Book of Common Prayer
95 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ!
ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ.
2 ಆತನಿಗೆ ಕೃತಜ್ಞತಾಸುತ್ತಿ ಮಾಡೋಣ.
ಸ್ತುತಿಗೀತೆಗಳೊಡನೆ ಆನಂದಘೋಷ ಮಾಡೋಣ.
3 ಯಾಕೆಂದರೆ ಯೆಹೋವನು ಮಹಾದೇವರಾಗಿದ್ದಾನೆ!
ಆತನು ದೇವರುಗಳಿಗೆಲ್ಲಾ ಮಹಾರಾಜನಾಗಿದ್ದಾನೆ.
4 ಭೂಮಿಯ ಆಳವೂ ಉನ್ನತೋನ್ನತವಾದ ಶಿಖರಗಳೂ ಆತನವೇ.
5 ಸಮುದ್ರವು ಆತನದೇ, ಅದನ್ನು ಸೃಷ್ಟಿಸಿದಾತನು ಆತನೇ.
ಭೂಮಿಯೂ ಆತನ ಕೈಕೆಲಸವೇ.
6 ಬನ್ನಿರಿ, ಆತನಿಗೆ ಅಡ್ಡಬಿದ್ದು ಆರಾಧಿಸೋಣ.
ನಮ್ಮನ್ನು ಸೃಷ್ಟಿಸಿದ ಯೆಹೋವನನ್ನು ಕೊಂಡಾಡೋಣ.
7 ನಮ್ಮ ದೇವರು ಆತನೇ, ನಾವು ಆತನವರೇ.
ಆತನ ಸ್ವರಕ್ಕೆ ಕಿವಿಗೊಡುವುದಾದರೆ ಇಂದೇ ನಾವು ಆತನ ಮಂದೆಯಾಗುತ್ತೇವೆ.
8 ದೇವರು ಹೀಗೆನ್ನುತ್ತಾನೆ: “ನೀವು ಮೆರೀಬಾದಲ್ಲಿಯೂ
ಮಸ್ಸಾ ಮರುಭೂಮಿಯಲ್ಲಿಯೂ ಮಾಡಿದಂತೆ ಮೊಂಡತನ ಮಾಡಬೇಡಿ.
9 ನಿಮ್ಮ ಪೂರ್ವಿಕರು ನನ್ನನ್ನು ಪರೀಕ್ಷಿಸಿದರು.
ನನ್ನ ಮಹತ್ಕಾರ್ಯಗಳನ್ನು ನೋಡಿದ್ದರೂ ನನ್ನನ್ನು ಪರೀಕ್ಷಿಸಿದರು.
10 ನಲವತ್ತು ವರ್ಷಗಳ ಕಾಲ ನಾನು ಅವರೊಂದಿಗೆ ತಾಳ್ಮೆಯಿಂದಿದ್ದೆನು,
ಅವರು ನಂಬಿಗಸ್ತರಲ್ಲವೆಂದು ನನಗೆ ತಿಳಿದಿತ್ತು.
ಅವರು ನನ್ನ ಉಪದೇಶಗಳನ್ನು ಅನುಸರಿಸಲಿಲ್ಲ.
11 ಆದ್ದರಿಂದ ನಾನು ಕೋಪಗೊಂಡು ನನ್ನ ವಿಶ್ರಾಂತಿಯ ನಾಡನ್ನು
ಅವರು ಪ್ರವೇಶಿಸಕೂಡದೆಂದು ನಾನು ಪ್ರಮಾಣ ಮಾಡಿದೆನು.”
ಹಿಂಸೆ ಸಂಕಟಗಳಲ್ಲಿರುವವನ ಪ್ರಾರ್ಥನೆ.
102 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
ಸಹಾಯಕ್ಕಾಗಿ ನಾನಿಡುವ ಮೊರೆಯನ್ನು ಲಾಲಿಸು.
2 ಯೆಹೋವನೇ, ನಾನು ಆಪತ್ತುಗಳಲ್ಲಿರುವಾಗ ನನಗೆ ವಿಮುಖನಾಗಬೇಡ, ನನಗೆ ಕಿವಿಗೊಡು.
ಸಹಾಯಕ್ಕಾಗಿ ಮೊರೆಯಿಡುವಾಗ ಬೇಗನೆ ಸದುತ್ತರವನ್ನು ದಯಪಾಲಿಸು.
3 ನನ್ನ ಜೀವಮಾನವು ಹೊಗೆಯಂತೆ ಕಣ್ಮರೆಯಾಗುತ್ತಿದೆ.
ನನ್ನ ಎಲುಬುಗಳು ಬೆಂಕಿಯಂತೆ ಸುಟ್ಟುಹೋಗುತ್ತಿವೆ.
4 ನಾನು ನಿರ್ಬಲನಾಗಿ ಒಣಗಿಹೋಗುತ್ತಿರುವ ಹುಲ್ಲಿನಂತಿದ್ದೇನೆ.
ನಾನು ಊಟವನ್ನೂ ಮರೆತುಬಿಡುವೆನು.
5 ದೀರ್ಘ ದುಃಖದಿಂದಾಗಿ
ನನ್ನ ಎಲುಬುಗಳು ಚರ್ಮಕ್ಕೆ ಅಂಟಿಕೊಂಡಿವೆ.
6 ಅರಣ್ಯದಲ್ಲಿರುವ ಗೂಬೆಯಂತೆ ಒಬ್ಬಂಟಿಗನಾಗಿದ್ದೇನೆ.
ಪಾಳುಬಿದ್ದ ಕಟ್ಟಡಗಳಲ್ಲಿರುವ ಗೂಬೆಯಂತೆ ನಾನು ಒಬ್ಬಂಟಿಗನಾಗಿದ್ದೇನೆ.
7 ನನಗೆ ನಿದ್ರೆಯೂ ಬಾರದು.
ಮೇಲ್ಛಾವಣಿಗೆಯ ಮೇಲಿರುವ ಏಕಾಂಗಿಯಾದ ಪಕ್ಷಿಯಂತೆ ನಾನಿದ್ದೇನೆ.
8 ನನ್ನ ವೈರಿಗಳು ನನಗೆ ಅವಮಾನ ಮಾಡುತ್ತಲೇ ಇರುವರು.
ಅವರು ನನ್ನನ್ನು ದೃಷ್ಟಾಂತಮಾಡಿ ಶಪಿಸುವರು.
9 ನನ್ನ ದುಃಖವೇ ನನಗೆ ಆಹಾರವಾಯಿತು.
ಕಣ್ಣೀರು ನನ್ನ ಪಾನೀಯದೊಳಗೆ ತೊಟ್ಟಿಕ್ಕುತ್ತಿದೆ.
10 ನೀನು ನನ್ನ ಮೇಲೆ ಕೋಪಗೊಂಡಿರುವುದೇ ಅದಕ್ಕೆ ಕಾರಣ.
ನೀನು ನನ್ನನ್ನು ಮೇಲೆತ್ತಿ ಎಸೆದುಬಿಟ್ಟೆಯಲ್ಲಾ!
11 ನನ್ನ ಜೀವಮಾನವು ಸಂಜೆಯ ನೆರಳಿನಂತೆ ಕೊನೆಗೊಂಡಿದೆ.
ನಾನು ಒಣಗಿ ಸಾಯುತ್ತಿರುವ ಹುಲ್ಲಿನಂತಿದ್ದೇನೆ.
12 ಯೆಹೋವನೇ, ನೀನಾದರೋ ಎಂದೆಂದಿಗೂ ಜೀವಿಸುವೆ!
ನಿನ್ನ ಹೆಸರು ಶಾಶ್ವತವಾದದ್ದು!
13 ನೀನು ಎದ್ದು ಚೀಯೋನನ್ನು ಸಂತೈಸುವೆ.
ನೀನು ಚೀಯೋನಿಗೆ ದಯೆತೋರುವ ಕಾಲ ಬರುತ್ತಿದೆ.
14 ನಿನ್ನ ಸೇವಕರು ಆಕೆಯ (ಜೆರುಸಲೇಮಿನ) ಕಲ್ಲುಗಳನ್ನು ಪ್ರೀತಿಸುವರು.
ಅವರು ಆ ಪಟ್ಟಣದ ಧೂಳನ್ನು ಇಷ್ಟಪಡುವರು!
15 ಜನರು ಯೆಹೋವನ ಹೆಸರನ್ನು ಆರಾಧಿಸುತ್ತಾರೆ.
ದೇವರೇ, ಭೂರಾಜರುಗಳೆಲ್ಲಾ ನಿನ್ನನ್ನು ಸನ್ಮಾನಿಸುವರು.
16 ಯಾಕೆಂದರೆ, ಯೆಹೋವನು ಚೀಯೋನನ್ನು ಮತ್ತೆ ಕಟ್ಟುವನು.
ಜನಾಂಗಗಳು ಆಕೆಯ (ಜೆರುಸಲೇಮಿನ) ವೈಭವವನ್ನು ಮತ್ತೆ ನೋಡುವರು.
17 ಆತನು ನಿರ್ಗತಿಕರ ಪ್ರಾರ್ಥನೆಗಳಿಗೆ ಉತ್ತರ ಕೊಡುವನು.
ಅವರ ಮೊರೆಗಳನ್ನು ಆತನು ತಿರಸ್ಕರಿಸುವುದಿಲ್ಲ.
18 ಮುಂದಿನ ತಲೆಮಾರುಗಳವರಿಗಾಗಿ ಇವುಗಳನ್ನು ಬರೆದಿಡಿ.
ಮುಂದಿನ ಕಾಲದಲ್ಲಿ ಅವರು ಯೆಹೋವನನ್ನು ಸ್ತುತಿಸುತ್ತಾರೆ.
19 ಯೆಹೋವನು ಉನ್ನತದಲ್ಲಿರುವ ತನ್ನ ಪರಿಶುದ್ಧ ಸ್ಥಳದಿಂದ ಕೆಳಗೆ ನೋಡುತ್ತಾನೆ.
ಆತನು ಪರಲೋಕದಿಂದ ಭೂಮಿಯನ್ನು ನೋಡುತ್ತಾನೆ.
20 ಆತನು ಸೆರೆಯಾಳುಗಳ ಪ್ರಾರ್ಥನೆಗಳನ್ನು ಕೇಳುತ್ತಾನೆ.
ಮರಣದಂಡನೆಗೆ ಒಳಗಾದವರನ್ನು ಆತನು ಬಿಡಿಸುತ್ತಾನೆ.
21 ಆಗ ಚೀಯೋನಿನಲ್ಲಿರುವ ಜನರು ಯೆಹೋವನ ಕುರಿತು ಪ್ರಕಟಿಸುವರು:
ಅವರು ಆತನ ಹೆಸರನ್ನು ಜೆರುಸಲೇಮಿನಲ್ಲಿ ಸ್ತುತಿಸುವರು.
22 ಜನಾಂಗಗಳು ಒಟ್ಟುಗೂಡಿ ಬರುವವು.
ರಾಜ್ಯಗಳು ಯೆಹೋವನ ಸೇವೆಮಾಡಲು ಬರುವವು.
23 ನನ್ನ ಬಲವು ಕುಂದಿಹೋಯಿತು.
ನನ್ನ ಆಯುಷ್ಕಾಲವು ಕಡಿಮೆಯಾಯಿತು.
24 ಆದ್ದರಿಂದ ನಾನು ಇಂತೆಂದೆನು: “ಯೌವನಸ್ಥನಾಗಿರುವಾಗಲೇ ನನ್ನನ್ನು ಸಾಯಿಸಬೇಡ.
ದೇವರೇ, ನೀನು ಶಾಶ್ವತವಾಗಿ ಜೀವಿಸುವೆ!
25 ಬಹುಕಾಲದ ಹಿಂದೆ, ನೀನು ಪ್ರಪಂಚವನ್ನು ಸೃಷ್ಟಿಮಾಡಿದೆ.
ನೀನು ಆಕಾಶವನ್ನು ನಿನ್ನ ಕೈಗಳಿಂದ ನಿರ್ಮಿಸಿದೆ!
26 ಲೋಕವೂ ಆಕಾಶವೂ ಕೊನೆಗೊಳುತ್ತವೆ.
ನೀನಾದರೊ ಶಾಶ್ವತವಾಗಿರುವೆ!
ಅವು ಬಟ್ಟೆಗಳಂತೆ ಹಳೆಯದಾಗುತ್ತವೆ.
ನೀನು ಅವುಗಳನ್ನು ಉಡುಪುಗಳಂತೆ ಬದಲಾಯಿಸುವೆ.
ಅವುಗಳೆಲ್ಲಾ ಬದಲಾಗುತ್ತವೆ.
27 ದೇವರೇ, ನೀನಾದರೋ ಎಂದಿಗೂ ಬದಲಾಗುವುದಿಲ್ಲ.
ನೀನು ಎಂದೆಂದಿಗೂ ಜೀವಿಸುವೆ!
28 ನಾವು ನಿನ್ನ ಸೇವಕರಾಗಿದ್ದೇವೆ.
ಇಲ್ಲಿ ನಮ್ಮ ಮಕ್ಕಳು ವಾಸವಾಗಿರುತ್ತಾರೆ;
ಅವರ ಸಂತತಿಗಳವರೂ ನಿನ್ನನ್ನು ಆರಾಧಿಸಲು ಇಲ್ಲಿರುತ್ತಾರೆ.”
ಐದನೆಯ ಭಾಗ
(ಕೀರ್ತನೆಗಳು 107–150)
107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
ಆತನ ಪ್ರೀತಿ ಶಾಶ್ವತವಾದದ್ದು!
2 ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
3 ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.
4 ಅವರಲ್ಲಿ ಕೆಲವರು ಮರುಭೂಮಿಯಲ್ಲಿ ಅಲೆದಾಡಿದರು.
ತಾವು ನೆಲೆಸತಕ್ಕ ಪಟ್ಟಣಕ್ಕಾಗಿ ಅವರು ಹುಡುಕಿದರೂ ಅದು ಅವರಿಗೆ ಕಾಣಲಿಲ್ಲ.
5 ಅವರು ಹಸಿವೆಯಿಂದಲೂ
ಬಾಯಾರಿಕೆಯಿಂದಲೂ ಬಲಹೀನರಾಗತೊಡಗಿದರು.
6 ಆಗ ಅವರು ಯೆಹೋವನಿಗೆ ಮೊರೆಯಿಡಲು
ಆತನು ಅವರನ್ನು ಎಲ್ಲಾ ಆಪತ್ತುಗಳಿಂದ ರಕ್ಷಿಸಿದನು.
7 ಅವರು ನೆಲಸತಕ್ಕ ಪಟ್ಟಣಕ್ಕೆ ದೇವರು ಅವರನ್ನು ನೇರವಾಗಿ ನಡೆಸಿದನು.
8 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ ಆತನು ಮಾಡುವ
ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
9 ಆತನು ಬಾಯರಿದವರನ್ನು ನೀರಿನಿಂದಲೂ
ಹಸಿದವರನ್ನು ಮೃಷ್ಟಾನ್ನದಿಂದಲೂ ತೃಪ್ತಿಗೊಳಿಸುವನು.
10 ದೇವಜನರಲ್ಲಿ ಕೆಲವರು ಸೆರೆಯಾಳುಗಳಾಗಿದ್ದರು;
ಕಾರ್ಗತ್ತಲೆಯ ಸೆರೆಮನೆಗಳಲ್ಲಿ ಬಂಧಿತರಾಗಿದ್ದರು.
11 ಯಾಕೆಂದರೆ ಅವರು ಯೆಹೋವನ ಆಜ್ಞೆಗಳಿಗೆ ವಿರೋಧವಾಗಿ ದಂಗೆ ಎದ್ದರು.
ಮಹೋನ್ನತನಾದ ದೇವರ ಉಪದೇಶವನ್ನು ತಿರಸ್ಕರಿಸಿದರು.
12 ಅವರ ಕಾರ್ಯಗಳ ನಿಮಿತ್ತವೇ
ದೇವರು ಅವರ ಜೀವನವನ್ನು ಸಂಕಷ್ಟಕ್ಕೆ ಒಳಪಡಿಸಿದನು.
ಅವರು ಎಡವಿಬಿದ್ದರು,
ಅವರಿಗೆ ಸಹಾಯಮಾಡಲು ಯಾರೂ ಇರಲಲ್ಲ.
13 ಅವರು ಆಪತ್ತಿನಲ್ಲಿದ್ದಾಗ ಯೆಹೋವನಿಗೆ ಮೊರೆಯಿಟ್ಟರು.
ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
14 ಆತನು ಅವರನ್ನು ಕಾರ್ಗತ್ತಲೆಯ ಸೆರೆಮನೆಗಳಿಂದ ಹೊರತಂದನು;
ಕಟ್ಟಿದ ಹಗ್ಗಗಳನ್ನು ಕಿತ್ತುಹಾಕಿದನು.
15 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
16 ನಮ್ಮ ಶತ್ರುಗಳನ್ನು ಸೋಲಿಸಲು ದೇವರು ನಮಗೆ ಸಹಾಯಮಾಡುವನು.
ಅವರ ತಾಮ್ರದ ಬಾಗಿಲುಗಳನ್ನು ಆತನು ಮುರಿದುಹಾಕಬಲ್ಲನು.
ಅವರ ಬಾಗಿಲುಗಳ ಮೇಲಿರುವ ಕಬ್ಬಿಣದ ಸರಳುಗಳನ್ನು ಆತನು ನುಚ್ಚುನೂರು ಮಾಡಬಲ್ಲನು.
17 ಕೆಲವರು ತಮ್ಮ ಪಾಪಗಳಿಂದಲೂ
ದೋಷಗಳಿಂದಲೂ ಮೂಢರಾದರು.
18 ಆ ಜನರು ಊಟವನ್ನು ನಿರಾಕರಿಸಿದ್ದರಿಂದ
ಮರಣಾವಸ್ಥೆಗೆ ಬಂದರು.
19 ಅವರು ಆಪತ್ತಿನಲ್ಲಿ ಯೆಹೋವನಿಗೆ ಮೊರೆಯಿಟ್ಟರು.
ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
20 ಆತನು ಆಜ್ಞಾಪಿಸಲು ಜನರು ಗುಣಹೊಂದಿದರು.
ಸಮಾಧಿಯಿಂದ ತಪ್ಪಿಸಿಕೊಂಡರು.
21 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
22 ಯೆಹೋವನ ಕಾರ್ಯಗಳಿಗೆ ಕೃತಜ್ಞತಾ ಯಜ್ಞಗಳನ್ನು ಅರ್ಪಿಸಿರಿ.
ಆತನ ಕಾರ್ಯಗಳ ಬಗ್ಗೆ ಹರ್ಷದಿಂದ ತಿಳಿಸಿರಿ.
23 ಕೆಲವರು ತಮ್ಮ ಉದ್ಯೋಗಗಳ ನಿಮಿತ್ತ
ಸಮುದ್ರಯಾನ ಮಾಡಿದರು.
24 ಯೆಹೋವನು ಮಾಡಬಲ್ಲ ಕಾರ್ಯಗಳನ್ನು ಅವರು ನೋಡಿದರು.
ಆತನು ಸಮುದ್ರದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಅವರು ಕಣ್ಣಾರೆ ಕಂಡರು.
25 ಆತನು ಆಜ್ಞಾಪಿಸಲು ಬಲವಾದ ಗಾಳಿ ಬೀಸತೊಡಗಿತು;
ಅಲೆಗಳು ದೊಡ್ಡದಾಗತೊಡಗಿದವು.
26 ಅಲೆಗಳು ಆಕಾಶದಷ್ಟು ಎತ್ತರವಾಗಿದ್ದವು.
ಭಯಂಕರವಾದ ಬಿರುಗಾಳಿಯಿಂದ ಅವರು ಭಯಗೊಂಡರು.
27 ಅವರು ಅಮಲೇರಿದವರಂತೆ ಎಡವಿಬೀಳತೊಡಗಿದರು;
ನಾವಿಕರಾಗಿದ್ದ ಅವರ ಕೌಶಲ್ಯವು ನಿಷ್ಪ್ರಯೋಜಕವಾಯಿತು.
28 ಆಗ ಅವರು ಯೆಹೋವನಿಗೆ ಮೊರೆಯಿಡಲು
ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
29 ಆತನು ಬಿರುಗಾಳಿಯನ್ನು ನಿಲ್ಲಿಸಿ
ಅಲೆಗಳನ್ನು ಶಾಂತಗೊಳಿಸಿದನು.
30 ಸಮುದ್ರವು ಶಾಂತವಾದದ್ದರಿಂದ ನಾವಿಕರು ಬಹು ಸಂತೋಷಪಟ್ಟರು.
ಅವರು ತಲುಪಬೇಕಿದ್ದ ಸ್ಥಳಕ್ಕೆ ಆತನು ಅವರನ್ನು ಸುರಕ್ಷಿತವಾಗಿ ನಡೆಸಿದನು.
31 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ.
32 ಆತನನ್ನು ಮಹಾಸಭೆಯಲ್ಲಿ ಸ್ತುತಿಸಿರಿ.
ಹಿರಿಯರ ಸಭೆಯಲ್ಲಿ ಆತನನ್ನು ಕೊಂಡಾಡಿರಿ.
ಮೋಶೆಯ ಬಾಲ್ಯ
2 ಲೇವಿ ಕುಟುಂಬದ ಒಬ್ಬನು ಲೇವಿ ಕುಟುಂಬಕ್ಕೆ ಸೇರಿದ ಸ್ತ್ರೀಯೊಬ್ಬಳನ್ನು ಮದುವೆಯಾದನು. 2 ಆ ಸ್ತ್ರೀಯು ಗರ್ಭಿಣಿಯಾಗಿ ಗಂಡುಮಗುವಿಗೆ ಜನ್ಮವಿತ್ತಳು. ಮಗುವು ಸುಂದರವಾಗಿತ್ತು. ಆಕೆ ಮೂರು ತಿಂಗಳವರೆಗೆ ಆ ಮಗುವನ್ನು ಬಚ್ಚಿಟ್ಟಳು. 3 ಇನ್ನೂ ಹೆಚ್ಚು ಕಾಲ ಬಚ್ಚಿಡಲಾಗದೆ ಆಕೆ ಒಂದು ಬುಟ್ಟಿಯನ್ನು ಮಾಡಿ ಅದಕ್ಕೆ ರಾಳವನ್ನು ಹಚ್ಚಿದಳು. ಆಕೆ ಮಗುವನ್ನು ಬುಟ್ಟಿಯಲ್ಲಿಟ್ಟು ಆ ಬುಟ್ಟಿಯನ್ನು ನೀರಿನಲ್ಲಿ ಎತ್ತರವಾಗಿ ಬೆಳೆದ ಹುಲ್ಲಿನಲ್ಲಿ ಇಟ್ಟಳು. 4 ಮಗುವಿಗೆ ಏನಾಗುವುದೋ ಎಂದು ನೋಡಲು ಮಗುವಿನ ಅಕ್ಕ ಅಲ್ಲಿದ್ದುಕೊಂಡು ಕಾಯುತ್ತಿದ್ದಳು.
5 ಅದೇ ಸಮಯದಲ್ಲಿ ಫರೋಹನ ಮಗಳು ಸ್ನಾನ ಮಾಡುವುದಕ್ಕೆ ನದಿಗೆ ಹೋದಳು. ಆಕೆಯ ಸೇವಕಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಎತ್ತರವಾದ ಹುಲ್ಲಿನ ಮೇಲಿದ್ದ ಬುಟ್ಟಿಯನ್ನು ನೋಡಿ ತನ್ನ ಸೇವಕಿಯರಲ್ಲಿ ಒಬ್ಬಳಿಗೆ, “ಹೋಗಿ ಅದನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು. 6 ರಾಜನ ಮಗಳು ಬುಟ್ಟಿಯನ್ನು ತೆಗೆದು ನೋಡಿದಾಗ ಅಳುತ್ತಿದ್ದ ಗಂಡುಮಗುವನ್ನು ಕಂಡಳು. ಆಕೆಗೆ ಅದರ ಮೇಲೆ ಮರುಕವಾಯಿತು. ಆಕೆ, “ಇದು ಇಬ್ರಿಯರ ಮಗು” ಎಂದು ಹೇಳಿದಳು.
7 ಮಗುವಿನ ಅಕ್ಕ ಆಕೆಯ ಬಳಿಗೆ ಬಂದು, “ಮಗುವಿಗೆ ಹಾಲು ಕುಡಿಸಲು ಒಬ್ಬ ಇಬ್ರಿಯ ಸ್ತ್ರೀಯನ್ನು ಕರೆದುಕೊಂಡು ಬರಲೇ?” ಎಂದು ಕೇಳಿದಳು.
8 ಅರಸನ ಮಗಳು, “ಹೋಗಿ, ಕರೆದುಕೊಂಡು ಬಾ” ಅಂದಳು.
ಆದ್ದರಿಂದ ಆ ಹುಡುಗಿ ಹೋಗಿ ಮಗುವಿನ ಸ್ವಂತ ತಾಯಿಯನ್ನು ಕರೆದುಕೊಂಡು ಬಂದಳು.
9 ರಾಜನ ಮಗಳು ತಾಯಿಗೆ, “ಈ ಮಗುವಿಗೆ ಹಾಲು ಕುಡಿಸಿ ನೋಡಿಕೊ, ನಾನು ನಿನಗೆ ಸಂಬಳ ಕೊಡುವೆನು” ಎಂದು ಹೇಳಿದಳು.
ಆದ್ದರಿಂದ ಆ ಸ್ತ್ರೀ ತನ್ನ ಮಗುವನ್ನು ತೆಗೆದುಕೊಂಡು ಸಾಕಿದಳು. 10 ಮಗುವು ಬೆಳೆಯಿತು. ಸ್ವಲ್ಪಕಾಲದ ನಂತರ ಆ ಸ್ತ್ರೀಯು ಬಾಲಕನನ್ನು ರಾಜನ ಮಗಳ ಬಳಿಗೆ ಕರೆದುಕೊಂಡು ಬಂದಳು. ರಾಜನ ಮಗಳು ಆ ಬಾಲಕನನ್ನು ತನ್ನ ಸ್ವಂತ ಮಗನೆಂದು ಸ್ವೀಕರಿಸಿದಳು. ಆ ಬಾಲಕನನ್ನು ನೀರಿನೊಳಗಿಂದ ಎಳೆದೆನೆಂದು ಆ ಬಾಲಕನಿಗೆ “ಮೋಶೆ” ಎಂದು ಹೆಸರಿಟ್ಟಳು.
ಮೋಶೆ ತನ್ನ ಜನರಿಗೆ ಸಹಾಯ ಮಾಡಿದ್ದು
11 ಮೋಶೆಯು ಬೆಳೆದು ದೊಡ್ಡವನಾದನು. ತನ್ನ ಜನರಾದ ಇಬ್ರಿಯರು ಬಲವಂತಕ್ಕೊಳಗಾಗಿ ಪ್ರಯಾಸಕರವಾದ ಬಿಟ್ಟೀಕೆಲಸಗಳನ್ನು ಮಾಡುವುದನ್ನು ನೋಡಿದನು. ಒಂದು ದಿನ ಈಜಿಪ್ಟಿನವನೊಬ್ಬನು ಇಬ್ರಿಯನೊಬ್ಬನನ್ನು ಹೊಡೆಯುವುದನ್ನು ಕಂಡ 12 ಮೋಶೆಯು ಸುತ್ತಲೂ ನೋಡಿ ಯಾರೂ ಗಮನಿಸುತ್ತಿಲ್ಲವೆಂದು ತಿಳಿದುಕೊಂಡು ಈಜಿಪ್ಟಿನವನನ್ನು ಕೊಂದು ಮರಳಿನಲ್ಲಿ ಮುಚ್ಚಿಟ್ಟನು.
13 ಮರುದಿನ, ಇಬ್ಬರು ಇಬ್ರಿಯರು ಜಗಳವಾಡುತ್ತಿರುವುದನ್ನು ಕಂಡ ಮೋಶೆಯು ಅವರಲ್ಲಿ ತಪ್ಪು ಮಾಡಿದವನಿಗೆ, “ನಿನ್ನ ನೆರೆಯವನಿಗೆ ಯಾಕೆ ಹೊಡೆಯುತ್ತಿರುವೆ?” ಎಂದು ಕೇಳಿದನು.
14 ಅದಕ್ಕೆ ಆ ಮನುಷ್ಯನು, “ನಿನ್ನನ್ನು ನಮ್ಮ ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿದವರು ಯಾರು? ನಿನ್ನೆ ಆ ಈಜಿಪ್ಟಿನವನನ್ನು ಕೊಂದಂತೆ ನನ್ನನ್ನೂ ಕೊಲ್ಲಬೇಕೆಂದಿರುವಿಯೋ?” ಎಂದು ಉತ್ತರಿಸಿದನು.
ಆಗ ಮೋಶೆಗೆ ಭಯವಾಯಿತು. ಮೋಶೆಯು ತನ್ನೊಳಗೆ, “ನಾನು ಮಾಡಿದ್ದು ಪ್ರತಿಯೊಬ್ಬರಿಗೂ ತಿಳಿದಿದೆ” ಅಂದುಕೊಂಡನು.
15 ಮೋಶೆಯು ಮಾಡಿದ್ದು ಫರೋಹನಿಗೂ ತಿಳಿಯಿತು. ಆದ್ದರಿಂದ ಮೋಶೆಯನ್ನು ಕೊಲ್ಲಿಸಲು ಅವನು ತೀರ್ಮಾನಿಸಿದನು. ಆದರೆ ಮೋಶೆ ಫರೋಹನ ಬಳಿಯಿಂದ ಮಿದ್ಯಾನ್ ದೇಶಕ್ಕೆ ಓಡಿಹೋದನು.
ಮಿದ್ಯಾನಿನಲ್ಲಿ ಮೋಶೆ
16 ಮೋಶೆಯು ಮಿದ್ಯಾನ್ಯರ ಒಂದು ಬಾವಿಯ ಬಳಿ ಕುಳಿತುಕೊಂಡಿದ್ದನು. ಮಿದ್ಯಾನ್ಯರ ಒಬ್ಬ ಪುರೋಹಿತನಿಗೆ ಏಳು ಮಂದಿ ಹೆಣ್ಣುಮಕ್ಕಳಿದ್ದರು. ಆ ಹುಡುಗಿಯರು ಬಂದು ತಮ್ಮ ತಂದೆಯ ಕುರಿಗಳಿಗೆ ನೀರನ್ನು ಕುಡಿಸಲು ಬಾವಿಯಿಂದ ನೀರು ಸೇದಿ ತೊಟ್ಟಿಗಳಲ್ಲಿ ಹಾಕುತ್ತಿದ್ದರು. 17 ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವು ಕುರುಬರು ನೀರು ಸೇದಲು ಅವರಿಗೆ ಅಡ್ಡಿಮಾಡಿದ್ದರಿಂದ ಮೋಶೆಯು ಅವರಿಗೆ ಸಹಾಯಕನಾಗಿ ಬಂದು ಅವರ ಕುರಿಗಳಿಗೆ ನೀರು ಕುಡಿಸಿದನು.
18 ಬಳಿಕ ಅವರು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಮರಳಿಹೋದರು. ಅವರ ತಂದೆ, “ಈ ದಿನ ನೀವು ಬಹುಬೇಗನೆ ಮನೆಗೆ ಬಂದಿದ್ದೀರಲ್ಲಾ!” ಎಂದು ಕೇಳಿದನು.
19 ಆ ಹುಡುಗಿಯರು, “ಕುರುಬರು ನಮಗೆ ಅಡ್ಡಿ ಮಾಡಿದಾಗ ಈಜಿಪ್ಟಿನವನೊಬ್ಬನು ನಮ್ಮ ನೆರವಿಗೆ ಬಂದು ನಮಗೂ ನಮ್ಮ ಕುರಿಗಳಿಗೂ ನೀರು ಸೇದಿ ಕೊಟ್ಟನು” ಎಂದು ಉತ್ತರಿಸಿದರು.
20 ಅದಕ್ಕೆ ರೆಗೂವೇಲನು ತನ್ನ ಹೆಣ್ಣುಮಕ್ಕಳಿಗೆ, “ಆ ಮನುಷ್ಯನು ಎಲ್ಲಿದ್ದಾನೆ? ಅವನನ್ನು ನೀವು ಯಾಕೆ ಬಿಟ್ಟುಬಂದಿರಿ? ಅವನನ್ನು ಕರೆಯಿರಿ; ಅವನು ನಮ್ಮೊಂದಿಗೆ ಊಟಮಾಡಲಿ” ಎಂದು ಹೇಳಿದನು.
21 ಮೋಶೆಯು ರೆಗೂವೇಲನೊಂದಿಗೆ ವಾಸಮಾಡಲು ಇಷ್ಟಪಟ್ಟನು; ರೆಗೂವೇಲನು ತನ್ನ ಮಗಳಾದ ಚಿಪ್ಪೋರಳನ್ನು ಮೋಶೆಗೆ ಮದುವೆ ಮಾಡಿಸಿದನು. 22 ಚಿಪ್ಪೋರಳು ಗಂಡುಮಗುವಿಗೆ ಜನ್ಮವಿತ್ತಳು. ಮೋಶೆಯು ಅನ್ಯದೇಶದಲ್ಲಿ ಪ್ರವಾಸಿಯಾಗಿದ್ದ ಕಾರಣ ಆ ಮಗುವಿಗೆ “ಗೇರ್ಷೋಮ್” ಎಂದು ಹೆಸರಿಟ್ಟನು.
27 ನೀವೆಲ್ಲರೂ ಒಂದುಗೂಡಿ ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಅದರ ಅಂಗವಾಗಿದ್ದೀರಿ. 28 ದೇವರು ಸಭೆಯಲ್ಲಿ ಅಪೊಸ್ತಲರಿಗೆ ಮೊದಲನೆಯ ಸ್ಥಾನವನ್ನೂ ಪ್ರವಾದಿಗಳಿಗೆ ಎರಡನೆಯ ಸ್ಥಾನವನ್ನೂ ಉಪದೇಶಕರಿಗೆ ಮೂರನೆಯ ಸ್ಥಾನವನ್ನೂ ಇಟ್ಟಿದ್ದಾನೆ. ಇದಲ್ಲದೆ ದೇವರು, ಅದ್ಭುತಕಾರ್ಯಗಳನ್ನು ಮಾಡುವ ಜನರಿಗೂ ಸ್ಪಸ್ಥಪಡಿಸುವ ಜನರಿಗೂ ಇತರರಿಗೆ ಸಹಾಯಮಾಡುವ ಜನರಿಗೂ ಮುನ್ನಡೆಸಬಲ್ಲ ಜನರಿಗೂ ವಿವಿಧ ಭಾಷೆಗಳನ್ನು ಮಾತಾಡಬಲ್ಲ ಜನರಿಗೂ ಸಭೆಯಲ್ಲಿ ಸ್ಥಾನವನ್ನು ಕೊಟ್ಟಿದ್ದಾನೆ. 29 ಎಲ್ಲಾ ಜನರು ಅಪೊಸ್ತಲರುಗಳಲ್ಲ. ಎಲ್ಲಾ ಜನರು ಪ್ರವಾದಿಗಳಲ್ಲ. ಎಲ್ಲಾ ಜನರು ಉಪದೇಶಕರುಗಳಲ್ಲ. ಎಲ್ಲಾ ಜನರು ಅದ್ಭುತಕಾರ್ಯಗಳನ್ನು ಮಾಡುವುದಿಲ್ಲ. 30 ಎಲ್ಲಾ ಜನರು ಗುಣಪಡಿಸುವ ವರವನ್ನು ಹೊಂದಿಲ್ಲ. ಎಲ್ಲಾ ಜನರು ವಿವಿಧ ಭಾಷೆಗಳನ್ನು ಮಾತಾಡುವುದಿಲ್ಲ. ಎಲ್ಲಾ ಜನರು ಆ ಭಾಷೆಗಳನ್ನು ಅನುವಾದಿಸುವುದಿಲ್ಲ. 31 ಆದರೆ ನೀವು ಪವಿತ್ರಾತ್ಮನ ಇನ್ನೂ ಶ್ರೇಷ್ಠವಾದ ವರಗಳನ್ನು ಯಥಾರ್ಥವಾಗಿ ಅಪೇಕ್ಷಿಸತಕ್ಕದ್ದು. ಈಗ ನಾನು ನಿಮಗೆ ಎಲ್ಲಕ್ಕಿಂತಲೂ ಉತ್ತಮವಾದ ಮಾರ್ಗವನ್ನು ತೋರಿಸುತ್ತೇನೆ.
ಪ್ರೀತಿ
13 ನಾನು ಮನುಷ್ಯರ ಭಾಷೆಗಳನ್ನಲ್ಲದೆ ದೇವದೂತರ ಭಾಷೆಗಳನ್ನು ಮಾತಾಡಬಹುದು. ಆದರೆ ನನ್ನಲ್ಲಿ ಪ್ರೀತಿಯಿಲ್ಲದಿದ್ದರೆ, ನಾನು ಕೇವಲ ಗಣಗಣಿಸುವ ಘಂಟೆ, ಝಣಝಣಿಸುವ ತಾಳ. 2 ಪ್ರವಾದಿಸುವ ವರ ನನಗಿರಬಹುದು; ದೇವರ ರಹಸ್ಯ ಸಂಗತಿಗಳನ್ನೆಲ್ಲಾ ಮತ್ತು ಜ್ಞಾನವನ್ನೆಲ್ಲಾ ನಾನು ಅರ್ಥಮಾಡಿಕೊಂಡಿರಬಹುದು ಮತ್ತು ಬೆಟ್ಟಗಳನ್ನು ಚಲಿಸಬಲ್ಲಂಥ ಮಹಾನಂಬಿಕೆ ನನಗಿರಬಹುದು. ಇವುಗಳೆಲ್ಲಾ ನನ್ನಲ್ಲಿ ಇದ್ದರೂ ಪ್ರೀತಿಯು ಇಲ್ಲದಿದ್ದರೆ, ನಾನು ನಿಷ್ಪ್ರಯೋಜಕನಾಗಿದ್ದೇನೆ. 3 ನಾನು ನನ್ನಲ್ಲಿರುವ ಪ್ರತಿಯೊಂದನ್ನು ಜನರ ಊಟಕ್ಕಾಗಿ ಕೊಟ್ಟುಬಿಡಬಹುದು. ಹೆಮ್ಮೆಪಡುವುದಕ್ಕಾಗಿ ನಾನು ನನ್ನ ದೇಹವನ್ನೇ ಸಜೀವದಹನವನ್ನಾಗಿ ಒಪ್ಪಿಸಿಕೊಡಬಹುದು. ಆದರೆ ಈ ಕಾರ್ಯಗಳನ್ನೆಲ್ಲ ಮಾಡಿದರೂ ಪ್ರೀತಿಯು ಇಲ್ಲದಿದ್ದರೆ ನನಗೇನೂ ಪ್ರಯೋಜನವಿಲ್ಲ.
ಮೋಶೆ ಮತ್ತು ಎಲೀಯರೊಡನೆ ಯೇಸು
(ಮತ್ತಾಯ 17:1-13; ಲೂಕ 9:28-36)
2 ಆರು ದಿನಗಳ ನಂತರ ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಯೇಸು ಎತ್ತರವಾದ ಬೆಟ್ಟದ ಮೇಲೆ ಹೋದನು. ಅಲ್ಲಿ ಅವರು ಮಾತ್ರ ಇದ್ದರು. ಈ ಶಿಷ್ಯರು ಯೇಸುವನ್ನು ನೋಡುತ್ತಿರಲು, ಇದ್ದಕ್ಕಿದ್ದಂತೆ ಆತನು ರೂಪಾಂತರ ಹೊಂದಿದನು. 3 ಯೇಸುವಿನ ಬಟ್ಟೆಗಳು ಬಿಳುಪಾಗಿ ಹೊಳೆಯುತ್ತಿದ್ದವು. ಅಷ್ಟು ಬಿಳುಪಾದ ಬಟ್ಟೆಗಳನ್ನು ತಯಾರಿಸಲು ಸಾಧ್ಯವಿರಲಿಲ್ಲ. 4 ಆಗ ಮೋಶೆ ಮತ್ತು ಎಲೀಯ ಅಲ್ಲಿ ಪ್ರತ್ಯಕ್ಷರಾಗಿ ಯೇಸುವಿನೊಂದಿಗೆ ಮಾತಾಡುತ್ತಿದ್ದರು.
5 ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನಾವು ಇಲ್ಲಿ ಮೂರು ಗುಡಾರಗಳನ್ನು ಹಾಕುತ್ತೇವೆ. ಒಂದು ನಿನಗೆ, ಒಂದು ಮೋಶೆಗೆ ಮತ್ತೊಂದು ಎಲೀಯನಿಗೆ” ಎಂದು ಹೇಳಿದನು. 6 ಪೇತ್ರನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಏಕೆಂದರೆ ಅವನು ಮತ್ತು ಉಳಿದ ಇನ್ನಿಬ್ಬರು ಶಿಷ್ಯರು ಬಹಳ ಭಯಗೊಂಡಿದ್ದರು.
7 ಆಗ ಮೋಡವು ಬಂದು, ಅವರನ್ನು ಮುಸುಕಿತು. ಆ ಮೋಡದ ಒಳಗಿಂದ ಒಂದು ಧ್ವನಿಯು, “ಈತನು ನನ್ನ ಪ್ರಿಯ ಮಗನು. ಈತನಿಗೆ ವಿಧೇಯರಾಗಿ” ಎಂದು ಹೇಳಿತು.
8 ಆಗ ಪೇತ್ರ, ಯಾಕೋಬ ಮತ್ತು ಯೋಹಾನರು ಕಣ್ಣೆತ್ತಿ ನೋಡಿದಾಗ ಯೇಸು ಒಬ್ಬನೇ ಅಲ್ಲಿದ್ದನು.
9 ಯೇಸು ಮತ್ತು ಆ ಶಿಷ್ಯರು ಹಿಂತಿರುಗಿ ಬೆಟ್ಟದಿಂದ ಕೆಳಗಿಳಿದು ಬರುತ್ತಿರುವಾಗ, ಆತನು ಅವರಿಗೆ, “ನೀವು ಬೆಟ್ಟದ ಮೇಲೆ ನೋಡಿದ ಸಂಗತಿಗಳ ಬಗ್ಗೆ ಯಾರಿಗೂ ಹೇಳಬೇಡಿ. ಮನುಷ್ಯಕುಮಾರನು ಸತ್ತು ಜೀವಂತವಾಗಿ ಎದ್ದುಬರುವವರೆಗೆ ಕಾದುಕೊಂಡಿರಿ” ಎಂದು ಆಜ್ಞಾಪಿಸಿದನು.
10 ಆದ್ದರಿಂದ ಆ ಶಿಷ್ಯರು ಈ ಸಂಗತಿಗಳನ್ನು ಯಾರಿಗೂ ತಿಳಿಸಲಿಲ್ಲ. ಆದರೆ “ಸತ್ತು ಜೀವಂತವಾಗಿ ಎದ್ದುಬರುವುದು” ಎಂದರೇನು? ಎಂದು ತಮ್ಮತಮ್ಮಲ್ಲಿಯೇ ಚರ್ಚಿಸಿದರು. 11 ಶಿಷ್ಯರು ಯೇಸುವಿಗೆ, “ಎಲೀಯನೇ ಮೊದಲು ಬರಬೇಕೆಂದು ಧರ್ಮೋಪದೇಶಕರು ಹೇಳಲು ಕಾರಣವೇನು?” ಎಂದು ಕೇಳಿದರು.
12 ಯೇಸು ಅವರಿಗೆ, “ಎಲೀಯನೇ ಮೊದಲು ಬರಬೇಕೆಂದು ಅವರು ಹೇಳುವುದು ಸರಿ. ಎಲೀಯನು ಎಲ್ಲವನ್ನು ಸರಿಪಡಿಸುತ್ತಾನೆ. ಆದರೆ ಮನುಷ್ಯಕುಮಾರನು ಬಹಳ ಸಂಕಟವನ್ನು ಅನುಭವಿಸುವನೆಂತಲೂ ಜನರು ಆತನನ್ನು ಹೀನೈಸುವರೆಂತಲೂ ಪವಿತ್ರಗ್ರಂಥವು ಏಕೆ ಹೇಳುತ್ತದೆ? 13 ಎಲೀಯನು ಈಗಾಗಲೇ ಬಂದಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ ಮತ್ತು ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಕೇಡನ್ನು ಮಾಡಿದರು. ಅವನಿಗೆ ಹೀಗಾಗುವುದೆಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆದಿತ್ತು” ಎಂದು ಉತ್ತರಿಸಿದನು.
Kannada Holy Bible: Easy-to-Read Version. All rights reserved. © 1997 Bible League International