Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 12-15

ದೇವರು ಅಬ್ರಾಮನನ್ನು ಕರೆದದ್ದು

12 ಯೆಹೋವನು ಅಬ್ರಾಮನಿಗೆ,

“ನಿನ್ನ ದೇಶವನ್ನೂ ನಿನ್ನ ಜನರನ್ನೂ ಬಿಟ್ಟು ಹೊರಡು.
ನಿನ್ನ ತಂದೆಯ ಕುಟುಂಬವನ್ನು ಬಿಟ್ಟು
    ನಾನು ತೋರಿಸುವ ದೇಶಕ್ಕೆ ಹೋಗು.
ನಾನು ನಿನ್ನನ್ನು ಆಶೀರ್ವದಿಸುವೆನು;
    ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡಿ
    ನಿನ್ನ ಹೆಸರನ್ನು ಪ್ರಖ್ಯಾತಿಪಡಿಸುವೆನು;
ನೀನು ಆಶೀರ್ವಾದದಾಯಕನಾಗುವಂತೆ[a] ಮಾಡುವೆನು.
ನಿನಗೆ ಒಳ್ಳೆಯದನ್ನು ಮಾಡುವವರನ್ನು ಆಶೀರ್ವದಿಸುವೆನು;
    ನಿನಗೆ ಕೇಡುಮಾಡುವವರನ್ನು ಶಿಕ್ಷಿಸುವೆನು.
ನಿನ್ನ ನಿಮಿತ್ತವಾಗಿ ಲೋಕದವರೆಲ್ಲರೂ
    ಆಶೀರ್ವಾದ ಹೊಂದುವರು” ಎಂದು ಹೇಳಿದನು.

ಕಾನಾನಿಗೆ ಅಬ್ರಾಮನ ಪ್ರಯಾಣ

ಆದ್ದರಿಂದ ಅಬ್ರಾಮನು ಯೆಹೋವನಿಗೆ ವಿಧೇಯನಾದನು. ಅವನು ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟನು. ಅವನೊಡನೆ ಲೋಟನು ಸಹ ಹೋದನು. ಆಗ ಅಬ್ರಾಮನಿಗೆ ಎಪ್ಪತ್ತೈದು ವರ್ಷ ವಯಸ್ಸಾಗಿತ್ತು. ಅಬ್ರಾಮನು ಹಾರಾನ್ ಪಟ್ಟಣವನ್ನು ಬಿಟ್ಟು ಒಬ್ಬಂಟಿಗನಾಗಿ ಹೋಗಲಿಲ್ಲ. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ತಮ್ಮನ ಮಗನಾದ ಲೋಟನನ್ನೂ ತನ್ನೊಂದಿಗೆ ಕರೆದುಕೊಂಡು ಹೋದನು. ಹಾರಾನ್ ಪಟ್ಟಣದಲ್ಲಿ ತಮಗಿದ್ದ ಸ್ವತ್ತುಗಳನ್ನೆಲ್ಲ ಅವರು ತೆಗೆದುಕೊಂಡು ಹೋದರು. ಅಬ್ರಾಮನು ಹಾರಾನ್ ಪಟ್ಟಣದಲ್ಲಿ ಹೊಂದಿದ್ದ ಸೇವಕರು ಸಹ ಅವನೊಡನೆ ಹೋದರು. ಅಬ್ರಾಮನು ಮತ್ತು ಅವನ ಸಂಗಡಿಗರು ಹಾರಾನ್ ಪಟ್ಟಣವನ್ನು ಬಿಟ್ಟು ಕಾನಾನ್ ದೇಶಕ್ಕೆ ಪ್ರಯಾಣಮಾಡಿದರು. ಅಬ್ರಾಮನು ಕಾನಾನ್ ದೇಶದಲ್ಲಿ ಪ್ರಯಾಣವನ್ನು ಮುಂದುವರಿಸಿದನು. ಅವನು ಶೆಕೆಮ್ ನಗರವನ್ನು ತಲುಪಿ, ಅಲ್ಲಿಂದ ಮೋರೆ ಎಂಬ ದೊಡ್ಡ ಓಕ್ ಮರವಿದ್ದ ಸ್ಥಳಕ್ಕೆ ಬಂದನು. ಆ ಕಾಲದಲ್ಲಿ ಕಾನಾನ್ಯರು ಆ ದೇಶದಲ್ಲಿ ವಾಸವಾಗಿದ್ದರು.

ಯೆಹೋವನು ಅಬ್ರಾಮನಿಗೆ ಕಾಣಿಸಿಕೊಂಡು, “ನಿನ್ನ ಸಂತತಿಯವರಿಗೆ ಈ ದೇಶವನ್ನು ಕೊಡುವೆನು” ಎಂದು ಹೇಳಿದನು.

ಆ ಸ್ಥಳದಲ್ಲಿ ಯೆಹೋವನು ಅಬ್ರಾಮನಿಗೆ ಕಾಣಿಸಿಕೊಂಡನು. ಆದ್ದರಿಂದ ಅಬ್ರಾಮನು ಯೆಹೋವನನ್ನು ಆರಾಧಿಸುವುದಕ್ಕಾಗಿ ಅಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿದನು. ಆಮೇಲೆ ಅಬ್ರಾಮನು ಆ ಸ್ಥಳದಿಂದ ಹೊರಟು ಬೇತೇಲಿಗೆ ಪೂರ್ವದಲ್ಲಿರುವ ಗುಡ್ಡಗಳ ಬಳಿಗೆ ಪ್ರಯಾಣ ಮಾಡಿದನು. ಅಲ್ಲಿ ಅಬ್ರಾಮನು ತನ್ನ ಗುಡಾರಗಳನ್ನು ಹಾಕಿದನು. ಪಶ್ಚಿಮಕ್ಕೆ ಬೇತೇಲ್ ಪಟ್ಟಣವಿತ್ತು, ಪೂರ್ವಕ್ಕೆ ಆಯಿ ಪಟ್ಟಣವಿತ್ತು. ಆ ಸ್ಥಳದಲ್ಲಿ ಅವನು ಯೆಹೋವನಿಗೋಸ್ಕರ ಒಂದು ಯಜ್ಞವೇದಿಕೆಯನ್ನು ಕಟ್ಟಿ ಅಲ್ಲಿ ಅವನು ಯೆಹೋವನನ್ನು ಆರಾಧಿಸಿದನು. ತರುವಾಯ ಅವನು ಮತ್ತೆ ಪ್ರಯಾಣವನ್ನು ಮುಂದುವರಿಸಿ ನೆಗೆವ್ ಸ್ಥಳದ ಕಡೆಗೆ ಹೋದನು.

ಈಜಿಪ್ಟಿನಲ್ಲಿ ಅಬ್ರಾಮ

10 ಈ ಕಾಲದಲ್ಲಿ ಭೂಮಿಯು ಒಣಗಿಹೋಗಿತ್ತು; ಮಳೆ ಇರಲಿಲ್ಲ. ಅಲ್ಲಿ ಆಹಾರವನ್ನು ಬೆಳೆಯಲು ಸಾಧ್ಯವಿರಲಿಲ್ಲ. ಆದ್ದರಿಂದ ಅಬ್ರಾಮನು ವಾಸಿಸುವುದಕ್ಕಾಗಿ ಈಜಿಪ್ಟಿಗೆ ಹೋದನು. 11 ತನ್ನ ಹೆಂಡತಿ ಸಾರಯಳು ರೂಪವತಿಯಾಗಿರುವುದು ಅಬ್ರಾಮನಿಗೆ ತಿಳಿದಿತ್ತು. ಆದ್ದರಿಂದ ಈಜಿಪ್ಟಿಗೆ ಹೋಗುವ ಮೊದಲೇ, ಅಬ್ರಾಮನು ಸಾರಯಳಿಗೆ, “ನೀನು ರೂಪವತಿಯೆಂದು ನನಗೆ ಗೊತ್ತಿದೆ. 12 ಈಜಿಪ್ಟಿನ ಗಂಡಸರು ನಿನ್ನನ್ನು ನೋಡಿ, ‘ಈಕೆ ಇವನ ಹೆಂಡತಿ’ ಎಂದು ತಿಳಿದು ನಿನ್ನನ್ನು ಪಡೆದುಕೊಳ್ಳುವುದಕ್ಕಾಗಿ ನನ್ನನ್ನು ಕೊಂದು ನಿನ್ನನ್ನು ಜೀವಂತವಾಗಿ ಉಳಿಸುವರು. 13 ಆದ್ದರಿಂದ ನೀನು ನನಗೆ ತಂಗಿಯಾಗಬೇಕೆಂದು ಜನರಿಗೆ ಹೇಳು. ಆಗ ಅವರು ನನ್ನನ್ನು ನಿನ್ನ ಸಹೋದರನೆಂದು ಭಾವಿಸಿ ನನ್ನನ್ನು ಕೊಲ್ಲದೆ ನನಗೆ ದಯೆತೋರುವರು. ಹೀಗೆ ನೀನು ನನ್ನ ಪ್ರಾಣ ಉಳಿಸುವೆ” ಎಂದು ಹೇಳಿದನು.

14 ಅಂತೆಯೇ ಅಬ್ರಾಮನು ಈಜಿಪ್ಟಿಗೆ ಹೋದನು. ಈಜಿಪ್ಟಿನ ಗಂಡಸರು ಸಾರಯಳನ್ನು ಕಂಡು ಈಕೆ ತುಂಬ ರೂಪವತಿ ಎಂದರು. 15 ಈಜಿಪ್ಟಿನ ಕೆಲವು ನಾಯಕರು ಸಹ ಆಕೆಯನ್ನು ಕಂಡರು. ಅವರು ಫರೋಹನ ಬಳಿಗೆ ಹೋಗಿ ಆಕೆಯ ಅಮೋಘ ಸೌಂದರ್ಯವನ್ನು ತಿಳಿಸಿದರು. ಬಳಿಕ ಆ ನಾಯಕರು ಸಾರಯಳನ್ನು ಫರೋಹನ ಬಳಿಗೆ ಕರೆದೊಯ್ದರು. 16 ಅಬ್ರಾಮನು ಸಾರಯಳ ಸಹೋದರನೆಂದು ಭಾವಿಸಿ ಫರೋಹನು ಅಬ್ರಾಮನಿಗೆ ದಯೆತೋರಿದನು. ಫರೋಹನು ಅಬ್ರಾಮನಿಗೆ ದನಕುರಿಗಳನ್ನೂ ಕತ್ತೆಗಳನ್ನೂ ಕೊಟ್ಟನು. ಅಲ್ಲದೆ ಅಬ್ರಾಮನಿಗೆ ದಾಸದಾಸಿಯರನ್ನೂ ಒಂಟೆಗಳನ್ನೂ ಕೊಟ್ಟನು.

17 ಫರೋಹನು ಅಬ್ರಾಮನ ಹೆಂಡತಿಯನ್ನು ತೆಗೆದುಕೊಂಡದ್ದರಿಂದ ಯೆಹೋವನು ಫರೋಹನಿಗೂ ಅವನ ಮನೆಯಲ್ಲಿದ್ದವರಿಗೂ ಭಯಂಕರವಾದ ರೋಗಗಳನ್ನು ಬರಮಾಡಿದನು. 18 ಆಗ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ನನಗೆ ತುಂಬ ಕೆಟ್ಟದ್ದನ್ನು ಮಾಡಿರುವೆ; ಸಾರಯಳು ನಿನಗೆ ಹೆಂಡತಿಯಾಗಬೇಕೆಂದು ಯಾಕೆ ತಿಳಿಸಲಿಲ್ಲ? 19 ‘ಈಕೆ ನನಗೆ ತಂಗಿಯಾಗಬೇಕು’ ಎಂದು ಯಾಕೆ ಹೇಳಿದೆ? ನೀನು ಹೀಗೆ ಹೇಳಿದ್ದರಿಂದ ನಾನು ಆಕೆಯನ್ನು ನನ್ನ ಹೆಂಡತಿಯಾಗಲಿಕ್ಕೆ ತೆಗೆದುಕೊಂಡೆ. ಆದರೆ ಈಗ ನಾನು ನಿನ್ನ ಹೆಂಡತಿಯನ್ನು ಮತ್ತೆ ನಿನಗೇ ಕೊಡುತ್ತೇನೆ. ನೀನು ಆಕೆಯನ್ನು ನಿನ್ನೊಂದಿಗೆ ಕರೆದುಕೊಂಡು ಹೊರಟುಹೋಗು” ಎಂದು ಹೇಳಿದನು. 20 ಆಮೇಲೆ ಫರೋಹನು ತನ್ನ ಜನರಿಗೆ ಅಬ್ರಾಮನನ್ನು ಈಜಿಪ್ಟಿನಿಂದ ಕಳುಹಿಸಿಕೊಡಬೇಕೆಂದು ಆಜ್ಞಾಪಿಸಿದನು. ಆದ್ದರಿಂದ ಅಬ್ರಾಮನು ಮತ್ತು ಅವನ ಹೆಂಡತಿ ಆ ಸ್ಥಳದಿಂದ ಹೊರಟುಹೋದರು; ಅವರು ತಮ್ಮೊಡನೆ ಇದ್ದವುಗಳನ್ನೆಲ್ಲ ತೆಗೆದುಕೊಂಡು ಹೋದರು.

ಕಾನಾನಿಗೆ ಅಬ್ರಾಮನ ಮರುಪ್ರಯಾಣ

13 ಅಬ್ರಾಮನು ಈಜಿಪ್ಟಿನಿಂದ ಹೊರಟನು. ಅಬ್ರಾಮನು ತನ್ನ ಹೆಂಡತಿಯನ್ನು ಕರೆದುಕೊಂಡು ತನ್ನವುಗಳನ್ನೆಲ್ಲಾ ತೆಗೆದುಕೊಂಡು ನೆಗೆವ್ ಮೂಲಕ ಪ್ರಯಾಣ ಮಾಡಿದನು. ಲೋಟನು ಸಹ ಅವರೊಡನೆ ಇದ್ದನು. ಆಗ ಅಬ್ರಾಮನು ತುಂಬ ಐಶ್ವರ್ಯವಂತನಾಗಿದ್ದನು. ಅವನಿಗೆ ಅನೇಕ ಪಶುಗಳಿದ್ದವು; ಬಹಳ ಬೆಳ್ಳಿಬಂಗಾರಗಳಿದ್ದವು.

ಅಬ್ರಾಮನು ತನ್ನ ಪ್ರಯಾಣವನ್ನು ಮುಂದುವರಿಸಿ ನೆಗೆವ್‌ವನ್ನು ಬಿಟ್ಟು ಬೇತೇಲಿಗೆ ಹಿಂತಿರುಗಿಹೋದನು. ಅವನು ಬೇತೇಲ್‌ ನಗರಕ್ಕೂ ಆಯಿ ನಗರಕ್ಕೂ ಮಧ್ಯದಲ್ಲಿರುವ ಸ್ಥಳಕ್ಕೆ ಹೋದನು. ಅಬ್ರಾಮನು ಮತ್ತು ಅವನ ಕುಟುಂಬದವರು ಇಳಿದುಕೊಂಡಿದ್ದ ಸ್ಥಳವೇ ಇದು. ಅಬ್ರಾಮನು ಯಜ್ಞವೇದಿಕೆಯನ್ನು ಕಟ್ಟಿದ್ದು ಈ ಸ್ಥಳದಲ್ಲೇ. ಅಬ್ರಾಮನು ಯೆಹೋವನನ್ನು ಆರಾಧಿಸಿದ್ದು ಈ ಸ್ಥಳದಲ್ಲೇ.

ಅಬ್ರಾಮನು ಮತ್ತು ಲೋಟನು ಅಗಲಿದ್ದು

ಈ ಕಾಲದಲ್ಲಿ ಲೋಟನು ಸಹ ಅಬ್ರಾಮನೊಡನೆ ಪ್ರಯಾಣಮಾಡುತ್ತಿದ್ದನು. ಲೋಟನಿಗೂ ಸಹ ಕುರಿಮಂದೆಗಳೂ ಪಶುಹಿಂಡುಗಳೂ ಗುಡಾರಗಳೂ ಇದ್ದವು. ಅಬ್ರಾಮನಿಗೂ ಲೋಟನಿಗೂ ಬಹಳ ಪಶುಗಳಿದ್ದುದರಿಂದ ಅವುಗಳ ಪೋಷಣೆಗೆ ಆ ಸ್ಥಳವು ಸಾಕಾಗಲಿಲ್ಲ. ಅಬ್ರಾಮನ ಮಂದೆಕಾಯುವವರು ಮತ್ತು ಲೋಟನ ಮಂದೆಕಾಯುವವರು ವಾದ ಮಾಡಲಾರಂಭಿಸಿದರು. ಆ ಕಾಲದಲ್ಲಿ ಕಾನಾನ್ಯರು ಮತ್ತು ಪೆರಿಜೀಯರು ಸಹ ಆ ಸ್ಥಳದಲ್ಲಿ ವಾಸವಾಗಿದ್ದರು.

ಆದ್ದರಿಂದ ಅಬ್ರಾಮನು ಲೋಟನಿಗೆ, “ನಿನಗೂ ನನಗೂ ಯಾವ ವಾಗ್ವಾದವೂ ಇರಬಾರದು. ನಿನ್ನ ಜನರೂ ನನ್ನ ಜನರೂ ವಾಗ್ವಾದ ಮಾಡಬಾರದು; ನಾವೆಲ್ಲರೂ ಸಹೋದರರಾಗಿದ್ದೇವೆ. ನಾವು ಪ್ರತ್ಯೇಕವಾಗೋಣ. ನಿನಗೆ ಬೇಕಾದ ಸ್ಥಳವನ್ನು ನೀನು ಆರಿಸಿಕೊ. ನೀನು ಎಡಗಡೆಗೆ ಹೋಗುವುದಾದರೆ, ನಾನು ಬಲಗಡೆಗೆ ಹೋಗುತ್ತೇನೆ. ನೀನು ಬಲಗಡೆಗೆ ಹೋಗುವುದಾದರೆ, ನಾನು ಎಡಗಡೆಗೆ ಹೋಗುತ್ತೇನೆ” ಎಂದು ಹೇಳಿದನು.

10 ಲೋಟನು ಕಣ್ಣೆತ್ತಿ ನೋಡಿದಾಗ ಜೋರ್ಡನ್ ಕಣಿವೆಯೆಲ್ಲಾ ಕಾಣಿಸಿತು. ಅಲ್ಲಿ ಬೇಕಾದಷ್ಟು ನೀರಿರುವುದನ್ನು ಲೋಟನು ನೋಡಿದನು. (ಆ ಕಾಲದಲ್ಲಿ ಸೊದೋಮ್ ಮತ್ತು ಗೊಮೋರ ಪಟ್ಟಣಗಳು ಯೆಹೋವನಿಂದ ನಾಶವಾಗಿರಲಿಲ್ಲ. ಆ ಕಾಲದಲ್ಲಿ ಜೋರ್ಡನ್ ಕಣಿವೆಯು ಚೋಗರ್ ತನಕ ಯೆಹೋವನ ತೋಟದಂತಿತ್ತು. ಅದು ಈಜಿಪ್ಟಿನ ಭೂಮಿಯಂತೆ ಫಲವತ್ತಾಗಿತ್ತು.) 11 ಆದ್ದರಿಂದ ಲೋಟನು ಜೋರ್ಡನ್ ಕಣಿವೆಯನ್ನೆಲ್ಲಾ ತನಗಾಗಿ ಆರಿಸಿಕೊಂಡನು. ಅವರಿಬ್ಬರೂ ಪ್ರತ್ಯೇಕವಾದರು. ಲೋಟನು ಪೂರ್ವದ ಕಡೆಗೆ ಪ್ರಯಾಣ ಮಾಡಿದನು. 12 ಅಬ್ರಾಮನು ಕಾನಾನ್ ಪ್ರದೇಶದಲ್ಲಿ ಉಳಿದುಕೊಂಡನು. ಲೋಟನು ಕಣಿವೆಯಲ್ಲಿದ್ದ ಪಟ್ಟಣಗಳ ಮಧ್ಯದಲ್ಲಿ ವಾಸಿಸಿದನು; ದಕ್ಷಿಣದಲ್ಲಿದ್ದ ಸೊದೋಮಿನವರೆಗೂ ಗುಡಾರಗಳನ್ನು ಹಾಕಿಕೊಂಡು ಪಾಳೆಯಮಾಡಿಕೊಂಡನು. 13 ಸೊದೋಮಿನ ಜನರು ತುಂಬ ಕೆಟ್ಟವರಾಗಿದ್ದರು. ಅವರು ಯಾವಾಗಲೂ ಯೆಹೋವನಿಗೆ ವಿರೋಧವಾಗಿ ಪಾಪಮಾಡುತ್ತಿದ್ದರು.

14 ಲೋಟನು ಹೊರಟುಹೋದ ಮೇಲೆ ಯೆಹೋವನು ಅಬ್ರಾಮನಿಗೆ, “ಸುತ್ತಲೂ ನೋಡು, ಉತ್ತರದಕ್ಷಿಣಗಳ ಕಡೆಗೂ ಪೂರ್ವಪಶ್ಚಿಮಗಳ ಕಡೆಗೂ ನೋಡು. 15 ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ನಂತರ ಜೀವಿಸುವ ನಿನ್ನ ಸಂತತಿಯವರಿಗೂ ಕೊಡುತ್ತೇನೆ. ಇದು ಎಂದೆಂದಿಗೂ ನಿನ್ನದಾಗಿರುವುದು. 16 ನಾನು ನಿನ್ನ ಜನರನ್ನು ಭೂಮಿಯ ಮೇಲಿರುವ ಧೂಳಿನಷ್ಟು ಹೆಚ್ಚಿಸುವೆನು. ಯಾವನಾದರೂ ಭೂಮಿಯ ಮೇಲಿರುವ ಧೂಳಿನ ಕಣಗಳನ್ನು ಲೆಕ್ಕಮಾಡಬಹುದಾದರೆ ನಿನ್ನ ಸಂತತಿಯವರ ಸಂಖ್ಯೆಯು ಅದರಷ್ಟೇ ಇರುವುದು. 17 ಆದ್ದರಿಂದ ಹೋಗು, ನಿನ್ನ ಭೂಮಿಯಲ್ಲೆಲ್ಲಾ ತಿರುಗಾಡು. ಅದರ ಉದ್ದಗಲಗಳಲ್ಲೆಲ್ಲಾ ತಿರುಗಾಡು; ಯಾಕೆಂದರೆ ನಾನು ಅದನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.

18 ಆದ್ದರಿಂದ ಅಬ್ರಾಮನು ತನ್ನ ಗುಡಾರಗಳನ್ನು ಕೀಳಿಸಿ, ದೊಡ್ಡ ಮರಗಳಿರುವ ಮಮ್ರೆಯ ಸಮೀಪಕ್ಕೆ ಹೋಗಿ ವಾಸಿಸತೊಡಗಿದನು. ಇದು ಹೆಬ್ರೋನ್ ನಗರಕ್ಕೆ ಸಮೀಪದಲ್ಲಿತ್ತು. ಆ ಸ್ಥಳದಲ್ಲಿ ಅಬ್ರಾಮನು ಯೆಹೋವನನ್ನು ಆರಾಧಿಸುವುದಕ್ಕಾಗಿ ಯಜ್ಞವೇದಿಕೆಯನ್ನು ಕಟ್ಟಿದನು.

ಲೋಟನ ಸೆರೆ

14 ಆ ದಿನಗಳಲ್ಲಿ ಅಮ್ರಾಫೆಲನು ಶಿನಾರಿನ ರಾಜನಾಗಿದ್ದನು; ಅರಿಯೋಕನು ಎಲ್ಲಸಾರಿನ ರಾಜನಾಗಿದ್ದನು; ಕೆದೊರ್ಲಗೋಮರನು ಏಲಾಮಿನ ರಾಜನಾಗಿದ್ದನು; ತಿದ್ಗಾಲನು ಗೋಯಿಮದ ರಾಜನಾಗಿದ್ದನು. ಈ ರಾಜರುಗಳೆಲ್ಲ ಸೊದೋಮಿನ ರಾಜನಾದ ಬೆರಗನಿಗೂ ಗೊಮೋರದ ರಾಜನಾದ ಬಿರ್ಶಗನಿಗೂ ಅದ್ಮಾಹದ ರಾಜನಾದ ಶಿನಾಬನಿಗೂ ಚೆಬೋಯೀಮಿನ ರಾಜನಾದ ಶೆಮೇಬರನಿಗೂ ಚೋಗರ್ ಎಂಬ ಬೇಲಗಿನ ರಾಜನಿಗೂ ವಿರುದ್ಧವಾಗಿ ಯುದ್ಧಮಾಡಿದರು.

ಈ ರಾಜರುಗಳೆಲ್ಲ ಸಿದ್ದೀಮ್ ಕಣಿವೆಯಲ್ಲಿ ತಮ್ಮ ಸೈನ್ಯಗಳನ್ನು ಒಟ್ಟಿಗೆ ಸೇರಿಸಿದರು. (ಸಿದ್ದೀಮ್ ಕಣಿವೆಯು ಈಗ ಉಪ್ಪುಸಮುದ್ರವಾಗಿದೆ). ಈ ರಾಜರುಗಳು ಕೆದೊರ್ಲಗೋಮರನ ಅಧೀನದಲ್ಲಿ ಹನ್ನೆರಡು ವರ್ಷವಿದ್ದರು. ಆದರೆ ಹದಿಮೂರನೆಯ ವರ್ಷದಲ್ಲಿ, ಅವರೆಲ್ಲರೂ ಅವನಿಗೆ ವಿರೋಧವಾಗಿ ದಂಗೆ ಎದ್ದರು. ಆದ್ದರಿಂದ ಹದಿನಾಲ್ಕನೆಯ ವರ್ಷದಲ್ಲಿ, ರಾಜನಾದ ಕೆದೊರ್ಲಗೋಮರನು ಮತ್ತು ಅವನೊಡನಿದ್ದ ರಾಜರುಗಳು ಅವರ ವಿರೋಧವಾಗಿ ಯುದ್ಧಮಾಡಲು ಬಂದರು. ಕೆದೊರ್ಲಗೋಮರನು ಮತ್ತು ಅವನೊಡನಿದ್ದ ರಾಜರುಗಳು ಅಷ್ಟರೋತ್-ಕರ್ನಯಿಮಿನಲ್ಲಿದ್ದ ರೆಫಾಯರನ್ನೂ ಹಾಮಿನಲ್ಲಿದ್ದ ಜೂಜ್ಯರನ್ನೂ ಶಾವೆಕೆರ್ಯಾತಯಿಮಿನಲ್ಲಿದ್ದ ಏಮಿಯರನ್ನೂ ಸೋಲಿಸಿದರು. ಇದಲ್ಲದೆ ಅವರು ಹೋರಿಯರನ್ನು ಬೆಟ್ಟದ ಸೀಮೆಯಿಂದ ಮರುಭೂಮಿಯ ಸಮೀಪದಲ್ಲಿರುವ ಎಲ್ಪಾರಾನಿನವರೆಗೂ ಹಿಂದಟ್ಟಿದರು. ಆ ಬಳಿಕ ರಾಜ ಕೆದೊರ್ಲಗೋಮರನು ಉತ್ತರದ ಕಡೆಗೆ ತಿರುಗಿ ಕಾದೇಶ್ ಎನ್ನುವ ಎನ್ಮಿಷ್ಪಾಟಿಗೆ ಬಂದು ಎಲ್ಲಾ ಅಮಾಲೇಕ್ಯರನ್ನು ಸೋಲಿಸಿದನು. ಇದಲ್ಲದೆ ಅವನು ಹಚಚೋನ್‌ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನು ಸೋಲಿಸಿದನು.

ಆ ಕಾಲದಲ್ಲಿ, ಸೊದೋಮಿನ ರಾಜನೂ ಗೊಮೋರದ ರಾಜನೂ ಅದ್ಮಾಹದ ರಾಜನೂ ಚೆಬೋಯೀಮಿನ ರಾಜನೂ ಬೇಲಗದ, ಅಂದರೆ ಚೋಗರದ ರಾಜನೂ ಒಟ್ಟಾಗಿ ಸೇರಿಕೊಂಡು ತಮ್ಮ ಶತ್ರುಗಳ ವಿರುದ್ಧವಾಗಿ ದಂಡೆತ್ತಿಕೊಂಡು ಸಿದ್ದೀಮ್ ಕಣಿವೆಗೆ ಹೋದರು. ಅವರು ಏಲಾಮಿನ ರಾಜ ಕೆದೊರ್ಲಗೋಮರನಿಗೂ ಗೋಯಿಮದ ರಾಜ ತಿದ್ಗಾಲನಿಗೂ ಶಿನಾರಿನ ರಾಜ ಅಮ್ರಾಫೆಲನಿಗೂ, ಎಲ್ಲಸಾರಿನ ರಾಜ ಅರಿಯೋಕನಿಗೂ ವಿರುದ್ಧವಾಗಿ ಹೋರಾಡಿದರು. ಹೀಗೆ ನಾಲ್ಕು ಮಂದಿ ರಾಜರು ಐದು ಮಂದಿ ರಾಜರ ವಿರುದ್ಧವಾಗಿ ಹೋರಾಡಿದರು.

10 ಸಿದ್ದೀಮ್ ಕಣಿವೆಯಲ್ಲಿ ಕಲ್ಲರಗಿನ ಕೆಸರುಕುಣಿಗಳು ಬಹಳಷ್ಟಿದ್ದವು. ಸೊದೋಮ್ ಮತ್ತು ಗೊಮೋರಗಳ ರಾಜರುಗಳು ಮತ್ತು ಅವರ ಸೈನ್ಯಗಳವರು ಓಡಿಹೋಗುವಾಗ ಈ ಕುಣಿಗಳಲ್ಲಿ ಬಿದ್ದುಹೋದರು; ಉಳಿದವರು ಬೆಟ್ಟಗಳಿಗೆ ಓಡಿಹೋದರು.

11 ಗೆದ್ದವರು ಸೊದೋಮ್ ಮತ್ತು ಗೊಮೋರಗಳ ಜನರು ಹೊಂದಿದ್ದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡರು. ಅವರು ಅವರೆಲ್ಲರ ಆಹಾರವನ್ನೂ ಬಟ್ಟೆಗಳನ್ನೂ ತೆಗೆದುಕೊಂಡರು. 12 ಅಬ್ರಾಮನ ಸಹೋದರನಾದ ಲೋಟನು ಸೊದೋಮಿನಲ್ಲಿ ವಾಸವಾಗಿದ್ದನು. ಶತ್ರುಗಳು ಅವನನ್ನು ಸೆರೆಹಿಡಿದು, ಅವನ ಸ್ವತ್ತುಗಳನ್ನೆಲ್ಲ ದೋಚಿಕೊಂಡು ಹೋದರು. 13 ತಪ್ಪಿಸಿಕೊಂಡ ಒಬ್ಬನು ಇಬ್ರಿಯನಾದ ಅಬ್ರಾಮನ ಬಳಿಗೆ ಹೋಗಿ ನಡೆದ ವಿಷಯವನ್ನೆಲ್ಲಾ ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ತೋಪಿನ ಬಳಿಯಲ್ಲಿ ವಾಸವಾಗಿದ್ದನು. ಮಮ್ರೆ, ಎಷ್ಕೋಲ ಮತ್ತು ಆನೇರ್ ಒಬ್ಬರಿಗೊಬ್ಬರು ಸಹಾಯಮಾಡಲು ಒಂದು ಒಪ್ಪಂದವನ್ನು ಮಾಡಿಕೊಂಡಿದ್ದರು. ಅಲ್ಲದೆ ಅಬ್ರಾಮನಿಗೂ ಸಹಾಯಮಾಡುವುದಾಗಿ ಒಂದು ಒಪ್ಪಂದಕ್ಕೆ ಸಹಿ ಮಾಡಿದ್ದರು.

ಅಬ್ರಾಮನು ಲೋಟನನ್ನು ಬಿಡಿಸಿದ್ದು

14 ಲೋಟನು ಸೆರೆಯಾಳಾಗಿರುವುದು ಅಬ್ರಾಮನಿಗೆ ತಿಳಿಯಿತು. ಆದ್ದರಿಂದ ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿದ ಗಂಡಾಳುಗಳನ್ನೆಲ್ಲ ಒಟ್ಟಾಗಿ ಸೇರಿಸಿದನು. ಅವರಲ್ಲಿ ಮುನ್ನೂರ ಹದಿನೆಂಟು ಮಂದಿ ತರಬೇತಿ ಹೊಂದಿದ್ದ ಸೈನಿಕರಾಗಿದ್ದರು. ಅಬ್ರಾಮನು ಅವರೊಡನೆ ಹೊರಟು ಶತ್ರುಗಳನ್ನು ದಾನ್ ಊರಿನವರೆಗೂ ಹಿಂದಟ್ಟಿದನು. 15 ಆ ರಾತ್ರಿ ಅವನು ಮತ್ತು ಅವನ ಸೇವಕರು ಹಠಾತ್ತನೆ ಶತ್ರುಗಳನ್ನು ಎದುರಿಸಿ ಸೋಲಿಸಿದರು; ದಮಸ್ಕಕ್ಕೆ ಉತ್ತರದಲ್ಲಿರುವ ಹೋಬಾದವರೆಗೂ ಹಿಂದಟ್ಟಿದರು. 16 ಆಮೇಲೆ ಶತ್ರುಗಳು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಮತ್ತು ಲೋಟನ ಆಸ್ತಿಯನ್ನು ಅಬ್ರಾಮನು ತೆಗೆದುಕೊಂಡು ಲೋಟನೊಡನೆ ಬಂದನು. ಅಲ್ಲದೆ ಸೆರೆಹಿಡಿಯಲ್ಪಟ್ಟಿದ್ದ ಸ್ತ್ರೀಯರನ್ನು ಮತ್ತು ಇತರ ಜನರನ್ನು ಹಿಂದಕ್ಕೆ ಕರೆದುಕೊಂಡು ಬಂದನು.

17 ಅಬ್ರಾಮನು ಕೆದೊರ್ಲಗೋಮರನನ್ನೂ ಮತ್ತು ಅವನೊಡನಿದ್ದ ರಾಜರುಗಳನ್ನೂ ಸೋಲಿಸಿದ ಮೇಲೆ ತನ್ನ ಮನೆಗೆ ಹಿಂತಿರುಗಿದನು. ಆಗ ಸೊದೋಮಿನ ರಾಜನು ಅಬ್ರಾಮನನ್ನು ಭೇಟಿಯಾಗಲು ಶಾವೆ ಕಣಿವೆಗೆ ಹೋದನು. (ಈಗ ಇದಕ್ಕೆ ರಾಜನ ಕಣಿವೆ ಎಂದು ಕರೆಯುತ್ತಾರೆ.)

ಮೆಲ್ಕೀಚೆದೆಕನು

18 ಸಾಲೇಮಿನ ರಾಜನಾದ ಮೆಲ್ಕೀಚೆದೆಕನು ಸಹ ಅಬ್ರಾಮನನ್ನು ಭೇಟಿಯಾಗಲು ಹೋದನು. ಮಹೋನ್ನತನಾದ ದೇವರ ಯಾಜಕನಾಗಿದ್ದ ಅವನು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಂಡು ಬಂದು, 19 ಅಬ್ರಾಮನನ್ನು ಹೀಗೆ ಆಶೀರ್ವದಿಸಿದನು:

“ಅಬ್ರಾಮನೇ, ಮಹೋನ್ನತನಾದ ದೇವರು ನಿನ್ನನ್ನು ಆಶೀರ್ವದಿಸಲಿ.
    ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದಾತನು ಆತನೇ.
20 ನಿನ್ನ ಶತ್ರುಗಳನ್ನು ಸೋಲಿಸಲು
    ನಿನಗೆ ಸಹಾಯ ಮಾಡಿದ ಮಹೋನ್ನತನಾದ ದೇವರಿಗೆ ಕೊಂಡಾಟವಾಗಲಿ.”

ಅಬ್ರಾಮನು ಯುದ್ಧದಿಂದ ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕೀಚೆದೆಕನಿಗೆ ಕೊಟ್ಟನು. 21 ಬಳಿಕ ಸೊದೋಮಿನ ರಾಜನು ಅಬ್ರಾಮನಿಗೆ, “ಈ ವಸ್ತುಗಳನ್ನೆಲ್ಲ ನೀನೇ ಇಟ್ಟುಕೊ. ಶತ್ರುಗಳು ವಶಪಡಿಸಿಕೊಂಡಿರುವ ನನ್ನ ಜನರನ್ನು ಮಾತ್ರ ನನಗೆ ಕೊಡು” ಎಂದು ಹೇಳಿದನು.

22 ಆದರೆ ಅಬ್ರಾಮನು ಅವನಿಗೆ, “ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಮಹೋನ್ನತನಾಗಿರುವ ದೇವರಾದ ಯೆಹೋವನಿಗೆ ಪ್ರಮಾಣಮಾಡಿ ಹೇಳುವುದೇನೆಂದರೆ, 23 ನಿನ್ನದಾಗಿರುವ ಯಾವುದನ್ನೂ ನಾನು ಇಟ್ಟುಕೊಳ್ಳುವುದಿಲ್ಲ; ಅದು ದಾರವಾಗಿದ್ದರೂ, ಪಾದರಕ್ಷೆಯ ಬಾರಾಗಿದ್ದರೂ, ನಾನಿಟ್ಟುಕೊಳ್ಳುವುದಿಲ್ಲ. ‘ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದೆ’ ಎಂದು ನೀನು ಹೇಳಿಕೊಳ್ಳುವುದು ನನಗೆ ಬೇಕಾಗಿಲ್ಲ. 24 ನನ್ನ ಯೌವನಸ್ಥರು ತಿಂದ ಆಹಾರದ ಹೊರತು ಬೇರೆ ಯಾವುದನ್ನೂ ನಾನು ಸ್ವೀಕರಿಸುವುದಿಲ್ಲ. ಆದರೆ ಬೇರೆ ಜನರಿಗೆ ಅವರ ಪಾಲನ್ನು ಕೊಡು. ನಾವು ಯುದ್ಧದಲ್ಲಿ ಗೆದ್ದುತಂದ ವಸ್ತುಗಳನ್ನು ತೆಗೆದುಕೊ; ಆನೇರ್, ಎಷ್ಕೋಲ ಮತ್ತು ಮಮ್ರೆಯರಿಗೆ ಅವರ ಪಾಲನ್ನು ಕೊಡು. ಈ ಜನರು ಯುದ್ಧದಲ್ಲಿ ನನಗೆ ಸಹಾಯ ಮಾಡಿದರು” ಎಂದು ಹೇಳಿದನು.

ದೇವರು ಅಬ್ರಾಮನೊಡನೆ ಮಾಡಿಕೊಂಡ ಒಡಂಬಡಿಕೆ

15 ಈ ಸಂಗತಿಗಳಾದ ಮೇಲೆ, ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ಸಂದೇಶ ಬಂದಿತು. ದೇವರು ಅವನಿಗೆ, “ಅಬ್ರಾಮನೇ ಭಯಪಡಬೇಡ; ನಾನೇ ನಿನಗೆ ಗುರಾಣಿಯಾಗಿದ್ದೇನೆ. ನಾನು ನಿನಗೆ ದೊಡ್ಡ ಪ್ರತಿಫಲವನ್ನು ಕೊಡುತ್ತೇನೆ” ಎಂದು ಹೇಳಿದನು.

ಅದಕ್ಕೆ ಅಬ್ರಾಮನು, “ದೇವರಾದ ಯೆಹೋವನೇ, ನೀನು ನನಗೆ ಏನೇ ಕೊಟ್ಟರೂ ನನಗೆ ಸಂತೋಷವಾಗುವುದಿಲ್ಲ. ಯಾಕೆಂದರೆ, ನನಗೆ ಮಗನೇ ಇಲ್ಲ. ಆದ್ದರಿಂದ ನಾನು ಸತ್ತಮೇಲೆ ನನ್ನ ಆಸ್ತಿಯೆಲ್ಲ ನನ್ನ ಸೇವಕನಾದ ದಮಸ್ಕದ ಎಲೀಯೆಜರನ ಪಾಲಾಗುವುದು” ಎಂದು ಹೇಳಿದನು. ಮತ್ತೆ ಅಬ್ರಾಮನು, “ನೀನು ನನಗೆ ಮಗನನ್ನೇ ಕೊಟ್ಟಿಲ್ಲ. ಆದ್ದರಿಂದ ನನ್ನ ಮನೆಯಲ್ಲಿ ಹುಟ್ಟಿದ ಸೇವಕನೊಬ್ಬನು ನನಗಿರುವುದನ್ನೆಲ್ಲ ಪಡೆದುಕೊಳ್ಳುವನು” ಎಂದು ಹೇಳಿದನು.

ಆಗ ಯೆಹೋವನು ಅಬ್ರಾಮನಿಗೆ, “ನಿನ್ನ ಆಸ್ತಿಯನ್ನೆಲ್ಲ ಪಡೆದುಕೊಳ್ಳುವವನು ನಿನ್ನ ಸೇವಕನಲ್ಲ. ನೀನೇ ಮಗನನ್ನು ಪಡೆಯುವೆ; ನಿನ್ನ ಮಗನೇ ನಿನ್ನ ಆಸ್ತಿಯನ್ನೆಲ್ಲಾ ಪಡೆಯುವನು” ಎಂದು ಹೇಳಿದನು.

ನಂತರ ದೇವರು ಅಬ್ರಾಮನನ್ನು ಹೊರಗೆ ಕರೆದುಕೊಂಡು ಬಂದು ಅವನಿಗೆ, “ಆಕಾಶದ ಕಡೆಗೆ ಕಣ್ಣೆತ್ತಿ ನಕ್ಷತ್ರಗಳನ್ನು ನೋಡು. ನೀನು ಲೆಕ್ಕ ಮಾಡಲಾರದಷ್ಟು ನಕ್ಷತ್ರಗಳಿವೆ. ಮುಂದಿನ ಕಾಲದಲ್ಲಿ ನಿನ್ನ ಕುಟುಂಬವು ಅದೇ ರೀತಿಯಲ್ಲಿರುವುದು” ಎಂದು ಹೇಳಿದನು.

ಅಬ್ರಾಮನು ಯೆಹೋವನನ್ನು ನಂಬಿದನು. ಆ ನಂಬಿಕೆಯ ನಿಮಿತ್ತವೇ ಯೆಹೋವನು ಅಬ್ರಾಮನನ್ನು ನೀತಿವಂತನೆಂದು ಪರಿಗಣಿಸಿದನು. ಆತನು ಅಬ್ರಾಮನಿಗೆ, “ಯೆಹೋವನಾದ ನಾನು ನಿನ್ನನ್ನು ಕಲ್ದೀಯರ ಊರ್ ಪಟ್ಟಣದಿಂದ ಬರಮಾಡಿದೆನು. ನಿನಗೆ ಈ ದೇಶವನ್ನು ಕೊಡಬೇಕೆಂತಲೂ ನೀನು ಈ ದೇಶವನ್ನು ಹೊಂದಿಕೊಳ್ಳಬೇಕೆಂತಲೂ ನಾನು ನಿನ್ನನ್ನು ಬರಮಾಡಿದೆನು” ಎಂದು ಹೇಳಿದನು.

ಅದಕ್ಕೆ ಅಬ್ರಾಮನು, “ಯೆಹೋವನೇ, ನನ್ನ ಒಡೆಯನೇ, ನನಗೆ ಈ ದೇಶವು ದೊರೆಯುತ್ತದೆಯೆಂದು ಖಚಿತಪಡಿಸಿಕೊಳ್ಳುವುದು ಹೇಗೆ?” ಎಂದು ಕೇಳಿದನು.

ದೇವರು ಅಬ್ರಾಮನಿಗೆ, “ನಾವು ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳೋಣ. ಮೂರು ವರ್ಷದ ಒಂದು ಹಸುವನ್ನೂ ಮೂರು ವರ್ಷದ ಒಂದು ಆಡನ್ನೂ ಮತ್ತು ಮೂರು ವರ್ಷದ ಒಂದು ಟಗರನ್ನೂ ತೆಗೆದುಕೊಂಡು ಬಾ. ಇದಲ್ಲದೆ ಒಂದು ಬೆಳವಕ್ಕಿಯನ್ನೂ ಒಂದು ಪಾರಿವಾಳವನ್ನೂ ತೆಗೆದುಕೊಂಡು ಬಾ” ಎಂದು ಹೇಳಿದನು.

10 ಅಬ್ರಾಮನು ದೇವರಿಗೋಸ್ಕರ ಅವುಗಳನ್ನೆಲ್ಲ ತೆಗೆದುಕೊಂಡು ಬಂದನು. ಅಬ್ರಾಮನು ಅವುಗಳನ್ನು ಕತ್ತರಿಸಿ ಎರಡೆರಡು ಹೋಳು ಮಾಡಿದನು. ಆಮೇಲೆ ಅಬ್ರಾಮನು ತುಂಡಿಗೆ ತುಂಡನ್ನು ಎದುರಾಗಿಟ್ಟನು. ಅಬ್ರಾಮನು ಪಕ್ಷಿಗಳನ್ನು ಮಾತ್ರ ಎರಡೆರಡು ಹೋಳು ಮಾಡಲಿಲ್ಲ. 11 ಸ್ವಲ್ಪ ಸಮಯದ ನಂತರ, ದೊಡ್ಡ ಪಕ್ಷಿಗಳು ಆ ಪ್ರಾಣಿಗಳ ಮಾಂಸವನ್ನು ತಿನ್ನಲು ಹಾರಿ ಬಂದವು. ಆದರೆ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು.

12 ಸಾಯಂಕಾಲವಾಯಿತು, ಸೂರ್ಯ ಮುಳುಗತೊಡಗಿದಾಗ ಅಬ್ರಾಮನಿಗೆ ಗಾಢ ನಿದ್ರೆ ಬಂದಿತು. ಅವನು ನಿದ್ರೆ ಮಾಡುತ್ತಿರುವಾಗ ಕಾರ್ಗತ್ತಲಾಯಿತು. 13 ಆಗ ಯೆಹೋವನು ಅಬ್ರಾಮನಿಗೆ, “ನಿನಗೆ ಈ ವಿಷಯಗಳು ತಿಳಿದಿರಬೇಕು. ನಿನ್ನ ಸಂತತಿಯವರು ಪರದೇಶಿಯರಾಗಿ ತಮ್ಮದಲ್ಲದ ದೇಶದಲ್ಲಿ ವಾಸಮಾಡುವರು. ಅಲ್ಲಿನ ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವರು. ಅಲ್ಲಿ ಅವರು ನಾನೂರು ವರ್ಷಗಳವರೆಗೆ ಬಾಧೆಪಡುವರು. 14 ಆದರೆ ನಾನೂರು ವರ್ಷಗಳಾದ ಮೇಲೆ ಅವರ ಮೇಲೆ ದೊರೆತನ ಮಾಡಿದ ಆ ದೇಶವನ್ನು ನಾನು ದಂಡಿಸುವೆನು; ನಿನ್ನ ಜನರು ಆ ದೇಶವನ್ನು ಬಿಟ್ಟು ಹೊರಡುವರು. ನಿನ್ನ ಜನರು ಅದನ್ನು ಬಿಡುವಾಗ ತಮ್ಮೊಡನೆ ಸಂಪತ್ತುಗಳನ್ನು ತೆಗೆದುಕೊಂಡು ಹೋಗುವರು.

15 “ನೀನು ತುಂಬಾ ಮುದುಕನಾಗುವ ತನಕ ಜೀವಿಸಿ ಸಮಾಧಾನದಿಂದ ಸಾಯುವೆ; ನಿನ್ನನ್ನು ನಿನ್ನ ಕುಟುಂಬದವರೊಡನೆ ಸಮಾಧಿ ಮಾಡುವರು. 16 ನಾಲ್ಕು ತಲೆಮಾರುಗಳ ನಂತರ ನಿನ್ನ ಜನರು ಈ ನಾಡಿಗೆ ಹಿಂತಿರುಗುವರು. ಆ ಕಾಲದಲ್ಲಿ ನಿನ್ನ ಜನರು ಅಮೋರಿಯರನ್ನು ಸೋಲಿಸುವರು. ಇಲ್ಲಿ ವಾಸಿಸುತ್ತಿರುವ ಅಮೋರಿಯರನ್ನು ನಿನ್ನ ಜನರ ಮೂಲಕ ನಾನೇ ಶಿಕ್ಷಿಸುವೆನು. ಇದು ಮುಂದೆ ನಡೆಯುವ ಸಂಗತಿ. ಯಾಕೆಂದರೆ ಆ ಸಮಯದಲ್ಲಿ ಅಮೋರಿಯರು ಅಂಥ ಶಿಕ್ಷೆ ಅನುಭವಿಸುವಷ್ಟು ಕೆಟ್ಟವರಾಗಿರಲಿಲ್ಲ” ಎಂದು ಹೇಳಿದನು.

17 ಸೂರ್ಯನು ಮುಳುಗಿದ ಮೇಲೆ ತುಂಬ ಕತ್ತಲಾಯಿತು. ಕಡಿದುಹಾಕಿದ್ದ ಪ್ರತಿಯೊಂದು ಪ್ರಾಣಿಗಳ ದೇಹದ ಎರಡೆರಡು ಹೋಳುಗಳು ಇನ್ನೂ ನೆಲದ ಮೇಲೆ ಇದ್ದವು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಹೊಗೆ ಮತ್ತು ಬೆಂಕಿಗಳಿಂದ ಕೂಡಿದ ದೀವಿಟಿಗೆಯು ಈ ತುಂಡುಗಳ ನಡುವೆ ಹಾದುಹೋಯಿತು.

18 ಆದ್ದರಿಂದ ಅಂದು ಯೆಹೋವನು ಒಂದು ವಾಗ್ದಾನವನ್ನು ಮಾಡಿ ಅಬ್ರಾಮನೊಡನೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಯೆಹೋವನು ಅವನಿಗೆ, “ನಾನು ನಿನ್ನ ಸಂತತಿಯವರಿಗೆ ಈ ನಾಡನ್ನು ಕೊಡುವೆನು. ನಾನು ಅವರಿಗೆ ಈಜಿಪ್ಟ್ ನದಿಯಿಂದ ಯೂಫ್ರೇಟೀಸ್ ಮಹಾನದಿಯವರೆಗೂ ಇರುವ ನಾಡನ್ನು ಕೊಡುವೆನು. 19 ಇದು ಕೇನಿಯರ, ಕೆನಿಜೀಯರ, ಕದ್ಮೋನಿಯರ, 20 ಹಿತ್ತಿಯರ, ಪೆರಿಜೀಯರ, ರೆಷಾಯರ, 21 ಅಮೋರಿಯರ, ಕಾನಾನ್ಯರ, ಗಿರ್ಗಾಷಿಯರ ಮತ್ತು ಯೆಬೂಸಿಯರ ನಾಡು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International