ಯೋಹಾನ 2:13-22
Kannada Holy Bible: Easy-to-Read Version
ದೇವಾಲಯದಲ್ಲಿ ಯೇಸು
(ಮತ್ತಾಯ 21:12-13; ಮಾರ್ಕ 11:15-17; ಲೂಕ 19:45-46)
13 ಆಗ ಯೆಹೂದ್ಯರ ಪಸ್ಕಹಬ್ಬ ಬಹು ಸಮೀಪವಾಗಿತ್ತು. ಆದ್ದರಿಂದ ಯೇಸು ಜೆರುಸಲೇಮಿಗೆ ಹೋದನು. 14 ದೇವಾಲಯದಲ್ಲಿ ಜನರು ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುತ್ತಿರುವುದನ್ನು ಯೇಸು ಕಂಡನು. ಇತರ ಕೆಲವು ಜನರು ಮೇಜುಗಳ ಸಮೀಪದಲ್ಲಿ ಕುಳಿತುಕೊಂಡು ಹಣ ವಿನಿಮಯ ಮಾಡುತ್ತಿದ್ದರು ಮತ್ತು ವ್ಯಾಪಾರ ಮಾಡುತ್ತಿದ್ದರು. 15 ಯೇಸು ಹಗ್ಗದ ಕೆಲವು ತುಂಡುಗಳನ್ನು ತೆಗೆದುಕೊಂಡು ಅವುಗಳಿಂದ ಒಂದು ಚಾವಟಿ ಮಾಡಿ ಆ ಜನರನ್ನು ಮತ್ತು ದನಕುರಿಗಳನ್ನು ಬಲವಂತವಾಗಿ ದೇವಾಲಯದಿಂದ ಹೊರಗಟ್ಟಿದನು. ಯೇಸು ಮೇಜುಗಳನ್ನು ಕೆಡವಿ, ಹಣ ವಿನಿಮಯ ಮಾಡುತ್ತಿದ್ದ ಜನರ ಹಣವನ್ನು ಚೆಲ್ಲಿದನು. 16 ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವುಗಳನ್ನು ಹೊರಗೆ ತೆಗೆದುಕೊಂಡು ಹೋಗಿರಿ! ನನ್ನ ತಂದೆಯ ಮನೆಯನ್ನು ವ್ಯಾಪಾರ ಸ್ಥಳವನ್ನಾಗಿ ಮಾಡಬೇಡಿ!” ಎಂದು ಹೇಳಿದನು.
17 “ನಿನ್ನ ಆಲಯದ ಮೇಲಿನ ಅಭಿಮಾನವು ನನ್ನೊಳಗೆ ಬೆಂಕಿಯಂತೆ ಸುಡುತ್ತದೆ”(A)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯವನ್ನು ಯೇಸುವಿನ ಶಿಷ್ಯರು ಆಗ ಜ್ಞಾಪಿಸಿಕೊಂಡರು.
18 ಯೆಹೂದ್ಯರು ಯೇಸುವಿಗೆ, “ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತುಪಡಿಸಲು ಯಾವ ಸೂಚಕಕಾರ್ಯವನ್ನು ಮಾಡುವೆ?” ಎಂದು ಕೇಳಿದರು.
19 ಯೇಸು, “ಈ ದೇವಾಲಯವನ್ನು ಕೆಡವಿರಿ, ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟುತ್ತೇನೆ” ಎಂದು ಉತ್ತರಕೊಟ್ಟನು.
20 ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ಜನರು ನಲವತ್ತಾರು ವರ್ಷಗಳ ಕಾಲ ದುಡಿದಿದ್ದಾರೆ! ನೀನು ಮೂರೇ ದಿನಗಳಲ್ಲಿ ಇದನ್ನು ಕಟ್ಟಬಲ್ಲೆಯಾ?” ಎಂದು ಕೇಳಿದರು.
21 (ಆದರೆ ಯೇಸು ತನ್ನ ದೇಹವೇ ದೇವಾಲಯವೆಂಬ ಅರ್ಥದಲ್ಲಿ ಹೇಳಿದ್ದನು. 22 ಯೇಸು ಸತ್ತವರೊಳಗಿಂದ ಎದ್ದುಬಂದಾಗ ಆತನ ಶಿಷ್ಯರು ಆತನ ಈ ಮಾತನ್ನು ಜ್ಞಾಪಿಸಿಕೊಂಡರು. ಅವರು ಪವಿತ್ರ ಗ್ರಂಥವನ್ನು ಮತ್ತು ಆತನು ಹೇಳಿದ ಮಾತುಗಳನ್ನು ನಂಬಿದರು.)
Read full chapterKannada Holy Bible: Easy-to-Read Version. All rights reserved. © 1997 Bible League International