Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 35-37

ಬೇತೇಲಿನಲ್ಲಿ ಯಾಕೋಬನು

35 ದೇವರು ಯಾಕೋಬನಿಗೆ, “ನೀನು ಬೇತೇಲ್ ಪಟ್ಟಣಕ್ಕೆ ಹೋಗಿ ಅಲ್ಲೇ ವಾಸಿಸು ಮತ್ತು ಆರಾಧನೆಗಾಗಿ ಒಂದು ಯಜ್ಞವೇದಿಕೆಯನ್ನು ಕಟ್ಟಿಸು. ನೀನು ನಿನ್ನ ಅಣ್ಣನಾದ ಏಸಾವನ ಬಳಿಯಿಂದ ಓಡಿಹೋಗುತ್ತಿದ್ದಾಗ ದೇವರಾದ ‘ಏಲ್’ ನಿನಗೆ ಅಲ್ಲಿ ಕಾಣಿಸಿಕೊಳ್ಳಲಿಲ್ಲವೇ! ಆತನ ಆರಾಧನೆಗಾಗಿ ಅಲ್ಲಿ ಯಜ್ಞವೇದಿಕೆಯನ್ನು ಕಟ್ಟಿಸು” ಎಂದು ಹೇಳಿದನು.

ಆದ್ದರಿಂದ ಯಾಕೋಬನು ತನ್ನ ಕುಟುಂಬದವರಿಗೂ ತನ್ನ ಎಲ್ಲಾ ಸೇವಕರಿಗೂ, “ನಿಮ್ಮಲ್ಲಿರುವ ಮರದ ಮತ್ತು ಲೋಹದ ಎಲ್ಲಾ ಅನ್ಯದೇವರುಗಳನ್ನು ನಾಶಮಾಡಿರಿ. ನಿಮ್ಮನ್ನು ಶುದ್ಧಿ ಮಾಡಿಕೊಂಡು ಶುದ್ಧವಾದ ಬಟ್ಟೆಗಳನ್ನು ಧರಿಸಿಕೊಳ್ಳಿರಿ. ನಾವು ಇಲ್ಲಿಂದ ಹೊರಟು ಬೇತೇಲಿಗೆ ಹೋಗೋಣ; ನಾನು ಕಷ್ಟದಲ್ಲಿದ್ದಾಗ ಸಹಾಯಮಾಡಿದ ದೇವರಿಗಾಗಿ ಒಂದು ಯಜ್ಞವೇದಿಕೆಯನ್ನು ಅಲ್ಲಿ ಕಟ್ಟಿಸುತ್ತೇನೆ. ನಾನು ಹೋದಕಡೆಗಳಲ್ಲೆಲ್ಲಾ ಆ ದೇವರು ನನ್ನೊಂದಿಗೆ ಇದ್ದನು” ಎಂದು ಹೇಳಿದನು.

ಆದ್ದರಿಂದ ಅವರು ತಮ್ಮಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ವಾಲೆಗಳನ್ನೂ ಯಾಕೋಬನಿಗೆ ಕೊಟ್ಟರು. ಯಾಕೋಬನು ಅವುಗಳನ್ನೆಲ್ಲಾ ಶೆಕೆಮ್ ಪಟ್ಟಣದ ಸಮೀಪದಲ್ಲಿರುವ ಏಲಾವೃಕ್ಷದ ಬುಡದಲ್ಲಿ ಹೂಳಿಟ್ಟನು.

ಯಾಕೋಬನು ಮತ್ತು ಅವನ ಗಂಡುಮಕ್ಕಳು ಆ ಸ್ಥಳದಿಂದ ಹೊರಟರು. ಆ ಪ್ರದೇಶದಲ್ಲಿದ್ದ ಜನರು ಅವರನ್ನು ಹಿಂಬಾಲಿಸಿ ಕೊಲ್ಲಬೇಕೆಂದಿದ್ದರು. ಆದರೆ ಅವರು ಭಯಪಟ್ಟು ಯಾಕೋಬನನ್ನು ಹಿಂಬಾಲಿಸಲಿಲ್ಲ. ಯಾಕೋಬನು ಮತ್ತು ಅವರ ಜನರು ಲೂಜಿಗೆ ಹೋದರು. ಈಗ ಲೂಜನ್ನು “ಬೇತೇಲ್” ಎಂದು ಕರೆಯುತ್ತಾರೆ. ಅದು ಕಾನಾನ್ ದೇಶದಲ್ಲಿದೆ. ಯಾಕೋಬನು ಅಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಸಿದನು. ಯಾಕೋಬನು ತನ್ನ ಅಣ್ಣನ ಬಳಿಯಿಂದ ಓಡಿ ಹೋಗುತ್ತಿದ್ದಾಗ ದೇವರು ಅವನಿಗೆ ಮೊದಲು ಕಾಣಿಸಿಕೊಂಡದ್ದು ಆ ಸ್ಥಳದಲ್ಲೇ. ಆದ್ದರಿಂದ ಯಾಕೋಬನು ಆ ಸ್ಥಳಕ್ಕೆ “ಏಲ್ ಬೇತೇಲ್” ಎಂದು ಹೆಸರಿಟ್ಟನು.

ರೆಬೆಕ್ಕಳ ದಾಸಿಯಾದ ದೆಬೋರಳು ಅಲ್ಲಿ ಸತ್ತುಹೋದಳು. ಆದ್ದರಿಂದ ಅವರು ಆಕೆಯನ್ನು ಬೇತೇಲಿನ ಬಳಿಯಲ್ಲಿರುವ ಏಲಾವೃಕ್ಷದ ಬುಡದಲ್ಲಿ ಸಮಾಧಿ ಮಾಡಿದರು. ಆ ಸ್ಥಳಕ್ಕೆ “ಅಲ್ಲೋನ್ ಬಾಕೂತ್” ಎಂದು ಹೆಸರಿಟ್ಟರು.

ಯಾಕೋಬನ ಹೊಸ ಹೆಸರು

ಯಾಕೋಬನು ಪದ್ದನ್‌ಅರಾಮಿನಿಂದ ಹಿಂತಿರುಗಿ ಬಂದಾಗ, ದೇವರು ಅವನಿಗೆ ಮತ್ತೆ ಕಾಣಿಸಿಕೊಂಡು ಅವನನ್ನು ಆಶೀರ್ವದಿಸಿದನು. 10 ದೇವರು ಯಾಕೋಬನಿಗೆ, “ನಿನ್ನ ಹೆಸರು ಯಾಕೋಬ. ಆದರೆ ನಾನು ಆ ಹೆಸರನ್ನು ಬದಲಾಯಿಸುವೆನು. ಇನ್ನು ಮುಂದೆ ನೀನು ಯಾಕೋಬನೆಂದು ಕರೆಸಿಕೊಳ್ಳುವುದಿಲ್ಲ. ನಿನ್ನ ಹೊಸ ಹೆಸರು ‘ಇಸ್ರೇಲ್’” ಎಂದು ಹೇಳಿ ಅವನಿಗೆ “ಇಸ್ರೇಲ್” ಎಂದು ಹೆಸರಿಟ್ಟನು.

11 ದೇವರು ಅವನಿಗೆ, “ನಾನೇ ಸರ್ವಶಕ್ತನಾದ ದೇವರು. ನೀನು ಅನೇಕ ಮಕ್ಕಳನ್ನು ಪಡೆದು ಮಹಾಜನಾಂಗವಾಗಿ ಬೆಳೆಯುವೆ. ಅನೇಕ ಜನಾಂಗಗಳೂ ರಾಜರುಗಳೂ ನಿನ್ನೊಳಗಿಂದ ಬರುವರು. 12 ನಾನು ಅಬ್ರಹಾಮನಿಗೂ ಇಸಾಕನಿಗೂ ವಿಶೇಷವಾದ ದೇಶವನ್ನು ಕೊಟ್ಟೆನು. ಈಗ ನಾನು ಆ ದೇಶವನ್ನು ನಿನಗೆ ಕೊಡುವೆನು. ನಾನು ಆ ದೇಶವನ್ನು ನಿನ್ನ ಮುಂದಿನ ಸಂತತಿಗಳವರಿಗೆ ಕೊಡುವೆನು” ಎಂದು ಹೇಳಿದನು. 13 ಆಮೇಲೆ ದೇವರು ಆ ಸ್ಥಳದಿಂದ ಹೊರಟುಹೋದನು. 14-15 ಯಾಕೋಬನು ಈ ಸ್ಥಳದಲ್ಲಿ ಜ್ಞಾಪಕಾರ್ಥವಾಗಿ ಒಂದು ಸ್ಮಾರಕಕಲ್ಲನ್ನು ನಿಲ್ಲಿಸಿ ಅದರ ಮೇಲೆ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಸುರಿದನು. ಇದು ಒಂದು ವಿಶೇಷವಾದ ಸ್ಥಳ. ಯಾಕೆಂದರೆ ಅಲ್ಲಿ ದೇವರು ಯಾಕೋಬನೊಂದಿಗೆ ಮಾತಾಡಿದನು. ಯಾಕೋಬನು ಆ ಸ್ಥಳಕ್ಕೆ “ಬೇತೇಲ್” ಎಂದು ಹೆಸರಿಟ್ಟನು.

ಹೆರಿಗೆ ಬೇನೆಯಿಂದ ರಾಹೇಲಳ ಮರಣ

16 ಯಾಕೋಬನು ಮತ್ತು ಅವನ ಜನರು ಬೇತೇಲಿನಿಂದ ಹೊರಟು ಬೆತ್ಲೆಹೇಮೆಂಬ ಎಫ್ರಾತೂರಿಗೆ ಬರುವುದಕ್ಕಿಂತ ಸ್ವಲ್ಪಮುಂಚೆ ರಾಹೇಲಳಿಗೆ ಹೆರಿಗೆ ಕಾಲ ಬಂದಿತು. 17 ಆದರೆ ರಾಹೇಲಳು ಈ ಹೆರಿಗೆಯಲ್ಲಿ ತುಂಬ ಕಷ್ಟಪಡಬೇಕಾಯಿತು. ಆಕೆಗೆ ಬಹಳ ನೋವಿತ್ತು. ರಾಹೇಲಳ ದಾದಿಯು ಇದನ್ನು ಕಂಡು, ಆಕೆಗೆ, “ರಾಹೇಲಳೇ, ಭಯಪಡಬೇಡ. ನೀನು ಮತ್ತೊಬ್ಬ ಮಗನಿಗೆ ಜನನ ಕೊಡುತ್ತಿರುವೆ” ಎಂದು ಹೇಳಿದಳು.

18 ರಾಹೇಲಳು ಮಗನನ್ನು ಹೆರುವಾಗ ಸತ್ತುಹೋದಳು; ಸಾಯುವುದಕ್ಕೆ ಮೊದಲು, ರಾಹೇಲಳು ಆ ಮಗುವಿಗೆ ಬೆನೋನಿ ಎಂದು ಹೆಸರಿಟ್ಟಳು. ಆದರೆ ಯಾಕೋಬನು ಅವನಿಗೆ ಬೆನ್ಯಾಮೀನ್ ಎಂದು ಹೆಸರಿಟ್ಟನು. ಹಾಗೆ ರಾಹೇಳಲು ಮೃತಪಟ್ಟಳು.

19 ರಾಹೇಲಳನ್ನು ಬೆತ್ಲೆಹೇಮೆಂಬ ಎಫ್ರಾತಿಗೆ ಹೋಗುವ ದಾರಿಯಲ್ಲಿ ಸಮಾಧಿ ಮಾಡಲಾಯಿತು. 20 ಯಾಕೋಬನು ರಾಹೇಲಳ ಗೌರವಾರ್ಥವಾಗಿ ಆಕೆಯ ಸಮಾಧಿಯ ಮೇಲೆ ವಿಶೇಷವಾದ ಒಂದು ಕಲ್ಲನ್ನು ಇಟ್ಟನು. ಇಂದಿಗೂ ಆ ವಿಶೇಷವಾದ ಕಲ್ಲು ಅಲ್ಲಿದೆ. 21 ಆಮೇಲೆ ಇಸ್ರೇಲನು ತನ್ನ ಪ್ರಯಾಣವನ್ನು ಮುಂದುವರೆಸಿ “ಮಿಗ್ದಲ್‌ಏದರ್” ಗೋಪುರದ ದಕ್ಷಿಣದಲ್ಲಿ ಗುಡಾರವನ್ನು ಹಾಕಿಸಿದನು.

22 ಇಸ್ರೇಲನು ಸ್ವಲ್ಪಕಾಲದವರೆಗೆ ಅಲ್ಲಿ ಇಳಿದುಕೊಂಡನು. ಅವನು ಅಲ್ಲಿದ್ದಾಗ ರೂಬೇನನು ಇಸ್ರೇಲನ ದಾಸಿಯಾದ[a] ಬಿಲ್ಹಳೊಡನೆ ಮಲಗಿಕೊಂಡನು. ಇಸ್ರೇಲನು ಇದರ ಬಗ್ಗೆ ಕೇಳಿದಾಗ ತುಂಬ ಕೋಪಗೊಂಡನು.

ಇಸ್ರಾಯೇಲನ ಕುಟುಂಬ

ಯಾಕೋಬನಿಗೆ (ಇಸ್ರೇಲ) ಹನ್ನೆರಡು ಗಂಡುಮಕ್ಕಳಿದ್ದರು.

23 ಲೇಯಳ ಗಂಡುಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್.

24 ರಾಹೇಲಳ ಗಂಡುಮಕ್ಕಳು: ಯೋಸೇಫ ಮತ್ತು ಬೆನ್ಯಾಮೀನ್.

25 ಬಿಲ್ಹಳು ರಾಹೇಲಳ ದಾಸಿ. ಬಿಲ್ಹಳ ಗಂಡುಮಕ್ಕಳು: ದಾನ್ ಮತ್ತು ನಫ್ತಾಲಿ.

26 ಜಿಲ್ಪಳು ಲೇಯಳ ದಾಸಿ. ಜಿಲ್ಪಳ ಗಂಡುಮಕ್ಕಳು: ಗಾದ್ ಮತ್ತು ಆಶೇರ್.

ಇವರೆಲ್ಲರು ಯಾಕೋಬನಿಗೆ ಪದ್ದನ್‌ಅರಾಮಿನಲ್ಲಿ ಹುಟ್ಟಿದ ಗಂಡುಮಕ್ಕಳು.

27 ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಹೆಬ್ರೋನೆಂಬ ಕಿರ್ಯತರ್ಬದಲ್ಲಿದ್ದ ಮಮ್ರೆಗೆ ಬಂದನು. ಅಬ್ರಹಾಮನು ಮತ್ತು ಇಸಾಕನು ವಾಸವಾಗಿದ್ದದ್ದು ಇಲ್ಲೇ. 28 ಇಸಾಕನು ನೂರೆಂಭತ್ತು ವರ್ಷಗಳವರೆಗೆ ಜೀವಿಸಿದನು. 29 ಆಮೇಲೆ ಇಸಾಕನು ದಿನ ತುಂಬಿದ ಮುದುಕನಾಗುವವರೆಗೆ ಜೀವಿಸಿ ತೀರಿಕೊಂಡನು. ಅವನ ಮಕ್ಕಳಾದ ಏಸಾವನು ಮತ್ತು ಯಾಕೋಬನು ತಮ್ಮ ಅಜ್ಜನಿಗೆ ಸಮಾಧಿಯಾಗಿದ್ದ ಸ್ಥಳದಲ್ಲೇ ತಮ್ಮ ತಂದೆಗೆ ಸಮಾಧಿ ಮಾಡಿದರು.

ಏಸಾವನ ಕುಟುಂಬ

36 ಎದೋಮನೆಂಬ ಏಸಾವನ ಕುಟುಂಬ ಚರಿತ್ರೆ: ಏಸಾವನು ಕಾನಾನ್ ದೇಶದ ಸ್ತ್ರೀಯರನ್ನು ಮದುವೆಯಾದನು. ಏಸಾವನ ಹೆಂಡತಿಯರು: ಹಿತ್ತಿಯನಾದ ಏಲೋನನ ಮಗಳಾದ ಆದಾ; ಹಿವ್ವಿಯನಾದ ಸಿಬೆಯೋನನಿಗೆ ಹುಟ್ಟಿದ ಅನಾಹ ಎಂಬಾಕೆಯ ಮಗಳಾಗಿದ್ದ ಒಹೊಲೀಬಾಮ; ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಬಾಸೆಮತ್. ಏಸಾವನಿಗೆ ಮತ್ತು ಆದಾಳಿಗೆ ಎಲೀಫಜನೆಂಬ ಮಗನಿದ್ದನು. ಬಾಸೆಮತಳಿಗೆ ರೆಗೂವೇಲನೆಂಬ ಮಗನಿದ್ದನು. ಒಹೊಲೀಬಾಮಳಿಗೆ ಮೂವರು ಗಂಡುಮಕ್ಕಳಿದ್ದರು: ಯೆಗೂಷ, ಯಳಾಮ ಮತ್ತು ಕೋರಹ. ಇವರೆಲ್ಲರೂ ಏಸಾವನ ಗಂಡುಮಕ್ಕಳು ಮತ್ತು ಕಾನಾನ್ ದೇಶದಲ್ಲಿ ಹುಟ್ಟಿದವರು.

6-8 ಯಾಕೋಬ ಮತ್ತು ಏಸಾವರ ಕುಟುಂಬಗಳು ಬಹಳ ವೃದ್ಧಿಯಾದ ಕಾರಣ ಕಾನಾನ್ ದೇಶವು ಅವರಿಗೆ ಸಾಕಾಗಲಿಲ್ಲ. ಆದ್ದರಿಂದ ಏಸಾವನು ತನ್ನ ತಮ್ಮನಾದ ಯಾಕೋಬನಿಂದ ದೂರ ಹೋದನು. ಏಸಾವನು ತನ್ನ ಹೆಂಡತಿಯರನ್ನೂ ಗಂಡುಹೆಣ್ಣುಮಕ್ಕಳನ್ನೂ ಎಲ್ಲಾ ಸೇವಕರನ್ನೂ ದನಗಳನ್ನೂ ಮತ್ತು ಇತರ ಪಶುಗಳನ್ನೂ ತನಗೆ ಕಾನಾನಿನಲ್ಲಿದ್ದ ಪ್ರತಿಯೊಂದು ಆಸ್ತಿಯನ್ನೂ ತೆಗೆದುಕೊಂಡು ಸೇಯೀರ್ ಬೆಟ್ಟದ ಸೀಮೆಗೆ ಹೋದನು. (ಏಸಾವನಿಗೆ ಎದೋಮ್ ಎಂಬ ಹೆಸರೂ ಇದೆ. ಎದೋಮ್ ಎಂಬುದು ಸೇಯೀರ್ ದೇಶದ ಮತ್ತೊಂದು ಹೆಸರು.)

ಏಸಾವನು ಎದೋಮ್ ಜನರ ತಂದೆ. ಸೇಯೀರ್ ದೇಶದಲ್ಲಿ ವಾಸವಾಗಿದ್ದ ಏಸಾವನ ಕುಟುಂಬದವರ ಹೆಸರುಗಳು:

10 ಏಸಾವನ ಗಂಡುಮಕ್ಕಳು: ಎಲೀಫಜ, ಇವನು ಏಸಾವನಿಗೆ ಆದಾ ಎಂಬಾಕೆಯಲ್ಲಿ ಹುಟ್ಟಿದ ಮಗನು. ರೆಗೂವೇಲ, ಇವನು ಏಸಾವನಿಗೆ ಬಾಸೆಮತಳಲ್ಲಿ ಹುಟ್ಟಿದ ಮಗನು.

11 ಎಲೀಫಜನಿಗೆ ಐದು ಮಂದಿ ಗಂಡುಮಕ್ಕಳಿದ್ದರು: ತೇಮಾನ್, ಓಮಾರ್, ಚೆಪೋ, ಗತಾಮ್ ಮತ್ತು ಕೆನಜ್.

12 ಎಲೀಫಜನಿಗೆ ತಿಮ್ನ ಎಂಬ ಒಬ್ಬ ದಾಸಿಯೂ ಇದ್ದಳು. ತಿಮ್ನಳಿಗೆ ಮತ್ತು ಎಲೀಫಜನಿಗೆ ಅಮಾಲೇಕ ಎಂಬ ಒಬ್ಬ ಗಂಡುಮಗನಿದ್ದನು.

13 ರೆಗೂವೇಲನಿಗೆ ನಾಲ್ಕು ಮಂದಿ ಗಂಡುಮಕ್ಕಳಿದ್ದರು: ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ.

ಇವರು ಏಸಾವನ ಮೊಮ್ಮಕ್ಕಳು. ಇವರು ಏಸಾವನ ಹೆಂಡತಿಯಾದ ಬಾಸೆಮತಳ ಸಂತತಿಯವರು.

14 ಏಸಾವನ ಮೂರನೆ ಹೆಂಡತಿಯು ಅನಾಹನ ಮಗಳಾದ ಒಹೊಲೀಬಾಮ. (ಅನಾಹನು ಸಿಬೆಯೋನನ ಮಗನು.) ಏಸಾವನ ಮತ್ತು ಒಹೊಲೀಬಾಮಳ ಮಕ್ಕಳು: ಯೆಗೂಷ್, ಯಳಾಮ್ ಮತ್ತು ಕೋರಹ.

15 ಏಸಾವನ ವಂಶಸ್ಥರ ಕುಲಪತಿಗಳು:

ಏಸಾವನ ಮೊದಲನೆ ಮಗನಾದ ಎಲೀಫಜ. ಎಲೀಫಜನಿಂದ ಬಂದವರು: ತೇಮಾನ್, ಓಮಾರ್, ಚೆಫೋ, ಕೆನೆಜ್, 16 ಕೋರಹ, ಗತಾಮ ಮತ್ತು ಅಮಾಲೇಕ.

ಈ ಕುಲಪತಿಗಳು ಏಸಾವನ ಹೆಂಡತಿಯಾದ ಆದಾಳ ಸಂತತಿಯವರು.

17 ಏಸಾವನ ಮಗನಾದ ರೆಗೂವೇಲನು ಈ ಕುಟುಂಬಗಳ ತಂದೆಯಾಗಿದ್ದನು: ನಹತ, ಜೆರಹ, ಶಮ್ಮಾ ಮತ್ತು ಮಿಜ್ಜಾ.

ಈ ಕುಟುಂಬಗಳೆಲ್ಲವು ಏಸಾವನ ಹೆಂಡತಿಯಾದ ಬಾಸೆಮತಳ ಸಂತತಿಯವರು.

18 ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ್ದ ಒಹೊಲೀಬಾಮಳಲ್ಲಿ ಹುಟ್ಟಿದವರು: ಯಗೂಷ್, ಯೆಳಾಮ ಮತ್ತು ಕೋರಹ. ಈ ಮೂವರು ತಮ್ಮ ಕುಟುಂಬಗಳ ತಂದೆಯಾಗಿದ್ದರು.

19 ಈ ಕುಟುಂಬಗಳಿಗೆಲ್ಲಾ ಏಸಾವನೇ ಮೂಲಪುರುಷ.

20 ಏಸಾವನಿಗಿಂತ ಮೊದಲು ಹೋರಿಯ ಜನಾಂಗದ ಸೇಯೀರ್ ಎಂಬವನು ಎದೋಮಿನಲ್ಲಿ ವಾಸವಾಗಿದ್ದನು. ಸೇಯೀರನ ಗಂಡುಮಕ್ಕಳು:

ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, 21 ದೀಶೋನ್, ಏಚೆರ್ ಮತ್ತು ದೀಶಾನ್, ಆ ಗಂಡುಮಕ್ಕಳು ಕುಲಪತಿಗಳಾಗಿದ್ದರು.

22 ಲೋಟಾನನು ಹೋರಿ, ಹೇಮಾಮ್ ಎಂಬುವರ ತಂದೆ. (ತಿಮ್ನಳು ಲೋಟಾನನ ತಂಗಿ.)

23 ಶೋಬಾಲನು ಅಲ್ಪಾನ್, ಮಾನಹತ್, ಗೇಬಾಲ್, ಶೆಫೋ ಮತ್ತು ಓನಾಮ್ ಎಂಬವರ ತಂದೆ.

24 ಸಿಬೆಯೋನನಿಗೆ ಅಯ್ಯಾ ಮತ್ತು ಅನಾಹ ಎಂಬ ಇಬ್ಬರು ಗಂಡುಮಕ್ಕಳಿದ್ದರು. (ತನ್ನ ತಂದೆಯ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಬಿಸಿನೀರಿನ ಒರತೆಗಳನ್ನು ಕಂಡುಕೊಂಡವನೇ ಅನಾಹ.)

25 ಅನಾಹನು ದೀಶೋನ್ ಮತ್ತು ಓಹೊಲೀಬಾಮಳ ತಂದೆ.

26 ದಿಶೋನನಿಗೆ ಹೆಮ್ದಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್ ಎಂಬ ನಾಲ್ಕ ಮಂದಿ ಗಂಡುಮಕ್ಕಳಿದ್ದರು.

27 ಏಚೆರನಿಗೆ ಬಿಲ್ಹಾನ್, ಚಾವಾನ್ ಮತ್ತು ಅಕಾನ್ ಎಂಬ ಮೂರು ಮಂದಿ ಗಂಡುಮಕ್ಕಳಿದ್ದರು.

28 ದೀಶಾನನಿಗೆ ಊಚ್ ಮತ್ತು ಅರಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದರು.

29 ಹೋರಿಯರ ಕುಟುಂಬಗಳ ನಾಯಕರುಗಳ ಹೆಸರುಗಳು ಇಂತಿವೆ: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, 30 ದೀಶೋನ್, ಏಚೆರ್ ಮತ್ತು ದೀಶಾನ್. ಸೇಯೀರ್‌ನಲ್ಲಿ ವಾಸವಾಗಿದ್ದ ಹೋರಿಯ ಕುಟುಂಬಗಳ ನಾಯಕರುಗಳು ಇವರೇ.

31 ಆ ಸಮಯದಲ್ಲಿ ಎದೋಮಿನಲ್ಲಿ ರಾಜರುಗಳಿದ್ದರು. ಇಸ್ರೇಲರಿಗಿಂತಲೂ ಮುಂಚೆ ಎದೋಮಿಗೆ ರಾಜರುಗಳಿದ್ದರು.

32 ಬೆಯೋರನ ಮಗನಾದ ಬೆಲಗನು ಎದೋಮಿನ ರಾಜನಾಗಿದ್ದನು. ಅವನು ದಿನ್ಹಾಬಾ ನಗರವನ್ನು ಆಳಿದನು.

33 ಬೆಲಗನು ಸತ್ತಮೇಲೆ, ಯೋಬಾಬನು ರಾಜನಾದನು. ಯೋಬಾಬನು ಬೊಚ್ರದವನಾದ ಚೆರಹನ ಮಗನು.

34 ಯೋಬಾಬನು ಸತ್ತಮೇಲೆ ಹುಷಾಮನು ಆಳಿದನು. ಹುಷಾಮನು ತೇಮಾನೀಯರ ದೇಶದವನು.

35 ಹುಷಾಮನು ಸತ್ತಮೇಲೆ, ಹದದನು ಆ ದೇಶವನ್ನು ಆಳಿದನು. ಹದದನು ಬೆದದನ ಮಗನು. (ಮೊವಾಬ್ಯರನ್ನು ಮಿದ್ಯಾನರ ದೇಶದಲ್ಲಿ ಸೋಲಿಸಿದವನೇ ಬೆದದನು.) ಹದದನು ಅವೀತ್ ಪಟ್ಟಣದವನು.

36 ಹದದನು ಸತ್ತಮೇಲೆ, ಸಮ್ಲಾಹನು ಆ ದೇಶವನ್ನು ಆಳಿದನು; ಸಮ್ಲಾಹನು ಮಸ್ರೇಕದವನು.

37 ಸಮ್ಲಾಹನು ಸತ್ತಮೇಲೆ ಸೌಲನು ಆ ದೇಶವನ್ನು ಆಳಿದನು. ಸೌಲನು ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತೂರಿನವನು.

38 ಸೌಲನು ಸತ್ತಮೇಲೆ ಆ ದೇಶವನ್ನು ಬಾಳ್ಹಾನಾನನು ಆಳಿದನು. ಬಾಳ್ಹಾನಾನನು ಅಕ್ಬೋರನ ಮಗನು.

39 ಬಾಳ್ಹಾನಾನನು ಸತ್ತಮೇಲೆ ಆ ದೇಶವನ್ನು ಹದದನು ಆಳಿದನು. ಹದದನು ಪಾಗು ಎಂಬ ಪಟ್ಟಣದವನು. ಹದದನ ಹೆಂಡತಿಯ ಹೆಸರು ಮಹೇಟಬೇಲ್. ಮಹೇಟಬೇಲಳು ಮಟ್ರೇದ ಎಂಬಾಕೆಯ ಮಗಳು. (ಮಟ್ರೇದಳು ಮೇಜಾಹಾಬನ ಮಗಳು.)

40-43 ಏಸಾವನು ಎದೋಮ್ಯರಿಗೆ ಮೂಲಪಿತೃ:

ತಿಮ್ನ ಅಲ್ವಾ, ಯತೇತ, ಓಹೊಲೀಬಾಮಾ, ಏಲಾ, ಪೀನೋನ್, ಕೆನೆಜ್, ತೇಮಾನ್, ಮಿಪ್ಚಾರ, ಮಗ್ದೀಯೇಲ್ ಮತ್ತು ಗೀರಾಮ್ ಕುಟುಂಬಗಳವರು ತಮ್ಮ ಕುಟುಂಬಗಳ ಹೆಸರುಗಳನ್ನು ಹೊಂದಿದ್ದ ಪ್ರದೇಶಗಳಲ್ಲಿ ವಾಸಿಸಿದರು.

ಕನಸುಗಾರ ಯೋಸೇಫ

37 ಯಾಕೋಬನು ಕಾನಾನ್ ದೇಶದಲ್ಲಿ ನೆಲೆಸಿದನು. ಅವನ ತಂದೆ ಆ ದೇಶದಲ್ಲೇ ವಾಸವಾಗಿದ್ದನು. ಯಾಕೋಬನ ಕುಟುಂಬದ ಚರಿತ್ರೆಯಿದು:

ಯೋಸೇಫನು ಹದಿನೇಳು ವರ್ಷದ ಯೌವನಸ್ಥನಾಗಿದ್ದನು. ಆಡುಕುರಿಗಳನ್ನು ಸಾಕುವುದು ಅವನ ಕಸುಬಾಗಿತ್ತು. ತನ್ನ ಅಣ್ಣಂದಿರೊಡನೆ ಅಂದರೆ ಬಿಲ್ಹಾ ಮತ್ತು ಜಿಲ್ಪಾ ಎಂಬ ತನ್ನ ಮಲತಾಯಿಗಳ ಮಕ್ಕಳೊಡನೆ ಯೋಸೇಫನು ಆಡುಕುರಿಗಳನ್ನು ಮೇಯಿಸುತ್ತಿದ್ದನು. ಅವರೇನಾದರೂ ಕೆಟ್ಟದ್ದನ್ನು ಮಾಡಿದರೆ ಯೋಸೇಫನು ತಂದೆಗೆ ತಿಳಿಸುತ್ತಿದ್ದನು. ಇಸ್ರೇಲನು ತುಂಬ ಮುಪ್ಪಿನವನಾಗಿದ್ದಾಗ ಯೋಸೇಫನು ಹುಟ್ಟಿದ್ದರಿಂದ ಇಸ್ರೇಲನು ತನ್ನ ಬೇರೆ ಗಂಡುಮಕ್ಕಳಿಗಿಂತಲೂ ಹೆಚ್ಚಾಗಿ ಯೋಸೇಫನನ್ನು ಪ್ರೀತಿಸಿದನು. ಯಾಕೋಬನು ತನ್ನ ಮಗನಿಗೆ ಸುಂದರವಾದ ನಿಲುವಂಗಿಯನ್ನು ಮಾಡಿಸಿ ಕೊಟ್ಟಿದ್ದನು. ತಮ್ಮ ತಂದೆಗೆ ಯೋಸೇಫನ ಮೇಲೆ ಹೆಚ್ಚು ಪ್ರೀತಿಯಿರುವುದನ್ನು ಗಮನಿಸಿದ ಯೋಸೇಫನ ಅಣ್ಣಂದಿರು ಯೋಸೇಫನನ್ನು ದ್ವೇಷಿಸತೊಡಗಿ ಅವನೊಡನೆ ಸ್ನೇಹಭಾವದಿಂದ ಮಾತಾಡುತ್ತಿರಲಿಲ್ಲ.

ಒಂದು ದಿನ ಯೋಸೇಫನು ವಿಶೇಷವಾದ ಕನಸನ್ನು ಕಂಡನು. ಯೋಸೇಫನು ಈ ಕನಸನ್ನು ತನ್ನ ಅಣ್ಣಂದಿರಿಗೆ ತಿಳಿಸಿದಾಗ ಅವರು ಅವನನ್ನು ಮತ್ತಷ್ಟು ದ್ವೇಷಿಸತೊಡಗಿದರು.

ಯೋಸೇಫನು ಅವರಿಗೆ, “ನನಗೆ ಒಂದು ಕನಸಾಯಿತು. ನಾವೆಲ್ಲರು ಹೊಲದಲ್ಲಿ ಗೋಧಿಯ ಸಿವುಡುಗಳನ್ನು ಕಟ್ಟುತ್ತಿದ್ದೆವು. ಆಗ ನನ್ನ ಸಿವುಡು ಎದ್ದುನಿಂತಿತು; ನನ್ನ ಸಿವುಡಿನ ಸುತ್ತಲೂ ನಿಮ್ಮ ಸಿವುಡುಗಳೆಲ್ಲಾ ಎದ್ದುನಿಂತುಕೊಂಡು ನನ್ನ ಸಿವುಡಿಗೆ ಅಡ್ಡಬಿದ್ದವು” ಎಂದು ಹೇಳಿದನು.

ಅವನ ಅಣ್ಣಂದಿರು, “ನೀನು ರಾಜನಾಗಿ ನಮ್ಮನ್ನು ಆಳುವೆ ಎಂಬುದು ಇದರ ಅರ್ಥವೆಂದು ನಿನ್ನ ಆಲೋಚನೆಯೋ?” ಎಂದು ಪ್ರಶ್ನಿಸಿ ಆ ಕನಸಿನ ನಿಮಿತ್ತ ಅವನನ್ನು ಮತ್ತಷ್ಟು ದ್ವೇಷಿಸತೊಡಗಿದರು.

ಆಮೇಲೆ ಯೋಸೇಫನಿಗೆ ಮತ್ತೊಂದು ಕನಸಾಯಿತು. ಯೋಸೇಫನು ಈ ಕನಸಿನ ಬಗ್ಗೆಯೂ ತನ್ನ ಅಣ್ಣಂದಿರಿಗೆ ತಿಳಿಸಿದನು. ಯೋಸೇಫನು ಅವರಿಗೆ, “ನನಗೆ ಮತ್ತೊಂದು ಕನಸಾಯಿತು. ಸೂರ್ಯ, ಚಂದ್ರ ಮತ್ತು ಹನ್ನೊಂದು ನಕ್ಷತ್ರಗಳು ನನಗೆ ಅಡ್ಡಬೀಳುವುದನ್ನು ಕಂಡೆನು” ಎಂದು ಹೇಳಿದನು.

10 ಯೋಸೇಫನು ತನ್ನ ತಂದೆಗೂ ಸಹ ಈ ಕನಸಿನ ಬಗ್ಗೆ ತಿಳಿಸಿದನು. ಆದರೆ ಅವನ ತಂದೆ ಅವನನ್ನು ಗದರಿಸಿ, “ಇದೆಂಥಾ ಕನಸು? ನಾನೂ ನಿನ್ನ ತಾಯಿಯೂ ಮತ್ತು ನಿನ್ನ ಸಹೋದರರೂ ನಿನಗೆ ಅಡ್ಡಬೀಳುತ್ತೇವೆಂದು ನಂಬುತ್ತೀಯೋ?” ಎಂದು ಕೇಳಿದನು. 11 ಯೋಸೇಫನ ಅಣ್ಣಂದಿರಿಗೆ ಅವನ ಮೇಲೆ ಹೊಟ್ಟೆಕಿಚ್ಚು ಹೆಚ್ಚಾಯಿತು. ಆದರೆ ಯೋಸೇಫನ ತಂದೆಯು ಆ ಕನಸುಗಳ ಬಗ್ಗೆ ಆಶ್ಚರ್ಯಚಕಿತನಾಗಿ ಆಲೋಚಿಸತೊಡಗಿದನು.

12 ಒಂದು ದಿನ ಯೋಸೇಫನ ಅಣ್ಣಂದಿರು ತಮ್ಮ ತಂದೆಯ ಆಡುಕುರಿಗಳನ್ನು ಕಾಯಲು ಶೆಕೆಮಿಗೆ ಹೋದರು. 13 ಇಸ್ರೇಲನು ಯೋಸೇಫನಿಗೆ, “ಶೆಕೆಮಿಗೆ ಹೋಗು. ನಿನ್ನ ಅಣ್ಣಂದಿರು ಅಲ್ಲಿ ನನ್ನ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ” ಎಂದು ಹೇಳಿದನು.

ಯೋಸೇಫನು, “ಸರಿ, ಹೋಗುವೆನು” ಎಂದು ಉತ್ತರಿಸಿದನು.

14 ಇಸ್ರೇಲನು, “ನಿನ್ನ ಅಣ್ಣಂದಿರ ಮತ್ತು ಆಡುಕುರಿಗಳ ಕ್ಷೇಮವನ್ನು ವಿಚಾರಿಸಿಕೊಂಡು ಬಂದು ನನಗೆ ತಿಳಿಸು” ಎಂದು ಹೇಳಿ ಅವನನ್ನು ಹೆಬ್ರೋನಿನ ಕಣಿವೆಯಿಂದ ಶೆಕೆಮಿಗೆ ಕಳುಹಿಸಿಕೊಟ್ಟನು.

15 ಶೆಕೆಮಿನಲ್ಲಿ ದಾರಿತಪ್ಪಿ ಯೋಸೇಫನು ಹೊಲಗಳಲ್ಲಿ ಅಲೆದಾಡುತ್ತಿರಲು ಅವನನ್ನು ಕಂಡ ಒಬ್ಬನು, “ಏನು ಹುಡುಕುತ್ತಿರುವೆ?” ಎಂದು ಕೇಳಿದನು.

16 ಯೋಸೇಫನು, “ನನ್ನ ಅಣ್ಣಂದಿರನ್ನು ಹುಡುಕುತ್ತಿದ್ದೇನೆ. ಅವರು ತಮ್ಮ ಆಡುಕುರಿಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆ?” ಎಂದು ಕೇಳಿದನು.

17 ಅದಕ್ಕೆ ಅವನು, “ಅವರು ಇಲ್ಲಿಂದ ಹೊರಟುಹೋದರು. ದೋತಾನಿಗೆ ಹೋಗೋಣ ಎಂದು ಅವರು ಮಾತಾಡಿಕೊಳ್ಳುವುದನ್ನು ನಾನು ಕೇಳಿದೆ” ಎಂದು ಹೇಳಿದನು. ಆದ್ದರಿಂದ ಯೋಸೇಫನು ಅವರನ್ನು ಹುಡುಕುತ್ತಾ ಹೋಗಿ ದೋತಾನಿನಲ್ಲಿ ಅವರನ್ನು ಕಂಡನು.

ಯೋಸೇಫನನ್ನು ಗುಲಾಮತನಕ್ಕೆ ಮಾರಿದ್ದು

18 ಯೋಸೇಫನನ್ನು ಬಹುದೂರದಿಂದಲೇ ಕಂಡ ಅವನ ಅಣ್ಣಂದಿರು ಅವನನ್ನು ಕೊಲ್ಲಲು ಒಂದು ಉಪಾಯ ಮಾಡಿದರು. 19 ಅವರು ಒಬ್ಬರಿಗೊಬ್ಬರು, “ಅಗೋ, ಅಲ್ಲಿ ಬರುತ್ತಿದ್ದಾನೆ ಕನಸುಗಾರನಾದ ಯೋಸೇಫ. 20 ಅವನನ್ನು ಕೊಲ್ಲಲು ಇದೇ ತಕ್ಕ ಸಮಯ. ಅವನನ್ನು ಕೊಂದು ನೀರಿಲ್ಲದ ಬಾವಿಯೊಳಗೆ ದಬ್ಬಿ, ಕ್ರೂರ ಪ್ರಾಣಿಯೊಂದು ಅವನನ್ನು ತಿಂದುಬಿಟ್ಟಿತೆಂದು ನಮ್ಮ ತಂದೆಗೆ ಹೇಳೋಣ. ಆಗ ಅವನ ಕನಸುಗಳೆಲ್ಲ ಹೇಗೆ ನಿಜವಾಗುತ್ತವೊ ನೋಡೋಣ” ಎಂದು ಮಾತಾಡಿಕೊಂಡರು.

21 ಆದರೆ ರೂಬೇನನು ಅವರಿಗೆ, “ಅವನನ್ನು ಕೊಲ್ಲಬೇಡಿ; 22 ಅರಣ್ಯದಲ್ಲಿರುವ ಬರಿದಾದ ಬಾವಿಗೆ ಅವನನ್ನು ನೂಕಿಬಿಡಿ; ಆದರೆ ಅವನಿಗೆ ನೋವು ಮಾಡಬೇಡಿ” ಎಂದು ಹೇಳಿದನು. ತರುವಾಯ ಯೋಸೇಫನನ್ನು ಬಾವಿಯಿಂದ ಮೇಲೆತ್ತಿ ತಂದೆಗೆ ಅವನನ್ನು ಒಪ್ಪಿಸಬೇಕೆಂಬುದೇ ರೂಬೇನನ ಅಪೇಕ್ಷೆಯಾಗಿತ್ತು. 23 ಯೋಸೇಫನು ಬಂದಾಗ ಅವನ ಅಣ್ಣಂದಿರು ಅವನನ್ನು ಹಿಡಿದು ಅವನ ನಿಲುವಂಗಿಯನ್ನು ಹರಿದುಹಾಕಿ 24 ನೀರಿಲ್ಲದ ಒಂದು ಬಾವಿಯೊಳಗೆ ತಳ್ಳಿದರು.

25 ಯೋಸೇಫನು ಬಾವಿಯೊಳಗಿದ್ದಾಗ, ಅವನ ಅಣ್ಣಂದಿರು ಊಟಕ್ಕೆ ಕುಳಿತುಕೊಂಡರು. ಅವರು ಕಣ್ಣೆತ್ತಿ ನೋಡಿದಾಗ ಗಿಲ್ಯಾದಿನಿಂದ ಈಜಿಪ್ಟಿಗೆ ಹೋಗುತ್ತಿದ್ದ ವ್ಯಾಪಾರಿಗಳನ್ನು ಕಂಡರು. ಅವರ ಒಂಟೆಗಳು ಅನೇಕ ಬಗೆಯ ಸಾಂಬಾರ ಪದಾರ್ಥಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ಹೊತ್ತುಕೊಂಡು ಹೋಗುತ್ತಿದ್ದವು. 26 ಆದ್ದರಿಂದ ಯೆಹೂದನು ತನ್ನ ಸಹೋದರರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಅವನ ಮರಣವನ್ನು ಮರೆಮಾಡಿದರೆ ನಮಗಾಗುವ ಲಾಭವೇನು? 27 ಈ ವ್ಯಾಪಾರಿಗಳಿಗೆ ನಾವು ಅವನನ್ನು ಮಾರಿದರೆ ನಮಗೆ ಹೆಚ್ಚು ಲಾಭವಾಗುವುದು; ಆಮೇಲೆ ನಮ್ಮ ತಮ್ಮನನ್ನು ಕೊಂದ ಅಪರಾಧವೂ ನಮ್ಮ ಮೇಲಿರುವುದಿಲ್ಲ” ಎಂದು ಹೇಳಿದನು. ಅದಕ್ಕೆ ಉಳಿದ ಸಹೋದರರೆಲ್ಲ ಒಪ್ಪಿಕೊಂಡರು. 28 ಮಿದ್ಯಾನಿನ ವ್ಯಾಪಾರಿಗಳು ಸಮೀಪಿಸಿದಾಗ, ಅಣ್ಣಂದಿರು ಯೋಸೇಫನನ್ನು ಬಾವಿಯೊಳಗಿಂದ ಹೊರತೆಗೆದು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು. ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿಗೆ ಕೊಂಡೊಯ್ದರು.

29 ಆ ಸಮಯದಲ್ಲಿ ರೂಬೇನನು ತನ್ನ ಸಹೋದರರೊಡನೆ ಇರಲಿಲ್ಲ. ಅವರು ಯೋಸೇಫನನ್ನು ಮಾರಿದ್ದು ಅವನಿಗೆ ಗೊತ್ತಿರಲಿಲ್ಲ. ರೂಬೇನನು ಬಾವಿಗೆ ಹಿಂತಿರುಗಿ ಬಂದಾಗ, ಯೋಸೇಫನನ್ನು ಅಲ್ಲಿ ಕಾಣದೆ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು. 30 ರೂಬೇನನು ತನ್ನ ಸಹೋದರರ ಬಳಿಗೆ ಹೋಗಿ, “ಹುಡುಗನು ಬಾವಿಯೊಳಗೆ ಇಲ್ಲ. ಈಗ ನಾನೇನು ಮಾಡಲಿ?” ಎಂದು ಕೇಳಿದನು. 31 ಬಳಿಕ ಅವರು ಒಂದು ಆಡನ್ನು ಕತ್ತರಿಸಿ ಆಡಿನ ರಕ್ತವನ್ನು ಯೋಸೇಫನ ಸುಂದರವಾದ ನಿಲುವಂಗಿಯ ಮೇಲೆ ಹಾಕಿದರು. 32 ಬಳಿಕ ಆ ನಿಲುವಂಗಿಯನ್ನು ತಮ್ಮ ತಂದೆಯ ಬಳಿಗೆ ತೆಗೆದುಕೊಂಡು ಹೋಗಿ, “ನಾವು ಈ ನಿಲುವಂಗಿಯನ್ನು ಕಂಡೆವು. ಇದು ಯೋಸೇಫನ ನಿಲುವಂಗಿಯೋ?” ಎಂದು ಕೇಳಿದರು.

33 ತಂದೆಯು ಆ ನಿಲುವಂಗಿಯನ್ನು ನೋಡಿ ಅದನ್ನು ಗುರುತಿಸಿ, “ಹೌದು, ಇದು ಯೋಸೇಫನದೇ. ಯಾವುದೋ ಕ್ರೂರ ಪ್ರಾಣಿಯ ಬಾಯಿಗೆ ತುತ್ತಾದನು” ಎಂದು ಹೇಳಿ 34 ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಸುತ್ತಿಕೊಂಡು ಬಹುದಿನಗಳವರೆಗೆ ದುಃಖಪಟ್ಟನು. 35 ಯಾಕೋಬನ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಎಷ್ಟೇ ಸಂತೈಸಿದರೂ ಯಾಕೋಬನಿಗೆ ಆದರಣೆಯಾಗಲಿಲ್ಲ. ಯಾಕೋಬನು ಅವರಿಗೆ, “ನಾನು ಸಾಯುವ ತನಕ ನನ್ನ ಮಗನಿಗಾಗಿ ದುಃಖಪಡುವೆ” ಎಂದು ಹೇಳಿ ದುಃಖಿಸುತ್ತಲೇ ಇದ್ದನು.

36 ಮಿದ್ಯಾನಿನ ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿನಲ್ಲಿ ಮಾರಿದರು. ಅವರು ಅವನನ್ನು ಫರೋಹನ ಕಾವಲುಗಾರರಿಗೆ ನಾಯಕನಾಗಿದ್ದ ಪೋಟೀಫರನಿಗೆ ಮಾರಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International