Beginning
ಯೆಹೂದನು ಮತ್ತು ತಾಮಾರಳು
38 ಆ ಕಾಲದಲ್ಲಿ ಯೆಹೂದನು ತನ್ನ ಸಹೋದರರನ್ನು ಬಿಟ್ಟು ಹೀರಾ ಎಂಬುವನೊಂದಿಗೆ ವಾಸಿಸಲು ಹೋದನು. ಅವನು ಅದುಲ್ಲಾಮ್ ಊರಿನವನು. 2 ಯೆಹೂದನು ಅಲ್ಲಿ ಒಬ್ಬ ಕಾನಾನ್ಯನ ಮಗಳನ್ನು ಕಂಡು ಆಕೆಯನ್ನು ಮದುವೆಮಾಡಿಕೊಂಡನು. ಆ ಹುಡುಗಿಯ ತಂದೆಯ ಹೆಸರು ಶೂಗ. 3 ಆಕೆಯು ಒಬ್ಬ ಮಗನನ್ನು ಹೆತ್ತಳು. ಅವರು ಅವನಿಗೆ ಏರ ಎಂದು ಹೆಸರಿಟ್ಟರು. 4 ಬಳಿಕ ಆಕೆ ಮತ್ತೊಬ್ಬ ಮಗನಿಗೆ ಜನನವಿತ್ತಳು. ಅವರು ಆ ಮಗನಿಗೆ ಓನಾನ ಎಂದು ಹೆಸರಿಟ್ಟರು. 5 ಆಕೆಗೆ ಮೂರನೆಯ ಮಗನು ಹುಟ್ಟಿದಾಗ ಆಕೆ ಅದಕ್ಕೆ ಶೇಲಹ ಎಂದು ಹೆಸರಿಟ್ಟಳು. ಆ ಮಗು ಹುಟ್ಟಿದಾಗ ಯೆಹೂದನು ಕಜೀಬೂರಿನಲ್ಲಿ ವಾಸಿಸುತ್ತಿದ್ದನು.
6 ಯೆಹೂದನು ತನ್ನ ಮೊದಲನೆ ಮಗನಾದ ಏರನಿಗಾಗಿ ಒಬ್ಬ ಕನ್ನಿಕೆಯನ್ನು ಆಯ್ಕೆಮಾಡಿದನು. ಆಕೆಯ ಹೆಸರು ತಾಮಾರ. 7 ಆದರೆ ಏರನು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ಯೆಹೋವನು ಅವನನ್ನು ಸಾಯಿಸಿದನು. 8 ಆಗ ಯೆಹೂದನು ಏರನ ತಮ್ಮನಾದ ಓನಾನನಿಗೆ, “ಹೋಗು, ಸತ್ತುಹೋದ ನಿನ್ನ ಅಣ್ಣನ ಹೆಂಡತಿಗೆ ಗಂಡನಂತಿರು. ನಿನ್ನ ಮೂಲಕ ಆಕೆಯಲ್ಲಿ ಹುಟ್ಟುವ ಮಕ್ಕಳು ನಿನ್ನ ಅಣ್ಣನಾದ ಏರನ ಮಕ್ಕಳಾಗಿರಲಿ” ಎಂದು ಹೇಳಿದನು.
9 ತಾಮಾರಳಲ್ಲಿ ತನಗೆ ಹುಟ್ಟುವ ಮಕ್ಕಳು ತನ್ನವರಾಗುವುದಿಲ್ಲವೆಂದು ಅರಿತುಕೊಂಡು ಓನಾನನು ಆಕೆಯನ್ನು ಕೂಡಿದರೂ ವೀರ್ಯವನ್ನು ನೆಲದ ಪಾಲು ಮಾಡುತ್ತಿದ್ದನು. 10 ಇದು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿದ್ದರಿಂದ ಆತನು ಓನಾನನನ್ನು ಸಹ ಸಾಯಿಸಿದನು. 11 ಆಗ ಯೆಹೂದನು ತನ್ನ ಸೊಸೆಯಾದ ತಾಮಾರಳಿಗೆ, “ನಿನ್ನ ತಂದೆಯ ಮನೆಗೆ ಹಿಂತಿರುಗಿ ಹೋಗಿ ಅಲ್ಲಿರು. ನನ್ನ ಮಗನಾದ ಶೇಲಹನು ದೊಡ್ಡವನಾಗುವ ತನಕ ಮದುವೆಯಾಗಬೇಡ” ಎಂದು ಹೇಳಿದನು. ಶೇಲಹನು ಸಹ ತನ್ನ ಅಣ್ಣಂದಿರಂತೆ ಸಾಯಬಹುದೆಂದು ಯೆಹೂದನು ಹೆದರಿಕೊಂಡಿದ್ದನು. ಆದ್ದರಿಂದ ತಾಮಾರಳು ತನ್ನ ತಂದೆಯ ಮನೆಗೆ ಹಿಂತಿರುಗಿ ಹೋದಳು.
12 ಆಮೇಲೆ ಬಹುದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ತೀರಿಕೊಂಡಳು. ಯೆಹೂದನು ತನ್ನ ದುಃಖದ ಸಮಯ ತೀರಿದ ಮೇಲೆ ಅದುಲ್ಲಾಮ್ಯದವನಾದ ತನ್ನ ಸ್ನೇಹಿತ ಹೀರಾನೊಂದಿಗೆ ತನ್ನ ಕುರಿಗಳ ಉಣ್ಣೆ ಕತ್ತರಿಸುವುದಕ್ಕಾಗಿ ತಿಮ್ನಾ ಊರಿಗೆ ಹೋದನು. 13 ಮಾವನು ಉಣ್ಣೆ ಕತ್ತರಿಸುವುದಕ್ಕಾಗಿ ತಿಮ್ನಾ ಊರಿಗೆ ಹೋಗುತ್ತಿರುವುದು ತಾಮಾರಳಿಗೆ ತಿಳಿಯಿತು. 14 ತಾಮಾರಳು ಯಾವಾಗಲೂ ವಿಧವೆಯ ವಸ್ತ್ರಗಳನ್ನು ಧರಿಸಿಕೊಂಡಿರುತ್ತಿದ್ದಳು. ಆದರೆ ಈಗ ಆಕೆ ಬೇರೆ ಬಟ್ಟೆಗಳನ್ನು ಧರಿಸಿಕೊಂಡು ತನ್ನ ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡು ತಿಮ್ನಾ ಊರಿನ ಸಮೀಪದಲ್ಲಿರುವ ಏನಯಿಮೂರಿನ ದಾರಿಯಲ್ಲಿ ಕುಳಿತುಕೊಂಡಳು. ಯೆಹೂದನ ಚಿಕ್ಕಮಗನಾದ ಶೇಲಹನು ಬೆಳೆದು ದೊಡ್ಡವನಾಗಿರುವುದು ತಾಮಾರಳಿಗೆ ತಿಳಿದಿತ್ತು. ಆದರೆ ಆಕೆಗೆ ಅವನನ್ನು ಮದುವೆ ಮಾಡಿಸಲು ಯೆಹೂದನು ಆಲೋಚಿಸಿರಲಿಲ್ಲ.
15 ಯೆಹೂದನು ಆ ದಾರಿಯಲ್ಲಿ ಪ್ರಯಾಣ ಮಾಡುತ್ತಿರಲು ಆಕೆಯನ್ನು ಕಂಡು ವೇಶ್ಯೆಯೆಂದು ಭಾವಿಸಿದನು. (ಆಕೆಯು ವೇಶ್ಯೆಯಂತೆ ಮುಸುಕು ಹಾಕಿಕೊಂಡಿದ್ದಳು.) 16 ಆದ್ದರಿಂದ ಯೆಹೂದನು ಆಕೆಯ ಬಳಿಗೆ ಹೋಗಿ, “ನಾನು ನಿನ್ನನ್ನು ಕೂಡಬಹುದೇ?” ಎಂದು ಕೇಳಿದನು. (ಆಕೆ ತನ್ನ ಸೊಸೆಯಾದ ತಾಮಾರಳೆಂದು ಯೆಹೂದನಿಗೆ ತಿಳಿದಿರಲಿಲ್ಲ.)
ಅವಳು “ನೀನು ನನಗೆ ಏನು ಕೊಡುವೆ?” ಎಂದು ಕೇಳಿದಳು.
17 ಯೆಹೂದನು, “ನನ್ನ ಮಂದೆಯಿಂದ ನಿನಗೆ ಒಂದು ಆಡುಮರಿಯನ್ನು ಕಳುಹಿಸಿಕೊಡುವೆ” ಎಂದು ಉತ್ತರಿಸಿದನು.
ಅವಳು “ಸರಿ, ನೀನು ನನಗೆ ಆಡುಮರಿಯನ್ನು ಕಳುಹಿಸಿ ಕೊಡುವ ತನಕ ನನ್ನಲ್ಲಿ ಏನಾದರೂ ಒತ್ತೆಯಿಡಬೇಕು” ಎಂದು ಹೇಳಿದಳು.
18 ಯೆಹೂದನು, “ಏನು ಒತ್ತೆಯಿಡಲಿ?” ಎಂದು ಕೇಳಿದನು.
ತಾಮಾರಳು, “ನಿನ್ನ ಪತ್ರಗಳ ಮೇಲೆ ಉಪಯೋಗಿಸುವ ನಿನ್ನ ಮುದ್ರೆಯನ್ನೂ ಅದರ ದಾರವನ್ನೂ ಮತ್ತು ನಿನ್ನ ಊರುಗೋಲನ್ನೂ ಕೊಡು” ಎಂದು ಉತ್ತರಿಸಿದಳು. ಯೆಹೂದನು ಅವುಗಳನ್ನು ಆಕೆಗೆ ಕೊಟ್ಟನು. ಯೆಹೂದನು ಆಕೆಯನ್ನು ಕೂಡಿದನು; ಅವಳು ಗರ್ಭಿಣಿಯಾದಳು. 19 ತಾಮಾರಳು ಮನೆಗೆ ಹೋಗಿ ಮುಸುಕನ್ನು ತೆಗೆದುಹಾಕಿ ಮತ್ತೆ ವಿಧವಾವಸ್ತ್ರಗಳನ್ನು ಧರಿಸಿಕೊಂಡಳು.
20 ಯೆಹೂದನು ಮಾತು ಕೊಟ್ಟಿದ್ದಂತೆಯೇ ಒಂದು ಆಡುಮರಿಯನ್ನು ತನ್ನ ಸ್ನೇಹಿತನಾದ ಹೀರಾನ ಮೂಲಕ ಏನಯಿಮಿಗೆ ಕಳುಹಿಸಿ ಆ ಮುದ್ರೆಯನ್ನೂ ಊರುಗೋಲನ್ನೂ ತೆಗೆದುಕೊಂಡು ಬರುವಂತೆ ಅವನಿಗೆ ತಿಳಿಸಿದನು. ಆದರೆ ಅವನು ಅವಳನ್ನು ಕಂಡುಹಿಡಿಯಲಾಗಲಿಲ್ಲ. 21 ಅವನು ಏನಯಿಮ್ ಊರಿನ ಕೆಲವು ಗಂಡಸರಿಗೆ, “ಇಲ್ಲಿಯ ದಾರಿಯ ಸಮೀಪದಲ್ಲಿರುತ್ತಿದ್ದ ವೇಶ್ಯೆಯು ಎಲ್ಲಿದ್ದಾಳೆ?” ಎಂದು ಕೇಳಿದನು.
ಅದಕ್ಕೆ ಅವರು, “ಇಲ್ಲಿ ಯಾವ ವೇಶ್ಯೆಯೂ ಇಲ್ಲ” ಎಂದು ಉತ್ತರಿಸಿದರು.
22 ಆದ್ದರಿಂದ ಅವನು ಯೆಹೂದನ ಬಳಿಗೆ ಹಿಂತಿರುಗಿ ಬಂದು, “ನಾನು ಆ ವೇಶ್ಯೆಯನ್ನು ಕಂಡುಹಿಡಿಯಲಾಗಲಿಲ್ಲ. ಅದಲ್ಲದೆ ಆ ಸ್ಥಳದ ಗಂಡಸರು ಅಲ್ಲಿ ಒಬ್ಬ ವೇಶ್ಯೆಯೂ ಇಲ್ಲ ಎಂದು ಹೇಳಿದರು” ಅಂದನು.
23 ಅದಕ್ಕೆ ಯೆಹೂದನು, “ಆಕೆ ಆ ವಸ್ತುಗಳನ್ನು ಇಟ್ಟುಕೊಳ್ಳಲಿ. ಜನರು ನಮ್ಮನ್ನು ಕಂಡು ನಗುವುದು ನನಗೆ ಇಷ್ಟವಿಲ್ಲ. ನಾನು ಅವಳಿಗೆ ಆಡನ್ನು ಕೊಡಲು ಪ್ರಯತ್ನಿಸಿದೆ. ಆದರೆ ಅವಳು ನಿನಗೆ ಸಿಕ್ಕಲಿಲ್ಲವಷ್ಟೇ” ಎಂದು ಹೇಳಿದನು.
ತಾಮಾರಳಿಗೆ ಗರ್ಭಧಾರಣೆ
24 ಮೂರು ತಿಂಗಳಾದ ಬಳಿಕ, ಯಾರೋ ಒಬ್ಬನು ಯೆಹೂದನಿಗೆ, “ನಿನ್ನ ಸೊಸೆಯಾದ ತಾಮಾರಳು ವ್ಯಭಿಚಾರದಿಂದ ಗರ್ಭಿಣಿಯಾಗಿದ್ದಾಳೆ” ಎಂದು ತಿಳಿಸಿದನು.
ಆಗ ಯೆಹೂದನು, “ಆಕೆಯನ್ನು ಎಳೆದುಕೊಂಡು ಹೋಗಿ ಸುಟ್ಟುಬಿಡಿ” ಎಂದು ಹೇಳಿದನು.
25 ಆ ಗಂಡಸರು ತಾಮಾರಳನ್ನು ಕೊಲ್ಲಲು ಆಕೆಯ ಬಳಿಗೆ ಹೋದರು. ಆದರೆ ಆಕೆ ತನ್ನ ಮಾವನಿಗೆ, “ನನ್ನನ್ನು ಗರ್ಭಿಣಿ ಮಾಡಿದವನು ಈ ವಸ್ತುಗಳ ಒಡೆಯ. ಈ ವಸ್ತುಗಳನ್ನು ನೋಡು! ಇವು ಯಾರವು? ಈ ಮುದ್ರೆಯೂ ದಾರವೂ ಯಾರವು? ಇದು ಯಾರ ಕೈಕೋಲು?” ಎಂಬ ಸಂದೇಶವನ್ನು ಹೇಳಿ ಕಳುಹಿಸಿದಳು.
26 ಯೆಹೂದನು ಆ ವಸ್ತುಗಳನ್ನು ಗುರುತಿಸಿ, “ಆಕೆ ಸರಿಯಾದದ್ದನ್ನೇ ಮಾಡಿದ್ದಾಳೆ. ನಾನೇ ತಪ್ಪು ಮಾಡಿದೆ. ನಾನು ಆಕೆಗೆ ಮಾತುಕೊಟ್ಟಂತೆ ನನ್ನ ಮಗನಾದ ಶೇಲಹನನ್ನು ಆಕೆಗೆ ಕೊಡಬೇಕಿತ್ತು” ಎಂದು ಹೇಳಿದನು. ಆದರೆ ಯೆಹೂದನು ಆಕೆಯೊಡನೆ ಮತ್ತೆ ಮಲಗಿಕೊಳ್ಳಲಿಲ್ಲ.
27 ತಾಮಾರಳಿಗೆ ಹೆರಿಗೆಕಾಲ ಬಂತು. ಆಕೆಗೆ ಅವಳಿಜವಳಿ ಮಕ್ಕಳಾಗುವುದನ್ನು ದಾದಿಯು ಗಮನಿಸಿದಳು. 28 ಆಕೆಗೆ ಹೆರಿಗೆಯಾಗುವಾಗ ಒಂದು ಮಗು ತನ್ನ ಕೈಚಾಚಿತು. ದಾದಿಯು ಆ ಮಗುವಿನ ಕೈಗೆ ಕೆಂಪುದಾರವನ್ನು ಕಟ್ಟಿ, “ಮೊದಲನೆಯವನು” ಅಂದಳು. 29 ಆದರೆ ಆ ಮಗು ತನ್ನ ಕೈಯನ್ನು ಹಿಂದಕ್ಕೆ ಎಳೆದುಕೊಂಡಿತು. ಆಮೇಲೆ ಮತ್ತೊಂದು ಮಗುವು ಮೊದಲು ಹುಟ್ಟಿತು. ಆದ್ದರಿಂದ ದಾದಿಯು, “ನೀನು ಮೊದಲನೆಯವನನ್ನು ಛೇದಿಸಿಕೊಂಡು ಬಂದೆ” ಅಂದಳು. ಆದ್ದರಿಂದ ಅವರು ಆ ಮಗುವಿಗೆ “ಪೆರೆಚ್” ಎಂದು ಹೆಸರಿಟ್ಟರು. 30 ಆ ಬಳಿಕ ಮತ್ತೊಂದು ಮಗುವು ಹೊರಬಂದಿತು. ಆ ಮಗುವಿನ ಕೈಯಲ್ಲಿ ಕೆಂಪುದಾರವಿತ್ತು. ಅವರು ಅವನಿಗೆ “ಜೆರಹ” ಎಂದು ಹೆಸರಿಟ್ಟರು.
ಈಜಿಪ್ಟಿನಲ್ಲಿ ಯೋಸೇಫನನ್ನು ಪೋಟೀಫರನಿಗೆ ಮಾರಿದ್ದು
39 ಯೋಸೇಫನನ್ನು ಖರೀದಿಮಾಡಿದ ವ್ಯಾಪಾರಿಗಳು ಅವನನ್ನು ಈಜಿಪ್ಟಿಗೆ ತೆಗೆದುಕೊಂಡು ಬಂದು ಫರೋಹನ ಕಾವಲುಗಾರರ ನಾಯಕನಾದ ಪೋಟೀಫರನಿಗೆ ಮಾರಿದರು. 2 ಆದರೆ ಯೆಹೋವನ ಸಹಾಯದಿಂದ ಯೋಸೇಫನು ಏಳಿಗೆಯಾಗಿ ತನ್ನ ಯಜಮಾನನಾದ ಈಜಿಪ್ಟಿನ ಪೋಟೀಫರನ ಮನೆಯಲ್ಲಿ ಸೇವಕನಾದನು.
3 ಯೆಹೋವನು ಯೋಸೇಫನ ಸಂಗಡವಿದ್ದು ಅವನನ್ನು ಎಲ್ಲಾ ಕೆಲಸಕಾರ್ಯಗಳಲ್ಲಿ ಯಶಸ್ವಿಯಾಗುವಂತೆ ಮಾಡುತ್ತಿರುವುದನ್ನು ಪೋಟೀಫರನು ಗಮನಿಸಿದನು. 4 ಪೋಟೀಫರನು ಯೋಸೇಫನ ವಿಷಯದಲ್ಲಿ ತುಂಬ ಸಂತೋಷಪಟ್ಟು ಸ್ವಂತ ಸೇವಕನನ್ನಾಗಿ ಮಾಡಿಕೊಂಡನು; ಅಲ್ಲದೆ ಮನೆಯ ಮೇಲ್ವಿಚಾರಣೆಯನ್ನು ಒಪ್ಪಿಸಿಕೊಟ್ಟನು; ತನ್ನ ಆಸ್ತಿಗೆಲ್ಲಾ ಮೇಲಾಧಿಕಾರಿಯನ್ನಾಗಿ ನೇಮಿಸಿದನು. 5 ಪೋಟೀಫರನು ಯೋಸೇಫನಿಗೆ ಮನೆಯ ಮೇಲ್ವಿಚಾರಣೆಯನ್ನು ಕೊಟ್ಟು ಆಸ್ತಿಗೆ ಅವನನ್ನು ಜವಾಬ್ದಾರನನ್ನಾಗಿ ಮಾಡಿದ ಮೇಲೆ ಯೆಹೋವನು ಪೋಟೀಫರನ ಮನೆಯನ್ನೂ ಬೆಳೆಗಳನ್ನೂ ಆಸ್ತಿಯನ್ನೂ ಆಶೀರ್ವದಿಸಿದನು. 6 ಆದ್ದರಿಂದ ಪೋಟೀಫರನು ತಾನು ಊಟಮಾಡುವ ಆಹಾರವೊಂದನ್ನು ಬಿಟ್ಟು ಉಳಿದೆಲ್ಲದರ ಜವಾಬ್ದಾರಿಯನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಿಂದ ಇದ್ದನು.
ಯೋಸೇಫನು ಪೋಟೀಫರನ ಹೆಂಡತಿಯನ್ನು ತಿರಸ್ಕರಿಸಿದ್ದು
ಯೋಸೇಫನು ನೋಡಲು ಸುಂದರನಾಗಿಯೂ ರೂಪವಂತನಾಗಿಯೂ ಇದ್ದನು. 7 ಸ್ವಲ್ಪ ಕಾಲದನಂತರ, ಯೋಸೇಫನ ಒಡೆಯನ ಹೆಂಡತಿಯು ಯೋಸೇಫನ ಮೇಲೆ ಆಸೆಪಟ್ಟಳು. ಒಂದು ದಿನ ಆಕೆ ಅವನಿಗೆ, “ನನ್ನೊಂದಿಗೆ ಮಲಗಿಕೊ” ಎಂದು ಹೇಳಿದಳು.
8 ಆದರೆ ಯೋಸೇಫನು ತಿರಸ್ಕರಿಸಿದನು. ಅವನು, “ನನ್ನ ಧಣಿಯು ಈ ಮನೆಯ ಜವಾಬ್ದಾರಿಕೆಗಳನ್ನೆಲ್ಲಾ ನನಗೆ ವಹಿಸಿ ನಿಶ್ಚಿಂತೆಯಿಂದಿದ್ದಾನೆ. 9 ನನ್ನ ಧಣಿಯು ಈ ಮನೆಯ ಸರ್ವಾಧಿಕಾರವನ್ನು ನನಗೆ ಕೊಟ್ಟಿದ್ದರೂ ತನ್ನ ಧರ್ಮಪತ್ನಿಯಾದ ನಿನ್ನನ್ನು ನನಗೆ ಅಧೀನಪಡಿಸಿಲ್ಲ. ಹೀಗಿರಲು ಇಂಥಾ ಮಹಾ ದುಷ್ಕೃತ್ಯವನ್ನು ನಡೆಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಉತ್ತರಕೊಟ್ಟನು.
10 ಆ ಸ್ತ್ರೀಯು ಪ್ರತಿದಿನವೂ ಯೋಸೇಫನನ್ನು ಒತ್ತಾಯಿಸಿದಳು. ಆದರೆ ಯೋಸೇಫನು ಆಕೆಯೊಂದಿಗೆ ಮಲಗಿಕೊಳ್ಳಲು ಒಪ್ಪಲಿಲ್ಲ. 11 ಒಂದು ದಿನ ಯೋಸೇಫನು ತನ್ನ ಕೆಲಸದ ನಿಮಿತ್ತ ಮನೆಯೊಳಗೆ ಹೋದನು. ಆಗ ಮನೆಯಲ್ಲಿ ಇದ್ದವನು ಅವನೊಬ್ಬನೇ. 12 ಅವನ ಧಣಿಯ ಹೆಂಡತಿಯು ಅವನ ಮೇಲಂಗಿಯನ್ನು ಹಿಡಿದುಕೊಂಡು, “ಬಾ ನನ್ನೊಂದಿಗೆ ಮಲಗಿಕೊ” ಎಂದು ಕರೆದಳು. ಕೂಡಲೇ ಯೋಸೇಫನು ತನ್ನ ಮೇಲಂಗಿಯನ್ನೇ ಬಿಟ್ಟು ಅಲ್ಲಿಂದ ಓಡಿಹೋದನು.
13 ಯೋಸೇಫನು ತನ್ನ ಮೇಲಂಗಿಯನ್ನು ಬಿಟ್ಟು ಓಡಿಹೋದದ್ದರಿಂದ ಸಿಟ್ಟುಗೊಂಡ ಅವಳು 14 ಮನೆಯ ಹೊರಗಿದ್ದ ಸೇವಕರನ್ನು ಕರೆದು, “ನೋಡಿ, ನಮಗೆ ಅವಮಾನ ಮಾಡುವುದಕ್ಕಾಗಿ ಈ ಇಬ್ರಿಯ ಗುಲಾಮನನ್ನು ಇಲ್ಲಿಗೆ ತರಲಾಗಿದೆ. ಅವನು ಮನೆಯೊಳಗೆ ಬಂದು ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ. ಆಗ ನಾನು ಗಟ್ಟಿಯಾಗಿ ಕೂಗಿಕೊಂಡೆ. 15 ನನ್ನ ಕೂಗಿನಿಂದ ಭಯಗೊಂಡು ತನ್ನ ಮೇಲಂಗಿಯನ್ನೇ ಬಿಟ್ಟು ಓಡಿಹೋದ” ಎಂದು ಹೇಳಿದಳು. 16 ಆಕೆ ಆ ಮೇಲಂಗಿಯನ್ನು ತನ್ನ ಗಂಡನೂ ಯೋಸೇಫನಿಗೆ ಧಣಿಯೂ ಆಗಿದ್ದ ಪೋಟೀಫರನು ಬರುವ ತನಕ ಇಟ್ಟುಕೊಂಡಿದ್ದಳು. 17 ಪತಿಯು ಬಂದಾಗ ಆಕೆ ಅದೇ ರೀತಿ ಹೇಳಿ, “ನೀನು ಸೇರಿಸಿಕೊಂಡ ಈ ಇಬ್ರಿಯ ಗುಲಾಮನು ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ. 18 ಆದರೆ ನಾನು ಕೂಗಿಕೊಂಡದ್ದರಿಂದ ಅವನು ಮೇಲಂಗಿಯನ್ನೇ ಬಿಟ್ಟು ಓಡಿಹೋದ” ಎಂದು ಹೇಳಿದಳು.
19 ಯೋಸೇಫನ ಧಣಿಯು ತನ್ನ ಹೆಂಡತಿಯ ಮಾತು ಕೇಳಿ ತುಂಬ ಕೋಪಗೊಂಡನು. 20 ರಾಜನ ವೈರಿಗಳನ್ನು ಹಾಕುವ ಒಂದು ಸೆರೆಮನೆಯಿತ್ತು. ಆದ್ದರಿಂದ ಪೋಟೀಫರನು ಯೋಸೇಫನನ್ನು ಆ ಸೆರೆಮನೆಗೆ ಹಾಕಿಸಿದನು. ಅಂದಿನಿಂದ ಯೋಸೇಫನು ಅಲ್ಲಿದ್ದನು.
ಯೋಸೇಫನಿಗೆ ಸೆರೆವಾಸ
21 ಆದರೆ ಯೆಹೋವನು ಯೋಸೇಫನ ಸಂಗಡವಿದ್ದು ಕರುಣೆತೋರಿದನು. ಸ್ವಲ್ಪಕಾಲವಾದ ಮೇಲೆ ಸೆರೆಮನೆಯ ಮುಖ್ಯಾಧಿಕಾರಿಯು ಯೋಸೇಫನನ್ನು ಪ್ರೀತಿಸತೊಡಗಿದನು. 22 ಅವನು ಎಲ್ಲಾ ಕೈದಿಗಳನ್ನು ಯೋಸೇಫನ ವಶಕ್ಕೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸುತ್ತಿದ್ದನು. 23 ಯೆಹೋವನು ಯೋಸೇಫನ ಸಂಗಡವಿದ್ದು ಅವನ ಎಲ್ಲಾ ಕೆಲಸಕಾರ್ಯಗಳನ್ನು ಯಶಸ್ವಿಗೊಳಿಸುತ್ತಿದ್ದದ್ದರಿಂದ ಮುಖ್ಯಾಧಿಕಾರಿಯು ಎಲ್ಲಾ ವಿಷಯಗಳನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಾಗಿದ್ದನು.
ಯೋಸೇಫನು ಎರಡು ಕನಸುಗಳ ಅರ್ಥವನ್ನು ತಿಳಿಸಿದ್ದು
40 ತರುವಾಯ ಫರೋಹನ ಇಬ್ಬರು ಸೇವಕರು ಫರೋಹನಿಗೆ ಯಾವುದೋ ತಪ್ಪುಮಾಡಿದರು. ಈ ಇಬ್ಬರು ಸೇವಕರುಗಳಲ್ಲಿ ಒಬ್ಬನು ಭಕ್ಷ್ಯಗಾರ ಮತ್ತೊಬ್ಬನು ಪಾನದಾಯಕ. 2 ಫರೋಹನು ತನ್ನ ಭಕ್ಷ್ಯಗಾರನ ಮೇಲೆಯೂ ಪಾನದಾಯಕನ ಮೇಲೆಯೂ ಕೋಪಗೊಂಡನು. 3 ಆದ್ದರಿಂದ ಅವರನ್ನು ಯೋಸೇಫನಿದ್ದ ಸೆರೆಮನೆಗೆ ಹಾಕಿಸಿದನು. ಪೋಟೀಫರನು ಫರೋಹನ ಕಾವಲುಗಾರ ಅಧಿಕಾರಿಯಾಗಿದ್ದು ಈ ಸೆರೆಮನೆಯ ಜವಾಬ್ದಾರಿಯನ್ನು ಹೊಂದಿದ್ದನು. 4 ಸೆರೆಮನೆಯ ಮುಖ್ಯಾಧಿಕಾರಿಯು ಈ ಇಬ್ಬರು ಕೈದಿಗಳನ್ನು ಯೋಸೇಫನ ವಶಕ್ಕೆ ಒಪ್ಪಿಸಿದನು. ಸ್ವಲ್ಪಕಾಲದವರೆಗೆ ಆ ಇಬ್ಬರು ಸೆರೆಮನೆಯೊಳಗೆ ಇದ್ದರು. 5 ಒಂದು ರಾತ್ರಿ ಆ ಇಬ್ಬರು ಕೈದಿಗಳಿಗೆ ಅಂದರೆ ಭಕ್ಷ್ಯಗಾರನಿಗೂ ಪಾನದಾಯಕನಿಗೂ ಒಂದೊಂದು ಕನಸು ಬಿತ್ತು. ಮತ್ತು ಅವರಿಬ್ಬರ ಕನಸುಗಳು ತಮ್ಮದೇ ಆದ ಅರ್ಥವನ್ನು ಹೊಂದಿದ್ದವು. 6 ಮರುದಿನ ಮುಂಜಾನೆ ಯೋಸೇಫನು ಅವರ ಬಳಿಗೆ ಹೋದನು. ಅವರಿಬ್ಬರು ಚಿಂತೆಯಿಂದ ಇರುವುದನ್ನು ಯೋಸೇಫನು ಕಂಡು, 7 “ಈ ದಿನ ನೀವು ತುಂಬ ಚಿಂತೆಯಿಂದ ಇರುವಂತೆ ಕಾಣುತ್ತಿದೆ, ಕಾರಣವೇನು?” ಎಂದು ಕೇಳಿದನು.
8 ಆ ಇಬ್ಬರು, “ನಾವು ಕಳೆದ ರಾತ್ರಿ ಕನಸನ್ನು ಕಂಡೆವು; ಆದರೆ ನಾವು ಕಂಡ ಕನಸು ನಮಗೆ ಅರ್ಥವಾಗುತ್ತಿಲ್ಲ. ನಮಗೆ ಕನಸುಗಳ ಅರ್ಥವನ್ನು ತಿಳಿಸುವವರಾಗಲಿ ವಿವರಿಸುವವರಾಗಲಿ ಯಾರೂ ಇಲ್ಲ” ಎಂದು ಹೇಳಿದರು.
ಯೋಸೇಫನು ಅವರಿಗೆ, “ದೇವರೊಬ್ಬನು ಮಾತ್ರ ಕನಸುಗಳನ್ನು ಅರ್ಥಮಾಡಿಕೊಳ್ಳಬಲ್ಲನು ಮತ್ತು ಕನಸುಗಳ ಅರ್ಥವನ್ನು ಹೇಳಬಲ್ಲನು. ಆದ್ದರಿಂದ ದಯಮಾಡಿ ನಿಮ್ಮ ಕನಸುಗಳನ್ನು ನನಗೆ ತಿಳಿಸಿರಿ” ಎಂದು ಹೇಳಿದನು.
ದ್ರಾಕ್ಷಾರಸ ಕೊಡುವವನ ಕನಸು
9 ಆಗ ಪಾನದಾಯಕನು ಯೋಸೇಫನಿಗೆ, “ನಾನು ಕನಸಿನಲ್ಲಿ ದ್ರಾಕ್ಷಾಲತೆಯನ್ನು ಕಂಡೆನು. 10 ಆ ದ್ರಾಕ್ಷಾಲತೆಯ ಮೇಲೆ ಮೂರು ಕವಲುಗಳಿದ್ದವು. ಆ ಕವಲುಗಳು ಚಿಗುರುತ್ತಲೇ ಹೂವುಗಳನ್ನು ಬಿಟ್ಟವು; ಆ ಹೂವುಗಳು ಹಣ್ಣುಗಳಾದವು. 11 ನಾನು ಫರೋಹನ ಲೋಟವನ್ನು ಹಿಡಿದುಕೊಂಡಿದ್ದರಿಂದ ದ್ರಾಕ್ಷಿಹಣ್ಣುಗಳನ್ನು ತೆಗೆದುಕೊಂಡು ಲೋಟದೊಳಗೆ ರಸಹಿಂಡಿ ಲೋಟವನ್ನು ಫರೋಹನಿಗೆ ಕೊಟ್ಟೆನು” ಎಂದು ಹೇಳಿದನು.
12 ಅದಕ್ಕೆ ಯೋಸೇಫನು, “ನಾನು ಕನಸಿನ ಅರ್ಥವನ್ನು ನಿನಗೆ ತಿಳಿಸುವೆನು. ಆ ಮೂರು ಕವಲುಗಳು ಎಂದರೆ ಮೂರು ದಿನಗಳು. 13 ಮೂರುದಿನಗಳೊಳಗಾಗಿ ಫರೋಹನು ನಿನ್ನನ್ನು ಕ್ಷಮಿಸಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವನು. ನೀನು ಮೊದಲಿನಂತೆ ಅವನಿಗೆ ಪಾನದಾಯಕನಾಗಿರುವೆ. 14 ಆದರೆ ನೀನು ಸುಖದಿಂದಿರುವಾಗ ನನ್ನನ್ನು ನೆನಸಿಕೊಂಡು ನನ್ನ ವಿಷಯವಾಗಿ ಫರೋಹನಿಗೆ ತಿಳಿಸಿ ನನಗೆ ಸೆರೆಮನೆಯಿಂದ ಬಿಡುಗಡೆಯಾಗುವಂತೆ ಮಾಡು. 15 ಇಬ್ರಿಯರ ದೇಶದವನಾದ ನನ್ನನ್ನು ಕೆಲವರು ಅಪಹರಿಸಿಕೊಂಡು ಬಂದರು. ಆದರೆ ಇಲ್ಲಿಯೂ ನಾನು ಯಾವ ತಪ್ಪನ್ನೂ ಮಾಡಲಿಲ್ಲ. ಆದ್ದರಿಂದ ನಾನು ಸೆರೆಮನೆಯಲ್ಲಿರಬಾರದು” ಎಂದು ಹೇಳಿದನು.
ಭಕ್ಷ್ಯಗಾರನ ಕನಸು
16 ಪಾನದಾಯಕನ ಕನಸಿನ ಅರ್ಥವು ಒಳ್ಳೆಯದಾಗಿರುವುದನ್ನು ಕಂಡ ಭಕ್ಷ್ಯಗಾರನು ಯೋಸೇಫನಿಗೆ, “ನನಗೂ ಒಂದು ಕನಸಾಯಿತು. ನನ್ನ ಕನಸಿನಲ್ಲಿ ನನ್ನ ತಲೆಯ ಮೇಲೆ ಮೂರು ಬುಟ್ಟಿಗಳಿದ್ದವು. 17 ಅವುಗಳಲ್ಲಿ ರಾಜನಿಗೋಸ್ಕರವಾಗಿ ಎಲ್ಲಾ ಬಗೆಯ ಭಕ್ಷ್ಯಗಳಿದ್ದವು. ಆದರೆ ಪಕ್ಷಿಗಳು ಆ ಆಹಾರವನ್ನು ತಿನ್ನುತ್ತಿದ್ದವು” ಎಂದು ಹೇಳಿದನು.
18 ಯೋಸೇಫನು, “ಕನಸಿನ ಅರ್ಥವನ್ನು ನಾನು ನಿನಗೆ ತಿಳಿಸುತ್ತೇನೆ. ಮೂರು ಬುಟ್ಟಿಗಳ ಅರ್ಥ ಮೂರು ದಿನಗಳು. 19 ಮೂರುದಿನಗಳೊಳಗಾಗಿ ರಾಜನು ನಿನ್ನನ್ನು ಸೆರೆಮನೆಯಿಂದ ಬಿಡಿಸಿ ನಿನ್ನ ಶಿರಚ್ಛೇದನ ಮಾಡಿಸುವನು; ನಿನ್ನ ದೇಹವನ್ನು ಕಂಬಕ್ಕೆ ನೇತುಹಾಕಿಸುವನು; ಪಕ್ಷಿಗಳು ನಿನ್ನ ದೇಹವನ್ನು ತಿಂದುಬಿಡುತ್ತವೆ” ಎಂದು ಹೇಳಿದನು.
ಯೋಸೇಫನನ್ನು ಮರೆತನು
20 ಮೂರನೆಯ ದಿನ ಬಂದಿತು. ಅದು ಫರೋಹನ ಜನ್ಮದಿನವಾಗಿತ್ತು. ಫರೋಹನು ತನ್ನ ಎಲ್ಲಾ ಸೇವಕರಿಗೆ ಔತಣಕೂಟವನ್ನು ಏರ್ಪಡಿಸಿದನು. ಔತಣಕೂಟದಲ್ಲಿ ಫರೋಹನು ಭಕ್ಷ್ಯಗಾರನನ್ನೂ ಮತ್ತು ಪಾನದಾಯಕನನ್ನೂ ಸೆರೆಮನೆಯಿಂದ ಬಿಡುಗಡೆ ಮಾಡಿದನು. 21 ಫರೋಹನು ಪಾನದಾಯಕನನ್ನು ಮತ್ತೆ ಅದೇ ಕೆಲಸಕ್ಕೆ ನೇಮಿಸಿದನು; ಅವನು ಪಾನಪಾತ್ರೆಯನ್ನು ಫರೋಹನ ಕೈಗೆ ಕೊಡುವವನಾದನು. 22 ಆದರೆ ಫರೋಹನು ಭಕ್ಷ್ಯಗಾರನನ್ನು ಕೊಲ್ಲಿಸಿದನು. ಯೋಸೇಫನು ಹೇಳಿದಂತೆಯೇ ಪ್ರತಿಯೊಂದು ನಡೆಯಿತು. 23 ಆದರೆ ಪಾನದಾಯಕನು ಯೋಸೇಫನಿಗೆ ಸಹಾಯ ಮಾಡಬೇಕೆಂಬುದನ್ನು ಮರೆತುಬಿಟ್ಟು ಯೋಸೇಫನ ಬಗ್ಗೆ ಫರೋಹನಿಗೆ ಏನೂ ತಿಳಿಸಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International