Add parallel Print Page Options

ಯೇಸುವಿಗೆ ಸೈತಾನನಿಂದಾದ ಶೋಧನೆ

(ಮತ್ತಾಯ 4:1-11; ಮಾರ್ಕ 1:12-13)

ಯೇಸುವು ಜೋರ್ಡನ್ ನದಿಯಿಂದ ಹಿಂತಿರುಗಿದನು. ಆತನು ಪವಿತ್ರಾತ್ಮಭರಿತನಾಗಿದ್ದನು. ಪವಿತ್ರಾತ್ಮನು ಯೇಸುವನ್ನು ಅಡವಿಗೆ ನಡಿಸಿದನು. ಅಲ್ಲಿ ಸೈತಾನನು ಆತನನ್ನು ನಲವತ್ತು ದಿನಗಳವರೆಗೆ ಶೋಧಿಸಿದನು. ಆ ದಿನಗಳಲ್ಲಿ ಯೇಸು ಏನನ್ನೂ ತಿನ್ನಲಿಲ್ಲ. ತರುವಾಯ, ಯೇಸುವಿಗೆ ಬಹಳ ಹಸಿವೆಯಾಯಿತು.

ಆಗ ಸೈತಾನನು ಯೇಸುವಿಗೆ, “ನೀನು ದೇವರ ಮಗನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗು ಎಂದು ಆಜ್ಞಾಪಿಸು” ಎಂದನು.

ಅದಕ್ಕೆ ಯೇಸು,

“‘ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ.’(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು.

ಆಗ ಸೈತಾನನು ಯೇಸುವನ್ನು ಕರೆದುಕೊಂಡು ಹೋಗಿ, ಒಂದೇ ಕ್ಷಣದಲ್ಲಿ ಭೂಲೋಕದ ಎಲ್ಲಾ ರಾಜ್ಯಗಳನ್ನು ತೋರಿಸಿ, “ಈ ರಾಜ್ಯಗಳೆಲ್ಲವನ್ನೂ ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುತ್ತೇನೆ. ಇವುಗಳೆಲ್ಲಾ ನನ್ನ ಅಧೀನದಲ್ಲಿವೆ. ನಾನು ಯಾರಿಗೆ ಬೇಕಾದರೂ ಇವುಗಳನ್ನು ಕೊಡಬಲ್ಲೆ. ನೀನು ನನ್ನನ್ನು ಆರಾಧಿಸುವುದಾದರೆ ಇವೆಲ್ಲವನ್ನು ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.

ಅದಕ್ಕೆ ಯೇಸು,

“‘ನಿನ್ನ ಪ್ರಭುವಾದ ದೇವರೊಬ್ಬನನ್ನೇ ಆರಾಧಿಸಬೇಕು,
    ಆತನೊಬ್ಬನಿಗೇ ಸೇವೆಮಾಡಬೇಕು’(B)

ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿದೆ!” ಎಂದನು.

ಬಳಿಕ ಸೈತಾನನು ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು, ದೇವಾಲಯದ ಬಹು ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ, “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ಧುಮುಕು!

10 ‘ದೇವರು ನಿನ್ನನ್ನು ಕಾಪಾಡುವುದಕ್ಕೆ ತನ್ನ ದೂತರಿಗೆ ಅಪ್ಪಣೆಕೊಡುವನು.’(C)

11 ‘ನಿನ್ನ ಪಾದವು ಕಲ್ಲಿಗೆ ತಗಲೀತೆಂದು
    ಅವರು ತಮ್ಮ ಕೈಗಳಿಂದ ನಿನ್ನನ್ನು ಎತ್ತಿಕೊಳ್ಳುವರು’(D)

ಎಂಬುದಾಗಿ ಶಾಸ್ತ್ರದಲ್ಲಿ ಬರೆದಿದೆ” ಎಂದನು.

12 ಅದಕ್ಕೆ ಯೇಸು,

“‘ನಿನ್ನ ಪ್ರಭುವಾದ ದೇವರನ್ನು ಪರೀಕ್ಷಿಸಬಾರದು’(E)

ಎಂಬುದಾಗಿಯೂ ಬರೆದಿದೆ” ಎಂದು ಉತ್ತರಿಸಿದನು.

13 ಸೈತಾನನು ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ, ತಕ್ಕಕಾಲ ಬರುವ ತನಕ ಆತನನ್ನು ಬಿಟ್ಟುಹೋದನು.

Read full chapter