Add parallel Print Page Options

ಶಿಲುಬೆಗೇರಿಸಲ್ಪಟ್ಟ ಯೇಸು

(ಮತ್ತಾಯ 27:32-44; ಲೂಕ 23:26-43; ಯೋಹಾನ 19:17-27)

21 ಆಗ ಸಿರೇನ್ ಪಟ್ಟಣದ ಸಿಮೋನ ಎಂಬವನು ಹೊಲದಿಂದ ಬರುತ್ತಿದ್ದನು. ಅವನು ಅಲೆಕ್ಸಾಂಡರ್ ಮತ್ತು ರೂಫಸ್ ಎಂಬವರ ತಂದೆ. ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಸಿಮೋನನನ್ನು ಬಲವಂತ ಮಾಡಿದರು. 22 ಅವರು ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಹೋದರು. (ಗೊಲ್ಗೊಥ ಎಂದರೆ “ಕಪಾಲ ಸ್ಥಳ.”) 23 ಗೊಲ್ಗೊಥದಲ್ಲಿ ಸೈನಿಕರು ಯೇಸುವಿಗೆ ರಕ್ತಬೋಳ ಮಿಶ್ರಿತವಾದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಆದರೆ ಯೇಸು ಅದನ್ನು ಕುಡಿಯಲಿಲ್ಲ. 24 ಸೈನಿಕರು ಯೇಸುವನ್ನು ಶಿಲುಬೆಗೆ ನೇತುಹಾಕಿ, ಮೊಳೆಗಳನ್ನು ಜಡಿದರು. ನಂತರ ಸೈನಿಕರು ಚೀಟು ಹಾಕಿ ಯೇಸುವಿನ ಬಟ್ಟೆಗಳನ್ನು ತಮ್ಮಲ್ಲಿ ಹಂಚಿಕೊಂಡರು.

25 ಅವರು ಯೇಸುವನ್ನು ಶಿಲುಬೆಗೇರಿಸಿದಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು. 26 ಯೇಸುವಿನ ವಿರುದ್ಧ ಮಾಡಲಾದ ಆಪಾದನೆಯನ್ನು ಅಂದರೆ “ಯೆಹೂದ್ಯರ ರಾಜ” ಎಂದು ಶಿಲುಬೆಯ ಮೇಲೆ ಬರೆಯಲಾಗಿತ್ತು. 27 ಅಲ್ಲದೆ ಅವರು ಯೇಸುವಿನ ಪಕ್ಕದಲ್ಲಿ ಇಬ್ಬರು ಕಳ್ಳರನ್ನು ಶಿಲುಬೆಗೆ ಹಾಕಿದರು. ಅವರು ಒಬ್ಬ ಕಳ್ಳನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬ ಕಳ್ಳನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದ್ದರು. 28 [a]

29 ಅಲ್ಲಿ ನಡೆದುಹೋಗುತ್ತಿದ್ದವರು ತಮ್ಮ ತಲೆಯಾಡಿಸುತ್ತಾ, “ನೀನು ದೇವಾಲಯವನ್ನು ಕೆಡವಿ, ಅದನ್ನು ಮತ್ತೆ ಮೂರು ದಿನಗಳಲ್ಲಿ ಕಟ್ಟುತ್ತೇನೆಂದು ಹೇಳಿದೆ. 30 ಈಗ ಶಿಲುಬೆಯಿಂದ ಕೆಳಗಿಳಿದು ಬಂದು ನಿನ್ನನ್ನು ರಕ್ಷಿಸಿಕೊ!” ಎಂದು ಅಪಹಾಸ್ಯ ಮಾಡಿದರು.

31 ಅಲ್ಲಿದ್ದ ಮಹಾಯಾಜಕರು ಹಾಗೂ ಧರ್ಮೋಪದೇಶಕರು ಸಹ, “ಅವನು ಇತರ ಜನರನ್ನು ರಕ್ಷಿಸಿದನು. ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. 32 ಅವನು ನಿಜವಾಗಲೂ ಇಸ್ರೇಲರ ರಾಜನಾದ ಕ್ರಿಸ್ತನಾಗಿದ್ದರೆ, ಈಗ ಶಿಲುಬೆಯಿಂದ ಕೆಳಗಿಳಿದು ಬಂದು ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ. ಆಗ ನಾವು ಅವನನ್ನು ನಂಬುತ್ತೇವೆ” ಎಂದು ಅಪಹಾಸ್ಯ ಮಾಡಿದರು. ಯೇಸುವಿನ ಪಕ್ಕದ ಶಿಲುಬೆಗಳಿಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ಗೇಲಿಮಾಡಿದರು.

Read full chapter

Footnotes

  1. 15:28 ಕೆಲವು ಗ್ರೀಕ್ ಪ್ರತಿಗಳಲ್ಲಿ 28ನೇ ವಚನವನ್ನು ಸೇರಿಸಲಾಗಿದೆ: “ಆತನು ಅಧರ್ಮಿಗಳ ಸಂಗಡ ಎಣಿಸಲ್ಪಟ್ಟನು” ಎಂಬ ಶಾಸ್ತ್ರ ವಚನವು ಹೀಗೆ ನೆರವೇರಿತು.