Beginning
ಫರೋಹನ ಕನಸುಗಳು
41 ಎರಡು ವರ್ಷಗಳ ನಂತರ ಫರೋಹನಿಗೆ ಒಂದು ಕನಸಾಯಿತು. ಫರೋಹನು ಕನಸಿನಲ್ಲಿ ನೈಲ್ ನದಿಯ ತೀರದಲ್ಲಿ ನಿಂತಿದ್ದನು. 2 ಆಗ ಕೊಬ್ಬಿದ ಮತ್ತು ಲಕ್ಷಣವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ಹುಲ್ಲನ್ನು ಮೇಯುತ್ತಿದ್ದವು. 3 ಬಳಿಕ ಬಡಕಲಾಗಿದ್ದ ಮತ್ತು ಕುರೂಪವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ಲಕ್ಷಣವಾಗಿದ್ದ ಏಳು ಹಸುಗಳ ಪಕ್ಕದಲ್ಲಿ ನಿಂತುಕೊಂಡವು. 4 ಕುರೂಪವಾಗಿದ್ದ ಏಳು ಹಸುಗಳು ಲಕ್ಷಣವಾಗಿದ್ದ ಏಳು ಹಸುಗಳನ್ನು ತಿಂದುಬಿಟ್ಟವು. ಆಗ ಫರೋಹನಿಗೆ ಎಚ್ಚರವಾಯಿತು.
5 ಫರೋಹನು ಮತ್ತೆ ಮಲಗಿಕೊಂಡನು. ಅವನಿಗೆ ಎರಡನೆಯ ಕನಸಾಯಿತು. ಪುಷ್ಟಿಯುಳ್ಳ ಏಳು ತೆನೆಗಳು ಒಂದೇ ಗಿಡದಲ್ಲಿ ಹುಟ್ಟಿದವು. 6 ಆಮೇಲೆ ಅದೇ ಸಸಿಯ ಮೇಲೆ ಬಿಸಿಗಾಳಿಯಿಂದ ಬತ್ತಿಹೋಗಿದ್ದ ಏಳು ತೆನೆಗಳು ಹುಟ್ಟಿದವು. 7 ಬತ್ತಿಹೋಗಿದ್ದ ತೆನೆಗಳು ಪುಷ್ಟಿಯಾಗಿದ್ದ ತೆನೆಗಳನ್ನು ತಿಂದುಬಿಟ್ಟವು. ಫರೋಹನು ಎಚ್ಚರಗೊಂಡಾಗ ಅದು ಕೇವಲ ಕನಸೆಂದು ತಿಳಿದುಕೊಂಡನು. 8 ಮರುದಿನ ಮುಂಜಾನೆ ಈ ಕನಸುಗಳ ಬಗ್ಗೆ ತುಂಬ ಚಿಂತೆಗೊಳಗಾಗಿ ಈಜಿಪ್ಟಿನಲ್ಲಿದ್ದ ಎಲ್ಲಾ ಮಂತ್ರಗಾರರನ್ನೂ ಎಲ್ಲಾ ವಿದ್ವಾಂಸರನ್ನೂ ಕರೆಯಿಸಿ ಕನಸುಗಳನ್ನು ತಿಳಿಸಿದನು. ಆದರೆ ಅವರಲ್ಲಿ ಯಾರಿಗೂ ಕನಸುಗಳ ಅರ್ಥವನ್ನು ತಿಳಿಸುವುದಕ್ಕಾಗಲಿ ವಿವರಿಸುವುದಕ್ಕಾಗಲಿ ಆಗಲಿಲ್ಲ.
ಪಾನದಾಯಕನು ಫರೋಹನಿಗೆ ಯೋಸೇಫನ ಬಗ್ಗೆ ತಿಳಿಸಿದ್ದು
9 ಆಗ ಪಾನದಾಯಕನು ಯೋಸೇಫನನ್ನು ಜ್ಞಾಪಿಸಿಕೊಂಡು ಫರೋಹನಿಗೆ, “ನನಗೆ ಸಂಭವಿಸಿದ್ದು ನನ್ನ ನೆನಪಿಗೆ ಬರುತ್ತಿದೆ. 10 ನೀವು ನನ್ನ ಮೇಲೆ ಮತ್ತು ಭಕ್ಷ್ಯಗಾರನ ಮೇಲೆ ಕೋಪಗೊಂಡು ನಮ್ಮನ್ನು ಸೆರೆಮನೆಗೆ ಹಾಕಿಸಿದಿರಿ. 11 ಒಂದು ರಾತ್ರಿ ನಮ್ಮಿಬ್ಬರಿಗೂ ಕನಸಾಯಿತು. ಆ ಕನಸುಗಳಿಗೆ ಬೇರೆಬೇರೆಯ ಅರ್ಥಗಳಿದ್ದವು. 12 ನಮ್ಮ ಜೊತೆಯಲ್ಲಿ ಒಬ್ಬ ಇಬ್ರಿಯ ಯುವಕನಿದ್ದನು. ಅವನು ಕಾವಲುಗಾರರ ಅಧಿಕಾರಿಯ ಸೇವಕನಾಗಿದ್ದನು. ನಾವು ಅವನಿಗೆ ನಮ್ಮ ಕನಸುಗಳನ್ನು ತಿಳಿಸಿದೆವು. ಅವನು ನಮಗೆ ಅವುಗಳನ್ನು ವಿವರಿಸಿ ನಮ್ಮ ಕನಸಿನ ಅರ್ಥವನ್ನು ತಿಳಿಸಿದನು. 13 ಅವನು ಹೇಳಿದ ಅರ್ಥಕ್ಕೆ ಸರಿಯಾಗಿ ನನಗೆ ಆಯಿತು; ಮೊದಲಿನ ಉದ್ಯೋಗವು ದೊರೆಯಿತು; ಅವನು ಭಕ್ಷ್ಯಗಾರನನ್ನು ಕುರಿತು ತಿಳಿಸಿದಂತೆಯೇ ಅವನಿಗೆ ಮರಣದಂಡನೆ ಆಯಿತು” ಎಂದು ಹೇಳಿದನು.
ಕನಸುಗಳ ಅರ್ಥವನ್ನು ತಿಳಿಸಲು ಯೋಸೇಫನನ್ನು ಕರೆಸಿದ್ದು
14 ಆಗ ಫರೋಹನು ಯೋಸೇಫನನ್ನು ಸೆರೆಮನೆಯಿಂದ ಕರೆಸಿದನು. ಯೋಸೇಫನು ಕ್ಷೌರಮಾಡಿಕೊಂಡು ಶುದ್ಧವಾದ ಬಟ್ಟೆಗಳನ್ನು ಹಾಕಿಕೊಂಡು ಹೋಗಿ ಫರೋಹನ ಮುಂದೆ ನಿಂತುಕೊಂಡನು. 15 ಫರೋಹನು ಯೋಸೇಫನಿಗೆ, “ನನಗೆ ಒಂದು ಕನಸಾಯಿತು. ಆದರೆ ಅದರ ಅರ್ಥವನ್ನು ತಿಳಿಸಬಲ್ಲವರು ಇಲ್ಲಿ ಯಾರೂ ಇಲ್ಲ. ನೀನು ಕನಸುಗಳ ಅರ್ಥವನ್ನು ಹೇಳಬಲ್ಲೆ ಎಂಬುದಾಗಿ ನಿನ್ನ ಬಗ್ಗೆ ಕೇಳಿದೆ” ಎಂದು ಹೇಳಿದನು.
16 ಯೋಸೇಫನು, “ಕನಸುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನನ್ನಲ್ಲಿಲ್ಲ. ಆ ಶಕ್ತಿಯನ್ನು ಹೊಂದಿರುವವನು ದೇವರೊಬ್ಬನೇ. ಆದರೆ ದೇವರು ಫರೋಹನಿಗೋಸ್ಕರ ಅರ್ಥವನ್ನು ತಿಳಿಸುವನು” ಎಂದು ಹೇಳಿದನು.
17 ಆಗ ಫರೋಹನು ಯೋಸೇಫನಿಗೆ, “ನನ್ನ ಕನಸಿನಲ್ಲಿ, ನಾನು ನೈಲ್ ನದಿಯ ತೀರದಲ್ಲಿ ನಿಂತುಕೊಂಡಿದ್ದೆನು. 18 ಕೊಬ್ಬಿದ ಮತ್ತು ಲಕ್ಷಣವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ಹುಲ್ಲನ್ನು ಮೇಯುತ್ತಿದ್ದವು. 19 ಆಗ ಬಡಕಲಾಗಿದ್ದ ಮತ್ತು ಕುರೂಪವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ನಿಂತುಕೊಂಡವು. ಅಂಥಾ ಬಡಕಲು ಹಸುಗಳನ್ನು ನಾನು ಈಜಿಪ್ಟಿನಲ್ಲಿ ಎಂದೂ ನೋಡಿಲ್ಲ. 20 ಬಡಕಲಾಗಿದ್ದ ಆ ಹಸುಗಳು ಮೊದಲು ಬಂದ ಲಕ್ಷಣವಾದ ಏಳು ಹಸುಗಳನ್ನು ತಿಂದುಬಿಟ್ಟವು. 21 ಅವು ಏಳು ಹಸುಗಳನ್ನು ತಿಂದ ಮೇಲೆಯೂ ತಿಂದಂತೆ ಕಾಣುತ್ತಿರಲಿಲ್ಲ; ಅವು ಮೊದಲಿನಂತೆಯೇ ಬಡಕಲಾಗಿದ್ದವು ಮತ್ತು ಕುರೂಪವಾಗಿದ್ದವು. ಆಗ ನನಗೆ ಎಚ್ಚರವಾಯಿತು.
22 “ನನಗಾದ ಎರಡನೆಯ ಕನಸು ಇಂತಿದೆ: ಒಂದೇ ಗಿಡದಲ್ಲಿ ಪುಷ್ಟಿಯಾದ ಏಳು ತೆನೆಗಳು ಹುಟ್ಟಿದವು. 23 ಬಳಿಕ ಅದೇ ಗಿಡದಲ್ಲಿ ಮೇಲೆ ಬಿಸಿಗಾಳಿಯಿಂದ ಬತ್ತಿಹೋಗಿದ್ದ ಏಳು ತೆನೆಗಳು ಹುಟ್ಟಿದವು. 24 ಬತ್ತಿಹೋಗಿದ್ದ ತೆನೆಗಳು ಪುಷ್ಟಿಯಾದ ಏಳು ತೆನೆಗಳನ್ನು ತಿಂದುಬಿಟ್ಟವು.
“ನಾನು ಈ ಕನಸುಗಳನ್ನು ಮಂತ್ರಗಾರರಿಗೂ ವಿದ್ವಾಂಸರಿಗೂ ತಿಳಿಸಿದೆನು. ಆದರೆ ಅವರಲ್ಲಿ ಯಾರೂ ನನಗೆ ಈ ಕನಸುಗಳ ಅರ್ಥವನ್ನು ವಿವರಿಸಲಾಗಲಿಲ್ಲ. ಅವುಗಳ ಅರ್ಥವೇನು?” ಎಂದು ಕೇಳಿದನು.
ಯೋಸೇಫನಿಂದ ಕನಸುಗಳ ಅರ್ಥವಿವರಣೆ
25 ಆಗ ಯೋಸೇಫನು ಫರೋಹನಿಗೆ, “ಆ ಎರಡು ಕನಸುಗಳ ಅರ್ಥವು ಒಂದೇ. ಮುಂದೆ ನಡೆಯಲಿರುವುದನ್ನು ದೇವರು ತಮಗೆ ತಿಳಿಸಿದ್ದಾನೆ. 26 ಒಳ್ಳೆಯ ಏಳು ಹಸುಗಳೇ ಏಳು ವರ್ಷಗಳು. ಒಳ್ಳೆಯ ಏಳು ತೆನೆಗಳೇ ಏಳು ವರ್ಷಗಳು. ಎರಡು ಕನಸುಗಳೂ ಒಂದೇ ಅರ್ಥವನ್ನು ಹೊಂದಿವೆ. 27 ಬಡಕಲಾದ ಮತ್ತು ಕುರೂಪವಾದ ಏಳು ಹಸುಗಳು ಮತ್ತು ಕೆಟ್ಟುಹೋದ ಕಾಳಿನ ಏಳು ತೆನೆಗಳು, ದೇಶಕ್ಕೆ ಬರುವ ಏಳು ವರ್ಷಗಳ ಬರಗಾಲವನ್ನು ಸೂಚಿಸುತ್ತವೆ. ಈ ಏಳು ವರ್ಷಗಳು ಒಳ್ಳೆಯ ವರ್ಷಗಳ ನಂತರ ಬರುತ್ತವೆ. 28 ಮುಂದೆ ನಡೆಯಲಿರುವುದನ್ನು ದೇವರು ನಿಮಗೆ ತಿಳಿಸಿದ್ದಾನೆ. ನಾನು ಹೇಳಿದಂತೆಯೇ ಸಂಭವಿಸುವುದು. 29 ನಿಮಗೆ ಏಳು ವರ್ಷಗಳ ಕಾಲ ಒಳ್ಳೆಯ ಬೆಳೆಯಾಗುವುದು; ಈಜಿಪ್ಟ್ ದೇಶದಲ್ಲೆಲ್ಲಾ ಊಟಕ್ಕೆ ಬೇಕಾದಷ್ಟು ಆಹಾರವಿರುವುದು. 30 ಆದರೆ ಆ ಏಳು ವರ್ಷಗಳಾದ ಮೇಲೆ ದೇಶದಲ್ಲೆಲ್ಲಾ ಏಳು ವರ್ಷಗಳವರೆಗೆ ಬರಗಾಲವಿರುವುದು. ಆಗ ಈಜಿಪ್ಟಿನ ಜನರು ತಾವು ಮೊದಲು ಬೆಳೆದ ಆಹಾರವನ್ನೆಲ್ಲಾ ಮರೆತುಬಿಡುವರು. ಈ ಕ್ಷಾಮವು ದೇಶವನ್ನು ನಾಶಮಾಡುವುದು. 31 ಮೊದಲಿನ ಸಮೃದ್ಧಿಯ ಗುರುತೇ ಜನರಿಗೆ ಕಾಣಸಿಗದು.
32 “ಫರೋಹನೇ, ಒಂದೇ ವಿಷಯದ ಮೇಲೆ ಎರಡು ಕನಸುಗಳಾಗಿರುವುದರಿಂದ ದೇವರು ಇದನ್ನು ನಿಶ್ಚಯವಾಗಿಯೂ ಬೇಗನೆ ಬರಮಾಡಲಿದ್ದಾನೆ. 33 ಆದ್ದರಿಂದ ತಾವು ತುಂಬ ಬುದ್ಧಿವಂತನೂ ವಿವೇಕಿಯೂ ಆಗಿರುವ ಒಬ್ಬನನ್ನು ಆರಿಸಿಕೊಂಡು ಅವನನ್ನು ಈಜಿಪ್ಟ್ ದೇಶದ ಮೇಲೆ ಆಡಳಿತಾಧಿಕಾರಿಯನ್ನಾಗಿ ನೇಮಿಸಬೇಕು. 34 ಅಲ್ಲದೆ ಜನರಿಂದ ಆಹಾರವನ್ನು ಶೇಖರಿಸುವುದಕ್ಕಾಗಿ ತಾವು ಸಂಗ್ರಹಕರನ್ನು ನೇಮಿಸಿ ಒಳ್ಳೆಯ ಏಳು ವರ್ಷಗಳಲ್ಲಿ ಪ್ರತಿಯೊಬ್ಬ ಬೆಳೆಗಾರನಿಂದಲೂ ಬೆಳೆಯ ಐದನೆ ಒಂದು ಭಾಗವನ್ನು ಕಂದಾಯ ರೂಪದಲ್ಲಿ ವಸೂಲಿ ಮಾಡಬೇಕು. 35 ಸಂಗ್ರಹಕಾರರ ಮೂಲಕ ಆಹಾರಪದಾರ್ಥಗಳನ್ನೂ ದವಸಧಾನ್ಯಗಳನ್ನೂ ಶೇಖರಿಸಿ ನಿಮ್ಮ ಉಗ್ರಾಣಗಳಲ್ಲಿಟ್ಟು ನೋಡಿಕೊಳ್ಳಬೇಕು. 36 ಉಗ್ರಾಣಗಳಲ್ಲಿ ಸಾಕಷ್ಟು ಆಹಾರವಿರುವುದರಿಂದ ಈಜಿಪ್ಟಿನವರು ಬರಗಾಲದ ಏಳು ವರ್ಷಗಳಲ್ಲಿ ಆಹಾರವಿಲ್ಲದೆ ಸಾಯುವುದಿಲ್ಲ” ಎಂದು ಹೇಳಿದನು.
37 ಇದು ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಒಳ್ಳೆಯದಾಗಿ ಕಂಡುಬಂತು. 38 ಫರೋಹನು ತನ್ನ ಸೇವಕರಿಗೆ, “ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಯೋಸೇಫನಿಗಿಂತಲೂ ಉತ್ತಮನಾದ ವ್ಯಕ್ತಿಯನ್ನು ಕಂಡುಕೊಳ್ಳಲು ಸಾಧ್ಯವೇ? ದೇವರಾತ್ಮನೇ ಇವನ ಸಂಗಡವಿದ್ದಾನೆ” ಎಂದು ಹೇಳಿದನು.
39 ಫರೋಹನು ಯೋಸೇಫನಿಗೆ, “ದೇವರು ನಿನಗೆ ಈ ಎಲ್ಲಾ ವಿಷಯಗಳನ್ನು ತೋರಿಸಿರುವುದರಿಂದ ನಿನಗಿಂತ ಬುದ್ಧಿವಂತನೂ ವಿವೇಕಿಯೂ ಇಲ್ಲವೇ ಇಲ್ಲ. 40 ಆದ್ದರಿಂದ ನಾನು ನಿನ್ನನ್ನು ದೇಶದ ರಾಜ್ಯಪಾಲನನ್ನಾಗಿ ನೇಮಿಸುವೆನು; ಜನರು ನಿನ್ನ ಆಜ್ಞೆಗಳಿಗೆಲ್ಲಾ ವಿಧೇಯರಾಗುವರು. ಈ ದೇಶದಲ್ಲಿ ನಿನಗೆ ಅಧಿಪತಿಯಾಗಿರುವವನು ನಾನೊಬ್ಬನೇ” ಎಂದು ಹೇಳಿದನು.
41 ಫರೋಹನು ಯೋಸೇಫನಿಗೆ, “ನಾನು ನಿನ್ನನ್ನು ಈಜಿಪ್ಟ್ ದೇಶಕ್ಕೆಲ್ಲ ರಾಜ್ಯಪಾಲನನ್ನಾಗಿ ನೇಮಿಸುವೆನು” ಎಂದು ಹೇಳಿ 42 ರಾಜಮುದ್ರೆಯನ್ನು ಹೊಂದಿದ್ದ ತನ್ನ ಉಂಗುರವನ್ನು ಕೊಟ್ಟನು; ಧರಿಸಿಕೊಳ್ಳಲು ಒಳ್ಳೆಯ ನಾರುಬಟ್ಟೆಯ ನಿಲುವಂಗಿಯನ್ನು ಕೊಟ್ಟನು; ಕೊರಳಿಗೆ ಚಿನ್ನದ ಸರವನ್ನು ಹಾಕಿದನು. 43 ಫರೋಹನು ಯೋಸೇಫನಿಗೆ ಎರಡನೆಯ ರಾಜರಥವನ್ನು ಸಂಚಾರಕ್ಕಾಗಿ ಕೊಟ್ಟನು. ವಿಶೇಷಕಾವಲುಗಾರರು ಅವನ ರಥದ ಮುಂದೆ ನಡೆದುಹೋಗುತ್ತಾ “ಪ್ರಜೆಗಳೇ, ಯೋಸೇಫನಿಗೆ ತಲೆಬಾಗಿ ನಮಸ್ಕರಿಸಿರಿ” ಎಂದು ಪ್ರಕಟಿಸಿದರು. ಹೀಗೆ ಯೋಸೇಫನು ಈಜಿಪ್ಟಿಗೆಲ್ಲಾ ರಾಜ್ಯಪಾಲನಾದನು.
44 ಫರೋಹನು ಅವನಿಗೆ, “ನಾನು ರಾಜ ಫರೋಹ. ಆದ್ದರಿಂದ ನನಗೆ ಇಷ್ಟವಾದದ್ದನ್ನು ಮಾಡುವೆನು. ಆದರೆ ನಿನ್ನ ಅಪ್ಪಣೆಯಿಲ್ಲದೆ ಈಜಿಪ್ಟಿನ ಬೇರೆ ಯಾರೂ ಕೈಯೆತ್ತಲೂ ಸಾಧ್ಯವಿಲ್ಲ, ಕಾಲನ್ನು ಚಲಿಸಲೂ ಸಾಧ್ಯವಿಲ್ಲ” ಎಂದು ಹೇಳಿದನು. 45 ಫರೋಹನು ಯೋಸೇಫನಿಗೆ, ಸಾಫ್ನತ್ಪನ್ನೇಹ ಎಂಬ ಹೆಸರನ್ನು ಕೊಟ್ಟನು. ಇದಲ್ಲದೆ ಫರೋಹನು ಯೋಸೇಫನಿಗೆ ಆಸನತ್ ಎಂಬಾಕೆಯನ್ನು ಮದುವೆ ಮಾಡಿಸಿದನು. ಆಕೆ ಓನ್ ನಗರದ ಆಚಾರ್ಯನಾಗಿದ್ದ ಫೋಟೀಫರನ ಮಗಳು. ಹೀಗೆ ಯೋಸೇಫನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನಾದನು.
46 ಯೋಸೇಫನು ಈಜಿಪ್ಟ್ ರಾಜನ ಸೇವೆಯನ್ನು ಪ್ರಾರಂಭಿಸಿದಾಗ ಮೂವತ್ತು ವರ್ಷದವನಾಗಿದ್ದನು. ಯೋಸೇಫನು ಈಜಿಪ್ಟ್ ದೇಶದಲ್ಲೆಲ್ಲಾ ಸಂಚರಿಸಿದನು. 47 ಏಳು ಒಳ್ಳೆಯ ವರ್ಷಗಳಲ್ಲಿ ದೇಶದಲ್ಲಿ ಬೆಳೆಯು ಚೆನ್ನಾಗಿ ಬೆಳೆಯಿತು. 48 ಈಜಿಪ್ಟಿನಲ್ಲಿ ಯೋಸೇಫನು ಆ ಏಳು ವರ್ಷಗಳ ಕಾಲದಲ್ಲಿ ಆಹಾರವನ್ನು ಸಂಗ್ರಹಿಸಿ ನಗರಗಳ ಉಗ್ರಾಣಗಳಲ್ಲಿಟ್ಟನು. ಪ್ರತಿಯೊಂದು ನಗರದ ಸುತ್ತುಮುತ್ತಲಿನ ಹೊಲಗಳಲ್ಲಿ ಬೆಳೆದ ದವಸಧಾನ್ಯವನ್ನು ಆಯಾ ನಗರಗಳಲ್ಲಿ ಕೂಡಿಸಿಟ್ಟನು. 49 ಯೋಸೇಫನು ಬಹಳ ದವಸಧಾನ್ಯಗಳನ್ನು ಸಂಗ್ರಹಿಸಿದ್ದರಿಂದ ಸಮುದ್ರದ ಮರಳಿನ ರಾಶಿಯೆಂಬಂತೆ ತೋರಿತು; ಲೆಕ್ಕಿಸುವುದಕ್ಕೂ ಅಸಾಧ್ಯವಾಯಿತು.
50 ಯೋಸೇಫನ ಹೆಂಡತಿ ಆಸನತ್ ಓನ್ ನಗರದಲ್ಲಿ ಆಚಾರ್ಯನಾಗಿದ್ದ ಪೋಟೀಫೆರನ ಮಗಳು. ಬರಗಾಲದ ಮೊದಲನೆಯ ವರ್ಷ ಬರುವುದಕ್ಕಿಂತ ಮೊದಲೇ ಯೋಸೇಫನಿಗೆ ಆಸನತಳಲ್ಲಿ ಇಬ್ಬರು ಗಂಡುಮಕ್ಕಳು ಹುಟ್ಟಿದರು. 51 ಮೊದಲನೆಯ ಮಗನು ಹುಟ್ಟಿದಾಗ, “ನನ್ನ ಎಲ್ಲಾ ಕಷ್ಟಗಳನ್ನೂ ನನ್ನ ತಂದೆಯ ಮನೆಯವರನ್ನೂ ಮರೆತುಬಿಡುವಂತೆ ದೇವರು ನನಗೆ ಸಹಾಯ ಮಾಡಿದನು” ಎಂದು ಹೇಳಿ ಯೋಸೇಫನು ಆ ಮಗುವಿಗೆ, “ಮನಸ್ಸೆ” ಎಂದು ಹೆಸರಿಟ್ಟನು. 52 ಎರಡನೆ ಮಗನು ಹುಟ್ಟಿದಾಗ, “ನನಗೆ ಕಷ್ಟ ಬಂದ ದೇಶದಲ್ಲೇ ದೇವರು ನನ್ನನ್ನು ಅಭಿವೃದ್ಧಿಪಡಿಸಿದನು” ಎಂದು ಹೇಳಿ, ಆ ಮಗುವಿಗೆ, “ಎಫ್ರಾಯೀಮ್” ಎಂದು ಹೆಸರಿಟ್ಟನು.
ಬರಗಾಲದ ಪ್ರಾರಂಭ
53 ಈಜಿಪ್ಟಿನಲ್ಲಿ ಸಮೃದ್ಧಿಕರವಾದ ಏಳು ವರ್ಷಗಳು ಮುಗಿದ ಮೇಲೆ 54 ಯೋಸೇಫನು ಹೇಳಿದ್ದಂತೆಯೇ ಕ್ಷಾಮದ ಏಳು ವರ್ಷಗಳು ಆರಂಭಗೊಂಡವು. ಕ್ಷಾಮವು ಸುತ್ತಮುತ್ತಲಿನ ಪ್ರದೇಶಗಳಿಗೆಲ್ಲಾ ಹಬ್ಬಿಕೊಂಡಿತು. ಈಜಿಪ್ಟಿನಲ್ಲಿ ಮಾತ್ರ ಆಹಾರ ದೊರಕುತ್ತಿತ್ತು. 55 ಬರಗಾಲವು ಪ್ರಾರಂಭವಾದಾಗ ಜನರು ಆಹಾರಕ್ಕಾಗಿ ಫರೋಹನನ್ನು ಬೇಡಿಕೊಂಡರು. ಫರೋಹನು ಈಜಿಪ್ಟಿನ ಜನರಿಗೆ, “ಯೋಸೇಫನನ್ನು ಕೇಳಿರಿ; ಅವನು ಹೇಳಿದಂತೆ ಮಾಡಿರಿ” ಎಂದು ಹೇಳಿದನು.
56 ಎಲ್ಲೆಲ್ಲಿಯೂ ಬರಗಾಲವಾದಾಗ, ಯೋಸೇಫನು ಉಗ್ರಾಣಗಳನ್ನು ತೆಗೆಸಿ ದವಸಧಾನ್ಯಗಳನ್ನು ಜನರಿಗೆ ಮಾರಾಟ ಮಾಡಿಸಿದನು. ಈಜಿಪ್ಟಿನಲ್ಲಿ ಬರವು ಭೀಕರವಾಗಿತ್ತು. 57 ಭೂಲೋಕದಲ್ಲೆಲ್ಲಾ ಕ್ಷಾಮವು ಭಯಂಕರವಾಗಿದ್ದುದರಿಂದ ಎಲ್ಲಾ ದೇಶಗಳವರು ಯೋಸೇಫನಿಂದ ಆಹಾರವನ್ನು ಪಡೆದುಕೊಳ್ಳುವುದಕ್ಕಾಗಿ ಈಜಿಪ್ಟಿಗೆ ಬಂದರು.
ಕನಸುಗಳು ನಿಜವಾದವು
42 ಈಜಿಪ್ಟಿನಲ್ಲಿ ದವಸಧಾನ್ಯಗಳಿರುವುದಾಗಿ ಕಾನಾನಿನಲ್ಲಿದ್ದ ಯಾಕೋಬನಿಗೆ ತಿಳಿಯಿತು. ಆದ್ದರಿಂದ ಯಾಕೋಬನು ತನ್ನ ಗಂಡುಮಕ್ಕಳಿಗೆ, “ನಾವು ಇಲ್ಲಿ ಏನೂ ಮಾಡದೆ ಕುಳಿತುಕೊಂಡಿರುವುದೇಕೆ? 2 ಈಜಿಪ್ಟಿನಲ್ಲಿ ದವಸಧಾನ್ಯಗಳಿರುವುದಾಗಿ ನಾನು ಕೇಳಿದ್ದೇನೆ. ಆದ್ದರಿಂದ ನಾವು ಅಲ್ಲಿಗೆ ಹೋಗಿ ನಮ್ಮ ಆಹಾರವನ್ನು ಕೊಂಡುಕೊಳ್ಳೋಣ. ಆಗ ನಾವು ಸಾಯದೆ ಬದುಕಿಕೊಳ್ಳುವೆವು” ಎಂದು ಹೇಳಿದನು.
3 ಆದ್ದರಿಂದ ಯೋಸೇಫನ ಹತ್ತು ಮಂದಿ ಸಹೋದರರು ದವಸಧಾನ್ಯಗಳನ್ನು ಕೊಂಡುಕೊಳ್ಳಲು ಈಜಿಪ್ಟಿಗೆ ಹೋದರು. 4 ಯಾಕೋಬನು ಬೆನ್ಯಾಮೀನನನ್ನು ಕಳುಹಿಸಲಿಲ್ಲ. (ಬೆನ್ಯಾಮೀನನು ಯೋಸೇಫನ ಒಡಹುಟ್ಟಿದ ಒಬ್ಬನೇ ತಮ್ಮನಾಗಿದ್ದನು.) ಬೆನ್ಯಾಮೀನನಿಗೆ ಏನಾದರೂ ಕೇಡಾಗಬಹುದೆಂಬ ಭಯ ಯಾಕೋಬನಿಗಿತ್ತು.
5 ಕಾನಾನಿನಲ್ಲಿ ಬರಗಾಲ ಭೀಕರವಾಗಿತ್ತು. ಆದ್ದರಿಂದ ದವಸಧಾನ್ಯಗಳನ್ನು ಕೊಂಡುಕೊಳ್ಳಲು ಅನೇಕ ಜನರು ಕಾನಾನಿನಿಂದ ಈಜಿಪ್ಟಿಗೆ ಹೋದರು; ಇಸ್ರೇಲನ ಗಂಡುಮಕ್ಕಳೂ ಅವರೊಂದಿಗೆ ಹೋದರು.
6 ಯೋಸೇಫನು ಈಜಿಪ್ಟಿನ ರಾಜ್ಯಪಾಲನಾಗಿದ್ದರಿಂದ ಅವನ ಅನುಮತಿಯಿಲ್ಲದೆ ದವಸಧಾನ್ಯಗಳನ್ನು ಕೊಂಡುಕೊಳ್ಳಲು ಯಾರಿಗೂ ಸಾಧ್ಯವಿರಲಿಲ್ಲ. ಯೋಸೇಫನ ಸಹೋದರರು ಬಂದು ಅವನ ಮುಂದೆ ಅಡ್ಡಬಿದ್ದರು. 7 ಯೋಸೇಫನು ಅವರನ್ನು ಕಂಡು, ತನ್ನ ಅಣ್ಣಂದಿರೆಂದು ತಿಳಿದುಕೊಂಡನು. ಆದರೂ ಅವನು ತನಗೆ ಅವರು ಗೊತ್ತೇ ಇಲ್ಲದಂತೆ ಅವರೊಂದಿಗೆ ಕಟುವಾಗಿ ಮಾತಾಡಿ, ಅವರಿಗೆ, “ನೀವು ಎಲ್ಲಿಂದ ಬಂದಿರುವಿರಿ?” ಎಂದು ಕೇಳಿದನು. ಸಹೋದರರು, “ಆಹಾರವನ್ನು ಕೊಂಡುಕೊಳ್ಳಲು ಕಾನಾನ್ ದೇಶದಿಂದ ಬಂದಿದ್ದೇವೆ” ಎಂದು ಉತ್ತರಿಸಿದರು.
8 ಯೋಸೇಫನು ತನ್ನ ಅಣ್ಣಂದಿರನ್ನು ಗುರುತಿಸಿದರೂ ಅವನ ಅಣ್ಣಂದಿರು ಯೋಸೇಫನನ್ನು ಗುರುತಿಸಲಿಲ್ಲ. 9 ಆಗ ಯೋಸೇಫನು ತನ್ನ ಅಣ್ಣಂದಿರ ಬಗ್ಗೆ ತಾನು ಕಂಡಿದ್ದ ಕನಸುಗಳ ಬಗ್ಗೆ ಜ್ಞಾಪಿಸಿಕೊಂಡು
ಅವರಿಗೆ, “ನೀವು ಆಹಾರವನ್ನು ಕೊಂಡುಕೊಳ್ಳಲು ಬಂದಿಲ್ಲ; ನೀವು ಗೂಢಚಾರರು. ನಮ್ಮ ದೇಶದ ದುರ್ಬಲ ಸ್ಥಳಗಳನ್ನು ತಿಳಿದುಕೊಳ್ಳಲು ಬಂದಿರುವಿರಿ” ಎಂದು ಹೇಳಿದನು.
10 ಸಹೋದರರು ಅವನಿಗೆ, “ಇಲ್ಲ! ಸ್ವಾಮೀ, ನಿಮ್ಮ ಸೇವಕರಾದ ನಾವು ಆಹಾರವನ್ನು ಕೊಂಡುಕೊಳ್ಳಲು ಬಂದಿದ್ದೇವೆ. 11 ನಾವೆಲ್ಲರೂ ಸಹೋದರರು. ನಮ್ಮೆಲ್ಲರಿಗೂ ಒಬ್ಬನೇ ತಂದೆ. ನಾವು ಯಥಾರ್ಥವಾಗಿ ಬಂದವರೇ ಹೊರತು ಗೂಢಚಾರರಲ್ಲ” ಎಂದು ಹೇಳಿದರು.
12 ಯೋಸೇಫನು ಅವರಿಗೆ, “ಇಲ್ಲ! ನಮ್ಮ ದುರ್ಬಲ ಸ್ಥಳಗಳನ್ನು ಕಂಡುಕೊಳ್ಳುವುದಕ್ಕೆ ನೀವು ಬಂದಿದ್ದೀರಿ” ಎಂದು ಹೇಳಿದನು.
13 ಅದಕ್ಕೆ ಅವರು, “ಇಲ್ಲ, ನಾವೆಲ್ಲಾ ಸಹೋದರರು. ನಮ್ಮ ಕುಟುಂಬದಲ್ಲಿ ಹನ್ನೆರಡು ಮಂದಿ ಅಣ್ಣತಮ್ಮಂದಿರು. ನಮ್ಮೆಲ್ಲರಿಗೂ ಒಬ್ಬನೇ ತಂದೆ. ನಮ್ಮ ಕಿರಿಯ ತಮ್ಮನು ನಮ್ಮ ತಂದೆಯೊಂದಿಗೆ ಮನೆಯಲ್ಲಿದ್ದಾನೆ; ಇನ್ನೊಬ್ಬ ತಮ್ಮನು ಹೊರಟುಹೋದನು. ತಮ್ಮ ಸೇವಕರಾದ ನಾವು ಕಾನಾನ್ ದೇಶದಿಂದ ಬಂದವರು” ಎಂದು ಹೇಳಿದರು.
14 ಯೋಸೇಫನು ಅವರಿಗೆ, “ಇಲ್ಲ, ನಾನು ಹೇಳಿದಂತೆ ನೀವು ಗೂಢಚಾರರೇ. 15 ಆದರೆ ನೀವು ಹೇಳುತ್ತಿರುವುದು ಸತ್ಯವಾಗಿದ್ದರೆ ನಿಮ್ಮ ಚಿಕ್ಕ ತಮ್ಮನು ಇಲ್ಲಿಗೆ ಬರಬೇಕು; ಇಲ್ಲವಾದರೆ ಫರೋಹನ ಜೀವದಾಣೆ, ಅಲ್ಲಿಯವರೆಗೂ ನೀವು ಈ ಸ್ಥಳದಿಂದ ಹೋಗಕೂಡದು. 16 ಆದ್ದರಿಂದ ನಿಮ್ಮಲ್ಲೊಬ್ಬನು ಹಿಂತಿರುಗಿ ಹೋಗಿ ನಿಮ್ಮ ಚಿಕ್ಕ ತಮ್ಮನನ್ನು ಇಲ್ಲಿಗೆ ಕರೆದುಕೊಂಡು ಬರಬೇಕು. ಅಲ್ಲಿಯವರೆಗೆ ಉಳಿದವರೆಲ್ಲರೂ ಇಲ್ಲಿ ಸೆರೆಮನೆಯಲ್ಲಿರಬೇಕು. ನೀವು ಹೇಳುತ್ತಿರುವುದು ಸತ್ಯವೋ ಸುಳ್ಳೋ ಆಗ ನನಗೆ ಗೊತ್ತಾಗುವುದು. ಆದರೆ ನೀವಂತೂ ಗೂಢಚಾರರೆಂದು ತಿಳಿದುಕೊಂಡಿದ್ದೇನೆ” ಎಂದು ಹೇಳಿದನು. 17 ಆಮೇಲೆ ಯೋಸೇಫನು ಅವರೆಲ್ಲರನ್ನು ಮೂರು ದಿನಗಳವರೆಗೆ ಸೆರೆಮನೆಯಲ್ಲಿಟ್ಟನು.
ಸಿಮೆಯೋನನನ್ನು ಒತ್ತೆಯಾಳಾಗಿ ಇಟ್ಟದ್ದು
18 ಮೂರು ದಿನಗಳಾದ ಮೇಲೆ ಯೋಸೇಫನು ಅವರಿಗೆ, “ನಾನು ದೇವರಲ್ಲಿ ಭಯಭಕ್ತಿಯುಳ್ಳವನು. ನೀವು ಈ ಕಾರ್ಯವೊಂದನ್ನು ಮಾಡಿದರೆ ನಾನು ನಿಮ್ಮನ್ನು ಉಳಿಸುತ್ತೇನೆ; 19 ನೀವು ಯಥಾರ್ಥವಂತರಾಗಿದ್ದರೆ, ನಿಮ್ಮ ಸಹೋದರರಲ್ಲಿ ಒಬ್ಬನನ್ನು ಸೆರೆಮನೆಯಲ್ಲಿಡುತ್ತೇನೆ; ಉಳಿದವರು ನಿಮ್ಮ ಜನರಿಗಾಗಿ ದವಸಧಾನ್ಯಗಳನ್ನು ತೆಗೆದುಕೊಂಡು ಹೋಗಬಹುದು. 20 ಆಮೇಲೆ ನಿಮ್ಮ ಕಿರಿಯ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬಂದರೆ ನೀವು ಹೇಳುತ್ತಿರುವುದು ಸತ್ಯವೆಂದು ತಿಳಿದುಕೊಳ್ಳುವೆನು” ಎಂದು ಹೇಳಿದನು.
ಸಹೋದರರು ಇದಕ್ಕೆ ಒಪ್ಪಿಕೊಂಡರು. 21 ಅವರು ಒಬ್ಬರಿಗೊಬ್ಬರು, “ನಾವು ನಮ್ಮ ತಮ್ಮನಾದ ಯೋಸೇಫನಿಗೆ ಮಾಡಿದ ಕೆಟ್ಟಕಾರ್ಯಕ್ಕಾಗಿ ಈ ಶಿಕ್ಷೆಯನ್ನು ಅನುಭವಿಸುತ್ತಿದ್ದೇವೆ. ಪ್ರಾಣಸಂಕಟದಲ್ಲಿದ್ದ ಅವನು ತನ್ನನ್ನು ಕಾಪಾಡುವಂತೆ ನಮ್ಮನ್ನು ಬೇಡಿಕೊಂಡರೂ ನಾವು ಅವನ ಮೊರೆಯನ್ನು ತಿರಸ್ಕರಿಸಿದೆವು. ಆದ್ದರಿಂದ ಈಗ ಪ್ರಾಣಸಂಕಟಕ್ಕೀಡಾಗಿದ್ದೇವೆ” ಎಂದು ಮಾತಾಡಿಕೊಂಡರು.
22 ಅದಕ್ಕೆ ರೂಬೇನನು ಅವರಿಗೆ, “ಆ ಹುಡುಗನಿಗೆ ಕೇಡು ಮಾಡಬೇಡಿ ಎಂದು ನಾನು ನಿಮಗೆ ಹೇಳಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ. ಆದ್ದರಿಂದ ಈಗ ನಾವು ಅವನ ಮರಣಕ್ಕೆ ತಕ್ಕ ಶಿಕ್ಷೆ ಹೊಂದುತ್ತಿದ್ದೇವೆ” ಎಂದು ಹೇಳಿದನು.
23 ಯೋಸೇಫನು ತನ್ನ ಸಹೋದರರೊಂದಿಗೆ ಭಾಷಾಂತರಕಾರನ ಮೂಲಕ ಮಾತಾಡುತ್ತಿದ್ದನು. ಆದ್ದರಿಂದ ಆ ಸಹೋದರರು ತಮ್ಮ ಭಾಷೆ ಯೋಸೇಫನಿಗೆ ಅರ್ಥವಾಗುವುದಿಲ್ಲವೆಂದು ತಿಳಿದುಕೊಂಡಿದ್ದರು. ಆದರೆ ಯೋಸೇಫನಿಗೆ ಅವರ ಮಾತುಗಳೆಲ್ಲಾ ಅರ್ಥವಾಯಿತು. 24 ಅವರ ಮಾತುಗಳಿಂದ ಅವನಿಗೆ ತುಂಬ ದುಃಖವಾಯಿತು. ಆದ್ದರಿಂದ ಯೋಸೇಫನು ಅವರ ಬಳಿಯಿಂದ ಸ್ವಲ್ಪದೂರ ಹೋಗಿ ಕಣ್ಣೀರು ಸುರಿಸಿ ಹಿಂತಿರುಗಿ ಬಂದನು. ಬಳಿಕ ಸಹೋದರರಲ್ಲಿ ಒಬ್ಬನಾದ ಸಿಮೆಯೋನನನ್ನು ಅವರ ಕಣ್ಣೆದುರಿನಲ್ಲೇ ಬಂಧಿಸಿದನು. 25 ಆಮೇಲೆ ಯೋಸೇಫನು ತನ್ನ ಸೇವಕರಿಗೆ, “ಅವರ ಚೀಲಗಳಿಗೆ ದವಸಧಾನ್ಯಗಳನ್ನು ತುಂಬಿರಿ” ಎಂದು ಹೇಳಿದನು. ಈ ದವಸಧಾನ್ಯಗಳಿಗೆ ಸಹೋದರರು ಹಣವನ್ನು ಪಾವತಿ ಮಾಡಿದರೂ ಯೋಸೇಫನು ಆ ಹಣವನ್ನು ಇಟ್ಟುಕೊಳ್ಳಲಿಲ್ಲ. ಅವನು ಆ ಹಣವನ್ನು ಅವರವರ ದವಸಧಾನ್ಯಗಳ ಚೀಲಗಳಲ್ಲಿ ಇಡಿಸಿದನು. ಅಲ್ಲದೆ ಪ್ರಯಾಣಕ್ಕೆ ಬೇಕಾದ ವಸ್ತುಗಳನ್ನೂ ಅವರಿಗೆ ಕೊಟ್ಟನು.
26 ಸಹೋದರರು ದವಸಧಾನ್ಯಗಳನ್ನು ಕತ್ತೆಗಳ ಮೇಲೆ ಹೇರಿಸಿಕೊಂಡು ಅಲ್ಲಿಂದ ಹೊರಟರು. 27 ಆ ರಾತ್ರಿ ಸಹೋದರರು ಒಂದು ಸ್ಥಳದಲ್ಲಿ ಇಳಿದುಕೊಂಡರು. ಸಹೋದರರಲ್ಲಿ ಒಬ್ಬನು ಕತ್ತೆಗೋಸ್ಕರ ಸ್ವಲ್ಪ ದವಸಧಾನ್ಯಗಳನ್ನು ತೆಗೆದುಕೊಳ್ಳಲು ತನ್ನ ಚೀಲವನ್ನು ಬಿಚ್ಚಿದಾಗ ತಾನು ಪಾವತಿ ಮಾಡಿದ್ದ ಹಣವು ಚೀಲದಲ್ಲಿರುವುದನ್ನು ನೋಡಿದನು. 28 ಅವನು ತನ್ನ ಉಳಿದ ಸಹೋದರರಿಗೆ, “ನೋಡಿ, ನಾನು ದವಸಧಾನ್ಯಗಳಿಗೆ ಕೊಟ್ಟ ಹಣ ಇಲ್ಲೇ ಇದೆ. ಯಾರೋ ಒಬ್ಬನು ಹಣವನ್ನು ಮತ್ತೆ ನನ್ನ ಚೀಲದಲ್ಲಿ ಇಟ್ಟಿರುವನು” ಎಂದು ಹೇಳಿದನು. ಸಹೋದರರಿಗೆ ತುಂಬ ಭಯವಾಯಿತು. ಅವರು ಒಬ್ಬರಿಗೊಬ್ಬರು, “ದೇವರು ನಮಗೆ ಮಾಡುತ್ತಿರುವುದೇನು?” ಎಂದು ಮಾತಾಡಿಕೊಂಡರು.
ಸಹೋದರರು ಯಾಕೋಬನಿಗೆ ನೀಡಿದ ವರದಿ
29 ಸಹೋದರರು ಕಾನಾನ್ ದೇಶದಲ್ಲಿದ್ದ ತಮ್ಮ ತಂದೆಯಾದ ಯಾಕೋಬನ ಬಳಿಗೆ ಹೋದರು. ನಡೆದ ಸಂಗತಿಗಳನ್ನೆಲ್ಲಾ ಯಾಕೋಬನಿಗೆ ಹೇಳುತ್ತಾ, 30 “ಆ ದೇಶದ ರಾಜ್ಯಪಾಲನು ನಮ್ಮನ್ನು ಗೂಢಚಾರರೆಂದು ಭಾವಿಸಿ ನಮ್ಮೊಂದಿಗೆ ಒರಟಾಗಿ ಮಾತನಾಡಿದನು. 31 ನಾವು ಅವನಿಗೆ, ‘ನಾವು ಯಥಾರ್ಥವಂತರು; ಗೂಢಚಾರರಲ್ಲ’ ಎಂದು ಹೇಳಿದೆವು. 32 ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರೆಂದೂ ನಮಗೆ ಒಬ್ಬನೇ ತಂದೆಯೆಂದೂ ಅವನಿಗೆ ಹೇಳಿದೆವು. ನಮ್ಮ ಒಬ್ಬ ತಮ್ಮನು ಸತ್ತುಹೋದನೆಂದೂ ನಮ್ಮ ಕಿರಿಯ ತಮ್ಮನು ಕಾನಾನ್ ದೇಶದಲ್ಲಿರುವ ನಮ್ಮ ಮನೆಯಲ್ಲಿರುವನೆಂದೂ ಅವನಿಗೆ ಹೇಳಿದೆವು.
33 “ಆಗ ಆ ದೇಶದ ರಾಜ್ಯಪಾಲನು, ‘ನೀವು ಯಥಾರ್ಥವಂತರೆಂದು ತೋರಿಸಬೇಕಾದರೆ ನಿಮ್ಮ ಸಹೋದರರಲ್ಲಿ ಒಬ್ಬನನ್ನು ನನ್ನ ಬಳಿಯಲ್ಲಿ ಬಿಟ್ಟು ನಿಮ್ಮ ಕುಟುಂಬಗಳಿಗೆ ದವಸಧಾನ್ಯಗಳನ್ನು ತೆಗೆದುಕೊಂಡು ಹೋಗಿರಿ. 34 ಆಮೇಲೆ ನಿಮ್ಮ ಕಿರಿಯ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ. ಆಗ ನೀವು ಯಥಾರ್ಥರಾದವರೋ ಗೂಢಚಾರರೋ ಎಂದು ಗೊತ್ತಾಗುವುದು. ನೀವು ಸತ್ಯವನ್ನು ಹೇಳಿದ್ದರೆ ನಿಮ್ಮ ಸಹೋದರನನ್ನು ನಿಮಗೆ ಒಪ್ಪಿಸುವೆನು; ನಮ್ಮ ದೇಶದಲ್ಲಿ ಆಹಾರವನ್ನು ಕೊಳ್ಳಲು ನಿಮಗೆ ಯಾವ ತಡೆಯೂ ಇರುವುದಿಲ್ಲ’ ಎಂದು ಹೇಳಿದನು” ಎಂದರು.
35 ಬಳಿಕ ಸಹೋದರರು ತಮ್ಮ ಚೀಲಗಳಿಂದ ದವಸಧಾನ್ಯಗಳನ್ನು ತೆಗೆಯಲು ಹೋದಾಗ ಪ್ರತಿಯೊಬ್ಬ ಸಹೋದರನ ಚೀಲದಲ್ಲಿಯೂ ತಾವು ಪಾವತಿ ಮಾಡಿದ್ದ ಹಣವನ್ನು ಕಂಡು ತುಂಬ ಭಯಗೊಂಡರು.
36 ಯಾಕೋಬನು ಅವರಿಗೆ, “ನಾನು ನನ್ನ ಮಕ್ಕಳನ್ನೆಲ್ಲ ಕಳೆದುಕೊಳ್ಳಬೇಕೆಂಬುದು ನಿಮಗೆ ಇಷ್ಟವೇ? ಯೋಸೇಫನು ಇಲ್ಲವಾದನು. ಸಿಮೆಯೋನನೂ ಇಲ್ಲವಾದನು. ಈಗ ಬೆನ್ಯಾಮೀನನನ್ನು ತೆಗೆದುಕೊಂಡು ಹೋಗಬೇಕೆಂದಿರುವಿರಿ” ಎಂದು ಹೇಳಿದನು.
37 ರೂಬೇನನು ತನ್ನ ತಂದೆಗೆ, “ಅಪ್ಪಾ, ನಾನು ಬೆನ್ಯಾಮೀನನನ್ನು ಕರೆದುಕೊಂಡು ಬರದಿದ್ದರೆ ನೀನು ನನ್ನ ಇಬ್ಬರು ಗಂಡುಮಕ್ಕಳನ್ನು ಕೊಲ್ಲಬಹುದು. ನನ್ನನ್ನು ನಂಬು. ನಾನು ಬೆನ್ಯಾಮೀನನನ್ನು ನಿನ್ನ ಬಳಿಗೆ ಕರೆದುಕೊಂಡು ಬರುವೆನು” ಎಂದು ಹೇಳಿದನು.
38 ಯಾಕೋಬನು, “ನಾನು ನಿಮ್ಮೊಂದಿಗೆ ಬೆನ್ಯಾಮೀನನನ್ನು ಕಳುಹಿಸಿಕೊಡುವುದಿಲ್ಲ. ಅವನ ಸಹೋದರನು ಸತ್ತುಹೋದನು; ನನ್ನ ಹೆಂಡತಿಯಾದ ರಾಹೇಲಳಲ್ಲಿ ಹುಟ್ಟಿದ ಗಂಡುಮಕ್ಕಳಲ್ಲಿ ಇವನೊಬ್ಬನೇ ಉಳಿದಿರುವುದು. ಈಜಿಪ್ಟಿಗೆ ಪ್ರಯಾಣ ಮಾಡುವಾಗ ಇವನಿಗೆ ಅಪಾಯ ಸಂಭವಿಸಿದರೆ ವಯಸ್ಸಾದ ನಾನು ದುಃಖದಿಂದಲೇ ಸಮಾಧಿಗೆ ಸೇರಲು ನೀವು ಕಾರಣವಾಗುವಿರಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International