ಲೂಕ 20:1-8
Kannada Holy Bible: Easy-to-Read Version
ಯೆಹೂದ್ಯನಾಯಕರು ಯೇಸುವಿಗೆ ಕೇಳಿದ ಪ್ರಶ್ನೆ
(ಮತ್ತಾಯ 21:23-27; ಮಾರ್ಕ 11:27-33)
20 ಒಂದು ದಿನ ಯೇಸು ದೇವಾಲಯದಲ್ಲಿದ್ದನು. ಆತನು ಜನರಿಗೆ ಉಪದೇಶಿಸುತ್ತಾ ಸುವಾರ್ತೆಯನ್ನು ತಿಳಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರು ಯೇಸುವಿನ ಬಳಿಗೆ ಬಂದು, 2 “ನಮಗೆ ಹೇಳು! ನೀನು ಯಾವ ಅಧಿಕಾರದಿಂದ ಈ ಸಂಗತಿಗಳನ್ನು ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು?” ಎಂದು ಕೇಳಿದರು.
3 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. 4 ಜನರಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ದೇವರಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ? ನನಗೆ ಹೇಳಿರಿ” ಎಂದು ಉತ್ತರಕೊಟ್ಟನು.
5 ಅವರೆಲ್ಲರೂ ಇದರ ಬಗ್ಗೆ ಒಟ್ಟಾಗಿ ಚರ್ಚಿಸಿ ಒಬ್ಬರಿಗೊಬ್ಬರು, “‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತು’ ಎಂದು ಉತ್ತರಕೊಟ್ಟರೆ, ‘ಹಾಗಾದರೆ ನೀವು ಯೋಹಾನನನ್ನು ಏಕೆ ನಂಬಲಿಲ್ಲ?’ ಎಂದು ಆತನು ಕೇಳುವನು. 6 ‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ಮನುಷ್ಯರಿಂದ ಬಂದಿತು’ ಎಂದು ಹೇಳಿದರೆ, ಜನರೆಲ್ಲರೂ ಕಲ್ಲೆಸೆದು ನಮ್ಮನ್ನು ಕೊಲ್ಲುವರು. ಏಕೆಂದರೆ ಯೋಹಾನನು ಪ್ರವಾದಿಯಾಗಿದ್ದನೆಂದು ಅವರು ನಂಬಿದ್ದಾರೆ” ಅಂದುಕೊಂಡರು. 7 ಬಳಿಕ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.
8 ಯೇಸು ಅವರಿಗೆ, “ಹಾಗಾದರೆ, ಈ ಸಂಗತಿಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ” ಅಂದನು.
Read full chapterKannada Holy Bible: Easy-to-Read Version. All rights reserved. © 1997 Bible League International