Beginning
ಮೊದಲನೆಯ ಕುಟುಂಬ
4 ಆದಾಮ ಮತ್ತು ಹವ್ವಳು ಕೂಡಿದರು. ಆದ್ದರಿಂದ ಹವ್ವಳಿಗೆ ಒಂದು ಮಗು ಜನಿಸಿತು. ಹವ್ವಳು, “ಯೆಹೋವನ ಸಹಾಯದಿಂದ ಗಂಡುಮಗುವನ್ನು ಪಡೆದಿದ್ದೇನೆ” ಎಂದು ಹೇಳಿ ಆ ಮಗುವಿಗೆ ಕಾಯಿನ ಎಂದು ಹೆಸರಿಟ್ಟಳು.
2 ಆಮೇಲೆ, ಹವ್ವಳಿಗೆ ಮತ್ತೊಂದು ಮಗು ಜನಿಸಿತು. ಈ ಮಗುವೇ ಕಾಯಿನನ ತಮ್ಮನಾದ ಹೇಬೆಲ. ಹೇಬೆಲನು ಕುರುಬನಾದನು ಕಾಯಿನನು ರೈತನಾದನು.
ಮೊದಲನೆಯ ಕೊಲೆ
3 ಸ್ವಲ್ಪ ಕಾಲದ ನಂತರ ಕಾಯಿನನು ದೇವರಿಗೆ ಕೃತಜ್ಞತಾ ಕಾಣಿಕೆಯನ್ನು ತಂದನು. ಕಾಯಿನನು ತಾನು ಹೊಲದಲ್ಲಿ ಬೆಳೆದ ಕೆಲವು ಆಹಾರಪದಾರ್ಥಗಳನ್ನು ತಂದನು. 4 ಹೇಬೆಲನು ತನ್ನ ಕುರಿಮಂದೆಯಿಂದ ಒಳ್ಳೆಯ ಚೊಚ್ಚಲ ಕುರಿಗಳನ್ನು ಮತ್ತು ಅವುಗಳ ಒಳ್ಳೆಯ ಕೊಬ್ಬಿದ ಭಾಗಗಳನ್ನು ತಂದನು.
ಯೆಹೋವನು ಹೇಬೆಲನ ಕಾಣಿಕೆಯನ್ನು ಸ್ವೀಕರಿಸಿದನು; 5 ಆದರೆ ಕಾಯಿನನ ಕಾಣಿಕೆಯನ್ನು ಸ್ವೀಕರಿಸಲಿಲ್ಲ. ಇದರಿಂದ ಕಾಯಿನನು ದುಃಖಿತನಾದನು ಮತ್ತು ಬಹಳ ಕೋಪಗೊಂಡನು. 6 ಯೆಹೋವನು ಕಾಯಿನನಿಗೆ, “ಏಕೆ ಕೋಪಗೊಂಡಿರುವೆ? ನಿನ್ನ ಮುಖ ವ್ಯಸನದಿಂದಿರುವುದೇಕೆ? 7 ನೀನು ಒಳ್ಳೆಯ ಕಾರ್ಯಗಳನ್ನು ಮಾಡಿದರೆ ನಾನು ನಿನ್ನನ್ನು ಸ್ವೀಕರಿಸಿಕೊಳ್ಳುವೆನು. ಆದರೆ ನೀನು ಕೆಟ್ಟಕಾರ್ಯಗಳನ್ನು ಮಾಡಿದರೆ, ಆ ಪಾಪವು ನಿನ್ನೊಂದಿಗಿರುತ್ತದೆ. ನಿನ್ನ ಪಾಪವು ನಿನ್ನನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಇಷ್ಟಪಡುತ್ತದೆ. ಆದರೆ ನೀನು ಆ ಪಾಪವನ್ನು ನಿನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು”[a] ಎಂದು ಹೇಳಿದನು.
8 ಕಾಯಿನನು ತನ್ನ ತಮ್ಮನಾದ ಹೇಬೆಲನಿಗೆ, “ನಾವು ಹೊಲಕ್ಕೆ ಹೋಗೋಣ ಬಾ” ಎಂದು ಹೇಳಿದನು. ಅಂತೆಯೇ ಕಾಯಿನನು ಮತ್ತು ಹೇಬೆಲನು ಹೊಲಕ್ಕೆ ಹೋದರು. ಅಲ್ಲಿ ಕಾಯಿನನು ತನ್ನ ತಮ್ಮನ ಮೇಲೆರಗಿ ಅವನನ್ನು ಕೊಂದುಹಾಕಿದನು.
9 ತರುವಾಯ ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನಾದ ಹೇಬೆಲನೆಲ್ಲಿ?” ಎಂದು ಕೇಳಿದನು.
ಅದಕ್ಕೆ ಕಾಯಿನನು, “ನನಗೆ ಗೊತ್ತಿಲ್ಲ. ನನ್ನ ತಮ್ಮನನ್ನು ಕಾಯುವುದಾಗಲಿ ನೋಡಿಕೊಳ್ಳುವುದಾಗಲಿ ನನ್ನ ಕೆಲಸವೇ?” ಎಂದು ಉತ್ತರಕೊಟ್ಟನು.
10 ಅದಕ್ಕೆ ಯೆಹೋವನು, “ನೀನು ಮಾಡಿದ್ದೇನು? ನೀನು ನಿನ್ನ ತಮ್ಮನನ್ನೇ ಕೊಲೆಮಾಡಿದೆ! ಅವನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತಿದೆ. 11 ನೀನು ನಿನ್ನ ತಮ್ಮನನ್ನು ಕೊಂದುಹಾಕಿದೆ. ನಿನ್ನ ಕೈಗಳಿಂದ ಸುರಿಸಿದ ಅವನ ರಕ್ತವನ್ನು ಕುಡಿಯಲು ಭೂಮಿಯು ಬಾಯಿ ತೆರೆಯಿತು. ಆದ್ದರಿಂದ ಈಗ ಅದು ಶಾಪಗ್ರಸ್ತವಾಗಿದೆ. 12 ಕಳೆದ ದಿನಗಳಲ್ಲಿ ನೀನು ಸಸಿಗಳನ್ನು ನೆಟ್ಟಾಗ ಸಸಿಗಳು ಚೆನ್ನಾಗಿ ಬೆಳೆದವು. ಆದರೆ ಈಗ ನೀನು ಸಸಿ ನೆಟ್ಟರೂ ಭೂಮಿ ಫಲಿಸುವುದಿಲ್ಲ. ನಿನಗೆ ಭೂಮಿಯ ಮೇಲೆ ಮನೆ ಇರುವುದಿಲ್ಲ. ನೀನು ಸ್ಥಳದಿಂದ ಸ್ಥಳಕ್ಕೆ ಅಲೆದಾಡುವೆ” ಎಂದು ಹೇಳಿದನು.
13 ಅದಕ್ಕೆ ಕಾಯಿನನು ಯೆಹೋವನಿಗೆ, “ಈ ಶಿಕ್ಷೆಯನ್ನು ನಾನು ಸಹಿಸಲಾರೆ! 14 ನೀನು ನನ್ನನ್ನು ನನ್ನ ದೇಶದಿಂದ ಬಲವಂತವಾಗಿ ಹೊರಡಿಸುತ್ತಿರುವೆ. ನಿನ್ನನ್ನು ನೋಡುವುದಕ್ಕಾಗಲಿ ನಿನ್ನ ಸಮೀಪದಲ್ಲಿ ಇರುವುದಕ್ಕಾಗಲಿ ನನಗೆ ಸಾಧ್ಯವಿರುವುದಿಲ್ಲ! ನನಗೆ ಮನೆಯೂ ಇಲ್ಲ! ನಾನು ಭೂಮಿಯ ಮೇಲೆ ಸ್ಥಳದಿಂದ ಸ್ಥಳಕ್ಕೆ ಬಲವಂತವಾಗಿ ಅಲೆದಾಡಬೇಕಾಗುವುದು. ನನ್ನನ್ನು ಕಂಡವರು ನನ್ನನ್ನು ಕೊಲ್ಲುವರು” ಎಂದು ಹೇಳಿದನು.
15 ಅದಕ್ಕೆ ಯೆಹೋವನು ಕಾಯಿನನಿಗೆ, “ಆ ರೀತಿ ಆಗದಂತೆ ನಾನು ನೋಡಿಕೊಳ್ಳುವೆ! ಕಾಯಿನನೇ, ನಿನ್ನನ್ನು ಯಾವನಾದರೂ ಕೊಂದರೆ, ನಾನು ಅವನನ್ನು ಏಳರಷ್ಟು ಶಿಕ್ಷಿಸುವೆನು” ಎಂದು ಹೇಳಿದನು. ಆಮೇಲೆ ಯೆಹೋವನು ಕಾಯಿನನ ಮೇಲೆ ಒಂದು ಗುರುತಿಟ್ಟನು. ಅವನನ್ನು ಯಾರೂ ಕೊಲ್ಲಕೂಡದೆಂದು ಆ ಗುರುತು ಸೂಚಿಸುತ್ತಿತ್ತು.
ಕಾಯಿನನ ಕುಟುಂಬ
16 ಕಾಯಿನನು ಯೆಹೋವನ ಪ್ರಸನ್ನತೆಯಿಂದ ದೂರ ಹೊರಟುಹೋದನು. ಕಾಯಿನನು ನೋದು ಎಂಬ ನಾಡಿನಲ್ಲಿ ವಾಸಿಸಿದನು. ಅದು ಏದೆನ್ ತೋಟಕ್ಕೆ ಪೂರ್ವದಲ್ಲಿರುವುದು.
17 ಕಾಯಿನ ಮತ್ತು ಅವನ ಹೆಂಡತಿಗೆ ಒಂದು ಗಂಡುಮಗು ಹುಟ್ಟಿತು. ಅವರು ಆ ಮಗುವಿಗೆ ಹನೋಕ ಎಂದು ಹೆಸರಿಟ್ಟರು. ಕಾಯಿನನು ಒಂದು ಊರನ್ನು ಕಟ್ಟಿದನು. ಆ ಊರಿಗೆ ಅವನು ತನ್ನ ಮಗನ ಹೆಸರನ್ನೇ ಇಟ್ಟನು.
18 ಹನೋಕನು ಈರಾದ್ ಎಂಬ ಮಗನನ್ನು ಪಡೆದನು. ಈರಾದನು ಮೆಹೂಯಾಯೇಲ ಎಂಬ ಮಗನನ್ನು ಪಡೆದನು. ಮೆಹೂಯಾಯೇಲನು ಮೆತೂಷಾಯೇಲ ಎಂಬ ಮಗನನ್ನು ಪಡೆದನು. ಮೆತೂಷಾಯೇಲನು ಲೆಮೆಕ ಎಂಬ ಮಗನನ್ನು ಪಡೆದನು.
19 ಲೆಮೆಕನು ಇಬ್ಬರು ಹೆಂಗಸರನ್ನು ಮದುವೆ ಮಾಡಿಕೊಂಡನು. ಮೊದಲನೆ ಹೆಂಡತಿಯ ಹೆಸರು ಆದಾ; ಎರಡನೆ ಹೆಂಡತಿಯ ಹೆಸರು ಚಿಲ್ಲಾ. 20 ಆದಳಿಗೆ ಯಾಬಾಲ ಎಂಬ ಮಗನು ಹುಟ್ಟಿದನು. ಗುಡಾರಗಳಲ್ಲಿದ್ದುಕೊಂಡು ಪಶುಗಳನ್ನು ಸಾಕಿಕೊಂಡು ಜೀವನ ಮಾಡುತ್ತಿದ್ದ ಜನರಿಗೆ ಯಾಬಾಲನೇ ಮೂಲಪಿತೃ. 21 ಆದಳಿಗೆ ಮತ್ತೊಬ್ಬ ಮಗ ಹುಟ್ಟಿದನು. ಅವನೇ ಯೂಬಾಲ. ಕಿನ್ನರಿಕೊಳಲುಗಳನ್ನು ನುಡಿಸುವ ಜನರಿಗೆ ಯೂಬಾಲನೇ ಮೂಲಪಿತೃ.
22 ಚಿಲ್ಲಾಳಿಗೆ ತೂಬಲ್‌ಕಾಯಿನ ಎಂಬ ಮಗನು ಹುಟ್ಟಿದನು. ಕಬ್ಬಿಣ ಮತ್ತು ತಾಮ್ರಗಳಿಂದ ಉಪಕರಣ ಮಾಡುತ್ತಿದ್ದವರಿಗೆ ತೂಬಲ್‌ಕಾಯಿನನೇ ಮೂಲಪಿತೃ. ತೂಬಲ್‌ಕಾಯಿನನ ತಂಗಿ ನಯಮಾ.
23 ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು:
“ಆದಾ, ಚಿಲ್ಲಾ, ನನ್ನ ಮಾತನ್ನು ಕೇಳಿ!
ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಕೇಳಿ.
ಒಬ್ಬನು ನನಗೆ ಗಾಯ ಮಾಡಿದ,
ಆದ್ದರಿಂದ ನಾನು ಅವನನ್ನು ಕೊಂದೆ,
ಒಬ್ಬ ಯುವಕನು ನನ್ನನ್ನು ಹೊಡೆದ,
ಆದ್ದರಿಂದ ನಾನು ಅವನನ್ನು ಕೊಂದೆ.
24 ಕಾಯಿನನನ್ನು ಕೊಂದವರಿಗೆ ಏಳರಷ್ಟು ಶಿಕ್ಷೆಯಾಗುವುದು!
ಆದರೆ ನನ್ನನ್ನು ಕೊಂದವರಿಗೆ ಎಪ್ಪತ್ತೇಳರಷ್ಟು ಶಿಕ್ಷೆಯಾಗುವುದು!”
ಸೇತ ಮತ್ತು ಎನೋಷ್
25 ಆದಾಮನು ತಿರಿಗಿ ತನ್ನ ಹೆಂಡತಿಯನ್ನು ಕೂಡಲು, ಆಕೆಗೆ ಮತ್ತೊಬ್ಬ ಮಗ ಹುಟ್ಟಿದನು. ಹವ್ವಳು, “ದೇವರು ನನಗೆ ಮತ್ತೊಬ್ಬ ಮಗನನ್ನು ಕೊಟ್ಟನು. ಕಾಯಿನನು ಕೊಂದ ಹೇಬೆಲನಿಗೆ ಬದಲಾಗಿ ದೇವರು ನನಗೆ ಗಂಡುಮಗುವನ್ನು ಕೊಟ್ಟನು” ಎಂದು ಹೇಳಿ ಆ ಮಗುವಿಗೆ ಸೇತ ಎಂದು ಹೆಸರಿಟ್ಟಳು. 26 ಸೇತನು ಒಬ್ಬ ಮಗನನ್ನು ಪಡೆದನು. ಆ ಮಗುವಿಗೆ ಅವನು ಎನೋಷ್ ಎಂದು ಹೆಸರಿಟ್ಟನು. ಆ ಕಾಲದಲ್ಲಿ ಜನರು ಯೆಹೋವನ ಮೇಲೆ ಭರವಸೆ ಇಡಲಾರಂಭಿಸಿದರು.[b]
ಆದಾಮನ ಕುಟುಂಬ ಚರಿತ್ರೆ
5 ಇದು ಆದಾಮನ ಕುಟುಂಬ ಚರಿತ್ರೆ. ದೇವರು ಮನುಷ್ಯನನ್ನು ತನ್ನ ಹೋಲಿಕೆಗೆ ಸರಿಯಾಗಿ ಸೃಷ್ಟಿ ಮಾಡಿದನು. 2 ದೇವರು ಅವರನ್ನು ಗಂಡು ಮತ್ತು ಹೆಣ್ಣುಗಳಾಗಿ ಉಂಟುಮಾಡಿದನು. ಆತನು ಅವರನ್ನು ನಿರ್ಮಿಸಿದ ದಿನದಲ್ಲೇ ಅವರನ್ನು ಆಶೀರ್ವದಿಸಿ ಅವರಿಗೆ, “ಮನುಷ್ಯ” ಎಂದು ಹೆಸರಿಟ್ಟನು.
3 ಆದಾಮನು 130 ವರ್ಷದವನಾದಾಗ ಮತ್ತೊಬ್ಬ ಮಗನನ್ನು ಪಡೆದನು. ಆ ಮಗನು ರೂಪದಲ್ಲಿ ಆದಾಮನಂತಿದ್ದನು. ಆದಾಮನು ಅವನಿಗೆ ಸೇತ ಎಂದು ಹೆಸರಿಟ್ಟನು. 4 ಸೇತನು ಹುಟ್ಟಿದ ಮೇಲೆ ಆದಾಮನು 800 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 5 ಹೀಗೆ ಆದಾಮನು ಒಟ್ಟು 930 ವರ್ಷ ಜೀವಿಸಿ ಮರಣಹೊಂದಿದನು.
6 ಸೇತನು 105 ವರ್ಷದವನಾದಾಗ ಎನೋಷ್ ಎಂಬ ಮಗನನ್ನು ಪಡೆದನು. 7 ಎನೋಷನು ಹುಟ್ಟಿದ ಮೇಲೆ ಸೇತನು 807 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಸೇತನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 8 ಹೀಗೆ ಸೇತನು ಒಟ್ಟು 912 ವರ್ಷ ಜೀವಿಸಿ ಮರಣಹೊಂದಿದನು.
9 ಎನೋಷನು 90 ವರ್ಷದವನಾದಾಗ ಕೇನಾನ ಎಂಬ ಮಗನನ್ನು ಪಡೆದನು. 10 ಕೇನಾನನು ಹುಟ್ಟಿದ ಮೇಲೆ ಎನೋಷನು 815 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 11 ಹೀಗೆ ಎನೋಷನು ಒಟ್ಟು 905 ವರ್ಷ ಜೀವಿಸಿ ಮರಣಹೊಂದಿದನು.
12 ಕೇನಾನನು 70 ವರ್ಷದವನಾದಾಗ ಅವನು ಮಹಲಲೇಲ ಎಂಬ ಮಗನನ್ನು ಪಡೆದನು. 13 ಮಹಲಲೇಲನು ಹುಟ್ಟಿದ ಮೇಲೆ ಕೇನಾನನು 840 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಕೇನಾನನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 14 ಹೀಗೆ ಕೇನಾನನು ಒಟ್ಟು 910 ವರ್ಷ ಜೀವಿಸಿ ಮರಣಹೊಂದಿದನು.
15 ಮಹಲಲೇಲನು 65 ವರ್ಷದವನಾದಾಗ ಯೆರೆದ ಎಂಬ ಮಗನನ್ನು ಪಡೆದನು. 16 ಯೆರೆದನು ಹುಟ್ಟಿದ ಮೇಲೆ ಮಹಲಲೇಲನು 830 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 17 ಹೀಗೆ ಮಹಲಲೇಲನು ಒಟ್ಟು 895 ವರ್ಷ ಜೀವಿಸಿ ಮರಣಹೊಂದಿದನು.
18 ಯೆರೆದನು 162 ವರ್ಷದವನಾದಾಗ ಹನೋಕ ಎಂಬ ಮಗನನ್ನು ಪಡೆದನು. 19 ಹನೋಕನು ಹುಟ್ಟಿದ ಮೇಲೆ ಯೆರೆದನು 800 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 20 ಹೀಗೆ ಯೆರೆದನು ಒಟ್ಟು 962 ವರ್ಷ ಜೀವಿಸಿ ಮರಣಹೊಂದಿದನು.
21 ಹನೋಕನು 65 ವರ್ಷದವನಾದಾಗ ಮೆತೂಷೆಲಹ ಎಂಬ ಮಗನನ್ನು ಪಡೆದನು. 22 ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ದೇವರ ಅನ್ಯೋನ್ಯತೆಯಲ್ಲಿ 300 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 23 ಹೀಗೆ ಹನೋಕನು ಒಟ್ಟು 365 ವರ್ಷ ಜೀವಿಸಿದನು. 24 ಹನೋಕನು ದೇವರ ಅನ್ಯೋನ್ಯತೆಯಲ್ಲಿ ಜೀವಿಸುತ್ತಿದ್ದಾಗ, ದೇವರು ಅವನನ್ನು ತನ್ನ ಬಳಿಗೆ ಕರೆದುಕೊಂಡನು. ಅಂದಿನಿಂದ ಅವನು ಕಣ್ಮರೆಯಾದನು.
25 ಮೆತೂಷೆಲಹನು 187 ವರ್ಷದವನಾದಾಗ ಲೆಮೆಕ ಎಂಬ ಮಗನನ್ನು ಪಡೆದನು. 26 ಲೆಮೆಕನು ಹುಟ್ಟಿದ ಮೇಲೆ ಮೆತೂಷೆಲಹನು 782 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 27 ಹೀಗೆ ಮೆತೂಷೆಲಹನು ಒಟ್ಟು 969 ವರ್ಷ ಜೀವಿಸಿ ಮರಣಹೊಂದಿದನು.
28 ಲೆಮೆಕನು 182 ವರ್ಷದವನಾದಾಗ ಒಬ್ಬ ಮಗನನ್ನು ಪಡೆದನು. 29 ಲೆಮೆಕನು, “ನಾವು ರೈತರಾಗಿ ಕಷ್ಟಪಟ್ಟು ಕೆಲಸ ಮಾಡುತ್ತೇವೆ, ಯಾಕೆಂದರೆ ದೇವರು ಭೂಮಿಯನ್ನು ಶಪಿಸಿದನು. ಆದರೆ ಈ ಮಗನು ನಮಗೆ ವಿಶ್ರಾಂತಿ ಕೊಡುವನು” ಎಂದು ಹೇಳಿ ಆ ಮಗುವಿಗೆ ನೋಹ ಎಂದು ಹೆಸರಿಟ್ಟನು.
30 ನೋಹನು ಹುಟ್ಟಿದ ಮೇಲೆ, ಲೆಮೆಕನು 595 ವರ್ಷ ಜೀವಿಸಿದನು. ಆ ಕಾಲದಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 31 ಹೀಗೆ ಲೆಮೆಕನು ಒಟ್ಟು 777 ವರ್ಷ ಜೀವಿಸಿ ಮರಣಹೊಂದಿದನು.
32 ನೋಹನು 500 ವರ್ಷದವನಾದಾಗ ಶೇಮ್, ಹಾಮ್, ಯೆಫೆತ್ ಎಂಬ ಮೂವರು ಗಂಡುಮಕ್ಕಳನ್ನು ಪಡೆದನು.
ಜನರ ದುಷ್ಟತನ
6 ಭೂಮಿಯಲ್ಲಿ ಜನಸಂಖ್ಯೆಯು ಹೆಚ್ಚುತ್ತಲೇ ಇತ್ತು. ಅವರಿಗೆ ಸುಂದರವಾದ ಹೆಣ್ಣುಮಕ್ಕಳು ಹುಟ್ಟಿದರು. 2-4 ಈ ಹೆಣ್ಣುಮಕ್ಕಳ ಸೌಂದರ್ಯವನ್ನು ಕಂಡ ದೇವಪುತ್ರರು ತಮಗೆ ಬೇಕಾದ ಸ್ತ್ರೀಯರನ್ನು ಆರಿಸಿಕೊಂಡು ಮದುವೆಯಾದರು.
ಈ ಸ್ತ್ರೀಯರು ಮಕ್ಕಳನ್ನು ಹೆತ್ತರು. ಆ ಕಾಲದಲ್ಲಿ ಮತ್ತು ಆ ಕಾಲದ ನಂತರ ನೆಫೇಲಿಯರು ಆ ನಾಡಿನಲ್ಲಿ ವಾಸವಾಗಿದ್ದರು. ಅವರು ಪ್ರಸಿದ್ಧರಾದ ಪರಾಕ್ರಮಶಾಲಿಗಳಾಗಿದ್ದರು.[c]
ಬಳಿಕ ಯೆಹೋವನು, “ಜನರು ಕೇವಲ ಮಾನವರಷ್ಟೆ; ನನ್ನ ಆತ್ಮವು ಅವರಿಂದ ಯಾವಾಗಲೂ ತೊಂದರೆಗೆ ಗುರಿಯಾಗಕೂಡದು. ಅವರು 120 ವರ್ಷ ಬದುಕುವಂತೆ ಮಾಡುವೆನು” ಅಂದುಕೊಂಡನು.
5 ಭೂಮಿಯ ಮೇಲಿರುವ ಜನರು ತುಂಬ ದುಷ್ಟರಾಗಿದ್ದು ಯಾವಾಗಲೂ ಕೆಟ್ಟವಿಷಯಗಳ ಬಗ್ಗೆ ಆಲೋಚಿಸುತ್ತಿರುವುದನ್ನು ಯೆಹೋವನು ನೋಡಿದನು. 6 ಭೂಮಿಯ ಮೇಲೆ ತಾನು ಮನುಷ್ಯರನ್ನು ಸೃಷ್ಟಿಸಿದ್ದಕ್ಕಾಗಿ ಯೆಹೋವನು ದುಃಖಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.
7 ಆದ್ದರಿಂದ ಯೆಹೋವನು, “ನಾನು ಸೃಷ್ಟಿಸಿದ ಜನರನ್ನೆಲ್ಲ ಭೂಮುಖದಿಂದ ನಾಶಮಾಡುವೆನು. ಪ್ರತಿಯೊಬ್ಬ ಮನುಷ್ಯನನ್ನೂ ಪ್ರತಿಯೊಂದು ಪ್ರಾಣಿಯನ್ನೂ ನೆಲದ ಮೇಲೆ ಹರಿದಾಡುವ ಪ್ರತಿಯೊಂದು ಜಂತುವನ್ನೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನೂ ನಾಶಮಾಡುವೆನು. ಇವುಗಳನ್ನೆಲ್ಲಾ ಸೃಷ್ಟಿಸಿದ್ದರಿಂದ ನನಗೆ ದುಃಖವಾಯಿತು” ಅಂದುಕೊಂಡನು.
8 ಆದರೆ ಯೆಹೋವನಿಗೆ ಮೆಚ್ಚಿಕೆಯಾಗುವಂತೆ ನಡೆದುಕೊಂಡ ಒಬ್ಬ ಮನುಷ್ಯನಿದ್ದನು. ಅವನೇ ನೋಹ.
ನೋಹ ಮತ್ತು ಮಹಾ ಜಲಪ್ರಳಯ
9 ಇದು ನೋಹನ ಚರಿತ್ರೆ. ಅವನು ತನ್ನ ಜೀವಮಾನವೆಲ್ಲಾ ನೀತಿವಂತನಾಗಿದ್ದನು; ಯಾವಾಗಲೂ ದೇವರನ್ನೇ ಅನುಸರಿಸುತ್ತಿದ್ದನು. 10 ಅವನಿಗೆ ಮೂವರು ಗಂಡುಮಕ್ಕಳಿದ್ದರು: ಶೇಮ್, ಹಾಮ್, ಯೆಫೆತ್.
11-12 ದೇವರು ಭೂಮಿಯ ಕಡೆಗೆ ನೋಡಿದಾಗ ಜನರಿಂದ ಅದು ಕೆಟ್ಟುಹೋಗಿರುವುದನ್ನು ಕಂಡನು. ಎಲ್ಲೆಲ್ಲೂ ಹಿಂಸೆ ತುಂಬಿಕೊಂಡಿತ್ತು; ಜನರು ದುಷ್ಟರಾಗಿಯೂ ಕ್ರೂರಿಗಳಾಗಿಯೂ ತಮ್ಮ ಜೀವಿತವನ್ನು ಕೆಡಿಸಿಕೊಂಡಿದ್ದರು.
13 ಆದ್ದರಿಂದ ದೇವರು ನೋಹನಿಗೆ, “ನಾನು ಎಲ್ಲಾ ಜನರಿಗೂ ಅಂತ್ಯವನ್ನು ಬರಮಾಡಬೇಕೆಂದಿದ್ದೇನೆ; ಯಾಕೆಂದರೆ ಅವರು ಕೋಪ, ಹಿಂಸೆಗಳಿಂದ ಭೂಮಿಯನ್ನು ತುಂಬಿಸಿದ್ದಾರೆ. ಆದಕಾರಣ ನಾನು ಎಲ್ಲಾ ಜೀವಿಗಳನ್ನು ನಾಶಮಾಡುವೆನು. 14 ನಿನಗೋಸ್ಕರ ಒಂದು ನಾವೆಯನ್ನು ತುರಾಯಿ ಮರದಿಂದ ತಯಾರಿಸು. ಆ ನಾವೆಯಲ್ಲಿ ಕೋಣೆಗಳನ್ನು ಮಾಡು. ಇಡೀ ನಾವೆಗೆ ಒಳಭಾಗದಲ್ಲೂ ಹೊರಭಾಗದಲ್ಲೂ ರಾಳವನ್ನು ಹಚ್ಚು.
15 “ನೀನು ತಯಾರಿಸುವ ನಾವೆಯು ನಾನೂರೈವತ್ತು ಅಡಿ ಉದ್ದವಾಗಿಯೂ ಎಪ್ಪತ್ತೈದು ಅಡಿ ಅಗಲವಾಗಿಯೂ ನಲವತ್ತೈದು ಅಡಿ ಎತ್ತರವಾಗಿಯೂ ಇರಬೇಕು. 16 ಕಿಟಕಿಯ ಮೇಲ್ಛಾವಣಿಗೆ ಹದಿನೆಂಟು ಇಂಚು ಕೆಳಗಿರಲಿ. ನಾವೆಯ ಪಾರ್ಶ್ವದಲ್ಲಿ ಬಾಗಿಲಿರಲಿ. ನಾವೆಯಲ್ಲಿ ಮೇಲಂತಸ್ತು ಮಧ್ಯಂತಸ್ತು ಮತ್ತು ಕೆಳಂತಸ್ತು ಎಂಬ ಮೂರು ಅಂತಸ್ತುಗಳಿರಲಿ.
17 “ನಾನು ನಿನಗೆ ಹೇಳುತ್ತಿರುವುದನ್ನು ಅರ್ಥಮಾಡಿಕೊ. ನಾನು ಭೂಮಿಯ ಮೇಲೆ ಮಹಾ ಜಲಪ್ರಳಯವನ್ನು ತರುವೆನು. ಆಕಾಶದ ಕೆಳಗಿರುವ ಎಲ್ಲಾ ಜೀವಿಗಳನ್ನು ನಾಶಮಾಡುವೆನು. ಭೂಮಿಯ ಮೇಲಿರುವ ಪ್ರತಿಯೊಂದೂ ಸಾಯುವುದು. 18 ನಾನು ನಿನ್ನೊಂದಿಗೆ ವಿಶೇಷ ಒಡಂಬಡಿಕೆಯನ್ನು ಮಾಡಿಕೊಳ್ಳುವೆ. ಅದೇನೆಂದರೆ, ನೀನು ಮತ್ತು ನಿನ್ನ ಹೆಂಡತಿ, ನಿನ್ನ ಗಂಡುಮಕ್ಕಳು ಮತ್ತು ಸೊಸೆಯಂದಿರು ನಾವೆಯೊಳಗೆ ಹೋಗುವಿರಿ. 19 ಇದಲ್ಲದೆ, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯಲ್ಲಿ ಒಂದು ಗಂಡನ್ನೂ ಒಂದು ಹೆಣ್ಣನ್ನೂ ನಾವೆಯೊಳಗೆ ಸೇರಿಸಿಕೊ. ನಿನ್ನೊಡನೆ ಅವುಗಳನ್ನು ಜೀವದಿಂದುಳಿಸಿ ಕಾಪಾಡು. 20 ಭೂಮಿಯ ಮೇಲಿರುವ ಪ್ರತಿಯೊಂದು ಬಗೆಯ ಪಕ್ಷಿಗಳಲ್ಲಿ ಎರಡೆರಡೂ ಪ್ರತಿಯೊಂದು ಪ್ರಾಣಿಗಳಲ್ಲಿ ಎರಡೆರಡೂ ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಜಂತುಗಳಲ್ಲಿ ಎರಡೆರಡೂ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ನಿನ್ನೊಂದಿಗಿರಲಿ. 21 ಭೂಮಿಯ ಮೇಲೆ ದೊರೆಯುವ ಎಲ್ಲಾ ಬಗೆಯ ಆಹಾರವನ್ನು ನಿಮಗಾಗಿಯೂ ಮತ್ತು ಪ್ರಾಣಿಗಳಿಗಾಗಿಯೂ ನಾವೆಯಲ್ಲಿ ತುಂಬಿಸಿಕೊ” ಎಂದು ಹೇಳಿದನು.
22 ದೇವರು ಆಜ್ಞಾಪಿಸಿದಂತೆಯೇ ನೋಹನು ಮಾಡಿದನು.
ಜಲಪ್ರಳಯದ ಪ್ರಾರಂಭ
7 ಆಮೇಲೆ ಯೆಹೋವನು ನೋಹನಿಗೆ, “ಈ ಕಾಲದವರಲ್ಲಿ ನೀನೊಬ್ಬನೇ ನೀತಿವಂತನಾಗಿರುವೆ. ಆದ್ದರಿಂದ ನಿನ್ನ ಕುಟುಂಬದವರೆಲ್ಲರನ್ನು ಕರೆದುಕೊಂಡು ನಾವೆಯೊಳಗೆ ಹೋಗು. 2 ಎಲ್ಲಾ ಬಗೆಯ ಶುದ್ಧಪ್ರಾಣಿಗಳಲ್ಲಿ ಏಳೇಳು ಜೋಡಿಗಳನ್ನು (ಏಳು ಗಂಡನ್ನು ಮತ್ತು ಏಳು ಹೆಣ್ಣನ್ನು) ತೆಗೆದುಕೊ. ಭೂಮಿಯ ಮೇಲಿನ ಇತರ ಪ್ರಾಣಿಗಳಲ್ಲಿ ಒಂದೊಂದು ಜೋಡಿಯನ್ನು (ಒಂದು ಗಂಡನ್ನು ಮತ್ತು ಒಂದು ಹೆಣ್ಣನ್ನು) ತೆಗೆದುಕೊ. 3 ಎಲ್ಲಾ ಬಗೆಯ ಪಕ್ಷಿಗಳಲ್ಲಿ ಏಳೇಳು ಜೋಡಿಗಳನ್ನು (ಏಳು ಗಂಡನ್ನು ಮತ್ತು ಏಳು ಹೆಣ್ಣನ್ನು) ತೆಗೆದುಕೊ. ಉಳಿದ ಜೀವಿಗಳೆಲ್ಲ ನಾಶವಾದಮೇಲೆ, ಇವು ತಮ್ಮ ಸಂತತಿಗಳನ್ನು ಮುಂದುವರಿಸಲಿ. 4 ಏಳು ದಿನಗಳ ನಂತರ ನಾನು ದೊಡ್ಡ ಮಳೆಯನ್ನು ಭೂಮಿಯ ಮೇಲೆ ಸುರಿಸುವೆನು. ಈ ಮಳೆಯು ನಲವತ್ತು ದಿವಸ ಹಗಲಿರುಳು ಸುರಿಯುವುದು. ನಾನು ನಿರ್ಮಿಸಿದ ಪ್ರತಿಯೊಂದು ಜೀವಿಯನ್ನೂ ನಾನು ಭೂಮಿಯ ಮೇಲಿಂದ ಅಳಿಸಿಬಿಡುವೆನು” ಎಂದು ಹೇಳಿದನು. 5 ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ನೋಹನು ಮಾಡಿದನು.
6 ಮಳೆಯು ಆರಂಭವಾದಾಗ ನೋಹನ ವಯಸ್ಸು ಆರುನೂರು ವರ್ಷ. 7 ಜಲಪ್ರಳಯದಿಂದ ತಪ್ಪಿಸಿಕೊಳ್ಳಲು ನೋಹನು ತನ್ನ ಹೆಂಡತಿ, ತನ್ನ ಗಂಡುಮಕ್ಕಳು ಮತ್ತು ಸೊಸೆಯರೊಂದಿಗೆ ನಾವೆಯೊಳಗೆ ಹೋದನು. 8 ಎಲ್ಲಾ ಶುದ್ಧಪ್ರಾಣಿಗಳು, ಭೂಮಿಯ ಮೇಲಿರುವ ಇತರ ಎಲ್ಲಾ ಪ್ರಾಣಿಗಳು, ಪಕ್ಷಿಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದೂ 9 ನೋಹನೊಂದಿಗೆ ನಾವೆಯೊಳಗೆ ಹೋದವು. ದೇವರ ಆಜ್ಞೆಯಂತೆ ಈ ಪ್ರಾಣಿಗಳು ಜೋಡಿಜೋಡಿಯಾಗಿ ನಾವೆಯೊಳಗೆ ಹೋದವು. 10 ಏಳು ದಿನಗಳ ನಂತರ ಜಲಪ್ರಳಯ ಪ್ರಾರಂಭವಾಯಿತು. ಭೂಮಿಯ ಮೇಲೆ ಮಳೆ ಸುರಿಯತೊಡಗಿತು.
11-13 ಎರಡನೆ ತಿಂಗಳಿನ ಹದಿನೇಳನೆಯ ದಿನದಂದು ಭೂಮಿಯ ಕೆಳಗಿರುವ ಸಾಗರದ ಸೆಲೆಗಳು ಒಡೆದು ಭೂಮಿಯೊಳಗಿಂದ ನೀರು ಮೇಲೇರತೊಡಗಿತು; ಭೂಮಿಯ ಮೇಲೆ ಭಾರಿಮಳೆ ಸುರಿಯತೊಡಗಿತು. ಆಕಾಶದ ಕಿಟಕಿ ತೆರೆದಿದೆಯೋ ಎಂಬಂತೆ ನಲವತ್ತು ದಿವಸ ಹಗಲಿರುಳು ಮಳೆ ಸುರಿಯಿತು. ಆ ದಿನದಂದು ನೋಹ ಮತ್ತು ಅವನ ಹೆಂಡತಿ, ಅವನ ಗಂಡುಮಕ್ಕಳಾದ ಶೇಮ್, ಹಾಮ್, ಯೆಫೆತ್ ಮತ್ತು ಅವನ ಸೊಸೆಯಂದಿರು ನಾವೆಯೊಳಗೆ ಹೋದರು. ಆಗ ನೋಹನು ಆರುನೂರು ವರ್ಷವಾಗಿತ್ತು. 14 ಅವರು ನಾವೆಯೊಳಗೆ ಇದ್ದರು. ಭೂಮಿಯ ಮೇಲಿರುವ ಪ್ರತಿಯೊಂದು ಬಗೆಯ ಪ್ರಾಣಿಗಳು, ಪ್ರತಿಯೊಂದು ಬಗೆಯ ಪಶುಗಳು, ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಬಗೆಯ ಕ್ರಿಮಿಗಳು ಮತ್ತು ಪ್ರತಿಯೊಂದು ಬಗೆಯ ಪಕ್ಷಿಗಳು ನಾವೆಯೊಳಗೆ ಇದ್ದವು. 15 ಉಸಿರಾಡುವ ಪ್ರತಿಯೊಂದು ಬಗೆಯ ಪ್ರಾಣಿಗಳು ತಮ್ಮತಮ್ಮ ಜಾತಿಗನುಸಾರವಾಗಿ ಎರಡೆರಡಾಗಿ ಬಂದವು. 16 ದೇವರ ಆಜ್ಞೆಯಂತೆ ಈ ಪ್ರಾಣಿಗಳೆಲ್ಲಾ ನಾವೆಯೊಳಗೆ ಪ್ರವೇಶಿಸಿದವು. ಆಗ ಯೆಹೋವನು ನಾವೆಯ ಬಾಗಿಲನ್ನು ಮುಚ್ಚಿದನು.
17 ಭೂಮಿಯ ಮೇಲೆ ಜಲಪ್ರಳಯವು ನಲವತ್ತು ದಿನಗಳವರೆಗೆ ಇತ್ತು. ನೀರು ಮೇಲೇರುತ್ತಾ ನಾವೆಯನ್ನು ಎತ್ತಲು ಅದು ನೀರಿನ ಮೇಲೆ ತೇಲತೊಡಗಿತು. 18 ನೀರು ಇನ್ನೂ ಮೇಲೇರತೊಡಗಿದ್ದರಿಂದ ನಾವೆಯೂ ಭೂಮಿಯಿಂದ ಬಹು ಮೇಲೆ ಚಲಿಸತೊಡಗಿತು. 19 ನೀರು ಬಹಳವಾಗಿ ಹೆಚ್ಚಿದ್ದರಿಂದ, ಎತ್ತರವಾದ ಬೆಟ್ಟಗಳು ಸಹ ನೀರಿನಿಂದ ಮುಚ್ಚಿಕೊಂಡವು. 20 ಬೆಟ್ಟಗಳ ಮೇಲೂ ನೀರು ಹೆಚ್ಚತೊಡಗಿತು. ಅತೀ ಎತ್ತರವಾದ ಬೆಟ್ಟಕ್ಕಿಂತಲೂ ಇಪ್ಪತ್ತು ಅಡಿ ಹೆಚ್ಚಾಗಿ ನೀರು ಆವರಿಸಿಕೊಂಡಿತು.
21-22 ಭೂಮಿಯ ಮೇಲಿದ್ದ ಪ್ರತಿಯೊಂದು ಜೀವಿಯು ಸತ್ತುಹೋಯಿತು. ಎಲ್ಲಾ ಪುರುಷರು ಮತ್ತು ಸ್ತ್ರೀಯರು ಸತ್ತುಹೋದರು. ಎಲ್ಲಾ ಪಕ್ಷಿಗಳು, ಪಶುಗಳು, ಪ್ರಾಣಿಗಳು ಮತ್ತು ಪ್ರತಿಯೊಂದು ಬಗೆಯ ಕ್ರಿಮಿಗಳು ಸತ್ತುಹೋದವು. 23 ಹೀಗೆ ದೇವರು ಭೂಮಿಯ ಮೇಲಿದ್ದ ಪ್ರತಿಯೊಂದು ಜೀವಿಯನ್ನು ನಾಶಗೊಳಿಸಿದನು. ಪ್ರತಿಯೊಬ್ಬ ಮನುಷ್ಯನು ನಾಶವಾದನು; ಪ್ರತಿಯೊಂದು ಪ್ರಾಣಿಯು, ಹರಿದಾಡುವ ಪ್ರತಿಯೊಂದು ಕ್ರಿಮಿಯು ಮತ್ತು ಪ್ರತಿಯೊಂದು ಪಕ್ಷಿಯು ನಾಶವಾದವು. ಉಳಿದುಕೊಂಡವರೆಂದರೆ, ನೋಹ ಮತ್ತು ಅವನ ಕುಟುಂಬದವರು ಹಾಗೂ ಅವನೊಡನೆ ನಾವೆಯೊಳಗಿದ್ದ ಜೀವಿಗಳು. 24 ನೂರೈವತ್ತು ದಿನಗಳವರೆಗೆ ನೀರು ಭೂಮಿಯನ್ನು ಆವರಿಸಿಕೊಂಡಿತ್ತು.
Kannada Holy Bible: Easy-to-Read Version. All rights reserved. © 1997 Bible League International