Beginning
ಯಾಕೋಬನು ಇಸಾಕನಿಗೆ ಮಾಡಿದ ಮೋಸ
27 ಇಸಾಕನು ಮುದುಕನಾದಾಗ ಅವನಿಗೆ ಕಣ್ಣುಗಳು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಒಂದು ದಿನ ಅವನು ತನ್ನ ಹಿರಿಮಗನಾದ ಏಸಾವನನ್ನು ತನ್ನ ಬಳಿಗೆ ಕರೆದು ಅವನಿಗೆ, “ಮಗನೇ” ಅಂದನು.
ಏಸಾವನು, “ಇಗೋ ಇದ್ದೇನೆ” ಎಂದು ಉತ್ತರಿಸಿದನು.
2 ಇಸಾಕನು ಅವನಿಗೆ, “ನನಗೆ ವಯಸ್ಸಾಯಿತು. ನಾನು ಬಹುಬೇಗನೆ ಸಾಯಬಹುದು. 3 ಆದ್ದರಿಂದ ನಿನ್ನ ಬಿಲ್ಲುಬಾಣಗಳನ್ನು ತೆಗೆದುಕೊಂಡು ಬೇಟೆಗೆ ಹೋಗು. ನನಗೋಸ್ಕರ ಒಂದು ಪ್ರಾಣಿಯನ್ನು ಬೇಟೆಯಾಡಿಕೊಂಡು ಬಂದು 4 ನನಗೆ ಇಷ್ಟವಾದ ಅಡಿಗೆಯನ್ನು ತಯಾರಿಸಿ ತೆಗೆದುಕೊಂಡು ಬಾ. ನಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. 5 ಆದ್ದರಿಂದ ಏಸಾವನು ಬೇಟೆಗಾಗಿ ಹೋದನು.
ಇಸಾಕನು ತನ್ನ ಮಗನಾದ ಏಸಾವನಿಗೆ ಹೇಳಿದ ಈ ವಿಷಯಗಳನ್ನೆಲ್ಲ ರೆಬೆಕ್ಕಳು ಕೇಳಿಸಿಕೊಂಡಳು. 6 ರೆಬೆಕ್ಕಳು ತನ್ನ ಮಗನಾದ ಯಾಕೋಬನಿಗೆ, “ಕೇಳು, ನಿನ್ನ ತಂದೆಯು ನಿನ್ನ ಅಣ್ಣನಾದ ಏಸಾವನೊಡನೆ ಮಾತಾಡುತ್ತಿರುವುದನ್ನು ನಾನು ಕೇಳಿಸಿಕೊಂಡೆ. 7 ನಿನ್ನ ತಂದೆ ಅವನಿಗೆ, ‘ನನಗೋಸ್ಕರ ಒಂದು ಪ್ರಾಣಿಯನ್ನು ಬೇಟೆಯಾಡಿಕೊಂಡು ಬಂದು ನನಗೆ ಇಷ್ಟವಾದ ಅಡಿಗೆಯನ್ನು ತಯಾರಿಸಿ ತೆಗೆದುಕೊಂಡು ಬಾ. ನಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವೆನು’ ಎಂದು ಹೇಳಿದನು. 8 ಆದ್ದರಿಂದ ಮಗನೇ, ನನ್ನ ಮಾತನ್ನು ಕೇಳು ಮತ್ತು ನಾನು ಹೇಳಿದ್ದನ್ನು ಮಾಡು. 9 ನಮ್ಮ ಆಡುಗಳ ಬಳಿಗೆ ಹೋಗಿ ಎರಡು ಆಡುಮರಿಗಳನ್ನು ತೆಗೆದುಕೊಂಡು ಬಾ. ನಿಮ್ಮ ತಂದೆಗೆ ಇಷ್ಟವಾದ ಅಡಿಗೆಯನ್ನು ನಾನು ಅವುಗಳ ಮಾಂಸದಿಂದ ಸಿದ್ಧಪಡಿಸುವೆ. 10 ನೀನು ಆ ಅಡಿಗೆಯನ್ನು ನಿನ್ನ ತಂದೆಗೆ ತೆಗೆದುಕೊಂಡು ಹೋಗು. ಆಗ ಅವನು ತಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವನು” ಅಂದಳು.
11 ಅದಕ್ಕೆ ಯಾಕೋಬನು ತನ್ನ ತಾಯಿಯಾದ ರೆಬೆಕ್ಕಳಿಗೆ, “ನನ್ನ ಅಣ್ಣನಾದ ಏಸಾವನಿಗೆ ಮೈತುಂಬ ರೋಮಗಳಿವೆ, ಆದರೆ ನನಗೆ ರೋಮಗಳಿಲ್ಲ. 12 ನನ್ನ ತಂದೆ ನನ್ನನ್ನು ಮುಟ್ಟಿದರೆ, ನಾನು ಏಸಾವನಲ್ಲವೆಂದು ತಿಳಿದುಕೊಳ್ಳುವನು. ಆಗ ಅವನು ನನ್ನನ್ನು ಆಶೀರ್ವದಿಸುವುದಿಲ್ಲ. ನಾನು ಅವನನ್ನು ಮೋಸಗೊಳಿಸಲು ಪ್ರಯತ್ನಿಸಿದ್ದರಿಂದ ಅವನು ನನ್ನನ್ನು ಶಪಿಸುವನು” ಎಂದು ಹೇಳಿದನು.
13 ಅದಕ್ಕೆ ರೆಬೆಕ್ಕಳು ಅವನಿಗೆ, “ಅವನು ನಿನಗೆ ಶಾಪಕೊಟ್ಟರೆ, ಆ ಶಾಪವು ನನಗಾಗಲಿ. ನಾನು ಹೇಳಿದಂತೆ ಮಾಡು. ನನಗೋಸ್ಕರ ಆಡುಗಳನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು.
14 ಆದ್ದರಿಂದ ಯಾಕೋಬನು ಹೋಗಿ ಎರಡು ಆಡುಗಳನ್ನು ತೆಗೆದುಕೊಂಡು ಬಂದನು. ಇಸಾಕನಿಗೆ ಇಷ್ಟವಾದ ರುಚಿಕರವಾದ ಪದಾರ್ಥಗಳನ್ನು ಆಕೆ ಅವುಗಳ ಮಾಂಸದಿಂದ ತಯಾರಿಸಿದಳು. 15 ಅನಂತರ ರೆಬೆಕ್ಕಳು ತನ್ನ ಹಿರಿಯ ಮಗನಾದ ಏಸಾವನಿಗೆ ಇಷ್ಟವಾದ ಉಡುಪನ್ನು ತೆಗೆದುಕೊಂಡಳು. ರೆಬೆಕ್ಕಳು ಆ ಉಡುಪನ್ನು ತನ್ನ ಕಿರಿಮಗನಾದ ಯಾಕೋಬನಿಗೆ ತೊಡಿಸಿದಳು. 16 ಆಡುಗಳ ಚರ್ಮವನ್ನು ಯಾಕೋಬನ ಕೈಗಳಿಗೂ ಕೊರಳಿಗೂ ಸುತ್ತಿದಳು. 17 ಅನಂತರ ಆಕೆ ತಾನು ಸಿದ್ಧಪಡಿಸಿದ್ದ ಅಡಿಗೆಯನ್ನು ಯಾಕೋಬನಿಗೆ ಕೊಟ್ಟಳು.
18 ಯಾಕೋಬನು ತನ್ನ ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆದನು.
ಅವನ ತಂದೆ, “ಏನು ಮಗನೇ, ನೀನು ಯಾರು?” ಎಂದು ಕೇಳಿದನು.
19 ಯಾಕೋಬನು ತನ್ನ ತಂದೆಗೆ, “ನಾನು ಏಸಾವ, ನಿನ್ನ ಮೊದಲನೆ ಮಗ. ನೀನು ಹೇಳಿದಂತೆ ನಾನು ಮಾಡಿಕೊಂಡು ಬಂದಿದ್ದೇನೆ. ನಾನು ನಿನಗೋಸ್ಕರ ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ಕುಳಿತುಕೊಂಡು ತಿನ್ನು. ಅನಂತರ ನೀನು ನನ್ನನ್ನು ಆಶೀರ್ವದಿಸಬಹುದು” ಎಂದು ಹೇಳಿದನು.
20 ಆದರೆ ಇಸಾಕನು ತನ್ನ ಮಗನಿಗೆ, “ನೀನು ಇಷ್ಟು ಬೇಗನೆ ಬೇಟೆಯಾಡಿಕೊಂಡು ಬಂದೆಯಾ?” ಎಂದು ಕೇಳಿದನು.
ಅದಕ್ಕೆ ಯಾಕೋಬನು, “ನಾನು ಬಹುಬೇಗನೆ ಪ್ರಾಣಿಗಳನ್ನು ಕಂಡುಕೊಳ್ಳುವಂತೆ ನಿನ್ನ ದೇವರಾದ ಯೆಹೋವನು ಸಹಾಯ ಮಾಡಿದನು” ಎಂದು ಉತ್ತರಿಸಿದನು.
21 ಬಳಿಕ ಇಸಾಕನು ಯಾಕೋಬನಿಗೆ, “ನನ್ನ ಬಳಿಗೆ ಬಾ, ನನ್ನ ಮಗನನ್ನು ನಾನು ಮುಟ್ಟಿ ತಿಳಿದುಕೊಳ್ಳಬಲ್ಲೆ. ನಾನು ನಿನ್ನನ್ನು ಮುಟ್ಟಿದರೆ, ನೀನು ನಿಜವಾಗಿಯೂ ನನ್ನ ಮಗನಾದ ಏಸಾವನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಲ್ಲೆ” ಎಂದು ಹೇಳಿದನು.
22 ಆದ್ದರಿಂದ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಹೋದನು. ಇಸಾಕನು ಅವನನ್ನು ಮುಟ್ಟಿ, “ನಿನ್ನ ಸ್ವರ ಯಾಕೋಬನ ಸ್ವರವಿದ್ದಂತಿದೆ. ಆದರೆ ನಿನ್ನ ಕೈಗಳು ಏಸಾವನ ಕೈಗಳಂತೆ ರೋಮದಿಂದ ಕೂಡಿವೆ” ಅಂದನು. 23 ಅವನು ಯಾಕೋಬನೆಂಬುದು ಇಸಾಕನಿಗೆ ತಿಳಿಯಲಿಲ್ಲ. ಯಾಕೆಂದರೆ ಅವನ ಕೈಗಳು ಏಸಾವನ ಕೈಗಳಂತೆ ರೋಮದಿಂದ ಕೂಡಿದ್ದವು. ಆದ್ದರಿಂದ ಇಸಾಕನು ಯಾಕೋಬನನ್ನು ಆಶೀರ್ವದಿಸಿದನು.
24 ಇಸಾಕನು ಅವನಿಗೆ, “ನೀನು ನಿಜವಾಗಿಯೂ ನನ್ನ ಮಗನಾದ ಏಸಾವನೋ?” ಎಂದು ಕೇಳಿದನು.
ಅದಕ್ಕೆ ಯಾಕೋಬನು, “ಹೌದು, ನಾನೇ” ಎಂದು ಉತ್ತರಕೊಟ್ಟನು.
ಯಾಕೋಬನಿಗೆ ಆಶೀರ್ವಾದ
25 ಆಗ ಇಸಾಕನು, “ಊಟವನ್ನು ತೆಗೆದುಕೊಂಡು ಬಾ. ನಾನು ಊಟಮಾಡಿ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. ಅಂತೆಯೇ ಯಾಕೋಬನು ಊಟವನ್ನು ತಂದು ಕೊಟ್ಟಾಗ ಊಟಮಾಡಿದನು; ದ್ರಾಕ್ಷಾರಸವನ್ನು ಕುಡಿದನು.
26 ಬಳಿಕ ಇಸಾಕನು ಅವನಿಗೆ, “ಮಗನೇ, ನನ್ನ ಬಳಿಗೆ ಬಂದು ನನಗೆ ಮುದ್ದಿಡು” ಅಂದನು. 27 ಅದರಂತೆಯೇ ಯಾಕೋಬನು ತಂದೆಯ ಬಳಿಗೆ ಹೋಗಿ ಅವನಿಗೆ ಮುದ್ದಿಟ್ಟನು. ಇಸಾಕನು ಅವನ ಉಡುಪಿನ ವಾಸನೆಯನ್ನು ನೋಡಿ ಅವನನ್ನು ಹೀಗೆ ಆಶೀರ್ವದಿಸಿದನು:
“ನನ್ನ ಮಗನ ಸುವಾಸನೆಯು
ಯೆಹೋವನು ಆಶೀರ್ವದಿಸಿದ ಪ್ರದೇಶಗಳಂತಿದೆ.
28 ಯೆಹೋವನು ನಿನಗೆ ಬೇಕಾದಷ್ಟು ಮಳೆಯನ್ನು ಕೊಡಲಿ;
ನಿನಗೆ ಸಾರವುಳ್ಳ ಭೂಮಿಯೂ ಮಹಾಸುಗ್ಗಿಗಳೂ ಮತ್ತು ದ್ರಾಕ್ಷಾರಸವೂ ದೊರೆಯಲಿ.
29 ಎಲ್ಲಾ ಜನರು ನಿನ್ನ ಸೇವೆಮಾಡಲಿ;
ಜನಾಂಗಗಳು ನಿನಗೆ ತಲೆಬಾಗಲಿ.
ನೀನು ನಿನ್ನ ಸಹೋದರರ ಮೇಲೆ ಆಡಳಿತ ಮಾಡುವೆ.
ನಿನ್ನ ತಾಯಿಯ ಗಂಡುಮಕ್ಕಳು ನಿನಗೆ ತಲೆಬಾಗಿ ವಿಧೇಯರಾಗುವರು.
ನಿನ್ನನ್ನು ಶಪಿಸುವ ಪ್ರತಿಯೊಬ್ಬನು ಶಾಪಗ್ರಸ್ಥನಾಗುವನು.
ನಿನ್ನನ್ನು ಆಶೀರ್ವದಿಸುವ ಪ್ರತಿಯೊಬ್ಬನು ಆಶೀರ್ವದಿಸಲ್ಪಡುವನು.”
ಏಸಾವನ “ಆಶೀರ್ವಾದ”
30 ಇಸಾಕನು ಯಾಕೋಬನನ್ನು ಆಶೀರ್ವದಿಸಿದ ಬಳಿಕ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಯಿಂದ ಹೊರಟುಹೋಗುವಷ್ಟರಲ್ಲಿ ಏಸಾವನು ಬೇಟೆಯಿಂದ ಬಂದನು. 31 ಏಸಾವನು ಸಹ ತನ್ನ ತಂದೆಗೆ ಇಷ್ಟವಾದ ರೀತಿಯಲ್ಲಿ ವಿಶೇಷವಾದ ಆಹಾರವನ್ನು ಸಿದ್ಧಪಡಿಸಿ ತನ್ನ ತಂದೆಯ ಬಳಿಗೆ ತೆಗೆದುಕೊಂಡು ಬಂದನು. ಅವನು ತನ್ನ ತಂದೆಗೆ, “ಅಪ್ಪಾ ಎದ್ದೇಳು, ನಿನಗೋಸ್ಕರ ನಿನ್ನ ಮಗನು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ತಿನ್ನು, ನಂತರ ನೀನು ನನ್ನನ್ನು ಆಶೀರ್ವದಿಸಬಹುದು” ಎಂದು ಹೇಳಿದನು.
32 ಇಸಾಕನು ಅವನಿಗೆ, “ನೀನು ಯಾರು?” ಎಂದು ಕೇಳಿದನು.
ಅವನು, “ನಾನು ನಿನ್ನ ಹಿರಿಯಮಗನಾದ ಏಸಾವ” ಎಂದು ಹೇಳಿದನು.
33 ಆಗ ಇಸಾಕನು ತುಂಬ ವ್ಯಸನಗೊಂಡು ಗಡಗಡನೆ ನಡುಗುತ್ತಾ ಅವನಿಗೆ, “ನೀನು ಬರುವುದಕ್ಕಿಂತ ಮೊದಲೇ ಅಡಿಗೆಯನ್ನು ಸಿದ್ಧಪಡಿಸಿ ನನಗೆ ತಂದುಕೊಟ್ಟವನು ಯಾರು? ನಾನು ಅದನ್ನೆಲ್ಲ ತಿಂದು ಅವನನ್ನು ಆಶೀರ್ವದಿಸಿದೆನು. ಈಗ ನನ್ನ ಆಶೀರ್ವಾದವನ್ನು ಹಿಂತೆಗೆದುಕೊಳ್ಳಲಾಗದು” ಎಂದು ಹೇಳಿದನು.
34 ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿ ತುಂಬ ಕೋಪಗೊಂಡನು; ವ್ಯಥೆಪಟ್ಟನು; ಗೋಳಾಡಿದನು. ಅವನು ತನ್ನ ತಂದೆಗೆ, “ಹಾಗಾದರೆ, ನನ್ನನ್ನೂ ಆಶೀರ್ವದಿಸಪ್ಪಾ” ಎಂದು ಹೇಳಿದನು.
35 ಇಸಾಕನು, “ನಿನ್ನ ತಮ್ಮನು ನನ್ನನ್ನು ಮೋಸಗೊಳಿಸಿದನು; ಅವನು ಬಂದು ನಿನ್ನ ಆಶೀರ್ವಾದವನ್ನು ತೆಗೆದುಕೊಂಡನು” ಎಂದು ಹೇಳಿದನು.
36 ಏಸಾವನು, “ಅವನ ಹೆಸರು ಯಾಕೋಬ (ಮೋಸಗಾರ). ಅದೇ ಅವನಿಗೆ ಸರಿಯಾದ ಹೆಸರು. ಅವನು ಎರಡು ಸಲ ನನಗೆ ಮೋಸಮಾಡಿದನು. ನನ್ನ ಚೊಚ್ಚಲತನದ ಹಕ್ಕನ್ನು ತೆಗೆದುಕೊಂಡನು. ಈಗ ನನ್ನ ಆಶೀರ್ವಾದವನ್ನೂ ತೆಗೆದುಕೊಂಡನು” ಎಂದು ಹೇಳಿದನು. ನಂತರ ಏಸಾವನು, “ನನಗೋಸ್ಕರ ಯಾವ ಆಶೀರ್ವಾದವೂ ಉಳಿದಿಲ್ಲವೆ?” ಎಂದು ಕೇಳಿದನು.
37 ಇಸಾಕನು, “ಇಲ್ಲ, ತುಂಬ ತಡವಾಯಿತು. ನಿನ್ನ ಮೇಲೆ ಆಡಳಿತ ಮಾಡುವ ಅಧಿಕಾರವನ್ನು ನಾನು ಯಾಕೋಬನಿಗೆ ಕೊಟ್ಟಿದ್ದೇನೆ. ಅವನ ಸಹೋದರರೆಲ್ಲ ಅವನಿಗೆ ಸೇವಕರಾಗಿರುವರು ಎಂದು ನಾನು ಹೇಳಿದ್ದೇನೆ. ಅವನಿಗೆ ಬೇಕಾದಷ್ಟು ದವಸಧಾನ್ಯಗಳೂ ದ್ರಾಕ್ಷಾರಸವೂ ದೊರೆಯುವಂತೆ ಆಶೀರ್ವಾದ ಮಾಡಿದ್ದೇನೆ. ನಿನಗೆ ಕೊಡಲು ನನ್ನಲ್ಲಿ ಏನೂ ಉಳಿದಿಲ್ಲ ಮಗನೇ” ಎಂದು ಹೇಳಿದನು.
38 ಆದರೆ ಏಸಾವನು ತನ್ನ ತಂದೆಯನ್ನು ಮತ್ತೆ ಬೇಡತೊಡಗಿದನು. “ಅಪ್ಪಾ ನನಗಾಗಿ ಒಂದಾದರೂ ಆಶೀರ್ವಾದವಿಲ್ಲವೇ? ಅಪ್ಪಾ, ನನ್ನನ್ನು ಸಹ ಆಶೀರ್ವದಿಸು” ಎಂದು ಏಸಾವನು ಅಳಲಾರಂಭಿಸಿದನು.
39 ಆಗ ಇಸಾಕನು ಅವನಿಗೆ ಹೀಗೆ ಹೇಳಿದನು:
“ನೀನು ಒಳ್ಳೆಯ ಪ್ರದೇಶದಲ್ಲಿ ಜೀವಿಸುವುದಿಲ್ಲ.
ನಿನಗೆ ಬೇಕಾದಷ್ಟು ಇಬ್ಬನಿ ಇರುವುದಿಲ್ಲ.
40 ನೀನು ಕತ್ತಿಯಿಂದಲೇ ಜೀವಿಸುವೆ.
ನೀನು ನಿನ್ನ ತಮ್ಮನ ಸೇವಕನಾಗಿರುವೆ.
ಆದರೆ ನೀನು ಬಿಡುಗಡೆಯಾಗಲು ಹೋರಾಡಿ
ಅವನ ಹಿಡಿತದಿಂದ ಪಾರಾಗುವೆ.”
41 ಅಂದಿನಿಂದ ಏಸಾವನು ಯಾಕೋಬನನ್ನು ದ್ವೇಷಿಸಿದನು. ಏಸಾವನು ತನ್ನೊಳಗೆ, “ನನ್ನ ತಂದೆ ಬಹುಬೇಗನೆ ಸತ್ತುಹೋಗುವನು. ಆಗ ನಾನು ಅವನಿಗಾಗಿ ದುಃಖಿಸಿ ಆ ಬಳಿಕ ಯಾಕೋಬನನ್ನು ಕೊಲ್ಲುವೆನು” ಅಂದುಕೊಂಡನು.
42 ಏಸಾವನು ಯಾಕೋಬನನ್ನು ಕೊಲ್ಲಬೇಕೆಂದಿರುವುದು ರೆಬೆಕ್ಕಳಿಗೆ ತಿಳಿಯಿತು. ಆಕೆ ಯಾಕೋಬನನ್ನು ಕರೆಸಿ ಅವನಿಗೆ, “ಕೇಳು, ನಿನ್ನ ಅಣ್ಣನಾದ ಏಸಾವನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ. 43 ಆದ್ದರಿಂದ ಮಗನೇ, ನಾನು ಹೇಳಿದಂತೆ ಮಾಡು. ನನ್ನ ಅಣ್ಣನಾದ ಲಾಬಾನನು ಹಾರಾನಿನಲ್ಲಿ ವಾಸವಾಗಿದ್ದಾನೆ. ಅವನ ಬಳಿಗೆ ಹೋಗಿ ಅಡಗಿಕೊ. 44 ನಿನ್ನ ಅಣ್ಣನ ಕೋಪ ತಣ್ಣಗಾಗುವವರೆಗೆ ನೀನು ಸ್ವಲ್ಪ ಕಾಲ ಅವನೊಂದಿಗಿರು. 45 ಸ್ವಲ್ಪ ಸಮಯದ ನಂತರ, ನೀನು ಮಾಡಿದ್ದನ್ನು ನಿನ್ನ ಅಣ್ಣನು ಮರೆತುಬಿಡುವನು. ಆಗ ನಿನ್ನನ್ನು ಅಲ್ಲಿಂದ ಕರೆದುಕೊಂಡು ಬರಲು ನಾನು ಒಬ್ಬ ಸೇವಕನನ್ನು ಅಲ್ಲಿಗೆ ಕಳುಹಿಸಿಕೊಡುವೆನು. ಒಂದೇ ದಿನದಲ್ಲಿ, ನನ್ನ ಇಬ್ಬರು ಗಂಡುಮಕ್ಕಳನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ” ಎಂದು ಹೇಳಿದಳು.
46 ನಂತರ ರೆಬೆಕ್ಕಳು ಇಸಾಕನಿಗೆ, “ನಿನ್ನ ಮಗನಾದ ಏಸಾವನು ಹಿತ್ತಿಯರ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದಾನೆ. ಆ ಸ್ತ್ರೀಯರಿಂದ ನನಗೆ ಸಾಕಾಗಿ ಹೋಗಿದೆ; ಯಾಕೆಂದರೆ ಅವರು ನಮ್ಮ ಜನರಲ್ಲ. ಯಾಕೋಬನು ಸಹ ಇಂಥ ಸ್ತ್ರೀಯರಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡರೆ ನಾನು ಸಾಯುವುದೇ ಮೇಲು” ಎಂದು ಹೇಳಿದಳು.
28 ಇಸಾಕನು ಯಾಕೋಬನನ್ನು ಕರೆದು ಅವನನ್ನು ಆಶೀರ್ವದಿಸಿ ಅವನಿಗೆ, “ನೀನು ಕಾನಾನಿನ ಸ್ತ್ರೀಯನ್ನು ಮದುವೆಯಾಗಕೂಡದು. 2 ಆದ್ದರಿಂದ ಈ ಸ್ಥಳವನ್ನು ಬಿಟ್ಟು ಪದ್ದನ್‌ಅರಾಮಿಗೆ ಹೊರಟು ನಿನ್ನ ತಾಯಿಯ ತಂದೆಯಾದ ಬೆತೂವೇಲನ ಮನೆಗೆ ಹೋಗು. ನಿನ್ನ ತಾಯಿಯ ಅಣ್ಣನಾದ ಲಾಬಾನನು ಅಲ್ಲಿ ವಾಸಿಸುತ್ತಿದ್ದಾನೆ. ಅವನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೊ. 3 ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ, ನಿನಗೆ ಅನೇಕ ಮಕ್ಕಳನ್ನು ಕೊಡುವಂತೆಯೂ ನೀನು ಮಹಾಜನಾಂಗದ ತಂದೆಯಾಗುವಂತೆಯೂ ನಾನು ಪ್ರಾರ್ಥಿಸುವೆನು. 4 ದೇವರು ಅಬ್ರಹಾಮನನ್ನು ಆಶೀರ್ವದಿಸಿದ ರೀತಿಯಲ್ಲಿ ನಿನ್ನನ್ನೂ ನಿನ್ನ ಮಕ್ಕಳನ್ನೂ ಆಶೀರ್ವದಿಸುವಂತೆಯೂ ನೀನು ವಾಸಿಸುವ ಸ್ಥಳದಲ್ಲಿ ಸ್ವಂತ ಭೂಮಿಯನ್ನು ಪಡೆದುಕೊಳ್ಳುವಂತೆಯೂ ನಾನು ಪ್ರಾರ್ಥಿಸುವೆನು. ದೇವರು ಅಬ್ರಹಾಮನಿಗೆ ಕೊಟ್ಟ ಭೂಮಿಯೇ ಅದು” ಎಂದು ಹೇಳಿ ಕಳುಹಿಸಿಕೊಟ್ಟನು.
5 ಅಂತೆಯೇ ಯಾಕೋಬನು ಪದ್ದನ್‌ಅರಾಮಿಗೆ ಹೊರಟು ರೆಬೆಕ್ಕಳ ಅಣ್ಣನಾದ ಲಾಬಾನನ ಬಳಿಗೆ ಹೋದನು. ಬೆತೂವೇಲನು ಲಾಬಾನನ ಮತ್ತು ರೆಬೆಕ್ಕಳ ತಂದೆ. ರೆಬೆಕ್ಕಳು ಯಾಕೋಬನ ಮತ್ತು ಏಸಾವನ ತಾಯಿ.
6 ತನ್ನ ತಂದೆಯಾದ ಇಸಾಕನು ಯಾಕೋಬನನ್ನು ಆಶೀರ್ವದಿಸಿದ್ದೂ, ಮದುವೆ ಮಾಡಿಕೊಳ್ಳಲು ಪದ್ದನ್‌ಅರಾಮಿಗೆ ಕಳುಹಿಸಿದ್ದೂ, ಕಾನಾನಿನ ಸ್ತ್ರೀಯನ್ನು ಮದುವೆಯಾಗಕೂಡದೆಂದು ಯಾಕೋಬನಿಗೆ ಆಜ್ಞಾಪಿಸಿರುವುದೂ ಏಸಾವನಿಗೆ ತಿಳಿಯಿತು. 7 ಇದಲ್ಲದೆ ಯಾಕೋಬನು ತನ್ನ ತಂದೆತಾಯಿಗಳಿಗೆ ವಿಧೇಯನಾಗಿ ಪದ್ದನ್‌ಅರಾಮಿಗೆ ಹೋದದ್ದೂ ಏಸಾವನಿಗೆ ಗೊತ್ತಾಯಿತು. 8 ತನ್ನ ತಂದೆಗೆ ತನ್ನ ಗಂಡುಮಕ್ಕಳು ಕಾನಾನಿನ ಸ್ತ್ರೀಯರನ್ನು ಮದುವೆಯಾಗುವುದು ಇಷ್ಟವಿಲ್ಲವೆಂಬುದೂ ಏಸಾವನಿಗೆ ತಿಳಿಯಿತು. 9 ಏಸಾವನಿಗೆ ಈಗಾಗಲೇ ಇಬ್ಬರು ಹೆಂಡತಿಯರಿದ್ದರು. ಆದರೂ ಅವನು ಇಷ್ಮಾಯೇಲನ ಬಳಿಗೆ ಹೋಗಿ ಅವನ ಮಗಳಾದ ಮಹಲತ್ ಎಂಬಾಕೆಯನ್ನು ಮದುವೆ ಮಾಡಿಕೊಂಡನು. ಇಷ್ಮಾಯೇಲನು ಅಬ್ರಹಾಮನ ಮಗನು. ಮಹಲತಳು ನೆಬಾಯೋತನ ತಂಗಿ.
ದೇವರ ಮನೆ—ಬೇತೇಲ್
10 ಯಾಕೋಬನು ಬೇರ್ಷೆಬವನ್ನು ಬಿಟ್ಟು ಹಾರಾನಿಗೆ ಹೋದನು. 11 ಯಾಕೋಬನು ಪ್ರಯಾಣ ಮಾಡುತ್ತಿರುವಾಗ ಸೂರ್ಯಾಸ್ತವಾಯಿತು. ಆದ್ದರಿಂದ ಯಾಕೋಬನು ಆ ರಾತ್ರಿ ಇಳಿದುಕೊಳ್ಳಲು ಒಂದು ಸ್ಥಳಕ್ಕೆ ಹೋದನು. ಯಾಕೋಬನು ಆ ಸ್ಥಳದಲ್ಲಿ ಒಂದು ಕಲ್ಲನ್ನು ಕಂಡು ಅದರ ಮೇಲೆ ತಲೆಯಿಟ್ಟು ಮಲಗಿಕೊಂಡನು. 12 ಯಾಕೋಬನಿಗೆ ಒಂದು ಕನಸಾಯಿತು. ಆ ಕನಸಿನಲ್ಲಿ ಒಂದು ಏಣಿ ನೆಲದ ಮೇಲೆ ನಿಂತಿತ್ತು, ಅದರ ತುದಿ ಆಕಾಶವನ್ನು ಮುಟ್ಟಿತ್ತು. ದೇವದೂತರು ಅದರಲ್ಲಿ ಮೇಲೆರುತ್ತಾ ಕೆಳಗಿಳಿಯುತ್ತಾ ಇರುವುದನ್ನು ಯಾಕೋಬನು ಕಂಡನು. 13 ಯೆಹೋವನು ಏಣಿಯ ತುದಿಯಲ್ಲಿ ನಿಂತಿರುವುದನ್ನು ಯಾಕೋಬನು ಕಂಡನು. ಯೆಹೋವನು ಅವನಿಗೆ, “ನಿನ್ನ ತಾತನಾದ ಅಬ್ರಹಾಮನ ದೇವರಾಗಿರುವ ಯೆಹೋವನೇ ನಾನು. ನಾನು ಇಸಾಕನ ದೇವರು. ಈಗ ನೀನು ಮಲಗಿಕೊಂಡಿರುವ ದೇಶವನ್ನು ನಾನು ನಿನಗೆ ಕೊಡುವೆನು. ನಾನು ಈ ದೇಶವನ್ನು ನಿನಗೂ ನಿನ್ನ ಮಕ್ಕಳಿಗೂ ಕೊಡುವೆನು. 14 ಭೂಮಿಯ ಮೇಲೆ ಧೂಳಿನ ಕಣಗಳಿರುವಂತೆ ನಿನಗೆ ಅನೇಕಾನೇಕ ಸಂತತಿಗಳಿರುವರು. ಅವರು ಪೂರ್ವಪಶ್ಚಿಮಗಳಿಗೂ ಉತ್ತರದಕ್ಷಿಣಗಳಿಗೂ ಹರಡಿಕೊಳ್ಳುವರು. ನಿನ್ನ ಮೂಲಕವೂ ನಿನ್ನ ಸಂತತಿಯವರ ಮೂಲಕವೂ ಭೂಮಿಯ ಮೇಲಿರುವ ಎಲ್ಲಾ ಕುಲಗಳವರು ಆಶೀರ್ವಾದ ಹೊಂದುವರು.
15 “ನಾನು ನಿನ್ನ ಸಂಗಡವಿದ್ದು ನೀನು ಹೋಗುವ ಪ್ರತಿಯೊಂದು ಸ್ಥಳದಲ್ಲಿಯೂ ನಿನ್ನನ್ನು ಕಾಪಾಡುವೆನು; ನಿನ್ನನ್ನು ಈ ಸ್ಥಳಕ್ಕೆ ಮತ್ತೆ ಕರೆದುಕೊಂಡು ಬರುವೆನು. ನಾನು ವಾಗ್ದಾನ ಮಾಡಿದ್ದನ್ನು ನೆರವೇರಿಸುವ ತನಕ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಹೇಳಿದನು.
16 ಆಗ ಯಾಕೋಬನು ನಿದ್ರೆಯಿಂದ ಎಚ್ಚೆತ್ತು, “ಖಂಡಿತವಾಗಿಯೂ ಈ ಸ್ಥಳದಲ್ಲಿ ದೇವರಿದ್ದಾನೆ, ಆದರೆ ಅದು ನನಗೆ ಗೊತ್ತಿರಲಿಲ್ಲ” ಎಂದು ಹೇಳಿದನು.
17 ಯಾಕೋಬನಿಗೆ ಭಯವಾಗಿತ್ತು. ಅವನು, “ಇದು ತುಂಬ ಮಹತ್ವವಾದ ಸ್ಥಳ. ಇದು ದೇವರ ಮನೆ. ಇದು ಸ್ವರ್ಗಕ್ಕೆ ಬಾಗಿಲು” ಎಂದು ಹೇಳಿದನು.
18 ಯಾಕೋಬನು ಮರುದಿನ ಮುಂಜಾನೆ ಬೇಗನೆ ಎದ್ದು, ತಾನು ಮಲಗಿಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಕಂಬವಾಗಿ ನೆಲದಲ್ಲಿ ನಿಲ್ಲಿಸಿದನು. ನಂತರ ಆ ಕಲ್ಲಿನ ಮೇಲೆ ಎಣ್ಣೆಯನ್ನು ಸುರಿದನು. ಹೀಗೆ ಅವನು ಆ ಕಲ್ಲನ್ನು ದೇವರ ನೆನಪಿಗಾಗಿ ಪ್ರತಿಷ್ಠಿಸಿದನು. 19 ಆ ಸ್ಥಳದ ಹೆಸರು ಲೂಜ್. ಆದರೆ ಯಾಕೋಬನು ಅದಕ್ಕೆ ಬೇತೇಲ್ ಎಂದು ಹೆಸರಿಟ್ಟನು.
20 ನಂತರ ಯಾಕೋಬನು ಈ ಪ್ರಮಾಣವನ್ನು ಮಾಡಿದನು: “ದೇವರು ನನ್ನ ಸಂಗಡವಿದ್ದು ನಾನು ಹೋದಲ್ಲೆಲ್ಲ ನನ್ನನ್ನು ಕಾಪಾಡಿ ಊಟಕ್ಕೆ ಆಹಾರವನ್ನೂ, ಉಡಲು ಬಟ್ಟೆಗಳನ್ನೂ ಕೊಟ್ಟು, 21 ನಾನು ಸಮಾಧಾನದಿಂದ ನನ್ನ ತಂದೆಯ ಮನೆಗೆ ಹಿಂತಿರುಗಿ ಬರುವಂತೆ ಮಾಡಿದರೆ ಯೆಹೋವನೇ ನನ್ನ ದೇವರಾಗಿರುವನು. 22 ನಾನು ಕಲ್ಲನ್ನು ನೆಟ್ಟಿರುವ ಈ ಸ್ಥಳವು ದೇವರ ಪವಿತ್ರಸ್ಥಳವಾಗುವುದು. ಇದಲ್ಲದೆ ದೇವರು ನನಗೆ ಕೊಡುವುದರಲ್ಲೆಲ್ಲಾ ಹತ್ತನೆಯ ಒಂದು ಭಾಗವನ್ನು ನಾನು ಆತನಿಗೆ ಕೊಡುತ್ತೇನೆ.”
ಯಾಕೋಬನು ರಾಹೇಲಳನ್ನು ಭೇಟಿಯಾದದ್ದು
29 ಬಳಿಕ ಯಾಕೋಬನು ತನ್ನ ಪ್ರಯಾಣವನ್ನು ಮುಂದುವರಿಸಿದನು. ಅವನು ಪೂರ್ವ ದಿಕ್ಕಿನಲ್ಲಿದ್ದ ನಾಡಿಗೆ ಹೋದನು. 2 ಯಾಕೋಬನು ದೃಷ್ಟಿಸಿ ನೋಡಿದಾಗ, ಹೊಲದಲ್ಲಿ ಅವನಿಗೆ ಒಂದು ಬಾವಿ ಕಾಣಿಸಿತು. ಬಾವಿಯ ಸಮೀಪದಲ್ಲಿ ಮೂರು ಕುರಿಮಂದೆಗಳು ಮಲಗಿಕೊಂಡಿದ್ದವು. ಕುರಿಗಳಿಗೆ ಆ ಬಾವಿಯ ನೀರನ್ನೇ ಕುಡಿಸುತ್ತಿದ್ದರು. ಬಾವಿಯ ಮೇಲೆ ಅಗಲವಾದ ದೊಡ್ಡ ಕಲ್ಲನ್ನು ಮುಚ್ಚಲಾಗಿತ್ತು. 3 ಕುರಿಮಂದೆಗಳೆಲ್ಲ ಒಟ್ಟಿಗೆ ಸೇರಿದ ಮೇಲೆ, ಕುರುಬರು ಬಾವಿಯ ಮೇಲಿನ ಕಲ್ಲನ್ನು ಉರುಳಿಸುತ್ತಿದ್ದರು. ಆಮೇಲೆ ಎಲ್ಲಾ ಕುರಿಗಳು ಬಾವಿಯ ನೀರನ್ನು ಕುಡಿಯುತ್ತಿದ್ದವು. ಕುರಿಗಳು ನೀರು ಕುಡಿದಾದ ಮೇಲೆ ಕುರುಬರು ಕಲ್ಲನ್ನು ಮತ್ತೆ ಮುಚ್ಚುತ್ತಿದ್ದರು.
4 ಯಾಕೋಬನು ಅಲ್ಲಿದ್ದ ಕುರುಬರಿಗೆ, “ಸಹೋದರರೇ, ನೀವು ಎಲ್ಲಿಯವರು?” ಎಂದು ಕೇಳಿದನು.
ಅವರು “ನಾವು ಹಾರಾನಿನವರು” ಎಂದು ಉತ್ತರಕೊಟ್ಟರು.
5 ನಂತರ ಯಾಕೋಬನು ಅವರಿಗೆ, “ನಾಹೋರನ ಮೊಮ್ಮಗನಾದ ಲಾಬಾನನು ನಿಮಗೆ ಗೊತ್ತೆ?” ಎಂದು ಕೇಳಿದನು.
ಕುರುಬರು, “ನಮಗೆ ಗೊತ್ತು” ಎಂದು ಉತ್ತರಿಸಿದರು.
6 ಯಾಕೋಬನು, “ಅವನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಅವರು, “ಅವನು ಕ್ಷೇಮವಾಗಿದ್ದಾನೆ. ಅಗೋ, ಆ ಕುರಿಗಳೊಂದಿಗೆ ಬರುತ್ತಿರುವವಳೇ ಅವನ ಮಗಳಾದ ರಾಹೇಲಳು” ಎಂದು ಉತ್ತರಿಸಿದರು.
7 ಯಾಕೋಬನು, “ನೋಡಿ, ಇನ್ನೂ ಹೊತ್ತಾಗಿಲ್ಲ; ರಾತ್ರಿಗಾಗಿ ಕುರಿಗಳನ್ನು ಒಟ್ಟಿಗೆ ಸೇರಿಸುವ ಸಮಯವಾಗಿಲ್ಲ; ನೀರು ಕುಡಿಸಿ ಅವುಗಳನ್ನು ಮೇಯಿಸಿರಿ” ಎಂದನು.
8 ಆ ಕುರುಬರು, “ಕುರಿಮಂದೆಗಳೆಲ್ಲ ಒಟ್ಟಿಗೆ ಸೇರುವವರೆಗೆ ನಾವು ಬಾವಿಯ ಮೇಲಿರುವ ಕಲ್ಲನ್ನು ತೆಗೆದು ಕುರಿಗಳಿಗೆ ನೀರು ಕುಡಿಸುವಂತಿಲ್ಲ; ಅವು ಒಟ್ಟಿಗೆ ಕೂಡಿಬಂದಾಗಲೇ ನೀರು ಕುಡಿಸುತ್ತೇವೆ” ಎಂದು ಹೇಳಿದರು.
9 ಯಾಕೋಬನು ಕುರುಬರೊಡನೆ ಮಾತಾಡುತ್ತಿರುವಾಗ ರಾಹೇಲಳು ತನ್ನ ತಂದೆಯ ಕುರಿಗಳೊಡನೆ ಬಂದಳು. (ಕುರಿಗಳನ್ನು ನೋಡಿಕೊಳ್ಳುವುದು ರಾಹೇಲಳ ಕೆಲಸವಾಗಿತ್ತು.) 10 ರಾಹೇಲಳು ಲಾಬಾನನ ಮಗಳು. ಲಾಬಾನನು ಯಾಕೋಬನ ತಾಯಿಯಾದ ರೆಬೆಕ್ಕಳ ಅಣ್ಣ. ಯಾಕೋಬನು ರಾಹೇಲಳನ್ನು ನೋಡಿದಾಗ ಬಾವಿಯ ಮೇಲಿದ್ದ ಕಲ್ಲನ್ನು ತೆಗೆದುಹಾಕಿ ತನ್ನ ತಾಯಿಯ ಅಣ್ಣನಾದ ಲಾಬಾನನ ಕುರಿಗಳಿಗೆ ನೀರು ಕೊಟ್ಟನು. 11 ಬಳಿಕ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು ಅತ್ತನು. 12 ಯಾಕೋಬನು ರಾಹೇಲಳಿಗೆ, ತಾನು ಅವಳ ತಂದೆಯ ಕುಟುಂಬದವನೆಂದೂ ರೆಬೆಕ್ಕಳ ಮಗನೆಂದೂ ತಿಳಿಸಿದನು. ಆಗ ರಾಹೇಲಳು ಮನೆಗೆ ಓಡಿಹೋಗಿ ತನ್ನ ತಂದೆಗೆ ಈ ಸುದ್ದಿಯನ್ನು ತಿಳಿಸಿದಳು.
13 ಲಾಬಾನನು ತನ್ನ ತಂಗಿಯ ಮಗನಾದ ಯಾಕೋಬನ ವಿಷಯವನ್ನು ಕೇಳಿ ಭೇಟಿಯಾಗಲು ಓಡಿಬಂದನು. ಲಾಬಾನನು ಅವನನ್ನು ಅಪ್ಪಿಕೊಂಡು ಮುದ್ದಿಟ್ಟು ಮನೆಗೆ ಕರೆದುಕೊಂಡು ಬಂದನು. ಯಾಕೋಬನು ನಡೆದ ಪ್ರತಿಯೊಂದನ್ನೂ ಲಾಬಾನನಿಗೆ ತಿಳಿಸಿದನು.
14 ನಂತರ ಲಾಬಾನನು, “ಇದು ಆಶ್ಚರ್ಯವಾಗಿದೆ; ನೀನು ನನ್ನ ಸ್ವಂತ ಕುಟುಂಬದವನು” ಎಂದು ಹೇಳಿದನು. ಆದ್ದರಿಂದ ಯಾಕೋಬನು ಲಾಬಾನನೊಡನೆ ಒಂದು ತಿಂಗಳವರೆಗೆ ಇದ್ದನು.
ಯಾಕೋಬನಿಗಾದ ಮೋಸ
15 ಒಂದು ದಿನ ಲಾಬಾನನು ಯಾಕೋಬನಿಗೆ, “ನೀನು ಸಂಬಳ ತೆಗೆದುಕೊಳ್ಳದೆ ನನ್ನ ಬಳಿಯಲ್ಲಿ ಕೆಲಸ ಮಾಡುವುದು ಸರಿಯಲ್ಲ. ನೀನು ನನ್ನ ಸಂಬಂಧಿಕನೇ ಹೊರತು ಸೇವಕನಲ್ಲ. ನಾನು ನಿನಗೆ ಎಷ್ಟು ಸಂಬಳ ಕೊಡಲಿ?” ಎಂದು ಕೇಳಿದನು.
16 ಲಾಬಾನನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಹಿರಿಯವಳ ಹೆಸರು ಲೇಯಾ; ಕಿರಿಯವಳ ಹೆಸರು ರಾಹೇಲ್.
17 ರಾಹೇಲಳು ಸುಂದರವಾಗಿದ್ದಳು. ಲೇಯಳ ಕಣ್ಣುಗಳು ಸೌಮ್ಯವಾಗಿದ್ದವು.[a] 18 ಯಾಕೋಬನು ರಾಹೇಲಳನ್ನು ಪ್ರೀತಿಸಿದನು. ಯಾಕೋಬನು ಲಾಬಾನನಿಗೆ, “ನಿನ್ನ ಚಿಕ್ಕಮಗಳಾದ ರಾಹೇಲಳನ್ನು ನನಗೆ ಮದುವೆ ಮಾಡಿಕೊಡುವುದಾದರೆ ನಾನು ನಿನಗೆ ಏಳು ವರ್ಷ ಸೇವೆ ಮಾಡುವೆನು” ಎಂದು ಹೇಳಿದನು.
19 ಲಾಬಾನನು, “ಬೇರೊಬ್ಬನು ಆಕೆಯನ್ನು ಮದುವೆಯಾಗುವುದಕ್ಕಿಂತ ನೀನು ಮದುವೆಯಾಗುವುದೇ ಆಕೆಗೆ ಒಳ್ಳೆಯದು. ಆದ್ದರಿಂದ ನನ್ನೊಂದಿಗಿರು” ಎಂದು ಹೇಳಿದನು.
20 ಆದ್ದರಿಂದ ಯಾಕೋಬನು ಅವನೊಂದಿಗೆ ಇದ್ದುಕೊಂಡು ಏಳು ವರ್ಷಗಳವರೆಗೆ ಲಾಬಾನನ ಸೇವೆ ಮಾಡಿದನು. ಆದರೆ ಅವನು ರಾಹೇಲಳನ್ನು ತುಂಬಾ ಪ್ರೀತಿಸುತ್ತಿದ್ದುದರಿಂದ ಆ ಸಮಯವು ಅವನಿಗೆ ತುಂಬಾ ಕಡಿಮೆಯಂತೆ ಕಾಣಿಸಿತು.
21 ಏಳು ವರ್ಷಗಳಾದ ಮೇಲೆ ಯಾಕೋಬನು ಲಾಬಾನನಿಗೆ, “ನನಗೆ ರಾಹೇಲಳನ್ನು ಮದುವೆ ಮಾಡಿಕೊಡು. ನನ್ನ ಸೇವೆಯ ಕಾಲ ಮುಗಿದುಹೋಯಿತು” ಎಂದು ಹೇಳಿದನು.
22 ಆದ್ದರಿಂದ ಲಾಬಾನನು ಆ ಸ್ಥಳದಲ್ಲಿದ್ದ ಜನರಿಗೆಲ್ಲ ಒಂದು ಔತಣಕೂಟವನ್ನು ಏರ್ಪಡಿಸಿದನು. 23 ಆ ರಾತ್ರಿ ಲಾಬಾನನು ತನ್ನ ಮಗಳಾದ ಲೇಯಳನ್ನು ಯಾಕೋಬನ ಬಳಿಗೆ ಕಳುಹಿಸಿದನು. ಯಾಕೋಬನು ಆಕೆಯನ್ನು ಕೂಡಿದನು. 24 (ಲಾಬಾನನು ತನ್ನ ಸೇವಕಿಯಾದ ಜಿಲ್ಪಾಳನ್ನು ತನ್ನ ಮಗಳಿಗೆ ಸೇವಕಿಯನ್ನಾಗಿ ಕೊಟ್ಟನು.) 25 ಮುಂಜಾನೆ ಯಾಕೋಬನು ಎದ್ದು ನೋಡಿದಾಗ ಅವನೊಂದಿಗೆ ಲೇಯಾ ಇದ್ದಳು. ಯಾಕೋಬನು ಲಾಬಾನನಿಗೆ, “ನೀನು ನನಗೆ ಮೋಸ ಮಾಡಿದೆ. ನಾನು ರಾಹೇಲಳನ್ನು ಮದುವೆ ಮಾಡಿಕೊಳ್ಳುವುದಕ್ಕಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದೆ. ನೀನು ನನಗೇಕೆ ಮೋಸ ಮಾಡಿದೆ?” ಎಂದು ಕೇಳಿದನು.
26 ಲಾಬಾನನು, “ನಮ್ಮ ದೇಶದಲ್ಲಿ ದೊಡ್ಡ ಮಗಳು ಮದುವೆಯಾಗದ ಹೊರತು ಚಿಕ್ಕಮಗಳಿಗೆ ಮದುವೆ ಮಾಡುವುದಿಲ್ಲ. 27 ಆದರೆ ಆಕೆಯ ಮದುವೆಯ ವಾರವನ್ನು ಮುಂದುವರಿಸು. ನಾನು ನಿನಗೆ ರಾಹೇಲಳನ್ನು ಸಹ ಮದುವೆ ಮಾಡಿಕೊಡುತ್ತೇನೆ. ಆದರೆ ನೀನು ನನಗೆ ಇನ್ನೂ ಏಳು ವರ್ಷ ಸೇವೆ ಮಾಡಬೇಕು” ಎಂದು ಹೇಳಿದನು.
28 ಅಂತೆಯೇ ಯಾಕೋಬನು ಒಂದು ವಾರವನ್ನು ಕಳೆದನು. ಬಳಿಕ ಲಾಬಾನನು ತನ್ನ ಮಗಳಾದ ರಾಹೇಲಳನ್ನೂ ಅವನಿಗೆ ಹೆಂಡತಿಯನ್ನಾಗಿ ಕೊಟ್ಟನು. 29 (ಲಾಬಾನನು ತನ್ನ ಸೇವಕಿಯಾದ ಬಿಲ್ಹಾಳನ್ನು ತನ್ನ ಮಗಳಾದ ರಾಹೇಲಳಿಗೆ ಸೇವಕಿಯನ್ನಾಗಿ ಕೊಟ್ಟನು.) 30 ಯಾಕೋಬನು ರಾಹೇಲಳನ್ನೂ ಕೂಡಿದನು. ಯಾಕೋಬನು ರಾಹೇಲಳನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸಿ ಆಕೆಗೋಸ್ಕರ ಇನ್ನೂ ಏಳು ವರ್ಷ ಸೇವೆ ಮಾಡಿದನು.
ಯಾಕೋಬನ ಕುಟುಂಬದ ಅಭಿವೃದ್ಧಿ
31 ಯಾಕೋಬನು ರಾಹೇಲಳನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸುವುದನ್ನು ಯೆಹೋವನು ನೋಡಿದನು. ಆದ್ದರಿಂದ ಯೆಹೋವನು ಲೇಯಳಿಗೆ ಮಕ್ಕಳಾಗುವಂತೆ ಮಾಡಿದನು. ಆದರೆ ರಾಹೇಲಳಿಗೆ ಮಕ್ಕಳಿರಲಿಲ್ಲ.
32 ಲೇಯಳು ಒಬ್ಬ ಮಗನನ್ನು ಹೆತ್ತಳು. ಆಕೆಯು ತನ್ನೊಳಗೆ, “ಯೆಹೋವನು ನನ್ನ ದುಃಖವನ್ನು ನೋಡಿದ್ದಾನೆ. ನನ್ನ ಗಂಡನು ನನ್ನನ್ನು ಪ್ರೀತಿಸುವುದಿಲ್ಲ. ಈಗಲಾದರೊ ಅವನು ನನ್ನನ್ನು ಪ್ರೀತಿಸಬಹುದು” ಎಂದು ಹೇಳಿ ಆ ಮಗುವಿಗೆ ರೂಬೇನ್ ಎಂದು ಹೆಸರಿಟ್ಟಳು.
33 ಲೇಯಾ ಮತ್ತೆ ಬಸುರಾಗಿ ಮತ್ತೊಬ್ಬ ಮಗನನ್ನು ಹೆತ್ತಳು. ಆಕೆ ತನ್ನೊಳಗೆ, “ನಾನು ಗಂಡನ ಅಲಕ್ಷ್ಯಕ್ಕೆ ಗುರಿಯಾದೆನೆಂದು ಯೆಹೋವನು ತಿಳಿದು ನನಗೆ ಈ ಮಗುವನ್ನು ಕೊಟ್ಟಿದ್ದಾನೆ” ಎಂದು ಹೇಳಿ ಆ ಮಗುವಿಗೆ ಸಿಮೆಯೋನ್ ಎಂದು ಹೆಸರಿಟ್ಟಳು.
34 ಲೇಯಾ ಮತ್ತೆ ಬಸುರಾಗಿ ಮತ್ತೊಬ್ಬ ಗಂಡುಮಗನನ್ನು ಹೆತ್ತಳು. ಆಕೆ ತನ್ನೊಳಗೆ, “ಖಂಡಿತವಾಗಿಯೂ ನನ್ನ ಗಂಡ ನನ್ನ ಜೊತೆಗೂಡಿರುವನು. ನಾನು ಅವನಿಗೆ ಮೂರು ಗಂಡುಮಕ್ಕಳನ್ನು ಕೊಟ್ಟಿರುವೆ” ಎಂದು ಹೇಳಿ ಆ ಮಗುವಿಗೆ ಲೇವಿ ಎಂದು ಹೆಸರಿಟ್ಟಳು.
35 ನಂತರ ಲೇಯಾ ಮತ್ತೊಬ್ಬ ಗಂಡುಮಗನನ್ನು ಹೆತ್ತಳು. ಲೇಯಳು ತನ್ನೊಳಗೆ, “ಈಗ ನಾನು ಯೆಹೋವನನ್ನು ಸ್ತುತಿಸುವೆನು” ಎಂದು ಹೇಳಿ ಆ ಮಗುವಿಗೆ ಯೆಹೂದ ಎಂದು ಹೆಸರಿಟ್ಟಳು. ನಂತರ ಲೇಯಳಿಗೆ ಮಕ್ಕಳಾಗುವುದು ನಿಂತುಹೋಯಿತು.
Kannada Holy Bible: Easy-to-Read Version. All rights reserved. © 1997 Bible League International