Beginning
ಯಾಕೋಬನು ಬೆನ್ಯಾಮೀನನನ್ನು ಈಜಿಪ್ಟಿಗೆ ಕಳುಹಿಸಲು ಒಪ್ಪಿದ್ದು
43 ಬರಗಾಲವು ದೇಶದಲ್ಲಿ ತುಂಬ ಭೀಕರವಾಗಿತ್ತು. 2 ಅವರು ಈಜಿಪ್ಟಿನಿಂದ ತಂದಿದ್ದ ದವಸಧಾನ್ಯಗಳನ್ನೆಲ್ಲ ಊಟ ಮಾಡಿದರು. ದವಸಧಾನ್ಯಗಳು ಮುಗಿದು ಹೋದಾಗ ಯಾಕೋಬನು, ತನ್ನ ಗಂಡುಮಕ್ಕಳಿಗೆ, “ಈಜಿಪ್ಟಿಗೆ ಮತ್ತೆ ಹೋಗಿ ನಮಗೆ ಊಟಕ್ಕೆ ದವಸಧಾನ್ಯಗಳನ್ನು ಕೊಂಡುಕೊಂಡು ಬನ್ನಿ” ಎಂದು ಹೇಳಿದನು.
3 ಯೆಹೂದನು ಯಾಕೋಬನಿಗೆ, “ಆ ದೇಶದ ರಾಜ್ಯಪಾಲನು ನಮಗೆ ಎಚ್ಚರಿಕೆ ಕೊಟ್ಟಿದ್ದಾನೆ. ಅವನು, ‘ನೀವು ನಿಮ್ಮ ಸಹೋದರನನ್ನು ನನ್ನ ಬಳಿಗೆ ಕರೆದುಕೊಂಡು ಬಾರದೆ ನನ್ನನ್ನು ಭೇಟಿಯಾಗಕೂಡದು’ ಎಂದು ಹೇಳಿದ್ದಾನೆ. 4 ನೀನು ನಮ್ಮೊಡನೆ ಬೆನ್ಯಾಮೀನನನ್ನು ಕಳುಹಿಸಿದರೆ, ನಾವು ಹೋಗಿ ದವಸಧಾನ್ಯಗಳನ್ನು ಕೊಂಡುಕೊಂಡು ಬರುವೆವು. 5 ಆದರೆ ಬೆನ್ಯಾಮೀನನನ್ನು ಕಳುಹಿಸದಿದ್ದರೆ, ನಾವು ಹೋಗುವುದಿಲ್ಲ; ಆ ಮನುಷ್ಯನು ನಮಗೆ ಬೆನ್ಯಾಮೀನನಿಲ್ಲದೆ ಬರಕೂಡದೆಂದು ಎಚ್ಚರಿಕೆ ಕೊಟ್ಟಿದ್ದಾನೆ” ಅಂದನು.
6 ಇಸ್ರೇಲನು, “ನಿಮಗೆ ಮತ್ತೊಬ್ಬ ಸಹೋದರನಿರುವುದಾಗಿ ನೀವು ಆ ಮನುಷ್ಯನಿಗೆ ಯಾಕೆ ಹೇಳಿದಿರಿ? ನೀವು ಅಂಥ ಕೆಟ್ಟದ್ದನ್ನು ಯಾಕೆ ಮಾಡಿದಿರಿ?” ಎಂದು ಕೇಳಿದನು.
7 ಸಹೋದರರು, “ಆ ಮನುಷ್ಯನು ನಮ್ಮ ವಿಷಯವಾಗಿಯೂ ನಮ್ಮ ಕುಟುಂಬದ ವಿಷಯವಾಗಿಯೂ ತಿಳಿದುಕೊಳ್ಳಲು ಸೂಕ್ಷ್ಮವಾಗಿ ಪ್ರಶ್ನೆಗಳನ್ನು ಕೇಳಿದನು. ಅವನು ನಮಗೆ, ‘ನಿಮ್ಮ ತಂದೆಯು ಇನ್ನೂ ಜೀವಂತವಾಗಿರುವನೇ? ನಿಮಗೆ ಮನೆಯಲ್ಲಿ ಮತ್ತೊಬ್ಬ ಸಹೋದರನಿರುವನೇ?’ ಎಂದು ಕೇಳಿದನು. ನಾವು ಅವನ ಪ್ರಶ್ನೆಗಳಿಗೆ ಮಾತ್ರ ಉತ್ತರಕೊಟ್ಟೆವು. ನಮ್ಮ ಸಹೋದರನನ್ನು ತನ್ನ ಬಳಿಗೆ ಕರೆದುಕೊಂಡು ಬರಬೇಕೆಂದು ಅವನು ಹೇಳುತ್ತಾನೆಂದು ನಮಗೆ ತಿಳಿದಿರಲಿಲ್ಲ” ಎಂದು ಹೇಳಿದರು.
8 ಆಮೇಲೆ ಯೆಹೂದನು ತನ್ನ ತಂದೆಯಾದ ಇಸ್ರೇಲನಿಗೆ, “ನನ್ನೊಂದಿಗೆ ಬೆನ್ಯಾಮೀನನನ್ನು ಕಳುಹಿಸಿಕೊಡು. ನಾನು ಅವನನ್ನು ನೋಡಿಕೊಳ್ಳುವೆನು. ನಾವು ಈಜಿಪ್ಟಿಗೆ ಹೋಗಿ ಆಹಾರವನ್ನು ತರಬೇಕು. ಇಲ್ಲವಾದರೆ ನಾವೂ ಸಾಯುವೆವು, ನಮ್ಮ ಮಕ್ಕಳೂ ಸಾಯುವರು. 9 ಅವನು ಸುರಕ್ಷಿತವಾಗಿರುವಂತೆ ನಾನು ನೋಡಿಕೊಳ್ಳುವೆನು. ನಾನು ಅವನಿಗೆ ಜವಾಬ್ದಾರನಾಗಿರುತ್ತೇನೆ. ನಾನು ಅವನನ್ನು ನಿನ್ನ ಬಳಿಗೆ ಮತ್ತೆ ಕರೆದುಕೊಂಡು ಬರದಿದ್ದರೆ, ನೀನು ಸದಾಕಾಲ ನನ್ನನ್ನು ದೂಷಿಸಬಹುದು. 10 ಮೊದಲೇ ನೀನು ನಮ್ಮನ್ನು ಕಳುಹಿಸಿಕೊಟ್ಟಿದ್ದರೆ, ಈಗಾಗಲೇ ಎರಡು ಸಲ ಆಹಾರವನ್ನು ತೆಗೆದುಕೊಂಡು ಬರಬಹುದಾಗಿತ್ತು” ಎಂದು ಹೇಳಿದನು.
11 ಅದಕ್ಕೆ ಅವರ ತಂದೆಯಾದ ಇಸ್ರೇಲನು, “ಇದು ನಿಜವಾಗಿಯೂ ಸತ್ಯವಾಗಿದ್ದರೆ, ನಿನ್ನೊಂದಿಗೆ ಬೆನ್ಯಾಮೀನನನ್ನು ಕರೆದುಕೊಂಡು ಹೋಗು. ಆದರೆ ರಾಜ್ಯಪಾಲನಿಗೆ ಶ್ರೇಷ್ಠವಾದ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ಹೋಗಿ. ನಮ್ಮ ನಾಡಿನಲ್ಲಿ ದೊರಕುವ ಜೇನು, ಆಕ್ರೋಡು, ಬಾದಾಮಿ, ಹಾಲುಮಡ್ಡಿ ಮತ್ತು ಗೋಲರಸ ಇವುಗಳನ್ನು ತೆಗೆದುಕೊಳ್ಳಿ. 12 ಈ ಸಲ ಎರಡರಷ್ಟು ಹಣವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಕಳೆದ ಸಲ ನೀವು ಪಾವತಿ ಮಾಡಿದ್ದರೂ ಹಿಂತಿರುಗಿಸಲಾದ ಹಣವನ್ನು ತೆಗೆದುಕೊಂಡು ಹೋಗಿ. ಒಂದುವೇಳೆ ರಾಜ್ಯಪಾಲನು ತಪ್ಪು ಮಾಡಿದ್ದಿರಬೇಕು. 13 ಬೆನ್ಯಾಮೀನನನ್ನು ಕರೆದುಕೊಂಡು ಆ ಮನುಷ್ಯನ ಬಳಿಗೆ ಹಿಂತಿರುಗಿ ಹೋಗಿರಿ. 14 ನೀವು ರಾಜ್ಯಪಾಲನ ಮುಂದೆ ನಿಂತುಕೊಂಡಾಗ ಸರ್ವಶಕ್ತನಾದ ದೇವರು ನಿಮಗೆ ಸಹಾಯ ಮಾಡುವಂತೆ ನಾನು ಪ್ರಾರ್ಥಿಸುತ್ತೇನೆ. ಬೆನ್ಯಾಮೀನನನ್ನೂ ಸಿಮೆಯೋನನನ್ನೂ ಕಳುಹಿಸಿಕೊಡುವಂತೆ ಮತ್ತು ನೀವು ಸುರಕ್ಷಿತವಾಗಿ ಮರಳಿಬರುವಂತೆ ನಾನು ಪ್ರಾರ್ಥಿಸುತ್ತೇನೆ. ಇಲ್ಲವಾದರೆ, ನನ್ನ ಮಗನನ್ನು ಕಳೆದುಕೊಂಡು ನಾನು ಮತ್ತೆ ದುಃಖಿತನಾಗುವೆ” ಎಂದು ಹೇಳಿದನು.
15 ಆದ್ದರಿಂದ ಸಹೋದರರು ರಾಜ್ಯಪಾಲನಿಗೆ ಕೊಡಲು ಉಡುಗೊರೆಗಳನ್ನು ತೆಗೆದುಕೊಂಡರು; ಮೊದಲನೆ ಸಲ ತೆಗೆದುಕೊಂಡು ಹೋಗಿದ್ದ ಹಣಕ್ಕಿಂತ ಎರಡರಷ್ಟು ಹೆಚ್ಚಾಗಿ ತೆಗೆದುಕೊಂಡರು. ಬೆನ್ಯಾಮೀನನು ಸಹೋದರರೊಂದಿಗೆ ಈಜಿಪ್ಟಿಗೆ ಹೋದನು.
ಯೋಸೇಫನು ಸಹೋದರರನ್ನು ಮನೆಗೆ ಆಹ್ವಾನಿಸಿದ್ದು
16 ಸಹೋದರರೊಂದಿಗೆ ಬೆನ್ಯಾಮೀನನು ಇರುವುದನ್ನು ಕಂಡ ಯೋಸೇಫನು ತನ್ನ ಸೇವಕನಿಗೆ, “ಈ ಜನರನ್ನು ನನ್ನ ಮನೆಯೊಳಗೆ ಕರೆದುಕೊಂಡು ಹೋಗು; ಕುರಿಯನ್ನು ಕೊಯ್ದು ಅಡಿಗೆ ಮಾಡು. ಈ ಜನರು ಈ ಹೊತ್ತು ಮಧ್ಯಾಹ್ನ ನನ್ನೊಂದಿಗೆ ಊಟಮಾಡುವರು” ಎಂದು ಹೇಳಿದನು. 17 ಅಂತೆಯೇ ಆ ಸೇವಕನು ಸಹೋದರರನ್ನು ಮನೆಯೊಳಗೆ ಕರೆದುಕೊಂಡು ಹೋದನು.
18 ಆಗ ಸಹೋದರರಿಗೆ ಭಯವಾಯಿತು. ಅವರು, “ಕಳೆದ ಸಲ ನಮ್ಮ ಚೀಲಗಳಿಗೆ ಮತ್ತೆ ಹಾಕಿದ್ದ ಹಣದ ಕಾರಣದಿಂದಾಗಿ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ನಮ್ಮನ್ನು ತಪ್ಪಿತಸ್ಥರೆಂದು ನಿರ್ಣಯಿಸಿ ನಮ್ಮ ಕತ್ತೆಗಳನ್ನು ವಶಮಾಡಿಕೊಳ್ಳುವರು; ನಮ್ಮನ್ನೂ ಗುಲಾಮರನ್ನಾಗಿ ಮಾಡಿಕೊಳ್ಳುವರು” ಎಂದು ಮಾತಾಡಿಕೊಂಡರು.
19 ಆದ್ದರಿಂದ ಸಹೋದರರು ಯೋಸೇಫನ ಮನೆಯ ಮೇಲ್ವಿಚಾರಕನಾದ ಸೇವಕನ ಬಳಿಗೆ ಹೋಗಿ ಪ್ರವೇಶದ್ವಾರದ ಬಳಿಯಲ್ಲಿ ಅವನೊಂದಿಗೆ ಮಾತಾಡಿದರು. 20 ಅವರು, “ಸ್ವಾಮೀ, ನಾವು ಪ್ರಮಾಣಮಾಡಿ ಹೇಳುತ್ತೇವೆ. ಇದು ಸತ್ಯ. ಕಳೆದ ಸಲ ನಾವು ಆಹಾರವನ್ನು ಕೊಂಡುಕೊಳ್ಳಲು ಬಂದಿದ್ದೆವು. 21-22 ಮನೆಗೆ ಹೋಗುವಾಗ ದಾರಿಯಲ್ಲಿ ನಾವು ನಮ್ಮ ಚೀಲಗಳನ್ನು ಬಿಚ್ಚಿದಾಗ ಪ್ರತಿಯೊಂದು ಚೀಲದಲ್ಲಿಯೂ ನಾವು ಪಾವತಿಮಾಡಿದ್ದ ಹಣವನ್ನು ಕಂಡೆವು. ಆ ಹಣವು ಅಲ್ಲಿಗೆ ಹೇಗೆ ಬಂತೋ ನಮಗೆ ಗೊತ್ತಿಲ್ಲ. ಆದರೆ ಆ ಹಣವನ್ನು ನಿಮಗೆ ಕೊಡುವುದಕ್ಕಾಗಿ ನಮ್ಮೊಂದಿಗೆ ತೆಗೆದುಕೊಂಡು ಬಂದಿದ್ದೇವೆ. ಈ ಸಲ ನಾವು ಖರೀದಿ ಮಾಡಬೇಕೆಂದಿರುವ ಆಹಾರಕ್ಕೆ ಕೊಡಲು ಹೆಚ್ಚು ಹಣವನ್ನು ತಂದಿದ್ದೇವೆ” ಎಂದು ಹೇಳಿದರು.
23 ಅದಕ್ಕೆ ಸೇವಕನು, “ಭಯಪಡಬೇಡಿ, ಚಿಂತಿಸಬೇಡಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ಹಣವನ್ನು ಉಡುಗೊರೆಯಾಗಿ ನಿಮ್ಮ ಚೀಲಗಳಲ್ಲಿ ಇಟ್ಟಿದ್ದಿರಬೇಕು. ಕಳೆದ ಸಲ ನೀವು ದವಸಧಾನ್ಯಗಳಿಗಾಗಿ ಹಣ ಪಾವತಿ ಮಾಡಿದ್ದು ನನಗೆ ನೆನಪಿದೆ” ಎಂದು ಹೇಳಿದನು.
ಬಳಿಕ ಆ ಸೇವಕನು ಸಿಮೆಯೋನನನ್ನು ಸೆರೆಮನೆಯಿಂದ ಕರೆತಂದನು. 24 ಸೇವಕನು ಅವರನ್ನು ಯೋಸೇಫನ ಮನೆಯೊಳಗೆ ಕರೆದುಕೊಂಡು ಹೋಗಿ ಅವರಿಗೆ ನೀರನ್ನು ಕೊಟ್ಟನು. ಅವರು ತಮ್ಮ ಕಾಲುಗಳನ್ನು ತೊಳೆದುಕೊಂಡರು. ಬಳಿಕ ಅವನು ಅವರ ಕತ್ತೆಗಳಿಗೆ ಆಹಾರವನ್ನು ಹಾಕಿದನು.
25 ತಾವು ಯೋಸೇಫನೊಂದಿಗೆ ಊಟ ಮಾಡುವುದಾಗಿ ಸಹೋದರರಿಗೆ ತಿಳಿಯಿತು. ಆದ್ದರಿಂದ ಅವರು ಅವನಿಗೆ ಕೊಡಲು ತಮ್ಮ ಉಡುಗೊರೆಗಳನ್ನು ಮಧ್ಯಾಹ್ನದವರೆಗೆ ಸಿದ್ಧಪಡಿಸಿದರು.
26 ಯೋಸೇಫನು ಮನೆಗೆ ಬಂದಾಗ, ಸಹೋದರರು ತಾವು ತಂದಿದ್ದ ಉಡುಗೊರೆಗಳನ್ನು ಅವನಿಗೆ ಕೊಟ್ಟರು. ಬಳಿಕ ಅವರು ನೆಲದವರೆಗೆ ಬಾಗಿ ನಮಸ್ಕರಿಸಿದರು.
27 ಯೋಸೇಫನು ಅವರ ಯೋಗಕ್ಷೇಮವನ್ನು ವಿಚಾರಿಸಿದನು. ಯೋಸೇಫನು “ನೀವು ನನಗೆ ತಿಳಿಸಿದ ನಿಮ್ಮ ವೃದ್ಧನಾದ ತಂದೆ ಕ್ಷೇಮವಾಗಿದ್ದಾನೆಯೇ? ಇನ್ನೂ ಜೀವಂತವಾಗಿರುವನೇ?” ಎಂದು ಕೇಳಿದನು.
28 ಸಹೋದರರು, “ಸ್ವಾಮೀ, ನಮ್ಮ ತಂದೆ ಕ್ಷೇಮವಾಗಿದ್ದಾನೆ. ಅವನು ಇನ್ನೂ ಜೀವಂತವಾಗಿದ್ದಾನೆ” ಎಂದು ಹೇಳಿದನು. ಬಳಿಕ ಅವರು ಮತ್ತೆ ಯೋಸೇಫನಿಗೆ ಅಡ್ಡಬಿದ್ದರು.
29 ಬಳಿಕ ಯೋಸೇಫನು ತನ್ನ ಸಹೋದರನಾದ ಬೆನ್ಯಾಮೀನನನ್ನು ನೋಡಿದನು. (ಬೆನ್ಯಾಮೀನ ಮತ್ತು ಯೋಸೇಫ ಒಂದೇ ತಾಯಿಯ ಮಕ್ಕಳು.) ಯೋಸೇಫನು, “ನೀವು ನನಗೆ ತಿಳಿಸಿದ ನಿಮ್ಮ ಕಿರಿಯ ತಮ್ಮನು ಇವನೋ?” ಎಂದು ಕೇಳಿದನು. ಆಮೇಲೆ ಯೋಸೇಫನು ಬೆನ್ಯಾಮೀನನಿಗೆ “ಮಗನೇ, ದೇವರು ನಿನಗೆ ಒಳ್ಳೆಯದನ್ನು ಮಾಡಲಿ” ಎಂದು ಹೇಳಿದನು.
30 ಯೋಸೇಫನು ತನ್ನ ತಮ್ಮನಾದ ಬೆನ್ಯಾಮೀನನನ್ನು ಬಹಳವಾಗಿ ಪ್ರೀತಿಸುತ್ತಿದ್ದ ಕಾರಣ ಆನಂದದಿಂದ ಅವನ ಕಣ್ಣಲ್ಲಿ ನೀರು ಉಕ್ಕೇರಿ ಬಂದದ್ದರಿಂದ ಕೋಣೆಯೊಳಗೆ ಹೋಗಿ ಕಣ್ಣೀರಿಟ್ಟನು. 31 ಬಳಿಕ ಯೋಸೇಫನು ತನ್ನ ಮುಖವನ್ನು ತೊಳೆದುಕೊಂಡು ಮತ್ತು ಮನಸ್ಸನ್ನು ಬಿಗಿಹಿಡಿದುಕೊಂಡು ಬಂದು, “ಊಟ ಬಡಿಸಿರಿ” ಎಂದು ಅಪ್ಪಣೆಕೊಟ್ಟನು.
32 ಯೋಸೇಫನೊಬ್ಬನೇ ಒಂದು ಮೇಜಿನಲ್ಲಿ ಊಟ ಮಾಡಿದನು. ಅವನ ಸಹೋದರರು ಒಟ್ಟಾಗಿ ಮತ್ತೊಂದು ಮೇಜಿನಲ್ಲಿ ಊಟ ಮಾಡಿದರು. ಈಜಿಪ್ಟಿನವರು ಬೇರೊಂದು ಮೇಜಿನಲ್ಲಿ ಊಟ ಮಾಡಿದರು. ಇಬ್ರಿಯ ಜನರೊಂದಿಗೆ ಊಟ ಮಾಡುವುದು ತಪ್ಪೆಂಬುದು ಅವರ ನಂಬಿಕೆಯಾಗಿತ್ತು. 33 ಯೋಸೇಫನ ಎದುರಿನ ಸಾಲಿನಲ್ಲಿ ಕುಳಿತುಕೊಳ್ಳಲು ಯೋಸೇಫನ ಸಹೋದರರಿಗೆ ಹಿರಿಯವನಿಂದ ಮೊದಲುಗೊಂಡು ಕಿರಿಯವನವರೆಗೆ ಕ್ರಮವಾಗಿ ಸ್ಥಳವನ್ನು ಗೊತ್ತುಪಡಿಸಲಾಗಿತ್ತು. ಆದ್ದರಿಂದ ಸಹೋದರರೆಲ್ಲಾ ಅತ್ಯಾಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡತೊಡಗಿದರು. 34 ಸೇವಕರು ಯೋಸೇಫನ ಮೇಜಿನಿಂದ ಊಟವನ್ನು ತೆಗೆದುಕೊಂಡು ಅವರಿಗೆ ಬಡಿಸುತ್ತಿದ್ದರು. ಆದರೆ ಸೇವಕರು ಬೆನ್ಯಾಮೀನನಿಗೆ ಬೇರೆಯವರಿಗಿಂತ ಐದರಷ್ಟು ಹೆಚ್ಚಾಗಿ ಕೊಟ್ಟರು. ಸಹೋದರರು ಯಥೇಚ್ಛವಾಗಿ ಊಟ ಮಾಡಿದರು.
ಯೋಸೇಫನ ಸಂಚು
44 ಬಳಿಕ ಯೋಸೇಫನು ತನ್ನ ಸೇವಕನಿಗೆ ಆಜ್ಞೆಮಾಡಿದನು. ಯೋಸೇಫನು, “ಈ ಜನರು ತೆಗೆದುಕೊಂಡು ಹೋಗಬಹುದಾದಷ್ಟು ದವಸಧಾನ್ಯಗಳನ್ನು ಇವರ ಚೀಲಗಳಲ್ಲಿ ತುಂಬಿ ಪ್ರತಿಯೊಬ್ಬನ ಹಣವನ್ನೂ ಧಾನ್ಯದೊಂದಿಗೆ ಚೀಲದಲ್ಲಿಡು. 2 ಕಿರಿಯ ಸಹೋದರನ ಚೀಲದಲ್ಲಿಯೂ ಹಣವನ್ನು ಇಡು. ಅಲ್ಲದೆ ನನ್ನ ವಿಶೇಷವಾದ ಬೆಳ್ಳಿ ಬಟ್ಟಲನ್ನು ಸಹ ಅವನ ಚೀಲದಲ್ಲಿಡು” ಎಂದು ಆಜ್ಞಾಪಿಸಿದನು. ಅಂತೆಯೇ ಸೇವಕನು ಮಾಡಿದನು.
3 ಮರುದಿನ ಮುಂಜಾನೆ ಸಹೋದರರನ್ನು ಮತ್ತು ಅವರ ಕತ್ತೆಗಳನ್ನು ಅವರ ದೇಶಕ್ಕೆ ಮರಳಿ ಕಳುಹಿಸಲಾಯಿತು. 4 ಅವರು ನಗರವನ್ನು ಬಿಟ್ಟುಹೋದ ಮೇಲೆ, ಯೋಸೇಫನು ತನ್ನ ಸೇವಕನಿಗೆ, “ಹೋಗು, ಆ ಜನರನ್ನು ಹಿಂಬಾಲಿಸು. ಅವರನ್ನು ತಡೆದು ಅವರಿಗೆ, ‘ನಾವು ನಿಮಗೆ ಒಳ್ಳೆಯವರಾಗಿದ್ದೆವು; ಆದರೆ ನೀವು ನಮಗೇಕೆ ಕೆಟ್ಟದ್ದನ್ನು ಮಾಡಿದಿರಿ? ನನ್ನ ಒಡೆಯನ ಬೆಳ್ಳಿ ಬಟ್ಟಲನ್ನು ನೀವೇಕೆ ಕದ್ದುಕೊಂಡು ಬಂದಿರಿ? 5 ಈ ಬಟ್ಟಲಿನಲ್ಲಿ ನನ್ನ ಒಡೆಯನು ಕುಡಿಯುತ್ತಾನೆ. ದೇವರಿಗೆ ಪ್ರಶ್ನೆಗಳನ್ನು ಕೇಳಲು ಅವನು ಈ ಬಟ್ಟಲನ್ನೇ ಉಪಯೋಗಿಸುವನು. ನೀವು ಅವನ ಬಟ್ಟಲನ್ನು ಕದ್ದುಕೊಂಡು ತಪ್ಪುಮಾಡಿದಿರಿ’ ಎಂದು ಹೇಳು” ಎಂಬುದಾಗಿ ತಿಳಿಸಿದನು.
6 ಅಂತೆಯೇ ಸೇವಕನು ಸಹೋದರರನ್ನು ಹಿಂಬಾಲಿಸಿ ಅವರನ್ನು ತಡೆದು ನಿಲ್ಲಿಸಿದನು. ಯೋಸೇಫನು ಹೇಳಿದಂತೆಯೇ ಅವನು ಅವರಿಗೆ ಹೇಳಿದನು.
7 ಆದರೆ ಸಹೋದರರು ಸೇವಕನಿಗೆ, “ರಾಜ್ಯಪಾಲನು ಈ ರೀತಿ ಹೇಳುವುದೇಕೆ? ನಾವು ಇಂಥಾ ಕೃತ್ಯವನ್ನು ಮಾಡಿಲ್ಲ. 8 ಮೊದಲು ನಮ್ಮ ಚೀಲಗಳಲ್ಲಿ ಸಿಕ್ಕಿದ ಹಣವನ್ನು ನಾವು ಕಾನಾನ್ ದೇಶದಿಂದ ಮತ್ತೆ ತಂದುಕೊಟ್ಟೆವು. ಆದ್ದರಿಂದ ಖಂಡಿತವಾಗಿ ನಾವು ನಿನ್ನ ಒಡೆಯನ ಮನೆಯಿಂದ ಬೆಳ್ಳಿಯನ್ನಾಗಲಿ ಬಂಗಾರವನ್ನಾಗಲಿ ಕದ್ದುಕೊಂಡಿಲ್ಲ. 9 ನೀನು ಬೆಳ್ಳಿಯ ಬಟ್ಟಲನ್ನು ನಮ್ಮ ಯಾರ ಚೀಲಗಳಲ್ಲಿ ಕಂಡರೂ, ಆ ವ್ಯಕ್ತಿಯು ಸಾಯಲಿ, ನೀನು ಅವನನ್ನು ಕೊಲ್ಲಬಹುದು; ನಾವು ನಿನ್ನ ಗುಲಾಮರಾಗಿರುವೆವು” ಎಂದು ಹೇಳಿದರು.
10 ಕನು, “ನೀವು ಹೇಳಿದಂತೆಯೇ ಆಗಲಿ. ಆದರೆ ನಾನು ಅವನನ್ನು ಕೊಲ್ಲುವುದಿಲ್ಲ. ಯಾರಲ್ಲಿ ಬೆಳ್ಳಿಯ ಬಟ್ಟಲು ಸಿಕ್ಕುತ್ತದೊ ಅವನು ನನ್ನ ಗುಲಾಮನಾಗಿರಬೇಕು; ಉಳಿದವರು ಹೋಗಬಹುದು” ಎಂದು ಹೇಳಿದನು.
ಸಂಚಿನಲ್ಲಿ ಬೆನ್ಯಾಮೀನನು ಸಿಕ್ಕಿಕೊಂಡದ್ದು
11 ಬಳಿಕ ಅವರು ಅವಸರದಿಂದ ತಮ್ಮ ಚೀಲಗಳನ್ನು ನೆಲದ ಮೇಲಿಟ್ಟು ಬಿಚ್ಚಿದರು. 12 ಸೇವಕನು ಚೀಲಗಳನ್ನು ಪರೀಕ್ಷಿಸಲು ಹಿರಿಯ ಸಹೋದರನಿಂದ ಆರಂಭಿಸಿ, ಕಿರಿಯವನಾದ ಬೆನ್ಯಾಮೀನನ ಚೀಲದಲ್ಲಿ ಆ ಬೆಳ್ಳಿಯ ಬಟ್ಟಲನ್ನು ಕಂಡುಕೊಂಡನು. 13 ಸಹೋದರರು ತುಂಬ ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡು ತಮ್ಮ ಚೀಲಗಳನ್ನು ಮತ್ತೆ ಕತ್ತೆಗಳ ಮೇಲೇರಿಸಿಕೊಂಡು ನಗರಕ್ಕೆ ಹಿಂತಿರುಗಿದರು.
14 ಯೆಹೂದ ಮತ್ತು ಅವನ ಸಹೋದರರು ಯೋಸೇಫನ ಮನೆಗೆ ಹಿಂತಿರುಗಿದಾಗ ಯೋಸೇಫನು ಇನ್ನೂ ಅಲ್ಲೇ ಇದ್ದನು. ಸಹೋದರರು ನೆಲದ ಮೇಲೆ ಬಿದ್ದು ತಲೆಬಾಗಿ ನಮಸ್ಕರಿಸಿದರು. 15 ಯೋಸೇಫನು ಅವರಿಗೆ, “ನೀವು ಹೀಗೇಕೆ ಮಾಡಿದಿರಿ? ನಾನು ಶಕುನ ನೋಡಿ ರಹಸ್ಯಗಳನ್ನು ತಿಳಿದುಕೊಳ್ಳಬಲ್ಲೆನೆಂಬುದು ನಿಮಗೆ ಗೊತ್ತಿರಲಿಲ್ಲವೇ?” ಎಂದು ಕೇಳಿದನು.
16 ಯೆಹೂದನು, “ಸ್ವಾಮಿ, ನಾವು ಹೇಳುವಂಥದ್ದು ಏನೂ ಇಲ್ಲ; ವಿವರಿಸಲು ಯಾವ ದಾರಿಯೂ ಇಲ್ಲ; ನಾವು ತಪ್ಪಿತಸ್ಥರಲ್ಲವೆಂದು ತೋರಿಸಲು ಯಾವ ಮಾರ್ಗವೂ ಇಲ್ಲ. ನಾವು ಮಾಡಿದ ಬೇರೊಂದು ಕಾರ್ಯದ ನಿಮಿತ್ತ ದೇವರು ನಮ್ಮನ್ನು ತಪ್ಪಿತಸ್ಥರೆಂದು ನಿರ್ಣಯಿಸಿದ್ದಾನೆ. ಆದ್ದರಿಂದ ನಾವೆಲ್ಲರೂ ಬೆನ್ಯಾಮೀನನೂ ನಿನಗೆ ಗುಲಾಮರಾಗಿರುವೆವು” ಎಂದು ಹೇಳಿದನು.
17 ಆದರೆ ಯೋಸೇಫನು, “ನಾನು ನಿಮ್ಮೆಲ್ಲರನ್ನು ಗುಲಾಮರನ್ನಾಗಿ ಮಾಡುವುದಿಲ್ಲ; ಬಟ್ಟಲನ್ನು ಕದ್ದುಕೊಂಡವನು ಮಾತ್ರ ನನ್ನ ಗುಲಾಮನಾಗಿರಬೇಕು; ಉಳಿದ ನೀವೆಲ್ಲರೂ ನಿಮ್ಮ ತಂದೆಯ ಬಳಿಗೆ ಸಮಾಧಾನದಿಂದ ಹೋಗಬಹುದು” ಎಂದು ಹೇಳಿದನು.
ಬೆನ್ಯಾಮೀನನಿಗಾಗಿ ಯೆಹೂದನು ಬೇಡಿಕೊಂಡಿದ್ದು
18 ಆಗ ಯೆಹೂದನು ಯೋಸೇಫನ ಬಳಿಗೆ ಹೋಗಿ, “ಸ್ವಾಮಿ, ತಮ್ಮೊಂದಿಗೆ ಬಿಚ್ಚುಮನಸ್ಸಿನಿಂದ ಮಾತನಾಡಲು ದಯವಿಟ್ಟು ಅನುಮತಿಯಾಗಲಿ; ದಯವಿಟ್ಟು ನನ್ನ ಮೇಲೆ ಕೋಪಗೊಳ್ಳಬೇಡಿ. ನೀವು ಸ್ವತಃ ಫರೋಹನಂತೆ ಇರುವಿರೆಂದು ನನಗೆ ತಿಳಿದಿದೆ. 19 ನಾವು ಮೊದಲನೆಯ ಸಲ ಬಂದಿದ್ದಾಗ, ನೀವು ನಮಗೆ, ‘ನಿಮಗೆ ತಂದೆಯಾಗಲಿ ತಮ್ಮನಾಗಲಿ ಇರುವನೇ?’ ಎಂದು ಕೇಳಿದಿರಿ. 20 ನಾವು ನಿಮಗೆ, ‘ನಮಗೆ ಒಬ್ಬ ತಂದೆಯಿದ್ದಾನೆ, ಅವನು ವೃದ್ಧನಾಗಿದ್ದಾನೆ; ನಮಗೆ ಪ್ರಾಯದ ತಮ್ಮನಿದ್ದಾನೆ, ನಮ್ಮ ತಂದೆಗೆ ತುಂಬ ವಯಸ್ಸಾಗಿದ್ದಾಗ ಅವನು ಹುಟ್ಟಿದ್ದರಿಂದ ನಮ್ಮ ತಂದೆಯು ಅವನನ್ನು ಪ್ರೀತಿಸುತ್ತಾನೆ. ಆ ಕಿರಿಯ ಮಗನ ಸಹೋದರನು ಸತ್ತುಹೋದನು. ಆದ್ದರಿಂದ ಆ ತಾಯಿಯಲ್ಲಿ ಹುಟ್ಟಿದವರಲ್ಲಿ ಇವನೊಬ್ಬನೇ ಉಳಿದಿದ್ದಾನೆ. ನಮ್ಮ ತಂದೆಯು ಅವನನ್ನು ತುಂಬಾ ಪ್ರೀತಿಸುವನು’ ಎಂದು ಹೇಳಿದೆವು. 21 ಬಳಿಕ ನೀವು ನಮಗೆ, ‘ಹಾಗಾದರೆ ಆ ಸಹೋದರನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ, ನಾನು ಅವನನ್ನು ನೋಡಬೇಕು’ ಎಂದು ಹೇಳಿದಿರಿ. 22 ನಾವು ನಿಮಗೆ ‘ಆ ಯುವಕನು ಬರಲಾರನು. ಅವನು ತನ್ನ ತಂದೆಯನ್ನು ಬಿಟ್ಟುಬರಲಾಗದು. ಅವನ ತಂದೆ ಅವನನ್ನು ಕಳೆದುಕೊಂಡರೆ ತುಂಬ ದುಃಖದಿಂದ ಸತ್ತುಹೋಗುವನು’ ಎಂದು ಹೇಳಿದೆವು. 23 ಆದರೆ ನೀವು ನಮಗೆ, ‘ನೀವು ಆ ಕಿರಿಯ ಸಹೋದರನನ್ನು ಕರೆದುಕೊಂಡು ಬರಲೇಬೇಕು; ಇಲ್ಲವಾದರೆ, ನಾನು ನಿಮಗೆ ದವಸಧಾನ್ಯಗಳನ್ನು ಮತ್ತೆ ಮಾರುವುದಿಲ್ಲ’ ಎಂದು ಹೇಳಿದಿರಿ. 24 ಆದ್ದರಿಂದ ನಾವು ನಮ್ಮ ತಂದೆಯ ಬಳಿಗೆ ಹಿಂತಿರುಗಿ ಹೋಗಿ ನೀವು ಹೇಳಿದ್ದನ್ನು ಅವನಿಗೆ ತಿಳಿಸಿದೆವು.
25 “ಸ್ವಲ ಸಮಯದ ನಂತರ ನಮ್ಮ ತಂದೆಯು, ‘ಮತ್ತೆ ಹೋಗಿ ಇನ್ನು ಸ್ವಲ್ಪ ಆಹಾರವನ್ನು ನಮಗಾಗಿ ಕೊಂಡುಕೊಂಡು ಬನ್ನಿ’ ಎಂದು ಹೇಳಿದನು. 26 ಆದರೆ ನಾವು ನಮ್ಮ ತಂದೆಗೆ, ‘ನಮ್ಮ ಕಿರಿಯ ತಮ್ಮನಿಲ್ಲದೆ ನಾವು ಹೋಗಲು ಸಾಧ್ಯವಿಲ್ಲ. ನಮ್ಮ ಕಿರಿಯ ತಮ್ಮನನ್ನು ನೋಡುವ ತನಕ, ನಮಗೆ ದವಸಧಾನ್ಯಗಳನ್ನು ಮಾರುವುದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ’ ಎಂದು ಹೇಳಿದೆವು. 27 ಆಗ ನಮ್ಮ ತಂದೆಯು ನಮಗೆ, ‘ನನ್ನ ಹೆಂಡತಿಯಾದ ರಾಹೇಲಳು ನನಗೆ ಇಬ್ಬರು ಗಂಡುಮಕ್ಕಳನ್ನು ಕೊಟ್ಟಳು. 28 ನಾನು ಒಬ್ಬ ಮಗನನ್ನು ಕಳುಹಿಸಿಕೊಟ್ಟಾಗ, ಅವನು ಕ್ರೂರ ಪ್ರಾಣಿಯಿಂದ ಕೊಲ್ಲಲ್ಪಟ್ಟನು; ಇಂದಿನ ತನಕ ನಾನು ಅವನನ್ನು ನೋಡಲಿಲ್ಲ. 29 ನೀವು ನನ್ನ ಮತ್ತೊಬ್ಬ ಮಗನನ್ನು ನನ್ನ ಬಳಿಯಿಂದ ಕರೆದುಕೊಂಡು ಹೋಗುವಾಗ ಅವನಿಗೆ ಏನಾದರೂ ಸಂಭವಿಸಿದರೆ, ನಾನು ದುಃಖ ತಾಳಲಾರದೆ ಸತ್ತುಹೋಗುವೆನು’ ಎಂದು ಹೇಳಿದನು. 30 ನಮ್ಮ ತಂದೆಗಂತೂ ಇವನನ್ನು ಕಂಡರೆ ಪ್ರಾಣಪ್ರೀತಿ. ಆದ್ದರಿಂದ ನಮ್ಮ ಈ ಕಿರಿಯ ತಮ್ಮನಿಲ್ಲದೆ ಹೋದರೆ, 31 ನಮ್ಮ ತಂದೆಯೂ ಆ ಕೂಡಲೇ ಸತ್ತುಹೋಗುವನು; ನಮ್ಮ ತಂದೆ ದುಃಖದಿಂದ ಸಾಯಲು ನಾವೇ ಕಾರಣರಾಗುವೆವು.
32 “ನಾನು ಈ ಯುವಕನ ಜವಾಬ್ದಾರಿಯನ್ನು ವಹಿಸಿಕೊಂಡೆನು. ನಾನು ನನ್ನ ತಂದೆಗೆ, ‘ನಾನು ಇವನನ್ನು ಹಿಂದಕ್ಕೆ ಕರೆದುಕೊಂಡು ಬರದಿದ್ದರೆ ನನ್ನ ಜೀವಮಾನವೆಲ್ಲಾ ನೀನು ನನ್ನನ್ನು ದೂಷಿಸಬಹುದು’ ಎಂದು ಹೇಳಿದೆನು. 33 ಆದ್ದರಿಂದ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ಈ ಯುವಕನು ತನ್ನ ಸಹೋದರರೊಂದಿಗೆ ಹಿಂತಿರುಗಿ ಹೋಗಲಿ; ನಾನು ಇಲ್ಲಿ ನಿಮಗೆ ಗುಲಾಮನಾಗಿರುವೆನು. 34 ನನ್ನ ಜೊತೆಯಲ್ಲಿ ಈ ಹುಡುಗನಿಲ್ಲದೆ ನಾನು ನನ್ನ ತಂದೆಯ ಬಳಿಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ನಮ್ಮ ತಂದೆಗೆ ಸಂಭವಿಸುವುದನ್ನು ನೋಡಲು ನನಗೆ ತುಂಬ ಭಯವಾಗಿದೆ” ಎಂದು ಹೇಳಿದನು.
ಯೋಸೇಫನು ತಾನು ಯಾರೆಂದು ಹೇಳುವನು
45 ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿದ್ದವರ ಮುಂದೆ ತಾಳಿಕೊಳ್ಳಲಾರದೆ, “ಇಲ್ಲಿರುವ ಎಲ್ಲರನ್ನೂ ಹೊರಗೆ ಕಳುಹಿಸಿರಿ” ಎಂದು ಅಪ್ಪಣೆಕೊಟ್ಟನು. ಅಲ್ಲಿದ್ದವರು ಹೊರಗೆ ಹೋದರು; ಸಹೋದರರು ಮಾತ್ರ ಯೋಸೇಫನೊಡನೆ ಇದ್ದರು. 2 ಆಮೇಲೆ ಯೋಸೇಫನು ಗಟ್ಟಿಯಾಗಿ ಅತ್ತನು. ಫರೋಹನ ಮನೆಯಲ್ಲಿದ್ದ ಈಜಿಪ್ಟಿನವರೆಲ್ಲ ಅದನ್ನು ಕೇಳಿಸಿಕೊಂಡರು. 3 ಯೋಸೇಫನು ತನ್ನ ಸಹೋದರರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನನ್ನ ತಂದೆ ಚೆನ್ನಾಗಿದ್ದಾನೆಯೇ?” ಎಂದು ಕೇಳಿದನು. ಆದರೆ ಸಹೋದರರು ಅವನಿಗೆ ಉತ್ತರಿಸಲಿಲ್ಲ. ಅವರಿಗೆ ಭಯವಾಗಿತ್ತು ಮತ್ತು ಗಲಿಬಿಲಿಗೊಂಡಿದ್ದರು.
4 ಯೋಸೇಫನು ಮತ್ತೆ ತನ್ನ ಸಹೋದರರಿಗೆ, “ನನ್ನ ಬಳಿಗೆ ಬನ್ನಿ. ನನ್ನ ಹತ್ತಿರ ಬನ್ನಿ ಎಂದು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು. ಆದ್ದರಿಂದ ಸಹೋದರರು ಯೋಸೇಫನ ಹತ್ತಿರ ಹೋದರು. ಯೋಸೇಫನು ಅವರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನೀವು ಈಜಿಪ್ಟಿನವರಿಗೆ ಯಾವನನ್ನು ಗುಲಾಮನನ್ನಾಗಿ ಮಾರಿದಿರೋ ಅವನೇ ನಾನು. 5 ಈಗ ಚಿಂತಿಸಬೇಡಿ, ನೀವು ಮಾಡಿದ್ದಕ್ಕೆ ದುಃಖವನ್ನೂ ಪಡಬೇಡಿ. ನಾನು ಇಲ್ಲಿಗೆ ಬರಬೇಕೆಂಬುದು ದೇವರ ಯೋಜನೆಯಾಗಿತ್ತು. ನಾನು ನಿಮ್ಮನ್ನು ರಕ್ಷಿಸಲು ಇಲ್ಲಿಗೆ ಬಂದಿದ್ದೇನೆ. 6 ಈ ಭೀಕರವಾದ ಬರಗಾಲವು ಆರಂಭವಾಗಿ ಈಗಾಗಲೇ ಎರಡು ವರ್ಷಗಳಾಯಿತು. ಇನ್ನೂ ಐದು ವರ್ಷಗಳವರೆಗೆ ಬಿತ್ತನೆ ಇರುವುದಿಲ್ಲ; ಸುಗ್ಗಿಯೂ ಇರುವುದಿಲ್ಲ. 7 ಆದ್ದರಿಂದ ಈ ದೇಶದಲ್ಲಿ ತನ್ನ ಜನರನ್ನು ಕಾಪಾಡಲು ದೇವರು ನನ್ನನ್ನು ನಿಮಗಿಂತ ಮೊದಲೇ ಇಲ್ಲಿಗೆ ಕಳುಹಿಸಿದ್ದಾನೆ. 8 ನನ್ನನ್ನು ಇಲ್ಲಿಗೆ ಕಳುಹಿಸಿದ್ದು ನಿಮ್ಮ ತಪ್ಪಲ್ಲ. ಅದು ದೇವರ ಯೋಜನೆ. ದೇವರು ನನ್ನನ್ನು ಫರೋಹನ ಅತ್ಯುನ್ನತವಾದ ಅಧಿಕಾರಿಯನ್ನಾಗಿ ಮಾಡಿದ್ದಾನೆ. ನಾನು ಅವನ ಮನೆಗೆಲ್ಲಾ ಮತ್ತು ಈಜಿಪ್ಟಿಗೆಲ್ಲಾ ರಾಜ್ಯಪಾಲನಾಗಿದ್ದೇನೆ” ಎಂದು ಹೇಳಿದನು.
ಇಸ್ರೇಲರನ್ನು ಈಜಿಪ್ಟಿಗೆ ಆಮಂತ್ರಿಸಿದ್ದು
9 ಬಳಿಕ ಯೋಸೇಫನು, “ನನ್ನ ತಂದೆಯ ಬಳಿಗೆ ಬೇಗನೆ ಹೋಗಿ ಅವನಿಗೆ, ನಿನ್ನ ಮಗನಾದ ಯೋಸೇಫನು ಈ ಸಂದೇಶವನ್ನು ಕಳುಹಿಸಿದ್ದಾನೆ: ‘ದೇವರು ನನ್ನನ್ನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನನ್ನಾಗಿ ಮಾಡಿದ್ದಾನೆ. ತಡಮಾಡದೆ ನನ್ನ ಬಳಿಗೆ ಬಾ. 10 ನೀನು ಗೋಷೆನ್ ಪ್ರಾಂತ್ಯದಲ್ಲಿ ನನ್ನೊಂದಿಗೆ ವಾಸಿಸುವೆ. ನೀನೂ ನಿನ್ನ ಮಕ್ಕಳೂ ನಿನ್ನ ಮೊಮ್ಮಕ್ಕಳೂ ನಿಮ್ಮ ಎಲ್ಲಾ ಪಶುಗಳೊಡನೆ ಇಲ್ಲಿ ನೆಲೆಸಬಹುದು. 11 ಮುಂದಿನ ಐದು ವರ್ಷಗಳ ಬರಗಾಲದಲ್ಲಿ ನಾನು ನಿಮ್ಮನ್ನು ಪೋಷಿಸುವೆನು. ಆಗ ನಿನಗಾಗಲಿ ನಿನ್ನ ಕುಟುಂಬದವರಿಗಾಗಲಿ ಬಡತನವಿರುವುದಿಲ್ಲ’ ಎಂಬುದಾಗಿ ತಿಳಿಸಿರಿ” ಎಂದು ಹೇಳಿದನು.
12 ಯೋಸೇಫನು ತನ್ನ ಸಹೋದರರೊಂದಿಗೆ ಮಾತನ್ನು ಮುಂದುವರಿಸಿ, “ನಾನೇ ಯೋಸೇಫನೆಂದು ನಿಮಗೆ ಈಗ ಗೊತ್ತಾಗಿದೆ; ನಿಮ್ಮ ತಮ್ಮನಾದ ಬೆನ್ಯಾಮೀನನಿಗೂ ಗೊತ್ತಾಗಿದೆ. 13 ಆದ್ದರಿಂದ ಈಜಿಪ್ಟಿನಲ್ಲಿರುವ ಮಹಾ ಐಶ್ವರ್ಯವನ್ನೂ ನೀವು ಇಲ್ಲಿ ನೋಡಿರುವ ಪ್ರತಿಯೊಂದನ್ನೂ ನನ್ನ ತಂದೆಗೆ ತಿಳಿಸಿ ಬೇಗನೆ ಅವನನ್ನು ಕರೆದುಕೊಂಡು ಬನ್ನಿ” ಎಂದು ಹೇಳಿದನು. 14 ಆಮೇಲೆ ಯೋಸೇಫನು ತನ್ನ ತಮ್ಮನಾದ ಬೆನ್ಯಾಮೀನನನ್ನು ಅಪ್ಪಿಕೊಂಡು ಅತ್ತನು. ಬೆನ್ಯಾಮೀನನು ಸಹ ಅತ್ತನು. 15 ಆಮೇಲೆ ಯೋಸೇಫನು ತನ್ನ ಎಲ್ಲಾ ಸಹೋದರರಿಗೂ ಮುದ್ದಿಟ್ಟು ಅತ್ತನು. ಇದಾದ ಮೇಲೆ ಆ ಸಹೋದರರು ಅವನೊಂದಿಗೆ ಮಾತಾಡತೊಡಗಿದರು.
16 ಯೋಸೇಫನ ಸಹೋದರರು ಅವನ ಬಳಿಗೆ ಬಂದಿರುವುದು ತಿಳಿದಾಗ ಫರೋಹನಿಗೂ ಅವನ ಮನೆಯವರಿಗೂ ತುಂಬ ಸಂತೋಷವಾಯಿತು. 17 ಆದ್ದರಿಂದ ಫರೋಹನು ಯೋಸೇಫನಿಗೆ, “ತಮಗೆ ಬೇಕಾದ ಎಲ್ಲಾ ಆಹಾರವನ್ನು ತೆಗೆದುಕೊಂಡು ಕಾನಾನ್ ದೇಶಕ್ಕೆ ಹಿಂತಿರುಗಿ ಹೋಗಿ 18 ನಿನ್ನ ತಂದೆಯನ್ನೂ ತಮ್ಮ ಕುಟುಂಬಗಳನ್ನೂ ನನ್ನ ಬಳಿಗೆ ಕರೆದುಕೊಂಡು ಬರಲಿ. ಅವರು ಈಜಿಪ್ಟಿನ ಒಳ್ಳೆಯ ಪ್ರದೇಶದಲ್ಲಿ ವಾಸಿಸಲಿ. ಇಲ್ಲಿರುವ ಉತ್ತಮವಾದ ಆಹಾರವನ್ನು ಅವರು ಊಟಮಾಡಲಿ, 19 ಅವರು ನಮ್ಮ ಶ್ರೇಷ್ಠವಾದ ರಥಗಳನ್ನು ತೆಗೆದುಕೊಂಡು ಕಾನಾನ್ ದೇಶಕ್ಕೆ ಹೋಗಿ ನಿನ್ನ ತಂದೆಯನ್ನೂ ಎಲ್ಲಾ ಸ್ತ್ರೀಯರನ್ನೂ ಮಕ್ಕಳನ್ನೂ ಕರೆದುಕೊಂಡು ಬರಲಿ. 20 ಅವರ ಸ್ವತ್ತುಗಳ ಬಗ್ಗೆ ಚಿಂತಿಸುವುದು ಬೇಡ; ಈಜಿಪ್ಟಿನಲ್ಲಿ ನಮಗಿರುವ ಉತ್ತಮವಾದವುಗಳನ್ನು ಅವರಿಗೆ ಕೊಡೋಣ” ಎಂದು ಹೇಳಿದನು.
21 ಅಂತೆಯೇ ಇಸ್ರೇಲನ ಮಕ್ಕಳು ಮಾಡಿದರು. ಫರೋಹನು ಹೇಳಿದಂತೆಯೇ ಯೋಸೇಫನು ತನ್ನ ಸಹೋದರರಿಗೆ ಒಳ್ಳೆಯ ರಥಗಳನ್ನೂ ಪ್ರಯಾಣಕ್ಕೆ ಬೇಕಾಗುವಷ್ಟು ಆಹಾರವನ್ನೂ ಕೊಟ್ಟನು. 22 ಯೋಸೇಫನು ಪ್ರತಿಯೊಬ್ಬ ಸಹೋದರನಿಗೂ ಒಂದೊಂದು ಜೊತೆ ಸುಂದರವಾದ ಉಡುಪುಗಳನ್ನು ಕೊಟ್ಟನು. ಆದರೆ ಬೆನ್ಯಾಮೀನನಿಗೆ ಮಾತ್ರ ಐದು ಜೊತೆ ಸುಂದರವಾದ ಉಡುಪುಗಳನ್ನೂ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ ಕೊಟ್ಟನು. 23 ಯೋಸೇಫನು ತನ್ನ ತಂದೆಗೂ ಉಡುಗೊರೆಗಳನ್ನು ಕಳುಹಿಸಿದನು. ಅವನು ಈಜಿಪ್ಟಿನ ಶ್ರೇಷ್ಠವಾದ ವಸ್ತುಗಳನ್ನು ಹತ್ತು ಕತ್ತೆಗಳ ಮೇಲೆ ಕಳುಹಿಸಿದನು. ತನ್ನ ತಂದೆಯ ಮರುಪ್ರಯಾಣಕ್ಕೆ ಬೇಕಾದ ಕಾಳು, ರೊಟ್ಟಿ ಮತ್ತು ಇತರ ಆಹಾರಪದಾರ್ಥಗಳನ್ನೂ ಹತ್ತು ಹೆಣ್ಣುಕತ್ತೆಗಳ ಮೇಲೆ ಹೊರಿಸಿ ಕಳುಹಿಸಿದನು. 24 ಅವರು ಹೊರಡುವಾಗ ಯೋಸೇಫನು, “ನೇರವಾಗಿ ಮನೆಗೆ ಹೋಗಿ. ದಾರಿಯಲ್ಲಿ ಜಗಳ ಮಾಡಬೇಡಿ” ಎಂದು ಹೇಳಿದನು.
25 ಆದ್ದರಿಂದ ಸಹೋದರರು ಈಜಿಪ್ಟನ್ನು ಬಿಟ್ಟು, ತಮ್ಮ ತಂದೆಯಿರುವ ಕಾನಾನ್ ದೇಶಕ್ಕೆ ಹೋದರು. 26 ಸಹೋದರರು ತಮ್ಮ ತಂದೆಗೆ, “ಅಪ್ಪಾ, ಯೋಸೇಫನು ಇನ್ನೂ ಬದುಕಿದ್ದಾನೆ; ಅವನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನಾಗಿದ್ದಾನೆ” ಎಂದು ಹೇಳಿದರು.
ಅವರ ತಂದೆಗೆ ಆಶ್ಚರ್ಯವಾಯಿತು. ಆತನು ಅವರನ್ನು ನಂಬಲಿಲ್ಲ. 27 ಆದರೆ ಯೋಸೇಫನು ತಮಗೆ ಹೇಳಿದ್ದೆಲ್ಲವನ್ನು ಸಹೋದರರು ತಮ್ಮ ತಂದೆಗೆ ಹೇಳಿದರು. ಆಮೇಲೆ ತನ್ನನ್ನು ಈಜಿಪ್ಟಿಗೆ ಕರೆದುಕೊಂಡು ಬರಲು ಯೋಸೇಫನು ಕಳುಹಿಸಿದ್ದ ರಥಗಳನ್ನು ಯಾಕೋಬನು ನೋಡಿ ಉಲ್ಲಾಸಪಟ್ಟನು. 28 ಇಸ್ರೇಲನು, “ಈಗ ನಾನು ನಿಮ್ಮನ್ನು ನಂಬುತ್ತೇನೆ. ನನ್ನ ಮಗನಾದ ಯೋಸೇಫನು ಇನ್ನೂ ಬದುಕಿದ್ದಾನೆ. ನಾನು ಸಾಯುವ ಮೊದಲು ಅವನನ್ನು ನೋಡುತ್ತೇನೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International