Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 25-26

ಅಬ್ರಹಾಮನ ಕುಟುಂಬ

25 ಅಬ್ರಹಾಮನು ಮತ್ತೆ ಮದುವೆಯಾದನು. ಅವನ ಹೊಸ ಹೆಂಡತಿಯ ಹೆಸರು ಕೆಟೂರ. ಆಕೆ ಅವನಿಗೆ; ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಎಂಬವರನ್ನು ಹೆತ್ತಳು. ಯೊಕ್ಷಾನನು ಶೆಬಾ ಮತ್ತು ದೆದಾನ್ ಎಂಬವರ ತಂದೆ. ದೆದಾನನ ಸಂತತಿಯವರು: ಅಶ್ಶೂರ್ಯರು ಲೆಟೂಶ್ಯರು ಮತ್ತು ಲೆಯುಮ್ಯರು. ಮಿದ್ಯಾನನ ಗಂಡುಮಕ್ಕಳು: ಗೇಫಾ, ಗೇಫೆರ್, ಹನೋಕ್, ಅಬೀದಾ ಮತ್ತು ಎಲ್ದಾಗ. ಇವರೆಲ್ಲರೂ ಕೆಟೂರಳ ಸಂತತಿಯವರು. 5-6 ಅಬ್ರಹಾಮನು ಸಾಯುವುದಕ್ಕಿಂತ ಮುಂಚೆ ತನ್ನ ದಾಸಿಯ ಗಂಡುಮಕ್ಕಳಿಗೆ ಕೆಲವು ಉಡುಗೊರೆಗಳನ್ನು ಕೊಟ್ಟನು. ಅಬ್ರಹಾಮನು ಆ ಗಂಡುಮಕ್ಕಳನ್ನು ಪೂರ್ವದ ಕಡೆಯಲ್ಲಿದ್ದ ಕೆದೆಮೆಂಬ ದೇಶಕ್ಕೆ ಕಳುಹಿಸಿ ಅವರನ್ನು ಇಸಾಕನಿಂದ ದೂರಮಾಡಿದನು; ಬಳಿಕ ತನ್ನ ಆಸ್ತಿಯನ್ನೆಲ್ಲ ಇಸಾಕನಿಗೆ ಕೊಟ್ಟನು.

ಅಬ್ರಹಾಮನು ನೂರೆಪ್ಪತ್ತೈದು ವರ್ಷ ಜೀವಿಸಿದನು. ಅವನು ಪೂರ್ಣಾಯುಷ್ಯದಿಂದ ದಿನತುಂಬಿದ ವೃದ್ಧನಾಗಿ ಪ್ರಾಣಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಗಂಡುಮಕ್ಕಳಾದ ಇಸಾಕ ಮತ್ತು ಇಷ್ಮಾಯೇಲರು ಅವನನ್ನು ಮಕ್ಪೇಲದ ಗವಿಯಲ್ಲಿ ಸಮಾಧಿಮಾಡಿದರು. ಈ ಗವಿಯು ಹಿತ್ತಿಯನಾದ ಚೋಹರನ ಮಗ ಎಫ್ರೋನನ ಜಮೀನಿನಲ್ಲಿದೆ. ಅದು ಮಮ್ರೆಗೆ ಪೂರ್ವದಿಕ್ಕಿನಲ್ಲಿದೆ. 10 ಅಬ್ರಹಾಮನು ಹಿತ್ತಿಯರಿಂದ ಕೊಂಡುಕೊಂಡ ಈ ಗವಿಯಲ್ಲೇ ಅಬ್ರಹಾಮನನ್ನು ಅವನ ಹೆಂಡತಿಯಾದ ಸಾರಳ ಜೊತೆಯಲ್ಲಿ ಸಮಾಧಿಮಾಡಲಾಯಿತು. 11 ಅಬ್ರಹಾಮನು ತೀರಿಕೊಂಡ ಮೇಲೆ, ದೇವರು ಇಸಾಕನನ್ನು ಆಶೀರ್ವದಿಸಿದನು; ಇಸಾಕನು ಬೀರ್‌ಲಹೈರೋಯಿಯಲ್ಲಿ ತನ್ನ ಜೀವನವನ್ನು ಮುಂದುವರೆಸಿದನು.

12 ಇದು ಇಷ್ಮಾಯೇಲನ ವಂಶಾವಳಿ: ಇಷ್ಮಾಯೇಲನು ಅಬ್ರಹಾಮನ ಮತ್ತು ಹಾಗರಳ ಮಗನು. (ಈಜಿಪ್ಟಿನವಳಾದ ಹಾಗರಳು ಸಾರಳ ಸೇವಕಿ.) 13 ಇಷ್ಮಾಯೇಲನ ಗಂಡುಮಕ್ಕಳ ಹೆಸರುಗಳು: ಮೊದಲನೆ ಮಗನು ನೆಬಾಯೋತ್. ಆಮೇಲೆ ಹುಟ್ಟಿದವರು: ಕೇದಾರ್, ಅದ್ಬಯೇಲ್, ಮಿಬ್ಸಾಮ್, 14 ಮಿಷ್ಮಾ, ದೂಮಾ, ಮಸ್ಸಾ, 15 ಹದದ್, ತೇಮಾ, ಯಟೂರ್, ನಾಫೀಷ್ ಮತ್ತು ಕೇದ್ಮಾ. 16 ಪ್ರತಿಯೊಬ್ಬನೂ ತನ್ನದೇ ಆದ ಪಾಳೆಯವನ್ನು ಹೊಂದಿದ್ದನು. ಆ ಪಾಳೆಯಗಳೇ ಮುಂದೆ ಚಿಕ್ಕ ಪಟ್ಟಣಗಳಾದವು. ಈ ಹನ್ನೆರಡು ಮಂದಿ ಗಂಡುಮಕ್ಕಳು ತಮ್ಮ ಜನರಿಗೆ ಹನ್ನೆರಡು ಮಂದಿ ರಾಜರುಗಳಂತಿದ್ದರು. 17 ಇಷ್ಮಾಯೇಲನು ನೂರ ಮೂವತ್ತೇಳು ವರ್ಷ ಬದುಕಿದನು. ಅವನು ಸತ್ತ ನಂತರ ಅವನನ್ನು ತನ್ನ ಪೂರ್ವಜರ ಸಮಾಧಿಯಲ್ಲಿ ಹೂಣಿಟ್ಟರು. 18 ಇಷ್ಮಾಯೇಲನ ಸಂತತಿಯವರು ಮರುಭೂಮಿ ಪ್ರದೇಶದ ಉದ್ದಕ್ಕೂ ಪಾಳೆಯಗಳನ್ನು ಮಾಡಿಕೊಂಡಿದ್ದರು. ಈ ಪ್ರದೇಶವು ಹವೀಲ ಮತ್ತು ಈಜಿಪ್ಟಿನ ಸಮೀಪದಲ್ಲಿರುವ ಶೂರಿನಿಂದ ಆರಂಭಗೊಂಡು ಅಶ್ಶೂರದವರೆಗೂ ಇತ್ತು. ಇಷ್ಮಾಯೇಲನ ಸಂತತಿಗಳವರು ಪದೇಪದೇ ತಮ್ಮ ಸಹೋದರನ ಜನರಿಗೆ ವಿರೋಧವಾಗಿ ಆಕ್ರಮಣ ಮಾಡುತ್ತಿದ್ದರು.

ಇಸಾಕನ ಕುಟುಂಬ

19 ಇದು ಇಸಾಕನ ಚರಿತ್ರೆ. ಅಬ್ರಹಾಮನಿಗೆ ಇಸಾಕ ಎಂಬ ಹೆಸರಿನ ಮಗನಿದ್ದನು. 20 ಇಸಾಕನು ನಲವತ್ತು ವರ್ಷದವನಾಗಿದ್ದಾಗ ರೆಬೆಕ್ಕಳನ್ನು ಮದುವೆಯಾದನು. ರೆಬೆಕ್ಕಳು ಪದ್ದನ್ ಅರಾಮಿನವಳು. ಆಕೆ ಬೆತೂವೇಲನ ಮಗಳು ಮತ್ತು ಅರಾಮ್ಯನಾದ ಲಾಬಾನನ ತಂಗಿ. 21 ಇಸಾಕನ ಹೆಂಡತಿ ಮಕ್ಕಳನ್ನು ಪಡೆಯಲಾಗಲಿಲ್ಲ. ಆದ್ದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಇಸಾಕನ ಪ್ರಾರ್ಥನೆಯನ್ನು ಕೇಳಿ ರೆಬೆಕ್ಕಳಿಗೆ ಗರ್ಭಧಾರಣೆಯನ್ನು ಅನುಗ್ರಹಿಸಿದನು.

22 ರೆಬೆಕ್ಕಳು ಗರ್ಭಿಣಿಯಾಗಿದ್ದಾಗ, ಅವಳ ಗರ್ಭದಲ್ಲಿದ್ದ ಕೂಸುಗಳು ಒಂದನ್ನೊಂದು ನೂಕಾಡಿದ್ದರಿಂದ ಅವಳು ಬಹಳ ತೊಂದರೆಪಡಬೇಕಾಯಿತು. ರೆಬೆಕ್ಕಳು ಯೆಹೋವನಿಗೆ ಪ್ರಾರ್ಥಿಸಿ, “ನನಗೇಕೆ ಹೀಗೆ ಆಗುತ್ತಿದೆ?” ಎಂದು ಕೇಳಿದಳು. 23 ಯೆಹೋವನು ಅವಳಿಗೆ,

“ನಿನ್ನ ಗರ್ಭದಲ್ಲಿ ಎರಡು ಜನಾಂಗಗಳಿವೆ.
    ಎರಡು ಕುಟುಂಬಗಳನ್ನು ಆಳುವವರು ನಿನ್ನಲ್ಲಿ ಹುಟ್ಟುವರು;
    ಅವರು ವಿಭಾಗವಾಗುವರು.
ಒಬ್ಬ ಮಗನು ಮತ್ತೊಬ್ಬನಿಗಿಂತ ಬಲಶಾಲಿಯಾಗಿರುವನು.
    ದೊಡ್ಡ ಮಗನು ಚಿಕ್ಕ ಮಗನ ಸೇವೆ ಮಾಡುವನು”

ಎಂದು ಹೇಳಿದನು.

24 ದಿನ ತುಂಬಿದ ಮೇಲೆ ರೆಬೆಕ್ಕಳು ಅವಳಿಜವಳಿ ಮಕ್ಕಳನ್ನು ಹೆತ್ತಳು. 25 ಮೊದಲನೆಯ ಮಗುವು ಕೆಂಪಗಿತ್ತು. ಅವನ ಚರ್ಮವು ಕೂದಲಿನ ಉಡುಪಿನಂತಿತ್ತು. ಆದ್ದರಿಂದ ಅವನಿಗೆ “ಏಸಾವ್” ಎಂದು ಹೆಸರಿಡಲಾಯಿತು. 26 ಎರಡನೆಯ ಮಗು ಹುಟ್ಟಿದಾಗ ಅದು ಏಸಾವನ ಹಿಮ್ಮಡಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿತ್ತು. ಆದ್ದರಿಂದ ಆ ಮಗುವಿಗೆ “ಯಾಕೋಬ” ಎಂದು ಹೆಸರಿಡಲಾಯಿತು. ಯಾಕೋಬ ಮತ್ತು ಏಸಾವ ಹುಟ್ಟಿದಾಗ ಇಸಾಕನಿಗೆ ಅರವತ್ತು ವರ್ಷ ವಯಸ್ಸಾಗಿತ್ತು.

27 ಆ ಬಾಲಕರು ಬೆಳೆದು ದೊಡ್ಡವರಾದರು. ಏಸಾವನು ಚತುರ ಬೇಟೆಗಾರನಾದನು. ಹೊಲದಲ್ಲಿರುವುದು ಅವನಿಗೆ ಪ್ರಿಯವಾಗಿತ್ತು. ಆದರೆ ಯಾಕೋಬನು ಸಾಧು ಮನುಷ್ಯನಾಗಿದ್ದನು. ಅವನು ತನ್ನ ಗುಡಾರದಲ್ಲಿರುತ್ತಿದ್ದನು. 28 ಇಸಾಕನು ಏಸಾವನನ್ನು ಪ್ರೀತಿಸಿದನು. ಏಸಾವನು ಬೇಟೆಯಾಡಿ ತಂದ ಪ್ರಾಣಿಗಳ ಮಾಂಸ ಅವನಿಗೆ ಇಷ್ಟವಾಗಿತ್ತು. ಆದರೆ ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.

29 ಒಂದು ಸಲ ಏಸಾವನು ಬೇಟೆಯಿಂದ ಹಿಂತಿರುಗಿ ಬಂದಾಗ ಹಸಿವೆಯಿಂದ ಆಯಾಸಗೊಂಡಿದ್ದನು ಮತ್ತು ಬಲಹೀನನಾಗಿದ್ದನು. ಯಾಕೋಬನು ಅಲಸಂಧಿ ಗುಗ್ಗರಿ ಮಾಡುತ್ತಿದ್ದನು. 30 ಆಗ ಏಸಾವನು ಯಾಕೋಬನಿಗೆ, “ಹಸಿವೆಯಿಂದ ನನಗೆ ಆಯಾಸವಾಗಿದೆ. ನನಗೆ ಕೆಂಪಾದ ಸ್ವಲ್ಪ ಅಲಸಂದಿ ಗುಗ್ಗರಿಯನ್ನು ಕೊಡು” ಎಂದು ಕೇಳಿದನು. (ಈ ಕಾರಣದಿಂದ ಜನರು ಅವನಿಗೆ “ಏದೋಮ್” ಎಂದು ಕರೆಯುತ್ತಾರೆ.)

31 ಆದರೆ ಯಾಕೋಬನು, “ನಿನ್ನ ಚೊಚ್ಚಲತನದ ಹಕ್ಕನ್ನು ನೀನು ನನಗೆ ಈ ದಿನ ಮಾರಬೇಕು” ಎಂದು ಹೇಳಿದನು.

32 ಏಸಾವನು, “ನನಗೆ ಹಸಿವೆಯಿಂದ ಸಾಯುವಂತಾಗಿದೆ. ನಾನು ಸತ್ತುಹೋದರೆ, ನನ್ನ ತಂದೆಯ ಐಶ್ವರ್ಯವೆಲ್ಲ ನನಗೆ ಸಹಾಯ ಮಾಡಲಾರದು. ಆದ್ದರಿಂದ ನಾನು ನನ್ನ ಹಕ್ಕನ್ನು ನಿನಗೆ ಕೊಡುವೆನು” ಎಂದು ಹೇಳಿದನು.

33 ಆದರೆ ಯಾಕೋಬನು, “ನೀನು ಅದನ್ನು ಕೊಡುವುದಾಗಿ ಪ್ರಮಾಣಮಾಡು” ಅಂದನು. ಆದ್ದರಿಂದ ಏಸಾವನು ಯಾಕೋಬನಿಗೆ ಪ್ರಮಾಣ ಮಾಡಿದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಯಾಕೋಬನಿಗೆ ಮಾರಿಕೊಂಡನು. 34 ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಕುದಿಸಿದ ಅಲಸಂಧಿ ಗುಗ್ಗರಿಯನ್ನೂ ಕೊಟ್ಟನು. ಏಸಾವನು ತಿಂದು ಕುಡಿದು ಅಲ್ಲಿಂದ ಹೊರಟುಹೋದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕುಗಳ ಮೇಲೆ ತನಗೆ ಚಿಂತೆಯಿಲ್ಲದಿರುವುದನ್ನು ತೋರಿಸಿಕೊಂಡನು.

ಇಸಾಕನು ಅಬೀಮೆಲೆಕನಿಗೆ ಸುಳ್ಳು ಹೇಳಿದ್ದು

26 ಅಬ್ರಹಾಮನ ಕಾಲದಲ್ಲಿ ಬಂದಿದ್ದ ಕ್ಷಾಮದಂತೆ ಮತ್ತೊಂದು ಕ್ಷಾಮವು ಕಾನಾನ್ ದೇಶಕ್ಕೆ ಬಂದಿತು. ಆದ್ದರಿಂದ ಇಸಾಕನು ಫಿಲಿಷ್ಟಿಯರ ರಾಜನಾದ ಅಬೀಮೆಲೆಕನ ಬಳಿಗೆ ಹೋದನು. ಅಬೀಮೆಲೆಕನು ಗೆರಾರ್ ನಗರದಲ್ಲಿದ್ದನು. ಯೆಹೋವನು ಇಸಾಕನಿಗೆ ಪ್ರತ್ಯಕ್ಷನಾಗಿ, “ನೀನು ಈಜಿಪ್ಟಿಗೆ ಹೋಗಬೇಡ. ನೀನು ಯಾವ ಪ್ರದೇಶದಲ್ಲಿರಬೇಕೆಂದು ನಾನು ಆಜ್ಞಾಪಿಸಿದೆನೋ ಆ ಪ್ರದೇಶದಲ್ಲಿ ವಾಸಿಸು. ನಾನು ನಿನ್ನ ಸಂಗಡವಿದ್ದು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಕುಟುಂಬಕ್ಕೂ ಈ ಪ್ರದೇಶಗಳನ್ನೆಲ್ಲ ಕೊಡುವೆನು. ನಾನು ನಿನ್ನ ತಂದೆಯಾದ ಅಬ್ರಹಾಮನಿಗೆ ಪ್ರಮಾಣ ಮಾಡಿದ್ದನ್ನು ನೆರವೇರಿಸುವೆನು. ನಾನು ನಿನ್ನ ಸಂತಾನವನ್ನು ಆಕಾಶದಲ್ಲಿನ ನಕ್ಷತ್ರಗಳಷ್ಟು ಹೆಚ್ಚಿಸಿ ಅವರಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳವರು ನಿನ್ನ ಸಂತತಿಯಿಂದ ಆಶೀರ್ವಾದ ಹೊಂದುವರು. ನಾನೇ ಇದನ್ನು ನೆರವೇರಿಸುವೆನು; ಯಾಕೆಂದರೆ ನಿನ್ನ ತಂದೆಯಾದ ಅಬ್ರಹಾಮನು ನನ್ನ ಮಾತುಗಳಿಗೆ ವಿಧೇಯನಾಗಿ ನಾನು ಹೇಳಿದಂತೆ ಮಾಡಿ ನನ್ನ ಆಜ್ಞೆಗಳನ್ನು, ಕಟ್ಟಳೆಗಳನ್ನು, ನಿಯಮಗಳನ್ನು ಕೈಕೊಂಡು ನಡೆದನು” ಎಂದು ಹೇಳಿದನು.

ಆದ್ದರಿಂದ ಇಸಾಕನು ಗೆರಾರಿನಲ್ಲಿ ಇಳಿದುಕೊಂಡು ವಾಸಿಸಿದನು. ಇಸಾಕನ ಹೆಂಡತಿಯಾದ ರೆಬೆಕ್ಕಳು ತುಂಬ ಸೌಂದರ್ಯವತಿಯಾಗಿದ್ದಳು. ಆ ಸ್ಥಳದ ಗಂಡಸರು ರೆಬೆಕ್ಕಳ ಬಗ್ಗೆ ಇಸಾಕನನ್ನು ಕೇಳಿದರು. ಇಸಾಕನು ಅವರಿಗೆ, “ಆಕೆ ನನ್ನ ತಂಗಿ” ಎಂದು ಹೇಳಿದನು. ರೆಬೆಕ್ಕಳು ತನಗೆ ಹೆಂಡತಿಯಾಗಬೇಕೆಂದು ಅವರಿಗೆ ತಿಳಿದರೆ ಆಕೆಯನ್ನು ತೆಗೆದುಕೊಳ್ಳಲು ಅವರು ತನ್ನನ್ನು ಕೊಲ್ಲಬಹುದೆಂಬ ಹೆದರಿಕೆಯಿಂದ ಇಸಾಕನು ಹಾಗೆ ಹೇಳಿದನು.

ಅಲ್ಲಿ ಇಸಾಕನು ಇದ್ದು ಬಹುಕಾಲವಾಗಿತ್ತು. ಒಮ್ಮೆ ಫಿಲಿಷ್ಟಿಯರ ರಾಜನಾದ ಅಬೀಮೆಲೆಕನು ತನ್ನ ಕಿಟಕಿಯಿಂದ ನೋಡಿದಾಗ, ಇಸಾಕನು ಮತ್ತು ಅವನ ಹೆಂಡತಿ ಸರಸವಾಡುತ್ತಿರುವುದನ್ನು ಕಂಡನು. ಅಬೀಮೆಲೆಕನು ಇಸಾಕನನ್ನು ಕರೆದು, “ಈ ಸ್ತ್ರೀಯು ನಿನ್ನ ಹೆಂಡತಿ. ಅವಳು ನಿನ್ನ ತಂಗಿಯೆಂದು ಯಾಕೆ ನಮಗೆ ಹೇಳಿದೆ?” ಎಂದು ಕೇಳಿದನು.

ಇಸಾಕನು ಅವನಿಗೆ, “ನೀನು ಆಕೆಯನ್ನು ತೆಗೆದುಕೊಳ್ಳಲು ನನ್ನನ್ನು ಕೊಲ್ಲಬಹುದೆಂಬ ಭಯದಿಂದ ಹಾಗೆ ಹೇಳಿದೆ” ಅಂದನು.

10 ಅಬೀಮೆಲೆಕನು ಅವನಿಗೆ, “ನೀನು ನಮಗೆ ಕೆಟ್ಟದ್ದನ್ನು ಮಾಡಿದೆ. ನಮ್ಮಲ್ಲಿರುವ ಯಾವ ಗಂಡಸಾದರೂ ನಿನ್ನ ಹೆಂಡತಿಯೊಡನೆ ಮಲಗಿಕೊಳ್ಳಲು ನೀನೇ ಆಸ್ಪದ ಮಾಡಿಕೊಟ್ಟಿದ್ದೆ. ಅಂಥದ್ದೇನಾದರೂ ನಡೆದಿದ್ದರೆ ಮಹಾ ಅಪರಾಧವಾಗುತ್ತಿತ್ತು” ಎಂದು ಹೇಳಿದನು.

11 ಬಳಿಕ ಅಬೀಮೆಲೆಕನು ತನ್ನ ಪ್ರಜೆಗಳಿಗೆ, “ಈ ಮನುಷ್ಯನಿಗಾಗಲಿ ಇವನ ಹೆಂಡತಿಗಾಗಲಿ ಯಾರೂ ಕೇಡುಮಾಡಕೂಡದು. ಇವರಿಗೆ ಕೇಡುಮಾಡುವವನನ್ನು ಕೊಲ್ಲಲಾಗುವುದು” ಎಂದು ಆಜ್ಞಾಪಿಸಿದನು.

ಇಸಾಕನು ಐಶ್ವರ್ಯವಂತನಾದದ್ದು

12 ಇಸಾಕನು ಆ ಪ್ರದೇಶದಲ್ಲಿ ಬೀಜ ಬಿತ್ತಿದನು; ಅವನಿಗೆ ಅದೇ ವರ್ಷದಲ್ಲಿ ಮಹಾ ಸುಗ್ಗಿಯಾಯಿತು. ಯೆಹೋವನು ಅವನನ್ನು ಹೆಚ್ಚಾಗಿ ಆಶೀರ್ವದಿಸಿದನು. 13 ಅವನ ಐಶ್ವರ್ಯವು ಹೆಚ್ಚುತ್ತಾ ಬಂದದ್ದರಿಂದ ಅವನು ಬಹು ಐಶ್ವರ್ಯವಂತನಾದನು. 14 ಅವನಿಗೆ ಅನೇಕ ದನಕುರಿಗಳ ಮಂದೆಗಳೂ ಪ್ರಾಣಿಗಳ ಹಿಂಡೂಗಳೂ ಇದ್ದವು. ಇದಲ್ಲದೆ ಅವನಿಗೆ ಅನೇಕ ಸೇವಕರು ಇದ್ದರು. ಇದನ್ನು ಕಂಡು ಫಿಲಿಷ್ಟಿಯರು ಅವನ ಬಗ್ಗೆ ಅಸೂಯೆಪಡುತ್ತಿದ್ದರು. 15 ಆದ್ದರಿಂದ ಅನೇಕ ವರ್ಷಗಳ ಹಿಂದೆ ಅಬ್ರಹಾಮ ಮತ್ತು ಅವನ ಸೇವಕರು ತೋಡಿದ್ದ ಬಾವಿಗಳಿಗೆ ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದ್ದರು. 16 ಅಬೀಮೆಲೆಕನು ಇಸಾಕನಿಗೆ, “ನಮ್ಮ ದೇಶವನ್ನು ಬಿಟ್ಟುಹೋಗು. ನೀನು ನಮಗಿಂತಲೂ ತುಂಬ ಬಲಿಷ್ಠನಾದೆ” ಎಂದು ಹೇಳಿದನು.

17 ಆದ್ದರಿಂದ ಇಸಾಕನು ಆ ಸ್ಥಳದಿಂದ ಹೊರಟು ಗೆರಾರಿನ ಚಿಕ್ಕಹೊಳೆಯ ಸಮೀಪದಲ್ಲಿ ಪಾಳೆಯ ಮಾಡಿಕೊಂಡನು. ಇಸಾಕನು ಅಲ್ಲಿ ಇಳಿದುಕೊಂಡು ವಾಸಿಸಿದನು. 18 ಇದಕ್ಕೂ ಬಹುಕಾಲದ ಹಿಂದೆ, ಅಬ್ರಹಾಮನು ಅನೇಕ ಬಾವಿಗಳನ್ನು ತೋಡಿಸಿದ್ದನು. ಅಬ್ರಹಾಮನು ಸತ್ತುಹೋದ ಮೇಲೆ, ಫಿಲಿಷ್ಟಿಯರು ಆ ಬಾವಿಗಳಿಗೆ ಮಣ್ಣುಹಾಕಿ ಮುಚ್ಚಿದ್ದರು. ಇಸಾಕನು ಆ ಬಾವಿಗಳನ್ನು ಮತ್ತೆ ತೋಡಿಸಿ, ತನ್ನ ತಂದೆ ಕೊಟ್ಟಿದ್ದ ಹೆಸರುಗಳನ್ನೇ ಅವುಗಳಿಗೆ ಕೊಟ್ಟನು. 19 ಇಸಾಕನ ಸೇವಕರು ಚಿಕ್ಕ ಹೊಳೆಯ ಸಮೀಪದಲ್ಲಿ ಒಂದು ಬಾವಿಯನ್ನು ತೋಡಿದರು. ಆ ಬಾವಿಯಲ್ಲಿ ನೀರಿನ ಸೆಲೆ ಸಿಕ್ಕಿತು. 20 ಆದರೆ ಗೆರಾರಿನ ಕಣಿವೆಯಲ್ಲಿ ಕುರಿಕಾಯುತ್ತಿದ್ದ ಜನರು ಇಸಾಕನ ಸೇವಕರೊಡನೆ ವಾದಮಾಡಿ, “ಈ ನೀರು ನಮ್ಮದು” ಎಂದು ಹೇಳಿದರು. ಆದ್ದರಿಂದ ಇಸಾಕನು ಆ ಬಾವಿಗೆ “ಏಸೆಕ್” ಎಂದು ಹೆಸರಿಟ್ಟನು.

21 ಆಮೇಲೆ ಇಸಾಕನ ಸೇವಕರು ಮತ್ತೊಂದು ಬಾವಿಯನ್ನು ತೋಡಿದರು. ಅಲ್ಲಿಯ ಜನರೂ ಆ ಬಾವಿಗಾಗಿ ವಾದಮಾಡಿದರು. ಆದ್ದರಿಂದ ಇಸಾಕನು ಆ ಬಾವಿಗೆ “ಸಿಟ್ನಾ” ಎಂದು ಹೆಸರಿಟ್ಟನು.

22 ಇಸಾಕನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನು ತೋಡಿಸಿದನು. ಆ ಬಾವಿಯ ಕುರಿತು ವಾದಮಾಡಲು ಯಾರೂ ಬರಲಿಲ್ಲ. ಆದ್ದರಿಂದ ಇಸಾಕನು, “ಈಗ ಯೆಹೋವನು ನಮಗೋಸ್ಕರ ಒಂದು ಸ್ಥಳವನ್ನು ತೋರಿಸಿದ್ದಾನೆ. ನಾವು ಈ ಸ್ಥಳದಲ್ಲಿ ಅಭಿವೃದ್ಧಿಯಾಗೋಣ” ಎಂದು ಹೇಳಿ ಆ ಬಾವಿಗೆ “ರೆಹೋಬೋತ್” ಎಂದು ಹೆಸರಿಟ್ಟನು.

23 ಇಸಾಕನು ಆ ಸ್ಥಳದಿಂದ ಬೇರ್ಷೆಬಕ್ಕೆ ಹೋದನು. 24 ಆ ರಾತ್ರಿ ಯೆಹೋವನು ಇಸಾಕನಿಗೆ ಪ್ರತ್ಯಕ್ಷನಾಗಿ, “ನಾನು ನಿನ್ನ ತಂದೆಯಾದ ಅಬ್ರಹಾಮನ ದೇವರು. ಭಯಪಡಬೇಡ, ನಾನು ನಿನ್ನ ಸಂಗಡವಿದ್ದೇನೆ. ನಾನು ನಿನ್ನನ್ನು ಆಶೀರ್ವದಿಸುವೆನು. ನಾನು ನಿನ್ನ ಕುಟುಂಬವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಸೇವಕನಾದ ಅಬ್ರಹಾಮನಿಗಾಗಿಯೇ ಇದನ್ನು ಮಾಡುತ್ತೇನೆ” ಎಂದು ಹೇಳಿದನು. 25 ಆದ್ದರಿಂದ ಆ ಸ್ಥಳದಲ್ಲಿ ಇಸಾಕನು ಯಜ್ಞವೇದಿಕೆಯನ್ನು ಕಟ್ಟಿ ಯೆಹೋವನನ್ನು ಆರಾಧಿಸಿದನು. ಇಸಾಕನು ಆ ಸ್ಥಳದಲ್ಲಿ ಪಾಳೆಯಮಾಡಿಕೊಂಡನು; ಅವನ ಸೇವಕರು ಅಲ್ಲಿ ಒಂದು ಬಾವಿಯನ್ನು ತೋಡಿದರು.

26 ಅಬೀಮೆಲೆಕನು ಇಸಾಕನನ್ನು ಕಾಣಲು ಗೆರಾರಿನಿಂದ ಬಂದನು. ಅಬೀಮೆಲೆಕನು ತನ್ನ ಸಲಹೆಗಾರನಾದ ಅಹುಜ್ಜತನನ್ನು ಮತ್ತು ಸೇನಾಪತಿಯಾದ ಫೀಕೋಲನನ್ನು ತನ್ನೊಡನೆ ಕರೆದುಕೊಂಡು ಬಂದಿದ್ದನು.

27 ಇಸಾಕನು, “ನೀನು ನನ್ನನ್ನು ನೋಡಲು ಬಂದದ್ದೇಕೆ? ಮೊದಲು, ನೀನು ನನ್ನೊಡನೆ ಸ್ನೇಹದಿಂದ ಇರಲಿಲ್ಲ. ಅಲ್ಲದೆ ನಿನ್ನ ದೇಶವನ್ನು ಬಿಟ್ಟುಹೋಗುವಂತೆ ನೀನು ನನ್ನನ್ನು ಬಲವಂತ ಮಾಡಿದೆ” ಎಂದು ಹೇಳಿದನು.

28 ಅವರು ಅವನಿಗೆ, “ನಿನ್ನ ಜೊತೆಯಲ್ಲಿ ಯೆಹೋವನು ಇದ್ದಾನೆಂಬುದು ಈಗ ನಮಗೆ ತಿಳಿಯಿತು. ನಾವು ಒಂದು ಒಪ್ಪಂದ ಮಾಡಿಕೊಳ್ಳಬೇಕೆಂಬುದು ನಮ್ಮ ಆಲೋಚನೆ. ನೀನು ನಮಗೆ ಒಂದು ಪ್ರಮಾಣ ಮಾಡಬೇಕಾಗಿದೆ. 29 ನಾವು ನಿನಗೆ ಕೇಡುಮಾಡಲಿಲ್ಲ. ಅದೇ ರೀತಿಯಲ್ಲಿ ಈಗ ನೀನೂ ನಮಗೆ ಕೇಡುಮಾಡುವುದಿಲ್ಲವೆಂದು ಪ್ರಮಾಣಮಾಡಬೇಕು. ನಾವು ನಿನ್ನನ್ನು ದೂರ ಕಳುಹಿಸಿದರೂ ಸಮಾಧಾನದಿಂದ ಕಳುಹಿಸಿಕೊಟ್ಟೆವು. ಯೆಹೋವನು ನಿನ್ನನ್ನು ಆಶೀರ್ವದಿಸಿದ್ದಾನೆ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಹೇಳಿದರು.

30 ಆದ್ದರಿಂದ ಇಸಾಕನು ಅವರಿಗಾಗಿ ಒಂದು ಔತಣವನ್ನು ಮಾಡಿಸಿದನು. ಅವರೆಲ್ಲರೂ ಸಮೃದ್ಧಿಯಾಗಿ ಊಟಮಾಡಿದರು. 31 ಮರುದಿನ ಮುಂಜಾನೆ, ಅವರು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡು, ಸಮಾಧಾನದಿಂದ ಹೊರಟುಹೋದರು.

32 ಆ ದಿನ, ಇಸಾಕನ ಸೇವಕರು ಬಂದು, ತಾವು ತೋಡಿದ್ದ ಬಾವಿಯ ಬಗ್ಗೆ ಹೇಳುತ್ತಾ, “ಬಾವಿಯಲ್ಲಿ ನಮಗೆ ನೀರಿನ ಸೆಲೆ ಸಿಕ್ಕಿತು” ಎಂದು ಹೇಳಿದರು. 33 ಆದ್ದರಿಂದ ಇಸಾಕನು ಆ ಬಾವಿಗೆ ಷಿಬಾ ಎಂದು ಹೆಸರಿಟ್ಟನು. ಇಂದಿಗೂ ಆ ನಗರಕ್ಕೆ ಬೇರ್ಷೆಬ ಎಂದು ಕರೆಯುತ್ತಾರೆ.

ಏಸಾವನ ಹೆಂಡತಿಯರು

34 ಏಸಾವನಿಗೆ ನಲವತ್ತು ವರ್ಷಗಳಾಗಿದ್ದಾಗ ಅವನು ಹಿತ್ತಿಯರ ಇಬ್ಬರು ಸ್ತ್ರೀಯರನ್ನು ಮದುವೆ ಮಾಡಿಕೊಂಡನು. ಒಬ್ಬಳು ಬೇರಿಯನ ಮಗಳಾದ ಯೆಹೂದೀತಳು, ಮತ್ತೊಬ್ಬಳು ಏಲೋನನ ಮಗಳಾದ ಬಾಸೆಮತಳು. 35 ಈ ಮದುವೆಗಳಿಂದ ಇಸಾಕ ಮತ್ತು ರೆಬೆಕ್ಕಳಿಗೆ ತುಂಬ ದುಃಖವಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International