Beginning
ಜಲಪ್ರಳಯದ ಮುಕ್ತಾಯ
8 ಆದರೆ ದೇವರು ನೋಹನನ್ನು ಮರೆಯಲಿಲ್ಲ. ದೇವರು ನೋಹನನ್ನು ಮತ್ತು ನಾವೆಯಲ್ಲಿದ್ದ ಎಲ್ಲಾ ಪ್ರಾಣಿಗಳನ್ನು ನೆನಪುಮಾಡಿಕೊಂಡನು. ದೇವರು ಭೂಮಿಯ ಮೇಲೆ ಗಾಳಿಯನ್ನು ಬರಮಾಡಿದನು. ನೀರು ಕಡಿಮೆಯಾಗಲು ಪ್ರಾರಂಭಿಸಿತು.
2 ಆಕಾಶದಿಂದ ಸುರಿಯುತ್ತಿದ್ದ ಮಳೆ ನಿಂತುಹೋಯಿತು. ಆಕಾಶದ ತೂಬುಗಳು ಮುಚ್ಚಿಹೋದವು. ಭೂಸೆಲೆಗಳಿಂದ ಉಕ್ಕುತ್ತಿದ್ದ ನೀರು ಸಹ ನಿಂತುಹೋಯಿತು. 3-4 ಭೂಮಿಯನ್ನು ಆವರಿಸಿಕೊಂಡಿದ್ದ ನೀರು ನೂರೈವತ್ತು ದಿನಗಳಾದ ಮೇಲೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂತು. ಏಳನೆಯ ತಿಂಗಳ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ನಾಡಿನಲ್ಲಿದ್ದ ಒಂದು ಬೆಟ್ಟದ ಮೇಲೆ ನಿಂತುಕೊಂಡಿತು. 5 ನೀರು ಕಡಿಮೆಯಾಗತೊಡಗಿದ್ದರಿಂದ ಹತ್ತನೆಯ ತಿಂಗಳ ಮೊದಲನೆಯ ದಿನದಲ್ಲಿ ಬೆಟ್ಟದ ತುದಿಗಳು ಕಾಣತೊಡಗಿದವು.
6 ನಲವತ್ತು ದಿನಗಳಾದ ಮೇಲೆ, ನೋಹನು ತಾನು ಮಾಡಿದ್ದ ನಾವೆಯ ಕಿಟಕಿಯನ್ನು ತೆರೆದು ನೋಡಿದನು. 7 ನೋಹನು ಒಂದು ಕಾಗೆಯನ್ನು ಹೊರಕ್ಕೆ ಬಿಟ್ಟನು. ಭೂಮಿಯ ಮೇಲಿನ ನೀರು ಒಣಗುವ ವರೆಗೆ ಆ ಕಾಗೆಯು ಸ್ಥಳದಿಂದ ಸ್ಥಳಕ್ಕೆ ಹಾರಾಡುತ್ತಿತ್ತು. 8 ನೆಲ ಒಣಗಿದೆಯೇ, ತೇವವಾಗಿದೆಯೇ ಎಂದು ತಿಳಿದುಕೊಳ್ಳುವುದಕ್ಕಾಗಿ ನೋಹನು ಒಂದು ಪಾರಿವಾಳವನ್ನು ಸಹ ಹೊರಕ್ಕೆ ಬಿಟ್ಟನು.
9 ನೀರು ಇನ್ನೂ ಇದ್ದಕಾರಣ, ಆ ಪಾರಿವಾಳ ಹಿಂತಿರುಗಿ ಬಂತು. ನೋಹನು ಕೈಚಾಚಿ ಅದನ್ನು ಹಿಡಿದುಕೊಂಡು ನಾವೆಯೊಳಗೆ ಸೇರಿಸಿಕೊಂಡನು.
10 ಏಳು ದಿನಗಳವರೆಗೆ ನೋಹನು ಕಾದುಕೊಂಡಿದ್ದು ಮತ್ತೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. 11 ಆ ಸಾಯಂಕಾಲವೂ ಪಾರಿವಾಳ ನೋಹನ ಬಳಿಗೆ ಹಿಂತಿರುಗಿ ಬಂತು. ಅದರ ಕೊಕ್ಕಿನಲ್ಲಿ ಆಲೀವ್ ಮರದ ಎಲೆಯಿತ್ತು. ಇದರಿಂದ, ಭೂಮಿಯಲ್ಲಿ ಒಣನೆಲವಿದೆಯೆಂದು ನೋಹನು ತಿಳಿದುಕೊಂಡನು. 12 ಏಳು ದಿನಗಳ ನಂತರ ನೋಹನು ಮತ್ತೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಆದರೆ ಅದು ಈ ಸಲ ಹಿಂತಿರುಗಿ ಬರಲಿಲ್ಲ.
13 ಆದ್ದರಿಂದ ನೋಹನು ನಾವೆಯ ಬಾಗಿಲನ್ನು ತೆರೆದು ಸುತ್ತಲೂ ನೋಡಿದನು. ನೆಲವೆಲ್ಲಾ ಒಣಗಿತ್ತು. ಅಂದು ಮೊದಲನೆಯ ವರ್ಷದ ಮೊದಲನೆಯ ತಿಂಗಳ ಮೊದಲನೆಯ ದಿನವಾಗಿತ್ತು. ಆಗ ನೋಹನಿಗೆ ಆರುನೂರ ಒಂದು ವರ್ಷವಾಗಿತ್ತು. 14 ಎರಡನೆಯ ತಿಂಗಳ ಇಪ್ಪತ್ತೇಳನೆಯ ದಿನದೊಳಗೆ ನೆಲವೆಲ್ಲಾ ಸಂಪೂರ್ಣವಾಗಿ ಒಣಗಿಹೋಯಿತು.
15-16 ಆಮೇಲೆ ದೇವರು ನೋಹನಿಗೆ, “ನೀನು, ನಿನ್ನ ಹೆಂಡತಿ, ನಿನ್ನ ಗಂಡುಮಕ್ಕಳು ಮತ್ತು ನಿನ್ನ ಸೊಸೆಯರೊಂದಿಗೆ ನಾವೆಯಿಂದ ಹೊರಗೆ ಬನ್ನಿ. 17 ನಿಮ್ಮೊಡನೆ ನಾವೆಯೊಳಗಿದ್ದ ಎಲ್ಲಾ ಜೀವಿಗಳು ಅಂದರೆ ಎಲ್ಲಾ ಪಕ್ಷಿಗಳು, ಪ್ರಾಣಿಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದೂ ಹೊರಗೆ ಬರಲಿ. ಅವುಗಳ ಸಂತಾನವು ಹೆಚ್ಚೆಚ್ಚಾಗಲಿ; ಭೂಮಿಯ ಮೇಲೆಲ್ಲಾ ಅವು ತುಂಬಿಕೊಳ್ಳಲಿ” ಅಂದನು.
18 ಆದ್ದರಿಂದ ನೋಹನು ತನ್ನ ಹೆಂಡತಿ, ಗಂಡುಮಕ್ಕಳು ಮತ್ತು ಸೊಸೆಯರೊಂದಿಗೆ ನಾವೆಯಿಂದ ಹೊರಗೆ ಬಂದನು. 19 ಎಲ್ಲಾ ಪ್ರಾಣಿಗಳು, ಪಕ್ಷಿಗಳು, ಹರಿದಾಡುವ ಜೀವಿಗಳು ನಾವೆಯಿಂದ ಹೊರಬಂದವು.
20 ಆಮೇಲೆ ನೋಹನು ಯೆಹೋವನಿಗಾಗಿ ಒಂದು ಯಜ್ಞವೇದಿಕೆಯನ್ನು ಕಟ್ಟಿ ಶುದ್ಧವಾದ ಕೆಲವು ಪಶುಪಕ್ಷಿಗಳನ್ನು ತೆಗೆದುಕೊಂಡು ಅವುಗಳನ್ನು ದೇವರಿಗೆ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮ ಮಾಡಿದನು.
21 ಈ ಯಜ್ಞಗಳ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯಾಯಿತು. ಆಗ ಯೆಹೋವನು ತನ್ನೊಳಗೆ, “ಜನರನ್ನು ದಂಡಿಸುವುದಕ್ಕಾಗಿ ನಾನು ಇನ್ನೆಂದೂ ಭೂಮಿಯನ್ನು ಶಪಿಸುವುದಿಲ್ಲ. ಜನರು ಚಿಕ್ಕಂದಿನಿಂದಲೇ ಕೆಟ್ಟವರು. ಆದ್ದರಿಂದ ನಾನು ಇನ್ನೆಂದೂ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯನ್ನು ನಾಶಮಾಡುವುದಿಲ್ಲ; ಮತ್ತೆಂದೂ ನಾನು ಹೀಗೆ ಮಾಡುವುದಿಲ್ಲ. 22 ಭೂಮಿ ಇರುವವರೆಗೆ ಬಿತ್ತನೆಕಾಲ, ಸುಗ್ಗಿಕಾಲ ಯಾವಾಗಲೂ ಇರುತ್ತವೆ. ಹಿಮಕಾಲ, ಬೇಸಿಗೆಕಾಲ, ಚಳಿಗಾಲ, ಹಗಲು ಮತ್ತು ರಾತ್ರಿ ಯಾವಾಗಲೂ ಇದ್ದೇ ಇರುತ್ತವೆ” ಎಂದು ಅಂದುಕೊಂಡನು.
ಹೊಸ ಪ್ರಾರಂಭ
9 ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ, “ಅನೇಕ ಮಕ್ಕಳನ್ನು ಪಡೆದು ಭೂಮಿಯಲ್ಲೆಲ್ಲಾ ತುಂಬಿಕೊಳ್ಳಿರಿ. 2 ಭೂಮಿಯ ಮೇಲಿರುವ ಪ್ರತಿಯೊಂದು ಪ್ರಾಣಿಯೂ ನಿಮಗೆ ಹೆದರಿ ಭಯಪಡುವುದು; ಆಕಾಶದಲ್ಲಿ ಹಾರಾಡುವ ಪ್ರತಿಯೊಂದು ಪಕ್ಷಿಯೂ ನಿಮಗೆ ಹೆದರಿ ಭಯಪಡುವುದು; ನೆಲದ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯೂ ಮತ್ತು ಸಮುದ್ರದಲ್ಲಿರುವ ಪ್ರತಿಯೊಂದು ಮೀನೂ ನಿಮಗೆ ಹೆದರಿ ಭಯಪಡುವುದು. ನೀವು ಅವುಗಳಿಗೆಲ್ಲಾ ಒಡೆಯರಾಗಿರುತ್ತೀರಿ. 3 ಮೊದಲು, ನಿಮ್ಮ ಆಹಾರಕ್ಕಾಗಿ ಸಸ್ಯಗಳನ್ನು ಕೊಟ್ಟೆನು. ಈಗ ನಿಮ್ಮ ಆಹಾರಕ್ಕಾಗಿ ಪ್ರತಿಯೊಂದು ಪ್ರಾಣಿಯನ್ನೂ ಕೊಟ್ಟಿದ್ದೇನೆ. ಭೂಮಿಯ ಮೇಲಿರುವ ಎಲ್ಲವನ್ನೂ ನಾನು ನಿಮಗೋಸ್ಕರ ಕೊಟ್ಟಿದ್ದೇನೆ. 4 ಆದರೆ ನಾನು ನಿಮಗೆ ಆಜ್ಞಾಪಿಸುವುದೇನೆಂದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಕೂಡದು. 5 ಯಾವನಾದರೂ ನಿಮ್ಮ ಜೀವಹತ್ಯೆ ಮಾಡಿದರೆ, ನಾನು ಅವನ ಜೀವವನ್ನು ತೆಗೆಯುವೆನು. ಯಾವ ಪ್ರಾಣಿಯಾದರೂ ಮನುಷ್ಯನನ್ನು ಕೊಂದರೆ, ನಾನು ಆ ಪ್ರಾಣಿಯ ಪ್ರಾಣವನ್ನು ತೆಗೆಯುತ್ತೇನೆ.
6 “ದೇವರು ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ನಿರ್ಮಿಸಿದನು.
ಆದ್ದರಿಂದ ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವನ್ನು ಮನುಷ್ಯನೇ ಸುರಿಸುವನು.”
7 “ನೋಹನೇ, ನಿನಗೂ ನಿನ್ನ ಮಕ್ಕಳಿಗೂ ಅನೇಕ ಮಕ್ಕಳು ಹುಟ್ಟಲಿ. ನೀವು ಅಭಿವೃದ್ಧಿಗೊಂಡು ಭೂಮಿಯಲ್ಲಿ ತುಂಬಿಕೊಳ್ಳಿರಿ” ಎಂದು ಹೇಳಿದನು.
8-9 ಆಮೇಲೆ ದೇವರು ನೋಹನಿಗೂ ಅವನ ಮಕ್ಕಳಿಗೂ, “ನಾನು ನಿಮಗೆ ಮತ್ತು ಮುಂದೆ ಜೀವಿಸುವ ನಿಮ್ಮ ಜನರಿಗೆ ವಾಗ್ದಾನ ಮಾಡುತ್ತೇನೆ. 10 ನಾವೆಯೊಳಗಿಂದ ಬಂದ ಎಲ್ಲಾ ಪಕ್ಷಿಗಳಿಗೆ, ಎಲ್ಲಾ ಪಶುಗಳಿಗೆ ಮತ್ತು ಪ್ರಾಣಿಗಳಿಗೆ ನಾನು ವಾಗ್ದಾನ ಮಾಡುತ್ತೇನೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೆ ವಾಗ್ದಾನ ಮಾಡುತ್ತೇನೆ. 11 ನಾನು ನಿಮಗೆ ಮಾಡುವ ವಾಗ್ದಾನವೇನೆಂದರೆ: ಭೂಮಿಯ ಮೇಲಿದ್ದ ಎಲ್ಲಾ ಜೀವಿಗಳು ಜಲಪ್ರಳಯದಿಂದ ನಾಶವಾದವು. ಆದರೆ ಮತ್ತೆಂದಿಗೂ ಈ ರೀತಿ ಆಗುವುದಿಲ್ಲ. ಜಲಪ್ರಳಯವು ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ಇನ್ನೆಂದಿಗೂ ನಾಶಗೊಳಿಸುವುದಿಲ್ಲ” ಎಂದು ಹೇಳಿದನು.
12 ಇದಲ್ಲದೆ ದೇವರು, “ನನ್ನ ವಾಗ್ದಾನಕ್ಕೆ ಸಾಕ್ಷಿಯಾಗಿ ನಾನು ನಿಮಗೊಂದು ಗುರುತನ್ನು ಕೊಡುವೆನು. ನಾನು ನಿಮ್ಮೊಡನೆ ಮತ್ತು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೊಡನೆ ಒಡಂಬಡಿಕೆ ಮಾಡಿಕೊಂಡಿರುವುದನ್ನು ಈ ಗುರುತು ತೋರಿಸುತ್ತದೆ. ಈ ಗುರುತು ಯಾವಾಗಲೂ ಇರುವುದು. 13 ನಾನು ಮೋಡಗಳಲ್ಲಿ ಇಟ್ಟಿರುವ ಮುಗಿಲುಬಿಲ್ಲು ನನಗೂ ಭೂಮಿಗೂ ಆಗಿರುವ ಒಡಂಬಡಿಕೆಗೆ ಗುರುತಾಗಿರುವುದು. 14 ನಾನು ಮೋಡಗಳನ್ನು ಭೂಮಿಯ ಮೇಲೆ ಕವಿಸುವಾಗ, ಮೋಡದಲ್ಲಿ ಮುಗಿಲುಬಿಲ್ಲನ್ನು ಕಾಣುವಿರಿ. 15 ನಾನು ಈ ಮುಗಿಲುಬಿಲ್ಲನ್ನು ನೋಡುವಾಗ, ನನಗೂ ನಿಮಗೂ ಮತ್ತು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಆಗಿರುವ ಒಡಂಬಡಿಕೆಯನ್ನು ನೆನಪುಮಾಡಿಕೊಳ್ಳುವೆನು. ಜಲಪ್ರಳಯವು ಇನ್ನೆಂದಿಗೂ ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ನಾಶಗೊಳಿಸುವುದಿಲ್ಲ ಎಂಬುದೇ ಈ ಒಡಂಬಡಿಕೆ. 16 ನಾನು ಮೋಡಗಳಲ್ಲಿರುವ ಮುಗಿಲುಬಿಲ್ಲನ್ನು ನೋಡುವಾಗ, ಶಾಶ್ವತವಾದ ಈ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುವೆನು. ನನಗೂ ಮತ್ತು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗಳಿಗೂ ಆದ ಒಡಂಬಡಿಕೆಯನ್ನು ನೆನಸಿಕೊಳ್ಳುವೆನು” ಎಂದು ಹೇಳಿದನು.
17 ಆದ್ದರಿಂದ ದೇವರು ನೋಹನಿಗೆ, “ಭೂಮಿಯ ಮೇಲಿರುವ ಎಲ್ಲಾ ಜೀವಿಗಳೊಡನೆ ನಾನು ಮಾಡಿಕೊಂಡ ಒಡಂಬಡಿಕೆಗೆ ಈ ಮುಗಿಲುಬಿಲ್ಲು ಗುರುತಾಗಿರುವುದು” ಎಂದು ಹೇಳಿದನು.
ಸಮಸ್ಯೆಗಳ ಪ್ರಾರಂಭ
18 ನೋಹನ ಗಂಡುಮಕ್ಕಳು ನೋಹನೊಡನೆ ನಾವೆಯೊಳಗಿಂದ ಹೊರಬಂದರು. ಅವರ ಹೆಸರುಗಳು: ಶೇಮ್, ಹಾಮ್ ಮತ್ತು ಯೆಫೆತ್ (ಹಾಮನು ಕಾನಾನನ ತಂದೆ.) 19 ಈ ಮೂವರು ನೋಹನ ಗಂಡುಮಕ್ಕಳು. ಭೂಮಿಯ ಮೇಲಿರುವ ಜನರೆಲ್ಲರಿಗೂ ಇವರೇ ಮೂಲಪುರುಷರು.
20 ನೋಹನು ರೈತನಾದನು. ಅವನು ಒಂದು ದ್ರಾಕ್ಷಿತೋಟ ಮಾಡಿದನು. 21 ಒಮ್ಮೆ ಅವನು ದ್ರಾಕ್ಷಾರಸವನ್ನು ಕುಡಿದು ಮತ್ತೇರಿದ್ದರಿಂದ ತನ್ನ ಗುಡಾರದಲ್ಲಿ ಬೆತ್ತಲೆಯಾಗಿ ಮಲಗಿಕೊಂಡನು. 22 ಕಾನಾನನ ತಂದೆಯಾದ ಹಾಮನು ತನ್ನ ತಂದೆ ಬೆತ್ತಲೆಯಾಗಿ ಮಲಗಿರುವುದನ್ನು ಕಂಡು ಈ ವಿಷಯವನ್ನು ಗುಡಾರದ ಹೊರಗಿದ್ದ ತನ್ನ ಸಹೋದರರಿಗೆ ತಿಳಿಸಿದನು. 23 ಆಗ ಶೇಮನು ಮತ್ತು ಯೆಫೆತನು ಒಂದು ಕಂಬಳಿಯನ್ನು ತಮ್ಮ ಬೆನ್ನಿನ ಮೇಲೆ ಹಾಕಿಕೊಂಡು ಹಿಮ್ಮುಖವಾಗಿ ಗುಡಾರದೊಳಗೆ ಬಂದು ತಮ್ಮ ತಂದೆಗೆ ಹೊದಿಸಿದರು. ಅವರು ಅವನ ಬೆತ್ತಲೆ ದೇಹವನ್ನು ನೋಡಲಿಲ್ಲ.
24 ಆಮೇಲೆ ನೋಹನು ಎಚ್ಚರಗೊಂಡನು. ಕಿರಿಮಗನಾದ ಹಾಮನು ಏನು ಮಾಡಿದನು ಎಂದು ಅವನಿಗೆ ತಿಳಿಯಿತು. 25 ಆದ್ದರಿಂದ ನೋಹನು,
“ಕಾನಾನನು ತನ್ನ ಸಹೋದರರಿಗೆಲ್ಲಾ ಕೀಳಾದ ಗುಲಾಮನಾಗಿರಲಿ”
ಎಂದು ಶಪಿಸಿದನು.
26 ಅಲ್ಲದೆ ನೋಹನು,
“ಶೇಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ!
ಕಾನಾನನು ಶೇಮನಿಗೆ ಗುಲಾಮನಾಗಿರಲಿ.
27 ದೇವರು ಯೆಫೆತನಿಗೆ ಹೆಚ್ಚು ಭೂಮಿಯನ್ನು ಕೊಡಲಿ.
ಶೇಮನ ಗುಡಾರಗಳಲ್ಲಿ ದೇವರು ವಾಸಿಸಲಿ
ಮತ್ತು ಕಾನಾನನು ಅವರಿಗೆ ಗುಲಾಮನಾಗಿರಲಿ” ಎಂದು ಹೇಳಿದನು.
28 ಜಲಪ್ರಳಯದ ನಂತರ ನೋಹನು ಮುನ್ನೂರೈವತ್ತು ವರ್ಷ ಬದುಕಿದ್ದನು. 29 ನೋಹನು ಒಟ್ಟು ಒಂಭೈನೂರೈವತ್ತು ವರ್ಷ ಬದುಕಿ ಸತ್ತನು.
ಜನಾಂಗಗಳ ಬೆಳವಣಿಗೆ ಮತ್ತು ವಿಸ್ತರಣೆ
10 ನೋಹನ ಗಂಡುಮಕ್ಕಳು: ಶೇಮ್, ಹಾಮ್ ಮತ್ತು ಯೆಫೆತ್. ಜಲಪ್ರಳಯದ ನಂತರ ಈ ಮೂವರು ಅನೇಕ ಗಂಡುಮಕ್ಕಳನ್ನು ಪಡೆದರು. ಶೇಮನಿಗೂ ಹಾಮನಿಗೂ ಯೆಫೆತನಿಗೂ ಹುಟ್ಟಿದ ಗಂಡುಮಕ್ಕಳು:
ಯೆಫೆತನ ಸಂತತಿಯವರು
2 ಯೆಫೆತನ ಗಂಡುಮಕ್ಕಳು: ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್.
3 ಗೋಮೆರನ ಗಂಡುಮಕ್ಕಳು: ಅಷ್ಕೆನಸ್, ರೀಫತ್ ಮತ್ತು ತೋಗರ್ಮ.
4 ಯಾವಾನನ ಗಂಡುಮಕ್ಕಳು: ಎಲೀಷಾ, ತಾರ್ಷೀಸ್, ಕಿತ್ತೀಮ್ ಮತ್ತು ದೋದಾನೀಮ್.
5 ತೀರ ಪ್ರದೇಶದ[a] ಜನರೆಲ್ಲರು ಯೆಫೆತನ ಮಕ್ಕಳ ಸಂತಾನಕ್ಕೆ ಸೇರಿದವರು. ಅವನ ಪ್ರತಿಯೊಬ್ಬ ಮಗನಿಗೂ ಸ್ವಂತ ಭೂಮಿ ಇತ್ತು. ಅವರೆಲ್ಲರ ಕುಟುಂಬಗಳು ವೃದ್ಧಿಗೊಂಡು ಅನೇಕ ಜನಾಂಗಗಳಾದವು. ಪ್ರತಿಯೊಂದು ಜನಾಂಗಕ್ಕೂ ಸ್ವಂತ ಭಾಷೆಯಿತ್ತು.
ಹಾಮನ ಸಂತತಿಯವರು
6 ಹಾಮನ ಗಂಡುಮಕ್ಕಳು: ಕೂಷ್, ಮಿಚ್ರಯಿಮ್, ಪೂತ್ ಮತ್ತು ಕಾನಾನ್.
7 ಕೂಷನ ಗಂಡುಮಕ್ಕಳು: ಸೆಬಾ, ಹವೀಲ, ಸಬ್ತಾ, ರಗ್ಮ ಮತ್ತು ಸಬ್ತಕಾ.
ರಗ್ಮನ ಗಂಡುಮಕ್ಕಳು: ಶೆಬಾ ಮತ್ತು ದೆದಾನ್.
8 ಕೂಷನಿಗೆ ನಿಮ್ರೋದನೆಂಬ ಗಂಡುಮಗನಿದ್ದನು. ನಿಮ್ರೋದನು ಭೂಲೋಕದಲ್ಲಿ ಮಹಾಬಲಶಾಲಿಯಾಗಿದ್ದು ಮೊದಲನೆಯ ಭೂರಾಜನಾದನು. 9 ಯೆಹೋವನ ಮುಂದೆ ಅವನು ಚತುರ ಬೇಟೆಗಾರನಾಗಿದ್ದನು. ಆದ್ದರಿಂದ ಜನರು ಬೇರೆಯವರನ್ನು ಅವನಿಗೆ ಹೋಲಿಸಿ, “ಅವನು ನಿಮ್ರೋದನಂತೆ, ಯೆಹೋವನ ಮುಂದೆ ಚತುರ ಬೇಟೆಗಾರ” ಎಂದು ಹೇಳುತ್ತಿದ್ದರು.
10 ನಿಮ್ರೋದನ ರಾಜ್ಯವು ಶಿನಾರ್ ದೇಶದಲ್ಲಿರುವ ಬಾಬಿಲೋನಿನಲ್ಲಿ, ಯೆರೆಕ್‌ನಲ್ಲಿ ಮತ್ತು ಅಕ್ಕದ್ ಮತ್ತು ಕಲ್ನೇ ಎಂಬ ಪಟ್ಟಣಗಳಲ್ಲಿ ಪ್ರಾರಂಭವಾಯಿತು. 11-12 ನಿಮ್ರೋದನು ಅಶ್ಶೂರಕ್ಕೂ ಹೋದನು. ಅಶ್ಶೂರದಲ್ಲಿ ನಿನೆವೆ, ರೆಹೋಬೋತೀರ್, ಕೆಲಹ ಮತ್ತು ರೆಸೆನ್ ಎಂಬ ಪಟ್ಟಣಗಳನ್ನು ಕಟ್ಟಿದನು. ರೆಸೆನ್ ಪಟ್ಟಣವು ನಿನೆವೆಗೂ ದೊಡ್ಡಪಟ್ಟಣವಾದ ಕೆಲಹಕ್ಕೂ ಮಧ್ಯದಲ್ಲಿದೆ.
13-14 ಮಿಚ್ರಯಿಮನು ಲೂದ್, ಅನಾಮ್, ಲೆಹಾಬ್, ನಪ್ತಹ್, ಪತ್ರುಸ್, ಕಸ್ಲುಹ್ಯ ಮತ್ತು ಕಪ್ತೋರ್ಯ ಎಂಬವರ ತಂದೆ. ಕಸ್ಲುಹ್ಯರು ಫಿಲಿಷ್ಟಿಯರ ಪಿತೃಗಳು.
15 ಕಾನಾನನು ಸೀದೋನನ ತಂದೆ. ಕಾನಾನನ ಮೊದಲನೆಯ ಮಗನೇ ಸೀದೋನ್. ಇವನು ಹಿತ್ತಿಯರ ಮೂಲಪಿತೃ. 16-18 ಕಾನಾನನು ಯೆಬೂಸಿಯರಿಗೆ, ಅಮೋರಿಯರಿಗೆ, ಗಿರ್ಗಾಷಿಯರಿಗೆ, ಹಿವ್ವಿಯರಿಗೆ, ಅರ್ಕಿಯರಿಗೆ, ಸೀನಿಯರಿಗೆ, ಅರ್ವಾದಿಯರಿಗೆ, ಚೆಮಾರಿಯರಿಗೆ ಮತ್ತು ಹಮಾತಿಯರಿಗೆ ಮೂಲಪುರುಷನು.
ಕಾನಾನನ ಕುಟುಂಬಗಳು ಪ್ರಪಂಚದ ನಾನಾ ಭಾಗಗಳಲ್ಲಿ ಹರಡಿಕೊಂಡಿದ್ದವು. 19 ಕಾನಾನ್ಯರ ಸೀಮೆಯು ಸೀದೋನಿನ ಉತ್ತರದಿಂದಿಡಿದು ಗೆರಾರಿನ ದಕ್ಷಿಣದವರೆಗೂ, ಗಾಜಾದಿಂದ ಪೂರ್ವದ ಸೊದೋಮ್ ಗೊಮೋರ ಪಟ್ಟಣಗಳವರೆಗೂ, ಅದ್ಮಾ ಮತ್ತು ಚೆಬೋಯಿಮ್‌ಗಳಿಂದ ಲೆಷಾದವರೆಗೆ ವಿಸ್ತರಿಸಿತ್ತು.
20 ಅವರೆಲ್ಲರೂ ಹಾಮನ ಸಂತತಿಯವರು. ಆ ಕುಟುಂಬಗಳವರೆಲ್ಲರು ತಮ್ಮ ಸ್ವಂತ ಭಾಷೆಗಳನ್ನು ಮತ್ತು ತಮ್ಮ ಸ್ವಂತ ನಾಡುಗಳನ್ನು ಹೊಂದಿದ್ದರು. ಅವುಗಳೆಲ್ಲ ಪ್ರತ್ಯೇಕ ಜನಾಂಗಗಳಾದರು.
ಶೇಮನ ಸಂತತಿಯವರು
21 ಶೇಮನು ಯೆಫೆತನ ಅಣ್ಣ. ಶೇಮನ ಸಂತತಿಯವರಲ್ಲಿ ಎಬರನೂ ಒಬ್ಬನು. ಎಬರನು ಹೀಬ್ರೂ ಜನರ ಮೂಲಪಿತೃ.
22 ಶೇಮನ ಗಂಡುಮಕ್ಕಳು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್ ಮತ್ತು ಅರಾಮ್.
23 ಅರಾಮನ ಗಂಡುಮಕ್ಕಳು: ಊಸ್, ಹೂಲ್, ಗೆತೆರ್ ಮತ್ತು ಮಷ್.
24 ಅರ್ಪಕ್ಷದನು ಶೆಲಹನ ತಂದೆ,
ಶೆಲಹನು ಎಬರನ ತಂದೆ.
25 ಎಬರನಿಗೆ ಇಬ್ಬರು ಗಂಡುಮಕ್ಕಳಿದ್ದರು. ಮೊದಲನೆಯ ಮಗನು ಹುಟ್ಟಿದ ಕಾಲದಲ್ಲಿ ಭೂಮಿಯ ಜನಾಂಗಗಳು ವಿಂಗಡವಾದದ್ದರಿಂದ ಅವನಿಗೆ ಪೆಲೆಗ್ ಎಂದು ಹೆಸರಿಟ್ಟನು; ಎರಡನೆಯ ಮಗನ ಹೆಸರು ಯೊಕ್ತಾನ್.
26 ಯೊಕ್ತಾನನ ಗಂಡುಮಕ್ಕಳು: ಅಲ್ಮೋದಾದ್, ಶೆಲೆಪ್, ಹಚರ್ಮಾವೆತ್ ಮತ್ತು ಯೆರಹ, 27 ಹದೋರಾಮ್, ಊಜಾಲ್, ದಿಕ್ಲಾ. 28 ಓಬಾಲ್, ಅಬೀಮಯೇಲ್, ಶೆಬಾ, 29 ಓಫೀರ್, ಹವೀಲ ಮತ್ತು ಯೋಬಾಬ್. 30 ಇವರೆಲ್ಲರೂ ಮೇಶಾ ಸೀಮೆಯನ್ನು ಮೊದಲುಗೊಂಡು ಪೂರ್ವದ ಬೆಟ್ಟಗುಡ್ಡದ ಪ್ರದೇಶದಲ್ಲಿ ವಾಸಿಸಿದರು. ಸೆಫಾರಿಗೆ ಹೋಗುವ ದಿಕ್ಕಿನಲ್ಲಿ ಮೇಶಾ ಸೀಮೆಯಿತ್ತು.
31 ಇವರೆಲ್ಲರೂ ಶೇಮನ ಕುಟುಂಬಕ್ಕೆ ಸೇರಿದವರು. ಇವರೆಲ್ಲರು ಕುಟುಂಬಾನುಸಾರವಾಗಿಯೂ ಭಾಷಾನುಸಾರವಾಗಿಯೂ ದೇಶಾನುಸಾರವಾಗಿಯೂ ಜನಾಂಗಗಳಿಗನುಸಾರವಾಗಿಯೂ ಹರಡಿಕೊಂಡಿದ್ದರು.
32 ನೋಹನ ಗಂಡುಮಕ್ಕಳಿಂದ ಉಂಟಾದ ವಂಶಗಳವರ ಪಟ್ಟಿಯಿದು. ಅವರು ತಮ್ಮ ಜನಾಂಗಗಳಿಗನುಸಾರವಾಗಿ ಹರಡಿಕೊಂಡಿದ್ದರು. ಜಲಪ್ರಳಯದ ನಂತರ ಭೂಮಿಯಲ್ಲೆಲ್ಲಾ ಹರಡಿಕೊಂಡವರು ಈ ವಂಶಗಳವರೇ.
ಪ್ರಪಂಚದ ವಿಭಜನೆ
11 ಜಲಪ್ರಳಯದ ನಂತರ ಇಡೀ ಪ್ರಪಂಚದ ಜನರು ಒಂದೇ ಭಾಷೆಯನ್ನು ಮಾತಾಡುತ್ತಿದ್ದರು. ಎಲ್ಲಾ ಜನರು ಒಂದೇ ಭಾಷೆಯ ಪದಗಳನ್ನು ಬಳಸುತ್ತಿದ್ದರು. 2 ಜನರು ಪೂರ್ವದಿಕ್ಕಿನಿಂದ ಪ್ರಯಾಣಮಾಡಿ ಶಿನಾರ್ ಪ್ರದೇಶದಲ್ಲಿ ಬಯಲು ಸೀಮೆಯನ್ನು ಕಂಡು ಅಲ್ಲೇ ಉಳಿದುಕೊಂಡರು. 3 ಅವರು ಒಬ್ಬರಿಗೊಬ್ಬರು ಮಾತಾಡುತ್ತಾ, “ಬನ್ನಿ, ಒಳ್ಳೆಯ ಸುಟ್ಟ ಇಟ್ಟಿಗೆಗಳನ್ನು ಮಾಡೋಣ” ಎಂದು ನಿರ್ಧರಿಸಿದರು. ಅವರು ತಮ್ಮ ಮನೆಗಳನ್ನು ಕಟ್ಟಲು ಕಲ್ಲುಗಳ ಬದಲಾಗಿ ಇಟ್ಟಿಗೆಗಳನ್ನೂ ಗಾರೆಗೆ ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.
4 ಬಳಿಕ ಅವರು, “ನಾವು ನಮಗಾಗಿ ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವಂಥ ಗೋಪುರವನ್ನೂ ಕಟ್ಟಿದರೆ ನಾವು ಪ್ರಸಿದ್ಧರಾಗುತ್ತೇವೆ. ಆಗ ನಾವು ಭೂಮಿಯಲ್ಲೆಲ್ಲಾ ಚದರಿಹೋಗದೆ ಒಂದೇ ಸ್ಥಳದಲ್ಲಿ ವಾಸಿಸಲು ಸಾಧ್ಯವಾಗುತ್ತದೆ” ಎಂದು ಮಾತಾಡಿಕೊಂಡರು.
5 ಯೆಹೋವನು ಪಟ್ಟಣವನ್ನೂ ಗೋಪುರವನ್ನೂ ನೋಡಲು ಇಳಿದುಬಂದನು. ಜನರು ಅವುಗಳನ್ನು ಕಟ್ಟುತ್ತಿರುವುದನ್ನು ಕಂಡು 6 ಯೆಹೋವನು, “ಈ ಜನರೆಲ್ಲರು ಒಂದೇ ಭಾಷೆಯನ್ನು ಮಾತಾಡುವುದರಿಂದ ಒಟ್ಟಾಗಿ ಸೇರಿಕೊಂಡಿದ್ದಾರೆ. ಪ್ರಾರಂಭದಲ್ಲೇ ಇಂಥ ಕಾರ್ಯವನ್ನು ಮಾಡುತ್ತಿರುವ ಇವರು ಮುಂದೆ ಏನು ಬೇಕಾದರೂ ಮಾಡಲು ಶಕ್ತರಾಗುವರು. 7 ಆದ್ದರಿಂದ ನಾವು ಕೆಳಗೆ ಹೋಗಿ ಅವರ ಭಾಷೆಯನ್ನು ತಾರುಮಾರು ಮಾಡೋಣ; ಆಗ ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಿಲ್ಲ” ಎಂದು ಹೇಳಿದನು.
8 ಅಂತೆಯೇ ಯೆಹೋವನು ಜನರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆದ್ದರಿಂದ ಆ ಪಟ್ಟಣವನ್ನು ಕಟ್ಟಿ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ. 9 ಯೆಹೋವನು ಇಡೀ ಲೋಕದ ಭಾಷೆಯನ್ನು ತಾರುಮಾರು ಮಾಡಿದ್ದು ಆ ಸ್ಥಳದಲ್ಲೇ. ಆದ್ದರಿಂದ ಆ ಸ್ಥಳಕ್ಕೆ ಬಾಬಿಲೋನ್ ಎಂದು ಹೆಸರಾಯಿತು. ಹೀಗೆ ಯೆಹೋವನು ಜನರನ್ನು ಆ ಸ್ಥಳದಿಂದ ಭೂಮಿಯಲ್ಲೆಲ್ಲಾ ಚದರಿಸಿಬಿಟ್ಟನು.
ಶೇಮನ ಕುಟುಂಬ ಚರಿತ್ರೆ
10 ಇದು ಶೇಮನ ಕುಟುಂಬ ಚರಿತ್ರೆ. ಜಲಪ್ರಳಯದ ಎರಡು ವರ್ಷಗಳ ನಂತರ ಶೇಮನು 100 ವರ್ಷದವನಾಗಿದ್ದಾಗ ಅರ್ಪಕ್ಷದ್ ಎಂಬ ಮಗನನ್ನು ಪಡೆದನು. 11 ಆ ಬಳಿಕ ಶೇಮನು 500 ವರ್ಷ ಬದುಕಿದ್ದನು. ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
12 ಅರ್ಪಕ್ಷದನು 35 ವರ್ಷದವನಾಗಿದ್ದಾಗ ಶೆಲಹ ಎಂಬ ಮಗನನ್ನು ಪಡೆದನು. 13 ಶೆಲಹನು ಜನಿಸಿದ ಮೇಲೆ ಅರ್ಪಕ್ಷದನು 403 ವರ್ಷ ಬದುಕಿದ್ದನು. ಆ ಅವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
14 ಶೆಲಹನು 30 ವರ್ಷದವನಾಗಿದ್ದಾಗ ಎಬರ ಎಂಬ ಮಗನನ್ನು ಪಡೆದನು. 15 ಎಬರನು ಹುಟ್ಟಿದ ಮೇಲೆ ಶೆಲಹನು 403 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
16 ಎಬರನು 34 ವರ್ಷದವನಾಗಿದ್ದಾಗ ಪೆಲೆಗ ಎಂಬ ಮಗನನ್ನು ಪಡೆದನು. 17 ಪೆಲೆಗನು ಹುಟ್ಟಿದ ಮೇಲೆ ಎಬರನು 430 ವರ್ಷಕ್ಕಿಂತಲೂ ಹೆಚ್ಚು ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
18 ಪೆಲೆಗನು 30 ವರ್ಷದವನಾಗಿದ್ದಾಗ ರೆಗೂವ ಎಂಬ ಮಗನನ್ನು ಪಡೆದನು. 19 ರೆಗೂವನು ಹುಟ್ಟಿದ ಮೇಲೆ ಪೆಲೆಗನು 209 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
20 ರೆಗೂವನು 32 ವರ್ಷದವನಾಗಿದ್ದಾಗ ಸೆರೂಗ ಎಂಬ ಮಗನನ್ನು ಪಡೆದನು. 21 ಸೆರೂಗನು ಹುಟ್ಟಿದ ಮೇಲೆ ರೆಗೂವನು 207 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
22 ಸೆರೂಗನು 30 ವರ್ಷದವನಾಗಿದ್ದಾಗ ನಾಹೋರ ಎಂಬ ಮಗನನ್ನು ಪಡೆದನು. 23 ನಾಹೋರನು ಹುಟ್ಟಿದ ಮೇಲೆ, ಸೆರೂಗನು 200 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
24 ನಾಹೋರನು 29 ವರ್ಷದವನಾಗಿದ್ದಾಗ ತೆರಹ ಎಂಬ ಮಗನನ್ನು ಪಡೆದನು. 25 ತೆರಹನು ಹುಟ್ಟಿದ ಮೇಲೆ ನಾಹೋರನು 119 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
26 ತೆರಹನು 70 ವರ್ಷದವನಾಗಿದ್ದಾಗ ಅಬ್ರಾಮ, ನಾಹೋರ, ಹಾರಾನ ಎಂಬ ಗಂಡುಮಕ್ಕಳನ್ನು ಪಡೆದನು.
ತೆರಹನ ಕುಟುಂಬ ಚರಿತ್ರೆ
27 ಇದು ತೆರಹನ ಕುಟುಂಬ ಚರಿತ್ರೆ. ತೆರಹನು ಅಬ್ರಾಮ, ನಾಹೋರ ಮತ್ತು ಹಾರಾನ ಎಂಬವರ ತಂದೆ. ಹಾರಾನನು ಲೋಟನ ತಂದೆ. 28 ಹಾರಾನನು ಬಾಬಿಲೋನಿನ ತನ್ನ ಸ್ವಂತ ಸ್ಥಳವಾದ ಊರ್ ಎಂಬಲ್ಲಿ ಸತ್ತುಹೋದನು. ಹಾರಾನನು ಸತ್ತಾಗ ಅವನ ತಂದೆ ಇನ್ನೂ ಜೀವಂತವಾಗಿದ್ದನು. 29 ಅಬ್ರಾಮ ಮತ್ತು ನಾಹೋರ ಮದುವೆ ಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು. ನಾಹೋರನ ಹೆಂಡತಿಯ ಹೆಸರು ಮಿಲ್ಕಾ. ಈಕೆಯು ಹಾರಾನನ ಮಗಳು. ಹಾರಾನನು ಮಿಲ್ಕಾ ಮತ್ತು ಇಸ್ಕ ಎಂಬವರ ತಂದೆ. 30 ಸಾರಯಳಿಗೆ ಮಕ್ಕಳಿರಲಿಲ್ಲ, ಯಾಕೆಂದರೆ, ಆಕೆ ಬಂಜೆಯಾಗಿದ್ದಳು.
31 ತೆರಹನು ತನ್ನ ಕುಟುಂಬವನ್ನು ಕರೆದುಕೊಂಡು ಬಾಬಿಲೋನಿನ ಊರ್ ಎಂಬ ಸ್ವಂತ ಸ್ಥಳದಿಂದ ಹೊರಟು ಕಾನಾನಿಗೆ ಪ್ರಯಾಣ ಮಾಡಿದನು. ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನ್ನ ಮೊಮ್ಮಗನೂ ಹಾರಾನನಿಗೆ ಮಗನೂ ಆಗಿರುವ ಲೋಟನನ್ನೂ ಮತ್ತು ತನಗೆ ಸೊಸೆಯೂ ಅಬ್ರಾಮನ ಹೆಂಡತಿಯೂ ಆಗಿರುವ ಸಾರಯಳನ್ನೂ ಕರೆದುಕೊಂಡು ಹಾರಾನ್ ಪಟ್ಟಣಕ್ಕೆ ಹೋಗಿ ಅಲ್ಲೇ ವಾಸಿಸಲು ತೀರ್ಮಾನಿಸಿದನು. 32 ತೆರಹನು ಇನ್ನೂರೈದು ವರ್ಷ ಬದುಕಿ ಹಾರಾನಿನಲ್ಲಿ ಸತ್ತುಹೋದನು.
Kannada Holy Bible: Easy-to-Read Version. All rights reserved. © 1997 Bible League International