Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 32-34

ಏಸಾವನೊಂದಿಗೆ ಮತ್ತೆ ಒಂದಾದದ್ದು

32 ಯಾಕೋಬನು ಅಲ್ಲಿಂದ ಹೊರಟು ಪ್ರಯಾಣ ಮಾಡುತ್ತಿರುವಾಗ ದೇವದೂತರನ್ನು ನೋಡಿದನು. ಆದ್ದರಿಂದ ಅವನು, “ಇದು ದೇವರ ಪಾಳೆಯ” ಎಂದು ಹೇಳಿ “ಮಹನಯಿಮ್” ಎಂದು ಹೆಸರಿಟ್ಟನು.

ಯಾಕೋಬನ ಅಣ್ಣನಾದ ಏಸಾವನು ಸೇಯೀರ್ ಎಂಬ ಸ್ಥಳದಲ್ಲಿ ವಾಸವಾಗಿದ್ದನು. ಈ ಸ್ಥಳವು ಎದೋಮಿನ ಗುಡ್ಡಗಾಡು ಪ್ರದೇಶವಾಗಿತ್ತು. ಯಾಕೋಬನು ತನ್ನ ಸಂದೇಶಕರ ಮೂಲಕ ಏಸಾವನಿಗೆ ಈ ಸಂಗತಿಗಳನ್ನು ತಿಳಿಸಿದನು: “ನಿನ್ನ ಸೇವಕನಾದ ಯಾಕೋಬನು ಹೇಳುವುದೇನೆಂದರೆ, ‘ನಾನು ಕಳೆದ ವರ್ಷಗಳೆಲ್ಲಾ ಲಾಬಾನನೊಡನೆ ಜೀವಿಸಿದೆನು. ನನಗೆ ಅನೇಕ ದನಗಳೂ, ಕತ್ತೆಗಳೂ, ಆಡುಕುರಿಗಳೂ ಮತ್ತು ಸೇವಕಸೇವಕಿಯರೂ ಇದ್ದಾರೆ. ಸ್ವಾಮೀ, ನೀವು ನಮ್ಮನ್ನು ಸ್ವೀಕರಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.’”

ಸಂದೇಶಕರು ಯಾಕೋಬನ ಬಳಿಗೆ ಹಿಂತಿರುಗಿ ಬಂದು, “ನಾವು ನಿನ್ನ ಅಣ್ಣನಾದ ಏಸಾವನ ಬಳಿಗೆ ಹೋದೆವು. ಅವನು ನಿನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ. ಅವನೊಡನೆ ನಾನೂರು ಮಂದಿ ಗಂಡಸರಿದ್ದಾರೆ” ಎಂದು ಹೇಳಿದರು.

ಯಾಕೋಬನಿಗೆ ಭಯವಾಯಿತು. ಅವನು ತನ್ನೊಡನೆ ಇದ್ದ ಜನರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿದನು. ಅವನು ಎಲ್ಲಾ ಆಡುಕುರಿಗಳನ್ನೂ ದನಕರುಗಳನ್ನೂ ಒಂಟೆಗಳನ್ನೂ ಎರಡು ಗುಂಪುಗಳನ್ನಾಗಿ ವಿಂಗಡಿಸಿದನು. “ಒಂದುವೇಳೆ ಏಸಾವನು ಬಂದು ಒಂದು ಗುಂಪನ್ನು ನಾಶಗೊಳಿಸಿದರೆ, ಮತ್ತೊಂದು ಗುಂಪು ಓಡಿಹೋಗಿ ತಪ್ಪಿಸಿಕೊಳ್ಳಬಹುದು” ಎಂಬುದು ಅವನ ಆಲೋಚನೆಯಾಗಿತ್ತು.

ಯಾಕೋಬನು, “ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರಾಗಿರುವ ಯೆಹೋವನೇ, ನನ್ನ ದೇಶಕ್ಕೆ ಮತ್ತು ನನ್ನ ಕುಟುಂಬಕ್ಕೆ ಹಿಂತಿರುಗಿ ಬರುವಂತೆ ನೀನು ಹೇಳಿದೆ. ನೀನು ನನಗೆ ಒಳ್ಳೆಯದನ್ನು ಮಾಡುವುದಾಗಿ ಹೇಳಿದೆ. 10 ನೀನು ನನಗೆ ತುಂಬ ಕರುಣೆ ತೋರಿದೆ. ನೀನು ನನಗೆ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದೆ. ಮೊದಲನೆ ಸಲ ನಾನು ಜೋರ್ಡನ್ ನದಿಯನ್ನು ದಾಟಿ ಪ್ರಯಾಣ ಮಾಡಿದಾಗ, ಕೇವಲ ನನ್ನ ಊರುಗೋಲೇ ಹೊರತು ಬೇರೇನೂ ನನಗಿರಲಿಲ್ಲ. ಆದರೆ ಈಗ ಎರಡು ಗುಂಪುಗಳಿಗೆ ಬೇಕಾದ ವಸ್ತುಗಳನ್ನು ನಾನು ಪಡೆದಿದ್ದೇನೆ. 11 ಇಂತಿರಲು, ದಯವಿಟ್ಟು ನನ್ನ ಅಣ್ಣನಿಂದ ನನ್ನನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತಿರುವೆ. ಏಸಾವನಿಂದ ನನ್ನನ್ನು ಕಾಪಾಡು. ಅವನು ಬಂದು ನಮ್ಮೆಲ್ಲರನ್ನೂ ತಾಯಂದಿರನ್ನೂ ಮಕ್ಕಳನ್ನೂ ಕೊಲ್ಲುವನೆಂಬ ಭಯ ನನಗಿದೆ. 12 ‘ನಾನು ನಿನಗೆ ಒಳ್ಳೆಯದನ್ನು ಮಾಡುವೆ. ನಾನು ನಿನ್ನ ಕುಟುಂಬವನ್ನು ಹೆಚ್ಚಿಸಿ ನಿನ್ನ ಮಕ್ಕಳನ್ನು ಸಮುದ್ರದ ಮರಳಿನಷ್ಟು ವೃದ್ಧಿಗೊಳಿಸುವೆನು. ಅವರು ಲೆಕ್ಕಿಸಲಾಗದಷ್ಟು ಅಸಂಖ್ಯಾತವಾಗಿರುವರು’ ಎಂದು ನೀನು ನನಗೆ ವಾಗ್ದಾನ ಮಾಡಿದಿಯಲ್ಲವೇ” ಎಂದು ಪ್ರಾರ್ಥಿಸಿದನು.

13 ಯಾಕೋಬನು ಆ ರಾತ್ರಿ ಅಲ್ಲಿಯೇ ಉಳಿದುಕೊಂಡು ಏಸಾವನಿಗೆ ಉಡುಗೊರೆಯಾಗಿ ಕೊಡಲು ಕೆಲವು ವಸ್ತುಗಳನ್ನು ಸಿದ್ಧಗೊಳಿಸಿದನು. 14 ಯಾಕೋಬನು ಇನ್ನೂರು ಮೇಕೆಗಳನ್ನು, ಇಪ್ಪತ್ತು ಹೋತಗಳನ್ನು, ಇನ್ನೂರು ಕುರಿಗಳನ್ನು ಮತ್ತು ಇಪ್ಪತ್ತು ಟಗರುಗಳನ್ನು ತೆಗೆದುಕೊಂಡನು. 15 ಯಾಕೋಬನು ಮೂವತ್ತು ಒಂಟೆಗಳನ್ನು ಮತ್ತು ಅವುಗಳ ಮರಿಗಳನ್ನು ನಲವತ್ತು ಹಸುಗಳನ್ನು ಮತ್ತು ಹತ್ತು ಹೋರಿಗಳನ್ನು, ಇಪ್ಪತ್ತು ಹೆಣ್ಣು ಕತ್ತೆಗಳನ್ನು ಮತ್ತು ಹತ್ತು ಗಂಡು ಕತ್ತೆಗಳನ್ನು ತೆಗೆದುಕೊಂಡನು. 16 ಯಾಕೋಬನು ಪಶುಗಳ ಪ್ರತಿಯೊಂದು ಮಂದೆಯನ್ನೂ ತನ್ನ ಸೇವಕರ ವಶಕ್ಕೆ ಕೊಟ್ಟನು. ಆಮೇಲೆ ಯಾಕೋಬನು ಸೇವಕರಿಗೆ, “ಪಶುಗಳ ಪ್ರತಿಯೊಂದು ಗುಂಪನ್ನು ವಿಂಗಡಿಸಿ ನನ್ನ ಮುಂದೆ ಹೋಗಿರಿ; ಅಲ್ಲದೆ ಪ್ರತಿಯೊಂದು ಮಂದೆಯ ನಡುವೆಯೂ ಸ್ವಲ್ಪ ಅಂತರವಿರಲಿ” ಎಂದು ಹೇಳಿದನು. 17 ಯಾಕೋಬನು ಅವರಿಗೆ ಅವರವರ ಕರ್ತವ್ಯಗಳನ್ನು ತಿಳಿಸಿದನು. ಯಾಕೋಬನು ಪಶುಗಳ ಮೊದಲನೆ ಗುಂಪಿನ ಸೇವಕನಿಗೆ, “ನನ್ನ ಅಣ್ಣನಾದ ಏಸಾವನು ನಿನ್ನ ಬಳಿಗೆ ಬಂದು, ‘ಇವು ಯಾರ ಪಶುಗಳು? ನೀನು ಎಲ್ಲಿಗೆ ಹೋಗುತ್ತಿರುವೆ? ನೀನು ಯಾರ ಸೇವಕನು?’ ಎಂದು ಕೇಳುವನು. 18 ಆಗ ನೀನು, ‘ಪಶುಗಳು ನಿನ್ನ ಸೇವಕನಾದ ಯಾಕೋಬನವು. ನನ್ನ ಒಡೆಯನಾದ ಏಸಾವನೇ, ಯಾಕೋಬನು ಇವುಗಳನ್ನು ನಿನಗೆ ಉಡುಗೊರೆಯಾಗಿ ಕಳುಹಿಸಿದ್ದಾನೆ. ಅಲ್ಲದೆ ಅವನು ಸಹ ನಮ್ಮ ಹಿಂದೆ ಬರುತ್ತಿದ್ದಾನೆ’ ಎಂದು ತಿಳಿಸಬೇಕು” ಎಂದು ಹೇಳಿದನು.

19 ಇದೇ ರೀತಿ ಮಾಡುವಂತೆ ಯಾಕೋಬನು ಎರಡನೆಯ ಸೇವಕನಿಗೆ, ಮೂರನೆಯ ಸೇವಕನಿಗೆ ಮತ್ತು ಉಳಿದೆಲ್ಲಾ ಸೇವಕರಿಗೆ ಆಜ್ಞಾಪಿಸಿದನು. ಅವನು ಅವರಿಗೆ, “ನೀವು ಏಸಾವನನ್ನು ಭೇಟಿಯಾದಾಗ ಇದೇ ರೀತಿ ಮಾಡಬೇಕು. 20 ನೀವು ಅವನಿಗೆ, ‘ಇದು ನಿನಗೆ ಕಳುಹಿಸಿರುವ ಉಡುಗೊರೆ. ಅಲ್ಲದೆ ನಿನ್ನ ಸೇವಕನಾದ ಯಾಕೋಬನು ನಮ್ಮ ಹಿಂದೆ ಬರುತ್ತಿದ್ದಾನೆ’ ಎಂದು ಹೇಳಬೇಕು” ಎಂದು ತಿಳಿಸಿದನು.

“ನಾನು ಈ ಜನರನ್ನು ಉಡುಗೊರೆಗಳೊಡನೆ ಮುಂದೆ ಕಳುಹಿಸಿದರೆ, ಒಂದುವೇಳೆ ಏಸಾವನು ನನ್ನನ್ನು ಕ್ಷಮಿಸಿ ನನ್ನನ್ನು ಸ್ವೀಕರಿಸಿಕೊಳ್ಳಬಹುದು” ಎಂಬುದು ಯಾಕೋಬನ ಆಲೋಚನೆಯಾಗಿತ್ತು. 21 ಯಾಕೋಬನು ಏಸಾವನಿಗೆ ಉಡುಗೊರೆಗಳನ್ನು ಕಳುಹಿಸಿ ಆ ರಾತ್ರಿ ಪಾಳೆಯದಲ್ಲಿ ಉಳಿದುಕೊಂಡನು.

22 ಆ ರಾತ್ರಿ, ಯಾಕೋಬನು ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ ತನ್ನ ಇಬ್ಬರು ದಾಸಿಯರನ್ನೂ ತನ್ನ ಹನ್ನೊಂದು ಮಂದಿ ಗಂಡುಮಕ್ಕಳನ್ನೂ ಕರೆದುಕೊಂಡು ಹೊರಟು ಯಬ್ಬೋಕ್ ಹೊಳೆಯನ್ನು ದಾಟತಕ್ಕ ಸ್ಥಳಕ್ಕೆ ಬಂದನು. 23 ಯಾಕೋಬನು ತನ್ನ ಕುಟುಂಬದವರನ್ನೂ ತನ್ನಲ್ಲಿದ್ದ ಪ್ರತಿಯೊಂದನ್ನೂ ಆಚೆದಡಕ್ಕೆ ಕಳುಹಿಸಿದನು.

ದೇವರೊಡನೆ ಹೋರಾಟ

24 ಎಲ್ಲರನ್ನೂ ಹೊಳೆ ದಾಟಿಸಿದ ಮೇಲೆ ಕೊನೆಯವನಾಗಿ ತಾನೊಬ್ಬನೇ ಹೊಳೆದಾಟಲು ನಿಂತಿದ್ದಾಗ ಒಬ್ಬ ಪುರುಷನು ಬಂದು ಸೂರ್ಯೋದಯದವರೆಗೂ ಹೋರಾಡಿದನು. 25 ಯಾಕೋಬನನ್ನು ಸೋಲಿಸಲು ತನಗೆ ಸಾಧ್ಯವಾಗದಿರುವುದನ್ನು ಗಮನಿಸಿದ ಆ ಪುರುಷನು ಯಾಕೋಬನ ತೊಡೆಯನ್ನು ಮುಟ್ಟಿದನು. ಆಗ ಯಾಕೋಬನ ಕೀಲು ತಪ್ಪಿತು.

26 ಆ ಪುರುಷನು ಯಾಕೋಬನಿಗೆ, “ನನ್ನನ್ನು ಬಿಡು, ಸೂರ್ಯೋದಯವಾಗುತ್ತಿದೆ” ಎಂದು ಹೇಳಿದನು.

ಆದರೆ ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನು ಬಿಡುವುದಿಲ್ಲ” ಎಂದು ಹೇಳಿದನು.

27 ಆ ಪುರುಷನು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು.

ಅದಕ್ಕೆ ಯಾಕೋಬನು, “ನನ್ನ ಹೆಸರು ಯಾಕೋಬ” ಅಂದನು.

28 ಆಗ ಆ ಪುರುಷನು, “ಇನ್ನು ಮೇಲೆ ನಿನ್ನ ಹೆಸರು ‘ಯಾಕೋಬ’ ಎಂದಿರುವುದಿಲ್ಲ. ಇಂದಿನಿಂದ ನಿನ್ನ ಹೆಸರು ‘ಇಸ್ರೇಲ್’ ಎಂದಾಗುವುದು. ನಾನೇ ನಿನಗೆ ಈ ಹೆಸರನ್ನು ಕೊಟ್ಟಿದ್ದೇನೆ; ಯಾಕೆಂದರೆ ನೀನು ದೇವರೊಡನೆಯೂ ಮನುಷ್ಯರೊಡನೆಯೂ ಹೋರಾಡಿದೆ; ಆದರೂ ನೀನು ಸೋಲಲಿಲ್ಲ” ಎಂದು ಹೇಳಿದನು.

29 ಯಾಕೋಬನು ಆತನಿಗೆ, “ದಯವಿಟ್ಟು ನಿನ್ನ ಹೆಸರನ್ನು ತಿಳಿಸು” ಎಂದು ಕೇಳಿದನು.

ಅದಕ್ಕೆ ಆ ಪುರುಷನು, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಯಾಕೋಬನನ್ನು ಆಶೀರ್ವದಿಸಿದನು.

30 ಆದ್ದರಿಂದ ಯಾಕೋಬನು, “ಈ ಸ್ಥಳದಲ್ಲಿ ನಾನು ದೇವರನ್ನು ಮುಖಾಮುಖಿಯಾಗಿ ನೋಡಿದರೂ ನನ್ನ ಜೀವ ಉಳಿಯಿತು” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು. 31 ಆಮೇಲೆ ಅವನು ಪೆನೀಯೇಲ್‌ನಿಂದ ಹೊರಟುಹೋಗುತ್ತಿರುವಾಗ ಸೂರ್ಯೋದಯವಾಯಿತು. ಯಾಕೋಬನು ತನ್ನ ಕೀಲುನೋವಿನಿಂದ ಕುಂಟುತ್ತಾ ಹೋದನು. 32 ಈ ಮಾಂಸಖಂಡದಲ್ಲಿ ಯಾಕೋಬನಿಗೆ ನೋವು ಉಂಟಾಗಿದ್ದರಿಂದ ಇಂದಿಗೂ ಇಸ್ರೇಲರು ತೊಡೆಯ ಕೀಲಿನ ಮೇಲಿರುವ ಸೊಂಟದ ಮಾಂಸವನ್ನು ತಿನ್ನುವುದಿಲ್ಲ.

ಯಾಕೋಬನು ತೋರಿದ ಧೈರ್ಯ

33 ಯಾಕೋಬನು ಕಣ್ಣೆತ್ತಿ ನೋಡಿದಾಗ ಏಸಾವನು ನಾನೂರು ಜನರೊಂದಿಗೆ ಬರುವುದನ್ನು ಕಂಡನು. ಯಾಕೋಬನು ತನ್ನ ಕುಟುಂಬವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದನು. ಲೇಯಾ ಮತ್ತು ಅವಳ ಮಕ್ಕಳು ಒಂದು ಗುಂಪಿನಲ್ಲಿದ್ದರು. ರಾಹೇಲಳು ಮತ್ತು ಯೋಸೇಫನು ಇನ್ನೊಂದು ಗುಂಪಿನಲ್ಲಿದ್ದರು. ಇಬ್ಬರು ದಾಸಿಯರು ಮತ್ತು ಅವರ ಮಕ್ಕಳು ಎರಡು ಗುಂಪುಗಳಲ್ಲಿದ್ದರು. ಯಾಕೋಬನು ದಾಸಿಯರನ್ನು ಮತ್ತು ಅವರ ಮಕ್ಕಳನ್ನು ಮುಂಭಾಗದಲ್ಲಿಯೂ ಲೇಯಳನ್ನು ಮತ್ತು ಅವಳ ಮಕ್ಕಳನ್ನು ಅವರ ಹಿಂಭಾಗದಲ್ಲಿಯೂ, ರಾಹೇಲಳನ್ನು ಮತ್ತು ಯೋಸೇಫನನ್ನು ಕೊನೆಯ ಸ್ಥಳದಲ್ಲೂ ಇರಿಸಿದನು.

ಯಾಕೋಬನು ತಾನೇ ಮುಂದಾಗಿ ಏಸಾವನ ಬಳಿಗೆ ನಡೆದುಹೋಗುತ್ತಾ ಏಳು ಸಲ ನೆಲದ ತನಕ ಬಗ್ಗಿ ನಮಸ್ಕರಿಸಿದನು.

ಏಸಾವನು ಯಾಕೋಬನನ್ನು ಕಂಡಾಗ, ಓಡಿಬಂದು ತನ್ನ ಕೈಗಳಿಂದ ತಬ್ಬಿಕೊಂಡು ಅವನ ಕೊರಳಿನ ಮೇಲೆ ಮುದ್ದಿಟ್ಟನು; ಅವರಿಬ್ಬರೂ ಕಣ್ಣೀರು ಸುರಿಸಿದರು. ಏಸಾವನು ಸ್ತ್ರೀಯರನ್ನು ಮತ್ತು ಮಕ್ಕಳನ್ನು ಕಣ್ಣೆತ್ತಿ ನೋಡಿ, “ನಿನ್ನೊಡನೆ ಇರುವ ಈ ಜನರು ಯಾರು?” ಎಂದು ಕೇಳಿದನು.

ಯಾಕೋಬನು, “ದೇವರು ನನಗೆ ಕೊಟ್ಟ ಮಕ್ಕಳೇ ಇವರು. ದೇವರು ನನಗೆ ಒಳ್ಳೆಯವನಾಗಿದ್ದನು” ಎಂದು ಹೇಳಿದನು.

ಆಮೇಲೆ ಇಬ್ಬರು ದಾಸಿಯರು ಮತ್ತು ಅವರೊಂದಿಗೆ ಇದ್ದ ಮಕ್ಕಳು ಏಸಾವನ ಬಳಿಗೆ ಹೋಗಿ ಅವನಿಗೆ ತಲೆಬಾಗಿ ನಮಸ್ಕರಿಸಿದರು. ಆಮೇಲೆ ಲೇಯಾ ಮತ್ತು ಅವಳೊಂದಿಗೆ ಇದ್ದ ಮಕ್ಕಳು ಏಸಾವನ ಬಳಿಗೆ ಹೋಗಿ ಅವನಿಗೆ ತಲೆಬಾಗಿ ನಮಸ್ಕರಿಸಿದರು. ತರುವಾಯ, ರಾಹೇಲಳು ಮತ್ತು ಯೋಸೇಫನು ಏಸಾವನ ಬಳಿಗೆ ಹೋಗಿ ತಲೆಬಾಗಿ ನಮಸ್ಕರಿಸಿದರು.

ಏಸಾವನು, “ನಾನು ಬರುತ್ತಿರುವಾಗ ಕಂಡ ಆ ಜನರೆಲ್ಲಾ ಯಾರು? ಆ ಪಶುಗಳೆಲ್ಲಾ ಯಾತಕ್ಕೆ?” ಎಂದು ಕೇಳಿದನು.

ಯಾಕೋಬನು, “ನೀನು ನನ್ನನ್ನು ಸ್ವೀಕರಿಸಿಕೊಳ್ಳಲಿ ಎಂದು ಅವುಗಳನ್ನು ಉಡುಗೊರೆಗಳನ್ನಾಗಿ ಕಳುಹಿಸಿಕೊಟ್ಟೆನು” ಎಂದು ಹೇಳಿದನು.

ಆದರೆ ಏಸಾವನು, “ತಮ್ಮನೇ, ನೀನು ನನಗೆ ಉಡುಗೊರೆಗಳನ್ನು ಕೊಡಬೇಕಾಗಿಲ್ಲ, ನನಗೆ ಬೇಕಾದಷ್ಟಿದೆ” ಎಂದು ಹೇಳಿದನು.

10 ಯಾಕೋಬನು, “ಇಲ್ಲ! ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ; ನೀನು ನನ್ನನ್ನು ನಿಜವಾಗಿಯೂ ಸ್ವೀಕರಿಸಿಕೊಳ್ಳುವುದಾದರೆ, ನಾನು ಕೊಡುವ ಉಡುಗೊರೆಗಳನ್ನು ದಯವಿಟ್ಟು ಸ್ವೀಕರಿಸಬೇಕು. ನಿನ್ನ ಮುಖವನ್ನು ಮತ್ತೆ ನೋಡಿ ನನಗೆ ತುಂಬ ಸಂತೋಷವಾಗಿದೆ. ದೇವರ ಮುಖವನ್ನೇ ನೋಡಿದಂತಾಯಿತು. ನೀನು ನನ್ನನ್ನು ಸ್ವೀಕರಿಸಿಕೊಂಡದ್ದರಿಂದ ನನಗೆ ತುಂಬ ಸಂತೋಷವಾಗಿದೆ. 11 ಆದ್ದರಿಂದ ನಾನು ಕೊಡುವ ಈ ಉಡುಗೊರೆಗಳನ್ನು ಸ್ವೀಕರಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತಿರುವೆ. ದೇವರು ನನಗೆ ತುಂಬ ಒಳ್ಳೆಯವನಾಗಿದ್ದನು. ನನಗೆ ಬೇಕಾದದ್ದಕ್ಕಿಂತಲೂ ಹೆಚ್ಚಾಗಿ ನನ್ನಲ್ಲಿದೆ” ಎಂದು ಹೇಳಿದನು. ಹೀಗೆ ಯಾಕೋಬನು ಉಡುಗೊರೆಗಳನ್ನು ತೆಗೆದುಕೊಳ್ಳುವಂತೆ ಏಸಾವನನ್ನು ಬೇಡಿಕೊಂಡನು. ಆದ್ದರಿಂದ ಏಸಾವನು ಉಡುಗೊರೆಗಳನ್ನು ಸ್ವೀಕರಿಸಿದನು.

12 ಆಮೇಲೆ ಏಸಾವನು, “ಈಗ ನೀನು ನಿನ್ನ ಪ್ರಯಾಣವನ್ನು ಮುಂದುವರಿಸಬಹುದು. ನಾನು ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಹೇಳಿದನು.

13 ಆದರೆ ಯಾಕೋಬನು ಅವನಿಗೆ, “ನನ್ನ ಮಕ್ಕಳು ಬಲಹೀನರೆಂದು ನಿನಗೆ ಗೊತ್ತಿದೆ. ನಾನು ನನ್ನ ದನಕುರಿಗಳನ್ನೂ ಅವುಗಳ ಮರಿಗಳನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಒಂದೇ ದಿನದಲ್ಲಿ ಬಹುದೂರದವರೆಗೆ ಎಡಬಿಡದೆ ನಡೆಸಿಕೊಂಡು ಹೋದರೆ, ಎಲ್ಲಾ ಪಶುಗಳು ಸತ್ತುಹೋಗುತ್ತವೆ. 14 ಆದ್ದರಿಂದ ನೀನು ಮುಂದಾಗಿ ಹೋಗು. ನಾನು ನಿನ್ನನ್ನು ನಿಧಾನವಾಗಿ ಹಿಂಬಾಲಿಸುವೆನು. ದನಕುರಿಗಳು ಮತ್ತು ಇತರ ಪಶುಗಳು ಸುರಕ್ಷಿತವಾಗಿರುವಂತೆಯೂ ನನ್ನ ಮಕ್ಕಳು ತುಂಬ ಆಯಾಸಗೊಳ್ಳದಂತೆಯೂ ನಾನು ಸಾಕಷ್ಟು ನಿಧಾನವಾಗಿ ಬಂದು ನಿನ್ನನ್ನು ಸೇಯೀರ್‌ನಲ್ಲಿ ಭೇಟಿಯಾಗುವೆನು” ಎಂದು ಹೇಳಿದನು.

15 ಅದಕ್ಕೆ ಏಸಾವನು, “ಹಾಗಾದರೆ ನನ್ನ ಜನರಲ್ಲಿ ಕೆಲವರನ್ನು ನಿನ್ನ ಸಹಾಯಕ್ಕಾಗಿ ಬಿಟ್ಟುಹೋಗುವೆನು” ಎಂದು ಹೇಳಿದನು.

ಆದರೆ ಯಾಕೋಬನು, “ಅದು ನಿನ್ನ ದಯೆ. ಆದರೆ ಅಂಥ ಅಗತ್ಯವೇನೂ ಇಲ್ಲ” ಎಂದು ಹೇಳಿದನು. 16 ಆದ್ದರಿಂದ ಆ ದಿನ ಏಸಾವನು ಸೇಯೀರಿಗೆ ಮರಳಿ ಪ್ರಯಾಣ ಮಾಡಿದನು. 17 ಆದರೆ ಯಾಕೋಬನು ಸುಕ್ಕೋತಿಗೆ ಹೋದನು. ಆ ಸ್ಥಳದಲ್ಲಿ ಅವನು ತನಗಾಗಿ ಒಂದು ಮನೆಯನ್ನೂ ತನ್ನ ದನಕುರಿಗಳಿಗಾಗಿ ಚಿಕ್ಕ ಕೊಟ್ಟಿಗೆಗಳನ್ನೂ ಕಟ್ಟಿಸಿದನು. ಆದ್ದರಿಂದ ಆ ಸ್ಥಳಕ್ಕೆ “ಸುಕ್ಕೋತ್” ಎಂದು ಹೆಸರಾಯಿತು.

18 ಆಮೇಲೆ ಯಾಕೋಬನು ಕಾನಾನ್ ದೇಶದ ಶೆಕೆಮ್ ಪಟ್ಟಣಕ್ಕೆ ಬಂದು ತನ್ನ ಪಾಳೆಯನ್ನು ಪಟ್ಟಣದ ಸಮೀಪದಲ್ಲಿದ್ದ ಒಂದು ಹೊಲದಲ್ಲಿ ಹಾಕಿಸಿದನು. 19 ಯಾಕೋಬನು ನೂರು ಬೆಳ್ಳಿನಾಣ್ಯಗಳನ್ನು ಕೊಟ್ಟು ಶೆಕೆಮನ ತಂದೆಯಾದ ಹಮೋರನ ಕುಟುಂಬದಿಂದ ಆ ಹೊಲವನ್ನು ಕೊಂಡುಕೊಂಡನು. 20 ದೇವರನ್ನು ಆರಾಧಿಸುವುದಕ್ಕಾಗಿ ಒಂದು ಯಜ್ಞವೇದಿಕೆಯನ್ನು ಕಟ್ಟಸಿ ಆ ಸ್ಥಳಕ್ಕೆ “ಇಸ್ರೇಲರ ದೇವರಾದ ಏಲೆಲೋಹೇ” ಎಂದು ಹೆಸರಿಟ್ಟನು.

ದೀನಳ ಮಾನಭಂಗ

34 ದೀನಳು ಲೇಯಾ ಮತ್ತು ಯಾಕೋಬನ ಮಗಳು. ದೀನಳು ಒಂದು ದಿನ ಆ ದೇಶದ ಸ್ತ್ರೀಯರನ್ನು ನೋಡಲು ಹೊರಗೆ ಹೋದಳು. ಆ ದೇಶದ ರಾಜನಾಗಿದ್ದ ಹಮೋರನ ಮಗನಾದ ಶೆಕೆಮನು ದೀನಳನ್ನು ಕಂಡು ಅವಳನ್ನು ಎಳೆದುಕೊಂಡು ಹೋಗಿ ಬಲಾತ್ಕಾರ ಮಾಡಿದನು. ಶೆಕೆಮನಿಗೆ ದೀನಳ ಮೇಲೆ ಪ್ರೀತಿಯುಂಟಾಗಿ ಆಕೆಯನ್ನು ಮದುವೆ ಮಾಡಿಕೊಳ್ಳಲು ಇಷ್ಟಪಟ್ಟನು. ಅವನು ತನ್ನನ್ನು ಮದುವೆಯಾಗಬೇಕೆಂದು ಆಕೆಯ ಸಂಗಡ ಮನವೊಲಿಸುವ ಮಾತುಗಳನ್ನಾಡಿದನು. ಶೆಕೆಮನು ತನ್ನ ತಂದೆಗೆ, “ದಯವಿಟ್ಟು ಈ ಹುಡುಗಿಯನ್ನು ನನಗೆ ಮದುವೆಮಾಡಿಸು” ಎಂದು ಕೇಳಿಕೊಂಡನು.

ಯಾಕೋಬನು ತನ್ನ ಮಗಳಿಗೆ ಶೆಕೆಮನಿಂದ ಮಾನಭಂಗವಾದ ಸುದ್ದಿಯನ್ನು ಕೇಳಿದನು. ಆದರೆ ಅವನ ಗಂಡುಮಕ್ಕಳೆಲ್ಲ ಕುರಿಗಳೊಂದಿಗೆ ಹೊಲದಲ್ಲಿದ್ದುದರಿಂದ ಅವರು ಮನೆಗೆ ಬರುವತನಕ ಏನೂ ಮಾಡಲಿಲ್ಲ. ಆ ಸಮಯದಲ್ಲಿ ಶೆಕೆಮನ ತಂದೆಯಾದ ಹಮೋರನು ಯಾಕೋಬನೊಂದಿಗೆ ಮಾತಾಡಲು ಬಂದನು.

ಹೊಲದಲ್ಲಿದ್ದ ಯಾಕೋಬನ ಗಂಡುಮಕ್ಕಳು ನಡೆದ ಸಂಗತಿಯನ್ನು ಕೇಳಿ ತುಂಬ ಕೋಪಗೊಂಡರು. ಶೆಕೆಮನು ಯಾಕೋಬನ ಮಗಳನ್ನು ಮಾನಭಂಗ ಮಾಡಿ ಇಸ್ರೇಲರಿಗೆ ಅವಮಾನ ಮಾಡಿದ್ದರಿಂದ ಅವರು ಆವೇಶಗೊಂಡರು. ಶೆಕೆಮನು ತುಂಬ ಕೆಟ್ಟದ್ದನ್ನು ಮಾಡಿದ್ದರಿಂದ ಅಣ್ಣಂದಿರು ಹೊಲದಿಂದ ಹಿಂತಿರುಗಿದರು.

ಆದರೆ ಹಮೋರನು ದೀನಳ ಅಣ್ಣಂದಿರೊಡನೆ ಮಾತಾಡಿದನು. ಅವನು ಅವರಿಗೆ, “ನನ್ನ ಮಗನಾದ ಶೆಕೆಮನು ದೀನಳನ್ನು ತುಂಬ ಇಷ್ಟಪಡುತ್ತಾನೆ. ಅವನು ಆಕೆಯನ್ನು ಮದುವೆ ಮಾಡಿಕೊಳ್ಳಲು ದಯವಿಟ್ಟು ಅವಕಾಶಕೊಡಿ. ಈ ಮದುವೆಯು ನಮಗಾಗಿರುವ ಒಂದು ವಿಶೇಷ ಒಪ್ಪಂದವನ್ನು ತೋರಿಸುತ್ತದೆ. ಅದೇನೆಂದರೆ, ನಮ್ಮ ಗಂಡಸರು ನಿಮ್ಮ ಸ್ತ್ರೀಯರನ್ನು ಮದುವೆಯಾಗಬಹುದು ಮತ್ತು ನಿಮ್ಮ ಗಂಡಸರು ನಮ್ಮ ಸ್ತ್ರೀಯರನ್ನು ಮದುವೆಯಾಗಬಹುದು. 10 ನೀವು ನಮ್ಮೊಂದಿಗೆ ಒಂದೇ ದೇಶದಲ್ಲಿ ವಾಸವಾಗಿರಬಹುದು. ನಿಮಗೆ ಇಲ್ಲಿ ಜಮೀನು ಮಾಡಿಕೊಳ್ಳಲು ಮತ್ತು ವ್ಯಾಪಾರ ಮಾಡಲು ಸ್ವತಂತ್ರವಿದೆ” ಎಂದು ಹೇಳಿದನು.

11 ಶೆಕೆಮನು ಸಹ ಯಾಕೋಬನೊಡನೆ ಮತ್ತು ದೀನಳ ಅಣ್ಣಂದಿರೊಡನೆ ಮಾತಾಡಿದನು. ಶೆಕೆಮನು ಅವರಿಗೆ, “ದಯವಿಟ್ಟು ನನ್ನನ್ನು ಸ್ವೀಕಾರಮಾಡಿ ನೀವು ಏನೇ ಹೇಳಿದರೂ ನಾನು ಮಾಡುತ್ತೇನೆ. 12 ನಾನು ದೀನಳನ್ನು ಮದುವೆಯಾಗಲು ನೀವು ನನಗೆ ಅವಕಾಶಕೊಟ್ಟರೆ ಸಾಕು. ನಾನು ನಿಮಗೆ ಯಾವ ಉಡುಗೊರೆಯನ್ನು ಬೇಕಾದರೂ ಕೊಡುವೆನು. ನೀವು ಏನು ಕೇಳಿದರೂ ಕೊಡುವೆನು. ಆದರೆ ನನಗೆ ದೀನಳನ್ನು ಮದುವೆ ಮಾಡಿಸಿಕೊಡಿ” ಎಂದು ಕೇಳಿಕೊಂಡನು.

13 ಯಾಕೋಬನ ಗಂಡುಮಕ್ಕಳು ಶೆಕೆಮನಿಗೂ ಅವನ ತಂದೆಗೂ ಸುಳ್ಳು ಹೇಳಲು ನಿರ್ಧರಿಸಿದರು. ತಮ್ಮ ತಂಗಿಯಾದ ದೀನಳಿಗೆ ಶೆಕೆಮನು ಅಂಥ ಕೆಟ್ಟಕಾರ್ಯವನ್ನು ಮಾಡಿದ್ದರಿಂದ ಅವರು ಇನ್ನೂ ಆವೇಶದಿಂದ ಇದ್ದರು. 14 ಆದ್ದರಿಂದ ಆಕೆಯ ಅಣ್ಣಂದಿರು ಅವನಿಗೆ, “ನೀನು ನಮ್ಮ ತಂಗಿಯನ್ನು ಮದುವೆಯಾಗಲು ನಾವು ಅವಕಾಶ ಕೊಡುವಂತಿಲ್ಲ; ಯಾಕೆಂದರೆ ನಿನಗಿನ್ನೂ ಸುನ್ನತಿಯಾಗಿಲ್ಲ. ನಮ್ಮ ತಂಗಿಯು ನಿನ್ನನ್ನು ಮದುವೆಯಾಗುವುದು ತಪ್ಪಾಗುತ್ತದೆ. 15 ಆದರೆ ನೀನು ಮತ್ತು ನಿಮ್ಮ ಪಟ್ಟಣದಲ್ಲಿರುವ ಪ್ರತಿಯೊಬ್ಬ ಗಂಡಸು ನಮ್ಮಂತೆ ಸುನ್ನತಿ ಮಾಡಿಸಿಕೊಂಡರೆ ನೀನು ಆಕೆಯನ್ನು ಮದುವೆಯಾಗಬಹುದು. 16 ಆಮೇಲೆ ನಿಮ್ಮ ಗಂಡಸರು ನಮ್ಮ ಸ್ತ್ರೀಯರನ್ನು ಮದುವೆಯಾಗಬಹುದು ಮತ್ತು ನಮ್ಮ ಗಂಡಸರು ನಿಮ್ಮ ಸ್ತ್ರೀಯರನ್ನು ಮದುವೆಯಾಗಬಹುದು. ಆಗ ನಾವು ಒಂದೇ ಜನಾಂಗವಾಗುವೆವು. 17 ಆದರೆ ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಾವು ದೀನಳನ್ನು ಕರೆದುಕೊಂಡು ಹೋಗುತ್ತೇವೆ” ಎಂದು ಹೇಳಿದರು.

18 ಅವರು ಹೇಳಿದ್ದು ಹಮೋರನಿಗೂ ಶೆಕೆಮನಿಗೂ ಒಳ್ಳೆಯದೆಂದು ತೋಚಿತು. 19 ದೀನಳ ಅಣ್ಣಂದಿರು ಹೇಳಿದ್ದನ್ನು ಮಾಡಲು ಶೆಕೆಮನು ಸಂತೋಷದಿಂದ ಒಪ್ಪಿಕೊಂಡನು.

ಶೆಕೆಮನಿಗೆ ಅವರ ಕುಟುಂಬದಲ್ಲಿ ತುಂಬ ಗೌರವವಿತ್ತು. 20 ಹಮೋರನು ಮತ್ತು ಶೆಕೆಮನು ತಮ್ಮ ನಗರದ ಸಭಾಸ್ಥಳಕ್ಕೆ ಹೋದರು. ಅವರು ಪಟ್ಟಣದ ಗಂಡಸರೊಂದಿಗೆ ಮಾತಾಡಿ, 21 “ಈ ಇಸ್ರೇಲರಿಗೆ ನಮ್ಮ ಸ್ನೇಹಿತರಾಗಿರಲು ಇಷ್ಟ; ಇವರು ನಮ್ಮ ದೇಶದಲ್ಲಿ ವಾಸವಾಗಿದ್ದುಕೊಂಡು ನಮ್ಮೊಂದಿಗೆ ಸಮಾಧಾನದಿಂದಿರುವುದು ನಮಗೂ ಇಷ್ಟ; ನಮ್ಮೆಲ್ಲರಿಗೂ ಬೇಕಾಗುವಷ್ಟು ಭೂಮಿ ನಮ್ಮಲ್ಲಿದೆ. ನಾವು ಅವರ ಸ್ತ್ರೀಯರನ್ನು ಮದುವೆಯಾಗವುದಕ್ಕೂ ನಮ್ಮ ಸ್ತ್ರೀಯರನ್ನು ಅವರಿಗೆ ಮದುವೆ ಮಾಡಿಕೊಡುವುದಕ್ಕೂ ಸಂತೋಷಪಡುತ್ತೇವೆ. 22 ಆದರೆ ನಾವು ಮಾಡಬೇಕಾದ ಒಂದೇ ಒಂದು ಕಾರ್ಯವೇನೆಂದರೆ, ಇಸ್ರೇಲರಂತೆ ನಮ್ಮ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಳ್ಳಬೇಕು. 23 ನಾವು ಹೀಗೆ ಮಾಡಿದರೆ, ಅವರ ಎಲ್ಲಾ ದನಕುರಿಗಳಿಂದಲೂ ಪಶುಗಳಿಂದಲೂ ಐಶ್ವರ್ಯವಂತರಾಗುತ್ತೇವೆ. ನಾವು ಈ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡರೆ ಅವರು ನಮ್ಮೊಂದಿಗೆ ಇಲ್ಲಿ ವಾಸಿಸುವರು” ಎಂದು ಹೇಳಿದರು. 24 ಸಭಾಸ್ಥಳದಲ್ಲಿದ್ದ ಗಂಡಸರೆಲ್ಲರೂ ಹಮೋರ ಮತ್ತು ಶೆಕೆಮರ ಮಾತಿಗೆ ಒಪ್ಪಿಕೊಂಡರು. ಬಳಿಕ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಂಡರು.

25 ಮೂರು ದಿನಗದರೂ ಸುನ್ನತಿ ಮಾಡಿಸಿಕೊಂಡಿದ್ದ ಗಂಡಸರು ಇನ್ನೂ ಗಾಯದ ನೋವಿನಲ್ಲಿದ್ದರು. ಈ ಸಮಯದಲ್ಲಿ ಗಂಡಸರು ಬಲಹೀನರಾಗಿರುತ್ತಾರೆ ಎಂಬುದು ಯಾಕೋಬನ ಇಬ್ಬರು ಗಂಡುಮಕ್ಕಳಾದ ಸಿಮೆಯೋನ್ ಮತ್ತು ಲೇವಿಗೆ ತಿಳಿದಿತ್ತು. ಆದ್ದರಿಂದ ಅವರು ಪಟ್ಟಣಕ್ಕೆ ಹೋಗಿ ಅಲ್ಲಿದ್ದ ಎಲ್ಲಾ ಗಂಡಸರನ್ನು ಕೊಂದುಹಾಕಿದರು. 26 ದೀನಳ ಅಣ್ಣಂದಿರಾದ ಸಿಮೆಯೋನನು ಮತ್ತು ಲೇವಿಯು ಹಮೋರನನ್ನೂ ಅವನ ಮಗನಾದ ಶೆಕೆಮನನ್ನೂ ಕೊಂದುಹಾಕಿ ದೀನಳನ್ನು ಶೆಕಮನ ಮನೆಯಿಂದ ಕರೆದುಕೊಂಡು ಬಂದರು. 27 ಯಾಕೋಬನ ಗಂಡುಮಕ್ಕಳು ಪಟ್ಟಣದೊಳಗೆ ಹೋಗಿ ಅಲ್ಲಿದ್ದ ಪ್ರತಿಯೊಂದನ್ನು ತೆಗೆದುಕೊಂಡರು. ತಮ್ಮ ತಂಗಿಗೆ ಶೆಕೆಮನು ಮಾಡಿದ ಮಾನಭಂಗದಿಂದ ಅವರು ಇನ್ನೂ ಕೋಪದಲ್ಲಿದ್ದರು. 28 ಹೀಗೆ ದೀನಳ ಅಣ್ಣಂದಿರು ಅವರ ದನಕುರಿಗಳನ್ನೂ ಕತ್ತೆಗಳನ್ನೂ ಪಟ್ಟಣದಲ್ಲಿಯೂ ಹೊಲದಲ್ಲಿಯೂ ಇದ್ದ ಆಸ್ತಿಯೆಲ್ಲವನ್ನೂ ತೆಗೆದುಕೊಂಡರು. 29 ಅವರ ಹೆಂಡತಿಯರನ್ನೂ ಮಕ್ಕಳನ್ನೂ ಸೆರೆಹಿಡಿದು ಮನೆಯಲ್ಲಿದ್ದದ್ದನ್ನೆಲ್ಲಾ ದೋಚಿಕೊಂಡರು.

30 ಆದರೆ ಯಾಕೋಬನು ಸಿಮೆಯೋನನಿಗೆ ಮತ್ತು ಲೇವಿಗೆ, “ನೀವು ನನ್ನನ್ನು ಅಪಾಯಕ್ಕೆ ಗುರಿಮಾಡಿದಿರಿ. ಈ ದೇಶದಲ್ಲಿರುವ ಎಲ್ಲಾ ಕಾನಾನ್ಯರು ಮತ್ತು ಪೆರಿಜೀಯರು ನನ್ನನ್ನು ದ್ವೇಷಿಸಿ ನನಗೆ ವಿರೋಧವಾಗುವರು. ನನಗಿರುವ ಜನರು ಕೆಲವರೇ. ಈ ದೇಶದಲ್ಲಿರುವ ಜನರು ಒಟ್ಟಾಗಿ ಸೇರಿಕೊಂಡು ನನಗೆ ವಿರೋಧವಾಗಿ ಹೋರಾಡಿದರೆ ನಾನೂ ನನ್ನ ಜನರೆಲ್ಲರೂ ನಾಶವಾಗುವೆವು” ಎಂದು ಹೇಳಿದನು.

31 ಆದರೆ ದೀನಳ ಅಣ್ಣಂದಿರು, “ನಮ್ಮ ತಂಗಿಯನ್ನು ಆ ಜನರು ಸೂಳೆಯಂತೆ ಉಪಯೋಗಿಸಿಕೊಳ್ಳಲು ನಾವು ಬಿಡಬೇಕೇ? ಇಲ್ಲ, ನಮ್ಮ ತಂಗಿಗೆ ಆ ಜನರು ಮಾಡಿದ್ದು ತಪ್ಪು” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International