Beginning
ಸೇವಕಿಯಾಗಿದ್ದ ಹಾಗರಳು
16 ಸಾರಯಳು ಅಬ್ರಾಮನ ಹೆಂಡತಿ. ಆಕೆಗೆ ಮಕ್ಕಳಿರಲಿಲ್ಲ. ಸಾರಯಳಿಗೆ ಈಜಿಪ್ಟಿನ ಒಬ್ಬ ಸೇವಕಿಯಿದ್ದಳು. ಅವಳ ಹೆಸರು ಹಾಗರಳು. 2 ಸಾರಯಳು ಅಬ್ರಾಮನಿಗೆ, “ಯೆಹೋವನು ನನಗೆ ಮಕ್ಕಳನ್ನು ಪಡೆಯುವ ಅವಕಾಶವನ್ನು ಕೊಡಲಿಲ್ಲ. ಆದ್ದರಿಂದ ನನ್ನ ಸೇವಕಿಯಾದ ಹಾಗರಳ ಬಳಿಗೆ ಹೋಗು. ಆಕೆಯಲ್ಲಿ ಹುಟ್ಟುವ ಮಗುವನ್ನು ನನ್ನ ಮಗುವಂತೆ ಸ್ವೀಕರಿಸಿಕೊಳ್ಳುವೆನು” ಎಂದು ಹೇಳಿದಳು. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳಿಗೆ ವಿಧೇಯನಾದನು.
3 ಅಬ್ರಾಮನು ಕಾನಾನಿಗೆ ಬಂದು ಹತ್ತು ವರ್ಷಗಳಾದ ಮೇಲೆ ಇದು ನಡೆಯಿತು. ಹೀಗೆ ಸಾರಯಳು ತನ್ನ ಗಂಡನಾದ ಅಬ್ರಾಮನಿಗೆ ಹಾಗರಳನ್ನು ಕೊಟ್ಟಳು. ಹಾಗರಳು ಆಕೆಯ ಈಜಿಪ್ಟಿನ ಸೇವಕಿಯಾಗಿದ್ದಳು. 4 ಹಾಗರಳು ಅಬ್ರಾಮನಿಂದ ಗರ್ಭಿಣಿಯಾದಾಗ ತನ್ನ ಯಜಮಾನಿಯಾದ ಸಾರಯಳನ್ನೇ ಕಡೆಗಣಿಸತೊಡಗಿದಳು. 5 ಆಗ ಸಾರಯಳು ಅಬ್ರಾಮನಿಗೆ, “ನನ್ನ ಸಂಕಟಕ್ಕೆ ನೀನೇ ಕಾರಣ. ನಾನು ಅವಳನ್ನು ನಿನಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾಗಿದ್ದಾಳೆ ಮತ್ತು ನನ್ನನ್ನೇ ಕಡೆಗಣಿಸುತ್ತಿದ್ದಾಳೆ. ಯೆಹೋವನೇ ನನಗೂ ನಿನಗೂ ನ್ಯಾಯ ತೀರಿಸಲಿ” ಎಂದು ಹೇಳಿದಳು.
6 ಅದಕ್ಕೆ ಅಬ್ರಾಮನು ಸಾರಯಳಿಗೆ, “ನೀನು ಹಾಗರಳ ಯಜಮಾನಿ. ನೀನು ಅವಳಿಗೆ ಏನುಬೇಕಾದರೂ ಮಾಡಬಹುದು” ಎಂದು ಹೇಳಿದನು. ಆದ್ದರಿಂದ ಸಾರಯಳು ಹಾಗರಳನ್ನು ಶಿಕ್ಷಿಸಿದಳು. ಆಗ ಹಾಗರಳು ಓಡಿಹೋದಳು.
ಹಾಗರಳ ಮಗನಾದ ಇಷ್ಮಾಯೇಲ
7 ಯೆಹೋವನ ದೂತನು ಹಾಗರಳನ್ನು ಮರುಳುಗಾಡಿನ ಒರತೆಯೊಂದರ ಬಳಿಯಲ್ಲಿ ಕಂಡನು. ಆ ಒರತೆಯು ಶೂರಿಗೆ ಹೋಗುವ ದಾರಿಯ ಬಳಿಯಲ್ಲಿತ್ತು. 8 ದೇವದೂತನು ಅವಳಿಗೆ, “ಹಾಗರಳೇ, ನೀನು ಸಾರಯಳ ಸೇವಕಿಯಾಗಿದ್ದರೂ ಯಾಕೆ ಇಲ್ಲಿರುವೆ? ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದನು.
ಹಾಗರಳು, “ನನ್ನ ಯಜಮಾನಿಯಾದ ಸಾರಯಳ ಬಳಿಯಿಂದ ಓಡಿಹೋಗುತ್ತಿರುವೆ” ಎಂದು ಹೇಳಿದಳು.
9 ಯೆಹೋವನ ದೂತನು ಹಾಗರಳಿಗೆ, “ಸಾರಯಳು ನಿನ್ನ ಯಜಮಾನಿ. ನೀನು ಆಕೆಯ ಬಳಿಗೆ ಹಿಂತಿರುಗಿ ಹೋಗಿ ಆಕೆಗೆ ವಿಧೇಯಳಾಗಿರು” ಎಂದು ಹೇಳಿದನು. 10 ಇದಲ್ಲದೆ ಯೆಹೋವನ ದೂತನು ಹಾಗರಳಿಗೆ, “ನಾನು ನಿನ್ನ ಸಂತತಿಯವರನ್ನು ಅಸಂಖ್ಯಾತರನ್ನಾಗಿ ಮಾಡುವೆನು” ಅಂದನು.
11 ಇದಲ್ಲದೆ ದೇವದೂತನು ಆಕೆಗೆ,
“ಹಾಗರಳೇ, ಈಗ ನೀನು ಗರ್ಭಿಣಿಯಾಗಿರುವೆ;
ನಿನಗೆ ಒಬ್ಬ ಮಗನು ಹುಟ್ಟುವನು.
ನೀನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಡಬೇಕು;
ಯಾಕೆಂದರೆ ಯೆಹೋವನು ನಿನ್ನ ಕಷ್ಟಗಳನ್ನು ಕೇಳಿದ್ದಾನೆ; ಆತನು ನಿನಗೆ ಸಹಾಯ ಮಾಡುವನು.
12 ಇಷ್ಮಾಯೇಲನು ಕಾಡುಕತ್ತೆಯಂತೆ
ಗಡುಸಾಗಿದ್ದು ಸ್ವತಂತ್ರವಾಗಿರುವನು.
ಅವನು ಪ್ರತಿಯೊಬ್ಬರಿಗೂ ವಿರೋಧವಾಗಿರುವನು;
ಪ್ರತಿಯೊಬ್ಬರೂ ಅವನಿಗೆ ವಿರೋಧವಾಗಿರುವರು.
ಅವನು ಸ್ಥಳದಿಂದ ಸ್ಥಳಕ್ಕೆ ಹೋಗುತ್ತಾ
ತನ್ನ ಸಹೋದರರ ಸಮೀಪದಲ್ಲಿ ವಾಸಿಸಿದರೂ ಅವರಿಗೆ ವಿರೋಧವಾಗಿರುವನು.”
ಎಂದು ಹೇಳಿ ಹೊರಟುಹೋದನು.
13 ಯೆಹೋವನು ತನ್ನೊಡನೆ ಮಾತಾಡಿದ್ದರಿಂದ ಹಾಗರಳು, “ಈ ಸ್ಥಳದಲ್ಲಿಯೂ ದೇವರು ನನ್ನನ್ನು ನೋಡಿ ನನಗಾಗಿ ಚಿಂತಿಸುತ್ತಾನೆ ಎಂದುಕೊಂಡು ಆತನಿಗೆ ‘ನನ್ನನ್ನು ನೋಡುವ ದೇವರು’” ಎಂದು ಹೆಸರಿಟ್ಟಳು. 14 ಆದ್ದರಿಂದ ಆ ಬಾವಿಗೆ ಬೀರ್‌ಲಹೈರೋಯಿ (ಬೀರ್‌ಲಹೈರೋಯಿ. ಇದರರ್ಥ: “ನನ್ನನ್ನು ನೋಡುವ ಜೀವಸ್ವರೂಪನ ಬಾವಿ.”) ಎಂದು ಹೆಸರಾಯಿತು. ಈ ಬಾವಿಯು ಕಾದೇಶಿಗೂ ಬೆರೆದಿಗೂ ನಡುವೆ ಇದೆ.
15 ಹಾಗರಳು ಅಬ್ರಾಮನ ಮಗನಿಗೆ ಜನ್ಮಕೊಟ್ಟಳು. ಅಬ್ರಾಮನು ಆ ಮಗನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. 16 ಅಬ್ರಾಮನಿಗೆ ಎಂಭತ್ತಾರು ವರ್ಷವಾಗಿದ್ದಾಗ ಹಾಗರಳಲ್ಲಿ ಇಷ್ಮಾಯೇಲನು ಜನಿಸಿದನು.
ಸುನ್ನತಿ—ಒಡಂಬಡಿಕೆ
17 ಅಬ್ರಾಮನಿಗೆ ತೊಂಭತ್ತೊಂಬತ್ತು ವರ್ಷವಾಗಿದ್ದಾಗ ಯೆಹೋವನು ಅವನಿಗೆ ಪ್ರತ್ಯಕ್ಷನಾಗಿ, “ನಾನು ಸರ್ವಶಕ್ತನಾದ ದೇವರು. ನನಗೆ ವಿಧೇಯನಾಗಿದ್ದು ನಿರ್ದೋಷಿಯಾಗಿರು. 2 ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡುವುದಾಗಿ ವಾಗ್ದಾನ ಮಾಡುತ್ತೇನೆ” ಎಂದು ಹೇಳಿದನು.
3 ಆ ಕೂಡಲೇ ಅಬ್ರಾಮನು ದೇವರಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಆಗ ದೇವರು ಅವನಿಗೆ, 4 “ನಾನು ನಿನಗೆ ಮಾಡುವ ವಾಗ್ದಾನವೇನೆಂದರೆ: 5 ‘ಅಬ್ರಾಮ’ ಎಂಬ ನಿನ್ನ ಹೆಸರನ್ನು ಬದಲಾಯಿಸಿ ನಿನಗೆ ‘ಅಬ್ರಹಾಮ’ ಎಂದು ಹೆಸರಿಡುವೆನು. ನಿನ್ನನ್ನು ಅಬ್ರಹಾಮ ಎಂದೇ ಕರೆಯುವರು; ಯಾಕೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆ. 6 ಹೊಸ ಜನಾಂಗಗಳು ನಿನ್ನಿಂದ ಹುಟ್ಟುವವು; ರಾಜರುಗಳು ನಿನ್ನಿಂದ ಬರುವರು. 7 ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಯು ನಿನ್ನ ಎಲ್ಲಾ ಸಂತತಿಯವರಿಗೆ ಶಾಶ್ವತವಾಗಿ ಅನ್ವಯಿಸುವುದು. ನಾನೇ ನಿನಗೂ ನಿನ್ನ ಎಲ್ಲಾ ಸಂತತಿಯವರಿಗೂ ದೇವರಾಗಿರುವೆನು. 8 ನೀನು ಪ್ರಯಾಣ ಮಾಡುತ್ತಿರುವ ಈ ಕಾನಾನ್ ದೇಶವನ್ನೆಲ್ಲ ನಿನಗೂ ನಿನ್ನ ಸಂತತಿಯವರಿಗೂ ಶಾಶ್ವತವಾಗಿ ಕೊಡುವೆನು. ನಾನೇ ನಿಮ್ಮ ದೇವರಾಗಿರುವೆನು” ಎಂದು ಹೇಳಿದನು.
9 ಇದಲ್ಲದೆ ದೇವರು ಅಬ್ರಹಾಮನಿಗೆ, “ನಮ್ಮ ಒಡಂಬಡಿಕೆಯ ಪ್ರಕಾರ ನೀನು ಮತ್ತು ನಿನ್ನ ಸಂತತಿಯವರೆಲ್ಲರೂ ನನ್ನ ಒಡಂಬಡಿಕೆಗೆ ವಿಧೇಯರಾಗಬೇಕು. 10 ನೀನೂ ಮತ್ತು ನಿನ್ನ ಎಲ್ಲಾ ಸಂತತಿಯವರು ಕೈಕೊಳ್ಳಬೇಕಾದ ನಿಬಂಧನೆಯೇನೆಂದರೆ, ನಿಮ್ಮಲ್ಲಿ ಹುಟ್ಟಿದ ಪ್ರತಿಯೊಂದು ಗಂಡುಮಗುವಿಗೂ ಸುನ್ನತಿ ಮಾಡಿಸಬೇಕು. 11-12 ಇಂದಿನಿಂದ ನಿಮ್ಮಲ್ಲಿ ಗಂಡುಮಗು ಹುಟ್ಟಿ ಎಂಟು ದಿನಗಳಾದ ಮೇಲೆ ಆ ಮಗುವಿಗೆ ಸುನ್ನತಿ ಮಾಡಿಸಬೇಕು; ಈ ನಿಯಮವು ನಿಮ್ಮ ಮನೆಯಲ್ಲಿ ಹುಟ್ಟಿದ ಸೇವಕರಿಗೂ, ಪರದೇಶದಿಂದ ಕೊಂಡುತಂದ ಸೇವಕರಿಗೂ ಸಹ ಅನ್ವಯಿಸುತ್ತದೆ. ನನಗೂ ನಿನಗೂ ಆದ ಒಡಂಬಡಿಕೆಗೆ ಇದು ಗುರುತಾಗಿರುವುದು. 13-14 ಹೀಗೆ ಪ್ರತಿಯೊಬ್ಬನಿಗೂ ಸುನ್ನತಿಯಾಗಲೇಬೇಕು. ನಾನು ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯು ಶಾಶ್ವತವಾದದ್ದು ಎಂಬುದಕ್ಕೆ ಈ ಸುನ್ನತಿಯೇ ದೈಹಿಕ ಗುರುತಾಗಿದೆ. ಸುನ್ನತಿಯಾಗಿಲ್ಲದ ಪುರುಷನು ನನ್ನ ಒಡಂಬಡಿಕೆಗೆ ವಿಧೇಯನಾಗದ ಕಾರಣ ಅವನನ್ನು ಕುಲದಿಂದ ತೆಗೆದುಹಾಕಲ್ಪಡಬೇಕು” ಎಂದು ಹೇಳಿದನು.
ಇಸಾಕನು ವಾಗ್ದಾನದ ಮಗನು
15 ದೇವರು ಅಬ್ರಹಾಮನಿಗೆ, “ನಿನ್ನ ಹೆಂಡತಿಯಾದ, ಸಾರಯಳಿಗೆ ನಾನು ಒಂದು ಹೆಸರನ್ನು ಕೊಡುತ್ತೇನೆ. ಆಕೆಯ ಹೊಸ ಹೆಸರು ಸಾರ. 16 ನಾನು ಆಕೆಯನ್ನು ಆಶೀರ್ವದಿಸಿ ಆಕೆಗೆ ಒಬ್ಬ ಮಗನನ್ನು ದಯಪಾಲಿಸುವೆನು; ನೀನೇ ಅವನ ತಂದೆ. ಅನೇಕ ಜನಾಂಗಗಳಿಗೂ ರಾಜರುಗಳಿಗೂ ಆಕೆಯು ಮೂಲಮಾತೆಯಾಗಿರುವಳು” ಎಂದು ಹೇಳಿದನು.
17 ಅಬ್ರಹಾಮನು ದೇವರಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಆದರೆ ಅವನು ಮನಸ್ಸಿನಲ್ಲಿ ನಗುತ್ತಾ, “ನನಗೆ ನೂರು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ನನಗೂ ಸಾಧ್ಯವಿಲ್ಲ. ಸಾರಳಿಗೆ ತೊಂಭತ್ತು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ಆಕೆಗೂ ಸಾಧ್ಯವಿಲ್ಲ” ಅಂದುಕೊಂಡನು.
18 ಆಮೇಲೆ ಅಬ್ರಹಾಮನು ದೇವರಿಗೆ, “ಇಷ್ಮಾಯೇಲನೇ ನಿನ್ನ ಆಶೀರ್ವಾದವನ್ನು ಹೊಂದಿಕೊಂಡು ಜೀವಿಸಬಾರದೇಕೆ?” ಎಂದು ಕೇಳಿದನು.
19 ಅದಕ್ಕೆ ದೇವರು ಅವನಿಗೆ, “ಇಲ್ಲ! ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನು ಹುಟ್ಟುವನು. ನೀನು ಅವನಿಗೆ, ‘ಇಸಾಕ’ ಎಂದು ಹೆಸರಿಡಬೇಕು. ನಾನು ಒಂದು ಒಡಂಬಡಿಕೆಯನ್ನು ಅವನೊಡನೆ ಮಾಡಿಕೊಳ್ಳುವೆನು. ಆ ಒಡಂಬಡಿಕೆಯು ಅವನ ಎಲ್ಲಾ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು.
20 “ನೀನು ಇಷ್ಮಾಯೇಲನ ಬಗ್ಗೆ ಮಾಡಿದ ಬಿನ್ನಹವನ್ನು ಕೇಳಿದ್ದೇನೆ. ನಾನು ಅವನನ್ನು ಆಶೀರ್ವದಿಸುವೆನು. ಅವನು ಅನೇಕ ಮಕ್ಕಳನ್ನು ಪಡೆದುಕೊಳ್ಳುವನು. ಹನ್ನೆರಡು ಮಹಾನಾಯಕರುಗಳಿಗೆ ಅವನು ತಂದೆಯಾಗುವನು. ಅವನ ಸಂತತಿಯು ಮಹಾಜನಾಂಗವಾಗುವುದು. 21 ಆದರೆ ನಾನು ನನ್ನ ಒಡಂಬಡಿಕೆಯನ್ನು ಇಸಾಕನೊಡನೆ ಮಾಡಿಕೊಳ್ಳುವೆನು. ಸಾರಳಲ್ಲಿ ಹುಟ್ಟುವ ಮಗನೇ ಇಸಾಕನು. ಮುಂದಿನ ವರ್ಷ ಇದೇ ಸಮಯದಲ್ಲಿ ಇಸಾಕನು ಹುಟ್ಟುವನು” ಎಂದು ಹೇಳಿದನು.
22 ದೇವರು ಅಬ್ರಹಾಮನೊಡನೆ ಮಾತಾಡುವುದನ್ನು ಮುಗಿಸಿದ ಮೇಲೆ ಮೇಲೋಕಕ್ಕೆ ಹೊರಟುಹೋದನು. 23 ಅದೇ ದಿನದಲ್ಲಿ ಅಬ್ರಹಾಮನು ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಸೇವಕರಿಗೆ ಹುಟ್ಟಿದ ಗಂಡುಮಕ್ಕಳಿಗೂ ಪರದೇಶಿಯರಿಂದ ಕೊಂಡುತಂದಿದ್ದ ಸೇವಕರಿಗೂ ದೇವರು ಹೇಳಿದಂತೆಯೇ ಸುನ್ನತಿ ಮಾಡಿಸಿದನು.
24 ಅಬ್ರಹಾಮನು ಸುನ್ನತಿ ಮಾಡಿಸಿಕೊಂಡಾಗ ತೊಂಭತ್ತೊಂಭತ್ತು ವರ್ಷದವನಾಗಿದ್ದನು. 25 ಇಷ್ಮಾಯೇಲನಿಗೆ ಸುನ್ನತಿಯಾದಾಗ ಅವನಿಗೆ ಹದಿಮೂರು ವರ್ಷವಾಗಿತ್ತು. 26 ಅಬ್ರಹಾಮನಿಗೂ ಅವನ ಮಗನಿಗೂ ಒಂದೇ ದಿನದಲ್ಲಿ ಸುನ್ನತಿಯಾಯಿತು. 27 ಅಬ್ರಹಾಮನ ಮನೆಯಲ್ಲಿದ್ದ ಎಲ್ಲಾ ಗಂಡಸರಿಗೆ ಅಂದರೆ ಅವನ ಮನೆಯಲ್ಲಿ ಹುಟ್ಟಿದ ಎಲ್ಲಾ ಸೇವಕರಿಗೆ ಮತ್ತು ಅವನು ಕ್ರಯಕ್ಕೆ ತೆಗೆದುಕೊಂಡಿದ್ದ ಎಲ್ಲಾ ಸೇವಕರಿಗೆ ಸುನ್ನತಿಯಾಯಿತು.
ಮೂವರು ಸಂದರ್ಶಕರು
18 ಅಬ್ರಹಾಮನು ಮಮ್ರೆಯಲ್ಲಿದ್ದ ಓಕ್ ಮರಗಳ ತೋಪಿನ ಸಮೀಪದಲ್ಲಿ ವಾಸಿಸುತ್ತಿದ್ದಾಗ ಯೆಹೋವನು ಅವನಿಗೆ ಕಾಣಿಸಿಕೊಂಡನು. ಅಂದು ಬಿಸಿಲಿನ ತಾಪದಿಂದಾಗಿ ಅಬ್ರಹಾಮನು ತನ್ನ ಗುಡಾರದ ಬಾಗಿಲ ಬಳಿ ಕುಳಿತಿದ್ದನು. 2 ಅಬ್ರಹಾಮನು ದೃಷ್ಟಿಸಿ ನೋಡಿದಾಗ ತನ್ನ ಮುಂದೆ ಮೂವರು ಪುರುಷರು ನಿಂತಿರುವುದನ್ನು ಕಂಡನು. ಕೂಡಲೇ ಅವರ ಬಳಿಗೆ ಓಡಿಹೋಗಿ ಅವರಿಗೆ ಸಾಷ್ಟಾಂಗನಮಸ್ಕಾರ ಮಾಡಿ ಅವರಿಗೆ, 3 “ಸ್ವಾಮಿಗಳೇ, ನಿಮ್ಮ ಸೇವಕನಾದ ನನ್ನ ಜೊತೆಯಲ್ಲಿ ಸ್ವಲ್ಪ ಸಮಯವಿರಿ. 4 ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಲು ನೀರನ್ನು ತಂದುಕೊಡುವೆನು. ನೀವು ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳಿರಿ. 5 ನಾನು ನಿಮಗೆ ಊಟವನ್ನು ತಂದುಕೊಡುವೆನು. ನೀವು ಬೇಕಾದಷ್ಟು ಊಟ ಮಾಡಿದ ನಂತರ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು” ಎಂದು ಹೇಳಿದನು.
ಆ ಮೂವರು ಪುರುಷರು, “ಸರಿ, ನೀನು ಹೇಳಿದಂತೆಯೇ ಮಾಡು” ಅಂದರು.
6 ಅಬ್ರಹಾಮನು ಗುಡಾರಕ್ಕೆ ಬೇಗನೆ ಹೋಗಿ ಸಾರಳಿಗೆ, “ಮೂರು ದೊಡ್ಡ ರೊಟ್ಟಿಗಳಿಗೆ ಬೇಕಾಗುವಷ್ಟು ಗೋಧಿ ಹಿಟ್ಟನ್ನು ಬೇಗನೆ ನಾದು” ಎಂದು ಹೇಳಿದನು. 7 ಬಳಿಕ ಅವನು ತನ್ನ ಪಶುಗಳಿದ್ದಲ್ಲಿಗೆ ಓಡಿಹೋಗಿ ಉತ್ತಮವಾದ ಎಳೆಕರುವನ್ನು ತೆಗೆದು ಸೇವಕನಿಗೆ ಕೊಟ್ಟು, “ಬೇಗನೇ ಕರುವನ್ನು ಕೊಯ್ದು, ಊಟಕ್ಕೆ ಸಿದ್ಧಮಾಡು” ಎಂದು ಹೇಳಿದನು. 8 ಅಬ್ರಹಾಮನು ಆ ಮೂವರಿಗೆ ಮಾಂಸದ ಅಡಿಗೆಯನ್ನು ಬಡಿಸಿದನು. ಇದಲ್ಲದೆ ಅವನು ಹಾಲನ್ನೂ ಬೆಣ್ಣೆಯನ್ನೂ ಕೊಟ್ಟನು. ಆ ಮೂವರು ಊಟ ಮಾಡುವಾಗ ಅಬ್ರಹಾಮನು ಅವರ ಸಮೀಪದಲ್ಲಿ ಮರದ ಕೆಳಗೆ ನಿಂತುಕೊಂಡಿದ್ದನು.
9 ಆ ಪುರುಷರು ಅಬ್ರಹಾಮನಿಗೆ, “ನಿನ್ನ ಹೆಂಡತಿಯಾದ ಸಾರಳು ಎಲ್ಲಿ?” ಎಂದು ಕೇಳಿದರು.
ಅಬ್ರಹಾಮನು ಅವರಿಗೆ, “ಆಕೆ ಗುಡಾರದಲ್ಲಿ ಇದ್ದಾಳೆ” ಅಂದನು.
10 ಆಗ ಯೆಹೋವನು ಅವನಿಗೆ, “ನಾನು ಮತ್ತೆ ವಸಂತಕಾಲದಲ್ಲಿ ಬರುತ್ತೇನೆ. ಆ ಸಮಯದಲ್ಲಿ ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನಿರುವನು” ಎಂದು ಹೇಳಿದನು.
ಸಾರಳು ಗುಡಾರದಲ್ಲಿದ್ದುಕೊಂಡು ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದಳು. ಅವಳಿಗೆ ಈ ಸಂಗತಿಯೂ ಕೇಳಿಸಿತು. 11 ಅಬ್ರಹಾಮನೂ ಮತ್ತು ಸಾರಳೂ ತುಂಬ ವೃದ್ಧರಾಗಿದ್ದರು. ಸಾರಳಿಗೂ ಮಕ್ಕಳು ಹುಟ್ಟುವ ಕಾಲ ಆಗಿಹೋಗಿತ್ತು. 12 ಆದ್ದರಿಂದ ಸಾರಳಿಗೆ ನಂಬಲಾಗಲಿಲ್ಲ. ಆಕೆ ತನ್ನೊಳಗೆ, “ಈಗಾಗಲೇ ನನಗೆ ವಯಸ್ಸಾಗಿದೆ; ನನ್ನ ಗಂಡನಿಗೂ ವಯಸ್ಸಾಗಿದೆ” ಅಂದುಕೊಂಡಳು.
13 ಆಗ ಯೆಹೋವನು ಅಬ್ರಹಾಮನಿಗೆ, “ನಾನು ಹೇಳುವುದನ್ನು ಸಾರಳು ನಂಬುತ್ತಿಲ್ಲ. ಆಕೆಯು ನಗುತ್ತಾ ತನ್ನೊಳಗೆ, ‘ನನಗೆ ಮಕ್ಕಳಾಗದಷ್ಟು ವಯಸ್ಸಾಗಿದೆ’ ಎಂದು ಹೇಳಿದ್ದೇಕೆ? 14 ಯೆಹೋವನಿಗೆ ಅಸಾಧ್ಯವಾದುದುಂಟೇ? ನಾನು ಮತ್ತೆ ವಸಂತಕಾಲದಲ್ಲಿ ಬರುವೆನು. ಆಗ ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನಿದ್ದೇ ಇರುವನು” ಅಂದನು.
15 ಆದರೆ ಸಾರಳು ಭಯಪಟ್ಟು, “ನಾನು ನಗಲಿಲ್ಲ” ಅಂದಳು.
ಅದಕ್ಕೆ ಯೆಹೋವನು, “ಇಲ್ಲ, ನೀನು ನಕ್ಕಿದ್ದು ನಿಜ!” ಅಂದನು.
16 ಆಮೇಲೆ ಆ ಪುರುಷರು ಹೋಗಲು ಎದ್ದುನಿಂತರು. ಅವರು ಸೊದೋಮಿನ ಕಡೆಗೆ ಕಣ್ಣೆತ್ತಿ ನೋಡಿ ಆ ಕಡೆಗೆ ನಡೆಯಲಾರಂಭಿಸಿದರು. ಅವರನ್ನು ಕಳುಹಿಸಿಕೊಡಲು ಅಬ್ರಹಾಮನು ಅವರ ಸಂಗಡ ಸ್ವಲ್ಪದೂರ ಹೋದನು.
ಅಬ್ರಹಾಮನು ದೇವರಿಗೆ ಮಾಡಿದ ಬಿನ್ನಹ
17 ಯೆಹೋವನು ತನ್ನೊಳಗೆ ಹೀಗೆಂದುಕೊಂಡನು: “ನಾನು ಈಗ ಮಾಡುವ ಕಾರ್ಯವನ್ನು ಅಬ್ರಹಾಮನಿಗೆ ತಿಳಿಸಲೇ? 18 ಅಬ್ರಹಾಮನಿಂದ ಬಲಿಷ್ಠವಾದ ಮಹಾಜನಾಂಗ ಹುಟ್ಟುವುದು; ಅವನ ಮೂಲಕ ಈ ಲೋಕದ ಜನರೆಲ್ಲರೂ ಆಶೀರ್ವಾದ ಹೊಂದುವರು. 19 ನಾನು ಅವನೊಡನೆ ವಿಶೇಷವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ. ಅವನು ತನ್ನ ಮಕ್ಕಳಿಗೂ ಸಂತತಿಯವರಿಗೂ ನನಗೆ ವಿಧೇಯರಾಗುವಂತೆ ಮತ್ತು ನ್ಯಾಯನೀತಿಗಳಿಂದ ಜೀವಿಸುವಂತೆ ಆಜ್ಞಾಪಿಸಲೆಂದು ನಾನು ಅವನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡೆನು. ಅವರು ಹೀಗೆ ಜೀವಿಸಿದರೆ, ನನ್ನ ವಾಗ್ದಾನಗಳನ್ನೆಲ್ಲಾ ನೆರವೇರಿಸುವೆನು.”
20 ಇದಲ್ಲದೆ ಯೆಹೋವನು, “ಸೊದೋಮ್ ಮತ್ತು ಗೊಮೋರಗಳ ಜನರು ಬಹಳ ಕೆಟ್ಟವರೆಂದು ಅನೇಕ ಸಲ ಕೇಳಿದ್ದೇನೆ. 21 ಆದ್ದರಿಂದ ನಾನು ಕೆಳಗಿಳಿದು ಅಲ್ಲಿಗೆ ಹೋಗಿ ನಾನು ಕೇಳಿದ್ದು ನಿಜವೇ ಎಂದು ಪರೀಕ್ಷಿಸುವೆನು” ಅಂದನು.
22 ಆದ್ದರಿಂದ ಆ ಪುರುಷರು ಸೊದೋಮಿನ ಕಡೆಗೆ ನಡೆಯತೊಡಗಿದರು. ಆದರೆ ಅಬ್ರಹಾಮನು ಯೆಹೋವನ ಎದುರಿನಲ್ಲಿ ನಿಂತುಕೊಂಡಿದ್ದನು. 23 ಅಬ್ರಹಾಮನು ಯೆಹೋವನ ಸಮೀಪಕ್ಕೆ ಬಂದು, “ಯೆಹೋವನೇ, ನೀನು ಕೆಟ್ಟವರನ್ನು ನಾಶಮಾಡುವಾಗ ನೀತಿವಂತರನ್ನು ಸಹ ನಾಶಮಾಡಬೇಕೆಂದಿರುವೆಯೋ? 24 ಒಂದುವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ ಏನು ಮಾಡುವೆ? ನೀನು ಆ ಪಟ್ಟಣವನ್ನು ನಾಶಮಾಡುವಿಯೋ? ಖಂಡಿತವಾಗಿಯೂ ಇಲ್ಲ! ಅಲ್ಲಿ ಜೀವಿಸುತ್ತಿರುವ ಐವತ್ತು ಮಂದಿ ನೀತಿವಂತರಿಗಾಗಿ ನೀನು ಆ ಪಟ್ಟಣವನ್ನು ಉಳಿಸಿ ಕಾಪಾಡುವೆ. 25 ಖಂಡಿತವಾಗಿಯೂ ನೀನು ಆ ಪಟ್ಟಣವನ್ನು ನಾಶಮಾಡುವುದಿಲ್ಲ. ಕೆಟ್ಟವರನ್ನು ಕೊಲ್ಲುವುದಕ್ಕಾಗಿ ನೀನು ಐವತ್ತು ಮಂದಿ ನೀತಿವಂತರನ್ನು ಕೊಲ್ಲುವುದಿಲ್ಲ. ಒಂದುವೇಳೆ ನೀನು ಕೊಂದರೆ, ಒಳ್ಳೆಯವರೂ ಕೆಟ್ಟವರೂ ಸರಿಸಮಾನರಾಗುವರು. ಅವರಿಬ್ಬರೂ ದಂಡನೆಗೆ ಗುರಿಯಾಗುವರು. ನೀನು ಲೋಕದವರಿಗೆಲ್ಲ ನ್ಯಾಯಾಧಿಪತಿ. ನೀನು ನ್ಯಾಯವಾದದ್ದನ್ನೇ ಮಾಡುವೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದನು.
26 ಆಮೇಲೆ ಯೆಹೋವನು, “ನಾನು ಸೊದೋಮಿನಲ್ಲಿ ಐವತ್ತು ಮಂದಿ ನೀತಿವಂತರನ್ನು ಕಂಡರೆ, ನಾನು ಇಡೀ ಪಟ್ಟಣವನ್ನೇ ಉಳಿಸಿ ಕಾಪಾಡುವೆನು” ಎಂದನು.
27 ಆಗ ಅಬ್ರಹಾಮನು ಯೆಹೋವನಿಗೆ, “ನಿನಗೆ ನನ್ನನ್ನು ಹೋಲಿಸಿಕೊಂಡರೆ, ನಾನು ಕೇವಲ ಧೂಳು ಮತ್ತು ಬೂದಿ. ಆದರೆ ಈ ಪ್ರಶ್ನೆಯನ್ನೂ ಕೇಳಲು ನನಗೆ ಅವಕಾಶಕೊಡು. 28 ಒಂದುವೇಳೆ ಐದು ಮಂದಿ ಕಡಿಮೆಯಾಗಿದ್ದು ನಲವತ್ತೈದು ಮಂದಿ ಮಾತ್ರ ನೀತಿವಂತರಿದ್ದರೆ ಆ ಪಟ್ಟಣವನ್ನು ನಾಶಮಾಡುವಿಯಾ?” ಎಂದು ಕೇಳಿದನು.
ಅದಕ್ಕೆ ಯೆಹೋವನು ಅವನಿಗೆ, “ನಾನು ನಲವತ್ತೈದು ಮಂದಿ ನೀತಿವಂತರನ್ನು ಕಂಡರೂ ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು.
29 ಮತ್ತೆ ಅಬ್ರಹಾಮನು ದೇವರಿಗೆ, “ಕೇವಲ ನಲವತ್ತು ಮಂದಿ ನೀತಿವಂತರನ್ನು ಕಂಡರೆ, ನೀನು ಆ ಪಟ್ಟಣವನ್ನು ನಾಶಮಾಡುವೆಯಾ?” ಎಂದು ಕೇಳಿದನು.
ಯೆಹೋವನು ಅವನಿಗೆ, “ನಲವತ್ತು ಮಂದಿ ನೀತಿವಂತರನ್ನು ಕಂಡರೂ ನಾನು ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು.
30 ಆಮೇಲೆ ಅಬ್ರಹಾಮನು, “ಯೆಹೋವನೇ, ನನ್ನ ಮೇಲೆ ಸಿಟ್ಟುಗೊಳ್ಳಬೇಡ. ಈ ಪ್ರಶ್ನೆಯನ್ನೂ ಕೇಳುವೆ: ಆ ಪಟ್ಟಣದಲ್ಲಿ ಕೇವಲ ಮೂವತ್ತು ಮಂದಿ ನೀತಿವಂತರಿದ್ದರೆ ನೀನು ಆ ಪಟ್ಟಣವನ್ನು ನಾಶಮಾಡುವೆಯಾ?” ಎಂದು ಕೇಳಿದನು.
ಯೆಹೋವನು ಅವನಿಗೆ, “ಅಲ್ಲಿ ಮೂವತ್ತು ಮಂದಿ ನೀತಿವಂತರಿದ್ದರೂ ನಾನು ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಅಂದನು.
31 ಆಮೇಲೆ ಅಬ್ರಹಾಮನು, “ನನ್ನ ಯೆಹೋವನು ಏನೂ ತಿಳಿದುಕೊಳ್ಳದಿರಲಿ. ನಾನು ಮತ್ತೊಂದು ಪ್ರಶ್ನೆ ಕೇಳುವೆ. ಅಲ್ಲಿ ಇಪ್ಪತ್ತು ಮಂದಿ ನೀತಿವಂತರಿದ್ದರೆ ಏನು ಮಾಡುವೆ?” ಎಂದು ಕೇಳಿದನು.
ಯೆಹೋವನು ಅವನಿಗೆ, “ಅಲ್ಲಿ ಇಪ್ಪತ್ತು ಮಂದಿ ನೀತಿವಂತರನ್ನು ಕಂಡರೆ ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು.
32 ಆಮೇಲೆ ಅಬ್ರಹಾಮನು, “ಯೆಹೋವನೇ, ದಯಮಾಡಿ ನನ್ನ ಮೇಲೆ ಸಿಟ್ಟುಗೊಳ್ಳಬೇಡ. ಇದೊಂದು ಸಲ ಮಾತ್ರ ಪ್ರಶ್ನೆ ಕೇಳುವೆ. ಹತ್ತು ಮಂದಿ ನೀತಿವಂತರನ್ನು ಕಂಡರೆ ಏನು ಮಾಡುವೆ?” ಎಂದು ಕೇಳಿದನು.
ಯೆಹೋವನು ಅವನಿಗೆ, “ನಾನು ಆ ಪಟ್ಟಣದಲ್ಲಿ ಹತ್ತು ಮಂದಿ ನೀತಿವಂತರನ್ನು ಕಂಡರೂ, ಅದನ್ನು ನಾಶಮಾಡುವುದಿಲ್ಲ” ಅಂದನು.
33 ಯೆಹೋವನು ಅಬ್ರಹಾಮನೊಂದಿಗೆ ಮಾತಾಡುವುದನ್ನು ಮುಗಿಸಿದ ಮೇಲೆ ಅಲ್ಲಿಂದ ಹೊರಟುಹೋದನು. ಅಬ್ರಹಾಮನು ಸಹ ತನ್ನ ಮನೆಗೆ ಹಿಂತಿರುಗಿದನು.
Kannada Holy Bible: Easy-to-Read Version. All rights reserved. © 1997 Bible League International