಹಳ ಅನಾರೋಗ್ಯದಿಂದಿರುವುದು ಯೋಸೇಫನಿಗೆ ತಿಳಿಯಿತು. ಆದ್ದರಿಂದ ಅವನು ತನ್ನ ಇಬ್ಬರು ಗಂಡುಮಕ್ಕಳಾದ ಮನಸ್ಸೆಯನ್ನು ಮತ್ತು ಎಫ್ರಾಯೀಮನನ್ನು ಕರೆದುಕೊಂಡು ತನ್ನ ತಂದೆಯ ಬಳಿಗೆ ಬಂದನು. ಯೋಸೇಫನು ಬಂದಾಗ ಯಾರೋ ಒಬ್ಬನು ಇಸ್ರೇಲನಿಗೆ, “ನಿನ್ನ ಮಗನಾದ ಯೋಸೇಫನು ನಿನ್ನನ್ನು ನೋಡಲು ಬಂದಿದ್ದಾನೆ” ಎಂದು ಹೇಳಿದನು. ಆಗ ಅವನು ಬಹಳ ಬಲಹೀನನಾಗಿದ್ದರೂ ಕಷ್ಟಪಟ್ಟು ಹಾಸಿಗೆಯ ಮೇಲೆ ಕುಳಿತುಕೊಂಡನು.

ಬಳಿಕ ಇಸ್ರೇಲನು ಯೋಸೇಫನಿಗೆ, “ಸರ್ವಶಕ್ತನಾದ ದೇವರು ನನಗೆ ಕಾನಾನ್ ದೇಶದ ಲೂಜ್ ಎಂಬ ಸ್ಥಳದಲ್ಲಿ ಕಾಣಿಸಿಕೊಂಡು ನನ್ನನ್ನು ಆಶೀರ್ವದಿಸಿದನು. ದೇವರು ನನಗೆ, ‘ನಾನು ನಿನಗೆ ಅನೇಕ ಮಕ್ಕಳನ್ನು ಕೊಡುತ್ತೇನೆ; ನಿನ್ನ ಸಂತತಿಯವರು ಅನೇಕ ಜನಾಂಗಗಳಾಗುವರು; ನಿನ್ನ ಸಂತತಿಯವರಿಗೆ ನಾನು ಈ ದೇಶವನ್ನು ಶಾಶ್ವತವಾಗಿ ಕೊಡುವೆನು’ ಎಂದು ಹೇಳಿದನು. ಈಗ ನಿನಗೆ ಇಬ್ಬರು ಗಂಡುಮಕ್ಕಳಿದ್ದಾರೆ. ನಾನು ಈಜಿಪ್ಟಿಗೆ ಬರುವುದಕ್ಕಿಂತ ಮೊದಲೇ ಅವರು ಇಲ್ಲಿ ಹುಟ್ಟಿದರು. ನಿನ್ನ ಇಬ್ಬರು ಗಂಡುಮಕ್ಕಳಾದ ಮನಸ್ಸೆ ಮತ್ತು ಎಫ್ರಾಯೀಮ್ ನನ್ನ ಮಕ್ಕಳಂತೆಯೇ ಇದ್ದಾರೆ. ಅವರು ನನಗೆ ರೂಬೇನ್ ಮತ್ತು ಸಿಮೆಯೋನರಂತೆಯೇ ಇದ್ದಾರೆ. ಆದ್ದರಿಂದ ಈ ಇಬ್ಬರು ಗಂಡುಮಕ್ಕಳು ನನಗೆ ಮಕ್ಕಳಂತೆಯೇ ಇರುತ್ತಾರೆ. ನಾನು ಹೊಂದಿರುವ ಪ್ರತಿಯೊಂದರಲ್ಲಿಯೂ ಅವರು ಪಾಲನ್ನು ಹೊಂದುವರು. ಆದರೆ ನಿನಗೆ ಬೇರೆ ಗಂಡುಮಕ್ಕಳಿದ್ದರೆ ಅವರು ಎಫ್ರಾಯೀಮ್ ಮತ್ತು ಮನಸ್ಸೆಯವರಿಗೆ ಮಕ್ಕಳಾಗಿರುತ್ತಾರೆ. ಅಂದರೆ ಎಫ್ರಾಯೀಮ್ ಮತ್ತು ಮನಸ್ಸೆ ಹೊಂದಿರುವ ಪ್ರತಿಯೊಂದರಲ್ಲಿ ಅವರು ಪಾಲನ್ನು ಹೊಂದುವರು. ಪದ್ದನ್‌ಅರಾಮಿನಿಂದ ಹಿಂತಿರುಗಿ ಬರುತ್ತಿರುವಾಗ ರಾಹೇಲಳು ಸತ್ತಳು. ಇದು ನನಗೆ ತುಂಬ ದುಃಖವನ್ನು ಉಂಟುಮಾಡಿತು. ನಾವು ಕಾನಾನ್ ದೇಶದಲ್ಲಿ ಎಫ್ರಾತ್ ನಗರದ ಕಡೆಗೆ ಪ್ರಯಾಣ ಮಾಡುತ್ತಿದ್ದೆವು. ಆದ್ದರಿಂದ ನಾನು ಅವಳನ್ನು ಬೆತ್ಲೆಹೇಮೆಂಬ ಎಫ್ರಾತ್ ನಗರದ ರಸ್ತೆಯಲ್ಲಿ ಸಮಾಧಿ ಮಾಡಿದೆನು” ಎಂದು ಹೇಳಿದನು.

ಆಮೇಲೆ ಇಸ್ರೇಲನು ಯೋಸೇಫನ ಗಂಡುಮಕ್ಕಳನ್ನು ನೋಡಿ, “ಈ ಹುಡುಗರು ಯಾರು?” ಎಂದು ಕೇಳಿದನು.

ಯೋಸೇಫನು ತನ್ನ ತಂದೆಗೆ, “ಇವರು ನನ್ನ ಮಕ್ಕಳು. ದೇವರು ನನಗೆ ಕೊಟ್ಟಿರುವ ಗಂಡುಮಕ್ಕಳೇ ಇವರು” ಎಂದು ಹೇಳಿದನು.

ಇಸ್ರೇಲನು, “ಅವರನ್ನು ನನ್ನ ಬಳಿಗೆ ಕರೆದುಕೊಂಡು ಬಾ, ನಾನು ಅವರನ್ನು ಆಶೀರ್ವದಿಸುತ್ತೇನೆ” ಎಂದು ಹೇಳಿದನು.

10 ಇಸ್ರೇಲನಿಗೆ ತುಂಬ ವಯಸ್ಸಾಗಿತ್ತು. ಅವನಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಆದ್ದರಿಂದ ಯೋಸೇಫನು ಅವರನ್ನು ತಂದೆಯ ಬಳಿಗೆ ಕರೆದುಕೊಂಡು ಬಂದನು. ಇಸ್ರೇಲನು ಆ ಹುಡುಗರನ್ನು ಅಪ್ಪಿಕೊಂಡು ಮುದ್ದಿಟ್ಟನು. 11 ಬಳಿಕ ಇಸ್ರೇಲನು ಯೋಸೇಫನಿಗೆ, “ನಾನು ಮತ್ತೆ ನಿನ್ನ ಮುಖವನ್ನು ನೋಡುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ನಾನು ನಿನ್ನನ್ನೂ ನಿನ್ನ ಮಕ್ಕಳನ್ನೂ ನೋಡುವಂತೆ ದೇವರು ಅನುಗ್ರಹಿಸಿದ್ದಾನೆ” ಎಂದು ಹೇಳಿದನು.

12 ಆಗ ಯೋಸೇಫನು ಇಸ್ರೇಲನ ತೊಡೆಯ ಮೇಲೆ ಕುಳಿತಿದ್ದ ತನ್ನ ಗಂಡುಮಕ್ಕಳನ್ನು ಎತ್ತಿಕೊಂಡನು. ಬಳಿಕ ಅವರು ಇಸ್ರೇಲನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. 13 ಯೋಸೇಫನು ಎಫ್ರಾಯೀಮನನ್ನು ತನ್ನ ಬಲಭಾಗದಲ್ಲಿಯೂ ಮನಸ್ಸೆಯನ್ನು ತನ್ನ ಎಡಭಾಗದಲ್ಲಿಯೂ ಕುಳ್ಳಿರಿಸಿದನು. (ಆದ್ದರಿಂದ ಎಫ್ರಾಯೀಮನು ಇಸ್ರೇಲನ ಎಡಭಾಗದಲ್ಲಿಯೂ ಮನಸ್ಸೆಯು ಬಲಭಾಗದಲ್ಲಿಯೂ ಇದ್ದರು.) 14 ಆದರೆ ಇಸ್ರೇಲನು ತನ್ನ ಕೈಗಳನ್ನು ವಾರೆ ಮಾಡಿ ತನ್ನ ಬಲಗೈಯನ್ನು ಚಿಕ್ಕ ಮಗನಾದ ಎಫ್ರಾಯೀಮನ ತಲೆಯ ಮೇಲಿಟ್ಟು ಎಡಗೈಯನ್ನು ದೊಡ್ಡ ಮಗನಾದ ಮನಸ್ಸೆಯ ತಲೆಯ ಮೇಲಿಟ್ಟನು. ಮನಸ್ಸೆಯು ಹಿರಿಯ ಮಗನಾಗಿದ್ದರೂ ಇಸ್ರೇಲನು ಮನಸ್ಸೆಯ ತಲೆಯ ಮೇಲೆ ಎಡಗೈಯನ್ನಿಟ್ಟನು. 15 ಬಳಿಕ ಇಸ್ರೇಲನು ಯೋಸೇಫನನ್ನು ಆಶೀರ್ವದಿಸಿ ಹೀಗೆಂದನು:

“ನನ್ನ ಪೂರ್ವಿಕರಾದ ಅಬ್ರಹಾಮನೂ ಇಸಾಕನೂ ನಮ್ಮ ದೇವರನ್ನು ಆರಾಧಿಸಿದರು.
    ಆ ದೇವರೇ ನನ್ನನ್ನು ನನ್ನ ಜೀವಮಾನವೆಲ್ಲಾ ನಡೆಸಿದನು.
16 ನನ್ನನ್ನು ಎಲ್ಲಾ ತೊಂದರೆಗಳಿಂದ ಕಾಪಾಡಿದ ದೂತನೇ ಆತನು.
    ಈ ಹುಡುಗರನ್ನು ಆಶೀರ್ವದಿಸಬೇಕೆಂದು ನಾನು ಆತನಲ್ಲಿ ಪ್ರಾರ್ಥಿಸುವೆನು.
ಇಂದಿನಿಂದ ಈ ಮಕ್ಕಳು ನನ್ನ ಹೆಸರನ್ನೇ ಹೊಂದಿಕೊಳ್ಳುವರು.
    ನನ್ನ ಪೂರ್ವಿಕರಾದ ಅಬ್ರಹಾಮ್ ಮತ್ತು ಇಸಾಕರ ಹೆಸರನ್ನು ಇವರು ಹೊಂದಿಕೊಳ್ಳುವರು.
ಇವರು ಭೂಮಿಯ ಮೇಲೆ ಬೆಳೆದು ದೊಡ್ಡ ಕುಟುಂಬಗಳಾಗುವಂತೆಯೂ
    ದೊಡ್ಡ ಜನಾಂಗಗಳಾಗುವಂತೆಯೂ ನಾನು ಪ್ರಾರ್ಥಿಸುವೆನು.”

17 ಇಸ್ರೇಲನು ತನ್ನ ಬಲಗೈಯನ್ನು ಎಫ್ರಾಯೀಮನ ತಲೆಯ ಮೇಲಿಟ್ಟಿದ್ದರಿಂದ ಯೋಸೇಫನು ಅಸಮಾಧಾನದಿಂದ ನೋಡಿ ತಂದೆಯ ಕೈಯನ್ನು ಹಿಡಿದುಕೊಂಡನು; ಅಲ್ಲದೆ ತಂದೆಯ ಕೈಯನ್ನು ಎಫ್ರಾಯೀಮನ ತಲೆಯ ಮೇಲಿಂದ ತೆಗೆದುಕೊಂಡು ಮನಸ್ಸೆಯ ತಲೆಯ ಮೇಲೆ ಇಡಬೇಕೆಂದಿದ್ದನು. 18 ಯೋಸೇಫನು ತನ್ನ ತಂದೆಗೆ, “ನೀನು ನಿನ್ನ ಬಲಗೈಯನ್ನು ತಪ್ಪಾಗಿ ಎಫ್ರಾಯೀಮನ ಮೇಲೆ ಇಟ್ಟಿರುವೆ. ಮೊದಲು ಹುಟ್ಟಿದವನು ಮನಸ್ಸೆ” ಎಂದು ಹೇಳಿದನು.

19 ಅದಕ್ಕೆ ಅವನ ತಂದೆಯು, “ನನಗೆ ಗೊತ್ತು ಮಗನೇ, ನನಗೆ ಗೊತ್ತು. ಮನಸ್ಸೆ ಮೊದಲು ಹುಟ್ಟಿದವನು. ಅವನು ಮಹಾವ್ಯಕ್ತಿಯಾಗುವನು. ಅವನು ಅನೇಕ ಜನರಿಗೆ ತಂದೆಯಾಗುವನು. ಆದರೆ ತಮ್ಮನು ಅಣ್ಣನಿಗಿಂತ ಮಹಾವ್ಯಕ್ತಿಯಾಗುವನು. ಅವನ ಕುಟುಂಬವು ತುಂಬ ದೊಡ್ಡದಾಗುವುದು” ಎಂದು ಹೇಳಿದನು.

20 ಅಂದು ಇಸ್ರೇಲನು ಅವರನ್ನು ಆಶೀರ್ವದಿಸಿ,

“ಇಸ್ರೇಲರು ನಿಮ್ಮ ಹೆಸರುಗಳ ಮೂಲಕ
    ಬೇರೆಯವರನ್ನು ಆಶೀರ್ವದಿಸುವರು.
‘ದೇವರು ನಿನ್ನನ್ನು ಎಫ್ರಾಯೀಮನಂತೆಯೂ
    ಮನಸ್ಸೆಯಂತೆಯೂ ಮಾಡಲಿ’ ಎಂದು ಹೇಳುವರು” ಎಂದನು.

ಹೀಗೆ, ಇಸ್ರೇಲನು ಎಫ್ರಾಯೀಮನನ್ನು ಮನಸ್ಸೆಗಿಂತ ದೊಡ್ಡವನನ್ನಾಗಿ ಮಾಡಿದನು.

21 ಬಳಿಕ ಇಸ್ರೇಲನು ಯೋಸೇಫನಿಗೆ, “ನೋಡು, ನಾನು ಸಾಯುವ ಕಾಲ ಸಮೀಪಿಸಿದೆ. ಆದರೆ ದೇವರು ಇನ್ನೂ ನಿನ್ನ ಸಂಗಡವಿರುವನು. ಅವನು ನಿನ್ನನ್ನು ನಿನ್ನ ಪೂರ್ವಿಕರ ದೇಶಕ್ಕೆ ಹಿಂತಿರುಗಿಸುವನು. 22 ನಾನು ನಿನ್ನ ಸಹೋದರರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ ಬೇರೊಂದನ್ನು ನಿನಗೆ ಕೊಟ್ಟಿದ್ದೇನೆ. ನಾನು ಅಮೋರಿಯರಿಂದ ಗೆದ್ದುಕೊಂಡಿರುವ ಬೆಟ್ಟವನ್ನು ನಿನಗೆ ಕೊಡುವೆನು. ನಾನು ಅವರೊಂದಿಗೆ ಖಡ್ಗಗಳಿಂದಲೂ ಬಿಲ್ಲುಗಳಿಂದಲೂ ಹೋರಾಡಿ ಆ ಬೆಟ್ಟವನ್ನು ವಶಪಡಿಸಿಕೊಂಡಿದ್ದೇನೆ” ಎಂದು ಹೇಳಿದನು.

ಯಾಕೋಬನು ತನ್ನ ಗಂಡುಮಕ್ಕಳನ್ನು ಆಶೀರ್ವದಿಸಿದ್ದು

49 ಬಳಿಕ ಯಾಕೋಬನು ತನ್ನ ಗಂಡುಮಕ್ಕಳನ್ನು ತನ್ನ ಬಳಿಗೆ ಕರೆಯಿಸಿ, “ನನ್ನ ಎಲ್ಲಾ ಗಂಡುಮಕ್ಕಳೇ, ನನ್ನ ಬಳಿಗೆ ಬನ್ನಿರಿ. ನಿಮಗೆ ಮುಂದೆ ಏನು ಸಂಭವಿಸುವುದೆಂದು ತಿಳಿಸುತ್ತೇನೆ.

“ಯಾಕೋಬನ ಗಂಡುಮಕ್ಕಳೇ, ಒಟ್ಟಾಗಿ ಬಂದು ಕೇಳಿರಿ.
    ನಿಮ್ಮ ತಂದೆಯಾದ ಇಸ್ರೇಲನು ಹೇಳುವುದನ್ನು ಕೇಳಿರಿ” ಎಂದು ಹೇಳಿದನು.

ರೂಬೇನ

“ರೂಬೇನನೇ, ನೀನು ನನ್ನ ಚೊಚ್ಚಲು ಮಗ.
    ನೀನೇ ನನ್ನ ಮೊದಲನೆಯ ಮಗ.
ನೀನು ನನ್ನ ಇತರ ಎಲ್ಲಾ ಗಂಡುಮಕ್ಕಳಿಗಿಂತ
    ಶಕ್ತಿಶಾಲಿಯೂ ಗೌರವಯುತನೂ ಆಗಿರುವೆ.
ಆದರೆ ನೀನು ಪ್ರಳಯದ ಭಯಂಕರವಾದ ಅಲೆಗಳಂತಿರುವೆ.
    ನೀನು ನನ್ನ ಮಕ್ಕಳಿಗಿಂತ ಅತ್ಯಂತ ಪ್ರಮುಖನಾಗಿರುವುದಿಲ್ಲ.
ನಿನ್ನ ತಂದೆಗೆ ಸೇರಿದ ಸ್ತ್ರೀಯೊಂದಿಗೆ ನೀನು ಮಲಗಿಕೊಂಡೆ.
    ನೀನು ನಿನ್ನ ತಂದೆಯ ಹಾಸಿಗೆಗೆ ಗೌರವವನ್ನು ತೋರಿಸಲಿಲ್ಲ.”

ಸಿಮೆಯೋನ ಮತ್ತು ಲೇವಿ

“ಸಿಮೆಯೋನನೂ ಲೇವಿಯೂ ಸಹೋದರರಾಗಿದ್ದಾರೆ.
    ಅವರು ತಮ್ಮ ಖಡ್ಗಗಳಿಂದ ಹೋರಾಡಲು ಇಷ್ಟಪಡುವರು.
ಅವರು ಗುಟ್ಟಾಗಿ ಕೆಟ್ಟಕಾರ್ಯಗಳನ್ನು ಯೋಚಿಸಿದರು.
    ಅವರ ರಹಸ್ಯಕೂಟಗಳನ್ನು ನನ್ನ ಆತ್ಮವು ಸ್ವೀಕರಿಸುವುದಿಲ್ಲ.
ಅವರು ಕೋಪಗೊಂಡಾಗ ಗಂಡಸರನ್ನು ಕೊಂದುಹಾಕಿದರು.
    ಅವರು ಮೋಜಿಗೆಂದೇ ಪ್ರಾಣಿಗಳನ್ನು ಹಿಂಸಿಸಿದರು.
ಅವರ ಕೋಪವೇ ಅವರಿಗೆ ಶಾಪ. ಅದು ತುಂಬಾ ಶಕ್ತಿಶಾಲಿಯಾದದ್ದು.
    ಅವರು ಹುಚ್ಚರಾದಾಗ ತುಂಬಾ ಕ್ರೂರಿಗಳು.
ಅವರು ಯಾಕೋಬನ ನಾಡಿನಲ್ಲಿ ತಮ್ಮದೇ ಆದ ನಾಡನ್ನು ಹೊಂದಿಕೊಳ್ಳುವುದಿಲ್ಲ.
    ಅವರು ಇಸ್ರೇಲಿನಲ್ಲೆಲ್ಲಾ ಹರಡಿಕೊಳ್ಳುವರು.”

ಯೆಹೂದ

“ಯೆಹೂದನೇ, ನಿನ್ನ ಸಹೋದರರು ನಿನ್ನನ್ನೇ ಹೊಗಳುವರು.
    ನೀನು ನಿನ್ನ ವೈರಿಗಳನ್ನು ಸೋಲಿಸುವೆ.
    ನಿನ್ನ ಸಹೋದರರು ನಿನಗೇ ಅಡ್ಡಬೀಳುವರು.
ಯೆಹೂದನು ಪ್ರಾಣಿಯನ್ನು ಕೊಂದ ಪ್ರಾಯದ ಸಿಂಹದಂತಿದ್ದಾನೆ.
    ಮಗನೇ, ನೀನು ಸಿಂಹದಂತೆ ಬೇಟೆಗಾಗಿ ಹೊಂಚುಹಾಕಿ ನಿಂತಿರುವೆ.
ಯೆಹೂದನು ಸಿಂಹದಂತಿರುವನು. ಅವನು ಮಲಗಿ ವಿಶ್ರಮಿಸಿಕೊಳ್ಳುವನು;
    ಅವನನ್ನು ಕೆಣಕಲು ಯಾರಿಗೂ ಧೈರ್ಯವಿಲ್ಲ.
10 ರಾಜದಂಡವನ್ನು ಹಿಡಿಯತಕ್ಕವನು ಬರುವ ತನಕ
    ಯೆಹೂದನು ರಾಜದಂಡವನ್ನು ಹಿಡಿದುಕೊಳ್ಳುವನು.
ಅವನ ಸಂತತಿಯವರು ಶಾಶ್ವತವಾಗಿ ಆಳುವರು;
    ಅನ್ಯಜನಾಂಗಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಅವನಿಗೆ ವಿಧೇಯರಾಗಿರುವರು.
11 ಅವನು ತನ್ನ ಕತ್ತೆಯನ್ನು ದ್ರಾಕ್ಷೆಬಳ್ಳಿಗೆ ಕಟ್ಟುವನು;
    ತನ್ನ ಪ್ರಾಯದ ಕತ್ತೆಯನ್ನು ಉತ್ತಮವಾದ ದ್ರಾಕ್ಷೆಬಳ್ಳಿಗೆ ಕಟ್ಟುವನು.
ಅವನು ಉತ್ತಮವಾದ ದ್ರಾಕ್ಷಾರಸದಿಂದ
    ತನ್ನ ಬಟ್ಟೆಗಳನ್ನು ತೊಳೆಯುವನು.
12 ಅವನು ದ್ರಾಕ್ಷಾರಸವನ್ನು ಕುಡಿಯುವುದರಿಂದ ಅವನ ಕಣ್ಣುಗಳು ಕೆಂಪಾಗಿರುತ್ತವೆ.
    ಅವನು ಹಾಲು ಕುಡಿಯುವುದರಿಂದ ಅವನ ಹಲ್ಲುಗಳು ಬಿಳುಪಾಗಿರುತ್ತವೆ.”

ಜೆಬುಲೂನ

13 “ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಿಸುವನು;
    ಸಮುದ್ರ ತೀರವು ಅವನ ಹಡಗುಗಳಿಗೆ ಸುರಕ್ಷಿತವಾದ ಸ್ಥಳವಾಗಿದೆ.
    ಅವನ ನಾಡು ಚೀದೋನ್ ಪಟ್ಟಣದವರೆಗೂ ವಿಸ್ತರಿಸುವುದು.”

ಇಸ್ಸಾಕಾರ

14 “ಇಸ್ಸಾಕಾರನು ಬಹಳ ಕಷ್ಟಪಟ್ಟು ದುಡಿಯುವ ಕತ್ತೆಯಂತಿದ್ದಾನೆ.
    ಅವನು ಭಾರವಾದ ಹೊರೆಯನ್ನು ಹೊರುವುದರಿಂದ ಮಲಗಿ ವಿಶ್ರಮಿಸಿಕೊಳ್ಳುವನು.
15 ಅವನು ತನ್ನ ವಿಶ್ರಾಂತಿಗೆ ಅನುಕೂಲವಾಗಿರುವ
    ಮತ್ತು ಪ್ರಶಾಂತವಾಗಿರುವ ನಾಡನ್ನು ನೋಡುವನು.
ಅವನು ಭಾರವಾದ ಹೊರೆಗಳನ್ನು ಹೊರುವುದಕ್ಕೂ
    ಗುಲಾಮನಂತೆ ದುಡಿಯುವುದಕ್ಕೂ ಒಪ್ಪಿಕೊಳ್ಳುವನು.”

ದಾನ

16 “ಇತರ ಇಸ್ರೇಲರ ಕುಟುಂಬಗಳಿಗೆ ತೀರ್ಪುಮಾಡುವಂತೆ,
    ದಾನನು ತನ್ನ ಸ್ವಂತ ಜನರಿಗೆ ತೀರ್ಪು ಮಾಡುತ್ತಾನೆ.
17 ದಾನನು ರಸ್ತೆಯ ಬಳಿಯಲ್ಲಿರುವ ಹಾವಿನಂತಿರುವನು.”
    ದಾರಿಯ ಸಮೀಪದಲ್ಲಿ ಮಲಗಿದ್ದು
ಕುದುರೆಯ ಹಿಮ್ಮಡಿಯನ್ನು ಕಚ್ಚಿ
    ಸವಾರನನ್ನು ಬೀಳಿಸುವ ವಿಷಸರ್ಪದಂತಿರುವನು.

18 “ಯೆಹೋವನೇ, ನಿನ್ನಿಂದುಂಟಾಗುವ ರಕ್ಷಣೆಗಾಗಿ ನಾನು ಕಾಯುತ್ತಿದ್ದೇನೆ.”

ಗಾದ

19 “ಒಂದು ಕಳ್ಳರ ಗುಂಪು ಗಾದನ ಮೇಲೆ ಆಕ್ರಮಣ ಮಾಡುವುದು.
    ಆದರೆ ಗಾದನು ಅವರನ್ನು ಓಡಿಸಿ ಬಿಡುವನು.”

ಆಶೇರ

20 “ಆಶೇರನ ನಾಡು ಒಳ್ಳೆಯ ಆಹಾರವನ್ನು ಯಥೇಚ್ಛವಾಗಿ ಫಲಿಸುತ್ತದೆ;
    ರಾಜನಿಗೆ ಸಾಕಾಗುವಷ್ಟು ಒಳ್ಳೆಯ ಆಹಾರವು ಅವನಲ್ಲಿರುವುದು.”

ನಫ್ತಾಲಿ

21 “ನಫ್ತಾಲಿಯು ಸ್ವತಂತ್ರವಾಗಿ ಓಡುವ ಜಿಂಕೆಯಂತಿದ್ದಾನೆ.
    ಅವನ ಮಾತುಗಳು ಅದರ ಸುಂದರವಾದ ಮರಿಗಳಂತಿವೆ.”

ಯೋಸೇಫ

22 “ಯೋಸೇಫನು ಬಹು ಯಶಸ್ವಿಯಾಗಿದ್ದಾನೆ.
    ಯೋಸೇಫನು ಹಣ್ಣನ್ನು ಅಧಿಕವಾಗಿ ಫಲಿಸುವ ದ್ರಾಕ್ಷೆ ಬಳ್ಳಿಯಂತಿರುವನು.
ಅವನು ವಸಂತಕಾಲದಲ್ಲಿ ಬೆಳೆಯುವ ದ್ರಾಕ್ಷೆಬಳ್ಳಿಯಂತಿರುವನು.
    ಅವನು ಗೋಡೆಯ ಆಚೆಗೆ ಚಾಚಿಕೊಂಡಿರುವ ದ್ರಾಕ್ಷೆಬಳ್ಳಿಯಂತಿರುವನು.
23 ಅನೇಕ ಜನರು ಅವನ ವಿರುದ್ಧವಾಗಿ ಹೋರಾಡಿದರು.
    ಬಿಲ್ಲುಗಳನ್ನು ಹೊಂದಿದ್ದ ಜನರು ಅವನನ್ನು ಇಷ್ಟಪಡಲಿಲ್ಲ.
24 ಆದರೆ ಅವನು ತನ್ನ ಹೋರಾಟದಲ್ಲಿ ಬಲಿಷ್ಠವಾದ ಬಿಲ್ಲಿನಿಂದಲೂ
    ತನ್ನ ನಿಪುಣವಾದ ತೋಳುಗಳಿಂದಲೂ ಗೆದ್ದನು.
ಅವನು ಶಕ್ತಿಯನ್ನು ಯಾಕೋಬನ ಪರಾಕ್ರಮಿಯಿಂದಲೂ
    ಇಸ್ರೇಲನ ಬಂಡೆಯಾದಾತನಿಂದಲೂ ಕುರುಬನಿಂದಲೂ
25 ನಿಮ್ಮ ತಂದೆಯ ದೇವರಿಂದಲೂ ಪಡೆದುಕೊಳ್ಳುವನು.
    ದೇವರು ನಿನ್ನನ್ನು ಆಶೀರ್ವದಿಸುವನು.
ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಲಿ.
    ಆತನು ಮೇಲಿರುವ ಆಕಾಶದಿಂದ ನಿನಗೆ ಆಶೀರ್ವಾದಗಳನ್ನು ಕೊಡಲಿ.
ಆತನು ಕೆಳಗಿನ ಆಳವಾದ ಸಾಗರದ ಸೆಲೆಗಳಿಂದಲೂ ನಿನಗೆ ಆಶೀರ್ವಾದಗಳನ್ನು ಕೊಡಲಿ.
    ಆತನು ನಿನಗೆ ಸ್ತನ್ಯಗಳಿಂದಲೂ ಗರ್ಭದಿಂದಲೂ ಆಶೀರ್ವಾದಗಳನ್ನು ಕೊಡಲಿ.
26 ನನ್ನ ತಂದೆತಾಯಿಗಳಿಗೆ ಅನೇಕಾನೇಕ ಒಳ್ಳೆಯ ಸಂಗತಿಗಳು ಸಂಭವಿಸಿದವು.
    ನಿನ್ನ ತಂದೆಯಾದ ನಾನು ಅದಕ್ಕಿಂತಲೂ ಹೆಚ್ಚು ಆಶೀರ್ವಾದ ಹೊಂದಿಕೊಂಡೆನು.
ನಿನ್ನ ಸಹೋದರರು ನಿನ್ನನ್ನು ದೂರಮಾಡಲು ಪ್ರಯತ್ನಿಸಿದರು.
    ಆದರೆ ಈಗ ನನ್ನ ಎಲ್ಲಾ ಆಶೀರ್ವಾದಗಳು ನಿನ್ನ ಮೇಲೆ
    ಎತ್ತರವಾದ ಬೆಟ್ಟದೋಪಾದಿಯಲ್ಲಿ ರಾಶಿಯಂತಿವೆ.”

ಬೆನ್ಯಾಮೀನ

27 “ಬೆನ್ಯಾಮೀನನು ಹಸಿದಿರುವ ತೋಳದಂತಿದ್ದಾನೆ.
    ಅವನು ಮುಂಜಾನೆಯಲ್ಲಿ ಕೊಂದು ತಿನ್ನುವನು.
    ಅವನು ಸಾಯಂಕಾಲ ಮಿಕ್ಕುಳಿದುದ್ದನ್ನು ಹಂಚಿಕೊಳ್ಳುವನು.”

28 ಇವು ಇಸ್ರೇಲನ ಹನ್ನೆರಡು ಕುಲಗಳು. ಈ ವಿಷಯಗಳನ್ನೆಲ್ಲ ಅವರ ತಂದೆಯಾದ ಇಸ್ರೇಲನು ಅವರಿಗೆ ಹೇಳಿದನು. ಅವನು ತನ್ನ ಪ್ರತಿಯೊಬ್ಬ ಗಂಡುಮಗನಿಗೆ ಸರಿತಕ್ಕ ಆಶೀರ್ವಾದ ಕೊಟ್ಟನು. 29 ಬಳಿಕ ಇಸ್ರೇಲನು ಅವರಿಗೆ ಈ ಆಜ್ಞೆಯನ್ನು ಕೊಟ್ಟನು: “ನಾನು ಸತ್ತಾಗ, ನನ್ನ ಪೂರ್ವಿಕರ ಸಂಗಡವಿರಲು ಇಷ್ಟಪಡುತ್ತೇನೆ. ನನ್ನ ಪೂರ್ವಿಕರಿಗೆ ಸಮಾಧಿ ಮಾಡಿರುವ ಹಿತ್ತಿಯನಾದ ಎಫ್ರೋನನ ಗವಿಯಲ್ಲಿ ನನಗೆ ಸಮಾಧಿಮಾಡಬೇಕು. 30 ಆ ಗವಿಯು ಕಾನಾನ್ ದೇಶದ ಮಮ್ರೆಗೆ ಎದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿದೆ. ಅಬ್ರಹಾಮನು ತನ್ನ ಸಮಾಧಿಗಾಗಿ ಈ ಸ್ಥಳವನ್ನು ಎಫ್ರೋನನಿಂದ ಕೊಂಡುಕೊಂಡನು. 31 ಅಬ್ರಹಾಮನನ್ನು ಮತ್ತು ಅವನ ಹೆಂಡತಿಯಾದ ಸಾರಳನ್ನು ಆ ಗವಿಯಲ್ಲಿ ಸಮಾಧಿ ಮಾಡಲಾಗಿದೆ. ಇಸಾಕನನ್ನು ಮತ್ತು ರೆಬೆಕ್ಕಳನ್ನು ಅಲ್ಲಿ ಸಮಾಧಿ ಮಾಡಲಾಗಿದೆ. ನನ್ನ ಹೆಂಡತಿಯಾದ ಲೇಯಳನ್ನು ನಾನು ಅಲ್ಲಿ ಸಮಾಧಿ ಮಾಡಿದ್ದೇನೆ. ಬೆನ್ಯಾಮೀನ 32 ಆ ಗುಹೆಯನ್ನು ಮತ್ತು ಆ ಗುಹೆಯಿರುವ ಹೊಲವನ್ನು ಹಿತ್ತಿಯರಿಂದ ಕೊಂಡುಕೊಳ್ಳಲಾಗಿದೆ” ಎಂದು ಹೇಳಿದನು. 33 ಯಾಕೋಬನು ತನ್ನ ಗಂಡುಮಕ್ಕಳೊಂದಿಗೆ ಮಾತನಾಡಿದ ಮೇಲೆ ತನ್ನ ಹಾಸಿಗೆಯ ಮೇಲೆ ಕಾಲುಗಳನ್ನು ಮುದುರಿಕೊಂಡು ಪ್ರಾಣಬಿಟ್ಟನು.

ಯಾಕೋಬನ ಅಂತ್ಯಕ್ರಿಯೆ

50 ಇಸ್ರೇಲನು ಸತ್ತಾಗ ಯೋಸೇಫನು ತುಂಬ ದುಃಖಿಸಿದನು. ಅವನು ತನ್ನ ತಂದೆಯನ್ನು ಅಪ್ಪಿಕೊಂಡು ಗೋಳಾಡಿ ಮುದ್ದಿಟ್ಟನು. ಯೋಸೇಫನು ತನ್ನ ತಂದೆಯ ಶವವನ್ನು ಸಿದ್ಧಪಡಿಸಲು ತನ್ನ ಸೇವಕರಾದ ವೈದ್ಯರಿಗೆ ಹೇಳಿದನು. ಆ ವೈದ್ಯರು ಯಾಕೋಬನ ಶರೀರವನ್ನು ಸಮಾಧಿಮಾಡಲು ಸಿದ್ಧಪಡಿಸಿದರು. ಈಜಿಪ್ಟಿನವರು ಆ ಶರೀರವನ್ನು ವಿಶೇಷವಾದ ರೀತಿಯಲ್ಲಿ ನಲವತ್ತು ದಿನಗಳವರೆಗೆ ಸಿದ್ಧಪಡಿಸಿದರು. ಬಳಿಕ ಈಜಿಪ್ಟಿನವರು ಯಾಕೋಬನಿಗಾಗಿ ಎಪ್ಪತ್ತು ದಿನಗಳವರೆಗೆ ಗೋಳಾಡಿದರು.

ಎಪ್ಪತ್ತು ದಿನಗಳಾದ ಮೇಲೆ ಯೋಸೇಫನು ಫರೋಹನ ಅಧಿಕಾರಿಗಳಿಗೆ, “ದಯವಿಟ್ಟು ಇದನ್ನು ಫರೋಹನಿಗೆ ತಿಳಿಸಿರಿ. ‘ನನ್ನ ತಂದೆಯು ಸಾಯುವಾಗ ನಾನು ಅವನಿಗೆ ಒಂದು ಪ್ರಮಾಣವನ್ನು ಮಾಡಿದೆನು. ಕಾನಾನ್ ದೇಶದಲ್ಲಿ ಒಂದು ಗುಹೆಯನ್ನು ಅವನು ತನಗಾಗಿ ಸಿದ್ಧಪಡಿಸಿಕೊಂಡಿದ್ದಾನೆ. ಆದ್ದರಿಂದ, ನಾನು ಹೋಗಿ ನನ್ನ ತಂದೆಯನ್ನು ಸಮಾಧಿಮಾಡಿ ಮತ್ತೆ ಹಿಂತಿರುಗಿ ನಿಮ್ಮ ಬಳಿಗೆ ಬರಲು ದಯವಿಟ್ಟು ಅವಕಾಶ ಕೊಡಿ’ ಎಂದು ತಿಳಿಸಿರಿ” ಎಂಬುದಾಗಿ ಹೇಳಿದನು.

ಫರೋಹನು, “ನಿನ್ನ ಪ್ರಮಾಣವನ್ನು ಉಳಿಸಿಕೊ. ಹೋಗಿ ನಿನ್ನ ತಂದೆಯನ್ನು ಸಮಾಧಿಮಾಡು” ಎಂದು ಉತ್ತರಿಸಿದನು.

ಆದ್ದರಿಂದ ಯೋಸೇಫನು ತನ್ನ ತಂದೆಯನ್ನು ಸಮಾಧಿಮಾಡಲು ಹೋದನು. ಫರೋಹನ ಎಲ್ಲಾ ಅಧಿಕಾರಿಗಳು ಯೋಸೇಫನೊಂದಿಗೆ ಹೋದರು. ಫರೋಹನ ನಾಯಕರು ಮತ್ತು ಈಜಿಪ್ಟಿನ ಎಲ್ಲಾ ಹಿರಿಯರು ಯೋಸೇಫನೊಂದಿಗೆ ಹೋದರು. ಯೋಸೇಫನ ಕುಟುಂಬದಲ್ಲಿದ್ದ ಜನರು ಮತ್ತು ಅವನ ಸಹೋದರರು ಅವನೊಂದಿಗೆ ಹೋದರು. ಅವನ ತಂದೆಯ ಕುಟುಂಬದವರೆಲ್ಲ ಯೋಸೇಫನೊಂದಿಗೆ ಹೋದರು. (ಹೆಂಡತಿ, ಮಕ್ಕಳು ಮತ್ತು ಪ್ರಾಣಿಗಳು ಮಾತ್ರ ಗೋಷೆನ್ ಪ್ರಾಂತ್ಯದಲ್ಲಿ ಉಳಿದುಕೊಂಡರು.) ಗಂಡಸರು ಯೋಸೇಫನೊಂದಿಗೆ ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಹೋದರು. ಅದು ಬಹಳ ದೊಡ್ಡ ಗುಂಪಾಗಿತ್ತು.

10 ಅವರು ಗೋರೆನ್‌ಅಟಾದ್ ಎಂಬಲ್ಲಿಗೆ ಬಂದರು. ಅದು ಜೋರ್ಡನ್ ನದಿಯ ಪೂರ್ವದಲ್ಲಿತ್ತು. ಆ ಸ್ಥಳದಲ್ಲಿ ಅವರು ತುಂಬ ಸಮಯದವರೆಗೆ ಶೋಕಿಸಿದರು. ಆ ಶೋಕವು ಏಳು ದಿನಗಳವರೆಗೆ ಮುಂದುವರೆಯಿತು. 11 ಕಾನಾನಿನ ಜನರು ಗೋರೆನ್‌ಅಟಾದ್‌ನಲ್ಲಿ ಶೋಕಿಸುತ್ತಿರುವವರನ್ನು ನೋಡಿ, “ಈಜಿಪ್ಟಿನವರು ಬಹಳ ದುಃಖಕರವಾದ ಅಂತ್ಯಕ್ರಿಯೆ ಮಾಡುತ್ತಿದ್ದಾರೆ” ಎಂದು ಹೇಳಿದರು. ಆದ್ದರಿಂದ ಆ ಸ್ಥಳಕ್ಕೆ ಆಬೇಲ್ ಮಿಚ್ರಯೀಮ್ ಎಂದು ಹೆಸರಾಯಿತು.

12 ಹೀಗೆ ಯಾಕೋಬನ ಗಂಡುಮಕ್ಕಳು ತಮ್ಮ ತಂದೆಯ ಆಜ್ಞೆಯಂತೆ ಮಾಡಿದರು. 13 ಅವರು ಅವನ ಶರೀರವನ್ನು ಕಾನಾನ್ ದೇಶಕ್ಕೆ ತೆಗೆದುಕೊಂಡು ಹೋಗಿ ಮಕ್ಪೇಲದಲ್ಲಿದ್ದ ಗವಿಯಲ್ಲಿ ಸಮಾಧಿ ಮಾಡಿದರು. ಮಮ್ರೆಯ ಬಯಲಿನಲ್ಲಿದ್ದ ಈ ಗವಿಯನ್ನು ಅಬ್ರಹಾಮನು ಹಿತ್ತಿಯನಾದ ಎಫ್ರೋನನಿಂದ ಸಮಾಧಿಯ ಸ್ಥಳಕ್ಕಾಗಿ ಕೊಂಡುಕೊಂಡಿದ್ದನು. 14 ತಂದೆಯನ್ನು ಸಮಾಧಿ ಮಾಡಿದನಂತರ ಯೋಸೇಫನೂ ಅವನ ಅಣ್ಣತಮ್ಮಂದಿರೂ ಅವನ ತಂದೆಯ ಉತ್ತರಕ್ರಿಯೆಗಾಗಿ ಅವನೊಂದಿಗೆ ಹೋಗಿದ್ದವರೆಲ್ಲರೂ ಈಜಿಪ್ಟಿಗೆ ಹಿಂತಿರುಗಿದರು.

ಸಹೋದರರು ಯೋಸೇಫನಿಗೆ ಭಯಪಟ್ಟರು

15 ಯಾಕೋಬನು ಸತ್ತಮೇಲೆ, ಯೋಸೇಫನ ಸಹೋದರರು ಕಳವಳಗೊಂಡರು. ಅವರು “ನಾವು ಮಾಡಿದ ಕಾರ್ಯಕ್ಕೆ ಯೋಸೇಫನು ಇನ್ನು ಮೇಲೆ ನಮ್ಮನ್ನು ದ್ವೇಷಿಸುವನೇ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. 16 ಆದ್ದರಿಂದ ಸಹೋದರರು ಯೋಸೇಫನಿಗೆ ಈ ಸಂದೇಶವನ್ನು ಕಳುಹಿಸಿದರು: “ನಿನ್ನ ತಂದೆ ಸಾಯುವ ಮೊದಲು ನಮಗೆ ಆಜ್ಞಾಪಿಸಿದ್ದೇನೆಂದರೆ, 17 ನೀವು ಯೋಸೇಫನಿಗೆ, ಈ ಸಂದೇಶವನ್ನು ಕೊಡಬೇಕು, ‘ನಾವು ಮಾಡಿದ್ದು ಕೆಟ್ಟಕಾರ್ಯವೇ ನಿಜ. ಅದಕ್ಕಾಗಿ ನೀನು ಅವರನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ.’ ಆದ್ದರಿಂದ ನಾವು ಮಾಡಿದ ಕೆಟ್ಟಕಾರ್ಯಕ್ಕಾಗಿ ನೀನು ನಮ್ಮನ್ನು ಕ್ಷಮಿಸಬೇಕು. ನಾವು ನಿನ್ನ ತಂದೆಯ ದೇವರಿಗೆ ಸೇವಕರಾಗಿದ್ದೇವೆ” ಎಂದು ಹೇಳಿದರು.

ಈ ವಿಷಯಗಳನ್ನು ಕೇಳಿ ಅವನು ದುಃಖದಿಂದ ಅತ್ತನು. 18 ಸಹೋದರರು ಯೋಸೇಫನ ಬಳಿಗೆ ಹೋಗಿ ಅವನ ಮುಂದೆ ಅಡ್ಡಬಿದ್ದು, “ನಾವು ನಿನ್ನ ಸೇವಕರಾಗಿದ್ದೇವೆ” ಎಂದು ಹೇಳಿದರು.

19 ಆಗ ಯೋಸೇಫನು ಅವರಿಗೆ, “ಭಯಪಡಬೇಡಿ. ನಾನು ದೇವರಲ್ಲ; ನಿಮ್ಮನ್ನು ಶಿಕ್ಷಿಸಲು ನನಗೆ ಅಧಿಕಾರವಿಲ್ಲ. 20 ನೀವು ನನಗೆ ಕೇಡುಮಾಡಲು ಯೋಚಿಸಿದಿರಿ. ಆದರೆ ದೇವರು ಒಳ್ಳೆಯದನ್ನೇ ಮಾಡಿದನು. ಬಹಳ ಜನರ ಪ್ರಾಣವನ್ನು ಉಳಿಸುವುದಕ್ಕಾಗಿ ನನ್ನನ್ನು ಬಳಸಿಕೊಳ್ಳುವುದು ದೇವರ ಯೋಜನೆಯಾಗಿತ್ತು. ಈಗಲೂ ಆತನದು ಅದೇ ಯೋಜನೆ. 21 ಆದ್ದರಿಂದ ಭಯಪಡದಿರಿ. ನಾನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಪೋಷಿಸುತ್ತೇನೆ” ಎಂದು ಹೇಳಿದನು. ಯೋಸೇಫನು ತನ್ನ ಸಹೋದರರೊಂದಿಗೆ ಸೌಮ್ಯವಾಗಿ ಮಾತನಾಡಿದ್ದರಿಂದ ಅವರಿಗೆ ತುಂಬ ಸಂತೋಷವಾಯಿತು.

22 ಯೋಸೇಫನು ತನ್ನ ತಂದೆಯ ಕುಟುಂಬದವರೊಂದಿಗೆ ಈಜಿಪ್ಟಿನಲ್ಲೇ ವಾಸವಾಗಿದ್ದನು. ಯೋಸೇಫನು ತನ್ನ ನೂರಹತ್ತನೆಯ ವರ್ಷದಲ್ಲಿ ತೀರಿಕೊಂಡನು. 23 ಯೋಸೇಫನು ಜೀವದಿಂದಿದ್ದ ಕಾಲದಲ್ಲಿ, ಎಫ್ರಾಯೀಮನು ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದನು. ಅವನ ಮಗನಾದ ಮನಸ್ಸೆಗೆ ಮಾಕೀರನೆಂಬ ಗಂಡುಮಗನು ಹುಟ್ಟಿದನು. ಯೋಸೇಫನು ಮಾಕೀರನ ಮಕ್ಕಳನ್ನೂ ನೋಡಿದನು.

24 ಯೋಸೇಫನಿಗೆ ಸಾವು ಸಮೀಪಿಸಿದಾಗ ಅವನು ತನ್ನ ಸಹೋದರರಿಗೆ, “ನಾನು ಸಾಯುವ ಕಾಲ ಸಮೀಪಿಸಿದೆ. ಆದರೆ ನಿಮ್ಮನ್ನು ಪೋಷಿಸುವವನು ದೇವರೆಂಬುದು ನಿಮಗೆ ತಿಳಿದಿರಲಿ. ಆತನು ಈ ದೇಶದಿಂದ ನಿಮ್ಮನ್ನು ಕರೆದುಕೊಂಡು ಹೋಗಿ ಅಬ್ರಹಾಮನಿಗೂ ಇಸಾಕನಿಗೂ ಮತ್ತು ಯಾಕೋಬನಿಗೂ ವಾಗ್ದಾನ ಮಾಡಿದ್ದ ದೇಶವನ್ನು ಕೊಡುವನು” ಎಂದು ಹೇಳಿದನು.

25 ಅಲ್ಲದೆ ಯೋಸೇಫನು ತನ್ನ ಸಹೋದರರಿಗೆ, “ದೇವರು ನಿಮ್ಮನ್ನು ಈ ದೇಶದಿಂದ ಹೊರಗೆ ನಡೆಸಿದಾಗ ನನ್ನ ಮೂಳೆಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗುವಿರೆಂದು ಪ್ರಮಾಣ ಮಾಡಿ” ಎಂದು ಹೇಳಿ ಅವರಿಂದ ಪ್ರಮಾಣ ಮಾಡಿಸಿಕೊಂಡನು.

26 ಯೋಸೇಫನು ತನ್ನ ನೂರಹತ್ತನೆ ವರ್ಷದಲ್ಲಿ ತೀರಿಕೊಂಡನು. ಈಜಿಪ್ಟಿನಲ್ಲಿ ವೈದ್ಯರು ಅವನ ಶರೀರವನ್ನು ಸಮಾಧಿಗೆ ಸಿದ್ಧಪಡಿಸಿ ಶವಪೆಟ್ಟಿಗೆಯಲ್ಲಿಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International