Add parallel Print Page Options

ಕೆಲವು ಯೆಹೂದ್ಯರು ಯೇಸುವಿನ ಕುರಿತು ಮಾಡಿದ ಟೀಕೆ

(ಮಾರ್ಕ 2:23-28; ಲೂಕ 6:1-5)

12 ಅಂದು ಸಬ್ಬತ್ ದಿನ. ಯೇಸು ಧಾನ್ಯದ ಹೊಲಗಳ ಮಾರ್ಗವಾಗಿ ನಡೆದುಹೋಗುತ್ತಿದ್ದನು. ಯೇಸುವಿನ ಶಿಷ್ಯರು ಆತನೊಂದಿಗಿದ್ದರು. ಅವರು ಹಸಿದಿದ್ದರು. ಆದ್ದರಿಂದ ಶಿಷ್ಯರು ತೆನೆಗಳನ್ನು ಕಿತ್ತುಕೊಂಡು ತಿನ್ನತೊಡಗಿದರು. ಇದನ್ನು ಕಂಡ ಫರಿಸಾಯರು ಯೇಸುವಿಗೆ, “ನೋಡು! ಸಬ್ಬತ್‌ದಿನದಂದು ಮಾಡತಕ್ಕ ಕಾರ್ಯಗಳನ್ನು ಕುರಿತು ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ವಿಧಿಸಿರುವ ನಿಯಮಗಳಿಗೆ ವಿರುದ್ಧವಾಗಿ ನಿನ್ನ ಶಿಷ್ಯರು ಮಾಡುತ್ತಿದ್ದಾರೆ” ಎಂದು ಹೇಳಿದರು.

ಅದಕ್ಕೆ ಯೇಸು, “ತಾನೂ ತನ್ನೊಂದಿಗಿದ್ದ ಜನರೂ ಹಸಿದಾಗ ದಾವೀದನು ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೇ? ದಾವೀದನು ದೇವರ ಮಂದಿರದೊಳಗೆ ಹೋದನು. ದೇವರಿಗೆ ಸಮರ್ಪಿಸಿದ್ದ ರೊಟ್ಟಿಯನ್ನು ದಾವೀದನು ಮತ್ತು ಅವನೊಂದಿಗಿದ್ದ ಜನರು ತಿಂದರು. ಅವರು ಆ ರೊಟ್ಟಿಯನ್ನು ತಿನ್ನುವುದು ಧರ್ಮಶಾಸ್ತ್ರಕ್ಕೆ ವಿರೋಧವಾಗಿತ್ತು. ಅದನ್ನು ತಿನ್ನಲು ಯಾಜಕರಿಗೆ ಮಾತ್ರ ಅವಕಾಶವಿತ್ತು. ಪ್ರತಿಯೊಂದು ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಮೀರಿದರೂ ತಪ್ಪಿತಸ್ಥರಾಗುವುದಿಲ್ಲವೆಂದು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಲಿಲ್ಲವೇ? ಆದರೆ ದೇವಾಲಯಕ್ಕಿಂತಲೂ ಹೆಚ್ಚಿನವನು ಇಲ್ಲಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ. ‘ಪಶುಯಜ್ಞಗಳು ನನಗೆ ಬೇಡ, ಕರುಣೆಯೇ ನನಗೆ ಬೇಕು’(A) ಎಂದು ಪವಿತ್ರಗ್ರಂಥವು ಹೇಳುತ್ತದೆ. ಅದರ ಅರ್ಥವನ್ನು ನೀವು ನಿಜವಾಗಿಯೂ ಅರಿತಿಲ್ಲ. ನೀವು ಅದರ ಅರ್ಥವನ್ನು ತಿಳಿದುಕೊಂಡರೆ ತಪ್ಪನ್ನೇನೂ ಮಾಡದ ಇವರಿಗೆ ತಪ್ಪಿತಸ್ಥರೆಂದು ತೀರ್ಪು ಮಾಡುವುದಿಲ್ಲ.

“ಮನುಷ್ಯಕುಮಾರನು ಸಬ್ಬತ್‌ ದಿನಕ್ಕೂ ಪ್ರಭುವಾಗಿದ್ದಾನೆ” ಎಂದು ಹೇಳಿದನು.

Read full chapter